ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?

Date:

ʼಗಂಗಾ ನನ್ನನ್ನು ಕರೆದಿದ್ದಾಳೆ. ಆಕೆಯನ್ನು ಶುದ್ಧಗೊಳಿಸುತ್ತೇನೆʼ.. 2014ರ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿಯವರು ಹೇಳಿದ ಮಾತುಗಳಿವು. ಇದನ್ನ ಕೇಳಿದ ದೇಶವಾಸಿಗಳು ಮಂತ್ರಮುಗ್ಧರಾಗಿದ್ದರು. ಗಂಗೆ ಇನ್ನೇನು ಪವಿತ್ರಳಾಗುತ್ತಾಳೆ ಎನ್ನುವ ಭರವಸೆಯಲ್ಲಿ ಮೋದಿಯವರನ್ನು ಪ್ರಧಾನಿ ಮಾಡಿಯೇ ಬಿಟ್ಟರು. ಆದರೆ ಅದು ಹುಸಿ ಭರವಸೆಯಷ್ಟೇ ಎನ್ನುವುದು 11 ವರ್ಷಗಳಾದರೂ ಇಂದಿಗೂ ಪ್ರಸ್ತುತ. ಹಾಗಿದ್ದರೆ ಅಂದು ಮೋದಿ ಹೇಳಿದ್ದು ಇಂದಿಗೂ ಹೇಳುತ್ತಿರುವ ಹಸಿ ಹಸಿ ಸುಳ್ಳುಗಳಲ್ಲಿ ಒಂದಲ್ಲವೇ?

ಜಗತ್ತಿನ ಬಹುದೊಡ್ಡ ಧಾರ್ಮಿಕ ಉತ್ಸವ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ, 144 ವರ್ಷಕ್ಕೊಮ್ಮೆ ಬರುವ ಮಹಾಕುಂಭ ಮೇಳ ಮುಗಿದು ಇತಿಹಾಸದ ಪುಟ ಸೇರಿದ್ದಾಯಿತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ನದಿ ತಟದಲ್ಲಿ ದೇಶದ ಸಾಧು ಸಂತರು, ದೊಡ್ಡ ದೊಡ್ಡ ರಾಜಕೀಯ ನಾಯಕರು, ಸಾಮಾನ್ಯರು ಸೇರಿದಂತೆ ವಿದೇಶಗಳಿಂದ ಬಂದ ಲಕ್ಷಾಂತರ ಭಕ್ತರು ಒಂದೆಡೆ ಸೇರಿ ಎಲ್ಲರೂ ಮಿಂದೆದ್ದದ್ದೂ ಆಯ್ತು. ಇದರ ನಡುವೆ ಗಂಗಾ ನದಿಯ ಪರಿಶುದ್ಧತೆಯ ಮೇಲೆ ಬಂದ ವರದಿಗಳೆಲ್ಲ ಪಕ್ಕಕ್ಕೆ ಸರಿಯಿತೇ ಎನ್ನುವ ಪ್ರಶ್ನೆ ಮತ್ತೆ ಕೇಳಿಕೊಳ್ಳಬೇಕಾಗಿದೆ.

ಧಾರ್ಮಿಕ ನಂಬಿಕೆಯ ಪ್ರಕಾರ ಗಂಗಾ ನದಿಯನ್ನು ದೇಶದ ಪವಿತ್ರ ನದಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಲಕ್ಷಾಂತರ ಜನರು ಈ ನೀರಿನಲ್ಲಿ ಸ್ನಾನ ಮಾಡಲು ಮತ್ತು ಪ್ರಾರ್ಥನೆ ಮಾಡಲು ಸೇರುತ್ತಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಮಹಾಕುಂಭದಲ್ಲಿ ಸುಮಾರು 65 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಮಾಡಿದರು ಎನ್ನುತ್ತಿವೆ ಮಾಧ್ಯಮಗಳ ವರದಿಗಳು. ಇದೆಲ್ಲದರ ನಡುವೆ ಸುದ್ದಿಯಾಗಿದ್ದು, ಗಂಗಾ ನದಿಯ ನೀರಿನ ಶುದ್ಧತೆಯ ವಿಚಾರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಗಂಗಾ ನದಿ 50 ಪಟ್ಟು ವೇಗವಾಗಿ ಸೂಕ್ಷ್ಮಜೀವಿಗಳನ್ನು ನಿರ್ಮೂಲನೆ ಮಾಡುವ ವಿಶ್ವದ ಏಕೈಕ ಸಿಹಿನೀರಿನ ನದಿ” ಎಂದು ಬಣ್ಣಿಸಿ ಕೆಲ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕೆಲವು ತಜ್ಞರ ಹೇಳಿಕೆಗಳನ್ನೂ ಅವು ಉಲ್ಲೇಖಿಸಿವೆ. ಗಂಗಾ ನದಿಯು ಸಂಪೂರ್ಣವಾಗಿ ಸೂಕ್ಷ್ಮಜೀವಿಗಳಿಂದ ಮುಕ್ತವಾಗಿದೆ ಎಂದು ಈ ವರದಿಗಳಲ್ಲಿ ಹೇಳಲಾಗಿದೆ. ಆದರೆ, ಇದ್ಯಾವುದಕ್ಕೂ ಸಾಕ್ಷ್ಯಾಧಾರಗಳನ್ನು ಮಾತ್ರ ವರದಿಗಳು ಸಲ್ಲಿಸಿಲ್ಲ. ಗಂಗಾ ನದಿಯಲ್ಲಿ ಬ್ಯಾಕ್ಟೀರಿಯಾ ನಿರ್ಮೂಲನಾ ಸೆಲ್‌ಗಳ ಸ್ಪಷ್ಟ ಸಂಖ್ಯೆಯನ್ನು ಎಲ್ಲಿಂದ ಪಡೆಯಲಾಗಿದೆ ಎಂಬುದೂ ಖಚಿತವಾಗಿಲ್ಲ. ಗಂಗಾನದಿ ನೀರನ್ನು ಇತರ ನದಿಗಳಿಂದ ಪ್ರತ್ಯೇಕಿಸುವ ವಿಶಿಷ್ಟ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ ಎಂಬುದು ಸರಿಯಷ್ಟೆ. ಆದರೆ ಇದರ ಸತ್ಯಾಸತ್ಯತೆ ಏನೆಂಬುದನ್ನು ಮೊದಲು ಅರಿಯಬೇಕಿದೆ.

WhatsApp Image 2025 03 31 at 4.35.21 PM

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ನದಿಯೊಂದರಲ್ಲಿನ ಮಾಲಿನ್ಯದ ಪ್ರಮಾಣವನ್ನು ಆ ನದಿಯಲ್ಲಿರುವ ಮಾಲಿನ್ಯಕಾರಕಗಳ ಮಟ್ಟ ಮತ್ತು ನದಿಯು ಹೊಂದಿರುವ ಕಲುಷಿತ ಪ್ರದೇಶಗಳ ಸಂಖ್ಯೆಯ ಮೂಲಕ ಅಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಂಗಾ, ಯಮುನಾ, ಗೋದಾವರಿ, ಘಗ್ಗರ್ ಮತ್ತು ಗೋಮತಿ ನದಿಗಳು ತೀವ್ರ ಜಲ ಮಾಲಿನ್ಯ ಹೊಂದಿವೆ.

2022ರ ವರದಿ ನೋಡುವುದಾದರೆ, ಮಾಲಿನ್ಯಕಾರಕಗಳ ಪರಿಮಾಣದ ದೃಷ್ಟಿಯಿಂದ ತಮಿಳುನಾಡಿನ ಕೂಮ್, ಗುಜರಾತ್‌ನ ಸಾಬರಮತಿ ಮತ್ತು ಉತ್ತರ ಪ್ರದೇಶದ ಬಹೇಲಾ ಅತ್ಯಂತ ಕಲುಷಿತ ನದಿಗಳು ಎನಿಸಿಕೊಂಡಿವೆ. ಕಾರಣ ಆ ನದಿಗಳ ನೀರು ಕೊಳಚೆಯಾಗಿ ಪರಿವರ್ತನೆಯಾಗುತ್ತಿದೆ. ಕನಿಷ್ಟ ಯಾವುದೇ ಜಂತುವೂ ಅಲ್ಲಿ ಜೀವಿಸಲು ನೀರು ಯೋಗ್ಯವಾಗಿಲ್ಲ. ಇನ್ನು ಆ ನೀರೊಳಗೇ ಮಿಂದೇಳುವ ನರಮಾನವನ ಕತೆಯೇನು?

ಗಂಗಾ ನದಿ ಶುದ್ಧೀಕರಣವಾಗಬೇಕು, ನದಿ ಮೂಲವನ್ನು ಸಂರಕ್ಷಿಸಬೇಕೆಂಬ ಹೋರಾಟ ದೀರ್ಘ ಕಾಲದ್ದು. ಸ್ವಾಮಿ ಜ್ಞಾನ ಸ್ವರೂಪ ಸನಂದ್ ಎಂದೇ ಹೆಸರಾಗಿದ್ದ, ವಿಚಾರವಾದಿ, ಪರಿಸರ ಹೋರಾಟಗಾರ, ಐಐಟಿ ನಿವೃತ್ತ ಪ್ರಾಧ್ಯಾಪಕ ಜಿ.ಡಿ.ಅಗವರ್ವಾಲ್ ಅವರು ಗಂಗಾ ನದಿಯನ್ನು ಉಳಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಾ 2018ರ ಅಕ್ಟೋಬರ್‌ನಲ್ಲಿ ಉಸಿರು ಬಿಟ್ಟರು. ಬರೋಬ್ಬರಿ 112 ದಿನ ಅನ್ನವನ್ನು ತ್ಯಜಿಸಿ, ಕೊನೆಗೆ ನೀರನ್ನೂ ಕುಡಿಯದೆ ಮಡಿದರು. ಗಂಗಾ ನದಿಯನ್ನು ಉಳಿಸಲು ಕಾನೂನು ಜಾರಿಗೆ ತರಬೇಕು, ನದಿಯಲ್ಲಿ ಜಲವಿದ್ಯುತ್ ಯೋಜನೆಗಳನ್ನು ರದ್ದುಗೊಳಿಸಬೇಕು ಮತ್ತು ಅದರ ನೀರಿನ ಮುಕ್ತ ಹರಿವಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ವಾಮೀಜಿಯವರ ಪ್ರಮುಖ ಬೇಡಿಕೆಗಳಾಗಿದ್ದವು. ಪ್ರಧಾನಿ ಮೋದಿಯವರಿಗೆ ಪತ್ರಗಳ ಮೇಲೆ ಪತ್ರ ಬರೆದರು. ಆದರೆ ಪ್ರಧಾನಿ ಕದಲಲಿಲ್ಲ. ಅವರು ನಿಧನರಾದಾಗ ಎಚ್ಚೆತ್ತ ಮೋದಿ ಸಂತಾಪ ಸೂಚಿಸಿ, “ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಂಡಿದ್ದೇವೆ” ಎಂದಿದ್ದರು.

ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್

ಧಾರ್ಮಿಕ ಪುಣ್ಯ ಕ್ಷೇತ್ರಗಳ ಘಾಟ್‌ಗಳಲ್ಲಿ ಅಂದ ಚೆಂದದ ಕೆಲವು ಕಾಮಗಾರಿಗಳನ್ನು ನಡೆಸಿದ್ದು ಬಿಟ್ಟರೆ, ನಿಜವಾಗಿಯೂ ಕೈಗೊಳ್ಳಬೇಕಾದ ಕ್ರಮಗಳು ಮಾತ್ರ ಹಾಗೆಯೇ ಉಳಿದಿರುವುದು ವಾಸ್ತವ. 2014ರಿಂದ ಈವರೆಗೆ ಗಂಗಾ ಶುದ್ಧೀಕರಣ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೂ ಜಲಶಕ್ತಿ ಸಚಿವಾಲಯವು ಇತ್ತೀಚೆಗೆ ಬಹಿರಂಗಪಡಿಸಿರುವ ವರದಿಯು ಆತಂಕ ಹುಟ್ಟಿಸುತ್ತದೆ. ಗಂಗಾ ನದಿಯ ಮೇಲ್ವಿಚಾರಣಾ ಕೇಂದ್ರಗಳಲ್ಲಿರುವ ಶೇ.71ರಷ್ಟು ಜನರು ಈ ವರ್ಷದ ಆರಂಭದಲ್ಲಿಯೇ ಅತಿ ಹೆಚ್ಚು ಮಟ್ಟದ ಮಲದಿಂದ ಉಂಟಾಗುವ ಕೋಲಿಫಾರ್ಮ್ ಹೆಸರಿನ ಬ್ಯಾಕ್ಟೀರಿಯಾ ದಾಳಿಗೆ ತುತ್ತಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹರಿಯುವ ಗಂಗಾ ನದಿಯು ಅತ್ಯಂತ ಕಲುಷಿತವಾಗಿದೆ ಎನ್ನುತ್ತದೆ ವರದಿ.

WhatsApp Image 2025 03 31 at 4.36.10 PM

ಬಿಒಡಿ (ಸೂಕ್ಷ್ಮಜೀವಿಗಳು ಸೇವಿಸುವ ಕರಗಿದ ಆಮ್ಲಜನಕದ ಪ್ರಮಾಣವನ್ನು ಅಳೆಯಲು ಬಳಸುವ ಪ್ರಮುಖ ನಿಯತಾಂಕ ಅಥವಾ ಇದು ನೀರಿನ ಗುಣಮಟ್ಟದ ಪ್ರಮುಖ ಸೂಚಕ) ಮಟ್ಟವು ಪ್ರತಿ ಲೀಟರ್ ನೀರಿಗೆ 0.5-1 ಎಂ. ಜಿ. ಇದ್ದಲ್ಲಿ, ಆ ನೀರು ಕುಡಿಯಲು ಯೋಗ್ಯ ಎಂದು ವೈಜ್ಞಾನಿಕವಾಗಿ ಪರಿಗಣಿಸಲಾಗುತ್ತದೆ. ಆದರೆ ಗಂಗಾ ನದಿಯ ಹಲವಾರು ಮೇಲ್ವಿಚಾರಣಾ ಕೇಂದ್ರಗಳು ಹೆಚ್ಚಿನ ಬಿಒಡಿ ಮಟ್ಟವನ್ನು ಹೊಂದಿವೆ. ಕಾನ್ಪುರ ಮತ್ತು ಪಾಟ್ನಾದಂತಹ ಸ್ಥಳಗಳಲ್ಲಿನ ನದಿ ಪ್ರದೇಶವು ಇಲ್ಲಿಯವರೆಗೆ ಅತ್ಯಂತ ಕಲುಷಿತವಾಗಿದೆಯಂತೆ.

ಗಂಗೆಯ ತಟದಲ್ಲಿ ಸುಮಾರು 1100ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಚರಂಡಿ ತ್ಯಾಜ್ಯ ಮತ್ತು ಮಾಲಿನ್ಯಕಾರಕಗಳನ್ನು ನೇರವಾಗಿ ನದಿಗೆ ಹರಿಬಿಡಲಾಗುತ್ತದೆ. ಯಾವುದೇ ಸಂಶೋಧನೆಗಳಿಲ್ಲದೆ ಇದನ್ನು ನೋಡುವ ಸಾಮಾನ್ಯ ಮನುಷ್ಯರೇ ಸಾಕು ಗಂಗಾ ನದಿ ಕಲುಷಿತವಾಗಿದೆ ಎಂದು ಹೇಳಲಿಕ್ಕೆ. ಲಕ್ಷಾಂತರ ಹಣ ಖರ್ಚು ಮಾಡಿ ದೊಡ್ಡ ದೊಡ್ಡ ಲ್ಯಾಬ್ಗಳಲ್ಲಿ ಪರೀಕ್ಷಿಸಿ ಗಂಗಾ ನದಿ ಕಲುಷಿತಗೊಂಡಿದೆ ಎಂದು ವೈಜ್ಞಾನಿಕವಾಗಿ ಹೇಳಿದರೂ ಅದನ್ನ ನಂಬದ ವಿಪರೀತ ಬುದ್ಧಿವಂತರು ನಮ್ಮ ದೇಶದಲ್ಲಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ.

ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕಾಗಿಯೇ ನಮಾಮಿ ಗಂಗಾ ಎನ್ನುವ ಹೊಸ ಯೋಜನೆ ರೂಪಿಸಿ ಸುಮಾರು 20000 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ವ್ಯಯಿಸಲಾಗುತ್ತಿದೆ. ಆದರೂ ಗಂಗೆಯ ಶುದ್ಧತೆಯ ಪ್ರಮಾಣದ ಒಂದಂಶವನ್ನೂ ಮುಟ್ಟಲಾಗಿಲ್ಲ ಎನ್ನುವುದು ಸೋಜಿಗದ ಸಂಗತಿ.. ʼನಮಾಮಿ ಗಂಗಾʼ ಬರುವ ಮುನ್ನ ಇದ್ದ 51 ಕಲುಷಿತ ನದಿಗಳ ಸಂಖ್ಯೆ 66ಕ್ಕೆ ಏರಿಕೆಯಾಗಿರುವುದನ್ನೂ ರಾಜಕೀಯ ನಾಯಕರುಗಳೇ ಸಮರ್ಥಿಸಿಕೊಳ್ಳುವುದು ಅತ್ಯಂತ ಹಾಸ್ಯಾಸ್ಪದ.

WhatsApp Image 2025 03 31 at 4.38.26 PM

ಇನ್ನು ಮಹಾಕುಂಭದ ಸಂದರ್ಭದಲ್ಲಿ ವಿಜ್ಞಾನಿ ಡಾ.ಅಜಯ್ ಸೋಂಕರ್ ಅವರು ಸಂಶೋಧನೆ ನಡೆಸಿ ಬಹಿರಂಗಪಡಿಸಿದ ವರದಿಯೊಂದು ಸಿಪಿಸಿಬಿ ವರದಿ ಸೇರಿದಂತೆ ಎಲ್ಲಾ ರೀತಿಯ ವರದಿಗಳನ್ನು ತಳ್ಳಿಹಾಕಿಬಿಟ್ಟಿತು. ಅವರ ಅಧ್ಯಯನವು ನದಿಯಲ್ಲಿ ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವಿಕೆಯ ಬಗ್ಗೆ ಸಾಮಾನ್ಯರಿಗಿದ್ದ ಕಳವಳಗಳನ್ನು ಆಧಾರರಹಿತ ಎಂದಿತು. ಸೋಂಕರ್ ಪ್ರಕಾರ, ಗಂಗಾ ನೀರಿನ ವಿಶಿಷ್ಟ ಗುಣಲಕ್ಷಣಗಳು, ಅದರ ಸ್ಥಿರವಾದ ಕಡಿಮೆ ತಾಪಮಾನದೊಂದಿಗೆ, ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸೂಕ್ತವಲ್ಲದ ವಾತಾವರಣವನ್ನು ಸೃಷ್ಟಿಸುತ್ತವೆ. ನೀರಿನ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾದಾಗ ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ನಿಷ್ಕ್ರಿಯವಾಗುತ್ತವೆ ಮತ್ತು ಮಹಾಕುಂಭದ ಉದ್ದಕ್ಕೂ, ಗಂಗೆಯ ತಾಪಮಾನವು 10 ರಿಂದ 15 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವಿಶ್ಲೇಷಿಸಿದ ಅವರು, ಗಂಗಾ ನೀರು ಸ್ನಾನ ಮಾಡಲು ಮತ್ತು ಕುಡಿಯಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದುಬಿಟ್ಟರು. ಇದು ಸತ್ಯಕ್ಕೆ ಎಷ್ಟು ಹತ್ತಿರ ಎನ್ನುವುದು ಮಾತ್ರ ಗೌಣ.

ʼಗಂಗಾನದಿಯಲ್ಲಿರುವ ಬ್ಯಾಕ್ಟೀರಿಯೊಫೇಜ್ಗಳು ಸೈನಿಕರಂತೆ ಹೋರಾಡಿ ನದಿಯಲ್ಲಿ ಸೃಷ್ಟಿಯಾಗುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಡೆದುರುಳಿಸುತ್ತವೆ. ಇದರಿಂದ ನೀರು ನಿತ್ಯ ಶುದ್ಧವಾಗಿರುತ್ತದೆʼ ಎನ್ನುತ್ತಾರೆ ಕೆಲ ಮೇಧಾವಿಗಳು. ವಾಸ್ತವವಾಗಿ, ಬ್ಯಾಕ್ಟೀರಿಯೊಫೇಜ್ಗಳು ಗಂಗಾ ನದಿಗೆ ಮಾತ್ರ ಸೀಮಿತವಾಗಿಲ್ಲ. ಅವು ಬ್ಯಾಕ್ಟೀರಿಯಾಗಳು ಇರುವ ಎಲ್ಲ ನದಿಗಳು, ಸರೋವರಗಳು, ಸಾಗರಗಳು ಅಲ್ಲದೇ, ಮಾನವ ದೇಹದ ಕರುಳಿನಲ್ಲಿಯೂ ಇವೆ. 2022ರ ಡಿಸೆಂಬರ್‌ನಲ್ಲಿ ಪರಿಸರ ವಿಜ್ಞಾನ ಮತ್ತು ಮಾಲಿನ್ಯ ಸಂಶೋಧನೆಯು ಪ್ರಕಟಿಸಿದ ವರದಿಯಲ್ಲಿ ಗಂಗಾ ನದಿಯ ಕೆಸರಿನಲ್ಲಿ ವಿವಿಧ ಬಗೆಯ ಬ್ಯಾಕ್ಟೀರಿಯಾ ನಿರೋಧಕ ಸೆಲ್ಗಳಿವೆ ಎಂದು ಉಲ್ಲೇಖಿಸಲಾಗಿದೆ. ಗಂಗಾ ನದಿಯಲ್ಲಿನ ಸೆಲ್ಗಳು ಪ್ರಪಂಚದಾದ್ಯಂತದ ಇತರ ನದಿಗಳಿಗಿಂತ ಉನ್ನತ ಮಟ್ಟದಲ್ಲಿವೆ ಎಂದು ಹೇಳಲಾಗಿದೆ. ಆದರೆ ನೀರು ಶುದ್ಧವಾಗಿದೆ ಎಂದು ಹೇಳಿಕೊಂಡು ಮಿತಿಮೀರಿ ಕೊಳಕು ಮಾಡಿದರೆ ಬ್ಯಾಕ್ಟೀರಿಯಾ ನಿರೋಧಕ ಸೆಲ್ಗಳು ತಾನೆ ಏನು ಮಾಡಿಯಾವು?

WhatsApp Image 2025 03 31 at 4.39.18 PM 1

ಬ್ಯಾಕ್ಟೀರಿಯಾಫೇಜ್ಗಳು ಬ್ಯಾಕ್ಟೀರಿಯಾದ ಕೋಶವನ್ನು ಪ್ರವೇಶಿಸುವ ಮೂಲಕ ಅವುಗಳನ್ನು ನಾಶಮಾಡುತ್ತವೆ. ಜೊತೆಗೆ ಹೊಸ ಫೇಜ್ಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಈ ಫೇಜ್ಗಳು ಗಂಗಾ ನದಿಯಲ್ಲಿ ಮಾತ್ರವಲ್ಲದೆ, ಯಾವುದೇ ನದಿಯಲ್ಲಿನ ಕೋಲಿಫಾರ್ಮ್ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಭಾರತದ ಇತರ ಜಲಮೂಲಗಳಂತೆ ಗಂಗಾ ನದಿಯೂ ಅತ್ಯಂತ ಕಲುಷಿತವಾಗಿದೆ ಎನ್ನುವುದು ಕೆಲವರು ಮರೆಮಾಚಲೆತ್ನಿಸುತ್ತಿರುವ ಕಟು ಸತ್ಯ. ಫೇಜ್ಗಳು ಗಂಗಾ ನದಿಗೆ ಹರಿಯುವ ಅಪಾರ ಪ್ರಮಾಣದ ಮಾನವ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯಗಳೊಂದಿಗೆ ಹೋರಾಡುವಷ್ಟು ಶಕ್ತಿಯನ್ನು ಹೊಂದಿರಲು ಸಾಧ್ಯವೇ ಇಲ್ಲ.

ಹಾಗಾಗಿ, ಫೇಜ್ಗಳಿಂದಾಗಿ ಗಂಗಾ ನದಿಯು ಸ್ವಯಂ ಶುದ್ಧೀಕರಣಕಾರಕವಾಗಿದೆ ಎಂದು ಹೇಳಿಕೊಳ್ಳುವುದು ಉತ್ಪ್ರೇಕ್ಷೆ ಮತ್ತು ದೊಡ್ಡ ಸುಳ್ಳು. ಏಕೆಂದರೆ ಅವುಗಳ ದಕ್ಷತೆಯು ಪ್ರತಿದಿನ ನದಿಗೆ ಬಿಡುಗಡೆಯಾಗುವ ಕೋಟ್ಯಂತರ ಲೀಟರ್ ಸಂಸ್ಕರಿಸದ ಕೊಳಚೆ ನೀರಿನೊಂದಿಗೆ ಹೊಂದಿಕೆಯಾಗುವುದಿಲ್ಲ. ಇವುಗಳು ಗಂಗೆಯಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ.

ಇದನ್ನೂ ಓದಿರಿ: ಜಿಗಿದು ನಲಿವ ಕಿಶೋರಾವಸ್ಥೆ ಅದೆಂತಹ ಅಪಾಯಕ್ಕೆ ಸಿಲುಕಿದೆ ಬಲ್ಲಿರಾ?

ದಕ್ಷಿಣ ಭಾರತದ ಇಡುಕ್ಕಿ, ಕೊಟ್ಟಾಯಂ ಮತ್ತು ಕೇರಳದ ಶಬರಿಮಲೆಯಲ್ಲಿ ನೂರಾರು ನೀರಿನ ಮೂಲಗಳು ಕಲುಷಿತವಾಗಿವೆ. ಈ ನೀರಿನಲ್ಲಿ ಮುಳುಗುವ ಲಕ್ಷಾಂತರ ಜನರು ಜಠರ ಉರಿ, ಚರ್ಮದ ಸೋಂಕುಗಳು, ಹೆಪಟೈಟಿಸ್ಗೆ ತುತ್ತಾಗುತ್ತಿದ್ದಾರೆ. ಫೇಜ್ಗಳಿಂದ ಗಂಗೆಯ ಪರಿಶುದ್ಧ ಎಂಬುದು ಶುದ್ಧ ಸುಳ್ಳು. ನಮಗೆ ಪುರಾಣಗಳ ಸಾಲು ಅಗತ್ಯವಿಲ್ಲ. ಒಳಚರಂಡಿ ಸಂಸ್ಕರಣಾ ಘಟಕಗಳು, ಕಟ್ಟೆಚ್ಚರ, ವಾಸ್ತವ ಪರಿಶೀಲನೆ ಬೇಕಷ್ಟೇ. ಗಂಗೆಯು ಪವಿತ್ರಳು ಹೌದು. ಆದರೆ, ಅದು ಅಲೌಕಿಕವಲ್ಲ. ಅದೊಂದು ನದಿ. ನಂಬಿಕೆಯ ಜೊತೆಗೆ ವಿಜ್ಞಾನವೂ ಮುಖ್ಯ ಎಂದು ಲೇಖಕ ಸಿಪಿ ರಾಜೇಂದ್ರನ್ ವಿಶ್ಲೇಷಿಸುತ್ತಾರೆ.

WhatsApp Image 2025 03 31 at 4.55.10 PM

ನ್ಯಾಷನಲ್ ಮಿಷನ್ ಆನ್ ಕ್ಲೀನ್ ಗಂಗಾ (ಎನ್ಎಂಸಿಜಿ) ಪ್ರಕಾರ ಗಂಗಾ ಜಲಾನಯನ ಪ್ರದೇಶವು ದಿನಕ್ಕೆ ಸುಮಾರು 12,000 ಲೀ ಕೊಳಚೆ ನೀರನ್ನು ಉತ್ಪಾದಿಸುತ್ತದೆ. ಇದಕ್ಕೆ ಪ್ರಸ್ತುತ ಸುಮಾರು 4,000 ಲೀ ಮಾತ್ರ ಸಂಸ್ಕರಣಾ ಸಾಮರ್ಥ್ಯವಿದೆ. ಗಂಗಾ ನದಿಯ ದಡದಲ್ಲಿರುವ ಪಟ್ಟಣಗಳಿಂದ ಸುಮಾರು 3000 ಎಂಎಲ್ಡಿ ಕೊಳಚೆ ನೀರನ್ನು ಗಂಗಾ ನದಿಗೆ ಹರಿಬಿಡಲಾಗುತ್ತಿದೆ. ಇಲ್ಲಿಯವರೆಗೆ ಸಂಸ್ಕರಣಾ ಸಾಮರ್ಥ್ಯ ಕೇವಲ 1000 ಎಂಎಲ್ಡಿ ಆಗಿರುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.

ಮಹಾ ಕುಂಭಮೇಳದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸರಣಿ ಟ್ವೀಟ್ ಮಾಡಿ, “ಉತ್ತರ ಪ್ರದೇಶದ ಶೇ.12 ರಷ್ಟು ರೋಗಗಳಿಗೆ ಕಲುಷಿತ ಗಂಗಾ ನದಿ ನೀರು ಕಾರಣವಂತೆ” ಎಂದು ಹೇಳಿದ್ದರು. ಅಲ್ಲದೆ ಕಲುಷಿತ ನೀರಿನಲ್ಲೇ ಭಕ್ತರು ಸ್ನಾನ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ, “ಇದು ನಾವು ಗಂಗೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದರ ವಾಸ್ತವ. ʼನಮಾಮಿ ಗಂಗೆʼ ಎಂಬುದು ಕೇವಲ ಬಜೆಟ್ ಹಂಚಿಕೆಗಳಿಗೇ ಸೀಮಿತವಾಗಿದೆ. ಕುಂಭಮೇಳವು ಚುನಾವಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಟ್ವೀಟ್ ಮಾಡಿದ್ದರು.

WhatsApp Image 2025 03 31 at 4.40.46 PM

ಕುಂಭಮೇಳದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟೀಕಿಸಿದ್ದರು. ಈ ಟೀಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಮಾಡಿ ಬಂದರು. ಈ ಬೆಳವಣಿಗೆ ಬೆನ್ನಲ್ಲೇ ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನಾಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕಾ ಪ್ರಹಾರಗಳು ವ್ಯಕ್ತವಾದವು.

ಅದಕ್ಕೆ ಪೂರಕವೆಂಬಂತೆ, ಕೆಲವು ವರ್ಷಗಳ ಹಿಂದೆ ನಡೆಸಿದ ಅಧ್ಯಯನವೊಂದು ಉತ್ತರ ಪ್ರದೇಶದಲ್ಲಿನ ಶೇ.12%ರಷ್ಟು ರೋಗಗಳಿಗೆ ಕಲುಷಿತ ಗಂಗಾನದಿ ನೀರು ಕಾರಣವಾಗಿದೆ ಎಂದು ಬಹಿರಂಗಪಡಿಸಿದೆ. ಗಂಗಾ ಜಲಾನಯನ ಪ್ರದೇಶವು 11 ರಾಜ್ಯಗಳನ್ನು ವ್ಯಾಪಿಸಿದ್ದು, ಭಾರತದ ಭೂಪ್ರದೇಶದ ಕಾಲು ಭಾಗವನ್ನು ಒಳಗೊಂಡಿದೆ. ಇದು ಭಾರತದ ಬಡ ಸಮುದಾಯಗಳಲ್ಲಿ ಮೂರನೇ ಎರಡರಷ್ಟು ಸೇರಿದಂತೆ ದೇಶದ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಇದು ಭಾರತದ ಮೇಲ್ಮೈ ನೀರಿನ 1/3 ಕ್ಕಿಂತ ಹೆಚ್ಚು ನೀರು ಪೂರೈಸುತ್ತದೆ ಮತ್ತು ದೇಶದ ಅತಿದೊಡ್ಡ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಆದಾಗ್ಯೂ ಈ ರೀತಿಯಾಗಿ ನಾವು ನಮ್ಮ ಜೀವಸೆಲೆಯನ್ನು ರಕ್ಷಿಸುತ್ತಿದ್ದೇವೆ” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದರು.

2014ರಲ್ಲಿ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, “ನಿಮ್ಮಿಂದ ಗಂಗೆಯನ್ನು ಸ್ವಚ್ಛಗೊಳಿಸುವುದು ಸಾಧ್ಯವಾದರೆ ಅದರಿಂದ ದೇಶದ 40% ಜನಸಂಖ್ಯೆಗೆ ಸಹಾಯವಾಗುತ್ತದೆ. ಹೀಗಾಗಿ ಗಂಗೆಯನ್ನು ಸ್ವಚ್ಛಗೊಳಿಸುವುದು ದೇಶದ ಆರ್ಥಿಕ ಕಾರ್ಯಸೂಚಿಯೂ ಆಗಿದೆ. ಈ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಸರ್ಕಾರ ಸಮಗ್ರ ಗಂಗಾ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ನಮಾಮಿ ಗಂಗೆ ಹೆಸರಿನ ಯೋಜನೆಯು ಗಂಗಾ ನದಿಯ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಪುನರುಜ್ಜೀವನಗೊಳಿಸಲು ಕಟಿಬದ್ಧವಾಗಿದೆ” ಎಂದಿದ್ದರು.

ಗಂಗೆಯನ್ನು ಶುದ್ಧೀಕರಣಗೊಳಿಸಲು ಕಟಿಬದ್ಧವಾಗಿದ್ದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೋಟ್ಯಂತರ ದೇಶವಾಸಿಗಳ ನಂಬಿಕೆಯನ್ನು ಹುಸಿಗೊಳಿಸಿದೆ. ಕುಂಭಮೇಳದ ನಂತರ ಹಿಂದೆಂದಿಗಿಂತಲೂ ಆಗಿರದಷ್ಟು ಗಂಗಾನದಿ ಅತ್ಯಂತ ಕಲುಷಿತವಾಗಿದೆ. ಅಲ್ಲಿನ ನೀರು ಕುಡಿಯಲು ಬಿಡಿ, ಸ್ನಾನಕ್ಕೂ ಯೋಗ್ಯವಲ್ಲ ಎನ್ನುತ್ತದೆ ಸಿಪಿಸಿಬಿ.

WhatsApp Image 2025 03 31 at 4.37.39 PM

ʼಗಂಗಾ ನದಿ ಶುದ್ಧೀಕರಣʼ ಎನ್ನುವುದು ಬೋಗಸ್ ಆಗಿದ್ದರೆ, ʼನಮಾಮಿ ಗಂಗಾʼಗೆ ಮೀಸಲಿಟ್ಟ ಸಾವಿರಾರು ಕೋಟಿ ಅನುದಾನ ಏನಾಯಿತು?’ ಎನ್ನುವುದು ಒಂದು ವರ್ಗದ ಪ್ರಶ್ನೆಯಾದರೆ.. ಅದನ್ನು ಸಮರ್ಥಿಸಿಕೊಳ್ಳಲೆಂದೇ ಕೆಲಸ ಮಾಡುತ್ತಿರುವ ಇನ್ನೊಂದು ವರ್ಗ, ವೈಜ್ಞಾನಿಕ ವರದಿಗಳನ್ನೂ ಮರೆಮಾಚಿ ಗಂಗೆ ಶೇ.100ರಷ್ಟು ಪವಿತ್ರಳು ಎನ್ನುತ್ತದೆ. ʼಗಂಗಾ ನದಿ ಪವಿತ್ರವೇ ಆಗಿತ್ತು ಒಂದು ಕಾಲದಲ್ಲಿ. ನದಿಯ ನೀರು ಸ್ವಯಂ ಶುದ್ಧೀಕರಣಗೊಳ್ಳುವ ಶಕ್ತಿ ಹೊಂದಿತ್ತು. ಈಗ ನದಿಗೆ ಸೇರುವ ಮಾಲಿನ್ಯಕಾರಕಗಳ ಪ್ರಮಾಣ ಮಿತಿ ಮೀರಿರುವುದರಿಂದ ಗಂಗೆಯೂ ಏನೂ ಮಾಡಲಾಗುತ್ತಿಲ್ಲʼ ಎಂದು ಸಮರ್ಥಿಸಿಕೊಂಡು ಸಮಾಧಾನಪಟ್ಟುಕೊಳ್ಳುತ್ತಿದೆ ಮಗದೊಂದು ಗುಂಪು.

ಇಲ್ಲಿ ಗಂಗಾ ಶುದ್ಧಳೋ ಅಶುದ್ಧಳೋ ಎನ್ನುವುದಕ್ಕಿಂತ ಸರ್ವರಿಗೂ ಸೇರಬೇಕಾದ ನೈಸರ್ಗಿಕ ಸಂಪತ್ತನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಸಾಮಾನ್ಯರ ಧಾರ್ಮಿಕ ನಂಬಿಕೆಗಳಿಗೆ ರಾಡಿ ರಾಚುತ್ತಿರುವುದು ಅಕ್ಷಮ್ಯ. ಈ ನಡುವೆ ಎಲ್ಲವನ್ನೂ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡುವುದಕ್ಕಿಂತ ವೈಜ್ಞಾನಿಕವಾಗಿ ತರ್ಕ ಮಾಡಿ ಸತ್ಯಾಸತ್ಯತೆಗಳನ್ನು ತಿಳಿಯುವುದು ಇಂದಿಗೆ ಅನಿವಾರ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...