ಪ್ರವೇಶ: ‘ಮೈಸೂರು ರಾಜ್ಯ’ವು ಅಧಿಕೃತವಾಗಿ ‘ಕರ್ನಾಟಕ ರಾಜ್ಯ’ವಾದ ನಂತರದ ಐವತ್ತು ವರ್ಷಗಳಲ್ಲಿ ‘ಬಲಪಂಥೀಯ ಶಕ್ತಿ’ಗಳ ಬಲವೃದ್ಧಿಯ ಮಾಪನವನ್ನು, ವರ್ತಮಾನದ ಸನ್ನಿವೇಶದ ಕಣ್ಣೋಟದಲ್ಲಿ ಮಾಡಬೇಕಾದ್ದು ಅನಿವಾರ್ಯವೇ. ಆದರೆ ವರ್ತಮಾನದ ಕರ್ನಾಟಕದಲ್ಲಿ, ತೀವ್ರ ಬಲಪಂಥದ ಸಂಘಟನೆಗಳ ಕೂಟವಾದ ‘ಸಂಘ ಪರಿವಾರ’ದ ಕಾರ್ಯಚಟುವಟಿಕೆ ಮತ್ತು ಪ್ರಭಾವವು ಸಮಾಜದಲ್ಲಿ ವ್ಯಾಪಕವಾಗಿ ಹಬ್ಬಿ, ಬಲಪಂಥವು ಯಾವ ಪಕ್ಷದ ರಾಜ್ಯಾಡಳಿತವಿದ್ದರೂ ತನ್ನ ಸೊಕ್ಕನ್ನು ಅಂಕೆ ಇಲ್ಲದೆ ಉಕ್ಕಿಸುವ ಬಲ ಪಡೆದ ಸ್ಥಿತಿ ತಲುಪಿರುವುದರಿಂದ, 1973ಕ್ಕಿಂತ ಹಿಂದಿನ 50 ವರ್ಷಗಳಲ್ಲಿ ಬಲಪಂಥದ ಬೇರೂರಿದ ಬಗೆಯನ್ನು ಗಮನಿಸುವುದು ಅವಶ್ಯಕವೆಂದು ತಿಳಿದು, ಆ ಕಾಲದ ಬೆಳವಣಿಗೆಗಳನ್ನು ಒಳಗೊಂಡ ಟಿಪ್ಪಣಿಗಳ ರೂಪದ ಅವಲೋಕನವನ್ನು ಮುಂದಿಡಲಾಗಿದೆ. ‘ಬಲ ಪಂಥ’ ಎಂಬ ಸಾಮಾಜಿಕ/ ರಾಜಕೀಯ ಬಣದ ಸಾಮಾನ್ಯ ಗುಣ ಲಕ್ಷಣಗಳನ್ನು ಶಾಸ್ತ್ರೀಯವಾಗಿ ಹೀಗೆ ಪಟ್ಟಿ ಮಾಡಲಾಗುತ್ತದೆ:
1) ಬದುಕಿನ ರೀತಿ ನೀತಿಗಳಲ್ಲಿ ಪರಂಪರೆ/ಸಂಪ್ರದಾಯಗಳನ್ನು ನೆಚ್ಚಿರುವ ಹಾಗೂ ಅದರಲ್ಲಿ ಬದಲಾವಣೆಯನ್ನು ಬಯಸದಿರುವ ಗುಂಪು. 2) ಸಾಂಪ್ರದಾಯಿಕ ನಂಬಿಕೆಗಳ ಆಧಾರದಲ್ಲಿ ಸಮಾಜದಲ್ಲಿ ಅಧಿಕಾರ ಹಂಚಿಕೆ ಮತ್ತು ರಾಜಕೀಯ ಆಡಳಿತ ನಡೆಸುವುದನ್ನು ಇಚ್ಛಿಸುವ ಗುಂಪು.
ಪ್ರಸ್ತುತ ಬರಹದಲ್ಲಿ ‘ಬಲಪಂಥ’ವನ್ನು ಈ ಅರ್ಥದಲ್ಲಿ ಬಳಸಲಾಗಿದೆ.
ಕರ್ನಾಟಕದಲ್ಲಿ ಬಲ ಪಂಥದ ಬೇರುಗಳು- 1923-73
ಕರ್ನಾಟಕದಲ್ಲಿ ಇರುವ ಬಲ ಪಂಥದ ಲಕ್ಷಣಗಳನ್ನು ವಿಸ್ತಾರದಲ್ಲಿ ಹೀಗೆ ಗುರುತಿಸಬಹುದು:
1) ಕರ್ನಾಟಕದ ಮೂಲವನ್ನು ವಿಜಯನಗರ ಸಾಮ್ರಾಜ್ಯದಲ್ಲಿ ಗುರುತಿಸುವುದು, ಇದನ್ನೇ ಆಧುನಿಕ ಕರ್ನಾಟಕ ಸಾಮಾಜಿಕ ಜೀವನ ಹಾಗೂ ರಾಜಕೀಯಕ್ಕೆ ಮಾದರಿಯಾಗಿ ಭಾವಿಸುವುದು. ಈ ಸಾಮ್ರಾಜ್ಯವನ್ನು ನಾಶ ಮಾಡಿದವರು ಮುಸ್ಲಿಮ್ ಅರಸರು, ಹಾಗಾಗಿ ಮುಸ್ಲಿಮರು ಕರ್ನಾಟಕದ ಶತ್ರುಗಳು ಎಂಬ ಚರಿತ್ರೆಯ ಕಣ್ಣೋಟವನ್ನು ರೂಢಿಸುವುದು.
2) ‘ಹಿಂದೂ ಧರ್ಮ’ ಎನ್ನುವುದು ಸಾವಿರಾರು ವರ್ಷಗಳಿಂದ ಭಾರತವೆಂಬ ಭೂಖಂಡದ ಜನಜೀವನವನ್ನು ಒಂದಾಗಿ ಹಿಡಿದಿಟ್ಟಿರುವ ಮತ ನಂಬಿಕೆ, ಬದುಕಿನ ನೀತಿ ನಿಯಮ, ಆಚರಣಾ ಪದ್ಧತಿಗಳ ಜೀವನ ವಿಧಾನ; ವೈದಿಕ ಮತ ನಿಯಮಗಳು ‘ಹಿಂದೂ ಧರ್ಮ’ದ ಪ್ರಮಾಣ; ಈ ಅರ್ಥದಲ್ಲಿ ಭಾರತದ ಬಹುಸಂಖ್ಯೆಯ ಜನ ‘ಹಿಂದೂಗಳು’, ಹಾಗಾಗಿ ಭಾರತವು ‘ಹಿಂದೂ ರಾಷ್ಟ್ರ’; ‘ಕರ್ನಾಟಕವು’ ‘ಹಿಂದೂ ರಾಷ್ಟ್ರ’ದ ಅವಿಭಾಜ್ಯ ಅಂಗವಾದ ‘ಉಪ ರಾಷ್ಟ್ರ’ – ಎಂಬ ರಾಷ್ಟ್ರ ಕಲ್ಪನೆಯನ್ನು ಪೋಷಿಸಿ, ರೂಢಿಸುವುದು.
3) ‘ಜಾತಿ ಶ್ರೇಣಿಕರಣ’ದ ವ್ಯವಸ್ಥೆಯು ನಮ್ಮ ಸಮುದಾಯ ಜೀವನವನ್ನು ಸದೃಢವಾಗಿ ಹಿಡಿದಿಟ್ಟಿರುವ ಸಮಾಜ ಪದ್ಧತಿ. ಇದರ ಆಧಾರದಲ್ಲಿ ಸಮಾಜದ ಬದುಕು, ಅಧಿಕಾರ ಹಂಚಿಕೆ ಹಾಗೂ ರಾಜಕೀಯ ಆಡಳಿತ ಇರಬೇಕು ಎಂಬ ವಾದವನ್ನು ಬೆಳೆಸಿ, ಪೋಷಿಸುವುದು.
4) ಕ್ರಾಂತಿಕಾರಕ ಸಾಮಾಜಿಕ, ರಾಜಕೀಯ ಬದಲಾವಣೆಗಳ ಸಂದರ್ಭಗಳಲ್ಲಿ ಮೇಲಿನ ಮೂರು ವಿಚಾರಗಳ ಪ್ರಭಾವವು ಜನಮಾನಸದಲ್ಲಿ ಕುಂದದ ಹಾಗೆ ರಕ್ಷಿಸಲು ಹಾಗೂ ಸಾಮಾನ್ಯ ಕಾಲದಲ್ಲಿ ಈ ವಿಚಾರಗಳನ್ನು ಪ್ರಸಾರಿಸಿ, ಜನರಲ್ಲಿ ಸಹಮತ ರೂಢಿಸಲೂ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವುದು.
ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-2)
ಒಂದು ಮತ್ತು ಎರಡನೇ ಲಕ್ಷಣಗಳು, ‘ಕರ್ನಾಟಕತ್ವ’ದ ಕಲ್ಪನೆಯ ಪ್ರಧಾನ ವಿಚಾರಧಾರೆಯಲ್ಲಿ ಮಿಳಿತವಾಗಿತ್ತು. ಮೂರನೇ ಲಕ್ಷಣವು ಸ್ವತಂತ್ರಪೂರ್ವ ಭಾರತದ ಬಹುತೇಕ ಪ್ರದೇಶಗಳ ಸಮಾಜದಲ್ಲಿ ಭದ್ರವಾಗಿದ್ದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿತ್ತು. ಕರ್ನಾಟಕತ್ವದ ಕಲ್ಪನೆಯು ಕನ್ನಡ ಮಾತನಾಡುವ ಪ್ರದೇಶಗಳ ಜಾತಿ-ಮತಾತೀತ, ಲೌಕಿಕ ಕಲ್ಯಾಣದ ಪರಿಕಲ್ಪನೆ ಆಗಿರದೆ, ಊಳಿಗಮಾನ್ಯ, ವೈದಿಕ ಸಂಹಿತೆಮಾನ್ಯ ರಾಜಾಡಳಿತ ಪ್ರಭುತ್ವಗಳ ಪುನರುತ್ಥಾನ ಸಂಕಲ್ಪಗಳಿಂದ ತುಂಬಿ ತುಳುಕುತ್ತಿದ್ದದ್ದು ಬಲಪಂಥದ ಶಕ್ತಿ ಮತ್ತು ವ್ಯಾಪ್ತಿ ವೃದ್ಧಿಗೆ ಅನುಕೂಲಕರವಾಗಿಯೇ ಇತ್ತು.
ವಸಾಹತುಶಾಹಿಗೆ ಬದ್ಧವಾಗಿದ್ದ ಮೈಸೂರು ಸಂಸ್ಥಾನ, ಮದ್ರಾಸು ಹಾಗೂ ಮುಂಬೈ ಪ್ರೆನ್ಸಿಡೆನ್ಸಿಗಳ ಆಡಳಿತದಡಿ ಇದ್ದ ಭಾವಿ ಕರ್ನಾಟಕ ಪ್ರದೇಶಗಳಲ್ಲಿ 1871-1931ರವರೆಗೆ ನಡೆಸಲಾದ ದಶವಾರ್ಷಿಕ ಜನಗಣತಿಯಂತಹ ಲೌಕಿಕ ಕಲಾಪಗಳೂ ವೈದಿಕಶಾಹಿ ಜಾತಿ ವ್ಯವಸ್ಥೆಯನ್ನು ಬಲಗೊಳಿಸುವ ವಿದ್ಯಮಾನಗಳಿಗೆ ಕಾರಣವಾದವು. ಈ ಕಾಲದಲ್ಲಿ ಲಿಂಗಾಯತ ಸಮುದಾಯವು ಬ್ರಾಹ್ಮಣ ಸಮುದಾಯಕ್ಕೆ ಸಮನಾದ ಗಣನೀಯ ಸಾಮಾಜಿಕ ಸ್ಥಾನಮಾನಕ್ಕೆ ಸ್ಪರ್ಧಿಸಿದ ವಿದ್ಯಮಾನಕ್ಕೆ ಜನಗಣತಿ ಕಲಾಪಗಳು ರಂಗವನ್ನು ಒದಗಿಸಿದವು. ಲಿಂಗಾಯತ ಸಮುದಾಯದ ಸುಶಿಕ್ಷಿತರು ಶರಣ ಚಳವಳಿಯ ವೈದಿಕಶಾಹಿ ವಿರೋಧಿ ಕ್ರಾಂತಿಕಾರಿ ಗುಣಗಳನ್ನು ವಿಸರ್ಜಿಸಿಕೊಂಡು, ತಮ್ಮ ಜನ್ಮಾವಳಿಯನ್ನು ವೇದ ಪ್ರಮಾಣ, ಜಾತಿ-ವರ್ಣಾಶ್ರಮ ವ್ಯವಸ್ಥೆಗಳೊಂದಿಗೆ ಹೆಣೆದು ‘ವೀರಶೈವ ಬ್ರಾಹ್ಮಣ’ ಸ್ಥಾನಮಾನಕ್ಕೆ ಸೆಣೆಸಿದರು. ಹಾಗೆಯೇ, ವರ್ಣಾಶ್ರಮ ವ್ಯವಸ್ಥೆಯಲ್ಲಿ ‘ಶೂದ್ರ’ರೆಂದು ಗುರುತಿಸಲ್ಪಡುತ್ತಿದ್ದ ಒಕ್ಕಲಿಗರೂ ಸೇರಿದ ಹಾಗೆ ಹಲವು ಜಾತಿ ಸಮುದಾಯಗಳು, ಜಾತಿ ಶ್ರೇಣಿಯಲ್ಲಿ ತಮ್ಮ ಸ್ಥಾನವನ್ನು ಉನ್ನತ ಮಟ್ಟದಲ್ಲಿ ಗುರುತಿಸಬೇಕೆಂಬ ಸಾಮೂಹಿಕ ಒತ್ತಾಯ ಮಂಡನೆಗೆ ಜನಗಣತಿ ಕಾರ್ಯಚಟುವಟಿಕೆಗಳು ಕಾರಣವಾದವು. ಇಂತಹ ವಿದ್ಯಮಾನಗಳು, ದೇಶವ್ಯಾಪಿಯಾಗಿಯೂ, ಭಾವಿಕರ್ನಾಟಕ ಪ್ರಾಂತ್ಯಗಳಲ್ಲೂ ಪ್ರಬಲವಾಗಿ ನಡೆಯುತ್ತಿದ್ದ ಜಾತಿ ವಿರೋಧಿ ಚಳವಳಿಗಳ ಕಾರಣವಾಗಿ ಬಲಹೀನವಾಗುವ ಆತಂಕದಲ್ಲಿದ್ದ ಬಲಪಂಥಕ್ಕೆ, ತನ್ನ ಸಾಮಾಜಿಕ ನೆಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಅನುಕೂಲ ಮಾಡಿಕೊಟ್ಟವು.
1930-40ರ ದಶಕದಲ್ಲಿ ಕರ್ನಾಟಕ ಪ್ರಾಂತ್ಯದಲ್ಲಿ ತಳ ಊರಿದ ಆರ್.ಎಸ್.ಎಸ್. ಸಂಘಟನೆಯು, ಕರ್ನಾಟಕದ ಬಲಪಂಥದ ಮೊದಲ ಮೂರು ಲಕ್ಷಣಗಳ ಸ್ಥಾಪಿತ ಬಲವನ್ನು ಚಾಣಾಕ್ಷವಾಗಿ ಬಳಸಿಕೊಂಡು ನಾಲ್ಕನೇ ಲಕ್ಷಣವನ್ನು ಸಂಘಟಿತವಾಗಿ ರೂಪಿಸಿದ್ದು ಮಾತ್ರವಲ್ಲ, ನಾಲ್ಕೂ ಲಕ್ಷಣಗಳನ್ನು ಹರಳುಗಟ್ಟಿಸಿಕೊಂಡ ಪ್ರಬಲ ಬಲಪಂಥವನ್ನು ಕರ್ನಾಟಕದ ಎಲ್ಲ ಕಾರ್ಯಕ್ಷೇತ್ರಗಳ ಒಳಗೂ ಸ್ಥಾಪಿಸಲು ಪ್ರಶಸ್ತವಾದ ಸಾಮಾಜಿಕ ರಂಗವನ್ನು ಆಡುಂಬೋಲ ಮಾಡಿಕೊಂಡಿತು. ಆರ್.ಎಸ್.ಎಸ್. ಮೈಸೂರು, ಧಾರವಾಡ, ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸುತ್ತಾ ಹೋದದ್ದಷ್ಟೇ ಅಲ್ಲ, ಆಯಾ ಪ್ರದೇಶಗಳಿಗೆ ವಿಶೇಷವಾಗಿದ್ದ ವೈದಿಕಶಾಹಿಯ ಸಾಮಾಜಿಕ ಯಜಮಾನಿಕೆಯನ್ನು ಪ್ರತಿರೋಧಿಸುತ್ತಿರುವ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಜನರೂ ಮನಸ್ಸು ಕೊಡುವುದನ್ನು ತಡೆಯುವ ಸಲುವಾಗಿ ಅನೇಕ ಸಾಮಾಜಿಕ ತಂತ್ರಗಾರಿಕೆಯ ಪ್ರತಿ ಕಾರ್ಯಚಟುವಟಿಕೆಗಳನ್ನು ಆಯೋಜಿಸತೊಡಗಿದರು. ಸಾಹಿತ್ಯ, ಸಂಗೀತ, ಜನಪದ ಕಲೆ, ಸಹಕಾರಿ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸಮಾಜಸೇವಾ ಕ್ಷೇತ್ರ- ಹೀಗೆ ಜನ ಸಾಮಾನ್ಯರ ಜೊತೆ ಸಂಪರ್ಕ ಸಾಧಿಸಿ ತಮ್ಮ ಪ್ರಭಾವನ್ನು ಬೆಳೆಸುವ ಯಾವುದೇ ವಲಯವಿದ್ದರೂ- ಸಂಬಂಧಿತ ಸಂಘಸಂಸ್ಥೆಗಳಲ್ಲಿ ಸೇರಿಕೊಂಡು ತಮ್ಮ ಮಾದರಿಗಳನ್ನು ರೂಢಿಸುವ ಮೂಲಕ ಅವನ್ನು ವಶಕ್ಕೆ ಪಡೆಯುವುದು ಹಾಗೂ ತಾವೇ ಪರ್ಯಾಯ ಸಂಘಸಂಸ್ಥೆಗಳನ್ನು ಸಂಘಟಿಸುವ ಕಾಯಕದಲ್ಲಿ ಅನೂಚಾನ ತೊಡಗಿಕೊಂಡರು. ಗಮನಾರ್ಹವಾಗಿ ಜನರ ಧಾರ್ಮಿಕ ನಂಬಿಕೆಗಳ ನಾಡಿ ಹಿಡಿದು ದೇವಸ್ಥಾನಗಳ ಅಧಿಕಾರದ ಆಯಕಟ್ಡಿನ ಸ್ಥಾನಗಳಲ್ಲೂ, ಮಠ ಸಂಸ್ಥೆಗಳ ಪಾರುಪತ್ಯಿಕೆಯಲ್ಲೂ ಪ್ರಭಾವ ಸ್ಥಾಪಿಸಿಕೊಂಡು, ತನ್ನ ಕಾರ್ಯಕ್ರಮಗಳಿಗೆ ಜನರ ಬೆಂಬಲ ಗಳಿಸಿಕೊಳ್ಳುವಲ್ಲಿ ಸಂಘಪರಿವಾರದ ಸಂಘಟನೆಗಳು ಯಶಸ್ವಿಯಾಗಿರುವುದು, ಕರ್ನಾಟಕದ ಬಲಪಂಥಕ್ಕೆ ಸಂಘಟನೆಯ ಆನೆ ಬಲ ಪ್ರಾಪ್ತಿಯಾಗಿದೆ.
ಭಾರತದ ಇತರೆಡೆಗಳ ಹಾಗೆ, ಕರ್ನಾಟಕದಲ್ಲಿ ಬಲಪಂಥಕ್ಕೆ ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಭದ್ರವಾಗಿರುವ ಜಾತಿ ವ್ಯವಸ್ಥೆ ಹಾಗೂ ಅದನ್ನು ರಕ್ಷಿಸುವ ಮೂಲಕ ಸುಭದ್ರವಾಗಿರುವ ಜಮೀನ್ದಾರಿ ಪದ್ಧತಿಯ ಅರ್ಥ ಸಂಬಂಧಗಳ ವಜ್ರ ಕವಚ ಇರುವುದು ವಾಸ್ತವ. ಆದರೆ, ಎಂತಹ ಭದ್ರ ಕೋಟೆಗಳಿಗೂ ಕನ್ನ ಹಾಕಿ ಶಿಥಿಲಗೊಳಿಸುವ ಆಕ್ರಮಣಗಳು ಮನುಷ್ಯ ಸಮಾಜದ ಇತಿಹಾಸದಲ್ಲಿ ಹೊಸತೇನು ಅಲ್ಲ. ಅಂತಹ ಚಾರಿತ್ರಿಕ ಗಳಿಗೆಗಳಲ್ಲಿ ಕ್ರಾಂತಿಕಾರಿ ಶಕ್ತಿಗಳು ಅಧಿಕಾರಸ್ಥ ಬಲಪಂಥದ ಶಕ್ತಿಗಳ ಬೆನ್ನುಮೂಳೆ ಮುರಿದು, ಸಮಾಜದ ಸ್ವರೂಪವನ್ನು ಬದಲಾಯಿಸುತ್ತವೋ? ಅಥವಾ ಬಲಪಂಥವು ಕ್ರಾಂತಿಕಾರಿ ಪಂಥಗಳ ದಾಳಿಯಲ್ಲಿ ನಲುಗಿ, ಸ್ವರಕ್ಷಣೆಯ ತಂತ್ರಗಳನ್ನು ಉಪಯೋಗಿಸಿಕೊಂಡು, ಅಡಗುದಾಣಗಳಲ್ಲಿ ಸೇರಿ, ತಮ್ಮ ಮೂಲ ಶಕ್ತಿಯನ್ನು ಕಾಪಾಡಿಕೊಂಡು, ಕ್ರಾಂತಿಕಾರಿ ಶಕ್ತಿಗಳು ನಿಸ್ತೇಜವಾಗುವ ಕಾಲಕ್ಕೆ ಕಾದು ಮತ್ತೇ ತಲೆ ಎತ್ತಿ ಹೊಸ ತಂತ್ರಗಳ ಮೂಲಕ ಸಮಾಜವನ್ನು ಪುನಃ ವ್ಯಾಪಿಸಿಕೊಳ್ಳುತ್ತವೋ? ಎನ್ನುವುದರ ಮೇಲೆ ಆಯಾ ಕಾಲದ ಬಲಪಂಥದ ಶಕ್ತಿ ಮಾಪನ ಮಾಡಬೇಕಾಗುತ್ತದೆ. ವಸಾಹತುಶಾಹಿ ಆಳ್ವಿಕೆಯ ಕಾಲ ಹಾಗೂ ವಸಾಹತುಶಾಹಿ ವಿರೋಧಿ ಹೋರಾಟಗಳ ಕಾಲವು ಅಂತಹ ಚಾರಿತ್ರಿಕ ಸನ್ನಿವೇಶಗಳನ್ನು ಒದಗಿಸಿತ್ತು. 1850-1950ರ ವರೆಗಿನ ಹಲವು ಬಗೆಯ ಸಾಮಾಜಿಕ ಚಳವಳಿಗಳು ಜಾತಿ ವ್ಯವಸ್ಥೆಯ ಊಳಿಗಮಾನ್ಯ ಸಮಾಜಕ್ಕೆ ಕ್ರಾಂತಿಕಾರಿ ಸವಾಲುಗಳನ್ನು ಒಡ್ಡಿದ್ದವು. ಆದರೆ ಬಲಪಂಥವು ನಲುಗಿದರೂ, ತನ್ನ ಮೈಮೂಳೆಗಳನ್ನು ಮುರಿಯಗೊಡಲು ಬಿಡದೆ, ಹೊಸ ಅಡಗುದಾಣಗಳನ್ನು ಕಟ್ಟಿಕೊಂಡು ಜಮೀನ್ದಾರಿ ಜಾತಿ ವ್ಯವಸ್ಥೆಯನ್ನು ರಕ್ಷಿಸುವ ಅಧಿಕಾರ ಸಂಬಂಧಗಳು ನಾಶವಾಗದ ಹಾಗೆ ಕಾಪಾಡಿಕೊಂಡವು; ಆ ಮೂಲಕ ಸಾವಿರಾರು ವರ್ಷಗಳ ಸಂಚಿತ ಶಕ್ತಿಯನ್ನು ನೀರಾಗದ ಹಾಗೆ ಉಳಿಸಿಕೊಂಡವು.
ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-1)
ಇದಕ್ಕೆ ಒಂದು ಉದಾಹರಣೆ ಭೂಮಿ ಹಕ್ಕಿಗಾಗಿ ಗೇಣಿದಾರರು, ಭೂಹೀನರು ನಡೆಸಿದ ಹೋರಾಟಗಳು. ಈ ಹೋರಾಟಗಳು ಭಾರತದಲ್ಲೂ, ಕರ್ನಾಟಕದ ಹಲವು ಪ್ರದೇಶಗಳಲ್ಲೂ ಬಿಡಿ ಬಿಡಿಯಾಗಿ ನಡೆದರೂ, ಮುಕ್ಕಾಲು ಪಾಲು ಕೆಳ ಜಾತಿಯ ಆಸ್ತಿಹೀನ ಜನ ಸಮುದಾಯಗಳಲ್ಲಿ ಊಳಿಗಮಾನ್ಯ ಸಮಾಜದ ರೂಢಿ ಶರಣತೆ ಕೊಡವಿಕೊಂಡು ಮೂಡಿದ ಸಾಮಾಜಿಕ ಬಂಡಾಯದ ಹೊಸ ಪ್ರಜ್ಞೆಯು ಸಾಮಾನ್ಯವಾಗಿತ್ತು; ಆ ಹೋರಾಟಗಳನ್ನು ಅಣಿನೆರೆಸಿದ ವಿವಿಧ ವಿಚಾರಗಳ ಸಂಘಟನೆಗಳಿಗೆ ತಾವು ಎದಿರು ಹಾಕಿಕೊಳ್ಳುತ್ತಿರುವುದು ಜಾತಿ ವ್ಯವಸ್ಥೆಯ ಬೆನ್ನೆಲುಬಲ್ಲಿ ಸೆಟೆದು ನಿಂತಿರುವ ಜಮೀನ್ದಾರಿ ವ್ಯವಸ್ಥೆಯನ್ನು ಎಂಬುದರ ಹೊಳಹು ಕೂಡ ಸಾಮಾನ್ಯವಾಗಿತ್ತು; ಹೋರಾಟಗಳ ಒತ್ತಡದಲ್ಲೂ ವಸಾಹತುಶಾಹಿ ಹೋರಾಟದಲ್ಲಿ ಆಕಾರ ಪಡೆದಿದ್ದ (ಸಮಾಜವಾದಿ ರಾಜ್ಯಾಡಳಿತ ಪ್ರಜ್ಞೆಯಲ್ಲದಿದ್ದರೂ) ಸ್ವಯಂತಂತ್ರವಾದಿ ಕಲ್ಯಾಣ ಪ್ರಜಾತಂತ್ರ ಪ್ರಜ್ಞೆಯ ಒತ್ತಡದಲ್ಲೂ ಪ್ರಭುತ್ವವು ಭೂ ಸುಧಾರಣೆಯ ಕಾಯ್ದೆಗಳನ್ನು ತಂದಿತು. ಆದರೆ ರಾಜ್ಯಾಡಳಿತದಲ್ಲಿದ್ದ ಮಂದಿ ಇದೇ ಜಮ್ದೀದಾರಿ ಜಾತಿ ವ್ಯವಸ್ಥೆಯ ಬಲಪಂಥದ ಒತ್ತಡದಲ್ಲೂ ಇದ್ದರು; 1961, 64, 65ರ ತಿದ್ದುಪಡಿಗಳಲ್ಲೂ ಜಮೀನ್ದಾರರ ಭೂಮಿ ಒಡೆತನ ಸಂರಕ್ಷಣೆಗೆ ಹಲವು ಬಿಲಗಳನ್ನೂ ಬಿಟ್ಟಿದ್ದರು; ಜಮೀನ್ದಾರರು ತಮ್ಮ ಯಜಮಾನಿಕೆಯಿಂದ ಗಣನೀಯ ಪ್ರಮಾಣದಲ್ಲಿ ಯಾವ ದಾಖಲೆಗಳು ಇಲ್ಲದ ಗೇಣಿದಾರರನ್ನು ಒಕ್ಕಲೆಬ್ಬಿಸಿದರು- ಇವೆಲ್ಲ ಸರಿ. ಇಲ್ಲಿ ಭೂಮಿ ಹಂಚಿಕೆಯ ಪ್ರಮಾಣದ ಕೊರತೆಯ ಜೊತೆ ಇಡೀ ವಿದ್ಯಮಾನದಲ್ಲಿ ಬಲಪಂಥೀಯ ಯಜಮಾನಿಕೆಯ ಶಕ್ತಿ ಸಂಚಯದಲ್ಲಿ ವ್ಯತ್ಯಾಸವಾಗದೇ ಇರುವ ಸಂಗತಿಯನ್ನು ಗಮನಿಸಬೇಕು. 1973ರ ನಂತರದ ವಿದ್ಯಮಾನಗಳ ಮೇಲೆ ಇಂತಹ ಸಾಮಾಜಿಕ ಶಕ್ತಿ ಅಸಮತೋಲನಗಳ ಪರಿಣಾಮವು ಗಣನೀಯವಾಗಿದೆ.
ಕರ್ನಾಟಕ ಪ್ರಾಂತ್ಯವು ಹಲವು ಸುಧಾರಣಾವಾದಿ, ಎಡಪಂಥೀಯ ವಿಚಾರಧಾರೆಯ ಚಳವಳಿಗಳಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಸಾಕ್ಷಿಯಾಗಿರುವುದು ನಿಜವೇ. ಆದರೆ ಅವು ಯಾವವೂ ಸಮಾಜದ ವಿವಿಧ ವಲಯಗಳಲ್ಲಿ ನೆಲೆಯೂರಿ ತಮ್ಮ ವಿಚಾರಗಳನ್ನು ಜನರ ಸ್ವಯಂ ಪ್ರೇರಿತ ವಿಚಾರಗಳೆಂಬಂತೆ ಹಬ್ಬಿಸಲು ಬೇಕಾದ ಸಂಘ ಸಂಸ್ಥೆಗಳ ಹೆಣಿಗೆಯನ್ನು ಸಂಘಪರಿವಾರದಂತೆ ನೇಯ್ದಿಲ್ಲ. ಇದರ ಪರಿಣಾಮಗಳು 1950-60ರ ಹೊತ್ತಿಗೆ ನಿಚ್ಚಳವಾಗಿ ಕಾಣತೊಡಗಿದವು. ಉದಾಹರಣೆಯಾಗಿ ಕೋಮುದ್ವೇಷ ಹರಡುವಿಕೆ ಹಾಗೂ ಗಲಭೆಗಳ ವಿದ್ಯಮಾನವನ್ನು ನೋಡಬಹುದು. 1960-70 ದಶಕದಲ್ಲಿ ಭಾರತದಾದ್ಯಂತ ಕೋಮು ಗಲಭೆಯ ಪ್ರಮಾಣವು ಏರುಗತಿ ಕಾಣತೊಡಗಿತು ಹಾಗೂ ದೇಶದ ಶೇ.85 ಜಿಲ್ಲೆಗಳು ಕೋಮು ಗಲಭೆ ಬಾಧಿತವಾಗಿದ್ದವು. ಕರ್ನಾಟಕವೂ ಇದಕ್ಕೆ ಹೊರತಾಗಿರಲಿಲ್ಲ. 1960-70 ಅವಧಿಯಲ್ಲಿ ಮೈಸೂರು ರಾಜ್ಯದ 19 ಜಿಲ್ಲೆಗಳಲ್ಲಿ 14 ಜಿಲ್ಲೆಗಳು ಕೋಮುಗಲಭೆ ಬಾಧಿತವೆಂದು ಗುರುತಿಸಲ್ಪಟ್ಟಿದ್ದವು.
ಇಷ್ಟು 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಅಧಿಕೃತವಾಗಿ ನಾಮಕರಣಗೊಳ್ಳುವ ಹೊತ್ತಿಗೆ ಇದ್ದ ಬಲಪಂಥದ ಶಕ್ತಿ ಮಾಪನ.
1973-2023: ಬಲಪಂಥದ ಸಾರ್ವಜನಿಕ ಶಕ್ತಿ ಪ್ರದರ್ಶನ
ಸನ್ನಿವೇಶ: ವರ್ತಮಾನದ ಅರೆ ಶತಮಾನಕ್ಕೆ ಕಾಲಿಡುವ ಹೊತ್ತಿಗೆ ಕರ್ನಾಟಕದಲ್ಲಿನ ಬಲಪಂಥವು (1)ತನ್ನ ದೀರ್ಘ ಕಾಲದ ಅಧಿಕಾರದ ಶಕ್ತಿ ಸಂಚಯವನ್ನು ಭದ್ರವಾಗಿ ಉಳಿಸಿಕೊಂಡಿತ್ತು (2) ಸಂಘಪರಿವಾರವು ಸಂಘಟಿತ ಬಲಪಂಥದ ಶಕ್ತಿ ಕೇಂದ್ರವಾಗಿ ಹೊಮ್ಮಿದ್ದು, ತನ್ನ ಸಂಘಟನೆಗಳ ಹೆಣಿಗೆಯನ್ನು ಕರ್ನಾಟಕ ಜನ ಜೀವನದ ಬಹುಪಾಲು ಕಾರ್ಯಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡಿತ್ತು. (3) ಸಂಘಪರಿವಾರ ಪ್ರಣೀತ ಬಲಪಂಥದ ವಿಚಾರಧಾರೆಯು ಬಲ ಮತ್ತು ನಡು ಪಂಥದ ರಾಜಕೀಯ ಪಕ್ಷಗಳಲ್ಲಿ ಹಿಂದೂ ಧರ್ಮದ ಪ್ರಾತಿನಿಧಿಕ ವಿಚಾರಗಳೆಂದು ಮನ್ನಣೆ ಗಳಿಸಿತ್ತು ಹಾಗೂ ಹಿಂದೂ ಜನ ಸಮುದಾಯದ ಜನರಲ್ಲಿ ಸಾಮಾನ್ಯ ಜ್ಞಾನವಾಗಿ ಹೋಗಿತ್ತು. (4) ಎಡಪಂಥೀಯ ಸಾಮಾಜಿಕ ಚಳವಳಿಗಳು ಬಲಪಂಥವನ್ನು ಎದಿರು ಹಾಕಿಕೊಂಡು ಅದರ ನೆಲೆಗಳನ್ನು ಅಲುಗಾಡಿಸಿದ್ದವಾದರೂ, ಸಂಚಯಿತ ಶಕ್ತಿಯನ್ನು ಕುಂದಿಸಲು ಸಾಧ್ಯವಾಗಿರಲಿಲ್ಲ.
ಬಲಪಂಥದ ಚಾಣಾಕ್ಷ ವರಸೆ:
1950-60 ದಶಕದಲ್ಲಿ ಗೇಣಿದಾರರು ಹಾಗೂ ಭೂಹೀನರ ಭೂಮಿ ಹಕ್ಕಿಗಾಗಿ ಎಡಪಂಥದ ಸಂಘಟನೆಗಳು ಆಕ್ರಮಣಶೀಲ ಸಂಘಟನೆ- ಸಂಘರ್ಷಗಳನ್ನು ನಡೆಸಿದ್ದವು; ಕಾಯ್ದೆಯೊಳಗೆ ಇದ್ದ ದೌರ್ಬಲ್ಯಗಳನ್ನು ಬಳಸಿಕೊಂಡು ಜಮೀನ್ದಾರರು ತಮ್ಮ ಸುಪರ್ದಿನ ಶೇ.70ರಷ್ಟು ಭೂಮಿಯನ್ನು ತಮ್ಮ ಮಾಲಿಕತ್ವದಲ್ಲಿ ಉಳಿಯುವ ಹಾಗೆ ನೋಡಿಕೊಂಡಿದ್ದರು; ಇಷ್ಟೆಲ್ಲ ಇದ್ದರೂ ಹಂಚಿಕೆಯ ಪಾಲಿಗೆ ದಕ್ಕಿದ ಕಾಲುಪಾಲು ಕೃಷಿ ಭೂಮಿಯನ್ನು ದಕ್ಕಿಸಿಕೊಳ್ಳುವ ಸಂಘಟಿತ ಹೋರಾಟವನ್ನು ಹಲವು ಬಗೆಗಳಲ್ಲಿ ನಿಸ್ತೇಜಗೊಳಿಸುವ ಯತ್ನಗಳನ್ನು ಮಾಡಿದರೂ, ಭೂಹೀನರ ಸಂಘಟಿತ ಸಂಘರ್ಷವನ್ನು ಮಣಿಸುವುದು ಸಾಧ್ಯವಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಬಲಪಂಥದ ಶಕ್ತಿಗಳು ಜನರ ಮೇಲಿನ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮಾಡಿದ ಒಂದು ತಂತ್ರದ ಉದಾಹರಣೆಯನ್ನು ನೋಡಬಹುದು (ಇದು ಮೌಖಿಕವಾಗಿ ಉಳಿದು ಬಂದಿರುವ ಪ್ರಸಂಗವಾಗಿರುವುದರಿಂದ ನಿರ್ದಿಷ್ಟ ಹೆಸರುಗಳನ್ನು ಉಲ್ಲೇಖಿಸುವುದಿಲ್ಲ; ಇದನ್ನು ರೂಪಕ ಕಥನವನ್ನಾಗಿ ಕಂಡರೂ ಅಡ್ಡಿ ಇಲ್ಲ). ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಭೂ ಹೋರಾಟವನ್ನು ಸಂಘಟಿಸುತ್ತಿದ್ದ ಪ್ರಮುಖ ನಾಯಕರೊಬ್ಬರನ್ನು, ಸಂಘಪರಿವಾರದ ಪ್ರತಿನಿಧಿಯೂ, ಬಹು ಪ್ರತಿಷ್ಠಿತ ಮಾಧ್ವ ಮಠದ ಪೀಠಾಧೀಶರೂ ಆಗಿದ್ದ ಒಬ್ಬರು, ರೈತ ನಾಯಕರೊಡನೆ ಸಮಾಲೋಚನೆ ಮಾಡುವ ಇಂಗಿತದಿಂದ ಕರೆಸಿಕೊಂಡು ‘ನೀವು ನಿಮ್ಮ ಬೇಡಿಕೆಗಳಲ್ಲಿ ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಮಾತ್ರ ಕೇಳುತ್ತಿದ್ದೀರಿ! ಅದರ ಜೊತೆ ಮಠದಂತಹ ಧಾರ್ಮಿಕ ಸಂಸ್ಥೆಗಳು ಗೇಣಿಗೆ ಬಿಟ್ಟಿರುವ ಭೂಮಿಯನ್ನೂ ಸೇರಿಸಿಕೊಂಡು ಹೋರಾಡಬೇಕು’ ಎಂದರು. ಪ್ರಭಾವಿ ರೈತ ನಾಯಕರು ಚಕಿತರಾಗಿ ಕಾರಣ ಕೇಳಿದಾಗ, ಆ ಮಠಾಧೀಶರು ‘ನೀವು ಬೇಡಿಕೆ ಇಟ್ಟು, ಸರಕಾರವು ಕಾಯ್ದೆ ರೀತ್ಯಾ ಅಧಿಕ ಭೂಮಿ ಘೋಷಿಸಿ ಎಂದು ಕರೆ ನೀಡಿದಾಗ ನಾವು ವ್ಯಾಜ್ಯ ಮಾಡದೆ ಬಿಟ್ಟು ಕೊಟ್ಟರೆ, ನಮ್ಮ ಮೇಲೆ ಅಪಾರವಾದ ಧಾರ್ಮಿಕ ಶ್ರದ್ಧೆ ಇಟ್ಟುಕೊಂಡಿರುವ ಗೇಣಿದಾರರ ಶ್ರದ್ಧಾ ನಂಬಿಕೆಗಳು ಗಟ್ಟಿಯಾಗಿಯೇ ಉಳಿಯುತ್ತವೆ, ಆಸ್ತಿ ಇವತ್ತು ಇದ್ದು ನಾಳೆ ಇಲ್ಲವಾಗಬಹುದು, ಆದರೆ ನಮ್ಮ ಮೇಲೆ ಜನರು ಇಟ್ಟಿರುವ ಶ್ರದ್ಧಾ ಭಕ್ತಿಯು ಅಚಲವಾಗಿ ಉಳಿಯುತ್ತದೆ- ಅದು ನಮಗೆ ಅಮೂಲ್ಯ!’ ಎಂದು ಮುಚ್ಚುಮರೆ ಇಲ್ಲದೆ ತಿಳಿಸಿದರಂತೆ. ಅವರ ಊಹಾ ತಂತ್ರವು ಸರಿಯಾಗಿಯೇ ಇತ್ತು. 1961 ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು; 1974ರ ತಿದ್ದುಪಡಿಯಲ್ಲಿ ಆ ವಿನಾಯಿತಿಯನ್ನೂ ಕೈದು ಮಾಡಲಾಯಿತು; ಅಂತಹ ಭೂಮಿಗಳ ಗೇಣಿದಾರರು ಭೂ ಸ್ವಾಮ್ಯ ಪಡೆದರೂ, ಉತ್ಪನ್ನಗಳ ಪಾಲನ್ನು ಶ್ರದ್ಧಾಪೂರ್ವಕವಾಗಿ ಮಠ-ದೇವಸ್ಥಾನಗಳಿಗೆ ಕಾಣಿಕೆಯಾಗಿ ಸ್ವ ಇಚ್ಛೆಯಿಂದ ನೀಡುವುದನ್ನು ಮುಂದುವರೆಸಿದರು! ಕೆಲವು ವೈದಿಕ ಮಠಗಳು 1961ರ ಕಾಯ್ದೆಯಲ್ಲಿ ಇದ್ದ ವಿನಾಯ್ತಿಯನ್ನು ಕೈದು ಮಾಡಿದ 1974ರ ತಿದ್ದುಪಡಿಯು ಸಂವಿಧಾನದ 26ನೇ ಕಲಮ್ಮು ನೀಡಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕೋರ್ಟು ಮೆಟ್ಟಲೇರಿ ಸೋತಿದ್ದನ್ನು ಗಮನಿಸಿದರೆ, ಪ್ರತಿಷ್ಟಿತ ಮಠಾಧೀಶರು ಕೊಟ್ಟ ಸೂಚನೆ ಮತ್ತು ಅಂತಹ ತಂತ್ರಾಲೋಚನೆಯಿಂದ ಬಲಪಂಥದ ಸಂಚಯಿತ ಶಕ್ತಿಯ ಪೋಷಣೆಯ ಚಾಣಾಕ್ಷತೆ ಕಾಣದೆ ಇರದು.
(ಮುಂದುವರಿಯುತ್ತದೆ…)
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ




