ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 2)

Date:

(ಮುಂದುವರಿದ ಭಾಗ..) 1980ರ ದಶಕದ ರಾಮ ಜನ್ಮಭೂಮಿ ಚಳವಳಿ- ಬಲಪಂಥೀಯ ಶಕ್ತಿಯ ವಿರಾಟ್ ರೂಪದ ಸಾರ್ವಜನಿಕ ಅನಾವರಣ: ಕರ್ನಾಟಕದಲ್ಲಿ 1970ರ ದಶಕದಲ್ಲಿ ನಡೆದ ಹಲವು ಚಳವಳಿಗಳ ಭರದ ಕಾರಣಕ್ಕೆ ಅದನ್ನು ‘ಎಡ ಚಳವಳಿಗಳ ದಶಕ’ ಎಂದು ಕರೆಯುವುದು ಸರಿಯಾಗಿದೆ. ಭೂಮಿ ಹಕ್ಕಿನ ಚಳವಳಿಯು ಆಂಶಿಕವಾಗಿಯಾದರೂ ಫಲ ನೀಡಿದ್ದು, ‘ಬೂಸಾ ಚಳವಳಿ’ ದಲಿತರ ಸ್ವಾಭಿಮಾನಿ ಸಂಘಟನೆಗೆ ಕಾರಣವಾದದ್ದು, ‘ಬರಹಗಾರರ ಒಕ್ಕೂಟ’ದ ಪರಿಣಾಮವಾಗಿ ಹೊಮ್ಮಿದ ಎಚ್ಚರದಲ್ಲಿ ಬಂಡಾಯ ಸಾಹಿತ್ಯ ಚಳವಳಿ, ಸಮುದಾಯ ಸಾಂಸ್ಕೃತಿಕ ಚಳವಳಿ, ಎಡಪಂಥದ ವಿದ್ಯಾರ್ಥಿ ಯುವಜನ ಚಳವಳಿ, ರೈತರ ಚಳವಳಿಗಳು ಕಟ್ಟಿಕೊಂಡದ್ದು ಈ ದಶಕದಲ್ಲಿಯೇ. ಈ ಚಳವಳಿಗಳೆಲ್ಲ ಖಂಡಿತಕ್ಕೂ ಬಲಪಂಥದ ಅಧಿಕಾರದ ವಿರುದ್ಧ ಬಂಡೆದ್ದ ಚಳವಳಿಗಳು ಎನ್ನುವುದನ್ನೂ ಅಲ್ಲಗಳೆಯ ಬೇಕಿಲ್ಲ. ಆದರೆ ಈ ಚಳವಳಿಗಳು ತಮ್ಮ ಅಂದಿನ ಸ್ವರೂಪದಲ್ಲೇ ಬಲಪಂಥದ ಸಂಚಯಿತ ಸಾಮಾಜಿಕ ಶಕ್ತಿಯ ರಚನೆಯನ್ನು ಎಷ್ಟರ ಮಟ್ಟಿಗೆ ನಿಶಕ್ತಗೊಳಿಸಿದವು? ಬಲಪಂಥದ ವ್ಯಾಪಕ ಪ್ರಭಾವದಲ್ಲಿರುವ ಕರ್ನಾಟಕದ ವಿವಿಧ ನಮೂನೆಯ ಜನ ಸಮೂಹವನ್ನು ಎಷ್ಟರಮಟ್ಟಿಗೆ ತಲುಪಿದವು? ಶಕ್ತಿ ಸಂಚಯದ ತಾಣಗಳಾದ ಸಂಘ ಸಂಸ್ಥೆಗಳನ್ನು ತಲುಪಿ ದೀರ್ಘಕಾಲೀನ ಸಂಘರ್ಷದ ಮೊದಲ ಯೋಜಿತ ಹೆಜ್ಜೆಯನ್ನು ಇಟ್ಟವೇ? -ಇವೆಲ್ಲವನ್ನೂ ಹಿನ್ನೋಟದಲ್ಲಿ ಈಗ ಪರಿಶೀಲಿಸಬಹುದಷ್ಟೇ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 1)

ಯಾವುದೇ ಚಾರಿತ್ರಿಕ ಕಾಲಘಟ್ಟದಲ್ಲಿಯೂ ಬಂಡುಕೋರತನವು ಪೂರ್ಣ ಪ್ರಮಾಣದ ಕ್ರಾಂತಿ ಯೋಜನೆ ಸಹಿತ ಹುಟ್ಟುವುದಿಲ್ಲ; ಸಾಂಪ್ರದಾಯಿಕ ಶಕ್ತಿ ಸಂಚಯದ ಬಲಪಂಥವೂ ಈ ನಡೆಗಳನ್ನು ಊಹಿಸಿ ಪ್ರತಿತಂತ್ರದಲ್ಲಿ ಸಜ್ಜಾಗಿ ಇರುವುದಿಲ್ಲ. ಆ ಕಾಲ ಸನ್ನಿವೇಶದ ಅನ್ವಯ ಹೇಳಬಹುದಾದರೆ (1) ಕರ್ನಾಟಕದಲ್ಲಿ ಬಲಪಂಥವನ್ನು ಎದುರು ಹಾಕಿಕೊಳ್ಳುವ ಹರವಿನ ಎಡ ಬಣವೊಂದು ತನ್ನ ರೂಪ ಪಡೆಯುವ ಸೂಚನೆ ನೀಡಿತು (2) ಬಲಪಂಥದ ಸಂಘಟಿತ ಮುಖವಾದ ಸಂಘಪರಿವಾರವು ನೇರಾನೇರ ಸಂಘರ್ಷದ ಕಣಕ್ಕಿಳಿಯದೇ, ಬಲಪಂಥದ ಸ್ಥಾಪಿತ ಶಕ್ತಿ ತಾಣಗಳಾದ ವಿದ್ಯಾಲಯಗಳು, ಮಾಧ್ಯಮಗಳು, ಸಾಹಿತ್ಯ ವೇದಿಕೆಗಳು, ಜಾತಿ ಸಂಘಸಂಸ್ಥೆಗಳಂತಹ ಸಾರ್ವಜನಿಕ ಅಂಗಣದೊಳಗಿಂದ ಎಡ ಬಣದ ಪ್ರಭಾವವು ಹಬ್ಬದಂತೆ ತಡೆಯುವ ಕೆಲಸಗಳಲ್ಲಿ ತೊಡಗಿರಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

70ರ ದಶಕದ ಸವಾಲುಗಳಿಗೆ ಪರಿಹಾರ ಎಂಬಂತೆ ಸಂಘಪರಿವಾರವು 1980ರ ದಶಕದಲ್ಲಿ ರಾಮ ಜನ್ಮ ಭೂಮಿ ಚಳವಳಿಯನ್ನು ಪ್ರಾರಂಭಿಸಿತು. 1950ರ ದಶಕದಲ್ಲಿ ಅಂಬೇಡ್ಕರ್ ಅವರ ‘ಹಿಂದೂ ಕೋಡ್ ಬಿಲ್’ ವಿರುದ್ಧ ಪ್ರತಿಭಟನೆ ಸಂಘಟಿಸಿದ ನಂತರ ಸಂಘಪಾರಿವಾರ ಮುಂಚೂಣಿಯಲ್ಲಿ ನಿಂತು ಸಂಘಟಿಸಿದ ಚಳವಳಿ ಇದು. ಈ ಚಳವಳಿಯನ್ನು ಬಲಪಂಥವು ತಾನು ಎದುರಿಸಬೇಕಾದ ಎಡ ಬಣದ ಚಳವಳಿಗಳಿಗೆ ಪ್ರತಿಕ್ರಿಯೆ ಆಗಿಸದೆ, ತಾನು ಅದುವರೆಗೆ ಸಂಚಯಿಸಿದ ಶಕ್ತಿಯನ್ನು ತನ್ನ ಪ್ರಭಾವದಡಿ ಹಿಡಿದಿಟ್ಟುಕೊಂಡಿದ್ದ ವಿವಿಧ ವರ್ಗದ ಜನ ಸಮುದಾಯಗಳನ್ನು ತನ್ನ ಉದ್ಘೋಷಿತ ಕಾಲಾಳುಗಳನ್ನಾಗಿ ಅಣಿ ನೆರೆಸುವ ಬಗೆಯಲ್ಲಿ ಪ್ರಯೋಗಿಸಿತು. ನಾಲ್ಕು ದಶಕಗಳ ನಂತರದ ಹಿನ್ನೋಟದಲ್ಲಿ, ರಾಮಜನ್ಮ ಭೂಮಿ ಚಳವಳಿಯಿಂದ ಬಲಪಂಥವು ಗಳಿಸಿದ ಶಕ್ತಿಯನ್ನು ಹೀಗೆ ವಿವರಿಸಬಹುದು:

(1) 1950ರಲ್ಲಿ ಸಂವಿಧಾನಿಕ ಪ್ರಜಾಪ್ರಭುತ್ವ ರಚನೆಯೊಂದಿಗೆ ಬಲಪಂಥದ ‘ಹಿಂದುತ್ವವಾದಿ ಕಲ್ಪನೆ’ಯ ‘ಹಿಂದು ರಾಷ್ಟ್ರ ಕಲ್ಪನೆ’ಯು ಹಿನ್ನೆಲೆಗೆ ಸರಿದಂತೆ ಕಂಡರೂ, ಆ ಕಲ್ಪನೆಯನ್ನು ನಿರಂತರವಾಗಿ ಸಮಾಜದಲ್ಲಿ ಪ್ರಸರಿಸುವ ಸಂಘಟನಾತ್ಮಕ ಕಾರ್ಯವನ್ನು ಸಂಘಪರಿವಾರವು ಎಡೆಬಿಡದೆ ನಡೆಸಿ, ಜನಮಾನಸದಿಂದ ಮರೆಯಾಗದಂತೆ ನೋಡಿಕೊಂಡಿತ್ತು; ಈ ಚಟುವಟಿಕೆಗಳನ್ನು ಎಡಪಂಥವು ಗಂಭೀರವಾಗಿ ಪರಿಗಣಿಸಿ ಜಾತಿ ಭೇದ, ಆಸ್ತಿ ಭೇದಗಳ ಸಮಾಜವನ್ನು ಸುಧಾರಿಸಲು, ಸಾಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರವು ಯಾಕೆ ಉಪಖಂಡಕ್ಕೆ ಅನಿವಾರ್ಯವೆಂದು ಜನರ ಬುದ್ಧಿ ಭಾವಗಳಲ್ಲಿ ಅಚ್ಚು ಹಾಕುವ ನಿರಂತರ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿಲ್ಲ; ಅದಕ್ಕೆ ಅಗತ್ಯವಾದ ದೀರ್ಘಕಾಲ ಬಾಳುವ ಸಾಮಾಜಿಕ ಸಂಘ ಸಂಸ್ಥೆಗಳ ಹೆಣಿಗೆ ನೇಯಲಿಲ್ಲವಾಗಿ, ಜನಮಾನಸದಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯು ಸ್ವೀಕಾರಾರ್ಹವಾದ ಪರ್ಯಾಯ ರಾಷ್ಟ್ರೀಯ ಪರಿಕಲ್ಪನೆ ಆಗಿ ಬೆಳೆಯುತ್ತಲೇ ಇತ್ತು. ಭಾರತವು ಹಿಂದೂ ರಾಷ್ಟ್ರವಾಗಬೇಕು ಎಂಬ ಬಹಿರಂಗ ಜನಾಭಿಪ್ರಾಯವನ್ನು ಸಂಘಟಿಸಲು, ಸಾಂವಿಧಾನಿಕ ಪ್ರಜಾಪ್ರಭುತ್ವದ ರಾಷ್ಟ್ರದಿಂದ ತಮ್ಮ ಬದುಕು ಬಂಗಾರವೇನೂ ಆಗಲಿಲ್ಲವೆಂಬ ನಿರಾಸೆ, ಆಕ್ರೋಶ ಜನರಲ್ಲಿ ಉಂಟಾಗುವ ಕಾಲ ಕೂಡಿ ಬರಬೇಕಿತ್ತು. 1980ರ ದಶಕವು ಅಂತಹ ಆಕ್ರೋಶವು ಮಡುಗಟ್ಟಿಕೊಂಡ ಕಾಲವಾಗಿತ್ತು. ರಾಮಜನ್ಮ ಭೂಮಿ ಚಳವಳಿಯು ಹಿಂದೂರಾಷ್ಟ್ರದ ಸ್ಥಾಪನೆಗೆ ಸಾರ್ವಜನಿಕ ದಾವೆ ಮಂಡಿಸಲಿಕ್ಕೆ ವೇದಿಕೆಯನ್ನಾಗಿಸಲಾಯಿತು.

Komuvada2
ಬಾಬ್ರಿ ಮಸೀದಿ ದ್ವಂಸದ ಮೂಲಕ ದ್ವೇಷ ರಾಜಕಾರಣ ಬಿರುಸು ಪಡೆಯಿತು

ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-1)

(2) ಅಂಬೇಡ್ಕರ್ ಸಂವಿಧಾನವು ರಾಜ್ಯಾಡಳಿತದ ಸಂಹಿತೆಯಾಗಿ ಅಂಗೀಕೃತವಾದ ದಿನದಂದು “ನಾವಿಂದು ಬಹಳ ವೈರುಧ್ಯಮಯವಾದ ಕಾಲವನ್ನು ಪ್ರವೇಶಿಸುತ್ತಿದ್ದೇವೆ. ಸಂವಿಧಾನವು ರಾಜ್ಯಾಡಳಿತದ ಸಂಹಿತೆ ಎಂದು ಒಪ್ಪಿಕೊಂಡಿದ್ದೇವೆ. ಆದರೆ, ನಿತ್ಯ ಬದುಕಿನಲ್ಲಿ (ಜಾತಿ, ಮತ, ಆಸ್ತಿ, ಲಿಂಗ ತಾರತಾಮ್ಯಗಳು ಸಹಜವಾಗಿರುವ) ವಿರುದ್ಧ ಸಂಹಿತೆಯು ರೂಢಿಯಲ್ಲಿದೆ! (ಸಂವಿಧಾನ ಸಂಹಿತೆಯನ್ನು ನಿತ್ಯ ಬದುಕಿನಲ್ಲಿ ಸಹಜವಾಗಿ ರೂಢಿಸಿಕೊಂಡಿರುವ) ಸಾಮಾಜಿಕ ಪ್ರಜಾಪ್ರಭುತ್ವವು ಸಾಕಾರಗೊಳ್ಳದೆ ಹೋದಲ್ಲಿ ಸಾಂವಿಧಾನಿಕ ಪ್ರಭುತ್ವಕ್ಕೆ ಅಪಾಯ ತಪ್ಪಿದ್ದಲ್ಲ” ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು. ಆ ನಂತರದ 25 ವರ್ಷಗಳಲ್ಲಿ ಆ ದಿಸೆಯತ್ತ ಮಹತ್ತರವಾದ ಯಾವ ಕಾರ್ಯವೂ ನಡೆಯಲಿಲ್ಲ; ತಾರತಮ್ಯಮಯವಾದ ಜಾತಿ-ವರ್ಗ ಭೇದ ಸಮಾಜ ಸಂಹಿತೆಯಾದ ವೈದಿಕ ಸಂಹಿತೆಯ ಬಹುಪಾಲನ್ನು ‘ಭಾರತೀಯ ಸಂಸ್ಕೃತಿ’ ಎಂದು ಹೆಗ್ಗಳಿಕೆಯಿಂದ ಪುನರುಚ್ಛರಿಸುವ ಸಾರ್ವಜನಿಕ ಸಹಮತವನ್ನು ರೂಢಿಸುವಲ್ಲಿ ಬಲಪಂಥದ ಕಾರ್ಯಾಚರಣೆಗೆ ಯಾವುದೇ ಗುರುತರವಾದ ಸಾಮಾಜಿಕ ಪ್ರತಿರೋಧವೂ ಬೆಳೆಯಲಿಲ್ಲ. 1980ರ ಹೊತ್ತಿಗೆ ರಾಮ ಜನ್ಮಭೂಮಿ ಚಳವಳಿಯು ಅಂತಹ ‘ಭಾರತೀಯ ಸಂಸ್ಕೃತಿ’ಯನ್ನು ಪ್ರಣಾಳಿಕೆಯಾಗಿ ಮುಂದಿಟ್ಟಿತ್ತು.

(3) ಹಿಂದೂ ರಾಷ್ಟ್ರ ಸಂಹಿತೆ, ವೈದಿಕಶಾಹಿ ‘ಭಾರತೀಯ ಸಂಸ್ಕೃತಿ’ಯ ಸಮಾಜಸಂಹಿತೆಗಳನ್ನು ಅಡಿಪಾಯವಾಗಿ ಮಾಡಿಕೊಂಡು ಪ್ರಬಲ ಜನ ಸಮೂಹವನ್ನು ಅಣಿ ನೆರೆಸುವಲ್ಲಿ ಸಂಘ ಪರಿವಾರ ಎದುರಿಸಬೇಕಾಗಿದ್ದ ಗಣನೀಯ ಸವಾಲು ಇದ್ದದ್ದು ಜನ ಸಮೂಹದ ಸ್ವರೂಪದ್ದೆ! ಜಾತಿ-ವರ್ಗ ತಾರತಮ್ಯವನ್ನು ನೈಜವಾಗಿ ಅನುಭವಿಸುವ ಮಧ್ಯಮ ಹಾಗೂ ಕೆಳ ಜಾತಿಯ ಜನರೇ ‘ಬಹು ಜನರಾಗಿರುವ ಹಿಂದೂ ಜನ ಸಮೂಹ’ವನ್ನು ತಾರತಮ್ಯವನ್ನು ಭದ್ರವಾಗಿಸುವ ಇರಾದೆಯುಳ್ಳ ಚಳವಳಿಯ ಕಟ್ಟಾಳುಗಳಾಗಿ ಸಂಘಟಿಸುವ ಸವಾಲು ಅದು. ‘ಕೀಳು ಜನರು’ ಎಂಬ ಸಾಮಾಜಿಕ ಗುರುತಿನ ಹೊರತಾಗಿ ಜೀವಮಾನದಲ್ಲಿ ಬೇರಾವ ಸಂಮಾನದ ಸಾರ್ವಜನಿಕ ಗುರುತು ಹೊಂದಿರದ ಜನ ಸಮೂಹಕ್ಕೆ ‘ಹಿಂದೂ ಸಂಸ್ಕೃತಿಯನ್ನು ರಕ್ಷಿಸಿ ಹಿಂದುರಾಷ್ಟ್ರ ಕಟ್ಟಲು ಜರೂರಾಗಿರುವ ಹಿಂದೂ ಸೇನೆಯ ದಳಪತಿ, ಕಾಲಾಳು ಸೈನಿಕರ’ ಪಟ್ಟವನ್ನು ವಹಿಸುವ ಮೂಲ ‘ನವ ಹಿಂದೂ ಗುರುತ’ನ್ನು ಆರ್.ಎಸ್.ಎಸ್. ಕಟ್ಟಿಕೊಟ್ಟಿತ್ತು. ಅದೊಂದು ಬಲಪಂಥದ ಸಾವಿರಾರು ವರ್ಷಗಳ ಸಂಚಯಿತ ಶಕ್ತಿಯನ್ನು ಪಣಕ್ಕಿಟ್ಟು ಆಡಿದ ಜೂಜಾಗಿತ್ತು. ಉಪಖಂಡದ ಸಾಮಾಜಿಕ ಚರಿತ್ರೆಯನ್ನು ಗಮನಿಸಿದರೆ, ಬಂಡೆದ್ದವರು, ಬಂಡೇಳುವ ಸಾಧ್ಯತೆ ಇದ್ದವರಿಗೆ ಜಾತಿ ವ್ಯವಸ್ಥೆಗೆ ಮುಕ್ಕಾಗದ ಹಾಗೆ ನವ ಜಾತಿ ಸ್ವಾಯತ್ತತೆಯನ್ನು ನೀಡಿ ಜೀರ್ಣಿಸಿಕೊಂಡಿರುವ ದಂಡೆಯಾದ ಉದಾಹರಣೆಗಳು ಇದ್ದುದ್ದರಿಂದಲೂ, ಅದಕ್ಕೆ ವ್ಯತಿರಿಕ್ತವಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶವು ದೇಶದಲ್ಲಿ ಇಲ್ಲದ್ದರಿಂದಲೂ, ಈ ಜೂಜು ತಿರುಗೇಟು ನೀಡುವ ಸಾಧ್ಯತೆಗಳು ಕಡಿಮೆ ಇದ್ದವು. ಹತ್ತು ವರ್ಷಗಳಲ್ಲಿ ಆ ಜೂಜನ್ನು ಬಲಪಂಥವು ಅಮೋಘವಾಗಿ ಗೆದ್ದಿತು. ಹಿಂದೂ ಸಮಾಜದ ಕಡೆಗಣಿತ ಜಾತಿ-ವರ್ಗಗಳನ್ನು ತನ್ನ ಘೋಷಿತ ಕಾಲಾಳುಗಳಾಗಿಸಿಕೊಂಡು ‘ಹಿಂದುತ್ವವಾದಿ ಪ್ರತಿಕ್ರಾಂತಿ’ಯನ್ನು ಯಶಸ್ವಿಯಾಗಿ ನೆರವೇರಿಸಲು ಬಲಪಂಥದ ಸಂಘಟನಾ ಮುಂದಾಳು ಸಂಘಪರಿವಾರಕ್ಕೆ ಸಾಧ್ಯವಾಯಿತು. ಬಾಬ್ರಿ ಮಸೀದಿ ಧ್ವಂಸದ ದುರಂತ ಪ್ರಹಸನದಲ್ಲಿ ಉತ್ತುಂಗ ತಲುಪಿದ ಈ ಪ್ರತಿಕ್ರಾಂತಿಗೆ ಕರ್ನಾಟಕದ ಕೊಡುಗೆಯೂ ಗಣನೀಯವಾಗಿದೆ.

ಬಾಬ್ರಿ ಧ್ವಂಸದ ನಂತರದಲ್ಲಿ ಬಲಪಂಥದ ತಂತ್ರಗಾರಿಕೆ

ರಾಮ ಜನ್ಮಭೂಮಿ ಚಳವಳಿಯ ದಶಕದಲ್ಲಿ ಬಲಪಂಥವು ತಳ ಜಾತಿಯ ಸಮುದಾಯಗಳ ಒಳಗೆ ತನ್ನ ಸಂಘಟನೆಯನ್ನು ವಿಸ್ತರಣೆ ಮಾಡಿತು. ಹುಬ್ಬಳ್ಳಿಯ ಈದ್ಗಾ ಮೈದಾನ ಹಾಗೂ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ದರ್ಗಾಗಳನ್ನು ಗುರಿ ಮಾಡಿಕೊಂಡು ಹಿಂದೂ ಸಮುದಾಯವನ್ನು ಮುಸಲ್ಮಾನ ಸಮುದಾಯದ ಮೇಲೆ ಎತ್ತಿಕಟ್ಟುವ ಸಾಧನವಾಗಿ ಮಾಡಿಕೊಂಡಿತು. ಬಾಬ್ರಿಮಸೀದಿ ಧ್ವಂಸದ ವೇಳೆಗೆ ‘ಹಿಂದೂ ಜಾಗರಣ ವೇದಿಕೆ’ ಮತ್ತು ‘ಬಜರಂಗದಳ’ ಸಂಘಟನೆಗಳಲ್ಲಿ ದಲಿತ ಹಾಗೂ ತಳ ಜಾತಿಯ ಯುವಕರನ್ನು ಸೆಳೆದು ಬೀದಿ ಹೋರಾಟ ನಡೆಸಬಲ್ಲ ಗುಂಪುಗಳನ್ನು ಸಂಘಟಿಸಲಾಗಿತ್ತು. ಬಾಬ್ರಿ ಮಸೀದಿ ಧ್ವಂಸದ ನಂತರ ಆಕ್ರಮಣಕಾರಿ ಬೀದಿ ಹಿಂಸೆಗೆ ಈ ಪಡೆಗಳನ್ನು ಮುಂದೂಡಲಾಯಿತು. 1997 ಜನವರಿ-1998 ಡಿಸೆಂಬರ್‌ಗಳಲ್ಲಿ, ಮಂಗಳೂರು ಸಮೀಪದ ಸುರತ್ಕಲ್‌ನಲ್ಲಿ ಯೋಜಿತ ಕೋಮುಹಿಂಸೆ ನಡೆಸಲಾಯಿತು. 1998ರಿಂದ ಬಾಬಾಬುಡನ್‌ಗಿರಿ ದರ್ಗಾವನ್ನು ಕೇಂದ್ರೀಕರಿಸಿ, ತಳ ಜಾತಿಯ ಯುವ ಸಮುದಾಯಕ್ಕಾಗಿಯೇ ‘ದತ್ತಮಾಲೆ ಅಭಿಯಾನ’ಗಳನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲಾಯಿತು. 21ನೇ ಶತಮಾನಕ್ಕೆ ಕಾಲಿಡುವ ಹೊತ್ತಿಗೆ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ತಳಜಾತಿಯ ಯುವಕರ ಆಕ್ರಮಣಶೀಲ ಕಾಲಾಳುಗಳನ್ನು ಒಗ್ಗೂಡಿಸಿ, ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ಹಿಂಸೆಯ ಸರಣಿಗಳನ್ನು ಹರಿಬಿಡಲಾಯಿತು. ಈ ನಮೂನೆಯ ಸಂಘಟನಾ ಮುನ್ನಡೆಯ ಪ್ರಭಾವದಲ್ಲಿ ಬಿ.ಜೆ.ಪಿ. ಪಕ್ಷದ ವರಿಷ್ಠರೇ ‘ಬಾಬಾಬುಡನ್‌ಗಿರಿಯನ್ನು ಆಯೋಧ್ಯೆ ಮಾಡುತ್ತೇವೆ; ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ’ ಎಂದು ಘೋಷಿಸುವ ಧಾರ್ಷ್ಟ್ಯ ತೋರತೊಡಗಿದರು. ‘ಲವ್ ಜಿಹಾದ್’ನ ನೆಪದಲ್ಲೂ, ದನ ಸಾಗಾಟದ ವಿಷಯದಲ್ಲೂ ವಿವಾದಗಳನ್ನು ಸೃಷ್ಟಿಸಿ, ದಿನನಿತ್ಯ ಬೀದಿ ಹಿಂಸೆ ನಡೆಸುವುದು, ಆ ಮೂಲಕ ಅಲ್ಪಸಂಖ್ಯಾತ ಸಮುದಾಯದ ಜನರ ನಿತ್ಯದ ಬದುಕನ್ನು ಅಪರಾಧೀಕರಣಗೊಳಿಸುವ ‘ಎಡೆಬಿಡದ ಹಿಂಸೆ’ (ಸಸ್ಟೇನ್ಡ್ ವಾಯ್ಲೆನ್ಸ್) ಮಾದರಿಯನ್ನು ದೇಶಕ್ಕೆ ಪರಿಚಯಿಸಿದ್ದು ಕರ್ನಾಟಕದ ಬಲಪಂಥವೇ. ಕಾಲಾಳುಗಳ ವರ್ಷ ಪೂರ್ತಿಯ ‘ಎಡೆಬಿಡದ ಹಿಂಸೆ’ಯ ಕೊನೆಯಲ್ಲಿ, ಉಚ್ಚ ಜಾತಿ-ವರ್ಗಗಳ ಭಾಗೀದಾರಿಕೆ ಮತ್ತು ವೈದಿಕ ಮತ ಪ್ರಸಾರಕ ಮಠಾಧೀಶರ ಪ್ರಧಾನ ಭೂಮಿಕೆಯಲ್ಲಿ ‘ಹಿಂದೂ ಸಮಾಜೋತ್ಸವ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಹಿಂಸೆಗೆ ಹಾಗೂ ಹಿಂದುತ್ವ ಸಿದ್ಧಾಂತಕ್ಕೆ ಸಾರ್ವತ್ರಿಕ ಮಾನ್ಯತೆ ದಕ್ಕಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಯಶಸ್ಸು ಪಡೆಯಿತು. ಈ ಮೂಲಕ 21ನೇ ಶತಮಾನದ ಮೊದಲ ದಶಕದಲ್ಲಿ ಬಲಪಂಥವು ಕರಾವಳಿ-ಮಲೆನಾಡುಗಳಲ್ಲಿ ಭದ್ರ ನೆಲೆ ಕಂಡುಕೊಂಡಿತ್ತು. ಎರಡನೇ ದಶಕದಲ್ಲಿ ಈ ಪ್ರಯೋಗವನ್ನು ಕರ್ನಾಟಕದ ಉತ್ತರ ಭಾಗಕ್ಕೆ ವಿಸ್ತರಣೆ ಮಾಡಿತು. ಕಲ್ಯಾಣ ಕರ್ನಾಟಕದಲ್ಲಿ ಸೂಫಿ, ನಾಥ, ಸಿದ್ಧ ಪಂಥಗಳ ಪ್ರಭಾವದಲ್ಲಿ ಬೆಳೆದಿದ್ದ ಸಂಕರ ಮತ ಸಂಪ್ರದಾಯ, ಆಚರಣೆಗಳನ್ನು ಗುರಿ ಮಾಡಿಕೊಂಡು, ಸಂಕರ ಸಂಸ್ಕೃತಿಯ ಆರಾಧನಾ ಸ್ಥಳಗಳನ್ನು ವೈದಿಕ ಪೂಜಾ ಕೇಂದ್ರಗಳೆಂದು, ಮುಸ್ಲಿಮರು ಅವನ್ನು ಆಕ್ರಮಣ ಮಾಡಿ ಇಸ್ಲಾಮೀಕರಣಗೊಳಿಸಿರುವರೆಂದೂ, ಆಯಾ ಆರಾಧನಾ ಸ್ಥಳಗಳ ತಳವರ್ಗದವರನ್ನೇ ಮುಂದುಮಾಡಿ ಗಲಭೆಗಳನ್ನು ಸೃಷ್ಟಿಸುವ ಹಾಗೂ ಸಮಾಜೋತ್ಸವಗಳ ಮೂಲಕ ಸಮಾಜ ಮಾನ್ಯ ಮಾಡುವ ತಂತ್ರಗಾರಿಕೆಯನ್ನು ಬಲಪಂಥವು ಇಂದಿಗೂ ಪ್ರಯೋಗಿಸುತ್ತಲೇ ಇದೆ. ಆ ಮೂಲಕ, ಮತೀಯ ಧ್ರುವೀಕರಣವನ್ನು ಮಾತ್ರವಲ್ಲದೆ, ಸಂಕರ ಆಚರಣೆಗಳ ಪರಂಪರೆ ಇರುವ ತಳ ಜಾತಿಯ ಜನ ಸಮುದಾಯಗಳನ್ನು ವೈದಿಕ ಆಚರಣೆಗಳಿಗೆ ಒಗ್ಗಿಸುವ ಕೆಲಸವನ್ನು ಅನಿರ್ಬಂಧಿತವಾಗಿ ಮುಂದುವರೆಸಲಾಗುತ್ತಿದೆ. ಈ ಬಗೆಯ ಸಾಮಾಜಿಕ ಆಕ್ರಮಣದ ಮೂಲಕ ಸರಿ ಸುಮಾರು ಎಲ್ಲ ಜಾತಿ ವರ್ಗಗಳ ಸಹಮತ ಗಳಿಸಿಕೊಂಡಿರುವುದು, ಸಂಘಪರಿವಾರದ ರಾಜಕೀಯ ಅಂಗವಾದ ಬಿ.ಜೆ.ಪಿ.ಯ ರಾಜಕೀಯ ವಿಸ್ತರಣೆ- ಅಧಿಕಾರ ಸ್ಥಾಪನೆಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. ಈ ಬಗೆಯ ಸಾಮಾಜಿಕ ಪ್ರತಿಕ್ರಾಂತಿಯ ಪರಿಣಾಮವಾಗಿ, ಬಿ.ಜೆ.ಪಿ.ಯ ರಾಜಕೀಯ ವಿರೋಧಿಗಳೂ ಬಲಪಂಥದ ಹಿಂದುತ್ವವಾದ ಸಾಮಾಜಿಕ ಆಚರಣೆಗಳನ್ನು ಮುಖಾಮುಖಿಯಾಗಲು ಹಿಂಜರಿಕೆ ತೋರುವ ವಾತಾವರಣವನ್ನು ಬಲಪಂಥವು ನಿರ್ಮಾಣ ಮಾಡಿದೆ.

komuvaada
ಹಿಂದೂ ಸಮಾಜೋತ್ಸವಗಳ ಹೆಸರಲ್ಲಿ ಹಿಂದುತ್ವ ರಾಜಕಾರಣವು ಕರಾವಳಿ ಕರ್ನಾಟಕದಲ್ಲಿ ಬಲವಾಗುತ್ತಾ ಹೋಯಿತು

ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-2)

ಜಾತಿ ಶ್ರೇಣೀಕರಣ-ಜಮೀನ್ದಾರಿ ಅರ್ಥ ವ್ಯವಸ್ಥೆಗಳ ಪರಂಪರಾನುಗತ ಸಾಮಾಜಿಕ ಅಧಿಕಾರದ ಶಕ್ತಿಸಂಚಯದ ಬಂಡವಾಳವನ್ನು ಹೂಡಿ, ‘ಹಿಂದುತ್ವ ಸರ್ವಾಧಿಕಾರ’ಕ್ಕೆ ವ್ಯಾಪಕ ಜನವರ್ಗಗಳ ಸಹಮತ ರೂಢಿಸುವ ಕಾರ್ಯತಂತ್ರವು ಭಾರತದ ಹಾಗೂ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ‘ಸಾಮಾಜಿಕ ಫ್ಯಾಸಿಸಮ್’ನ ವಿಶಿಷ್ಟ ಲಕ್ಷಣವಾಗಿದೆ.

ಕೊನೆಯ ಟಿಪ್ಪಣಿ

1) ಯಾವುದೇ ಸಮಾಜದಲ್ಲಿ ಯಾವುದೇ ಪಂಥವು ತನ್ನ ಅಧಿಕಾರಸ್ಥ ಸ್ಥಾನವನ್ನು ಕಾಲಗುಣದ ಬದಲಾವಣೆಗೆ ಅನುಗುಣವಾಗಿ ಬಿಟ್ಟು ಕೊಡುವುದಿಲ್ಲ. ಬದಲಾದ ಕಾಲಗತಿಯಲ್ಲಿ ತನ್ನ ಸಂಚಯಿತ ಶಕ್ತಿಯ ಮಾಪನ ಮಾಡಿಕೊಂಡು, ಅದಕ್ಕನುಗುಣವಾಗಿ ಸಂಚಯಿತ ಶಕ್ತಿಯನ್ನು ನೀರಾಗದ ಹಾಗೆ ರಕ್ಷಿಸಿಕೊಳ್ಳುತ್ತದೆ; ಅದನ್ನು ಬದಲಾದ ಕಾಲ ಗುಣಕ್ಕೆ ಅನುಸಾರ ಬೆಳೆಸಿಕೊಂಡು ಮೇರು ಅಧಿಕಾರ ಸ್ಥಾನವನ್ನು ಪುನಃ ಸ್ಥಾಪಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳುತ್ತದೆ. ಕರ್ನಾಟಕದಲ್ಲೂ ಬಲಪಂಥವು ಶತಮಾನಗಳ ಕಾಲದ ಊಳಿಗಮಾನ್ಯ ಸಮಾಜದ ಜಾತಿ ಪದ್ಧತಿಯ ಸಮಾಜದಲ್ಲಿ ಸಂಚಯಿಸಿಕೊಂಡ ವೈದಿಕಶಾಹಿ ಅಧಿಕಾರ ಸ್ಥಾನಕ್ಕೆ 1920-70ರ ದಶಕಗಳಲ್ಲಿ ಎಡಪಂಥದ ಚಳವಳಿಗಳಿಂದ ಸವಾಲನ್ನು ಕಂಡಿತು. ಆ ಸವಾಲನ್ನು ಎದುರಿಸಲು ಮೂರು ತಂತ್ರಗಳನ್ನು ಅನುಸರಿಸಿತು: (ಅ) ಭಾರತ ರಾಷ್ಟ್ರದ ಬಲಪಂಥೀಯ ನಿರ್ವಚನವಾದ ‘ಹಿಂದೂ ರಾಷ್ಟ್ರೀಯವಾದ’ಕ್ಕೆ ಸಂವಾದಿಯಾಗುವಂತೆ ‘ಕರ್ನಾಟಕತ್ವ’ದ ವಿಚಾರಗಳನ್ನು ಕಟ್ಟಿ ಎಲ್ಲ ಪ್ರಭಾವಿ ವರ್ಗಗಳು ಸಮ್ಮತಿಸುವಂತೆ ರೂಢಿಸಿತು (ಆ) ‘ಕರ್ನಾಟಕದ ಸಂಸ್ಕೃತಿ’ಯನ್ನು ‘ವೈದಿಕಶಾಹಿ ಹಿಂದೂ ಸಂಸ್ಕೃತಿ’ಯ ಜೊತೆ ಸಮ್ಮಿಳಿಸಿ ಅದಕ್ಕೂ ವಿಸ್ತಾರ ಸಹಮತವನ್ನು ರೂಢಿಸಿತು (ಇ) ಈ ಎರಡೂ ವಿಚಾರಗಳನ್ನು ದೀರ್ಘಕಾಲೀನವಾಗಿ ಪೋಷಿಸಿ ಬೆಳೆಸಿ ಉಳಿಸಿಕೊಳ್ಳಲು ಸಮಾಜದ ಎಲ್ಲ ವಲಯಗಳಲ್ಲೂ ಸಂಘ ಸಂಸ್ಥೆಗಳ ಜಾಲವನ್ನು ರಚಿಸಿಕೊಂಡಿತು.

2) ಈ ಕಾರಣವಾಗಿ ಬಲಪಂಥವು 1950-70ರ ದಶಕದಲ್ಲಿ ಸಾಧ್ಯವಾಗಬಹುದಾಗಿದ್ದ ಕ್ರಾಂತಿಕಾರಿ ಆಸ್ತಿ ಹಂಚಿಕೆಯ ವಿದ್ಯಮಾನಗಳನ್ನು ಶಕ್ತಿಗುಂದಿಸಲೂ ಹಾಗೂ ಅದರ ಪರಿಣಾಮವಾಗಿ ಸಂಭವಿಸಬಹುದಾಗಿದ್ದ ಅಧಿಕಾರ ಸಡಿಲಿಕೆಯನ್ನು ತಡೆಯಲು ಸಫಲವಾಗಿ ಶಕ್ತಿ ಸಂಚಯ ಮುಕ್ಕಾಗದೆ ಉಳಿಯಿತು.

3) 1970ರ ದಶಕದ ಕರ್ನಾಟಕದ ಎಡಪಂಥೀಯ ಚಳವಳಿಗಳು ಬಲಪಂಥಕ್ಕೆ ನೇರವಾದ ಸವಾಲು ಒಡ್ಡಿದಾಗ ಅವುಗಳಿಗೆ ನೇರವಾಗಿ ಮುಖಾಮುಖಿಯಾಗದೆ, ಸಂಚಯಿತ ಸಾಮಾಜಿಕ ಅಧಿಕಾರ ಕೇಂದ್ರಗಳ ಮೂಲಕ ಪ್ರತಿಕ್ರಿಯಿಸಿತು ಹಾಗೂ ಎಡಪಂಥದ ಪ್ರಭಾವವು ಅಧಿಕಾರದ ಸಂಘ ಸಂಸ್ಥೆಗಳನ್ನು ಮುಕ್ಕು ಮಾಡದ ಹಾಗೆ ಕಾಪಾಡಿಕೊಂಡಿತು.

ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?

4) 1980ರ ದಶಕದಲ್ಲಿ, ಭವಿಷ್ಯದಲ್ಲಿ ಎಡಪಂಥವು ತನ್ನ ಮೇಲೆ ಆಕ್ರಮಣ ನಡೆಸಲು ಸಂಘಟಿಸಬಹುದಾದ ತಳ ಜಾತಿ-ವರ್ಗಗಳ ಬಹುಜನರನ್ನು, ತನ್ನ ಅಧಿಕಾರವನ್ನು ರಕ್ಷಿಸುವ ಘೋಷಿತ ಕಾಲಾಳುಗಳನ್ನಾಗಿ ಮಾಡಿಕೊಳ್ಳುವ ವ್ಯಾಪಕ ಪ್ರತಿಕ್ರಾಂತಿ ಚಳವಳಿಯನ್ನು ಕಟ್ಟಿತು ಹಾಗೂ ಎಡಪಂಥದ ಶಕ್ತಿವರ್ಧನೆಗೆ ಒದಗಿ ಬರುವ ಜನ ಸಮುದಾಯಗಳನ್ನು ತನ್ನ ಅಧಿಕಾರ ರಕ್ಷಣೆಯ ಸೇನಾನಿಗಳಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

5) 1990ರಂದ ಇಂದಿನವರೆಗೆ, ಪ್ರತಿಕ್ರಾಂತಿಯಿಂದ ಸಾಧಿತವಾದ ಜನಬೆಂಬಲವನ್ನು ಗಟ್ಟಿ ಬಂಧದಲ್ಲಿ ಹಿಡಿದಿಟ್ಟು ವಿಸ್ತರಿಸಿಕೊಳ್ಳಲು ‘ಸಾಮಾಜಿಕ ಫ್ಯಾಸಿಸಮ್’ನ ತಂತ್ರಗಳನ್ನು ಪ್ರಯೋಗಿಸಿ ‘ಸಾಮಾಜಿಕ ಸರ್ವಾಧಿಕಾರ’ವನ್ನು ಗಳಿಸಿಕೊಂಡಿತು.

6) ಈ ಎಲ್ಲ ಕಾಲಘಟ್ಟಗಳ ಉದ್ದಕ್ಕೂ ವಿವಿಧ ನಮೂನೆಯ ಎಡಪಂಥದ ಚಳವಳಿಗಳು, ತಮ್ಮ ವಲಯದ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಘಟನಾ ಕಾರ್ಯದಲ್ಲಿ ನಿರತವಾದುವೇ ಹೊರತು, ಬಲಪಂಥದ ಸಂಚಯಿತ ಶಕ್ತಿಯನ್ನು ನಿಸ್ತೇಜಗೊಳಿಸುವ ಕಾರ್ಯತಂತ್ರಗಳನ್ನು ತಮ್ಮ ಅರಿವಿಗೆ ತಂದುಕೊಂಡು, ಅದನ್ನು ಚಳವಳಿಯ ಚೇತನವನ್ನಾಗಿ ಮಾಡಿಕೊಂಡದ್ದು ಕಂಡು ಬರುವುದಿಲ್ಲ. ಆ ಕಾರಣವಾಗಿ ಬಲಪಂಥದ ಸಾಮಾಜಿಕ ವಿಸ್ತರಣೆಗೆ ತಡೆಯೊಡ್ಡುವ ಬಹು ಕಾಲ ಬಾಳುವ ಸಂಘ ಸಂಸ್ಥೆಗಳ ಹೆಣಿಗೆ ಕಟ್ಟಿರುವುದು ಕಂಡು ಬರುವುದಿಲ್ಲ. ಕಾಲ ಕಾಲಕ್ಕೆ ವಿಚಾರಗಳ ಮಟ್ಟದಲ್ಲಿ ಬಲಪಂಥವನ್ನು ಎಡಪಂಥವು ಎದುರಿಸುತ್ತಲೇ ಬಂದಿದ್ದರೂ, ಬಲಪಂಥದ ವಿಚಾರಗಳು ಸಮಾಜದಲ್ಲಿ ಯಾವ ಆಚರಣೆಗಳು ಮತ್ತು ಸಂಸ್ಥೆಗಳ ಮೂಲಕ ಸಮಾಜದಲ್ಲಿ ರೂಢಿಗತವಾಗಿದೆ; ಪ್ರತಿರೋಧಿ ವಿಚಾರಗಳನ್ನು ಜನರೂಢಿಯಾಗಿಸಲು ಯಾವ ಬಗೆಯ ಆಚರಣೆಗಳನ್ನು ಸಮಾಜದಲ್ಲಿ ಸಹಜಗೊಳಿಸಬೇಕು, ಅವುಗಳ ಸಾಧನೆಗೆ ಎಂತಹ ಸಂಘ ಸಂಸ್ಥೆಗಳ ಹೆಣಿಗೆ ನೇಯಬೇಕು ಎಂಬುದರ ಕಡೆ ಗಮನವನ್ನೇ ಹರಿಸಿಲ್ಲ. ರಾಜ್ಯಾಧಿಕಾರ ಗಳಿಸಿದರೆ, ರಾಜ್ಯಾಡಳಿತದಲ್ಲಿ ಪಾಲು- ಪ್ರಭಾವ ಸಿದ್ಧಿಸಿಕೊಂಡರೆ ತನಗೆ ತಾನೇ ಸಾಮಾಜಿಕ ಅಧಿಕಾರ ಪ್ರಾಪ್ತಿಯಾಗುತ್ತದೆ ಎಂಬ ಕಣ್ಣೋಟವು ಎಡ ಚಳವಳಿಗಳ ದೌರ್ಬಲ್ಯವಾಗಿದೆ. ವಿಸ್ತಾರವಾದ ಸಾಮಾಜಿಕ ವಲಯ, ಅದರ ಸಂಘ ಸಂಸ್ಥೆಯ ಹೆಣಿಗೆಗಳಲ್ಲಿ ಅಧಿಕಾರವು ಹೇಗೆ ಚಲಾವಣೆಯಾಗುತ್ತದೆ ಮತ್ತೂ ಆ ತಾಣಗಳಲ್ಲೇ ಅವುಗಳ ಮುಖಾಮುಖಿಯಾಗುವ ಕಾರ್ಯತಂತ್ರಗಳೇನು ಎನ್ನುವ ಕಡೆ ಎಡ ಚಳವಳಿಗಳು ಅಗತ್ಯ ಗಮನ ಕೊಡದ ಕಾರಣವಾಗಿ, ಸಮಾಜವು ಬಲಪಂಥಕ್ಕೆ ಎದುರಾಳಿಗಳಿಲ್ಲದ ಆಡುಂಬೊಲವಾಗಿದೆ, ‘ಸಾಮಾಜಿಕ ಫ್ಯಾಸಿಸಮ್’ ಸಮಾಜ ಸಂಹಿತೆಯಾಗುವ ಮಟ್ಟಕ್ಕೆ ಬೆಳೆದಿದೆ. ತಮ್ಮ ಪ್ರತಿರೋಧಿ ಕಾರ್ಯಾಚರಣೆಯ ಈ ಮಿತಿಗಳನ್ನು ಎಡಪಂಥವು ಅರಿತು ದೀರ್ಘಕಾಲಿಕ ಕಾರ್ಯಾಚರಣೆಯ ತಂತ್ರಗಳನ್ನು ರೂಪಿಸಿಕೊಳ್ಳದೆ ಹೋದಲ್ಲಿ ಬಲಪಂಥದ ಸಾಮಾಜಿಕ ಸರ್ವಾಧಿಕಾರವನ್ನು ಮಣಿಸಲಾಗದು.

(ಮುಗಿಯಿತು…)

(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

paniraj
ಕೆ. ಫಣಿರಾಜ್
+ posts

ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಕೆ. ಫಣಿರಾಜ್
ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...