‘ಈ ನಾಡು ಸಂಕ್ರಮಣ ಸ್ಥಿತಿಯಲ್ಲಿದೆ’ ಎಂಬ ಮಾತನ್ನು ಹಿಂದೆ ಬಹಳ ಕೇಳುತ್ತಿದ್ದೆವು; ಬರೆಯುತ್ತಿದ್ದೆವು. ಒಂದು ನಿರ್ದಿಷ್ಟ ಪರಿಸ್ಥಿತಿಯಿಂದ ನೆಗೆತ ಸಾಧಿಸಿ ಬೇರೆಯದೇ ಆದ ಸ್ಥಿತಿಗೆ ತಲುಪುವ ಮಧ್ಯದ ಕಾಲವನ್ನು ಸಂಕ್ರಮಣ ಕಾಲ ಎನ್ನುವುದಾದರೆ, 1973ರ ಆಸುಪಾಸಿನಲ್ಲಿ ಕರ್ನಾಟಕ ಅಂತಹ ಸ್ಥಿತಿಯಲ್ಲಿತ್ತು. ಆದರೆ, ಈಗ ಯಾರೂ ‘ಈ ನಾಡೊಂದು ಸಂಕ್ರಮಣ ಸ್ಥಿತಿಯನ್ನು ಹಾದು ಹೋಗುತ್ತಿದೆ’ ಎಂದು ಹೇಳುತ್ತಿಲ್ಲ. ಕಳೆದ 25 ವರ್ಷಗಳಲ್ಲಿ ಆರ್ಥಿಕತೆ, ತಂತ್ರಜ್ಞಾನ ಸೇರಿದಂತೆ ಕೆಲವು ಆಯಾಮಗಳಲ್ಲಿ ಕರ್ನಾಟಕ ಬೆಳೆಯುತ್ತಿದ್ದರೂ, ಹಲವು ಮಾನದಂಡಗಳಲ್ಲಿ ಕೆಳಗಿಳಿಯುತ್ತಿದೆ. ಕರ್ನಾಟಕದ ರಾಜಕಾರಣದಲ್ಲಿ, ಸಾರ್ವಜನಿಕ ಮೌಲ್ಯಗಳಲ್ಲಿ ಒಳ್ಳೆಯದು ಬೆಳೆಯುತ್ತಿಲ್ಲ ಎಂಬುದು ಸ್ಪಷ್ಟವಿದೆ. ಮುಖ್ಯವಾಹಿನಿಯೆಂದು ಕರೆಸಿಕೊಳ್ಳುತ್ತಿದ್ದ ದೊಡ್ಡ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳೆರಡೂ ದ್ವೇಷವನ್ನು, ಕ್ಷುದ್ರತೆಯನ್ನು ಹಂಚುತ್ತಿವೆ ಹಾಗೂ ಮಾರುಕಟ್ಟೆಯ ಅಧೀನದಲ್ಲಿವೆ. ಹೀಗೆಯೇ ಮುಂದುವರೆದರೆ ಈ ನಾಡು ಇನ್ನಷ್ಟು ಕೊಳೆಯುವುದು ನಿಶ್ಚಿತ. 50 ವರ್ಷಗಳ ಹಿಂದೆ ಸಾಧ್ಯವಾದ ಪುರೋಗಾಮಿ ಬದಲಾವಣೆಗಳಿಗಿಂತ ಭಿನ್ನವಾಗಿ, ಹೊಸಕಾಲದಲ್ಲಿ ಬರಬೇಕಿರುವ ಬದಲಾವಣೆಗಳು ಯಾವುವು? ಕರ್ನಾಟಕವು ಇನ್ನೊಂದು ಸಂಕ್ರಮಣಕ್ಕೆ ಹೊರಳಿಕೊಳ್ಳಲು ಅಗತ್ಯವಿರುವುದು ಏನು? ಅದಕ್ಕೆ ಅಗತ್ಯವಿರುವುದು ಕೆಲವು ‘ಬಲಿ’ಗಳು; ಅದಿಲ್ಲದೇ, ಹೊಸ ಸಂಕ್ರಮಣ ಸಾಧ್ಯವಿಲ್ಲ, ಎಂಬ ಸಂಗತಿಯನ್ನಿಲ್ಲಿ ಚರ್ಚಿಸಲಾಗಿದೆ.
ಕನ್ನಡ ಮಾತನಾಡುವ ಪ್ರದೇಶಗಳು 1956ರಲ್ಲಿ ಇವತ್ತಿನ ಭೌಗೋಳಿಕ ರೂಪ ಪಡೆದಾಗಿನಿಂದ 1970ರವರೆಗೆ ಅಂತಹ ದೊಡ್ಡ ಬದಲಾವಣೆಗಳನ್ನೇನೂ ಕಾಣಲಿಲ್ಲ. ಆದರೆ, ಆ ನಂತರದ್ದು ಹಲವು ರೀತಿಯ ತಲ್ಲಣಗಳ ಕಾಲ. ಸಮಾಜದಲ್ಲಿ, ಸಾಹಿತ್ಯದಲ್ಲಿ, ಸಿನೆಮಾದಲ್ಲಿ, ರಾಜಕಾರಣದಲ್ಲಿ, ಚಳವಳಿಗಳ ಬಿರುಸಿನಲ್ಲಿ, ಬದಲಾವಣೆಯ ಚಿಂತನೆಯಲ್ಲಿ, ಆರ್ಥಿಕ ಸಂಬಂಧಗಳಲ್ಲಿ, ಅಧಿಕಾರದ ಕೈ ಬದಲಾವಣೆಯಲ್ಲಿ ಈ ರಾಜ್ಯವು ಭಾರೀ ಬದಲಾವಣೆಗಳನ್ನು ಕಂಡಿತು. ಸಕಾರಾತ್ಮಕವಾದ ಬದಲಾವಣೆಗಳವು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ವಿಸ್ತರಣೆಯಾಯಿತು. 20ನೇ ಶತಮಾನದ ಕೊನೆಯವರೆಗೆ (ಇದು ಎರಡನೇ ಸಹಸ್ರಮಾನದ ಕೊನೆಯೂ ಹೌದು) ಈ ವಿಸ್ತರಣೆ ಇತ್ತು. ಅಲ್ಲಿಂದಾಚೆಗೆ ಬೆಳೆದದ್ದು ಆರ್ಥಿಕತೆ, ತಂತ್ರಜ್ಞಾನ, ಬೆಂಗಳೂರು ನಗರ ಮತ್ತು ಕರ್ನಾಟಕವನ್ನು ಹಿಂದಕ್ಕೊಯ್ಯುವ ರಾಜಕಾರಣ ಮಾತ್ರ. ಇದನ್ನು ಕೆಲವು ಅನುಭವ ಕಥನ, ಅಂಕಿಅಂಶ ಮತ್ತು ಅಧ್ಯಯನ ವರದಿಗಳ ಮುಖಾಂತರ ಅರ್ಥ ಮಾಡಿಕೊಳ್ಳಬಹುದು.
ಒಂದಕ್ಕೊಂದು ನೇರವಾಗಿ ಸಂಬಂಧ ಇರದೇ ಇರುವ ಕೆಲವು ಉದಾಹರಣೆಗಳ ಮೂಲಕ 50 ವರ್ಷಗಳ ಬದಲಾವಣೆಗಳ ಸ್ವರೂಪವನ್ನು ನೆನಪು ಮಾಡಿಕೊಳ್ಳೋಣ. ದಕ್ಷಿಣ ಕರ್ನಾಟಕದ ಹಳ್ಳಿಯೊಂದರಲ್ಲಿ 1974ರಲ್ಲಿ ಹುಟ್ಟಿದ ನಾನು 1980ರಲ್ಲಿ ಅದೇ ಹಳ್ಳಿಯಲ್ಲಿ ಶಾಲೆ ಸೇರಿದೆ. ಆಗ ಮಕ್ಕಳಿಗೆ ಯಾವ ರೀತಿ ಹೆಸರಿಡುತ್ತಿದ್ದರು ಎಂಬುದನ್ನು ಅಳೆಯಲು ನನ್ನ ಸಹಪಾಠಿಗಳೆಲ್ಲರ ಹೆಸರನ್ನು ನೆನೆದರೆ – ಹೈಸ್ಕೂಲಿಗೆ ಬರುವ ಹೊತ್ತಿಗೆ ‘ಗೌಡ’ ಎಂಬ ಉಪನಾಮ ಹೊಂದಿದ್ದ ಒಬ್ಬ ಸಹಪಾಠಿ ಮಾತ್ರ ಇದ್ದ. ರೆಡ್ಡಿ ಎನ್ನುವ ಹೆಸರಿಟ್ಟುಕೊಂಡಿದ್ದದ್ದೂ ಒಬ್ಬನೇ. ಒಬ್ಬನ ಹೆಸರಿನಲ್ಲಿ ಮಾತ್ರ ಆಚಾರಿ ಇತ್ತು. ಅದನ್ನು ಹೊರತುಪಡಿಸಿದರೆ ಸುಮಾರು 100 ಜನರಲ್ಲಿ ಒಬ್ಬರಿಗೂ ಜಾತಿಯ ಉಪನಾಮ ಇರಲಿಲ್ಲ. ಶಾಸ್ತ್ರಿ, ಭಟ್ ಎಂಬ ಹೆಸರನ್ನಿಟ್ಟುಕೊಂಡವನು ಒಬ್ಬನೂ ಇರಲಿಲ್ಲ. ಉತ್ತರ ಕರ್ನಾಟಕದಲ್ಲಿ ಅಡ್ಡಹೆಸರು ಆಗಲೂ ಸಾಮಾನ್ಯವಾಗಿತ್ತು; ಈಗಲೂ ಇದೆ. ಆದರೆ, ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ, ಜಾತಿಸೂಚಕ ಉಪನಾಮಗಳು 70ರ ದಶಕದಿಂದ 90ರ ದಶಕದವರೆಗೆ ಇಳಿಮುಖವಾಗುತ್ತಾ ಬಂದಿದ್ದವು.

ಹಳ್ಳಿಯಿಂದ ಬೆಂಗಳೂರಿಗೆ ಬಂದಾಗ ಪಿಯುಸಿ ಕಾಲೇಜು, ಮೆಡಿಕಲ್ ಕಾಲೇಜುಗಳಲ್ಲೂ ಅದೇ ವಯಸ್ಸಿನವರು ಜೊತೆಯಾಗುತ್ತಾರಲ್ಲಾ, ಅಲ್ಲಿಗೆ ಬಂದ ಮೇಲೆ ಬೆಂಗಳೂರಿನಲ್ಲೆ ಹುಟ್ಟಿ ಬೆಳೆದ ಇಬ್ಬರು ಭಟ್‌ಗಳು, ಒಬ್ಬ ರೆಡ್ಡಿ ಬಿಟ್ಟರೆ ಜಾತಿ ಸೂಚಕ ಹೆಸರಿನವರು ಬಹಳ ಕಡಿಮೆ. ಈಗ? ಎಲ್ಲೆಡೆಯೂ ಎಳೆ ಮಕ್ಕಳಿಗೆ ಜಾತಿಯ ಉಪನಾಮಗಳನ್ನು ಅಂಟಿಸುವುದು ಹಳ್ಳಿ, ಪಟ್ಟಣಗಳೆಲ್ಲೆಡೆ ಸಾರ್ವತ್ರಿಕ ಎಂಬಷ್ಟು ಸಾಮಾನ್ಯ; ಅದರಲ್ಲೂ ಜಾತಿಯ ಹುಸಿ ಶ್ರೇಣೀಕರಣದಲ್ಲಿ ‘ಮೇಲಿರುವವರಲ್ಲ’ ಇದು ಹೆಚ್ಚು. ಹಾಗಾದರೆ, ಈ 50 ವರ್ಷಗಳಲ್ಲಿ ನಾವು ಎಷ್ಟು ‘ಆಧುನಿಕ’ವಾಗಿದ್ದೇವೆ? ಜಾತಿಯ ಉಪನಾಮಗಳನ್ನು, ಉಪಜಾತಿಯ, ಗೋತ್ರಗಳ ಉಪನಾಮಗಳನ್ನೂ ಅಂಟಿಸಿ ಮಕ್ಕಳಿಗೆ ಹೆಸರಿಡುವ ಪರಿಪಾಠ ಈಗ ದಕ್ಷಿಣ ಕರ್ನಾಟಕದಲ್ಲಿ ಏಕೆ ಹೆಚ್ಚಾಗಿದೆ?
ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?
ಈ 50 ವರ್ಷಗಳಲ್ಲಿ ಆದದ್ದೇನು, ಆಗದೇ ಇದ್ದದ್ದೇನು ಎಂಬುದನ್ನು ತೋರಿಸುವ ಇನ್ನೊಂದು ಉದಾಹರಣೆ: 70ರ ದಶಕದಲ್ಲಿ ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕವು ದೇಶದ ಅತಿ ದೊಡ್ಡ ಬರಪೀಡಿತ, ಮಳೆಯಾಶ್ರಿತ ಪ್ರದೇಶವಾಗಿತ್ತು; ಈಗಲೂ ಅದೇ ವಾಸ್ತವ. ಈ ಅವಧಿಯಲ್ಲಿ ಬೃಹತ್ ನೀರಾವರಿ ಇಲಾಖೆಯ ಮೂಲಕ ಬೃಹತ್ ಖರ್ಚೇ ಆಗಿದೆ. ಸಣ್ಣ ನೀರಾವರಿ ಇಲಾಖೆಯಿಂದಲೂ ಭಾರೀ ಸಂಪನ್ಮೂಲ ಹರಿದಿದೆ. ಕೃಷ್ಣಾ ನದಿಯಿಂದ ಕರ್ನಾಟಕದ ಒಂದಷ್ಟು ಭಾಗ ನೀರು ಪಡೆದದ್ದೂ ನಿಜ. ಆದರೆ, ಇಂದಿಗೂ ಮಂಡ್ಯದಂತಹ ‘ಅತ್ಯಂತ ಸಮೃದ್ಧ’ ಜಿಲ್ಲೆಯಲ್ಲೂ ಶೇ. 51ರಷ್ಟು ಒಣಭೂಮಿಯೇ ಇದೆ. ರಾಜ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇ. 26.50ರಷ್ಟು ಭಾಗಕ್ಕೆ ಮಾತ್ರ ನೀರಾವರಿ ಸೌಲಭ್ಯವಿದೆ. ಇದು ನೀರಿನ ಅಭಾವದಿಂದಲಾ ಅಥವಾ ಕಳಪೆ ನಿರ್ವಹಣೆ ಮತ್ತು ಅಸಮರ್ಪಕ ಬಳಕೆಯಿಂದಲಾ ಎಂಬುದನ್ನು ಇದುವರೆಗೂ ಸರಿಯಾಗಿ ಮುಖಾಮುಖಿಯಾಗಿಲ್ಲ. ಇವತ್ತಿನ ನೀರಾವರಿ ಮಾದರಿಯಿಂದ ಕರ್ನಾಟಕದ ಬಹುಭಾಗದ ಜಮೀನುಗಳಿಗೆ ನದಿ ನೀರು ದಕ್ಕುವುದು ಸಾಧ್ಯವಿಲ್ಲ. ಕೆರೆ ನೀರು ಹೆಚ್ಚಾಗುವುದು ಸಾಧ್ಯವಿಲ್ಲ.
ಇದೇ ಅವಧಿಯಲ್ಲಿ ನಮ್ಮ ರಾಜಧಾನಿ ಬೆಂಗಳೂರು ಅಗಾಧವಾಗಿ ಬೆಳೆದಿದೆ. 1971ರಲ್ಲಿ 16 ಲಕ್ಷ ಜನಸಂಖ್ಯೆ ಹೊಂದಿದ್ದ ಈ ನಗರ, ಈಗ (2024) ವಿಯಟ್ನಾಮಿನ ಹೊಚಿಮಿನ್ ಸಿಟಿಯನ್ನು ಎರಡನೇ ಸ್ಥಾನಕ್ಕೆ ಹಿಂದಿಕ್ಕಿ, ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿಯನ್ನು ಪಡೆದಿದೆ. ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲಿ ಐದು ಅಥವಾ ಆರನೇ ಸ್ಥಾನದಲ್ಲಿದ್ದದ್ದು, ಈಗ ಮೂರನೇ ಸ್ಥಾನದಲ್ಲಿದೆ. ಇದು ಆತಂಕ ಪಡುವ ವಿಷಯವೇನಲ್ಲ. ಇದನ್ನು ಇಡೀ ರಾಜ್ಯದ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ಆಲೋಚಿಸಬೇಕಿದೆ. ಆ ನಿಟ್ಟಿನಲ್ಲಿ ಎಷ್ಟು ಪ್ರಯತ್ನ ಇದೆ ಎಂಬುದನ್ನು ಒರೆಗೆ ಹಚ್ಚಬೇಕಷ್ಟೇ.
ಆದರೆ, ಆತಂಕಕ್ಕೆ ಕಾರಣವಾಗಬೇಕಾದ ಬೇರೆ ಸಂಗತಿಯಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 5.05 ಇರುವ ಕರ್ನಾಟಕದಲ್ಲಿ ದೇಶದ ಒಟ್ಟು ಆತ್ಮಹತ್ಯೆಗಳ ಶೇ. 8ರಷ್ಟು ಸಂಭವಿಸುತ್ತವೆ. 2021ರ ಅಂಕಿ-ಅಂಶಗಳ ಪ್ರಕಾರ ದೆಹಲಿ (2760) ಮತ್ತು ಚೆನ್ನೈಗಳ (2699) ನಂತರ ಬೆಂಗಳೂರಿನಲ್ಲೇ ಹೆಚ್ಚು ಜನ (2292) ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರೈತರ ಆತ್ಮಹತ್ಯೆಯ ವಿಷಯದಲ್ಲೂ ಮಹಾರಾಷ್ಟ್ರ ನಂತರ ಕರ್ನಾಟಕದಲ್ಲೇ ಹೆಚ್ಚು ಆತ್ಮಹತ್ಯೆಗಳು ಆಗುತ್ತವೆ. ನಮ್ಮ ನಗರಗಳು ಮತ್ತು ಹಳ್ಳಿಗಳಲ್ಲಿ – ಬೇರೆ ಬೇರೆ ಕಾರಣಗಳಿಂದ ಹೆಚ್ಚಾಗುತ್ತಿರುವ ಆತ್ಮಹತ್ಯೆಗಳು ಏನನ್ನು ಸೂಚಿಸುತ್ತವೆ? ಸಮೃದ್ಧಿಯು ನೆಮ್ಮದಿಯ ಬದುಕನ್ನು ಏಕೆ ತರುತ್ತಿಲ್ಲ? ಅದರಲ್ಲೂ ಯುವಜನರು, ಶಾಲಾ ವಿದ್ಯಾರ್ಥಿಗಳಲ್ಲಿ ಇಂದು ವಿವಿಧ ಬಗೆಯ ಮಾನಸಿಕ ಸಮಸ್ಯೆಗಳು ವಿಪರೀತವಾಗಿ ಹೆಚ್ಚುತ್ತಿವೆ, ಏಕೆ? ಇದಕ್ಕೂ ನಮ್ಮ ತಂತ್ರಜ್ಞಾನದ ಬೆಳವಣಿಗೆಗೂ ಸಂಬಂಧವಿದೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಬರುತ್ತಿರುವ ಬದಲಾವಣೆಗಳು ಹಾಗೂ ರಾಜಕಾರಣದಲ್ಲಿ ಬದಲಾವಣೆ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು.
ರಾಜಕಾರಣದ ವಿಷಯಕ್ಕೆ ಬರುವುದಾದರೆ, 70 ಮತ್ತು 80ರ ದಶಕದಲ್ಲಿ ಇಡೀ ದೇಶಕ್ಕೆ ದಾರಿ ತೋರುವ ರೀತಿಯಲ್ಲಿ ಕರ್ನಾಟಕವು ಮುಂದಿತ್ತು. ಭೂಸುಧಾರಣೆ ಬೇರೆ ಕಡೆಗಳಿಗಿಂತಲೂ ಪರಿಣಾಮಕಾರಿಯಾಗಿ ಇಲ್ಲಿ ಜಾರಿಯಾಯಿತು; ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯದ ಒಂದು ಪ್ರಯೋಗ ಇಲ್ಲಿ ನಡೆಯಿತು; ಮಂಡಲ್ ಪಂಚಾಯ್ತಿ – ಜಿಲ್ಲಾ ಪರಿಷತ್ತುಗಳ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೊಂದು ಮಾದರಿ ನಿರ್ಮಾಣವಾಗಿತ್ತು. ಮೊದಲ ಕಾಂಗ್ರೆಸ್ಸೇತರ ಸರ್ಕಾರ ಉಳಿದೆಡೆಗಳಿಗಿಂತ ತಡವಾಗಿ (1983) ಇಲ್ಲಿ ಬಂದರೂ, ಅದು ದೆಹಲಿಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿತು. ಕರ್ನಾಟಕದ ರೈತ ಚಳವಳಿಯು ದೇಶದ ರೈತರ ಚಳವಳಿಗೆ ನಾಯಕತ್ವ ಕೊಟ್ಟಿದ್ದಲ್ಲದೇ, ಪ್ರಪಂಚ ಮಟ್ಟದಲ್ಲೂ ಹೆಸರು ಮಾಡಿತ್ತು; ಮಹಾರಾಷ್ಟ್ರವನ್ನು ಹೊರತುಪಡಿಸಿದರೆ, ಒಂದು ಚಳವಳಿಯಾಗಿ ಕರ್ನಾಟಕದ ದಲಿತ ಚಳವಳಿಯೇ ಅಗ್ರಗಣ್ಯ ಸ್ಥಾನದಲ್ಲಿತ್ತು. ಇವೆರಡೂ ಚಳವಳಿಗಳು ಕರ್ನಾಟಕದ ಸಮಾಜ, ರಾಜಕಾರಣದ ಮೇಲೆ ಬೀರಿದ ಪರಿಣಾಮ ಅಗಾಧವಾದುದು. ಆ 25 ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಜಾತಂತ್ರವು ವಿಸ್ತಾರವಾಯಿತು, ಸಮಾಜ ಸಕಾರಾತ್ಮಕ ದಿಕ್ಕಿನಲ್ಲಿ ಚಲಿಸಿತ್ತು ಎಂಬುದಂತೂ ನಿಜ. ಇತಿಹಾಸದುದ್ದಕ್ಕೂ ಕೆಟ್ಟದ್ದೇ ಸಂಭವಿಸಿದೆ, ಶೋಷಣೆಯೇ ಮೇಲುಗೈ ಸಾಧಿಸಿದೆ, ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಲೇ ಬಂದಿದೆ – ಎಂಬುದು ವಾಸ್ತವವಲ್ಲ ಎಂಬುದಕ್ಕೂ ಇದು ನಿದರ್ಶನ.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಹೆಚ್ಚುಕಡಿಮೆ ಇದೇ ಅವಧಿಯಲ್ಲೇ ಕರ್ನಾಟಕದ ಒಬ್ಬ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪ್ರಧಾನಿಯಾಗುವ ಕನಸು ಕಂಡಿದ್ದರು; ಅವರನ್ನು ಪ್ರೀತಿಸುತ್ತಿದ್ದ ಮಾಧ್ಯಮಗಳೂ ಹಾಗೆ ಬಿಂಬಿಸಿದ್ದವು. ವಿಶಿಷ್ಟ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನಿಯಾದರು. ಆಗಲೂ ಕರ್ನಾಟಕವು ದೆಹಲಿಯ ಮೇಲೆ ಹೆಚ್ಚಿನ ಪ್ರಭಾವವನ್ನೇನೂ ಹೊಂದಿರಲಿಲ್ಲ; ಈಗ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವಾಗಲೂ, ಅವರ ವ್ಯಕ್ತಿಗತ ಪ್ರಭಾವಳಿ ಕೆಲಸ ಮಾಡಬಹುದಾದರೂ, ಕರ್ನಾಟಕದ ರಾಜಕಾರಣ ದೆಹಲಿಯನ್ನೇನೂ ಪ್ರಭಾವಿಸುವ ಸಾಧ್ಯವಿಲ್ಲ; ಬದಲಿಗೆ ದೆಹಲಿಯ ವಸಾಹತಾಗಿಯೇ ಉಳಿದುಕೊಂಡಿದೆ. ಕರ್ನಾಟಕದ ರಾಜಕೀಯ ಮತ್ತು ಆಂದೋಲನಗಳ ಚಿಂತನೆಯು ದೇಶದಲ್ಲಿ ಹೋಗಲಿ, ಕರ್ನಾಟಕದಲ್ಲೇ ಇಡೀ ಸಮಾಜವನ್ನು ಸಕಾರಾತ್ಮಕವಾಗಿ ಅಲುಗಾಡಿಸುವಂತಹ ಯಾವ ಲಕ್ಷಣಗಳನ್ನೂ ತೋರುತ್ತಿಲ್ಲ.

ಈ ಅವಧಿಯಲ್ಲಿ ಕರ್ನಾಟಕದ ರಾಜಕಾರಣವು ಇನ್ನೆರಡು ವಿಚಾರಗಳಲ್ಲಿ ಹೆಸರು ಮಾಡಿದೆ. ಇಡೀ ದೇಶದಲ್ಲಿ ಚುನಾವಣಾ ಖರ್ಚು ಮತ್ತು ಮತದಾರರಿಗೆ ಓಟಿಗಾಗಿ ಕಾಸು ನೀಡುವ ಸ್ಥಾನದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು; ತೆಲಂಗಾಣವು ನಮ್ಮನ್ನು ಮೀರಿಸುವವರೆಗೆ. ಶಾಸಕರುಗಳ ಪಕ್ಷಾಂತರ ದೇಶದಲ್ಲಿ ಹೊಸದೇನಲ್ಲ. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಲು ‘ಆಪರೇಷನ್ ಕಮಲ’ ಎಂಬ ಅಸಹ್ಯವನ್ನು ಸೃಷ್ಟಿಸಿ ಸತತ ಎರಡನೇ ಬಾರಿಗೆ ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯವೆಂಬ ಕಳಂಕ ಕರ್ನಾಟಕದ್ದೇ ಆಗಿದೆ.
ಬದಲಾವಣೆಯ ಅತಿ ದೊಡ್ಡ ಅಸ್ತ್ರ ರಾಜಕಾರಣ. ಆದರೆ, ನಾವೀನ್ಯತೆ, ಹೊಸತನ ಮತ್ತು ಮುನ್ನೋಟ (innovation, freshness & vision) ಇಲ್ಲದ ರಾಜಕಾರಣವು ಕೊಳೆಯುತ್ತಾ ಹೋಗುತ್ತದೆ. ಅದರ ಪರಿಣಾಮವಾಗಿ ರಾಜಕಾರಣವೆಂದರೆ ಕೆಟ್ಟದ್ದು ಎಂದೂ, ಅದಕ್ಕೊಂದು ಬೇರೆ ಹೆಸರನ್ನಿಟ್ಟು ಕರೆಯಬೇಕೆಂಬವರೆಗೆ ಹದಗೆಟ್ಟಿದೆ.
ಎಲ್ಲೆಡೆ ಹೇಗೋ, ನಮ್ಮಲ್ಲೂ ಮಾಧ್ಯಮವು ಪ್ರಜಾತಂತ್ರದ ನಾಲ್ಕನೇ ಅಂಗವಾಗಿಯೇ ಇತ್ತು. ಕರ್ನಾಟಕದಲ್ಲಿ ಹಲವು ಪ್ರಥಮಗಳಿಗೆ ದಾರಿ ಮಾಡಿಕೊಟ್ಟು, ಚಳವಳಿಗಳಿಗೆ, ಹೊಸ ಚಿಂತನೆಗಳಿಗೆ, ಸಾಹಿತ್ಯಿಕ ಪ್ರಯೋಗಗಳಿಗೆ ವೇದಿಕೆಯಾಗಿದ್ದ ಪ್ರಜಾವಾಣಿಯನ್ನೇ ಕಟುವಾಗಿ ವಿಮರ್ಶಿಸಿ ಒಳಿತನ್ನು ಕಾಯ್ದುಕೊಳ್ಳುತ್ತಿದ್ದ ಪರಂಪರೆ ನಮ್ಮದು. ಲಂಕೇಶ್ ಪತ್ರಿಕೆಯೆಂಬ ಪ್ರಯೋಗವು ಕರ್ನಾಟಕದಲ್ಲಿ ಒಂದಿಡೀ ತಲೆಮಾರನ್ನು ಪ್ರಭಾವಿಸಿತು, ರೂಪಿಸಿತು. ಆದರೆ, ಕಳೆದ 25 ವರ್ಷಗಳಲ್ಲಿ ರಾಜಕಾರಣಕ್ಕಿಂತ ಕೊಳೆತಿರುವ ಅಥವಾ ಕಾರಣವಾಗಿರುವ ರಂಗವೆಂದರೆ ಮಾಧ್ಯಮ ರಂಗವಾಗಿದೆ.

ಕರ್ನಾಟಕವು ಇದೇ ಅವಧಿಯಲ್ಲಿ ಅಪಾರ ನಾವೀನ್ಯತೆಯನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ತೋರಿದೆ ಅಥವಾ ಅಂತಹ ಪ್ರತಿಭೆಯನ್ನು ರಾಜ್ಯಕ್ಕೆ (ಅಂದರೆ ಬೆಂಗಳೂರಿಗೆ!!) ಆಕರ್ಷಿಸಿದೆ. ದೇಶದ ಸಿಲಿಕಾನ್ ಸಿಟಿಯಾಗಿ, ಸ್ಟಾರ್ಟ್ಅಪ್ ರಾಜಧಾನಿಯಾಗಿ, ತಂತ್ರಜ್ಞಾನದ ವಿವಿಧ ಮಜಲುಗಳ ಕೇಂದ್ರವಾಗಿ ಹೊರಹೊಮ್ಮಿದೆ. ಇದೇ ಬೆಂಗಳೂರು ರಾಜ್ಯದ ಪ್ರತಿಯೊಂದು ಹಳ್ಳಿಯ, ಎಷ್ಟೋ ಹಳ್ಳಿಗಳ ಪ್ರತಿ ಮನೆಯ ಮತ್ತು ದೇಶದ ವಿವಿಧ ಭಾಗಗಳ ಶ್ರಮಶಕ್ತಿಯನ್ನು ದುಡಿಸಿಕೊಳ್ಳುತ್ತಿದೆ. ಇವೆಲ್ಲದರ ಬದಲಿಗೆ ಆ ದುಡಿವ ಜನರಿಗೆ, ಹಳ್ಳಿಗಳಿಗೆ, ಜಿಲ್ಲೆಗಳಿಗೆ ಎಷ್ಟನ್ನು, ಏನನ್ನು ಕೊಡುತ್ತಿದೆ ಎಂಬ ಪ್ರಶ್ನೆಯೂ ಜೊತೆ ಜೊತೆಗೇ ಇದೆ.
ಕರ್ನಾಟಕವು ಸಾಫ್ಟ್‌ವೇರ್‌ನಲ್ಲಿ ಮಾತ್ರವಲ್ಲದೇ, ಒರಟು ಧಾನ್ಯಗಳು, ಕಾಫಿ, ರೇಷ್ಮೆ, ಟೊಮ್ಯೋಟೋ, ಸಂಬಾರ ಪದಾರ್ಥಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಲು, ದ್ರಾಕ್ಷಿ, ಹೂವಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲೂ, ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲೂ ಇದೆ. ಆದರೆ, ಕೃಷಿಯು ಸಾಮಾಜಿಕ ಪ್ರತಿಷ್ಠೆ ಹೊಂದಿರದ ಕಸುಬಾಗಿದೆ. ಕೃಷಿ ಮಾಡುವ ಯುವಕರಿಗೆ ಮದುವೆಯಾಗುತ್ತಿಲ್ಲ ಎಂಬುದು ಅದರ ಒಂದು ಪರಿಣಾಮವಾಗಿ ನಮ್ಮ ಕಣ್ಣಮುಂದಿದೆ..
ಶಿಶು ಮರಣ ಪ್ರಮಾಣ ಕರ್ನಾಟಕದಲ್ಲಿ 1971ರಲ್ಲಿ ಸಾವಿರಕ್ಕೆ 129 ಇತ್ತು. ಈಗ ಸಾವಿರ ಜನನಗಳಲ್ಲಿ 28ಕ್ಕೆ ಇಳಿದಿದೆ. ಇದನ್ನು ದೊಡ್ಡ ಸಾಧನೆ ಎನ್ನೋಣವೋ? ವಿಜ್ಞಾನ, ತಂತ್ರಜ್ಞಾನ, ಸಂಪರ್ಕ ಸಾಧನ, ವೈದ್ಯಕೀಯ ವ್ಯವಸ್ಥೆಯ ಮೇಲೆ ಸಾರ್ವಜನಿಕ ಹಾಗೂ ಖಾಸಗಿ ಹೂಡಿಕೆ ಈ ಪ್ರಮಾಣದಲ್ಲಿ ಹೆಚ್ಚಾಗಿರುವಾಗ ಆ 28 ಮಕ್ಕಳಿಗಾಗಿ ಕಣ್ಣೀರು ಸುರಿಸೋಣವೋ?
1916ರಲ್ಲೇ ಮೈಸೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ, ಬ್ರಿಟಿಷರ ನೇರ ಆಡಳಿತದ ಹೊರಗಿದ್ದ ಪ್ರದೇಶಗಳ ಮೊಟ್ಟ ಮೊದಲ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಯಿತ್ತು. ಈ ರಾಜ್ಯವು ಕರ್ನಾಟಕ ಎಂಬ ಹೆಸರು ಪಡೆದ 1973ರ ಹೊತ್ತಿಗೆ ಕರ್ನಾಟಕದಲ್ಲಿ ಕೇವಲ 4 ವಿಶ್ವವಿದ್ಯಾಲಯಗಳಿದ್ದವು – ಮೈಸೂರು, ಧಾರವಾಡ, ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾಲಯ. ಈಗ 42 ಸರ್ಕಾರೀ ವಿಶ್ವವಿದ್ಯಾಲಯಗಳಿವೆ. ಖಾಸಗಿ ವಲಯದಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದುಕೊಂಡಿರುವುದು 27. ಇದಲ್ಲದೇ ಇನ್ನೊಂದಷ್ಟು ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯ ಕುರಿತು ಹೆಮ್ಮೆ ಪಟ್ಟುಕೊಳ್ಳುವ ಪರಿಸ್ಥಿತಿಯಲ್ಲಂತೂ ನಾವಿಲ್ಲ. ಮೇಲಿನ ವಿಶ್ವವಿದ್ಯಾಲಯಗಳಲ್ಲಿ ಒಂದು ಸಹಾ ಪ್ರಪಂಚದ ಅತ್ಯುತ್ತಮ ನೂರು ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿಲ್ಲ. ಬದಲಿಗೆ ದಿನೇ ದಿನೇ ಕಳಪೆಯಾಗುವ ಕಡೆಗೇ ನಡೆದಿವೆ. ಅತ್ಯಂತ ದುರಂತಮಯ ಸ್ಥಿತಿಗೆ ತಲುಪಿರುವುದು ಸರ್ಕಾರೀ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ. ಅವಕ್ಕೂ ನಾಡಿನ ಉತ್ತಮ ಶಾಲೆಗಳ ಸ್ಥಿತಿಗೂ ಆಕಾಶ ಭೂಮಿಯಷ್ಟು ಅಂತರವಿದೆ. ಇಲ್ಲೇ ಮತ್ತೊಂದು ವಿಪರ್ಯಾಸವೂ ಇದೆ. ಮೆಟ್ರೋಪಾಲಿಟನ್ ನಗರಗಳ ಈ ‘ಅತ್ಯುತ್ತಮ ಶಾಲೆ’ಗಳಲ್ಲಿನ ಮಕ್ಕಳೂ ತೀವ್ರತೆರನಾದ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.
ಇದನ್ನೂ ಓದಿರಿ: ‘ರಾಹುಲ್ ದಾದಾ, ಬಂಗಾಳಕ್ಕೂ ಬನ್ನಿ..’ ಮತುವಾಗಳ ಮನವಿ, ಬಿಜೆಪಿಯಲ್ಲಿ ಆತಂಕ ತಂದಿದ್ದೇಕೆ?
ಪ್ರಧಾನವಾಗಿ ಗ್ರಾಮ ಕೇಂದ್ರಿತವಾಗಿದ್ದ, ಕೃಷಿ ಪ್ರಧಾನವಾಗಿದ್ದ ಕರ್ನಾಟಕವು, ಪ್ರಧಾನವಾಗಿ ನಗರ ಕೇಂದ್ರಿತ ಮತ್ತು ಆಧುನಿಕ ಸೇವಾವಲಯ ಕೇಂದ್ರಿತವಾಗುವತ್ತ ನಡೆದಿದೆ. ಜಾತಿ ಶ್ರೇಣೀಕರಣ, ತಾರತಮ್ಯವನ್ನು ಮನಸಾರೆ ಒಪ್ಪಿಕೊಂಡು ಶರಣಾಗಿದ್ದಾಗ, ಶ್ರೇಣೀಕರಣದ ಏಣಿಯಲ್ಲಿ ಮೇಲಿದ್ದವರಿಗೆ ಎಲ್ಲವೂ ಚೆನ್ನಾಗಿದ್ದ, ರಮಣೀಯವಾಗಿದ್ದ ಬಹುತೇಕ ಹಳ್ಳಿಗಳಲ್ಲಿ ಯಾವುದೂ ರಮಣೀಯವಾಗಿಲ್ಲ. 1978ರ ಹೊತ್ತಿಗೇ ‘ನಮ್ಮ ಹಳ್ಳಿಗಳು ಜಾತೀಯತೆ, ಸಣ್ಣತನ ಮತ್ತು ಕ್ಷುದ್ರತನಗಳಿಂದ ತಮ್ಮ ಬದುಕಿನ ಮುಸ್ಸಂಜೆಯಲ್ಲಿದ್ದಂತೆ ಭಾಸವಾಗುತ್ತಿದೆ’ ಎಂದು ಲಂಕೇಶರು ತಮ್ಮ ಕಾದಂಬರಿಗೆ ‘ಮುಸ್ಸಂಜೆಯ ಕಥಾ ಪ್ರಸಂಗ’ ಎಂದು ಹೆಸರಿಟ್ಟಿದ್ದರು. ಈಗ ನಗರಗಳಲ್ಲಿ ಅನಾಥಪ್ರಜ್ಞೆಯು ವಿವಿಧ ರೀತಿಯ ಮಾನಸಿಕ, ಕೌಟುಂಬಿಕ ಹಾಗೂ ಸಮಾಜೋ ಆರ್ಥಿಕ ಸಂಕಟಗಳಿಗೆ ಗುರಿಯಾಗುತ್ತಿರುವ ದೊಡ್ಡ ಜನಸಮೂಹವಿದೆ. ಈ ಹಳ್ಳಿ – ನಗರಗಳಲ್ಲಿ ಹೊಸದೇನನ್ನು ಕಟ್ಟಬಹುದು? ನಗರೀಕರಣವೇ ಮುಂದೆಂದಿಗೂ ಅನಿವಾರ್ಯವೇ? ಎಂಬ ಕುರಿತ ಚಿಂತನೆ ನಡೆದಿಲ್ಲ. ಆದರೆ, ಬೆಂಗಳೂರನ್ನೆಷ್ಟು ದೊಡ್ಡದಾಗಿಸಬೇಕು, ಅದರ ಜೊತೆಗೆ ಇನ್ಯಾವ ನಗರಗಳಿಗೆ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆಯುವ ಯೋಗ್ಯತೆಯಿದೆ ಎಂಬ ಚರ್ಚೆಯಷ್ಟೇ ನಡೆದಿದೆ.
ಹೀಗೆಲ್ಲಾ.. ಕರ್ನಾಟಕದ ವಿವಿಧ ಆಯಾಮಗಳ ಬೆಳವಣಿಗೆಯ ಸ್ಥಗಿತತೆ ಮತ್ತು ಹಿನ್ನಡೆ ಆಗುತ್ತಿದ್ದ ಹೊತ್ತಿನಲ್ಲೇ ಇಲ್ಲಿ ಮತೀಯ ದ್ವೇಷದ ಶಕ್ತಿಗಳೂ ಬೆಳೆಯತೊಡಗಿದವು ಅಥವಾ ಅವು ಬೆಳೆಯುತ್ತಿದ್ದುದರಿಂದಲೂ ಈ ಸ್ಥಗಿತತೆ ಮತ್ತು ಹಿನ್ನಡೆ ಸಂಭವಿಸಿತು. ಜಾತಿಯ ಉಪನಾಮಗಳ ಬಳಕೆ ಹೆಚ್ಚಾಯಿತೆನ್ನುವುದು ಬಲಾಢ್ಯ ಮತ್ತು ಮೇಲರಿಮೆ ಹೊಂದಿದ್ದ ಜಾತಿಗಳ ಜಾತಿವಾದವು ಮೇಲುಗೈ ಸಾಧಿಸಿತೆನ್ನುವುದಕ್ಕೂ ನಿದರ್ಶನ. ಬಲಪಂಥೀಯ ರಾಜಕಾರಣದ ಸಾಮಾಜಿಕ ನೆಲೆಯಾಗಿಯೂ ಈ ಜಾತಿಗಳು ಬಲಗೊಳ್ಳತೊಡಗಿದ್ದು ಆಕಸ್ಮಿಕವಲ್ಲ.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)





