ಸಂಕ್ರಮಣಕ್ಕಾಗಿ ‘ಬಲಿ’ ಕೇಳುತ್ತಿರುವ ಕಾಲ (ಭಾಗ-2)

Date:

(ಮುಂದುವರಿದ ಭಾಗ…) ಕಳೆದ 25 ವರ್ಷಗಳಲ್ಲಿ ಕರ್ನಾಟಕದಲ್ಲಿ ಒಂದು ಬಗೆಯ ಧ್ರುವೀಕರಣವು ಸಂಭವಿಸಿದೆ. ಇದು ದೇಶದ ಮಟ್ಟಿಗೂ ನಿಜ. ಕೋಮುವಾದಿ ಬಿಜೆಪಿ ಆರೆಸ್ಸೆಸ್ ಬೆಳವಣಿಗೆಯಾಗಿ, ಅಧಿಕಾರದ ಗದ್ದುಗೆಯನ್ನು ಹಿಡಿಯುವ ಅಪಾಯ ಕಾಡುತ್ತಿದ್ದಂತೆಯೇ ಸಹಜವಾಗಿ ಅದೊಂದೇ ಸಾಮಾಜಿಕ ರಾಜಕೀಯ ಕ್ರಿಯಾಶೀಲತೆಯ ಲಿಟ್ಮಸ್ ಟೆಸ್ಟ್ ಆಗಿಬಿಟ್ಟಿತು. ನೀವು ಒಂದೋ ಆ ಕಡೆ ಅಥವಾ ಈ ಕಡೆಯಿರಬೇಕಿದೆ. ಅದಕ್ಕಿಂತ ಭಿನ್ನವಾದ ಮೂರನೇ ಶಕ್ತಿಯ ಬೆಳವಣಿಗೆ ಕಷ್ಟಸಾಧ್ಯವೆನಿಸುವ ಸ್ಥಿತಿ ಏರ್ಪಡುತ್ತಿದ್ದಾಗಲೇ, ಇಡೀ ದೇಶದಲ್ಲಿ ಮತ್ತು ಮುಖ್ಯವಾಗಿ ಒಕ್ಕೂಟ ಸರ್ಕಾರದಲ್ಲಿ ಮೋದಿ ಅವತಾರದ ಸ್ಥಾಪನೆಯಾಗಿದೆ. ಬಲವಾದ ಕೇಂದ್ರೀಕರಣ ಮತ್ತು ಅತ್ಯಂತ ಮೇಲಿನ ಸ್ಥಾನದಿಂದ ನೀಚ, ನಿರ್ಲಜ್ಜ ಕೇಡಿನ ಪ್ರದರ್ಶನವು ದೇಶವನ್ನು ಬೆಚ್ಚಿ ಬೀಳಿಸಿದೆ. ದಕ್ಷಿಣ ಭಾರತದ ಉಳಿದೆಲ್ಲಾ ರಾಜ್ಯಗಳಲ್ಲಿ ಬಿಜೆಪಿಯು ಮೂರನೇ ಸ್ಥಾನದಲ್ಲಿರುವುದರಿಂದ, ಮಿಕ್ಕ ರಾಜ್ಯಗಳಿಗಿಂತ ಕರ್ನಾಟಕವು ಇನ್ನೂ ತೀವ್ರವಾದ ಧ್ರುವೀಕರಣಕ್ಕೆ ಒಳಗಾಗಿದೆ. ಸಾಂಪ್ರದಾಯಿಕ ರಾಜಕಾರಣಕ್ಕಿಂತ ಭಿನ್ನವಾಗಿ ದೀರ್ಘಕಾಲಿಕ ಪರ್ಯಾಯದೆಡೆಗೆ ಮುಖ ಮಾಡಿ ನಡೆಯುತ್ತಿರುವ ರಾಜಕಾರಣಿಯಾಗಿ ರಾಹುಲ್ ಗಾಂಧಿ ಕಾಣುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಸದ್ಯದ ಚುನಾವಣಾ ರಾಜಕಾರಣದಲ್ಲಿ ಆರಕ್ಕೇರದೇ, ಮೂರರಿಂದ ನಾಲ್ಕಕ್ಕೇರಿ ಮತ್ತೆ ಮೂರಕ್ಕೇ ಮರಳುತ್ತಾ ಇಡೀ ದೇಶದಲ್ಲಿ ಖಚಿತ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಶಕ್ತವಾಗಿದೆ. ಆದರೆ, ಆರೆಸ್ಸೆಸ್ಸಿನ ಮತೀಯ ರಾಜಕಾರಣ, ಮಡಿಲ ಮಾಧ್ಯಮಗಳ ಒಮ್ಮುಖದ ಅಪಪ್ರಚಾರ ಮತ್ತು ಸಾಮಾಜಿಕ ಕ್ಷೋಭೆಯನ್ನು ತಡೆಯಲು ಬೇಕಾದ ಅಂತಃಶಕ್ತಿಯನ್ನು ಹೊಂದಿಲ್ಲ.

ಈ ರೀತಿಯ ಹಲವಾರು ಭಿನ್ನ ಭಿನ್ನ ವಲಯಗಳಲ್ಲಿ ಆದ ಬದಲಾವಣೆಯ ಗತಿಯ ಕುರಿತು ಸಾಕಷ್ಟು ಮಾಹಿತಿಯನ್ನು, ಅಂಕಿ-ಅಂಶಗಳನ್ನು ಇಲ್ಲಿ ತಂದು ಸುರಿಯಬಹುದು. ಇನ್ನೂ ಹತ್ತಾರು ಉದಾಹರಣೆಗಳ ಪಟ್ಟಿ ಮಾಡಬಹುದು. ಬಹಳ ದೀರ್ಘವಾದ ಲೇಖನವಾಗುವುದರಿಂದ, ಅದರ ಅಂತಿಮ ತಾತ್ಪರ್ಯವೇನೆಂದು ಮಾತ್ರ ನೋಡೋಣ.

ಸಾರಾಂಶದಲ್ಲಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1. ಬಿಡಿಬಿಡಿಯಾಗಿಯೂ, ಪ್ರತ್ಯೇಕವಾಗಿಯೂ ಕಾಣುವ ಮೇಲಿನ ಎಲ್ಲ ಸಂಗತಿಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ.

2. ಕರ್ನಾಟಕವು ಒಂದು ಪ್ರತ್ಯೇಕಿತ ದ್ವೀಪವಲ್ಲ. ದೇಶದ ಉಳಿದ ಭಾಗಗಳೂ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಅಷ್ಟೇ ಅಲ್ಲ, ಅಭಿವೃದ್ಧಿಯ ಮಾದರಿಯು ಜಗತ್ತಿನ ಬಹುತೇಕ ಭಾಗಗಳಲ್ಲಿ ಒಂದೇ ರೀತಿ ಇದೆ. ಇಡೀ ಪ್ರಪಂಚ ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೋ, ಯಾವ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆಯೋ ಅದೇ ದಿಕ್ಕಿನಲ್ಲಿ ಕರ್ನಾಟಕವೂ ಇದೆ.

3. ಕರ್ನಾಟಕದ ಸಮಾಜವು ಜಾತಿ, ವರ್ಗ, ಜೆಂಡರ್ ಅಸಮಾನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆಗಳನ್ನಿಟ್ಟು ಸಾಗಿತ್ತು. ಈಗ ಅದು ನಿಂತಿದೆ ಅಥವಾ ಹಿಂದಕ್ಕೆ ಸರಿದಿದೆ.

ಇದನ್ನೂ ಓದಿರಿ: ಸಂಕ್ರಮಣಕ್ಕಾಗಿ ‘ಬಲಿ’ ಕೇಳುತ್ತಿರುವ ಕಾಲ (ಭಾಗ-1)

4. ಅಸಮಾನತೆಯ ವಿರುದ್ಧ ನಡೆದ ಹೋರಾಟ, ಚಿಂತನೆ, ರಾಜಕಾರಣವು ಈ 50 ವರ್ಷಗಳ ಮೊದಲರ್ಧದಲ್ಲಿ ಕರ್ನಾಟಕದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಯಿತು. ಈಗ ತಂತ್ರಜ್ಞಾನ, ಆರ್ಥಿಕತೆಗಳಲ್ಲಿ ಆಗಿರುವ ಅಪಾರ ಬೆಳವಣಿಗೆಯ ಹೊರತಾಗಿಯೂ ಈ ಮೂರೂ ಆಯಾಮಗಳಲ್ಲಿ ಒಂದೋ ಸ್ಥಗಿತತೆ ಇದೆ ಅಥವಾ ಹಿನ್ನಡೆ ಅನುಭವಿಸುತ್ತಿದ್ದೇವೆ.

5. ಶಿಕ್ಷಣ, ಆರೋಗ್ಯ, ನಗರೀಕರಣ, ಸಂಪರ್ಕ ಸಾಧನಗಳು, ತಂತ್ರಜ್ಞಾನ – ಎಲ್ಲವೂ ಮಾರುಕಟ್ಟೆ ಶಕ್ತಿಗಳ ಅಗತ್ಯಕ್ಕೆ ತಕ್ಕಂತೆ ಪುನರ್ ರೂಪಿತಗೊಂಡಿವೆ. ದುಡಿವ ಸಮುದಾಯಗಳಿಗೆ ಜೀವದೊರಸೆ ಉಳಿಸಿಕೊಂಡು ದುಡಿಸುವುದಕ್ಕೆ ಎಷ್ಟು ಬೇಕೋ ಅಷ್ಟನ್ನು ನೀಡುತ್ತಾ, ವಿವಿಧ ರೀತಿಯ ಅಮಲನ್ನು ಪೂರೈಸುತ್ತಾ ಮಾರುಕಟ್ಟೆ ಮತ್ತು ವಿಕೃತ ಬಂಡವಾಳಶಾಹಿಯು ಅಪಾರ ಪ್ರಮಾಣದಲ್ಲಿ ಬೆಳೆಯುತ್ತಾ ಇದೆ.

image 4 6
ಸಾಂದರ್ಭಿಕ ಚಿತ್ರ

6. ಇಲ್ಲಿನ ರಾಜಕಾರಣವು ಕೊಳೆಯುತ್ತಿದೆ. ಬಲಪಂಥೀಯ ರಾಜಕಾರಣವು ಸಮಾಜದಲ್ಲಿ, ಸರ್ಕಾರದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮದಲ್ಲಿ ವಿಷಕಳೆಯಂತೆ ಆವರಿಸಿಕೊಳ್ಳುತ್ತಿದೆ. ಅದೇ ಸಂದರ್ಭದಲ್ಲಿ ಬಲಪಂಥೀಯವಲ್ಲದ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಅದಕ್ಕೆ ಪರಿಣಾಮಕಾರಿ ಪರ್ಯಾಯ ರೂಪಿಸುವುದರಲ್ಲಿ ಸೋತಿದೆ. ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಅಧಿಕಾರ ಬದಲಾವಣೆಯ ಸಂಪ್ರದಾಯದಂತೆ ಬೇರೆ ಬೇರೆ ಪಕ್ಷಗಳು ಅಧಿಕಾರ ಹಿಡಿಯುತ್ತವೆ. ತನ್ನ ಕಡೆಯಿಂದ ಕೋಮು ರಾಜಕಾರಣವನ್ನು ಕಾಂಗ್ರೆಸ್ ಮಾಡುವುದಿಲ್ಲ ಎಂಬುದನ್ನು ಹೊರತುಪಡಿಸಿದರೆ, ಆಡಳಿತದಲ್ಲಿ, ಭ್ರಷ್ಟಾಚಾರದಲ್ಲಿ ದೊಡ್ಡ ವ್ಯತ್ಯಾಸವಾಗುತ್ತಿಲ್ಲ.

7. ಇವೆಲ್ಲವನ್ನೂ ಅಲುಗಾಡಿಸಬಲ್ಲ ಚಿಂತನೆ, ಆಂದೋಲನ, ರಾಜಕಾರಣದ ಮತ್ತೊಂದು ಸಂಕ್ರಮಣಕ್ಕೆ ಈ ರಾಜ್ಯ ಕಾದಿದೆ. ಆದರೆ, ಅಂತಹದೊಂದು ಈಗಲೇ ಆಗಿಬಿಡುವ ಸಾಧ್ಯತೆ ಕಾಣುತ್ತಿಲ್ಲ. ಸಮಾಜವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದ ಸಾಮಾಜಿಕ, ರಾಜಕೀಯ ಶಕ್ತಿಗಳೆಲ್ಲವೂ ಕೋಮುವಾದದ ಅಪಾಯವನ್ನು ಮನಗಂಡು, ಯಥಾಸ್ಥಿತಿವಾದಿ ರಾಜಕೀಯ ಪಕ್ಷ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿವೆ. ಹೊಸ ರಾಜಕೀಯ ಪರ್ಯಾಯ ನಿರ್ಮಾಣಕ್ಕೆ ಬೇಕಾದ ಚೈತನ್ಯದ ಬಹುಪಾಲು ಆ ಕಡೆ ಮುಖಮಾಡಿ ನಿಂತಿದೆ.

ಇನ್ನೊಂದು ಸಂಕ್ರಮಣಕ್ಕೆ ಅಗತ್ಯವಿರುವುದೇನು?

ಅ. ಕರ್ನಾಟಕವೊಂದು ದ್ವೀಪವಲ್ಲ; ಭಾರತ ಮತ್ತು ಇಡೀ ಜಗತ್ತಿನ ಸಂಕೀರ್ಣ ಜಾಲದೊಳಗೆ ಇದೂ ಒಂದು ಭಾಗ ಎಂಬುದನ್ನು ಮೊದಲು ಗುರುತಿಸಬೇಕು.

ನಗರೀಕರಣ, ಆಧುನಿಕ ಅಭಿವೃದ್ಧಿ, ತಂತ್ರಜ್ಞಾನ, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ಹಣದ ಚಲಾವಣೆ, ವಿಕೃತಿ, ಪ್ರಕೃತಿಯ ಮೇಲಿನ ದಾಳಿ ಮತ್ತು ಪ್ರಕೃತಿ ಮನುಷ್ಯರಿಗೆ ಕೊಡುತ್ತಿರುವ ತಿರುಗೇಟು, ಮನುಷ್ಯ ಸಂಬಂಧಗಳು ಹಾಗೂ ಕೌಟುಂಬಿಕ ಸಂಬಂಧಗಳು – ಇವೆಲ್ಲವೂ ಇಡೀ ಪ್ರಪಂಚವನ್ನೇ ಬಾಧಿಸುತ್ತಿರುವಾಗ ಕರ್ನಾಟಕವಷ್ಟೇ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅಂತಹ ಪರಿಹಾರವು ಬಿಡಿಬಿಡಿಯಾಗಿ ಜಗತ್ತಿನಲ್ಲಿ ಎಲ್ಲೆಲ್ಲಿ ಹರಳುಗಟ್ಟುತ್ತಿದೆಯೋ ಅದರಿಂದೆಲ್ಲಾ ಆಯ್ದು ಒಂದು ‘ಕರ್ನಾಟಕ ಮಾದರಿ’ಯ ನಿರ್ಮಾಣ ಮಾಡಲು ಶುರು ಮಾಡುವುದಂತೂ ಸಾಧ್ಯ. ಒಂದಕ್ಕೊಂದು ಹೆಣೆದುಕೊಂಡಿರುವ ಇಡೀ ದೇಶದ ಮತ್ತು ಜಗತ್ತಿನ ಬದಲಾವಣೆಗಳ ಜೊತೆಗೇ ಕರ್ನಾಟಕದಲ್ಲೂ ಮಹತ್ತರ ಸಂಕ್ರಮಣ ಆಗುತ್ತದೆ. ಮಿಕ್ಕೆಲ್ಲಾ ಭಾಗಗಳಿಗೂ ದಾರಿ ತೋರಬಲ್ಲ, ಚಿಂತನೆಯನ್ನು, ಪ್ರಯೋಗವನ್ನು ಇಲ್ಲಿ ಆರಂಭಿಸಲು ಸಾಧ್ಯ.

ಆ. ಇದು ರಾಜಕೀಯಾರ್ಥಿಕ ಸಮಸ್ಯೆಯೂ ಹೌದು; ತಾತ್ವಿಕ ಹಾಗೂ ಅಧ್ಯಾತ್ಮಿಕ ಬಿಕ್ಕಟ್ಟೂ (Philosophical and spiritual crisis) ಹೌದು ಎಂಬುದನ್ನೂ ಗುರುತು ಮಾಡಬೇಕು.

ಇದನ್ನೂ ಓದಿರಿ: ‘ಟ್ರಾನ್ಸ್‌ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-1)

ರಾಜಕೀಯ, ಆರ್ಥಿಕ ಬದಲಾವಣೆಗಳ ಜೊತೆಗೆ, ತಾತ್ವಿಕ ಹಾಗೂ ಆಧ್ಯಾತ್ಮಿಕ ಪರಿಹಾರಗಳು ಒಟ್ಟುಗೂಡಿದಾಗ ಮಾತ್ರ ಪರಿಹಾರವಾಗಬಹುದಾದ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಕಳೆದ 25 ವರ್ಷಗಳಲ್ಲಿ ಮಾರುಕಟ್ಟೆ ಶಕ್ತಿಗಳು, ತಂತ್ರಜ್ಞಾನ ಪ್ರಪಂಚವನ್ನು ಭಾರೀ ಪ್ರಮಾಣದಲ್ಲಿ ಪ್ರಪಂಚವನ್ನು ನಿಯಂತ್ರಿಸ ಹೊರಟಿವೆ. ರಾಜಕಾರಣ, ತಾತ್ವಿಕ ಚಿಂತನೆ ಅಥವಾ ಅಧ್ಯಾತ್ಮಗಳು ಇದಕ್ಕೆ ದಾರಿ ತೋರುತ್ತಿಲ್ಲ. ಹೀಗಾಗಿ ಒಂದು philosophical ಬಿಕ್ಕಟ್ಟು ಇಡೀ ಪ್ರಪಂಚವನ್ನೂ, ಭಾರತವನ್ನೂ, ಕರ್ನಾಟಕವನ್ನೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣ ಹಾಗೂ ಸಮಾಜದಲ್ಲಿ ಬಲಪಂಥೀಯ, ಬ್ರಾಹ್ಮಣಶಾಹಿ, ವಿಕೃತ ಬಂಡವಾಳಶಾಹಿ ರಾಜಕಾರಣವು ಪ್ರವರ್ಧಮಾನಕ್ಕೆ ಬಂದಿವೆ. ಹಳೆಯ ಚಳವಳಿಗಳು, ಹಳೆಯ ಬಗೆಯ ರಾಜಕಾರಣ, ಹಳೆಯ ಬಗೆಯ ಚಳವಳಿಯನ್ನು ರೂಪಿಸುವ ಸಂಘಟನೆಗಳು ಮತ್ತು ಬದಲಾವಣೆಯ ಚಿಂತನೆಗಳು ಬಸವಳಿದು ನಿಸ್ತೇಜವಾಗಿವೆ. ಸಾಮಾಜಿಕ, ರಾಜಕೀಯಾರ್ಥಿಕ ರಚನೆ ಹಾಗೂ ಉತ್ಪಾದನಾ ಸಂಬಂಧಗಳಲ್ಲಿ ಬರುವ ಬದಲಾವಣೆಗಳು ಹಾಗೂ ವೈರುಧ್ಯಗಳು ಮನುಷ್ಯರ ಮನೋಭೂಮಿಕೆಯನ್ನು, ಬದಲಾವಣೆಗೆ ಬೇಕಾದ ತಳಹದಿಯನ್ನು ರೂಪಿಸುವುದು ವಾಸ್ತವ. ಆದರೆ, ಮನುಷ್ಯರ ಮನೋಭೂಮಿಕೆಯು ಸಾಮಾಜಿಕ, ರಾಜಕೀಯಾರ್ಥಿಕ ರಚನೆಗಳಲ್ಲೂ ಬದಲಾವಣೆ ತರಬೇಕಲ್ಲವೇ? ಇದರ ಅಗತ್ಯವನ್ನು ಗುರುತಿಸಬೇಕು.

ಇ. ಅಂತಹ ಬದಲಾವಣೆಯ ಸಾಧ್ಯತೆಯನ್ನು ಕಂಡುಕೊಳ್ಳಲು ಮೊದಲು ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆ ಪ್ರಶ್ನೆಗಳಲ್ಲಿ ಕೆಲವು ಈ ಕೆಳಕಂಡಂತೆ ಇರಬಹುದು.

ಜಗತ್ತಿನಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಜ್ಞಾನದಲ್ಲಿ ಕರ್ನಾಟಕದ ಪಾಲು ಎಷ್ಟು? ಹೊಸ ರಾಜಕೀಯ ಚಿಂತನೆ ಎಂದು ಕರೆಯಬಹುದಾದ್ದು ಈ ಇಪ್ಪತ್ತು ವರ್ಷಗಳಲ್ಲಿ ಕರ್ನಾಟಕದಿಂದ ಎಷ್ಟು ಹುಟ್ಟಿದೆ? ವರ್ಗ, ಜಾತಿ, ಜೆಂಡರ್ ಸಮಾನತೆ ಎಷ್ಟು ಸಾಧಿಸಿದ್ದೇವೆ? ಜಾತಿ ವಿನಾಶದ ಮಹತ್ವದ ಆಶಯದ ದಿಕ್ಕಿನಲ್ಲಿ ಎಷ್ಟು ಹೆಜ್ಜೆ ಹಾಕಿದ್ದೇವೆ? ಧಾರ್ಮಿಕ ಅಸಹಿಷ್ಣುತೆ ನಮ್ಮಲ್ಲಿ ಯಾವ ಪ್ರಮಾಣದಲ್ಲಿ ಇದೆ? ಕಲೆ, ಸಾಹಿತ್ಯ, ಸಿನೆಮಾದ ವಿಚಾರದಲ್ಲಿ ಏನಾದರೂ ಹೊಸ ಸೃಜನಶೀಲ ಬದಲಾವಣೆಗಳು ಸಾಧ್ಯವಾಗಿದೆಯೇ? ಇಡೀ ಪ್ರಪಂಚದಲ್ಲಿ ವಿನಾಶಕಾರಿ ಅಭಿವೃದ್ಧಿಯೇ ಆಳುತ್ತಿರುವಾಗ ಸುಸ್ಥಿರ ಬದುಕಿನ ಆವಿಷ್ಕಾರದಲ್ಲಿ ಮತ್ತು ಅದನ್ನು ಆಚರಣೆಗಿಳಿಸುವುದರಲ್ಲಿ ನಮ್ಮ ದಿಕ್ಕು ಬದಲಾಗಿದೆಯೇ? ಪ್ರಪಂಚದ ಅಸ್ತಿತ್ವ, ದೇವರ ಕುರಿತು ಹೊಸ ಆಲೋಚನೆಗಳೇನಾದರೂ ಬಂದಿವೆಯೇ? ಮನುಷ್ಯರು ಈ ಪೃಥ್ವಿಯನ್ನು ಸುಂದರಗೊಳಿಸುವ ಹಾಗೆ ಅವರಲ್ಲಿ ಒಳಿತನ್ನು ಬಿತ್ತುವ ಸಂಗತಿಗಳು ಕರ್ನಾಟಕದಿಂದೇನಾದರೂ ಹೊಮ್ಮಿದೆಯೇ? ನಮ್ಮ ಅಧಿಕಾರ ರಚನೆ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರವು ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳುತ್ತಿದೆ. ಇದನ್ನು ಬದಲಿಸಬಲ್ಲ ಸಂಚಲನವೇನಾದರೂ ಉಂಟಾಗಿದೆಯೇ? ಕಳೆದ 45 ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಅಧಿಕಾರ ಹಿಡಿದ ಹೊಸದು ಎನ್ನಬಹುದಾದ ಮೂರು ರಾಜಕೀಯ ಪ್ರಯೋಗಗಳಂಥವು (ಅಸ್ಸಾಂ ಗಣಪರಿಷತ್, ಬಹುಜನ ಸಮಾಜ ಪಕ್ಷ, ಆಮ್ ಆದ್ಮಿ ಪಕ್ಷ) ಕರ್ನಾಟಕದಲ್ಲೇನಾದರೂ ಹುಟ್ಟಿಕೊಂಡಿವೆಯೇ? ಈ ಮೂರನ್ನೂ ಮೀರಿದ ಹೊಸ ಪ್ರಯೋಗದ ಸ್ವರೂಪ ಏನಾಗಿರಬಹುದು? ಅದು ಹೊಸದೇ ಪಕ್ಷದಿಂದ ಆಗುತ್ತದೋ, ಹಳೆಯ ಪಕ್ಷದೊಳಗಿಂದಲೂ ಸಾಧಿಸಲು ಶಕ್ಯವೇ? ಮನುಷ್ಯರಲ್ಲಿ ಒಳಿತನ್ನು ಬಿತ್ತುವ ಹೊಸ ಆಧ್ಯಾತ್ಮಿಕ ವಿಧಾನಗಳೇನಾದರೂ ಈ ನೆಲದಲ್ಲಿ ಹುಟ್ಟುವ ಸಾಧ್ಯತೆಯಿದೆಯೇ?

ಈ. ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರದಲ್ಲೇ ಹೊಸ ಸಂಕ್ರಮಣವೂ ಉದಯವಾಗಲಿದೆ.

ಇದನ್ನೂ ಓದಿರಿ: ‘ರಾಹುಲ್ ದಾದಾ, ಬಂಗಾಳಕ್ಕೂ ಬನ್ನಿ..’ ಮತುವಾಗಳ ಮನವಿ, ಬಿಜೆಪಿಯಲ್ಲಿ ಆತಂಕ ತಂದಿದ್ದೇಕೆ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವತ್ತ ನಾವು ನಡೆದಾಗ ಮತ್ತು ಆ ಬದಲಾವಣೆ ಶುರುವಾಗುವ ಹೊತ್ತು ಬಂದಾಗ ಹೊಸ ಸಂಕ್ರಮಣ ಅವಸ್ಥೆ ಉಂಟಾಗಿದೆ ಎಂದರ್ಥ. ಇಲ್ಲದಿದ್ದರೆ ಸಮಾಜವು ಊಹೆಗೆ ನಿಲುಕದ ಪ್ರಮಾಣದಲ್ಲಿ ಬದಲಾಗಿದ್ದರೂ, ನಾವಿನ್ನೂ 20ನೇ ಶತಮಾನದ ಹಳವಂಡಗಳಲ್ಲೇ ಉಳಿದುಕೊಂಡಿದ್ದೇವೆಂದಾಗುತ್ತದೆ. 70ರ ದಶಕದ ಆರಂಭದಲ್ಲಿ, ಅಂದರೆ ಹೆಚ್ಚೂ ಕಡಿಮೆ ಈ ನಾಡಿಗೆ ಕರ್ನಾಟಕವೆಂದು ನಾಮಕರಣ ಆ ಆಚೀಚೆಯಲ್ಲಿ – ಅಂತಹ ಸಂಕ್ರಮಣ ಅವಸ್ಥೆ ಏರ್ಪಟ್ಟಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಚಳವಳಿಗಳ ದೃಷ್ಟಿಯಿಂದ, ತಾತ್ವಿಕ ಚಿಂತನೆಯ ದೃಷ್ಟಿಯಿಂದ ಅದೊಂದು ಸಂಕ್ರಮಣದ ಕಾಲಘಟ್ಟವಾಗಿತ್ತು. ಆ ಹೊತ್ತಿನ ಪರಿಹಾರಗಳೇ ಇವತ್ತಿನ ಸವಾಲುಗಳಿಗೆ ಉತ್ತರವಾಗಲಾರವು. ಏಕೆಂದರೆ, ಪ್ರಪಂಚದ ಇತಿಹಾಸದಲ್ಲಿ (ಬಹುಶಃ ಕೈಗಾರಿಕಾ ಕ್ರಾಂತಿಯ ನಂತರದ ಕಾಲಘಟ್ಟವನ್ನು ಹೊರತುಪಡಿಸಿದರೆ) ಭಾರೀ ಪ್ರಮಾಣದ ಬದಲಾವಣೆಯನ್ನು ಕಂಡಿರುವುದು ಈ 30 ವರ್ಷಗಳು. ಇಷ್ಟು ದೊಡ್ಡ ಬದಲಾವಣೆ ಸಮಾಜದಲ್ಲಿ ಆಗಿದ್ದ ಮೇಲೆ, ಚೇತೋಹಾರಿ ಮುನ್ನಡೆ ತರುವ ಚಿಂತನೆಯು ಹಳೆಯದ್ದಾಗಿರಲು ಹೇಗೆ ಸಾಧ್ಯ?

ಉ. ಅದಕ್ಕೆ ಕೆಲವು ಬಲಿಗಳ ಅಗತ್ಯವಿದೆ.

ಪಿತೃಹತ್ಯೆ ಎಂಬ ಒಂದು ಪರಿಕಲ್ಪನೆಯಿದೆ. ಹೊಸದಾರಿ ಕಂಡುಕೊಳ್ಳದೇ ಇರಲು ಕೆಲವು ಹಳೆಯ ಸಿಕ್ಕುಗಳು ನಮ್ಮನ್ನು ಕಟ್ಟಿಹಾಕಿರುತ್ತದೆ. ಅಂದರೆ, 20ನೇ ಶತಮಾನದ ಕೆಲವು ಹುಸಿ ಬೈನರಿಗಳಿಂದ, ಚಿಂತನೆಗಳ ಹೊರೆಯಿಂದ ಬಿಡಿಸಿಕೊಳ್ಳುವುದು. ಈ ದೇಶದಲ್ಲಿ, ಪ್ರಪಂಚದಲ್ಲಿ ಎರಡು ಸಂಗತಿಗಳ ನಡುವಿನ ಸಂಘರ್ಷ, ಇದು ಹುಟ್ಟಿದಾರಭ್ಯ ನಡೆದೇ ಇದೆ. ವರ್ಗದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ, ಭಾವನಾವಾದ ಮತ್ತು ಭೌತಿಕವಾದದ ನೆಲೆಯಲ್ಲಿ. ಈ ಸೈದ್ಧಾಂತಿಕ ಸಂಘರ್ಷ ಬದಲಾಗುವುದಿಲ್ಲ. ಆದರೆ, ಅದನ್ನು ಸಂಗ್ರಹಿಸಿ ಮುಂದಿಡುವ ಚಿಂತನೆಗಳು ಕಾಲ ಮತ್ತು ದೇಶಕ್ಕೆ ತಕ್ಕಂತೆ ಬದಲಾಗಬೇಕು. ಆದರೆ, 20ನೇ ಶತಮಾನದ ಪೂರ್ವಾರ್ಧದ ರಾಜಕೀಯ ಚಿಂತನೆಯೇ ಇಂದಿಗೂ ದೇಶದಲ್ಲಿ ಚಲಾವಣೆಯಲ್ಲಿದೆ. ಒಂದೆಡೆ ಗಾಂಧಿ, ಮಾರ್ಕ್ಸ್‌ ಮತ್ತು ಅಂಬೇಡ್ಕರ್ ವಾದಗಳು, ಇನ್ನೊಂದೆಡೆ ಸಾವರ್ಕರ್ ಚಿಂತನೆ. ಸದ್ಯ ದೇಶದಲ್ಲಿ ಸಾವರ್ಕರ್ ಚಿಂತನೆ ಮೇಲುಗೈ ಸಾಧಿಸಿದೆ, ಕರ್ನಾಟಕದಲ್ಲೂ ಸಹಾ. ಅದನ್ನೆದುರಿಸಲು ಆಧುನಿಕ ಭಾರತದ ರಾಜಕೀಯ ಚಿಂತನೆಯ ಮೂರು ಪುರೋಗಾಮಿ ಕವಲುಗಳು ಕಸಿಯಾಗಬೇಕು. ಅಷ್ಟೇ ಸಾಲದು. ಅದನ್ನು ಕಾಲದ ಜೊತೆಗೂ ಕಸಿ ಮಾಡಬೇಕು. ಸಹಜವಾಗಿ ಅದು ಹೊಸದೇ ಆಗಿರುತ್ತದೆ. ಅಂತಹ ಹೊಸತನದ ಚಿಂತನೆ ಹುಟ್ಟಲು ಅಡ್ಡಿಯಾಗಿರುವುದು ಹಳೆಯದರ ಜೊತೆಗಿರುವ ಸೆಳೆತ. ಈ ಸೆಳೆತದ ಬಲಿಯಾಗಲೇಬೇಕು. ಕನಿಷ್ಠ ಪಕ್ಷ ನಾವು 20ನೇ ಶತಮಾನದ ಹಳೆಯ ವಾಗ್ವಾದಗಳಿಂದ ಹೊರಬರಬೇಕು.

image 3 5
ಗಾಂಧಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್‌ (ಎಐ ಚಿತ್ರಗಳು)

ಮೊದಲನೆಯದಾಗಿ – ಮೊದಮೊದಲು ಗಾಂಧಿ, ಮಾರ್ಕ್ಸ್‌ ಮತ್ತು ಲೋಹಿಯಾರ ಚಿಂತನೆಗಳು ಕರ್ನಾಟಕದ ರಾಜಕೀಯ ಚಿಂತನೆಯನ್ನು ಪ್ರಭಾವಿಸಿದ್ದವು. ಮೊದಲ 25 ವರ್ಷಗಳ ದಲಿತ ಚಳವಳಿಯು ಈ ದೇಶದ ಉಳಿದ ಭಾಗ ಮರೆತು ಹೋಗಿದ್ದ, ಶತಮಾನದ ಜೀನಿಯಸ್ ಚಿಂತಕ ಅಂಬೇಡ್ಕರರನ್ನು ಮತ್ತೆ ಮುನ್ನೆಲೆಗೆ ತಂದಿತು. 21ನೇ ಶತಮಾನದಲ್ಲೂ, ಬಿಎಸ್‌ಪಿಯ ಮೂಲಕ ಹೊಸ ರಾಜಕಾರಣದ ಪ್ರಯೋಗವನ್ನೂ, ಯುವ ಚಿಂತಕರ ಮೂಲಕ ಹೊಸ ಚಿಂತನೆಯನ್ನೂ, ಕಲೆ-ಸಾಹಿತ್ಯ-ಸಿನೆಮಾವನ್ನೂ ಜೀವಂತವಾಗಿಟ್ಟಿದ್ದು ಇದೇ ಧಾರೆ. ಆದರೆ, ಈ ಶತಮಾನದ ಕಾಲುಶತಮಾನ ಕಳೆಯುವಷ್ಟರಲ್ಲಿ ಅದೂ ಸಹಾ ಒಕ್ಕಡೆ ನಿಂತಿದೆ. ಮುಂದಿನೆಲ್ಲಾ ಪ್ರಯೋಗಗಳಲ್ಲಿ ಬಾಬಾಸಾಹೇಬರು ಇದ್ದೇ ಇರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, 21ನೇ ಶತಮಾನಕ್ಕೆ ಇವೆಲ್ಲವನ್ನೂ ಕಸಿ ಮಾಡುವ ಕಾಲ ಬಂದಾಗಿದೆ.

ಎರಡನೆಯದಾಗಿ – ಹೊಸ ಪ್ರಯೋಗಗಳಿಗೆ ಮುಂದಾಗುವಾಗ ‘ಇದನ್ನು ಹೇಳಿದರೆ, ಈ ರೀತಿ ಮಾಡಿದರೆ ಎಲ್ಲಿ ನಾವು ನಮ್ಮದೇ ಬಳಗದಿಂದ ದಾಳಿಗೊಳಗಾಗುತ್ತೇವೆಯೋ, ಇದನ್ನು ಅಹಂಕಾರ ಎಂದು ಭಾವಿಸಬಹುದೋ’ ಎಂಬ ಹಿಂಜರಿಕೆ ನಮ್ಮನ್ನು ದಶಕಗಳ ಕಾಲ ಕಟ್ಟಿ ಹಾಕುತ್ತದೆ – ಅದು ಬಲಿಯಾಗಬೇಕು. ಈ ಶತಮಾನಕ್ಕೆ, ಬಹು ಸಮುದಾಯಗಳಿಗೆ, ಹೊಸ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು, ಭಾರತದಾಚೆಗೆ ಜಗತ್ತಿನೆಲ್ಲೆಡೆ ಲಭ್ಯವಿರುವ ಹೊಸ ದಾರಿಗಳ ಶೋಧದ ಅಗತ್ಯವಿದೆ. ಆ ಧೈರ್ಯವನ್ನೂ ಮಾಡಬೇಕು.

ಮೂರನೆಯದಾಗಿ – ನಮ್ಮದೇ ಪವಿತ್ರ ಶಿಶುವೊಂದನ್ನು (ಸಂಘಟನೆ ಯಾ ಪಕ್ಷ) ಹುಟ್ಟಿಸಿದರೆ ಅದರಿಂದ ಮಾತ್ರ ಬದಲಾವಣೆಯ ಹೊಸ ನಿನಾದ ಮೊಳಗಬಹುದು ಎಂಬ ಸೀಮಿತ ಆಲೋಚನೆಯೂ ಬಲಿಯಾಗಬೇಕು. ಹಳೆಯ ಚಿಂತನೆ ಮಾತ್ರವಲ್ಲಾ, ಹಳೆಯ ಸಂಘಟನಾ ಮಾದರಿಗಳು – ಚಳವಳಿಯ ಮಾದರಿಗಳು ಸಹಾ ಬದಲಾಗಬೇಕು. ಅಸ್ತಿತ್ವದಲ್ಲಿರುವ ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ಶಕ್ತಿಯನ್ನು ಹೊಸ ರೀತಿಯಲ್ಲಿ ಸಾಣೆ ಹಿಡಿಯಬೇಕು.

ಇದನ್ನೂ ಓದಿರಿ: ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)

ನಾಲ್ಕನೆಯದಾಗಿ – ವಿಮೋಚನೆಗೆ ತಹತಹಿಸುವ ಸಮುದಾಯಗಳು ಬಿರುಗಾಳಿಯಂತೆ ಬೀಸಿ ತಾವೂ ಬಿಡುಗಡೆಗೊಂಡು, ಮಿಕ್ಕವರನ್ನೂ ಜೊತೆಗೊಯ್ಯುವ ಶಕ್ತಿಯನ್ನು ಹೊಂದಿರುತ್ತವೆ. ದಲಿತರು ಮತ್ತು ಮುಸ್ಲಿಮರು ಅಂತಹ ಸಾಧ್ಯತೆಗಳನ್ನು ಈಗಾಗಲೇ ತೋರಿಸುತ್ತಿದ್ದಾರೆ. ಅಂತಹುದೇ ಅಪಾರ ಸಾಧ್ಯತೆ ಇರುವುದು ಮಹಿಳಾ ಸಂಕುಲಕ್ಕೆ. ಆ ಸಮೂಹ ಅಂತಹ ಬೀಸಿನೊಂದಿಗೆ ಇಡೀ ಸಮಾಜದಲ್ಲಿ ಬದಲಾವಣೆ ತರಲು ಶಕ್ತವಾಗಿದೆಯೇ ಎಂದು ಪರಿಶೀಲನೆಗೆ ಒಳಗಾಗಬೇಕು. ಯಾವುದೋ ಒಂದು ಬಿಡಿ ಸಮುದಾಯ ಅದನ್ನು ಮಾಡಲು ಶಕ್ಯವಲ್ಲವೆಂದಾದರೆ, ಪರಿಣಾಮಕಾರಿಯಾದ ಹೊಸ ಸಾಮಾಜಿಕ, ರಾಜಕೀಯ ಮೈತ್ರಿಗಳು ಏನೇನಾಗಿರಬಹುದು ಎಂಬ ಶೋಧವು ನಡೆಯಬೇಕು. ಕೆಲವರನ್ನು (ಸಮುದಾಯಗಳು) ಹೊರಗಿಡುವ ಯಾವುದೇ ಮಾದರಿಗಳು ಸಮಾಜ ಅಥವಾ ದೇಶ ಕಟ್ಟಲು ಪ್ರಯೋಜನವಾಗದು. ಆದರೆ, ಕೆಲವನ್ನು (ಅಪಾಯಕಾರಿ ಧೋರಣೆಗಳು, ಚಿಂತನೆಗಳು) ಹೊರಗಿಡಬೇಕು. ಇಲ್ಲಿ ಬಲಿಯಾಗಬೇಕಾದ್ದು exclusivity.

ಐದನೆಯದಾಗಿ – ಎಲ್ಲ ಕಾಲಮಾನದಲ್ಲೂ ಪೀಳಿಗೆಯಿಂದ ಪೀಳಿಗೆಗೆ ವಿಚಾರ, ಅಭಿರುಚಿ, ಆದ್ಯತೆಗಳಲ್ಲಿ ಅಂತರ ಇದ್ದೇ ಇರುತ್ತದೆ. ಆದರೆ, ಈಗಿನ ಯುವತಲೆಮಾರು ಮತ್ತು ಸೀನಿಯರುಗಳ ನಡುವೆ ಹಿಂದೆಂದಿಗಿಂತಲೂ ದೊಡ್ಡ ಅಂತರ ಇರುವುದು ಎದ್ದು ಕಾಣುತ್ತದೆ. ಅದನ್ನು ಸರಿಪಡಿಸಿಕೊಳ್ಳುವ ಹೊಣೆ ಸಹಜವಾಗಿ ಸೀನಿಯರುಗಳದ್ದೇ. ಅದಕ್ಕೆ ಅಗತ್ಯವಿರುವುದೇನೆಂದರೆ – ಹೊಸ ತಲೆಮಾರಿನ ಅಜೆಂಡಾ ರೂಪಿಸಲು ನಾಯಕತ್ವದಲ್ಲೂ ಅವರನ್ನೇ ಪ್ರಧಾನವಾಗಿ ಒಳಗೊಳ್ಳುವುದು. ಇಲ್ಲಿ ಅಗತ್ಯವಿರುವುದು ಸೀನಿಯಾರಿಟಿಯ ಬಲಿ.

ಬಹಳ ಮುಖ್ಯವಾಗಿ, ರಾಜಕಾರಣವು – ಚುನಾವಣೆ, ರಚನಾತ್ಮಕ ಕೆಲಸ, ಚಿಂತನೆ, ಅಭಿವೃದ್ಧಿಯ ಮುನ್ನೋಟ, ಅಧ್ಯಾತ್ಮ ಹಾಗೂ ಆಂದೋಲನಗಳನ್ನೆಲ್ಲಾ ಒಳಗೊಂಡ ಸಮಗ್ರ ಬದಲಾವಣೆಯ ಅಸ್ತ್ರವಾಗಬೇಕೇ ಹೊರತು, ಅಧಿಕಾರ ಹಾಗೂ ಹಣದಾಸೆಗೆ ನಡೆಸುವ ವ್ಯವಹಾರವಾಗದಂತೆ ನೋಡಿಕೊಳ್ಳಬೇಕು. ಇಲ್ಲಿ ಅಗತ್ಯವಿರುವುದು ಬಲಿಯಲ್ಲ; ಬೆಸುಗೆ. ಅದನ್ನು ಸಾಧಿಸಬೇಕು.

ಹರಿವ ನೀರಿನಲ್ಲಿ ಕಾಲಿಟ್ಟಾಗ ಪ್ರತಿ ಕ್ಷಣವೂ ಹೊಸ ನೀರನ್ನೇ ನಾವು ಸ್ಪರ್ಶಿಸುತ್ತಿರುತ್ತೇವೆ. ಚರಿತ್ರೆಯ ಈ ಕಾಲಘಟ್ಟವೂ ಹೊಸದಾಗಿಯೇ ನಮ್ಮೆದುರು ಬಂದು ನಿಂತಿದೆ. ಹಾಗಾಗಿ, ಹಿಂದಿನ ಅನುಭವವೆಲ್ಲದರ ಪಾಠಗಳು ಮತ್ತು ಅರಿವು ನಮ್ಮ ಬೆನ್ನಿಗಿರಲೇಬೇಕು; ನಡಿಗೆ ಮಾತ್ರ ಇಂದಿನದೇ ಆಗಿರಬೇಕು. ಈ ನಾಡಿಗೆ ಅಂತಹ ಚೈತನ್ಯವಿದೆ. ಆ ಮೂಲಕ ಇಡೀ ದೇಶ ಮತ್ತು ಜಗತ್ತಿನ ಜೊತೆಗೆ ಒಂದು ಮಾದರಿಯನ್ನು ಕಟ್ಟಿಕೊಳ್ಳುತ್ತಾ ಸಾಗಬೇಕಿದೆ.

ಹೊಸ ಮಾದರಿ ಸೃಷ್ಟಿಯಾಗಬೇಕೆಂದರೆ, ಹಳೆಯದರಿಂದ ಹರಿದುಕೊಳ್ಳುವ ಧೈರ್ಯ ಬೇಕು. ಆ ಛಾತಿಯನ್ನು ಕರ್ನಾಟಕ ತೋರಿಸಿದ ದಿನ ಹೊಸ ಸಂಕ್ರಮಣ ಸನಿಹದಲ್ಲೇ ಕಾಣುತ್ತದೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 12 18 at 19.04.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...