‘ಸಿಲಿಕಾನ್ ವ್ಯಾಲಿ ಬೆಂಗಳೂರು’ ಎಂಬ ವಿಸ್ಮಯ!

Date:

ʼಭಾರತದ ಸಿಲಿಕಾನ್‌ ವ್ಯಾಲಿʼ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು, ಜಗತ್ತಿನ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಹೆಸರಾಗಿದೆ. ಒಂದೆಡೆ ಬೆಂಗಳೂರು- ಐಟಿ ಸೇವೆಗಳು ಮತ್ತು ಹೊರಗುತ್ತಿಗೆಯ ಜಾಗತಿಕ ಕೇಂದ್ರವಾಗಿ ಬೆಳೆದಿದ್ದರೆ, ಇನ್ನೊಂದೆಡೆ ವೈವಿಧ್ಯಪೂರ್ಣ ಆವಿಷ್ಕಾರಗಳು ಮತ್ತು ಉತ್ಪನ್ನ-ಕೇಂದ್ರಿತ ಕಂಪನಿಗಳಿಗೆ ಹೆಸರುವಾಸಿಯಾಗುತ್ತಿದೆ. ಹೀಗೆ ಈ ಎರಡೂ ವಿಭಿನ್ನ ವಾತಾವರಣಗಳೊಂದಿಗೆ ಬೇರೆ ಬೇರೆ ಆದ್ಯತೆಗಳನ್ನು ಸಾಧಿಸಲು ಹೊರಟಿರುವ ಬೆಂಗಳೂರನ್ನು ಸಿಲಿಕಾನ್‌ ವ್ಯಾಲಿಯೊಂದಿಗೆ ಮತ್ತೆ ಮತ್ತೆ ಹೋಲಿಕೆ ಮಾಡುವಾಗ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಈ ಲೇಖನವು ಬೆಂಗಳೂರಿನ ತಂತ್ರಜ್ಞಾನ ಕ್ಷೇತ್ರದ ಇತಿಹಾಸ, ಬೆಳವಣಿಗೆ ಮತ್ತು ಅದರ ಸದ್ಯದ ಸ್ಥಿತಿಯನ್ನು ವಿಶ್ಲೇಷಿಸುತ್ತದೆ ಮತ್ತು ಬೆಂಗಳೂರಿಗೆ ‘ಸಿಲಿಕಾನ್ ವ್ಯಾಲಿ’ ಎಂಬ ಹೆಸರಿಗೆ ತಕ್ಕಂತೆ ಬದುಕಲು ಏನು ಬೇಕು ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ಸಂಸ್ಥಾಪನಾ ವರ್ಷ (1970-1980); ಆರಂಭಿಕ ಐಟಿ ದಿಗ್ಗಜರು

1970ರ ದಶಕದಲ್ಲಿ ತಂತ್ರಜ್ಞಾನ ಕ್ಷೇತ್ರದೆಡೆಗೆ ಬೆಂಗಳೂರು ತನ್ನ ಪಯಣವನ್ನು ಆರಂಭಿಸಿತು. ಈ ಮಹಾನಗರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಈ ವೇಳೆಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಂತಹ ಹಲವಾರು ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ನೆಲೆಯನ್ನು ಕಲ್ಪಿಸಿತ್ತು. ಹೆಚ್ಚು ನುರಿತ ತಾಂತ್ರಿಕ ಕಾರ್ಯಪಡೆಯೊಂದು ಬೆಳೆಯಲು ಈ ಸಂಸ್ಥೆಗಳು ಕೊಡುಗೆ ನೀಡಿದವು. ಕಾಲಾಂತರದಲ್ಲಿ ಇದು ಅಭಿವೃದ್ಧಿ ಹೊಂದುತ್ತಿದ್ದ ಐಟಿ ಉದ್ಯಮಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1980ರ ದಶಕದ ಆರಂಭದಲ್ಲಿ ವಿಪ್ರೋ ಇನ್ಫರ್ಮೇಷನ್ ಟೆಕ್ನಾಲಜಿ ಲಿಮಿಟೆಡ್ (ಡಬ್ಲೂಐಟಿಎಲ್) ಮತ್ತು ಪಿಎಸ್‌ಐ ಡೇಟಾ ಸಿಸ್ಟಮ್ಸ್‌ನಂತಹ ಕಂಪನಿಗಳು ಹಾರ್ಡ್‌ವೇರ್ ಉತ್ಪಾದನೆ, ಸಾಫ್ಟ್‌ವೇರ್ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಆರಂಭಿಕ ಖಾಸಗಿ ವಲಯದ ಕಂಪನಿಗಳಾಗಿ ಹೊರಹೊಮ್ಮಿದವು. ಹಾಗಿದ್ದೂ ಬೆಂಗಳೂರಿನಲ್ಲಿ 1985ರಲ್ಲಿ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದ್ದು ಮಹತ್ವದ ತಿರುವಾಯಿತು. ಆ ಮೂಲಕ ನಗರದ ಟೆಕ್ ಪರಿಸರ ವ್ಯವಸ್ಥೆಗೆ ಮೊದಲ ಬಹುರಾಷ್ಟ್ರೀಯ ಕಂಪನಿಯ ಪ್ರವೇಶವಾಗಿತ್ತು. ಭವಿಷ್ಯದಲ್ಲಿ ವಿದೇಶಿ ಹೂಡಿಕೆಗಳಿಗೆ ಬಾಗಿಲು ತೆರೆಯುವ ಮೂಲಕ ಈ ಘಟನೆಯು ಮಹತ್ವದ ಬೆಳೆವಣಿಗೆಯಾಯಿತು ಮತ್ತು ಬೆಂಗಳೂರನ್ನು ತಂತ್ರಜ್ಞಾನದ ಕೇಂದ್ರವಾಗಿ ಬೆಳೆಸಲು ದಾರಿ ಹಾಕಿಕೊಟ್ಟಿತು.

ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್‌ ಸಂಸ್ಥೆ

ಉದಾರೀಕರಣ ಮತ್ತು ಐಟಿ ಸೇವೆಗಳ ಬೆಳವಣಿಗೆ (1990)

1991ರಲ್ಲಿ ಭಾರತದಲ್ಲಿ ನಡೆದ ಆರ್ಥಿಕ ಉದಾರೀಕರಣದ ನಂತರ ತೊಂಬತ್ತರ ದಶಕದಲ್ಲಿ ಬೆಂಗಳೂರಿನ ತಂತ್ರಜ್ಞಾನದ ಸ್ವರೂಪದಲ್ಲಿ ನಿಜವಾದ ರೂಪಾಂತರ ಘಟಿಸಿತು. ಉದಾರೀಕರಣ ನೀತಿಗಳು ವಿದೇಶಿ ಹೂಡಿಕೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟವು. ಇದರಿಂದಾಗಿ ಭಾರತೀಯ ಮಾರುಕಟ್ಟೆಗೆ ಐಬಿಎಂ, ಮೋಟೊರೋಲ, ಇಂಟೆಲ್‌ನಂತಹ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶಕ್ಕೆ ದಾರಿ ಸುಗಮವಾಯಿತು. ಇನ್ಫೋಸಿಸ್ ಮತ್ತು ವಿಪ್ರೋದಂತಹ ದೇಶೀಯ ಐಟಿ ಕಂಪನಿಗಳು ಈ ಹೊಸ ವ್ಯವಸ್ಥೆಯ ಲಾಭ ಪಡೆದುಕೊಂಡವು. ಇವುಗಳ ತೀವ್ರಗತಿಯ ಬೆಳವಣಿಗೆಯು ಐಟಿ ಕೇಂದ್ರವಾಗಿ ಬೆಂಗಳೂರಿಗಿದ್ದ ಕೀರ್ತಿಯನ್ನು ಭದ್ರಪಡಿಸಿದವು.

ಇದನ್ನೂ ಓದಿರಿ: ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ್ ಮಂದಿ? (ಭಾಗ-1)

1981ರಲ್ಲಿ ಎನ್.ಆರ್. ನಾರಾಯಣ ಮೂರ್ತಿಯವರು ಸ್ಥಾಪಿಸಿದ ಇನ್ಫೋಸಿಸ್ ಭಾರತೀಯ ಐಟಿ ಯಶಸ್ಸಿನ ಜಾಗತಿಕ ಸಂಕೇತವಾಯಿತು. ಈ ಸಂಸ್ಥೆ ಕಡಲಾಚೆಯ ಹೊರಗುತ್ತಿಗೆ ಮಾದರಿಗೆ ಹೊಸ ಭಾಷ್ಯ ಬರೆಯಿತು. ಭಾರತೀಯ ಎಂಜಿನಿಯರ್‌ಗಳು ಅಂತಾರಾಷ್ಟ್ರೀಯ ಗ್ರಾಹಕರಿಗಾಗಿ ಸಾಫ್ಟ್‌ವೇರನ್ನು ಅಭಿವೃದ್ಧಿಪಡಿಸುವ ಈ ಹೆಜ್ಜೆಯು ಕಂಪನಿಗಳ ಮೇಲಿನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿತು. 1999ರಲ್ಲಿ ಎನ್‌ಎಎಸ್‌ಡಿಎಕ್ಯೂನಲ್ಲಿ ಪಟ್ಟಿಮಾಡಲ್ಪಟ್ಟ ಮೊದಲ ಭಾರತೀಯ ಕಂಪನಿಯಾದಾಗ ಇನ್ಫೋಸಿಸ್‌ನ ಯಶಸ್ಸಿನ ಕಿರೀಟಕ್ಕೆ ಗರಿಯೊಂದು ಬಂತು. ಇದಾದ ಪರಿಣಾಮ, ಈ ಕಂಪನಿಗೆ ಗಣನೀಯ ಪ್ರಮಾಣದ ಬಂಡವಾಳ ಹರಿದುಬಂತು, ಜೊತೆಗೆ ಭಾರತೀಯ ಐಟಿ ಕಂಪನಿಗಳಿಗೆ ಜಾಗತಿಕ ಮಾದರಿಯೂ ಗುರುತಿಸಿಕೊಂಡಿತು. ಈ ಅವಧಿಯಲ್ಲಿ ಐಟಿ ಸೇವೆಗಳು ಮತ್ತು ಹೊರಗುತ್ತಿಗೆಯ ಜಾಗತಿಕ ಕೇಂದ್ರವಾಗಿ ಬೆಂಗಳೂರಿನ ಅಭಿವೃದ್ಧಿಯ ವೇಗ ಹೆಚ್ಚಾಗಲು ಆರಂಭವಾಯಿತು. ಟಿಸಿಎಸ್‌, ವಿಪ್ರೋ ಮತ್ತು ಎಂಫಾಸಿಸ್‌ನಂತಹ ಕಂಪನಿಗಳು ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ತಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಂಡವು.

infosys
ಎನ್.ಆರ್. ನಾರಾಯಣ ಮೂರ್ತಿಯವರು ಸ್ಥಾಪಿಸಿದ ಇನ್ಫೋಸಿಸ್

1990ರ ದಶಕದ ಕೊನೆಯಲ್ಲಿ ಭಾರತದ ಐಟಿ ಉದ್ಯಮವು ಶತಕೋಟಿ ಡಾಲರ್ (ಇಂದಿನ ರೂಪಾಯಿ ಮೌಲ್ಯದಲ್ಲಿ 8,500 ಕೋಟಿ ರುಪಾಯಿ) ಆದಾಯವನ್ನು ಗಳಿಸಲು ಆರಂಭಿಸಿತು. ಇದರಲ್ಲಿ ಬೆಂಗಳೂರಿನ ಪಾಲೇ ಹೆಚ್ಚು. ಪರಿಣಾಮಕಾರಿ ವೆಚ್ಚದ ಸಾಫ್ಟ್‌ವೇರ್ ಸೊಲ್ಯೂಷನ್ಸ್‌ಗೆ ನಗರದ ವಾತಾವರಣವೂ ಪೂರಕವಾಗಿತ್ತು. ಹೀಗಾಗಿ ಬೆಂಗಳೂರು ವಿಶ್ವಾದ್ಯಂತ ಐಟಿ ಹೊರಗುತ್ತಿಗೆ ಕ್ಷೇತ್ರದಲ್ಲಿ ನಡೆದ ಕ್ರಾಂತಿಗೆ ಚಾಲನೆಯೊಂದನ್ನು ನೀಡಿತು.

ಸೇವಾ ವಲಯಗಳಲ್ಲಿ ಉತ್ಕರ್ಷ ಮತ್ತು ಜಾಗತಿಕ ವಿಸ್ತರಣೆ (2000)

2000ರ ದಶಕದ ಆರಂಭದಲ್ಲಿ ಬೆಂಗಳೂರಿನ ಐಟಿ ಸೇವೆಗಳ ವಲಯದಲ್ಲಿ ಒಂದು ದೊಡ್ಡ ಏರಿಕೆ ಕಂಡುಬಂದಿತು. Y2K ಬಗ್ ಮತ್ತು ಡಾಟ್-ಕಾಮ್ ಬೂಮ್‌ನ ಆರಂಭದೊಂದಿಗೆ ಸಾಫ್ಟ್‌ವೇರ್ ಸೇವೆಗಳಿಗಿದ್ದ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು. ಇವುಗಳನ್ನು ಪೂರೈಸುವ ಅತ್ಯುತ್ತಮ ಐಟಿ ಕಂಪನಿಗಳು ಬೆಂಗಳೂರಿನಲ್ಲಿದ್ದವು. ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್‌ನಂತಹ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಿ, ಸಾವಿರಾರು ಎಂಜಿನಿಯರ್‌ಗಳನ್ನು ನೇಮಿಸಿಕೊಂಡವು ಹಾಗೂ ಯುಎಸ್, ಯುರೋಪ್‌ನಲ್ಲಿರುವ ಗ್ರಾಹಕರಿಗೆ ಕಡಲಾಚೆಯ ಸಾಫ್ಟ್‌ವೇರ್ ಅಭಿವೃದ್ಧಿಯನ್ನು ಒದಗಿಸಿದವು.

ಅದೇ ಸಮಯದಲ್ಲಿ ‘ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ (Business Process Outsourcing -BPO)’ ವಲಯವು ಆರಂಭವಾಯಿತು. ಕಸ್ಟಮರ್‌ ಸಪೋರ್ಟ್‌ನಿಂದ ಹಿಡಿದು ಆರ್ಥಿಕ ಪ್ರಕ್ರಿಯೆಯವರೆಗಿನ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಜಾಗತಿಕ ಕೇಂದ್ರವಾಗಿ ಬೆಂಗಳೂರು ಗುರುತಿಸಿಕೊಂಡಿತು. ಜೆನ್‌ಪ್ಯಾಕ್ಟ್, ಕನ್ವರ್ಗಿಸ್ ಮತ್ತು ಡಬ್ಲ್ಯೂಎನ್‌ಎಸ್‌ನಂತಹ ಕಂಪನಿಗಳು ಬೆಂಗಳೂರಿನ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಬೃಹತ್ ಕಾರ್ಯವಲಯವನ್ನು ಸ್ಥಾಪಿಸಿದವು.

ಇದನ್ನೂ ಓದಿರಿ: ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ ಮಂದಿ? (ಭಾಗ-2)

2000 ದಶಕದ ಮಧ್ಯದಲ್ಲಿ ಭಾರತದ ಐಟಿ ಉದ್ಯಮವು ವಾರ್ಷಿಕವಾಗಿ 16 ಶತಕೋಟಿ ಡಾಲರ್‌ಗಿಂತಲೂ (ಇಂದಿನ ರುಪಾಯಿ ಮೌಲ್ಯದಲ್ಲಿ 1.36 ಲಕ್ಷ ಕೋಟಿ ರುಪಾಯಿ) ಹೆಚ್ಚಿನ ಆದಾಯವನ್ನು ಗಳಿಸುತ್ತಿತ್ತು. ಸಾಫ್ಟ್‌ವೇರ್ ರಫ್ತಿನ ಪ್ರಾಥಮಿಕ ಕೇಂದ್ರವಾಗಿ ಬೆಂಗಳೂರು ಪ್ರಾಬಲ್ಯವನ್ನು ಸಾಧಿಸಿತು. ಗೂಗಲ್, ಮೈಕ್ರೋಸಾಫ್ಟ್, ಸಿಸ್ಕೋದಂತಹ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನ ಪ್ರತಿಭೆಗಳಿಗೆ ಮತ್ತು ಇಲ್ಲಿನ ಸ್ಪರ್ಧಾತ್ಮಕ ವೆಚ್ಚಗಳಿಗೆ ಆಕರ್ಷಿತವಾಗಿ ಈ ಮಹಾನಗರದಲ್ಲಿ ಸಂಶೋಧನೆ- ಅಭಿವೃದ್ದಿ ಕೇಂದ್ರಗಳನ್ನು‌ (ಆರ್‌&ಡಿ) ಸ್ಥಾಪಿಸಿದವು. ಈ ಎಲ್ಲ ಬೆಳವಣಿಗೆಗಳು ಬೆಂಗಳೂರನ್ನು ಸಾಫ್ಟ್‌ವೇರ್ ಸೇವೆಗಳಲ್ಲಿ ಪ್ರಮುಖ ಸ್ಥಾನಕ್ಕೆ ಏರಿಸಿದವು, ಜೊತೆಗೆ ಜಾಗತಿಕ ಐಟಿ ಸೇವೆಗಳ ಮಾರುಕಟ್ಟೆಯ ಪ್ರಮುಖ ಸ್ಥಾನವಾಗಿಯೂ ಬೆಂಗಳೂರು ಹೊಮ್ಮಿತು.

ಸ್ಟಾರ್ಟ್ಅಪ್ ಬೂಮ್ (2010ರ ದಶಕ ): ಇ-ಕಾಮರ್ಸ್ ಮತ್ತು ಸಾಸ್ (SaaS)

2010ರ ದಶಕದಲ್ಲಿ ಬೆಂಗಳೂರು ಸ್ಟಾರ್ಟ್ಅಪ್‌ಗಳ ಪ್ರಮುಖ ಭೂಮಿಕೆಯಾಗಿ ಗುರುತಿಸಲ್ಪಟ್ಟಿತು. ಐಟಿ ಸೇವೆಗಳು ನಗರದ ಆರ್ಥಿಕ ಪೋಷಣೆಯಲ್ಲಿ ಪ್ರಮಖ ಪಾತ್ರವಹಿಸಿದವು. ಬೆಂಗಳೂರಿನಲ್ಲಿ ಉತ್ಪನ್ನ-ಕೇಂದ್ರಿತ ಸ್ಟಾರ್ಟ್‌ಅಪ್‌ಗಳ ಹೊಸ ಅಲೆ ಎದ್ದು ನಾವೀನ್ಯತೆ ಮತ್ತು ಉದ್ಯಮಶೀಲತೆಯತ್ತ ಈ ಮಹಾನಗರ ಸಾಗಿತು. ಈ ಕಾಲಘಟ್ಟದಲ್ಲಿ 2007ರಲ್ಲಿ ಸ್ಥಾಪಿಸಲಾದ ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ಭಾರತದ ಅತಿದೊಡ್ಡ ಆನ್‌ಲೈನ್ ಮಾರುಕಟ್ಟೆಯಾಗಿ ಬದಲಾಗಿ ಇ-ಕಾಮರ್ಸ್ ವಲಯವು ಮುಂಚೂಣಿಗೆ ಬಂತು. 2018ರಲ್ಲಿ ವಾಲ್‌ಮಾರ್ಟ್‌ 16 ಶತಕೋಟಿ ಡಾಲರ್‌ಗೆ (ಇಂದಿನ ರುಪಾಯಿ ಮೌಲ್ಯದಲ್ಲಿ 1.36 ಲಕ್ಷ ಕೋಟಿ ರುಪಾಯಿ) ಫ್ಲಿಪ್‌ಕಾರ್ಟನ್ನು ಸ್ವಾಧೀನಪಡಿಸಿಕೊಂಡಿದ್ದು, ಜಾಗತಿಕವಾಗಿ ಮಹತ್ವದ ಕಂಪನಿಗಳನ್ನು ಉತ್ಪಾದಿಸುವ ಬೆಂಗಳೂರಿನ ಸಾಮರ್ಥ್ಯವನ್ನು ತೋರಿಸುವುದಕ್ಕೆ ಉದಾಹರಣೆಯಾಗಿದೆ.

ಸಾಸ್ (SaaS‌ – ಸಾಫ್ಟ್‌ವೇರ್ ಆಸ್ ಎ ಸರ್ವೀಸ್) ಜಾಗದಲ್ಲಿ ಫ್ರೆಶ್‌ವರ್ಕ್ಸ್ ಮತ್ತು ಪೋಸ್ಟ್‌ಮ್ಯಾನ್‌ನಂತಹ ಕಂಪನಿಗಳು ತಮ್ಮ ಛಾಪನ್ನು ಮೂಡಿಸಿದವು. 2010ರಲ್ಲಿ ಸ್ಥಾಪನೆಯಾದ ಫ್ರೆಶ್‌ವರ್ಕ್ಸ್, 2021ರಲ್ಲಿ ಎನ್‌ಎಎಸ್‌ಡಿಎಕ್ಯೂನಲ್ಲಿ ಯಶಸ್ವಿ ಐಪಿಒ (IPO- ಇನಿಷಿಯಲ್‌ ಪಬ್ಲಿಕ್‌ ಆಫರಿಂಗ್) ನೊಂದಿಗೆ 13 ಶತಕೋಟಿ ಡಾಲರ್ ಮೌಲ್ಯದ ವಹಿವಾಟನ್ನು ತಲುಪುವುದರೊಂದಿಗೆ ಭಾರತದ ಮೊದಲ ಸಾಸ್ ಯೂನಿಕಾರ್ನ್ ಆಯಿತು. ‌ಎಪಿಐ (API- ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್‌ ಫೇಸ್) ಟೆಸ್ಟ್‌ಗಾಗಿ ಒಂದು ಸೈಡ್ ಪ್ರಾಜೆಕ್ಟ್ ಆಗಿ ಆರಂಭವಾದ ಪೋಸ್ಟ್‌ಮ್ಯಾನ್, ಇಂದು ಲಕ್ಷಾಂತರ ಡೆವಲಪರ್‌ಗಳು ಬಳಸುವ ಜಾಗತಿಕ ವೇದಿಕೆಯಾಗಿ ವಿಕಸನಗೊಂಡಿತು. 2021ರ ವೇಳೆಗೆ 5.6 ಶತಕೋಟಿ ಡಾಲರ್ (ಇಂದಿನ ರುಪಾಯಿ ಮೌಲ್ಯದಲ್ಲಿ 47,600 ಕೋಟಿ ರುಪಾಯಿ) ಉದ್ಯಮವಾಗಿ ಇದು ಬೆಳೆಯಿತು.

ಈ ಅವಧಿಯಲ್ಲಿ ಕೇವಲ ಒಂದು ಸೇವಾ ಕೇಂದ್ರವಾಗಿದ್ದ ಬೆಂಗಳೂರು ಮಹಾನಗರ, ಉದ್ಯಮಶೀಲ ನಗರವಾಗಿ ರೂಪುಗೊಂಡಿತು. ಇ-ಕಾಮರ್ಸ್, ಸಾಸ್, ಫಿನ್‌ಟೆಕ್‌ಗಳನ್ನು ಕೇಂದ್ರೀಕರಿಸಿ ಹುಟ್ಟಿದ ಇಲ್ಲಿನ ಸ್ಟಾರ್ಟ್‌ಅಪ್‌ಗಳು ದೇಶೀಯವಾಗಿ ಮತ್ತು ಜಾಗತಿಕವಾಗಿ ದೊಡ್ಡ ಅಲೆಗಳನ್ನೇ ಸೃಷ್ಟಿಸಿದವು.

ಪ್ರಸ್ತುತ ಸ್ಥಿತಿ: ಗ್ಲೋಬಲ್ ಐಟಿ ಮತ್ತು ಇನ್ನೋವೇಶನ್ ಹಬ್ (2020)

ಇಂದು ಬೆಂಗಳೂರು ವಾರ್ಷಿಕವಾಗಿ 50 ಶತಕೋಟಿ ಡಾಲರ್ (4.20 ಲಕ್ಷ ಕೋಟಿ ರುಪಾಯಿ) ಮೌಲ್ಯದ ಐಟಿ ಉದ್ಯಮವನ್ನು ಹೊಂದಿದೆ. ಬೆಂಗಳೂರು ಇಡೀ ಭಾರತದ ಒಟ್ಟಾರೆ ತಂತ್ರಜ್ಞಾನ ರಫ್ತಿಗೆ ಗಣನೀಯ ಪ್ರಮಾಣದ ಕೊಡುಗೆ ನೀಡುತ್ತಿದೆ. ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ಐಟಿ ಸೇವಾ ವಲಯದಲ್ಲಿ ಪ್ರಬಲ ಸ್ಪರ್ಧಿಗಳಾಗಿ ಬೆಳೆದಿವೆ. ಇದಕ್ಕೆ ಪೂರಕವಾದ ವೈವಿಧ್ಯಮಯವಾದ ವಾತಾವರಣ ಬೆಂಗಳೂರಿನಲ್ಲಿದೆ. ಈ ಮಹಾನಗರವು ಈಗ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ.‌ ಇಲ್ಲಿನ ಫಿನ್‌ಟೆಕ್, ಡೆವಲಪರ್ ಟೂಲ್‌ಗಳು ಮತ್ತು ಬ್ಲಾಕ್‌ಚೈನ್‌ ಕ್ಷೇತ್ರಗಳ ಕಂಪನಿಗಳು ಜಾಗತಿಕ ವೇದಿಕೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ.

ಇದನ್ನೂ ಓದಿರಿ: ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು

2017ರಲ್ಲಿ ಸ್ಥಾಪನೆಯಾದ ಪಾಲಿಗಾನ್ ಒಂದು ಬ್ಲಾಕ್‌ಚೈನ್ ಸ್ಟಾರ್ಟ್‌ಅಪ್. ಜಾಗತಿಕ ಬ್ಲಾಕ್‌ಚೈನ್ ಕ್ಷೇತ್ರದಲ್ಲಿ ತನ್ನ ಮಹತ್ವದ ಛಾಪನ್ನು ಮೂಡಿಸಿರುವ ಈ ಕಂಪನಿಯ ಒಟ್ಟು ಮೌಲ್ಯ 10 ಶತಕೋಟಿ ಡಾಲರ್‌ಗೂ (84 ಸಾವಿರ ಕೋಟಿ ರುಪಾಯಿ) ಹೆಚ್ಚು. ಇವೆಲ್ಲರ ಮಧ್ಯೆ ರೇಜರ್‌ಪೇ, ಅಥರ್ ಎನರ್ಜಿಯಂತಹ ಕಂಪನಿಗಳು ಕ್ರಮವಾಗಿ ಫಿನ್‌ಟೆಕ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಸ್ಪರ್ಧೆಯನ್ನು ಒಡ್ಡಿವೆ. ಇವೆಲ್ಲವೂ ಸದ್ಯ ನವೀನ ಆಲೋಚನೆಗಳು ಬೆಳೆಯಲು ಇರುವ ವೈವಿಧ್ಯಮಯ ವೇದಿಕೆಯಾಗಿ  ಬೆಂಗಳೂರು ಬೆಳೆದಿರುವುದನ್ನು ತೋರಿಸುತ್ತವೆ.

bengalore12
ಬೆಂಗಳೂರು ಟೆಕ್ ಪಾರ್ಕ್

ಐಟಿಯ ಆಚೆಗಿನ ಸ್ಟಾರ್ಟ್‌ಅಪ್‌ಗಳು: ವಿಸ್ತಾರಗೊಳ್ಳುತ್ತಿರುವ ಆವಿಷ್ಕಾರಗಳು

ಐಟಿ ಉದ್ಯಮವು ಸಾಂಪ್ರದಾಯಿಕವಾಗಿ ಬೆಂಗಳೂರಿನ ಆರ್ಥಿಕತೆಯ ಚಾಲಕಶಕ್ತಿಯಾಗಿದ್ದರೂ, ಇತ್ತೀಚಿನ ಕೆಲ ವರ್ಷಗಳಲ್ಲಿ ಮಹಾನಗರವು ಐಟಿ ಅಲ್ಲದೆ ಬೇರೆ ಸ್ಟಾರ್ಟ್‌ಅಪ್‌ಗಳನ್ನು ತನ್ನಲ್ಲಿ ಸೃಷ್ಟಿಸಿಕೊಂಡಿದೆ. ಮುಖ್ಯವಾಗಿ ಜೈವಿಕ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಕ್ಷೇತ್ರಗಳು ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕರಾದ ವಿಜಯ್ ಚಂದ್ರು ಅವರು ಸಹ-ಸಂಸ್ಥಾಪಕರಾಗಿರುವ ಸ್ಟ್ರಾಂಡ್ ಲೈಫ್ ಸೈನ್ಸಸ್‌ನಂತಹ ಕಂಪನಿಗಳು ಜೀನೋಮಿಕ್ ಡೇಟಾ ವಿಶ್ಲೇಷಣೆ ಮತ್ತು ಪರ್ಸನಲೈಸ್ಡ್‌ ಮೆಡಿಸಿನ್‌ಗಳನ್ನು ಆರೋಗ್ಯ ವ್ಯವಸ್ಥೆಯಲ್ಲಿ ಮುಂಚೂಣಿಗೆ ತರುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ. ಜೀನೋಮಿಕ್ ಸಂಶೋಧನೆ, ಕ್ಯಾನ್ಸರ್ ರೋಗನಿರ್ಣಯ ಮತ್ತು ಪ್ರಿಸಿಷನ್‌ ಮೆಡಿಸಿನ್ ಮೇಲೆ ಕೆಲಸ ಮಾಡುತ್ತಿರುವ ಸ್ಟ್ರಾಂಡ್ ಲೈಫ್ ಸೈನ್ಸಸ್ ಕಂಪನಿಯು ಬೆಂಗಳೂರನ್ನು ಅತ್ಯಾಧುನಿಕ ಜೈವಿಕ ತಂತ್ರಜ್ಞಾನದ ಆವಿಷ್ಕಾರ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಿದೆ.

ಬಯೋಫಾರ್ಮಾಸ್ಯುಟಿಕಲ್ಸ್‌ನಲ್ಲಿ ಜಾಗತಿಕ ನಾಯಕರಾಗಿರುವ ಬಯೋಕಾನ್‌ನಂತಹ ಇತರ ಪ್ರಮುಖ ಬಯೋಟೆಕ್ ಕಂಪನಿಗಳು ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡಿವೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಮತ್ತು ಟೀಮ್ ಇಂಡಸ್‌ನಂತಹ ಕಂಪನಿಗಳು ಖಾಸಗಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹೋನ್ನತ ಹೆಜ್ಜೆಗಳನ್ನು ಇಡುತ್ತಿವೆ. ಇವು ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನದ ಸಂಕೇತಗಳಾಗಿವೆ.

ಈ ಎಲ್ಲಾ ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನ ಆರ್ಥಿಕತೆಯನ್ನು ವೈವಿಧ್ಯೀಕರಿಸುವ ಅಗತ್ಯತೆಯನ್ನು ಎತ್ತಿ ತೋರಿಸುತ್ತವೆ. ಬೆಂಗಳೂರು ಮಹಾನಗರವು ಐಟಿ ವಲಯವನ್ನು ಮೀರಿ ಜಾಗತಿಕ ಆವಿಷ್ಕಾರದ ತುತ್ತತುದಿಯಲ್ಲಿ ರಾರಾಜಿಸುವಲ್ಲಿ ಕಾಣಿಸಿಕೊಳ್ಳುತ್ತಿದೆ.

ಸಿಲಿಕಾನ್ ವ್ಯಾಲಿಯೊಂದಿಗೆ ಬೆಂಗಳೂರಿನ ಹೋಲಿಕೆ

ಬೆಂಗಳೂರನ್ನು ಸಾಮಾನ್ಯವಾಗಿ ಸಿಲಿಕಾನ್ ವ್ಯಾಲಿಗೆ ಹೋಲಿಸಲಾಗುತ್ತದೆ. ಆದರೆ ಎರಡು ವ್ಯವಸ್ಥೆಗಳ ಗುಣದಲ್ಲಿ ಅನೇಕ ವ್ಯತ್ಯಾಸಗಳಿವೆ. ಸಿಲಿಕಾನ್ ವ್ಯಾಲಿಯು ಅದರ ವಿಚ್ಛಿದ್ರಕಾರಿ ತಂತ್ರಜ್ಞಾನಗಳು, ಆಮೂಲಾಗ್ರ ಆವಿಷ್ಕಾರಗಳು ಮತ್ತು ಸವಾಲನ್ನು ಮೈಗೊಡ್ಡಿಕೊಳ್ಳುವ ಗುಣಕ್ಕೆ ಹೆಸರಾಗಿದೆ. ಆಪಲ್, ಗೂಗಲ್ ಮತ್ತು ಟೆಸ್ಲಾದಂತಹ ಕಂಪನಿಗಳು ಉತ್ಪನ್ನ-ಚಾಲಿತ ಬೆಳವಣಿಗೆಯಲ್ಲಿ ಮುಂಚೂಣಿಯ ಸ್ಥಾನದಲ್ಲಿವೆ. ಆ ಪ್ರದೇಶವು ಸ್ಪಷ್ಟವಾಗಿ ಸಾಹಸೋದ್ಯಮ ಬಂಡವಾಳ ಪರಿಸರ ವ್ಯವಸ್ಥೆಯಿಂದ (ವೆಂಚರ್‌ ಕ್ಯಾಪಿಟಲ್‌ ಇಕೋಸಿಸ್ಟಂ) ಉತ್ತೇಜಿತವಾಗಿರುವುದರಿಂದ, ಅಲ್ಲಿ ವೈಫಲ್ಯವನ್ನೂ ಸಾಮಾನ್ಯವಾಗಿ ಯಶಸ್ಸಿನ ಮೆಟ್ಟಿಲೆಂಬಂತೆ ನೋಡಲಾಗುತ್ತದೆ.

ಎಲ್ಲಕ್ಕೂ ಮುಖ್ಯವಾಗಿ, ಸಿಲಿಕಾನ್ ವ್ಯಾಲಿ ಬೆಳೆಯಲು ಮುಖ್ಯ ಕಾರಣ ಅಲ್ಲಿರುವ ಶಿಕ್ಷಣ ಮತ್ತು ಉದ್ಯಮಗಳ ನಡುವಿನ ಆಳವಾದ ಸಂಬಂಧ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಯುಸಿ ಬರ್ಕ್ಲಿ ಇದರಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಅತ್ಯಾಧುನಿಕ ಸಂಶೋಧನೆಯ ಕೇಂದ್ರಗಳಾಗಿರುವ ಈ ಎರಡೂ ಸಂಸ್ಥೆಗಳಿಂದ ಎಂಜಿನಿಯರಿಂಗ್ ಪ್ರತಿಭೆಗಳ ಒಂದು ದಂಡೇ ಹೊರಬರುತ್ತದೆ.  ಸಿಲಿಕಾನ್ ವ್ಯಾಲಿಯ ಅತ್ಯಂತ ಯಶಸ್ವಿ ಕಂಪನಿಗಳು ಸ್ಟ್ಯಾನ್‌ಫೋರ್ಡ್ ಪದವೀಧರರಿಂದ ಸ್ಥಾಪಿಸಲ್ಪಟ್ಟವು. ಅಲ್ಲದೇ ಈ ಶಿಕ್ಷಣ ಸಂಸ್ಥೆಗಳು ಮತ್ತು ಟೆಕ್ ಕಂಪನಿಗಳ ನಡುವಿನ ಸಹಯೋಗವು ನಿರಂತರವಾದ ನವನವೀನ ಅನ್ವೇಷಣೆಹಾಗೂ ಉದ್ಯಮಗಳಿಗೆ ಅವಕಾಶ ಮಾಡಿಕೊಟ್ಟಿತು.

ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!

ಬೆಂಗಳೂರು ಅಭಿವೃದ್ಧಿ ಎಂಬುದು ಐಟಿ ಸೇವೆಗಳು ಮತ್ತು ಹೊರಗುತ್ತಿಗೆಯಿಂದ ಗುರುತಿಸಿಕೊಂಡಿರುವುದನ್ನು ನೋಡಬೇಕು. ಇಲ್ಲಿ ಇನ್ಫೋಸಿಸ್ ಮತ್ತು ವಿಪ್ರೋನಂತಹ ಕಂಪನಿಗಳು ಜಾಗತಿಕ ಗ್ರಾಹಕರಿಗೆ ಪರಿಣಾಮಕಾರಿ ವೆಚ್ಚದಲ್ಲಿ ಸೇವೆಗಳನ್ನು ನೀಡುತ್ತಿವೆ. ಬೆಂಗಳೂರಿನಲ್ಲಿ ಐಐಎಸ್‌ಸಿಯಂತಹ ಭಾರತದ ಕೆಲವು ಉನ್ನತ ಸಂಶೋಧನಾ ಸಂಸ್ಥೆಗಳಿವೆ. ಇಲ್ಲಿ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಯೋಗವು ಇನ್ನೂ ವಿಕಸನಗೊಳ್ಳುತ್ತಲೇ ಇದೆ. ಹೀಗಿದ್ದರೂ ಐಐಎಸ್‌ಸಿ ಪ್ರಾಧ್ಯಾಪಕರು ಕೈಜೋಡಿಸುವ ಮೂಲಕ ಸ್ಥಾಪಿಸಲ್ಪಟ್ಟ ಸ್ಟ್ರಾಂಡ್ ಲೈಫ್ ಸೈನ್ಸಸ್‌ನಂತಹ ಕಂಪನಿಗಳು ಇಂತಹ ಸಹಯೋಗಗಳ ಪ್ರಯತ್ನಗಳನ್ನು ಮಾಡುತ್ತಿವೆ.

“ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ” ಹೆಸರನ್ನು ಅಕ್ಷರಶಃ ಸಂಪೂರ್ಣವಾಗಿ ಬೆಂಗಳೂರು ಪಡೆಯಲು ಎಐ, ಬ್ಲಾಕ್‌ಚೈನ್ ಮತ್ತು ರೊಬೊಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ವಿಚ್ಛಿದ್ರಕಾರಿ ಅನ್ವೇಷಣೆಯ ಕಡೆಗೆ ಹೆಚ್ಚೆಚ್ಚು ಒತ್ತು ನೀಡುವ ಅಗತ್ಯವಿದೆ. ಮೂನ್‌ಶಾಟ್ ಯೋಜನೆಗಳು ಮತ್ತು ಡೀಪ್ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಆದ್ಯತೆ ನೀಡುವ ಮೂಲಕ ಈ ಮಹಾನಗರ ಸವಾಲನ್ನು ಮೈಗೊಡ್ಡಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಶೈಕ್ಷಣಿಕ ಕ್ಷೇತ್ರ,ಉದ್ಯಮ ಮತ್ತು ಸರ್ಕಾರದ ನಡುವೆ ಹೆಚ್ಚು ಸಹಯೋಗ ಏರ್ಪಟ್ಟರೆ ಮುಂದೆ ಹೊಸಹೊಸ ಆಲೋಚನೆಗಳ, ಅನ್ವೇಷಣೆಗಳ ಅಲೆಯನ್ನು ಹೆಚ್ಚಿಸಬಹುದು. ಇದರಿಂದ ಬೆಂಗಳೂರನ್ನು ಕೇವಲ ಸೇವೆಗಳಿಗೆ ಮಾತ್ರವಲ್ಲ, ಜಾಗತಿಕ ತಾಂತ್ರಿಕ ಕೇಂದ್ರವನ್ನಾಗಿ ಮಾಡಲು ಸಾಧ್ಯವಾಗುತ್ತದೆ.

ಕೊನೆಯ ಮಾತು

1970 ರ ದಶಕದಲ್ಲಿ ಬೆಂಗಳೂರು ಎಂಬ ನಗರ ಜಾಗತಿಕ ಐಟಿ ಶಕ್ತಿ ಕೇಂದ್ರವಾಗಿ ರೂಪುಗೊಂಡದ್ದು, ಅದರ ಒಳಗೊಳ್ಳುವಿಕೆಯ‌ ಮತ್ತು ಆವಿಷ್ಕಾರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಐಟಿ ಸೇವೆಗಳ ಕೇಂದ್ರವಾಗಿ ಆರಂಭವಾದ ಬೆಂಗಳೂರು ಇಂದು ಉತ್ಪನ್ನ ಆಧಾರಿತ ಸ್ಟಾರ್ಟ್‌ಅಪ್‌ಗಳು ಹಾಗೂ ಜಾಗತಿಕ ಅನ್ವೇಷಣೆ ಎರಡನ್ನೂ ಉತ್ತೇಜಿಸುವ ಮಹಾನಗರವಾಗಿ ಹೊರಹೊಮ್ಮಿದೆ. ಬೆಂಗಳೂರು ನಿಜವಾಗಿಯೂ “ಭಾರತದ ಸಿಲಿಕಾನ್ ವ್ಯಾಲಿ” ಎಂಬ ಹೆಸರಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಳ್ಳಲು,ಸವಾಲನ್ನು ಎದುರಿಸುವ ಮತ್ತು ಗಂಭೀರವಾದ ತಂತ್ರಜ್ಞಾನ ಆವಿಷ್ಕಾರ ಸಂಸ್ಕೃತಿಯನ್ನು ಪೋಷಿಸುವ ವಿಚ್ಛಿದ್ರಕಾರಿ ತಂತ್ರಜ್ಞಾನದ ಗಡಿರೇಖೆಗಳನ್ನು ಮೀರಿ ತನ್ನ ದಾಪುಗಾಲನ್ನು ಇಡಬೇಕು.

muridhar
ಮುರಳೀಧರ ಕೇಶವಮೂರ್ತಿ
+ posts

ಐಟಿ ಕ್ಷೇತ್ರದಲ್ಲಿ 38 ವರ್ಷಗಳ ಅನುಭವ ಹೊಂದಿರುವ ಮುರಳಿಯವರು ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದಾರೆ. ನಂತರ ಕ್ಯಾಲಿಫೋರ್ನಿಯಾದ ನ್ಯಾಷನಲ್ ಸೆಮಿಕಂಡಕ್ಟರ್ಸ್‌ನಲ್ಲಿ ಕೆಲಸ ಮಾಡಿ, ಭಾರತಕ್ಕೆ ಹಿಂದಿರುಗಿದ ನಂತರ, ಹವ್ಲೆಟ್ ಪ್ಯಾಕರ್ಡ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಯಾಟಲ್ ಮತ್ತು ಸಿಲಿಕಾನ್ ವ್ಯಾಲಿ (ಅಮೆರಿಕ)ಯಲ್ಲಿ ಅನೇಕ ಸ್ಟಾರ್ಟಪ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಕೃತಕ ಬುದ್ಧಿಮತ್ತೆ, ದಾಖಲೆ ನಿರ್ವಹಣೆ ಮತ್ತು ಆರ್ಥಿಕ ತಂತ್ರಜ್ಞಾನ ಉದ್ಯಮಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಕೇಶವಮೂರ್ತಿ
ಮುರಳೀಧರ ಕೇಶವಮೂರ್ತಿ
ಐಟಿ ಕ್ಷೇತ್ರದಲ್ಲಿ 38 ವರ್ಷಗಳ ಅನುಭವ ಹೊಂದಿರುವ ಮುರಳಿಯವರು ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದಾರೆ. ನಂತರ ಕ್ಯಾಲಿಫೋರ್ನಿಯಾದ ನ್ಯಾಷನಲ್ ಸೆಮಿಕಂಡಕ್ಟರ್ಸ್‌ನಲ್ಲಿ ಕೆಲಸ ಮಾಡಿ, ಭಾರತಕ್ಕೆ ಹಿಂದಿರುಗಿದ ನಂತರ, ಹವ್ಲೆಟ್ ಪ್ಯಾಕರ್ಡ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಯಾಟಲ್ ಮತ್ತು ಸಿಲಿಕಾನ್ ವ್ಯಾಲಿ (ಅಮೆರಿಕ)ಯಲ್ಲಿ ಅನೇಕ ಸ್ಟಾರ್ಟಪ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಕೃತಕ ಬುದ್ಧಿಮತ್ತೆ, ದಾಖಲೆ ನಿರ್ವಹಣೆ ಮತ್ತು ಆರ್ಥಿಕ ತಂತ್ರಜ್ಞಾನ ಉದ್ಯಮಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...