ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)

Date:

ನಮ್ಮ ಬೆಂಗಳೂರು ಕನಸಿನ ನಗರವೇ? ಕಾರುಣ್ಯದ ನಗರವೇ? ಅಸಮಾನತೆ ತುಂಬಿದ ಕ್ರೌರ್ಯದ ನಗರವೇ? ಅಥವಾ ಇವೆಲ್ಲವೂ ಒಟ್ಟಿಗೆ ಉಳ್ಳ ನಗರವೇ?- ಈ ಎಲ್ಲವಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. 1871ರಲ್ಲಿ ಅಂದಿನ ಬೆಂಗಳೂರಿನ ಜನಸಂಖ್ಯೆ 1.44 ಲಕ್ಷ, 2024ರಲ್ಲಿ ಜನಸಂಖ್ಯೆ 1.3 ಕೋಟಿ. ಜನಸಂಖ್ಯೆ ಬೆಳೆಯಲು ಹಲವು ಕಾರಣಗಳು- ಇಲ್ಲಿರುವವರು ಮಕ್ಕಳನ್ನು ಹೆರುತ್ತಾ ನೈಸರ್ಗಿಕವಾಗಿ ಜನಸಂಖ್ಯೆ ಹೆಚ್ಚಿದ್ದು ಒಂದು ಕಾರಣವಾದರೆ, ರಾಜ್ಯದ ಇತರ ಜಿಲ್ಲೆಗಳಿಂದ, ದೇಶದ ಇತರ ರಾಜ್ಯಗಳಿಂದ ವಲಸೆ ಬಂದಿದ್ದು ಮತ್ತು ಮುಖ್ಯವಾಗಿ ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ನುಂಗಿ ಬೆಂಗಳೂರು ಬೃಹತ್ ನಗರವಾಗಿದ್ದು ಇನ್ನೊಂದು ಕಾರಣ. 2011ರ ಜನಗಣತಿ ಪ್ರಕಾರ, ಬೆಂಗಳೂರಿನ ಜನಸಂಖ್ಯೆಯಲ್ಲಿ 44% ವಲಸಿಗರಿದ್ದಾರೆ. ವಲಸಿಗರಲ್ಲಿ 65% ಕರ್ನಾಟಕದ ಇತರೆ ಜಿಲ್ಲೆಯ ಜನ, ಉಳಿದವರು ಬೇರೆ ರಾಜ್ಯಗಳಿಂದ ಬಂದವರು, ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಿಂದ. ಬೆಂಗಳೂರಿನಲ್ಲಿ ಮುನಿಸಿಪಲ್ ಆಡಳಿತ ಶುರುವಾಗಿದ್ದು 1851ರಲ್ಲಿ. ಆಗ ಹಳೇ ನಗರಕ್ಕೆ (ಪೇಟೆ ಸುತ್ತಮುತ್ತ) ಒಂದು ಮುನಿಪಾಲಿಟಿ ಇತ್ತು ಹಾಗೂ ಕಂಟೋನ್ಮೆಂಟ್‌ಗೆ ಇನ್ನೊಂದು. 1949ರಲ್ಲಿ ಎರಡೂ ಸೇರಿ ಒಂದು ನಗರಪಾಲಿಕೆಯಾಯಿತು. ಈಗಲೂ ಸ್ವರೂಪದಲ್ಲಿ ಕಂಟೋನ್ಮೆಂಟ್ ಹಾಗೂ ಪೇಟೆ ಏರಿಯಾ ಎಲ್ಲ ಸ್ವಲ್ಪ ಬೇರೆಬೇರೆನೇ. ಆದರೂ ಇಂದು ಬೆಂಗಳೂರು ನಗರ ಎಲ್ಲವನ್ನೂ ಒಳಗೊಂಡ ಒಂದು ರೀತಿಯ ಬಾತ್ ಆಗಿದೆ. 2008ರಲ್ಲಿ ‘ಅದಿತಿ ದೇ’ ಎನ್ನುವವರು ಡಾ.ಸಿದ್ದಲಿಂಗಯ್ಯ, ಯು.ಆರ್. ಅನಂತಮೂರ್ತಿ, ಜಾನಕಿ ನಾಯರ್, ಪಿ. ಲಂಕೇಶ್, ಫಜಲುಲ್ ಹಾಸನ್, ಇನ್ನೂ ಹಲವರ ಬರಹಗಳನ್ನು ಒಟ್ಟುಗೂಡಿಸಿ ‘ಮಲ್ಟಿಪಲ್ ಸಿಟೀಸ್’ ಎನ್ನುವ ಪುಸ್ತಕ ಹೊರತಂದರು. ಬೆಂಗಳೂರು ನಿಜವಾಗಲೂ ಹಲವು ಊರುಗಳ, ಹಲವು ಭಾವಗಳನ್ನು ಮೂಡಿಸುವ ಬಹುರೂಪಿ ನಗರವಾಗಿದೆ. ನಾಳಿನ ನಗರವನ್ನು ಉತ್ತಮವಾಗಿ ಕಟ್ಟಲು, ಇವೆಲ್ಲವನ್ನೂ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಈ ಲೇಖನದಲ್ಲಿ ನಮ್ಮ ನಾಳಿನ ಬೆಂಗಳೂರು ಹೇಗಿರಬೇಕು ಎಂದು ಚರ್ಚಿಸುತ್ತೇವೆ. ಅದಕ್ಕೆ ಮುನ್ನ ಇಂದಿನ ಕೆಲವು ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ ಹಾಗೂ ಈ ಸವಾಲುಗಳನ್ನು ಎದುರಿಸಲು ಸರ್ಕಾರಗಳು ಕೈಗೊಂಡ ಯೋಜನೆಗಳು ಕೆಲಸ ಮಾಡಿವೆಯೇ ಎಂದು ಪರಿಶೀಲಿಸಬೇಕು. ಅದನ್ನೂ ಈ ಲೇಖನದಲ್ಲಿ ಮಾಡಲಾಗುವುದು.

ಇಂದಿನ ಬೆಂಗಳೂರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

3.5 ಲಕ್ಷಕ್ಕೂ ಹೆಚ್ಚು ಗಾರ್ಮೆಂಟ್ ಕಾರ್ಮಿಕರಿರುವ, 3-5 ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿರುವ ಊರು. ಐ-ಟಿ ಬಿ-ಟಿಗೆ ಪ್ರಸಿದ್ಧವಾಗಿದೆ. ನಗರ ಬಹಳಷ್ಟು ಬೆಳೆದಿದೆ. ಹಲವರ ಕನಸನ್ನು ನನಸು ಮಾಡಿದೆ. ಹಲವರು ಕನಸಿನ ದಾರಿಯಲ್ಲೇ ಇದ್ದಾರೆ. ಆದರೆ ಗುರಿ ತಲುಪಲಾಗುತ್ತಿಲ್ಲ. ಬೆಳೆಯುತ್ತಲೇ ಇರುವ ಬೆಂಗಳೂರು ಯಾವ ರೀತಿ ಬೆಳೆಯುತ್ತಿದೆ? ಕೆಲವು ತಿಂಗಳ ಹಿಂದೆ ಬಂದ ಮಳೆಯು ಬೆಂಗಳೂರು ನಗರದ ಬೆಳವಣಿಗೆಯ ಕೆಲವು ಕಟುಸತ್ಯಗಳನ್ನು ಬಯಲು ಮಾಡಿತು. ನಗರದಲ್ಲಿ ನಡೆದ ಮೂರು ಘಟನೆಗಳನ್ನು ಪರಿಶೀಲಿಸೋಣ.

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 1)

ಒಂದು: ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಕಾಂಪೌಂಡ್‌ಗೆ ನೀರು ನುಗ್ಗಿತು. ದೋಣಿಗಳ ಮೂಲಕ ಅಲ್ಲಿನ ನಿವಾಸಿಗಳನ್ನು ಅಪಾರ್ಟ್ಮೆಂಟ್ ಆಚೆ ತರಬೇಕಾಯಿತು. ಸರ್ಕಾರ ಅವರನ್ನು ರಕ್ಷಿಸಿತು. ಬಹಳಷ್ಟು ಮಾಧ್ಯಮದವರು ವರದಿ ಮಾಡಿದರು. ಎರಡನೆಯದು: ಕೇಂದ್ರೀಯ ವಿಹಾರ್‌ನಲ್ಲಿ ಇದು ಆಗುತ್ತಲೇ, ಜಕ್ಕೂರ್‌ನ ಸುರಭಿ ಲೇಔಟ್‌ನಲ್ಲಿ ಟಾರ್ಪಲಿನ್ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಕಟ್ಟಡ ಕಾರ್ಮಿಕರ ಕುಟುಂಬಗಳು ನೀರುಪಾಲಾದವು. ಟೆಂಟ್‌ಗಳ ಒಳಗೆ ನೀರು ನುಗ್ಗಿತು, ಸಾಮಾನೆಲ್ಲ ನಾಶವಾಯಿತು. ಬಿಬಿಎಂಪಿ ಅಧಿಕಾರಿಗಳು ಒಂದು ಹೊತ್ತು ಊಟ ಕೊಟ್ಟದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಒಂದೋ ಎರಡೋ ಮಾಧ್ಯಮದವರನ್ನು ಬಿಟ್ಟು ಬೇರೆ ಯಾರೂ ವರದಿಯನ್ನೂ ಮಾಡಿಲ್ಲ. ಮೂರನೆಯದು: ಅದೇ ಮಳೆ ಸುರಿದ ದಿವಸದಂದು ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ಫ್ಲೇಓವರ್ ಮೇಲೆ ಜಾಮ್ ಆಗಿ, ಎರಡೂವರೆ ತಾಸು ಗಾಡಿಗಳು ನಿಂತಲ್ಲೇ ಇದ್ದವು! ಹಿಂದೆ ಹೋಗೋಕ್ಕೆ ಆಗಿಲ್ಲ, ಮುಂದೆ ಹೋಗಕ್ಕೆ ಆಗಿಲ್ಲ. ಇಳಿದು ಕೆಳಗೆ ಬರಲೂ ದಾರಿ ಇಲ್ಲ!

ಈ ಮೂರೂ ಘಟನೆಗಳು ಬೆಂಗಳೂರಿನ ಬೆಳವಣಿಗೆ ಹೇಗಾಗಿದೆ ಎಂದು ತೋರಿಸುತ್ತವೆ. ಮೊದಲನೇ ಎರಡು ಘಟನೆಗಳು ನೋಡಿ. ನಮಗೆ ಎದ್ದು ಕಾಣುವುದು ಏನೆಂದರೆ – ಅಸಮಾನತೆ. ಕೆಲ ಬೆಂಗಳೂರಿಗರಿಗೆ ಉತ್ತಮ ಅಪಾರ್ಟ್ಮೆಂಟ್ ಪಡೆಯಲು ಸಾಧ್ಯವಾಗಿದೆ. ಆದರೆ ಯಾವ ಅಪಾರ್ಟ್ಮೆಂಟ್‌ಅನ್ನು ಕೆರೆ, ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದಾರೋ, ಅಲ್ಲಿರುವವರಿಗೂ ಭದ್ರತೆ ಇಲ್ಲ. ಯಾರು ಸುಂದರವಾದ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೋ ಅವರಿಗೇ ಸೂರಿಲ್ಲ. ಮೂರನೇ ಘಟನೆ ನೋಡಿ- ಈ ಮೇಲ್ಸೇತುವೆ ಕಟ್ಟಿದ್ದೇ ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು. ಇಂದು ಆ ಪರಿಹಾರವೇ ಸಮಸ್ಯೆಯಾಯಿತು. ನಗರದ ಅತ್ಯುತ್ತಮ ಮೇಲ್ಸೇತುವೆ ಎಂದು ಕರೆದುಕೊಂಡ, ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಿದ್ದ ಈ ಮೇಲ್ಸೇತುವೆಯ ವೈಫಲ್ಯತೆ ಎದ್ದು ಕಂಡಿತು.

ಮುಂದಿನ ಭಾಗದಲ್ಲಿ ಬೆಂಗಳೂರಿನ ಇಂದಿನ ಸಮಸ್ಯೆಗಳನ್ನು ಎರಡು ಕ್ಷೇತ್ರಗಳ ಉದಾಹರಣೆ ತೆಗೆದುಕೊಂಡು (ವಸತಿ, ಸಾರ್ವಜನಿಕ ಸಾರಿಗೆ) ಅರ್ಥ ಮಾಡಿಕೊಳ್ಳೋಣ.

ಹೌಸಿಂಗ್ ಕ್ರೈಸೀಸ್

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಒಟ್ಟು ನಗರ ಪ್ರದೇಶಗಳ ಸಂಖ್ಯೆಯಲ್ಲಿ 23% ಜನರು ಸ್ಲಂಗಳಲ್ಲಿ ವಾಸಿಸುತ್ತಾರೆ ಹಾಗೂ ಬೆಂಗಳೂರಿನಲ್ಲಿ ಅಂದಾಜು 597 ಸ್ಲಂಗಳಿವೆ. ಆದರೆ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕರಾದ ನರಸಿಂಹಮೂರ್ತಿಯವರ ಪ್ರಕಾರ, ಬೆಂಗಳೂರು ನಗರದಲ್ಲಿ ಇನ್ನೂ ಬಹಳಷ್ಟು ಸ್ಲಂಗಳಿವೆ ಹಾಗೂ ಸ್ಲಂಗಳಲ್ಲಿ ಇರುವ ಜನರ ಸಂಖ್ಯೆ ಒಟ್ಟು ನಗರದ ಜನಸಂಖ್ಯೆಯ 23%ಗಿಂತ ಹೆಚ್ಚಿದೆ. ಅಲ್ಲದೆ ಇತರ ಸಂಶೋಧನಾ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 2000 ಸ್ಲಂಗಳಿವೆ!

ಬೆಂಗಳೂರಿನ ಮೇಲೆ ನೀವು ಡ್ರೋನ್ ಬಿಟ್ಟು ನೋಡಿದರೆ- ಎಲೆಕ್ಟ್ರಾನಿಕ್ ಸಿಟಿಯಿಂದ ವೈಟ್ ಫೀಲ್ಡ್, ಹೆಬ್ಬಾಳ ಹಾಗೂ ಹೊರ ವರ್ತುಲ ರಸ್ತೆಯ ಕೆಲ ಭಾಗಗಳು, ಇಲ್ಲೆಲ್ಲ ನೀಲಿ patches ಕಾಣುತ್ತವೆ. ಅವು ಕೆರೆಗಳಲ್ಲ, ಅವೆಲ್ಲವೂ ನೆಲಬಾಡಿಗೆ ಸ್ಲಂಗಳು, ಬೆಂಗಳೂರಿನ ಆಧುನಿಕ ಕಾರ್ಮಿಕ ಕ್ವಾಟರ್ಸ್. ಈ ನೆಲಬಾಡಿಗೆ ಸ್ಲಂಗಳಲ್ಲಿ ಕಾರ್ಮಿಕರು ಭೂಮಾಲಿಕರಿಗೆ ಬಾಡಿಗೆ ನೀಡಬೇಕು- ಸಾವಿರದ ಐನೂರು, ಎರಡು ಸಾವಿರ, ಮೂರು ಸಾವಿರ ರೂಪಾಯಿತನಕ ಹೋಗುತ್ತದೆ. ಕೊಟ್ಟ ಬಾಡಿಗೆಗೆ ಅಲ್ಲಿ ಅವರು ಟಾರ್ಪಲಿನ್ ಶೀಟ್ ಅಥವಾ ಟಿನ್ ಶೀಟ್‌ನ ಮನೆ ಹಾಕಿಕೊಳ್ಳಬಹುದು. ಇಲ್ಲೆಲ್ಲ ನೀರು ಸರಬರಾಜಿಲ್ಲ, ವಿದ್ಯುತ್ ಸರಬರಾಜಿಲ್ಲ, ಸರಿಯಾದ ಶೌಚಾಲಯವಿಲ್ಲ. ಸ್ಲಂ ಸಂಘಟನೆ ಮುಖಂಡರ ಪ್ರಕಾರ ನಗರದ ಸುಮಾರು 3-5 ಲಕ್ಷ ಜನ ಈ ರೀತಿ ಬದುಕುತ್ತಿದ್ದಾರೆ. ಇವರಿಗಿಂತ ಹೀನಾಯ ಸ್ಥಿತಿ ಇರುವುದು ನಗರದ ನಿರಾಶ್ರಿತರದ್ದು. 2010ರಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು, 4 ರಾತ್ರಿಗಳ ಕಾಲ ಮಾಡಿದ ಸಮೀಕ್ಷೆಯಲ್ಲಿ ಸುಮಾರು 18,000 ಜನ ನಗರ ನಿರಾಶ್ರಿತರಾಗಿದ್ದು ಕಂಡುಬಂದಿತು.

slum2
ಬೆಂಗಳೂರಿನಲ್ಲಿನ ಒಂದು ನೆಲಬಾಡಿಗೆ ಸ್ಲಮ್

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 2)

ನಗರದ ಬಹಳಷ್ಟು ಜನ ಸ್ಲಂನಲ್ಲಿರುವುದು, ಫುಟ್‌ಪಾತ್ ಮೇಲೆ ಮಲಗಿರುವುದು ಈ ವಸತಿ ಸಮಸ್ಯೆಯ ಒಂದು ಸೂಚನೆಯಷ್ಟೇ. ಸ್ಲಂನಲ್ಲಿ ಇಲ್ಲದೆ ಇರುವವರಿಗೂ ಸಮಸ್ಯೆಗಳಿವೆ. ಬಹಳಷ್ಟು ಜನ ಸ್ಲಂನಲ್ಲಿ ಇಲ್ಲದಿದ್ದರೂ ಒಂದೇ ಕೋಣೆ ಮನೆಯಲ್ಲಿದ್ದಾರೆ, ಗಾಳಿ ಬೆಳಕು ಸಾಕಾಗದ ಪುಟ್ಟ ಪುಟ್ಟ ಮನೆಗಳಲ್ಲಿದ್ದಾರೆ. ಅದರಲ್ಲೂ ಬಹಳಷ್ಟು ಜನ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ.

ಬೆಂಗಳೂರಿನಲ್ಲಿ ಇಂದು ಸೈಟ್ ಕೊಳ್ಳುವುದು, ಅಪಾರ್ಟ್ಮೆಂಟ್ ಕೊಳ್ಳುವುದು ಅತ್ಯಂತ ಕಷ್ಟಕರ ಕೆಲಸವಾಗಿದೆ. ಬಿಡಿಎ affordable ಹೌಸಿಂಗ್ ಯೋಜನೆಗಳನ್ನು ಪ್ರಾರಂಭಮಾಡಿ ಸುಮಾರು ವರ್ಷಗಳಾಯಿತು. ಮೊದಲು 7 ಲಕ್ಷ ರೂಪಾಯಿಗೆ ಬಿಡಿಎ ಅಪಾರ್ಟ್ಮೆಂಟ್‌ಅನ್ನು ಮಾರಲು ಪ್ರಾರಂಭಿಸಿತು. ಈಗ ಬಿಡಿಎ ಅಪಾರ್ಟ್ಮೆಂಟ್ ಸಹ ಕನಿಷ್ಠ 25 ಲಕ್ಷಗಳಾಗುತ್ತವೆ, ಅದು ಕೂಡ ಬಹಳ ದೂರದಲ್ಲಿವೆ- ಕುಂಬಳಗೋಡಿನ ಆಸುಪಾಸಿನಲ್ಲಿ. ದೇಶದ ಹಲವು ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಭೂಮಿಯ ಬೆಲೆ, ಅತ್ಯಂತ ವೇಗವಾಗಿ ದುಬಾರಿ ಆಗುತ್ತಿದೆ.

CREDAI ಸಂಸ್ಥೆಯ ವರದಿಯ ಪ್ರಕಾರ, ಕೇವಲ ಒಂದು ವರ್ಷದಲ್ಲಿ ಅಂದರೆ 2023 ಹಾಗೂ 2024ರ ಮಧ್ಯೆ ಬೆಂಗಳೂರಿನಲ್ಲಿ ಭೂಮಿಯ ಬೆಲೆ 19% ಏರಿದೆ. ಇನ್ನು ಯಾವ ನಗರದಲ್ಲೂ ಇಷ್ಟು ಏರಿಲ್ಲ. ಇನ್ನೊಂದು ವರದಿಯ ಪ್ರಕಾರ, 2010 ಹಾಗೂ 2020ರ ಮಧ್ಯೆ ನಮ್ಮ ಊರಿನಲ್ಲಿ ಭೂಮಿಯ ಬೆಲೆ 52% ಏರಿತು. ಒಂದು ಕಾಲದಲ್ಲಿ ಜಯನಗರದಂತಹ ಪ್ರದೇಶಗಳನ್ನು ಮಿಡಲ್ ಕ್ಲಾಸ್ ಏರಿಯಾ ಎಂದು ಕೆರೆಯಲಾಗುತಿತ್ತು. ಇಂದು ಈ ಜಯನಗರದಲ್ಲಿ ಪ್ರತಿ ಚದರಡಿಗೆ ಸುಮಾರು 20,000 ರೂಪಾಯಿ ಬೆಲೆ ಇದೆ (ರೆಸಿಡೆನ್ಷಿಯಲ್, ಕಮರ್ಷಿಯಲ್ ಸಹ ಅಲ್ಲ). ದೂರದ ಬನಶಂಕರಿ ಆರನೇ ಹಂತದಲ್ಲಿ ಚದರಡಿಗೆ 8000-10,000 ರೂಪಾಯಿ ಬೆಲೆ ಇದೆ. ಇದರ ಜೊತೆಗೆ ಎಲ್ಲೆಡೆ ಬಾಡಿಗೆಗಳು ಸಹ ಬಹಳಷ್ಟು ಹೆಚ್ಚಾಗಿವೆ. ಶ್ರೀಮಂತ ವರ್ಗ ಬಿಟ್ಟು ಬೇರೆ ಯಾರಿಗೂ ಇಂದು ಬೆಂಗಳೂರಿನಲ್ಲಿ ಭೂಮಿ ಖರೀದಿಸುವುದು ಕಷ್ಟವಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣ ರಿಯಲ್ ಎಸ್ಟೇಟ್‌ಅನ್ನು, ಮನೆಗಳನ್ನು ಬಂಡವಾಳ ಹೂಡಿಕೆಯ ದೃಷ್ಟಿಯಿಂದ ನೋಡುವುದು. ಬೆಂಗಳೂರಿನ ಭೂಮಿಯನ್ನು ಬಂಡವಾಳವಾಗಿ ನೋಡುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕಂಪನಿಗಳಿಗೆ ಇಲ್ಲಿನ ಎಲ್ಲ ಸರ್ಕಾರಗಳು ಸಾಥ್ ನೀಡಿವೆ. ಇದು ಯಾವಾಗಾಯಿತೋ, ಆಗ ಒಂದು ಹೌಸಿಂಗ್ ಕ್ರೈಸೀಸ್ ಪ್ರಾರಂಭವಾಯಿತು.

ಇದರ ಬಗ್ಗೆ ಬೆಂಗಳೂರಿನ ಬಗ್ಗೆ ಬಹಳಷ್ಟು ಸಂಶೋಧನೆ ಮಾಡಿರುವ ಮೈಕೆಲ್ ಗೋಲ್ಡ್ಮನ್ ಅವರು ತಮ್ಮ`Speculating on the Next World City’ ಪೇಪರ್‌ನಲ್ಲಿ ವಿವರವಾಗಿ ಬೆರೆದಿದ್ದಾರೆ. ಬೆಂಗಳೂರಿನಲ್ಲಿ 2024ರಲ್ಲಿ ಕಟ್ಟಿದ 70,000 ಮನೆಗಳು ಮಾರಾಟ ಆಗಿರಲಿಲ್ಲ ಹಾಗೂ ಇದರ ಎರಡು ವರ್ಷದ ಹಿಂದೆ ಸರ್ಕಾರದ ಪ್ರಕಾರ 2-3 ಲಕ್ಷ ಮನೆಗಳು ಖಾಲಿ ಬಿದ್ದಿದ್ದವು.

ಈ ಒಂದು ಸ್ಪೆಕ್ಯೂಲೇಟಿವ್ ರಿಯಲ್ ಎಸ್ಟೇಟ್ ಮಾಡೆಲ್‌ನಿಂದ ಇಂದು ಬೆಂಗಳೂರಿನಲ್ಲಿ ಮನೆ ಮಾಡುವುದು ಬಹಳ ಕಷ್ಟವಾಗಿದೆ, ಮಿಡಲ್ ಕ್ಲಾಸ್ ಕುಟುಂಬಗಳಿಗೆ ಅಪಾರ್ಟ್ಮೆಂಟ್‌ಗಳು ದೊರಕುತ್ತವೆ, ಆದರೆ ಅದು ಸಹ ದೂರದಲ್ಲಿ (ಯಲಹಂಕ, ಕೆಂಗೇರಿ ಇತ್ಯಾದಿ) ಮಾತ್ರ. ಬಡವರಿಗೆ ಅಪಾರ್ಟ್ಮೆಂಟ್ ಕೊಳ್ಳಲು ಆಗುತ್ತಿಲ್ಲ, ಭೂಮಿಯಂತೂ ಕೊಳ್ಳಲು ಆಗುವುದೇ ಇಲ್ಲ. ನಗರ ಪ್ರದೇಶದ ಭೂ ಒಡೆತನ ಕೆಲವು ಸಮುದಾಯಗಳು, ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದೆ. ಇದರಿಂದ ನಗರದ ನಿವಾಸಿಗಳ ಮಧ್ಯೆ ಆತಂಕಗಳು ಹೆಚ್ಚುತ್ತಿವೆ.

ಸರ್ಕಾರಗಳು ಈ ವಸತಿಯ ಸಮಸ್ಯೆ ನಿವಾರಿಸಲು ಹಲವಾರು ಯೋಜನೆಗಳನ್ನು ತಂದಿವೆ: ವಾಲ್ಮೀಕಿ-ಅಂಬೇಡ್ಕರ್ ಯೋಜನೆ, ಜೆ.ಎನ್.ಎನ್.ಯು.ಆರ್.ಎಂ, ರಾಜೀವ್ ಆವಾಸ್ ಯೋಜನೆ ಇತ್ಯಾದಿ. ಇಂದಿನ ಒಕ್ಕೂಟ ಸರ್ಕಾರ ಅದನ್ನೆಲ್ಲ ಒಟ್ಟುಗೂಡಿಸಿ ಪ್ರಧಾನ್-ಮಂತ್ರಿ ಆವಾಜ್ ಯೋಜನಾ ತಂದಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಇದರ ಅಡಿಯಲ್ಲಿ 80 ಲಕ್ಷ ಮನೆಗಳನ್ನು ಕಟ್ಟಲಾಗಿದೆ. ಆದರೆ ಈ ಯೋಜನೆ 2024ರೊಳಗೆ ಎಲ್ಲರಿಗೂ ಸೂರು ನೀಡುವುದೆಂದು ಘೋಷಿಸಿದರೂ ನಿಜಾಂಶ ಏನು ಅಂತ ಎಲ್ಲರಿಗೂ ಗೊತ್ತಿದೆ. ದೇಶದ ‘25% ವಸತಿ ಶಾರ್ಟೆಜ್ ಸಹ ಪರಿಹಾರವಾಗಿಲ್ಲ’ ಎಂದು ವರದಿಗಳಿವೆ. ಇನ್ನು ಸ್ಥಳೀಯ ಸ್ಲಂ ಮುಖಂಡರ ಪ್ರಕಾರ, ಈ ಯೋಜನೆಯಡಿ ಗುತ್ತಿಗೆದಾರರಿಗೆ ಅನೂಕೂಲವಾಗುತ್ತಿದೆಯೇ ಹೊರತು, ಸ್ಲಂ ನಿವಾಸಿಗಳಿಗಲ್ಲ. ಸ್ಲಂ ನಿವಾಸಿಗಳಿಗೆ ಸಬ್ಸಿಡಿ ಕೊಡುವುದು ಬಿಟ್ಟು ಸಾಲ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ಸ್ಲಂ ಜನರ ಸಂಘಟನೆ ರಾಜ್ಯ ಸಂಚಾಲಕರಾದ ಐಸಾಕ್ ಅಮೃತರಾಜ್ ಆರೋಪಿಸಿದ್ದಾರೆ. ಈ ಯೋಜನೆಯೂ ಈಗಾಗಲೇ ಭೂಮಿ ಇರುವವರಿಗೆ ಅಥವಾ ಬಂಡವಾಳ ಇರುವವರಿಗೆ ಮಾತ್ರ. ಭೂಮಿ, ಬಂಡವಾಳ, ಎರಡೂ ಇಲ್ಲದಿರುವವರಿಗೆ ಯಾವ ಯೋಜನೆಯೂ ಇಲ್ಲ.

ಬಸ್‌ನಲ್ಲಿ ಸೀಟ್, ಮೀಟರ್ ದರಕ್ಕೆ ಆಟೋ, ಚಾಲಕ-ಪ್ರಯಾಣಿಕರಿಗೆ ನೆಮ್ಮದಿ- ಬೆಂಗಳೂರು
ನಗರದಲ್ಲಿ ಇದನ್ನು ನೆಲೆಗೊಳಿಸಲು ಸಾಧ್ಯವಿಲ್ಲವೇ?

traffic 3
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ

ಇಂದು ಬೆಂಗಳೂರಿನಲ್ಲಿ ಸಾರಿಗೆ ಅತಿ ದೊಡ್ಡ ಸಮಸ್ಯೆಯಾಗಿದೆ. ದಟ್ಟಣೆ ಒಂದು ಸಮಸ್ಯೆಯಾದರೆ, ಸಾರಿಗೆ ಸೌಲಭ್ಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗದೇ ಇರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಆಟೋ ಹಿಡಿಯುವುದು, ಬಸ್ ಸಿಗುವುದು, ಸಿಕ್ಕರೆ ಸೀಟ್ ಸಿಗುವುದು, ಮೆಟ್ರೋದಲ್ಲಿ ನೆಮ್ಮದಿಯಾಗಿ ಓಡಾಡುವುದು ಇತ್ಯಾದಿಗಳು ಸವಾಲಾಗಿ ಹೋಗಿವೆ. ಜೊತೆಗೆ ಮೆಟ್ರೋ ಟಿಕೆಟ್ ದರ ಭರಿಸಲು ಈಗಲೇ ಎಲ್ಲರಿಗೂ ಸಾಧ್ಯವಿಲ್ಲ. ಅದರ ಪರಿಷ್ಕರಣೆ ಆದ ನಂತರ ಇನ್ನೂ ದುಬಾರಿಯಾಗುತ್ತದೆ. ಹೋಗಲಿ ಇಷ್ಟು ಪ್ರಯಾಣಿಕರಿದ್ದಾರಲ್ಲ- ಕ್ಯಾಬ್ ಹಾಗೂ ಆಟೋ ಚಾಲಕರು ಖುಷಿಯಾಗಿದ್ದಾರೆನೋ ಅಂದರೆ, ಅವರೂ ಕೂಡ ಸದಾ ಟೆನ್ಷನ್, ಒತ್ತಡದ ತಲೆಬಿಸಿಯಲ್ಲಿಯೇ ಕಾಲ ದೂಡುತ್ತಾರೆ.

ಸಮಸ್ಯೆಯ ಮೂಲ ಕಾರಣವೆಂದರೆ, ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು. ಆದರೆ ಬಸ್‌ಗಳ ಸಂಖ್ಯೆ ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ ಆಗುತ್ತಿರುವುದು! 2015ರಲ್ಲಿ ಬೆಂಗಳೂರಿನಲ್ಲಿ ಕಾರ್‌ಗಳ ಸಂಖ್ಯೆ 11.44 ಲಕ್ಷ ಆಗಿತ್ತು. ಮಾರ್ಚ್ 2024ರಲ್ಲಿ ಕಾರ್‌ಗಳ ಸಂಖ್ಯೆ 23.92 ಲಕ್ಷಕ್ಕೆ ಏರಿದೆ. 2017ರಲ್ಲಿ 6143 ಬಸ್‌ಗಳು ರಸ್ತೆಯಲ್ಲಿದ್ದರೆ, 2024ರಲ್ಲಿ ಕೇವಲ 6027 ಬಸ್‌ಗಳು ರಸ್ತೆಯಲ್ಲಿವೆ! ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರಕ್ಕೆ 12000 ಬಸ್‌ಗಳಾದರೂ ಬೇಕು, ಆದರೆ ಅದರ ಅರ್ಧದಷ್ಟು ಮಾತ್ರ ಇವೆ. ಆಯ್ಕೆಯಾಗಿ ಬರುವ ಎಲ್ಲ ಸರ್ಕಾರಗಳ ನಾಯಕರೂ ರಸ್ತೆಗಳನ್ನು ಅಗಲ ಮಾಡುತ್ತಿದ್ದಾರೆ, ಮೇಲ್ಸೇತುವೆಗಳನ್ನೂ ಕಟ್ಟುತ್ತಿದ್ದಾರೆ, ರಸ್ತೆ ಕೆಡವಿ ಅಂಡರ್ ಪಾಸ್ ಮಾಡುತ್ತಿದ್ದಾರೆ. ಆದರೆ ಸಮಸ್ಯೆಯನ್ನು ನಿವಾರಿಸುವುದಕ್ಕೆ ಆಗಿಲ್ಲ. ಈ ರೀತಿ ಮಾಡುವುದರಿಂದ ಖಾಸಗಿ ವಾಹನಗಳಿಗೆ ಪ್ರೋತ್ಸಾಹ ಸಿಗುವುದೇ ಹೊರತು, ಕಡಿವಾಣ ಹಾಕಿದಂತಾಗುವುದಿಲ್ಲ. ಇದರಿಂದ ವಾಹನ ದಟ್ಟಣೆ ಜಾಸ್ತಿ ಆಗುತ್ತದೆ. ಇಂತಹದಕ್ಕೆ ಹೆಚ್ಚೆಚ್ಚು ಪ್ರೋತ್ಸಾಹವನ್ನು ಮೊದಲು ನೀಡಿದ್ದು ಇಲ್ಲಿನ ಕಾರ್ಪೋರೇಟ್ ಕಂಪನಿಗಳು.

ಇದನ್ನೂ ಓದಿರಿ: ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?

ಬೆಂಗಳೂರಿನ ಮೊದಲ ಎಲವೇಟೆಡ್ ರೋಡ್‌ಗೆ ಒತ್ತಾಯ ಹಾಕಿದ್ದು ಇನ್ಫೋಸಿಸ್, ಬಯೋಕಾನ್, ವಿಪ್ರೋನಂತಹ ಕಂಪನಿಗಳು. ಅದಕ್ಕೆ ಸ್ವಲ್ಪ ದುಡ್ಡು ಸಹ ಹಾಕಿದರು, ಆದರೆ ಈ ಮೇಲ್ಸೇತುವೆ ಕೇವಲ ಎಲೆಕ್ಟ್ರಾನಿಕ್ ಸಿಟಿಗೆ ಮಾತ್ರ ಹೋಗುತ್ತದೆ ಹಾಗೂ ಬೇರೆ ಎಕ್ಸಿಟ್ ಇಲ್ಲ! 70- 80ರ ದಶಕದ ಪಿ.ಎಸ್.ಯುಗಳು (ಬಿಇಎಲ್, ಐಟಿಐ ಮುಂತಾದವು) ತಮ್ಮ ಕಾರ್ಮಿಕರಿಗೆ ಅಂತ ಬಸ್ ಸಾರಿಗೆ ಸೌಲಭ್ಯ ನೀಡಿದ್ದವು. ಆದರೆ ಇನ್ಫೋಸಿಸ್, ಬಯೋಕಾನ್‌ನಂತಹ ಈಗಿನ ಕಂಪನಿಗಳು ಮೇಲ್ಸೇತುವೆ ಕೇಳುತ್ತವೆ. ಮೆಟ್ರೋ ನಮ್ಮ ಸಮಸ್ಯೆಗೆ ಪರಿಹಾರವಾಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಸಹ ಪರಿಹಾರವಾಗಲಿಲ್ಲ. ದೆಹಲಿಯಲ್ಲಿ 300 ಕಿಲೋಮೀಟರ್‌ಗಿಂತ ಹೆಚ್ಚು ಮೆಟ್ರೋ ರೈಲು ಮಾರ್ಗವಿದೆ; ಆದರೂ ಅಲ್ಲಿ ದಟ್ಟಣೆ ಕಡಿಮೆ ಆಗಿಲ್ಲ. ಬಹಳಷ್ಟು ಬಡವರಿಗೆ ಮೆಟ್ರೋ ಖರ್ಚು ಭರಿಸಲು ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ಈಗ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 9 ಲಕ್ಷ ಮುಟ್ಟಿದೆ. ಬೆಂಗಳೂರಿನ ಜನಸಂಖ್ಯೆ ಈಗ 1.3 ಕೋಟಿ. ಮೆಟ್ರೋ ಫೇಸ್ 2 ಬಂದ ನಂತರ ಸಹ 17 ಲಕ್ಷ ಆಗಬಹುದಷ್ಟೆ. ಈಗ ಮೆಟ್ರೋ ರೈಲು ಇರುವ ರೂಟ್‌ಗಳಲ್ಲಿ ದಟ್ಟಣೆಯೇನು ಕಡಿಮೆ ಆದಹಾಗೆ ಇಲ್ಲ. ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯ ಗುರಿ ಯಾವುದಾಗಿರಬೇಕೆಂದರೆ ಅತಿಹೆಚ್ಚು ಜನರನ್ನು ಅತಿ ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಕೆರೆದುಕೊಂಡು ಹೋಗುವುದು. ಸದ್ಯಕ್ಕೆ ಈ ಕೆಲಸವನ್ನು ಫಲಕಾರಿಯಾಗಿ ಮಾಡುತ್ತಿರುವುದು ಬಿಎಂಟಿಸಿ. ಕೇವಲ 6000 ಬಸ್‌ಗಳಲ್ಲಿ 38.4 ಲಕ್ಷ ಜನ ಓಡಾಡುತ್ತಾರೆ. ಇದರ ಜೊತೆಗೆ ಮಾಮೂಲಿ ರೈಲಿನಲ್ಲೂ ಬಹಳಷ್ಟು ಜನ ಓಡಾಡಬಹುದು. ಆದರೆ ಬರುವ ಎಲ್ಲ ಸರ್ಕಾರಗಳು ಬಸ್‌ಗಳ ಸಂಖ್ಯೆಯನ್ನೂ ಜಾಸ್ತಿ ಮಾಡ್ತಿಲ್ಲ, ಸಬ್‌ಅರ್ಬನ್ ರೈಲನ್ನೂ ವೇಗವಾಗಿ ನಿರ್ಮಿಸುತ್ತಿಲ್ಲ. ವಾಹನಗಳ ದಟ್ಟಣೆ ಕಡಿಮೆ ಮಾಡಲು, ಇನ್ನು ಹೆಚ್ಚು ಹೆಚ್ಚು ರಸ್ತೆಗಳನ್ನು ನಿರ್ಮಿಸಿದರೆ, ಪರಿಹಾರವಾಗುವುದಿಲ್ಲ ಎಂದು ಅರ್ಬನ್ ಪ್ಲಾನಿಂಗ್ ಚಿಂತಕರೆಲ್ಲರೂ ಹೇಳುತ್ತಾರೆ (You cannot build your way out of congestion). ಆದರೆ ಬರುವ ಸರಕಾರಗಳೆಲ್ಲ ಎಲವೇಟೆಡ್ ರೋಡ್ ನೆಟ್ವರ್ಕ್, ಟನೆಲ್ ರೋಡ್ ಇಂತಹ ಯೋಜನೆಗಳನ್ನೇ ತರುತ್ತಾರೆ. ರಸ್ತೆಗಳನ್ನು ಇನ್ನೂ ಅಗಲ ಮಾಡುತ್ತಾರೆ. ಲಾಸ್ ಏಂಜೆಲ್ಸ್‌ನ ಕೆಲವು ರಸ್ತೆಗಳಲ್ಲಿ, ಗುರುಗ್ರಾಮ್‌ನ ಕೆಲವು ರಸ್ತೆಗಳಲ್ಲಿ 24 ಲೇನ್ ಇದ್ದರೂ ವಾಹನ ದಟ್ಟಣೆ ನಿವಾರಣೆ ಆಗಿಲ್ಲ. ಜೊತೆಗೆ ರಸ್ತೆಗಳನ್ನು ಅಗಲೀಕರಣ ಮಾಡಿದಾಗ ಹಲವಾರು ಇತರೆ ಸಮಸ್ಯೆಗಳು ಆಗುತ್ತವೆ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೊಂದುವ ರಸ್ತೆ ಈಗ ಎಷ್ಟು ಆಗಲ ಆಗಿದೆ ಅಂದರೆ ಅಲ್ಲಿ ರಸ್ತೆ ದಾಟಲು ಅಸಾಧ್ಯ. ಬಸ್‌ನಲ್ಲಿ ಇಳಿದು ನೀವು ರಸ್ತೆ ದಾಟಬೇಕೆಂದರೆ ಆಗುವುದೇ ಇಲ್ಲ. ಹಾಗಾಗಿ ಉಳ್ಳವರು ಬಸ್ ಉಪಯೋಗಿಸುವುದು ಸಹ ಕಡಿಮೆ ಮಾಡುತ್ತಾರೆ.

ರಸ್ತೆ ಅಗಲೀಕರಣ ಮಾಡಿದ ಹಲವು ರಸ್ತೆಗಳಲ್ಲಿ (ಉದಾಹರಣೆ- ಹೊಸೂರ್ ರಸ್ತೆ), ಮರಗಳನ್ನು ಕಡಿದರು. ಆದರೆ ಹೊಸ ಸಸಿಗಳನ್ನು ನೆಡಲಿಲ್ಲ. ಅದಕ್ಕೆ ಜಾಗ ಸಹ ಮಾಡಿಲ್ಲ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಮರಗಳ ನೆರಳಿಲ್ಲದೆ, ನಡೆದುಕೊಂಡು ಹೋಗುವುದು ಹೇಗೆ? ನಾವು ಬಸ್ ಪ್ರಯಾಣ, ವಾಕಿಂಗ್ ಅನ್ನು ಪ್ರೋತ್ಸಾಹಿಸಬೇಕೇ ವಿನಾ, ಈ ರೀತಿ ನಿರುತ್ಸಾಹಗೊಳಿಸಬಾರದು. ಈ ನಗರದಲ್ಲಿ ಬಡತನ ಇರುವ ತನಕ ಅನೇಕ ಜನರು ಎಲ್ಲ ಕಡೆ ನಡೆದುಕೊಂಡು ಹೋಗುತ್ತಾರೆ. ಅವರಿಗೆ ಬಸ್ ದರವನ್ನೂ ಭರಿಸಲಾಗುವುದಿಲ್ಲ. ಅವರ ಪಾಡೇನು ಯೋಚಿಸಿ. ನಾಳೆಯ ಬೆಂಗಳೂರು ಹೇಗಿರಬೇಕು? ಅದಕ್ಕೆ ಬೇಕಾಗಿರುವ ತಾತ್ವಿಕ ನೆಲೆಯಾವುದು? ನಾಳೆಯ ಬೆಂಗಳೂರಿನ ಬಗ್ಗೆ ಯೋಚಿಸುತ್ತ, ಅದು ಯಾವ ರೀತಿ ಇರಬೇಕೆಂದರೆ – ಸಂವಿಧಾನ ಭರವಸೆ ನೀಡಿದಂತೆ ಎಲ್ಲರಿಗೂ ಸಮಾನವಾದ ಅವಕಾಶ ದೊರಕಿಸುವ ನಗರವಾಗಬೇಕು, ಎಲ್ಲರಿಗೂ ಘನತೆಯುಳ್ಳ ಜೀವನ ನೀಡುವ ನಗರವಾಗಬೇಕು.

(ಮುಂದುವರಿಯುತ್ತದೆ..)

(ಈದಿನ ಡಾಟ್ ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

vinay 1
ವಿನಯ್ ಶ್ರೀನಿವಾಸ್
+ posts

ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ

ಪೋಸ್ಟ್ ಹಂಚಿಕೊಳ್ಳಿ:

ವಿನಯ್ ಶ್ರೀನಿವಾಸ್
ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...