(ಮುಂದುವರಿದ ಭಾಗ..) ಬಾಬಾಸಾಹೇಬ್ ಅಂಬೇಡ್ಕರ್ ಅವರು `ಸ್ಟೇಟ್ಸ್ ಆಂಡ್ ಮೈನಾರಿಟಿಸ್’ನಲ್ಲಿ ಅವರು ಸೂಚಿಸಿದ ಸಂವಿಧಾನಕ್ಕೆ ಒಂದು ಪೀಠಿಕೆಯನ್ನು ಪ್ರಸ್ತಾಪಿಸುತ್ತಾರೆ. ಅದರಲ್ಲಿ ಪ್ರತಿಯೊಬ್ಬರಿಗೂ ಸಂತೋಷಕ್ಕಾಗಿ ಯತ್ನಿಸುವ ಹಕ್ಕಿರಬೇಕು ಎನ್ನುತ್ತಾರೆ. ನಾಳಿನ ನಮ್ಮ ನಗರ ಸಮಾನತೆ, ನ್ಯಾಯ, ಘನತೆ ಹಾಗೂ ಸಂತೋಷದಿಂದ ತುಂಬಿರಬೇಕು. ಅದು ಸಾಧ್ಯವೇ? ಅಸಾಧ್ಯ ಅಂತೂ ಅಲ್ಲ. ಆದರೆ ಇವುಗಳನ್ನು ಸಾಧಿಸಲು ಇಲ್ಲಿಯತನಕ ಪಾಲಿಸಿಕೊಂಡು ಬಂದ ಅರೆಬೆಂದ ಪರಿಹಾರಗಳು, ನೀತಿಗಳು ಸಾಲದು.
2030ರಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ಆಗುತ್ತೆ ಎಂದು ಬಿಡಿಎ ಅಂದಾಜಿಸಿದೆ. ನಮ್ಮ ಜನಸಂಖ್ಯೆ ಅಷ್ಟು ಮುಟ್ಟದೆ ಇರಬಹುದು. ಆದರೆ ವರ್ಲ್ಡ್ ಪಾಪುಲೇಷನ್ ರಿವ್ಯೂ ಹೇಳಿದ ಹಾಗೆ 1.6 ಕೋಟಿ ತಲುಪುವ ಸಾಧ್ಯತೆ ಇದೆ. ಈಗಾಗಲೇ ನೀರಿಗೆ ಒದ್ದಾಡುತ್ತಿದ್ದೇವೆ, ಟ್ರಾಫಿಕ್ ದಟ್ಟಣೆ ಕಾಡುತ್ತಿದೆ, ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಬೆಂಗಳೂರು ಜನಸಂಖ್ಯೆ 1.6 ಕೋಟಿ ಅಥವಾ 2 ಕೋಟಿ ಆದರೆ, ನಮ್ಮ ನಗರ, ನಗರದ ಭೂಮಿ ಈ ಭಾರವನ್ನು ತಡೆಯುತ್ತದೆಯೇ ಎಂದು ಯೋಚಿಸಬೇಕಾಗಿದೆ. ಎಲ್ಲ ನಗರಗಳಿಗೆ, ಒಂದು ಧಾರಣಾ ಸಾಮರ್ಥ್ಯ (Carrying Capacity) ಇರುತ್ತದೆ, ಕೆಲವು ಸಂಶೋಧಕರ ಪ್ರಕಾರ ಇದನ್ನು ಮೂರು ದೃಷ್ಟಿಕೋನದಿಂದ ನೋಡಬಹುದು – ಆರ್ಥಿಕ, ಸಾಮಾಜಿಕ ಹಾಗೂ ಪರಿಸರೀಯ carrying capacity. ಬೆಂಗಳೂರಿನ Carrying Capacity ಎಷ್ಟಿದೆ ಎಂದು ನಾವು ಅಂದಾಜನ್ನೇ ಮಾಡಿಲ್ಲ. ಬಹುಶಃ ನಾವು ಈ Carrying Capacity ಮೀರಿದ್ದೇವೆ ಎನಿಸುತ್ತಿದೆ. ಕಳೆದ ವರ್ಷ ಮಳೆ ಬರದೆ ಇದ್ದಾಗ, ನಗರದ ಹೊರಭಾಗಗಳಲ್ಲಿ (ಬೆಳ್ಳಂದೂರು ಇತ್ಯಾದಿ) ನೀರು ಸರಬರಾಜು ಬಹಳಷ್ಟು ಕಡಿಮೆ ಆಯಿತು. ಇನ್ನೊಂದು ಸಣ್ಣ ಉದಾಹರಣೆ- ಲಾಲ್ ಬಾಗ್‌ಗೆ ನೀವು ಭಾನುವಾರ ಬೆಳಗ್ಗೆ 6.30ಕ್ಕೆ ಹೋದರೂ ಅಲ್ಲಿ ಮೆಜಸ್ಟಿಕ್‌ನಲ್ಲಿರುವಷ್ಟು ದೊಂಬಿ ಇರುತ್ತದೆ! ಹವಾಮಾನ ಬದಲಾವಣೆ ಆಗುತ್ತಾ, ಸುತ್ತಮುತ್ತಲಿನ ಜಿಲ್ಲೆಗಳಿಂದ, ಇತರೆ ರಾಜ್ಯಗಳಿಂದ ಬರುವ ವಲಸಿಗರ ಸಂಖ್ಯೆ ಜಾಸ್ತಿ ಆಗಬಹುದು. ಅದಕ್ಕೆ ನಾವು ತಯಾರಾಗಿದ್ದೇವೆ?
ಹಾಗಾಗಿ ನಾವು ನಾಳಿನ ಬೆಂಗಳೂರಿನ ಬಗ್ಗೆ ಯೋಚಿಸುತ್ತಾ, ನಾವು ಮುಖ್ಯವಾಗಿ ಯೋಚಿಸಬೇಕಾಗಿರುವುದು ಬೆಂಗಳೂರು ಇನ್ನು ಬೆಳೆಯಬೇಕೆ? ಬೆಳೆಯಬಹುದೇ? ಈ ಬೆಳವಣಿಗೆಯಿಂದ ಹಾನಿಯಾಗುತ್ತಿದ್ದೆಯೇ, ಲಾಭವಾಗುತ್ತದೆಯೇ? ಇನ್ನೊಂದು ಮುಖ್ಯವಾಗಿ ನಾವು ಗಮನಿಸಬೇಕಾಗಿರುವುದೇನೆಂದರೆ, ಜನಸಂಖ್ಯೆ ಹೆಚ್ಚಾದ ಮಾತ್ರಕ್ಕೆ ನಗರದ carrying capacity ಮೇಲೆ ದುಷ್ಪರಿಣಾಮ ಬೀರುವುದಿಲ್ಲ, ಬದಲಿಗೆ ಸಂಪನ್ಮೂಲಗಳ ದುರ್ಬಳಕೆಯಿಂದ. ಉದಾಹರಣೆಗೆ, ಕಾರ್ಮಿಕ ವರ್ಗದ ಕುಟುಂಬವೊಂದು 1BHK ಮನೇಲಿ ಐದು ಜನ ಇದ್ದು, ಒಂದೇ ಒಂದು ದ್ವಿಚಕ್ರ ವಾಹನ ಬಳಸುತ್ತಿರಬಹುದು. ಸಾಫ್ಟ್ ವೇರ್ ಇಂಜಿನಿಯರ್ ದಂಪತಿಗಳಿಬ್ಬರು, ಅವರಿಬ್ಬರಿಗೋಸ್ಕರ ಒಂದು 3BHK ಮನೇಲಿದ್ದು ಎರಡು ಕಾರುಗಳನ್ನು ಉಪಯೋಗಿಸುತ್ತಿರಬಹುದು. ಹಾಗಾಗಿ ನಾಳಿನ ಬೆಂಗಳೂರಿನ ಬಗ್ಗೆ ಯೋಚಿಸುತ್ತ, ಯಾರು ಎಷ್ಟು ಸಂಪನ್ಮೂಲಗಳನ್ನು ಬಳಸುತ್ತಿದ್ದಾರೆ ಎಂದು ಸಹ ಯೋಚಿಸಬೇಕು.

ಇದನ್ನೂ ಓದಿರಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)
ಉತ್ತಮ ನಗರ ಕಟ್ಟಲು ನಾವು ಯಾವ ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತೇವೆ ಎಂದು ಯೋಚಿಸಬೇಕಾಗಿದೆ. ಕಳೆದ 3 ದಶಕಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ, ಎಲ್ಲ ಸರ್ಕಾರಗಳು ಪಾಲಿಸುತ್ತಿರುವ ತತ್ವವೆಂದರೆ `ವರ್ಲ್ಡ್ ಕ್ಲಾಸ್ ಸಿಟಿ’ ತತ್ವ. ಈ `ವರ್ಲ್ಡ್ ಕ್ಲಾಸ್ ಸಿಟಿ’ಯ ಗುರಿ ಮುಟ್ಟಲೆಂದು ಎಸ್.ಎಂ. ಕೃಷ್ಣ ಅವರು ಅಂದಿನ ಕಾರ್ಪೊರೇಟ್ ದಾನಿಗಳನ್ನು ಸೇರಿಸಿ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಮಾಡಿದರು. ಖ್ಯಾತ ನಗರಾಭಿವೃದ್ಧಿ ತಜ್ಞರಾದ ಮೈಕಲ್ ಗೋಲ್ಡ್ಮ್ಯಾನ್, ತಮ್ಮ ಅಂಕಣ “Speculating on the Next World City’’ನಲ್ಲಿ, ಈ `ವರ್ಲ್ಡ್ ಕ್ಲಾಸ್ ಸಿಟಿ’ ಕನಸು ಹೇಗೆ ನಗರದ ಅಸಮಾನತೆಗೆ ಕಾರಣವಾಯಿತು ಹಾಗೂ ನಗರಾಡಳಿತದಲ್ಲಿ ಪ್ರಜಾಸತ್ತಾತ್ಮಕ ಅಂಶಗಳು ಕಡಿಮೆ ಆದವು ಎಂದು ವಿವರಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ- ಐಟಿ ಬಿಟಿ ಕಂಪನಿಗಳಿಗೆ, ಖಾಸಗಿ ನೈಸ್ ರಸ್ತೆಗೆ, ನಗರಾಡಳಿತ ಎಲ್ಲ ಬಾಗಿಲುಗಳನ್ನು ತೆರೆಯುತ್ತವೆ. ಇವುಗಳು ಬರಲು ಕೆರೆ, ಸ್ಲಂ, ಬೀದಿ ವ್ಯಾಪಾರ, ಸಂತೆ ಇವೆಲ್ಲದಕ್ಕೂ ಪೆಟ್ಟು ಬಿದ್ದವು. ಕಾನೂನಿನ ಪ್ರಕಾರ ಗಾರ್ಮೆಂಟ್ ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚು ಮಾಡಬೇಕು, ಆದರೆ ಕಂಪನಿಗಳ ಬೆದರಿಕೆಯಿಂದ ಸರ್ಕಾರಗಳು ಮಾಡುವುದಿಲ್ಲ. ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟರೆ, ಇಡೀ ನಗರ ತಾನಾಗಿಯೇ ಅಭಿವೃದ್ಧಿ ಆಗುವುದು ಎನ್ನುವ ರೀತಿಯಲ್ಲಿ ನಮ್ಮ ನಗರವನ್ನು ನಡೆಸಿಕೊಂಡು ಬಂದಿದ್ದೇವೆ. ಬಡವರ ಧ್ವನಿಗೆ ಬೆಲೆಯಿಲ್ಲ. ನೈಸ್ ರಸ್ತೆ ದಾರೀಲಿ ಸ್ಲಂ ಕಂಡುಬಂದಾಗ, ಅಲ್ಲಿ ಜನರನ್ನು ಕೇಳದೆ ಆ ಸ್ಲಂನ ಎತ್ತಂಗಡಿ ಮಾಡಲಾಯಿತು. ಯಾರಿಗೂ ಕೇಳದೆ ಕೆರೆಗಳನ್ನು ಗುಳುಂ ಮಾಡಲಾಯಿತು. ಕಾರ್ಮಿಕರಿಗೆ, ಬೀದಿ ವ್ಯಾಪಾರಿಗಳಿಗೆ, ಸ್ಲಂ ನಿವಾಸಿಗಳಿಗೆ ನಗರ ಯಾವ ರೀತಿ ಬೇಕು ಎಂಬುದರ ಮೇಲೆ ಪ್ರಭಾವ ಬೀರಲು ಆಗುತ್ತಿಲ್ಲ. ಅವರ ಕೊಡುಗೆಯನ್ನೂ ಪರಿಗಣಿಸಲಾಗುತ್ತಿಲ್ಲ. ನಾಳಿನ ಬೆಂಗಳೂರು ಸಮಾನತೆಯ, ನ್ಯಾಯದ ಊರಾಗಬೇಕಾದರೆ ಈ ತತ್ವಗಳು ನಡೆಯಲ್ಲ. `ಬ್ರಾಂಡ್ ಬೆಂಗಳೂರು’ ತತ್ವ ನಡೆಯುವುದಿಲ್ಲ. ನಮ್ಮ ದೃಷ್ಟಿಕೋನದಲ್ಲಿ, ನೀತಿ ನಿಯಮಗಳಲ್ಲಿ ಮೂಲಭೂತ ಬದಲಾವಣೆಗಳು ಬೇಕು.
ನಮಗೆ ಇಂದು ಬೇಕಾಗಿರುವ ತಾತ್ವಿಕ ನೆಲೆಯನ್ನು ಡೇವಿಡ್ ಹಾರ್ವಿಯವರು ಪ್ರತಿಪಾದಿಸಿದರು. ಅದುವೇ `ರೈಟ್ ಟು ಸಿಟಿ’ಯ ಚೌಕಟ್ಟು. ಆದರೆ ಬಗ್ಗೆ ಮಾತನಾಡುತ್ತ ಹಾರ್ವಿ ಹೀಗೆ ಹೇಳುತ್ತಾರೆ –
The question of what kind of city we want cannot be divorced from that of what kind of social ties, relationship to nature, lifestyles, technologies and aesthetic values we desire. The right to the city is far more than the individual liberty to access urban resources: it is a right to change ourselves by changing the city. It is, moreover, a common rather than an individual right since this transformation inevitably depends upon the exercise of a collective power to reshape the processes of urbanization. The freedom to make and remake our cities and ourselves is, I want to argue, one of the most precious yet most neglected of our human rights.
One step towards unifying these struggles is to adopt the right to the city as both working slogan and political ideal, precisely because it focuses on the question of who commands the necessary connection between urbanization and surplus production and use.
ಅಂದರೆ, ನಗರದ ಸಂಪನ್ಮೂಲಗಳನ್ನು ಎಲ್ಲರ ಹಿತಕ್ಕೆ ಬಳಸುವುದು ಮಾತ್ರವಲ್ಲ, ನಗರ ಯಾವ ರೀತಿ ಬೆಳೆಯುತ್ತದೆ, ಯಾರಿಗೆ ವಸತಿ ನೀಡಬೇಕು, ಯಾವ ಯೋಜನೆಗಳನ್ನು ಕೈಗೊಳ್ಳಬೇಕು- ಇವೆಲ್ಲವನ್ನೂ ರೂಪಿಸವುದರಲ್ಲಿ ಎಲ್ಲರ ಹಕ್ಕಿದೆ ಎಂದು ಹೇಳುತ್ತಾರೆ. ಈ ಚೌಕಟ್ಟನ್ನು, ಈ ತತ್ವವನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಸಹ ಒಪ್ಪಿದೆ. ಡೆಲ್ಲಿ ಸ್ಲಂ ನಿವಾಸಿಗಳ ಕಾನೂನುಬಾಹಿರ ಎತ್ತಂಗಡಿಯ ಪ್ರಕರಣವಾದ `ಅಜಯ್ ಮಾಕೆನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನ್ಯಾ. ಮುರಳೀಧರ್ ಅವರು `ರೈಟ್ ಟು ಸಿಟಿ’ ಚೌಕಟ್ಟಿನ ಆಧಾರದ ಮೇಲೆ ತೀರ್ಪು ನೀಡುವ ಮೂಲಕ ಅದನ್ನು ನಮ್ಮ ನ್ಯಾಯಶಾಸ್ತçದ ಭಾಗವಾಗಿಸಿದರು.
ತೀರ್ಪಿನಲ್ಲಿ ಈ ರೀತಿ ಹೇಳಲಾಯಿತು –
The RTTC acknowledges that those living in JJ clusters in jhuggis/slums continue to contribute to the social and economic life of a city. These could include those catering to the basic amenities of an urban population, and in the context of Delhi, it would include sanitation workers, garbage collectors, domestic help, rickshaw pullers, labourers and a wide range of service providers indispensable to a healthy urban life. Many of them travel long distances to reach the city to provide services and many continue to live in deplorable conditions, suffering indignities just to make sure that the rest of the population is able to live a comfortable life. Prioritising the housing needs of such population should be imperative for a state committed to social welfare and to its obligations flowing from the ICESCR and the Indian Constitution. The RTTC is an extension and an elaboration of the core elements of the right to shelter and helps understand the broad contours of that right.
ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?
ಈ ಪ್ರಕರಣದಲ್ಲಿ ಕೊಟ್ಟ ತೀರ್ಪಿನ ಒಂದು ಮುಖ್ಯ ಭಾಗವೇನೆಂದರೆ, ಸ್ಲಂ ನಿವಾಸಿಗಳ ಶ್ರಮ ನಗರದ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಕಾರಣವಾಗಿದ್ದು, ಅವರಿಗೂ ಈ ನಗರದಲ್ಲಿ ಹಕ್ಕಿದೆ. ಆದರೆ ನಗರಕ್ಕೆ ಕೊಡುಗೆ ನೀಡಿದ ಅವರ ವಸತಿಯ ಪರಿಸ್ಥಿತಿ ಶೋಚನೀಯವಾಗಿದೆ. ಅವರ ಕೆಲಸ ಕಾರ್ಯಗಳಿಗಾಗಿ ಬಹಳಷ್ಟು ದೂರ ಪ್ರಯಾಣಿಸಿ ಬರಬೇಕಾಗಿದೆ. ಹಾಗಾಗಿ ಅವರ ವಸತಿಯ ಹಕ್ಕಿನ ಬಗ್ಗೆ ಗಮನಿಸಬೇಕಾದುದು ಸರ್ಕಾರದ ಜವಾಬ್ದಾರಿ. ಹಾಗಿರಬೇಕಾದರೆ ಅವರ ಸ್ಲಂ ಅನ್ನು ಏಕಾಏಕಿ ಧ್ವಂಸ ಮಾಡುವುದು ಸರಿಯಲ್ಲ. ಎತ್ತಂಗಡಿಯನ್ನು ನಿಲ್ಲಿಸಿ, ಅವರ ಜೊತೆ ಚರ್ಚಿಸಿ, ಅವರಿಗೆ ಅದೇ ಜಾಗದಲ್ಲಿ ಮನೆ ಬೇಕೋ ಅಥವಾ ಅದು ಆಗದಿದ್ದರೆ ಅವರಿಗೆ ಸೂಕ್ತವೆನಿಸುವ ಜಾಗದಲ್ಲಿ ನೆಲೆಸುವಂತೆ ಅವರೊಂದಿಗೆ ತೀರ್ಮಾನಿಸಬೇಕು. ನಗರದ ಸಂಪನ್ಮೂಲಗಳು ಎಲ್ಲರಿಗೂ ಸಮವಾಗಿ ದೊರಕುವಂತೆ ನಗರದ ಬೆಳವಣಿಗೆ, ಯೋಜನೆಗಳನ್ನು ಎಲ್ಲರ ಸಹಭಾಗಿತ್ವದಿಂದ ರೂಪಿಸುವಂತೆ ನೋಡಿಕೊಳ್ಳಬೇಕು. `ರೈಟ್ ಟು ಸಿಟಿ’ ನಾವು ಆಯ್ಕೆ ಮಾಡಿಕೊಳ್ಳಬಹುದಾದ ಒಂದು ಚೌಕಟ್ಟು. ಒಟ್ಟಾರೆ ನಾವು ಯಾವ ಚೌಕಟ್ಟು ಆಯ್ಕೆ ಮಾಡಿದರೂ ಅದು ಸಂವಿಧಾನದ ಪೀಠಿಕೆ ಹೇಳುವ “ಅವಕಾಶಗಳ ಹಾಗೂ ಸ್ಥಾನಮಾನದ ಸಮಾನತೆ’’ಯನ್ನು ನೀಡಬೇಕು. ಅನುಚ್ಛೇಧ 39(b)ರಲ್ಲಿ ಇರುವ ತತ್ವ- “ಸಮುದಾಯದ ಭೌತಿಕ ಸಾಧನ ಸಂಪತ್ತಿನ ಒಡೆತನವು ಮತ್ತು ನಿಯಂತ್ರಣವು ಸಕಲರ ಹಿತಸಾಧನೆಗೆ ಅತ್ಯುತ್ತಮ ರೀತಿಯಲ್ಲಿ ಸಹಾಯಕವಾಗುವಂತೆ ಹಂಚಿಕೆಯಾಗಬೇಕು’’ ಎಂಬುದು ಸಾಕಾರವಾಗಬೇಕು.
ನಮ್ಮ ಊರು ಉಳಿದು, ಸುಸ್ಥಿರವಾಗಿ, ನ್ಯಾಯಯುತವಾಗಿ ಇಲ್ಲಿನ ನಿವಾಸಿಗಳೆಲ್ಲರಿಗೂ ಸಂತೋಷ ನೀಡಬೇಕಾದರೆ ನಾವು ಆಮೂಲಾಗ್ರ ಬದಲಾವಣೆಗಳನ್ನು ತರಬೇಕು. ಅದಕ್ಕಾಗಿ ಈ ಹನ್ನೆರಡು ಸೂತ್ರಗಳನ್ನು ಪಾಲಿಸಬೇಕು.
ನ್ಯಾಯಯುತ, ಸುಸ್ಥಿರ, ಸಂತೋಷದ ನಗರಕ್ಕೆ ಸೂತ್ರಗಳು
1. ಹೋರಾಟದ ಹಕ್ಕನ್ನು ಮರುಸ್ಥಾಪಿಸಬೇಕು
ಕಳೆದ ಎರಡು ವರ್ಷಗಳಿಂದ ನಮ್ಮ ಹೋರಾಟದ ಹಕ್ಕನ್ನು ಕಸಿಯಲಾಗಿದೆ. ಹೋರಾಟಗಳನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಂಧಿಸಲಾಗಿದೆ. ಈ ಹಕ್ಕಿಲ್ಲದೆ ನಗರದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ, ಜನವಿರೋಧಿ ನೀತಿಗಳಿಗೆ ಪ್ರತಿರೋಧ ತೋರಿಸಲು ಆಗುತ್ತಿಲ್ಲ.
ಪ್ರಜಾಪ್ರಭುತ್ವದಲ್ಲಿ, ಪ್ರತಿಭಟನೆ ಎಂಬುದು ಪ್ರಜೆಗಳ ಹಾಗೂ ಸರ್ಕಾರದ ಮಧ್ಯೆ ನಡೆಯುವ ಸಂಭಾಷಣೆ. ಇದಲ್ಲದೆ ನಗರ ಉತ್ತಮವಾಗಲು ಸಾಧ್ಯವಿಲ್ಲ.
2. ನಗರವನ್ನು ಕಾರ್ ಕೇಂದ್ರಿತ ಮಾಡುವ ಬದಲು ಜನಕೇಂದ್ರಿತ ಮಾಡಬೇಕು
ಇಂದು ಕಾರ್‌ಗಳ ಪ್ರಯಾಣಕ್ಕೆ ನಗರವನ್ನು ಹೇಗೆ ಅನುಕೂಲ ಮಾಡುವುದು ಎಂದೇ ಯೋಚನೆ ಇದೆ. ಅದನ್ನು ಕಿತ್ತು, ನಗರದ ಕಡು ಬಡವರು, ವಿಭಿನ್ನ ಚೇತನರು (Differently abled) ಹೇಗೆ ಓಡಾಡುತ್ತಾರೆ ಎಂದು ಯೋಚಿಸಬೇಕು. ಯಾವಾಗ ನಮ್ಮ ರಸ್ತೆಗಳು, ವಯಸ್ಕರು ಹಾಗೂ ವಿಭಿನ್ನ ಚೇತನರಿಗೆ ಉಪಯೋಗಿಸುವಂತೆ ಆಗುವುದೋ, ಆಗ ಅವು ಎಲ್ಲರಿಗೂ ಅನುಕೂಲ ಆಗುವಂತೆ ಇರುತ್ತವೆ.
ಕಾರ್‌ಗಳ ಬಳಕೆಗೆ ಕಡಿವಾಣ ಹಾಕಲು, ನ್ಯೂಯಾರ್ಕ್ ಮುಂತಾದ ನಗರಗಳಂತೆ ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಬೇಕು. ಹತ್ತು ವರ್ಷಗಳಿಂದ ಸ್ಥಗಿತಗೊಂಡ ಬಸ್ ಸಂಖ್ಯೆಯನ್ನು ಮೂರೂ ವರ್ಷಗಳಲ್ಲಿ ಡಬಲ್ ಮಾಡಬೇಕು. ಬಸ್‌ಗಳಿಗೆ ಪ್ರಮುಖ ರಸ್ಥೆಗಳಲ್ಲಿ ಪ್ರತ್ಯೇಕ ಲೇನ್ ನೀಡಬೇಕು. ಪ್ಲಾನ್ ಓವರ್, ಟನಲ್ ರೋಡ್ ಯೋಜನೆಗಳನ್ನು ಕೈಬಿಟ್ಟು ಉತ್ತಮ ಪಾದಚಾರಿ ಮಾರ್ಗಗಳನ್ನು, ಸಾಧ್ಯವಾದ ಕಡೆ ಸೈಕಲ್ ಲೇನ್ ನಿರ್ಮಿಸಬೇಕು. ಪಾದಚಾರಿಗಳಿಗೆ ರಸ್ತೆಗಳನ್ನು ದಾಟಲು ಸ್ಕೈ ವಾಕ್ ಬಿಟ್ಟು, ನೆಲದ ಮೇಲೆ ದಾಟಲು ಅನುಕೂಲ ಮಾಡಿಕೊಡಬೇಕು. ಬೀದಿಬದಿಗಳಲ್ಲಿ ಹೆಚ್ಚಿನ ಮರಗಳನ್ನು ನೆಡಬೇಕು.
3. ಬಡವರಿಗೂ, ವಸತಿ ಜೊತೆ ಭೂಮಿಯ ಹಕ್ಕು ಸಿಗಬೇಕು
ಸ್ಲಂಗಳಲ್ಲಿ ಹೆಚ್ಚು ವಾಸವಾಗಿರುವುದು ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರು ಹಾಗೂ ಸ್ವಲ್ಪ ಮಟ್ಟಕ್ಕೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು. ನಗರದ ಜನ ಸ್ಲಂ ನಿವಾಸಿಗಳನ್ನು ಕೀಳಾಗಿ ನೋಡುತ್ತಾ ಒಂದು ರೀತಿಯ ಅಸ್ಪೃಶ್ಯತೆ ಆಚರಿಸುತ್ತಾರೆ. ಇದು ನಿಲ್ಲಬೇಕು. ಸ್ಲಂ ಸಂಘಟನೆಗಳು ಒತ್ತಾಯಿಸುತ್ತಿರುವ ಹಾಗೆ, ಸ್ಲಂ ನಿವಾಸಿಗಳಿಗೆ ಭೂಮಿಯ ಹಕ್ಕು ನೀಡಬೇಕು. ನಗರದ ಪ್ರತಿ ಹೊಸ ಬಡವಾಣೆಯಲ್ಲಿ 25% ಭೂಮಿಯನ್ನು ಬಡವರಿಗೆ ಮೀಸಲಿಡಬೇಕು. ಹಳೆ ಬಡಾವಣೆಗಳಲ್ಲಿ ಬಡವರಿಗೆ ವಸತಿ ನೀಡುವುದು ಹೇಗೆ ಎಂದು ಸಾರ್ವಜನಿಕ ಚರ್ಚೆಗಳನ್ನು ಕೈಗೊಳ್ಳಬೇಕು. ಕೃಷಿ ಭೂಮಿಗೆ ಮಾಡಿದ ಹಾಗೆ ನಗರದ ಭೂಮಿಗೆ, ಬಹಳಷ್ಟು ಇರುವವರ ಬಳಿ ಸ್ವಲ್ಪ ಭೂಮಿ ಹಿಂಪಡೆದು, ಬಡವರಿಗೆ ನೀಡುವುದು ಹೇಗೆ ಎಂದು ಚರ್ಚಿಸಬೇಕು.
ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು
4. ಸಂವಿಧಾನ ಸೂಚಿಸಿದ ಹಾಗೆ ಆಡಳಿತ ಜನರ ಕೈಗೆ ಬರಬೇಕು
‘ಈ ಸಂವಿಧಾನದ ಬೇರುಗಳು, ಅಧಿಕಾರ, ಸಾರ್ವಭೌಮತ್ವ ಎಲ್ಲವೂ ಜನರಿಂದಲೇ ಪ್ರಾಪ್ತವಾಗಿರುತ್ತದೆ ಎನ್ನುವುದು ಪೀಠಿಕೆಯಲ್ಲಿಯೇ ಸಾಕಾರಗೊಂಡಿದೆ’ ಎಂದು ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡುತ್ತಾ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರ ಜನರ ಬಳಿ ಇರಲಿಲ್ಲ, ದೂರ ಇತ್ತು. ಅಧಿಕಾರ ಜನರ ಬಳಿ ಬರಲೆಂದು ಸಂವಿಧಾನದ 74ನೇ ತಿದ್ದುಪಡಿ ತರಲಾಯಿತು. ನಗರ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಮತ್ತು ಸ್ಪಷ್ಟ ಅಧಿಕಾರ ನೀಡಲು ಹಾಗೂ ಆಡಳಿತದಲ್ಲಿ ಜನರ ಭಾಗವಹಿಸುವಿಕೆ ತರಲು ವಾರ್ಡ್ ಸಮಿತಿಗಳನ್ನು ರಚನೆ ಮಾಡುವುದನ್ನು ಒಂದು ಸಾಂವಿಧಾನಿಕ ಬಾಧ್ಯತೆಯನ್ನಾಗಿ ಆ ತಿದ್ದುಪಡಿ ಸೂಚಿಸಿತು.
ಆದರೆ ಇಂದು ಬೆಂಗಳೂರಿನಲ್ಲಿ ಜನರ ಬಳಿ ಅಧಿಕಾರವಿಲ್ಲ. ಬಿಬಿಎಂಪಿ ಚುನಾವಣಾ ನಡೆದು ನಾಲ್ಕಕ್ಕೂ ಹೆಚ್ಚು ವರ್ಷಗಳಾದವು. ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಅಧಿಕಾರವಿಲ್ಲ. ವಾರ್ಡ್ ಸಮಿತಿಗಳಲ್ಲಿ ಬಡವರ, ಸಾಮಾಜಿಕವಾಗಿ ಶೋಷಿತರಾದವರ ಪ್ರಾತಿನಿಧ್ಯ ಇಲ್ಲ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತೀರ್ಮಾನಗಳನ್ನು ರಾಜ್ಯದ ಮುಖ್ಯಮಂತ್ರಿಗಳು, ಇತರೆ ಸಚಿವರು, ಅಧಿಕಾರಿಗಳು ತೆಗೆದುಕೊಳ್ಳುತ್ತಿದ್ದಾರೆ. ಜನರು ಯಾವುದನ್ನೂ ನಿರ್ಧರಿಸುತ್ತಿಲ್ಲ.
ಹಾಗಾಗಿ ಬಿಬಿಎಂಪಿ ಕಾಯ್ದೆ ತಿದ್ದುಪಡಿ ಮಾಡಿ ವಾರ್ಡ್ ಸಮಿತಿಗಳಲ್ಲಿ- ಬಡವರ, ಶೋಷಿತರ ಪ್ರತಿನಿಧಿತ್ವ ಕಡ್ಡಾಯಗೊಳಿಸಬೇಕು; ನಂತರ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಅಧಿಕಾರವನ್ನು ನೀಡಬೇಕು. ಬಿಬಿಎಂಪಿಯ ಮೇಯರ್‌ಗೆ ಹಾಗೂ ಜನಪ್ರತಿನಿಧಿಗಳಿಗೆ ಹೆಚ್ಚು ಅಧಿಕಾರ ನೀಡಬೇಕು. ಬ್ರೆಜಿಲ್‌ನಲ್ಲಿ ಮಾಡಿದಂತೆ ಪಾರ್ಟಿಸಿಪೇಟರಿ ಬಡ್ಜೆಟಿಂಗ್ ಕೈಗೊಳ್ಳಬೇಕು. ನಗರದ ಬಗ್ಗೆ ತೀರ್ಮಾನಗಳನ್ನು ಸ್ಥಳೀಯ ಸರ್ಕಾರವಾದ ಬಿಬಿಎಂಪಿ ಪಾರದರ್ಶಕವಾಗಿ, ಪ್ರಜಾಸತ್ತಾತ್ಮಕವಾಗಿ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ನಗರದ ನೀತಿ ನಿಯಮಗಳ ನಿರೂಪಣೆಯಲ್ಲಿ ಅತಿಶ್ರೀಮಂತರ ಪ್ರಭಾವ ನಿಲ್ಲಬೇಕು. ಬಿಬಿಎಂಪಿ ಚುನಾವಣೆ ನಡೆಯಬೇಕು.
5. ಬೆಂಗಳೂರಿನಲ್ಲಿ ಮೆಗಾ ಪ್ರಾಜೆಕ್ಟ್‌ಗಳನ್ನು ನಿಲ್ಲಿಸಿ, ಈ ಸಂಪನ್ಮೂಲವನ್ನು ಕರ್ನಾಟಕದ ಇತರೆ ನಗರಗಳ ಅಭಿವೃದ್ಧಿಗೆ ಬಳಸಬೇಕು
ಬರುವ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳುವ ಮೆಗಾ ಪ್ರಾಜೆಕ್ಟ್‌ಗಳು ಹೀಗಿವೆ-
ಪೆರಿಫರಲ್ ವರ್ತುಲ ರಸ್ತೆ (27,000 ಕೋಟಿ)
ಮೆಟ್ರೋ ಮೂರನೇ ಎ ಹಂತ (27,000 ಕೋಟಿ)
ಸ್ಯಾಟೆಲೈಟ್ ಟೌನ್ ಹೊರವರ್ತುಲ ರಸ್ತೆ (17,000 ಕೋಟಿ)
ಟನಲ್ ರಸ್ತೆ (16500 ಕೋಟಿ)
ಒಟ್ಟಾರೆ, ಕೇವಲ ಒಂದು ನಗರದ ಒಂದು ಸಮಸ್ಯೆಗೆ (ವಾಹನ ದಟ್ಟಣೆಗೆ) ಸುಮಾರು 87,500 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡಲಿದೆ (ಇದರಲ್ಲಿ ಸಾರ್ವಜನಿಕ ಸಾರಿಗೆಯಾದ ಬಸ್‌ಗಳಿಗೆ ಒಂದು ಸಣ್ಣ ಭಾಗವನ್ನೂ ಮೀಸಲಿಟ್ಟಿಲ್ಲ). ಇವುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಇವು ನಿಜವಾಗಲೂ ಬೇಕೇ ಎಂದು ಮರುಪರಿಶೀಲಿಸಬೇಕು. ಇದಕ್ಕೆ ಮೀಸಲಿಟ್ಟ ಹಣವನ್ನು ರಾಜ್ಯದ ಇತರೆ ನಗರಗಳಿಗೆ ಬಳಸಿದರೆ ಉಪಯೋಗವಾಗುವುದೇ ಎಂದು ಪರಿಶೀಲಿಸಬೇಕು. ಇದೇ 87,500 ಕೋಟಿಗಳನ್ನು ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೀದರ್ ಮುಂತಾದ ನಗರಗಳಿಗೆ ನೀಡಿದರೆ ಅಲ್ಲಿನ ಮೂಲಭೂತ ಸೌಕರ್ಯವೂ ಉತ್ತಮವಾಗುವುದಲ್ಲದೆ ಬೆಂಗಳೂರಿಗೆ ಬರುವ ವಲಸೆಯೂ ತಗ್ಗುತ್ತದೆ.
ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?
6. ಉದ್ಯೋಗ ಸೃಷ್ಟಿ ಕಡೆಗೆ ನೀತಿ ವಾಲಬೇಕು
ಗ್ರಾಮೀಣ ಭಾರತದಲ್ಲಿರುವ ಹಾಗೆ, ಇಲ್ಲೊಂದು ಉದ್ಯೋಗ ಖಾತರಿ ಯೋಜನೆ ಸ್ಥಾಪಿಸಬೇಕು. ಈ ಯೋಜನೆಯಡಿ ಹೆಚ್ಚಿನ ಮರಗಳನ್ನು ನೆಡುವುದು, ಕೆರೆಗಳನ್ನು ಉಳಿಸಿ ಬೆಳೆಸುವುದು, ಸಮುದಾಯ ಕಿಚನ್‌ಗಳನ್ನೂ ಪ್ರಾರಂಭಿಸುವುದು- ಇತ್ಯಾದಿ ಕೆಲಸಗಳನ್ನು ಮಾಡಬಹುದು. ಆಗ ಉದ್ಯೋಗವು ದೊರಕುತ್ತದೆ, ನಗರ ಹೆಚ್ಚು ಸುಸ್ಥಿರವಾಗುತ್ತದೆ.
ಬೀದಿ ವ್ಯಾಪಾರ ನಗರದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅದು ಪರಿಸರೀಯ ದೃಷ್ಟಿಕೋನದಿಂದ ಸುಸ್ಥಿರವಾಗಿರುವುದಲ್ಲದೆ, ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳನ್ನು, ಸೇವೆಗಳನ್ನು ನೀಡುತ್ತದೆ. ಹಾಗಾಗಿ ನಗರದಲ್ಲಿ ಹೊಸ ಮಾಲ್‌ಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಿ, ಸಂತೆಗಳನ್ನು ಪ್ರಾರಂಭಿಸಬೇಕು. ಬೀದಿ ವ್ಯಾಪಾರವನ್ನು ಉತ್ತೇಜಿಸಬೇಕು.
7. ಸಾರ್ವಜನಿಕ ಸಂಪತ್ತನ್ನು ಬೆಳೆಸಬೇಕು
ಎಲ್ಲರಿಗೂ ಅವಕಾಶಗಳ ಸಮಾನತೆ ದೊರಕಬೇಕೆಂದರೆ, ಸಾರ್ವಜನಿಕ ಸವಲತ್ತುಗಳನ್ನು ಹೆಚ್ಚಿಸಬೇಕು. ಇತ್ತೀಚೆಗೆ ಕರ್ನಾಟಕ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಸಾರ್ವಜನಿಕ ಗ್ರಂಥಾಲಯ ತೆರೆದಿದ್ದು, ಅದು ಅಲ್ಲಿನ ಯುವಜನರಿಗೆ, ವೃದ್ಧರಿಗೆ, ಮಕ್ಕಳಿಗೆ ಎಲ್ಲರಿಗೂ ಅನುಕೂಲವಾಗುತ್ತಿದೆ. ಅದೇ ಯೋಜನೆಯನ್ನು ನಗರದ ಪ್ರತಿ ವಾರ್ಡ್‌ನಲ್ಲಿ ಒದಗಿಸಬೇಕು. ಇಂದಿರಾ ಕ್ಯಾಂಟೀನ್‌ಅನ್ನು ವಿಸ್ತೃತಗೊಳಿಸಬೇಕು ಹಾಗೂ ಯೋಜನೆಯನ್ನು ಕಂಪನಿಗಳಿಂದ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಬೇಕು. ಇದು ಎರಡು ಉದಾಹರಣೆಗಳಷ್ಟೇ- ಒಟ್ಟಾರೆ ನಗರದಲ್ಲಿ ಬಡವರಿಗೂ ವೈಯಕ್ತಿಕ ಬೆಳವಣಿಗೆಯಾಗಬೇಕೆಂದರೆ ಸಾರ್ವಜನಿಕ ಸವಲತ್ತುಗಳು ಹೆಚ್ಚಾಗಬೇಕು.
8. ನಗರದ carrying capacity ಮೀರದಿರುವುದು
ಮೊದಲು ನಗರದ carrying capacity ಬಗ್ಗೆ ಸಾರ್ವಜನಿಕ ಚರ್ಚೆಗಳಾಗಬೇಕು. ಈಗಾಗಲೇ ಹೇಳಿದ ಹಾಗೆ ಇದನ್ನು ಸಾಮಾಜಿಕ, ಆರ್ಥಿಕ ಹಾಗೂ ಸುಸ್ಥಿರತೆಯ ದೃಷ್ಟಿಕೋನದಿಂದ ನೋಡಬೇಕು. ನಮ್ಮ ಸಂಪನ್ಮೂಲಗಳ ಬಳಕೆ ಸುಸ್ಥಿರವಾಗಿದೆಯೇ?
ಉದಾಹರಣೆಗೆ, ನಾವು ಪ್ರತಿದಿನ ಉತ್ಪಾದಿಸುವ ತ್ಯಾಜ್ಯದ ಪ್ರಮಾಣವನ್ನು ಮರುಬಳಕೆ ಮಾಡಲು ಅಥವಾ ಪ್ರೋಸೆಸ್ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗ ಅದನ್ನು ಭೂಮಿಯೊಳಗೆ ಹೂಳುತ್ತಿದ್ದೇವೆ. ಸುತ್ತಮುತ್ತಲಿನ ಹಳ್ಳಿಗಳ ಪರಿಸರ ಹಾಳುಮಾಡುತ್ತಿದ್ದೇವೆ. ಆದರೆ ಈ ಹೆಚ್ಚು ತ್ಯಾಜ್ಯ ಬರುತ್ತಿರುವುದು ಉಳ್ಳವರಿಂದ- ಪ್ಲಾಸ್ಟಿಕ್, ಮದುವೆ ಮನೆ ತ್ಯಾಜ್ಯ, ಹೋಟೆಲ್‌ಗಳ ತ್ಯಾಜ್ಯ ಇತ್ಯಾದಿ. ಹಾಗಾಗಿ ಒಂದು ಸಂಪನ್ಮೂಲಗಳ ಬಳಕೆಯ ಆಡಿಟ್ ಮಾಡಬೇಕು. ನೀರು, ಭೂಮಿ, ಆಹಾರ, ವಿದ್ಯುತ್- ಇವೆಲ್ಲವನ್ನೂ ಯಾರು ಎಷ್ಟು ಬಳಸುತ್ತಿದ್ದಾರೆ ಎಂದು ಗಮನಿಸಿ, ವ್ಯರ್ಥತೆಗೆ ಕಡಿವಾಣ ಹಾಕಬೇಕು. ಇದನ್ನು ವಾರ್ಡ್ ಮಟ್ಟದಲ್ಲಿ ಮಾಡಬಹುದು.
9. ನಗರದಲ್ಲಿ ನಾಡಿನ ಕಲೆ, ಸಂಸ್ಕೃತಿ, ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು
ದಿನ ನಿತ್ಯದ ಜೀವನದಲ್ಲಿ ಸಂತಸ ತರುವುದು- ಹಾಡು, ಸಾಹಿತ್ಯ, ಕಲೆ, ಕ್ರೀಡೆ, ಪರಿಸರ. ನಮ್ಮ ಸಾಹಿತ್ಯ ಎಲ್ಲರಿಗೂ ತಲುಪುವಂತೆ ಆಗಬೇಕು. ಮೇಲೆ ನಮೂದಿಸಿದ ಹಾಗೆ ಗ್ರಂಥಾಲಯಗಳನ್ನು ಉತ್ತಮಪಡಿಸಿದರೆ ಅದು ಒಂದು ದಾರಿ. ಜೊತೆಗೆ, ಬಿಬಿಎಂಪಿ ಗೋಡೆ ಮೇಲೆ ಚಿತ್ರಗಳನ್ನು ಚಿತ್ರಿಸುವ ಜೊತೆಗೆ ನಾಡಿನ ಕವಿಗಳ ಕವಿತೆಗಳನ್ನು ಮುದ್ರಿಸಬಹುದು. ಸ್ಲಂಗಳಲ್ಲಿ ಬುಕ್ ರೀಡಿಂಗ್ಸ್, ಸಂವಾದಗಳನ್ನು ಆಯೋಜಿಸಬಹುದು. ಬಿಬಿಎಂಪಿ ವತಿಯಿಂದ ಸಾರ್ವಜನಿಕ ಸಂಗೀತ ಶಿಬಿರಗಳನ್ನು ಆಯೋಜಿಸಬಹುದು. ಅದೇ ರೀತಿ ಕ್ರೀಡೆಗಳ ಆಯೋಜನೆ ಆಗಬೇಕು. ನಮಗೆ ನಿಜವಾಗಲೂ ಸಂತೋಷದ ನಗರವನ್ನು ಕಟ್ಟುವ ಹಂಬಲವಿದ್ದರೆ ಕಲೆ, ಕ್ರೀಡೆಯ ಪಾತ್ರವನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಬಿಎಂಪಿಯಲ್ಲಿ ಕಲೆ ಹಾಗೂ ಕ್ರೀಡೆಗೆ ಇಲಾಖೆಯೇ ಇಲ್ಲ. ಕಲೆ, ಸಾಹಿತ್ಯ, ಕ್ರೀಡೆ ಜನರಿಗೆ ತಲುಪಲು ಸ್ಥಳೀಯ ಸರ್ಕಾರಗಳು ಒತ್ತು ಕೊಡಬೇಕು. ಇದನ್ನು ಪರಿಗಣಿಸುವಾಗ ಬೆಂಗಳೂರು ಬಹುಭಾಷಿಗರ ನಗರ ಎಂದು ಮರೆಯದೆ, ಕಲಾ ನೀತಿ ನಿಯಮಗಳನ್ನು ರೂಪಿಸಬೇಕು.
10. ನಗರದ ಪ್ಲಾನಿಂಗ್ ಪ್ರಕ್ರಿಯೆ ಮೇಲಿನ ಎಲ್ಲಾ ಅಂಶಗಳನ್ನು ಒಳಗೊಂಡ ಜನಕೇಂದ್ರಿತ ಪ್ರಕ್ರಿಯೆಯಾಗಬೇಕು
ಬೆಂಗಳೂರಿನ ಮಾಸ್ಟರ್ ಪ್ಲಾನ್‌ನ ಅವಧಿ 2015ಕ್ಕೆ ಮುಗಿಯಿತು, ಆದರೆ ಹೊಸ ಪ್ಲಾನ್ ಆಗದಿರುವ ಕಾರಣ ಇನ್ನೂ ಅದೇ ಪ್ಲಾನ್ ಬಳಸಲಾಗಿದೆ. ನಮಗೆ ಹೊಸ ಪ್ಲಾನ್ ಜೊತೆಗೆ ಹೊಸ ಪ್ಲಾನಿಂಗ್ ಪ್ರಕ್ರಿಯೆ ಬೇಕಾಗಿದೆ. ಸಂವಿಧಾನದ 12ನೇ ಶೆಡ್ಯೂಲ್ ಪ್ರಕಾರ ಪ್ಲಾನಿಂಗ್ ಅನ್ನು ಸ್ಥಳೀಯ ಸರ್ಕಾರ (ಅಂದರೆ ಇಲ್ಲಿ ಬಿಬಿಎಂಪಿ) ಮಾಡಬೇಕಾಗಿದೆ. ಆದರೆ ಇಲ್ಲಿಯತನಕ ಆ ಕೆಲಸವನ್ನು ಜನಪ್ರತಿನಿಧಿಗಳ ಪ್ರಾತಿನಿಧ್ಯ ಇಲ್ಲದಿರುವ ಬಿಡಿಎ, ಖಾಸಗಿ ಕನ್ಸಲ್ಟೆಂಟ್‌ಗಳ ಜೊತೆ ಮಾಡಿಕೊಂಡು ಬಂದಿದೆ. ಈ ಯೋಜನೆಗಳು ನಗರದ ಉತ್ತಮ ಬೆಳವಣಿಗೆಗೆ ಅನುಕೂಲವಾಗಿಲ್ಲ. ನಮಗೆ ಬೇಕಾಗಿರುವುದು ಒಂದು Top-Down ಪ್ಲಾನಿಂಗ್ ಪ್ರಕ್ರಿಯೆ ಅಲ್ಲ, ಬದಲಿಗೆ Bottom-up ಪ್ರಕ್ರಿಯೆ. ಪ್ಲಾನಿಂಗ್ ಅನ್ನು ವಾರ್ಡ್ ಸಮಿತಿಗಳಿಂದ ಪ್ರಾರಂಭಿಸಿ, ಅದನ್ನು ಬಿಬಿಎಂಪಿಯಲ್ಲಿ ಒಗ್ಗೂಡಿಸಬೇಕು. ಪ್ಲಾನಿಂಗ್ ಜನರ ಹಿತವನ್ನು ಕಾಪಾಡಬೇಕು, `ರೈಟ್ ಟು ಸಿಟಿ’ ಚೌಕಟ್ಟಿನ ಸುಸ್ಥಿರತೆ ಕಡೆಗೆ ಇರಬೇಕು. ಇದರ ಬಗ್ಗೆ ಹೆಚ್ಚಿನ ಸಾರ್ವಜನಿಕ ಚರ್ಚೆಗಳಾಗಬೇಕು. ನಂತರ ಕಾನೂನಿನ ತಿದ್ದುಪಡಿಯಾಗಬೇಕು.
ಸರ್ಕಾರ ರಚಿಸಿದ ಸಮಿತಿಯೊಂದು ಬಿಬಿಎಂಪಿ ವಿಭಜಿಸಲು ಹಾಗೂ ಪ್ಲಾನಿಂಗ್ ಪ್ರಕ್ರಿಯೆ ಬದಲಾಯಿಸಲು ಕರಡು ಕಾನೂನನ್ನು ರಚಿಸಿದೆ. ಅದರಲ್ಲಿ ಕೆಲವು ಒಳ್ಳೆಯ ಅಂಶಗಳು ಇವೆ, ಆದರೆ ಆ ಕಾನೂನು ಸಹ ನಮಗೆ ಬೇಕಾದ ಬದಲಾವಣೆಗಳನ್ನು ತರುವುದಿಲ್ಲ. ನಗರದ ಪ್ಲಾನಿಂಗ್ ಹಾಗೂ ಆಡಳಿತದಲ್ಲಿ ಮೂಲಭೂತ ಬದಲಾವಣೆಗಳು ಬೇಕಿದ್ದು, ಅದಕ್ಕೆ ವಿಸ್ತಾರವಾದ ಸಾರ್ವಜನಿಕ ಚರ್ಚೆಗಳು ನಡೆದು ಹೊಸ, ಜನಪರ ಕಾಯ್ದೆ ಬೇಕಾಗಿದೆ.
ನಾಗರಿಕ ಸಮಾಜದ ಪಾತ್ರ
ಮೇಲಿನ ನಿಯಮಗಳು ಜಾರಿಗೆ ಬರಬೇಕೆಂದರೆ, ನಾವು ಬಹಳಷ್ಟು ಶ್ರಮಪಡಬೇಕಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಯಾವ ಸರ್ಕಾರವೂ ಇವುಗಳನ್ನು ಪಾಲಿಸಲು ಒಪ್ಪುವುದಿಲ್ಲ. ಏಕೆಂದರೆ ಇವು ಉಳ್ಳವರ ವಿರುದ್ಧವಾಗಿವೆ, ಶೋಷಿತರ ಪರವಾಗಿವೆ. ಹಾಗಾಗಿ ನಾಗರಿಕ ಸಮಾಜ, ಪ್ರಗತಿಪರ ಸಂಘಟನೆಗಳು ದೊಡ್ಡ ಪಾತ್ರ ವಹಿಸಬೇಕಾಗಿದೆ. ಇಂದು ನಗರಾಭಿವೃದ್ಧಿ ಬಗ್ಗೆ ಆಗುತ್ತಿರುವ ಚರ್ಚೆಗಳು ಎಲ್ಲವೂ ಇಂಗ್ಲಿಷ್‌ನಲ್ಲಿ ಆಗುತ್ತವೆ, ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಗಳು (ವಿಶ್ವ ಬ್ಯಾಂಕ್, ಏಷಿಯನ್ ಡೆವಲಪ್‌ಮೆಂಟಲ್ ಬ್ಯಾಂಕ್ ಇತ್ಯಾದಿ), ಕಾರ್ಪೊರೇಟ್ ಮಹಾನುಭಾವರು ಹೇಳಿರುವುದನ್ನೇ ಸರ್ಕಾರಗಳು ಪಾಲಿಸುತ್ತಿರುವುದು. ಇದನ್ನು ಬದಲಿಸಬೇಕು. ನಮ್ಮ ನಗರ ಹೇಗಿರಬೇಕೆಂದು ಹೆಚ್ಚಿನ ಚರ್ಚೆಗಳನ್ನು ಕನ್ನಡದಲ್ಲಿ ಆಯೋಜಿಸಬೇಕು, ಬರೆವಣಿಗೆಗಳ ಸುರಿಮಳೆಯಾಗಬೇಕು. ಉಳ್ಳವರ ಧ್ವನಿ ಮಾತ್ರ ಕೇಳುವ ಜಗತ್ತಿನಲ್ಲಿ ನಗರದಲ್ಲಿ ಮೂಲೆಗುಂಪಾದವರ ಧ್ವನಿ ಮುಂದೆ ಬರಬೇಕು. ಉಳ್ಳವರೆಲ್ಲರೂ ಸ್ಲಂ ಜನರ ಸಂಘಟನೆಗಳ ಪರ ನಿಲ್ಲಬೇಕು. ನ್ಯಾಯಯುತ ಸಾರಿಗೆ ವ್ಯವಸ್ಥೆಗೆ ಹೋರಾಡಬೇಕು. ಕರ್ನಾಟಕದ ಇತರೆ ಜಿಲ್ಲೆಗಳ ಅಭಿವೃದ್ಧಿ ಮಾಡದೆ ಏಕೆ ಕೇವಲ ಬೆಂಗಳೂರಿಗೆ ಸಾವಿರಾರು ಕೋಟಿಗಳನ್ನು ಸುರಿಯಲಾಗುತ್ತಿದೆ ಎಂದು ಪ್ರಶ್ನಿಸಬೇಕು. ಡೇವಿಡ್ ಹಾರ್ವಿ ಹೇಳಿದ ಹಾಗೆ, `ನಗರದ ಸಂಪನ್ಮೂಲಗಳ ಮೇಲಿನ ಅಧಿಕಾರಕ್ಕೆ ಹೋರಾಟ ಕಟ್ಟಬೇಕಾಗಿದೆ. ನಮ್ಮ ನಗರವನ್ನು ಪ್ರಜಾಸತ್ತಾತ್ಮಕಗೊಳಿಸಬೇಕಾಗಿದೆ. ನಗರವನ್ನು ಎಲ್ಲರ, ಮುಖ್ಯವಾಗಿ ಶೋಷಿತರ ಸಹಭಾಗಿತ್ವದ ಮೂಲಕ ಮರುನಿರ್ಮಾಣ ಮಾಡಬೇಕಾಗಿದೆ. ಈ ನಗರ ಎಲ್ಲರಿಗೂ ಎಂದು ಒತ್ತಿ ಒತ್ತಿ ಕೂಗಬೇಕು, ಕೂಗುವುದರ ಜೊತೆಗೆ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಹೋರಾಡಬೇಕು.’ ಈಗಲೂ ಕಾಲ ಮಿಂಚಿಲ್ಲ. ಈ ನಗರವನ್ನು ಉಳಿಸಿ, ಇದನ್ನು ಕಾರುಣ್ಯದ ನಗರವನ್ನಾಗಿ ಮಾಡೋಣ.

ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ




