ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅನೇಕ ವಿಚಾರಗಳಿಗೆ ಜಟಾಪಟಿ ಆಗುತ್ತಲೇ ಇರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಈ ಜಟಾಪಟಿ ಮೇಲಿಂದ ಮೇಲೆ ಹಲವು ವಿಷಯಗಳ ತುಸು ಹೆಚ್ಚೇ ಎನಿಸುವಷ್ಟು ಜರುಗಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯಗಳ ಹಿತಾಸಕ್ತಿಯನ್ನು ಪರಿಗಣಿಸದೆ ಸರ್ವಾಧಿಕಾರಿಯಂತೆ ನಡೆದುಕೊಂಡಿದೆ ಎಂದು ಹಲವು ರಾಜ್ಯಗಳು ಮೇಲಿಂದ ಮೇಲೆ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇವೆ. ಕೃಷಿ ಕಾನೂನುಗಳು, ಸಹಕಾರ, ತೆರಿಗೆ ಹಂಚಿಕೆ, ಹಣಕಾಸು, ರಾಜಕೀಯ ಆಡಳಿತ, ರಾಜ್ಯಪಾಲರ ನೇಮಕ, ಅಧಿಕಾರ ಇತ್ಯಾದಿ ವಿಷಯಗಳಲ್ಲಿ ಒಕ್ಕೂಟ ಸರ್ಕಾರ ಮೂಗು ತೂರಿಸುತ್ತಲೇ ಇದೆ. ಈ ದೇಶದ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಾವಳಿಗಳ ಕರಡು ಈ ಪ್ರವೃತ್ತಿಗೆ ಮತ್ತೊಂದು ತಾಜಾ ಉದಾಹರಣೆ.
ಭಾರತದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಭಾರೀ ಬದಲಾವಣೆ ತರಲು ಯುಜಿಸಿ ಮುಂದಾಗಿದೆ. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಬೋಧಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುವ ಮತ್ತು ಬಡ್ತಿ ನೀಡುವ ಸಂಬಂಧ ಜಾರಿಯಲ್ಲಿದ್ದ 2018ರ ನಿಯಮಗಳನ್ನು ರದ್ದುಪಡಿಸಿ ‘ಯುಜಿಸಿ ಕಾಯ್ದೆ– 1956’ರ ಅನ್ವಯ ಹೊಸ ನಿಯಮ ರೂಪಿಸಲು ಹೊಸ ಕರಡನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ ತಯಾರಿಸಿದೆ.
ಯುಜಿಸಿ ಮಾನ್ಯತೆ ಇರುವ ಎಲ್ಲ ವಿಶ್ವವಿದ್ಯಾಲಯ, ಸಂಸ್ಥೆ/ಕಾಲೇಜು, ಸಂಯೋಜಿತ ಕಾಲೇಜು, ಡೀಮ್ಡ್ ಯೂನಿವರ್ಸಿಟಿಗಳಿಗೂ ಈ ನಿಯಮಾವಳಿಗಳನ್ನು ಅನ್ವಯಿಸಲು ಉದ್ದೇಶಿಸಲಾಗಿದೆ. ಹೊಸ ನಿಯಮಾವಳಿಗಳು ಜಾರಿಗೆ ಬಂದರೆ ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ, ಆಡಳಿತ ನಿರ್ವಹಣೆಯ (ಬಿಬಿಎ, ಎಂಬಿಎ ಇತ್ಯಾದಿ) ವಿಶ್ವವಿದ್ಯಾಲಯ/ಕಾಲೇಜುಗಳಿಗೂ ಇದು ಅನ್ವಯವಾಗಲಿದೆ ಎಂದು ಯುಜಿಸಿ ತಿಳಿಸಿದೆ.
ಈ ಕರಡಿನಲ್ಲಿ ಬೋಧಕರ ನೇಮಕಾತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದ್ದರೆ, ಬಡ್ತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬಿಗಿಗೊಳಿಸಲಾಗಿದೆ. 2025 ರ ಜನವರಿ ಮೊದಲ ವಾರದಲ್ಲಿ ಕರಡನ್ನು ಬಿಡುಗಡೆಗೊಳಿಸಿದ ಯುಜಿಸಿ, 2025 ಫೆಬ್ರವರಿ 5ರ ಒಳಗಾಗಿ ಈ ನಿಯಮಾವಳಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಹೊಸ ನಿಯಮಗಳು ಜಾರಿಗೆ ಬಂದ ನಂತರ ಆರು ತಿಂಗಳ ಒಳಗಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಅವುಗಳಿಗೆ ತಕ್ಕಂತೆ ತಮ್ಮ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕೂಡ ಯುಜಿಸಿ ಹೇಳಿದೆ.
ಅತಿ ಮುಖ್ಯವಾಗಿ ಈ ಕರಡಿನಲ್ಲಿ ಕುಲಪತಿಗಳ ನೇಮಕಾತಿ ನಿಯಮಗಳಲ್ಲಿ ಭಾರೀ ಬದಲಾವಣೆಗಳನ್ನು ತರಲು ಯುಜಿಸಿ ಉದ್ದೇಶಿಸಿದೆ. ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಯ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟುಕುಗೊಳಿಸಿ, ರಾಜ್ಯಪಾಲರಿಗೆ ಹೆಚ್ಚು ಅಧಿಕಾರ ನೀಡುವ ಬಗ್ಗೆ ಇಲ್ಲಿ ಪ್ರಸ್ತಾವವಿದೆ. ಯುಜಿಸಿಯ ಕರಡು ನಿಯಮಾವಳಿಗೆ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳು ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿವೆ.
ಬದಲಾವಣೆಗಳು ಏನೇನು?
ಕುಲಪತಿ ಆಯ್ಕೆಯ ನಿಯಮಗಳು ಇದುವರೆಗೆ ಹೇಗಿತ್ತೆಂದರೆ – ವಿಶ್ವವಿದ್ಯಾಲಯ ಅಥವಾ ಯಾವುದೇ ಪ್ರಮುಖ ಶೈಕ್ಷಣಿಕ ಸಂಸ್ಥೆ ಅಥವಾ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ಆಡಳಿತಾತ್ಮಕ ಹುದ್ದೆಯಲ್ಲಿ ಅನುಭವ ಮತ್ತು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವ ಇರಬೇಕಾಗಿತ್ತು.
ಆದರೀಗ ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ, ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹಿರಿಯ ಶ್ರೇಣಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ ಹತ್ತು ವರ್ಷ ಅನುಭವ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರು ಕುಲಪತಿ ಹುದ್ದೆಗೆ ಅರ್ಹರಾಗುತ್ತಾರೆ ಎಂದು ಕರಡು ನಿಯಮಾವಳಿ ಹೇಳುತ್ತಿದೆ.

ಈ ಅಂಶಗಳನ್ನೇ ರಾಜ್ಯ ಸರ್ಕಾರದ ಆದಿಯಾಗಿ ಪ್ರಜ್ಞಾವಂತರೆಲ್ಲರೂ ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ಈ ನಿಯಮದಲ್ಲಿರುವ ಸಮಸ್ಯೆಯಾದರೂ ಏನು ಎನ್ನುವುದನ್ನು ನೋಡುವುದಾದರೆ – ಮೊದಲನೆಯದಾಗಿ ಒಂದು ವೇಳೆ ಈ ನಿಯಮಗಳು ಜಾರಿಯಾದರೆ ಬಂಡವಾಳಶಾಹಿಗಳು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಕುಲಪತಿಗಳಾಗುತ್ತಾರೆ. ಈ ದೇಶದ ಬಹುತೇಕ ಬಂಡವಾಳಶಾಹಿಗಳು ಯಾವ ಸಾಮಾಜಿಕ ಹಿನ್ನೆಲೆಯುಳ್ಳವರು ಎನ್ನುವುದನ್ನು ನೋಡಿದರೆ ಅವರೆಲ್ಲಾ ಬಹುತೇಕ ಸಮಾಜದ ಮೇಲ್ವರ್ಗಕ್ಕೆ ಸೇರಿದ ಸಮುದಾಯದಿಂದ ಬಂದವರೇ ಆಗಿದ್ದಾರೆ. ಇದರಿಂದಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯೇ ದೊಡ್ಡ ಅಪಹಾಸ್ಯಕ್ಕೆ ಗುರಿಯಾಗುತ್ತದೆ, ವಿರೋಧಭಾಸಕ್ಕೆ ಕಾರಣವಾಗುತ್ತದೆ. ಕುಲಪತಿಗಳ ಸ್ಥಾನದಲ್ಲಿ ಯಾವುದೋ ಖಾಸಗಿ ಕಂಪನಿಯ ಎಂ.ಡಿ.ಗಳು ಬಂದು ಕೂತರೆ, ಕೆಳವರ್ಗದ ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಕಾರಣಕ್ಕಾಗಿ ಉನ್ನತ ಶಿಕ್ಷಣದಿಂದ ಹೊರಗಿಡುವುದು ಖಚಿತ. ಮೀಸಲಾತಿ ನೀತಿಯನ್ನು ಕಡೆಗಣಿಸಿ ‘ಲ್ಯಾಟರಲ್ ಎಂಟ್ರಿ’ ಮೂಲಕ ಖಾಸಗಿ ಉದ್ಯಮಗಳ ನೌಕರರನ್ನು ಕುಲಪತಿಗಳನ್ನಾಗಿಸಿದರೆ, ಈಗತಾನೇ ಉನ್ನತ ಹುದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಳ ಸಮುದಾಯದ, ಅಲ್ಪಸಂಖ್ಯಾತ ಸಮುದಾಯದ, ಹಿಂದುಳಿದ ಹಾಗೂ ಮಹಿಳಾ ಸಮುದಾಯಗಳ ಪಾಲಿನ ಅವಕಾಶದ ಬಾಗಿಲುಗಳು ಶಾಶ್ವತವಾಗಿ ಮುಚ್ಚುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿರಿ: ‘ಕೆಪಿಎಸ್‌ಸಿ’ ಎಂದರೆ ಕರ್ನಾಟಕ ‘ಲೋಪ’ಸೇವಾ ಆಯೋಗವೇ?
ಎರಡನೆಯದಾಗಿ ಇಲ್ಲಿಯತನಕ ಇದ್ದಂತಹ ನಿಯಮಾವಳಿಗಳ ಪ್ರಕಾರ, ಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಐವರು ಸದಸ್ಯರ ಶೋಧನಾ ಸಮಿತಿಯನ್ನು ರಚಿಸುತ್ತಿತ್ತು. ಅದರಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರು ಶಿಫಾರಸ್ಸು ಮಾಡುವ ವ್ಯಕ್ತಿಗಳು ಕೂಡ ಸದಸ್ಯರಾಗಿರುತ್ತಿದ್ದರು. ಆದರೆ ಕರಡು ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಈ ಹೊಸ ನಿಯಮದ ಪ್ರಕಾರ ಶೋಧನಾ ಸಮಿತಿಯಲ್ಲಿ ಕೇವಲ ಮೂವರು ಮಾತ್ರ ಇದ್ದು ಅವರು ಕ್ರಮವಾಗಿ ಕುಲಾಧಿಪತಿ (ರಾಜ್ಯಪಾಲ), ಯುಜಿಸಿಯ ಸರ್ವೋಚ್ಚ ವ್ಯಕ್ತಿ ಹಾಗು ವಿಶ್ವವಿದ್ಯಾಲಯದ ಸರ್ವೋಚ್ಚ ವ್ಯಕ್ತಿಯಾಗಿರುತ್ತಾರೆ.
ಯುಜಿಸಿಯ ಈ ಕ್ರಮವು ರಾಜ್ಯಸರ್ಕಾರಗಳನ್ನು ತಮ್ಮ ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿಡುವ ಹುನ್ನಾರ ಎಂಬುದನ್ನು ಗಮನಿಸಲೇಬೇಕಾದ ಅಂಶವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ರಾಜ್ಯಸರ್ಕಾರಗಳ ಮೇಲೆ ಒಕ್ಕೂಟ ಸರ್ಕಾರ ಮಾಡುತ್ತಿರುವ ನೇರ ಸವಾರಿ ಇದಾಗಿದೆ. ಆ ಮೂಲಕ ರಾಜ್ಯದ ಅಧಿಕಾರವನ್ನೇ ಸಂಪೂರ್ಣ ಇಲ್ಲವಾಗಿಸುವ ಸಂಚು ಇದು!
ಯುಜಿಸಿ ಅಧ್ಯಾಪಕರ ವೇತನ, ಪಿಂಚಣಿ, ಅಭಿವೃದ್ಧಿ ಸೇರಿದಂತೆ ರಾಜ್ಯಗಳು ಉನ್ನತ ಶಿಕ್ಷಣಕ್ಕೆ ಬಹುದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿವೆ. ಆದರೆ ಆಯ್ಕೆಯ ಪ್ರಕ್ರಿಯೆಯಲ್ಲಿ ಮಾತ್ರ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲದಿರುವುದು ಒಕ್ಕೂಟ ವ್ಯವಸ್ಥೆಯ ಸಾಮರಸ್ಯಕ್ಕೆ ಒಡ್ಡುತ್ತಿರುವ ಧಕ್ಕೆ. ಶಿಕ್ಷಣ ಸಮವರ್ತಿ ಪಟ್ಟಿಗೆ ಸೇರಿದ ವಿಷಯವಾಗಿದ್ದು, ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ಈ ಕುರಿತಂತೆ ನೀತಿ ನಿರೂಪಣೆ ಮಾಡುವ ಅಧಿಕಾರವಿದೆ ಎನ್ನುವುದು ಸಂವಿಧಾನಾತ್ಮಕ ಅಂಶವೇ ಆಗಿದ್ದರೂ, ಒಕ್ಕೂಟ ಸರ್ಕಾರದ ಅತಿಯಾದ ಮೂಗುತೂರಿಸುವಿಕೆಯಿಂದಾಗಿ ಅಥವಾ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲೇಬೇಕೆಂಬ ಕೇಂದ್ರದ ಹಠದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಶಿಕ್ಷಣ ಕ್ಷೇತ್ರದ ನಿರ್ವಹಣೆ ರಾಜ್ಯ ಸರ್ಕಾರದ ಪರಮಾಧಿಕಾರವಾಗಿದ್ದು, ಇದರಲ್ಲಿ ಅನಗತ್ಯ ಮಧ್ಯಪ್ರವೇಶದಿಂದ ಒಕ್ಕೂಟ ಮತ್ತು ರಾಜ್ಯಗಳ ನಡುವೆ ಘರ್ಷಣೆ ಏರ್ಪಡುವ ಸಾಧ್ಯತೆ ಈಗಾಗಲೇ ಎದ್ದು ಕಾಣುತ್ತಿದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದಾಗ್ಯೂ ಕೇಂದ್ರ ಸರ್ಕಾರವು ತನ್ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಮತ್ತೊಂದು ಹುನ್ನಾರವಿದು.
2020ರಲ್ಲಿ ಇಡೀ ಭಾರತ ಕೋವಿಡ್ ಸಾಂಕ್ರಾಮಿಕದಿಂದ ನರಳುತ್ತಿದ್ದ ಹೊತ್ತಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಕರಡನ್ನು ಸಿದ್ಧಪಡಿಸಿ, ‘ಹೊಸ ಭಾರತೀಯ ಜ್ಞಾನ ಮೀಮಾಂಸೆ’ಯನ್ನು ಹುಟ್ಟು ಹಾಕುತ್ತಿದ್ದೇವೆ ಎಂದು ಇದೇ ಒಕ್ಕೂಟ ಸರ್ಕಾರ ಏಕಾಏಕಿ ಮುಂದಡಿ ಇಟ್ಟದ್ದು ನಮಗೆಲ್ಲಾ ನೆನಪಿರುವ ಸಂಗತಿ. ಈ ಕುರಿತು ಯಾವುದೇ ರಾಜ್ಯಗಳ ಅಭಿಪ್ರಾಯವನ್ನೂ ಕೇಳದೆ, ಎನ್ಇಪಿಯ ಕರಡನ್ನು ಮಂಡಿಸಲು ಮುಂದಾದ ಒಕ್ಕೂಟ ಸರ್ಕಾರ ನಂತರದಲ್ಲಿ ತಮ್ಮ ಅಭಿಪ್ರಾಯ ನೀಡಲು ರಾಜ್ಯಗಳಿಗೆ ಕಾಲಾವಕಾಶ ನೀಡಿದರೂ, ಆ ಸಮಯ ತೀರಾ ಅಲ್ಪಾವಧಿಯದ್ದಾಗಿತ್ತು, ತರಾತುರಿಯಿಂದ ಕೂಡಿತ್ತು. ಆದಾಗ್ಯೂ ಕೊಟ್ಟ ಅಲ್ಪಾವಧಿಯಲ್ಲೇ ಎನ್ಇಪಿ ಕರಡಿನಲ್ಲಿದ್ದ ಸಾಧಕ ಬಾಧಕಗಳ ಕುರಿತು ಲಕ್ಷಾಂತರ ಮಂದಿ ತಮ್ಮ ಅಭಿಪ್ರಾಯಗಳನ್ನು ನೀಡಿದರೂ ಒಕ್ಕೂಟ ಸರ್ಕಾರ ಈ ಅಭಿಪ್ರಾಯ, ಅನಿಸಿಕೆಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತಾನು ಸಿದ್ಧಪಡಿಸಿಕೊಂಡ ಕರಡನ್ನೇ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿತ್ತು.

ಅಂದು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ತನ್ನದೇ ಪಕ್ಷದವರ ಶಹಬ್ಬಾಸ್ ಗಿರಿ ಪಡೆಯುವ ಸಲುವಾಗಿ ಆತುರಾತುರವಾಗಿ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಎನ್ಇಪಿಯನ್ನು ಅನುಷ್ಠಾನ ಮಾಡಿಯೇ ಬಿಟ್ಟಿತು. ಇದರ ಪರಿಣಾಮವಾಗಿ ಇಂದಿಗೂ ಪದವಿ ವಿದ್ಯಾರ್ಥಿಗಳು ಪರಿತಪಿಸುತ್ತಿರುವುದು ಎಲ್ಲರ ಕಣ್ಣ ಮುಂದಿದೆ. ಇದರೊಂದಿಗೆ ಪಠ್ಯಕ್ರಮದ ಕೇಸರೀಕರಣಕ್ಕೆ ಮುಂದಾಗಿದ್ದು ಹಾಗೂ ಈ ಕುರಿತಂತೆ ಆದ ಹಲವು ರಾಜಕಾರಣ ಎಲ್ಲರ ನೆನಪಲ್ಲೂ ಉಳಿದಿದೆ. ಸರಿಯಾದ ಯಾವುದೇ ವ್ಯವಸ್ಥೆ ಇಲ್ಲದೆ ತೆಗೆದುಕೊಂಡ ನಿರ್ಧಾರದ ಕೆಟ್ಟ ಪರಿಣಾಮವನ್ನು ವಿದ್ಯಾರ್ಥಿಗಳು ಇಂದಿಗೂ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ಈ ನಡುವೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎನ್ಇಪಿಯನ್ನು ರದ್ದುಗೊಳಿಸಿ ಎಸ್ಇಪಿಯನ್ನು ಅನುಷ್ಠಾನ ಮಾಡಿತು. ಪಠ್ಯಪುಸ್ತಕದಲ್ಲಿ ಕೇಸರೀಕರಣದ ಅಂಶಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿಕೊಂಡಿತು. ಉನ್ನತ ಶಿಕ್ಷಣದ ಸಂದರ್ಭದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆಯನ್ನು ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಅಂಗೀಕರಿಸಿತು. ಕುಲಾಧಿಪತಿಯ ಅಧಿಕಾರವನ್ನು ರಾಜ್ಯಪಾಲರಿಂದ ಹಿಂದಕ್ಕೆ ಪಡೆದು, ಮುಖ್ಯಮಂತ್ರಿಗೆ ನೀಡುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ಯನ್ನು ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವಿಧಾನಸಭೆ ಅಂಗೀಕರಿಸಿತ್ತು. ಜೊತೆಗೆ ಬಿಜೆಪಿಯೇತರ ಸರ್ಕಾರಗಳಿರುವ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಇತ್ತೀಚೆಗೆ ಸಂಘರ್ಷ ಏರ್ಪಟ್ಟಿತ್ತು. ಬಿಜೆಪಿಯೇತರ ರಾಜ್ಯ ಸರ್ಕಾರಗಳ ಇಂತಹ ನಿಲುವುಗಳನ್ನು ಗಂಭೀರವಾಗಿ ಪರಿಗಣಿಸಿದ ಒಕ್ಕೂಟ ಸರ್ಕಾರ ಇದರ ಬೆನ್ನಲ್ಲೇ ಯುಜಿಸಿಯ ಈ ಬದಲಾದ ನಿಯಮಾವಳಿಗಳ ಕರಡನ್ನು ಹೊರಡಿಸಿರುವುದು ರಂಗೋಲೆಯ ಕೆಳಗೆ ತೂರಿರುವ ವಿದ್ಯಮಾನ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದರೆ ಖಂಡಿತವಾಗಿಯೂ ಉನ್ನತ ಶಿಕ್ಷಣದ ಮೇಲೆ ನಿಗಾ ಇಡಲೆಂದೇ ಯುಜಿಸಿ ನಿಯಮಾವಳಿಗಳಲ್ಲಿ ಈ ಬದಲಾವಣೆಗಳನ್ನು ತರಲಾಗಿದ್ದು ಆ ಮೂಲಕ ರಾಜ್ಯಸರ್ಕಾರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ ಎನ್ನುವುದು ಕಣ್ಣಿಗೆ ರಾಚುವ ಕೃತ್ಯವಾಗಿದೆ.
ಎನ್ಇಪಿ ಮತ್ತು ಯುಜಿಸಿಯ ಹೊಸ ನಿಯಮಾವಳಿಗಳ ಹಿಂದಿರುವ ಉದ್ದೇಶಗಳು ಸ್ಪಷ್ಟ. ಒಂದು – ಬೆಳೆಯುತ್ತಿರುವ ಜಾಗತಿಕ ಮಾರುಕಟ್ಟೆಗೆ ತಕ್ಕ ಉದ್ಯೋಗ ಮತ್ತು ಕೌಶಲ್ಯವನ್ನು ಸೃಷ್ಟಿಸುವ ಸೋಗಿನಲ್ಲಿ ಈ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಂಡವಾಳಶಾಹಿಗಳ ಸೇವೆಗೆ ಒಪ್ಪಿಸುವುದು. ಎರಡು – ಸ್ಥಳೀಯ ಜ್ಞಾನವನ್ನು ವಿಶ್ವಜ್ಞಾನದೊಂದಿಗೆ ಬೆಸೆಯುತ್ತೇವೆ, ಭಾರತೀಯ ಜ್ಞಾನ ಮೀಮಾಂಸೆಯನ್ನು ರೂಪಿಸುತ್ತೇವೆ ಎಂಬ ಹೆಸರಿನಲ್ಲಿ ಇಡೀ ಸಮಾಜವನ್ನು ಮನುಸ್ಮೃತಿಯ ಮೌಢ್ಯದ ಸನಾತನದ ಕೂಪಕ್ಕೆ ಮತ್ತೆ ತಳ್ಳುವುದೇ ಆಗಿದೆ. ಒಕ್ಕೂಟ ಸರ್ಕಾರ ನಿರೂಪಿಸುತ್ತಿರುವ ‘ಭಾರತೀಯತೆ’ ಎಂದರೆ ಅದು ಕೇವಲ ಜಾತಿಯಾಧಾರಿತ, ಅಸಮಾನತೆಯನ್ನೇ ಉಸಿರಾಡುವ ಮನುವಾದಿ ಧೋರಣೆಗೆ ಮತ್ತೊಮ್ಮೆ ಭಾರತವನ್ನು ಕೊಂಡೊಯ್ಯುವುದೇ ಆಗಿದೆ ಎಂಬುದರಲ್ಲಿ ಅನುಮಾನವೇ ಉಳಿಯುವುದಿಲ್ಲ.
ಈ ಹೊಸ ನಿಯಮಾವಳಿಗಳಲ್ಲಿ ಅಡಗಿರುವ ಮತ್ತೊಂದು ಹುನ್ನಾರವೆಂದರೆ ಸ್ಥಳೀಯ ಭಾಷಿಕರ ಜಾಗದಲ್ಲಿ ಹೊರರಾಜ್ಯಗಳ ಭಾಷಿಕರನ್ನು ತಂದು ಪ್ರತಿಷ್ಠಾಪಿಸುವುದು. ಈಗಾಗಲೇ ಕರ್ನಾಟಕದಲ್ಲಿರುವ ಹಲವು ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರು ಕನ್ನಡಿಗರಲ್ಲದ ಇತರೆ ಭಾಷಿಕರು. ಇವರುಗಳ ಕೈಯಡಿಯಲ್ಲಿ ಕಾಲಾಳುಗಳಾಗಿ ಕನ್ನಡಿಗರು ಸೇವೆ ಮಾಡಬೇಕಾದ ಪರಿಸ್ಥಿತಿ ಈಗಾಗಲೇ ಕರ್ನಾಟಕದಲ್ಲಿದೆ. ಈ ಕ್ರಮಗಳು ಕನ್ನಡಿಗರ ಜ್ಞಾನಕ್ಕೆ ಕೌಶಲ್ಯಕ್ಕೆ ಬಗೆಯುವ ಅವಮಾನ. ಈ ಬಗೆಯ ಅಪಮಾನವನ್ನು ಇನ್ನು ಮುಂದೆ ಕಾನೂನಾತ್ಮಕವಾಗಿ ಮಾಡಲಾಗುವುದು ಎನ್ನುವಂತಿವೆ ಈ ಹೊಸ ನಿಯಮಾವಳಿಗಳು.
ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಾಗಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಯುಜಿಸಿಯ ಹೊಸ ಕರಡು ನಿಯಮಾವಳಿ ಹೇಳುತ್ತದೆ. ಇಲ್ಲಿಯವರೆಗೆ ಆಯಾ ರಾಜ್ಯಗಳ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ಕುಲಪತಿಗಳ ಹುದ್ದೆ ಈಗ ಬೇರೆ ರಾಜ್ಯದವರಿಗೂ ಸಿಗುವ ಸೂಚನೆ ಇದು. ಹೊಸ ನಿಯಮಗಳು ಜಾರಿಗೆ ಬಂದರೆ, ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ಸ್ಥಾನದಲ್ಲಿ ಹೊರರಾಜ್ಯದವರು ಬಂದು ಕೂರುವ ಅಪಾಯ ಕಣ್ಣಮುಂದಿದೆ.
ಇದನ್ನೂ ಓದಿರಿ: ಜನರ ಜೀವ ಹಿಂಡುತ್ತಿರುವ ಮನೆಹಾಳ ಫೈನಾನ್ಸ್- ಮೈಕ್ರೋ ಫೈನಾನ್ಸ್ ಕಂಪನಿಗಳು
ಒಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಅಗತ್ಯವಾಗಿ ಇರಲೇಬೇಕಾದ ಸಹಕಾರ, ಪರಸ್ಪರ ಆರೋಗ್ಯಯುತ ಚರ್ಚೆ ಹೊಸ ಕರಡಿನಲ್ಲಿ ಕಾಣೆಯಾಗಿ, ರಾಜ್ಯಗಳನ್ನು ಸದೆಬಡಿಯುವ, ಅದರಲ್ಲೂ ಮುಖ್ಯವಾಗಿ ಬಿಜೆಪಿಯೇತರ ರಾಜ್ಯಸರ್ಕಾರಗಳನ್ನು ಉದ್ದೇಶಪೂರ್ವಕವಾಗಿಯೇ ಸದೆಬಡಿಯುವ ಅಂಶಗಳೇ ಇದರಲ್ಲಿ ರಾರಾಜಿಸುತ್ತಿವೆ.
ಇನ್ನು ಯುಜಿಸಿ ಜಾರಿಗೊಳಿಸುವ ಈ ನಿಯಮಾವಳಿಗಳನ್ನು ಮೀರಿದರೆ ಅದು ವಿಧಿಸುವ ಶಿಕ್ಷೆಯೂ ನಿರಂಕುಶ ಧೋರಣೆಯನ್ನೇ ತೋರಿಸುತ್ತಿದೆ. ಆ ನಿಯಮಗಳು ಹೀಗಿವೆ:
1. ನಿಯಮ ಉಲ್ಲಂಘಿಸುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳು ಯುಜಿಸಿ ಯೋಜನೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
2. ಅಂತಹ ಸಂಸ್ಥೆಗಳು ಪದವಿ ನೀಡದಂತೆ ನಿಷೇಧ ಹೇರಿಕೆ.
3. ಆ ಸಂಸ್ಥೆಗಳು ನೀಡುವ ದೂರಶಿಕ್ಷಣ ಮತ್ತು ಆನ್ಲೈನ್ ಶಿಕ್ಷಣದ ಮೇಲೆ ನಿರ್ಬಂಧ
4. ಯುಜಿಸಿ ಕಾಯ್ದೆ 1956 ಸೆಕ್ಷನ್ 2ಎಫ್ ಮತ್ತು 12ಬಿ ಅಡಿ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಿಂದ ಅಂತಹ ಸಂಸ್ಥೆಯನ್ನು ತೆಗೆದುಹಾಕುವುದು.
“ಈಗ ಪ್ರಕಟಿಸಿರುವುದು ಕೇವಲ ಕರಡು ಮಾತ್ರ, ಇದೇ ಅಂತಿಮವಲ್ಲ. ಚರ್ಚೆಗೆ ಅವಕಾಶ ನಮ್ಮ ಮೋದಿಯವರು ಕೊಟ್ಟಿದ್ದಾರೆ” – ಎಂಬ ಬಿಜೆಪಿ ಕೂಗುಮಾರಿಗಳ ದಾರಿತಪ್ಪಿಸುವ ಕೂಗನ್ನೂ ಇಲ್ಲಿ ಗಮನಿಸಬೇಕು . ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇದೆಯೇನೋ ಎಂಬುದು ಸರಿ, ಆದರೆ ಎನ್ಇಪಿ ಅನುಷ್ಠಾನದ ವಿಚಾರದಲ್ಲಿ ಒಕ್ಕೂಟ ಸರ್ಕಾರ ಹೇಗೆ ವರ್ತಿಸಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇದರೊಟ್ಟಿಗೆ ಕೃಷಿಕಾನೂನುಗಳ ವಿಷಯದಲ್ಲಿಯುೂ ಸಹ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರಸರ್ಕಾರ ಹೇಗೆ ಮೆರೆದಿತ್ತು ಎಂಬುದನ್ನು ಸಹ ಇಲ್ಲೇ ನೆನಪಿಸಿಕೊಳ್ಳಬೇಕು. ಒಕ್ಕೂಟ ಸರ್ಕಾರ ಇದುವರೆಗೆ ಜಾರಿಗೆ ತಂದ ಹಲವು ಕಾನೂನುಗಳು, ತಿದ್ದುಪಡಿಗಳು, ಈ ದೇಶದ ಬಹುತ್ವಕ್ಕೆ ಕೊಡಲಿ ಪೆಟ್ಟನ್ನು ಕೊಡುವ ಕೆಲಸದ್ದು ಎನ್ನುವುದನ್ನು ನಾವು ಮರೆಯಬಾರದು. ಬಹುಜನರು ಒಂದಾಗಿ ಸಾಗಿದಾಗ ಮಾತ್ರ ಭಾರತ ವಿಶ್ವನಾಯಕನಾಗಲು ಸಾಧ್ಯವೇ ಹೊರತು, ಮೂಲಭೂತವಾದ, ದ್ವೇಷಪೂರಿತ ಮನಃಸ್ಥಿತಿ, ಅಸಮಾನತೆಯನ್ನು ಬಿತ್ತುವ, ಅದನ್ನೇ ಉಳಿಸಿ- ಬೆಳೆಸುವ ಮನಃಸ್ಥಿತಿ ಈ ನೆಲಕ್ಕೆ ಸಲ್ಲದ ಗುಣ. ಕಾಲಕಾಲಕ್ಕೆ ಆಗಬೇಕಾದ ಬದಲಾವಣೆಗಳಾಗಲೀ, ತಿದ್ದುಪಡಿಗಳಾಗಲೀ ಪ್ರಜಾಸತ್ತಾತ್ಮಕ ನೆಲೆಯಲ್ಲಿರಬೇಕು. ಅದರಿಂದ ಈ ನೆಲದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದಕ್ಕಬೇಕು. ಇಂತಹ ನೀತಿಗಳು ಎಂದಿಗೂ ಸ್ವಾಗತಾರ್ಹ. ಅಸಮಾನತೆಯನ್ನು ಪೋಷಿಸುವ ಯಾವ ನೀತಿಗಳೂ ಈ ನೆಲದಿಂದ ದೂರವೇ ಇರಬೇಕು ಅಥವಾ ಇಲ್ಲಿ ಹುಟ್ಟಲೇಬಾರದು. ಇಂತಹ ಪ್ರಮಾದಗಳು ಕಂಡು ಬಂದಾಗ ಸಂವಿಧಾನಾತ್ಮಕ ನೆಲೆಯಲ್ಲೇ ವಿರೋಧಿಸಬೇಕು. ಬದಲಾವಣೆ ಪ್ರಜಾಸತ್ತಾತ್ಮಕ ನೆಲೆಯಲ್ಲಿದ್ದರೆ ಅದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಸರ್ವಾಧಿಕಾರದ ಧೋರಣೆಯನ್ನು ಖಂಡಿಸಲೇಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಒಳಗೊಂಡಂತೆ ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲಪ್ರದೇಶ, ಜಾರ್ಖಂಡ್ ರಾಜ್ಯಗಳು ಫೆಬ್ರವರಿ 5ರಂದು ಬೆಂಗಳೂರಿನಲ್ಲಿ ನಡೆದ “ನಾನಾ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶ”ದಲ್ಲಿ ಭಾಗಿಯಾಗಿ ಆರ್ ಎಸ್ ಎಸ್ ಪ್ರೇರಿತ ಹಾಗೂ ಬಂಡವಾಳಶಾಹಿ ಪ್ರೇರಿತ ಯುಜಿಸಿಯ ಈ ಹೊಸ ಕರಡು ನಿಯಮಾವಳಿಗಳನ್ನು ತಿರಸ್ಕರಿಸುವ ಮೂಲಕ ತಮ್ಮ ವಿರೋಧವನ್ನು ದಾಖಲಿಸಿವೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು ಈ ಮುಂದಿನಂತಿವೆ.
1. ವಿವಿಗಳ ಕುಲಪತಿ ನೇಮಕದಲ್ಲಿ ರಾಜ್ಯ ಸರ್ಕಾರಗಳ ಪಾತ್ರವೇ ಪ್ರಮುಖವಾಗಿರಬೇಕು.
2.ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸುವ ಅಧಿಕಾರ ಈಗ ಇರುವಂತೆಯೇ ಮುಂದುವರಿಯಬೇಕು.
3. ಶೈಕ್ಷಣಿಕ ವಲಯದ ಹೊರಗಿನವರನ್ನು ಕುಲಪತಿ ಸ್ಥಾನಕ್ಕೆ ಪರಿಗಣಿಸಬಾರದು.
4. ಕುಲಪತಿ ಅರ್ಹತೆಗಳು, ಅವಧಿಯ ಬದಲಾವಣೆಯಿಂದ ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿಯಾಗಬಾರದು.
5.ಈಗಿರುವ ಶಿಕ್ಷಕರ ಕಾರ್ಯಕ್ಷಮತೆ, ಮೌಲ್ಯಮಾಪನ ಮತ್ತು ಶೈಕ್ಷಣಿಕ ಸೂಚಕ (ಎಪಿಐ) ವ್ಯವಸ್ಥೆಯನ್ನು ತೆಗೆದುಹಾಕಬಾರದು.
6. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಉಪನಿಯಮಗಳನ್ನು ಪರಿಶೀಲಿಸಬೇಕು.
7. ಯುಜಿಸಿ ಮಾರ್ಗಸೂಚಿ ಅನುಸರಿಸದಿದ್ದರೆ ಕೈಗೊಳ್ಳುವ ಕ್ರಮಗಳು ಪ್ರಜಾಸತ್ತಾತ್ಮಕವಾಗಿರಬೇಕು.
8. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಿ, ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ನಿಯಮಗಳನ್ನು ಕೈಬಿಡಬೇಕು.
ಇದನ್ನೂ ಓದಿರಿ: ಸಾಲ ಯೋಜನೆಗಳಿಂದ ರೈತರನ್ನು ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?
ಇದರಾಚೆಗೂ ಕರಡು ನಿಯಮಗಳನ್ನೇ ಯುಜಿಸಿ ಅಧಿಕೃತಗೊಳಿಸಿದರೆ ಮುಂದಿನ ನಡೆ ಏನು ಎನ್ನುವ ಕುರಿತು ಬಿಜೆಪಿಯೇತರ ರಾಜ್ಯಸರ್ಕಾರಗಳು ಫೆಬ್ರವರಿ 20ನೇ ತಾರೀಖಿನಂದು ಮತ್ತೊಮ್ಮೆ ಕೇರಳದಲ್ಲಿ ಸಮಾವೇಶಗೊಂಡು ಚರ್ಚಿಸುವುದಾಗಿ ನಿರ್ಣಯ ತೆಗೆದುಕೊಂಡಿವೆ. ಕಾನೂನಾತ್ಮಕ ಹೋರಾಟದ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎನ್ನುವ ಮಾಹಿತಿಯನ್ನು 5ನೇ ತಾರೀಕು ನಡೆದ ಸಮಾವೇಶದಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ನೀಡಿದ್ದಾರೆ.
ಒಂದು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಾಳುಗೆಡವಲು, ಒಂದಿಡೀ ತಲೆಮಾರಿನ ಮೆದುಳನ್ನು ಮಲಿನಗೊಳಿಸಲು ಶಿಕ್ಷಣಕ್ರಮವನ್ನು ಕಲುಷಿತಗೊಳಿಸಿದರೆ ಸಾಕು ಎನ್ನುವುದು ಮನುವಾದಿ ಮನಃಸ್ಥಿತಿಗಳಿಗೆ ಚೆನ್ನಾಗಿ ಗೊತ್ತಿದೆ. ಒಕ್ಕೂಟ ಸರ್ಕಾರದ ಇಂತಹ ಮನುವಾದಿ ನಿರಂಕುಶ ಧೋರಣೆಗೆ ಪ್ರಬಲ ವಿರೋಧವನ್ನು ಈಗಾಗಲೇ ಹಲವು ರಾಜ್ಯಗಳು ದಾಖಲಿಸುತ್ತಿವೆ. ರಾಜ್ಯಸರ್ಕಾರಗಳ ಇಂತಹ ನಡೆಗೆ ಹಲವು ಪ್ರಜ್ಞಾವಂತ ಗುಂಪುಗಳು ತಮ್ಮ ಬೆಂಬಲವನ್ನು ಸೂಚಿಸಿವೆ. ಪ್ರಜಾಸತ್ತಾತ್ಮಕವಾದ ಇಂತಹ ಹೋರಾಟಗಳಿಗೆ ಎಲ್ಲರ ಸಹಕಾರವೂ ಅತ್ಯಗತ್ಯ ಎನ್ನುವುದನ್ನು ಮನಗಂಡು ಸರ್ವಾಧಿಕಾರಿ ಧ್ವನಿಗೆ ಪ್ರತಿರೋಧದ ಧ್ವನಿಯನ್ನು ದಾಖಲಿಸಬೇಕಿದೆ.

ಸೌಮ್ಯ ಕೋಡೂರು
ಶಿವಮೊಗ್ಗ ಜಿಲ್ಲೆಯ ಕೋಡೂರಿನವರಾದ ಸೌಮ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಉತ್ತಮ ವಾಗ್ಮಿಯೂ ಹೌದು




