ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..

Date:

ಒಂದು ಕಡೆ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ, ಇನ್ನೊಂದೆಡೆ ಕರ್ನಾಟಕದ ಉಪ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಕುಳಿತು ಈ ವರ್ಷದ ಮಹಾಶಿವರಾತ್ರಿ ಆಚರಿಸಿದ ಜಗ್ಗಿ ವಾಸುದೇವ್‍ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ಜಗ್ಗಿ ವಾಸುದೇವ್‍ರವರ ಕೊಯಮತ್ತೂರು ಆಶ್ರಮದಲ್ಲಿ ಯೋಗ, ಧ್ಯಾನ, ದೀಕ್ಷೆಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ, ಹಲವು ಅತ್ಯಾಚಾರ ಘಟನೆಗಳು ನಡೆದಿವೆ ಎಂದು ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ತನ್ನ ವಿಡಿಯೋದಲ್ಲಿ ಸಾಕ್ಷಿ ಸಮೇತ ಆರೋಪಿಸಿದ್ದಾರೆ. ಕೊಯಮತ್ತೂರು ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಗಂಭೀರ ಆರೋಪವಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ? ಅಷ್ಟಕ್ಕೂ ಈ ಜಗ್ಗಿ ವಾಸು ದೇವ್ ಯಾರು? ಈ ವ್ಯಕ್ತಿ ಬೆಳೆದು ಬಂದಿದ್ದು ಹೇಗೆ?

ತಂದೆ ತಾಯಿ ಇಟ್ಟ ಹೆಸರು ಜಗದೀಶ್ ವಾಸುದೇವ್. ತನ್ನನ್ನು ತಾನು ಕರೆದುಕೊಂಡಿದ್ದು ಜಗ್ಗಿ ವಾಸುದೇವ್ ಎಂದು. ಇವರ ಭಕ್ತರು ಕರೆದಿದ್ದು ಸದ್ಗುರು ಎಂದು. ಇಂತಹ ಜಗ್ಗಿ ವಾಸುದೇವ್ ಹುಟ್ಟಿದ್ದು ನಮ್ಮ ಕರ್ನಾಟಕದ ಮೈಸೂರಿನಲ್ಲಿ. ತಂದೆ ರೈಲ್ವೆ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರಾಗಿದ್ದರು. ಇಂತಹ ಕುಟುಂಬದಲ್ಲಿ ಹುಟ್ಟಿದ ಜಗ್ಗಿ, ಮೈಸೂರು ವಿವಿಯಲ್ಲಿ ಕಲಿತರು. ಇವರ ಆಸಕ್ತಿ ಬಿಸಿನೆಸ್ ಆಗಿತ್ತು. ಹಾಗಾಗಿ ಮೊದಲು ಆರಂಭಿಸಿದ್ದು ಕೋಳಿ ಫಾರಂ. ಆನಂತರ ತನ್ನ ಇಂಜಿನಿಯರ್ ಸ್ನೇಹಿತನ ಜೊತೆಗೂಡಿ Buildaids ಎಂಬ ಕಂಪನಿ ತೆರೆದು ಮತ್ತೊಂದು ವ್ಯವಹಾರ ಶುರು ಮಾಡಿದರು. ಅಲ್ಲಿಯೂ ಹೆಚ್ಚು ದಿನ ನಿಲ್ಲದ ಅವರು ಹೊರಳಿಕೊಂಡಿದ್ದು, ‘ಯೋಗ’ ಎಂಬ ದೊಡ್ಡ ಪ್ರಮಾಣದಲ್ಲಿ ಹಣ ಗಳಸುವ ಉದ್ಯಮದತ್ತ.

1984ರಲ್ಲಿ ಜಗ್ಗಿ ವಾಸುದೇವ್, ವಿಜಯಕುಮಾರಿ ಎಂಬುವವರನ್ನು ಮದುವೆಯಾದರು. ವಿಜಯ ಕುಮಾರಿಯವರು ಗುರೂಜಿ ರಿಷಿ ಪ್ರಭಾಕರ್ ಎಂಬುವವರು ನಡೆಸುತ್ತಿದ್ದ ಯೋಗ ಕೇಂದ್ರದ ಸ್ವಯಂಸೇವಕರು ಮತ್ತು ತರಬೇತುದಾರರಾಗಿದ್ದರು. “ಜಗ್ಗಿ ಮತ್ತು ನಾನು ಮೈಸೂರಿನ ಬಳಿಯ ಗೊಮ್ಮಟಗಿರಿಯಲ್ಲಿ ರಿಷಿ ಪ್ರಭಾಕರ್ ಅವರಿಂದ ಸಿದ್ಧ ಸಮಾಧಿ ಯೋಗವನ್ನು ಒಟ್ಟಿಗೆ ಕಲಿತೆವು” ಎಂದು ವಾಸುದೇವ್ ಅವರೊಂದಿಗೆ ತರಬೇತಿ ಪಡೆದ ಆಂಧ್ರಪ್ರದೇಶದ ಯೋಗ ಶಿಕ್ಷಕರೊಬ್ಬರು ‘ನ್ಯೂಸ್‍ ಲಾಂಡ್ರಿ’ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?

ಅವರು ಹೇಳಿದ ಮತ್ತೊಂದು ಮಹತ್ವದ ಅಂಶವೆಂದರೆ, “ಸಿದ್ದ ಸಮಾಧಿ ಯೋಗದಲ್ಲಿ ತರಬೇತಿ ಪಡೆಯುವವರೆಗೂ ವಾಸುದೇವ್ ಅವರಿಗೆ ಯೋಗದ ಕುರಿತು ಏನೂ ತಿಳಿದಿರಲಿಲ್ಲ. ನಂತರ ಅವರು 1986 ಮತ್ತು 1987ರ ನಡುವೆ ಯೋಗ ಕಲಿಸಲು ಹೈದರಾಬಾದ್, ಬೆಂಗಳೂರು ಮತ್ತು ಮೈಸೂರಿನಲ್ಲಿ ಓಡಾಡಿದರು. ಆನಂತರ ರಿಷಿ ಪ್ರಭಾಕರ್ ಗುರುಗಳು ಹೊಸ ಯೋಗ ಕೇಂದ್ರ ತೆರೆಯಲು ಜಗ್ಗಿಯವರನ್ನು ಕೊಯಮತ್ತೂರಿಗೆ ಕಳಿಸಿದರು. ಆದರೆ ಜಗ್ಗಿ ಅಲ್ಲಿಗೆ ಹೋದ ಮೇಲೆ ರಿಷಿ ಪ್ರಭಾಕರ್ ಗುರೂಜಿಯಿಂದ ಬೇರ್ಪಟ್ಟು ತಮ್ಮದೇ ಆದ ಇಶಾ ಯೋಗವನ್ನು ಪ್ರಾರಂಭಿಸಿದರು ಹಾಗೂ ಇಶಾ ಫೌಂಡೇಶನ್ ಅನ್ನು 1992ರಲ್ಲಿ ಸ್ಥಾಪಿಸಿದರು” ಎಂದು ತಿಳಿಸಿದ್ದಾರೆ. ಅಲ್ಲದೇ ಅವರು ತಮ್ಮೊಟ್ಟಿಗೆ ರಿಷಿ ಗುರೂಜಿಯಿಂದ ಯೋಗ ಕಲಿತ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಅವುಗಳನ್ನು ಈ ಕೆಳಗೆ ನೋಡಬಹುದು.

1 30
ಮಧ್ಯದ ಸಾಲಿನಲ್ಲಿ ವಾಸುದೇವ್ (ಎಡದಿಂದ ಮೂರನೆಯವರು)
2 24
ಎಡದಿಂದ ಮೂರನೆಯವರು ವಾಸುದೇವ್
3 23
ನೆಲದಲ್ಲಿ ಕುಳಿತಿರುವವರ ಸಾಲಿನಲ್ಲಿ ವಾಸುದೇವ್ (ಬಲದಿಂದ ಮೂರನೆಯವರು)

ಮತ್ತೊಬ್ಬ ಸಿದ್ಧ ಸಮಾಧಿ ಯೋಗ ಶಿಕ್ಷಕ ಸುಬ್ರಮಣಿಯನ್ ರೆಡ್ಡಿಯವರೂ ನ್ಯೂಸ್‍ಲಾಂಡ್ರಿಯೊಂದಿಗೆ ಮಾತನಾಡಿ, “ಜಗ್ಗಿ ವಾಸುದೇವ್ ಸಿದ್ಧ ಸಮಾಧಿ ಯೋಗದ ಅತ್ಯುತ್ತಮ ಶಿಕ್ಷಕರಲ್ಲಿ ಒಬ್ಬರು. ಅವರು ಗುರೂಜಿಗೆ ಹತ್ತಿರವಾಗಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಅವರೊಂದಿಗೆ ಸಂಬಂಧ ಮುರಿದುಕೊಂಡು ಕೊಯಮತ್ತೂರಿನಲ್ಲಿ ಯೋಗವನ್ನು ಕಲಿಸಲು ಪ್ರಾರಂಭಿಸಿದರು. ಸದ್ಯ ಜಗ್ಗಿ ವಾಸುದೇವ್ ಕಲಿಸುತ್ತಿರುವ ಎಲ್ಲಾ ಯೋಗಗಳು ಸಹ ಋಷಿ ಪ್ರಭಾಕರ್ ಅವರಿಂದ ಕಲಿತದ್ದೇ ಆಗಿದೆ” ಎನ್ನುತ್ತಾರೆ.

ಇಶಾ ಸಾಮ್ರಾಜ್ಯ

1992ರಲ್ಲಿ ಇಶಾ ಫೌಂಡೇಶನ್ ಸ್ಥಾಪಿಸಿದ ಜಗ್ಗಿ ವಾಸುದೇವ್, ಅದರ ಕೇಂದ್ರ ಸ್ಥಾನಕ್ಕಾಗಿ ಸೂಕ್ತ ಜಾಗ ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದು ಕೊಯಮತ್ತೂರು ಜಿಲ್ಲೆಯ ವೆಳ್ಳಿಯಂಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ಇಕ್ಕರೈ ಬೊಲುವಾಂಪಟ್ಟಿ ಸಮೀಪದ ಹಸಿರು ಕಾನನ. ಅಲ್ಲಿ ಅವರು 150 ಎಕರೆ ಜಮೀನು ಖರೀದಿಸಿ ದೊಡ್ಡ ಕ್ಯಾಂಪಸ್ ಕಟ್ಟಿದರು. ಈ ಕ್ಯಾಂಪಸ್ ನೀಲಗಿರಿ ಜೀವಗೋಳ ಮೀಸಲು ಪ್ರದೇಶದಲ್ಲಿ ಆನೆಗಳ ಆವಾಸಸ್ಥಾನವಾದ ಬೋಲಂಪಟ್ಟಿ ಮೀಸಲು ಅರಣ್ಯದ ಪಕ್ಕದಲ್ಲಿದೆ. ಹಾಗಾಗಿ ಈ ಪ್ರದೇಶವನ್ನು ತಮಿಳುನಾಡಿನ ಅರಣ್ಯ ಬೆಟ್ಟ ಪ್ರದೇಶಗಳ ವನ್ಯಜೀವಿಗಳು ಮತ್ತು ಪರಿಸರ ವಿಜ್ಞಾನವನ್ನು ಸಂರಕ್ಷಿಸಲು ಸ್ಥಾಪಿಸಲಾದ ಬೆಟ್ಟ ಪ್ರದೇಶ ಸಂರಕ್ಷಣಾ ಪ್ರಾಧಿಕಾರ (HACA) ನಿಯಂತ್ರಿಸುತ್ತದೆ. ಈ ಪ್ರದೇಶದಲ್ಲಿ 300 ಚದರ ಮೀಟರ್‌ಗಿಂತ ದೊಡ್ಡ ಕಟ್ಟಡಗಳನ್ನು HACA ಅನುಮೋದನೆ ಇಲ್ಲದೆ ಕಟ್ಟಲು ಸಾಧ್ಯವಿಲ್ಲ. ಆದರೆ ಇಶಾ ಫೌಂಡೇಶನ್ 63,380 ಚದರ ಮೀಟರ್‌ ಜಾಗದಲ್ಲಿ ಹಲವಾರು ಕಟ್ಟಡಗಳನ್ನು, ಆಶ್ರಮಗಳನ್ನು ಕಟ್ಟಿದೆ! 2008ರಲ್ಲಿಯೇ ಈ ಕಟ್ಟಡ ನಿರ್ಮಾಣಗಳು ಮುಗಿದಿದ್ದು ಈ ಬಗ್ಗೆ ಆಕ್ಷೇಪ ಕೇಳಿ ಬಂದ ನಂತರ 2011ರಲ್ಲಿ ಅಂದರೆ ಮೂರು ವರ್ಷದ ನಂತರ HACA ಅನುಮೋದನೆಗೆ ಇಶಾ ಫೌಂಡೇಶನ್ ಅರ್ಜಿ ಹಾಕಿದೆ.

ಇದನ್ನೂ ಓದಿರಿ: ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?

ಆಗ ಕೊಯಮತ್ತೂರಿನ ಅರಣ್ಯ ಅಧಿಕಾರಿಯಾಗಿದ್ದ ವಿ. ತಿರುನಾವುಕ್ಕರಸುರವರು ಫೆಬ್ರವರಿ 2012ರಲ್ಲಿ ಇಶಾ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಇಶಾ ಅಕ್ರಮವಾಗಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದೆ, ಅಲ್ಲದೇ ಆಶ್ರಮದ ಕಾಂಪೌಂಡ್ ಗೋಡೆ ಮತ್ತು ಮುಂಭಾಗದ ದ್ವಾರವನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ವರದಿ ನೀಡಿದರು. ಇಶಾದ ಅನೇಕ ನಿರ್ಮಾಣಗಳು ಮತ್ತು ಆಶ್ರಮಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿ ವಾಹನ ದಟ್ಟಣೆಯಿಂದಾಗಿ ಆನೆ ಕಾರಿಡಾರ್‌ಗೆ ಅಡ್ಡಿಯುಂಟಾಗುತ್ತಿದೆ. ಇದು ಮಾನವ-ಪ್ರಾಣಿ ಸಂಘರ್ಷವನ್ನು ಹೆಚ್ಚಿಸುತ್ತಿದೆ ಎಂದು ಹೇಳಿ ಅವರು ಇಶಾಗೆ ಅನುಮೋದನೆ ನೀಡಲು ನಿರಾಕರಿಸಿದರು. ಅದಾದ ನಾಲ್ಕು ದಿನದಲ್ಲಿಯೇ ಅವರನ್ನು ಅಲ್ಲಿಂದ ಕೊಯಮತ್ತೂರಿಗೆ ವರ್ಗಾವಣೆ ಮಾಡಲಾಯಿತು!

Aane karidor
ಆನೆಗಳ ದಾರಿ ಮುಚ್ಚಿ ಹಾಕಿ ಇಶಾ ವತಿಯಿಂದ ಹಾಕಿರುವ ಎಲೆಕ್ಟ್ರಿಕ್ ತಂತಿಗಳು…

ಅರಣ್ಯ ರಕ್ಷಕರಾದ ಎಂ.ಎಸ್. ಪಾರ್ಥಿಪನ್ ಕೂಡ 2012ರಲ್ಲಿ ಇಶಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಆನೆಗಳು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಇಶಾ ವತಿಯಿಂದ ಅಕ್ರಮ ಕಟ್ಟಡಗಳು, ಗೋಡೆಗಳು ಮತ್ತು ವಿದ್ಯುತ್ ಬೇಲಿಗಳನ್ನು ನಿರ್ಮಿಸಿದ್ದರಿಂದ, ಆನೆಗಳು ಸೆಮ್ಮೆಡು ಮತ್ತು ನರಸೀಪುರಂ ನಡುವಿನ ಕಾಡಿನಿಂದ ಅನಿವಾರ್ಯವಾಗಿ ಹೊರಬಂದು ಸುತ್ತಲಿನ ಬೆಳೆಗಳನ್ನು ತುಳಿದು, ಗ್ರಾಮಸ್ಥರ ಮೇಲೆ ದಾಳಿ ಮಾಡಿದವು ಎಂದು ವರದಿ ನೀಡಿದ್ದರು. ಇದೆಲ್ಲರಿಂದ ಎಚ್ಚೆತ್ತುಕೊಂಡ HACA ಡಿಸೆಂಬರ್ 2012ರಲ್ಲಿ, ಯೋಜನಾ ಇಲಾಖೆಯು ಒಂದು ತಿಂಗಳೊಳಗೆ ಎಲ್ಲಾ ಅಕ್ರಮ ರಚನೆಗಳನ್ನು ಕೆಡವಲು ಇಶಾಗೆ ನಿರ್ದೇಶನ ನೀಡುವ ನೋಟಿಸ್ ಕಳುಹಿಸಿತು.

ಆದರೆ ಆ ಸಮಯದಲ್ಲಿ, ಕೆ ಮೂಕಯ್ಯ ಕೊಯಮತ್ತೂರಿನ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉಪ ನಿರ್ದೇಶಕರಾಗಿದ್ದರು. ಇಶಾ ಅವರ ಆದೇಶಗಳನ್ನು ನಿರ್ಲಕ್ಷಿಸಿದಾಗ ನಿಮ್ಮ ಇಲಾಖೆ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ‘ನೋಟಿಸ್ ನೀಡಿದ ಒಂದು ತಿಂಗಳ ನಂತರ ನನ್ನನ್ನು ವರ್ಗಾವಣೆ ಮಾಡಲಾಯಿತು’ ಎಂದು ಉತ್ತರಿಸಿದರು.

ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!

ಆನಂತರ ಪೂವುಲಗಿನ್ ನನ್‌ಬರ್ಗಲ್ ಎಂಬ ಎನ್‌ಜಿಒದ ಎಂ. ವೆಟ್ರಿ ಸೆಲ್ವನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಇಶಾ ಸಂಸ್ಥೆ ಅಕ್ರಮಗಳ ವಿರುದ್ಧ ಅರ್ಜಿ ಸಲ್ಲಿಸಿದರು. ಆಗ ಹೈಕೋರ್ಟ್ ಗಮನಿಸಿ ಸರ್ಕಾರ, ವಿವಿಧ ಇಲಾಖೆಗಳು ಮತ್ತು ಇಶಾ ಕಡೆಯಿಂದ ಪ್ರತಿಕ್ರಿಯೆ ನೀಡುವಂತೆ ಹೇಳಿತು. ಆಗ ಕಂಡುಬಂದ ಅಂಶಗಳೆಂದರೆ ರಾಜ್ಯ ಶಾಲಾ ಪ್ರಾಧಿಕಾರವು ಇಶಾಗೆ ಶಾಲೆಯನ್ನು ನಡೆಸಲು ಅನುಮತಿ ನೀಡಿಲ್ಲ ಎಂದು ವರದಿ ಸಲ್ಲಿಸಿತ್ತು!

Aane
ಆನೆಯೊಂದಕ್ಕೆ ವಿದ್ಯುತ್ ತಗಲಿರುವುದು

ಪ್ರತಿಷ್ಠಾನದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ಅಗತ್ಯ ಅನುಮತಿಗಳಿಲ್ಲದೆ ನಿರ್ಮಿಸಲಾಗಿದೆ ಎಂದು ಆಗಿನ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರಾದ ಆರ್. ಸೆಲ್ವರಾಜ್ ದೃಢಪಡಿಸಿದ್ದರು. ಆದರೇನಂತೆ ಆ ಅಕ್ರಮ ಪ್ರತಿಮೆಯನ್ನು ಫೆಬ್ರವರಿ 28, 2017ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಿದರು! ತಮಿಳುನಾಡು ಸರ್ಕಾರದಲ್ಲಿ ಜಗ್ಗಿ ವಾಸುದೇವ್ ಪರ ಇದ್ದವರಿದ್ದರು. ಹಾಗಾಗಿ ಕೊನೆಗೆ ಸ್ಥಳೀಯ ಅರಣ್ಯ ಅಧಿಕಾರಿಗಳು, “ಇಶಾ ಫೌಂಡೇಶನ್ ಆನೆ ಕಾರಿಡಾರ್‌ನಲ್ಲಿಲ್ಲ” ಎಂಬ ವರದಿ ನೀಡುವ ಮಟ್ಟಿಗೆ ಜಗ್ಗಿ ವಾಸುದೇವ್ ಪ್ರಭಾವ ಬೀರಿದ್ದರು.

ಜಗ್ಗಿ ವಾಸುದೇವ್ ಇಷ್ಟು ಪ್ರಭಾವಿಯಾಗಿದ್ದು ಹೇಗೆ?

1997ರಲ್ಲಿ ಸ್ವಾಮಿ ಸುಖಬೋಧಾನಂದರವರು ‘ಆನಂದ ವಿಕಟನ್’ ಪತ್ರಿಕೆಯಲ್ಲಿ ‘ಮನಸೇ ರಿಲ್ಯಾಕ್ಸ್ ಪ್ಲೀಸ್’ ಎಂಬ ಅಂಕಣ ಬರೆಯಲು ಆರಂಭಿಸಿದರು. ಅದು ಪ್ರಸಿದ್ದ ಪಡೆದ ನಂತರ 2004ರಲ್ಲಿ ಜಗ್ಗಿ ವಾಸುದೇವ್‌ಗೆ ಆನಂದ ವಿಕಟನ್ ಪತ್ರಿಕೆಯಲ್ಲಿ ಅಂಕಣ ಬರೆಯಲು ಅವಕಾಶ ಸಿಕ್ಕಿತು. “ಅಥನೈಕ್ಕುಂ ಆಸೈಪಾಡು” ಹೆಸರಿನಲ್ಲಿ ಕಾಲಂ ಆರಂಭಿಸಿದ ಜಗ್ಗಿ ನಿಧಾನಕ್ಕೆ ಪ್ರಸಿದ್ದಿ ಪಡೆದರು. ಅದೇ ಸಂದರ್ಭದಲ್ಲಿ ಕನ್ನಡದ ‘ಸುಧಾ’ ವಾರಪತ್ರಿಕೆಯಲ್ಲಿ ಜಗ್ಗಿ ವಾಸುದೇವ್‍ರವರನ್ನು ಹೊಗಳಿ ಮುಖಪುಟದ ಲೇಖನ ಪ್ರಕಟಿಸಲಾಗಿತ್ತು.

vitatan
‘ಆನಂದ ವಿಕಟನ್’ ಪತ್ರಿಕೆಯಲ್ಲಿ ಅಂಕಣ

2006ರಲ್ಲಿ ಎ.ಕಾಮರಾಜ್ ಎಂಬ ‘ನಕ್ಕೀರನ್’ ಪತ್ರಿಕೆಯ ಪತ್ರಕರ್ತ ಜಗ್ಗಿ ವಾಸು ದೇವ್‌ಅವರನ್ನು ಆಗಿನ ತಮಿಳುನಾಡಿನ ಸಿಎಂ ಕರುಣಾನಿಧಿಯವರಿಗೆ ಪರಿಚಯಿಸಿದರು ಎಂದು ಸವಕ್ಕು ಸುಂದರ್‌ರವರು ಹೇಳುತ್ತಾರೆ. ಆದರೆ ಕಾಮರಾಜ್ ಅದನ್ನು ನಿರಾಕರಿಸುತ್ತಾರೆ. ಏನೇ ಆಗಲಿ ಅಲ್ಲಿಯವರೆಗೂ ಯಾವ ರಾಜಕಾರಣಿಯೂ ಜಗ್ಗಿ ವಾಸ್ ದೇವ್ ಜೊತೆ ಅಷ್ಟೊಂದು ನಿಕಟ ಸಂಪರ್ಕದಲ್ಲಿರಲಿಲ್ಲ. ಅದೇ ವರ್ಷ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಇಶಾ ಫೌಂಡೇಶನ್‌ನ ಗಿಡ ನೆಡುವ ಕಾರ್ಯಕ್ರಮದಲ್ಲಿ ಕರುಣಾನಿಧಿ ಜಗ್ಗಿ ಜೊತೆ ಭಾಗವಹಿಸಿದ್ದರು. ಆದರೆ ಯಾವಾಗ ಕರುಣಾನಿಧಿಯವರು ಪರಿಚಯವಾದರು ಮತ್ತು ಅವರು ಜಗ್ಗಿ ಬಗ್ಗೆ ಹೊಗಳಿದರೋ ಅಲ್ಲಿಂದ ಜಗ್ಗಿ ಅದೃಷ್ಟ ಖುಲಾಯಿಸಿತು. ಆನಂತರ ಚಿತ್ರನಟರು, ಉದ್ಯಮಿಗಳು ಮತ್ತು ಅಧಿಕಾರಿಗಳು ಜಗ್ಗಿಯ ಅನುಯಾಯಿಗಳಾದರು.

2008ರಲ್ಲಿ ಜಗ್ಗಿ, ಸ್ಟಾರ್ ವಿಜಯ್ ಚಾನೆಲ್‌ನಲ್ಲಿ ಪ್ರತಿ ಭಾನುವಾರ ಅಥನೈಕ್ಕುಂ ಆಸೈಪಾಡು ಎಂಬ ಅರ್ಧ ಗಂಟೆಯ ಶೋ ನಡೆಸಿಕೊಡಲು ಆರಂಭಿಸಿದರು. ಬೆಳಿಗ್ಗೆ 8.30ಕ್ಕೆ ಆರಂಭವಾಗುವ ಈ ಶೋನಲ್ಲಿ ಜಗ್ಗಿ ತನ್ನಿಷ್ಟದ ಅತಿಥಿ ಕರೆಸಿ ಅವರೊಟ್ಟಿಗೆ ಆಧ್ಯಾತ್ಮ, ಸಾಮಾಜಿಕ ಸಮಸ್ಯೆಗಳು, ಯೋಗ, ಸಂಸ್ಕೃತಿ, ಜಾಗತಿಕ ತಾಪಮಾನ ಏರಿಕೆ, ಪ್ರೀತಿ, ವಿಚ್ಛೇದನ, ಮಾಂಸಾಹಾರಿ ಆಹಾರವನ್ನು ತಿನ್ನುವುದು ಸರಿಯೇ ಎಂಬಂತಹ ಚರ್ಚೆಗಳನ್ನು ನಡೆಸಿಕೊಡಲು ಆರಂಭಿಸಿದರು.

ಅವರ ಅತಿಥಿಗಳು ಸಂಗೀತ, ಸಾಹಿತ್ಯ, ಸಿನಿಮಾ ಮತ್ತು ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದ ಸೆಲೆಬ್ರಿಟಿಗಳಾಗಿದ್ದರು. ಅವರಲ್ಲಿ ನಟರಾದ ವಿವೇಕ್, ಆರ್ ಪಾರ್ಥಿಬನ್ ಮತ್ತು ಕ್ರೇಜಿ ಮೋಹನ್, ಗಾಯಕಿ ಸುಧಾ ರಘುನಾಥನ್ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ ನಾಯಕ ಥೋಲ್ ತಿರುಮಾವಲವನ್ ಕೂಡ ಸೇರಿದ್ದಾರೆ. ಜಗ್ಗಿ ಈ ಶೋ ನಡೆಸುತ್ತಲೇ ಹಲವು ಎಪಿಸೋಡ್‌ಗಳನ್ನು ತಮ್ಮ ಕೊಯಮತ್ತೂರಿನ ಹೊರಗಿನ ಅವರ ಆಶ್ರಮದ ಪ್ರಧಾನ ಕಚೇರಿಯಲ್ಲಿ ಚಿತ್ರೀಕರಿಸಿದರು. ಇದು ಅವರಿಗೆ ತಮಿಳುನಾಡಿನಾದ್ಯಂತ ಪ್ರಸಿದ್ದಿ ತಂದುಕೊಟ್ಟಿತು.

ನವೆಂಬರ್ 2010ರಲ್ಲಿ, ಇಶಾ ಫೌಂಡೇಶನ್ ತನ್ನದೇ ಆದ ‘ಅಥಾನೈಕ್ಕುಂ ಆಸೈಪಾಡು’ ಆವೃತ್ತಿಯನ್ನು “ಇನ್ ಕಾನ್ವರ್ಸೇಷನ್ ವಿತ್ ದಿ ಮಿಸ್ಟಿಕ್” ಎಂದು ಬಿಡುಗಡೆ ಮಾಡಿತು. ಹಿಂದಿನ ರೀತಿಯ ಶೋ ಆದರೂ ಇದನ್ನು ನೇರ ಪ್ರೇಕ್ಷಕರ ಮುಂದೆ ಚಿತ್ರೀಕರಿಸಲಾಯಿತು ಮತ್ತು ಗ್ಲಾಮರ್‌ಗೆ ಒತ್ತು ಕೊಡಲಾಗಿದೆ. ಈ ಶೋ ಅತಿಥಿಗಳಲ್ಲಿ ಜೂಹಿ ಚಾವ್ಲಾ, ಅನುಪಮ್ ಖೇರ್, ಕಿರಣ್ ಬೇಡಿ, ಕಿರಣ್ ಮಜುಂದಾರ್ ಶಾ, ಬರ್ಖಾ ದತ್ ಮತ್ತು ಅರ್ನಾಬ್ ಗೋಸ್ವಾಮಿ ಮುಂತಾದ ಹೆಸರುಗಳು ಸೇರಿದ್ದವು. ಶೇಖರ್ ಕಪೂರ್ ವಾಸುದೇವ್ ಅವರೊಂದಿಗೆ ಭಾಗವಹಿಸಿದ  ಮೊದಲ ಅತಿಥಿಯಾಗಿದ್ದರು.

ಇದನ್ನೂ ಓದಿರಿ: ಮಣಿಪುರ ರಾಜ್ಯಪಾಲರ ಮಹತ್ವದ ನಡೆ; ಶಾಂತಿ ಮರುಸ್ಥಾಪನೆ ಸುಲಭವೇ?

ಕೆಲವು ವರ್ಷಗಳಲ್ಲಿ, ರಣವೀರ್ ಸಿಂಗ್ ಮತ್ತು ಕಂಗನಾ ರನೌತ್ ಮತ್ತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಂತಹ ಬಾಲಿವುಡ್ ತಾರೆಗಳೂ ಈ ಮಿಸ್ಟಿಕ್ ಶೋನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮಕ್ಕೆ ಟಿಕೆಟ್ ದರ ನಿಗದಿಪಡಿಸಲಾಯಿತು. ಜಗ್ಗಿ ವಾಸುದೇವ್ ಶೀಘ್ರದಲ್ಲೇ ಯೂತ್ ಮತ್ತು ಟ್ರೂತ್‌ನಂತಹ ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಅಲ್ಲಿ ಅವರು ಭಾರತದ ಐಐಎಂಗಳಿಂದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ವರೆಗೆ ಪ್ರಸಿದ್ಧ ವಿಶ್ವವಿದ್ಯಾಲಯಗಳ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.

kangana 6
ಕಂಗನಾ ಜೊತೆಯಲ್ಲಿ ಜಗ್ಗಿ ವಾಸುದೇವ್

ಜಗ್ಗಿ ವಾಸುದೇವ್‍ಗೆ ಮೊದಲ ಬಾರಿಗೆ ಕಠಿಣ ಪ್ರಶ್ನೆಗಳು ಎದುರಾಗಿದ್ದು ಇಲ್ಲಿಯೇ. ಜಗ್ಗಿ ಹೇಳಿದ್ದೆಲ್ಲವನ್ನು ಉಳಿದ ಸೆಲೆಬ್ರಿಟಿಗಳಂತೆ ಈ ವಿದ್ಯಾರ್ಥಿಗಳು ಒಪ್ಪಲಿಲ್ಲ. ಬದಲಿಗೆ ಮರು ಪ್ರಶ್ನಿಸಿದರು. 2018ರಲ್ಲಿ ಹೈದರಾಬಾದ್‌ನ ನಲ್ಸಾರ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಆನೆ ಕಾರಿಡಾರ್‍ನಲ್ಲಿ ನಿಮ್ಮ ಆಶ್ರಮ / ಯೋಗ ಕೇಂದ್ರ ಕಟ್ಟಲು ಅನುಮತಿ ಪಡೆದಿದ್ದೀರಾ? ಕೆಲ ದೇವಾಲಯಗಳಿಗೆ ಮಹಿಳೆಯರಿಗೆ ಏಕೆ ಪ್ರವೇಶವಿಲ್ಲ? ಎಂಬ ಪ್ರಶ್ನೆಗಳು ಬಂದಾಗ ಜಗ್ಗಿ ಕಕ್ಕಾಬಿಕ್ಕಿಯಾದರು. ಅವರ ಉತ್ತರಗಳು ಕೇವಲ ಮೇಲ್ಮಟ್ಟದ್ದಾಗಿದ್ದವು ಎಂದು ವಿದ್ಯಾರ್ಥಿಗಳು ಟೀಕಿಸಿದರು.

2019ರಲ್ಲಿ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ‘ಯೂಥ್ ಅಂಡ್ ಟ್ರೂಥ್’ ವಿಷಯದ ಮೇಲೆ ಜಗ್ಗಿಯವರ ಉಪನ್ಯಾಸವಿತ್ತು. ಉಪನ್ಯಾಸದ ನಂತರ ಅಲ್ಲಿನ ಮೂವರು ವಿದ್ಯಾರ್ಥಿಗಳ ಜೊತೆಗೆ ಚರ್ಚಿಸುವಾಗ, ಬಿಲಾಲ್ ಬಿನ್ ಸಾಖಿಬ್ ಎಂಬ ವಿದ್ಯಾರ್ಥಿಯನ್ನು ಜಗ್ಗಿ ‘ತಾಲಿಬಾನಿ’ ಎಂದು ಕರೆದಿದ್ದರು. ಇದು ವಿವಾದಕ್ಕೆ ಕಾರಣವಾಯಿತು. ಇಸ್ಲಾಮೋಫೋಬಿಯ ಹರಡುತ್ತಿದ್ದಾರೆ ಎಂದು ಜಗ್ಗಿಯನ್ನು ಟೀಕಿಸಲಾಯಿತು. ‘ನಾನು ಸುಮ್ಮನೇ ಜೋಕ್ ಮಾಡ್ತಾ ಇದ್ದೆ. ಅರೇಬಿಕ್‍ನಲ್ಲಿ ತಾಲಿಬಾನಿ ಎಂದರೆ ಉತ್ಕಟ ವಿದ್ಯಾರ್ಥಿ. ಆ ಅರ್ಥದಲ್ಲಿ ಮಾತಾಡಿದ್ದೆ’ ಎಂದೆಲ್ಲ ಜಗ್ಗಿ ಸಬೂಬು ನೀಡಿದ್ದರು.

ಕಾವೇರಿ ಕಾಲಿಂಗ್

ಇಶಾ ಫೌಂಡೇಶನ್ ಕಾವೇರಿಯ ಉಗಮ ಸ್ಥಳವಾದ ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ತಿರುವರೂರಿನವರೆಗೆ 639 ಕಿಲೋಮೀಟರ್ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ 253 ಕೋಟಿ ಸಸಿಗಳನ್ನು ನೆಡಲು ಯೋಜಿಸಿತು. 123 ದೇಶಗಳು ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡುತ್ತಿವೆ ಎಂದು ಜಗ್ಗಿ ಹೇಳಿಕೊಂಡಿದ್ದರು. ಇದಕ್ಕಾಗಿ ಸಾರ್ವಜನಿಕರಿಂದ ಒಂದು ಸಸಿ ನೆಡುವಿಕೆಗೆ 42 ರೂ.ಗಳನ್ನು ಫೌಂಡೇಶನ್ ಪಡೆಯುತ್ತಿದ್ದು, ಅಂದರೆ ಇದು ಒಟ್ಟು 10,626 ಕೋಟಿ ರೂ. ದೇಣಿಗೆ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿತ್ತು. ಅಲ್ಲದೇ ಹಲವು ಸೆಲೆಬ್ರಿಟಿ ಮತ್ತು ಕಾರ್ಪೊರೇಟ್ ಕಂಪನಿಗಳಿಂದ ದೇಣಿಗೆ ಸಹ ಸಂಗ್ರಹಿಸಿತು. ಇದು ದೊಡ್ಡ ಹಗರಣವಾಗಿದೆ ಎಂದು ಅರ್ಜಿದಾರ ವಕೀಲ ಅಮರನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕಾನೂನಿಗಿಂತ ಮಿಗಿಲಲ್ಲ ಎಂದು ಹೈಕೋರ್ಟ್‌ ಜಗ್ಗಿ ವಾಸುದೇವ್‌ಗೆ ಛೀಮಾರಿ ಹಾಕಿತು. ಯೋಜನೆ ನಿಂತು ಹೋಯಿತು ಮಾತ್ರವಲ್ಲ ಒಂದೇ ಒಂದು ಸಸಿ ನೆಟ್ಟ ಸಾಕ್ಷಿಯೂ ಇದುವರೆಗೆ ಸಿಕ್ಕಿಲ್ಲ!

ಇನ್ನು ಬಹಳಷ್ಟು ಜನರು ಇಶಾ ಫೌಂಡೇಶನ್‌ನಿಂದ ಸಸಿಗಳನ್ನು, ಪುಸ್ತಕಗಳನ್ನು ದುಡ್ಡು ಕೊಟ್ಟು ಖರೀದಿಸಿದ್ದಾರೆ. ಆದರೆ ಅವರಿಗೆ ಬಿಲ್ ಕೊಡುವ ಬದಲು ದೇಣಿಗೆ ರಶೀದಿ ನೀಡಿದೆ ಇಶಾ. ಆ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಅಡಿಯಲ್ಲಿ ವಿನಾಯಿತಿ ಪಡೆದಿದೆ ಇಶಾ. ತೆರಿಗೆ ಕಟ್ಟದೇ ಕೋಟ್ಯಾಂತರ ರೂ. ದೇಣಿಗೆ ಪಡೆದಿರುವುದನ್ನು ಹಲವರು ಆರೋಪಿಸಿದ್ದಾರೆ.

ಹಣ ಹಣ ಹಣ

ವಾಸುದೇವ್ ಅವರೊಂದಿಗೆ ಹಿಮಾಲಯಕ್ಕೆ ಮೋಟಾರ್ ಸೈಕಲ್‌ನಲ್ಲಿ 12 ದಿನಗಳ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 12 ಲಕ್ಷ ರೂ! ಐದು ದಿನಗಳ ವಾರಣಾಸಿ ಪ್ರವಾಸಕ್ಕೆ ಐದು ಲಕ್ಷ ರೂ! ಮೈಸೂರಿನ ಚಾಮುಂಡಿ ಬೆಟ್ಟದ ದರ್ಶನದ ಪ್ರವಾಸಕ್ಕೆ 50 ಸಾವಿರ ರೂ ಮತ್ತು ರಾಮೇಶ್ವರಂ ಅಥವಾ ಮಧುರೈಗೆ ಐದು ದಿನಗಳ ಪ್ರವಾಸಕ್ಕೆ ಒಬ್ಬ ಭಕ್ತನಿಗೆ 45,000 ರೂ. ದರ ನಿಗದಿ ಪಡಿಸಲಾಗಿದೆ. ಇದು ಸುಲಿಗೆಯಲ್ಲವೇ? ಜೊತೆಗೆ ಇದಕ್ಕೆ ತೆರಿಗೆ ಕಟ್ಟುವ ಜವಾಬ್ದಾರಿಯೂ ಇಶಾ ಸಂಸ್ಥೆಗೆ ಇಲ್ಲ! ಈ ಎಲ್ಲ ‘ಆಧ್ಯಾತ್ಮಿಕ’ ಪ್ರವಾಸಗಳನ್ನು ಮಾರಾಟ ಮಾಡುವುದರಿಂದ, ಜಗ್ಗಿಯ ಇಶಾ ಸಂಸ್ಥೆಗೆ ವಾರ್ಷಿಕ 60 ಕೋಟಿ ರೂ. ಲಾಭ ದೊರಕುತ್ತಿದೆ. ಇದರಲ್ಲಿ ಬಹುತೇಕವನ್ನು ದೇಣಿಗೆ ಹೆಸರಲ್ಲಿ ತೋರಿಸಿ ತೆರಿಗೆ ರಿಯಾಯಿತಿ ಪಡೆಯಲಾಗುತ್ತಿದೆ ಎಂದು ‘ನ್ಯೂಸ್ ಲಾಂಡ್ರಿ’ ವರದಿ ಮಾಡಿದೆ. ಸದ್ಯ ಅವರ ಪಾದದ ಫೋಟೊಗೆ 3,000 ದರ ನಿಗದಿ ಮಾಡಲಾಗಿದೆ ಮತ್ತು ಜನರು ಅದನ್ನು ಕೊಂಡುಕೊಳ್ಳುತ್ತಿದ್ದಾರೆಂದರೆ ನೀವು ನಂಬಲೇಬೇಕು.

ಆಶ್ರಮದಿಂದ ಜನರ ನಾಪತ್ತೆ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ.ಕಾರ್ತಿಕೇಯನ್ ಅವರು ಸಲ್ಲಿಸಿದ ವರದಿಯಲ್ಲಿ, ಇಶಾ ಫೌಂಡೇಶನ್‌ಗೆ ಸಂಬಂಧಿಸಿದಂತೆ 15 ವರ್ಷಗಳಲ್ಲಿ ಒಟ್ಟು ಆರು ನಾಪತ್ತೆ ಪ್ರಕರಣಗಳು ನ್ಯಾಯವ್ಯಾಪ್ತಿಯ ಆಲಂದೂರೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆರರಲ್ಲಿ ಐದು ಪ್ರಕರಣಗಳನ್ನು, “ಕಾಣೆಯಾದ ವ್ಯಕ್ತಿ ಇನ್ನೂ ಪತ್ತೆಯಾಗದ ಕಾರಣ, ಕೈಬಿಡಲಾಗಿದೆ ಎಂದು ಮುಚ್ಚಲಾಗಿದೆ. ಒಂದು ಪ್ರಕರಣವು ಇನ್ನೂ ತನಿಖೆಯಲ್ಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!

ಇದಲ್ಲದೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 174 (ಆತ್ಮಹತ್ಯೆಯ ಕುರಿತು ವಿಚಾರಣೆ ಮತ್ತು ವರದಿ ಮಾಡಲು) ಅಡಿಯಲ್ಲಿ ಪೊಲೀಸರು ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಎರಡು ಪ್ರಕರಣಗಳು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಕೊರತೆಯಿಂದಾಗಿ ತನಿಖೆಯಲ್ಲಿವೆ ಎನ್ನಲಾಗಿದೆ. ಆತಂಕದ ವಿಷಯವೆಂದರೆ  ಇಶಾ ಫೌಂಡೇಶನ್ ತನ್ನ ಕ್ಯಾಂಪಸ್‌ನಲ್ಲಿ ಸ್ಮಶಾನವನ್ನು ನಿರ್ಮಿಸುತ್ತಿದೆ, ಅದನ್ನು ತೆಗೆಯುವಂತೆ ನೆರೆಹೊರೆಯವರು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಶುಭಶ್ರೀ ಪ್ರಕರಣ

2022 ಡಿಸೆಂಬರ್ ನಲ್ಲಿ, ಶುಭಶ್ರೀ ಎಂಬ ಮಹಿಳೆ ಕೊಯಂಬತ್ತೂರಿನ ISHA foundation ಗೆ ಒಂದು ವಾರದ ಕಾಲ ಯೋಗ ತರಬೇತಿಗೆ ಸೇರಿದ್ದರು. ವಾರದ ನಂತರ ತರಬೇತಿ ಮುಗಿದ ದಿನ, ಶುಭಶ್ರೀಯನ್ನು ಮನೆಗೆ ಕರೆದುಕೊಂಡು ಹೋಗಲು, ಅವಳ ಗಂಡ ಆಶ್ರಮಕ್ಕೆ ಬರುತ್ತಾನೆ. ಆದರೆ ಶುಭಶ್ರೀ ಆಶ್ರಮದಲ್ಲಿ ಇರುವುದಿಲ್ಲ! ಆತಂಕಗೊಂಡ ಶುಭಶ್ರೀ ಗಂಡ, ಆಶ್ರಮದಲ್ಲಿ ವಿಚಾರಿಸಿದಾಗ, ಅಲ್ಲಿನ ಕೆಲವರು, “ಆಕೆ ಬೆಳಿಗ್ಗೆಯೇ ಆಶ್ರಮದಿಂದ ಹೊರಟು ಹೋದಳು”, ಎಂದು ಹೇಳಿದ್ದರು. ಮಾರನೇ ದಿನ ಪೊಲೀಸ್ ದೂರು ದಾಖಲಿಸಿದರು. ಆಶ್ರಮದಿಂದ ಒಂದೆರಡು ಮೈಲಿಗಳ ಅಂತರದಲ್ಲಿರುವ, ಪಾಳುಬಿದ್ದ ಬಾವಿಯಲ್ಲಿ, ಗುರುತು ಸಿಗದಷ್ಟು ಕೊಳೆತ ಸ್ಥಿತಿಯಲ್ಲಿ ಶುಭಶ್ರೀ ಶವ ಪತ್ತೆಯಾಗಿತ್ತು.

Shubha Sri
ಸಿಸಿಟಿವಿಯಲ್ಲಿ ಶುಭಶ್ರೀ ಸೆರೆಯಾಗಿರುವುದು

ಆಕೆ ಆಶ್ರಮದಿಂದ ಹೊರಬಂದ ದಿನ ಮತ್ತು ಸಮಯವನ್ನು ಆಧರಿಸಿ, ಆಶ್ರಮದ ಸುತ್ತ ಮುತ್ತಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಶುಭಶ್ರೀ ಆಶ್ರಮದಿಂದ ಬೆಳಗಿನ ಜಾವ ತಪ್ಪಿಸಿಕೊಂಡು, ಬಿಳಿ ಬಣ್ಣದ ಯೋಗ ಡ್ರೆಸ್ ನಲ್ಲೇ ಅತ್ಯಂತ ಆತಂಕ, ಮತ್ತು ಭಯದಿಂದ ಬೀದಿ, ಬೀದಿಗಳಲ್ಲಿ ಓಡುತ್ತಿರುವ ದೃಶ್ಯ ದಾಖಲಾಗಿತ್ತು. ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ, ಅವರಲ್ಲೊಬ್ಬ ಆಟೋ ಡ್ರೈವರ್, “ಈಕೆಯನ್ನು ನಾನು ನೋಡಿದೆ, ತುಂಬಾ ಭಯಗೊಂಡಿದ್ದಳು, ಸ್ವಲ್ಪ ಮೊಬೈಲ್ ಕೊಡಿ ಪೋನ್ ಮಾಡಬೇಕು ಅಂತ ಕೇಳಿದಳು, ನಾನು ಫೋನ್ ಕೂಟ್ಟೆ ಯಾರಿಗೂ ಪೋನ್ ಮಾಡಿದಳು, ಆದರೆ ಅವರು ಫೋನ್ ತೆಗೆಯಲಿಲ್ಲ… ಫೋನ್ ನನಗೆ ಕೊಟ್ಟು ಮತ್ತೆ ಓಡಿ ಹೋದಳು. ಆಕೆಯ ಕೈಕಾಲುಗಳು ನಡುಗುತ್ತಿತ್ತು ಸರ್” ಅಂತ ಹೇಳುತ್ತಾನೆ. ಪೋಲೀಸರು, ಆ ಆಟೋ ಡ್ರೈವರ್‌ನ ಫೋನ್ ಪರಿಶೀಲಿಸಿದಾಗ, ಶುಭಶ್ರೀ ಫೋನ್ ಮಾಡಿದ್ದು, ಆಕೆಯ ಗಂಡನಿಗೇ ಎಂದು ತಿಳಿಯುತ್ತದೆ. ಶುಭಶ್ರೀಯ ಗಂಡ ಅವತ್ತು, ಆ ಫೋನ್ ರಿಸೀವ್ ಮಾಡಿದಿದ್ದರೆ, ಆಕೆ ಬದುಕಿ ಉಳಿಯುತ್ತಿದ್ದಳು, ಇನ್ಯಾವುದೋ ಒಂದು ಭಯಾನಕ ಸತ್ಯ ಹೊರಬರುತ್ತಿತ್ತು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಹೌದು ಜಗ್ಗಿಯ ಇಶಾ ಫೌಂಡೇಷನ್‌ನಿಂದ ನಾಪತ್ತೆಯಾದ ಮಹಿಳೆಯ ಕಥೆ ಇದು.

ಮಣ್ಣು ಉಳಿಸಿ ಅಭಿಯಾನ ಮತ್ತು ಬಿಬಿಸಿ ಪ್ರಶ್ನೆಗೆ ತಬ್ಬಿ‍ಬ್ಬು

ಮಣ್ಣು ಉಳಿಸಿ ಅಭಿಯಾನ ನಡೆಸಿದ ಜಗ್ಗಿ ವಾಸುದೇವ್ ಲಂಡನ್‌ನಿಂದ ಭಾರತದವರೆಗೆ ಬೈಕ್ ರ್ಯಾಲಿ ಮಾಡಿದರು. ಆನಂತರ ಬಿಬಿಸಿಯ ಬಿಬಿಸಿ ಪತ್ರಕರ್ತ ಜಗ್ಗಿಯವರನ್ನು ಸಂದರ್ಶನ ಮಾಡುತ್ತಿದ್ದಾಗ, “ಇಶಾ ಫೌಂಡೇಶನ್ ಈಗ ಪರಿಸರಕ್ಕಾಗಿ ಕೆಲಸ ಮಾಡುತ್ತಿದೆ ಎನ್ನುತ್ತೀರಿ. ಆದರೆ ನಿಮ್ಮ ಇಶಾ ಫೌಂಡೇಶನ್ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದ್ದರು. ಇಷ್ಟಕ್ಕೆ ಸಿಟ್ಟಿಗೆದ್ದ ವಾಸುದೇವ್ ಮೈಕ್ ಮತ್ತು ಕ್ಯಾಮರಾ ಆಫ್‌ ಮಾಡಿ ಅರ್ಧಕ್ಕೆ ಎದ್ದು ಹೋಗಿದ್ದರು.

ಅತ್ಯಾಚಾರ, ಲೈಂಗಿಕ ಶೋಷಣೆಯ ಗಂಭೀರ ಆರೋಪಗಳು

ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಎಂಬುವವರು ಜಗ್ಗಿಯ ಇಶಾ ಆಶ್ರಮದಲ್ಲಿ ಅತ್ಯಾಚಾರ, ಲೈಂಗಿಕ ಶೋಷಣೆಯ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಅವರು ಪ್ರಮುಖ 4 ಆರೋಪಗಳು ಈ ಕೆಳಗಿನಂತಿವೆ.

1. ಇಶಾ ಶಾಲೆಯ ಪಿಟಿ ಶಿಕ್ಷಕನೊಬ್ಬ 8 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಇಶಾ ಫೌಂಡೇಶನ್ ಆಯೋಜಿಸಿದ್ದ ಅಧಿವೇಶನದಲ್ಲಿ ಆ ಬಾಲಕಿ ಜಗ್ಗಿ ವಾಸುದೇವ್‌ಗೆ ಈ ವಿಚಾರ ತಿಳಿಸಿದ್ದರು. ಆದರೆ ಜಗ್ಗಿ ಏನೂ ಮಾಡಲಿಲ್ಲ. ಸದ್ಯ ಆ ಯುವತಿ ಅಮೆರಿಕದಲ್ಲಿದ್ದು ಕೊಯಮತ್ತೂರು ಪೊಲೀಸರಿಗೆ ಆನ್‌ಲೈನ್ ದೂರು (ಎನ್‌ಆರ್‌ಐ ಪೋರ್ಟಲ್) ನೀಡಿದ್ದರೂ, ಅವರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಮುಂದಿನ ತಿಂಗಳು ಖುದ್ದಾಗಿ ಬಂದು ದೂರು ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!

2. ಇಶಾ ಆಶ್ರಮದಲ್ಲಿ 2021ರಲ್ಲಿ ಯೋಗ ಕೋರ್ಸ್‌ಗೆ ಹಾಜರಾಗುತ್ತಿದ್ದಾಗ ಅಲ್ಲಿನ ಸಹೋದ್ಯೋಗಿ ದೆಹಲಿಯ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದಹೆಲಿಯ ಸಾಕೇತ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಅದನ್ನು ಕೊಯಮತ್ತೂರು ಠಾಣೆಗೆ ವರ್ಗಾಯಿಸಿದ್ದಾರೆ. ಆದರೆ ಆರೋಪಿಯನ್ನು ಕೊಯಮತ್ತೂರು ಪೊಲೀಸರು ಬಂಧಿಸಿಲ್ಲ. ಹುಡುಗಿ ನ್ಯಾಯ ಸಿಗುವುದಿಲ್ಲ ಎಂದು ನೊಂದು ತನ್ನ ದೂರು ಹಿಂತೆಗೆದುಕೊಂಡಳು. ಜಗ್ಗಿ ತನ್ನ ಸ್ವಂತ ಆಶ್ರಮದಲ್ಲಿ ಅತ್ಯಾಚಾರ ನಡೆದಾಗಲೂ ಈ ಪ್ರಕರಣದಲ್ಲಿ ಏನನ್ನೂ ಮಾಡಲಿಲ್ಲ.

3. ಇಶಾ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದನು. ಇದರ ಬಗ್ಗೆ ಪೋಷಕರು ಕಂಪ್ಲೈಟ್ ನೀಡಿದರು. ಆದರೆ ಜಗ್ಗಿ ಆರೋಪಿಯನ್ನು ರಕ್ಷಿಸಿದರು ಮತ್ತು ಅದೇ ಇಶಾ ಶಾಲೆಯಲ್ಲಿ ಅಧ್ಯಯನ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

4. ಇಶಾ ಫೌಂಡೇಶನ್‌ನಿಂದ ಸೋರಿಕೆಯಾದ ಅಧಿಕೃತ ಇಮೇಲ್‌ಗಳು ಹೇಳುವಂತೆ ಅಪ್ರಾಪ್ತ ಬಾಲಕಿಯರಿಗೆ ಗುರುಗಳು ದೀಕ್ಷೆ ಬೋಧಿಸುವಾಗ ಅವರ ಮೇಲುಡುಗೆ ತೆಗೆಯುವಂತೆ ಹೇಳಲಾಗುತ್ತಿತ್ತು. ಇದು ಪೋಕ್ಸೋ ಕಾಯ್ದೆಯ ಪ್ರಕಾರ ಅಪರಾಧ. ಇಲ್ಲಿ ಗುರುಗಳು ಎಂದರೆ ಯಾರು? ಬಹುಶಃ ಜಗ್ಗಿ ಅವರೇ ಅವರ ಏಕೈಕ ಗುರು. ಇದು ಅವರ ಪೋಷಕರಿಗೆ ತಿಳಿಸದೆ ಮತ್ತು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಪ್ರಕರಣವಾಗಿದೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಅಕ್ಟೋಬರ್ 1, 2024ರಂದು ಫೌಂಡೇಶನ್‌ನಿಂದ ಪಡೆದ ಮಾಹಿತಿಯ ಪ್ರಕಾರ ಅಲ್ಲಿ ಸದ್ಯ 217 ಬ್ರಹ್ಮಚಾರಿಗಳು, 2455 ಸ್ವಯಂಸೇವಕರು, 891 ಸಿಬ್ಬಂದಿ, 342 ಇಶಾ ಹೋಮ್ ಸ್ಕೂಲ್ ವಿದ್ಯಾರ್ಥಿಗಳು, 175 ಇಶಾ ಸಂಸ್ಕೃತಿ ವಿದ್ಯಾರ್ಥಿಗಳು, 704 ಅತಿಥಿಗಳು/ಸ್ವಯಂಸೇವಕರು ಮತ್ತು 912 ಅತಿಥಿಗಳು ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಕಾಟೇಜ್‌ಗಳಲ್ಲಿ ವಾಸಿಸುತ್ತಿದ್ದಾರೆ.

ಹೆಂಡತಿ ಕೊಂದ ಆರೋಪ

1997ರಲ್ಲಿ ಜಗ್ಗಿ ವಾಸುದೇವ್‍ರವರ ಪತ್ನಿ ವಿಜಯಕುಮಾರಿ ಅನುಮಾನಾಸ್ಪದ ರೀತಿಯಲ್ಲಿ ಮರಣ ಹೊಂದಿದ್ದರು. ಆಗ ಅವರ ತಂದೆ ಜಗ್ಗಿ ವಾಸುದೇವ್ ನನ್ನ ಮಗಳನ್ನು ಕೊಂದಿದ್ದಾನೆ ಎಂದು ದೂರು ನೀಡಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸತ್ತು ಹೋಗಿದ್ದಾಳೆ ಎಂದು ವಾಸು ದೇವ್ ಹೇಳಿದರು. ನಾನು ಕೊಯಮತ್ತೂರಿಗೆ ಹೋಗುವಷ್ಟರಲ್ಲಿ ಮೃತದೇಹವನ್ನು ಸುಟ್ಟು ಹಾಕಲಾಗಿತ್ತು. ನಾವು ಅಂತ್ಯಕ್ರಿಯೆಗೆ ಹೂಳುತ್ತೇವೆ ಹೊರತು ಸುಡುವ ಸಂಪ್ರದಾಯ ಪಾಲಿಸುವವರಲ್ಲ. ಆದರೂ ಸಾಕ್ಷ್ಯನಾಶಕ್ಕಾಗಿ ಜಗ್ಗಿ ವಾಸುದೇವ್ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಪ್ರಕರಣವನ್ನು ಕೋರ್ಟ್ ವಜಾ ಮಾಡಿದೆ.

ಕರ್ನಾಟಕಕ್ಕೆ ಕಾಲಿಟ್ಟ ಜಗ್ಗಿ

ಕೊಯಮತ್ತೂರಿನಲ್ಲಿ ಜಗ್ಗಿ ಮೇಲಿನ ಆರೋಪಗಳು ದಿನೇ ದಿನೇ ಹೆಚ್ಚಾದಂತೆ ಪ್ರಸ್ತುತ ಡಿಎಂಕೆ ನೇತೃತ್ವದ ಸರ್ಕಾರ ತನಿಖೆ ಮೇಲೆ ತನಿಖೆ ನಡೆಸುತ್ತಿದೆ. ಇದರಿಂದ ಕುಪಿತನಾಗಿರುವ ಜಗ್ಗಿ ವಾಸುದೇವ್ ಕರ್ನಾಟಕದತ್ತ ಮುಖ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಿನಲ್ಲಿ ತಮ್ಮ ಹೊಸ ಬ್ರಾಂಚ್ ತೆಗೆದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಅವರನ್ನು ಕೆಂಪು ಹಾಸಿಗೆ ಹಾಕಿ ಕರೆದು 100 ಕೋಟಿ ರೂ. ಅನುದಾನ ಸಹ ನೀಡಿದ್ದಾರೆ. ಅಲ್ಲದೇ ‘ಮಣ್ಣು ಉಳಿಸಿ ಅಭಿಯಾನ’ಕ್ಕೆ ಅವರೊಟ್ಟಿಗೆ ಎಂಓಎಂ ಸಹ ಮಾಡಿಕೊಂಡಿದ್ದರು.

ಇದನ್ನೂ ಓದಿರಿ: ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ

ನಂದಿ ಬೆಟ್ಟದ ತಪ್ಪಲು ಹಲವು ನದಿಗಳ ಉಗಮಸ್ಥಾನವಾಗಿದ್ದು, ಸೂಕ್ಷ್ಮ ಪರಿಸರವಾಗಿದೆ. ಅಲ್ಲಿ ಜಗ್ಗಿ ವಾಸುದೇವ್ ಶಿವ ವಿಗ್ರಹ ಸೇರಿ ಇತ್ಯಾದಿ ಚಟುವಟಿಕೆ ನಡೆಸಿದರೆ ಜನದಟ್ಟಣೆ ಮತ್ತು ಹಲವು ಭಾರೀ ಕಟ್ಟಡಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಹಲವು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸದಾ ಪರಿಸರದ ಬಗ್ಗೆ ಮಾತನಾಡುವ ಜಗ್ಗಿ ವಾಸುದೇವ್ ಅದಕ್ಕೆ ಕಿವಿಗೊಡದೆ ಅಲ್ಲಿ ತಮ್ಮ ಬ್ರಾಂಚ್ ತೆರೆದಿದ್ದಾರೆ. ಚಿಕ್ಕಬಳ್ಳಾಪುರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾವು ಪ್ರದರ್ಶಿಸಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಜೊತೆಗೂಡಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ) ವ್ಯಾಪ್ತಿಯಲ್ಲಿ ಮುಸ್ಸಂಜೆಯ ನಂತರ ಜೀಪ್ ಸಫಾರಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಹೀಗೆ ಅವರು ಹೇಳುವುದಕ್ಕೆ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಆದರೂ ನಮ್ಮ ಜನರಿಗೆ ಅದರಲ್ಲೂ ಶಿಕ್ಷಿತ ಮಧ್ಯಮ ವರ್ಗದ ಜನರಿಗೆ ಯೋಗ, ಆಧ್ಯಾತ್ಮದ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡುವವರೆಂದರೆ ಅದಮ್ಯ ಪ್ರೀತಿ. ಹಾಗಾಗಿ ಅವರು ಇಂತಹ ಸದ್ಗುರು ಎಂದು ಕರೆಯಲ್ಪಡುವವರ ಅನುಯಾಯಿಗಳಾಗಿ ಲಕ್ಷಾಂತರ ಹಣ ಸುರಿಯಲು ಸಿದ್ದರಾಗುತ್ತಾರೆಯೋ ಹೊರತು ಅವರನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳುವುದಿಲ್ಲ. ಈಗಾಗಲೇ ಧರ್ಮ ಬೇಧವಿಲ್ಲದೆ ದೇವಮಾನವರೆನಿಸಿಕೊಂಡ ಹಲವರು ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರೂ, ಉಳಿದವರ ಮೇಲೂ ಅದೇ ರೀತಿಯ ಆರೋಪಗಳಿದ್ದರೂ ಅವರನ್ನೇ ನಂಬಿ ಹೋಗುತ್ತಿರುವುದು ದುರಂತವಾಗಿದೆ. ಇನ್ನು ಇದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಸರ್ಕಾರಗಳ ಪ್ರಮುಖರೇ ಈ ವ್ಯಕ್ತಿಗಳ ಅನುಯಾಯಿಗಳಾಗಿ ಹೋದಲ್ಲಿ ನಾವು ಯಾರನ್ನು ನಂಬುವುದು?

ಮುತ್ತುರಾಜು
ಮುತ್ತುರಾಜು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...