‘ಟ್ರಾನ್ಸ್‌ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-2)

Date:

(ಮುಂದುವರಿದ ಭಾಗ…)ಜೋಗಪ್ಪಗಳು’ ಜೆಂಡರ್ ಆಯ್ಕೆಯಿಂದ ಹೆಣ್ಣಾದವರೇ?: ಗಂಡಾಗಿ ಹುಟ್ಟಿ ಹೆಣ್ಣಿನ ಉಡುಪು ಧರಿಸಿ ಜೀವನ ಸಾಗಿಸುತ್ತಿರುವವರನ್ನೆಲ್ಲ ಜೆಂಡರ್ ಅನ್ನು ಆಯ್ಕೆ ಮಾಡಿಕೊಂಡವರು ಎಂದು ನೋಡಲಾಗುತ್ತದೆ. ಜೋಗಪ್ಪ ಅವರನ್ನು ಈ ದೃಷ್ಟಿಕೋನದಿಂದಲೇ ನೋಡುತ್ತಿರುವುದರಿಂದ ಒತ್ತಡಕ್ಕೊಳಗಾಗಿ ಹೆಣ್ಣಾಗುತ್ತಿರುವವರ ಕಥನಗಳು ಅಧ್ಯಯನ ವಲಯದವರಿಗೆ, ಸಾಮಾಜಿಕ ವಲಯದವರಿಗೆ ಅಪರಿಚಿತವಾಗಿಯೇ ಉಳಿದಿವೆ. ಸರಕಾರದ ಯೋಜನೆಗಳಿಂದ ಹೊರದೂಡಲ್ಪಟ್ಟ ಜೋಗಪ್ಪಂದಿರಿಗೆ ಕಾನೂನಿನ ನೆಲೆಯಿಂದ ಯಾವುದೇ ರಕ್ಷಣೆಯಿಲ್ಲ. ಅವರ ಜೀವನ ಕಥನಗಳು ಸಮಾಜದ ಮತ್ತೊಂದು ಕಠೋರ ಹಾಗೂ ಭೀಕರ ಮುಖವನ್ನು ಪರಿಚಯಿಸುತ್ತವೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಕಾಣಸಿಗುವ ಈ ಜೋಗಪ್ಪಂದಿರು ಮದುವೆಯಾಗಿ ಡಜನ್ ಮಕ್ಕಳನ್ನು ಹೊಂದುವ ಕನಸು ಹೊತ್ತವರು; ಆದರೆ ಮೂಢನಂಬಿಕೆಗೆ ಬಲಿಯಾಗಿ ‘ಗೇ’ ಸಂಬಂಧ ಬಯಸುವವರ ಒತ್ತಡಕ್ಕೊಳಗಾಗಿ ಹೆಣ್ಣಾಗಿದ್ದಾರೆ; ನಿತ್ಯ ಅತ್ಯಾಚಾರಕ್ಕೊಳಗಾಗುವ ಜೋಗಪ್ಪಂದಿರು ಸಮಾಜದ, ಸರಕಾರದ ಹಾಗೂ ಕಾನೂನಿನ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡವರನ್ನು ವಿಜೃಂಭಿಸುವುದರಲ್ಲಿಯೇ ನಿಲುಗಡೆಗೊಳ್ಳುವ ಅಧ್ಯಯನಗಳು ಹಾಗೂ ಸಮುದಾಯ ಕೇಂದ್ರಿತ ಕಾರ್ಯಗಳು, ಹೃದಯ ವಿದ್ರಾವಕ ಜೀವನ ಸಾಗುತ್ತಿರುವ ಈ ಸಮುದಾಯಗಳತ್ತ ಹೊರಳಬೇಕಿದೆ.

ಕಾನೂನು ಮತ್ತು ಟ್ರಾನ್ಸ್ ಸಮುದಾಯ

ಏಪ್ರಿಲ್ 15, 2014ರ ಕಾನೂನು, ವ್ಯಕ್ತಿಯು ಹುಟ್ಟಿನ Sexಅನ್ನು ನಿರಾಕರಿಸಿ, ತಮಗೆ ಬೇಕಾದ ಜೆಂಡರ್‌ಅನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಮಾನ್ಯತೆ ನೀಡುತ್ತದೆ; ಈ ಕಾನೂನು ದೇಶದ ಸಂವಿಧಾನದಲ್ಲಿರುವ ಹಕ್ಕುಗಳನ್ನು ಟ್ರಾನ್ಸ್ ಸಮುದಾಯದವರಿಗೂ ವಿಸ್ತರಿಸುತ್ತದೆ. Sexಅನ್ನು ಆಯ್ಕೆ ಮಾಡಿಕೊಂಡು ಅಸ್ಮಿತೆಯನ್ನು ಕಟ್ಟಿಕೊಳ್ಳುವ ಅವಕಾಶವನ್ನು ತೀರ್ಪು ಬೆಂಬಲಿಸುತ್ತದೆ. ಜಂಡರ್ ಆಯ್ಕೆ ಮಾಡಿಕೊಂಡ ಟ್ರಾನ್ಸ್ ಸಮುದಾಯದವರನ್ನು ಹಿಂದುಳಿದ ಜಾತಿ ನೆಲೆಯಲ್ಲಿ ಗುರುತಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತದೆ. ಕಾರಣ ಗಂಡು ಹೆಣ್ಣಾಗಿದ್ದರಿಂದಾಗಿ, ಹೆಣ್ಣು ಗಂಡಾದ ಕಾರಣಕ್ಕಾಗಿ ಅವರನ್ನು ಕುಟುಂಬ ಹಾಗೂ ಸಮಾಜವು ಬಹಿಷ್ಕರಿಸುತ್ತದೆ. ಸಾಮಾಜಿಕ ಬಹಿಷ್ಕಾರವು ಮಾನವ ಹಕ್ಕುಗಳಿಂದ ವಂಚಿತರನ್ನಾಗಿಸುತ್ತದೆ. ಜಂಡರ್ ಅನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿಯೇ ದಮನಕ್ಕೊಳಗಾಗುವ ಟ್ರಾನ್ಸ್ ಸಮುದಾಯದವರು ಸಹಜವಾಗಿಯೇ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿಸಲ್ಪಡುತ್ತಾರೆ ಎನ್ನುವ ಸೂಕ್ಷ್ಮ ವಾದವನ್ನು ಮಂಡಿಸುತ್ತದೆ. ಹೀಗಾಗಿ, ವ್ಯಕ್ತಿಯು ಆಯ್ಕೆ ಮಾಡಿಕೊಂಡ ಜೆಂಡರ್ ಐಡೆಂಟಿಟಿಯನ್ನು ಮಾನ್ಯ ಮಾಡಿದರೆ ಅನೇಕ ಯೋಜನೆಗಳನ್ನು ಅವರ ಏಳ್ಗೆಗಾಗಿ ರೂಪಿಸಲು ಕಾನೂನಿನಲ್ಲಿ ಅವಕಾಶ ದೊರೆಯುತ್ತದೆ ಎನ್ನುವುದು ಸರ್ವೋಚ್ಚ ನ್ಯಾಯಾಲಯದ ನಿಲುವಾಗಿದೆ. ಜೊತೆಗೆ ಅವರಿಗೆ ಆರೋಗ್ಯದ ಹಕ್ಕು, ಶೈಕ್ಷಣಿಕ ಹಕ್ಕು, ದುಡಿಮೆಯ ಹಕ್ಕು, ವಾಸಿಸುವ ಹಕ್ಕು, ಆಸ್ತಿ ಹೊಂದುವ ಹಕ್ಕು ಎಲ್ಲ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ರಾಷ್ಟ್ರೀಯ ಕಾನೂನು ಪ್ರಾಧಿಕಾರದ ದೂರ-ದೃಷ್ಟಿಯಾಗಿತ್ತು. ಟ್ರಾನ್ಸ್ ಮಕ್ಕಳು ಪೋಷಕರೊಂದಿಗೆ ಕುಟುಂಬದ ಸದಸ್ಯರೊಂದಿಗೆ ವಾಸಿಸುವ ಹಕ್ಕನ್ನು ಬೆಂಬಲಿಸುವ ಈ ತೀರ್ಪು ಅವರಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಕಾನೂನಿನ ವೇದಿಕೆಯನ್ನು ಕಲ್ಪಿಸುತ್ತದೆ. ಕಾನೂನಿನಲ್ಲಿನ ಈ ಬೆಳವಣಿಗೆಯು ಸೆಪ್ಟೆಂಬರ್ 29, 2020ರಂದು ಮೊಟ್ಟಮೊದಲ ಬಾರಿಗೆ ಭಾರತದ ಗೆಜೆಟ್‌ನಲ್ಲಿ ಟ್ರಾನ್ಸ್ ಜಂಡರ್ ವ್ಯಕ್ತಿಗಳ ಹಕ್ಕಗಳ ರಕ್ಷಣೆಗೆ ಸಂಬಂಧಿಸಿದಂತೆ ನಿಯಮಗಳು ಪ್ರಕಟಗೊಳ್ಳುವುದಕ್ಕೆ ಕಾರಣವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾನವ ಹಕ್ಕುಗಳು ಟ್ರಾನ್ಸ್ ಸಮುದಾಯದವರ ಹಕ್ಕುಗಳನ್ನು ಒಳಗೊಂಡಿವೆಯೇ?

ಮಾನವ ಹಕ್ಕುಗಳ ಮಂಡನೆಯಲ್ಲಿ ಮಹಿಳಾ ಹಕ್ಕುಗಳ ಗೈರು ಹಾಜರಿಯಿದ್ದಂತೆ ಟ್ರಾನ್ಸ್ ಸಮುದಾಯಕ್ಕೆ ಸೇರಿದವರ ಹಕ್ಕುಗಳ ಗೈರು ಹಾಜರಿಯೂ ಇದೆ. ಹೀಗಾಗಿ ಮಹಿಳೆಯರು ಪ್ರತ್ಯೇಕವಾಗಿ ತಮ್ಮ ಹಕ್ಕುಗಳನ್ನು ಮಂಡಿಸಿದಂತೆ, ಟ್ರಾನ್ಸ್ ಸಮುದಾಯದವರೂ ತಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಇವರ ಮೇಲೆ ನಡೆಯುವ ಅತ್ಯಾಚಾರವನ್ನು ಅಪರಾಧವಾಗಿ ಕಾನೂನು ಪರಿಗಣಿಸಿಲ್ಲ. ಭಾರತೀಯ ದಂಡ ಸಂಹಿತೆ 377 ಸಮ್ಮತದ ಸಲಿಂಗ ಸಂಬಂಧ ಒಪ್ಪಿಗೆ ನೀಡುವವರೆಗೆ, ಇವರು ಮದುವೆಯಾಗುವುದು ಕೂಡಾ ಅಪರಾಧವಾಗಿತ್ತು. ಭಾರತದ ಕಾನೂನು ಟ್ರಾನ್ಸ್ ಸಮುದಾಯದವರ ಮದುವೆಯನ್ನು ಒಪ್ಪದಿದ್ದರೂ ಅಕ್ಕಯ್ ಪದ್ಮಶಾಲಿಯಂಥವರು ತಮ್ಮ ಮದುವೆಯನ್ನು ನೋಂದಣಿ ಮಾಡಿಸಿದ್ದಾರೆ; ಕಾನೂನಿನ ನೆಲೆಯಲ್ಲಿ ವಿಚ್ಛೇದನೆಯನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಲಿಂಗ ಸಮಾನತೆ; 50 ವರ್ಷಗಳಲ್ಲಿ ಸಾಧಿಸಿದ್ದೇನು? ಸವಾಲುಗಳೇನು?

ಕರ್ನಾಟಕದಲ್ಲಿ ಮುನ್ಸಿಪಾಲಿಟಿಗಳು ಸ್ವಚ್ಛತಾ ಕೆಲಸಕ್ಕೆ ಟ್ರಾನ್ಸ್ ಸಮುದಾಯದವರನ್ನು ವಿಶೇಷವಾಗಿ ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡವರನ್ನು ನೇಮಿಸಿಕೊಂಡಿವೆ. ಊರು ಸ್ವಚ್ಛಗೊಳಿಸುವ ಕೆಲಸವೂ ತಳಸಮುದಾಯದವರ ಪಾರಂಪರಿಕ ಕೆಲಸವಾಗಿ ಗುರುತಿಸಲ್ಪಟ್ಟಿದೆ. ತಳಸಮುದಾಯಕ್ಕೆ ಸೇರಿದ ಜೋಗತಿ ಸಂಪ್ರದಾಯಕ್ಕೆ ಒಳಗಾದ ಟ್ರಾನ್ಸ್ ಮಹಿಳೆಯರು ಪಾರಂಪರಿಕ ನೆಲೆಗಟ್ಟಿನ ಹಕ್ಕನ್ನು ಮುಂದುಮಾಡಿ ಮುನಿಸಿಪಾಲಿಟಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಟ್ರಾನ್ಸ್ ಸಮುದಾಯದ ಹೋರಾಟದಿಂದ ಇತ್ತೀಚೆಗೆ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳನ್ನು ಪಡೆದುಕೊಂಡಿದ್ದಾರೆ; ಕೆಲವರು ಉದ್ಯಮವನ್ನು ನಡೆಸುತ್ತಿದ್ದಾರೆ; ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. 2014ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ಐತಿಹಾಸಿಕ ತೀರ್ಪು ಜೆಂಡರ್ ಆಯ್ಕೆಯನ್ನು ಮಾಡಿಕೊಂಡು, ಬಯಸಿದ ಅಸ್ಮಿತೆಯನ್ನು ಪಡೆಯುವುದರ ಜೊತೆಗೆ ಎಲ್ಲ ಬಗೆಯ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಮಾಡಿದೆ. ಈ ತೀರ್ಪು ಟ್ರಾನ್ಸ್ ಸಮುದಾಯಕ್ಕೆ ಸೇರಿದವರ ಬದುಕಿಗೆ ಘನತೆಯನ್ನು ಜೆಂಡರ್ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಟ್ರಾನ್ಸ್ ಸಮುದಾಯದವರಿಗಾಗಿ ಉಡುಪಿಯ ಜಿಲ್ಲಾಡಳಿತವು ನಿವೇಶನವನ್ನು ನೀಡಿದೆ; ಅವರಿಗೆ ಇರಲು ಬಾಡಿಗೆ ಮನೆಯು ಸಿಗದ ಹೊತ್ತಿನಲ್ಲಿ ಜಿಲ್ಲಾಡಳಿತ ಮಹತ್ತರವಾದ ಹಾಗೂ ಸಕಾಲಿಕವಾದ ನಿರ್ಣಯ ತೆಗೆದುಕೊಂಡು ಅದನ್ನು ಜಾರಿಗೊಳಿಸಿದ್ದು ಮಾದರಿಯಾಗಿದೆ. ಬ್ಯಾಂಕ್ ಖಾತೆ ತೆಗೆಯಲು, ಸರಕಾರದಿಂದ ಧನ ಸಹಾಯ ಪಡೆಯಲು ದೊರೆತ ಅವಕಾಶವು ಸಮಾಜದಲ್ಲಿ ಐತಿಹಾಸಿಕ ಪಲ್ಲಟವನ್ನು ಸೃಷ್ಟಿಸಿತು. ಇದು ಟ್ರಾನ್ಸ್ ಸಮುದಾಯದವರ ಬದುಕನ್ನಷ್ಟೇ ಬದಲಿಸಲಿಲ್ಲ; ಸಾಮಾಜಿಕ ಮನಸ್ಸುಗಳನ್ನು, ದೃಷ್ಟಿಕೋನಗಳನ್ನು ಬದಲಾಯಿಸಿತು. ಬದುಕಲು ಭಿಕ್ಷಾಟನೆ ಹಾಗೂ ವೇಶ್ಯಾಗಾರಿಕೆ ಮಾಡಲೇಬೇಕು ಎನ್ನುವ ಧೋರಣೆಯನ್ನು ಬದಲಾಯಿಸಿತು.

joguti
ಜೋಗಪ್ಪ ಸಮುದಾಯ

ಟ್ರಾನ್ಸ್ ಸಮುದಾಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು

ಇದೆಲ್ಲದರ ಪರಿಣಾಮವಾಗಿ ಫೆಬ್ರವರಿ 12. 2022ರಂದು “ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಸ್ಮೈಲ್ ಬೆಂಬಲ’’ ಎನ್ನುವ ಯೋಜನೆಗಳು ಜಾರಿಗೊಂಡಿತ್ತು. ರಾಜ್ಯ ಸರ್ಕಾರಗಳು ಸ್ಥಳೀಯ, ನಗರ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು ಮೊದಲಾದವುಗಳು ಟ್ರಾನ್ಸ್ ಸಮುದಾಯಗಳ ಪುನರ್ವಸತಿಗಾಗಿ, ಶಿಕ್ಷಣಕ್ಕಾಗಿ, ಕೌಶಲ್ಯಗಳನ್ನು ನೀಡುವುದಕ್ಕಾಗಿ ಗಮನಹರಿಸಲು ಸಾಧ್ಯವಾಯಿತು. ಜೊತೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳಿಗೆ ಹಣಕಾಸಿನ ಸಹಾಯವನ್ನು ನೀಡಿತು. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವಾಲಯವು ಸ್ಮೈಲ್ ಎನ್ನುವ ಯೋಜನೆ ರೂಪಿಸಿದೆ. ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಟ್ರಾನ್ಸ್‌ಜೆಂಡರ್ ಮಕ್ಕಳು ಅಪಮಾನಗಳಿಗೆ ಎದೆಗುಂದಿ ಡ್ರಾಪ್ ಔಟ್ ಆಗದಂತೆ ತಡೆಯಲು ಈ ಯೋಜನೆ ಉದ್ದೇಶಿಸಿದೆ. ಜೊತೆಗೆ ಮಾಧ್ಯಮಿಕ ಶಾಲೆ, ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಸವಲತ್ತನ್ನು ನೀಡಲಾಗಿದೆ. ವಿದ್ಯಾರ್ಥಿ ವೇತನ ಸವಲತ್ತು ಸ್ನಾತಕೋತ್ತರ ಪದವಿಯವರೆಗೂ ಮುಂದುವರೆಸಲಾಗಿದೆ.

ಮನೆಯಿಂದ ಹೊರದೂಡಲ್ಪಟ್ಟ ಅಥವಾ ಅನಾಥ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಆಶ್ರಯ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಸರಕಾರವು ಪ್ರತಿ ರಾಜ್ಯದಲ್ಲಿ ಗರಿಮಾ ಗ್ರೆಹ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ವಿರುದ್ಧದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಒದಗಿಸಲು ಉದ್ದೇಶಿಸಿದ್ದರಿಂದಾಗಿ ಇಂತಹ ಮಹತ್ವದ ಯೋಜನೆ ರೂಪುಗೊಳ್ಳಲು ಸಾಧ್ಯವಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯದವರಿಗಾಗಿ ಪ್ರೊಟೆಕ್ಷನ್ ಸೆಲ್‌ಗಳನ್ನು ಸ್ಥಾಪಿಸಲು ಸರಕಾರವು ಉದ್ದೇಶಿಸಿದೆ. ಇಂತಹ ದೂರದೃಷ್ಟಿಯ ಯೋಜನೆಗಳನ್ನು 2021ರಿಂದ 2026ರ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದ್ದು 365 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಸಿದ್ಧಪಡಿಸಿದೆ.

ಸ್ಮೈಲ್ ಅಡಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ಆರೋಗ್ಯ ಸಂಸ್ಥೆಯು ಲಿಂಗ ಪರಿವರ್ತನೆಯ ಶಸ್ತ್ರ ಚಿಕಿತ್ಸೆಯನ್ನು ಹಾಗೂ ಹಾರ್ಮೊನ್ ಥೆರಪಿಯನ್ನು ಒಳಗೊಂಡಂತೆ ಅನೇಕ ಆರೋಗ್ಯ ಸವಲತ್ತನ್ನು ನೀಡುತ್ತದೆ. ನವೆಂಬರ್ 25, 2020ರಂದು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಗುರುತಿನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ರಾಷ್ಟ್ರೀಯ ಪೋರ್ಟಲ್‌ಅನ್ನು ಪ್ರಾರಂಭಿಸಿತು. ಜನನ ಪ್ರಮಾಣ ಪತ್ರದಲ್ಲಿ ಮೊದಲ ಹೆಸರನ್ನು ಮತ್ತು ಅಂಥವರ ಗುರುತಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು, ಅವರ ಇಚ್ಛಾನುಸಾರ ಬದಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ ಎನ್ನುವುದು ಈ ಪೋರ್ಟಲ್ ಸ್ಥಾಪನೆಯ ಹಿಂದಿರುವ ಉದ್ದೇಶವಾಗಿದೆ. ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಮತ್ತು ಪ್ರಮಾಣಪತ್ರಕ್ಕೆ ರಾಷ್ಟ್ರೀಯ ಗುರುತಿದೆ.

ಪ್ರಧಾನಮಂತ್ರಿ ಕೌಶಲ್ಯ ಯೋಜನೆ (PMKVY) ಜನ್ ಶಿಕ್ಷಣ ಸಂಸ್ಥಾನ (JSS) ರಾಷ್ಟ್ರೀಯ ಅಪ್ರೆಂಟಿನ್ ಶಿಪ್ ಉತ್ತೇಜನಾ ಯೋಜನೆಯ (NAPS) ಅಲ್ಪಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ, ಕುಶಲಕರ್ಮಿ ದೀರ್ಘಾವಧಿಯ ತರಬೇತಿ ಯೋಜನೆ ಮೊದಲಾದವುಗಳು ಎಲ್ಲಾ ವರ್ಗದ ಯುವಕ ಯುವತಿಯರ ಜೊತೆಗೆ ಟ್ರಾನ್ಸ್‌ಜೆಂಡರ್ ಸಮುದಾಯದವರನ್ನು ಒಳಗು ಮಾಡಿಕೊಂಡಿದೆ; ಅವರ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿಂದುಳಿದ ವರ್ಗದ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ (NBCFDC) ಮೂಲಕ ಕೋವಿಡ್-19 ಅವಧಿಯಲ್ಲಿ ಪ್ರತಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ 1500 ನೀಡಿದೆ. ಹಾಗೆಯೇ ಆಯಾ ಜಿಲ್ಲಾಡಳಿತವು ಪಡಿತರ ಪೂರೈಕೆಯನ್ನು ಮಾಡಿದ್ದು ಗಮನಿಸಬೇಕಾಗಿದೆ. ಟ್ರಾನ್ಸ್ ಸಮುದಾಯಕ್ಕೆ ಸೇರಿದವರಿಗೆ ಉಚಿತ ಸಹಾಯವಾಣಿ ಇದ್ದು ಮಾನಸಿಕ ಬೆಂಬಲ, ಮಾನಸಿಕ ಆರೋಗ್ಯ ರಕ್ಷಣೆಯ ಕೆಲಸ ಮಾಡುತ್ತಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಟ್ರಾನ್ಸ್ ಸಮುದಾಯದವರು ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಅವರಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಿದೆ. ಲಿಂಗತ್ವ ಬದಲಾಯಿಸಿದ ವ್ಯಕ್ತಿಗಳ ಕುರಿತು ಕರ್ನಾಟಕ ರಾಜ್ಯದ ಕಾರ್ಯನೀತಿಯು 2017ರಲ್ಲಿ ಜಾರಿಗೊಂಡಿತು. ಸರಕಾರದ ಈ ನೀತಿಯು ಟ್ರಾನ್ಸ್ ಸಮುದಾಯದವರ ಬದುಕನ್ನು ಇತ್ಯಾತ್ಮಕ ನೆಲೆಯಲ್ಲಿ ತೀವ್ರಗತಿಯಲ್ಲಿ ಬದಲಾಗಲು ಕಾರಣವಾಯಿತು.

ಸಂಕಟಗಳನ್ನು ಮೆಟ್ಟಿ ನಿಂತು ಸಾಧನೆಗೈದವರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಯಾದ ಅಕ್ಕಯ್ ಪದ್ಮಶಾಲಿ ನಮ್ಮೆಲ್ಲರಿಗೂ ಚಿರಪರಿಚಿತ; ಅವರು ತಮ್ಮನ್ನು ಮಹಿಳೆಯಾಗಿಯೇ ಗುರುತಿಸಿಕೊಳ್ಳಲು ಬಯಸುತ್ತಾರೆ; ತಮ್ಮ Sexಅನ್ನು ಮಹಿಳೆಯೆಂದೇ ನಮೂದಿಸಿ ಡ್ರೈವಿಂಗ್ ಲೈಸೆನ್ಸ್ ಪಡೆದ ದೇಶದ ಮೊದಲ ಟ್ರಾನ್ಸ್ ಮಹಿಳೆಯಾಗಿದ್ದಾರೆ. ಟ್ರಾನ್ಸ್ ಸಮುದಾಯದವರ ಹಕ್ಕುಗಳಿಗಾಗಿ ಹಾಗೂ ಘನತೆಗಾಗಿ ಹೋರಾಡುತ್ತಿರುವ ಇವರು ರಾಜಕೀಯದಲ್ಲೂ ಸಕ್ರಿಯವಾಗಿದ್ದಾರೆ.

trance women
ಸಾಧನೆ ಮೆರೆದ ಟ್ರಾನ್ಸ್‌ಜೆಂಡರ್‌ಗಳು

ಮಂಜಮ್ಮ ಜೋಗತಿ ಅವರು ಭಾರತ ಸರಕಾರವು ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ಜೋಗತಿ ನೃತ್ಯಕ್ಕಾಗಿ ಪಡೆದಿದ್ದಾರೆ. ಹಾಗೆಯೇ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ರಾಜ್ಯದ ಉನ್ನತ ಸಂಸ್ಥೆಯಾದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡು ಅದನ್ನು ಯಶಸ್ವಿಯಾಗಿ ಮುನ್ನಡೆಸಿದ ಮೊದಲ ಟ್ರಾನ್ಸ್ ಮಹಿಳೆ ಇವರಾಗಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮದಲ್ಲಿ ಇವರ ಜೀವನ ಕಥೆಯನ್ನು ಸೇರಿಸಿದ್ದು ಹೊಸ ಬೆಳವಣಿಗೆಯಾಗಿದೆ.

ಕರ್ನಾಟಕದ ನೀತು ವನಜಾಕ್ಷಿ ಅವರು 2020ರಲ್ಲಿ ಮಿಸ್ ಇಂಟರ್‌ನ್ಯಾಷನಲ್ ಕ್ವೀನ್ ಆಗಿ ಭಾರತವನ್ನು ಪ್ರತಿನಿಧಿಸಿದ ಮೊದಲ ಟ್ರಾನ್ಸ್ ಮಹಿಳೆ. ಬಿ.ಬಿ.ಎ., ಪದವಿ ಪಡೆದು ಕೆನ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಕಲೆಯನ್ನು ಅಧ್ಯಯನ ಮಾಡಿದ ನೀತು ಅನಿಮೇಷನ್ ಡಿಪ್ಲೊಮಾ ಕೂಡಾ ಮಾಡಿದ್ದಾರೆ. ಓದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಟ್ರಾನ್ಸ್ ಮಹಿಳೆ ಇವರಾಗಿದ್ದಾರೆ. ಇದಕ್ಕೆ ಕಾರಣ ಅವಳಿಗೆ ದೊರೆತ ಕೌಟುಂಬಿಕ ಬೆಂಬಲ; ಯಶಸ್ವಿ ಉದ್ಯಮಿಯೂ ಆದ ನೀತು 2019ರಲ್ಲಿ ಮಿಸ್ ಟ್ರಾನ್ಸ್ ಕ್ವೀನ್ ಆಗಿ ಆಯ್ಕೆಗೊಂಡಿದ್ದಾರೆ.

ಇದನ್ನೂ ಓದಿರಿ: ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)

ಕರ್ನಾಟಕದಲ್ಲಾಗಲಿ ಭಾರತದಲ್ಲಾಗಲಿ ಹೆಣ್ಣು ಗಂಡಾಗಿ ಪರಿವರ್ತನೆಗೊಂಡವರ ಧ್ವನಿಗಳು ಬಹಳ ಇತ್ತೀಚೆಗಷ್ಟೇ ಕೇಳುತ್ತಿದೆ. ಸುಮತಿ ಅವರು ರೂಮಿ ಹರೀಶ್ ಆಗಿ ಸಮಾಜ ಸ್ನೇಹಿ ನೆಲೆಯಲ್ಲಿ ಗಂಡು ಪರಿಕಲ್ಪನೆ ಕಟ್ಟಿಕೊಡುತ್ತಿದ್ದಾರೆ.

ಟ್ರಾನ್ಸ್ ಪುರುಷರಿಗಾಗಿ ಕೇರಳದ ವಿಹಾನ್ ಪೀತಾಂಬರ ಅವರು ಕೆಲಸ ಮಾಡುತ್ತಿದ್ದಾರೆ; ಇವರು 2020ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯ ತಜ್ಞರ ಸಮಿತಿಯ ಸದಸ್ಯರಾಗಿ ನೇಮಕಗೊಂಡು ತಮ್ಮ ಸಮುದಾಯದವರಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ; ಜೊತೆಗೆ ಟ್ರಾನ್ಸ್ ಪುರುಷರಿಗಾಗಿ 2016ರಲ್ಲಿ ಮೊಟ್ಟ ಮೊದಲ ಬಾರಿಗೆ ಒಂಖಿA ಎನ್ನುವ ಸಮುದಾಯ ಆಧಾರಿತ ಸಂಸ್ಥೆಯನ್ನು ಪ್ರಾರಂಭಿಸಿದ್ದು ಗಮನಾರ್ಹ.

ಕಾಡುದಾರಿ ಕಾಲುದಾರಿಯಾಗುವುದೆ?

ವಸಾಹತು ಕಾನೂನಿನಿಂದಾಗಿ(1871) ಅಪರಾಧಿಗಳಾಗಿ ನಿರೂಪಣೆಗೊಂಡ ಟ್ರಾನ್ಸ್ ಸಮುದಾಯದವರು ಅದರಿಂದ ಹೊರಬರಲು ಬರೋಬ್ಬರಿ ತೆಗೆದುಕೊಂಡ ಅವಧಿ 143 ವರ್ಷಗಳು. ವಸಾಹತು ಕಾನೂನಿನ ವ್ಯಾಖ್ಯಾನವು ಅವರನ್ನು ಮನುಷ್ಯರಂತೆ ಬದುಕಲು, ಬಾಳಲು ಬಿಡಲೇ ಇಲ್ಲ. ರಾಷ್ಟ್ರೀಯ ಕಾನೂನು ಮಂಡಳಿಯ ಪ್ರಯತ್ನದಿಂದಾಗಿ ಮನುಷ್ಯರಂತೆ ಪರಿಗಣಿಸಲ್ಪಟ್ಟರು. ಹಕ್ಕುಗಳನ್ನು ಪಡೆದುಕೊಂಡರು; ರಾಷ್ಟ್ರೀಯ ಮಾನವ ಸಂಪನ್ಮೂಲವಾಗಿ ಗುರುತಿಸಲ್ಪಟ್ಟರು. ಗಂಡಿನಿಂದ ಹೆಣ್ಣಾಗಿ ಪರಿವರ್ತನೆಗೊಂಡವರಿಗಾಗಿ ಕ್ವೀರ್ ಸಮುದಾಯಕ್ಕೆ ಸೇರಿದವರಿಗಾಗಿ ಸಂಗಮ, ಮಂಗಳ ಗ್ರಾಮ, ಕ್ವೀರ್ ಕಾಂಪಸ್ ಮೊದಲಾದ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ.

‘ಮಾನವ’ ಪರಿಭಾಷೆ ಮಹಿಳೆಯನ್ನು ಹೊರಗುಳಿಸಿದಂತೆ ‘ಮಹಿಳೆ’ ಪರಿಭಾಷೆ ಟ್ರಾನ್ಸ್ ಸಮುದಾಯದವರನ್ನು ಹೊರಗುಳಿಸಿದೆ. ಟ್ರಾನ್ಸ್ ಮಹಿಳೆಯರು ಕಟ್ಟಿಕೊಂಡ ಸಂಘಟನೆಗಳು ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಂಡವರ ಬಗ್ಗೆ ಧ್ವನಿ ಎತ್ತಿದ್ದು ಕಡಿಮೆ; ಹೆಣ್ಣಾಗಿ ಹುಟ್ಟಿ ಗಂಡಾದವರ ಸಂಕಟಗಳ ಬಗ್ಗೆ ಮಾತನಾಡಲು, ಹಕ್ಕುಗಳನ್ನು ಮಂಡಿಸಲು ರೂಮಿ ಹರೀಶ್ ಬರುವವರೆಗೆ ಕಾಯಬೇಕಾಯಿತು.

ಜೋಗಪ್ಪಗಳ ಬಗ್ಗೆ ಬರೆದ ಒಂದು ಸಣ್ಣ ಲೇಖನವೂ ಕನ್ನಡದಲ್ಲಿಲ್ಲ. ರಾಜನ್ ಗವಸ್ ಅವರು ಬರೆದ `ಭಂಡಾರ ಭೋಗ’ ಕಾದಂಬರಿಯನ್ನು ಚಂದ್ರಕಾಂತ ಪೋಕಳೆ ಅವರು ಅನುವಾದಿಸಿ ಕೊಟ್ಟಿದ್ದರೂ ಕನ್ನಡದಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳು ಹುಟ್ಟಲಿಲ್ಲ. ಅಕ್ಷರದಲ್ಲಿ ದಾಖಲಾಗಬೇಕಾದ ಹಂತದಲ್ಲಿಯೇ ಹೊರಗುಳಿಸಲ್ಪಟ್ಟ ಅಲ್ಪಸಂಖ್ಯಾತರಾದ ಜೋಗಪ್ಪಗಳು ಕರ್ನಾಟಕದಲ್ಲಿ ಸಂಘಟನೆಗಳನ್ನು ಇನ್ನಷ್ಟೇ ಕಟ್ಟಿಕೊಳ್ಳಬೇಕಿದೆ. ಒಳಗೊಳ್ಳುವ ಸಿದ್ಧಾಂತವನ್ನು ಮಂಡಿಸುವ ಮಹಿಳಾವಾದಿಗಳು, ಟ್ರಾನ್ಸ್‌ವಾದಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಇವರತ್ತ ಗಮನಹರಿಸಬೇಕಿದೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

shailaja hiremata
ಡಾ. ಶೈಲಜ ಹಿರೇಮಠ
+ posts

ಡಾ. ಶೈಲಜ ಹಿರೇಮಠ ಅವರು ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 65ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 'ಸ್ತ್ರೀಕಥನ', 'ಮಹಿಳಾ ಕಾರ್ಮಿಕರು' ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ 'ಪಾತರದವರು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ದೊರಕಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಶೈಲಜ ಹಿರೇಮಠ
ಡಾ. ಶೈಲಜ ಹಿರೇಮಠ
ಡಾ. ಶೈಲಜ ಹಿರೇಮಠ ಅವರು ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 65ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 'ಸ್ತ್ರೀಕಥನ', 'ಮಹಿಳಾ ಕಾರ್ಮಿಕರು' ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ 'ಪಾತರದವರು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ದೊರಕಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...