ಮಾನವ ಸಮುದಾಯವನ್ನು ‘ಹೆಣ್ಣು’ ಮತ್ತು `ಗಂಡು’ ಎನ್ನುವ ಎರಡು ಪರಿಕಲ್ಪನೆಗಳಲ್ಲಿ ವಿವರಿಸಿಕೊಳ್ಳುವುದು ಅಪಾಯಕಾರಿಯಾದುದು. ಯಾಕೆಂದರೆ ಹೆಣ್ಣಿನ ಜೈವಿಕತೆಯನ್ನು ಮೀರಿ ಸಾಮಾಜೀಕರಣಗೊಂಡ ಮಹಿಳೆಯರಿದ್ದಾರೆ; ಹೆಣ್ಣಾಗಿ ಹುಟ್ಟಿ ನಂತರ ಗಂಡಾಗಿ ಪರಿವರ್ತನೆ ಹೊಂದಿದವರು ಇದ್ದಾರೆ; ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಪರಿವರ್ತನೆಯಾದವರೂ ಇದ್ದಾರೆ; ಹೆಣ್ಣಿನಲ್ಲಿ `ಹೆಣ್ಣು ಮತ್ತು ಗಂಡು’, ಹಾಗೆಯೇ ಗಂಡಿನಲ್ಲಿ `ಗಂಡು ಮತ್ತು ಹೆಣ್ಣು’-ಹೀಗೆ ಲೈಂಗಿಕವಾಗಿ ಹಾಗೂ ಭಾವನಾತ್ಮಕವಾಗಿ ಒಟ್ಟಿಗೆ ಇರುವ ದ್ವಿಲಿಂಗಿಗಳೂ ಇದ್ದಾರೆ; ಹೊರ ನೋಟಕ್ಕೆ ಹೆಣ್ಣಿನಂತೆ ಮೊಲೆ ಮುಡಿ ಹೊಂದಿ, ಸಮಾಜ ಅಪೇಕ್ಷಿಸುವ ಹೆಣ್ಣಿನಂತೆ ಇದ್ದರೂ ಗರ್ಭಕೋಶ ಇಲ್ಲದ ಕಾರಣಕ್ಕೆ ಹೆಣ್ಣೆಂದು ಪರಿಗಣಿತವಾಗದೆ ‘ಬೊಡ್ಡಿಯರು’ ಎಂದು ಉಪೇಕ್ಷೆಗೆ ಒಳಗಾದವರೂ ಇದ್ದಾರೆ; ಗಡ್ಡ, ಮೀಸೆ, ಶಿಶ್ನ ಹೊಂದಿದ್ದರೂ ವೀರ್ಯ ಉತ್ಪಾದಿಸಲಾಗದ ಗಂಡಸರು ಇದ್ದಾರೆ; ಆರೋಗ್ಯ ಸಮಸ್ಯೆಯಿಂದಾಗಿ ನಿಷ್ಕ್ರಿಯ ಶಿಶ್ನವನ್ನು ಹೊಂದಿದವರೂ ಇದ್ದಾರೆ. ಪ್ರತಿ ಸ್ತ್ರೀಯರು ಹಾಗೂ ಪ್ರತಿ ಪುರುಷರ ದೇಹ ರಚನೆಗಳು ಪ್ರತಿ ವ್ಯಕ್ತಿಗಳ ಬೆರಳಚ್ಚಿನ ಹಾಗೇ ಭಿನ್ನವಾಗಿರುತ್ತವೆ. ಜೊತೆಯಲ್ಲಿ ಹಾರ್ಮೋನ್ ಕಾರಣಕ್ಕಾಗಿ, ಭಾವನೆಗಳ ಕಾರಣಕ್ಕಾಗಿ, ಆರೋಗ್ಯದ ಕಾರಣಕ್ಕಾಗಿ ಹಾಗೂ ಜೆಂಡರ್ ಆಯ್ಕೆಯ ಕಾರಣಕ್ಕಾಗಿ ಪ್ರತಿ ವ್ಯಕ್ತಿಗಳ ದೇಹ ರಚನೆ ಬದಲಾಗುತ್ತ ಹೋಗುತ್ತದೆ. ಮಾನವರಲ್ಲಿಯ ಜೀವ ವೈವಿಧ್ಯವನ್ನು ಗಮನಿಸದ ಸಮಾಜ ಹಾಗೂ ಅಧ್ಯಯನಗಳು ಅವರನ್ನು ಹೆಣ್ಣು ಮತ್ತು ಗಂಡು ಎನ್ನುವ ಖಚಿತ ಕಟ್ಟಿಗೆ ಒಳಪಡಿಸಿ ವಿವರಿಸುತ್ತವೆ ಮತ್ತು ಪರಿಪೂರ್ಣತೆಯನ್ನು, ಖಚಿತತೆಯನ್ನು ಬಯಸುತ್ತವೆ.
‘ಹೆಣ್ಣು’, ‘ಗಂಡು’, ‘ಮೂರನೆಯ ಲಿಂಗ’: ಆಕೃತಿಗಳೋ? ಆಶಯಗಳೋ?
‘ಹೆಣ್ಣು’ ’ಗಂಡು’ ಪರಿಭಾಷೆಗಳು ಕೇವಲ ಜೈವಿಕ ಆಕೃತಿ(ರೂಪ) ಬಗೆಗೆ ಮಾತನಾಡುವುದಿಲ್ಲ. ಆಕೃತಿ (ರೂಪ) ಒಳಗಡೆ ಯಾರು ಹೇಗಿರಬೇಕೆಂಬ ಸಾಮಾಜಿಕ ಆಶಯಗಳೂ ಇವೆ; ಈ ಎರಡೂ ಚೌಕಟ್ಟಿಗೆ ಒಳಪಡದವರನ್ನು `ಮೂರನೆಯ ಲಿಂಗ’ ಎಂದು ಕರೆಯಲಾಗುತ್ತದೆ. ಕಾನೂನು ಕೂಡ ಈ ಪರಿಭಾಷೆಯನ್ನು ಒಪ್ಪಿಕೊಂಡಿದೆ. ಈ ಪರಿಭಾಷೆಯು ಜೈವಿಕತೆಯನ್ನಾಧರಿಸಿದ ಶ್ರೇಣೀಕರಣವನ್ನು ಧ್ವನಿಸುತ್ತದೆ. `ಮೊದಲನೆಯ ಲಿಂಗ’ ಹಾಗೂ `ಎರಡನೆಯ ಲಿಂಗ’-ಈ ಪರಿಭಾಷೆಗಳು ಚಾಲ್ತಿಯಲ್ಲಿ ಇಲ್ಲದಿದ್ದರೂ ‘ಹೆಣ್ಣು-ಗಂಡು’ ಇವರಿಬ್ಬರೂ ಯಾರು, ಯಾವ ಸ್ಥಾನಮಾನವನ್ನು ಪ್ರತಿನಿಧಿಸುತ್ತಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಂವಿಧಾನ ಆಶಯದ ವಿರುದ್ಧವಾಗಿರುವ ‘ಮೂರನೇಯ ಲಿಂಗ’ ಎನ್ನುವ ಪರಿಭಾಷೆಯನ್ನು ಕಾನೂನಿನ ಕಣ್ಗಾವಲಿನಲ್ಲಿ ಬಳಸಲಾಗುತ್ತಿದೆ.
“ಅದಲ್ ಬದಲ್ ಕಂಚಿ ಬದಲ್ ಇವ್ರ ಬಿಟ್ಟ ಇವರಾರ್’’? ಎನ್ನುವ ಕಣ್ಣಾ ಮುಚ್ಚಾಲೆ ಆಟದಂತೆ ಗಂಡೆಂದು ನಂಬಿದವರು ಹೆಣ್ಣಾಗಿ ನಗುತ್ತಾರೆ. ಹೆಣ್ಣೆಂದು ನಂಬಿದವರು ಗಂಡಾಗಿ ಗತ್ತು ತೋರಿಸುತ್ತಾರೆ. ಹೊರನೋಟದಲ್ಲಿ `ಗಂಡು’ ರೂಪವನ್ನೇ ಉಳಿಸಿಕೊಂಡವರನ್ನು(ಹೆಣ್ಣಿಗರು) `ಗಂಡಾಗಿ’ ಗುರುತಿಸಿದಾಗ, ತಾವು ಹೆಣ್ಣೆಂದು ಕಣ್ಣು ಮಿಟುಕಿಸಿ ನಗುತ್ತಾರೆ. ಹಾಗೆಯೇ ಹೊರರೂಪದಲ್ಲಿ ಹೆಣ್ಣಾಗಿರುವವರನ್ನು ‘ಸ್ತ್ರೀ’ ಎಂದು ಕರೆದಾಗ ಅವರೊಳಗೆ ಗೌಪ್ಯವಾಗಿ ಕ್ರಿಯಾಶೀಲವಾಗಿರುವ ಲೈಂಗಿಕತೆಯನ್ನಾಧರಿಸಿದ ಗಂಡುತನವು ಮೂಗು ಮುರಿಯುತ್ತದೆ. ನಾವೆಲ್ಲರೂ ಮನುಷ್ಯರೇ ಆದರೂ `ಹೆಣ್ಣು-ಗಂಡು’ ಎಂದು ಖಚಿತ ಚೌಕಟ್ಟಿನಲ್ಲಿ ವಿಂಗಡಿಸಿ ಗುರುತಿಸಲಾಗುವುದಿಲ್ಲ.
ಟ್ರಾನ್ಸ್ ಸಮುದಾಯವು ಇನ್ನು ಮುಂದೆ ತಾವು ಪುರುಷ ಅಥವಾ ಸ್ತ್ರೀ ಅಥವಾ ತೃತೀಯ ಲಿಂಗಿ ಎಂದು ಗುರುತಿಸಿಕೊಳ್ಳುವ ಅಥವಾ ಅದನ್ನು ಪ್ರಮಾಣೀಕರಿಸುವ ಅಗತ್ಯವಿಲ್ಲ ಎನ್ನುವ ಚಾರಿತ್ರಿಕ ತೀರ್ಪು ಸುಪ್ರಿಂಕೋರ್ಟ್‌ನಿಂದ ಏಪ್ರಿಲ್ 15, 2014 ರಂದು ಪ್ರಕಟಗೊಂಡ ನಂತರ ಸಾಮಾಜಿಕ ದೃಷ್ಟಿಕೋನವು ವಿಸ್ತರಣೆಯಾಯಿತು. ಟ್ರಾನ್ಸ್ ಸಮುದಾಯದವರ ಆತ್ಮಕಥನಗಳು ನಾಟಕಗಳಾಗಿ, ಸಿನಿಮಾಗಳಾಗಿ ಪ್ರದರ್ಶನಗೊಂಡವು. ಅನೇಕ ವಿಚಾರ ಸಂಕಿರಣಗಳು `ಜೆಂಡರ್’ ಬಗ್ಗೆ ಗಂಭೀರ ಚರ್ಚೆಯನ್ನು ಬೆಳೆಸಿದವು.

ಕನ್ನಡದಲ್ಲಿ ಲೈಂಗಿಕತೆ ಮತ್ತು ಲೈಂಗಿಕ ವರ್ತನೆಗಳ ಬಗ್ಗೆ ಚರ್ಚೆಯನ್ನು ಬೆಳೆಸಿದ್ದು ಬಹಳ ಕಡಿಮೆ. ಅದರಲ್ಲೂ ಮಡಿವಂತಿಕೆ ಕಂಡುಬರುತ್ತದೆ. ಈಗಾಗಲೇ ಒಪ್ಪಿತವಾದ ಹೆಣ್ಣು-ಗಂಡು ಪರಿಕಲ್ಪನೆಗಳ ಬಗೆಗಿನ ಚರ್ಚೆಗಳು ದೈಹಿಕ ರಚನೆ ಹಾಗೂ ಸಾಮಾಜೀಕರಣದ ಸಂಗತಿಗಳನ್ನೇ ಕೇಂದ್ರೀಕರಿಸಿಕೊಂಡಿವೆ. “ಜಂಡರ್ ಅನ್ನೋದು ವ್ಯಕ್ತಿಗಳ ಆಯ್ಕೆಯಿಂದ ನಿರ್ಧಾರವಾಗಬೇಕೇ ಹೊರತು ಹುಟ್ಟಿದ ಜೈವಿಕ ಗುರುತನ್ನು ಆಧರಿಸಿ ಅಲ್ಲ” ಎನ್ನುವ ವ್ಯಾಖ್ಯಾನವೂ ಗಂಡು-ಹೆಣ್ಣಾಗುವ; ಹೆಣ್ಣು-ಗಂಡಾಗುವ ಆಯ್ಕೆಯ ಹಕ್ಕನ್ನು ಮೇಲ್ಪದರಿನಲ್ಲಿ ಮಂಡಿಸುತ್ತದೆ. ವೈಚಾರಿಕ ಲೋಕದಲ್ಲಿರುವ ಮಡಿವಂತಿಕೆಯ ಧೋರಣೆಗಳು, ದೃಷ್ಟಿಕೋನಗಳು ಲೈಂಗಿಕತೆ ಮತ್ತು ಲೈಂಗಿಕ ವರ್ತನೆಗಳನ್ನು ಕೇಂದ್ರೀಕರಿಸಿಕೊಂಡು ಅಧ್ಯಯನ ನಡೆಸಲು ತಡೆಗೋಡೆಯನ್ನು ನಿರ್ಮಿಸಿವೆ. ಅಲ್ಫ್ರೆಡ್ ಸಿ ಕಿನ್ಸೆ ಅವರ Study of Sexuality And Sexual Behaviour ಅಂತಹ ಮಹತ್ವದ ಕೃತಿಗಳು ಕನ್ನಡದಲ್ಲಿ ಮೂಡಲಿಲ್ಲ; ಕೊನೆಯ ಪಕ್ಷ ಇಂತಹ ಕೃತಿಗಳ ಅನುವಾದವು ಕೂಡಾ ಆಗಲಿಲ್ಲ ಎನ್ನುವುದು ಕನ್ನಡದಲ್ಲಿನ `ವೈಚಾರಿಕ’ ಮಡಿವಂತಿಕೆಯನ್ನು ಹೇಳುತ್ತದೆ.
ಟ್ರಾನ್ಸ್ ಸಮುದಾಯ: ಪರಿಕಲ್ಪನೆಯ ಶೋಧ
`ಹಿಜಡಾ, ಕಿನ್ನರರು, ನಪುಂಸಕರು, ಖೋಜಾ, ಕೊಚ್ಚಿ, ಖೊಜ್ಜ, ಕಂಚುಕಿ, ಷಂಡ, ಶಿಖಂಡಿ, ಯಾನಕ್’ ಮೊದಲಾದ ಪರಿಭಾಷೆಗಳಿಂದ ಈ ಸಮುದಾಯವನ್ನು ಗುರುತಿಸುತ್ತದೆ. ಮನೋವೈಕಲ್ಯಗಳ ಪಡೆ ಮತ್ತು ಸಂಖ್ಯಾಶಾಸ್ತ್ರಗಳ ಕೈಪಿಡಿಯು (Diagnostic And Statistical Manual oF mental disorders 2013) ಡಯಾಗ್ನೋಸ್ಟಿಕ್ ಮಾನ್ಯುಯಲ್ Dsm-5 ಬಿಡುಗಡೆ ಮಾಡಿತ್ತು; ಈ ಆವೃತ್ತಿಯು `ಜಂಡರ್ ಡಿಸ್ಪೋರಿಯಾ’ ಎನ್ನುವ ಪರಿಭಾಷೆಯನ್ನು ಕಟ್ಟಿಕೊಟ್ಟಿದೆ. ತಮ್ಮ ಹುಟ್ಟಿನ ಜೈವಿಕ ಗುರುತಿನ ಬಗ್ಗೆ ತೀವ್ರ ಅತೃಪ್ತಿಯನ್ನು ಹೊಂದಿದ್ದು, ಯಾವ Sex ಜೊತೆ ಗುರುತಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಖಚಿತವಾಗಿರುವ ಮನೋಭಾವವುಳ್ಳವರನ್ನು ‘ಜಂಡರ್ ಡಿಸ್ಪೋರಿಯಾ’ ಎನ್ನುವ ಪರಿಭಾಷೆಯಡಿಯಲ್ಲಿ ಗುರುತಿಸಲಾಗುತ್ತದೆ. 2013ರ ಮೊದಲು ಟ್ರಾನ್ಸ್ ಸಮುದಾಯದವರನ್ನು ‘ಜೆಂಡರ್ ಐಡೆಂಟಿಟಿ ಡಿಸಾರ್ಡರ್’ ಎಂದೇ ಮನಃಶಾಸ್ತ್ರವು ಗುರುತಿಸಿತ್ತು. ಸರಕಾರದ ವರದಿಗಳು ‘ತೃತೀಯ ಲಿಂಗಿಯರು’, ‘ಮಂಗಳಮುಖಿಯರು’ ಎನ್ನುವ ಪರಿಭಾಷೆಯನ್ನು ಬಳಸಿದರೂ, ಟ್ರಾನ್ಸ್ ಸಮುದಾಯಕ್ಕೆ ಸೇರಿದ ಬಹುಸಂಖ್ಯಾತರು ಅದನ್ನು ಒಪ್ಪಿಕೊಳ್ಳುತ್ತಿಲ್ಲ.
ಏಪ್ರಿಲ್ 15, 2014ರ ಸುಪ್ರೀಂ ಕೋರ್ಟ್ ತೀರ್ಪು ಟ್ರಾನ್ಸ್‌ಜೆಂಡರ್ ಎನ್ನುವ ಪದವನ್ನು ಹೀಗೆ ವ್ಯಾಖ್ಯಾನಿಸುತ್ತದೆ; “ಹುಟ್ಟಿನ ಜೈವಿಕತೆಯನ್ನಾಧರಿಸಿ ಗುರುತಿಸುವ Sexಗಿಂತ ವಿಶಾಲ ಅರ್ಥವನ್ನು ಟ್ರಾನ್ಸ್‌ಜೆಂಡರ್ ಪರಿಭಾಷೆ ಒಳಗೊಂಡಿದೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಂಡವರು, ಗಂಡಾಗಿ ಹುಟ್ಟಿ ಹೆಣ್ಣಾದವರು, ದ್ವಿಲಿಂಗಿಗಳು ಎಲ್ಲರೂ ಪರಿಕಲ್ಪನೆಯೊಳಗಡೆ ಸೇರಿಸಿಕೊಳ್ಳುತ್ತಾರೆ.’’ ಆದರೆ ಟ್ರಾನ್ಸ್ ಸಮುದಾಯಕ್ಕೆ ಸೇರಿದವರು ‘ಟ್ರಾನ್ಸ್ ಮಹಿಳೆ’ ಅಥವಾ ‘ಟ್ರಾನ್ಸ್ ಪುರುಷ’ ಎಂದು ಗುರುತಿಸುವುದನ್ನು ವಿರೋಧಿಸುತ್ತಾರೆ. ಈಗಾಗಲೇ ಒಪ್ಪಿತವಾದ ‘ಮಹಿಳೆ’ ಮತ್ತು ‘ಪುರುಷ’ ವರ್ಗೀಕರಣದಲ್ಲಿಯೇ ತಮ್ಮನ್ನು ಗುರುತಿಸಲು ಒತ್ತಾಯಿಸಿದ್ದಾರೆ. ಅಕ್ಕಯ್ ಪದ್ಮಶಾಲಿಯಂತೆ ಮನೋಧರ್ಮವುಳ್ಳ ಅನೇಕರು ಸರಕಾರಿ ದಾಖಲೆಗಳಲ್ಲಿ ತಮ್ಮನ್ನು ತಾವು `ಮಹಿಳೆ’ ಎಂದೇ ನಮೂದಿಸಿದ್ದಾರೆ.
ವಸಾಹತು ಪೂರ್ವ ಸಾಹಿತ್ಯದಲ್ಲಿ ಟ್ರಾನ್ಸ್ ಸಮುದಾಯದ ನಿರೂಪಣೆಗಳು
ಅರ್ಥನಾರೀಶ್ವರ ಪರಿಕಲ್ಪನೆಯು bisexual ಸಮುದಾಯದವರನ್ನು ಪ್ರತಿನಿಧಿಸುತ್ತದೆ. ಶಿವ-ವಿಷ್ಣುವಿನ ಸಮಾಗಮದ ಕಥನವು ‘ಗೇ’ ಸಂಬಂಧವನ್ನು ಧ್ವನಿಸುತ್ತದೆ. ಅರ್ಜುನ ಬೃಹನ್ನಳೆಯಾಗುವ ಕಥನವು ಗಂಡಾಗಿ ಹುಟ್ಟಿದವರು ಹೆಣ್ಣಿನ ಜಂಡರ್‌ಅನ್ನು ಆಯ್ಕೆ ಮಾಡಿಕೊಂಡು ಬಾಳಿದ ಕಥನವನ್ನೇ ಹೇಳುತ್ತದೆ. ಭಾರತದ ಪುರಾಣಗಳಲ್ಲಿ ಹಾಗೂ ರಾಮಾಯಣ, ಮಹಾಭಾರತಗಳಲ್ಲಿ ಉಲ್ಲೇಖವಾಗುವ ಟ್ರಾನ್ಸ್ ಸಮುದಾಯವರ ಕಥನಗಳು ಅವರಿಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಸಾಕ್ಷೀಕರಿಸುತ್ತವೆ. ಹಾಗೆಯೇ ಎಲ್ಲ ಜೆಂಡರ್‌ನವರನ್ನು ಒಳಗೊಳ್ಳುವ ಬದುಕಿನ ಸಿದ್ಧಾಂತಗಳನ್ನು ಮಂಡಿಸುತ್ತವೆ. ಮನುಷ್ಯರನ್ನು ‘ಗಂಡು’ ‘ಹೆಣ್ಣು’ ಎನ್ನುವ ಅಧಿಕಾರದ ನೆಲೆಯಲ್ಲಿ ವಿಂಗಡಿಸದೆ ಮನುಷ್ಯರಲ್ಲಿರುವ ಲೈಂಗಿಕತೆಯನ್ನಾಧರಿಸಿದ ಹಲವು ಅಸ್ಮಿತೆಯನ್ನು ಒಪ್ಪಿಕೊಳ್ಳುತ್ತವೆ, ಗೌರವಿಸುತ್ತವೆ.
ಮಹಾಭಾರತದಲ್ಲಿರುವ ಶಿಖಂಡಿ ಕಥನವು ಹೆಣ್ಣು ಗಂಡಾದ ಕಥನವನ್ನು ವಿವರಿಸುತ್ತದೆ. ಹೀಗಾಗಿಯೇ ಶಿಖಂಡಿನಿಯು ಶಿಖಂಡಿಯಾಗಿ ಗುರುತಿಸಿಕೊಳ್ಳುತ್ತಾನೆ. ಅಂಬೆಯ ಮರುಜನ್ಮದ ಕಥನದ ಕೊಂಡಿ ಶಿಖಂಡಿ ಕಥನಕ್ಕಿದೆ. ಈ ಪರಿಭಾಷೆಯು ಪೌರಾಣಿಕ ಕಥನದ ಅರ್ಥವನ್ನು ಧ್ವನಿಸುವುದಿಲ್ಲ. `ಹೆಣ್ಣೂ ಅಲ್ಲ ಗಂಡೂ ಅಲ್ಲ’ ಎನ್ನುವ ಅರ್ಥವನ್ನು ಧ್ವನಿಸುತ್ತದೆ. ಟ್ರಾನ್ಸ್ ಸಮುದಾಯವದವರ ಆರಾಧ್ಯ ದೈವಗಳು ಹೆಣ್ಣು ದೇವರಾಗಿವೆ; ಬಹುಚರ, ಮಾತೆ, ಎಲ್ಲಮ್ಮ, ಹುಲಿಗೆಮ್ಮ ಮೊದಲಾದ ಹೆಣ್ಣು ದೇವತೆಗಳು ಟ್ರಾನ್ಸ್ ಸಮುದಾಯದವರ ಆರಾಧ್ಯ ದೈವಗಳಾಗಿವೆ. ಮಹಾಭಾರತದ ಕಥೆಯ ಪ್ರಕಾರ ಪಾಂಡವರು ಯುದ್ಧದಲ್ಲಿ ಜಯ ಸಾಧಿಸಲು ಕಾಳಿ ದೇವತೆಗೆ ನರಬಲಿ ಕೊಡುವ ಅವಶ್ಯಕತೆಯಿದೆ ಎನ್ನುವ ಸೂಚನೆಯ ಮೇರೆಗೆ ಅರ್ಜುನ ಲೂಪಿಯರ ಮಗ ‘ಅರವನ್’ನನ್ನು ಬಲಿಕೊಡುವುದಕ್ಕೆ ಆಯ್ಕೆ ಮಾಡುತ್ತಾನೆ; ಅವನು ಮದುವೆಯಾಗಿರದ ಕಾರಣ ಕೃಷ್ಣನೊಟ್ಟಿಗೆ, ಆತನಿಗೆ ಹೆಣ್ಣು ವೇಷ ತೊಡಿಸಿ ಮದುವೆ ಮಾಡಿಸುತ್ತಾರೆ. ಹೀಗೆ ಹೆಣ್ಣಿನ ವೇಷ ಧರಿಸಿಕೊಂಡು ಮದುವೆಯಾದ ‘ಅರವನ’ ಟ್ರಾನ್ಸ್ ಸಮುದಾಯದವರ ಆರಾಧ್ಯ ದೈವವಾಗಿದೆ.
ಪುರಾಣಗಳು, ಆಧ್ಯಾತ್ಮಿಕ ಕಥನಗಳು ಟ್ರಾನ್ಸ್ ವ್ಯಕ್ತಿಗಳನ್ನು ಸಾಕುವುದು ಕುಟುಂಬದ ಕರ್ತವ್ಯವಾಗಿದೆ ಎಂದು ಹೇಳುತ್ತವೆ. ಹೀಗಾಗಿಯೇ ಪುರಾಣ ಕಾವ್ಯಗಳಲ್ಲಿ ರಾಮಾಯಣ ಮಹಾಭಾರತಗಳಲ್ಲಿ ಅವರುಗಳು ಕುಟುಂಬದ ಸಂಬಂಧಗಳೊಂದಿಗೆ ಬಾಳುವ ಚಿತ್ರಣಗಳು ಹೇರಳವಾಗಿ ಕಂಡು ಬರುತ್ತದೆ.
ಜೈವಿಕ ರೂಪ ಪಲ್ಲಟಗಳು: ಸಾಂಸ್ಕೃತಿಕ ಅವಕಾಶ
`ಗಂಡಾಗಿ’ ಗುರುತಿಸಲ್ಪಟ್ಟವರು ಹಾರ್ಮೋನ್ ಕಾರಣಕ್ಕಾಗಿಯೋ ಜಂಡರ್ ಆಯ್ಕೆಯ ಕಾರಣಕ್ಕಾಗಿಯೋ, ಹೆಣ್ಣಾಗುವುದನ್ನು ಒಪ್ಪಿಕೊಳ್ಳುವ ಕಥನಗಳು ಬುಡಕಟ್ಟು ಸಾಹಿತ್ಯದಲ್ಲಿ ಹೇರಳವಾಗಿವೆ. ಬುಡಕಟ್ಟು ಸಮುದಾಯಗಳು ರಾಜ್ಯ-ಅರಣ್ಯದ ಮಧ್ಯೆ ನಡೆಸಿದ ಪ್ರಯಾಣದಲ್ಲಿ ಶೈವ, ವೈಷ್ಣವ ಮತಗಳ ಪ್ರಭಾವಕ್ಕೆ ಒಳಗಾಗಿವೆ; ಹಾಗೆಯೇ ರಾಜ್ಯವು ಕೂಡ ಬುಡಕಟ್ಟಿಗೆ ಸಂಬಂಧಿಸಿದ ಅನೇಕ ಸಾಂಸ್ಕೃತಿಕ ಸಂಕಥನಗಳನ್ನು ತನ್ನ ಮನೋಧರ್ಮಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ಅಂತರ್ಗತಗೊಳಿಸಿಕೊಂಡಿದೆ. ಹೀಗಾಗಿ ಸಂಸ್ಕೃತ ಹಾಗೂ ಕನ್ನಡ ಲಿಖಿತ ಸಾಹಿತ್ಯದಲ್ಲಿ ‘ಅವನು ಅವಳಾದ’ ಅನೇಕ ಪುರಾಣ ಕಥನಗಳಿವೆ. ದರೋಜಿ ಈರಮ್ಮ ಅವರಿಂದ ಹಾಡಲ್ಪಟ್ಟ ಯಲ್ಲಮ್ಮನ ಕಥನ ಕಾವ್ಯದಲ್ಲಿ ಪರಶುರಾಮ ಹೆಣ್ಣಾದುದರ ಬಗ್ಗೆ ವಿವರವಿದೆ. ಹುಲಗಿಯಲ್ಲಿ ಅಡಗಿದ್ದ ತಾಯಿಯನ್ನು ಹುಡುಕುತ್ತಾ ಬಂದ ಪರಶುರಾಮ “ಗಂಡು ಜೋಗಮ್ಮ ಆಗಿವ್ನಿಉಧೊ ಅಂತಗಂಡು ಹೋಗಿ ಹೆಣ್ಣು ಆಗಿ ಬಿಟ್ಟೇನಿ” ಎನ್ನುತ್ತಾನೆ.

ಎಲ್ಲಮ್ಮ, ಪರಶುರಾಮ, ಮಹಾರಾಷ್ಟ್ರದ ಏಕಾವೀರ-ಈ ಮೂರು ದೇವರಿಗೆ ಗಂಡು `ಜೋಗಮ್ಮ’ನನ್ನು ಬಿಡುವ ಪರಂಪರೆಯಿದೆ. ಹೆಣ್ಣಾಗಿ ಹುಟ್ಟಿದವರು ಪರಿವರ್ತನೆಗೊಂಡು ಗಂಡಾಗಿ ಬದುಕಿದ ವಿಷಯಕ್ಕೆ ಸಂಬಂಧಿಸಿದಂತೆ ಶಿಖಂಡಿ ಕಥನವಿದೆ; ಇದನ್ನು ಹೊರತುಪಡಿಸಿದರೆ ಯಾವುದೇ ಬಗೆಯ ಸಾಹಿತ್ಯ ಕಥನಗಳು ಕಾಣುವುದಿಲ್ಲ. `ಗಂಡು’ ತನ್ನ ಜಂಡರ್ ಆಯ್ಕೆಯ ಮೂಲಕ ಹೆಣ್ಣಾದರೆ ಅವರನ್ನು ಗುರುತಿಸಲು `ಹಿಜಡಾ’, `ಮಂಗಳಮುಖಿ’, `ಜೋಗಮ್ಮ’ ಎನ್ನುವ ಪರಿಭಾಷೆಗಳಿವೆ. ಆದರೆ ಹೆಣ್ಣು `ಗಂಡಾಗಿ’ ಬದುಕ ಬಯಸಿದರೆ, ಅವಳನ್ನು ಸಂಬೋಧಿಸಲು ಯಾವ ಪರಿಭಾಷೆಗಳು ಚಾಲ್ತಿಯಲ್ಲಿ ಇಲ್ಲ. ಅದರರ್ಥ ಗಂಡಿಗೆ ಜಂಡರ್ ಆಯ್ಕೆ ಅವಕಾಶವಿದ್ದಂತೆ, ಹೆಣ್ಣಿಗೆ ಇಲ್ಲ; ಆದರೂ ಜಂಡರ್ ಆಯ್ಕೆಯ ಅವಕಾಶಕ್ಕೆ ಇರುವ ಸಾಮಾಜಿಕ ಇಕ್ಕಟ್ಟುಗಳ ಮಧ್ಯೆಯೂ ಗಂಡಾಗಿ ಬದುಕಲು ಬಯಸುವ ಈ ಹೆಣ್ಣುಮಕ್ಕಳು `ಹಿಜಡಾ’ಗಳ ಆರಾಧ್ಯದೈವವಾದ ಸಂತೋಷಿಮಾನನ್ನು ತಮ್ಮ ಆರಾಧನಾ ದೈವವಾಗಿಸಿಕೊಂಡಿದ್ದಾರೆ.
ಜೋಗತಿ ಸಂಪ್ರದಾಯ ಮತ್ತು ಟ್ರಾನ್ಸ್ ಸಮುದಾಯ
ಜೋಗತಿ ಸಂಪ್ರದಾಯವು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದುಕಲು ಬಯಸುವವರಿಗೆ ಮುತ್ತು ಕಟ್ಟಿಸಿ ಕುಟುಂಬದೊಳಗೆ ಉಳಿಸಿಕೊಳ್ಳುತ್ತದೆ; ಮುತ್ತು ಕಟ್ಟಿಸಿಕೊಂಡ ಮಹಿಳೆಯರನ್ನು ಗುರುತಿಸುವ ಹಾಗೆ ಜೋಗತಿ ಪರಿಭಾಷೆಯಡಿಯಲ್ಲಿಯೇ ನಿರ್ವಾಣಕ್ಕೆ ಒಳಗಾಗದ ಟ್ರಾನ್ಸ್ ಮಹಿಳೆಯರನ್ನು ಗುರುತಿಸುತ್ತಾರೆ. ಹಾಗೆಯೇ ಹೆಣ್ಣಾಗಿ ಹುಟ್ಟಿ ಗಂಡಾಗ ಬಯಸುವವರಿಗೂ ಕೂಡ ಎಲ್ಲಮ್ಮ ಸಂಪ್ರದಾಯದಲ್ಲಿ ಆಸರೆಯಿದೆ.
ಜೋಗತಿ ದೀಕ್ಷೆ ಪಡೆದ ಅನೇಕ ಮಹಿಳೆಯರು ಗಂಡುಡುಗೆಯಲ್ಲಿ (ಧೋತರ, ಜುಬ್ಬಾ ಇಲ್ಲವೆ ಜುಬ್ಬಾ, ಪೈಜಾಮ) ಇದ್ದುದ್ದನ್ನು ನಾನು ಕ್ಷೇತ್ರಕಾರ್ಯ ಅಧ್ಯಯನ ಸಂದರ್ಭದಲ್ಲಿ ನೋಡಿದ್ದೇನೆ. ಜೋಗತಿ ದೀಕ್ಷೆ ಪಡೆದವರು ನಿರ್ವಾಣ ಹೊಂದುವಂತಿಲ್ಲ. ವಸಾಹತು ಭಾರತ ಮತ್ತು ವಸಾಹತೋತ್ತರ ಭಾರತವು, ಅವರನ್ನು ಅಪರಾಧಿಗಳನ್ನಾಗಿ ಬಹಿಷ್ಕರಿಸಿದ ಕಾರಣಕ್ಕಾಗಿಯೇ ಟ್ರಾನ್ಸ್ ಸಮುದಾಯದವರು ಜಾತಿಧರ್ಮಗಳಿಂದ ಬಿಡುಗಡೆಗೊಂಡು ತಮ್ಮದೇ ನಂಬಿಕೆ ಆಚರಣೆಗಳನ್ನು ಕಟ್ಟಿಕೊಂಡಿದ್ದಾರೆ.
ಜೆಂಡರ್ ಆಯ್ಕೆಯು ಹೆಣ್ಣು ಗಂಡಿನ ಸಿದ್ಧ ಮಾದರಿಯನ್ನು ಒಡೆಯುತ್ತದೆಯೇ?
“ಈ ಲೋಕ ಪ್ರತಿಪಾದಿಸುವ `ಗಂಡಸುತನ’ ನನಗೆ ಬೇಕಾಗಿಲ್ಲ; ಸಾಮಾಜಿಕವಾಗಿ ಕಟ್ಟಿಕೊಂಡು ಬಂದಿರುವ ಗಂಡಸುತನಕ್ಕೂ ನಾನು ಹುಡುಕಿಕೊಳ್ಳಬೇಕಾದ ನನ್ನ ಥರದ ಗಂಡುತನಕ್ಕೂ ಬಹಳ ವ್ಯತ್ಯಾಸ ಇರಬೇಕೆಂದು ಮೊದಲಿನಿಂದಲೂ ಬಯಸಿದ್ದೆ. ಗಂಡಸೆಂದರೆ ಮನೆಗೆಲಸ ಮಾಡದೇ ಬೆಳಗ್ಗೆಯೇ ಪೇಪರ್ ಓದುತ್ತಾ ಕೂತು, ಅಡುಗೆ ಮನೆಯಲ್ಲಿ ಹೆಂಡತಿ ಬೈಯುತ್ತಿದ್ದರೂ ತಿಂಡಿ, ಕಾಫಿಗೆ ಆರ್ಡರ್ ಮಾಡುವ ಗಂಡಾಗಲಿ, `ಬೀಯಿಂಗ್ ಗುಡ್ ಮ್ಯಾನ್’ ಅನ್ನಿಸಿಕೊಳ್ಳುವಲ್ಲೂ ಒಂದು ರೀತಿಯ ಪುರುಷ ಅಹಂ ತೋರಿಸುವ ಗಂಡಾಗಲಿ ನಾನಾಗಬೇಕು ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಂಡಿದ್ದೇನೆ’’ ಎನ್ನುವ ರೂಮಿ ಹರೀಶ್ ಅವರ ಮಾತು ಸಮಾಜದಲ್ಲಿ ಮಾನ್ಯವಾದ ಹಾಗೂ ಮೌಲ್ಯೀಕರಣಗೊಂಡ ಪುರುಷ ಅಹಂ ಸಂಪೂರ್ಣವಾಗಿ ನಿರ್ನಾಮ ಮಾಡಿ ಜಂಡರ್ ಸ್ನೇಹಿಯಾದ ಸಾಮಾಜಿಕ ವಾತಾವರಣವನ್ನು ನಿರ್ಮಿಸಬೇಕಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತದೆ.

ರೂಮಿ ಹರೀಶ್ ಬದುಕಿನ ಪುಟಗಳು ‘ಜೋನ್ಪುರಿ ಖಯಾಲ್’ ಎನ್ನುವ ಅವರ ಆತ್ಮಕಥನವು ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಂಡವರ ಬದುಕಿನ ಸಂಘರ್ಷವನ್ನು, ಗಂಡು ಪರಿಕಲ್ಪನೆಯ ಹೊಸ ನಿರ್ವಚನವನ್ನು, ಮುನ್ನೆಲೆಗೆ ತಂದಿದೆ. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡವರು ಮೇಲ್ನೋಟಕ್ಕೆ ಹೆಣ್ಣು ಪರಿಕಲ್ಪನೆಯನ್ನು ನಿರಚನಗೊಳಿಸಿದಂತೆ ಕಂಡು ಬಂದರೂ ಸಾಂಪ್ರದಾಯಿಕ ಸ್ತ್ರೀ ಪರಿಕಲ್ಪನೆಯನ್ನು ಯಥಾವತ್ತಾಗಿ ಒಪ್ಪಿಕೊಂಡು ಅದನ್ನು ವಿಜೃಂಭಿಸುತ್ತಿರುತ್ತಾರೆ. ಸಾಂಪ್ರದಾಯಿಕ ಸಮಾಜವು ನಿರ್ದೇಶಿಸಿದ ರೀತಿಯಲ್ಲಿಯೇ ಹೆಣ್ಣಾಗಿ ವರ್ತಿಸುವ ಇವರು ಜೈವಿಕ ಆಧಾರದ ಮೇಲಿನ ಸಾಮಾಜೀಕರಣವನ್ನು ಮೌಲ್ಯೀಕರಣಗೊಳಿಸುತ್ತಿರುತ್ತಾರೆ.
ಜೈವಿಕ ಗುರುತಿನ ಆಧಾರದ ಮೇಲೆ ನಡೆಯುವ ಸಾಮಾಜೀಕರಣದ ಮೂಲಕ ಹೆಣ್ಣಾಗುತ್ತಾರೆ, ಗಂಡಾಗುತ್ತಾರೆ ಎಂದು ಸ್ತ್ರೀವಾದಿ ಸಿದ್ಧಾಂತವು ಮಂಡಿಸುತ್ತಿದೆ; “ಹುಟ್ಟಿನಿಂದ sex ಆಧರಿಸಿ ಜೆಂಡರ್ ನಿರ್ಧಾರವಾಗಬಾರದು; ಯಾವ ಜೆಂಡರ್‌ಗೆ ಸೇರಬೇಕು ಎನ್ನುವುದು ವ್ಯಕ್ತಿಯ ಆಯ್ಕೆ ಹಕ್ಕಿಗೆ ಸಂಬಂಧಿಸಿದ್ದು’’ ಎನ್ನುವುದು ಟ್ರಾನ್ಸ್ ಸಮುದಾಯಕ್ಕೆ ಸೇರಿದವರ ವಾದವಾಗಿದೆ; ಎರಡೂ ವಾದಗಳಲ್ಲಿ ಸಾಂಪ್ರದಾಯಿಕ ಸಮಾಜದೊಳಗಿನ ಅಹಮ್ಮನ್ನು ಮುರಿದು ಹೊಸ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಹಂಬಲ ಢಾಳಾಗಿ ಕಾಣುತ್ತದೆ ಎನಿಸಿದರೂ, ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡವರು ತಾವು ಹೆಣ್ಣು ಎಂದು ನಿರೂಪಿಸಲು ಸಾಂಪ್ರದಾಯಿಕ ಸ್ತ್ರೀ ಪಾತ್ರವನ್ನೇ ಆಡುತ್ತಾರೆ. ಹಾಗೆಯೇ ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಂಡವರು ಸಾಂಪ್ರಾದಾಯಿಕ ನೆಲೆಯ ಆಕ್ರಮಣಕಾರಿ ಗಂಡು ಪಾತ್ರವನ್ನೇ ಅನುಕರಿಸುತ್ತಾರೆ. ಹೀಗೆ ಟ್ರಾನ್ಸ್ ಸಮುದಾಯಕ್ಕೆ ಸೇರಿದ ಹೆಣ್ಣು ಗಂಡು ಇವರಿಬ್ಬರೂ ಸಾಂಪ್ರದಾಯಿಕ ಹೆಣ್ಣು- ಗಂಡಿನ ಪಾತ್ರವನ್ನೆ ಅನುಕರಿಸುತ್ತಿರುತ್ತಾರೆ. ಹೆಣ್ಣಾಗಿ ಹುಟ್ಟಿದವರು ಗಂಡಾಗಿ ಪರಿವರ್ತನೆಗೊಳ್ಳುವುದರಿಂದ; ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಳ್ಳುವುದರಿಂದಾಗಿಯೇ ಸಾಂಪ್ರದಾಯಿಕ ಸಮಾಜದಲ್ಲಿ ಬಹುದೊಡ್ಡ ಪಲ್ಲಟ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ.
(ಮುಂದುವರಿಯುತ್ತದೆ…)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಶೈಲಜ ಹಿರೇಮಠ
ಡಾ. ಶೈಲಜ ಹಿರೇಮಠ ಅವರು ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 65ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 'ಸ್ತ್ರೀಕಥನ', 'ಮಹಿಳಾ ಕಾರ್ಮಿಕರು' ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ 'ಪಾತರದವರು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ದೊರಕಿವೆ.




