ಕರ್ನಾಟಕದಲ್ಲಿ ನಾವು ಟ್ರಾನ್ಸ್ ಜೆಂಡರ್ ಆಗಿ ಯಾವಾಗಿನಿಂದ ಇದ್ದೆವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನಮ್ಮ ಹಿರಿಯರು ಬೆಂಗಳೂರು ಕರಗದಲ್ಲಿ, ಹಳ್ಳಿಗಳ ಪೌರಾಣಿಕ ನಾಟಕಗಳಲ್ಲಿ ಸೇರುತ್ತಿದ್ದರು. ಅದು ಬಿಟ್ಟರೆ ಸಾರ್ವಜನಿಕವಾಗಿ ಬೇರೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ನಾನು 1994ರಲ್ಲಿ ಹುಟ್ಟೂರು ಟಿ ನರಸೀಪುರದಿಂದ ಈ ಸಮುದಾಯದ ಒಟ್ಟಿಗೆ ಬಂದೆ. ಆಗ ಮಾಗಡಿ ರೋಡ್, ವೈಟ್‌ಫೀಲ್ಡ್‌ನ ಹೂಡಿ, ಯಶವಂತಪುರ, ವಿಜಯನಗರದ ಆರ್‌ಪಿಸಿ ಲೇಔಟ್ ಈ ಜಾಗಗಳಲ್ಲಿ ಮಾತ್ರ ನಮ್ಮವರು ವಾಸವಾಗಿದ್ದರು. ಯಾಕೆಂದರೆ ಇವೆಲ್ಲ ಅಭಿವೃದ್ಧಿ ಹೊಂದದ ಪ್ರದೇಶಗಳಾಗಿದ್ದವು. ಹಳ್ಳಿಗಳಂತೆ ಇದ್ದವು. ಆಗ ಲೈಂಗಿಕ ವೃತ್ತಿಯೇ ನಮ್ಮ ಮುಖ್ಯ ಕಸುಬಾಗಿತ್ತು. ವಯಸ್ಸಾದವರು ಮಾತ್ರ ಭಿಕ್ಷಾಟನೆ ಮಾಡುತ್ತಿದ್ದರು. ನಮ್ಮವರ ಸಂಖ್ಯೆ ಹೆಚ್ಚು ಇರಲಿಲ್ಲ. ನಮ್ಮ ಏರಿಯಾಗಳಿಗೆ ಬಂದರಷ್ಟೇ ನಾವು ಕಣ್ಣಿಗೆ ಬೀಳುತ್ತಿದ್ದೆವು. ಆಗ ಸಂಘಟನೆ, ಹೋರಾಟ ಯಾವುದರ ಬಗ್ಗೆಯೂ ಅರಿವಿರಲಿಲ್ಲ. ನಮಗೆ ಬಾಡಿಗೆ ಮನೆಗಳು ಈ ಸೀಮಿತ ಏರಿಯಾಗಳಲ್ಲಿ ಮಾತ್ರ ಸಿಗುತ್ತಿದ್ದವು. ಪೊಲೀಸರಿಂದಲೂ ಹೆಚ್ಚಿನ ತೊಂದರೆ ಇರಲಿಲ್ಲ. ನಮಗೆ ಬೆಂಬಲವಾಗಿ ಯಾರೂ ಇರಲಿಲ್ಲ.
ಮೊದಲ ಬಾರಿಗೆ ರವಿ ಬೆಳೆಗೆರೆ ಅವರು ‘ಹಾಯ್ ಬೆಂಗಳೂರು’ (1994) ಪತ್ರಿಕೆಯಲ್ಲಿ ನಮ್ಮ ಬಗ್ಗೆ ವರದಿ ಮಾಡಿದ್ರು. ಮನೆಯಲ್ಲೂ ಗೊತ್ತಿರಲಿಲ್ಲ. ಹಾಗಾಗಿ ನನ್ನ ಫೋಟೋ ಸಹಿತ ಸಂದರ್ಶನ ಬಂದಾಗ ಸ್ವಲ್ಪ ಮುಜುಗರ, ಭಯವಾಗಿತ್ತು. ಆ ಕಾಲದಲ್ಲಿ ಯಾವುದೇ ಮಾಧ್ಯಮಗಳು ನಮ್ಮ ಬಗ್ಗೆ ಬರೆಯುತ್ತಿರಲಿಲ್ಲ. ನಮಗೂ ಏನು ಬರೆಯುತ್ತಾರೋ ಎಂಬ ಭಯವೂ ಇತ್ತು. ನಮಗೆ ಆ ಭಾಷೆ ಕೂಡಾ ಗೊತ್ತಿರಲಿಲ್ಲ. 1999ರಲ್ಲಿ ‘ಸಂಗಮ’ ಎಂಬ ಒಂದು ಸಂಸ್ಥೆ ಹುಟ್ಟಿಕೊಂಡಿತು. ನಮ್ಮ ಹಕ್ಕುಗಳ ಬಗ್ಗೆ ಆ ಸಂಸ್ಥೆ ಅರಿವು ಮೂಡಿಸಲು ಶುರು ಮಾಡಿತ್ತು. ನಮಗೆ ಅದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಾನೂ ಕೂಡ ಸಮುದಾಯದಲ್ಲಿ ಭಿಕ್ಷಾಟನೆ, ಲೈಂಗಿಕ ವೃತ್ತಿ ಮಾಡುತ್ತ ಇದ್ದೆ. 2000ದಲ್ಲಿ ಸಂಗಮ ವೈಎಂಸಿ ಮೈದಾನದಲ್ಲಿ ಹಿಜ್ರಾ ಹಬ್ಬ ಅಂತ ಒಂದು ಕಾರ್ಯಕ್ರಮ ಮಾಡಿತ್ತು. ಅದರಲ್ಲಿ ನಮಗೆಲ್ಲ ಅವಕಾಶ ಸಿಕ್ಕಿತ್ತು. ಅದಾಗಲೇ ಸಂಗಮ ನಮ್ಮ ಹಕ್ಕುಗಳಿಗಾಗಿ ಕೆಲಸ ಶುರು ಮಾಡಿತ್ತು. ಸಮುದಾಯದಲ್ಲಿ ಜಾಗೃತಿ ಮೂಡಿಸಲು ಶುರು ಮಾಡಿದ್ದರು. ಎಸ್‌ಪಿ ಸಾಂಗ್ಲಿಯಾನ, ನಂದಿತಾ ದಾಸ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು.
ಯಾಕೆಂದರೆ ಆ ಸಮಯದಲ್ಲಿ ಬೆಂಗಳೂರಿನಲ್ಲಿ ಒಬ್ಬ ಯುವಕನ ಕೊಲೆಯಾಗಿತ್ತು. ಶವದ ಪಕ್ಕದಲ್ಲಿ ಒಂದು ಬಳೆ ಚೂರು ಸಿಕ್ಕಿತ್ತು. ನಾವೂ ಲೈಂಗಿಕ ವೃತ್ತಿ ಮಾಡುತ್ತಿದ್ದ ಕಾರಣಕ್ಕಾಗಿ ಅನುಮಾನದಿಂದ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಆಗ ನಮ್ಮ ಸಮುದಾಯದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಫಯರ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್ ನಟಿಸಿದ್ದ ಸಿನಿಮಾ, ಹಾಗಾಗಿ ಅವರನ್ನು ಕರೆಸಲಾಗಿತ್ತು.
2002ರ ಜೂನ್‌ನಲ್ಲಿ ಚಾಂದಿನಿ (ಸ್ವಪ್ನ ಆಕೆಯ ಮೂಲ ಹೆಸರು) ಎಂಬ ನಮ್ಮ ಸಮುದಾಯದ ಯುವತಿಯನ್ನು ಆಕೆಯ ಸಂಗಾತಿ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಿದ್ದ. ಅದರ ವಿರುದ್ದ ನಾವು ಟೌನ್‌ಹಾಲ್ ಮುಂದೆ ಒಂದು ದೊಡ್ಡ ಪ್ರತಿಭಟನೆ ಮಾಡಿದ್ದೆವು. ಅದರಲ್ಲಿ ನಮ್ಮ ಸಮುದಾಯದ ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಎಲ್ಲರೂ ಮಾಸ್ಕ್ ಹಾಕೊಂಡು ಭಾಗವಹಿಸಿದ್ದರು. ರ್ಯಾಲಿ ಹೋಗುತ್ತಾ ಹೋಗುತ್ತ ಎಲ್ಲರೂ ಮಾಸ್ಕ್ ತೆಗೆದರು. ಇದು ಐತಿಹಾಸಿಕವಾಗಿ ಎಲ್ಲರೂ ಬೀದಿಗಿಳಿದ ಹೋರಾಟ. ಆಗ ಜನರಿಗೆ ಹಿಜಡಾ ಕಮ್ಯುನಿಟಿ ಬಗ್ಗೆ ಗೊತ್ತಾಯಿತು. ಆ ಸಮಯದಲ್ಲಿ ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್, ಬೈಸೆಕ್ಷುವಲ್ ಎಂಬ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ʼಹಿಜಡಾಗಳನ್ನೂ ಹೆಂಗಸರೆಂದು ಪರಿಗಣಿಸಿʼ ಎಂಬುದು ನಮ್ಮ ಧ್ಯೇಯವಾಕ್ಯವಾಗಿತ್ತು.

2008ರಲ್ಲಿ ನನಗೆ ಎನ್‌ಜಿಒದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಭಯ, ಭಕ್ತಿ, ಶ್ರದ್ಧೆಯಿಂದ ಸಂದರ್ಶನ ಎದುರಿಸಿದ್ದೆ. ಒಂದೂವರೆ ಸಾವಿರ ಸಂಬಳ. ಬೆಂಗಳೂರಿನಲ್ಲಿ ನಮ್ಮವರು ಎಲ್ಲೆಲ್ಲಿ ಲೈಂಗಿಕ ವೃತ್ತಿ ಮಾಡುತ್ತಿದ್ದಾರೋ ಅವರನ್ನು ಭೇಟಿ ಮಾಡಿ ಕಾಂಡೊಮ್ ಹಂಚುವುದು, ಅದರ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಹೆಚ್‌ಐವಿ ಬಗ್ಗೆ ತಿಳಿಸುವುದು ನನ್ನ ಕೆಲಸವಾಗಿತ್ತು. ಈ ರೀತಿ ನನ್ನ ಆಕ್ಟಿವಿಸಂ ಶುರು ಮಾಡಿದೆ. ಯಾವುದೇ ಪ್ರೊಟೆಸ್ಟ್, ಹೋರಾಟಗಳಿದ್ರೂ ನನ್ನನ್ನು ಕರೆಯೋರು. ನನ್ನ ಧ್ವನಿ ಗಟ್ಟಿಯಾಗಿತ್ತು ಎಂದು ಘೋಷಣೆ ಕೂಗಲು ಕರೆಸುತ್ತಿದ್ದರು. ಆ ಸಮಯದಲ್ಲಿ ಹಕ್ಕುಗಳು ಅಂದ್ರೇನು ಎಂಬುದು ಅರ್ಥವಾಯ್ತು. ಹ್ಯೂಮನ್ ರೈಟ್ಸ್ ಬಗ್ಗೆ ಅರಿವೇ ಇರಲಿಲ್ಲ. ಅದು ಕೇವಲ ಪುಸ್ತಕಗಳಲ್ಲಿ ಮಾತ್ರ ಓದಿದ್ದೆ. ಇಲ್ಲಿಗೆ ಬಂದ ನಂತರ ಮಾನವಹಕ್ಕು ಅಂದ್ರೇನು, ಸೆಕ್ಸ್ ಅಂದ್ರೇನು, ಜೆಂಡರ್ ಅಂದ್ರೇನು, ಲೈಂಗಿಕತೆ ಅಂದ್ರೇನು ಎಂಬ ಹಲವಾರು ತರಬೇತಿ, ಕಾರ್ಯಾಗಾರಗಳು ಆದವು. ಬೇರೆ ಬೇರೆ ಊರುಗಳಿಗೆ ಭೇಟಿ ಕೊಟ್ಟೆ. ಸಾಂಗ್ಲಿಯಲ್ಲಿ ಅತಿದೊಡ್ಡ ಸೆಕ್ಸ್ ವರ್ಕ್ ಸಂಘಟನೆ ಇದೆ. ಅಲ್ಲಿಗೆ ಹೋದೆ. ಕೋಲ್ಕತ್ತಾಗೆ ಹೋಗಿದ್ದೆ. ಇದೆಲ್ಲ ಅರ್ಥ ಮಾಡಿಕೊಳ್ಳಲು ಸಾಧ್ಯವಾಯ್ತು. ಹಾಗೆನೇ ಹ್ಯೂಮನ್ ರೈಟ್ಸ್‌ನಲ್ಲಿ ನಾವು ಮಾತ್ರ ಅಲ್ಲ, ತುಂಬಾ ಅಲ್ಪಸಂಖ್ಯಾತ ಸಮುದಾಯಗಳಿವೆ. ಉದಾಹರಣೆಗೆ ಪೌರ ಕಾರ್ಮಿಕರೂ ಇದ್ದಾರೆ. ಮೊದಲ ಬಾರಿ ಪೌರಕಾರ್ಮಿಕರ ಒಂದು ಪ್ರೊಟೆಸ್ಟ್‌ಗೆ ಹೋಗಲು ಅವಕಾಶ ಸಿಕ್ತು. ಹೀಗೆ ಹಂತ ಹಂತವಾಗಿ ಬೇರೆ ಬೇರೆ ಸಮದಾಯಗಳ ಜೊತೆ ಕೈ ಜೋಡಿಸಬೇಕು, ಹೋರಾಟ ಮಾಡಬೇಕು ಎಂಬುದನ್ನು ಕಲಿತುಕೊಳ್ಳಲು ಅವಕಾಶವಾಯ್ತು.
ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?
ಇದಾದ ಮೇಲೆ 2004ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಹೆಚ್‌ಐವಿ ಪ್ರಾಜೆಕ್ಟ್ ಭಾರತಕ್ಕೆ ಬಂತು. ಕರ್ನಾಟಕ ಸೇರಿ ಭಾರತದ ಆರು ರಾಜ್ಯಗಳಿಗೆ ಈ ಪ್ರಾಜೆಕ್ಟ್‌ನಲ್ಲಿ ಅನುದಾನ ಕೊಡ್ತಿದ್ರು. ಈ ಪ್ರಾಜೆಕ್ಟ್‌ನಲ್ಲಿ ಕರ್ನಾಟಕದಲ್ಲಿ ನಮ್ಮ ಸಮುದಾಯಗಳ ಸಮೀಕ್ಷೆ MSW ವಿದ್ಯಾರ್ಥಿಗಳಿಂದ ಮಾಡಿಸಿದ್ರು. ಅವರಿಗೆ ನಮ್ಮ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಆದರೂ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಸುತ್ತಾಡಿ ನಮ್ಮ ಜನಸಂಖ್ಯೆ 36,000 ಇದೆ ಎಂದು ಡೇಟಾ ಕೊಟ್ಟರು. ಆಗ ನಮ್ಮ ಸಮುದಾಯಗಳಲ್ಲಿ ಸಂಘಟನೆಗಳು ಇರಲಿಲ್ಲ. ಬಿಜಾಪುರ, ಬೆಳಗಾವಿ, ಬಾಗಲಕೋಟೆಯಲ್ಲಷ್ಟೇ ಮೂರು ಸಂಘಟನೆಗಳು ಇದ್ದವು. 2003ರಲ್ಲಿ ನಮ್ಮ ಸಮುದಾಯದ ಕೆಲವರು ಸೇರಿ ‘ವಿವಿಧ’(ಸಂಡೆ ಮೀಟಿಂಗ್) ಎಂಬ ಹೆಸರಿನಲ್ಲಿ ಪ್ರತಿ ಭಾನುವಾರ ಎಲ್ಲಾದರೂ ಒಂದು ಕಡೆ ಸೇರಿಕೊಂಡು ನಮ್ಮ ಬಗ್ಗೆ ಮಾತಾಡಿಕೊಳ್ಳೋದು, ನಮ್ಮವರಿಗೆ ಏನಾದರೂ ಸಮಸ್ಯೆಯಾಗಿದ್ರೆ ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ನಾವುನಾವೇ ಹಣ ಹಾಕಿ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಲು ಶುರು ಮಾಡಿದೆವು. 2004ರಲ್ಲಿ ನಾವೇ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಹಿಜ್ರಾ ಹಬ್ಬ ಮಾಡಿದೆವು. ದೊಮ್ಮಲೂರು, ಮಾರತ್ತಹಳ್ಳಿ, ಮಹದೇವಪುರ, ಯಶವಂತಪುರದಲ್ಲಿ ಚಂದಾ ಎತ್ತಿ ಕಾರ್ಯಕ್ರಮ ಮಾಡಿದೆವು. ಅದುವರೆಗೆ ಟೌನ್‌ಹಾಲ್ ಮೆಟ್ಟಿಲು ಹತ್ತದ ನಾವು ಅಲ್ಲಿ ಕಾರ್ಯಕ್ರಮ ಮಾಡಿದೆವು. ಅದು ನಮ್ಮ ಸಮುದಾಯ ಸೇರಿ ಮಾಡಿದ ಮೊದಲ ಕಾರ್ಯಕ್ರಮ. ಅರುಂಧತಿ ನಾಗ್ ಮತ್ತು ಬಿ ಜಯಶ್ರೀ ಅತಿಥಿಗಳಾಗಿ ಬಂದಿದ್ದರು.
ಅದಾದ ನಂತರ ಅದೇ ವರ್ಷ ನಮ್ಮ ಸಮುದಾಯದ ಒಬ್ಬ ಯುವತಿಯ ಮೇಲೆ ಬೈಯಪ್ಪನಹಳ್ಳಿಯಲ್ಲಿ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಪ್ರತಿಭಟಿಸಿ ಎಂಜಿ ರಸ್ತೆಯ ಗಾಂಧಿ ಪ್ರತಿಮೆಯ ಬಳಿ ಹತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದೆವು. ಅಲ್ಲಿಗೆ ವಿದ್ಯಾರ್ಥಿಗಳು, ಮಹಿಳೆಯರು ಬಂದು ಬೆಂಬಲ ನೀಡಿದ್ರು. ಈ ವಿಷಯದಲ್ಲಿ ಗೌರಿ ಲಂಕೇಶ್ ನಮ್ಮನ್ನು ಬೆಂಬಲಿಸಿದ್ರು. ಪೊಲೀಸರು ಬೇರೆ ಕೈದಿಗಳ ಮುಂದೆ ನಮ್ಮ ಬಟ್ಟೆ ಬಿಚ್ಚಿಸಿ ಅವಮಾನ ಮಾಡುವ ಬಗ್ಗೆಯೂ ಅಲ್ಲಿ ಗಮನ ಸೆಳೆದೆವು. ರೇಪ್ ನಮ್ಮ ಮೇಲೂ ಆಗುತ್ತೆ, ಪೊಲೀಸ್ ಠಾಣೆಯಲ್ಲಿ ನಮ್ಮನ್ನೂ ಮಹಿಳೆಯರಂತೆ ಕಾಣಬೇಕು ಎಂದು ಪ್ರತಿಭಟಿಸಿದೆವು. ನಂತರ ಆಗಿನ ಮುಖ್ಯಮಂತ್ರಿ ಧರಂ ಸಿಂಗ್ ಮತ್ತು ಸಚಿವರಾಗಿದ್ದ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದೆವು. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುವಂತಾಯ್ತು.
2005ರಲ್ಲಿ ಟ್ರಾನ್ಸ್‌ಜೆಂಡರ್ ಆಗಿ ಪಾಸ್‌ಪೋರ್ಟ್ ತಗೊಂಡ ಎರಡನೆಯವಳು ನಾನು. ಪಾಸ್‌ಪೋರ್ಟ್ ಪಡೆಯಲು ಹೋದಾಗ ನಾನು ಮಹಿಳೆ ಎಂದು ವೈದ್ಯರ ಪ್ರಮಾಣಪತ್ರ ತರಲು ಹೇಳಿದ್ರು. ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ನಿರಾಕರಿಸಿದರು. ಪಾಸ್‌ಪೋರ್ಟ್ ಅಧಿಕಾರಿಗಳು ನಿರಾಕರಿಸಿದರು. ಶಾಲಾ ಪ್ರಮಾಣ ಪತ್ರದಲ್ಲಿ ಪುರುಷ ಎಂದು ಇರುವ ಕಾರಣ ಅವರು ನಿರಾಕರಿಸಿದರು. ಕಡೆಗೂ ಚಾಂದಿನಿ ಮಹಿಳೆ ಎಂದೇ ಪಾಸ್‌ಪೋರ್ಟ್ ಪಡೆದುಕೊಂಡೆ. ನನ್ನ ಎಲ್ಲಾ ದಾಖಲೆಗಳಲ್ಲಿ ಮಹಿಳೆ ಎಂದೇ ನಮೂದಾಗಿದೆ. ನಾನು ಹುಟ್ಟಿದಾಗ ಮೊದಲು ನೋಡಿದ್ದು ನನ್ನ ಅಮ್ಮನನ್ನು. ನನ್ನಮ್ಮ ಸೀರೆ ಉಡೋವಾಗ, ಗೆಳತಿಯರು ಲಂಗ ದಾವಣಿ ಹಾಕುವಾಗ ನನಗೂ ಹಾಕಬೇಕು ಎಂದು ಆಸೆಯಾಗುತ್ತಿತ್ತು. ಆಗಲೇ ನಾನು ಎಲ್ಲೋ ಮಹಿಳೆಯಾಗಬೇಕು ಎಂಬ ಭಾವನೆ ಇತ್ತು. ನಂತರ ನಾನು ಕೀನ್ಯಾ, ಕೊಲಂಬಿಯಾ, ಬ್ಯಾಂಕಾಕ್, ವಾಷಿಂಗ್ಟನ್ ಡಿಸಿ, ಜೋಹಾನ್ಸ್‌ಬರ್ಗ್‌ಗಳಿಗೆ ಹೋಗಿ ಬಂದಿದ್ದೇನೆ. ಅದಕ್ಕೆಲ್ಲ ಅನೇಕ ದಾನಿಗಳು ನೆರವಾದರು. ಅದಾದ ನಂತರ ಚಾಂದಿನಿ ಎಂಬ ಹೆಸರು ಜನಗಳಿಗೆ ಗೊತ್ತಾಯ್ತು.
2009ರಲ್ಲಿ ‘ಪಯಣʼ ಎಂಬ ಸಂಘಟನೆ ಶುರು ಮಾಡಿದೆವು. 29 ಸದಸ್ಯರಿದ್ದೆವು. 2010ರಲ್ಲಿ ಸಮುದಾಯದವಳಾಗಿ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಎಂಜಿ ರಸ್ತೆಯ ಮಿತ್ತಲ್ ಟವರ್‌ನಲ್ಲಿರುವ ತ್ರಿ ವ್ಹೀಲ್ ಯುನೈಟೆಡ್ ಎಂಬ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಒಂದು ಕಡೆ ಸಂತೋಷ ಮತ್ತೊಂದು ಕಡೆ ದಿಗ್ಭ್ರಮೆಯಿಂದ ನಿಂತುಕೊಂಡೆ. ಇದೇ ರೋಡಲ್ಲಿ, ಇದೇ ಜಾಗದಲ್ಲಿ ಎಷ್ಟೊಂದು ವರ್ಷ ಸೆಕ್ಸ್ ವರ್ಕ್‌ಗೆ ನಿಂತಿದ್ದೆ. ಅದೇ ಕಂಪನಿಗೆ ಎಂಪ್ಲಾಯರ್ ಆಗಿ ಹೋಗುತ್ತಿದ್ದೇನೆ ಎಂದಾಗ ಎಲ್ಲವೂ ನೆನಪಾಯ್ತು. ಇಡೀ ಬೆಂಗಳೂರಿನ ಆಟೋ ಡ್ರೈವರ್‌ಗಳ ಗಣತಿ ಮಾಡೋದು ನನ್ನ ಕೆಲಸವಾಗಿತ್ತು. ಆಟೋ ಡ್ರೈವರ್‌ಗಳು ನನ್ನನ್ನು ಒಪ್ಪಿಕೊಳ್ತಾರಾ ಎಂಬ ಅನುಮಾನ ಇತ್ತು. ಆದರೆ, ಅವರು ಚೆನ್ನಾಗಿ ಸಹಕರಿಸಿದರು. ಆಟೋ ಡ್ರೈವರ್‌ಗಳ ಗಳಿಕೆ, ವಿದ್ಯಾಭ್ಯಾಸ, ಸ್ವಂತ ಆಟೋನಾ, ಬಾಡಿಗೆಯದಾ ಹೀಗೆ ಸರ್ವೆ ಮಾಡಬೇಕಿತ್ತು. ಇಡೀ ಬೆಂಗಲೂರಿನ ಆಟೋ ಡ್ರೈವರ್‌ಗಳ ಸಮೀಕ್ಷೆ ಮಾಡಿದ್ದೆ. ನಂತರ ಅದೇ ಕಂಪೆನಿಯಿಂದ ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರಕ್ಕೆ ವಾರದಲ್ಲಿ ಎರಡು ದಿನ ಭೇಟಿ ನೀಡಬೇಕಿತ್ತು. ನನ್ನ ಬದುಕು ಹೋರಾಟದ ಜೊತೆ ಜೊತೆಗೆ ಕೆಲಸವನ್ನೂ ಮಾಡುತ್ತಾ ಹೋಯಿತು. ಮನೆ, ಊರನ್ನು ಬದಲಾಯಿಸಲು ಸಾಧ್ಯವಾಯ್ತು.
ಆ ನಂತರ ಮೈತ್ರಿ ಯೋಜನೆಯಲ್ಲಿ ಸರ್ಕಾರ 600 ರೂಪಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 30,000ದಿಂದ 50,000ದವರೆಗೆ ಸಾಲ ಯೋಜನೆ ಜಾರಿ ಮಾಡಿದರು. ಹೀಗೆ ಬೇರೆ ಬೇರೆ ಸಂಸ್ಥೆಗಳು ನಮ್ಮನ್ನು ಗುರುತಿಸಲು ಶುರು ಮಾಡಿದವು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಂಜಮ್ಮ ಜೋಗತಿ ಅವರಿಗೆ ಪದ್ಮ ಪ್ರಶಸ್ತಿ, ಅಕಾಡೆಮಿಯ ಅಧ್ಯಕ್ಷತೆ ದೊರೆಯಿತು, ನನಗೆ ಈ ವರ್ಷ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿತು. ಒಬ್ಬರು ರೇಡಿಯೋ ಜಾಕಿ ಆದ್ರು, ಕೋರ್ಟ್‌ನಲ್ಲಿ, ಪೊಲೀಸ್ ಇಲಾಖೆಯಲ್ಲಿ ನಮ್ಮ ಸಮುದಾಯದವರಿಗೆ ಕೆಲಸ ಸಿಕ್ಕಿತು. ಹೀಗೆ ಸಮಾಜದಲ್ಲಿ ನಮ್ಮನ್ನು ಒಪ್ಪಿಕೊಳ್ಳುವ ಕೆಲಸ ಆಯ್ತು.

ನಮ್ಮ ಹೋರಾಟದ ಹಿನ್ನೆಲೆಯಿಂದ ಇದೆಲ್ಲ ಸಾಧ್ಯವಾಯ್ತು. ನಮ್ಮ ಸಮುದಾಯಕ್ಕೆ ನೆಲೆ ಬೇಕು ಎಂದು ಪಯಣ ಮತ್ತು ದಲಿತ ಸಂಘಟನೆಯವರು ಸೇರಿ ʼಮಂಗಳ ಗ್ರಾಮʼ ಹೆಸರಿನಲ್ಲಿ ಮನೆ ಕಟ್ಟಲು ಶುರುವಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ. ನಮ್ಮ ಸಮುದಾಯದಲ್ಲಿ ಐವತ್ತು ವರ್ಷಕ್ಕೆ ಮೇಲ್ಪಟ್ಟವರು ಸೇರಿ ʼಕಲ್ಕಿʼ ಎಂಬ ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ದೆಹಲಿ ಸೇರಿದಂತೆ 21 ಪ್ರದರ್ಶನ ಮಾಡಿದ್ದೇವೆ. ದಸರಾ ಕವಿಗೋಷ್ಠಿಗಳಲ್ಲಿ ನಮಗೆ ಅವಕಾಶ ಸಿಗುತ್ತಿದೆ. ನಮ್ಮ ಸಮುದಾಯದ ಎ ರೇವತಿ ಪುಸ್ತಕ ಬರೆದಿದ್ದು, ನಮ್ಮ ಕುರಿತ ʼನಾನು ಅವನಲ್ಲ, ಅವಳುʼ ಎಂಬ ಸಿನಿಮಾ ಬಂತು. ಅದಕ್ಕೆ ನ್ಯಾಷನಲ್ ಅವಾರ್ಡ್ ಬಂದಿತ್ತು. ನಾನೂ ಎರಡು ಸಿನಿಮಾದಲ್ಲಿ ನಟಿಸಿದ್ದೇನೆ. ‘ಪುಂಸ್ತ್ರೀ’ ಸಿನಿಮಾ ಬಿಡುಗಡೆಯಾಗಿಲ್ಲ, ಕಳೆದ ವರ್ಷ ಬಿಡುಗಡೆಯಾದ ‘ವೀಲ್ ಚೇರ್ ರೋಮಿಯೋʼ ಎಂಬ ಸಿನಿಮಾದಲ್ಲಿ ಮುಖ್ಯ ಪೋಷಕ ಪಾತ್ರ ಮಾಡಿದ್ದೆ. ರಂಗಾಯಣದಂತಹ ವೇದಿಕೆಯಲ್ಲಿ ನಾಟಕ ಮಾಡಲು ಅವಕಾಶ ಸಿಕ್ಕಿತು. ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಯ ಪಠ್ಯದಲ್ಲಿ ನನ್ನ ‘ಮನದ ಕಣ್ಣು’ ಕವಿತಾ ಸಂಕಲನದ ಒಂದು ಕವಿತೆಯನ್ನು ಅಳವಡಿಸಿದ್ದು, ಬೆಳಗಾವಿಯ ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ನನ್ನ ಕುರಿತ ಪಠ್ಯ ಪುಸ್ತಕದಲ್ಲಿ ಅಳವಡಿಸಿದ್ದು ಇವೆಲ್ಲ ಐತಿಹಾಸಿಕ ಸಂಗತಿಗಳು. ಕರ್ನಾಟಕದಲ್ಲಿ ದೊಡ್ಡ ದೊಡ್ಡ ಬರಹಗಾರರಿದ್ದಾರೆ, ಕವಿಗಳಿದ್ದಾರೆ, ಅವರಿಗೆಲ್ಲ ಸಿಗದ ಅವಕಾಶ ನಮಗೆ ಸಿಕ್ಕಿದೆ. ಈಗ ನಾವೇ ನಮಗೆ ಬೇಕಿರುವುದನ್ನು ಸರ್ಕಾರದ ಮುಂದೆ ಲಾಬಿ ಮಾಡಿ ಪಡೆಯುವಂತಾಗಿದೆ. ಕಾನೂನು ರೀತಿ ನೋಡುವಾಗ ಟ್ರಾನ್ಸ್‌ಜೆಂಡರ್ ಬಿಲ್ ಬಂದಿದ್ದು, ಕರ್ನಾಟಕದಲ್ಲಿ ಟ್ರಾನ್ಸ್‌ಜೆಂಡರ್ ಪಾಲಿಸಿ ಬಂದಿದ್ದು, ನಮ್ಮ ಸಮುದಾಯದ ಪ್ರಾತಿನಿಧ್ಯವನ್ನು ಎತ್ತಿ ಹಿಡಿದದ್ದು ಕರ್ನಾಟಕ.
ಇದನ್ನೂ ಓದಿರಿ: ‘ವಸತಿ ಕ್ಷೇತ್ರ’; ಕರ್ನಾಟಕ ರಾಜ್ಯ 50 ವರ್ಷಗಳಲ್ಲಿ ಗುರಿ ತಲುಪಿದ್ದೆಷ್ಟು?
ಕಾರ್ಯಕ್ರಮಗಳಿಗೆ ನಮ್ಮನ್ನು ಮುಖ್ಯ ಅತಿಥಿಗಳಾಗಿ ಕರೆಯುತ್ತಿದ್ದಾರೆ. ಬದಲಾವಣೆ ಆಗಿದೆ. ಈ ಬದಲಾವಣೆಗೆ 25 ವರ್ಷಗಳ ಇತಿಹಾಸವಿದೆ. ಹೋರಾಟ ಈಗ ಪ್ರತಿಫಲ ಕೊಡುತ್ತಿದೆ. ಅಕಾಡೆಮಿ ಪ್ರಶಸ್ತಿಗಳಿಂದ ನ್ಯಾಷನಲ್ ಅವಾರ್ಡ್ ತನಕ ಹೋಗಿದ್ದೇವೆ ಎಂದರೆ ಕರ್ನಾಟಕದ ಐವತ್ತು ವರ್ಷಗಳ ಇತಿಹಾಸದಲ್ಲಿ ನಾವೂ ಸೇರಿಕೊಂಡಿದ್ದೇವೆ ಎಂದೇ ಆಯ್ತು. ಈಗ ಜನ ನಮ್ಮನ್ನು ಗುರುತಿಸುತ್ತಿದ್ದಾರೆ.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಚಾಂದಿನಿ ಟಿ.ನರಸೀಪುರ
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನವರಾದ ಮಲ್ಲಿಕಾರ್ಜುನ ಸ್ವಾಮಿಯವರು ತಮ್ಮ 20ನೇ ವಯಸ್ಸಿನಲ್ಲಿ ಚಾಂದಿನಿಯಾಗಿ ಬದಲಾದರು. ನಂತರ ಎಲ್‌ಜಿಬಿಟಿಕ್ಯೂ ಸಮುದಾಯದ ಮೇಲಾಗುತ್ತಿದ್ದ ದೌರ್ಜನ್ಯವನ್ನು ಖಂಡಿಸಿ, ಸಂಗಮ ಸಂಸ್ಥೆ ಸೇರಿ ಹೋರಾಟಕ್ಕಿಳಿದರು. ಪಯಣ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ಅದು ಕರ್ನಾಟಕದ 21 ಜಿಲ್ಲೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯ ಆಧಾರಿತ ಸಂಘಟನೆಗಳ ಒಕ್ಕೂಟವಾಗಿ ಕೆಲಸ ಮಾಡುತ್ತಿದೆ. ಅವರ ‘ಮಂದ ಕಣ್ಣು’ ಕವನ ಸಂಕಲನ ಕುವೆಂಪು ವಿವಿಯ ಪಠ್ಯಕ್ರಮದ ಭಾಗವಾಗಿದೆ. ಸ್ವರಾಜ್ ನೆಟ್‌ವರ್ಕ್ ನೀಡುವ ನೆಲತಾಯಿ 2014 ಪ್ರಶಸ್ತಿ ಮತ್ತು 2016 ರಲ್ಲಿ, ಅವರು ಬಾರ್ನ್ ಟು ವಿನ್, ಚೆನ್ನೈ, ಇಂಡಿಯಾದಿಂದ “ದಿ ಬೆಸ್ಟ್ ರೈಟರ್” ಪ್ರಶಸ್ತಿ ಪಡೆದಿದ್ದಾರೆ.




