ಒಳ್ಳೆಯ ದಿನಗಳ ಕನಸಿನೊಂದಿಗೆ ಪ್ರಾರಂಭವಾದ ಕಳೆದ 2014- 24ರ ದಶಕದಲ್ಲಿ ದೇಶವು ಸಾಧಿಸಿದ ಆರ್ಥಿಕ ಅಭಿವೃದ್ಧಿಯೆಷ್ಟು ಎಂಬ ಚರ್ಚೆಯು 2025ಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ. ಬಿಜೆಪಿಯ ಚುನಾವಣಾ ಭರವಸೆ ಮತ್ತವರ ಸರ್ಕಾರದ ಆಕರ್ಷಕ ಹೆಸರಿನ ಯೋಜನೆಗಳು ಪ್ರಾರಂಭದಲ್ಲಿ ಭರವಸೆ ಮೂಡಿಸಿತ್ತು. ಮೊದಲೆರಡು ವರ್ಷಗಳು ಮಾನ್ಯ ಪ್ರಧಾನಿಯವರ ವಿನಮ್ರತೆಯ ಮಾತು, ಭಾಷಣ, ಎಲ್ಲರೊಡಗೂಡಿ ಸಾಗುವ (ಟೀಮ್ ಇಂಡಿಯಾ) ಇರಾದೆ ಮತ್ತವರ ಮನದಾಳದ ಮಾತುಗಳು ಜನಮನವನ್ನು ಸೆಳೆದಿತ್ತು. ನೋಟು ಅಮಾನ್ಯೀಕರಣದ ಅವಾಂತರಗಳ ನಡುವೆಯೂ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಮತ್ತು ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಹಾಗೂ ರಾಮಜನ್ಮಭೂಮಿ ವಿಚಾರಗಳಿಂದ ಜನರು ಭಾವುಕರಾಗಿ ಮತ್ತೇ ಅವರನ್ನೇ ಆಯ್ಕೆ ಮಾಡಿದ್ದು ಈಗ ಇತಿಹಾಸ.
ಹೊಸ ಹೊಸ ಹೆಸರುಗಳ ಯೋಜನೆಗಳು ಮಾಧ್ಯಮಗಳ ತುತ್ತೂರಿಯಲ್ಲಿ ಮೊಳಗಿ, ಅದ್ಭುತ ಪ್ರಚಾರಗಳಲ್ಲಿಯೇ ಅವು ಜನರ ಕೈಸೇರಿತೆಂಬ ಭ್ರಮೆಯು ಬೆಲೆಯೇರಿಕೆ, ನಿರುದ್ಯೋಗ, ಮತ್ತು ರೈತರ ಸಮಸ್ಯೆಗಳು ಹಾಗೂ ಇಳಿದ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಮುಸುಕೆಳೆಯಲಾಯಿತು. ಇಡೀ ಆಡಳಿತ ವ್ಯವಸ್ಥೆಯು ಭಾರತವನ್ನು “ಗುಡಿಸಿ ಸ್ವಚ್ಛಗೊಳಿಸುವಲ್ಲಿ” ನಿರತವಾಗಿದ್ದರೆ, ಉಜ್ವಲ ಒಲೆಯು ಬೆಳಗಲಾಗದೆ ಕಂದುತ್ತದೆ. ಇತ್ತ, ಮತ್ತೆ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವು ತನ್ನ ಸಂಪೂರ್ಣ ಸಮಯವನ್ನು ಹಿಂದೂ ರಾಷ್ಟ್ರದ ಅಜೆಂಡಾಗಳನ್ನು ಪೂರೈಸಲು ಮತ್ತು ಚುನಾವಣಾ ಪ್ರಚಾರಗಳಿಗೆ ಮೀಸಲಿಡುತ್ತದೆ. ಈ ಮಧ್ಯೆ ಮಡಿಲ ಮಾಧ್ಯಮಗಳು ಸರ್ಕಾರದ ಅಧಿಕೃತ ವಕ್ತಾರಿಕೆ ವಹಿಸಿ ಭಾರತವು ವಿಶ್ವಗುರುವಾದ ಬಗೆಯ ಬಣ್ಣಿಸುವ ಕಾಯಕವನ್ನು ಮುಂದುವರೆಸುತ್ತವೆ. ವಿರೋಧ ಪಕ್ಷಗಳು ಜನರ ಭ್ರಮೆಯನ್ನು ಕಳಚುವ ಹುಸಿ ಪ್ರಯತ್ನದಲ್ಲಿರುತ್ತಾರೆ. ಇಂತಿರುವಾಗ, ಜನರಿಗೆ ನಿರಂತರ ಚಂದಮಾಮನನ್ನು ತೋರಿಸುತ್ತಾ ಕಾಣಿಸಿದ ‘ಒಳ್ಳೆ ದಿನಗಳು’ (ಅಚ್ಛೇ ದಿನ್) ಕೈಗೆಟುಕದ ಚಂದಮಾಮನಾಗಿಯೇ ಉಳಿದದ್ದು ಮಾತ್ರ ವಾಸ್ತವ. ಈ ವಾಸ್ತವವು ಇವರ ಮೂರನೇ ಅವಧಿಯಲ್ಲಿ ಹೆಣೆಯಬಹುದಾದ ಹೊಸ ಕಥೆ-ಕನಸುಗಳಡಿ ಮುಚ್ಚಿಹೋಗುವ ದಲೊಮ್ಮೆ ಮೆಲುಕುವುದು ಒಳ್ಳೆಯದು.
ಒಂದೆಡೆ ಸರ್ಕಾರದ ಅಧಿಕೃತ ಮಾಹಿತಿಗಳು ಮತ್ತು ಮಡಿಲು ಮಿಡಿಯಾ ವರದಿಗಳು ಕೇಂದ್ರ ಸರ್ಕಾರದ ಆರ್ಥಿಕ ಕಾರ್ಯಕ್ಷಮತೆಯನ್ನು ಅತಿ ಉತ್ತಮವೆಂದು ಬಣ್ಣಿಸಿದರೆ, ಇನ್ನೊಂದೆಡೆ ತಜ್ಞ ವ್ಯಕ್ತಿ/ಸಂಸ್ಥೆಗಳು ಇದೇ ಸರ್ಕಾರದ ಅಂಕಿ ಅಂಶಗಳನ್ನು ಬಳಸಿಕೊಂಡು ಇವರ ಹತ್ತು ವರ್ಷಗಳ ಆಡಳಿತದಲ್ಲಿ ಒಳ್ಳೆಯ ದಿನಗಳು ಕಾಣಲಿಲ್ಲವೆಂದಿದ್ದಾರೆ. ಸರ್ಕಾರವು ಇದನ್ನು ಷಡ್ಯಂತ್ರವೆಂತಲೋ ಅಥವಾ ಅಧ್ಯಯನಕ್ಕೆ ಬಳಸಿದ ಮಾಪಕ/ವಿಧಾನ ಇತ್ಯಾದಿಗಳು ಸರಿ ಇಲ್ಲವೆಂಬ ಕಾರಣ ನೀಡಿ ಅಂತಹ ಅಭಿಪ್ರಾಯಗಳನ್ನು ತಳ್ಳಿ ಹಾಕುತ್ತಾ ಬಂದಿದ್ದು, ಕೆಲವೊಮ್ಮೆ ಮಾಹಿತಿಯನ್ನೆ ಮರೆಮಾಚಲಾಗುತ್ತದೆ. ಇದು, ಸರಿ ತಪ್ಪುಗಳ ವಿವಾದದ ಗೊಂದಲ ಹುಟ್ಟಿಸಿ ನಿಜ ಸಂಗತಿಗಳನ್ನು ಜನರಿಂದ ಮುಚ್ಚಿಡುವ ತಂತ್ರವಿರಬಹುದು ಎನ್ನಲಾಗಿದೆ. ಜನಸಾಮಾನ್ಯರಿಗೆ ಸರಿ ತಪ್ಪುಗಳನ್ನು ಹೆಕ್ಕಿ ನಿರ್ಧಾರಕ್ಕೆ ಬರುವುದು ಕಷ್ಟವಾದರೂ, ಸುತ್ತಮುತ್ತಲಿನ ಜನಜೀವನವನ್ನು ಸ್ವಲ್ಪ ಗಮನಿಸಿದರೂ ಸಾಕು ನಿಜಸ್ಥಿತಿ ಅರಿವಾಗುತ್ತದೆ. ಸುಮಾರು 50% ಇರುವ ಜನಸಾಮಾನ್ಯರ ಬವಣೆಯ ಬದುಕನ್ನು ಅಂಕಿ ಅಂಶಗಳ ಮೆರಗಿನ ಪರದೆಯಿಂದ ಮುಚ್ಚಿಡಲಾಗದು; ಅವರ ಬದುಕಿನ ಕೋಟಲೆಗಳು ಬೇಡವೆಂದರೂ ಕಣ್ಣಿಗೆ ರಾಚುತ್ತವೆ.
ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!
ಮೊದಲಿನ ಸರ್ಕಾರಗಳಲ್ಲಿ ಈ ಸಾಮಾನ್ಯರ ಸ್ಥಿತಿ ಹೀಗೆಯೇ ಇತ್ತಲ್ಲವೇ ಎಂದು ಕೇಳಿದರೆ, ‘ಹೌದು’ ಎನ್ನುವುದೇ ಉತ್ತರ. ಅದಕ್ಕಾಗಿಯೇ ಜನರು ಆ ಸರ್ಕಾರಗಳನ್ನು ತಿರಸ್ಕರಿಸಿ, 25 ಲಕ್ಷ ಉದ್ಯೋಗ, ರೈತರಿಗೆ ದ್ವಿಗುಣ ಆದಾಯ, ಕಪ್ಪು ಹಣ ನಿರ್ಮೂಲನೆ, ಎಲ್ಲರ ಖಾತೆಗೆ 15 ಲಕ್ಷ, ಎಲ್ಲರಿಗೂ ಮನೆ, ಸಹಕಾರದ ಒಕ್ಕೂಟ ವ್ಯವಸ್ಥೆ ಇತ್ಯಾದಿ ಭರವಸೆಗಳನ್ನು ನೀಡಿದ ಬಿಜೆಪಿಯನ್ನು ಆಯ್ಕೆ ಮಾಡಿದ್ದು.
ಹೆಚ್ಚು ಟೀಕೆಗೆ ಒಳಗಾದ 1991ರ ನಂತರದ ಸರ್ಕಾರಗಳ ಆರ್ಥಿಕ ಉದಾರೀಕರಣ ನೀತಿ ಮತ್ತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯು ಹೊಸ ಬಗೆಯ ಅಸಂಖ್ಯಾತ ಉದ್ಯೋಗಗಳು ಹಾಗೂ ಅದರ ಪೂರಕ ಸೇವೆಗಳಿಗೆ ಬಾಗಿಲು ತೆರೆದು, ವ್ಯಾಪಾರಗಳನ್ನು ವಿಸ್ತರಿಸಿದ ಕಾರಣ ದೇಶದಲ್ಲಿ ಆರ್ಥಿಕತೆಯ ಶಕೆ ಪ್ರಾರಂಭವಾಯಿತು ಎನ್ನಲಾಗಿದೆ. ಇದನ್ನು ಸ್ವತಃ ಬಿಜೆಪಿ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ತಯಾರಿಸಿದ ಕಳೆದ ಹತ್ತು ವರ್ಷಗಳ ವರದಿಯಲ್ಲಿ 1991ರ ನಂತರದ ಈ ಅಭಿವೃದ್ಧಿಯನ್ನು ಸ್ಮರಿಸಿರುವುದಾಗಿ ಹೇಳಲಾಗಿದೆ. ಅಂದರೆ, 2014ರ ಸಮಯಕ್ಕಾಗಲೇ ದೇಶದಲ್ಲಿ ಆರ್ಥಿಕ ಬೆಳವಣಿಗೆ ಪ್ರಾರಂಭವಾಗಿ, ಇನ್ನೂ ಹೆಚ್ಚಿನ ಸುಧಾರಣೆಗೆ ಬೆಂಬಲಿತ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಟಿಸಿಲೊಡೆದಿದ್ದ ಸುಧಾರಣೆಯ ಸಸಿಯು ನಂತರದಲ್ಲಿ ಬೆಳೆಯುವ ಬದಲು ಕಮರಿ, ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಮೂಲಭೂತ ಅಂಶಗಳಾದ ನಿರುದ್ಯೋಗ ದರ, ಜಿಡಿಪಿ, ತಲಾದಾಯ, ಹಸಿವಿನ ಪ್ರಮಾಣ, ಇತ್ಯಾದಿಗಳು ಇಳಿಕೆಯಾದ ಬಗ್ಗೆ ಅನೇಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಇಳಿಕೆಯ ಪರಿಸ್ಥಿತಿಗೆ ಅಂದಿನ ಜಾಗತಿಕ ಆರ್ಥಿಕ ಬಿಕ್ಕಟ್ಟು ಅಥವಾ ಕೋವಿಡ್ ಕಾರಣಗಳನ್ನು ನೀಡಲಾಗುತ್ತದೆ. ಅದಾಗಲೇ ಆರ್ಥಿಕ ಬಿಕ್ಕಟ್ಟಿನ ಅರಿವಿದ್ದ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಜವಾಬ್ದಾರಿಯಿಂದ ಪರಿಸ್ಥಿತಿಯನ್ನು ನಿಭಾಯಿಸಿ ಹಿಂದಿದ್ದ ಬೆಂಬಲಿತ ವಾತಾವರಣವನ್ನು ಇನ್ನೂ ಹೆಚ್ಚು ಸುಗಮ ಮತ್ತು ಸಶಕ್ತ ನೀತಿಗಳ ಮೂಲಕ ಮತ್ತಷ್ಟು ಗಟ್ಟಿಗೊಳಿಸಬಹುದಿತ್ತು.
ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆಯು ಬಿಜೆಪಿ ಸರ್ಕಾರದ ಹತ್ತು ವರ್ಷಗಳ ವರದಿಯನ್ನಾಧರಿಸಿ ಮುಂದಿನ ದಿಕ್ಕನ್ನು ಚರ್ಚಿಸಿದ್ದು, ಅದರಲ್ಲಿ ಅನೇಕ ಪ್ರಗತಿಗಳನ್ನು ವಿವರಿಸಿದೆ; ಅತಿಯಾಗಿ ಏರಿದ್ದ ಹಳೆಯ ಕೈಗಾರಿಕಾ ಸಾಲಗಳ ಜಿಡಿಪಿ ಅನುಪಾತವನ್ನು ವಿವಿಧ ಕ್ರಮಗಳ ಮೂಲಕ ಕಡಿಮೆಗೊಳಿಸಿದ್ದು, ಬ್ಯಾಂಕ್ ದಿವಾಳಿತನದ ಸಮಸ್ಯೆಯನ್ನು ನಿರ್ವಹಿಸಿದ್ದು, ಜಿಎಸ್ಟಿ ಮತ್ತು ರೇರಾ ನಿಯಂತ್ರಣ ವ್ಯವಸ್ಥೆಗಳನ್ನು ತಂದಿದ್ದು, ಉತ್ಪಾದನಾಧಾರಿತ ಪ್ರೋತ್ಸಾಹಕಗಳು ಮತ್ತು ಮೇಕ್ ಇನ್ ಇಂಡಿಯಾ ಯೋಜನೆ, ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸಹಾಯ, ಮೂಲಸೌಕರ್ಯಗಳ ಬೆಳವಣಿಗೆ, ಜನ್ಧನ್ ಬ್ಯಾಂಕ್ ಖಾತೆಗಳು, ಉಜ್ವಲ ಉಚಿತ ಅನಿಲ ಇತ್ಯಾದಿಗಳ ಜೊತೆ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದು… ಇತ್ಯಾದಿ.
ಹಿಂದಿನ ಸರ್ಕಾರವು ಸೃಷ್ಟಿಸಿದ್ದ ಕೆಟ್ಟ ಸಾಲಗಳ ಸಮಸ್ಯೆಯನ್ನು ಬಿಜೆಪಿ ಸರ್ಕಾರವು ಪರಿಹರಿಸಿತೇ ಅಥವಾ ಅತಿ ಶ್ರೀಮಂತರ ಕಟುಬಾಕಿ ಸಾಲಗಳನ್ನು ಜನರ ತೆರಿಗೆ ಹಣದಿಂದ ತೀರಿಸಿತೇ ಎಂಬ ಅನುಮಾನವಿದೆ. ಭಾರತದ ಶೆಡ್ಯೂಲ್ಡ್ ಬ್ಯಾಂಕುಗಳ ಒಟ್ಟು ಹತ್ತು ಲಕ್ಷ ಕೋಟಿ ಹಣವನ್ನು ಸಾಲದ ಖಾತೆಗಳಿಂದ ಕೈಬಿಡಲಾಗಿದೆ ಎಂಬ ಅರ್ಥಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಇದು ಭಾರತದ ಒಟ್ಟಾರೆ ಡಿಪಾಸಿಟ್ಗಳ ಶೇಕಡಾ ಐದಕ್ಕಿಂತ ಹೆಚ್ಚಿದ್ದು, ಬ್ಯಾಂಕ್‌ಗಳ ಗಂಭೀರ ಪರಿಸ್ಥಿತಿಯನ್ನು ತಿಳಿಸುತ್ತದೆ ಎನ್ನುತ್ತಾರೆ ಅಂಕಣಕಾರ ಹಾಗೂ ಪತ್ರಕರ್ತರೂ ಆದ ಶಿವಸುಂದರ್. ರಾಶಿ ಕಪ್ಪು ಹಣ ಮರಳಿ ತರುವ ಮೋದಿಜಿಯವರ ಭರವಸೆಯು ಭಾಷಣಗಳಿಂದ ಮರೆಯಾಗಿ, ಅದು ಕೇವಲ ಜುಮ್ಲಾ ಎನಿಸಿಕೊಂಡರೆ, ಕೆಲ ಶ್ರೀಮಂತರು ಬ್ಯಾಂಕ್ ವಂಚಿಸಿ ಸರ್ಕಾರದ ಮೂಗಿನಡಿಯೇ ದೇಶದಿಂದ ಸುರಕ್ಷಿತವಾಗಿ ಹೊರನುಸುಳಿ ವಿದೇಶದಲ್ಲಿ ತಣ್ಣಗೆ ಜೀವಿಸುತ್ತಿದ್ದಾರೆ!
ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ
ಜಿಡಿಪಿಯ (GDP – ಒಟ್ಟು ದೇಶಿಯ ಉತ್ಪನ್ನ) ಕುರಿತು ಪತ್ರಕರ್ತ ಉದಿತ್ ಮಿಶ್ರರವರು ತಮ್ಮ ಲೇಖನದಲ್ಲಿ ಹೀಗೆ ಹೇಳುತ್ತಾರೆ: “ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಾದ ಕುಸಿತದ ನಂತರ, ಭಾರತದ ಆರ್ಥಿಕತೆಯು ಮಾರ್ಚ್ 2013ರಲ್ಲಿ ಚೇತರಿಕೆಯಾಗಿ ದೇಶದ ಜಿಡಿಪಿಯು 7-8% ಆಗಿತ್ತು. ಅದು 2016-17ರ ಮೂರನೇ ತ್ರೈಮಾಸಿಕದಿಂದ ಹೀನಾಯ ಕುಸಿತ ಕಂಡು 2020ರಲ್ಲಿ ಸುಮಾರು 4%ಕ್ಕೆ ಕುಸಿಯುತ್ತದೆ. RBI ಅನುಮತಿ ನೀಡದಿದ್ದರೂ, ನವೆಂಬರ್ 8ರ ರಾತ್ರೋರಾತ್ರಿ ನೋಟು ಅಮಾನ್ಯೀಕರಣ ಹಾಗೂ ಕಳಪೆ ವಿನ್ಯಾಸಿತ ಜಿಎಸ್ಟಿ ಕ್ರಮಗಳು ಆರ್ಥಿಕ ಬೆಳವಣಿಗೆ ಇಳಿಮುಖವಾಗಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಇಳಿಮುಖವಾದ ಜಿಡಿಪಿ ದರಕ್ಕೆ ಕೋವಿಡ್ ಕಾರಣವೆಂದು ಸರ್ಕಾರ ಹೇಳಿದರೂ, ಮೊದಲೆರಡು ವರ್ಷಗಳಿಂದಲೇ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಸಾಕಷ್ಟು ದುರ್ಬಲವಾಗಿದ್ದವು ಎಂದಿದ್ದಾರೆ.
ರಾಷ್ಟ್ರೀಯ ಸರ್ವೆ ಕಚೇರಿಯು (NSO) ಬಿಡುಗಡೆ ಮಾಡಿದ ಮೇ 2024ರ ವರದಿಯಂತೆ 2022-23ರಲ್ಲಿ 6.7% ಇದ್ದ ಬೆಳವಣಿಗೆಯು 23-24ರ ಅಂತ್ಯಕ್ಕೆ 7.2%ಕ್ಕೆ ತಲುಪಿದೆ ಎಂದು ‘ಲೈವ್‌ಮಿಂಟ್’ ವರದಿ ಮಾಡಿರುತ್ತದೆ. ಇದು ಈ ಆರ್ಥಿಕ ವರ್ಷದ 2 ಮತ್ತು 3ನೇ ಅವಧಿಯಲ್ಲಿ 5.4 ರಿಂದ 5.7% ಮತ್ತೆ ಕುಸಿದಿದೆ.
ದೇಶದ ಆರ್ಥಿಕತೆಯ ಆರೋಗ್ಯವನ್ನು ಕೇವಲ ಜಿಡಿಪಿ ದರದ ಏರಿಳಿಕೆಯ ಆಟಗಳು ನಿರ್ಧರಿಸುವುದಿಲ್ಲ, ಬದಲಿಗೆ ಹಸಿವಿನ ಮಟ್ಟವನ್ನು ಆಧರಿಸಿದೆ ಎನ್ನುತ್ತಾರೆ ತಜ್ಞರು. 2022ರಲ್ಲಿ ಭಾರತದ ಹಸಿವಿನ ಸೂಚ್ಯಂಕವು ಅನೇಕ ಹಿಂದುಳಿದ ರಾಷ್ಟ್ರಗಳಿಗಿಂತ ಹಿಂದಿದ್ದು, 121 ರಾಷ್ಟ್ರಗಳಲ್ಲಿ 107 ಸ್ಥಾನ ಮತ್ತು 2023ರಲ್ಲಿ 125 ದೇಶಗಳಲ್ಲಿ 111ನೇ ಸ್ಥಾನವನ್ನು ಹೊಂದಿದ್ದು, ಅದು ಗಂಭೀರ ಪರಿಸ್ಥಿತಿ ಎನ್ನಲಾಗಿದೆ.
2022ರ ಆಹಾರ ಭದ್ರತೆ ಮತ್ತು ಪೋಷಣಾ ಸ್ಥಿತಿಯ ವಿಶ್ವ ವರದಿಯಲ್ಲಿ ಭಾರತವು 224.3 ಮಿಲಿಯನ್ ಅಪೌಷ್ಟಿಕ ಜನರನ್ನು ಹೊಂದಿದೆ ಎನ್ನಲಾಗಿದೆ. GHI ಲೆಕ್ಕಚಾರ ಮಾಡಲು ಬಳಸಿರುವ ದತ್ತಾಂಶ ಮತ್ತು ವಿಧಾನದ ಬಗ್ಗೆ ಭಾರತ ಸರ್ಕಾರವು ವಿವಾದಿಸಿದ್ದರೂ, ತನ್ನ ಅಭಿಪ್ರಾಯವನ್ನು ಬೆಂಬಲಿಸುವ ಪುರಾವೆಗಳನ್ನು ನೀಡಿರುವುದಿಲ್ಲ. 78ನೇ ಸುತ್ತಿನ NSS-21ರ ಸಮೀಕ್ಷೆಯಲ್ಲಿ ಕುಟುಂಬದ ಆಹಾರ ಅಭದ್ರತೆಯನ್ನು ಗುರುತಿಸಲು ಕೇಳಿದ್ದ ನಾಲ್ಕು ಪ್ರಮುಖ ಪ್ರಶ್ನೆಗಳ ಮಾಹಿತಿಯು NSS ವರದಿಯಲ್ಲಿ ಕಾಣೆಯಾಗಿದೆ ಎನ್ನುತ್ತಾರೆ ಉದಿತ್ ಮಿಶ್ರಾರವರವರು. ಸರ್ಕಾರದ್ದೇ ಮೂಲದ NFHS-5ರ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಮತ್ತು ತೂಕವನ್ನು ಹೊಂದಿದ್ದು, ಪ್ರತಿ ಐದನೇ ಮಗು ಕ್ಷೀಣಿಸುವಿಕೆಯಿಂದ ಬಳಲುತ್ತಿದೆ ಎಂದು ಅಂತಾರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯಲ್ಲಿನ ನಂದಲಾಲ್ ಮಿಶ್ರಾ ಅವರು ತಮ್ಮ ಲೇಖನದಲ್ಲಿ ಬರೆಯುತ್ತಾರೆ.
ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯು (NSO) ಅಂದಾಜಿಸಿದಂತೆ 2022-23ರಲ್ಲಿ ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ ರೂ.172,000 ಆಗಿದ್ದು, 2014-15ಕ್ಕೆ ಹೋಲಿಸಿದರೆ ಇದು ದ್ವಿಗುಣವಾಗಿದೆ ಎನ್ನಲಾಗಿದೆ. ಇದು ಸರಾಸರಿ ಒಬ್ಬರಿಗೆ ತಿಂಗಳಿಗೆ 14,333 ಆಗುತ್ತದೆ. ಅಂದರೆ ದೇಶದ ಎಲ್ಲರ ಕಿಸೆಗೂ ಈ ಆದಾಯ ಬಂದಿತೆಂದಲ್ಲ. ಇದು ದೇಶದ ಕೆಲವೇ ಕೆಲವು ಅತಿ ಶ್ರಿಮಂತರ ಆದಾಯವನ್ನೂ ಎಲ್ಲರಿಗೂ ಸಮನಾದ ಲೆಕ್ಕದಲ್ಲಿ ಹಂಚಿದ ಸರಾಸರಿಯ ಅಂಕಿಗಳಾಗಿದ್ದು, ಹೆಚ್ಚಿನದಾಗಿ ಮೇಲ್ವರ್ಗದ ಜನರ ಜೇಬಿಗೆ ಬಂದಿರುತ್ತದೆ. ಆದರೆ, ರಾಷ್ಟ್ರೀಯ ನಿವ್ವಳ ಆದಾಯವು (NNI) ಒಂದು ದೇಶದ ಒಟ್ಟು ಆರ್ಥಿಕ ಚಟುವಟಿಕೆಯ ಸೂಚಕವಾಗಿದೆ. ಇದರಿಂದ ಸ್ಥಿರ ಬಂಡವಾಳದ ಆಸ್ತಿಗಳ ಸವಕಳಿಯನ್ನು ಕಳೆದ ನಂತರ ಬರುವುದು ಒಟ್ಟು ರಾಷ್ಟ್ರೀಯ ಆದಾಯವಾಗಿದೆ. ಆದ್ದರಿಂದ, 2011-12ರ ಸ್ಥಿರ ಬೆಲೆಯಾಧಾರಿತ 2012-15ರಲ್ಲಿದ್ದ ರೂ.72805 ತಲಾನಿವ್ವಳ ಆದಾಯವು 2022-23ಕ್ಕೆ ರೂ. 98,118ಕ್ಕೆ ಮಾತ್ರ ಏರಿದ್ದು ಇದು ಶೇ.35 ಆಗಿದೆಯೇ ಹೊರತು ದ್ವಿಗುಣವಾಗಿಲ್ಲ ಎನ್ನುತ್ತದೆ ವರದಿಯೊಂದು.
ವಿಶ್ವ ಅಸಮಾನತೆ ವರದಿ-2022 ‘ಹೆಚ್ಚುತ್ತಿರುವ ಬಡತನ, ಅದೇ ವೇಳೆಗೆ ಅಗರ್ಭ ಶ್ರೀಮಂತರನ್ನು ಹೊಂದಿರುವ ಭಾರತವು ವಿಶ್ವದ ಅತ್ಯಂತ ಅಸಮಾನತೆಯ ರಾಷ್ಟ್ರಗಳಲ್ಲಿ ಒಂದಾಗಿದೆ’ ಎನ್ನುತ್ತದೆ. ಭಾರತದ 1% ಅಗರ್ಭ ಶ್ರೀಮಂತರು ಒಟ್ಟು ರಾಷ್ಟ್ರೀಯ ಆದಾಯದ 22% ಪಾಲನ್ನು ಹೊಂದಿದ್ದರೆ, ನಂತರದ 10% ಶ್ರೀಮಂತರು 57% ಆದಾಯ ಹೊಂದಿದ್ದಾರೆ. ಇನ್ನು ಕೊನೆಯ 50% ಸಾಮಾನ್ಯರು ದೇಶದ ಒಟ್ಟು ಆದಾಯದ 13%ಕ್ಕೂ ಕಡಿಮೆ ಆದಾಯ ಹೊಂದಿದ್ದಾರೆಂದು ಈ ವರದಿಯು ಹೇಳಿರುವುದಾಗಿ 9ನೇ ಡಿಸೆಂಬರ್ 21ರ ‘ದಿ ಎಕನಾಮಿಕ್ ಟೈಮ್ಸ್’ ತಿಳಿಸಿದೆ. ಆದಾಯವು ಹೆಚ್ಚದೆ ಅಥವಾ ಕಡಿಮೆಯಾದ ಕಾರಣ, ಭಾರತದಲ್ಲಿ 74% ಜನರು ಪೌಷ್ಟಿಕ ಆಹಾರವನ್ನು ಪಡೆಯಲು ಸಾಧ್ಯವಿಲ್ಲ ಎಂದಿದೆ ‘ಸ್ಟೇಟ್ ಆಫ್ ಫುಡ್ ಸೆಕ್ಯೂರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವಲ್ಡ್’ 2023ರ ವರದಿಯು.
ಸ್ಕಿಲ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ವಚ್ಚ ಭಾರತ್, ಮುದ್ರಾ ಇತ್ಯಾದಿ ಕಾರ್ಯಕ್ರಮಗಳ ಕುರಿತು ಮುದ್ರಿತವಾದ ಸರ್ಕಾರಿ ಸಚಿವಾಲಯಗಳ ವಾರ್ಷಿಕ ಪ್ರಗತಿ ಸಂಖ್ಯೆಗಳು ತಮ್ಮ ಕೊರತೆಗಳನ್ನು ಮರೆಮಾಡಲು ಸಾಧ್ಯವಾಗಿಲ್ಲ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮರ್ಶಿತ ಮುದ್ರಾ ಕಾರ್ಯಕ್ರಮದ ಫಲಿತಾಂಶಗಳು ಎಷ್ಟು ಕಳಪೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಸ್ಪಷ್ಟ ಹಾಗೂ ತರ್ಕಹೀನ ದರಗಳಿಂದಾಗಿ ಜಿಎಸ್ಟಿ ಸೊರಗಿದ್ದು, ಅದರ ನಿರ್ವಹಣೆಯಲ್ಲಿ ತಪ್ಪಿಸಬಹುದಾದ ದೋಷಗಳು ಸಣ್ಣ ವ್ಯಾಪಾರಗಳಿಗೆ ಕಿರುಕುಳದ ಮೂಲವಾಗಿದೆ ಎಂದಿದ್ದಾರೆ ಡಾ. ಪರಕಾಲ ಪ್ರಭಾಕರ್ ತಮ್ಮ ‘ಮಿಡ್ ಡೆ ಮ್ಯಾಟರ್ಸ್’ 39ರ ಸಂಚಿಕೆಯಲ್ಲಿ.
(ಮುಂದುವರಿಯುತ್ತದೆ…)

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




