ಬಾಂಗ್ಲಾದ ಹಿಂದೂಗಳ ಮೇಲೆ ಹಿಂಸೆ; ಚಾರಿತ್ರಿಕ ನೋಟಗಳೇನು?

Date:

2008ರಿಂದಲೂ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದ ಆವಾಮಿ ಲೀಗ್ ಪಕ್ಷದ ನಾಯಕಿ ಷೇಕ್ ಹಸೀನಾ, ಆಗಸ್ಟ್ 5, 2024ರಂದು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. 2024ರ ಜೂನ್ ತಿಂಗಳಲ್ಲಿ, ಷೇಕ್ ಹಸೀನಾ ಅವರ ಸರಕಾರವು, ದೇಶದ ನಾಗರಿಕ ಸೇವಾ ವಲಯದ ಹುದ್ದೆಗಳ ನೇಮಕಾತಿಯಲ್ಲಿ, 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಕುಟುಂಬದವರಿಗೆ ಶೇ.30ರಷ್ಟು ಮೀಸಲಾತಿಯನ್ನು ಘೋಷಿಸಿತು. ತೀವ್ರ ನಿರುದ್ಯೋಗದ ಸ್ಥಿತಿ ಇರುವ ಹೊತ್ತಲ್ಲಿ ಈ ನಿರ್ಧಾರವು ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶವನ್ನು ಉಂಟು ಮಾಡಿತು. ಅವರು ಶಾಂತಿಯುತ ಪ್ರತಿಭಟನೆಗೆ ಮುಂದಾದ ಹೊತ್ತಲ್ಲಿ, ಸರಕಾರವು ತನ್ನ ನಿರ್ಧಾರವನ್ನು ಮುಂದೊತ್ತದಿದ್ದರೂ, ಬಾಂಗ್ಲಾದೇಶದ ಉಚ್ಛನ್ಯಾಯಾಲಯವು ಈ ಮೀಸಲಾತಿಯನ್ನು ಎತ್ತಿ ಹಿಡಿದ ಕಾರಣವಾಗಿ, ವಿದ್ಯಾರ್ಥಿ ಯುವಜನರ ಪ್ರತಿಭಟನೆಯು ಮತ್ತೊಮ್ಮೆ ತೀವ್ರತೆ ಪಡೆಯಿತು. ಷೇಕ್ ಹಸೀನಾ ಅವರ ಆಡಳಿತವು ಈ ಪ್ರತಿಭಟನೆಗಳನ್ನು ಬಲ ಪ್ರಯೋಗದ ಮೂಲಕ ಬಗ್ಗು ಬಡಿಯಲು ಮುಂದಾಯಿತು. ಪೊಲೀಸ್, ಮಿಲಿಟರಿ ಬಲ ಮಾತ್ರವಲ್ಲದೆ, ಆವಾಮಿ‌ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೂ ಹಿಂಸಾತ್ಮಕವಾಗಿ ಪ್ರತಿಭಟನಾಕಾರರ ಮೇಲೆ ಎರಗಿದರು. ನೂರಾರು ಸಾವುನೋವುಗಳು ಉಂಟಾಗಿ, ಪ್ರತಿಭಟನೆಯೂ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಈ ಪ್ರತಿಭಟನೆಯಲ್ಲಿ ಸ್ವತಂತ್ರ ವಿದ್ಯಾರ್ಥಿ ಸಮೂಹಗಳ ಜೊತೆ ವಿರೋಧ ಪಕ್ಷವಾದ ಬಾಂಗ್ಲಾ ನ್ಯಾಷನಲಿಸ್ಟ್ ಪಕ್ಷ, ಜಮಾತ್-ಎ-ಇಸ್ಲಾಮಿ ಪಕ್ಷ ಮತ್ತು ಅದರ ವಿದ್ಯಾರ್ಥಿ ಘಟಕಗಳು ಸೇರಿದ್ದವು. ಷೇಕ್ ಹಸೀನಾ ಸರಕಾರವು,ಜಮಾತ್-ಎ-ಇಸ್ಲಾಮಿ ಮತ್ತದರ ವಿದ್ಯಾರ್ಥಿ ಘಟಕವನ್ನು ಕಾನೂನು ಬಾಹಿರ ಸಂಘಟನೆಗಳೆಂದು ಘೋಷಿಸಿ ಅವುಗಳನ್ನು ನಿಷೇಧಿಸುವ ಆಜ್ಞೆ ಹೊರಡಿಸಿತು. ವಿರೋಧ ಪಕ್ಷಗಳ ನಾಯಕರು ಹಾಗೂ ವಿದ್ಯಾರ್ಥಿ ಮುಖಂಡರುಗಳನ್ನು ಬಂಧಿಸಲಾಯಿತು. ಈ ಕ್ರಮಗಳೆಲ್ಲವೂ, ಪ್ರತಿಭಟನೆಯು ಮತ್ತಷ್ಟೂ ಆಕ್ರಮಣಕಾರಿ ಸ್ವರೂಪ ಪಡೆದುಕೊಳ್ಳಲು‌ ಕಾರಣವಾದವು. ಜುಲೈ ತಿಂಗಳಲ್ಲಿ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು, ಮೀಸಲಾತಿ ಕ್ರಮವನ್ನು ಅನೂರ್ಜಿತಗೊಳಿಸಿದರೂ, ಪ್ರತಿಭಟನಾಕಾರರು ಷೇಕ್ ಹಸೀನಾರ ಪದಚ್ಯುತಿಗೆ ಒತ್ತಾಯಿಸಿ ದೊಡ್ಡ ಸಂಖ್ಯೆಯಲ್ಲಿ ರಾಜಧಾನಿಗೆ ಮುತ್ತಿಗೆ ಹಾಕಿದರು. ಪರಿಸ್ಥಿತಿ ತನ್ನ ನಿಯಂತ್ರಣ ತಪ್ಪಿರುವುದರ ಅರಿವಾದಾಕ್ಷಣ, ಷೇಕ್ ಹಸೀನಾ ರಾಜೀನಾಮೆ ನೀಡಿ, ದೇಶ ತ್ಯಜಿಸಿ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶದ ಮಿಲಿಟರಿಯ ಸರ್ವೋಚ್ಚ ನಾಯಕ ವಾಕರ್-ಉಜ್-ಜಮಾನ್ ಆಡಳಿತವನ್ನು ವಹಿಸಿಕೊಂಡು, ಆಗಸ್ಟ್ 8ರಂದು, ಎಲ್ಲ ವಿರೋಧ ಪಕ್ಷಗಳನ್ನು ಒಳಗೊಂಡ ಮಧ್ಯಂತರ ಉಸ್ತುವಾರಿ ಸರಕಾರವನ್ನು ರಚಿಸಿದ್ದಾರೆ; 2006ರ ನೋಬೆಲ್ ಶಾಂತಿ ಪುರಸ್ಕೃತ ಮೊಹಮ್ಮದ್ ಯೂನುಸ್, ಉಸ್ತುವಾರಿ ಸರಕಾರದ ಮುಖ್ಯ ಸಲಹೆಗಾರರಾಗಿ ನೇಮಕವಾಗಿದ್ದಾರೆ.

ಮತೀಯ ಅಲ್ಪಸಂಖ್ಯಾತರ ಮೇಲೆ ಹಿಂಸೆ

ಈ ವಿದ್ಯಮಾನಗಳ ತಕ್ಷಣದಲ್ಲೇ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಮತದವರಾದ ಹಿಂದೂಗಳ ಮೇಲೆ ದೈಹಿಕ ಹಿಂಸೆ ಮತ್ತು ಅವರ ಆಸ್ತಿಪಾಸ್ತಿ ನಾಶದ ಘಟನೆಗಳು ನಡೆಯುತ್ತಿವೆ. ಈ ಹಿಂಸೆಗಳ ಗುಣ, ಪರಮಾಣಗಳನ್ನು, ನೆರೆಯ ದೇಶವಾದ ಭಾರತದ ಹಿಂದುತ್ವವಾದಿ ಸಂಘಟನೆಗಳು ಉತ್ಪ್ರೇಕ್ಷಿಸಿ, ಕಾಲ್ಪನಿಕ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಸರಿಸುತ್ತ ಮತೀಯ ಉದ್ವೇಗ ಉಂಟು ಮಾಡುತ್ತಿರುವುದು ನಿಜವಾದರೂ, ಹಿಂಸಾತ್ಮಕ ದಾಳಿಗಳು ನಡೆಯುತ್ತಿರುವುದಂತೂ ವಾಸ್ತವ. ಅಲ್ ಜಝೀರದಂತಹ ಸ್ವತಂತ್ರ ಮಾಧ್ಯಮಗಳು ಹಿಂಸೆ ನಡೆದ ಸ್ಥಳಗಳಿಗೆ ಹೋಗಿ, ಹಿಂಸೆಗೆ ತುತ್ತಾದವರ ಜೊತೆ ಮಾತನಾಡಿ, ಮಾನವ ಹಕ್ಕು ಹೋರಾಟಗಾರರು, ತಜ್ಞರನ್ನು ಸಂದರ್ಶಿಸಿ ಪ್ರಕಟಿಸಿರುವ ವರದಿಗಳು ಹಿಂಸೆಯ ಆಳ ಅಗಲಗಳನ್ನು ನಿಚ್ಚಳವಾಗಿ ತೋರುತ್ತವೆ. ಈ ಹಿಂಸೆಗಳು ತಮ್ಮ ಸ್ವರೂಪದಲ್ಲಿ ಭಾರತದಲ್ಲಿ ಹಿಂದುತ್ವವಾದಿಗಳು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಹಿಂಸೆಯಷ್ಟೇ ಆತಂಕಕಾರಿಯಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
hassina
ಷೇಕ್ ಹಸೀನಾ

ಮೇಲ್ನೋಟಕ್ಕೆ, 2024ರ ಜೂನ್ ತಿಂಗಳಿಂದ ಪ್ರಾರಂಭವಾದ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಘಟನಾವಳಿಗಳಿಗೂ ಮತೀಯ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಗಳಿಗೂ ಇರುವ ಸಂಬಂಧವೇನು? ಎಂದು ಕೇಳಿದರೆ ಯಾರಿಗಾದರೂ ಅಚ್ಚರಿ ಉಂಟಾಗಬಹುದು. ಪದಚ್ಯುತರಾಗಿರುವ ಷೇಕ್ ಹಸೀನಾ ಅವರ ಆಡಳಿತವು ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದು, ‘ಹಿಂದೂ ಬಹುಸಂಖ್ಯಾತ ಸಮುದಾಯ’ವನ್ನು ಹೊಂದಿರುವ ಭಾರತದ ಪ್ರಭುತ್ವವು ಅವರ ಬೆಂಬಲಕ್ಕೆ ಇತ್ತು; ಷೇಕ್ ಹಸೀನಾ ಅವರ ಪಕ್ಷವಾದ ಆವಾಮಿ ಲೀಗ್ ‘ಅಲ್ಪಸಂಖ್ಯಾತರನ್ನು ಓಲೈಸುವ’, ಬಲಪಂಥೀಯರಿಗೆ ಅಪಥ್ಯವಾಗಿರುವ ‘ಜಾತ್ಯತೀತ ಸಂವಿಧಾನ ಆಧಾರಿತ’ ಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಪಕ್ಷವಾಗಿದೆ; ಹಸೀನಾ ಅವರ ಆಡಳಿತದ ವಿರುದ್ಧದ ಆಕ್ರೋಶವು ತಕ್ಷಣದ ಬಿಸಿಯಲ್ಲಿ ಅಲ್ಪಸಂಖ್ಯಾತರ ಮೇಲೆ ತಿರುಗಿದೆ ಎಂಬಂತಹ ಕಾರಣಗಳು ಮೇಲೆ ತೋರುವಂತಹವು ಮಾತ್ರವಾಗಿವೆ.

ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

ಬಾಂಗ್ಲಾದೇಶದಲ್ಲಿ ‘ಬಾಂಗ್ಲಾದೇಶ್ ಹಿಂದೂ ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್’ (BHBCUC) ಎಂಬ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಇದೆ; ಆ ವೇದಿಕೆಯ ವತಿಯಿಂದ ಹಿಂಸೆ ತಡೆಯಲು ಹಾಗೂ ಅಲ್ಪಸಂಖ್ಯಾತರಿಗೆ ಸಾಂವಿಧಾನಿಕ ಕಾನೂನು ರಕ್ಷಣೆ ಒದಗಿಸಲು ಆಗ್ರಹಿಸಿ ಪ್ರದರ್ಶನಗಳು ನಡೆದಿವೆ. ಆದರೆ, ಇದರಷ್ಟೇ ಹಳೆಯದಾದ, ಭಾರತದ ಹಿಂದುತ್ವವಾದಿಗಳ ಪ್ರಭಾವವಿರುವ ‘ಬಾಂಗ್ಲಾದೇಶ್ ಹಿಂದೂ ಜೋಯಿತೊ ಮಹಜೋತ್’ (BHJM) ಎಂಬ ಸಂಘಟನೆಯೂ ಅದರಡಿ ಯುವ, ವಿದ್ಯಾರ್ಥಿ ಸಂಘಟನೆಗಳೂ ಕಾರ್ಯನಿರ್ವಹಿಸುತ್ತಿವೆ. ಈ ಸಂಘಟನೆಗಳ ವತಿಯಿಂದ ಪ್ರಸ್ತುತ ವಿದ್ಯಮಾನಗಳ ನಂತರ ‘ಬಾಂಗ್ಲಾದೇಶ್ ಹಿಂದೂ ಜಾಗರಣ್ ಮಂಚ್’ (BHJM) ಎಂಬ ವೇದಿಕೆಯೂ ಹುಟ್ಟಿಕೊಂಡಿದ್ದು, ಅದರ ಕೆಲವು ಮುಂದಾಳುಗಳು ಬಹಿರಂಗವಾಗಿ ಭಾರತದ ಹಿಂದುತ್ವವಾದಿ ಸಂಘಟನೆಗಳ ಸಂಪರ್ಕದಲ್ಲಿ ಇದ್ದು ಕಾರ್ಯಾಚರಿಸುತ್ತಿದ್ದ ಕಾರಣವಾಗಿ, ಅಂಥವರನ್ನು ವೇದಿಕೆಯಿಂದ ಹೊರಗಿಟ್ಟಾಕ್ಷಣ, ಆ ಬಣವು ‘ಸನಾತನ್ ಜಾಗರಣಾ ಮಂಚ್’ ಎಂಬ ವೇದಿಕೆ ಸ್ಥಾಪಿಸಿಕೊಂಡಿದೆ- ಅವರ ಪ್ರದರ್ಶನಗಳಲ್ಲಿ ಹಿಂದುತ್ವವಾದಿ ಬಾವುಟ,ಘೋಷಣೆಗಳು ಕಾಣಿಸಿಕೊಳ್ಳುತ್ತಿವೆ. ಈ ಬೆಳವಣಿಗೆಗಳಿಂದ ತಮ್ಮ ಮೇಲೆ ಮತ್ತಷ್ಟೂ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಹಿಂಸೆಗೆ ತುತ್ತಾದ ಸಂತ್ರಸ್ತ ಹಿಂದೂ ಮತದ ಜನರು ಭಯ ವ್ಯಕ್ತಪಡಿಸುತ್ತಿದ್ದಾರೆ.

Jamathe islami2
2023ರ ಅಕ್ಟೋಬರ್ 28ರಂದು ಬಾಂಗ್ಲಾದೇಶದ ಢಾಕಾದಲ್ಲಿ ಜಮಾತ್-ಎ-ಇಸ್ಲಾಮಿ ಬೆಂಬಲಿಗರು ನಡೆಸಿದ ಬೃಹತ್ ಹೋರಾಟ

ಜನಸಂಖ್ಯೆಯಲ್ಲಿ ಶೇ.90ರಷ್ಟಿರುವ ಮುಸ್ಲಿಮರ ಮೇಲೆ ಮತೀಯವಾದಿ ಪಕ್ಷವಾದ ‘ಬಾಂಗ್ಲಾದೇಶ್ ಜಮಾತ್-ಎ- ಇಸ್ಲಾಮಿ’ (BJI) ಮತ್ತು ಅದರ ವಿದ್ಯಾರ್ಥಿ ಸಂಘಟನೆಯಾದ ‘ಇಸ್ಲಾಮಿಕ್ ಛಾತ್ರ ಶಿಬಿರ್’ಗಳ ಪ್ರಭಾವವು ಹೆಚ್ಚುತ್ತಿರುವುದು ವರದಿಯಾಗುತ್ತಿದೆ. ಇದಲ್ಲದೆ, ‘ಜಮಾತ್-ಉಲ್-ಮಜ್ಹಾಹಿದೀನ್-ಬಾಂಗ್ಲಾದೇಶ್’ ಮತ್ತು ‘ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿಕ್ ಬಾಂಗ್ಲಾದೇಶ್’ ಎಂಬ ತೀವ್ರವಾದಿ ಸಂಘಟನೆಗಳು 2009ರಿಂದ ದೇಶದಲ್ಲಿ ಬೇರೂರಿವೆ. ಸಾಮಾನ್ಯ ಜನರ ಮೇಲೆ ಈ ಸಂಘಟನೆಗಳ ಪ್ರಭಾವವು ಕಾಣಿಸಿಕೊಳ್ಳುತ್ತಿದ್ದ ಹಾಗೆಯೇ, ದೇಶದ  ಪ್ರಮುಖ ರಾಜಕೀಯ ಪಕ್ಷವಾದ ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ (BNP)ಯು 1996ರಿಂದಲೇ BJI ಹಾಗೂ ಮತ್ತೊಂದು ಇಸ್ಲಾಮಿ ಪಕ್ಷವಾದ ‘ಜಾತೀಯ ಪಕ್ಷ’ (JP) ಗಳ ಜೊತೆ ಮೈತ್ರಿ ಒಕ್ಕೂಟ ರಚಿಸಿಕೊಂಡಿದೆ.

1971ರ ಬಾಂಗ್ಲಾದೇಶದ ವಿಮೋಚನಾ ಸಮರದ ನೇತೃತ್ವ ವಹಿಸಿ, ‘ಮುಕ್ತಿವಾಹಿನಿ’ ಎಂಬ ಸಶಸ್ತ್ರ ಪಡೆ ಕಟ್ಟಿ, ಅಪಾರವಾದ ಹಿಂಸೆಯನ್ನು ಎದುರಿಸಿ, ಪಶ್ಚಿಮ ಪಾಕಿಸ್ತಾನದಿಂದ ಸ್ವತಂತ್ರಗೊಂಡ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರಲು ಕಾರಣವಾದ ‘ಆವಾಮಿ ಲೀಗ್’ (AL) ಪಕ್ಷವು  ‘ಜಾತ್ಯತೀತತೆ, ಪ್ರಜಾಪ್ರಭುತ್ವ ಹಾಗೂ ಸಮಾಜವಾದ’ದ ಧ್ಯೇಯಗಳನ್ನು ಇಟ್ಟುಕೊಂಡು 1949ರಲ್ಲಿ ರಚನೆ ಆಗಿರುವಂಥದ್ದು. ಅಂತಹ ಪಕ್ಷದ ವಾರಾಸುದಾರಿಕೆ ಪಡೆದ ಷೇಕ್ ಹಸೀನಾ ಅವರು ನಿಧಾನಕ್ಕೆ ಮೃದು ಇಸ್ಲಾಮಿಕ್ ನಿಲುವುಗಳಿಗೆ ಒಗ್ಗುವ ರಾಜಕೀಯ ನಡೆಗಳನ್ನು ಅನುಸರಿಸುವುದು ಕಂಡು ಬರುತ್ತದೆ. 2007ರಿಂದ ಅವ್ಯಹತವಾಗಿ 15 ವರ್ಷ ಅಧಿಕಾರದಲ್ಲಿದ್ದ ಷೇಕ್ ಹಸೀನಾ ಅವರ ಆಡಳಿತಾವಧಿಯಲ್ಲಿ, ಮುಖ್ಯವಾಗಿ 2018-22ರ ಕಾಲದಲ್ಲಿ, ಅಲ್ಪಸಂಖ್ಯಾತರ ಮೇಲೆ ನಿರಂತರ ಹಿಂಸೆ ನಡೆದಿರುವುದನ್ನು ಮಾನವ ಹಕ್ಕು ಸಂಘಟನೆಗಳು ವರದಿ ಮಾಡಿವೆ.

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಇದು ಯಾಕೆ ಹೀಗಾಗುತ್ತದೆ? ಇದಕ್ಕೆ ಪರಿಹಾರವೇನು? ಎಂಬ ಸಮಸ್ಯೆ ಬರೀ ಬಾಂಗ್ಲಾದೇಶಕ್ಕಷ್ಟೇ ಪ್ರಸ್ತುತವಾದುದಲ್ಲ. ಬಾಂಗ್ಲಾದೇಶದಲ್ಲಿ ಇಂದು ನಡೆಯುತ್ತಿರುವ ವಿದ್ಯಮಾನಗಳ ಬೇರುಗಳು ಶತಮಾನಗಳ ದಕ್ಷಿಣ ಏಷ್ಯಾದ ಚರಿತ್ರೆಯಲ್ಲಿದೆ; ಹಲವು ಚಹರೆ (ಅಸ್ಮಿತೆ/ಐಡೆಂಟಿಟಿ)ಗಳ ಗೋಜಲಾದ ಹೆಣಿಗೆಯಲ್ಲಿದೆ. ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್ ದೇಶಗಳು ಇದರಲ್ಲಾಗಲೇ ಬೆಂದು ಹೋಗಿವೆ. ಬಾಂಗ್ಲಾದ ಇಂದಿನ ವರ್ತಮಾನವು ಭಾರತದ ಭವಿಷ್ಯತ್ತಿಗೆ ಹಿಡಿದ ಕನ್ನಡಿಯಾಗಿದೆ.

ಹಲವು ಚಹರೆಗಳ ಚರಿತ್ರೆ

ಈಗಿನ ಬಾಂಗ್ಲಾದೇಶವು ನಮ್ಮ ದಕ್ಷಿಣ ಏಷ್ಯಾ ಉಪಖಂಡದ ಭಾಗವಾದ ಪೂರ್ವ ಬಂಗಾಳ. ಅಲ್ಲಿನ ಮೂಲ ನಿವಾಸಿಗಳು ಆದಿವಾಸಿ ಬುಡಕಟ್ಟುಗಳಿಗೆ ಸೇರಿದ, ಜಂಗಮ ಕೃಷಿಕರಾಗಿದ್ದವರು. ವೈದಿಕ ಆರ್ಯರು ಈ ಭೂಭಾಗದ ಸಂಪರ್ಕಕ್ಕೆ ಬಂದಾಗ, ಇವರನ್ನು ಕ್ಷುದ್ರ ದೇವತಾರಾಧನೆಯ ಬರ್ಬರ ಕಾಡುಜನರನ್ನಾಗಿ ಕಂಡರು; ತಮ್ಮ ವರ್ಣ-ಜಾತಿ ವ್ಯವಸ್ಥೆಯನ್ನೂ, ವೈದಿಕ ಆಚರಣೆಗಳನ್ನು ಪರಿಚಯಿಸುವುದರ ಜೊತೆಗೆ ಸ್ಥಿರ ಕೃಷಿಯ ಕಸುಬನ್ನೂ ಕಲಿಸಿದರು. ವೈದಿಕ ಹಿಂದೂಗಳು ಜಮೀನು ವಿಸ್ತರಿಸಿಕೊಂಡು ಭೂಮಾಲಿಕರಾಗಿ ಪಶ್ಚಿಮ ಬಂಗಾಳದಲ್ಲಿ ನೆಲೆ ನಿಂತರು. ಪೂರ್ವ ಬಂಗಾಳದ ಬುಡಕಟ್ಟು ಜನರು ತಮ್ಮ ಬುಡಕಟ್ಟು ಆಚರಣೆಗಳೊಟ್ಟಿಗೆ ವೈದಿಕರ ಆಚರಣೆಗಳನ್ನು ಮಿಳಿತಗೊಳಿಸಿಕೊಂಡರು; ಸಂಸ್ಕೃತ ಮೂಲದ ಬಂಗಾಳಿ ಭಾಷೆಯನ್ನು ಒಗ್ಗಿಸಿಕೊಂಡರು; ಹಲವು ಭಕ್ತಿಪಂಥಗಳ ಪ್ರಭಾವಕ್ಕೆ ಒಳಗಾದರು. 12ನೇ ಶತಮಾನದ ನಂತರದಲ್ಲಿ ಮೊಘಲ್ ಅರಸರ ಕಾಲದಲ್ಲಿ ಪರ್ಶಿಯ-ಅರಬ್ಬಿ ಸಂಸ್ಕೃತಿ, ಇಸ್ಲಾಮ್ ಮತಗಳು ಅಲ್ಲಿ‌ ಪ್ರವೇಶಿಸಿದವು; ಜಾತಿ-ವರ್ಣ ಶ್ರೇಣೀಕರಣಗಳಿಲ್ಲದ ಒಳಗೊಳ್ಳುವಿಕೆಯ ಕಾರಣವಾಗಿ ಇಸ್ಲಾಮ್ ಮತ ಅಲ್ಲಿ ಹೆಚ್ಚು ನೆಲೆ ಕಂಡುಕೊಂಡಿತು; ಮುಖ್ಯವಾಗಿ ಸೂಫಿ ಪರಂಪರೆಯ ಇಸ್ಲಾಮ್ ಮತ ಪ್ರಸಾರದ ಮಾದರಿಯಿಂದಾಗಿ ಪೂರ್ವ ಬಂಗಾಳದ ಬುಡಕಟ್ಟುಗಳಿಗೆ ತಮ್ಮ ಮೂಲ ಆಚರಣೆಗಳನ್ನು ಬಿಟ್ಟುಕೊಡದೆ, ವೈದಿಕ ಸಂಸ್ಕೃತಿಯ ಪ್ರಭಾವಗಳನ್ನು ವಿಸರ್ಜಿಸಿಕೊಳ್ಳದೆ ಇಸ್ಲಾಮ್ ಮತವನ್ನು ಅನುಸರಿಸುವುದಕ್ಕೂ ಅವಕಾಶ ಮಾಡಿಕೊಟ್ಟಿತು. 19ನೇ ಶತಮಾನದ ಕೊನೆಯ ಹೊತ್ತಿಗೆ ಪೂರ್ವ ಬಂಗಾಳವು ಬುಡಕಟ್ಟು-ವೈದಿಕ-ಇಸ್ಲಾಮ್ ಸಂಸ್ಕೃತಿಗಳ ಸಂಕರ ಸಮ್ಮಿಲನದ ಮುಸ್ಲಿಮ್ ಸಮುದಾಯದ ತಾಣವಾಗಿ ರೂಪ ಪಡೆದಿತ್ತು- ಅಲ್ಲಿ ಇಂಥದ್ದೇ ಮತದ ಚಹರೆಯನ್ನು ಹೊಂದುವ ಜರೂರು ಇಲ್ಲದ ಸಂಕರ ಮತ ಚಹರೆಯ ವಿಶಿಷ್ಟ ಸಮುದಾಯ ನೆಲೆಗೊಂಡಿತ್ತು. 19ನೇ ಶತಮಾನದ ಕೊನೆಯ ದಶಕಗಳಲ್ಲಿ ಇಡೀ ದಕ್ಷಿಣ ಏಷಿಯಾದಲ್ಲಿ, ನಿರ್ದಿಷ್ಟ ಮತಕ್ಕೆ ಕಟ್ಟು ಬೀಳುವ ಗರಜಿಲ್ಲದ ಸಮುದಾಯ ಜೀವನವಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಸಮಸ್ಯೆ ಶುರುವಾದದ್ದು, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದಲ್ಲಿ. ಬ್ರಿಟೀಷ್ ವಸಾಹತುಶಾಹಿ ಪ್ರಭುತ್ವ ಸ್ಥಾಪನೆಯಾಗಿ, ಆಡಳಿತವನ್ನು ಬಿಗಿ ಹಿಡಿತದಲ್ಲಿ ಇಟ್ಟುಕೊಳ್ಳಲು, ಜನರನ್ನು ಅಚ್ಚುಕಟ್ಟಾದ ಮತೀಯ ಚಹರೆಗಳಲ್ಲಿ ವಿಂಗಡಿಸಿ, ಆ ಚಹರೆಗಳಿಗೆ ಅನುಗುಣವಾಗಿ ಸವಲತ್ತು ಹಂಚುವ ಕ್ರೂರ ರಾಜಕೀಯ ನಡೆಸತೊಡಗಿದ ನಂತರ. ವೈವಿಧ್ಯಮಯವಾದ ಜೀವನಕ್ರಮಗಳನ್ನು ಹಿಂದೂ, ಮುಸ್ಲಿಮ್ ಮತ ಅನುಯಾಯಿಗಳ ಆಚರಣೆಯ ಸೂತ್ರಗಳ ಆಧಾರದಲ್ಲಿ ವಿಗಂಡಿಸಿ, ಮತೀಯ ಚಹರೆಗಳನ್ನು ಸಾಮಾಜಿಕ ರಾಜಕೀಯದಲ್ಲಿ ಸಹಜಗೊಳಿಸುವ ಕೆಲಸವು 1872ರ ಜನಗಣತಿಯ ಮೂಲಕ ಶುರು ಮಾಡಲಾಯಿತು. 20ನೇ ಶತಮಾನದ ಎರಡನೇ ದಶಕಕ್ಕೆ ಬರುವ ಹೊತ್ತಿಗೆ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಿ ಚಹರೆಗಳನ್ನು ಪ್ರಚುರಪಡಿಸಿ, ರಾಜಕೀಯ-ಸಾಮಾಜಿಕ ರಾಜಕೀಯ ಅಧಿಕಾರಕ್ಕೆ ಸಂಘರ್ಷಿಸುವ ವಾತಾವರಣ ನಿರ್ಮಾಣವಾಯಿತು. ವಸಾಹತುಶಾಹಿ ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರ, ನಿರ್ಮಾಣ ಮಾಡಬೇಕಾದ ನವರಾಷ್ಟ್ರದ ಸ್ವರೂಪದ ಮೇಲೆ ಮತೀಯವಾದಿ ಚಹರೆಯ ರಾಜಕಾರಣವು ಪ್ರಭಾವ ಬೀರತೊಡಗಿತು. ‘ಹಿಂದುತ್ವ ರಾಷ್ಟ್ರೀಯವಾದ’ವು ಮುಖ್ಯ ನೆಲೆಗೆ ಬರುತ್ತಿದ್ದಂತೆ, ಅಲ್ಪಸಂಖ್ಯಾತವಾದರೂ ಗಣನೀಯ ಜನ ಸಂಖ್ಯೆಯನ್ನುಳ್ಳ ಮುಸ್ಲಿಮ್  ಸಮುದಾಯದಲ್ಲಿ ‘ಇಸ್ಲಾಮ್ ರಾಷ್ಟ್ರವಾದ’ವು ಪ್ರಭಾವಶಾಲಿಯಾಗತೊಡಗಿತು. ಪರಿಣಾಮವಾಗಿ 1947ರಲ್ಲಿ ಹಿಂಸಾತ್ಮಕವಾಗಿ ಉಪಖಂಡವು ‘ಎರಡು ರಾಷ್ಟ್ರ’ಗಳಾಗಿ ವಿಭಜನೆಗೊಂಡಿತು. ‘ಏಕೀಕೃತ ಇಸ್ಲಾಮ್ ಮತ’ದ ಪರಿಕಲ್ಪನೆಯು ಉಪಖಂಡದ ಮುಸ್ಲಿಮ್ ಸಮುದಾಯದ ಒಳಗಡೆ ಇದ್ದ ವೈವಿಧ್ಯ ಆಚರಣೆಗಳನ್ನು ಒರೆಸಿ ಹಾಕಿತು. ವಸಾಹತುಶಾಹಿಯು ಸಾಧಾರಣೀಕರಿಸಿ ವರ್ಗೀಕರಣ ಮಾಡಿದ ಇಸ್ಲಾಮ್ ಮತದ ಗುಣಲಕ್ಷಣಗಳಿಗಿಂತ ಭಿನ್ನವಾದ ಸಾಮಾಜಿಕ-ಸಾಂಸ್ಕೃತಿಕ ಗುಣ‌ಲಕ್ಷಣಗಳನ್ನುಳ್ಳ ಪೂರ್ವ ಬಂಗಾಲದ ಮುಸ್ಲಿಮ್ ಬಾಹುಳ್ಯದ ಪ್ರದೇಶವನ್ನು ‘ಇಸ್ಲಾಮಿ ಪಾಕಿಸ್ತಾನ ದೇಶ’ದ ಭಾಗ ಮಾಡಲಾಯಿತು. ವಸಾಹತುಶಾಹಿ ವಿರೋಧಿ ರಾಜಕೀಯ ಹೋರಾಟದಲ್ಲಿ ಭಾಗವಹಿಸಿದ್ದ ಪೂರ್ವ ಬಂಗಾಳದ ಸುಶಿಕ್ಷಿತ ವರ್ಗವು ಉಪಖಂಡದ ಇತರೆಡೆಗಳ ಮುಸ್ಲಿಮ್ ಸುಶಿಕ್ಷಿತ ರಾಜಕೀಯ ಬಣಗಳಿಗಿಂತ ಭಿನ್ನ ಗುಣಲಕ್ಷಣಗಳನ್ನು ಹೊಂದಿತ್ತು. ಒಂದನೇಯದಾಗಿ ಆ ವರ್ಗವು ಸಂಕರ ಸಂಸ್ಕೃತಿ ರೂಢಿಸಿಕೊಂಡಿದ್ದ ಬುಡಕಟ್ಟು ಮುಸ್ಲಿಮ್ ಸಮುದಾಯಗಳಿಗೆ ಸೇರಿದವರಾಗಿದ್ದು, ಕೃಷಿ ಕಸುಬಿನ ಆದಾಯದ ಮೂಲಕ ಸಿರಿವಂತಿಕೆಯನ್ನೂ, ಬಂಗಾಳಿ-ಇಂಗ್ಲೀಷ್ ಶಿಕ್ಷಣವನ್ನೂ ಪಡೆದ ‘ಜೋತೆದಾರ್’/ ‘ತಾಲೂಕದಾರ್’ಗಳಾಗಿದ್ದರು; ಅವರು ತಮ್ಮದು ‘ಬಂಗಾಳಿ ರಾಷ್ಟ್ರೀಯತೆ’ ಎಂದು ಗುರುತಿಸಿಕೊಳ್ಳುತ್ತಿದ್ದರೇ ಹೊರತು ‘ಇಸ್ಲಾಮಿ ರಾಷ್ಟ್ರೀಯತೆ’ ಎಂದಲ್ಲ. ಮುಸ್ಲಿಮ್ ಮತದ ಆಧಾರದ ಮೇಲೆ, ಪೂರ್ವ ಬಂಗಾಳವನ್ನು ಸೇರಿಸಿಕೊಂಡ ‘ಪಾಕಿಸ್ತಾನ ರಾಷ್ಟ್ರ’ ನಿರ್ಮಾಣವಾದ ಹೊಸತಿನಲ್ಲೇ ಈ ವೈರುಧ್ಯವು ಕಾಣಿಸಿಕೊಳ್ಳ ತೊಡಗಿತು.

bangal 1947
1947ರಲ್ಲಿ ದೇಶ ವಿಭಜನೆಯ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನ

ಪಶ್ಚಿಮ ಪಾಕಿಸ್ತಾನದಲ್ಲಿ ಇಸ್ಲಾಮ್ ರಾಷ್ಟ್ರವಾದಿ ಮುಸ್ಲಿಮ್ ಲೀಗ್, ಪಾಕಿಸ್ತಾನ್ ಜಮಾತ್-ಎ-ಇಸ್ಲಾಮಿ ಪಕ್ಷಗಳು ಪ್ರಬಲವಾಗಿದ್ದರೆ, ಪೂರ್ವಬಂಗಾಲದಲ್ಲಿ ಬಂಗಾಲಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ‘ಪೂರ್ವ ಪಾಕಿಸ್ತಾನ್ ಅವಾಮಿ ಲೀಗ್’ ಪಕ್ಷವು 1949ರಲ್ಲಿ ಹುಟ್ಟಿಕೊಂಡಿತು; ‘ಜಾತ್ಯತೀತ ಸಮಾಜವಾದಿ ಪ್ರಜಾಪ್ರಭುತ್ವ’ವನ್ನು  ಅವಾಮಿ ಲೀಗ್ ಪ್ರತಿಪಾದಿಸುತ್ತಿತ್ತು. ಸಂವಿಧಾನ ರಚನೆಯಾಗಿ, ಅದರ ಅನ್ವಯ ಪ್ರಜಾಪ್ರಭುತ್ವ ಮಾದರಿಯ ಚುನಾವಣೆಗಳು ನಡೆದು ಹೊಸ ಪ್ರಭುತ್ವವು ರಚನೆಯಾಗುವ ಮುನ್ನವೇ ಪಾಕಿಸ್ತಾನದಲ್ಲಿ ಮಿಲಿಟರಿ ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆಯಾಯಿತು. ಜನಸಂಖ್ಯಾ ಬಾಹುಳ್ಯ ಹಾಗೂ ರಾಷ್ಟ್ರೀಯ ಸಂಪತ್ತಿನ ಉತ್ಪಾದನೆಯಲ್ಲಿ ಪೂರ್ವ ಪಾಕಿಸ್ತಾನವಾಗಿದ್ದ ಪೂರ್ವ ಬಂಗಾಳವೇ ಪ್ರಬಲವಾಗಿದ್ದರೂ, ಸಂಪತ್ತಿನ ಹಂಚಿಕೆಯಲ್ಲಿ ಸಿಂಹಪಾಲನ್ನು ಪಶ್ಚಿಮ ಪಾಕಿಸ್ತಾನವು ತನ್ನದಾಗಿಸಿಕೊಳ್ಳುತ್ತಿತ್ತು ಮತ್ತು ರಾಜಕೀಯ ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿತ್ತು. ಶಿಕ್ಷಣದಲ್ಲಿ ಬಂಗಾಳಿ ಭಾಷೆಯನ್ನು ಅವಗಣಿಸಿ ಉರ್ದುವನ್ನು ಹೇರಿದ್ದು ಪೂರ್ವ ಪಾಕಿಸ್ತಾನದಲ್ಲಿ ಅಸಂತುಷ್ಟಿಯನ್ನು ಹೆಚ್ಚಿಸಿತು. ಅವಾಮಿ ‌ಲೀಗ್ ಪೂರ್ವ ಪಾಕಿಸ್ತಾನಕ್ಕೆ ಸ್ವಾಯತ್ತ ಆಡಳಿತ, ಹಣಕಾಸು ನಿರ್ವಣೆಯ ಸ್ವಾತಂತ್ರ್ಯಗಳನ್ನು ಬೇಡುವ ಚಳವಳಿ ನಡೆಸತೊಡಗಿತು. ಕೊನೆಗೆ 1970ರ ಡಿಸೆಂಬರಿನಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದು, ಅವಾಮಿ ‌ಲೀಗ್ 317 ಸ್ಥಾನಗಳಲ್ಲಿ 167 ಸ್ಥಾನಗಳನ್ನು ಪಡೆದು ಸರಕಾರ ರಚಿಸುವ ಹಕ್ಕು ಪಡೆಯಿತು. ಆದರೆ, ಮಿಲಿಟರಿ ಸರ್ವಾಧಿಕಾರವು ಅವಾಮಿ‌ ಲೀಗ್‌ಗೆ ಸರಕಾರ ರಚಿಸುವ ಅವಕಾಶವನ್ನು ನಿರಾಕರಿಸಿದಾಗ, ಪೂರ್ವ ಭಾಗದಲ್ಲಿ ಆಕ್ರಮಣಕಾರಿ ಜನಾಂದೋಲನವು ನಡೆಯತೊಡಗಿತು. ಇದನ್ನು ಬಗ್ಗು ಬಡಿಯಲು ಪಾಕಿಸ್ತಾನದ ಮಿಲಿಟರಿ ಬಲ‌ ಪ್ರಯೋಗಿಸಿ ಭಯಂಕರ ಹಿಂಸೆ ನಡೆಸತೊಡಗಿತು. ಮಿಲಿಟರಿ ಆಕ್ರಮಣದಲ್ಲಿ 3ರಿಂದ 30ಲಕ್ಷ ಜನರನ್ನು ಕೊಲೆಗೈಯಲಾಯಿತು ಎಂಬ ಅಂದಾಜಿದೆ; ಲಕ್ಷಾಂತರ ಸಂಖ್ಯೆಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಅವಾಮಿ ಲೀಗ್, ಪೂರ್ವ ಪಾಕಿಸ್ತಾನದ ಸೈನಿಕರು ಹಾಗೂ ಮುಕ್ತಿವಾಹಿನಿ ಎಂಬ ಸಶಸ್ತ್ರ ನಾಗರಿಕ ಪಡೆಗಳು ಒಂದಾಗಿ ಈ ಅಕ್ರಮಣವನ್ನು ಎದುರಿಸತೊಡಗಿದವು; ಕೊನೆಗೆ 1971ರ ಡಿಸೆಂಬರ್ ತಿಂಗಳಲ್ಲಿ ಭಾರತದ ಸೇನೆಯ ಮಧ್ಯಪ್ರವೇಶದ ನಂತರ, ಪಾಕಿಸ್ತಾನ ಸೇನೆಯು ಶರಣಾಗತವಾಗಿ, ಪೂರ್ವ ಪಾಕಿಸ್ತಾನವು ವಿಮೋಚನೆಗೊಂಡು, ಬಾಂಗ್ಲಾದೇಶದ ಉದಯವಾಯಿತು. ಈ ವಿಮೋಚನಾ ಸಮರವು ‘ಮತೀಯ ರಾಷ್ಟ್ರೀಯವಾದ’ದ ಅವಾಸ್ತವಿಕತೆ ಹಾಗೂ ‘ಭೂಗೋಳ ವಿಶಿಷ್ಟ ಸಾಂಸ್ಕೃತಿಕ ರಾಷ್ಟ್ರಿಯತೆ’ಯ ಹರಳುಗಟ್ಟುವಿಕೆಯ ಚಾರಿತ್ರಿಕ ಉದಾಹರಣೆ ಎನ್ನಲಾಗುತ್ತದೆ; ಇಂತಹ ರಾಷ್ಟ್ರೀಯತೆಯ ಪರಿಕಲ್ಪನೆಗೆ ‘ಜಾತ್ಯತೀತ ಸಮತಾವಾದಿ’ ಪ್ರಜಾಪ್ರಭುತ್ವವು ಅಡಿಗಲ್ಲಾಗಿರುತ್ತದೆ ಎಂದೂ ನಿರೂಪಿಸಬಹುದಾಗಿದೆ.

ಇದನ್ನೂ ಓದಿರಿ: ನಾವು ಹಿಂದೂಗಳಷ್ಟೇ, ಕಾಂಗ್ರೆಸ್-ಬಿಜೆಪಿ ನಂತರದ ಮಾತು; ಮುಸ್ಲಿಂ ಭಯದ ಅಗ್ನಿಕುಂಡವಾದ ‘ಹಿಮಾಚಲ’

ಬಾಂಗ್ಲಾ ವಿಮೋಚನೆಯ ಆದರ್ಶಗಳು ನೀರಾಗಿದ್ದು ಯಾಕೆ?

1972ರ ಹೊತ್ತಿಗೆ ಪೂರ್ವ ಬಂಗಾಲದಲ್ಲಿ ಇಸ್ಲಾಮ್ ಮತಾನುಯಾಯಿಗಳು ಬಹುಸಂಖ್ಯಾತರಾಗಿದ್ದೂ, ಮತಾಧಾರದ ರಾಷ್ಟ್ರೀಯತೆಯನ್ನು ಧಿಕ್ಕರಿಸಿದರು ಮತ್ತು ಲೌಕಿಕ ಸಮಾನತೆ ಹಾಗೂ ಸುಖಿ ಸಮಾಜ ಜೀವನಕ್ಕೆ ಅವಕಾಶ ಕಲ್ಪಿಸುವ ರಾಜಕೀಯ ಹೋರಾಟವನ್ನು, ಊಹಿಸಲಾಗದಷ್ಟು ಅಪಾರ ಹಿಂಸೆಯನ್ನುಂಡು ಬೆಂಬಲಿಸಿದರು; ಪೂರ್ವ ಬಂಗಾಲದ ಇಸ್ಲಾಮ್ ಪುರೋಹಿತ ವರ್ಗವೂ ಪರಮತ ದ್ವೇಷಿಗಳಾಗಿರಲಿಲ್ಲ; ಇಸ್ಲಾಮ್ ಮೂಲಭೂತವಾದಿ ರಾಜಕೀಯ ಬಣಗಳು ಇದ್ದರೂ, 25 ವರ್ಷಗಳ ಮತೀಯ ರಾಷ್ಟ್ರಾಧಿಕಾರ ಚಲಾವಣೆಯ ನಂತರವೂ ಅವರ ಸಾಮಾಜಿಕ ಅಧಿಕಾರವು ನಗಣ್ಯವಾಗಿತ್ತು. ಇಷ್ಟಾಗಿಯೂ ನಂತರದ 50 ವರ್ಷಗಳಲ್ಲಿ, (ಸಮಾಜವಾದಿಯಲ್ಲದಿದ್ದರೂ) ಜಾತ್ಯತೀತ ಜನಕಲ್ಯಾಣ ಪ್ರಜಾಪ್ರಭುತ್ವವು ಬಾಂಗ್ಲಾದೇಶದಲ್ಲಿ ಯಾಕೆ ರೂಢಿಗೆ ಬರಲಿಲ್ಲ? ಮತೀಯವಾದಿ ಸ್ವರೂಪದ ‘ಬಾಂಗ್ಲಾದೇಶಿ ರಾಷ್ಟ್ರೀಯತೆ’ಯು ಯಾಕೆ ತಳವೂರಿ ಹಬ್ಬಿತು?ಯಾಕೆ ಮತೀಯ ಹಿಂಸಾ ಭಾವವು 75 ವರ್ಷಗಳ ಹಿಂದಿನ ವಿಭಜನೆಯ ಕಾಲದ ಕರಾಳ ರೂಪವನ್ನು ಧರಿಸಲು ಅಣಿಯಾಗುತ್ತಿದೆ?

ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಬಹುದು

(1) ಬಾಂಗ್ಲಾ ವಿಮೋಚನೆಯ ಮುಂಚೂಣಿ ಪಕ್ಷವಾಗಿದ್ದ ಅವಾಮಿ ಲೀಗ್ ಪಕ್ಷವು, ವಸಾಹತುಶಾಹಿ ವಿರೋಧದ ಜಾಗತಿಕ ಅಲೆಯ ಕಾಲದಲ್ಲಿ ರೂಪ ಪಡೆದ ಬಂಗಾಳಿ ಸುಶಿಕ್ಷಿತ ವರ್ಗದ ಪಕ್ಷವಾಗಿತ್ತು. ಆ ಕಾಲದ ಪ್ರಗತಿಪರ ಜನಕಲ್ಯಾಣ ಪ್ರಜಾಪ್ರಭುತ್ವದ ಧ್ಯೇಯೋದ್ದೇಶಗಳನ್ನು ಹೊಂದಿದ್ದುರಾ ಜೊತೆಗೆ, ಹಲವು ನಮೂನೆಗಳ ಸಮಾಜವಾದಿ ಕ್ರಾಂತಿಕಾರಿಗಳನ್ನು ಒಳಗೊಂಡ ಪಕ್ಷವೂ ಆಗಿತ್ತು. ದೇಶ ವಿಮೋಚನೆ ಆದದ್ದೇ, ಸಮಾಜವಾದಿ ಕ್ರಾಂತಿಕಾರಿ ಬಣಗಳು, ಅಧಿಕಾರಸ್ಥವಾದ ಪಕ್ಷಕ್ಕೆ ಭಿನ್ನಮತೀಯವಾದ ಚಳವಳಿ/ಪಕ್ಷಗಳಾಗಿ ಹೊಮ್ಮಿದವು; ಬಾಂಗ್ಲಾದ ತಳವರ್ಗಗಳ ಉನ್ನತ್ತಿ ಹಾಗೂ ಕ್ರಾಂತಿಕಾರಿ ಪ್ರಜಾಪ್ರಭುತ್ವ ಕಾರ್ಯಸೂಚಿಗಳ ಜಾರಿಗಾಗಿ ಜನ ಚಳವಳಿ ಸಂಘಟಿಸತೊಡಗಿದವು. ಆವಾಮಿ ಲೀಗಿನ ವರ್ಚಸ್ವಿ ನೇತಾರರಾಗಿದ್ದು, ‘ಬಂಗ ಬಂಧು’ವೆಂದೇ ಪ್ರಸಿದ್ಧಿ ಪಡೆದಿದ್ದ ಪ್ರಧಾನ ಮಂತ್ರಿ ಷೇಕ್ ಮುಜೀಬುರ್ ರೆಹಮಾನ್ ಅವರು ಈ ಭಿನ್ನಮತೀಯ ಚಳವಳಿಗಳನ್ನು ದೇಶದ ಸ್ಥಿರತೆಗೆ ಅಪಾಯಕಾರಿ ಎಂದು ಭಾವಿಸಿ, ಆ ಚಳವಳಿಗಳ ನಾಯಕರನ್ನು ಮಟ್ಟ ಹಾಕಲು  ಸರ್ವಾಧಿಕಾರಿ ಕ್ರಮಗಳನ್ನು ಜರುಗಿಸತೊಡಗಿದರು. ಚಾರಿತ್ರಿಕ ವಿಮೋಚನಾ ಸಮರದಲ್ಲಿ ಸಂಗಾತಿಗಳಾಗಿದ್ದ ಪಕ್ಷದ ಭಿನ್ನಮತೀಯ ನಾಯಕರನ್ನೂ ಅವರು ಸಹಿಸಿಕೊಳ್ಳದೆ ಬಾಯ್ಮುಚ್ಚಿಸತೊಡಗಿದರು. ಅವಾಮಿ ಲೀಗ್, ತಳ ಮಟ್ಟದ ಸಶಕ್ತ ಪ್ರಜಾಪ್ರಭುತ್ವವಾದಿ ನಾಯಕರು-ಕಾರ್ಯಕರ್ತರ ವಿಶಾಲ ಪಕ್ಷವಾಗದೆ, ಮುಜಿಬ್ ವ್ಯಕ್ತಿ ವರ್ಚಸ್ಸಿನ ಸರ್ವಾಧಿಕಾರಿ ಪಕ್ಷವಾಗತೊಡಗಿತು. ಈ ಬೆಳವಣಿಗೆಯು ಜೀವಂತವಾದ ಪ್ರಜಾಪ್ರಭುತ್ವ ರಾಜಕೀಯ ಸಂಸ್ಕೃತಿ ರೂಢಿಯಾಗುವುದಕ್ಕೂ, ಕಾರ್ಯಶೀಲವಾದ ವಿರೋಧ ಪಕ್ಷಗಳ ರೂಪಗೊಳ್ಳುವುದಕ್ಕೂ ಮಾರಕವಾಗಿ ಪರಿಣಮಿಸತೊಡಗಿತು. ತತ್ಪಲವಾಗಿ, ಪಕ್ಷ ಮತ್ತು ಆಡಳಿತ ವ್ಯವಸ್ಥೆಯೊಳಗೆ ಮುಜಿಬ್ ವಿರುದ್ಧ ಅಸಹನೆ ಹೆಚ್ಚಾಗುತ್ತಾ, 1975ರಲ್ಲಿ ಅವರ ಹತ್ಯೆಯಲ್ಲಿ ಕೊನೆಗೊಂಡಿತು. ವಿಮೋಚನಾ ಚಳವಳಿಯಲ್ಲಿ ಮುಜಿಬರಿಗೆ ಹೆಗಲು ಕೊಟ್ಟಿದ ಬಾಂಗ್ಲಾ ಸೇನೆಯ ಮುಖ್ಯಸ್ಥ ಜಿಯಾವೂರ್ ರೆಹೆಮಾನ್ ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿ ದೇಶದ ಅಧ್ಯಕ್ಷರಾದರು. ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಮೂಲಭೂತವಾದಿ ಇಸ್ಲಾಮ್ ಮತೀಯವಾದಿ ವಿಚಾರಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುವ ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ (BNP) ಕಟ್ಟಿದರು. ಬಾಂಗ್ಲಾದೇಶವು ಮುಸ್ಲಿಮ್ ಬಹುಸಂಖ್ಯಾತರ ಮತೀಯ ಅಧಿಕಾರದ ನಾಡು ಎಂಬ ವಿಚಾರವುಳ್ಳ ‘ಬಾಂಗ್ಲಾದೇಶಿ ರಾಷ್ಟ್ರೀಯವಾದ’ವನ್ನು BNP ಹುಟ್ಟು ಹಾಕಿತು. ಸರ್ವಾಧಿಕಾರಿ ಮಿಲಿಟರಿ ಪ್ರಭುತ್ವದ ಹಾವು ಏಣಿ ಆಟ ಶುರುವಾಗಿ, 1982ರಲ್ಲಿ ಮತ್ತೊಂದು ಮಿಲಿಟರಿ ಬಂಡಾಯ ನಡೆದು ಜಿಯಾವೂರ್ ರೆಹಮಾನ್ ಹತ್ಯೆ ಮಾಡಲಾಯಿತು; ಜನರಲ್ ಎರ್ಷಾದ್ ಸರ್ವಾಧಿಕಾರಿ ಅಧ್ಯಕ್ಷರಾಗಿ ಸ್ಥಾಪಿತರಾದರು. ಎರ್ಷಾದ್ ಮತ್ತಷ್ಟೂ ಇಸ್ಲಾಮಿ ಮತೀಯ ಹಿತಾಸಕ್ತಿಯ ‘ಜಾತೀಯ ಪಕ್ಷ’ (JP) ಸ್ಥಾಪಿಸಿದರು.1989ರಲ್ಲಿ ಅವಾಮಿ ಲೀಗ್ ಹಾಗೂ BNP ಮುಂದಾಳತ್ವದ ಜನ ಚಳವಳಿ ನಡೆದು, ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯು ಪುನಃಸ್ಥಾಪಿತವಾಯಿತಾದರೂ, ಎರಡೂ ರಾಜಕೀಯ ಪಕ್ಷಗಳ ಗುಣವೇನೂ ಬದಲಾಗಲಿಲ್ಲ. BNPಯು ಜಿಯಾವೂರ್ ರೆಹಮಾನರ ಪತ್ನಿ ಖಲೀದ ಜಿಯಾ ಅವರ ವ್ಯಕ್ತಿ ವರ್ಚಸ್ಸಿನ ಹಿಂಬಾಲಕರ ಪಕ್ಷವಾದರೆ, ಅವಾಮಿ ಲೀಗ್ ಮುಜಿಬರ ಮಗಳು ಷೇಕ್ ಹಸೀನರ ವ್ಯಕ್ತಿವಾದಿ ಅಧಿಕಾರದ ಪಕ್ಷವಾಯಿತು. ಎರಡೂ ಪಕ್ಷಗಳೂ ಅಧಿಕಾರದಲ್ಲಿದ್ದಾಗ ವಿರೋಧಿಗಳನ್ನು ನಿರ್ನಾಮ ಮಾಡುವ, ಸಾಂವಿಧಾನಿಕ ಪ್ರಜಾಪ್ರಭುತ್ವದ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಅಧಿಕಾರ ರಕ್ಷಣೆಯ ಆಧೀನ ಸಂಸ್ಥೆಗಳನ್ನಾಗಿಸುವ, ಮಿಲಿಟರಿ ವ್ಯವಸ್ಥೆಗೆ ಯಥೇಚ್ಛ ಆರ್ಥಿಕ ಸಂಪನ್ಮೂಲ ಒದಗಿಸಿ ತಮ್ಮ ಅಧಿಕಾರಕ್ಕೆ ಸಂಚಕಾರ ಬರದಂತೆ ನೋಡಿಕೊಳ್ಳುವ ಹಾಗೂ ಇಸ್ಲಾಮಿ ಮತೀಯವಾದವನ್ನು ತಮ್ಮ ಅಧಿಕಾರ ಚಲಾವಣೆಯ ದಾಳ ಮಾಡಿಕೊಳ್ಳುವ ರಾಜಕೀಯವನ್ನು ನಿರಂತರವಾಗಿ ನಡೆಸಿಕೊಂಡು ಬಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥಹೀನವಾಗಿಸಿವೆ.

(2) ವಿಮೋಚನಾ ಸಮರ ಕಾಲದಲ್ಲಿ ಪಾಕಿಸ್ತಾನದ ಸೇನೆಯು ಪೂರ್ವ ಬಂಗಾಲದ ಬುದ್ಧಿಜೀವಿಗಳನ್ನು ಮುಖ್ಯ ಗುರಿಯಾಗಿಸಿಕೊಂಡಿತ್ತು. ಜಾತ್ಯತೀತ ಸಂಸ್ಕೃತಿ, ಪ್ರಜಾಪ್ರಭುತ್ವ, ಸಮಾಜವಾದಗಳ ಅರಿವನ್ನು ಪ್ರಸರಿಸುತ್ತಿದ್ದ ಬುದ್ಧಿಜೀವಿ ವರ್ಗದ ಸಾವಿರಕ್ಕೂ ಮಿಕ್ಕಿದ ಜನರನ್ನು ಹುಡುಕಿ ಹತ್ಯೆ ಮಾಡಲಾಯಿತು. ಆಧುನಿಕ ಸ್ವತಂತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸದೃಢ ಸಂಸ್ಥೆಗಳ ರಚನೆಯಲ್ಲಿ ಪ್ರಗತಿಗಾಮಿ ಬುದ್ಧಿಜೀವಿ ವರ್ಗದ ಪಾತ್ರವನ್ನು ಬಲ್ಲವರಾಗಿಯೇ ಈ ಕುಕೃತ್ಯಗಳನ್ನು ನಡೆಸಲಾಯಿತು. ವಿಮೋಚಿತ ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದ ನಂತರದಲ್ಲಿ, ಆಧುನಿಕ ಪ್ರಜಾಪ್ರಭುತ್ವದ ಆಧಾರವಾಗಬಲ್ಲ ಸ್ವಾಯತ್ತವಾದ ಸಂಸ್ಥೆಗಳ ರಚನೆ ಹಾಗೂ ಅವುಗಳ ಸ್ವತಂತ್ರ ಕಾರ್ಯಾಚರಣೆ ವ್ಯವಸ್ಥೆಯ ನಿರೂಪಣೆಯತ್ತ ಅವಾಮಿ ಲೀಗ್ ಅಧಿಕಾರದ ಸರಕಾರವು ಗಮನ ಹರಿಸಲಿಲ್ಲ. ಇಂತಹ ಸಂಸ್ಥೆಗಳ ರಚನೆ ನಿರ್ವಹಣೆಗಳಲ್ಲಿ ಅನುಭವಿಗಳೂ, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಆಚರಣೆಯಾಗಿ ಸಕಾರಗೊಳಿಸಬಲ್ಲವರೂ ಆಗಿರುವ ಸುಶಿಕ್ಷಿತ ವರ್ಗದ ಅವಶ್ಯಕತೆ ಇರುತ್ತದೆ. ಆಗಿನ ಸ್ಥಿತಿಯಲ್ಲಿ ಆ ನಮೂನೆಯ ಜನರನ್ನು ಆಯ್ದು ಸಂಸ್ಥೆಗಳನ್ನು ತಳವೂರಿಸುವ ಬದಲು, ತಮ್ಮ ವರ್ಚಸ್ಸಿನ ಆರಾಧಕರು, ಹಿಂಬಾಲಕರ ಕೈಗೆ ಸಾಂಸ್ಥಿಕ ಅಧಿಕಾರವನ್ನು ಮುಜಿಬ್ ಹಂಚಿದರು. ಬಾಹ್ಯ ಶಕ್ತಿಗಳಿಂದ ಸ್ವತಂತ್ರ ಪ್ರಜಾಪ್ರಭುತ್ವ ರಕ್ಷಿಸುವ, ಆಡಳಿತ ನಡೆಸುವಲ್ಲಿ  ಚುನಾಯಿತ ಸಂಸ್ಥೆಗಳ ಹಕ್ಕನ್ನು ಗೌರವಿಸುವ ಸೇನಾ ರಕ್ಷಣಾ ವ್ಯವಸ್ಥೆಯು ಪ್ರಭುತ್ವಕ್ಕೆ ಅನಿವಾರ್ಯವಾಗಿರುತ್ತದೆ. ಇಂಥ ಮುಖ್ಯ ಸಂಗತಿಯನ್ನು ನಿರ್ಲಕ್ಷಿಸಿ, ಪೂರ್ವ ಬಂಗಾಲದ ಪರವಿದ್ದು ಪಶ್ಚಿಮ‌ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಸಿಲುಕಿದ್ದ ಅನುಭವಿಗಳನ್ನು ಕಡೆಗಣಿಸಿ, ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ನಾಗರಿಕ ಸಶಸ್ತ್ರಪಡೆಯ ಅನಾನುಭವಿಗಳನ್ನು ರಕ್ಷಣಾ ವ್ಯವಸ್ಥೆಯ ಉನ್ನತ್ತ ಹಂತಗಳಲ್ಲಿ ಕೂರಿಸಿದ್ದು ಸೇನಾವಲಯದಲ್ಲಿ ತೀವ್ರ ಅಸಂತೃಪ್ತಿ ಹುಟ್ಟಿಸಿತು. ಹೀಗಾಗಿ, ಸ್ವತಂತ್ರ ಬಾಂಗ್ಲಾದೇಶದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯು ಅವಾಮಿ ಲೀಗಿನ ಅಧಿಕಾರಾಕಾಂಕ್ಷಿಗಳ ತಾಣವಾಗಿ ಹೋಯಿತು. ಇಷ್ಟು ಸಡಿಲ ವ್ಯವಸ್ಥೆಯನ್ನು ಕಿತ್ತೆಸೆಯುವುದು ಅತೃಪ್ತ ಮಿಲಿಟರಿ ವ್ಯವಸ್ಥೆಗೆ ಕಠಿಣವಾದ ಕೆಲಸವೇನೂ ಆಗಿರಲಿಲ್ಲ.

Shake Hassina
ಷೇಕ್ ಹಸೀನಾ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಂಭ್ರಮಿಸಿದ್ದು ಹೀಗೆ..

ಒಂದೂವರೆ ದಶಕದ ಮಿಲಿಟರಿ ಸರ್ವಾಧಿಕಾರದ ನಂತರ, 1990ರಲ್ಲಿ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರುಳಿದಾಗ, ದೇಶದ ಪರಿಸ್ಥಿತಿ ಸುಧಾರಿಸಿದಂತೆ ಕಂಡಿತು. ಈ ಅವಧಿಯಲ್ಲಿ ಬಾಂಗ್ಲಾದೇಶದ ತಲಾವಾರು ಸಂಪತ್ತಿನ ಹಂಚಿಕೆ ಮಾಪಕ, ಮಾನವ ಅಭಿವೃದ್ಧಿ ಸೂಚ್ಯಂಕಗಳು, ಭಾರತವೂ ಸೇರಿದಂತೆ, ದಕ್ಷಿಣ ಏಶಿಯಾದ ಉಳಿದ ದೇಶಗಳಿಗಿಂತ ಉತ್ತಮವಾಗಿತ್ತು. 2007ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯು ‘ಸರ್ವಾಧಿಕಾರಿ ಪ್ರಜಾಪ್ರಭುತ್ವ’ವಾಗಿ ಅವನತಿ ಹೊಂದುವುದರೊಂದಿಗೆ, ಸಂಪತ್ತಿನ ಉತ್ಪಾದನೆ-ಹಂಚಿಕೆ, ಮಾನವಾಭಿವೃದ್ಧಿ ವಲಯಗಳಲ್ಲೂ ಇಳಿಗತಿ ತೋರುತ್ತಿದೆ; ಶಿಕ್ಷಣದ ಕೊರತೆ, ನಿರುದ್ಯೋಗ ಪ್ರಮಾಣದ ಏರಿಕೆ, ಆತಂಕಕಾರಿ ಮಟ್ಟದಲ್ಲಿ ಮಾನವ ಹಕ್ಕುಗಳ ಮೇಲೆ ಪ್ರಹಾರಗಳಿಂದ ದೇಶವು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ. ಇದಕ್ಕೆ ಕಾರಣವಾಗಿರುವ ಸಕಲ ನಡಾವಳಿಗಳ ಫಲವಾಗಿ ಸಾಮಾಜಿಕ ಸಂಬಂಧಗಳಲ್ಲಿ ವೈಷಮ್ಯವು ತಲೆ ಎತ್ತಿದೆ.

ಭಾರತದಲ್ಲೂ ಮತೀಯ ರಾಷ್ಟ್ರೀಯವಾದವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ಕಾಲದಲ್ಲಿ, ಬಾಂಗ್ಲಾದೇಶದ ವಿದ್ಯಮಾನಗಳು ನಮಗೂ ಪಾಠವಾಗಿವೆ.

paniraj
ಕೆ. ಫಣಿರಾಜ್
+ posts

ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಕೆ. ಫಣಿರಾಜ್
ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...