ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)

Date:

ಎನ್‌ಸಿಆರ್‌ಬಿಯ ವಾರ್ಷಿಕ ವರದಿಯಾದ ‘ಭಾರತದಲ್ಲಿ ಅಪರಾಧ 2022’ರಲ್ಲಿನ ಅಂಕಿಅಂಶಗಳು, ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿ 66.4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಮೇಲಿನ ಅಪರಾಧದ ದರಗಳನ್ನು ದಾಖಲಿಸಿವೆ ಎಂದು ತೋರಿಸುತ್ತದೆ. ದೆಹಲಿಯು 144.4ರಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಹರಿಯಾಣ (118.7), ತೆಲಂಗಾಣ (117), ರಾಜಸ್ಥಾನ (115.1), ಒಡಿಶಾ (103.3), ಆಂಧ್ರಪ್ರದೇಶ (96.2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (93.7), ಕೇರಳ (82), ಅಸ್ಸಾಂ (81.2), ಮಧ್ಯಪ್ರದೇಶ (78.8). ಉತ್ತರಾಖಂಡ (77), ಮಹಾರಾಷ್ಟ್ರ (75.1), ಮತ್ತು ಪಶ್ಚಿಮ ಬಂಗಾಳ (71.8). (8 ಮಾರ್ಚ್ 2024, ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟವಾದ ಲೇಖನ).

ಆದರೆ, ನಿಜವಾದ ಚಿತ್ರಣ ಇಷ್ಟು ಮಾತ್ರವೇ ಇರುವುದಿಲ್ಲ, ಭಾರತದ ಒಟ್ಟು ಅಪರಾಧದ ಮೊತ್ತಕ್ಕೆ ಶೇ.15ರಷ್ಟು ‘ಕೊಡುಗೆ’ ನೀಡುವ ಉತ್ತರ ಪ್ರದೇಶವು, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ- 58.6ರಷ್ಟು ಮಾತ್ರ ಮಹಿಳೆಯರ ಮೇಲಿನ ಅಪರಾಧಗಳನ್ನು ದಾಖಲಿಸುತ್ತದೆ ಎಂದರೆ ನಂಬುವುದು ಹೇಗೆ? ಅಪರಾಧಗಳು ನಡೆಯದಿರುವುದು ಇದಕ್ಕೆ ಕಾರಣವಲ್ಲ, ಬದಲಿಗೆ ಮಹಿಳೆಯರ ವಿರುದ್ಧದ ಅತಿಯಾದ ಪೂರ್ವಗ್ರಹ ಮತ್ತು ಆಕ್ರಮಣಕಾರಿ ಮನಸ್ಥಿತಿಯು ಒಟ್ಟು ಸಮಾಜದಲ್ಲೇ ಬಲವಾಗಿರುವ ಕಾರಣ ಪ್ರಕರಣಗಳು ದಾಖಲಾಗದಿರುವುದು ಕಾರಣ ಎಂಬುದು ಸ್ಪಷ್ಟ.

ಸಾಮಾಜಿಕ ಹೋರಾಟಗಾರ್ತಿ ಮತ್ತು ಚಿಂತಕಿ ಮೀರಾ ಖನ್ನಾ ಅವರು ತಮ್ಮ ‘ಹಿಂಸಾಚಾರದ ರಾಜಕೀಯ’ ಎಂಬ ದೀರ್ಘ ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ- “ಮಹಿಳೆಯರ ವಿರುದ್ಧ ಹಿಂಸಾಚಾರದ ನಿರಂತರವಾದ ವ್ಯವಸ್ಥಿತ, ಸ್ಥಿರ ಮತ್ತು ಉದ್ದೇಶಪೂರ್ವಕ ರಾಜಕೀಯವೊಂದು ನಡೆಯುತ್ತಲೇ ಇದೆ. ಶಬ್ದಕೋಶದಲ್ಲಿ ‘ರಾಜಕೀಯ’ ಎಂಬ ಪದದ ಒಂದು ಅರ್ಥವೆಂದರೆ ‘ಸಂಚು ಅಥವಾ ತಂತ್ರದ ಬಳಕೆ ಅಧಿಕಾರದ ಸ್ಥಾನವನ್ನು ಪಡೆಯುವುದು’. ಹೀಗೆ ಎಚ್ಚರಿಕೆಯಿಂದ ರೂಪಿಸಿದ ತಂತ್ರದ ಮೂಲಕ ಪಿತೃಪ್ರಭುತ್ವದ ಸಂಸ್ಥೆಗಳು ಸಮಾಜದ ಮೇಲೆ ಅಧಿಕಾರ ಚಲಾಯಿಸುತ್ತವೆ ಮತ್ತು ಹಿಂಸಾಚಾರದ ಸಂಸ್ಕೃತಿಯನ್ನು ವಿವಿಧ ಹಂತಗಳಲ್ಲಿ ಶಾಶ್ವತಗೊಳಿಸುತ್ತವೆ. ಈ ವ್ಯವಸ್ಥೆಯಲ್ಲಿ ಬಲಿಪಶುಗಳೇ ಹಿಂಸೆಯ ವಾಹಕರೂ ಆಗುತ್ತಾರೆ, ಹಿಂಸಕರೇ ಬಲಿಪಶುಗಳ ರಕ್ಷಕರೂ ಆಗಿರುತ್ತಾರೆ!. ಈ ರೀತಿ ಶಾಶ್ವತಗೊಳಿಸಲ್ಪಟ್ಟ ‘ಹಿಂಸಾಚಾರದ ಸಂಸ್ಕೃತಿ’ಯ ವಿರುದ್ಧವಾಗಿಯೇ ಭಾರತದ ಮತ್ತು ಅದೇ ರೀತಿ ಕರ್ನಾಟಕದ ಮಹಿಳಾ ಚಳವಳಿ ನಿರಂತರವಾಗಿ ಸಂಘರ್ಷ ನಡೆಸುತ್ತಾ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದಲ್ಲಿ ಮಹಿಳೆಯರ ಸ್ಥಿತಿಗತಿಯ ಅಧ್ಯಯನಕ್ಕಾಗಿ ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರ್ ಮತ್ತಿತರರನ್ನು ಒಳಗೊಂಡು ಕೇಂದ್ರ ಸರ್ಕಾರವೇ ರೂಪಿಸಿದ್ದ ಸಮಿತಿಯು 1973-74ರ ಅವಧಿಯಲ್ಲಿ ‘ಸಮತೆಯೆಡೆಗೆ- ಭಾರತದ ಮಹಿಳೆಯರ ಸ್ಥಿತಿಗತಿ’ ಎಂಬ ವರದಿಯನ್ನು ಬಿಡುಗಡೆ ಮಾಡಿ, ದೇಶದ ಅರ್ಧದಷ್ಟು ಜನಸಂಖ್ಯೆಯು ಬದುಕುತ್ತಿರುವ ಶೋಚನೀಯ ಪರಿಸ್ಥಿತಿಯನ್ನು ಬಯಲಿಗೆ ತಂದಿತು. ತಕ್ಷಣವೇ, ದೇಶದ ಉದ್ದಗಲಕ್ಕೂ ಸಿಡಿದ ಮಹಿಳಾ ಕ್ರಿಯಾಶೀಲತೆಯು ಮಹಿಳಾ ಚಳವಳಿಯ ಹೊಸ ಅಲೆಯಾಗಿ ಗುರುತಿಸಲ್ಪಟ್ಟಿತು. ಇತರೆಡೆಗಳಲ್ಲಿ ನಡೆದಂತೆಯೇ ಕರ್ನಾಟಕದಲ್ಲೂ ಆ ಸಮಯದಲ್ಲಿ ಮಹಿಳೆಯರ ದನಿ ಮೊಳಗಲಾರಂಭಿಸಿದ್ದನ್ನು ಗುರುತಿಸಬಹುದು.

veena mazum dar
ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರ್

ಎಲ್ಲ ಹೋರಾಟಗಾರ್ತಿಯರ ಮೊದಲ ಆದ್ಯತೆ ‘ಹೆಣ್ಣಾಗಿ ನೊಂದ’, ನೋಯುತ್ತಿರುವ ಸಹೋದರಿಯರಿಗೆ ಸಹಾಯ ಹಸ್ತ ನೀಡುವುದು; ಅಂದರೆ ಹಲವು ಬಗೆಯ ತಾರತಮ್ಯ, ದೌರ್ಜನ್ಯಗಳಿಗೆ ಸಿಲುಕಿದವರಿಗೆ ನೆರವು ಮತ್ತು ನ್ಯಾಯ ಒದಗಿಸಲು ಹೋರಾಡುವುದು. ಎರಡನೆಯ ದೂರಗಾಮಿ ಗುರಿ, ಸ್ವಾತಂತ್ರ್ಯದ ಹಲವು ವರ್ಷಗಳ ನಂತರವೂ ಸಾಕಾರಗೊಳ್ಳದ ಮಹಿಳಾ ಸಮಾನತೆಯ ಕನಸಿನೆಡೆಗೆ ಮುನ್ನಡೆಯುವುದು ಆಗಿದೆ.

ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಲಿಂಗದೌರ್ಜನ್ಯ:

70ರ ದಶಕದಲ್ಲಿ ಮನೆಯೊಳಗಿನ ಹಿಂಸೆಯನ್ನು ಹಿಂಸೆಯೆಂದೇ ಸಮಾಜ ಪರಿಗಣಿಸದಿರುವಾಗ, ಕರ್ನಾಟಕದಲ್ಲಿ ಕೆಲಸ ಆರಂಭಿಸಿದ ಸ್ವಾಯತ್ತ ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ, ಎಡ ಮಹಿಳಾ ಸಂಘಟನೆಗಳು ‘ಪರ್ಸನಲ್ ಈಸ್ ಪೊಲಿಟಿಕಲ್’ (ಖಾಸಗಿಯಾದದ್ದು ರಾಜಕೀಯವಾದದ್ದೂ ಕೂಡಾ) ಎಂಬ ಮಹಿಳಾ ಚಳವಳಿಯ ಘೋಷಣೆಯನ್ನು ಇಲ್ಲಿಯೂ ಮೊಳಗಿಸಿದವು. 1975ರ ಆಸುಪಾಸಿನಲ್ಲಿ ವರದಕ್ಷಿಣೆಯ ದಾಹಕ್ಕೆ ಬಲಿಯಾದ ಡಾ. ಮಂಜುಶ್ರೀ ಎಂಬ ಪ್ರಕರಣವು ಗಂಭೀರವಾದ ಚರ್ಚೆಯನ್ನು ಹುಟ್ಟುಹಾಕಿತು. ಅದೇ ರೀತಿ, 1987ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ವರದಕ್ಷಿಣೆಯ ಕಾರಣಕ್ಕೆ ಪ್ರಾಣ ಕಳೆದುಕೊಂಡು ಆತ್ಮಹತ್ಯೆಯಂತೆ ಬಿಂಬಿಸಲ್ಪಟ್ಟ ಶಶಿಕಲಾ ಪ್ರಕರಣವು ಅಪಾರವಾದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. 1987ರ ಡಿಸೆಂಬರ್ 31ರ ‘ಇಂಡಿಯಾ ಟುಡೆ’ಯಲ್ಲಿ ಅನಿತಾ ಪ್ರತಾಪ್‌ರವರು ಮಾಡಿರುವ ವರದಿಯು ಕೇವಲ ಈ ಘಟನೆಯನ್ನಷ್ಟೇ ಅಲ್ಲದೆ, 1984ರಿಂದ 1987ರವರೆಗಿನ ಹಲವು ಪ್ರಕರಣಗಳನ್ನು ಬೆಳಕಿಗೆ ತಂದಿತು. ಅದೇ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ‘ವರದಕ್ಷಿಣೆ’ಗಾಗಿ ವಧುದಹನ ಅಥವಾ ಬಲಾತ್ಕಾರದ ‘ಆತ್ಮಹತ್ಯೆ’ಗಳು 1984ರಲ್ಲಿ 22 ಇದ್ದದ್ದು 1987ರ ವೇಳೆಗಾಗಲೇ ವರ್ಷಕ್ಕೆ 50 ಘಟನೆಗಳಾಗಿ ಹಬ್ಬಿದ್ದವು. ಆ ನಾಲ್ಕು ವರ್ಷಗಳಲ್ಲಿ ಬೆಳಗಾವಿಯ ಒಂದು ಪ್ರಕರಣದಲ್ಲಿ ಬಿಟ್ಟರೆ ಇನ್ಯಾವುದರಲ್ಲೂ ಕೊಲೆಗಾರರಾದ ಗಂಡ ಅಥವಾ ಆತನ ಕುಟುಂಬಸ್ಥರಿಗೆ ಶಿಕ್ಷೆಯಾಗಿರಲಿಲ್ಲ. ಕರ್ನಾಟಕದ ಬಹಳ ಹಳೆಯ ಸ್ವಾಯತ್ತ ಮಹಿಳಾ ಸಂಘಟನೆ ‘ವಿಮೋಚನಾ’ ಸಂಸ್ಥೆಯು 1997ರಲ್ಲಿ ನಡೆಸಿದ ಅಧ್ಯಯನ ವರದಿಯು ಹೀಗೆ ಹೇಳುತ್ತದೆ- “ಈ ವರ್ಷ ಬೆಂಗಳೂರಿನಲ್ಲಿ ನಡೆದ 1337 ‘ಅಸಹಜ ಸಾವಿನ’ ಪ್ರಕರಣಗಳಲ್ಲಿ ಕೇವಲ 157ನ್ನು ಮಾತ್ರ ಕೊಲೆಯೆಂದು ಪರಿಗಣಿಸಿ ದಾಖಲಿಸಲಾಗಿದೆ, 546ನ್ನು ಆತ್ಮಹತ್ಯೆಗಳೆಂದೂ 470 ಪ್ರಕರಣಗಳನ್ನು ಆಕಸ್ಮಿಕ ಅವಘಡಗಳೆಂದೂ ಪೊಲೀಸರು ದಾಖಲಿಸಿದ್ದಾರೆ” (ಮತ್ತು ಇವು ದಾಖಲಾಗುತ್ತಿದ್ದ ಪ್ರಕರಣಗಳಷ್ಟೇ ಎಂಬುದನ್ನೂ ನಾವು ಮರೆಯುವಂತಿಲ್ಲ, ದಾಖಲಾಗದೆ ಹೋದಂತವು ಇನ್ನೂ ಎರಡು ಪಟ್ಟು ಇರಬಹುದು).

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)

ಇಂತಹ ಘಟನೆಗಳನ್ನು ವಿರೋಧಿಸಿ ಮಹಿಳಾ ಸಂಘಟನೆಗಳು ಒಂದೆಡೆ ಕೊಲೆಗಾರ ಕುಟುಂಬದ ವಿರುದ್ಧವೂ, ಮತ್ತೊಂದೆಡೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸರ್ಕಾರದ ವಿರುದ್ಧವೂ ತೀವ್ರವಾದ ಸಂಘರ್ಷಕ್ಕಿಳಿಯುತ್ತಿದ್ದವು. ಈ ಹೋರಾಟಗಳ ಪರಿಣಾಮವಾಗಿ ಸರ್ಕಾರದ ನೀತಿಗಳಲ್ಲಿ, ನ್ಯಾಯಾಂಗ ಮತ್ತು ಸಮಾಜ ಮನೆಯೊಳಗಿನ ಹಿಂಸೆಯನ್ನು ಪರಿಭಾವಿಸುವ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಬಂದಿತು.

ಅತ್ಯಾಚಾರಗಳು ಮತ್ತು ಲೈಂಗಿಕ ಹಿಂಸೆ: ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಮತ್ತು ಲೈಂಗಿಕ ಹಿಂಸೆಯ ವಿರುದ್ಧ ನಿರಂತರವಾದ ಸಂಘರ್ಷವನ್ನು ಮಹಿಳಾ ಸಂಘಟನೆಗಳು ಮತ್ತು ಮಹಿಳಾಪರರು ಮಾತ್ರವಲ್ಲದೆ, ದಲಿತ ಚಳವಳಿಯೂ ಸೇರಿದಂತೆ ಅನೇಕ ನಾಗರಿಕ ಹಕ್ಕುಗಳ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವಜನರ ಸಂಘಟನೆಗಳು ಹಾಗೂ ಅನೇಕ ವೃತ್ತಿಪರರು ನಡೆಸುತ್ತಾ ಬಂದಿದ್ದಾರೆ. ಕೊಪ್ಪಳದ ಕುದರೆಮೋತಿ ಪ್ರಕರಣ, ಕೋಲಾರದ ಅನಸೂಯಮ್ಮ ಅತ್ಯಾಚಾರ ಪ್ರಕರಣ ಮೊದಲಾದವು ಸಂಘಟನೆಗಳ ಮತ್ತು ನಾಗರಿಕರ ಆಕ್ರೋಶ ಸಿಡಿದೇಳುವುದಕ್ಕೆ ಕಾರಣವಾದವು.

ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು: ಅತ್ಯಾಚಾರಗಳು ಮತ್ತು ಲೈಂಗಿಕ ಹಿಂಸೆಗಳಿಗೆ ದಲಿತ-ಶೋಷಿತ ಹೆಣ್ಣುಮಕ್ಕಳು ಹೆಚ್ಚಾಗಿ ಗುರಿಯಾಗುತ್ತಿದ್ದದ್ದು ಮಾತ್ರವಲ್ಲದೆ, ದೇವದಾಸಿ- ಬೆತ್ತಲೆ ಸೇವೆಯಂತಹ ಕ್ರೂರ ಆಚರಣೆಗಳು ದಲಿತ ಮತ್ತು ಅತಿಹಿಂದುಳಿದ ಸಮುದಾಯಗಳ ಮಹಿಳೆಯರನ್ನು ಗುರಿಯಾಗಿಸಿ ನಡೆಯುತ್ತಿದ್ದವು. ಭಾನಾಮತಿ ಮಾಡಿದ್ದಾರೆಂದು ಆರೋಪಿಸಿ ದಲಿತ ಹೆಣ್ಣುಮಕ್ಕಳನ್ನು ಹಳ್ಳಿಗಳಲ್ಲಿ ಬಹಿರಂಗವಾಗಿ ಅವಮಾನಿಸುವುದು, ಬೆತ್ತಲೆ ಮೆರವಣಿಗೆ ಮಾಡುವುದು, ಕೈ ಸುಡುವುದು ಮುಂತಾದ ಘಟನೆಗಳೂ ಸಾಕಷ್ಟು ನಡೆದಿವೆ. ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಒಂದರ ಬೆನ್ನಹಿಂದೆ ಮತ್ತೊಂದರಂತೆ ವರದಿಯಾಗಲಾರಂಭಿಸಿದಾಗ, ಅಂತಹ ಘಟನೆಗಳನ್ನೂ ಮತ್ತು ದೇವದಾಸಿ ಪದ್ಧತಿ, ಬೆತ್ತಲೆ ಸೇವೆಯಂತಹ ಕರಾಳ ಪಿಡುಗುಗಳನ್ನೂ ತಡೆಯಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಭಾರೀ ಹೋರಾಟವನ್ನೇ ನಡೆಸಿದವು.

ಭ್ರೂಣಲಿಂಗಪತ್ತೆ ತಂತ್ರಜ್ಞಾನವಿನ್ನೂ ವ್ಯಾಪಕವಾಗಿ ಬಳಕೆಯಲ್ಲಿಲ್ಲದಿದ್ದ ಕಾಲದಲ್ಲಿ, ಹೆಣ್ಣುಶಿಶುಹತ್ಯೆಗಳು ನಡೆಯುತ್ತಿದ್ದವೆಂಬುದನ್ನು ಮಹಿಳಾ ಸಂಘಟನೆಗಳ ಹೋರಾಟಗಳ ವರದಿಗಳಿಂದ ತಿಳಿಯಬಹುದು. ಹಾಗೆಯೇ, ಮಹಿಳೆಯರ ಸಂತಾನೋತ್ಪತ್ತಿ ಸಂಬಂಧಿ ಆರೋಗ್ಯದ ಕುರಿತಾಗಿದ್ದ ಮೂಢನಂಬಿಕೆಗಳು, ಸಂತಾನಹರಣದ ಸರ್ಕಾರದ ತಪ್ಪುನೀತಿಗಳು, ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯದ ಕಾರಣಕ್ಕೆ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕ್ಲಿಷ್ಟಕರ ಹೆರಿಗೆಗಳಿಂದ ತಾಯಿಮರಣಗಳು ಸಾಕಷ್ಟು ಸಂಭವಿಸುತ್ತಿದ್ದವು. ಇಂತಹ ಎಲ್ಲ ಬಗೆಯ ನಿರ್ಲಕ್ಷ್ಯ ಮತ್ತು ಹಿಂಸೆಗಳ ವಿರುದ್ಧ ಮಹಿಳಾ ಚಳವಳಿ ದನಿಯೆತ್ತಿತ್ತು.

ಸಮಯದೊಂದಿಗೆ ಬದಲಾದ ದೌರ್ಜನ್ಯಗಳ ರೂಪಗಳು-ಹೆಚ್ಚಿದ ಸಂಕೀರ್ಣತೆಗಳು:

ಮಸಣವಾಗುತ್ತಿದೆಯೇ ಮನೆ?:

ಕೆಲವು ಸಮಯದ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ-5’ (2019-2021)ಯ ಅಂಕಿಅಂಶಗಳು ಹೆಣ್ಣುಮಕ್ಕಳಿಗೆ ಮನೆಯೇ ಅತ್ಯಂತ ಅಸುರಕ್ಷಿತವಾದ ಸ್ಥಳ ಎಂಬ ಆತಂಕವನ್ನು ಮೂಡಿಸುವಂತಿವೆ.

ಎನ್‌ಎಫ್‌ಎಚ್‌ಎಸ್-4 ಕೂಡ 33 ಪ್ರತಿಶತ ಭಾರತೀಯ ಮಹಿಳೆಯರು ಸಂಗಾತಿಯ ಹಿಂಸೆಗೆ ಬಲಿಯಾಗಿದ್ದಾರೆ ಎಂದು ತೋರಿಸಿದೆ. ಕರ್ನಾಟಕದಲ್ಲಿ ಈ ಸಂಖ್ಯೆ ಗರಿಷ್ಠ ಪ್ರಮಾಣದಲಿದೆ. ಈ ಸರ್ವೇಯ ಪ್ರಕಾರ ಕರ್ನಾಟಕದ 48.4% ಮಹಿಳೆಯರು ಗಂಡ ಅಥವಾ ಅತ್ಯಂತ ಆಪ್ತ ಸಂಗಾತಿಯಿಂದ ಹಿಂಸೆಗೊಳಗಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ (43%), ತೆಲಂಗಾಣ (41%) ಹಾಗೂ ಮಣಿಪುರ ಮತ್ತು ತಮಿಳುನಾಡುಗಳಿವೆ (40%). ಈ ಹಿಂಸೆಯು ದೈಹಿಕ ಸ್ವರೂಪದ್ದು ಅಥವಾ ಲೈಂಗಿಕ, ಮಾನಸಿಕ ಅಥವಾ ಆರ್ಥಿಕ ಸ್ವರೂಪದ್ದಾಗಿರಬಹುದು.

1 46
ಮಹಿಳಾ ದೌರ್ಜನ್ಯ (ಸಾಂದರ್ಭಿಕ ಚಿತ್ರ)

ಕಳೆದ ಒಂದು ದಶಕದ ಮತ್ತೊಂದು ಆತಂಕದ ವಿದ್ಯಮಾನ- ಆಪ್ತ ಸಂಬಂಧದೊಳಗಿರುವ ಹೆಣ್ಣುಮಗಳನ್ನು ಕೊಲೆ ಮಾಡುವುದು ಮಾತ್ರವಲ್ಲ, ಆಕೆಯ ದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸುವುದು ಅಥವಾ ಹತ್ತಾರು ಬಾರಿ ಕತ್ತರಿಸಿ-ಚುಚ್ಚಿ ಕೊಲೆ ಮಾಡುವುದು- ಈ ಬಗೆಯ ಘೋರವಾದ ಹಿಂಸೆಯ ಘಟನೆಗಳು ಹೆಚ್ಚುತ್ತಿರುವುದು. ದೆಹಲಿ, ಹೈದ್ರಾಬಾದ್ ಮಾತ್ರವಲ್ಲದೆ ಕರ್ನಾಟಕದಲ್ಲೂ 2024ರಲ್ಲಿ ಇಂತಹ 5 ಘಟನೆಗಳು ನಡೆದಿವೆ. ಹಾಡಹಗಲೇ ಯುವತಿಯರ ಕತ್ತು ಕತ್ತರಿಸುವುದು, ಹಲವು ಬಾರಿ ತಿವಿದು ಸಾಯಿಸುವುದು, ತಲೆ ಕತ್ತರಿಸಿ ಕೊಲೆ ಮಾಡುವುದು, ಜೀವಂತ ಸುಡುವುದು ಮುಂತಾದವು ವರದಿಯಾಗಿ ಆತಂಕ ಮೂಡಿಸಿವೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಅನಾಇಲೇಷನ್ ಆಫ್ ಕಾಸ್ಟ್’ ಎಂಬ ಜಾತಿ ಮೂಲಗಳ ‘ಎರಿಯೊಪೆಗಿಟಿಕ’

2024ರ ಮೊದಲ 6 ತಿಂಗಳುಗಳಲ್ಲೇ 4 ವರದಕ್ಷಿಣೆಗಾಗಿ ಸುಟ್ಟು ಕೊಲೆ ಮಾಡಿರುವ ಪ್ರಕರಣಗಳು, ಸುಡುವುದು ಬಿಟ್ಟು ಇನ್ನಿತರ ವಿಧಾನಗಳಿಂದ ಕೊಲೆ ಮಾಡಿದ 12 ಪ್ರಕರಣಗಳು ಮತ್ತು 35 ವರದಕ್ಷಿಣೆ ಸಂಬಂಧಿ ಸಾವುಗಳು ಕರ್ನಾಟಕದಲ್ಲಿ ದಾಖಲಾಗಿವೆ. ಗಂಡ ಮತ್ತು ಆತನ ಕುಟುಂಬದಿಂದ ಹಿಂಸೆಯ 1065 ಪ್ರಕರಣಗಳು ದಾಖಲಾಗಿವೆ. ಅಂದರೆ, ವರದಕ್ಷಿಣೆ ಕಿರುಕುಳದಿಂದಾಗುವ ಸಾವನ್ನೂ ಒಳಗೊಂಡಂತೆ, ಸಂಗಾತಿಯಿಂದ ಹಿಂಸೆ ಅಥವಾ ಕೌಟುಂಬಿಕ ಹಿಂಸೆಯು ಕಳೆದ 50 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ನೊಂದ ಮಹಿಳೆಯರು ಮೊದಲಿಗಿಂತ ಹೆಚ್ಚು ಸಂಖ್ಯೆಯಲ್ಲಿ ಧೈರ್ಯದಿಂದ ಪ್ರಕರಣ ದಾಖಲು ಮಾಡುತ್ತಿದ್ದಾರೆ ನಿಜ, ಆದರೆ ಅದರಿಂದ ಮಾತ್ರವೇ ಇಷ್ಟು ದೊಡ್ಡ ಪ್ರಮಾಣದ ಏರಿಕೆ ಸಾಧ್ಯವಿಲ್ಲ.

ಅತ್ಯಾಚಾರ- ಬರ್ಬರತೆಯ ಬೇರುಗಳು ಬಲು ಆಳ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನೀಡಿದ ಮಾಹಿತಿಯಂತೆ, ಏಪ್ರಿಲ್ 2024ರವರೆಗೆ ರಾಜ್ಯದಲ್ಲಿ 196 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಒಂದು ಕಸ್ಟೋಡಿಯಲ್ ರೇಪ್ ಮತ್ತು 6 ಸಾಮೂಹಿಕ ದೌರ್ಜನ್ಯ ಪ್ರಕರಣಗಳೂ ಸೇರಿವೆ! ಮತ್ತೆ ಇವೆಲ್ಲ ನಡೆದಿರುವುದು ಕೇವಲ 4 ತಿಂಗಳ ಅವಧಿಯಲ್ಲಿ. ಲೈಂಗಿಕ ಕಿರುಕುಳ, ಮೌಖಿಕವಾಗಿ ಅಥವಾ ಸನ್ನೆಗಳ ಮೂಲಕ ಅಶ್ಲೀಲವಾದ ದುರ್ವರ್ತನೆ ತೋರುವ ಪ್ರಕರಣಗಳು 2333.

ಇಂದು ಕೇವಲ ಘಟನೆಗಳೆಷ್ಟು ನಡೆದವು ಎಂಬುದು ಮಾತ್ರವಲ್ಲ, ಹೇಗೆ ನಡೆಯುತ್ತಿವೆ ಎಂಬುದು ಕೂಡಾ ಅತ್ಯಂತ ಆತಂಕದ ವಿಷಯವಾಗಿದೆ. ಪ್ರಜ್ವಲ್ ರೇವಣ್ಣ ಎಂಬ ಪಾಳೇಗಾರಿ ರಾಜಕೀಯದ ಕುಟುಂಬವೊಂದರ ಮೂರನೇ ತಲೆಮಾರಿನ ಕುಡಿಯೊಂದು ಒಬ್ಬಿಬ್ಬರನ್ನಲ್ಲ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ನಡೆಸಿರುವ ಪ್ರಕರಣ ನಮ್ಮ ಕಣ್ಣ ಮುಂದಿದೆ. ಆತನಷ್ಟೇ ಅಲ್ಲ, ಆತನ ಅಪ್ಪನೂ ಅಂಥ ಅನಾಚಾರಗಳನ್ನು ನಡೆಸಿದಾತನೇ ಎಂಬುದೂ ಕೂಡಾ ಬೆಳಕಿಗೆ ಬಂದಿದೆ.

ಮಹಿಳೆಯರ ಮೇಲಿನ ಲೈಂಗಿಕ ಹಿಂಸಾಚಾರದಂತೆಯೇ, ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರವೂ ಇದೇ ರೀತಿ ಏರಿಕೆಯ ಗತಿಯಲ್ಲೇ ಇದೆ. ಕೇವಲ ಪುಟ್ಟ ಹೆಣ್ಣುಮಕ್ಕಳಿಗೆ ಅಥವಾ ಹದಿಹರೆಯದವರಿಗೆ ಕಿರುಕುಳ ಕೊಡುವುದು ಅಥವಾ ಅತ್ಯಾಚಾರ ಮಾಡುವುದಷ್ಟೇ ಅಲ್ಲ, ಅವರನ್ನು ಭೀಕರವಾಗಿ ಕೊಲೆ ಮಾಡುವ ಪ್ರಕರಣಗಳು ಸರಣಿಯಾಗಿ ನಡೆಯುತ್ತಲೇ ಇವೆ.

ಮರ್ಯಾದೆಗೇಡು ಹತ್ಯೆಗಳು

ಬದಲಾಗುತ್ತಿರುವ ಮಹಿಳೆಯರ ಮೇಲಿನ ಹಿಂಸೆಯ ಸ್ವರೂಪವನ್ನು ತಿಳಿಯುವಾಗ ನಾವು ಪರಿಗಣಿಸಲೇಬೇಕಾದ ಪ್ರಮುಖ ವಿದ್ಯಮಾನ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆಗಳದ್ದು. 2016ರಲ್ಲಿ ‘ದ ಹಿಂದೂ’ ಪತ್ರಿಕೆ ಮಾಡಿದ ವರದಿಯಲ್ಲಿ 10 ವರ್ಷಗಳಲ್ಲಿ 11 ಪ್ರಕರಣಗಳು ದಾಖಲಾದ ಬಗ್ಗೆ ಆತಂಕದಿಂದ ಬರೆಯಲಾಗಿದೆ. ಆ ಸಮಯದಲ್ಲಿ ಪ್ರತಿ ವರ್ಷಕ್ಕೊಂದರಂತೆ ನಡೆದ ಈ ಬರ್ಬರವಾದ ಕೊಲೆಗಳ ಘಟನೆಗಳು ಸಮಾಜವನ್ನು ಕಂಗೆಡಿಸಿದ್ದವು. ಅಲ್ಲಿಂದ ನಂತರದ ವರ್ಷಗಳಲ್ಲಿ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ಪ್ರೇಮ, ಮದುವೆ ಅಥವಾ ಸಂಬಂಧ ಹೊಂದಿರುವ ಜೋಡಿಗಳ ಮೇಲೆ ಕುಟುಂಬಸ್ಥರು ದಾಳಿ ನಡೆಸುವುದು ಮತ್ತು ಕೊಲೆ ಮಾಡುವುದು ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಾನವ ಹಕ್ಕು ಸಂಘಟನೆ ಪಿಯುಸಿಎಲ್ 2023ರಲ್ಲಿ ಹೊರತಂದ ವರದಿಯು ಈ ಕುರಿತು ಹೀಗೆ ಹೇಳುತ್ತದೆ. “ಜನವರಿ 2022ರಿಂದ ಡಿಸೆಂಬರ್ 2023ರವರೆಗೆ ಕರ್ನಾಟಕದಲ್ಲಿ 13 ‘ಮರ್ಯಾದೆ ಹತ್ಯೆ’ ಪ್ರಕರಣಗಳು ದಾಖಲಾಗಿದೆ ಮತ್ತು ಇವುಗಳಲ್ಲಿ 12 ಮಂದಿಯ ಕೊಲೆಗಳು ಸಂಭವಿಸಿವೆ……” “…..ಇವುಗಳಲ್ಲಿ ಜೋಡಿಗಳಲ್ಲಿ ಕನಿಷ್ಠ ಒಬ್ಬರು ದಲಿತ ಅಥವಾ ಮುಸ್ಲಿಮ್ ಅಥವಾ ಅತಿ ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ”.

ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?

2021ರ ಜೂನ್ ತಿಂಗಳಿನಲ್ಲಿ ಗದಗ ಜಿಲ್ಲೆಯ ರೋಣದಲ್ಲಿ ಅಂತರ್ಜಾತಿ ಮದುವೆಯಾಗಿ 28 ವರ್ಷಗಳ ನಂತರ ದಂಪತಿಗಳ ‘ಮೇಲ್ಜಾತಿ’ಗೆ ಸೇರಿದ ಹುಡುಗನ ಬಂಧುಗಳು ಮಾರಣಾಂತಿಕ ದಾಳಿ ನಡೆಸಿ ಕೊಲೆ ಪ್ರಯತ್ನ ನಡೆಸಿರುವುದು ದಾಖಲಾಗಿದೆ. ಈ ಜೋಡಿ ಅಂತರ್ಜಾತಿ ಪ್ರೇಮ ವಿವಾಹ ಮಾಡಿಕೊಂಡ ಸಂದರ್ಭದಲ್ಲಿ ಇಂತಹ ದಾಳಿ ಅಥವಾ ದೌರ್ಜನ್ಯದ ಘಟನೆ ನಡೆದಿರಲಿಲ್ಲ, ಹೆಚ್ಚೂ ಕಡಿಮೆ ಮೂರು ದಶಕಗಳ ನಂತರ ಅವರ ಮೇಲೆ ಕುಟುಂಬಸ್ಥರು ಇಂತಹ ದಾಳಿ ನಡೆಸಿದ್ದಾರೆ! ಅಂದರೆ ಜಾತಿ ಅಥವಾ ಧರ್ಮದ ಚೌಕಟ್ಟುಗಳನ್ನು ಮುರಿಯುವ ವಿಚಾರದಲ್ಲಿ ಕಳೆದ 30-40 ವರ್ಷಗಳಲ್ಲಿ ಸಮಾಜವು ಎಷ್ಟು ಅಸಹಿಷ್ಣುವಾಗಿದೆ, ಇಂತಹ ಸಂದರ್ಭಗಳಲ್ಲಿ ಕಾನೂನನ್ನೂ ಮಾನವತೆಯನ್ನೂ ಲೆಕ್ಕಿಸದೆ ‘ಕುಟುಂಬ ಗೌರವ’ಕ್ಕೆ ‘ಕುಂದು ತಂದ’ ತಮ್ಮದೇ ಮಕ್ಕಳನ್ನು ಭೀಕರವಾಗಿ ಕೊಲೆ ಮಾಡುವ ಮನಸ್ಥಿತಿ ಸಮಾಜದಲ್ಲಿ ವೇಗವಾಗಿ ಹೇಗೆ ಏರಿಕೆಯಾಗಿದೆ ಎಂದು ತಿಳಿಯುತ್ತದೆ!

2 40
“ಹತ್ಯೆಯಲ್ಲಿ ಯಾವುದೇ ಮರ್ಯಾದೆ ಇರುವುದಿಲ್ಲ” ಎಂಬ ಸಂದೇಶ (ಸಾಂದರ್ಭಿಕ ಚಿತ್ರ)

ಇದು ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ಸಂದರ್ಭದ ಒಂದು ಸ್ಪಷ್ಟ ಉದಾಹರಣೆ. ‘ಜಾತಿ’ ಅಥವಾ ‘ಧರ್ಮ’ದ ‘ಪಾವಿತ್ರ್ಯ’ವನ್ನು ಉಳಿಸಿಕೊಳ್ಳಲು ಒಳವಿವಾಹ ಪದ್ಧತಿಯನ್ನು ಕಾಪಾಡಬೇಕಾದ ಅನಿವಾರ್ಯತೆಯಿರುವ ಜಾತಿ ವ್ಯವಸ್ಥೆಯು ಮಾನವ ಸಮಾಜದ ಮೇಲೆ ಹೇರುತ್ತಿರುವ ಕಣ್ಣಿಗೆ ಕಾಣದಂತಹ ಅನಿಷ್ಟ ಪದ್ಧತಿಯಿದು. ಈ ‘ಪಾವಿತ್ರ್ಯ’ವು ಜೀವಕ್ಕಿಂತ ಮುಖ್ಯವೆಂದೂ, ‘ಕುಟುಂಬ ಗೌರವ’ವು ಹೆಣ್ಣುಮಕ್ಕಳ ‘ಶೀಲ’ಜೊತೆ ಹೆಣೆದುಕೊಂಡಿದೆಯೆಂದೂ ಸಮಾಜವನ್ನು ಎಷ್ಟು ಗಾಢವಾಗಿ ನಂಬಿಸಲಾಗಿದೆಯೆಂಬುದು ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ನೋಡಿದಾಗ ತಿಳಿಯುತ್ತದೆ. ಹಾಗೆಯೇ ಇದು, ದೇಶವನ್ನು ಆವರಿಸುತ್ತಿರುವ ಬಲಪಂಥೀಯ ಫ್ಯಾಸಿಸ್ಟ್ ಮನಸ್ಥಿತಿಯು ಹೆಣ್ಣುಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಬಾರದೆಂಬ ತಮ್ಮ ಮನುವಾದಿ ಅಜೆಂಡಾವನ್ನು ಧಾರ್ಮಿಕ-ಸಾಂಸ್ಕೃತಿಕ ಕಟ್ಟುಪಾಡುಗಳು ಮತ್ತು ದಾಳಿಗಳ ಮೂಲಕ ಪುನರ್‌ಸ್ಥಾಪಿಸುತ್ತಿರುವ ವಿದ್ಯಮಾನವೂ ಹೌದು.

ಹೆಣ್ಣುಭ್ರೂಣಹತ್ಯೆ ಮತ್ತು ಶಿಶುಹತ್ಯೆಗಳು: 2023ರ ಅಕ್ಟೋಬರ್ 15ರಂದು ಬೆಂಗಳೂರಿನ ಬಯ್ಯಪ್ಪನಹಳ್ಳಿ ಪೊಲೀಸರು ಗರ್ಭಿಣಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವಾಹನವೊಂದನ್ನು ನಿಲ್ಲಿಸಿ ವಿಚಾರಣೆ ನಡೆಸಿದರು. ಆ ಮಹಿಳೆಯ ಸೂಚನೆಯನುಸಾರ ಕೆಲವರ ಬೆನ್ನುಹತ್ತಿದವರಿಗೆ ಕಾನೂನುಬಾಹಿರ ಭ್ರೂಣಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದ ದೊಡ್ಡದೊಂದು ಜಾಲದ ಸುಳಿವು ದೊರಕಿತ್ತು. ಮಂಡ್ಯ ಮತ್ತು ಅಕ್ಕಪಕ್ಕದ ಪ್ರದೇಶಗಳ ತೋಟದ ಮನೆಗಳಲ್ಲಿ ವೈದ್ಯರು, ಆರೋಗ್ಯ ಇಲಾಖೆಯ ಕೆಲವು ಸಿಬ್ಬಂದಿ, ಶುಶ್ರೂಶಕಿಯರು ಮತ್ತು ಕುಟುಂಬಗಳ ಶಾಮೀಲುದಾರಿಕೆಯೊಂದಿಗೆ ಲಿಂಗಪತ್ತೆ ನಡೆಸಿ, ನಂತರ ಅನಧಿಕೃತ ಕ್ಲಿನಿಕ್‌ಗಳಲ್ಲಿ ಅತ್ಯಂತ ಅನಾರೋಗ್ಯಕರ, ಅಪಾಯಕರ ಸ್ಥಿತಿಯಲ್ಲಿ ಭ್ರೂಣಹತ್ಯೆ ನಡೆಸುವ ಈ ಜಾಲ ಪತ್ತೆಯಾದ ಬೆನ್ನಲ್ಲೇ ಪಾಂಡವಪುರ, ಮೈಸೂರಿನಲ್ಲೂ ಇಂತಹ ಜಾಲಗಳಿರುವುದನ್ನು ಕಂಡುಹಿಡಿಯಲಾಯಿತು. ಇವೆಲ್ಲವೂ ಭ್ರೂಣಲಿಂಗಪತ್ತೆ ಮತ್ತು ಹೆಣ್ಣುಭ್ರೂಣಹತ್ಯೆಯನ್ನು ಕಾನೂನು ಪ್ರಕಾರ ಅಪರಾಧ ಎಂದು ಘೋಷಿಸಿಯಾದ ನಂತರವೂ ರಾಜಾರೋಷವಾಗಿ ನಡೆಯುತ್ತಿರುವ ಹೆಣ್ಣುಜೀವಗಳ ಕಗ್ಗೊಲೆಗಳು.

ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು: ವರ್ಗ, ಲಿಂಗ ಮತ್ತು ಜಾತಿಗಳ ಶ್ರೇಣಿಯಲ್ಲಿ ಎಲ್ಲಕ್ಕಿಂತ ಕೊನೆಯಲ್ಲಿರಿಸ್ಪಟ್ಟಿರುವ ದಲಿತ ಮಹಿಳೆಯರು, ಕೆಲಸದ ಸ್ಥಳದಲ್ಲೂ ಮತ್ತು ಅದರಿಂದ ಹೊರತಾದ ಸ್ಥಳಗಳಲ್ಲಿಯೂ ನಿರಂತರವಾಗಿ ತಾರತಮ್ಯ, ಅವಮಾನ ಮತ್ತು ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯು ವರದಿ ಮಾಡಿದೆ. ದಲಿತ ಸಮುದಾಯದ ಮೇಲೆ ಸೇಡು ತೀರಿಸಿಕೊಳ್ಳಲು ಅಥವಾ ಕುಟುಂಬದ ಯಾರನ್ನೇ ‘ಶಿಕ್ಷಿಸಲು’ ಮಹಿಳೆಯರ ಮೇಲೆ ಹೀನವಾದ ದೌರ್ಜನ್ಯ ನಡೆಸುವುದು ಕೊನೆಯಿಲ್ಲದೆ ನಡೆಯುತ್ತಿದೆ. 2023ರ ಡಿಸೆಂಬರ್‌ನಲ್ಲಿ ದಲಿತ ಮಹಿಳೆಯೊಬ್ಬರನ್ನು ಆಕೆಯ ಮಗ ಸವರ್ಣೀಯ ಹುಡುಗಿಯೊಂದಿಗೆ ಪಲಾಯನ ಮಾಡಿದನೆಂಬ ಕಾರಣಕ್ಕೆ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಿಂಸಿಸಲಾದ ಘಟನೆ ಇನ್ನೂ ಹಸಿಯಾದ ಗಾಯದಂತಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆಯೆಂಬುದು ಅಂಕಿಸಂಖ್ಯೆಗಳಿಂದ ಗೊತ್ತಾಗುತ್ತಿದೆ.

ಆಸಿಡ್ ದಾಳಿಗಳು: ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆಸಿಡ್ ದಾಳಿಗಳು ಯಾವುವೋ ಎರಡು ಪುಂಡ ಗುಂಪುಗಳ ನಡುವೆ ನಡೆಯುವ ಸೇಡಿನ ಆಸಿಡ್ ದಾಳಿಗಳಂತಲ್ಲ, ಅವು ಸ್ಪಷ್ಟವಾಗಿ ಲಿಂಗಾಧಾರಿತವಾದ ದೌರ್ಜನ್ಯಗಳೇ ಆಗಿವೆ. 2002ರಿಂದ ಕರ್ನಾಟಕದ ಮಹಿಳಾ ಸಂಘಟನೆಗಳು ‘ಆಸಿಡ್ ದಾಳಿ ವಿರೋಧಿ ಪ್ರಚಾರಾಂದೋಲನ’ದ ವೇದಿಕೆಯಲ್ಲಿ ಒಗ್ಗೂಡಿ ಒಂದು ದಶಕ ಕಾಲ ಹೋರಾಟ ನಡೆಸಿದ ಪರಿಣಾಮವಾಗಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಮತ್ತು ನೊಂದವರಿಗೆ ನೆರವಾಗುವ ‘ಸುರಕ್ಷಾ’ ಮೊದಲಾದ ಯೋಜನೆಗಳು ಜಾರಿಯಾಗಿವೆ. ಆದರೂ ಕರ್ನಾಟಕದ ಹೆಣ್ಣುಮಕ್ಕಳು ಈ ಅಪಾಯದಿಂದ ಈಗಲೂ ಸುರಕ್ಷಿತರಾಗಿಲ್ಲ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

2024ರ ಆರಂಭದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಮಂದಿ ಪಿಯುಸಿ ವಿದ್ಯಾರ್ಥಿನಿಯರು ವ್ಯಕ್ತಿಯೊಬ್ಬ ಎರಚಿದ ಆಸಿಡ್‌ನಿಂದಾಗಿ ಸುಟ್ಟಗಾಯಗಳಿಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗೆ ‘ಕರ್ನಾಟಕದಲ್ಲಿ ಸರಿಯಾಗಿ ಬಟ್ಟೆ ಧರಿಸಿ, ಇಲ್ಲದಿದ್ದರೆ ಆಸಿಡ್ ದಾಳಿಗೆ ತುತ್ತಾಗುತ್ತೀರಿ’ ಎಂಬ ಬೆದರಿಕೆ ಒಡ್ಡಿದ ಘಟನೆಯೂ ಇದೇ ವರ್ಷ ನಡೆದಿದೆ. ಬೆಂಗಳೂರು ಈಗಲೂ ಮಹಿಳೆಯರ ಮೇಲೆ ಅತಿಹೆಚ್ಚು ಆಸಿಡ್ ದಾಳಿಗಳು ನಡೆಯುವ ಭಾರತದ ನಗರಗಳಲ್ಲಿ ಒಂದಾಗಿದೆ (19 ಪ್ರಕರಣಗಳು ಪ್ರತಿವರ್ಷ).

ಹೊಸ ಶತಮಾನದಲ್ಲೂ ಹಳೆಯ ಕೊಳೆತ ಮನಸ್ಥಿತಿ-ಮಹಿಳೆಯರ ಮೇಲೆ ಮತ್ತಷ್ಟು ಹಿಂಸೆಗಳು

 ಇಂದು, ಹಳೆಬಗೆಯ ಹಿಂಸೆಯ ಘಟನೆಗಳು ಮತ್ತಷ್ಟು ವ್ಯಾಪಕಗೊಳ್ಳುತ್ತಾ ಸಂಖ್ಯೆ ಮತ್ತು ಕ್ರೌರ್ಯವನ್ನು ಹೆಚ್ಚಿಸಿಕೊಂಡು ಹಬ್ಬುತ್ತಿವೆ ಮಾತ್ರವಲ್ಲ, ಹೊಸಬಗೆಯ ಹಿಂಸೆಯ ಪ್ರಕರಣಗಳೂ ಬೆಳೆಯುತ್ತಿವೆ.

(ಮುಂದುವರಿಯುತ್ತದೆ…)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

mallige sirimane2
ಮಲ್ಲಿಗೆ ಸಿರಿಮನೆ
+ posts

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...