ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-2)

Date:

(ಮುಂದುವರಿದ ಭಾಗ…) ಡಿಜಿಟಲ್ ಯುಗದಲ್ಲಿ ಡಿಜಿಟಲ್ ಹಿಂಸೆ: ಡಿಜಿಟಲ್ ರಂಗದಲ್ಲಿ ಬೆಳೆಯುತ್ತಿರುವ ಮಾಧ್ಯಮಗಳು ಮತ್ತು ಅವುಗಳ ವ್ಯಾಪಕವಾದ ಪ್ರಭಾವದ ಕಾರಣಕ್ಕೆ ಅನೇಕ ರೀತಿಗಳಲ್ಲಿ ಮಹಿಳೆಯರ ಮೇಲಿನ ಹಿಂಸೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ನಡೆಸುವ ಅಪಾಯಕರವಾದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ.

ಮಹಿಳೆಯರನ್ನು ಆಧರಿಸಿ ತಮ್ಮ ವ್ಯಾಪಾರಿ ಜಾಲವನ್ನೂ, ಲಾಭದ ಪ್ರಮಾಣವನ್ನೂ ಭಾರೀ ಮಟ್ಟದಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ವಿವಿಧ ಬಗೆಯ ಸರಕುಗಳನ್ನು ಉತ್ಪಾದಿಸುವ ದೊಡ್ಡ ಕಂಪೆನಿಗಳು ಮತ್ತು ಮನರಂಜನಾ ಉದ್ದಿಮೆ, ತಮ್ಮ ಲಾಭದಾಸೆಗೆ ಕೆಟ್ಟ ಮಹಿಳಾ ವಿರೋಧಿ ದೃಷ್ಟಿಯನ್ನು ಸಮಾಜದಲ್ಲಿ ಬಿತ್ತುತ್ತಿವೆ. ಇದರಿಂದಾಗಿಯೂ ಮತ್ತೆ ಮಹಿಳೆಯರನ್ನು ಸರಕಿನಂತೆ ಬೇಕಾಬಿಟ್ಟಿ ಬಳಸಬಹುದೆಂಬ ಸಲೀಸಾದ ಮನಸ್ಥಿತಿ ಜನರಲ್ಲಿ ಬೆಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಉಚಿತವಾಗಿ ಮತ್ತು ಸುಲಭವಾಗಿ ದೊರೆಯುತ್ತಿರುವ ಅಂತರ್ಜಾಲದ ಸೇವೆಯ ಕಾರಣದಿಂದ ಅತ್ಯಂತ ವ್ಯಾಪಕವಾಗಿರುವ ಪೋರ್ನ್‌ಗಳನ್ನು (ಅಶ್ಲೀಲ ನೀಲಿ ಚಿತ್ರಗಳು) ಯಾವುದೇ ನಿಯಂತ್ರಣವಿಲ್ಲದೆ ಮಕ್ಕಳಾದಿಯಾಗಿ ಎಲ್ಲರೂ ಬಳಸುವುದು ಹಬ್ಬಿದೆ. ಇದಕ್ಕೆ ಯಾವುದೇ ನೀತಿ ನಿಯಮಗಳಿಲ್ಲದಂತೆ ಹರಡಿಸುವುದು ಕೂಡಾ ಒಂದು ವ್ಯಾಪಾರಿ ತಂತ್ರವೇ ಆಗಿದೆ. ವಿವೇಚನೆಯಿಲ್ಲದೆ ಹರಡಿರುವ ಪೋರ್ನ್‌ಗಳ ಪ್ರಭಾವದಿಂದ ವಿಕೃತವಾಗಿ ಕ್ರೌರ್ಯ ಮತ್ತು ಲೈಂಗಿಕ ಹಿಂಸೆಯು ಮಹಿಳೆಯರು-ವಿಶೇಷವಾಗಿ ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿವೆ. 2016ರಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ನಡೆದ 9 ವರ್ಷ ವಯಸ್ಸಿನ ಹೆಣ್ಣುಮಗುವಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ 17 ವರ್ಷದ ಬಾಲಕ. ಆತ ತನ್ನ ತಪ್ಪೊಪ್ಪಿಗೆಯಲ್ಲಿ ಪೋರ್ನ್ ಸೈಟ್‌ಗಳನ್ನು ಸ್ನೇಹಿತರ ಜೊತೆ ಸೇರಿ ಯಾವಾಗಲೂ ನೋಡುತ್ತಿದ್ದು, ಅದನ್ನು ಪ್ರಯೋಗಿಸಲೆಂದು ಬಾಲಕಿಯ ಮೇಲೆ ಇಂತಹ ಕ್ರೌರ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮನರಂಜನೆ ಉದ್ದಿಮೆ (ಸಿನೆಮಾ, ಧಾರಾವಾಹಿ ಮೊದಲಾದವು)ಯು ದಿನೇ ದಿನೇ ಹೆಚ್ಚೆಚ್ಚು ಕ್ರೌರ್ಯ ಮತ್ತು ಮಹಿಳೆಯರ ನೆಗೆಟಿವ್ ಚಿತ್ರಣಗಳಿಂದ ತುಂಬಿತುಳುಕುತ್ತಿದೆ. ಇತ್ತೀಚೆಗೆ ಸದ್ದು ಮಾಡಿದ ಕೆಜಿಎಫ್, ಅನಿಮಲ್ ಮೊದಲಾದ ಚಿತ್ರಗಳು ಈ ಪ್ರಶ್ನೆಗಳನ್ನು ಎತ್ತಿದವು. ಹಾಗೆಯೇ, ದಿನನಿತ್ಯದ ಧಾರಾವಾಹಿಗಳು ಮಹಿಳೆಯರ ಸ್ವತಂತ್ರ, ಸ್ವಾಭಿಮಾನಿ ವ್ಯಕ್ತಿತ್ವವನ್ನು ಪೋಷಿಸುವ ಬದಲು, ನೆಗೆಟಿವ್ ಪಾತ್ರಗಳನ್ನೇ ವೀಕ್ಷಕರ ಮನಸ್ಸಿನಲ್ಲಿ ತುಂಬಿಸುತ್ತಾ ಹೋಗುತ್ತಿದ್ದಾರೆ. ಮೌಢ್ಯ ಮತ್ತು ಅವೈಜ್ಞಾನಿಕತೆಯನ್ನು ಮಹಿಳೆಯರ ನಡುವೆ ಹರಡುವುದರಲ್ಲಿ ಟಿ.ವಿ ಕಾರ್ಯಕ್ರಮಗಳ ಪಾತ್ರ ಬಹಳ ದೊಡ್ಡದಾಗಿದೆ.

ಪ್ರಭುತ್ವದ ಮುಂದಾಳತ್ವದಲ್ಲಿ ನಡೆಯುವ ಹಿಂಸಾಚಾರ: ಪ್ರಭುತ್ವದ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಘಪರಿವಾರದ ರೌಡಿಪಡೆಗಳು ರಾಜ್ಯಾದ್ಯಂತ ಹಿಂಸೆಯ ಸರಣಿಗಳನ್ನೇ ನಡೆಸಿವೆ. ಗೋರಕ್ಷಣೆಯ ಹೆಸರಿನ ದಾಳಿಗಳು, ಉಪನ್ಯಾಸಕರು ಮತ್ತು ಪ್ರೊಫೆಸರ್‌ಗಳ ಮೇಲಿನ ದಾಳಿಗಳು, ‘ಲವ್ ಜಿಹಾದ್’ ಎಂಬ ಭ್ರಮೆ ಸೃಷ್ಟಿಸಿ ನಡೆಸುತ್ತಿರುವ ‘ಅನೈತಿಕ ರೌಡಿಗಿರಿ’ಗಳು, ಹಿಜಾಬ್ ವಿರೋಧ ಇತ್ಯಾದಿಗಳಿಗೆ ಲೆಕ್ಕವೇ ಇಲ್ಲ.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)

ಜಾಗತೀಕರಣದ ಕಾಲದ ನಂತರದ ಕಾರ್ಪೊರೇಟ್ ಬಂಡವಾಳಶಾಹಿ ಶಕ್ತಿಗಳು ಅಗಾಧವಾಗಿ ಬೆಳೆದು ಇಡೀ ಸರ್ಕಾರವನ್ನು ಆವರಿಸಿಕೊಂಡಿವೆ, ಸಮಾಜವನ್ನು ಅವಕ್ಕೆ ಬೇಕಾದ ಸಾಂಸ್ಕೃತಿಕ ಮೌಲ್ಯಗಳಿಂದ ತುಂಬಿಬಿಟ್ಟಿವೆ! ಈ ಮೌಲ್ಯಗಳ ಪರಿಣಾಮವಾಗಿ ಒಂದೆಡೆ ಮಹಿಳೆಯರು ಈ ಲಾಭಕೋರ ಶಕ್ತಿಗಳ ಗ್ರಾಹಕರಾಗಿಯೂ, ಮತ್ತೊಂದೆಡೆ ಆ ಗ್ರಾಹಕರಿಗೆ ವಸ್ತುಗಳನ್ನು ಮಾರುವ ವಾಹಕರಾಗಿಯೂ ಶೋಷಣೆಗೆ ತುತ್ತಾಗಿದ್ದಾರೆ. ಇಂದು ಪ್ರವಾಸೋದ್ಯಮ, ಮನರಂಜನೆಯ ಹೆಸರಿನ ಪೋರ್ನ್ ಚಾನಲ್‌ಗಳು ಮುಂತಾದ ಅನೇಕ ಕ್ಷೇತ್ರಗಳು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ‘ಬಣ್ಣದ ಹೆಸರು’ಗಳ ಅಡಿಯಲ್ಲಿ ಮಾನ್ಯಗೊಳಿಸುತ್ತಿವೆ. ಲೈಂಗಿಕ ಉದ್ದೇಶಗಳಿಗೆ ಮಾರಾಟವಾಗುವ ಅಥವಾ ಸಾಗಾಣಿಕೆಯಾಗುವ ಮಹಿಳೆಯರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚುತ್ತಿದ್ದು, ಇಡೀ ದೇಶದಲ್ಲಿ ರಾಜ್ಯವಿಂದು 5ನೇ ಸ್ಥಾನದಲ್ಲಿದೆ.

6 17
ಸಾಂದರ್ಭಿಕ ಚಿತ್ರ

ಕಳೆದ 50 ವರ್ಷಗಳಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ, ಇಡೀ ದೇಶದಲ್ಲಿ ನಡೆದ ಅನೇಕ ಕ್ರೂರವಾದ ಹಿಂಸೆಯ ಘಟನೆಗಳು ಮತ್ತು ಅವುಗಳ ವಿರುದ್ಧ ನಡೆದ ಬೃಹತ್ ಹೋರಾಟಗಳ ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ಹಿಂಸೆ ತಡೆ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರ ತಡೆ ಕಾಯ್ದೆ ಮುಂತಾದ ಕಾನೂನುಗಳೂ, ಹಲವಾರು ವಿಶೇಷ ಪರಿಣತ ಸಮಿತಿಗಳು ಮತ್ತು ಅವುಗಳ ವರದಿಗಳು- ಎಲ್ಲವೂ ನಮಗೆ ದೊರೆತಿವೆ. ಇಂದು ಲೈಂಗಿಕ ಹಿಂಸಾಚಾರದ ಬಲಿಪಶುಗಳು ಹೊರಬಂದು ದನಿಯೆತ್ತಲು ಬೇಕಿರುವ ಒಂದಷ್ಟು ಬೆಂಬಲದ ರಚನೆಗಳು ಅಸ್ತಿತ್ವದಲ್ಲಿವೆ. ಇದೆಲ್ಲದಕ್ಕೂ ಮಹಿಳಾ ಚಳವಳಿ ನಡೆಸಿದ ಸುದೀರ್ಘ ಸಂಘರ್ಷವೇ ಕಾರಣ. ಆದರೂ, ಅದೇ ಸಮಯದಲ್ಲಿ ಭಾರತದಲ್ಲೂ ಕರ್ನಾಟಕದಲ್ಲೂ ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರಗಳು ಎಗ್ಗಿಲ್ಲದಂತೆ ಹೆಚ್ಚಾಗುತ್ತಲೇ ಹೋಗುತ್ತಿರುವುದೂ ಕೂಡಾ ವಾಸ್ತವ. ಇದರ ಕಾರಣಗಳು ಹಲವು ಪದರುಗಳಲ್ಲಿ ಹೆಣೆದುಕೊಂಡಿವೆ.

ಮಹಿಳೆಯರ ಮೇಲಿನ ‘ಹಿಂಸಾಚಾರದ ಸಂಸ್ಕೃತಿ’- ಮೂಲಕಾರಣಗಳು

ಪಿತೃಪ್ರಭುತ್ವ ಹೊಕ್ಕಳುಬಳ್ಳಿಯ ಸಂಬಂಧ

ಭಾರತದ ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಉಮಾ ಚಕ್ರವರ್ತಿ ಅವರು ತಮ್ಮ ‘ಪಿತೃಪ್ರಭುತ್ವದ ಉಗಮ’ (ಆರಿಜಿನ್ ಆಫ್ ಪೇಟ್ರಿಯಾರ್ಕಿ) ಪುಸ್ತಕದಲ್ಲಿ, ಭಾರತದಲ್ಲಿ ಶತಮಾನಗಳಿಂದಲೂ ಬೇರೂರಿ, ಇಂದಿಗೂ ದೊಡ್ಡ ವ್ಯತ್ಯಾಸವಿಲ್ಲದೆ ಮುಂದುವರೆದಿರುವ ಮಹಿಳೆಯರ ಮೇಲಿನ ಹಿಂಸೆಯ ಐತಿಹಾಸಿಕ, ಸಮಾಜೋ-ಸಾಂಸ್ಕೃತಿಕ ಮೂಲವನ್ನು ಹೀಗೆ ಗುರುತಿಸಲು ಪ್ರಯತ್ನಿಸುತ್ತಾರೆ-“ಭಾರತದ ವರ್ಗ- ಜಾತಿ ಸಂರಚನೆಗಳಿಂದ ತುಂಬಿಹೋಗಿರುವ ಪಿತೃಪ್ರಧಾನತೆಯಿಂದ ರಚಿಸಲ್ಪಟ್ಟ ಮಹಿಳೆಯರ ಮೇಲಿನ ದೌರ್ಜನ್ಯದ ವಿನ್ಯಾಸವು, ಉಚ್ಚಕುಲದವರ ನಿರ್ದೇಶನದ ಮೇರೆಗೆ ಅವರ ಅಗತ್ಯಾನುಸಾರ ರೂಪಿಸಲ್ಪಟ್ಟಿದೆ. ಆಳುತ್ತಿದ್ದ ವರ್ಗಗಳ ಹಿತಾಸಕ್ತಿಯ ಈಡೇರಿಕೆಗಾಗಿ ಜಾತಿ ವ್ಯವಸ್ಥೆಯ ರಚನೆಯು ಅವರಿಗೆ ಅಗತ್ಯವಾಗಿತ್ತು. ಇದಕ್ಕಾಗಿ ಅವರು ಪೂರೈಸಬೇಕಿದ್ದ ಮೊಟ್ಟಮೊದಲ ಹೆಜ್ಜೆ ಮಹಿಳೆಯರ ಲೈಂಗಿಕತೆ ಮತ್ತು ಚಲನಶೀಲನೆಯನ್ನು ಸರ್ವವಿಧದಲ್ಲೂ ನಿಯಂತ್ರಿಸುವುದಾಗಿತ್ತು. ಈ ವಿನ್ಯಾಸದ ಅಡಿಪಾಯವಿದ್ದದ್ದೇ ಹಿಂಸೆಯಲ್ಲಿ ಎಂಬುದನ್ನು ಮನುಸ್ಮೃತಿ ಮತ್ತಿತರ ಶಾಸ್ತ್ರಗ್ರಂಥಗಳೊಳಗಿನ ಹೇರಳವಾದ ಉದಾಹರಣೆಗಳಿಂದ ನಾವು ತಿಳಿಯಬಹುದು…..”.

“…..ಹೀಗೆ ಜಾತಿಗಳಲ್ಲಿ ಶ್ರೇಣೀಕರಣ ಮತ್ತು ಅದರೊಳಗೆ ಬ್ರಾಹ್ಮಣ್ಯದ ಮೇಲ್ಮೆಯನ್ನು ಸಾಧಿಸಿಕೊಳ್ಳಲು ಹುಟ್ಟಿದ ವ್ಯವಸ್ಥೆಯು ನಿಧಾನವಾಗಿ ಸಿದ್ಧಾಂತವಾಗಿ ಬದಲಾಯಿತು. ಆಸ್ತಿ ಹಕ್ಕು ಮತ್ತು ಅಧಿಕಾರವನ್ನು ನಿರಾಕರಿಸಿ ಸಾಮಾಜಿಕವಾಗಿ ದುರ್ಬಲರನ್ನಾಗಿಸಿಟ್ಟ ಜಾತಿಗಳಿಗೆ ಹಾಗೂ ದಮನಿಸಲ್ಪಟ್ಟ ಲಿಂಗಕ್ಕೆ ಸೇರಿದವರನ್ನು ‘ಶಿಕ್ಷಿಸುವುದು’, ‘ನಿಯಂತ್ರಿಸುವುದು’ ನಿಯಮವಾಯಿತು. ಹಾಗಾಗಿ ಇಂದು ಪುರುಷರಷ್ಟೇ ಅಲ್ಲ, ಸ್ವತಃ ಮಹಿಳೆಯರೂ ಈ ಸಿದ್ಧಾಂತಕ್ಕನುಸಾರವಾಗಿ ನಡೆದುಕೊಳ್ಳುವುದೇ ತಮ್ಮ ಸ್ವಂತಿಕೆಯ ಅತಿಮುಖ್ಯವಾದ ಅಭಿವ್ಯಕ್ತಿ ಎಂದು ಭಾವಿಸುತ್ತಾರೆ. ಆದ್ದರಿಂದಲೇ ಅತ್ಯಂತ ಅಮಾನುಷವಾದಂತಹ ಹಿಂಸೆಯ ಪದ್ಧತಿಗಳೂ ಕೂಡಾ ಸಮಾಜದಲ್ಲಿ ಮಾನ್ಯವಾಗಿವೆ ಮತ್ತು ಉಳಿದುಕೊಂಡೇ ಬಂದಿವೆ…..”.

ಇಂದಿನ ಮಾರುಕಟ್ಟೆ ವ್ಯವಸ್ಥೆಯಾಗಲೀ, ಭಾರತದ ಮತ್ತು ಇತರೆಡೆಗಳ ಪ್ರಾಚೀನ ಯಾಜಮಾನ್ಯ ಸಂಸ್ಕೃತಿಗಳಾಗಲೀ, ಪಿತೃಪ್ರಭುತ್ವವನ್ನೂ ಬಂಡವಾಳವಾಗಿಸಿಕೊಂಡು ಹುಲುಸಾಗಿ ಬೆಳೆದಿವೆಯೇ ಹೊರತು, ಇದನ್ನು ಬದಲಿಸುವ ಅಗತ್ಯ ಅಂತಹ ವ್ಯವಸ್ಥೆಗಳಿಗಿಲ್ಲ. ಬದಲಿಗೆ ಪಿತೃಪ್ರಭುತ್ವದ ಫಲಾನುಭವಿಗಳಾಗಿರುವ ಈ ಎಲ್ಲ ಆಡಳಿತ-ಸಾಮಾಜಿಕ ವ್ಯವಸ್ಥೆಗಳೂ ಕೂಡಾ ಅದನ್ನು ಮುಂದುವರೆಸಿಕೊಂಡೇ ಬಂದಿವೆ. ಹೀಗಿರುವುದರಿಂದಲೇ ಮಹಿಳೆಯರ ಅಧೀನ ಸ್ಥಿತಿಯನ್ನು ಬದಲಿಸುವುದು ಹಾಗೂ ಪಿತೃಪ್ರಭುತ್ವದ ಅತ್ಯಂತ ಕ್ರೂರವಾದ ಹಲವು ಬಗೆಯ ಹಿಂಸೆಯ ರೂಪಗಳ ವಿರುದ್ಧ ಹೋರಾಡುವುದು ಬಹುದೊಡ್ಡ ಸವಾಲೇ ಆಗಿದೆ.

ಎಚ್ಚೆತ್ತ ದನಿಗಳನ್ನು ಅಡಗಿಸುವ ಹುನ್ನಾರ- ಹೆಚ್ಚಿರುವ ಹಿಂಸಾಚಾರ ಪ್ರಪಂಚದಾದ್ಯಂತ ಶೋಷಣೆಗೊಳಗಾದವರು ದನಿಯೆತ್ತಿದಾಗೆಲ್ಲ ಅವರ ದನಿಯಡಗಿಸಲು ಇನ್ನಷ್ಟು ಹೆಚ್ಚು ದೌರ್ಜನ್ಯಗಳಿಗೆ ಅವರನ್ನು ಗುರಿಪಡಿಸುವ ವಿದ್ಯಮಾನ ನಡೆದಿರುವುದನ್ನು ಕಾಣುತ್ತೇವೆ. ಫ್ರೆಂಚ್ ಮನಶಾಸ್ತ್ರಜ್ಞ ಮತ್ತು ಅಲ್ಜೀರಿಯಾದ ವಿಮೋಚನೆಯ ಹೋರಾಟದ ಬೆಂಬಲಿಗ ಫ್ರಾಂಟ್ಜ್ ಫ್ಯಾನನ್ ಇದನ್ನು ‘ದಮನ ಮತ್ತು ಹಿಂಸೆಯ ನಡುವಿನ ಬಿಡಿಸಲಾಗದ ನಂಟು’ ಎಂದು ಹೇಳುತ್ತಾನೆ. ಮಹಿಳೆಯರ ಮೇಲೆ ಹೆಚ್ಚಿರುವ ದೌರ್ಜನ್ಯಗಳ ಹಿಂದೆ ಈ ಕಾರಣವನ್ನೂ ಗುರುತಿಸಬೇಕಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಎತ್ತಿಹಿಡಿದಂತೆಲ್ಲ, ಅವರ ದನಿಯನ್ನು ಅಡಗಿಸುವ ಪ್ರಯತ್ನಗಳು ಹೆಚ್ಚುತ್ತವೆ. ಕುಟುಂಬ ಅಥವಾ ಖಾಸಗಿ ವಲಯದೊಳಗೆ ಇದು ಬಿಡಿ ಘಟನೆಗಳ ರೂಪದಲ್ಲಿ ಕಾಣಬಹುದು, ವಿಶಾಲವಾದ ಸಮಾಜದಲ್ಲಿ ಇದು ಇಡೀ ಒಂದು ಕಾಲಘಟ್ಟದ ಆಲೋಚನಾ ಕ್ರಮವಾಗಿ ಕಾಣಿಸಿಕೊಳ್ಳಬಹುದು. ಸಮಾಜವು ಮಹಿಳೆಯರು ಮತ್ತು ಎಲ್ಲ ಶೋಷಿತರ ಕುರಿತಾದ ಸಿದ್ಧಮಾದರಿಗಳನ್ನು ಜಾರಿಯಲ್ಲಿಟ್ಟಿರುತ್ತದೆ ಮತ್ತು ಅದರ ಉಲ್ಲಂಘನೆಗಳನ್ನು ಸಹಿಸದೆ ಶಿಕ್ಷಿಸಲು ನೋಡುತ್ತದೆ. ಹೀಗಾಗಿ, ಇಡಿಯಾಗಿ ಮಹಿಳಾ ಸಮುದಾಯ ಇಂದು ಗಳಿಸಿರುವ ಆತ್ಮವಿಶ್ವಾಸ, ಸ್ವಾವಲಂಬನೆ, ಎಚ್ಚರಗಳು ಮತ್ತು ಅದರಿಂದಾಗಿ ತಮ್ಮ ಮೇಲಿನ ಅವಮಾನ-ಹಿಂಸಾಚಾರದ ವಿರುದ್ಧ ಅವರೆತ್ತಿರುವ ದನಿಯು, ಅವರ ಮೇಲೆ ಸಮಾಜ ಮತ್ತು ಪ್ರಭುತ್ವಗಳ ರಾಚನಿಕ ಹಿಂಸೆ ಹೆಚ್ಚಲು ಕಾರಣವೂ ಆಗಿದೆ.

ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?

ಫ್ಯಾಸಿಸ್ಟ್ ಮತ್ತು ಕಾರ್ಪೊರೇಟ್ ಜಂಟಿ ದಾಳಿ- ದುರ್ಬಲಗೊಂಡ ಮಹಿಳಾ ಚಳವಳಿ:

ಮಹಿಳಾ ಚಳವಳಿ ಮತ್ತು ಅದೇ ಸಮಯದಲ್ಲಿ ತೀವ್ರವಾಗಿ ನಡೆಯುತ್ತಿದ್ದ ಇನ್ನಿತರ ಜನಪರ ಚಳವಳಿಗಳು ಸರ್ಕಾರದ ನೀತಿ- ಯೋಜನೆಗಳಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾದವು. ಜೊತೆಜೊತೆಗೆ ಸಮಾಜದ ದಮನಿತ ಜನವಿಭಾಗಗಳಲ್ಲಿ ವಿಶೇಷವಾದ ಎಚ್ಚರ ಮೂಡುವುದಕ್ಕೂ ಇಂಬುಕೊಟ್ಟವು. ಮಹಿಳೆಯರ ವಿಚಾರಕ್ಕೆ ಬರುವುದಾದರೆ, ಹೆಚ್ಚಿದ ಮಹಿಳಾ ಶಿಕ್ಷಣ, ಸ್ವಾವಲಂಬನೆ, ವೈಚಾರಿಕತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯ, ಹಿಂಸೆಯ ವಿರುದ್ಧ ದನಿಯೆತ್ತುವ ಸಾಧ್ಯತೆ, ಸರ್ಕಾರದಲ್ಲೂ ಸ್ಥಳೀಯ ಸಂಸ್ಥೆಗಳಲ್ಲೂ ಪ್ರಾತಿನಿಧ್ಯ- ಇಂತಹ ಹತ್ತು ಹಲವು ಸಕಾರಾತ್ಮಕ ಬದಲಾವಣೆಗಳು ಕಂಡವು.

rss 7
ಆರ್‌ಎಸ್‌ಎಸ್‌ (ಸಾಂದರ್ಭಿಕ ಚಿತ್ರ)

ಈ ಎಲ್ಲ ಕಾರಣಕ್ಕೆ ಬಲಗೊಂಡಿದ್ದ ಮಹಿಳಾ ದನಿ 21ನೇ ಶತಮಾನ ಕಾಲಿಟ್ಟಂತೆ ಗಮನಾರ್ಹವಾಗಿ ದುರ್ಬಲವಾಯಿತು. ಸಮಾಜದಲ್ಲಿ ಬೇರೂರಿಕೊಂಡಿರುವ ಮನುವಾದವು ಅತ್ಯಂತ ನಗ್ನ ಸ್ವರೂಪದಲ್ಲಿ ಬಲಪಂಥೀಯ ಫ್ಯಾಸಿಸಂ ಆಗಿ ಕ್ರೂರವಾಗಿ ಇಂದು ಹರಡಿದಂತೆ, ಮಹಿಳೆಯರು ಎದುರಿಸುತ್ತಿರುವ ಹಲವು ಬಗೆಯ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಹಲವು ಪಟ್ಟು ಹೆಚ್ಚಿವೆ; ಮಾತ್ರವಲ್ಲ, ಈ ಬಗೆಯ ದೌರ್ಜನ್ಯಕ್ಕೆ ಧಾರ್ಮಿಕ ಮತ್ತು ಸಾಮಾಜಿಕ ಮಾನ್ಯತೆ ದೊರಕಿಸುವ ಕೆಲಸವನ್ನು ಬಲಪಂಥೀಯ ಸಾಂಸ್ಕೃತಿಕ-ಧಾರ್ಮಿಕ ಯಂತ್ರಾಂಗ ಮಾಡುತ್ತಿದೆ. ಅವರ ಧಾರ್ಮಿಕ ಸಂಸ್ಥೆಗಳು, ‘ದೇವಮಾನವರು’, ಪುಂಡ ಸಂಘಟನೆಗಳ ನಾಯಕ-ನಾಯಕಿಯರು ಮತ್ತು ಈಗ ಅವರದ್ದೇ ಕೈಗೊಂಬೆಗಳಾಗಿರುವ ಮಾಧ್ಯಮಗಳು- ಇವೆಲ್ಲವುಗಳ ಒಂದು ಪ್ರಮುಖ ಗುರಿ ಮನುಸ್ಮೃತಿ ಹೇಳಿರುವ ‘ವಿಧೇಯ’ ಮಹಿಳೆಯ ‘ಮಾದರಿ’ಯನ್ನು ಪುನಃ ಮುಖ್ಯವಾಹಿನಿಗೆ ತರುವುದು. ಭಾರತದಲ್ಲಿ ಫ್ಯಾಸಿಸ್ಟ್ ಸಿದ್ಧಾಂತವನ್ನು ಬೇರೂರಿಸುವುದನ್ನು ಮತ್ತು ಧರ್ಮಾಧಾರಿತವಾದ ರಾಜಕೀಯ-ಸಾಮಾಜಿಕ ವ್ಯವಸ್ಥೆ ನಿರ್ಮಿಸುವುದನ್ನೇ ಗುರಿಯಾಗಿಟ್ಟುಕೊಂಡಿರುವ ಆರೆಸ್ಸೆಸ್‌ಪ್ರವರ್ತಕರು ಮತ್ತು ವಕ್ತಾರರು, ಬಗೆಯ ‘ಮಾದರಿ’ ಮಹಿಳೆಯನ್ನು ‘ಭಾರತೀಯ ಮಹಿಳೆ’ ಎಂಬ ಬಿರುದಿನಿಂದ ಗುರುತಿಸುತ್ತಾರೆ. ಕಳೆದ ಶತಮಾನದ ಉತ್ತರಾರ್ಧದಿಂದೀಚೆಗೆ ಸಮಾಜವನ್ನು ಮುಂದಕ್ಕೊಯ್ಯುವ ಪ್ರಗತಿಪರ ವಿಚಾರಗಳುಳ್ಳ ಮಹಿಳಾ ಸಂಘಟನೆಗಳಲ್ಲಿ ಸಂಘಟಿತರಾಗುತ್ತಿದ್ದ ಮಹಿಳೆಯರು, ಈಗ ತೀರ್ಥಯಾತ್ರೆಗಳಿಗೆ ಕರೆದೊಯ್ಯುವ ಮಹಿಳಾ ಗುಂಪುಗಳಲ್ಲಿ, ವಿವಿಧ ವ್ರತಗಳನ್ನು, ಪೂಜೆಗಳನ್ನು ಕಲಿಸಿಕೊಡುವ ಸಂಘಗಳಲ್ಲಿ ಸೇರುತ್ತಿದ್ದಾರೆ. ಹೀಗಾಗಿಯೇ ಸಮಾಜವು ದಶಕಗಳ ಕಾಲದ ಮಹಿಳಾ ಸಂಘರ್ಷದಿಂದ ಪಡೆದಿದ್ದ ಮುಂಚಲನೆಯು ಸ್ಥಗಿತಗೊಂಡು ಮತ್ತೊಮ್ಮೆ ಮಹಿಳಾ ದಮನದೆಡೆಗೆ, ಯಾಜಮಾನ್ಯ ವ್ಯವಸ್ಥೆಯೆಡೆಗೆ ಹಿಂಚಲನೆ ಆರಂಭಗೊಂಡಿದೆಯೆಂದು ಭಾಸವಾಗುತ್ತದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ನಿರ್ಣಾಯಕವಾದ ವಿಷಯ.

ಇಟ್ಟ ಹೆಜ್ಜೆ ಮುಂದಕ್ಕ.. ಇಡಲುಬಾರದು ಹಿಂದಕ್ಕ…

ಮಹಿಳಾ ಚಳವಳಿಯು ಮಹಿಳೆಯರ ಮೇಲಿನ ಎಲ್ಲ ಬಗೆಯ ಹಿಂಸಾಚಾರವನ್ನು ಕೊನೆಗೊಳಿಸಿ, ತಾರತಮ್ಯಗಳನ್ನು ನಿವಾರಿಸಿ, ಸಮತೆಯ ಸಮಾಜ ಕಟ್ಟುವ ಪಣತೊಟ್ಟು ಮುಂದಡಿಯಿಟ್ಟಿದೆ. ಈಗ ಆ ಕನಸಿನ ಕಿಡಿಯನ್ನು ಆರದಂತೆ ಕಾಪಿಟ್ಟುಕೊಂಡು, ಗುರಿಯೆಡೆಗೆ ದೃಢವಾದ ಹೆಜ್ಜೆಯಿಡುವ ನಿರ್ಧಾರ ನಮ್ಮದಾಗಬೇಕು. ಇದು ಹೇಳಿದಷ್ಟು ಸುಲಭದ ಕೆಲಸವಲ್ಲ, ಆದರೂ ನಡೆಯಲೇಬೇಕಾದ ಅತ್ಯಗತ್ಯವಾದ ಕೈಂಕರ್ಯ.

ಇಂದು ಈ ದನಿಯನ್ನು ಉಡುಗಿಸುವ ಪ್ರತಿಗಾಮಿ ಶಕ್ತಿಗಳ ಕೈಮೇಲಾಗಿರುವ ಸನ್ನಿವೇಶದಲ್ಲಿ ಮಹಿಳೆಯರ ಮುಂದಿನ ಸವಾಲು ದೊಡ್ಡದಿದೆ, ಸಂಕೀರ್ಣವಾಗಿದೆ.

ಈಗ ನಾವೇನು ಮಾಡಬಹುದು?

“ನಮಗೆ ವ್ಯವಸ್ಥಿತ ಬದಲಾವಣೆಯ ಅಗತ್ಯವಿದೆ, ಅದು ಬಹುಮುಖಿ ವಿಧಾನದ ಮೂಲಕ ಮಾತ್ರ ಸಂಭವಿಸಲು ಸಾಧ್ಯ” ಎನ್ನುತ್ತಾರೆ ಡೇಟಾ ವಿಜ್ಞಾನಿಗಳಾದ ಬುಶ್ರಾ ಅನ್ಸಾರಿ ಮತ್ತು ಸೌಮ್ಯ ರಾಜಾರಾಂ. “ಲಿಂಗಾಧಾರಿತ ಸಿದ್ಧಮಾದರಿಗಳು ಮತ್ತು ಪೂರ್ವಗ್ರಹಗಳನ್ನ್ನು ಬದಲಿಸುವ ಪ್ರಯತ್ನಗಳು ಮತ್ತು ವಿಧಾನಗಳನ್ನು ಬಾಲ್ಯದ ಶಿಕ್ಷಣ ಹಾಗೂ ಮನೆಯ-ಸಮುದಾಯದ ಒಳಗಿನ ವಾತಾವರಣವನ್ನು ಲಿಂಗಸಂವೇದಿಯನ್ನಾಗಿಸುವುದರ ಮೂಲಕ ಕಾರ್ಯಗತಗೊಳಿಸಬಹುದು. ಈ ದಿಕ್ಕಿನಲ್ಲಿ ಅತಿ ಮುಖ್ಯವಾದ ಕೆಲಸ ಜೆಂಡರ್ ವರ್ತನೆಗಳನ್ನು ಬದಲಿಸುವುದಕ್ಕಾಗಿ ಮಹಿಳೆಯರು ಮಾತ್ರವಲ್ಲದೆ ಪುರುಷರನ್ನೂ ಒಳಗೊಂಡ ವಿಸ್ತಾರನೆಲೆಯ, ಸೃಜನಶೀಲವಾದ ಉಪಕ್ರಮಗಳನ್ನು ಕೈಗೆತ್ತಿಕೊಳ್ಳುವುದು. ಇದಕ್ಕೆ ಪೂರಕವಾಗಿ ನಡೆಯಬೇಕಾದ ಇನ್ನಿತರ ಕೆಲಸಗಳೆಂದರೆ ನೀತಿಗಳು ಮತ್ತು ಕಾನೂನುಗಳಲ್ಲಿ ಬದಲಾವಣೆ, ನೊಂದವರಿಗೆ ಬೇಕಿರುವ ಬೆಂಬಲ ರಚನೆಗಳ ಸ್ಥಾಪನೆ ಹಾಗೂ ಅಂಕಿಸಂಖ್ಯೆಗಳನ್ನು ಆಧರಿಸಿದ ವೈಜ್ಞಾನಿಕ ವಿಧಾನವನ್ನಾಧರಿಸಿದ ಅತ್ಯಂತ ವಿಶಾಲವಾದ ಅಭಿಯಾನಗಳು ಮತ್ತು ಮಧ್ಯಪ್ರವೇಶದ ಕಾರ್ಯಕ್ರಮಗಳು” ಎಂಬುದು ಅವರ ಅಭಿಪ್ರಾಯ.

ಕರ್ನಾಟಕದ ಪ್ರಖ್ಯಾತ ಹೋರಾಟಗಾರ್ತಿ, ದಲಿತ ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಮತ್ತು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಸ್ಥಾಪಕ ಸದಸ್ಯೆಯರಲ್ಲೊಬ್ಬರಾದ ದು. ಸರಸ್ವತಿ ಹೇಳುವಂತೆ, “ಜಾತಿ-ಲಿಂಗ-ವರ್ಗಗಳು ಒಂದರೊಳಗೊಂದು ಹೆಣೆದುಕೊಂಡಿರುವ ವಿನ್ಯಾಸವನ್ನು ಅರಿಯುವುದು ಸುಲಭವಲ್ಲ, ಆದರೆ ಇದನ್ನು ಅರಿತರೆ ಮಾತ್ರ ನಿಜವಾದ ಸಮಾನತೆಯ ಕಡೆಗೆ ನಡಿಗೆ ಸಾಧ್ಯ. ಹೀಗಾಗಿ ನಾವೆತ್ತಿಕೊಳ್ಳುವ ಹೋರಾಟಗಳು ಯಾರನ್ನೆಲ್ಲ ಒಳಗೊಳ್ಳುತ್ತಿವೆ ಎಂಬ ಬಗ್ಗೆ ಸದಾ ಕಾಲ ಎಚ್ಚರದ ಮನಸ್ಥಿತಿ ಹೊಂದಿರಬೇಕು”.

du saraswati
ದು. ಸರಸ್ವತಿ

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮತ್ತೊಬ್ಬ ಸಂಸ್ಥಾಪಕ ಸದಸ್ಯರೂ, ವೈದ್ಯೆ ಮತ್ತು ಲೇಖಕಿಯೂ ಆಗಿರುವ ಡಾ. ಎಚ್.ಎಸ್ ಅನುಪಮಾ ಅವರ ಅಭಿಪ್ರಾಯದಲ್ಲಿ, “ಮಹಿಳಾ ಚಳವಳಿ ಹೋರಾಟಗಳಿಗೆ ಕೊಟ್ಟಷ್ಟೇ ಮಹತ್ವವನ್ನು ನಿರಂತರವಾಗಿ ಆಲೋಚನಾ ವಿಧಾನಗಳನ್ನು ಬದಲಿಸುವ ರಚನಾತ್ಮಕ ಕೆಲಸಗಳಿಗೂ ಕೊಡುವ ಅಗತ್ಯವಿದೆ. ಸಮಾಜದ ತಪ್ಪುಗಳನ್ನು ತಿದ್ದಲು ಹೋರಾಟಗಳು ಬೇಕಿರುವಂತೆಯೇ ಮನಸ್ಸು ಮತ್ತು ಪ್ರಜ್ಞೆಯನ್ನು ಬದಲಿಸಲು ಇಂತಹ ಚಟುವಟಿಕೆಗಳ ಅಗತ್ಯವಿದೆ. ನಮ್ಮ ಕೆಲಸಗಳು ಈ ವಿಚಾರದಲ್ಲಿ ಎಡವುತ್ತಿವೆ, ಇದು ಅತ್ಯಂತ ತುರ್ತಾಗಿ ಗಮನ ಹರಿಸಲೇಬೇಕಾದ ಸಂಗತಿ”.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)

ಹೊಸ ಕಾಲಕ್ಕೆ ಬೇಕಾದ ಹೊಸ ಮಹಿಳಾ ಆಂದೋಲನದ ಅಲೆ: ಈ ಕಾಲದ ಹೆಣ್ಣುಮಕ್ಕಳು ಎದುರಿಸುತ್ತಿರುವ ನಿರ್ದಿಷ್ಟ ಬಗೆಯ ಹಿಂಸೆಯ ಸ್ವರೂಪವನ್ನು ಅಡ್ರೆಸ್ ಮಾಡಬಲ್ಲಂತಹ ಮಹಿಳಾ ಆಂದೋಲನದ ಹೊಸ ಅಲೆಯು ಮತ್ತೆ ಹೊಸ ರಭಸದೊಂದಿಗೆ ಮೇಲೆದ್ದು ಬರಬೇಕಾಗಿದೆ. ಕಳೆದ ಶತಮಾನವು ಹೊಸ ಕಾನೂನುಗಳಿಗಾಗಿ ಹೋರಾಟ ನಡೆಸಿದರೆ, ಈ ಶತಮಾನದ ಮಹಿಳಾ ಸಮೂಹವು ಆ ಎಲ್ಲ ಕಾನೂನುಗಳ ಸರಿಯಾದ ಜಾರಿಗಾಗಿ ಮತ್ತು ಅದಕ್ಕೆ ಬೇಕಿರುವ ಸರಿಯಾದ ಮಹಿಳಾಪರ ಧೋರಣೆಗಳಿಗಾಗಿ ನಿರಂತರ ಕೆಲಸ ನಡೆಸಬೇಕಾದ ಅಗತ್ಯವಿದೆ.

ಈ ಶತಮಾನವು ‘ಲಿಂಗತ್ವ’ (ಜೆಂಡರ್) ಪರಿಕಲ್ಪನೆಗೇ ಹೊಸ ನಿರ್ವಚನವನ್ನು ನೀಡಿದೆ, ಶೋಷಿತ ಲಿಂಗತ್ವವಾಗಿ ಲಿಂಗತ್ವ ಅಲ್ಪಸಂಖ್ಯಾತರ ದೊಡ್ಡ ಸಮೂಹವಿಂದು ಸೇರಿಕೊಂಡಿದೆ. ಅದೇ ರೀತಿ, ಸ್ತ್ರೀವಾದಿ ಸಿದ್ಧಾಂತದ ದಿಕ್ಕಿನಲ್ಲಿ ನೋಡಿದರೂ, ಈ ಕಾಲದ ಮಹಿಳೆಯರು ತಮ್ಮ ನೆಲಮೂಲದ ತತ್ವಚಿಂತನೆಗಳಿಂದ ಪ್ರೇರಣೆ ಪಡೆಯುವ ಪ್ರಯತ್ನಗಳು ಸ್ತ್ರೀವಾದಿ ಸಾಹಿತ್ಯ, ಸಂಶೋಧನೆ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಂಘರ್ಷದ ಕಣಗಳಲ್ಲಿ ನಮಗಿಂದು ಕಾಣುತ್ತಿದೆ. ಇಂತಹ ಎಲ್ಲ ಹೊಸ ಸಂಗತಿಗಳನ್ನೂ ಗಮನಿಸಿ, ಗುರುತಿಸಿ, ಒಳಗೊಳ್ಳುವಂತಹ ಸ್ತ್ರೀವಾದಿ ಸಿದ್ಧಾಂತ ಮತ್ತು ಚಳವಳಿ ಇಂದಿನ ಅಗತ್ಯ. ಆ ರೀತಿಯಲ್ಲಿ ಈ ಹಿಂದಿನ ಮಹಿಳಾ ಚಳವಳಿಯ ಭದ್ರ ಬುನಾದಿಯನ್ನು ಆಧರಿಸಿ ಈ ತಲೆಮಾರಿನ ಚಳವಳಿಯ ಮರುಹುಟ್ಟು ಇಂದು ಅತ್ಯಗತ್ಯವಾಗಿದೆ.

ಸಂಘರ್ಷ ಮತ್ತು ನಿರ್ಮಾಣದ ಮಾದರಿ: ಛತ್ತೀಸಗಢದ ದಂತಕಥೆಯಾದ ಹುತಾತ್ಮ ಕಾರ್ಮಿಕ ನಾಯಕ ಶಂಕರಗುಹಾ ನಿಯೋಗಿಯವರು ಸಾಮಾಜಿಕ ಪರಿವರ್ತನೆಯ ಚಳವಳಿಗಳಿಗೆ ಹಳೆಯ ಕೆಡುಕನ್ನು ತಿದ್ದುವ ಸಂಘರ್ಷಗಳು ಮತ್ತು ಹೊಸ ಒಳಿತನ್ನು ಕಟ್ಟುವ ರಚನಾತ್ಮಕ ಕೆಲಸಗಳ ನಡುವೆ ಒಂದು ಸಮತೋಲಿತ ಕೆಲಸದ ಮಾದರಿ ಇರಬೇಕು ಎಂದು ವಾದಿಸುತ್ತಾರೆ. ಈ ಮಾದರಿಯನ್ನು ಅವರು ‘ಸಂಘರ್ಷ ಮತ್ತು ನಿರ್ಮಾಣದ ಮಾದರಿ’ ಎಂದು ಕರೆದಿದ್ದಾರೆ.

ಇಂದಿನ ಸನ್ನಿವೇಶದಲ್ಲಿ, ಸಮಾಜವು ಮತ್ತೆ ಹಲವು ದಶಕಗಳಷ್ಟು ಹಿನ್ನಡೆ ಅನುಭವಿಸಿರುವ ವಾಸ್ತವ ನಮ್ಮೆದುರಿರುವುದರಿಂದ, ಮಹಿಳಾ ಚಳವಳಿಯು ಒಂದೆಡೆ ಬೀದಿ ಹೋರಾಟಗಳನ್ನೂ, ಮತ್ತೊಂದೆಡೆ ಆಲೋಚನಾ ವಿಧಾನಗಳನ್ನು ಬದಲಿಸುವ ಅರಿವಿನ ಬೀಜಗಳನ್ನು ಬಿತ್ತುವ ನಿರಂತರವಾದ ರಚನಾತ್ಮಕವಾದ ಆಂದೋಲನಗಳನ್ನೂ ಏಕಕಾಲದಲ್ಲಿ ದೀರ್ಘಕಾಲ ನಡೆಸಿಕೊಂಡು ಹೋಗಬೇಕಾದ ಅಗತ್ಯವಿದೆ.

ಜಾತಿ, ವರ್ಗ, ಧರ್ಮದಂತಹ ಐಡೆಂಟಿಟಿಗಳೊಂದಿಗೆ ಜೆಂಡರ್‌ನ ಅಂತಃಸಂಬಂಧದ ಅರಿವು

ಇಂದಿನ ಮಹಿಳಾ ಆಂದೋಲನವು ಕೈಗೆತ್ತಿಕೊಳ್ಳುವ ಎಲ್ಲ ಪ್ರಮುಖ ಹೋರಾಟಗಳ ಸಂದರ್ಭದಲ್ಲಿ ಮುಖ್ಯವಾದ ಸಂಗತಿಯಾಗಿ ಜೆಂಡರ್ ಜೊತೆಗೆ ಜಾತಿ, ಧರ್ಮ, ವರ್ಗ ಮತ್ತು ಇಂತಹ ಇನ್ನಿತರ ಅಸ್ಮಿತೆಗಳ ವಾಸ್ತವವನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ, ಸಮಾಜದ ಎಲ್ಲ ರಂಗಗಳಲ್ಲಿ, ಸರ್ಕಾರದ ಎಲ್ಲ ಹಂತಗಳಲ್ಲಿ ಮತ್ತು ಎಲ್ಲ ಬಗೆಯ ಸಂಪತ್ತಿನಲ್ಲಿ ಮಹಿಳೆಯರಿಗೆ ಸಮಪಾಲು ಇರಬೇಕೆಂಬ ಹಕ್ಕೊತ್ತಾಯ ರೂಪಿಸುವ ಸಂದರ್ಭದಲ್ಲಿ, ಮಹಿಳೆಯರಿಗೆ ಎಂದಾಗ ಯಾವ ಮಹಿಳೆಯರು ಎಂಬ ಪ್ರಶ್ನೆ ಪ್ರಧಾನವಾಗಿರಬೇಕಾಗಿರುತ್ತದೆ. ಹಾಗೆಯೇ, ಇಂದಿನ ಫ್ಯಾಸಿಸ್ಟ್ ಪ್ರಭುತ್ವ ಗುರಿಮಾಡುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರು, ಬಲಪಂಥೀಯ ಮನಸ್ಥಿತಿಯಿಂದಾಗಿ ದಾಳಿಗೊಳಗಾಗುತ್ತಿರುವ ದಲಿತ, ಆದಿವಾಸಿ ಮಹಿಳೆಯರು, ಕಾರ್ಪೊರೇಟ್ ಬಂಡವಾಳದ ನೀತಿಗಳಿಗೆ ಬಲಿಪಶುಗಳಾಗುತ್ತಿರುವ ರೈತ-ಕಾರ್ಮಿಕ ಮಹಿಳೆಯರು- ಹೀಗೆ ಇಂದಿನ ಸನ್ನಿವೇಶದ ತೀವ್ರತೆಯ ಅರಿವುಳ್ಳ ಮಹಿಳಾ ಸಮೂಹವು ಈ ಕಾಲದ ಮಹಿಳಾ ಪ್ರತಿರೋಧದ ಪಂಜು ಹಿಡಿದು ಮುನ್ನಡೆಯಬೇಕಾದವರೆಂಬುದು ಸ್ಪಷ್ಟ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-2)

ಸಮಾಜವೆಂಬ ಪಿರಮಿಡ್‌ನ ಎಲ್ಲಕ್ಕಿಂತ ತಳಮಟ್ಟದಲ್ಲಿರುವ ಅತಿದೊಡ್ಡ ಮೆಟ್ಟಿಲಿಗೆ ಸೇರಿರುವ ಶೋಷಿತರಲ್ಲಿ ಶೋಷಿತರಾದ ಮಹಿಳೆಯರು ಈ ಚಳವಳಿಯ ಕೇಂದ್ರವಾದಾಗ ಇಡೀ ಸಮಾಜವನ್ನು ಆವರಿಸಲು ಮತ್ತು ಪ್ರಭಾವಿಸಲು ಬೇಕಿರುವ ವಿಸ್ತಾರ ಮತ್ತು ಸಾಮರ್ಥ್ಯ ಚಳವಳಿಗೆ ದಕ್ಕಲು ಸಾಧ್ಯ. ಈ ದಿಕ್ಕಿನಲ್ಲಿ ಆಗಬೇಕಾದ ಕೆಲಸ ಅಗಾಧವಾಗಿದೆ, ಬರಲಿರುವ ಕಾಲ ಸಂಕ್ರಮಣದ ಕಾಲವಾಗಲಿದೆ; ಈ ಸವಾಲಿಗೆ ನಮ್ಮನ್ನು ನಾವು ಮುಖಾಮುಖಿಯಾಗಿಸಲು ಬೇಕಿರುವ ಸಿದ್ಧತೆ ಹಾಗೂ ಸಮಾಜವನ್ನು ಪ್ರೇರೇಪಿಸುವ ಬದ್ಧತೆ- ಎರಡನ್ನೂ ಹಲವು ಪಟ್ಟು ಹೆಚ್ಚಿಸಿಕೊಂಡು ಹೊಸ ಕಸುವಿನೊಂದಿಗೆ ನಮ್ಮ ಸಂಘರ್ಷ ಸಾಗಬೇಕಿದೆ. ಈ ಗುರಿಯೆಡೆಗೆ ನಮ್ಮೆಲ್ಲರ ನಡಿಗೆ ಸಾಗಲಿ, ಶೋಷಣೆರಹಿತ ಸಮತೆಯ ಸಮಾಜದ ಕನಸು ನನಸಾಗಲಿ.

(ಮುಗಿಯಿತು..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

mallige sirimane2
ಮಲ್ಲಿಗೆ ಸಿರಿಮನೆ
+ posts

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...