(ಮುಂದುವರಿದ ಭಾಗ..) ‘ವೀಸಾಗಾಗಿ ಕಾಯುತ್ತಾ’ ಲೇಖನದ ಮೂರನೇ ಭಾಗದಲ್ಲಿ ಬಾಬಾಸಾಹೇಬರು ದಾಖಲಿಸುವ ಘಟನೆ 1929ರಲ್ಲಿ ನಡೆದದ್ದು. ಅಸ್ಪೃಶ್ಯರ ಕುಂದು ಕೊರತೆಗಳ ಅಧ್ಯಯನಕ್ಕೆಂದು ಸರ್ಕಾರ ಮಾಡಿದ ಸಮಿತಿಯಲ್ಲಿ ಇವರು ಸದಸ್ಯರಾಗಿರುತ್ತಾರೆ. ದಲಿತರ ಮೇಲೆ ಜಾತಿಯ ಕಾರಣದಿಂದ ನಡೆಯುವ ದೌರ್ಜನ್ಯ- ದಬ್ಬಾಳಿಕೆಗಳ ಸತ್ಯಶೋಧನೆ ನಡೆಸಲು ಇಡೀ ಸಮಿತಿ ಪ್ರವಾಸ ಮಾಡಬೇಕಾಗಿರುತ್ತದೆ. ಖಾಂದೇಶದಿಂದ ಬಾಂಬೆಗೆ ತೆರಳುವ ಧುಲಿಯಾ ಮಾರ್ಗದಲ್ಲಿರುವ ಒಂದು ಹಳ್ಳಿಯಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಆ ಹಳ್ಳಿಗೆ ಹೋಗಬೇಕಾದರೆ ಚಾಲೀಸಗಾಂವ್‌ನಲ್ಲಿ ರೈಲು ಇಳಿಯಬೇಕಿತ್ತು. ಹಳ್ಳಿಗೆ ಹೋಗಿ ಹಿಂದಿರುಗಿದ ಬಾಬಾಸಾಹೇಬರನ್ನು ಚಾಲೀಸ್‌ಗಾಂವ್ ಗ್ರಾಮಸ್ಥರು ತಮ್ಮೊಂದಿಗೆ ಉಳಿಯುವಂತೆ ಕೇಳಿಕೊಂಡರು. ಆ ಗ್ರಾಮದ ದಲಿತರೊಂದಿಗೆ ಬಾಬಾಸಾಹೇಬರು ಉಳಿಯಲು ತೀರ್ಮಾನಿಸಿದರು. ಈ ಚಾಲೀಸಗಾಂವ್ ಭಾಗದ ಅಸ್ಪೃಶ್ಯರು ವಾಸವಾಗಿದ್ದ ಮಹಾರವಾಡ ಗ್ರಾಮವು ರೈಲು ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರವಿತ್ತು. ಬಾಬಾಸಾಹೇಬರನ್ನು ಹೂಗುಚ್ಛಗಳ ಮೂಲಕ ಆದರದಿಂದ ಸ್ವಾಗತಿಸಿದ ಆ ಜನರು ಮಹಾರವಾಡಕ್ಕೆ ಕಾಲ್ನಡಿಗೆಯಲ್ಲೇ ಕರೆದೊಯ್ಯಬಹುದಿತ್ತು. ಅದೂ ಅಲ್ಲದೆ ನಡುವೆ ಒಂದು ಕಾಲುವೆ ಮೂಲಕ ನದಿ ದಾಟಬೇಕಿತ್ತು. ಇವರನ್ನು ನಡೆಸಿಕೊಂಡು ಹೋಗುವುದು ಸರಿಯಲ್ಲವೆಂದು ಯೋಚಿಸಿದ ಗ್ರಾಮಸ್ಥರು ಒಂದು ಟಾಂಗಾದ ವ್ಯವಸ್ಥೆ ಮಾಡಿದ್ದರು. ಆದರೆ, ಆ ಟಾಂಗಾ ಓಡಿಸುವ ಚಾಲಕರ್ಯಾರೂ ಸಿಗದಿದ್ದ ಕಾರಣ ತಮ್ಮಲ್ಲೇ ಒಬ್ಬ ವ್ಯಕ್ತಿಯನ್ನು ಟಾಂಗಾ ಹೊಡೆಯಲು ಬಿಟ್ಟಿದ್ದರು. ದಾರಿ ಮಧ್ಯೆ ಆ ಟಾಂಗಾ ಒಂದು ಕಾರಿಗೆ ಡಿಕ್ಕಿ ಹೊಡೆಯಿತು. ಅದರಿಂದ ಹೇಗೋ ಪಾರಾಗಿ ಸೇತುವೆ ಮೇಲೆ ಬಂದಾಗ ಕುದುರೆ ಆಯತಪ್ಪಿ ಟಾಂಗಾ ಕೆಳಗೆ ಬಿದ್ದಿತು. ಬಾಬಾಸಾಹೇಬರು ಕಲ್ಲಿನ ಮೇಲೆ ಬಿದ್ದಿದ್ದರಿಂದ ಕಾಲಿಗೆ ಪೆಟ್ಟಾಯಿತು. ಎಲ್ಲರೂ ಕಣ್ಣೀರು ಹಾಕುತ್ತಾ ಅವರನ್ನು ಎತ್ತಿಕೊಂಡೇ ಹೋದರು.
ಬಾಬಾಸಾಹೇಬರ ಕಾಲಿಗೆ ಹೆಚ್ಚೇ ಪೆಟ್ಟಾಗಿತ್ತು. ಮಹಾರವಾಡಕ್ಕೆ ಕರೆದೊಯ್ಯಲು ಯಾವ ಟಾಂಗಾ ಚಾಲಕನೂ ಒಪ್ಪದಿದ್ದಾಗ ಅವರನ್ನು ನಡೆಸಿಕೊಂಡು ಹೋಗುವುದು ಗೌರವಕ್ಕೆ ಧಕ್ಕೆ ಉಂಟುಮಾಡಬಹುದೆಂದು ಜನರು ಟಾಂಗಾ ಬಾಡಿಗೆ ಪಡೆದು ತಮ್ಮಲ್ಲೇ ಒಬ್ಬ ಚಾಲಕನನ್ನು ತಯಾರುಮಾಡಿದ್ದರು. ಆದರೆ, ಆ ಚಾಲಕನಿಗೆ ಟಾಂಗಾ ಹೊಡೆಯುವ ಬಗ್ಗೆ ಏನೂ ತಿಳಿದಿರಲಿಲ್ಲ. ಅಸ್ಪೃಶ್ಯರನ್ನು ಟಾಂಗಾದಲ್ಲಿ ಕೂರಿಸಬಾರದೆನ್ನುವ ಜಾತ್ಯಸ್ಥ ಮನಸ್ಸಿನ ಕೊಳಕಿನ ಕಾರಣದಿಂದ ಬಾಬಾಸಾಹೇಬರು ಕಾಲಿಗೆ ಏಟು ಮಾಡಿಕೊಳ್ಳಬೇಕಾಯಿತು. ಟಾಂಗಾ ಹೊಡೆಯುವ ಹಿಂದೂ ಕೂಡ, ಬ್ಯಾರಿಸ್ಟರ್ ಅಟ್ ಲಾ ಓದಿದ್ದ ತಾವೂ ಸೇರಿದಂತೆ ಎಲ್ಲ ಅಸ್ಪೃಶ್ಯರಿಗಿಂತ ಶ್ರೇಷ್ಠನೆಂದು ಬಗೆದಿದ್ದ ಮನಸ್ಥಿತಿಯನ್ನು ಬಾಬಾಸಾಹೇಬರು ಅನಾವರಣಗೊಳಿಸುತ್ತಾರೆ.
ಈ ಲೇಖನದ ನಾಲ್ಕನೇ ಘಟನೆ 1934ರದ್ದು. ಬಾಬಾಸಾಹೇಬರೊಂದಿಗೆ ಶೋಷಿತ ವರ್ಗಗಳ ಚಳವಳಿಯಲ್ಲಿದ್ದ ಸ್ನೇಹಿತರು ಪ್ರವಾಸವೊಂದನ್ನು ಏರ್ಪಡಿಸಿದ್ದರು. ಬೌದ್ಧ ಗುಹೆಗಳು, ವೆರುಲ್, ನಾಸಿಕ್ ಮತ್ತು ಔರಂಗಾಬಾದ್‌ಗಳಿಗೆ ಭೇಟಿ ನೀಡುವ ಉದ್ದೇಶ ತಂಡದ್ದಾಗಿತ್ತು. ಅದರಲ್ಲಿ ಔರಂಗಾಬಾದ್‌ಗೆ ಹೋಗಲೇಬೇಕೆನ್ನುವುದು ಸಾಹೇಬರ ಬಯಕೆಯಾಗಿತ್ತು. 30 ಜನರಿದ್ದ ಉದ್ದೇಶಿತ ಪ್ರವಾಸದಲ್ಲಿ ಅಸ್ಪೃಶ್ಯ ಪ್ರವಾಸಿಗ ಎದುರಿಸಬೇಕಾದ ತೊಂದರೆಗಳನ್ನು ಮನಗಂಡು ಪ್ರವಾಸಿಗರ ತಂಡ ಪ್ರವಾಸದ ಪಟ್ಟಿಯನ್ನು ಘೋಷಿಸಿರಲಿಲ್ಲ. ಎಲ್ಲರೂ ನಿಜಾಮರ ಪ್ರಾಂತದಲ್ಲಿ ಪ್ರಯಾಣ ಮಾಡುತ್ತಿದ್ದಾಗ ದೌಲತಾಬಾದಿನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇವರ ಭೇಟಿಗೆ ಕಾಯುತ್ತಿದ್ದರು. ಅಲ್ಲಿನ ಕೋಟೆಯನ್ನು ಇವರು ನೋಡಬೇಕಿತ್ತು. ಉಪಾಹಾರ ಮತ್ತು ಚಹಾ ಸೇವಿಸಿ ನಂತರ ಕೋಟೆ ನೋಡಲು ಅಲ್ಲಿನ ಜನ ಕೇಳಿಕೊಂಡರು. ಆದರೆ, ಕತ್ತಲಾವರಿಸುವ ಮೊದಲೇ ಕೋಟೆಯನ್ನು ನೋಡುವ ಇರಾದೆಯಿಂದ ನಂತರ ಚಹಾ ಸೇವಿಸಿದರಾಯಿತು ಎಂದುಕೊಂಡರು.

ಕೋಟೆಗೆ ಪ್ರವೇಶಿಸುವ ಮುನ್ನ ಅಲ್ಲೇ ಇದ್ದ ಸ್ವಚ್ಛವಾದ ಪುಟ್ಟ ಕೆರೆಯ ಕಟ್ಟೆಯ ಮೇಲೆ ನಿಂತು ಪ್ರವಾಸದ ಕಾರಣಕ್ಕೆ ಧೂಳಿನಿಂದ ಕೂಡಿದ್ದ ಕೈಕಾಲು ಮುಖ ತೊಳೆದುಕೊಂಡರು. ಇನ್ನೇನು ಕೋಟೆಯ ಒಳಗೆ ಪ್ರವೇಶಿಸಬೇಕು ಅನ್ನುವಾಗ ವಯಸ್ಸಾದ ಮಹಮದೀಯನೊಬ್ಬ ‘ಅಸ್ಪೃಶ್ಯರು ಕೆರೆಯನ್ನು ಮಲಿನಗೊಳಿಸಿದರುʼ ಎಂದು ಕೂಗುತ್ತಾ ಓಡಿಬಂದ. ಅವನೊಂದಿಗೆ ಕೆಲವರು ಸೇರಿಕೊಂಡು, ‘ಈ ಅಸ್ಪೃಶ್ಯರಿಗೆ ಸೊಕ್ಕು ಜಾಸ್ತಿಯಾಗಿದೆ; ಅವರು ತಮ್ಮ ಸ್ಥಾನವನ್ನು ಮರೆತಿದ್ದಾರೆʼ ಎಂದು ಜೋರಾಗಿ ಬೈಯಲು ಶುರುಮಾಡಿದರು. ಪ್ರವಾಸಿಗರ ತಂಡ ‘ನೋಡಿ ನಾವು ಹೊರಗಿನವರು, ನಮಗೆ ಇಲ್ಲಿಯ ಸಂಪ್ರದಾಯ ತಿಳಿದಿರಲಿಲ್ಲʼ ಎಂದು ಹೇಳಿದರೂ ಕೇಳದೆ, ಇವರನ್ನು ಕರೆತಂದಿದ್ದ ಸ್ಥಳೀಯ ಅಸ್ಪೃಶ್ಯರನ್ನು ಬೈಯತೊಡಗಿದರು. ಪಾಪ ಇವರು ಕೆರೆಯಲ್ಲಿ ಮುಖ ತೊಳೆಯುವಾಗ ಅಲ್ಲಿನ ಅಸ್ಪೃಶ್ಯರು ಅಲ್ಲಿರಲೇಇಲ್ಲ. ಅವರು ‘ಅದು ನಮ್ಮ ತಪ್ಪಲ್ಲʼ ಎಂದರೂ ಕೇಳದೆ ಹಲ್ಲೆಗೆ ಮುಂದಾದರು. ಅವರಲ್ಲೊಬ್ಬ ಯುವಕ ‘ಅಸ್ಪೃಶ್ಯರು ತಮ್ಮ ಸ್ಥಾನವನ್ನು ಮರೆಯಬಾರದುʼ ಎಂದು ಕೂಗುತ್ತಲೇ ಇದ್ದ. ಬಾಬಾಸಾಹೇಬರಿಗೆ ಸಿಟ್ಟು ಬಂದು, ‘ನಿನ್ನ ಧರ್ಮ ಹೇಳುವುದು ಇದೇ ಏನು..? ಅಸ್ಪೃಶ್ಯನೊಬ್ಬನು ಮಹಮ್ಮದೀಯನಾದಾಗಲೂ ಆತ ಈ ಕೆರೆಯ ನೀರನ್ನು ಮುಟ್ಟುವುದನ್ನು ತಡೆಯುತ್ತೀಯಾ?’ ಎಂದು ಆ ಯುವಕನನ್ನು ಏರಿದ ದನಿಯಲ್ಲಿ ಪ್ರಶ್ನಿಸಿದರು. ನೆರೆದಿದ್ದ ಮುಸಲ್ಮಾನರು ಮಾತು ಹೊರಡದೆ ಸ್ತಬ್ಧರಾಗುತ್ತಾರೆ. ಅದೇ ಸಿಟ್ಟಿನಲ್ಲಿ ಕೋಟೆಯ ಗಾರ್ಡ್ ಬಳಿ ಹೋಗಿ ‘ನಮಗೆ ಕೋಟೆ ನೋಡಲು ಬಿಡುವಿರೋ ಇಲ್ಲವೋ ಹೇಳಿʼ ಅಂದರು. ಅವನು ಇವರ ಹೆಸರು ಕೇಳಿದ. ಒಂದು ಚೀಟಿಯಲ್ಲಿ ಬರೆದುಕೊಟ್ಟರು. ಅವನು ಒಳಗೆ ಹೋಗಿ ಹಿಂದಿರುಗಿ ‘ಒಳಗೆ ಬನ್ನಿʼ ಅಂದ. ಇದು ಅಲ್ಲಿದ್ದ ಮಹಮ್ಮದೀಯರ ಬಾಯಿ ಮುಚ್ಚಿಸಿತು. ಇದರಿಂದ ಬಾಬಾಸಾಹೇಬರು ಅಸ್ಪೃಶ್ಯರು ಹಿಂದೂಗಳಿಗೆ ಹೇಗೆ ಅಸ್ಪೃಶ್ಯರೋ, ಪಾರ್ಸಿಗಳಿಗೂ, ಮುಸಲ್ಮಾನರಿಗೂ ಅಸ್ಪೃಶ್ಯರೇ ಎಂಬುದನ್ನು ನಿರೂಪಿಸಿದರು. ಈ ಎರಡೂ ಘಟನೆಗಳಿಂದ ಅವರು ಬಹಳಷ್ಟು ನೊಂದುಕೊಂಡಿದ್ದರು.
ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-1)
‘ವೇಯ್ಟಿಂಗ್ ಫಾರ್ ಎ ವೀಸಾ’ ಲೇಖನದಲ್ಲಿ ಬಾಬಾಸಾಹೇಬರು ಮಿಕ್ಕ ಎರಡು ಘಟನೆಗಳಲ್ಲಿ ಇಬ್ಬರು ಬೇರೆ ಬೇರೆ ಅಸ್ಪೃಶ್ಯರ ಅನುಭವಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ಒಬ್ಬ ಕಾಥೇವಾಡದ ಒಂದು ಹಳ್ಳಿಯಲ್ಲಿ ಕೆಲಸ ಮಾಡುವ ಶಿಕ್ಷಕ. 1929ರ ಡಿಸೆಂಬರ್ ತಿಂಗಳ 12ನೇ ತಾರೀಖಿನಲ್ಲಿ ಪ್ರಕಟವಾದ ಗಾಂಧೀಜಿ ನೇತೃತ್ವದ ‘ಯಂಗ್ ಇಂಡಿಯಾʼ ಪತ್ರಿಕೆಯಲ್ಲಿ ಅಚ್ಚಾದ ಪತ್ರವನ್ನು ಆಧರಿಸಿದ ಬರಹವಿದು. ಅಸ್ಪೃಶ್ಯ ಶಿಕ್ಷಕನ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಎರಡನೇ ದಿನಕ್ಕೆ ಮಗುವಿಗೆ ಭೇದಿ ಶುರುವಾಗುತ್ತದೆ. ಬಾಣಂತಿಯೂ ಅವ್ಯಕ್ತ ನೋವಿನಿಂದ ನರಳುತ್ತಿರುತ್ತಾಳೆ. ಶಿಕ್ಷಕ ಡಾಕ್ಟರನ್ನು ಕರೆಯಲು ಹೋದಾಗ ‘ಹರಿಜನರ ಮನೆಗೆ ನಾನು ಬರುವುದಿಲ್ಲʼ ಎನ್ನುತ್ತಾನೆ. ಡಾಕ್ಟರಿಗೆ ಎರಡು ರೂಪಾಯಿ ಫೀಸ್ ಕೊಡುತ್ತೇನೆ ಎಂದು ಕೇಳಿಕೊಂಡಾಗ ದಲಿತ ಕೇರಿಯ ಹೊರಗೆ ನಿಂತು ಪರೀಕ್ಷಿಸುತ್ತೇನೆ ಎಂಬ ಷರತ್ತಿನ ಮೇಲೆ ಡಾಕ್ಟರ್ ಬರುತ್ತಾನೆ. ಶಿಕ್ಷಕ ತನ್ನ ಪತ್ನಿ ಮತ್ತು ಮಗುವನ್ನು ಹರಿಜನ ಕಾಲೊನಿಯ ಹೊರಗೆ ಕರೆತರುತ್ತಾನೆ. ಮತ್ತೆ ಡಾಕ್ಟರ್ ಅವರನ್ನು ಪರೀಕ್ಷಿಸಲು ಥರ್ಮಾಮೀಟರ್ ಕೊಡುವುದಿಲ್ಲ ಎಂಬುದಾಗಿ ಹೇಳಿದ. ಬಗೆಬಗೆಯಾಗಿ ಬೇಡಿಕೊಂಡ ನಂತರ ಒಬ್ಬ ಮುಸಲ್ಮಾನ ವ್ಯಕ್ತಿಯ ಕೈಗೆ ಥರ್ಮಾ ಮೀಟರ್ ಕೊಟ್ಟು, ಆತ ಶಿಕ್ಷಕನಿಗೆ ಕೊಟ್ಟು, ಶಿಕ್ಷಕ ತನ್ನ ಹೆಂಡತಿಗೆ ಕೊಟ್ಟು ಪರೀಕ್ಷಿಸಿದ ನಂತರ ಡಾಕ್ಟರನಿಗೆ ಹಿಂದಿರುಗಿಸಲಾಯಿತು. ಡಾಕ್ಟರ್ ಬಾಣಂತಿಗೆ ನ್ಯುಮೋನಿಯಾ ಇರುವುದಾಗಿ ಹೇಳಿ ಶಿಕ್ಷಕ ನೀಡಿದ ಎರಡು ರೂಪಾಯಿ ಶುಲ್ಕ ತೆಗೆದುಕೊಂಡು ಹೊರಟುಹೋದ. ಅಗಸೆ ಬೀಜಗಳನ್ನು ತಂದುಕೊಟ್ಟು ಸೇವಿಸಲು ಹೇಳಿದ ಶಿಕ್ಷಕ ಕೊನೆಗೆ, “ನನ್ನ ಜೀವನದ ಜ್ಯೋತಿ ಆರಿಹೋಯಿತು. ಮಧ್ಯಾಹ್ನ ಎರಡರ ಸಮಯಕ್ಕೆ ಆಕೆ ತೀರಿಕೊಂಡಳು” ಎಂದು ಬರೆದ.
ಈ ಬಗ್ಗೆ ಬಾಬಾಸಾಹೇಬರು ಇದರ ವಿಶ್ಲೇಷಣೆಯ ಅಗತ್ಯವೇ ಇಲ್ಲ ಎನ್ನುತ್ತಾರೆ. ಒಬ್ಬ ಸುಶಿಕ್ಷಿತನಾದ ಡಾಕ್ಟರ್ ರೋಗಿಯ ಜಾತಿ ಕಾರಣಕ್ಕೆ ಥರ್ಮಾಮೀಟರ್ ಕೊಡಲು ಹಾಗೂ ಶುಶ್ರೂಷೆ ಮಾಡಲು ನಿರಾಕರಿಸುವುದು ಅದೆಷ್ಟು ಅಮಾನವೀಯ ಎಂದು ಬರೆಯುತ್ತಾರೆ. ಶಿಕ್ಷಕನ ಮತ್ತು ವೈದ್ಯನ ಹೆಸರುಗಳನ್ನು ನಮೂದಿಸದಂತೆ ಶಿಕ್ಷಕನೇ ಕೋರಿರುತ್ತಾನೆ. ಹೆಸರು ನಮೂದಿಸಿದರೆ ಸವರ್ಣೀಯರು ಸೇಡು ತೀರಿಸಿಕೊಳ್ಳಲು ಬರುತ್ತಾರೆಂಬ ಭಯ ಆತನದು.
ಇನ್ನೊಂದು ಕೊನೆಯ ಘಟನೆ: 1938ರಲ್ಲಿ ದಾದರಿನ ಕಾಸರವಾಡಿಯಲ್ಲಿ ನಡೆದ ಸಭೆಯೊಂದರಲ್ಲಿ ಒಬ್ಬ ಭಂಗಿ ಹುಡುಗ ನಿಂತು ಹೇಳಿದ್ದು. ಅವನ ಹೆಸರು ಪಾರಮಾರ ಕಾಳಿದಾಸ ಶಿವರಾಮ. ಅದನ್ನು ಬಾಬಾಸಾಹೇಬರು ಯಥಾವತ್ತಾಗಿ ದಾಖಲಿಸುತ್ತಾರೆ. 1933ರಲ್ಲಿ ವರ್ನ್ಯಾಕ್ಯುಲರ್ ಅಂತಿಮ ಪರೀಕ್ಷೆಯಲ್ಲಿ ಪಾಸಾದ ಇಂಗ್ಲಿಷ್ ಓದಿದ ಹುಡುಗ ಬಾಂಬೆ ಮುನಿಸಿಪಾಲಿಟಿಯ ಶಿಕ್ಷಕ ಹುದ್ದೆಗೆ ಅರ್ಜಿ ಹಾಕಿ ಸಿಗದೆ, ತಲಾಟಿ (ಗ್ರಾಮಲೆಕ್ಕಿಗ) ಹುದ್ದೆಗೆ ಅರ್ಜಿ ಸಲ್ಲಿಸುತ್ತಾನೆ. 1936ರಲ್ಲಿ ಖೇಡ ಜಿಲ್ಲೆಯ ಬೋರ್ಸಾ ತಾಲ್ಲೂಕಿನ ಮಾಮಲೇದಾರರ ಕಚೇರಿಯಲ್ಲಿ ಅವನಿಗೆ ತಲಾಟಿ ಹುದ್ದೆ ಸಿಗುತ್ತದೆ. ಮೂಲತಃ ಗುಜರಾತಿನವನಾದ ಈ ಹುಡುಗನಿಗೆ ಸರ್ಕಾರಿ ಕಚೇರಿಯಲ್ಲಿಯೂ ಅಸ್ಪೃಶ್ಯತೆ ಆಚರಿಸುವ ಬಗ್ಗೆ ತಿಳಿದಿರುತ್ತದೆ. ಅರ್ಜಿಯಲ್ಲಿ ಇವನ ಜಾತಿ ಹೆಸರು ನೋಡಿ ಕೆಲಸಕ್ಕೆ ವರದಿ ಮಾಡಿಕೊಳ್ಳುವ ದಿನವೇ ಗುಮಾಸ್ತ ಇವನನ್ನು ಅವಮಾನಿಸುತ್ತಾನೆ. ‘ದೂರ ನಿಂತುಕೋ, ನನ್ನ ಹತ್ತಿರವೇ ನಿಲ್ಲಲು ನಿನಗೆಷ್ಟು ಧೈರ್ಯʼ ಎಂದೆಲ್ಲ ನೇರವಾಗಿ ಬೈಯುತ್ತಾನೆ. ‘ನೀನೇನಾದರೂ ಕಚೇರಿಯ ಹೊರಗಿದ್ದರೆ ಆರು ಒದೆಗಳನ್ನು ನೀಡುತ್ತಿದ್ದೆ; ಇಲ್ಲಿವರೆಗೆ ಸೇವೆಗೆ ಬರಲು ನಿನಗೆಷ್ಟು ಧೈರ್ಯ’ ಎಂದೆಲ್ಲ ನಿಂದಿಸಿ ನೇಮಕಾತಿ ಆದೇಶಗಳನ್ನು ನೆಲದ ಮೇಲಿಡಲು ಆದೇಶಿಸುತ್ತಾನೆ.
ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)
ಅದಾದ ಮೇಲೆ ಆ ಹುಡುಗನಿಗೆ ಅಲ್ಲಿ ಕೆಲಸ ಮಾಡುವಷ್ಟೂ ದಿನವೂ ನರಕದರ್ಶನವೇ ಆಗುತ್ತದೆ. ಕುಡಿಯುವ ನೀರಿಗೂ ಪರಿಪಾಟಲು ಪಡಬೇಕಿತ್ತು. ತುಕ್ಕು ಹಿಡಿದ ಪಾತ್ರೆಯೊಂದಕ್ಕೆ ಸುರಿಯುವ ನೀರನ್ನು ಈತ ಕುಡಿಯಬೇಕಿರುತ್ತದೆ. ಆ ಪಾತ್ರೆಯನ್ನು ಕೂಡ ಅಸ್ಪೃಶ್ಯನಂತೆಯೇ ಕಾಣಲಾಗುತ್ತಿರುತ್ತದೆ. ಸಿಬ್ಬಂದಿಗಳಿಗೆ ನೀರು ಸರಬರಾಜು ಮಾಡುವ ಜವಾನನಿಲ್ಲದಿದ್ದಾಗಲಂತೂ ಎಲ್ಲರ ಹಾಗೆ ಕ್ಯಾನಿನಿಂದ ನೀರು ತೆಗೆದುಕೊಳ್ಳುವ ಹಾಗಿರಲಿಲ್ಲ. ಅವನಿದ್ದಾಗಲೂ ಬಾಯಾರಿಕೆ ಆದಾಗ ನೀರನ್ನರಸಿ ಹೋಗುತ್ತಿದ್ದ ಈತನ ಕೈಗೇ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಜವಾನ. ಊಟಕ್ಕೆ, ವಾಸಕ್ಕೆ ಆ ಹುಡುಗನಿಗೆ ತುಂಬಾ ಕಷ್ಟವಾಗುತ್ತಿತ್ತು. ಬಜ್ಜಿಗಳನ್ನು ಖರೀದಿಸಿ ಊರ ಹೊರಗೆ ತಿಂದು ಬಂದು ಮಾಮಲೇದಾರ ಕಚೇರಿಯ ಕಟ್ಟೆಯ ಮೇಲೆ ಮಲಗಬೇಕಿರುತ್ತದೆ. ಬೋರ್ಸದ್ ಗ್ರಾಮದ ಯಾರೂ ಈತನಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ. ಕಡೆಗೆ ಬೋರ್ಸದ್‌ನಿಂದ ಆರು ಮೈಲಿ ದೂರದ ತನ್ನ ಪೂರ್ವಿಕರ ಊರು ಜೆಂಟ್ರಲ್‌ಗೆ ತೆರಳಿ ಅಲ್ಲಿ ರಾತ್ರಿ ಕಳೆದು ಮುಂಜಾನೆ ಉದ್ಯೋಗಕ್ಕೆ ಮರಳುವ ರೂಢಿ ಮಾಡಿಕೊಳ್ಳುತ್ತಾನೆ. ಆದರೆ ಪ್ರತಿದಿನವೂ ಹನ್ನೆರಡು ಮೈಲಿ ನಡೆಯಬೇಕಾಗಿತ್ತು. ಕೆಲಸಕ್ಕೆ ಸೇರಿದ ಒಂದೂವರೆ ತಿಂಗಳ ನಂತರ ಒಬ್ಬ ತಲಾಟಿಯ ಹತ್ತಿರ ಕೆಲಸ ಕಲಿಯಲು ಕಳಿಸಿಕೊಡಲಾಯಿತು. ಅವನು ಮೂರು ಗ್ರಾಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಅವನೊಂದಿಗೆ ಜೆಂಟ್ರಾಲ್ ಎಂಬಲ್ಲಿ ಎರಡು ತಿಂಗಳು ಕೆಲಸ ಮಾಡಿದರೂ ಅವನೇನೂ ಕಲಿಸಿಕೊಡಲಿಲ್ಲ. ಆ ನಂತರ ಅವನು ಈ ಹುಡುಗನನ್ನು ಸೈಜಾಪುರಕ್ಕೆ ಜನಸಂಖ್ಯೆಯ ಟೇಬಲ್ ಸಿದ್ಧಪಡಿಸಲು ಕರೆದುಕೊಂಡು ಹೋದನು. ಒಂದು ದಿನ ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಕೆಲಸದಲ್ಲಿ ತೊಡಗಿದ್ದರು. ಇವನು ಗುಡ್ ಮಾರ್ನಿಂಗ್ ಹೇಳಿದರೂ ಬೇಕೆಂದೇ ಮಾರುತ್ತರ ನೀಡದೆ ನಿಂತಲ್ಲೇ ಕಾಯುವಂತೆ ಮಾಡಿ ಅವಮಾನಿಸಲಾಗುತ್ತದೆ. ಇವನಿಗೆ ಸುಸ್ತಾಗಿ ಅಲ್ಲೇ ಇದ್ದ ಖುರ್ಚಿಯಲ್ಲಿ ಕುಳಿತುಕೊಂಡ. ಇದನ್ನು ಕಂಡು ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಹೊರಗೆ ಹೊರಟುಹೋದರು. ಸ್ವಲ್ಪಹೊತ್ತಿನ ನಂತರ ಹಲವು ಜನ ಇವನ ಸುತ್ತ ಜಮಾಯಿಸಿದರು. ಬಾಯಿಗೆ ಬಂದಹಾಗೆ ಬೈಯತೊಡಗಿದರು. ಅವರ ನೇತೃತ್ವವನ್ನು ವಹಿಸಿಕೊಂಡಿದ್ದವ ಸುಶಿಕ್ಷಿತ ಲೈಬ್ರರಿಯನ್ ಎಂಬುದು ತಿಳಿದು ಇವನಿಗೆ ದುಃಖವಾಯಿತು. ಇವನು ಕುಳಿತಿದ್ದ ಖುರ್ಚಿ ಆ ಲೈಬ್ರರಿಯನ್‌ದಾಗಿತ್ತು. ಅಲ್ಲಿಗೆ ಧಾವಿಸಿದ ಗ್ರಾಮಸೇವಕ, “ಈ ನಾಯಿ ಭಂಗಿಗೆ ಕುಳಿತುಕೊಳ್ಳಲು ಕುರ್ಚಿ ಕೊಟ್ಟವರಾರು” ಎಂದು ಅಬ್ಬರಿಸಿದ. ಖುರ್ಚಿಯನ್ನು ಕಿತ್ತುಕೊಂಡ ನಂತರ ಹುಡುಗ ನೆಲದ ಮೇಲೆ ಕುಳಿತುಕೊಳ್ಳುತ್ತಾನೆ. ಖಡ್ಗದಿಂದ ಹುಡುಗನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ನೆರೆದ ಗುಂಪು ಅಬ್ಬರಿಸುತ್ತದೆ. ತನ್ನನ್ನು ಕನಿಕರಿಸಿ ಕ್ಷಮಿಸಬೇಕೆಂದು ಹುಡುಗ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಹುಡುಗ ಅಲ್ಲೊಂದು ಬಿಳಿ ಕಾಗದ ತೆಗೆದುಕೊಂಡು ಮಾಮಲೇದಾರನಿಗೆ ದೊಡ್ಡ ಅಕ್ಷರಗಳಲ್ಲಿ ಪತ್ರ ಬರೆದ. “ಇಂದು ನನ್ನ ಮೇಲೆ ಮೃತ್ಯು ತನ್ನ ಕರಾಳ ಹಸ್ತ ಚಾಚಿದೆ ಎಂಬ ವಿಷಯವನ್ನು ತಮಗೆ ವಿನಯಪೂರ್ವಕವಾಗಿ ತಿಳಿಸಲು ಬಯಸುತ್ತೇನೆ. ನನ್ನ ತಂದೆ ತಾಯಿಯರ ಮಾತು ಕೇಳಿದ್ದರೆ ನನಗೆ ಈ ಆಪತ್ತು ಬರುತ್ತಿರಲಿಲ್ಲ. ಅವರಿಗೆ ನನ್ನ ಮರಣದ ಸುದ್ದಿಯನ್ನು ತಿಳಿಸಿ” ಎಂದು ಬರೆದದ್ದನ್ನು ಲೈಬ್ರರಿಯನ್ ಜೋರಾಗಿ ಓದಿದ. ನಂತರ ಅದನ್ನು ಹರಿದುಹಾಕುವಂತೆ ಹೇಳಿದ. ಇವನು ಹರಿದು ಹಾಕಿದ.
ಆನಂತರ ಗುಂಪಿನಿAದ ಬೈಗುಳಗಳ ಸುರಿಮಳೆಯಾಗುತ್ತದೆ. ನೀನೊಬ್ಬ ಯಕಃಶ್ಚಿತ್ ಭಂಗಿ. ನಿನ್ನನ್ನು ನಾವು ತಲಾಟಿ ಎಂದು ಗೌರವ ನೀಡಿ ಕರೆಯಬೇಕೇ? ನೀನು ಕಚೇರಿ ಪ್ರವೇಶಿಸಿ ಖುರ್ಚಿಯ ಮೇಲೆ ಬೇರೆ ಕುಳಿತುಕೊಳ್ಳುತ್ತೀಯಾ? ಎಂದು ಕಿರಿಚುತ್ತದೆ. ನಾನು ಕೆಲಸ ಬಿಟ್ಟುಬಿಡುತ್ತೇನೆಂದೂ ನನ್ನನ್ನು ಕ್ಷಮಿಸಬೇಕೆಂದೂ ಕೇಳಿಕೊಂಡರೂ ಕೂಡಿಹಾಕಿದರು. ಸಂಜೆ ಏಳು ಗಂಟೆಗೆ ಬಿಡುಗಡೆಗೊಳಿಸಿದರು. ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಅಲ್ಲಿಯವರೆಗೂ ಬಂದಿರಲಿಲ್ಲ. ಹುಡುಗ ಹದಿನೈದು ದಿನ ರಜೆ ಪಡೆದು ಬಾಂಬೆಯಲ್ಲಿದ್ದ ತಂದೆ ತಾಯಿಯ ಬಳಿ ಬಂದ.
ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 2)
ಈ ಘಟನೆಯನ್ನು ನಿರೂಪಿಸಿದ ನಂತರ ಬಾಬಾಸಾಹೇಬರು ಏನೂ ಹೇಳುವುದಿಲ್ಲ. ಆ ಮೌನವನ್ನು ಭಾರತದ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಇದೊಂದು ದೇವನೂರ ಮಹಾದೇವರ ‘ಮೂಡಲ ಸೀಮೆಲಿ ಕೊಲೆ ಗಿಲೆ ಮುಂತಾಗಿʼ ಕತೆಯಂಥ ಬರಹ. ಅಂದರೆ, ಅಸ್ಪೃಶ್ಯರ ಬದುಕಿನ ನೈಜ ರೂಪಕ. ದಿನಕ್ಕೆ ಸಾವಿರಾರು ವೀಸಾಗಳು ದೊರೆಯುತ್ತಿರುವ ಈ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ದಲಿತ ಸಮುದಾಯ ತಾನು ಬದುಕುತ್ತಿರುವ ಸಮಾಜದೊಳಕ್ಕೆ ಹೋಗಲು ವೀಸಾಗಾಗಿ ಕಾಯುತ್ತಿದೆ. ಪ್ರತಿ ಕ್ಷಣ ಪ್ರತಿ ಭಾರತೀಯ ದಲಿತರಿಗೆ ಈ ಕಾಯುವಿಕೆ ರೂಢಿಯಾಗಿಬಿಟ್ಟಿದೆ. ಬಹುಶಃ ಈ ವೀಸಾ ಸಿಗಲಾರದು ಎಂಬಂಥ ಪರಿಸ್ಥಿತಿಯಿದೆ.
ವ್ಯಕ್ತಿಯು ದೇಶವೊಂದರಿಂದ ಅಧಿಕೃತ ನಾಗರಿಕ ಎಂಬ ಮಾನ್ಯತೆ ಪಡೆದ ನಂತರವೇ ಸರ್ಕಾರ ಆತನಿಗೆ ‘ವೀಸಾ’ ನೀಡುತ್ತದೆ. ಸಂಬಂಧಿಸಿದ ವ್ಯಕ್ತಿಯ ಸುರಕ್ಷತೆಯ ಸಂಪೂರ್ಣ ಹೊಣೆಯನ್ನು ವೀಸಾ ನೀಡಿದ ದೇಶ ವಹಿಸಿಕೊಳ್ಳುತ್ತದೆಂಬುದು ವೀಸಾ ನೀಡುವ ನಿಜ ಅರ್ಥ. ಅಸ್ಪೃಶ್ಯ ದಲಿತ ಸಮುದಾಯವು ಭಾರತೀಯ ಸರ್ಕಾರ ಮತ್ತು ಸಮಾಜದಿಂದ ಇಂತಹ ವೀಸಾಗಾಗಿ ಹೇಗೆ ಕಾತರಿಸಿ ಕಾಯುತ್ತಿದೆ ಎಂಬುದೇ “Waiting for a Visa” ಶೀರ್ಷಿಕೆಯ ರೂಪಕಾರ್ಥವಾಗಿದೆ. ಭಾರತದಲ್ಲಿ ಜಾತಿಪದ್ಧತಿಯ ಜೊತೆ ಜೊತೆಗೆ ಅಸ್ಪೃಶ್ಯತೆಯ ಅಮಾನವೀಯ ಆಚರಣೆಯೂ ಇದೆಯೆಂಬ ಸಂಗತಿಯನ್ನು ಹೊರಜಗತ್ತು ಅರಿಯದು. ಇದನ್ನು ಅಂತಾರಾಷ್ಟ್ರೀಯ ಓದುಗರು ಅಥವಾ ನೋಡುಗರಿಗೆ ಅರ್ಥ ಮಾಡಿಸುವ ಬಗೆ ಎಂತು? ತಮ್ಮ ಬದುಕಿನ ಕೆಲ ಉದಾಹರಣೆಗಳೂ ಸೇರಿದಂತೆ ಅಸ್ಪೃಶ್ಯತೆ ಆಚರಣೆಯ ಘಟನೆಗಳನ್ನು ವಿವರಿಸುವುದೊಂದೇ ದಾರಿ ಎನ್ನುತ್ತಾರೆ ಅಂಬೇಡ್ಕರ್.
ಈ ಒಟ್ಟು ಬರಹದಲ್ಲಿ ಬಾಬಾಸಾಹೇಬರು ಇಡೀ ಭಾರತದ ಅಸ್ಪೃಶ್ಯರ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ನಾವು ಇಲ್ಲಿ ಎಲ್ಲರಂತೆ ಬದುಕು ನಡೆಸಲು ಬೇಕಾಗಿರುವ ವೀಸಾಗಾಗಿ ಕಾಯುತ್ತಲೇ ಇರಬೇಕು. ಸಂವಿಧಾನ ಎಂಬ ವೀಸಾವನ್ನು ನಮಗೆ ಕೊಟ್ಟುಹೋದ ಬಾಬಾಸಾಹೇಬರು ಈಗ ಬದುಕಿದ್ದರೆ.. ಇನ್ನೂ ಕೈಗೆಟುಕದೆ ಕಾಯುತ್ತಲೇ ಇರುವ ದಲಿತರನ್ನು ಕಂಡು ಅದೆಷ್ಟು ಮರುಗುತ್ತಿದ್ದರೋ.
(ಮುಗಿಯಿತು..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.




