‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-1)

Date:

ಬಾಬಾಸಾಹೇಬರ ಒಟ್ಟು ಬರಹವನ್ನು ಅವಲೋಕಿಸಿದರೆ “Waiting for a Visa” (ವೀಸಾಗಾಗಿ ಕಾಯುತ್ತಾ) ಸಣ್ಣ ಬರಹ. ಈ ಕೃತಿಯನ್ನು ಒಂದು ದೀರ್ಘ ಲೇಖನ ಅನ್ನಬಹುದು. ಆದರೆ, ಆ ಬರಹ ಭಾರತದ ಜಾತಿ ವ್ಯವಸ್ಥೆಯ ಸ್ವರೂಪವನ್ನು ಕೆಲವು ಸಾವಿರ ಪದಗಳಲ್ಲಿ ಹಿಡಿದಿಟ್ಟಿರುವ ವಿಶಿಷ್ಟ ಸಾಹಿತ್ಯಕ ಮಾದರಿ. ಬಾಬಾಸಾಹೇಬರು 90 ವರ್ಷಗಳ ಹಿಂದೆ 1935ರಲ್ಲಿ ಬರೆದ ಈ ಹದಿನಾರು ಪುಟಗಳ ಬರೆಹ ಆರು ಸಣ್ಣ ಸಣ್ಣ ಅಧ್ಯಾಯಗಳನ್ನು ಒಳಗೊಂಡಿದೆ. ‘ಡಾ. ಬಾಬಾಸಾಹೇಬ್ ಅಂಬೇಡ್ಕರ್: ಬರೆಹಗಳು ಮತ್ತು ಭಾಷಣಗಳು’ 12ನೆಯ ಸಂಪುಟದಲ್ಲಿ ಈ ಬರಹವನ್ನು ಸೇರಿಸಲಾಗಿದೆ. ಇದೊಂದು ಜೀವನ ಚರಿತ್ರಾತ್ಮಕ ಕಿರುಬರಹ ಅಥವಾ ಘಟನೆಗಳ ಗುಚ್ಚ. ಅವರ ಒಟ್ಟು ಬರಹ ಕೇವಲ ಸಾಹಿತ್ಯಕ ಜಿಜ್ಞಾಸೆಯಾಗಿರದೆ ಭಾರತದ ಸಮಾಜೋ- ಆರ್ಥಿಕ ದಾಖಲೀಕರಣ ಅಥವಾ ಇಡೀ ದೇಶವನ್ನು ಸಮಾನಗೊಳಿಸುವ ಮ್ಯಾನಿಫೆಸ್ಟೋ ಆಗಿದೆ. ಆದರೆ, ಈ ಲೇಖನ ಒಂದು ದೇಶದ ಸಾಮಾಜಿಕ ಪಥವನ್ನೇ ಬದಲಿಸುವ ಮಹಾನ್ ವ್ಯಕ್ತಿಯೊಬ್ಬರ ಒಡಲ ಸಂಕಟವನ್ನು ಆ ಮೂಲಕ ತನ್ನ ನೆಲದ ಕೋಟ್ಯಂತರ ಜನರ ಕಣ್ಣೀರಿನ ಕಾರಣವನ್ನು ಕಂಡರಿಸುತ್ತದೆ. ದೇಶ ವಿದೇಶಗಳನ್ನು ಸುತ್ತಿಬಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿ, ದೇಶಕ್ಕೊಪ್ಪುವ ಹಾಗೂ ಸಕಲರಿಗೂ ಬದುಕುವ ಹಕ್ಕನ್ನು ನೀಡುವ ಸಂವಿಧಾನ ರಚಿಸಿದ ಬಾಬಾಸಾಹೇಬರು ಯಾಕೆ ಈ ‘ವೀಸಾಗಾಗಿ ಕಾಯುವʼ ಲೇಖನ ಬರೆಯುತ್ತಾರೆ ಅನ್ನುವುದನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಬಹುತೇಕ ವಿದ್ವಾಂಸರು ಅಭಿಪ್ರಾಯಪಟ್ಟಹಾಗೆ ಇದು ಭಾರತದ ಮೊದಲ ಆತ್ಮಚರಿತ್ರೆ. ಈ ಲೇಖನವನ್ನು ಓದುವಾಗ ನಮಗೆ ಭಾರತದ ದಲಿತರ ಬದುಕಿನ ಅಪಮಾನ, ಅಸಮಾನತೆ ಮತ್ತು ಅವುಗಳನ್ನು ಮೀರಿಕೊಳ್ಳಲು ನಡೆಸಿರುವ ಹೋರಾಟಗಳ ಅರಿವಿರಬೇಕು ಹಾಗೂ ಜಾತೀಯತೆಯ ಕರಾಳ ಮುಖದ ಪರಿಚಯವಿರಬೇಕು.

ಈ ಲೇಖನದ ಮೊದಲ ಘಟನೆ ನಡೆದದ್ದು 1901ರಲ್ಲಿ; ಬ್ರಿಟಿಷ್ ಆಳ್ವಿಕೆಯಲ್ಲಿದ್ದರೂ ವೈದಿಕ ಕಟ್ಟುಪಾಡುಗಳು ಮೇಲುಗೈ ಸಾಧಿಸಿದ್ದ ಕಾಲಘಟ್ಟದಲ್ಲಿ. ಆ ಹೊತ್ತಿಗೆ ತಾಯಿ ಭೀಮಾಬಾಯಿ ತೀರಿಕೊಂಡಿದ್ದರು. ಬಾಬಾಸಾಹೇಬರ ತಂದೆ ಈಸ್ಟ್ ಇಂಡಿಯಾ ಕಂಪನಿಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಬೇದಾರರಾಗಿ ಬಡ್ತಿ ಹೊಂದಿದ ರಾಮಜೀ ಸಕ್ಪಾಲ್, ಸತಾರ ಜಿಲ್ಲೆಯ ಗೋರೆಗಾಂವ್‌ನಲ್ಲಿ ಕ್ಯಾಶಿಯರ್ ಹುದ್ದೆಯಲ್ಲಿದ್ದರು. ಆದರೆ ಕುಟುಂಬ ಸತಾರದಲ್ಲೇ ನೆಲೆಸಿತ್ತು. ಬಾಬಾಸಾಹೇಬರು ಮತ್ತವರ ಸಹೋದರರು ಚಿಕ್ಕಮ್ಮನ ಜೊತೆ ಉಳಿದುಕೊಂಡಿದ್ದರು. ಕ್ಷಾಮದ ಕಾರಣಕ್ಕೆ, ಜನರಿಗೆ ಉದ್ಯೋಗ ನೀಡುವ ಸಲುವಾಗಿ ಕೆರೆ ಕಟ್ಟಿಸುವ ಬ್ರಿಟಿಷ್ ಸರ್ಕಾರದ ನಿರ್ಧಾರದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ರಾಮಜೀ ಸಕ್ಪಾಲ್ ರಜೆ ಹಾಕಿ ಮಕ್ಕಳನ್ನು ನೋಡಲು ಬರುವಹಾಗಿರಲಿಲ್ಲ. ಬೇಸಿಗೆಯಲ್ಲಿ ತಮ್ಮನ್ನು ಕಾಣಲು ಮಕ್ಕಳೇ ಬರಲಿ ಎಂದು ಆಶಿಸಿದ್ದ ರಾಮಜೀ ಅವರು ಪತ್ರ ಬರೆದಿದ್ದರು.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೂರದಲ್ಲಿರುವ ತಂದೆಯನ್ನು ನೋಡಲು ಹೊರಟ ಮಕ್ಕಳ ತುಮುಲ ಜಾತಿ ಸಮಾಜದ ಸಣ್ಣತನದ ಮುಂದೆ ದುಃಖ ತರಿಸುತ್ತದೆ. ಅಲ್ಲಿಯವರೆಗೂ ರೈಲು ನಿಲ್ದಾಣವನ್ನೇ ಕಾಣದ ಬಾಬಾ ಸಾಹೇಬರು ತಮ್ಮ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಗೋರೆಗಾಂವ್‌ಗೆ ಹೊರಡಲು ಇಂಗ್ಲಿಷರಿಂದ ತಯಾರಿಸಲ್ಪಟ್ಟ ಬಟ್ಟೆ, ಟೊಪ್ಪಿ, ಶೂಗಳು ಹಾಗೂ ಪಂಚೆಗಳನ್ನೂ ಕೊಂಡರು. ಹತ್ತು ಕಿಲೋಮೀಟರ್ ದೂರದ ರೈಲು ನಿಲ್ದಾಣವನ್ನು ಪ್ರತಿಷ್ಠಿತವಾದ ಉಡುಗೆ ತೊಡುಗೆಯ ಸಹಾಯದಿಂದ ಟಾಂಗಾದಲ್ಲಿ ಕ್ರಮಿಸಿದರು. ಅಲ್ಲಿಂದ ರೈಲು ಹತ್ತಿ ಮಾಸೂರು ಎಂಬಲ್ಲಿ ಇಳಿದರು. ಅಲ್ಲಿಂದ ಗೋರೆಗಾಂವ್‌ಗೆ ಕರೆದುಕೊಂಡು ಹೋಗಬೇಕಾದ ತಂದೆಯ ಕಡೆಯ ಸಹಾಯಕರು ಬಾರದ ಕಾರಣದಿಂದ ಬಹಳ ಹೊತ್ತಿನವರೆಗೆ ಮಕ್ಕಳು ಕಾಯಬೇಕಾಯಿತು. ಇವರ ವೇಷ ಭೂಷಣ ನೋಡಿ ಬ್ರಾಹ್ಮಣರೆಂದು ತಿಳಿದುಕೊಂಡಿದ್ದ ಸ್ಟೇಷನ್ ಮಾಸ್ಟರ್ ಮುತುವರ್ಜಿ ವಹಿಸುತ್ತಿದ್ದನು. ಆದರೆ, ಇವರು ಮಹಾರರೆಂದು ತಿಳಿದಮೇಲೆ ಅವನು ಬೇರೆ ರೀತಿಯಲ್ಲಿ ವರ್ತಿಸಲು ಶುರು ಮಾಡಿದನು. ಇವರಿಗೆ ಗೋರೆಗಾಂವ್ ತಲುಪಲು ಎತ್ತಿನಗಾಡಿಯ ಅಗತ್ಯವಿತ್ತು ಆದರೆ, ಮಕ್ಕಳು ಸ್ಟೇಷನ್ ಮಾಸ್ಟರ್‌ಗೆ ಜಾತಿ ಹೇಳುವಾಗ ಕೇಳಿಸಿಕೊಂಡಿದ್ದ ಅಲ್ಲಿನ ಕೆಲವು ಎತ್ತಿನಬಂಡಿಯವರು ಮಡಿ – ಮೈಲಿಗೆಯ ಕಾರಣಕ್ಕೆ ದೂರ ಉಳಿದರು. ಸ್ವಲ್ಪಹೊತ್ತಿನ ನಂತರ ಹಿಂದಿರುಗಿದ ಸ್ಟೇಷನ್ ಮಾಸ್ಟರ್‌ಗೆ ಮನಸ್ಸು ಕರಗಿ ಹೆಚ್ಚು ಬಾಡಿಗೆ ಕೊಟ್ಟು ಎತ್ತಿನಬಂಡಿ ಬಾಡಿಗೆ ತೆಗೆದುಕೊಂಡು ತಾವೇ ಓಡಿಸಿಕೊಂಡು ಹೋಗುವಂತೆಯೂ, ಬಂಡಿ ಚಾಲಕ ನಡೆದು ಬರುತ್ತಾನೆಂದೂ ಹೇಳಿದನು. ಇದರಿಂದ ಇವರಿಗೆ ಹೇಗೋ ನಡೆದುಹೋಗುವುದು ತಪ್ಪಿತು ಅನ್ನಿಸಿ ಒಪ್ಪಿದರು. ಆದರೆ, ಸ್ವಲ್ಪ ದೂರ ಹೋದಮೇಲೆ ನಡೆದು ಸುಸ್ತಾದ ಎತ್ತಿನಬಂಡಿಯವನು ಮಕ್ಕಳನ್ನು ಸರಿಸಿ ಬಂಡಿ ಏರಿದನು. ಹೀಗೆ ಪ್ರಯಾಣದ ಸಮಸ್ಯೆ ಕೊಂಚಮಟ್ಟಿಗೆ ಬಗೆಹರಿಯಿತು ಅನ್ನಿಸಿ ನಿರುಮ್ಮಳವಾಗಿದ್ದ ಮಕ್ಕಳಲ್ಲಿ ಗೋರೆಗಾಂವ್ ಇನ್ನೂ ಸಿಗದೆ ಇರುವುದು ಮತ್ತು ಆಗಲೇ ಕತ್ತಲಾಗಿರುವುದು ಆತಂಕ ಮೂಡಿಸಿದವು.

ರಾತ್ರಿ ಹತ್ತುಗಂಟೆ ದಾಟಿದರೂ ಗೋರೆಗಾಂವ್ ಬರಲಿಲ್ಲವೆಂದು ಮಕ್ಕಳು ಅಳತೊಡಗಿದರು. ತಮ್ಮನ್ನು ಎಲ್ಲಿಯೋ ಕಾಣದ ಜಾಗಕ್ಕೆ ಕರೆದೊಯ್ದು ಕೊಲೆ ಮಾಡಿ, ತಮ್ಮ ಮೈಮೇಲಿನ ಚಿನ್ನದ ಒಡವೆಗಳನ್ನು ಅಪಹರಿಸುವನೆಂದು ಶಂಕಿಸಿದರು. ಸರಿರಾತ್ರಿಯಲ್ಲಿ ಒಂದು ದೀಪ ಕಾಣಿಸಿ ಅದು ಸುಂಕ ಸಂಗ್ರಹಕಾರನ ಗುಡಿಸಲು ಎಂದು ತಿಳಿಯಿತು. ಹಲವು ಎತ್ತಿಬಂಡಿಗಳ ಪ್ರಯಾಣಿಕರು, ಚಾಲಕರು ವಿಶ್ರಾಂತಿಗಾಗಿ ಅಲ್ಲಿ ತಂಗಿದ್ದನ್ನು ಕಂಡ ಬಾಬಾಸಾಹೇಬರು ಅಲ್ಲೇ ಕೆಲಕಾಲ ವಿಶ್ರಮಿಸಿ ಊಟ ಮಾಡಬಹುದು ಅಂದುಕೊಂಡರು. ಆದರೆ, ಅವರ ಬಳಿ ನೀರು ಇರಲಿಲ್ಲ. ಸುಂಕದ ಕುಟೀರದಲ್ಲಿ ನೀರು ಕೇಳೋಣವೆಂದರೆ, ಎತ್ತಿನಬಂಡಿ ಚಾಲಕ ‘ನೀವು ಮಹಾರರೆಂದು ತಿಳಿದರೆ ನೀರು ಸಿಗುವುದಿಲ್ಲ; ಮುಸಲ್ಮಾನರು ಎಂದು ಸುಳ್ಳು ಹೇಳಿ ನೀರು ಪಡೆದು ಊಟ ಮಾಡಿಕೊಳ್ಳಿʼ ಎಂದನು. ಆದರೆ, ತಾವು ಮುಸಲ್ಮಾನರೆಂದು ನಂಬಿಸುವುದು ಈ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಇಲ್ಲಿ ನೀರು ಸಿಗುವುದಿಲ್ಲ ಎಂದೂ, ಗುಡ್ಡದ ಮೇಲೆ ಸಿಗುತ್ತದೆ ಎಂದೂ ಆತ ಕಟುವಾಗಿ ಹೇಳಿದನು. ಈ ಕಾರಣದಿಂದ ಆ ರಾತ್ರಿ ಅವರು ಸಾಕಷ್ಟು ಆಹಾರವಿದ್ದೂ, ನೀರಿಲ್ಲದ ಕಾರಣಕ್ಕೆ ಉಪವಾಸ ಮಲಗಬೇಕಾಯಿತು. ಈ ಘಟನೆ ಬಾಬಾಸಾಹೇಬರನ್ನು ಕಂಗೆಡಿಸಿತು. ನಾವು ಯಾವ ದೇಶದಲ್ಲಿದ್ದೇವೆ ಎನ್ನಿಸಿತು. ಅಸ್ಪೃಶ್ಯರಾಗಿರುವ ಕಾರಣಕ್ಕೇ ತಮಗೆ ನೀರು ಸಿಗಲಿಲ್ಲ ಅನ್ನುವ ಸತ್ಯ ಆಗ ಅವರಿಗೆ ಮನವರಿಕೆಯಾಯಿತು. ಅವರು ಊಹಿಸಿದ ‘ಸುರಕ್ಷಿತ ತಾಣʼ ಜಾತಿಯ ಕಾರಣಕ್ಕೆ ಅಸುರಕ್ಷಿತವಾಗಿತ್ತು. ಆ ರಾತ್ರಿ ಅವರು ಇಬ್ಬರು ಮಲಗಿ ಒಬ್ಬರು ಎದ್ದಿದ್ದು ಬಂಡಿ ಮತ್ತು ತಮ್ಮ ವಸ್ತುಗಳನ್ನು ನೋಡಿಕೊಂಡು ಕಳೆದರು. ಬೆಳಿಗ್ಗೆ ಎದ್ದು ನಸುಕಿನಲ್ಲಿ ಪ್ರಯಾಣಕ್ಕೆ ಒಪ್ಪದೆ ಎಂಟಕ್ಕೆ ಹೊರಟು ಹನ್ನೊಂದು ಗಂಟೆ ಹೊತ್ತಿಗೆ ಗೋರೆಗಾಂವ್ ತಲುಪಿದರು. ಮಕ್ಕಳನ್ನು ಕಂಡ ರಾಮಜೀ ಆಶ್ಚರ್ಯಚಕಿತರಾದರು. ತಾವು ಬರುವುದಾಗಿ ಬಾಬಾಸಾಹೇಬರು ಬರೆದಿದ್ದ ಪತ್ರವನ್ನು ಅವರ ಜವಾನ ಅವರಿಗೆ ನೀಡಿಯೇ ಇರಲಿಲ್ಲ.

ಬಾಬಾಸಾಹೇಬರು ಈ ಘಟನೆ ಬಗ್ಗೆ ಬರೆಯುತ್ತಾ ಭಾವುಕರಾಗುತ್ತಾರೆ. ಈ ಘಟನೆ ನಡೆದಾಗ ಅವರಿಗೆ ಒಂಬತ್ತು ವರ್ಷ. ಬಾಲ್ಯದಲ್ಲಿ ತಾವು ಅಸ್ಪೃಶ್ಯರು ಎಂದು ಅವರಿಗೆ ತಿಳಿದಿದ್ದರೂ ಸುತ್ತಲಿನ ಸಮಾಜ ತಮ್ಮನ್ನು ಈ ಮಟ್ಟದ ಕ್ರೌರ್ಯದಿಂದ ನಡೆಸಿಕೊಳ್ಳಬಹುದು ಎನ್ನುವ ಅಂದಾಜಿರಲಿಲ್ಲ. ಇದೇ ಸಂದರ್ಭದಲ್ಲಿ ಅವರು ಶಾಲೆಯ ದಿನಗಳನ್ನು ನೆನೆಯುತ್ತಾರೆ. ಶಾಲೆಯಲ್ಲಿ ಅವರು ಪ್ರತ್ಯೇಕವಾಗಿ ಒಂದು ತುಂಡು ಗೋಣಿಚೀಲ ಹಾಸಿಕೊಂಡು ಕೂರುತ್ತಿದ್ದುದು, ಜವಾನನೂ ಮುಟ್ಟಲು ಹೇಸುತ್ತಿದ್ದ ಆ ಚೀಲದ ತುಂಡನ್ನು ಪ್ರತಿದಿನ ಪುಸ್ತಕಗಳ ಜೊತೆ ಮನೆಗೆ ತೆಗೆದುಕೊಂಡು ಹೋಗಿ ಬೆಳಿಗ್ಗೆ ತರುತ್ತಿದ್ದುದು, ಸಹಪಾಠಿಗಳು ಬಾಯಾರಿಕೆಯಾದಾಗ ಶಿಕ್ಷಕರ ಒಪ್ಪಿಗೆ ಪಡೆದು ಜವಾನನಿಂದ ನೀರು ಪಡೆದು ಕುಡಿಯುತ್ತಿದ್ದುದು, ಆದರೆ, ಇವರಿಗೆ ಬಾಯಾರಿಕೆಯಾದರೆ, ನೀರು ಕೊಡಬೇಕಾದ ಜವಾನ ಎದ್ದು ಹೋಗುತ್ತಿದ್ದುದು, ಚಿಕ್ಕಂದಿನಲ್ಲಿ ತಮ್ಮ ಬಟ್ಟೆಗಳನ್ನು ಮುಟ್ಟಲು ಮಡಿವಾಳರು ನಿರಾಕರಿಸುತ್ತಿದ್ದುದು, ಕ್ಷೌರ ಮಾಡಲು ನಿರಾಕರಿಸುತ್ತಿದ್ದ ಕ್ಷೌರಿಕರ ಕೆಲಸವನ್ನು ಅಕ್ಕನೇ ಮಾಡುತ್ತಿದ್ದುದು ಇದೆಲ್ಲವನ್ನೂ ನೆನೆದು ಎಲ್ಲ ಅಸ್ಪೃಶ್ಯರ ಸಂಕಟವೂ ಇದೇ ಆಗಿರುವುದನ್ನು ಚಿಂತಿಸುತ್ತ ಬಾಬಾಸಾಹೇಬರು ಗೋರೆಗಾಂವ್‌ಗೆ ಪ್ರಯಾಣಿಸಿದ ಘಟನೆ ಅವರನ್ನು ಅದೆಷ್ಟು ಕುಗ್ಗಿಸಿತು ಎಂಬುದನ್ನು ದಾಖಲಿಸುತ್ತಾರೆ.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 2)

ಮೊದಲನೆಯ ಘಟನೆ ನಡೆದ 17 ವರ್ಷಗಳ ನಂತರದ ಘಟನೆಯನ್ನು ಬಾಬಾಸಾಹೇಬರು ಈ ಲೇಖನದ ಎರಡನೇ ಅಧ್ಯಾಯದಲ್ಲಿ ನಿರೂಪಿಸುತ್ತಾರೆ. ಅದು ಅವರು ನ್ಯೂಯಾರ್ಕ್‌ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನ್ ವಿಶ್ವವಿದ್ಯಾಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮುಗಿಸಿ 1918ರಲ್ಲಿ ಭಾರತಕ್ಕೆ ಹಿಂದಿರುಗಿದಾಗ ನಡೆದದ್ದು. ವಿದೇಶಗಳಲ್ಲಿ ಓದಿದ ಕಾರಣಕ್ಕೆ ಬಾಬಾಸಾಹೇಬರಿಗೆ ‘ತಾನೊಬ್ಬ ಅಸ್ಪೃಶ್ಯನಾಗಿ ಎಲ್ಲಿ ಹೋದರೂ ತನಗೂ ಮತ್ತು ಸಮಾಜಕ್ಕೂ ತೊಂದರೆಯಾಗುತ್ತದೆʼ ಎಂಬುದು ಮರೆತಹಾಗೇ ಆಗಿತ್ತು. ಬರೋಡಾಗೆ ಬಂದ ದಿನವೇ ಅದರ ಅನುಭವವಾಯಿತು. ಅವರಿಗೆ ತಕ್ಷಣಕ್ಕೆ ಉಳಿದುಕೊಳ್ಳಲು ಒಂದು ಜಾಗ ಬೇಕಿತ್ತು. ‘ನಾನೆಲ್ಲಿ ಹೋಗಲಿ; ಯಾರು ನನ್ನನ್ನು ಕರೆದೊಯ್ಯುತ್ತಾರೆ..?ʼ ಎಂಬ ಪ್ರಶ್ನೆ ಅವರಿಗೆ ಕಾಡುತ್ತಿತ್ತು. ಆ ಸಮಯದಲ್ಲಿ ಯಾವುದಾದರೂ ಮೇಲ್ಜಾತಿಗೆ ಸೇರಿದ ವ್ಯಕ್ತಿ ಹೀಗೆ ವಿದೇಶದಲ್ಲಿ ವ್ಯಾಸಂಗ ಮುಗಿಸಿಕೊಂಡು ಹಿಂದಿರುಗಿದ್ದರೆ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು..? ಅಸ್ಪೃಶ್ಯರಾದ ಕಾರಣಕ್ಕೆ ಬಾಬಾಸಾಹೇಬರು ಅಭದ್ರತೆಯಿಂದ ನೋಯುವ ಹಾಗಾಯಿತು. ಹೇಗೋ ‘ಪಾರ್ಸಿ ಇನ್ʼ ಎಂಬ ಪಾರ್ಸಿಗಳು ಪಾರ್ಸಿಗಳಿಗಾಗಿಯೇ ನಡೆಸುತ್ತಿದ್ದ ಹೋಟೆಲ್ ಹುಡುಕಿದರು. ಪಾರ್ಸಿಗಳು ಅನುಸರಿಸುತ್ತಿದ್ದ ಝೊರಾಷ್ಟ್ರೀಯನ್ ಧರ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಇರಲಿಲ್ಲ ಎಂಬ ಅಂಶ ಬಾಬಾಸಾಹೇಬರಲ್ಲಿ ಖುಷಿ ಮೂಡಿಸಿತು. ಆದರೆ ಇವರು ಪಾರ್ಸಿಯಲ್ಲದ್ದು ಕಂಡು ಪಾರ್ಸಿ ಇವರಿಗೆ ಕೊಠಡಿ ಕೊಡಲು ನಿರಾಕರಿಸಿದ. ಹೆಚ್ಚಿಗೆ ಹಣ ಕೊಡುವ ಒಪ್ಪಂದದೊಂದಿಗೆ ಕೊಠಡಿ ಸಿಕ್ಕಿತು. ಅದು ಪಾಳು ಕೊಂಪೆಯಂತಿತ್ತು. ಮನುಷ್ಯ ಸಂಪರ್ಕವಿಲ್ಲದೆ ಮುರಿದ ಕುರ್ಚಿ ಮೇಜು ಬೆಂಚುಗಳ ಉಗ್ರಾಣದಲ್ಲಿ ಬಾವಲಿಗಳ ಸದ್ದಿನ ನಡುವೆ ಓದುತ್ತ ದಿನ ದೂಡಿದರು ಬಾಬಾಸಾಹೇಬರು. ಬಂದಿಖಾನೆಯಂತಿದ್ದ ಆ ವಸತಿಯಲ್ಲಿ ದಿನ ದೂಡಬೇಕಿದ್ದ ಹೃದಯವಿದ್ರಾವಕ ದಿನಗಳು ಅವು ಎಂದು ಬಣ್ಣಿಸುತ್ತಾರೆ. ಆದರೂ ಈ ವಸತಿ ತಮ್ಮ ಪ್ರಾಣಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿತ್ತು ಎನ್ನುತ್ತಾರೆ. ತಮ್ಮ ಮಿಕ್ಕ ಲಗೇಜನ್ನು ಮುಂಬಯಿಯಿಂದ ತಂದೊಪ್ಪಿಸಿದ ಸೋದರಿಯ ಮಗ, ಬಾಬಾಸಾಹೇಬರು ವಾಸಿಸಿದ್ದ ಸ್ಥಿತಿಗತಿಯನ್ನು ಕಂಡು ಮರುಗಿ ಜೋರಾಗಿ ಅಳಲಾರಂಭಿಸಿದ್ದ. ಆತನನ್ನು ಸಮಾಧಾನ ಮಾಡಿ ಕಳಿಸಬೇಕಾಗಿ ಬಂದಿತ್ತು.

Ambedkar 10
ಸಾಂದರ್ಭಿಕ ಚಿತ್ರ

ಬಾಬಾಸಾಹೇಬರನ್ನು ವಿದೇಶದ ವ್ಯಾಸಂಗಕ್ಕೆ ಕಳಿಸಿದ್ದ ಬರೋಡಾದ ಮಹಾರಾಜರು ಇವರನ್ನು ಅಕೌಂಟೆಂಟ್ ಜನರಲ್ ಕಚೇರಿಗೆ ನೇಮಿಸಿದರು. ಸರ್ಕಾರಿ ವಸತಿಗಾಗಿ ಅವರು ಹಾಕಿದ್ದ ಅರ್ಜಿಯನ್ನು ಬರೋಡ ಸಂಸ್ಥಾನದ ಪ್ರಧಾನಮಂತ್ರಿ ನಿರ್ಲಕ್ಷಿಸಿದ್ದ. ‘ಪಾರ್ಸಿ ಇನ್ʼನಲ್ಲಿ ತಂಗಿದ್ದ 11ನೇ ದಿನದಂದು ಕೆಲವರು ಬಂದು ಪಾರ್ಸಿಯಲ್ಲದಿದ್ದರೂ ಇಲ್ಲಿ ಉಳಿದುಕೊಂಡಿರುವ ಬಗ್ಗೆ ಧಮ್ಕಿ ಹಾಕಿದರು. ಬಾಬಾಸಾಹೇಬರು ಈ ಘಟನೆಯನ್ನು ವಿವರಿಸುವಾಗ ಅವರ ಭಾಷೆಯ ಕಟುವನ್ನು ನಾವು ಗಮನಿಸಬೇಕು. ‘ನಾನು ಪಾರ್ಸಿವೇಷದಲ್ಲಿ ಆಡುತ್ತಿದ್ದ ಆಟವು ಬಯಲುಗೊಂಡಿತ್ತು ಹಾಗೂ ಈ ಆಟವನ್ನು ಮುಂದುವರಿಸಿದರೆ ಜೀವನವೇ ಅಂತ್ಯವಾಗುವ ಮಾರಣಾಂತಿಕ ಹಲ್ಲೆಗೆ ಒಳಗಾಗುತ್ತಿದ್ದೆ. ನನ್ನ ಶಾಂತಚಿತ್ತ ಮತ್ತು ಮೌನ ನನ್ನನ್ನು ಅಪಾಯದಿಂದ ಪಾರು ಮಾಡಿದವು.ʼ

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)

ಆ ಪಾರ್ಸಿಗಳು ಅಂದು ಸಂಜೆಯ ಹೊತ್ತಿಗೆ ವಸತಿಯನ್ನು ಖಾಲಿ ಮಾಡಬೇಕೆಂದು ಧಮ್ಕಿ ಹಾಕಿ ಹೋಗಿದ್ದರಿಂದ ಬಾಬಾಸಾಹೇಬರಿಗೆ ಕೈಕಾಲು ಆಡಲಿಲ್ಲ. ಎಲ್ಲರನ್ನೂ ಶಪಿಸುತ್ತ ಜೋರಾಗಿ ಅತ್ತರು. ಅವರಿಗೆ ಸಿಗಬೇಕಾದ ಸರ್ಕಾರಿ ಬಂಗಲೆಯ ಬಗ್ಗೆ ಅವರಿಗೆ ನಂಬಿಕೆಯಿದ್ದರೂ ಆ ಕ್ಷಣದಲ್ಲಿ ಅವರಿಗೆ ಬೇರೊಂದು ವ್ಯವಸ್ಥೆ ಆಗಬೇಕಿತ್ತು. ಬರೋಡಾದಲ್ಲಿ ಅವರಿಗೆ ಇಬ್ಬರು ಸ್ನೇಹಿತರಿದ್ದರು. ಒಬ್ಬ ಹಿಂದೂ. ಇನ್ನೊಬ್ಬ ಭಾರತೀಯ ಕ್ರೈಸ್ತ. ಮೊದಲು ಹಿಂದೂ ಸ್ನೇಹಿತನನ್ನು ಕೇಳಿದರು. ಆತ ಉದಾತ್ತನೂ, ನಿಷ್ಕಲ್ಮಷ ಹೃದಯದವನೂ ಆಗಿದ್ದನು ಆದರೆ, ‘ನೀನು ನಮ್ಮ ಮನೆಗೆ ಬಂದರೆ ನನ್ನ ಸೇವಕರು ಕೆಲಸ ಬಿಟ್ಟು ಹೋಗಬಹುದುʼ ಎಂದನು. ಇದಾದಮೇಲೆ ಬಹಳ ಯೋಚಿಸಿದ ನಂತರ ಬಾಬಾಸಾಹೇಬರು ‘ನನ್ನ ಮನೆಗೊಮ್ಮೆ ಬಾʼ ಎಂದು ಆಹ್ವಾನಿಸಿದ್ದ ಭಾರತೀಯ ಕ್ರೈಸ್ತ ಸ್ನೇಹಿತನ ಬಳಿ ಹೋಗಿ ಕೇಳಿದರು. ಅವನು ‘ನನ್ನ ಹೆಂಡತಿ ಊರಿಗೆ ಹೋಗಿದ್ದಾಳೆ; ಅವಳು ನಾಳೆ ಬರೋಡಾಗೆ ಬರುತ್ತಾಳೆ. ಅವಳೊಂದಿಗೆ ಈ ಬಗ್ಗೆ ಮಾತಾಡಿ ತಿಳಿಸುತ್ತೇನೆʼ ಎಂದನು. ಈ ಉತ್ತರ ಅವರಿಗೆ ಅರ್ಥವಾಗಿತ್ತು. ಆ ದಂಪತಿ ಮೂಲತಃ ಬ್ರಾಹ್ಮಣರಾಗಿದ್ದು, ಗಂಡನು ಸ್ವಲ್ಪಮಟ್ಟಿಗೆ ಉದಾರಿಯಾಗಿದ್ದರೂ ಹೆಂಡತಿ ಸಂಪ್ರದಾಯಶರಣೆಯಾಗಿದ್ದಳು. ಇದಾದಮೇಲೆ ಬಾಬಾಸಾಹೇಬರಿಗೆ ಉಳಿದ ಏಕೈಕ ದಾರಿ ಬಾಂಬೆಗೆ ಹಿಂದಿರುಗುವುದು. ರಾತ್ರಿ ಒಂಬತ್ತರ ರೈಲುಗಾಡಿ ಹಿಡಿಯಬೇಕಿರುತ್ತದೆ. ಅಲ್ಲಿಯವರೆಗೆ ಕಾಲ ಕಳೆಯುವುದಾದರೂ ಎಲ್ಲಿ? ಪಾರ್ಸಿ ಹೊಟೇಲಿಗೆ ಹಿಂದಿರುಗುವ ಆಲೋಚನೆಯನ್ನು ಕೈಬಿಡುತ್ತಾರೆ. ರಾತ್ರಿ ಎಂಟರ ತನಕ ಬರೋಡಾದ ಹೊರವಲಯದ ಕಾಮಾಟಿ ಬಾಗ್ ಎಂಬ ಪಾರ್ಕ್‌ನಲ್ಲಿ ಕುಳಿತು ಕೆಲಕಾಲ ತಮ್ಮ ದುಸ್ಥಿತಿಯನ್ನು ಧೇನಿಸುತ್ತಾರೆ. ನಂತರ ಹೋಟೆಲ್‌ಗೆ ಹೋಗಿ ಬಾಕಿ ಹಣ ಸಂದಾಯ ಮಾಡಿ ಬಾಂಬೆಗೆ ಹೊರಡುತ್ತಾರೆ. ಈ ಘಟನೆ ನಡೆದಾಗ ಭಾರತೀಯ ಶೈಕ್ಷಣಿಕ ಸೇವೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದವು. ಅಲ್ಲದೆ, ಲಂಡನ್ನಿನಲ್ಲಿ ಅವರಿಗೆ ಉನ್ನತ ವ್ಯಕ್ತಿಗಳ ಪರಿಚಯವಿತ್ತು. ತಮ್ಮ ಓದಿಗೆ ಸಹಾಯ ಮಾಡಿದ ಬರೋಡಾ ಮಹಾರಾಜರ ಆಡಳಿತದಲ್ಲಿ ಸೇವೆ ಸಲ್ಲಿಸಬೇಕೆಂಬ ಒಂದೇ ಕಾರಣಕ್ಕೆ ಅವರಲ್ಲಿಗೆ ಹೋಗಿದ್ದರು. ಆದರೆ, ಕೇವಲ ಹನ್ನೊಂದು ದಿವಸಗಳಲ್ಲಿ ಅವರ ಬರೋಡಾ ಸೇವೆ ಸಮಾಪ್ತಿಗೊಂಡಿತ್ತು. ಈ ಘಟನೆ ಅವರಿಗೆ ತಮ್ಮ ತಂದೆ ತಾಯಿಯವರ ಕಾಲದ ಅಸ್ಪೃಶ್ಯರು ಅನುಭವಿಸಿರಬಹುದಾದ ಸಂಕಟವನ್ನು ಅವರ ಹೃದಯಕ್ಕೆ ಕಟ್ಟಿಕೊಟ್ಟಿತ್ತು. ಈ ಘಟನೆ ನಡೆದ ಹದಿನೆಂಟು ವರ್ಷಗಳ ನಂತರ ಇದನ್ನು ದಾಖಲಿಸುತ್ತಾರೆ ಬಾಬಾಸಾಹೇಬರು. ಆಗ ಅವರು ಹೇಳುತ್ತಾರೆ: ‘ಆ ಸನ್ನಿವೇಶ ನೆನಪಾದಾಗಲೆಲ್ಲಾ ಕಣ್ಣಲ್ಲಿ ನೀರು ತನ್ನಷ್ಟಕ್ಕೆ ತಾನೇ ಹರಿಯುತ್ತದೆʼ ಅಂತ. ಇದರಿಂದ ಅವರಿಗೆ ‘ಹಿಂದೂಗಳಿಗೆ ಅಸ್ಪೃಶ್ಯರಾಗಿರುವವರು ಪಾರ್ಸಿಗಳಿಗೂ ಅಸ್ಪೃಶ್ಯರೇʼ ಅನ್ನುವ ಸತ್ಯ ಅರ್ಥವಾಗುತ್ತದೆ.

(ಮುಂದುವರಿಯುತ್ತದೆ..)

(ಈದಿನ ಡಾಟ್ ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಹುಲಿಕುಂಟೆ ಮೂರ್ತಿ Hulikunte Murthy
ಹುಲಿಕುಂಟೆ ಮೂರ್ತಿ
+ posts

ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

ಪೋಸ್ಟ್ ಹಂಚಿಕೊಳ್ಳಿ:

ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...