ಇತಿಹಾಸದ ಪುಟಗಳಲ್ಲಿ ಯುದ್ಧವನ್ನು ಕೇವಲ ಸೇನೆಗಳ ನಡುವಿನ ಹೋರಾಟ ಎಂಬಂತೆ ದಾಖಲಿಸಲಾಗುತ್ತದೆ. ಆದರೆ ಆಧುನಿಕ ಯುದ್ಧಗಳು ಪರಿಸರದ ಮೇಲೆ ಬೀರುವ ಪರಿಣಾಮ ಭೀಕರವಾದದ್ದು. ಯುದ್ಧ ಎಂದರೆ ತ್ಯಾಜ್ಯಗಳ ಕಾರ್ಖಾನೆ ನಿರ್ಮಾಣ ಎಂದರೆ ತಪ್ಪಾಗಲಾರದು.
ಯುದ್ಧ! ಸದ್ಯ ಅಮೆರಿಕವೆಂಬ ದೊಡ್ಡಣ್ಣನ ಆಟ. 1776ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ, ಅಮೆರಿಕ ನೂರಾರು ಯುದ್ಧಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿದೆ. ಯುದ್ಧವೆಂದಾಗ ನಾವು ಸಾವು, ನೋವು ಮತ್ತು ರಕ್ತಪಾತವನ್ನು ನೋಡುತ್ತೇವೆ. ಅದನ್ನು ಬಿಟ್ಟು ಒಂದಿಷ್ಟು ಆಳವಾಗಿ ಯೋಚಿಸಿದರೆ ಯುದ್ಧದಿಂದ ಹೆಚ್ಚಾಗಿ ಅನ್ಯಾಯಕ್ಕೆ ಒಳಗಾಗುವವರು ಮಹಿಳೆಯರು ಎಂಬ ವಾಸ್ತವದ ಅರಿವಾಗುತ್ತದೆ. ಇದಕ್ಕೂ ಮುಂದುವರಿದರೆ ನಮಗೆ ಕಾಣಸಿಗುವುದು ಬರೀ ಕಸದ ರಾಶಿಯಷ್ಟೇ!
ಯುದ್ಧ ಅದೆಷ್ಟೋ ವರ್ಷಗಳ ಕಾಲ ನಡೆದು ಶಾಂತಿ ಒಪ್ಪಂದ ನಡೆದು ಕೊನೆಯಾಗಬಹುದು. ಆದರೆ ದಶಕಗಳ ಕಾಲ ಅದರ ಪರಿಣಾಮ ನಮ್ಮ ಭೂಮಿಯ ಮೇಲೆ ಹಾಗೆಯೇ ಉಳಿಯುತ್ತದೆ. ಯುದ್ಧದ ನಂತರ ನಮ್ಮನ್ನು ಕಾಡುವುದು ‘ತ್ಯಾಜ್ಯ ಬಿಕ್ಕಟ್ಟು’, ಅಂದರೆ War Waste Crisis. ಯುದ್ಧದ ಮತ್ತೊಂದು ಕರಾಳ ಸತ್ಯ ‘ತ್ಯಾಜ್ಯ ಬಿಕ್ಕಟ್ಟು’ ಎಂಬುದನ್ನು ನಾವು ಮರೆತುಬಿಡುತ್ತೇವೆ. ಬಾಂಬ್ ದಾಳಿಯಿಂದ ಕುಸಿದ ಕಟ್ಟಡಗಳ ಅವಶೇಷಗಳು, ಹರಿದುಹೋದ ತೈಲ, ಅಲ್ಲಲ್ಲಿ ಸಿಡಿಯದ ಸ್ಫೋಟಕಗಳು, ವಿಷಕಾರಿ ರಾಸಾಯನಿಕ- ಹೀಗೆ ಯುದ್ಧ ಮುಗಿಯುವಷ್ಟರಲ್ಲಿ ಎಲ್ಲವೂ ಸೇರಿ ಭೂಮಿಯನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತವೆ.
ಇದನ್ನು ಓದಿದ್ದೀರಾ? ಯುದ್ಧಗಳು ಕೊನೆಗಾಣಬೇಕು, ಜಾಗತಿಕ ಶಾಂತಿ ನೆಲೆಸಬೇಕು- ಎಡ ಪಕ್ಷಗಳ ಆಗ್ರಹ
ಮುಂದೆ ನಮ್ಮ ಸಮರ ಕಸದೊಂದಿಗೆ. ಯುದ್ಧ ಶಾಂತಿ ಒಪ್ಪಂದದ ಬಳಿಕ ಕೊನೆಯಾಗಬಹುದಾದರೂ ಈ ತ್ಯಾಜ್ಯವು ಇಂದು ನಾಳೆಗೆ ಮುಗಿಯುವ ಸಮಸ್ಯೆಯಲ್ಲ. ಇಂದು ಬೀಳುವ ಒಂದು ಬಾಂಬ್ ಮುಂದಿನ ಪೀಳಿಗೆಯ ಆರೋಗ್ಯವನ್ನು ಕುಂದಿಸುವಷ್ಟು ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ನಾವು ಯುದ್ಧವನ್ನೂ‘ಪರಿಸರ ಬಿಕ್ಕಟ್ಟು’ ಎಂದೇ ಪರಿಗಣಿಸಬೇಕಾದ ಅನಿವಾರ್ಯತೆ ಇಂದಿದೆ.

ಯುದ್ಧದ ತ್ಯಾಜ್ಯದಿಂದ ಉಂಟಾಗುವ ಅಪಾಯ
ಯುದ್ಧದಿಂದಾಗಿ ಸಾಕಷ್ಟು ಸಾವು-ನೋವುಗಳು ಉಂಟಾಗುವ ಜತೆಗೆ ತ್ಯಾಜ್ಯವೂ ಸೃಷ್ಟಿಯಾಗುತ್ತದೆ. ಈ ತ್ಯಾಜ್ಯದ ವಿಲೇವಾರಿ ಸಮಸ್ಯೆ ಮಾತ್ರವಲ್ಲ, ತ್ಯಾಜ್ಯದಿಂದ ಉಂಟಾಗುವ ಅಪಾಯ ಅಪಾರ.
- ವಿಷಕಾರಿ ರಾಸಾಯನಿಕಗಳು: ಮದ್ದುಗುಂಡುಗಳಲ್ಲಿರುವ ಸೀಸ, ಪಾದರಸ (Mercury) ಮತ್ತು ಸಲ್ಫರ್ ಮಣ್ಣಿನಲ್ಲಿ ಬೆರೆತು ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ.
- ಕಟ್ಟಡಗಳ ಅವಶೇಷಗಳು: ಕಟ್ಟಡಗಳು ಕುಸಿದಾಗ ಸಿಮೆಂಟ್, ಕಲ್ನಾರಿನ (Asbestos) ಪುಡಿ ಮತ್ತು ಇತರ ರಾಸಾಯನಿಕಗಳು ಗಾಳಿಯಲ್ಲಿ ಸೇರುತ್ತವೆ. ಇವುಗಳನ್ನು ಉಸಿರಾಡುವುದರಿಂದ ಶ್ವಾಸಕೋಶದ ಕಾಯಿಲೆಗಳು ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
- ಸಿಡಿಯದ ಸ್ಫೋಟಕಗಳು: ಯುದ್ಧ ಮುಗಿದ ದಶಕಗಳ ನಂತರವೂ ಭೂಮಿಯಲ್ಲಿ ಹೂತುಹೋದ ಸಿಡಿಯದ ಬಾಂಬ್‌ಗಳು ಅಥವಾ ಸ್ಫೋಟಕಗಳು ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತವೆ.
- ವಿಕಿರಣಶೀಲತೆ: ಕೆಲವು ಆಧುನಿಕ ಕ್ಷಿಪಣಿಗಳಲ್ಲಿ ಬಳಸುವ ಕ್ಷೀಣಿಸಿದ ಯುರೇನಿಯಂ (Depleted Uranium) ದಶಕಗಳ ಕಾಲ ವಿಕಿರಣವನ್ನು ಹೊರಸೂಸುತ್ತಿರುತ್ತದೆ. ಅತಿ ಹೆಚ್ಚು ಪ್ರಮಾಣದ ವಿಕಿರಣಕ್ಕೆ ಒಳಗಾದವರು ಕೆಲವೇ ದಿನಗಳಲ್ಲಿ ಅಥವಾ ವಾರಗಳಲ್ಲಿ ಸಾವನ್ನಪ್ಪಬಹುದು. ವಿಕಿರಣಶೀಲ ಕಣಗಳು ನದಿ ಮತ್ತು ಸಾಗರಗಳನ್ನು ಸೇರಿ ಕುಡಿಯುವ ನೀರನ್ನು ವಿಷಕಾರಿ ಮಾಡುತ್ತವೆ. ಮಣ್ಣು ಕಲುಷಿತಗೊಳ್ಳುವುದರಿಂದ ಬೆಳೆಗಳು ವಿಷಕಾರಿಯಾಗುತ್ತವೆ.
- ನ್ಯೂಕ್ಲಿಯರ್ ವಿಂಟರ್: ಸ್ಫೋಟದಿಂದ ಉಂಟಾಗುವ ಹೊಗೆ ಮತ್ತು ಧೂಳು ಸೂರ್ಯನ ಕಿರಣಗಳನ್ನು ತಡೆದು ಭೂಮಿಯ ತಾಪಮಾನ ಗಣನೀಯವಾಗಿ ಇಳಿಯುವಂತೆ ಮಾಡುತ್ತದೆ. ಇದನ್ನು ‘ನ್ಯೂಕ್ಲಿಯರ್ ವಿಂಟರ್’ ಎನ್ನುತ್ತಾರೆ. ಇದು ಕೃಷಿಯನ್ನೇ ನಾಶಪಡಿಸಬಹುದು.
ತ್ಯಾಜ್ಯ ನಿರ್ವಹಣೆಗೆ ಈ ದೇಶಗಳೇ ಮಾದರಿ
ಯುದ್ಧದ ನಂತರದ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸವಾಲು. ಸಾಮಾನ್ಯವಾಗಿ ಮೊದಲು ಸಿಡಿಯದ ಬಾಂಬ್‌ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದನ್ನು ಬಿಟ್ಟರೆ ಉಕ್ರೇನ್‌ನಂತಹ ದೇಶಗಳಲ್ಲಿ ಈಗ ಧ್ವಂಸಗೊಂಡ ಕಟ್ಟಡಗಳ ಕಾಂಕ್ರೀಟ್ ಅನ್ನು ಪುಡಿಮಾಡಿ ರಸ್ತೆ ನಿರ್ಮಾಣಕ್ಕೆ ಬಳಸಲು ಪ್ರಯತ್ನಿಸಲಾಗುತ್ತಿದೆ. ರಾಸಾಯನಿಕ ಮತ್ತು ತೈಲ ಮಾಲಿನ್ಯವನ್ನು ತಡೆಯಲು ವಿಶೇಷ ತಂತ್ರಜ್ಞಾನ ಬಳಸಿ ಮಣ್ಣನ್ನು ಶುದ್ಧೀಕರಿಸಲಾಗುತ್ತಿದೆ.
ಈ ಆಧುನಿಕ ಯುಗದಲ್ಲಿ ವಿಶ್ವಸಂಸ್ಥೆ (UNEP) ಮತ್ತು UNDP ಸಂಸ್ಥೆಗಳು ಈಗ ಉಪಗ್ರಹ ಚಿತ್ರಗಳ ಮೂಲಕ 48 ಗಂಟೆಗಳ ಒಳಗೆ ಯುದ್ಧ ಪೀಡಿತ ಪ್ರದೇಶದ ತ್ಯಾಜ್ಯದ ಪ್ರಮಾಣವನ್ನು ಲೆಕ್ಕ ಹಾಕುವ ತಂತ್ರಜ್ಞಾನ ಬಳಸುತ್ತಿವೆ. ಹಾಗೆಯೇ ಪರಿಸರ ನಾಶವನ್ನು ಒಂದು ‘ಯುದ್ಧಾಪರಾಧ’ ಎಂದು ಪರಿಗಣಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಹೋರಾಟ ತೀವ್ರಗೊಂಡಿದೆ. ಈ ಹಾದಿಯಲ್ಲಿ ನಮಗೆ ಜರ್ಮನಿ, ಫ್ರಾನ್ಸ್, ಕುವೈತ್ ಮೊದಲಾದವು ಮಾದರಿ ದೇಶವಾಗಿ ನಿಲ್ಲುತ್ತದೆ.
ಇದನ್ನು ಓದಿದ್ದೀರಾ? ಬ್ರಿಟನ್, ಅಮೆರಿಕದ ದುಷ್ಟ ಸಂಚುಗಳಿಗಿಲ್ಲ ಕೊನೆ: ಇರಾನ್ ಇತಿಹಾಸದ ಬಹುಮುಖ್ಯ ಮಜಲುಗಳಿವು
ಜರ್ಮನಿ ಮತ್ತು ಫ್ರಾನ್ಸ್: ಎರಡನೇ ಮಹಾಯುದ್ಧ
ಈ ಎರಡು ದೇಶಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಉಂಟಾದ ಅಪಾರ ಪ್ರಮಾಣದ ಅವಶೇಷಗಳನ್ನು ಹೊಸ ನಗರಗಳ ನಿರ್ಮಾಣಕ್ಕೆ ಅಡಿಪಾಯವಾಗಿ ಬಳಸಿಕೊಂಡವು. ಲಕ್ಷಾಂತರ ಟನ್ ಅವಶೇಷಗಳು, ಸ್ಫೋಟಕಗಳು ಮತ್ತು ಕೈಗಾರಿಕಾ ತ್ಯಾಜ್ಯವನ್ನು ಈ ದೇಶಗಳು ನಿರ್ವಹಿಸಿದ ರೀತಿ ಇಂದಿಗೂ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಮಾದರಿ. ಯುದ್ಧದ ನಂತರ ಪುರುಷರ ಸಂಖ್ಯೆ ಕಡಿಮೆಯಾಗಿದ್ದರಿಂದ, ಮಹಿಳೆಯರು ಸ್ವತಃ ರಸ್ತೆಗಿಳಿದು ನಗರದ ಅವಶೇಷಗಳನ್ನು ತೆರವುಗೊಳಿಸಿದ್ದರು. ಕಟ್ಟಡದ ಇಟ್ಟಿಗೆಗಳನ್ನು ಒಂದೊಂದಾಗಿ ಬೇರ್ಪಡಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಮರುಬಳಕೆಗೆ ಸಿದ್ಧಪಡಿಸಿದ್ದರು. ಇನ್ನು ಮರುಬಳಕೆ ಮಾಡಲು ಸಾಧ್ಯವಾಗದ ಕಸ ಮತ್ತು ಅವಶೇಷಗಳನ್ನು ನಗರದ ಹೊರವಲಯದಲ್ಲಿ ರಾಶಿ ಹಾಕಿ ದೊಡ್ಡ ಕೃತಕ ಬೆಟ್ಟಗಳನ್ನು ನಿರ್ಮಿಸಿದ್ದಾರೆ. ಉದಾಹರಣೆಗೆ, ಬರ್ಲಿನ್‌ನಲ್ಲಿರುವ ಟ್ಯೂಫೆಲ್ಸ್‌ಬರ್ಗ್ (Teufelsberg) ಬೆಟ್ಟವು ಯುದ್ಧದ 75 ಮಿಲಿಯನ್ ಕ್ಯೂಬಿಕ್ ಮೀಟರ್ ಅವಶೇಷಗಳಿಂದ ನಿರ್ಮಿಸಲ್ಪಟ್ಟ ಬೆಟ್ಟ. ಇದೀಗ ಇವುಗಳನ್ನು ಉದ್ಯಾನವನಗಳಾಗಿ ಬಳಸಲಾಗುತ್ತಿದೆ.

ಅಟ್ಲಾಂಟಿಕ್ ಗೋಡೆಯ ಭಾಗವಾಗಿ ಜರ್ಮನ್ನರು ನಿರ್ಮಿಸಿದ ಬೃಹತ್ ಕಾಂಕ್ರೀಟ್ ಬಂಕರ್‌ಗಳನ್ನು ಫ್ರಾನ್ಸ್ ಇಂದು ವಸ್ತುಸಂಗ್ರಹಾಲಯಗಳಾಗಿ ಅಥವಾ ಪ್ರವಾಸಿ ತಾಣಗಳಾಗಿ ಪರಿವರ್ತಿಸಿದೆ. ಫ್ರಾನ್ಸ್‌ನ ಕೃಷಿ ಭೂಮಿಯಲ್ಲಿ ಹೂತುಹೋಗಿದ್ದ ಲಕ್ಷಾಂತರ ಸ್ಫೋಟಕಗಳನ್ನು ತೆರವುಗೊಳಿಸಲು ದಶಕಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಇಂದಿಗೂ “ರೆಡ್ ಝೋನ್” (Zone Rouge) ಎಂಬ ಪ್ರದೇಶಗಳಲ್ಲಿ ಯುದ್ಧದ ರಾಸಾಯನಿಕ ತ್ಯಾಜ್ಯದ ಕಾರಣದಿಂದ ಕೃಷಿಯನ್ನು ನಿಷೇಧಿಸಲಾಗಿದೆ. ಈ ಎರಡೂ ದೇಶಗಳು ಯುದ್ಧದ ಅವಶೇಷಗಳನ್ನು ಕೇವಲ ಕಸವೆಂದು ಕಾಣದೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುವಾಗಿ ಬಳಸಿಕೊಂಡವು.
ಗಲ್ಫ್ ಯುದ್ಧ: ಕುವೈತ್
1991ರ ಗಲ್ಫ್ ಯುದ್ಧವು ಕುವೈತ್‌ನ ಪರಿಸರ ಮತ್ತು ಮೂಲಸೌಕರ್ಯಗಳ ಮೇಲೆ ಭೀಕರ ಪರಿಣಾಮ ಬೀರಿದೆ. ಯುದ್ಧದ ವೇಳೆ ಇರಾಕ್ ಸೈನ್ಯವು ಸುಮಾರು 700 ತೈಲ ಬಾವಿಗಳಿಗೆ ಬೆಂಕಿ ಹಚ್ಚಿತ್ತು. ಕುವೈತ್ ಅಂತಾರಾಷ್ಟ್ರೀಯ ತಜ್ಞರ ನೆರವಿನೊಂದಿಗೆ ಸುಮಾರು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಬೆಂಕಿಯನ್ನು ನಂದಿಸಿತ್ತು. ಯುದ್ಧದ ಸಮಯದಲ್ಲಿ ಹರಿದ ತೈಲದಿಂದ ಸುಮಾರು 300ಕ್ಕೂ ಹೆಚ್ಚು ‘ತೈಲ ಸರೋವರಗಳು’ ಸೃಷ್ಟಿಯಾಗಿದ್ದವು. ಇದನ್ನು ನಿರ್ವಹಿಸಲು ಕುವೈತ್ ಪರಿಸರ ಪರಿಹಾರ ಕಾರ್ಯಕ್ರಮ (KERP) ಜಾರಿಗೊಳಿಸಿತು. ಇದರ ಅಡಿಯಲ್ಲಿ ಕಲುಷಿತ ಮಣ್ಣನ್ನು ಆಧುನಿಕ ತಂತ್ರಜ್ಞಾನ ಬಳಸಿ ಶುದ್ಧೀಕರಿಸಲಾಗುತ್ತಿದೆ. ಸದ್ಯ ತೈಲ ಕಲುಷಿತಗೊಂಡಿದ್ದರಿಂದ ನಾಶವಾದ ಮರುಭೂಮಿಯ ಸಸ್ಯವರ್ಗ ಮತ್ತು ಜೀವವೈವಿಧ್ಯತೆಯನ್ನು ಪುನಃಸ್ಥಾಪಿಸಲು ಕುವೈತ್ ಇನ್‌ಸ್ಟಿಟ್ಯೂಟ್ ಫಾರ್ ಸೈಂಟಿಫಿಕ್ ರಿಸರ್ಚ್ (KISR)ನಂತಹ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ವಿಯೆಟ್ನಾಂ ಯುದ್ಧ: ತ್ಯಾಜ್ಯ ನಿರ್ವಹಿಸಿದ್ದು ಹೀಗೆ
ಶೀತಲ ಸಮರದ ಅವಧಿಯಲ್ಲಿ ನಡೆದ ಕಮ್ಯುನಿಸ್ಟ್ ಉತ್ತರ ವಿಯೆಟ್ನಾಂ (ಸೋವಿಯತ್ ಒಕ್ಕೂಟ, ಚೀನಾ ಬೆಂಬಲಿತ) ಮತ್ತು ದಕ್ಷಿಣ ವಿಯೆಟ್ನಾಂ (ಅಮೆರಿಕ ಬೆಂಬಲಿತ) ನಡುವಿನ ಭೀಕರ ಸಂಘರ್ಷವೇ ವಿಯೆಟ್ನಾಂ ಯುದ್ಧ. ಲಕ್ಷಾಂತರ ಸಾವುನೋವುಗಳು ಮತ್ತು ಭಾರಿ ವಿನಾಶದ ನಂತರ, 1975ರಲ್ಲಿ ಕಮ್ಯುನಿಸ್ಟ್ ವಿಜಯದೊಂದಿಗೆ ಯುದ್ಧ ಕೊನೆಗೊಂಡು, 1976ರಲ್ಲಿ ದೇಶವು ಏಕೀಕೃತಗೊಂಡಿತು. ಈ ಯುದ್ಧದಲ್ಲಿ 970,000ಕ್ಕೂ ಹೆಚ್ಚು ವಿಯೆಟ್ನಾಮೀಸ್ ಸೈನಿಕರು ಮತ್ತು ನಾಗರಿಕರು, ಹಾಗೂ 58,000ಕ್ಕೂ ಅಧಿಕ ಅಮೆರಿಕದ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧದ ಸಮಯದಲ್ಲಿ ಅಮೆರಿಕ ಬಳಸಿದ ಏಜೆಂಟ್ ಆರೆಂಜ್‌ನಂತಹ ರಾಸಾಯನಿಕಗಳು ಇಂದಿಗೂ ಭಾರಿ ಪರಿಸರ ಉಂಟು ಮಾಡುತ್ತಿದೆ. ರಾಸಾಯನಿಕದ ಪ್ರಭಾವವನ್ನು ತಗ್ಗಿಸಲು ಇಂದಿಗೂ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಮಣ್ಣನ್ನು ಶುದ್ಧೀಕರಿಸುವ ಕೆಲಸ ಮಾಡುತ್ತಿದೆ.
ಉದಾಹರಣೆಗೆ ದಾ ನಂಗ್ (Da Nang) ವಿಮಾನ ನಿಲ್ದಾಣದ ಪ್ರದೇಶದಲ್ಲಿನ ಸುಮಾರು 1,50,000 ಕ್ಯೂಬಿಕ್ ಮೀಟರ್‌ಗಳಷ್ಟು ಮಣ್ಣನ್ನು ‘ಇನ್-ಪೈಲ್ ಥರ್ಮಲ್ ಡಿಸೋರ್ಪ್ಶನ್’ (In-Pile Thermal Desorption – IPTD) ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಶುದ್ಧೀಕರಿಸಲಾಗಿದೆ. 2019ರಿಂದ ಬಿಯೆನ್ ಹೋವಾ (Bien Hoa) ವಾಯುನೆಲೆಯ ಬಳಿಯೂ ಇಂತಹದ್ದೇ ಬೃಹತ್ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಯುದ್ಧದ ನಂತರ ಲಕ್ಷಾಂತರ ಟನ್ ಸ್ಫೋಟಕಗಳು ಮಣ್ಣಿನಲ್ಲಿ ಹೂತುಹೋಗಿವೆ. ಇವುಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವಿನೊಂದಿಗೆ ಇಂದಿಗೂ ಸರ್ಕಾರವು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ರಾಸಾಯನಿಕ ದಾಳಿಯಿಂದ ನಾಶವಾದ ಅರಣ್ಯಗಳನ್ನು ಮತ್ತೆ ಬೆಳೆಸಲು ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
2026ಯ ಆರಂಭದ ವರದಿಗಳ ಪ್ರಕಾರ ಗಾಜಾದಲ್ಲಿ ಸುಮಾರು 61 ಮಿಲಿಯನ್ ಟನ್ ಅವಶೇಷಗಳು ಸಂಗ್ರಹವಾಗಿದೆ. ಇದು ಈಜಿಪ್ಟ್‌ನ 15 ಪಿರಮಿಡ್‌ಗಳ ಗಾತ್ರಕ್ಕೆ ಸಮಾನ! ಈ ಅವಶೇಷಗಳಲ್ಲಿ ಕೇವಲ ಕಲ್ಲುಗಳಿಲ್ಲ, ಬದಲಾಗಿ ಆಸ್ಬೆಸ್ಟಸ್, ಕೈಗಾರಿಕಾ ವಿಷ ಮತ್ತು ಕೊಳೆತ ಮೃತದೇಹಗಳ ಮಿಶ್ರಣವೂ ಇದೆ. ಉಕ್ರೇನ್‌ನಲ್ಲಿ ಯುದ್ಧದ ತ್ಯಾಜ್ಯದಿಂದಾಗಿ ಕೃಷಿ ಭೂಮಿ ಸವಕಳಿಯಾಗಿದೆ. ಸುಮಾರು 395.70 ಕೋಟಿ ರೂ. ಮೌಲ್ಯದ ಪರಿಸರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕ್ಷಿಪಣಿಗಳ ಉಳಿಕೆಗಳಿಂದಾಗಿ ಮಣ್ಣಿನಲ್ಲಿ ಸೀಸ ಮತ್ತು ಯುರೇನಿಯಂ ಅಂಶಗಳು ಬೆರೆತಿವೆ.

ಹೀಗೆ ಇತಿಹಾಸದ ಪುಟಗಳಲ್ಲಿ ಯುದ್ಧವನ್ನು ಕೇವಲ ಸೇನೆಗಳ ನಡುವಿನ ಹೋರಾಟ ಎಂಬಂತೆ ದಾಖಲಿಸಲಾಗುತ್ತದೆ. ಆದರೆ ಆಧುನಿಕ ಯುದ್ಧಗಳು ಪರಿಸರದ ಮೇಲೆ ಬೀರುವ ಪರಿಣಾಮ ಭೀಕರವಾದದ್ದು. ಯುದ್ಧ ಎಂದರೆ ತ್ಯಾಜ್ಯಗಳ ಕಾರ್ಖಾನೆ ನಿರ್ಮಾಣ ಎಂದರೆ ತಪ್ಪಾಗಲಾರದು. ಯುದ್ಧ ಭೂಮಿಯನ್ನು ಕೇವಲ ಸ್ಮಶಾನವನ್ನಾಗಿ ಮಾಡುವುದಲ್ಲವೆ, ಗಾಳಿ, ನೀರು ಮತ್ತು ಮಣ್ಣನ್ನು ವಿಷಕಾರಿಯನ್ನಾಗಿಸುತ್ತದೆ. ಒಂದು ಸ್ಫೋಟ ಸೃಷ್ಟಿಸುವ ಕಸವನ್ನು ವಿಲೇವಾರಿ ಮಾಡಲು ನೂರಾರು ವರ್ಷಗಳು ಬೇಕಾಗಬಹುದು. ಈ ಕಸದ ಸಮಸ್ಯೆ ಇಂದಿಗೆ ಮುಗಿಯುವುದಲ್ಲ.
ನಿಜವಾಗಿಯೂ ಯುದ್ಧವು ಕೇವಲ ಗಡಿಗಳ ನಡುವಿನ ಜಗಳವಲ್ಲ. ಅದು ಭೂಮಿಯ ಮೇಲಿನ ಕ್ರೌರ್ಯ. ‘ಯುದ್ಧವನ್ನು ಗೆಲ್ಲುವುದು ಸುಲಭ ಆಗಿರಬಹುದು. ಆದರೆ ಯುದ್ಧವು ಬಿಟ್ಟುಹೋಗುವ ಕಸವನ್ನು ಗೆಲ್ಲುವುದು ಅಸಾಧ್ಯ’. ಪರಿಸರ ಸ್ನೇಹಿ ಯುದ್ಧ ಎಂಬುದು ಮರೀಚಿಕೆ. ಶಾಂತಿ ಮಾತ್ರವೇ ಪರಿಸರಕ್ಕೆ, ಮಾನವ ಕುಲಕ್ಕೆ ಏಕೈಕ ಮದ್ದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




