2024ರಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಮತ್ತು ಪ್ರಚಾರಸಮರ ಹಿಮಾಚಲ ಪ್ರದೇಶದ ಉದ್ದಕ್ಕೂ ಬೀಸಿ ಆವರಿಸಿತು. ಉತ್ತರ ಭಾರತದಲ್ಲಿ ಇಸ್ಲಾಮೋಫೋಬಿಯಾದ ಮತ್ತೊಂದು ‘ಕೆಂಡದ ಹೊಂಡ’ ಸೃಷ್ಟಿಯಾಗಿದೆ. ಈವರೆಗೆ ಉತ್ತರಾಖಂಡ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ರಾಜ್ಯಗಳು ಈಗಾಗಲೆ ಮುಸ್ಲಿಮರ ಕುರಿತು ಪೂರ್ವಗ್ರಹ, ಭಯ, ಹಗೆತನ, ದ್ವೇಷ, ಹಲ್ಲೆ, ದಮನ, ಕಿರುಕುಳಗಳ ಕೇಂದ್ರಗಳಾಗಿ ಹೋಗಿವೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ಅಪಪ್ರಚಾರ ಸಮರದ ಪ್ರಭಾವಕ್ಕೆ ಸಿಲುಕಿರುವ ಹಿಂದೂ ಪ್ರತಿಭಟನಕಾರರು ಮಸೀದಿ ನೆಲಸಮಗಳು, ‘ಅನ್ಯರಾದ’ ಮುಸ್ಲಿಮರನ್ನು ಒದ್ದೋಡಿಸುವ, ಅವರ ಮೇಲೆ ಆರ್ಥಿಕ ಬಹಿಷ್ಕಾರ ಹೇರುವ ಹಾಗೂ ಅವರ ಆಸ್ತಿಪಾಸ್ತಿಗಳನ್ನು ಹಾಳುಗೆಡವಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ. ಆರ್ಟಿಕಲ್ 14 ಜಾಲತಾಣವು ಆರು ಮಂದಿ ಹಿಂದೂ ತೀವ್ರವಾದಿಗಳ ಜೊತೆಗೆ ಮಾತಾಡಿತು. ಈ ಪೈಕಿ 30 ಮುಸ್ಲಿಂ ವಿರೋಧಿ ರ್‍ಯಾಲಿಗಳನ್ನು ನಡೆಸಿರುವ ಕಾಂಗ್ರೆಸ್ ಕೌನ್ಸಿಲರ್ ಕೂಡ ಸೇರಿದ್ದಾನೆ.
ಸಂಜೋಲಿ, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಬೀದಿ ಜಗಳವೊಂದರಲ್ಲಿ ಮುಸಲ್ಮಾನ ಗಂಡಸರು ಹಿಂದೂ ಗಂಡಸರನ್ನು ಥಳಿಸಿದ್ದಾರೆಂಬ ಸುದ್ದಿ ಮುಸಲ್ಮಾನರ ವಿರುದ್ಧ ಪ್ರತಿಭಟನೆಗಳ ಸರಣಿಗೆ ಕಾರಣವಾಯಿತು. ಅಂದಹಾಗೆ 2022ರಿಂದ ಹಿಮಾಚಲದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ಇದಕ್ಕೆ ಮುನ್ನ ಐದು ವರ್ಷಗಳ ಕಾಲ ಬಿಜೆಪಿಯ ಆಳ್ವಿಕೆ ಇತ್ತು.
ಜಗಳ ನಡೆದದ್ದು ಮಲ್ಯಾಣಾ ಎಂಬ ಸ್ಥಳದಲ್ಲಿ. ಅಲ್ಲಿಂದ ಒಂಬತ್ತು ಕಿ.ಮೀ.ದೂರದಲ್ಲಿರುವ ಸಂಜೋಲಿ ಟೌನಿನಲ್ಲಿರುವ ಮಸೀದಿಯನ್ನು ನೆಲಸಮ ಮಾಡಬೇಕೆಂದು 2024ರ ಸೆಪ್ಟಂಬರ್ ಒಂದರಂದು ಕರೆ ಕೊಡುವುದರೊಂದಿಗೆ ಪ್ರತಿಭಟನೆಗಳು ಶುರುವಾದವು. 22 ಟೌನುಗಳು ಮತ್ತು ಹಳ್ಳಿಗಳಿಗೆ ಹಬ್ಬಿದವು.
ಜನ ಸಂಜೋಲಿ ಮಸೀದಿಯ ಸನಿಹ ಕುಳಿತು ಹಿಂದೂಗಳಲ್ಲಿ ಜನಪ್ರಿಯವೆನಿಸಿರುವ ಹನುಮಾನ್ ಚಾಲೀಸಾ ಜಪಿಸಿದರು. ಸಂಜೋಲಿಯಲ್ಲಿ ಅಕ್ರಮ ಮಸೀದಿಯನ್ನು ನೆಲಸಮಗೊಳಿಸಬೇಕು, ಹೊರಗಿನವರನ್ನು ಖಾಲಿ ಮಾಡಿಸಬೇಕು ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರ ನಡುವೆ ಕುಳಿತಿದ್ದ ನರಿಂದರ್ ಠಾಕೂರ್ ಸಾರಿ ಹೇಳಿದ- ನಾವೆಲ್ಲ ಅವರನ್ನು ಬಹಿಷ್ಕರಿಸಬೇಕೆಂದು ತೀರ್ಮಾನಿಸಿದ್ದೇವೆ. ಮುಸಲ್ಮಾನರೊಂದಿಗಿನ ಜಗಳದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಪಕ್ಕ ಕುಳಿತಿದ್ದ ಈತ ಶಿಮ್ಲಾದ ಭಟ್ಟಾ ಕುಫ್ಫಾರ್ ಎಂಬ ವಾರ್ಡಿನಿಂದ ಆಯ್ಕೆ ಆಗಿದ್ದ ಕಾಂಗ್ರೆಸ್ಸಿಗ.
2023ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಠಾಕೂರ್ (42) ತಾನು ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಮರ್ಪಿತ ಕಾರ್ಯಕರ್ತ ಎಂದ. ಅಕ್ಟೋಬರ್ 19ರಂದು ಆರ್ಟಿಕಲ್ 14ರೊಂದಿಗೆ ಮಾತನಾಡಿದ ಠಾಕೂರ್ ಮಸೀದಿಯು ಅಕ್ರಮ ನಿರ್ಮಾಣ ಎಂದು ತನಗೆ ತಿಳಿದದ್ದು ವಾಟ್ಸ್ಯಾಪ್ ಮೆಸೇಜಿನ ಮೂಲಕ ಎಂದ.
ಇದನ್ನೂ ಓದಿರಿ: ಉತ್ತರ ಭಾರತ-ದಕ್ಷಿಣ ಭಾರತ: ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು
”ಥಳಿಸಲಾದ ಹಿಂದೂ ಗಂಡಸರು ನನ್ನ ಪರಿಚಿತರು. ಹೀಗಾಯಿತೆಂದು ಅವರೇ ನನ್ನ ಬಳಿ ಬಂದು ತಿಳಿಸಿದರು. ಆಗ ನಾವು ಸ್ಥಳೀಯರನ್ನೆಲ್ಲ ಕಂಡು ಮಾತಾಡಿ ಸಂಜೋಲಿ ಮಸೀದಿಯ ಮುಂದೆ ಪ್ರತಿಭಟಿಸಲು ತೀರ್ಮಾನಿಸಿದೆವು. ಸಂಬಂಧಪಟ್ಟ ಕಡತವನ್ನು ಮಸೀದಿಗೆ ತರುವಂತೆ ನಾನು ಕಮೀಷನರ್‌ಗೆ ಸೂಚಿಸಿದೆ. ಮಸೀದಿಯ ನಿರ್ಮಾಣ ಅಕ್ರಮ ಎಂಬುದನ್ನು ನಗರಪಾಲಿಕೆ ಆಡಳಿತ ಒಪ್ಪಿಕೊಂಡಿತು. ಹಾಗಿದ್ದರೆ ಕೆಡವಿ ಎಂದು ಒತ್ತಾಯಪಡಿಸಿದೆ” ಎಂದ ಠಾಕೂರ್.
”ರಸ್ತೆಗಳ ಮೇಲೆ ಅಕ್ರಮವಾಗಿ ಕುಳಿತಿದ್ದ 100-150 ಮಂದಿ ಬೀದಿ ವ್ಯಾಪಾರಿಗಳನ್ನು ಬಲಪ್ರಯೋಗಿಸಿ ತೆರವು ಮಾಡಿಸಿದೆ. ಅವರೆಲ್ಲ ಈಗ ವಾಪಸು ಹೊರಟು ಹೋಗಿದ್ದಾರೆ” ಎಂದೂ ಆತ ತಿಳಿಸಿದ.
ಶಿಮ್ಲಾ ಮುನಿಸಿಪಲ್ ಕಾರ್ಪೊರೇಷನ್ ಕೋರ್ಟು ಅಕ್ಟೋಬರ್ 5ರಂದು ನೀಡಿದ ಆದೇಶದ ಪ್ರಕಾರ ಮಸೀದಿಯ ಮೇಲ್ಭಾಗದ ಮೂರು ಅಂತಸ್ತುಗಳನ್ನು ಮಸೀದಿಯ ಸಮಿತಿ 2024ರ ಅಕ್ಟೋಬರ್ 21ರಂದು ಕೆಡವಲು ಶುರು ಮಾಡಿತು.

ಹಿಂದುತ್ವ ಸಂಘಟನೆಗಳು ಮುಂದೆ ಬಂದು ಈ ಪ್ರತಿಭಟನೆಯನ್ನು ತಮ್ಮ ವಶಕ್ಕೆ ಪಡೆದವು. ”ನಮ್ಮ ಅಸಲಿ ಪ್ರತಿಭಟನೆಯನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಅಪಹರಿಸಿದವು” ಎಂದು ಠಾಕೂರ್ ಸಂಜೋಲಿಯಲ್ಲಿ ಆರ್ಟಿಕಲ್ 14ಕ್ಕೆ ತಿಳಿಸಿದ.
”ನಾವು ಮೊದಲು ಹಿಂದೂಗಳು. ಕಾಂಗ್ರೆಸ್- ಬಿಜೆಪಿಯ ಮಾತು ಆನಂತರದ್ದು. ಬದುಕಿದ್ದರೆ ತಾನೇ ನಾವು ರಾಜಕಾರಣ ಮಾಡೋಕೆ ಸಾಧ್ಯ” ಎಂದ.
”ಸಹಾರಣಪುರದ ಮುಸಲ್ಮಾನರು ಗೂಂಡಾಗಿರಿ ಮಾಡ್ತಾರೆ, ಮಾದಕ ಪದಾರ್ಥ ಮಾರ್ತಾರೆ, ಕಳ್ಳತನವೂ ಉಂಟು. ಹಿಂಸಾಚಾರಿಗಳೂ ಹೌದು. ಇಲ್ಲಿ ಬಂದು ನೆಲೆಸಿ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ತಾರೆ. ಇದಕ್ಕೆಲ್ಲ ಅವರಿಗೆ ಹಣ ಸಿಗ್ತದೆ.” ಹಿಮಾಚಲದಲ್ಲಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಮುಸ್ಲಿಂ ಬಹುಳ ರಾಜ್ಯವನ್ನಾಗಿ ಮಾಡಲು ಮುಸಲ್ಮಾನರು ಸಂಚು ನಡೆಸಿದ್ದಾರೆಂಬ ಅಪಪ್ರಚಾರವನ್ನು ನಂಬಿದ್ದ ನರಿಂದರ್.
”ಮುಲ್ಲೇ ಕಟ್ವೇ ನಹೀ ಚಲೇಂಗೇ” ಎಂಬುದಾಗಿ ಮುಸ್ಲಿಮರ ಕುರಿತ ಅವಹೇಳನಕರ ಘೋಷಣೆಗಳನ್ನು ಉಳ್ಳ ಭಾರೀ ಪ್ರತಿಭಟನೆ ಸೆಪ್ಟಂಬರ್ ಐದರಂದು ಸಂಜೋಲಿಯಲ್ಲಿ ನಡೆದಿತ್ತು.
”ನಿಮಗೂ ತಾಯಂದಿರಿದ್ದಾರೆ, ಅಕ್ಕತಂಗಿಯರಿದ್ದಾರೆ. ನಮ್ಮ ಹೆಣ್ಣುಮಕ್ಕಳನ್ನು ಯಾರಾದರೂ ತಡವಿ ಕಿರುಕುಳ ಕೊಟ್ಟರೆ ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಮ್ಮ ಸನಾತನ ಹಿಂದೂ ಧರ್ಮಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ” ಎಂದು ಪ್ರತಿಭಟನೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ನರಿಂದರ್ ಹೇಳಿದ್ದ. ಸೆಪ್ಟಂಬರ್ ಒಂದರಿಂದ ಅಕ್ಟೋಬರ್ ಐದರ ತನಕ 35 ದಿನಗಳಲ್ಲಿ 30 ಮುಸ್ಲಿಮ್ ವಿರೋಧಿ ರ್‍ಯಾಲಿಗಳು ಹಿಮಾಚಲದಲ್ಲಿ ನಡೆದಿದ್ದವು. ಪತ್ರಿಕೆಗಳ ವರದಿಗಳನ್ನು ಕಲೆ ಹಾಕಿ ಆರ್ಟಿಕಲ್ 14 ಅಂದಾಜು ಮಾಡಿದ್ದ ಸಂಖ್ಯೆಯಿದು. ಶಿಮ್ಲಾ, ಸೋಲನ್, ಮಂಡಿ, ಕಾಂಗ್ಡಾ ಹಾಗೂ ಕುಲ್ಲು ಜಿಲ್ಲೆಗಳಿಗೆ ಭೇಟಿ ನೀಡಿ ಸಾಧಕ ಬಾಧಕಗಳನ್ನು ತಿಳಿದೆವು.
ಹಿಮಾಚಲ ರಾಜ್ಯದಾದ್ಯಂತ ಮಸೀದಿಗಳನ್ನು ಕೆಡವಬೇಕು, ಹೊರಗಿನವರಾದ ಮುಸಲ್ಮಾನರನ್ನು ಹಿಮಾಚಲದಿಂದ ತೆರವುಗೊಳಿಸಬೇಕು ಎಂಬುದು ಹಿಂದುತ್ವ ಪ್ರತಿಭಟನಾಕಾರರ ಬೇಡಿಕೆಯಾಗಿತ್ತು. ಮುಸ್ಲಿಮ್ ಕಾಜೀಗಳೇ ಥೂ ಥೂ..ಮುಲ್ಲೇ ಕಟ್ವೇ ನಹೀ ಚಲೇಂಗೇ ಎಂಬ ಘೋಷಣೆಗಳನ್ನು ಕೂಗಿದ್ದರು.
ಹಿಮಾಚಲದ ಜನಸಂಖ್ಯೆಯ ಶೇ.3ಕ್ಕಿಂತ ಕಡಿಮೆ ಪ್ರಮಾಣ ಮುಸಲ್ಮಾನರದು. ಆದರೂ ಹಿಂದೂ ಬಲಪಂಥೀಯರು ಮುಸಲ್ಮಾನ ವಲಸೆಗಾರರ ಕುರಿತು ಭಯ ಬಿತ್ತುತ್ತಿದ್ದರು. ಉತ್ತಮ ಉದ್ಯೋಗ ಅವಕಾಶಗಳನ್ನು ಅರಸಿ ಉತ್ತರಪ್ರದೇಶ ಮತ್ತು ಬಿಹಾರಿ ಮುಸಲ್ಮಾನರು ಹಿಮಾಚಲಕ್ಕೆ ವಲಸೆ ಬಂದಿದ್ದು ಹೌದು.
ಕಾಂಗ್ಡಾ ಜಿಲ್ಲೆಯ ಬ್ಲಾಕ್ ಅಭಿವೃದ್ಧಿ ಸಮಿತಿಯ ಸದಸ್ಯೆ ಸುಷ್ಮಾದೇವಿ ನವೆಂಬರ್ 23ರಂದು ಹಿಮಾಚಲದಿಂದ ತೊಲಗುವಂತೆ ಕಾಶ್ಮೀರಿ ಶಾಲು ಮಾರಾಟಗಾರರ ವಿರುದ್ಧ ಕಿರುಚುತ್ತಿದ್ದ ವಿಡಿಯೊ ಎಲ್ಲೆಡೆ ಹಬ್ಬಿತ್ತು. ‘ನೀವು ಹಿಮಾಚಲಕ್ಕೆ ಬರಲು ನಾವು ಬಿಡಲ್ಲ’ ಎಂದಿದ್ದಳಾಕೆ.
ಸುಷ್ಮಾದೇವಿ ವಿರುದ್ಧ ಕೇಸು ದಾಖಲಿಸಲಾಯಿತು. ತರುವಾಯ ಆಕೆ ಕ್ಷಮೆ ಕೋರಿದಳು. 2024ರ ಜುಲೈನಲ್ಲಿ ಈದ್ ದಿನ ಗೋಹತ್ಯೆ ಮಾಡಿದ್ದಾರೆಂಬ ಆರೋಪದ ಮೇರೆಗೆ ನಹಾನ್ ಮತ್ತು ಸಿರ್ಮೋರ್ ಜಿಲ್ಲೆಗಳಿಂದ 15 ಮಂದಿ ಮುಸಲ್ಮಾನ ಅಂಗಡಿಕಾರರು ಪರಾರಿಯಾಗುವ ಪರಿಸ್ಥಿತಿ ಸೃಷ್ಟಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಅಸಂಬದ್ಧಗಳು
ನರಿಂದರ್ ಠಾಕೂರ್ ಮಾತ್ರ ಅಲ್ಲ, ಹಿಮಾಚಲ ಪ್ರದೇಶದ ಗ್ರಾಮೀಣಾಭಿವೃದ್ಧಿ ಮಂತ್ರಿ ಅನಿರುದ್ಧ್ ಸಿಂಗ್ ತಮ್ಮ ಕಾಂಗ್ರೆಸ್ ಸಹೋದ್ಯೋಗಿ ಹರೀಶ್ ಜನಾರ್ಥ ಜೊತೆಗೂಡಿ ಸೆಪ್ಟಂಬರ್ ಐದರಂದು ಮಸೀದಿ ವಿಷಯವನ್ನು ವಿಧಾನಸಭೆಯ ಅಧಿವೇಶನದಲ್ಲಿ ಕೆದಕಿದ್ದುಂಟು.
ಬಾಂಗ್ಲಾದೇಶಿಗಳು ಮಸೀದಿಯಲ್ಲಿ ವಾಸ ಮಾಡುತ್ತಿದ್ದು, ಅವರ ಗುರುತು ಪತ್ತೆಯ ತನಿಖೆಯಾಗಬೇಕು ಎಂದು ಅನಿರುದ್ಧ್ ಸಿಂಗ್ ವಿಧಾನಸಭೆಯಲ್ಲಿ ಒತ್ತಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಮಸೀದಿ ವಿಷಯವನ್ನು ಎತ್ತಿದ್ದ ಕಾಂಗ್ರೆಸ್ ಕೌನ್ಸಿಲರ್ ನರಿಂದರ್‌ನನ್ನು ಹೊಗಳಿದ್ದರು ಅನಿರುದ್ಧ್. ಮಸೀದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದರು.
ಹಿಮಾಚಲದ ಎಲ್ಲ ಹೋಟೆಲುಗಳು, ರೆಸ್ಟೊರೆಂಟ್‌ಗಳು, ಫುಡ್ ಸ್ಟಾಲುಗಳು ತಮ್ಮ ಒಡೆಯನ ಗುರುತು ಪತ್ರಗಳನ್ನು ಪ್ರದರ್ಶಿಸಬೇಕು ಎಂದು ಜನ ಕಳವಳ, ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಉತ್ತರಪ್ರದೇಶದ ನೀತಿಯನ್ನೇ ನಾವೂ ಅನುಸರಿಸಲು ತೀರ್ಮಾನಿಸಿದ್ದೇವೆ ಎಂದರು.
ಉತ್ತರಪ್ರದೇಶದ ಈ ನೀತಿಗೆ 2024ರ ಜುಲೈ 22ರಂದು ಸುಪ್ರೀಮ್ ಕೋರ್ಟು ತಡೆ ನೀಡಿತ್ತು.
ಬಿಜೆಪಿ ರಾಜ್ಯ ಸರ್ಕಾರಗಳಿರುವ ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಇಸ್ಲಾಮೋಫೋಬಿಯಾ ಮತ್ತು ಹಿಂಸಾಚಾರದ ಹೆದ್ದೆರೆಗಳು ಎದ್ದಿವೆ. ಆದರೆ ಕಾಂಗ್ರೆಸ್ ಆಳ್ವಿಕೆ ಇರುವ ಹಿಮಾಚಲದಲ್ಲೂ ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ತೀವ್ರವಾದಿಗಳಿಂದ ಇಂತಹುದೇ ಹಿಂಸಾಚಾರ, ಮುಸ್ಲಿಮ್ ದ್ವೇಷ ನಡೆದಿದೆ.
ಹಿಂದೂಗಳನ್ನು ತೀವ್ರವಾದಿಗಳನ್ನಾಗಿ ಪರಿವರ್ತಿಸುವ ಸಂಘಟಿತ ಪ್ರಯತ್ನಗಳನ್ನು ನಿಲ್ಲಿಸಲು ಹಿಮಾಚಲ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ದೆಹಲಿಯಲ್ಲಿನ ಕಾಂಗ್ರೆಸ್ ನಾಯಕತ್ವ ಕೂಡ ಈ ಧ್ರುವೀಕರಣದ ವಿರುದ್ಧ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ. ರಾಹುಲ್ ಗಾಂಧಿ 2023ರ ಜನವರಿಯಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರಾದ ಮುಖ್ಯ ವಿಷಯಗಳಲ್ಲಿ ಕೋಮು ಸಾಮರಸ್ಯ ಕೂಡ ಸೇರಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು.
ಇಂಡಿಯಾ ಟುಡೇ ವರದಿಯ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಕ್ರಮಾದಿತ್ಯ ಸಿಂಗ್ ಅವರನ್ನು ದೆಹಲಿಗೆ ಕರೆದು ಬುದ್ಧಿ ಹೇಳಿದ್ದರು. ಹಿಮಾಚಲದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ಅವರು ಸೆಪ್ಟಂಬರ್ 13ರಂದು ಶಿಮ್ಲಾದಲ್ಲಿ ಸರ್ವಪಕ್ಷ ಸಭೆ ಕರೆದರು. “ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ, ಶಾಂತಿ ಸ್ಥಾಪಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದೇನೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಹಿಮಾಚಲದ ಭೂಮಿ ಸರ್ವಧರ್ಮಗಳನ್ನು ಗೌರವಿಸುತ್ತದೆ” ಎಂದು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಹಿಂದುತ್ವದ ಕಾರ್ಯಾಚರಣೆಗೆ ಎಲ್ಲೆಕಟ್ಟುಗಳೇ ಇಲ್ಲ.
ಸೆ.11ರಂದು ವಿಶ್ವಹಿಂದೂ ಪರಿಷತ್ ಶಿಮ್ಲಾದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಪ್ರತಿಭಟನೆಯ ಹಿಂದಿನ ದಿನ ರಾಜ್ಯ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ತುಷಾರ್ ಡೋಗ್ರಾ ಸಂದರ್ಶನ ನೀಡಿ ಸಾವಿರಾರು ಜನ ಭಾಗವಹಿಸುತ್ತಾರೆ ಎಂದಿದ್ದರು. ಏನು ಬೇಕಾದರೂ ಆಗಬಹುದು, ಜನಸಂದಣಿಯನ್ನು ಯಾರೂ ನಿಯಂತ್ರಿಸಲು ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದರು.
ತೀವ್ರ ಬಲಪಂಥೀಯ ಮುಖಂಡ ಕಮಲ್ ಗೌತಮ್ ಎಂಬುವರು ಈ ವರದಿಗೆ ಸಂಬಂಧಿಸಿದ ಫೋಟೋಗಳನ್ನು ತೆಗೆದ ಛಾಯಾಗ್ರಾಹಕ ಕೌಶಿಕ್ ರಾಜ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ದೆಹಲಿಯಿಂದ ಶಿಮ್ಲಾಗೆ ಬಂದಿರುವ ಶಂಕಿತ ಭಯೋತ್ಪಾದಕರ ಗುಂಪು ಎಂದು ಬರೆದಿದ್ದರು. ಹೀಗಾಗಿ ಶಿಮ್ಲಾದ ಸಂಜೋಲಿ ಮಸೀದಿಯ ಬಳಿ ಈ ವರದಿ ಬರೆದ ವರದಿಗಾರರನ್ನು ಪೊಲೀಸರು ತಡೆದು ನಿಲ್ಲಿಸಿ ಒಂದು ತಾಸಿನ ಕಾಲ ವಿಚಾರಣೆಗೆ ಗುರಿಪಡಿಸಿದ್ದರು. ಗುರುತುಪತ್ರಗಳ ಫೋಟೋಗಳನ್ನೂ ಪೊಲೀಸರು ತೆಗೆದುಕೊಂಡರು.
ಹಿಮಾಚಲದಲ್ಲಿ ನಡೆದಿರುವ ಈ ಪ್ರತಿಭಟನೆಗಳ ಹಿಂದಿರುವ ಸಂಘಟನೆ ದೇವಭೂಮಿ ಸಂಘರ್ಷ ಸಮಿತಿ. ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ”ದೇವಭೂಮಿಯಲ್ಲಿ ಹಿಂದೂ ಮೌಲ್ಯಗಳನ್ನು ಸಂರಕ್ಷಿಸುವುದು” ಈ ಸಂಘಟನೆಯ ಧ್ಯೇಯ.
ಮೂವತ್ತಾರು ವರ್ಷ ವಯಸ್ಸಿನ ಮದನ್ ಠಾಕೂರ್ ಈ ಸಂಘಟನೆಯ ಸಹಸಂಚಾಲಕ. ಸೆಪ್ಟಂಬರ್ 1ರಂದು ನಡೆದ ಪ್ರತಿಭಟನೆಯಲ್ಲಿ 30-35 ಮಂದಿ ಇದ್ದರು. ”ಇತ್ತೀಚೆಗೆ ಸಂಜೋಲಿ ಮಸೀದಿಗೆ ಜಮಾಅತ್‌ಗಳು (ಧಾರ್ಮಿಕ ಸಮ್ಮೇಳನಗಳು) ಬರುವುದನ್ನು ಗಮನಿಸಿದೆವು. ಮಲ್ಯಾಣದಲ್ಲಿ ನಡೆದ ಹಿಂದೂ ಮುಸ್ಲಿಮ್ ಜಗಳ ಕುರಿತು ಗೊತ್ತಾಯಿತು. ಈ ಪ್ರತಿಭಟನೆಯನ್ನು ಮುಂದಕ್ಕೆ ಒಯ್ಯಲು ತೀರ್ಮಾನಿಸಿದೆವು. ನಮ್ಮ ಸಂಘಟನೆಯಲ್ಲಿ ಹಿಮಾಚಲದ ಉದ್ದಗಲಕ್ಕೆ ಕೆಲಸ ಮಾಡುವ 50-60 ಸಾವಿರ ಜನರಿದ್ದಾರೆ. ಈ ಆಂದೋಲನ ಶುರುವಾದಾಗ ಹಳ್ಳಿಗಳು ಮತ್ತು ಟೌನುಗಳಲ್ಲಿ ಪ್ರತಿಭಟನೆಗಳನ್ನು ಸಂಘಟಿಸಿದವರು ನಮ್ಮವರೇ” ಎಂದರು ಮದನ್ ಠಾಕೂರ್.
ದೇವಭೂಮಿ ಸವರ್ಣೀಯರ ಸಂಘಟನೆ ಎಂಬ ಮತ್ತೊಂದು ಸಂಸ್ಥೆಗೆ ಮದನ್ ಠಾಕೂರ್ ಅವರೇ ಅಧ್ಯಕ್ಷ. ‘ಮೇಲ್ಜಾತಿ’ಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮೇಲ್ಜಾತಿಗಳ ಆಯೋಗವೊಂದನ್ನು ರಚಿಸಬೇಕು ಎಂಬುದು ದೇವಭೂಮಿ ಸವರ್ಣ ಸಂಘಟನೆಯ ಬೇಡಿಕೆ.
‘ನಿಮ್ಮ ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ಬೇಕಿದ್ದರೆ ಮುಸಲ್ಮಾನರು ಮತ್ತು ಅವರ ಬೆಂಬಲಿಗರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಿಷ್ಕರಿಸಿರಿ’ ಎನ್ನುತ್ತದೆ ಠಾಕೂರ್ ಅವರ ವಾಟ್ಸ್ಯಾಪ್ ಮತ್ತು ಫೇಸ್ ಬುಕ್‌ನ ಡಿಪಿ. ”ಹೊರಗಿನ ಮುಸಲ್ಮಾನರನ್ನು ಬಹಿಷ್ಕರಿಸುವಂತೆ ನಮ್ಮ ಸಂಸ್ಥೆ ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದೆ. ನಾವು ನಮ್ಮ ಮನೆಗಳನ್ನು ಸ್ವಚ್ಛಗೊಳಿಸಬೇಕಿದೆ. ಅದಕ್ಕಾಗಿ ಯಾವುದೇ ಸಂವಿಧಾನ ಅಥವಾ ರಾಜಕೀಯ ಪಕ್ಷಗಳ ಅನುಮತಿ ಬೇಕಿಲ್ಲ. ಈ ಮಂದಿಯನ್ನು ಮಯನ್ಮಾರಿನಲ್ಲಿ ಬಹಿಷ್ಕರಿಸಿದಂತೆ ಇಲ್ಲಿಯೂ ಬಹಿಷ್ಕರಿಸಬೇಕು ಎಂಬುದೇ ನಮ್ಮ ಧ್ಯೇಯ. ಈ ಮಂದಿ ಎಲ್ಲಿಗೆ ಬೇಕಾದರೂ ವಲಸೆ ಹೋಗಲಿ, ನಮ್ಮ ಮನೆಯನ್ನು ಸ್ವಚ್ಛಗೊಳಿಸುವುದು ನಮ್ಮ ಪ್ರಯತ್ನ. ಯಾವುದೇ ಕೊಳಕು ನಮಗೆ ಬೇಕಿಲ್ಲ. ಈ ಕ್ಯಾನ್ಸರ್ ಹರಡುತ್ತಿದೆ. ಅದನ್ನು ತಡೆದು ನಿಲ್ಲಿಸಲೇಬೇಕಿದೆ” ಎನ್ನುತ್ತಾರೆ ಮದನ್ ಠಾಕೂರ್.
2017ರಲ್ಲಿ ಮಯನ್ಮಾರಿನ ರೋಹಿಂಗ್ಯಾ ಮುಸಲ್ಮಾನರು ಅಲ್ಲಿಂದ ಪರಾರಿಯಾಗುವ ದುಸ್ಥಿತಿಯನ್ನು ಸೃಷ್ಟಿಸಲಾಯಿತು. ‘ಜನಾಂಗೀಯ ಶುದ್ಧೀಕರಣ’ದ ಪಠ್ಯಪುಸ್ತಕ ನಿದರ್ಶನವಿದು ಎಂದು ವಿಶ್ವಸಂಸ್ಥೆಯು ಈ ದುಸ್ಥಿತಿಯನ್ನು ಬಣ್ಣಿಸಿತ್ತು. ಠಾಕೂರ್ ಪ್ರಸ್ತಾಪಿಸಿದ್ದು ಇದೇ ‘ಶುದ್ಧೀಕರಣ’ವನ್ನು.

ದೇವಭೂಮಿ ಜಾಗರಣ ಮಂಚ್ ಎಂಬ ಬಲಪಂಥೀಯ ಸಂಘಟನೆ ಸೆಪ್ಟಂಬರ್ 14 ಮತ್ತು 30ರಂದು ಕುಲ್ಲುವಿನಲ್ಲಿ ಅಲ್ಲಿಯ ಮಸೀದಿ ವಿರುದ್ಧ ಭಾರೀ ಪ್ರದರ್ಶನಗಳನ್ನು ಏರ್ಪಡಿಸಿತ್ತು. ಹೊರಗಿನವರಿಗೆ ತಮ್ಮ ಮನೆ ಅಥವಾ ಷಾಪುಗಳನ್ನು ಬಾಡಿಗೆಗೆ ಕೊಡದಂತೆ ಜನರನ್ನು ಕೋರುವ ಕರಪತ್ರಗಳನ್ನು ಈ ಸಂಘಟನೆ ಮನೆಮನೆಗೆ ಹಂಚಿತು.
”ನಿಮ್ಮ ಮನೆ ಮತ್ತು ಅಂಗಡಿಗಳನ್ನು ಹೊರಗಿನವರಿಗೆ ಬಾಡಿಗೆಗೆ ಕೊಡಬೇಡಿರಿ. ಹೊರಗಿನ ಕೂಲಿ ಕಾರ್ಮಿಕರು, ಕ್ಷೌರಿಕರು ಹಾಗೂ ಸುಣ್ಣಬಣ್ಣ ಬಳಿಯುವವರನ್ನು ಬಹಿಷ್ಕರಿಸಿರಿ. ಮಹಿಳೆಯರು ತಮ್ಮ ಬಟ್ಟೆಗಳನ್ನು ಹೊಲಿಯಲು ಕೇವಲ ಹಿಂದೂ ದರ್ಜಿಗಳಿಗೆ ಮಾತ್ರ ನೀಡಿರಿ. ಹೊರಗಿನವರ ಮೇಲೆ ಕಣ್ಣಿಡಿ” ಎಂದು ಈ ಕರಪತ್ರಗಳಲ್ಲಿ ಹೇಳಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಕರಪತ್ರಗಳು ವೈರಲ್ ಆಗಿದ್ದವು.
”ಕುಲ್ಲುವಿನ ಹಳ್ಳಿಗಳಲ್ಲಿ ಒಂದು ಲಕ್ಷ ಕರಪತ್ರ ಹಂಚಿದ್ದೇವೆ. ನಮ್ಮ ಕರಪತ್ರಗಳಿಂದಾಗಿ ಬಹಳ ಮಂದಿ ದರ್ಜಿಗಳು ವಾಪಸು ಹೋಗಿದ್ದಾರೆ. ಹಿಂದೂ ದರ್ಜಿಗಳು ಷಾಪು ತೆರೆದಿದ್ದಾರೆ. ನಿಜವೋ ಸುಳ್ಳೋ ಪರಿಶೀಲಿಸಿಲ್ಲ, ಆದರೆ ಆ ಮಂದಿ ಬಟ್ಟೆಗಳನ್ನು ಹೊಲಿಯುವ ಮೊದಲು ಬಟ್ಟೆಗಳ ಮೇಲೆ ಉಗುಳುತ್ತಾರೆ ಮತ್ತು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರಿಸುವ ಪುಡಿಯೊಂದನ್ನು ಬಟ್ಟೆಯ ಮೇಲೆ ಸಿಂಪಡಿಸುತ್ತಾರೆಂದು ನಾನು ಕೇಳಲ್ಪಟ್ಟಿದ್ದೇನೆ. ನಮ್ಮ ಆಹಾರದ ಮೇಲೆ ಉಗುಳುವ ಮತ್ತು ಅಳತೆ ತೆಗೆದುಕೊಳ್ಳುವ ನೆವದಲ್ಲಿ ನಮ್ಮ ಹೆಣ್ಣುಮಕ್ಕಳನ್ನು ಮುಟ್ಟುವ ಇವರೊಂದಿಗೆ ಬದುಕುವುದು ಸಾಧ್ಯವಿಲ್ಲ” ಎಂದು ದೇವಭೂಮಿ ಜಾಗರಣ ಮಂಚ್‌ನ ಅಧ್ಯಕ್ಷ ಕ್ಷಿತಿಜ್ ಸೂದ್ ಇದೇ ಅಕ್ಟೋಬರ್ 19ರಂದು ಆರ್ಟಿಕಲ್ 14ಕ್ಕೆ ತಿಳಿಸಿದರು.
ಕುಲ್ಲುವಿನ ಜಾಮಾ ಮಸೀದಿಗೆ ಹೋಗುವ ರಸ್ತೆಗೆ ಶ್ರೀರಾಮ ಗಲ್ಲಿ ಎಂದು ಸೂದ್ ಮತ್ತು ಆತನ ಸಂಘಟನೆ ಬೋರ್ಡು ಬರೆಸಿಟ್ಟಿದೆ. ಕುಲ್ಲುವಿಗೆ ಭೇಟಿ ನೀಡಿದ್ದ ಆರ್ಟಿಕಲ್ 14ಕ್ಕೆ ಈ ಸಂಗತಿ ಕಣ್ಣಿಗೆ ಬಿತ್ತು.
ಹಿಮಾಚಲದಲ್ಲಿ ಈ ಪ್ರತಿಭಟನೆಗಳನ್ನು ನಡೆಸಿರುವ ಮತ್ತೊಂದು ಸಂಘಟನೆ ದೇವಭೂಮಿ ಕ್ಷತ್ರಿಯ ಸಂಘಟನೆ ಅರ್ಥಾತ್ ಸವರ್ಣ ಮೋರ್ಚಾ. ಈ ಸಂಘಟನೆಯ ಅಧ್ಯಕ್ಷ ರುಮಿತ್ ಸಿಂಗ್ ಠಾಕೂರ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ಅವರನ್ನು ಸೆಪ್ಟಂಬರ್ ನಾಲ್ಕರಂದು ಭೇಟಿ ಮಾಡಿ ಸಂಜೋಲಿ ಮಸೀದಿಯನ್ನು ನೆಲಸಮಗೊಳಿಸುವಂತೆ ಒತ್ತಾಯಪಡಿಸಿದರು. ಸರ್ಕಾರಿ ನಿವೇಶನಗಳಲ್ಲಿ ಮಸೀದಿಗಳನ್ನು ಕಟ್ಟಿರುವ ಕುರಿತು ತನಿಖೆ ನಡೆಸಿ ಬಿಗಿ ಕ್ರಮ ಜರುಗಿಸಬೇಕು, ಇತರೆ ರಾಜ್ಯಗಳಿಂದ ಬಂದಿರುವ ಬೀದಿಬದಿ ಮಾರಾಟಗಾರರನ್ನು ತೆರವುಗೊಳಿಸಬೇಕು ಹಾಗೂ ಸನಾತನ ಮಂಡಳಿಯನ್ನು ರಚಿಸಬೇಕು ಎಂಬುದು ಠಾಕೂರ್ ಮಂಡಿಸಿರುವ ಇತರೆ ಬೇಡಿಕೆಗಳು.

ಸೋಲನ್ ಜಿಲ್ಲೆಯಲ್ಲಿ ನೂರಾರು ಮಂದಿಯ ಗುಂಪೊಂದು ಸೆ.16ರಂದು ಮುಸಲ್ಮಾನರ ಒಡೆತನದ ಇಲ್ಲವೇ ಅವರು ಬಾಡಿಗೆಗೆ ಪಡೆದಿದ್ದ ಷಾಪುಗಳ ಮೇಲೆ ಕೆಂಪು ಬಣ್ಣದಲ್ಲಿ X ಗುರುತನ್ನು ಹಾಕಿ ದಾಂಧಲೆ ನಡೆಸಿತು. ಸೋಲನ್ ವ್ಯಾಪಾರ ಮಂಡಲದ ಅಧ್ಯಕ್ಷ ಕುಶಲ್ ಜೇಠಿ ಪ್ರತಿಭಟನೆಗೆ ಕರೆ ನೀಡಿದರು. ಸೋಲನ್‌ನ ಹಳೆಯ ಮಾರ್ಕೆಟ್ಟಿನ ನಡುವೆ ಇರುವ ಈತನ ದೊಡ್ಡ ಗಾರ್ಮೆಂಟ್ ಅಂಗಡಿಗೆ ಆರ್ಟಿಕಲ್ 14 ಭೇಟಿ ನೀಡಿತ್ತು.
ದೀಪಾವಳಿ ಹಬ್ಬದ ನಿರೀಕ್ಷೆಯಲ್ಲಿ ನೂರಾರು ಕೇಸರಿ ಧ್ವಜಗಳಿಂದ ಆತನ ಅಂಗಡಿ ಅಲಂಕೃತವಾಗಿತ್ತು. ಹೊರಗಿನವರ ವಿರುದ್ಧ ಬಹಳ ಕಾಲದಿಂದ ಪ್ರತಿಭಟಿಸುತ್ತಲೇ ಇದ್ದೇವೆ. ಹೀಗಾಗಿ ನಮ್ಮ ಆಕ್ರೋಶ ಪ್ರಕಟಿಸಿದೆವು ಎಂಬುದು ಜೇಠಿ ಹೇಳಿಕೆಯಾಗಿತ್ತು.
ಮುಸ್ಲಿಮರ ವಿರುದ್ಧದ ಆತನ ಹಲವು ಹೇಳಿಕೆಗಳಿಗೆ ಅಪಪ್ರಚಾರವೇ ಆಧಾರವಾಗಿತ್ತು. ಕಳೆದ ನಾಲ್ಕೈದು ವರ್ಷಗಳಲ್ಲಿ ಕ್ರಿಮಿನಲ್ ಹಿನ್ನೆಲೆಯ ಹೊರಗಿನ ಮಂದಿ ಬಂದಿದ್ದಾರೆ. ಇವರು ದೊಡ್ಡ ಮೊತ್ತದ ಬಾಡಿಗೆ ಕೊಡುತ್ತಾರೆ. ನಿಶ್ಚಿತವಾಗಿಯೂ ಅವರಿಗೆ ಈ ಉದ್ದೇಶಕ್ಕಾಗಿ ಹಣ ಸಿಗುತ್ತಿದೆ. ಈ ಮುಸ್ಲಿಮರು ರೋಹಿಂಗ್ಯಾಗಳೇ ಇದ್ದಾರು. ಅವರ ಆಧಾರ್ ಕಾರ್ಡುಗಳು ಕೂಡ ನಕಲಿ. ಈ ಕುರಿತು ಪರಿಶೀಲನೆ ನಡೆಯಬೇಕು. ಭಾರತೀಯರಾದರೆ ನಕಲಿ ಆಧಾರ್ ಕಾರ್ಡುಗಳನ್ನು ಯಾಕೆ ಇಟ್ಟುಕೊಳ್ಳುತ್ತಾರೆ. ಹಿಂದೂಗಳ ನಕಲಿ ಹೆಸರುಗಳನ್ನು ಇಟ್ಟುಕೊಂಡ ನಕಲಿ ಆಧಾರ್ ಕಾರ್ಡುಗಳನ್ನು ಇವರು ತೋರಿಸುತ್ತಾರೆ. ಇವರು ಬೇರೆ ಧರ್ಮಕ್ಕೆ ಸೇರಿದವರೇ ಇರಬೇಕು. ಈ ಕುರಿತು ತನಿಖೆ ನಡೆಯಬೇಕು ಎಂಬುದು ಜೇಠಿ ಆಗ್ರಹ.
ಸೋಲನ್‌ನಲ್ಲಿ ರೆಡ್ ಕ್ರಾಸ್ ಗುರುತು ಹಾಕಿದ್ದ ಷಾಪುಗಳ ಪೈಕಿ ವಹೀದ್ ಅಹ್ಮದ್ ಷಾಪೂ ಸೇರಿತ್ತು. 48 ವರ್ಷ ವಯಸ್ಸಿನ ಅಹ್ಮದ್ ಉತ್ತರಪ್ರದೇಶಕ್ಕೆ ಸೇರಿದಾತ. ಹಿಮಾಚಲದಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ.
ಶಿಮ್ಲಾದ ಲೋವರ್ ಬಜಾರಿನ ಮಸೀದಿ ಬಳಿ ಕಳೆದ 50 ವರ್ಷಗಳಿಂದ ಆಭರಣದ ಅಂಗಡಿ ನಡೆಸುತ್ತಿರುವ ಬಲವೀನ್ ಖನ್ನಾ ಹೇಳುತ್ತಾರೆ- ನಾವುಗಳು ಪರಸ್ಪರ ಸಾಮರಸ್ಯದಿಂದ ಬದುಕಬೇಕು. ಮುಸಲ್ಮಾನರು ನಮ್ಮ ಆಹಾರದ ಮೇಲೆ ಉಗುಳುತ್ತಾರೆ ಮತ್ತು ಕಲ್ಲು ತೂರುತ್ತಾರೆಂದು ಕೇಳಿದ್ದೇನೆ. ಕೆಟ್ಟದೆನಿಸುತ್ತದೆ.
ಆಹಾರದ ಮೇಲೆ ಉಗುಳುವುದನ್ನು ಎಲ್ಲಿ ನೋಡಿದ್ದೀರೆಂದು ಕೇಳಿದರೆ ಅವರ ಉತ್ತರ- ಟೆಲಿವಿಷನ್‌ನಲ್ಲಿ ನೋಡಿದ್ದೇನೆ.
ಪ್ರತಿಭಟನಾಕಾರರ ಬೇಡಿಕೆಯ ಪ್ರಕಾರ ‘ಹೊರಗಿನವರ’ ಗುರುತುಪತ್ರಗಳನ್ನು ಹಿಮಾಚಲದ ಪೊಲೀಸರು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದಾರೆ.
ಮಂಡಿ ಜಿಲ್ಲೆಯ 7,000 ವಲಸೆಗಾರರ ಗುರುತು ಪತ್ರಗಳನ್ನು ಪರಿಶೀಲಿಸಿದ್ದೇವೆಂದು ಮಂಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮ ತಿಳಿಸಿದರು. ಹಿಮ್ ಸಮಾಜ ಸೇವಾ ಸಮಿತಿ ಎಂಬ ಸಂಘಟನೆ ಸ್ಥಳೀಯ ಪೊಲೀಸರೊಂದಿಗೆ ಕೈ ಜೋಡಿಸಿ ಕಳೆದ ಸೆಪ್ಟಂಬರಿನಲ್ಲಿ ವಲಸೆಗಾರರ ಗುರುತುಪತ್ರ ಪರಿಶೀಲಿಸುವ ಶಿಬಿರ ನಡೆಸಿತು. ಒಂದೇ ದಿನದಲ್ಲಿ ನೂರು ಮಂದಿ ಹೊರಗಿನ ಕೆಲಸಗಾರರ ಗುರುತುಪತ್ರಗಳನ್ನು ಪರಿಶೀಲಿಸಲಾಯಿತು. ಅವರ ಆಧಾರ್ ಕಾರ್ಡುಗಳ ಫೋಟೋಕಾಪಿಗಳನ್ನು ತೆಗೆದುಕೊಂಡು ಅವರ ಹೆಸರುಗಳನ್ನು, ದೂರವಾಣಿ ಸಂಖ್ಯೆಗಳನ್ನು ಹಾಗೂ ಪೂರ್ಣ ವಿಳಾಸಗಳನ್ನು ಪೊಲೀಸ್ ರಿಜಿಸ್ಟರುಗಳಲ್ಲಿ ದಾಖಲಿಸಿಕೊಳ್ಳಲಾಯಿತು ಎಂದು ಸೇವಾ ಸಮಿತಿಯ ಸ್ವಯಂಸೇವಕರೊಬ್ಬರು ತಿಳಿಸಿದರು.

ಕುಲ್ಲುವಿನ 35 ವರ್ಷ ವಯಸ್ಸಿನ ‘ಕೆ’ ಎಂಬ ಕಂಬಳಿ ಮಾರಾಟಗಾರ ತನ್ನ ಮೂಲ ಆಧಾರ್ ಕಾರ್ಡನ್ನು ಬಲವಂತವಾಗಿ ಅಖಾಡಾ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಬೇಕಾಯಿತು. ಈತ ಮಾರಾಟಗಾರ (ವೆಂಡರ್) ಎಂಬುದಾಗಿ ಆಧಾರ್ ಕಾರ್ಡಿನ ಫೋಟೋಕಾಪಿ ಹೇಳುತ್ತದೆ. ಪೊಲೀಸ್ ಠಾಣೆಯ ವೆರಿಫಿಕೇಶನ್ ದಿನಾಂಕ ಮತ್ತು ಮೊಹರೆ ಇದರ ಮೇಲಿದೆ. 2024ರ ಡಿಸೆಂಬರ್ ತನಕ ಮಾತ್ರ ಈ ವೆರಿಫಿಕೇಶನ್ ನಡೆಯುತ್ತದೆ. ಆನಂತರ ವೆರಿಫಿಕೇಶನ್‌ಗೆ ಮರು ಅರ್ಜಿ ಸಲ್ಲಿಸಬೇಕು. ಹಿಮಾಚಲಪ್ರದೇಶವನ್ನು ತೊರೆದರೆ ಈತನ ವೆರಿಫಿಕೇಶನ್ ಪತ್ರ ರದ್ದಾಗುತ್ತದೆ ಮತ್ತು ಆಧಾರ್ ಕಾರ್ಡನ್ನು ವಾಪಸು ನೀಡಲಾಗುವುದು ಎಂದು ಈತನಿಗೆ ತಿಳಿಸಲಾಗಿದೆ.
”ಪ್ರತಿಭಟನೆಗಳ ನಂತರ ವಲಸೆಗಾರರು ತಮ್ಮ ರಾಜ್ಯಗಳ ತಮ್ಮ ಪಂಚಾಯಿತಿ ಅಥವಾ ಮುನಿಸಿಪಾಲಿಟಿಯಿಂದ ನಡವಳಿಕೆ ಪತ್ರವನ್ನು ತರಬೇಕು. ಆಧಾರ್ ಕಾರ್ಡು ಮತ್ತಿತರೆ ವಿವರಗಳನ್ನು ಸಲ್ಲಿಸಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ವೆರಿಫಿಕೇಶನ್ ಪತ್ರದ ಮೇಲೆ ಮೊಹರು ಹಾಕಲು ಪೊಲೀಸರು ನಿರಾಕರಿಸುತ್ತಿದ್ದಾರೆ” ಎಂದು ಕಾಂಗ್ಡಾ ಜಿಲ್ಲೆಯ ಪಾಲಂಪುರ ಟೌನಿನ ಅಲೀಮ್ ಅಹ್ಮದ್ ಆರ್ಟಿಕಲ್ 14ಕ್ಕೆ ತಿಳಿಸಿದ.
ಆರ್ಟಿಕಲ್ 14 ಈ ಕುರಿತು ಕಾಂಗ್ಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ಮತ್ತು ಹೆಚ್ಚುವರಿ ಎಸ್.ಪಿ. ಹಿತೇಶ್ ಲಖನ್ ಪಾಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಅವರು ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿರಿ: ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?
ಸಂಜೋಲಿ ಮಸೀದಿಯ ಕುರಿತು ಲೆಕ್ಕಕ್ಕಿಲ್ಲದ ಬಲಪಂಥೀಯ ವೆಬ್ ಸೈಟೊಂದು ಮೊದಲ ಬಾರಿಗೆ ಪ್ರಸ್ತಾಪಿಸಿತ್ತು. ಸತ್ಯ ಸೋಚ್ ಸಟೀಕ್ ನ್ಯೂಸ್ 2023ರ ಜೂನ್ ಮೂರರಂದು- ‘ಶಿಮ್ಲಾದಲ್ಲಿ ಮಸೀದಿಗಳ ಜಾಲ ಹರಡಿದೆ, ನೀವು ಅಲ್ಲಾಹನನ್ನೂ ಪೂಜಿಸುತ್ತಿದ್ದೀರಿ’ ಎಂಬ ಪೋಸ್ಟ್ ಹಾಕಿತ್ತು. ಸಂಜೋಲಿಯ ನಾಲ್ಕು ಅಂತಸ್ತುಗಳ ಮಸೀದಿಯೂ ಸೇರಿದಂತೆ ಎಂಟು ಮಸೀದಿಗಳನ್ನು ಪಟ್ಟಿ ಮಾಡಿತ್ತು. ಇತರರೂ ಈ ಪೋಸ್ಟನ್ನು ಹಾಕಿದ್ದರು. ಆದರೆ ಈ ಪೋಸ್ಟಿಗೆ ಚಾಲನೆ ಸಿಕ್ಕಿದ್ದು 2024ರ ಜುಲೈ 30ರಂದು. ಅರ್ಥಾತ್ ಪ್ರತಿಭಟನೆಗಳು ಶುರುವಾಗುವ ಒಂದು ತಿಂಗಳು ಮೊದಲು. ದೇವಭೂಮಿ ಸಂಘರ್ಷ ಸಮಿತಿಯ ಸಹ ಸಂಚಾಲಕ ಮದನ್ ಠಾಕೂರ್ ಫೇಸ್ಬುಕ್‌ನಲ್ಲಿ ಮಾಡಿದ್ದ ಪೋಸ್ಟ್ ಹೀಗಿತ್ತು- ಸಂಜೋಲಿಯ ಜನರೇ ಅಭಿನಂದನೆಗಳು. ನಿಮ್ಮ ಏರಿಯಾದ ಮಸೀದಿ ನಿರ್ಮಾಣ ಪೂರ್ಣಗೊಂಡಿದೆ. ಈಗ ನೀವು ಮೆಕ್ಕಾಗೆ ಹೋಗಬೇಕಿಲ್ಲ.
ಪ್ರತಿಭಟನೆಗಳು ನಡೆಯುವ 20 ದಿನಗಳ ಮುನ್ನ ದೇವಭೂಮಿ ಕ್ಷತ್ರಿಯ ಸಂಘಟನೆ ಅರ್ಥಾತ್ ಸವರ್ಣ ಮೋರ್ಚಾದ ಅಧ್ಯಕ್ಷ ರುಮಿತ್ ಸಿಂಗ್ ಠಾಕೂರ್ ಮಾಡಿದ್ದ ಫೇಸ್ಬುಕ್ ಪೋಸ್ಟ್ ಹೀಗೆ ಹೇಳಿತ್ತು- ಸಂಜೋಲಿಯಲ್ಲಿ ಮಸೀದಿ ನಿರ್ಮಾಣ ನಡೆಯುತ್ತಿದೆ. ಹಿಂದೂಗಳು ನಿದ್ರಿಸುತ್ತಿದ್ದಾರೆ.
ಈ ಪೋಸ್ಟ್ 462 ಸಲ ಶೇರ್ ಆಗಿತ್ತು. 430 ಮಂದಿ ಕಮೆಂಟ್ ಮಾಡಿದ್ದರು. ಒಂದೂವರೆ ಸಾವಿರ ಮಂದಿ ಲೈಕ್ ಮಾಡಿದ್ದರು.
ಇದಕ್ಕೆ ಮುನ್ನ ಮಸೀದಿಯ ಮುಸ್ಲಿಮರ ಫೋಟೋ ಜೊತೆಗೆ ಮದನ್ ಠಾಕೂರ್ ಫೇಸ್ಬುಕ್‌ನಲ್ಲಿ ಬರೆದದ್ದು ಹೀಗಿತ್ತು- ಈ ಜಮಾಅತುಗಳು ಎಲ್ಲಿಂದ ಬರುತ್ತಿವೆ ಮತ್ತು ಎಲ್ಲಿಗೆ ಹೋಗುತ್ತಿವೆ? ಅವರು ಇಲ್ಲಿ ಕೆಲಸ ಮಾಡಲು ಬರುತ್ತಿದ್ದಾರೆ. ನಾಳೆ ರಸ್ತೆಗಳ ಮೇಲೆ ತಮ್ಮ ಬಿಸಿನೆಸ್ ತೆರೆಯುತ್ತಾರೆ, ನಿಮ್ಮ ಗೆಳೆತನ ಬೆಳೆಸುತ್ತಾರೆ ಆನಂತರ ನಿಮ್ಮ ಮನೆಗಳಲ್ಲಿನ ಹಿಮಾಚಲಿ ಮಹಿಳೆಯರ ಜೊತೆಗೆ ದೈಹಿಕ ಸಂಪರ್ಕ ಬೆಳೆಸುತ್ತಾರೆ.
ಅನುವಾದ: ಡಿ.ಉಮಾಪತಿ, ಹಿರಿಯ ಪತ್ರಕರ್ತರು
(ಕೌಶಿಕ್ ರಾಜ್ ದೆಹಲಿಯ ಫ್ರೀಲಾನ್ಸ್ ಪತ್ರಕರ್ತರು. ಸೃಷ್ಟಿ ಜಸ್ವಾಲ್ ಪ್ರಶಸ್ತಿ ವಿಜೇತ ಪತ್ರಕರ್ತೆ)
(ಈ ಲೇಖನವನ್ನು ಅನುವಾದಿಸಿ ಪ್ರಕಟಿಸಲು ಅನುಮತಿಯಿತ್ತ https://article-14.com/ ಗೆ ಧನ್ಯವಾದಗಳು. ಅದರಲ್ಲಿ ಪ್ರಕಟವಾದ ಮೂಲ ಲೇಖನದ ಲಿಂಕ್ ‘ಇಲ್ಲಿದೆ’.)

ಕೌಶಿಕ್ ರಾಜ್ & ಸೃಷ್ಟಿ ಜಸ್ವಾಲ್
ಕೌಶಿಕ್ ರಾಜ್ ದೆಹಲಿಯ ಫ್ರೀಲಾನ್ಸ್ ಪತ್ರಕರ್ತರು. ಸೃಷ್ಟಿ ಜಸ್ವಾಲ್ ಪ್ರಶಸ್ತಿ ವಿಜೇತ ಪತ್ರಕರ್ತೆ




