ಶಸ್ತ್ರಾಸ್ತ್ರಗಳ ಮೇಲೆ ಶತಕೋಟಿ ಹಣ ವ್ಯಯಿಸುವ ಜಗತ್ತು, ಯುದ್ಧದ ನಂತರದ ಆರೋಗ್ಯ ತುರ್ತುಸ್ಥಿತಿ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಸಿದ್ಧವಾಗಿರಬೇಕು ಎಂಬುದು ಕ್ರೂರ ವ್ಯಂಗ್ಯ. ಹಾಗಿದ್ದಾಗ ಯುದ್ಧದಲ್ಲಿ ಯಾರೂ ನಿಜವಾದ ವಿಜೇತರಲ್ಲ. ಅಮೆರಿಕ ಎಷ್ಟೇ ಯುದ್ದದಲ್ಲಿ ಗೆದ್ದರೂ ಅದು ಅಲ್ಲಿನ ಜನತೆಯ ಜಯವಲ್ಲ. ಅಮೆರಿಕದ ಸೈನಿಕರು ಯುದ್ಧಕ್ಕಾಗಿ ಪ್ರಾಣ ಮಾತ್ರವಲ್ಲ ಆರೋಗ್ಯವನ್ನೂ ಬಲಿ ನೀಡಬೇಕು ಎಂಬುದು ವಾಸ್ತವ.
ವಿಶ್ವದಲ್ಲಿ ಯುದ್ಧ ನಿರಂತರ ಎಂಬುದು ಕಹಿ ಸತ್ಯ. ಅಮೆರಿಕ ಎಂಬ ದೊಡ್ಡಣ್ಣನ ಆಟಕ್ಕೆ ಅವೆಷ್ಟೋ ಸಮರಗಳು ನಡೆದಿವೆ, ನಡೆಯುತ್ತಿವೆ. ಈ ಯುದ್ಧ ನಿಲ್ಲಬಹುದು. ಉಭಯ ದೇಶಗಳು ಒಂದು ತಾರ್ಕಿಕ ಒಪ್ಪಂದಕ್ಕೆ ಬರಬಹುದು. ಆದರೆ ಅಲ್ಲಿಗೆ ಎಲ್ಲವೂ ಕೊನೆಯಾಗದು. ಅಷ್ಟಕ್ಕೂ ಯುದ್ಧದ ಭೀಕರತೆ ಕೇವಲ ಕ್ಷಿಪಣಿಗಳು ಮತ್ತು ಗುಂಡಿನ ದಾಳಿಗಳಿಗೆ ಸೀಮಿತವಲ್ಲ. ರಣರಂಗದಲ್ಲಿ ಶಸ್ತ್ರಾಸ್ತ್ರಗಳ ಸದ್ದು ಇಲ್ಲವಾದರೂ ಆ ಯುದ್ಧ ಬಿಟ್ಟುಹೋದ ಬಳುವಳಿ ನಮ್ಮ ಮುಂದಿನ ಹಲವು ತಲೆಮಾರುಗಳನ್ನು ಕಾಡುವುದು ಖಚಿತ.
ಯುದ್ಧವೆಂದರೆ ಕೇವಲ ಸಾವು-ನೋವಲ್ಲ. ಅದು ಪರಿಸರ ಮತ್ತು ಮಾನವನ ಡಿಎನ್‌ಎ ಮೇಲೆ ನಡೆಯುವ ದೌರ್ಜನ್ಯ. ಯುದ್ಧ ಅಂತ್ಯ ಕಂಡ ಬಳಿಕವೇ ನಮ್ಮ ಅಸಲಿ ಯುದ್ಧದ ಆರಂಭವಾಗಲಿದೆ. ಯುದ್ಧ ಬಿಟ್ಟುಹೋದ ವಿಷವು ನಮ್ಮ ದೇಹ ದಶಕಗಳ ಕಾಲ ಒಳಗಿನಿಂದಲೇ ದಹಿಸುವಂತೆ ಮಾಡುತ್ತದೆ. ಇದು ಮನುಷ್ಯನ ಜೀವಕೋಶಗಳ ಒಳಗೆ ನಡೆಯುವ ಯುದ್ಧ- ಅದೇ ಕ್ಯಾನ್ಸರ್.
ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಯುದ್ಧವೆಂದರೆ ‘ತ್ಯಾಜ್ಯಗಳ ಕಾರ್ಖಾನೆ’! ಕಸದೊಂದಿಗೆ ನಮ್ಮ ಮುಂದಿನ ಸಮರ
ಯುದ್ಧದ ನಂತರ ಕ್ಯಾನ್ಸರ್ ಒಂದು ಸಾಂಕ್ರಾಮಿಕದಂತೆ ಹರಡುತ್ತದೆ ಎಂಬ ಆಘಾತಕಾರಿ ಸತ್ಯವನ್ನು ಹಲವು ಆಧುನಿಕ ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸಿವೆ. ಈ ಸಂಶೋಧನಾ ವರದಿಗಳ ಪ್ರಕಾರ, ಯುದ್ಧ ಭೂಮಿಯಲ್ಲಿ ಬಳಕೆಯಾಗುವ ರಾಸಾಯನಿಕಗಳು ಮತ್ತು ಸ್ಫೋಟಕಗಳು ‘ಕ್ಯಾನ್ಸರ್’ ಎಂಬ ಅದೃಶ್ಯ ಭೂತವಾಗಿ ಮುಂದಿನ ಹಲವು ತಲೆಮಾರುಗಳನ್ನು ಕಾಡಲಿವೆ.
ಇತ್ತೀಚಿನ ದಶಕಗಳಲ್ಲಿ ನಡೆದ ಇರಾಕ್, ಅಫ್ಘಾನಿಸ್ತಾನ ಮತ್ತು ಉಕ್ರೇನ್ ಯುದ್ಧಗಳನ್ನು ಗಮನಿಸಿದರೆ, ಯುದ್ಧ ಪೀಡಿತ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಶೇ. 200ರಿಂದ 300ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎನ್ನುತ್ತವೆ ಸಂಶೋಧನೆಗಳು. ಹಿರೋಷಿಮಾ ಅಣುಬಾಂಬ್ ದಾಳಿ ಬಳಿಕ ನಡೆದ ಸಂಶೋಧನೆ, ಇರಾಕ್‌ನ ಫಲ್ಲೂಜಾ ಮತ್ತು ಬಸ್ರಾ ನಗರಗಗಳಲ್ಲಿ ನಡೆಸಿದ ಅಧ್ಯಯನಗಳೆಲ್ಲವೂ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಮುಂದಿನ ಪೀಳಿಗೆಯ ಬಗ್ಗೆ ಚಿಂತೆಗೆ ದೂಡುತ್ತದೆ.
ಹಿರೋಷಿಮಾ ಮತ್ತು ನಾಗಸಾಕಿ ಅಣುಬಾಂಬ್ ದಾಳಿ
ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿಗಳಲ್ಲಿ ಹಿರೋಷಿಮಾ ಮತ್ತು ನಾಗಸಾಕಿ ಅಣುಬಾಂಬ್ ದಾಳಿಯೂ ಒಂದು. ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ 1945ರಲ್ಲಿ ಅಮೆರಿಕ ನಡೆಸಿದ ಈ ದಾಳಿಯ ದುಷ್ಪರಿಣಾಮದಿಂದ ಇಂದಿಗೂ ಅಲ್ಲಿನ ಜನತೆ ನಲುಗುತ್ತಿದ್ದಾರೆ. ಈ ದಾಳಿಯಿಂದ ಹೊರಬಂದ ವಿಕಿರಣಗಳು (Ionizing Radiation) ಮಾನವನ ಆರೋಗ್ಯದ ಮೇಲೆ, ವಿಶೇಷವಾಗಿ ಕ್ಯಾನ್ಸರ್ ಹರಡುವಿಕೆಯ ಮೇಲೆ ಬೀರಿದ ಪ್ರಭಾವದ ಬಗ್ಗೆ ಅತಿ ದೀರ್ಘವಾದ ವೈದ್ಯಕೀಯ ಸಂಶೋಧನೆ ನಡೆಯುತ್ತಿದೆ. Radiation Effects Research Foundation – RERF ಸಂಸ್ಥೆ ಈ ಸಂಶೋಧನೆಯನ್ನು ನಡೆಸುತ್ತಿದೆ. ಈ ಅಧ್ಯಯನಕ್ಕೆ ‘ಲೈಫ್ ಸ್ಪ್ಯಾನ್ ಸ್ಟಡಿ’ ಎಂದು ಹೆಸರಿಸಲಾಗಿದೆ. ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಅಧ್ಯಯನವಾಗಿದೆ. ಅಣುಬಾಂಬ್ ದಾಳಿಯಿಂದ ಬದುಕುಳಿದ ಸುಮಾರು 1,20,000 ಜನರನ್ನು (Hibakusha) 1950ರಿಂದ ಇಂದಿನವರೆಗೂ ಸತತವಾಗಿ ಅಧ್ಯಯನ ಮಾಡಲಾಗುತ್ತಿದೆ. ಈ ಅಧ್ಯಯನದ ಪ್ರಕಾರ ದಾಳಿಯ ಸಮಯದಲ್ಲಿ ಮಕ್ಕಳಾಗಿದ್ದವರು ಅಥವಾ ಗರ್ಭಸ್ಥ ಶಿಶುಗಳಿಗೆ ವಯಸ್ಕರಿಗಿಂತ ಅಧಿಕವಾಗಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಅಂದರೆ ಅಣು ದಾಳಿಯಿಂದ ಲಕ್ಷಾಂತರ ಮಂದಿ ಮೃತಪಟ್ಟಿರುವುದು ಮಾತ್ರವಲ್ಲದೆ ಕ್ಯಾನ್ಸರ್‌ನಿಂದಾಗಿ ಹೊಸ ತಲೆಮಾರಿನ ನಾಶವೂ ಆಗಿದೆ.

- ಲುಕೇಮಿಯಾ: ಹಿರೋಷಿಮಾ-ನಾಗಸಾಕಿ ದಾಳಿಯ ನಂತರ ಮೊದಲು ಕಾಣಿಸಿಕೊಂಡ ಕ್ಯಾನ್ಸರ್ ಲುಕೇಮಿಯಾ ಅಂದರೆ ರಕ್ತದ ಕ್ಯಾನ್ಸರ್. ದಾಳಿಯಾದ 2 ರಿಂದ 3 ವರ್ಷಗಳಲ್ಲೇ ಈ ಕ್ಯಾನ್ಸರ್ ಕಾಣಿಸಿಕೊಂಡಿದ್ದು, 6-8 ವರ್ಷಗಳ ಅವಧಿಯಲ್ಲಿ ಇದು ಉತ್ತುಂಗಕ್ಕೇರಿದೆ. ಅದರಲ್ಲೂ ವಿಕಿರಣಕ್ಕೆ ಹೆಚ್ಚು ಒಡ್ಡಿಕೊಂಡ ಮಕ್ಕಳಲ್ಲಿ ಈ ಅಪಾಯ ಹೆಚ್ಚಾಗಿತ್ತು.
- ಕ್ಯಾನ್ಸರ್ ಗೆಡ್ಡೆಗಳು: ರಕ್ತದ ಕ್ಯಾನ್ಸರ್ ಬಳಿಕ ಶ್ವಾಸಕೋಶ, ಸ್ತನ, ಹೊಟ್ಟೆ, ಲಿವರ್ ಮತ್ತು ಥೈರಾಯ್ಡ್ ಕ್ಯಾನ್ಸರ್‌ಗಳು ಕಾಣಿಸಿಕೊಂಡವು. ದಾಳಿಯಾದ 10 ರಿಂದ 15 ವರ್ಷಗಳ ನಂತರ ಈ ಕ್ಯಾನ್ಸರ್‌ಗಳು ಅಧಿಕವಾಗಲೂ ಶುರುವಾಯಿತು.
ಇರಾಕ್‌ನ ಫಲ್ಲೂಜಾದಲ್ಲಿ ನಡೆಸಿದ ಅಧ್ಯಯನ ವರದಿ
2004ರಲ್ಲಿ ನಡೆದ ಇರಾಕ್ ಯುದ್ಧದ ನಂತರ ಕ್ಯಾನ್ಸರ್ ಮತ್ತು ನವಜಾತ ಶಿಶುಗಳಲ್ಲಿ ಕಂಡು ಬಂದ ಆರೋಗ್ಯ ಸಮಸ್ಯೆಗಳ ಬಗ್ಗೆ ಡಾ. ಕ್ರಿಸ್ ಬಸ್ಬಿ ಮತ್ತು ಡಾ. ಸಮಿರಾ ಅಲಾನಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನ ವರದಿ ಪ್ರಕಾರ ಯುದ್ಧದ ನಂತರ ಫಲ್ಲೂಜಾದಲ್ಲಿ ಕ್ಯಾನ್ಸರ್ ಮತ್ತು ಜನ್ಮಜಾತ ಅಂಗವೈಕಲ್ಯಗಳ ಪ್ರಮಾಣ ಹಠಾತ್ತನೆ ಏರಿಕೆಯಾಗಿದೆ. ಈ ಅಧ್ಯಯನವು ‘International Journal of Environmental Research and Public Health’ನಲ್ಲಿ ಪ್ರಕಟವಾಗಿದೆ.

ಸಂಶೋಧನೆ ಪ್ರಕಾರ ಯುದ್ಧದ ನಂತರ ಫಲ್ಲೂಜಾದಲ್ಲಿ ಕ್ಯಾನ್ಸರ್ ಪ್ರಕರಣಗಳು ಸಾಮಾನ್ಯಕ್ಕಿಂತ 4 ಪಟ್ಟು ಹೆಚ್ಚಾಗಿವೆ. ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಕಂಡುಬರುವ ಲುಕೇಮಿಯಾ (ರಕ್ತದ ಕ್ಯಾನ್ಸರ್) ಪ್ರಮಾಣವು ಸಾಮಾನ್ಯಕ್ಕಿಂತ 38 ಪಟ್ಟು ಅಧಿಕವಾಗಿದೆ. 1945ರ ಹಿರೋಷಿಮಾ ಮತ್ತು ನಾಗಸಾಕಿ ಅಣುಬಾಂಬ್ ದಾಳಿಯ ನಂತರದ ಪ್ರಭಾವಕ್ಕಿಂತಲೂ ಫಲ್ಲೂಜಾದಲ್ಲಿನ ಜನನದೋಷಗಳು ಮತ್ತು ಕ್ಯಾನ್ಸರ್ ಪ್ರಮಾಣವು ಅಧಿಕವಾಗಿದೆ. ಇವೆಲ್ಲವುದಕ್ಕೆ ಮುಖ್ಯ ಕಾರಣ ಯುದ್ಧದಲ್ಲಿ ಬಳಸಲಾದ ಯುರೇನಿಯಂ (Depleted Uranium) ಮತ್ತು ಬಿಳಿ ಫಾಸ್ಫರಸ್‌ನಂತಹ ಸ್ಫೋಟಕಗಳ ಅವಶೇಷಗಳು ಮಣ್ಣು ಮತ್ತು ನೀರಿನಲ್ಲಿ ಬೆರೆತಿರುವುದು.
ಇರಾಕ್‌ನ ಬಸ್ರಾ ಅಧ್ಯಯನ ವರದಿ
ಇರಾಕ್‌ನ ಬಸ್ರಾ ನಗರದಲ್ಲಿ ಯುದ್ಧೋತ್ತರ ಆರೋಗ್ಯ ಪರಿಣಾಮಗಳು ಮತ್ತು ಕ್ಯಾನ್ಸರ್ ಏರಿಕೆಯ ಕುರಿತು ಹಲವು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮಿಚಿಗನ್ ವಿಶ್ವವಿದ್ಯಾಲಯದ ಪರಿಸರ ವಿಷವಿಜ್ಞಾನಿ (Environmental Toxicologist) ಡಾ. ಮೊಝ್ಗನ್ ಸವಬಿಯಸ್ಫಹಾನಿ (Dr. Mozhgan Savabieasfahani) ಬಸ್ರಾದಲ್ಲಿ ಜನನದೋಷಗಳು ಕಾಣಿಸಿಕೊಳ್ಳಲು ಮತ್ತು ಕ್ಯಾನ್ಸರ್ ಹೆಚ್ಚಳವಾಗಲು ಯುದ್ಧದ ಸಮಯದಲ್ಲಿ ಬಳಕೆಯಾದ ಲೋಹಗಳಿಗೂ ಇರುವ ಸಂಬಂಧವನ್ನು ಸಾಬೀತುಪಡಿಸಿದ್ದಾರೆ. ಸವಬಿಯಸ್ಫಹಾನಿ ಬಸ್ರಾದ ಮೆಟರ್ನಿಟಿ ಆಸ್ಪತ್ರೆಯ ಮಕ್ಕಳ ಹಲ್ಲು ಮತ್ತು ಕೂದಲಿನ ಮಾದರಿಗಳನ್ನು ಪರೀಕ್ಷಿಸಿದ್ದು ಅವುಗಳಲ್ಲಿ ಅಸಹಜ ಪ್ರಮಾಣದ ಸೀಸ, ಪಾದರಸ ಇರುವುದನ್ನು ಪತ್ತೆಹಚ್ಚಿದ್ದಾರೆ.
ಬಸ್ರಾ ಕ್ಯಾನ್ಸರ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕ್ಯಾನ್ಸರ್ ತಜ್ಞರು (Oncologist) ಡಾ. ಜವಾದ್ ಅಲ್-ಅಲಿ (Dr. Jawad Al-Ali) 1991ರ ಗಲ್ಫ್ ಯುದ್ಧದ ನಂತರ ಬಸ್ರಾದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೇಗೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿವೆ ಎಂಬ ಬಗ್ಗೆ ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ. ಡಾ. ಜವಾದ್ ಬಸ್ರಾವನ್ನು ‘ಕ್ಯಾನ್ಸರ್ ಪೀಡಿತ ನಗರ’ ಎಂದು ಕರೆಯುವ ಮೂಲಕ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿದ್ದಾರೆ. ಡಾ. ಸಮೀರಾ ಅಲಾಹಿ ಫಲ್ಲೂಜಾ ಮತ್ತು ಬಸ್ರಾ ಎರಡೂ ಪ್ರದೇಶಗಳಲ್ಲಿಅಧ್ಯಯನ ಮಾಡಿದ್ದಾರೆ.
1991ರ ಯುದ್ಧದ ಮೊದಲು ಬಸ್ರಾದಲ್ಲಿ ಪ್ರತಿ 1,00,000 ಜನರಲ್ಲಿ 11 ಕ್ಯಾನ್ಸರ್ ಮಂದಿಗೆ ಕ್ಯಾನ್ಸರ್ ಇತ್ತು. ಆದರೆ 2005ರ ವೇಳೆಗೆ ಅಂದರೆ ಯುದ್ಧ ಮುಗಿದು ಹಲವು ವರ್ಷಗಳಲ್ಲಿ ಈ ಸಂಖ್ಯೆಯು 120ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು 11 ಪಟ್ಟು ಹೆಚ್ಚಳವಾಗಿದೆ. ಬಸ್ರಾ ಮೆಟರ್ನಿಟಿ ಆಸ್ಪತ್ರೆಯ ವರದಿಯ ಪ್ರಕಾರ, 1994 ಮತ್ತು 2003ರ ನಡುವೆ ಜನಿಸಿದ ಮಕ್ಕಳಲ್ಲಿ ಅಂಗವೈಕಲ್ಯದ ಪ್ರಮಾಣವು ಪ್ರತಿ 1,000 ಜನನಗಳಿಗೆ 1.3 ರಿಂದ 23ಕ್ಕೆ ಏರಿದೆ. ಅಂದರೆ ಹತ್ತು ವರ್ಷಗಳಲ್ಲಿ ಈ ಪ್ರಮಾಣ 17 ಪಟ್ಟು ಹೆಚ್ಚಾಗಿದೆ.
ಅಮೆರಿಕ ಬಳಸಿದ ‘ಏಜೆಂಟ್ ಆರೆಂಜ್’ ಸೃಷ್ಟಿಸಿದ ಆತಂಕ
ವಿಯೆಟ್ನಾಂ ಯುದ್ಧದಲ್ಲಿ (1961-1971) ಅಮೆರಿಕ ಬಳಸಿದ ‘ಏಜೆಂಟ್ ಆರೆಂಜ್’ (Agent Orange) ಎಂಬ ರಾಸಾಯನಿಕವು ಇಡೀ ವಿಶ್ವದಲ್ಲೇ ಅತೀ ದೊಡ್ಡ ದುರಂತಗಳಲ್ಲಿ ಒಂದು. ‘ಏಜೆಂಟ್ ಆರೆಂಜ್’ ಎಂಬುದು ಎರಡು ಪ್ರಬಲ ಸಸ್ಯನಾಶಕಗಳಾದ 2,4-D (2,4-Dichlorophenoxyacetic acid) ಮತ್ತು 2,4,5-T (2,4,5-Trichlorophenoxyacetic acid) ಮಿಶ್ರಣ. ಅಮೆರಿಕ ತಮ್ಮ ಶತ್ರುಗಳನ್ನು ಪತ್ತೆಹಚ್ಚಲೆಂದು ಇದನ್ನು ಬಳಸಿ ದಟ್ಟವಾದ ಕಾಡುಗಳನ್ನು ನಾಶಪಡಿಸಿತ್ತು. ಈ ಮೂಲಕ ಪರಿಸರ ವ್ಯವಸ್ಥೆಯನ್ನೇ ನಾಶ ಮಾಡಿತ್ತು. ಆದರೆ, ಇದರ ತಯಾರಿಕೆಯ ಸಮಯದಲ್ಲಿ ‘ಡಯಾಕ್ಸಿನ್’ (Dioxin – TCDD) ಎಂಬ ಉಪಉತ್ಪನ್ನವು ಇದರಲ್ಲಿ ಬೆರೆತುಕೊಂಡಿತ್ತು. ಇದು ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಕಾರಕ ವಿಷಗಳಲ್ಲಿ ಒಂದು.

ಅಮೆರಿಕದ ‘ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ಅಡಿಯಲ್ಲಿ ಬರುವ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನ್, 1994ರಿಂದ ನಿರಂತರವಾಗಿ ಏಜೆಂಟ್ ಆರೆಂಜ್ ಮತ್ತು ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇದರ ಸಂಶೋಧನೆ ಪ್ರಕಾರ ಏಜೆಂಟ್ ಆರೆಂಜ್‌ನಿಂದಾಗಿ ಈ ಕೆಳಗಿನ ಕ್ಯಾನ್ಸರ್‌ಗಳು ಹೆಚ್ಚಾಗಿವೆ.
- ಸಾಫ್ಟ್ ಟಿಶ್ಯೂ ಸರ್ಕೋಮಾ (Soft Tissue Sarcoma): ಸ್ನಾಯು ಮತ್ತು ಅಂಗಾಂಶಗಳ ಕ್ಯಾನ್ಸರ್.
- ನಾನ್-ಹಾಡ್ಗ್ಕಿನ್ ಲಿಂಫೋಮಾ (Non-Hodgkin Lymphoma): ರೋಗನಿರೋಧಕ ವ್ಯವಸ್ಥೆಯ ಕ್ಯಾನ್ಸರ್.
- ಲುಕೇಮಿಯಾ (CLL): ದೀರ್ಘಕಾಲೀನ ರಕ್ತದ ಕ್ಯಾನ್ಸರ್.
- ಮಲ್ಟಿಪಲ್ ಮೈಲೋಮಾ: ಮೂಳೆ ಮಜ್ಜೆಯ ಕ್ಯಾನ್ಸರ್.
- ಉಸಿರಾಟಕ್ಕೆ ಸಂಬಂಧಿಸಿದ ಅಂಗಾಗಗಳ ಕ್ಯಾನ್ಸರ್: ಶ್ವಾಸಕೋಶ, ಬ್ರಾಂಕಸ್ ಮತ್ತು ಧ್ವನಿಪೆಟ್ಟಿಗೆಯ ಕ್ಯಾನ್ಸರ್.
2003ರಲ್ಲಿ ಸ್ಟೆಲ್ಮನ್ ಅಧ್ಯಯನ ನಡೆದಿದೆ. ಡಾ. ಜೀನ್ ಸ್ಟೆಲ್ಮನ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ವಿಯೆಟ್ನಾಂನಲ್ಲಿ ಎಷ್ಟು ಪ್ರಮಾಣದ ಏಜೆಂಟ್ ಆರೆಂಜ್ ಸಿಂಪಡಿಸಲಾಗಿದೆ ಎಂಬುದನ್ನು ಮರುಮೌಲ್ಯಮಾಪನ ಮಾಡಿದೆ. ಅಧ್ಯಯನದಲ್ಲಿ ಮೊದಲು ಅಂದಾಜಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಡಯಾಕ್ಸಿನ್ ಅನ್ನು ಸಿಂಪಡಿಸಲಾಗಿದೆ ಎಂಬುದು ಖಚಿತವಾಗಿತ್ತು. ಇದರಿಂದಾಗಿ ವಿಯೆಟ್ನಾಂನ ಸಾವಿರಾರು ಹಳ್ಳಿಗಳಲ್ಲಿ ಕ್ಯಾನ್ಸರ್ ಸಾಂದ್ರತೆ ಹೆಚ್ಚಾಗಿತ್ತು.
ವಿಯೆಟ್ನಾಂ ಸರ್ಕಾರ ಮತ್ತು ರೆಡ್ ಕ್ರಾಸ್ ನಡೆಸಿದ ಅಧ್ಯಯನಗಳ ಪ್ರಕಾರ ಸುಮಾರು 30 ಲಕ್ಷ ವಿಯೆಟ್ನಾಂ ನಾಗರಿಕರು ಏಜೆಂಟ್ ಆರೆಂಜ್‌ನಿಂದಾಗಿ ಇಂದಿಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಕನಿಷ್ಠ 10 ಲಕ್ಷ ಜನರಿಗೆ ಗಂಭೀರವಾದ ಕ್ಯಾನ್ಸರ್ ಅಥವಾ ಜನ್ಮಜಾತ ಅಂಗವೈಕಲ್ಯಗಳಿವೆ. ಅದರಲ್ಲೂ ಅಮೆರಿಕದ ಹಳೆಯ ವಾಯುನೆಲೆಗಳಿದ್ದ ಡಾ ನಾಂಗ್ ಮತ್ತು ಬಿಯೆನ್ ಹೋವಾ ಮೊದಲಾದ ಪ್ರದೇಶಗಳ ಸುತ್ತಲಿನ ಮಣ್ಣಿನಲ್ಲಿ ಡಯಾಕ್ಸಿನ್ ಪ್ರಮಾಣ ಇಂದಿಗೂ ಸಾಮಾನ್ಯಕ್ಕಿಂತ ಸಾವಿರ ಪಟ್ಟು ಅಧಿಕವಾಗಿದೆ. ಆದ್ದರಿಂದ ಇಲ್ಲಿನ ಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ದೇಶದ ಇತರ ಭಾಗಗಳಿಗಿಂತ 3-5 ಪಟ್ಟು ಹೆಚ್ಚಾಗಿವೆ.
‘ಬರ್ನ್ ಪಿಟ್ಸ್’ನಿಂದ ಉಂಟಾಗುವ ಕ್ಯಾನ್ಸರ್
ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಜಿನಿಯರಿಂಗ್ ಆಂಡ್ ಮೆಡಿಸಿನ್ (NASEM) ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಸಂಶೋಧನೆಗಳು ಯುದ್ಧದ ಸಮಯದಲ್ಲಿ ಉಂಟಾಗುವ ವಿಷಕಾರಿ ಹೊಗೆ ಮತ್ತು ಕ್ಯಾನ್ಸರ್ ನಡುವಿನ ನೇರ ಸಂಬಂಧವನ್ನು ಸಾಬೀತುಪಡಿಸಿವೆ. ಈ ಸಂಶೋಧನೆಯು ಮುಖ್ಯವಾಗಿ ‘ಬರ್ನ್ ಪಿಟ್ಸ್’ (Burn Pits) ಅಥವಾ ತ್ಯಾಜ್ಯ ಸುಡುವ ಹೊಂಡಗಳಿಂದ ಹೊರಬರುವ ಹೊಗೆಯ ಕುರಿತಾಗಿ ಮಾಡಲಾಗಿದೆ. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಸೈನಿಕರಲ್ಲಿ ಕಂಡುಬರುತ್ತಿರುವ ಅಸಹಜ ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್‌ಗೆ ಯುದ್ಧ ಭೂಮಿಯ ಮಾಲಿನ್ಯವೇ ಕಾರಣವೇ ಎಂದು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ಸಂಶೋಧನೆಯನ್ನು ಅಮೆರಿಕದ ಕಾಂಗ್ರೆಸ್ (ಸಂಸತ್ತು) ಆದೇಶದ ಮೇರೆಗೆ ನಡೆಸಲಾಗಿದೆ. ಅಮೆರಿಕದ ‘ವೆಟರನ್ಸ್ ಅಫೇರ್ಸ್’ (VA) ಇಲಾಖೆಯು ದತ್ತಾಂಶಗಳನ್ನು ಒದಗಿಸಿದೆ.

ಅಧ್ಯಯನದ ಭಾಗವಾಗಿ ಯುದ್ಧ ಭೂಮಿಯಿಂದ ಮರಳಿದ ಲಕ್ಷಾಂತರ ಸೈನಿಕರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಹೊಗೆಗೆ ನೇರವಾಗಿ ಒಡ್ಡಿಕೊಂಡವರು ಮತ್ತು ಒಡ್ಡಿಕೊಳ್ಳದವರ ಆರೋಗ್ಯ ಸ್ಥಿತಿಯನ್ನು ದೀರ್ಘಕಾಲದವರೆಗೆ ಹೋಲಿಕೆ ಮಾಡಲಾಗಿದೆ. ಈ ಸಂಶೋಧನೆಯಿಂದಾಗಿ ಹೊಗೆಯಲ್ಲಿರುವ ಸೂಕ್ಷ್ಮ ಕಣಗಳು (PM 2.5) ಉಸಿರಾಟದ ಮೂಲಕ ನೇರವಾಗಿ ರಕ್ತನಾಳಗಳನ್ನು ಸೇರುವುದರಿಂದ ಸೈನಿಕರು ಅಧಿಕ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಹೊಗೆಯಲ್ಲಿರುವ ವಿಷಕಾರಿ ಅನಿಲಗಳು ಮಿದುಳಿನ ಕ್ಯಾನ್ಸರ್‌ಗೆ ಕಾರಣವಾಗಿದೆ, ಗಂಟಲಿನ ಒಳಪದರವನ್ನು ಘಾಸಿಗೊಳಿಸಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮಾದಂತಹ ಕ್ಯಾನ್ಸರ್‌ಗಳಿಗೆ ದಾರಿ ಮಾಡಿಕೊಟ್ಟಿವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಸಂಶೋಧನಾ ವರದಿಗಳ ಆಧಾರದಲ್ಲಿ 2022ರಲ್ಲಿ ಅಮೆರಿಕ ಸರ್ಕಾರವು “The PACT Act” ಎಂಬ ಕಾನೂನನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬರ್ನ್ ಪಿಟ್ ಹೊಗೆಗೆ ಒಡ್ಡಿಕೊಂಡ ಸೈನಿಕರಲ್ಲಿ ಕಾಣಿಸಿಕೊಳ್ಳುವ 23 ಬಗೆಯ ಕ್ಯಾನ್ಸರ್ ಮತ್ತು ಕಾಯಿಲೆಗಳನ್ನು ‘ಯುದ್ಧದ ಪರಿಣಾಮ’ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ.
ಯುದ್ಧ ಮುಗಿದ ಮೇಲೆ ಕಾಡುವ ಸಾಮಾನ್ಯ ಕ್ಯಾನ್ಸರ್‌ಗಳು
- ಶ್ವಾಸಕೋಶದ ಕ್ಯಾನ್ಸರ್ (Lung Cancer): ಯುದ್ಧ ಭೂಮಿಯಲ್ಲಿ ಕಸದ ಕುಳಿಗಳ ಹೊಗೆ, ಮದ್ದುಗುಂಡುಗಳ ಹೊಗೆಗಳನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕವಾಗಿರುತ್ತದೆ.
- ರಕ್ತದ ಕ್ಯಾನ್ಸರ್ (Leukemia and Lymphoma): ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಯುರೇನಿಯಂನಿಂದ ಹೊರಸೂಸುವ ವಿಕಿರಣಗಳು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುತ್ತವೆ.
- ಚರ್ಮದ ಕ್ಯಾನ್ಸರ್ (Skin Cancer): ರಾಸಾಯನಿಕ ಅಸ್ತ್ರಗಳಾದ ಮಸ್ಟರ್ಡ್ ಗ್ಯಾಸ್‌ನಂತಹ ವಿಷಕಾರಿ ದ್ರವಗಳು ಚರ್ಮದ ಮೇಲೆ ಬಿದ್ದಾಗ ತೀವ್ರವಾದ ಗಾಯಗಳಾಗುತ್ತವೆ. ಇವು ದೀರ್ಘಕಾಲದ ನಂತರ ಚರ್ಮದ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಅಪಾಯವಿದೆ.
- ಥೈರಾಯ್ಡ್ ಕ್ಯಾನ್ಸರ್ (Thyroid Cancer): ವಿಕಿರಣಶೀಲ ಕಣಗಳು ವಾತಾವರಣದಲ್ಲಿ ಹರಡಿದಾಗ ಅದು ನೇರವಾಗಿ ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಹಿರೋಷಿಮಾ ಮತ್ತು ನಾಗಸಾಕಿ ದುರಂತದ ನಂತರದ ದಶಕಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದವು.
- ಜೀರ್ಣಾಂಗವ್ಯೂಹದ ಕ್ಯಾನ್ಸರ್ (Gastrointestinal Cancers): ಯುದ್ಧ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಆಹಾರವು ರಾಸಾಯನಿಕ ತ್ಯಾಜ್ಯಗಳಿಂದ ಕಲುಷಿತಗೊಂಡಿರುತ್ತದೆ. ಇಂತಹ ಆಹಾರ ಸೇವನೆಯಿಂದ ಹೊಟ್ಟೆ, ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳುತ್ತವೆ.
ಒಟ್ಟಾರೆಯಾಗಿ ನಾವು ಯುದ್ಧ ಮತ್ತು ಅದರಿಂದ ಸೃಷ್ಟಿಯಾದ, ವಿಸ್ತಾರಗೊಂಡ ಕ್ಯಾನ್ಸರ್ ಎಂಬ ಪೆಡಂಭೂತವನ್ನು ಒಂದೇ ತಕ್ಕಡಿಯಲ್ಲಿ ತೂಗಿದರೂ ತಪ್ಪಿಲ್ಲ. ಯುದ್ಧ ವಿನಾಶ ಅದರಿಂದ ಕಾಡುವ ಕ್ಯಾನ್ಸರ್ ಕೂಡಾ ನಾಶವೇ. ಸದ್ಯ ಹಲವು ಆಧುನಿಕ ಚಿಕಿತ್ಸೆಗಳನ್ನು ಪಡೆದು ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಅಂದ ಮಾತ್ರಕ್ಕೆ ಯುದ್ಧ ಒಪ್ಪಲಾಗದು. ಹಿರೋಷಿಮಾದ ವಿಕಿರಣಗಳಿಂದ ಹಿಡಿದು ವಿಯೆಟ್ನಾಂನ ‘ಏಜೆಂಟ್ ಆರೆಂಜ್’ವರೆಗೆ, ಇರಾಕ್‌ನ ‘ಯುರೇನಿಯಂ’ನಿಂದ ಅಫ್ಘಾನಿಸ್ತಾನದ ‘ಬರ್ನ್ ಪಿಟ್ಸ್’ ವರೆಗೆ ಪ್ರತಿಯೊಂದು ಸಂಘರ್ಷವೂ ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ನೇರ ಸಾಕ್ಷಿಯಾಗಿದೆ.
ನಾವು ಯುದ್ಧದ ವಿಜಯೋತ್ಸವಗಳ ಸಂಭ್ರಮದಲ್ಲಿ ಯುದ್ಧದ ‘ವಿಷಕಾರಿ ಉಡುಗೊರೆ’ಗಳನ್ನು ಮರೆತುಬಿಡುತ್ತೇವೆ. ಶಸ್ತ್ರಾಸ್ತ್ರಗಳ ಮೇಲೆ ಶತಕೋಟಿ ಹಣ ವ್ಯಯಿಸುವ ಜಗತ್ತು, ಯುದ್ಧದ ನಂತರದ ಆರೋಗ್ಯ ತುರ್ತುಸ್ಥಿತಿ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಸಿದ್ಧವಾಗಿರಬೇಕು ಎಂಬುದು ಕ್ರೂರ ವ್ಯಂಗ್ಯ. ಹಾಗಿದ್ದಾಗ ಯುದ್ಧದಲ್ಲಿ ಯಾರೂ ನಿಜವಾದ ವಿಜೇತರಲ್ಲ. ಅಮೆರಿಕ ಎಷ್ಟೇ ಯುದ್ದದಲ್ಲಿ ಗೆದ್ದರೂ ಅದು ಅಲ್ಲಿನ ಜನತೆಯ ಜಯವಲ್ಲ. ಅಮೆರಿಕದ ಸೈನಿಕರು ಯುದ್ಧಕ್ಕಾಗಿ ಪ್ರಾಣ ಮಾತ್ರವಲ್ಲ ಆರೋಗ್ಯವನ್ನೂ ಬಲಿ ನೀಡಬೇಕು ಎಂಬುದು ವಾಸ್ತವ. ಯುದ್ಧದಿಂದ ಉಂಟಾದ ಗಾಯದ ಕಲೆಗಳು ದೇಹದಲ್ಲಿ ಮಾಸಿದರೂ ಕ್ಯಾನ್ಸರ್ ರೂಪದಲ್ಲಿ ಬರುವ ಕಲೆಗಳು ಯುದ್ಧ ಮುಗಿದ ಬಳಿಕವೂ ಹಲವು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ. ಸದ್ಯ ಜಗತ್ತಿಗೆ ಬೇಕಿರುವುದು ಶಸ್ತ್ರಾಸ್ತ್ರಗಳ ಸ್ಪರ್ಧೆಯಲ್ಲ, ಬದಲಿಗೆ ವಿಷಮುಕ್ತ ಪರಿಸರ ಮತ್ತು ಆರೋಗ್ಯವಂತ ಸಮಾಜ. ಯುದ್ಧ ನಿಂತರೂ ಕಾಡುವ ಈ ‘ಕ್ಯಾನ್ಸರ್ ಭೂತ’ವನ್ನು ತಡೆಯಬೇಕಾದರೆ, ಯುದ್ಧವನ್ನೇ ತಡೆಯುವುದು ಏಕೈಕ ಶಾಶ್ವತ ಪರಿಹಾರ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




