‘ಭಾರತದ ಪ್ರಜೆಗಳಾದ ನಾವು’ (We, the People of India) ಎಂಬ ಸಾಲನ್ನು ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ. ನಮ್ಮ ಸಂವಿಧಾನ ರಚನಾಕಾರರು ವಿಶ್ವದ ಹಲವು ದೇಶಗಳ ಸಂವಿಧಾನಗಳಲ್ಲಿನ ಉತ್ಕೃಷ್ಟ ಸಂಗತಿಗಳನ್ನು ಇಲ್ಲಿಯೂ ಸೇರಿಸಿಕೊಂಡು ವಿಮೋಚನಾ ರಥವನ್ನು ಮುಂದಕ್ಕೆ ಎಳೆದಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ವಿಸ್ತೃತವಾಗಿ ಚರ್ಚೆಗೆ ಒಳಪಡಿಸಿಯೇ ನಮಗೆ ನಾವೇ ಅರ್ಪಿಸಿಕೊಂಡ ‘ಸಂವಿಧಾನ’ದಲ್ಲಿ ‘ವೀ, ದ ಪೀಪಲ್ ಆಫ್ ಇಂಡಿಯಾ’ ಎಂಬ ಸಾಲು ಸೇರಿದ್ದು ಹೇಗೆಂಬುದೂ ಸ್ವಾರಸ್ಯಕರ ವಿಚಾರ.
‘ಭಾರತದ ಪ್ರಜೆಗಳಾದ ನಾವು’ ಎಂಬ ಸಾಲಿನಿಂದ ಶುರುವಾಗಿ ‘ನಮಗೆ ನಾವೇ ಬರೆದುಕೊಂಡು ಈ ಸಂವಿಧಾನವನ್ನು ಸಮರ್ಪಿಸಿಕೊಂಡಿದ್ದೇವೆ’ ಎಂಬ ಸಾಲಿನ ಮೂಲಕ ಸಂವಿಧಾನದ ಪೀಠಿಕೆ (ಪ್ರಸ್ತಾವನೆ) ಮುಗಿಯುತ್ತದೆ. ಆದರೆ ನಮ್ಮ ಸಂವಿಧಾನ ರಚನಾಕಾರರು ‘ವೀ, ದ ಪೀಪಲ್ ಆಫ್ ಇಂಡಿಯಾ’ ಎಂಬ ಸಾಲನ್ನು ಅಂಗೀಕರಿಸುವ ಮೊದಲು ಬಹುವಿಧದಲ್ಲಿ ಚರ್ಚೆಗೆ ಒಳಪಡಿಸಿದ್ದರು.
ಸಂವಿಧಾನ ಸಭೆಯಲ್ಲಿ ಮಾತನಾಡಿದ್ದ ಜವಾಹರಲಾಲ್ ನೆಹರೂ ಅವರು ‘ಜನ’ ಎಂಬ ಪದದ ಮಹತ್ವವನ್ನು ವಿವರಿಸಿದ್ದರು. “ಸಂವಿಧಾನವನ್ನು ರಾಜ್ಯಗಳೋ ಅಥವಾ ಪ್ರತ್ಯೇಕ ರಾಜ್ಯಗಳ ಜನರೋ ಸೃಷ್ಟಿಸಲಿಲ್ಲ. ಆದರೆ ಇಡೀ ಭಾರತದ ಜನರು ಸಂವಿಧಾನವನ್ನು ರಚಿಸಿದ್ದಾರೆ ಎಂಬುದನ್ನು ‘ಜನ’ ಎಂಬ ಪದ ಸೂಚಿಸುತ್ತದೆ. ಹೀಗಾಗಿ ಯಾವುದೇ ರಾಜ್ಯಕ್ಕಾಗಲೀ, ಯಾವುದೇ ರಾಜ್ಯಗಳ ಗುಂಪಿಗಾಗಲೀ ಈ ಸಂವಿಧಾನವನ್ನು ರದ್ದುಗೊಳಿಸಲು ಅಥವಾ ಒಕ್ಕೂಟದಿಂದ ಬೇರ್ಪಡಿಸಲು ಸಾಧ್ಯವಿಲ್ಲ” ಎಂದಿದ್ದರು ನೆಹರೂ. ಮುಖ್ಯವಾಗಿ ‘ವೀ, ದ ಪೀಪಲ್ ಆಫ್ ಇಂಡಿಯಾ’ ಎಂಬ ಪದಕ್ಕೆ ತಕರಾರು ಬರದೇ ಇರಲಿಲ್ಲ. ಈ ನಿಟ್ಟಿನಲ್ಲಿ 1947ರ ಅಕ್ಟೋಬರ್ 17ರ ಸಂವಿಧಾನ ಸಭೆಯ ಚರ್ಚೆಗಳನ್ನು ನೋಡಬೇಕಾಗುತ್ತದೆ.
ಸಂವಿಧಾನ ಸಭೆಯ ಸದಸ್ಯರಾದ ಎಚ್.ವಿ. ಕಾಮತ್ ಅವರು ಪೀಠಿಕೆಯಲ್ಲಿ ‘ದೇವರ ಹೆಸರಿನಲ್ಲಿ’ (In the name of God) ಎಂಬ ಸಾಲನ್ನು ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಡುತ್ತಾರೆ. ಧಾರ್ಮಿಕ ಚಹರೆಗಳೊಂದಿಗೆ 1937ರಲ್ಲಿ ರಚಿಸಲ್ಪಟ್ಟ ಐರೀಸ್ ಸಂವಿಧಾನವನ್ನು ಉದಾಹರಣೆಯಾಗಿ ನೀಡುತ್ತಾರೆ. ಆ ಮೂಲಕ ದೇಶವನ್ನು ಮುನ್ನಡೆಸುವ ದಾಖಲೆಯು ದೈವಿಕ ಅಂಶವನ್ನು ಹೊಂದಿರಬೇಕು ಎಂಬುದು ಅವರ ನಿಲುವಾಗಿತ್ತು.

ಅವರ ತಿದ್ದುಪಡಿ ಪ್ರಸ್ತಾವನೆ ಹೀಗಿರುತ್ತದೆ:
“ದೇವರ ಹೆಸರಿನಲ್ಲಿ, ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪಿಸಲು ಅದರ ಎಲ್ಲ ನಾಗರಿಕರಿಗೆ ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ; ಚಿಂತನೆ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಮತ್ತು ಆರಾಧನೆಯ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶದ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಅವರೆಲ್ಲರ ನಡುವೆ ಉತ್ತೇಜಿಸಲು; ಭ್ರಾತೃತ್ವ, ವ್ಯಕ್ತಿ ಘನತೆ ಮತ್ತು ರಾಷ್ಟ್ರದ ಏಕತೆಯನ್ನು ಖಚಿತಪಡಿಸಿ, ನಮ್ಮ ಸಂವಿಧಾನ ಸಭೆಯಲ್ಲಿ ಈ ಸಂವಿಧಾನವನ್ನು ಈ ಮೂಲಕ ಅಂಗಿಕರಿಸಿ, ಜಾರಿಗೆ ತಂದು ನಮಗೇ ನಾವೇ ಅರ್ಪಿಸಿಕೊಂಡಿದ್ದೇವೆ.”
(‘In the name of God, We, the people of India, having solemnly resolved to constitute India into a Sovereign democratic republic, and to secure to all her citizens, Justice, social, economic and political; Liberty of thought, expression, belief, faith and worship; Equality of status and of opportunity; and to promote among them all; Fraternity, assuring the dignity of the individual and the unity of the nation; In our Constituent Assembly do hereby adopt, enact and give to ourselves this Constitution.’”)
ಅಂದರೆ ಕರಡು ಪ್ರತಿಯಲ್ಲಿನ ಪ್ರಸ್ತಾವನೆಗೆ ‘In the Name of God’ ಸಾಲನ್ನು ಸೇರಿಸಬೇಕೆಂಬುದು ಕಾಮತ್ ಆಗ್ರಹವಾಗಿರುತ್ತದೆ. ಆದರೆ ಸಂವಿಧಾನದ ಪೀಠಿಕೆಯಲ್ಲಿ ‘ದೇವರು’ ಎಂಬ ಪದವನ್ನು ಸೇರಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆಯು- ಇಲ್ಲಿನ ಜಾತ್ಯತೀತತೆ, ಬಹುತ್ವ ಮತ್ತು ಆಡಳಿತದಲ್ಲಿ ಧರ್ಮದ ಪಾತ್ರ- ಮೊದಲಾದ ವಿಷಯಗಳನ್ನು ಮುನ್ನಲೆಗೆ ತಂದಿತು.
ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)
ಎ. ತನು ಪಿಳ್ಳೈ ಸೇರಿದಂತೆ ಹಲವಾರು ಸದಸ್ಯರು ಕಾಮತ್ ಅವರ ಸಲಹೆಯನ್ನು ವಿರೋಧಿಸಿದರು. ಇದು ನಂಬಿಕೆಯ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. “ದೇವರು ಅಥವಾ ವಿಭಿನ್ನ ಧಾರ್ಮಿಕ ನಂಬಿಕೆಗಳನ್ನು ಅನುಸರಿಸದವರನ್ನು ಹೊರಗಿಟ್ಟಂತೆ ಆಗುತ್ತದೆಯಲ್ಲವೇ? ಇದರಿಂದಾಗಿ ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗುತ್ತದೆಯಲ್ಲವೇ?” ಎಂದು ಪಿಳ್ಳೈ ಗಮನಸೆಳೆದರು. ಸಂವಿಧಾನವು ತಮಗೆ ಬೇಕಾದಂತೆ ಬಾಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಆ ಮೂಲಕ ನಂಬಿಕೆಯುಳ್ಳವರು ಮತ್ತು ನಂಬಿಕೆಯಿಲ್ಲದವರಿಗೂ ಅವಕಾಶ ಒದಗಿಸಿದೆ. ಆದರೆ ಪೀಠಿಕೆಯು ಎಲ್ಲ ನಾಗರಿಕರ ನಂಬಿಕೆಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು. ಈ ನಿಟ್ಟಿನಲ್ಲಿ ಅದು ತಟಸ್ಥವಾಗಿರಬೇಕು ಎಂಬುದು ಪಿಳ್ಳೈ ಅಂಥವರ ಅಭಿಪ್ರಾಯವಾಗಿತ್ತು.

ಪಿಳ್ಳೈ ಮಾತುಗಳು ಹೀಗಿದ್ದವು: “ನಾನು ದೇವರಲ್ಲಿ ನಂಬಿಕೆ ಉಳ್ಳವನು.. ಆದರೆ ಶ್ರೀ ಕಾಮತ್ ಅವರ ತಿದ್ದುಪಡಿಯನ್ನು ಅಂಗೀಕರಿಸಿದರೆ, ಅದು ನಂಬಿಕೆಯ ವಿಷಯದಲ್ಲಿ ಬಲವಂತ ಮಾಡಿದಂತೆ ಆಗುವುದಿಲ್ಲವೆ? ಆ ರೀತಿಯ ಪ್ರಸ್ತಾವನೆಯನ್ನು ಮಂಡಿಸುವುದು ಅನುಚಿತವಲ್ಲವೇ? ಇದು ನಂಬಿಕೆಯ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯನು ದೇವರಲ್ಲಿ ನಂಬಿಕೆ ಇಡುವ ಅಥವಾ ನಂಬದಿರುವ ಹಕ್ಕನ್ನು ಸಂವಿಧಾನ ನೀಡುತ್ತದೆ. ಆ ದೃಷ್ಟಿಯಿಂದ ಈ ತಿದ್ದುಪಡಿಯನ್ನು ತಳ್ಳಿಹಾಕಬೇಕು. ಆದರೆ ನಾನು ದೇವರಲ್ಲಿ ದೃಢ ನಂಬಿಕೆಯುಳ್ಳವನು.”
ಅದಕ್ಕೆ ಪ್ರತಿಕ್ರಿಯಿಸಿದ ಕಾಮತ್, “ಶ್ರೀ ತನು ಪಿಳ್ಳೈ ಅವರಿಗೆ ನನ್ನ ಉತ್ತರವೆಂದರೆ, ನಾವು ಇದನ್ನು ಭಾರತದ ಜನರ ಹೆಸರಿನಲ್ಲಿ ಮತ್ತು ಅವರ ಪರವಾಗಿ ಅಂಗೀಕರಿಸುತ್ತಿದ್ದೇವೆ. ಈ ಸಭೆಯಲ್ಲಿ ನಾವು ಮಾಡಿದ್ದೆಲ್ಲವೂ ಭಾರತದ ಜನರ ಹೆಸರಿನಲ್ಲಿ ಮತ್ತು ಪರವಾಗಿಯೇ” ಎಂದು ವಾದಿಸುತ್ತಾರೆ.
ಶಿಬ್ಬನ್ ಲಾಲ್ ಸಕ್ಸೇನಾ ಅವರಂತಹ ನಾಯಕರು, ‘ದೇವರ ಹೆಸರಲ್ಲಿ’ ಎಂಬುದನ್ನು ಬೆಂಬಲಿಸುತ್ತಾರೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ‘ದೇವರು’ ಎಂಬುದನ್ನು ಸೇರಿಸಲಾಗಿದೆ. ಭಾರತವು ತನ್ನ ಪೀಠಿಕೆಯಲ್ಲಿ ‘ದೇವರು’ ಎಂಬುದನ್ನು ಸೇರಿಸುವ ಮೂಲಕ ಇತರ ರಾಷ್ಟ್ರಗಳೊಂದಿಗೆ ಹೊಂದಾಣಿಕೆ ಸಾಧಿಸಬಹುದು. ಜೊತೆಗೆ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನೈತಿಕ ಮೌಲ್ಯಗಳ ಪ್ರತಿಬಿಂಬವಾಗಿಯೂ ಇದು ಕಾಣುತ್ತದೆ ಎಂದು ಪ್ರತಿಪಾದಿಸಿದರು. ಧಾರ್ಮಿಕ ಉಲ್ಲೇಖಗಳು ಸಂವಿಧಾನಕ್ಕೆ ನೈತಿಕ ಆಯಾಮವನ್ನು ಸೇರಿಸುತ್ತವೆ ಎಂದು ಅವರು ನಂಬಿದ್ದರು.
ಇದರ ನಡುವೆ ರೋಹಿಣಿ ಕುಮಾರ್ ಚೌದರಿ ಅವರು ನೀಡಿದ ಪ್ರತಿಕ್ರಿಯೆ ಸ್ವಾರಸ್ಯಕರವಾಗಿದೆ ಮತ್ತು ಪುರುಷಕೇಂದ್ರಿತ ದೃಷ್ಟಿಕೋನವನ್ನು ಪ್ರಶ್ನಿಸುವಂತಿದೆ. “ಶ್ರೀ ಕಾಮತ್ ಅವರು ಪ್ರಸ್ತಾಪಿಸಿರುವ ‘In the Name of God’ ಬದಲಿಗೆ ‘In the name of Goddess’ (‘ದೇವತೆಯ ಹೆಸರಿನಲ್ಲಿ’) ಎಂದು ಬಳಸಲು ತಿದ್ದುಪಡಿಯನ್ನು ನಾನು ಪ್ರಸ್ತಾಪಿಸಬಹುದೇ?” ಎಂದು ಪ್ರಶ್ನಿಸುತ್ತಾರೆ ಚೌದರಿ.
ಚರ್ಚೆ ಮುಂದುವರಿದಂತೆ ಚೌದರಿಯವರು ಮತ್ತೊಮ್ಮೆ ಹೇಳುವುದು ಹೀಗೆ: “…ಶ್ರೀ ಕಾಮತ್ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ. ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾನು ಅವರ ಮೇಲೆ ಅಪರಿಮಿತ ವಿಶ್ವಾಸ ಹೊಂದಿರುವ ವ್ಯಕ್ತಿ. ಆದರೆ ಅವರ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ. ನಾನು ಪ್ರಸ್ತಾಪಿಸಿದ ತಿದ್ದುಪಡಿಯನ್ನು ಸ್ವೀಕರಿಸಲು ಅವರು ಸ್ಪಷ್ಟವಾಗಿ ನಿರಾಕರಿಸಿ, ಅನೇಕರ ಭಾವನೆಗಳನ್ನು ಆಘಾತಗೊಳಿಸಿದರು. ಇದು ನನಗೆ ನಗುವ ವಿಷಯವಲ್ಲ. ನಾನು ದೇವತೆಯನ್ನು ನಂಬುತ್ತೇನೆ. ನಾನು (ಅಸ್ಸಾಂನ) ಕಾಮರೂಪಿನವನು; ಅಲ್ಲಿ ಕಾಮಾಕ್ಯ ದೇವಿಯನ್ನು ಪೂಜಿಸಲಾಗುತ್ತದೆ…”

“ನಾವೆಲ್ಲ ಒಂದನ್ನು ನೆನಪಿಡಬೇಕು, ನಾವು ರಾಜಕೀಯ ಚಳವಳಿಯನ್ನು ಆರಂಭಿಸಿದಾಗ ವಂದೇ ಮಾತರಂ ಹಾಡಿನೊಂದಿಗೆ ಪ್ರಾರಂಭಿಸಿದ್ದೇವೆ. ವಂದೇ ಮಾತರಂ ಎಂದರೆ ಏನು? ಇದರ ಅರ್ಥ- ದೇವತೆಗೆ ಪ್ರಾರ್ಥನೆ. ಇದರ ಅರ್ಥ- ದೇವತೆಯ ಮೇಲಿನ ನಂಬಿಕೆ. ಸರ್, ಶಕ್ತಿ ಪಂಥಕ್ಕೆ ಸೇರಿದ ನಾವು, ದೇವರ ಹೆಸರಲ್ಲಿ ಪ್ರಾರ್ಥಿಸುವುದನ್ನು ಮತ್ತು ದೇವತೆಯನ್ನು ನಿರ್ಲಕ್ಷಿಸುವುದನ್ನು ವಿರೋಧಿಸುತ್ತೇವೆ. ದೇವರ ಹೆಸರನ್ನು ತರುವುದಾದರೆ, ದೇವಿಯ ಹೆಸರನ್ನೂ ತರಬೇಕು. ಇದು ನನ್ನ ದೃಷ್ಟಿಕೋನ” ಎಂದು ರೋಹಿಣಿ ಕುಮಾರ್ ಚೌದರಿ ತಿಳಿಸುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ಹೀಗೆ ‘ಎಚ್.ವಿ. ಕಾಮತ್’ ಅವರು ಬಯಸಿದ ‘In The Name Of God’ ಭಾರೀ ಚರ್ಚೆಗೆ ಒಳಪಡುತ್ತದೆ.
“ಅಧ್ಯಕ್ಷರೇ, ಈ ಸದನದಲ್ಲಿ ನಾವು ಮಾಡಿರುವುದೆಲ್ಲವೂ ಭಾರತದ ಜನರ ಪರವಾಗಿಯೇ ಆಗಿದೆ. ಎಲ್ಲ ನಿರ್ಧಾರಗಳನ್ನು ಇಲ್ಲಿ ಸದನದ ಮತದ ಮೂಲಕ ತೆಗೆದುಕೊಳ್ಳಲಾಗಿದೆ. ಇದು ಸದನದ ಮತಕ್ಕೆ ಸಂಬಂಧಿಸಿದ ವಿಷಯವಾಗಲಿ ಅಥವಾ ಇಲ್ಲದಿರಲಿ, ಕಳೆದ ಮೂರು ವರ್ಷಗಳಿಂದ ನಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಶ್ರಮಿಸುತ್ತಿದ್ದೇವೆಯೋ ಆ ಭಾರತದ ಜನರು ಈ ತಿದ್ದುಪಡಿಯನ್ನು ಸಂಪೂರ್ಣವಾಗಿ ಅನುಮೋದಿಸುತ್ತಾರೆ ಎಂದು ನನಗೆ ಖಚಿತವಾಗಿದೆ” ಎನ್ನುತ್ತಾರೆ ಕಾಮತ್.
“ಕಾಮತ್ ಪ್ರಸ್ತಾಪಿಸಿರುವ ತಿದ್ದುಪಡಿಯನ್ನು ಮತಕ್ಕೆ ಹಾಕಬೇಕು. ಇನ್ಯಾವುದೇ ಪರ್ಯಾಯ ಆಯ್ಕೆಗಳು ನನ್ನ ಮುಂದೆ ಇಲ್ಲ” ಎಂದು ಸಭಾಧ್ಯಕ್ಷರು ತಿಳಿಸುತ್ತಾರೆ. “ತಿದ್ದುಪಡಿ ಪ್ರಸ್ತಾಪವನ್ನು ಕಾಮತ್ ಹಿಂಪಡೆಯುತ್ತಾರೆಯೇ ಕೇಳಬಹುದು” ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಕ್ರಿಯಿಸುತ್ತಾರೆ. “ನಾನು ತಿದ್ದುಪಡಿ ಪ್ರಸ್ತಾವನೆಯನ್ನು ಹಿಂಪಡೆಯುವುದಿಲ್ಲ” ಎಂದು ಕಾಮತ್ ಸ್ಪಷ್ಟಪಡಿಸುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-2)
68 ಮತಗಳು ಪ್ರಸ್ತಾವನೆ ವಿರುದ್ಧವಾಗಿಯೂ, 41 ಮತಗಳು ಪರವಾಗಿಯೂ ಬರುತ್ತವೆ. “ಸರ್, ಇದು ನಮ್ಮ ಚರಿತ್ರೆಯಲ್ಲಿ ಕರಾಳ ದಿನ. ಭಾರತವನ್ನು ದೇವರೇ ಕಾಪಾಡಲಿ” ಎಂದು ಎಚ್.ವಿ. ಕಾಮತ್ ಬೇಸರ ವ್ಯಕ್ತಪಡಿಸುತ್ತಾರೆ. “ಶ್ರೀ ಕಾಮತ್ ಆ ಹೇಳಿಕೆಯನ್ನು ನೀಡಬಾರದಿತ್ತು ಮತ್ತು ಅವರು ಅದನ್ನು ಹಿಂಪಡೆಯಬೇಕು” ಎಂದು ತನು ಪಿಳ್ಳೈ ಆಗ್ರಹಿಸುತ್ತಾರೆ.
‘ಪೀಠಿಕೆ’ಯಲ್ಲಿ ‘ದೇವರು’ ಎಂಬುದನ್ನು ಸೇರಿಸದಿರಲು ನಮಗೆ ನಾವೇ ತೆಗೆದುಕೊಂಡ ನಿಲುವು ಪ್ರಜ್ಞಾವಂತಿಕೆಯಿಂದ ಕೂಡಿತ್ತು ಮತ್ತು ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಅದು ಕನ್ನಡಿ ಹಿಡಿಯಿತು. ಈ ನಿರ್ಧಾರವು ಎಲ್ಲ ನಾಗರಿಕರ ಧಾರ್ಮಿಕ ಮತ್ತು ಧಾರ್ಮಿಕೇತರ ನಂಬಿಕೆಗಳನ್ನು ಗೌರವಿಸುವ ನಿಟ್ಟಿನಲ್ಲಿತ್ತು ಮತ್ತು ಸರ್ಕಾರವು ಯಾವುದೇ ನಿರ್ದಿಷ್ಟ ಧಾರ್ಮಿಕ ದೃಷ್ಟಿಕೋನವನ್ನು ಹೇರಬಾರದು ಎಂಬುದನ್ನು ಒತ್ತಿ ಹೇಳಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಪೀಠಿಕೆಯ ಬಗ್ಗೆ ತಮ್ಮ ನಿಲುವನ್ನು ಚೆಂದವಾಗಿ ವಿವರಿಸಿದ್ದರು. “ಇದು ನಿಜಕ್ಕೂ ಒಂದು ಜೀವನ ವಿಧಾನವಾಗಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವೇ ಜೀವನದ ಮೂಲ ತತ್ವಗಳೆಂದು ಇದು ಗುರುತಿಸುತ್ತದೆ. ಇಲ್ಲಿ ಒಂದರಿಂದ ಒಂದನ್ನು ಹೊರಗಿಡಲು ಸಾಧ್ಯವಿಲ್ಲ. ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸಲಾಗುವುದಿಲ್ಲ; ಸಮಾನತೆಯನ್ನು ಸ್ವಾತಂತ್ರ್ಯದಿಂದ ಬೇರ್ಪಡಿಸಲಾಗುವುದಿಲ್ಲ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಭ್ರಾತೃತ್ವದಿಂದ ಬೇರ್ಪಡಿಸಲಾಗುವುದಿಲ್ಲ. ಸಮಾನತೆ ಇಲ್ಲದ ಸ್ವಾತಂತ್ರ್ಯವು ಕೆಲವರ ಪ್ರಾಬಲ್ಯಕ್ಕೆ ಕಾರಣವಾಗುತ್ತದೆ” ಎಂದಿದ್ದರು ಅಂಬೇಡ್ಕರ್.
ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ಕರಡು ಸಮಿತಿಯು ‘ಭಾರತದ ಪ್ರಜೆಗಳಾದ ನಾವು’ ಎಂಬುದನ್ನೇ ತನ್ನ ಕರಡು ಪ್ರತಿಯಲ್ಲಿ ಮೊದಲೇ ಸೇರಿಸಿತ್ತು. ಅದೇ ಅಂತಿಮವಾಗಿ ಉಳಿಯಿತು. ಮತಾತೀತವಾಗಿ ರೂಪಿಸಿದ ಸಂವಿಧಾನದಲ್ಲಿ ‘ಜನ’ ಮುಖ್ಯವಾದರೆ ಹೊರತು, ಕಲ್ಪಿತ ರೂಪವಾದ ‘ದೇವರು’ ನಗಣ್ಯವಾದನು. ಸಂವಿಧಾನ ರಚನಾಕಾರರು ‘ಪ್ರಜ್ಞಾಪೂರ್ವಕವಾಗಿ’ ‘We, the People of India’ ಸಾಲನ್ನು ಬರೆದಿರುವುದು ಇಲ್ಲಿ ಸ್ಪಷ್ಟ. ‘ನಾವು’ ಯಾರೆಂದರೆ ‘ಭಾರತದ ಜನ’- ನಾವೇ ಬರೆದುಕೊಂಡ ಸಂವಿಧಾನವನ್ನು ನಮಗೆಯೇ ಅರ್ಪಿಸಿಕೊಂಡದ್ದು ಅವಿಸ್ಮರಣೀಯ ಕ್ಷಣ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




