‘ಉರ್ದು ಭಾಷೆಯು ನಮ್ಮ ಸಂಸ್ಕೃತಿಯ ಭಾಗವೇ ಆಗಿದ್ದು, ಅದು ಜನರನ್ನು ಒಡೆಯುವ ಕಾರಣ ಆಗಕೂಡದು’ ಎಂಬ ವಿವೇಕದ ಮಾತುಗಳನ್ನು ಸುಪ್ರೀಮ್ ಕೋರ್ಟ್ ಹೇಳಿದೆ. ಭಾರತದ ಪಾಲಿಗೆ ಉರ್ದು ಅನ್ಯ ಭಾಷೆ ಎಂಬುದು ತಪ್ಪು ಗ್ರಹಿಕೆ. ಇದೇ ನೆಲದಲ್ಲಿ ಹುಟ್ಟಿದ ಭಾಷೆಯಿದು. ಗಂಗಾ ಯಮುನಾ ಸಂಸ್ಕೃತಿ- ಸೌಹಾರ್ದ ಭಾವದ ಪ್ರತೀಕ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ.ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಮಹಾರಾಷ್ಟ್ರದ ಪುರಸಭೆಯೊಂದರ ಕಟ್ಟಡದ ಸೂಚನಾ ಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಸುಪ್ರೀಮ್ ಕೋರ್ಟು ಎತ್ತಿ ಹಿಡಿದಿದೆ.
ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ‘ಗಂಗಾ- ಜಮುನೀ ತೆಹಜೀಬ್’ ಎಂದು ಸುಪ್ರೀಮ್ ಕೋರ್ಟು ಉರ್ದು-ಹಿಂದೀ ಸಂಬಂಧವನ್ನು ಬಣ್ಣಿಸಿದೆ. ಗಂಗಾ ಜಮುನೀ ತೆಹಜೀಬ್‌ನಲ್ಲಿ ಹಿಂದೂ ಮುಸ್ಲಿಮ್ ಮೈತ್ರಿ- ಸಾಮರಸ್ಯವನ್ನು ಗಂಗೆ-ಯಮುನೆಯರ ಸಂಗಮಕ್ಕೆ ಹೋಲಿಸಲಾಗಿದೆ. ಬನಾರಸಿನ ಹಿಂದೂ-ಮುಸ್ಲಿಮ್ ಸಂಸ್ಕೃತಿ, ಕೊಡಕೊಳುವ ಸಂಬಂಧ ಹಾಗೂ ಜೀವನವಿಧಾನಗಳ ಶಾಂತಿಯುತ ಸಂಗಮ. ಅವಧದ ನವಾಬರು ಈ ಸಂಸ್ಕೃತಿಯ ಪ್ರವರ್ತಕರು. ಅಲಹಾಬಾದ್, ಲಖ್ನೋ, ಕಾನ್ಪುರ್, ಫೈಜಾಬಾದ್-ಅಯೋಧ್ಯ ಹಾಗೂ ವಾರಾಣಸಿ ಈ ಸಂಸ್ಕೃತಿಯ ಪ್ರಮುಖ ಸೀಮೆಗಳು. ದೆಹಲಿ ಕೂಡ ಈ ಸಾಲಿಗೆ ಸೇರುವುದುಂಟು. ಚುಟುಕಾಗಿ ತಕ್ಷಣ ಮನಮುಟ್ಟುವಂತೆ ಹೇಳಬೇಕೆಂದರೆ ಶಹನಾಯ್ ಸಂಗೀತ ಗುರು ಉಸ್ತಾದ್ ಬಿಸ್ಮಿಲ್ಲಾಖಾನ್ ಅವರು ಈ ಸಂಸ್ಕೃತಿಯ ಪ್ರತೀಕಗಳಲ್ಲೊಬ್ಬರು.
ಶ್ರೀಮತಿ ವರ್ಷಾತಾಯಿ, ಸಂಜಯ ಬಗಾಡೆಯವರ ಪತ್ನಿ ವರ್ಸಸ್ ಮಹಾರಾಷ್ಟ್ರ ಸರ್ಕಾರದ ನಡುವಣ ವ್ಯಾಜ್ಯದ ಮೇಲ್ಮನವಿ ಸಂಬಂಧ ಸುಪ್ರೀಮ್ ಕೋರ್ಟು ಇದೇ ಏಪ್ರಿಲ್ 15ರಂದು (2025) ಉರ್ದು ಭಾಷೆ ಬಳಕೆ ಸ್ಥಾನಮಾನ ಕುರಿತು ನೀಡಿದ ತೀರ್ಪಿನ ಮುಖ್ಯಾಂಶಗಳ ಅನುವಾದವನ್ನು ಇಲ್ಲಿ ನೀಡಲಾಗಿದೆ. ಈ ಕೆಳಕಂಡ ಎಲ್ಲ ವಾಕ್ಯಗಳು-ಪ್ಯಾರಾಗಳೂ ಸುಪ್ರೀಮ್ ಕೋರ್ಟಿನ ತೀರ್ಪಿನ ಭಾಗಗಳೇ ಆಗಿವೆ:
ಭಾಷೆ ಧರ್ಮವಲ್ಲ. ಭಾಷೆ ಧರ್ಮವನ್ನು ಪ್ರತಿನಿಧಿಸುವುದೂ ಇಲ್ಲ. ಭಾಷೆ ಒಂದು ಸಮುದಾಯಕ್ಕೆ, ಒಂದು ಪ್ರದೇಶಕ್ಕೆ, ಜನತೆಗೆ ಸೇರಿದ್ದೇ ವಿನಾ ಒಂದು ಧರ್ಮಕ್ಕಲ್ಲ.
ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?
ಭಾಷೆಯು ಸಂಸ್ಕೃತಿ. ಸಮುದಾಯ ಮತ್ತು ಅದರ ಜನತೆಯ ನಾಗರಿಕತೆಯೆಡೆಗಿನ ನಡಿಗೆಯ ಅಳತೆಗೋಲು ಭಾಷೆ. ಉರ್ದು ಕೂಡ ಹಾಗೆಯೇ. ಭಾಷೆಯ ಪ್ರಾಥಮಿಕ ಉದ್ದೇಶ ಸಂಪರ್ಕ ಸಾಧನೆ. ಇದು ಎಲ್ಲ ಕಾಲಕ್ಕೂ ವಾಸ್ತವ. ನಮ್ಮ ಭಾಷೆಗಳೂ ಸೇರಿದಂತೆ ದೇಶದ ವೈವಿಧ್ಯವನ್ನು ನಾವು ಸಂಭ್ರಮಿಸಬೇಕಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಭಾಷೆಗಳಿವೆ. ನುಡಿಗಟ್ಟು ಅಥವಾ ತಾಯ್ನುಡಿ ಎಂದು ಕರೆಯಲಾಗುವ ಇತರೆ ನೂರಾರು ಭಾಷೆಗಳಿವೆ. ದೇಶದಲ್ಲಿ ಆರನೆಯ ಅತಿ ಹೆಚ್ಚು ಮಾತಾಡಲಾಗುವ ಭಾಷೆ ಉರ್ದು. ಸಂವಿಧಾನದ ಎಂಟನೆಯ ಷೆಡ್ಯೂಲಿನ 22 ಭಾಷೆಗಳ ಪೈಕಿ ಉರ್ದು ಕೂಡ ಇದೆ. ಇಂಗ್ಲಿಷ್ ಭಾರತದ ಭಾಷೆಯಲ್ಲ. ಆದರೂ ಎಂಟನೆಯ ಷೆಡ್ಯೂಲಿನಲ್ಲಿದೆ. ಭಾರತದಲ್ಲಿ ಕಂಡು ಬರುವ ಭಾಷಾ ವೈವಿಧ್ಯ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲ.
ಸಂವಿಧಾನದ 345ನೆಯ ಅನುಚ್ಛೇದ ಅಧಿಕೃತ ಭಾಷೆ ಅಥವಾ ರಾಜ್ಯಭಾಷೆಗಳನ್ನು ತೀರ್ಮಾನಿಸುವ ಅಧಿಕಾರವನ್ನು ರಾಜ್ಯ ವಿಧಾನಮಂಡಲಕ್ಕೆ ನೀಡುತ್ತದೆ.
ಉರ್ದು ಕುರಿತ ಪೂರ್ವಗ್ರಹದ ಮೂಲ ಭಾರತದ ನೆಲಕ್ಕೆ ಉರ್ದು ಅನ್ಯ ಭಾಷೆ ಎಂಬ ಭಾವನೆ. ಈ ಅಭಿಪ್ರಾಯ ಸರಿಯಲ್ಲ. ಮರಾಠಿ ಮತ್ತು ಹಿಂದಿಯಂತೆ ಉರ್ದು ಕೂಡ ಇಂಡೋ-ಆರ್ಯನ್ ಭಾಷೆ. ಈ ನೆಲದಲ್ಲಿ ಹುಟ್ಟಿದ ಭಾಷೆ. ಭಿನ್ನ ಸಂಸ್ಕೃತಿಗಳಿಗೆ ಸೇರಿದ ಜನರು ತಮ್ಮ ನಡುವೆ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಈ ನೆಲದಲ್ಲಿ ಉರ್ದು ಹುಟ್ಟಿದ ನಂತರ ಶತಮಾನಗಳ ಕಾಲ ಇಲ್ಲಿಯೇ ವಿಕಾಸ ಹೊಂದಿ ಅರಳಿತು. ಮತ್ತೆ ಮತ್ತೆ ಪರಿಷ್ಕೃತಗೊಂಡು ಹಲವಾರು ಗಣ್ಯ ಕವಿಗಳ ಮೆಚ್ಚಿನ ಭಾಷೆಯೆನಿಸಿತು.
ಹಿಂದಿ, ಉರ್ದು, ಪಂಜಾಬಿಯಂತಹ ಹಲವಾರು ಭಾಷೆಗಳು ಒಂದರೊಡನೊಂದು ಬೆಸೆದು ರೂಪುಗೊಂಡ ಭಾಷೆ ಹಿಂದುಸ್ತಾನಿ. ಈ ದೇಶದ ಬಹುದೊಡ್ಡ ಜನವರ್ಗ ಈ ಭಾಷೆಯನ್ನು ಆಡುತ್ತದೆ. 1947ರ ದೇಶವಿಭಜನೆಯಲ್ಲಿ ಪಾಕಿಸ್ತಾನ ಉರ್ದುವನ್ನು ತನ್ನ ರಾಷ್ಟ್ರಭಾಷೆಯನ್ನಾಗಿ ಘೋಷಿಸಿತು. ಮುಸಲ್ಮಾನರ ವಿರುದ್ಧದ ಸಿಟ್ಟು ಹಿಂದುಸ್ತಾನಿಯತ್ತ ತಿರುಗಿತು. ಅಂತಿಮವಾಗಿ ಹಿಂದುಸ್ತಾನಿ. ಬಲಿಪಶು ಆಯಿತು.
ಸುಪ್ರೀಮ್ ಕೋರ್ಟು ತನ್ನ ಈ ತೀರ್ಪಿಗೆ ಸಮರ್ಥನೆಯಾಗಿ Granville Austin ಅವರು ಬರೆದಿರುವ The Indian Constitution: Cornerstone of a Nation, Oxford University Press (New Delhi; 2000) ಪುಸ್ತಕದಿಂದಲೂ ಧಾರಾಳ ಉಲ್ಲೇಖಗಳನ್ನು ಮಾಡಿದೆ.
ಸಂವಿಧಾನರಚನಾ ಸಭೆಯ ಬಹುಸಂಖ್ಯೆಯ ಸದಸ್ಯರು ಹಿಂದುಸ್ತಾನಿಯನ್ನು ರಾಷ್ಟ್ರಭಾಷೆ ಮಾಡುವ ಪರವಾಗಿದ್ದರು. ಆದರೆ ಹಿಂದುಸ್ತಾನಿ ಮತ್ತು ಸಂಸ್ಕೃತ ಸಮರ್ಥಕರ ನಡುವೆ ವಾದ ಜರುಗುತ್ತದೆ. ಭಾರತದ ವಿಭಜನೆ ಎದುರಾಗಿ ಉರ್ದು ಮತ್ತು ಹಿಂದುಸ್ತಾನಿ ಎರಡೂ ತೀವ್ರ ಹಿನ್ನಡೆ ಎದುರಿಸುತ್ತವೆ. ಗ್ರ್ಯಾನ್ವಿಲ್ ಆಸ್ಟಿನ್ ಪ್ರಕಾರ- ದೇಶವಿಭಜನೆಯು ಹಿಂದುಸ್ತಾನಿಯನ್ನು ಕೊಂದೇ ಹಾಕಿತು. ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷೆಗಳ ಸ್ಥಾನಕ್ಕೂ ಅಪಾಯ ಒಡ್ಡಿತು. ಹಿಂದುಸ್ತಾನಿಯೇ ರಾಷ್ಟ್ರಭಾಷೆಯಾಗುತ್ತಿತ್ತು. ಆದರೆ ಮುಸಲ್ಮಾನರು ಮತ್ತು ಉರ್ದುವಿನ ವಿರುದ್ಧ ಭಾರೀ ಕೋಪವಿತ್ತು ಎಂದು ಕೆ.ಸಂತಾನಂ ಹೇಳಿದ್ದರು. ಮುಸಲ್ಮಾನರು ದೇಶವನ್ನು ಒಡೆದಿರುವ ಕಾರಣ ರಾಷ್ಟ್ರಭಾಷೆಯ ಸಂಗತಿಯನ್ನು ಮೊದಲಿನಿಂದ ಹೊಸದಾಗಿ ಚರ್ಚಿಸಬೇಕು ಎಂದು ಸಂವಿಧಾನ ರಚನಾ ಸಭೆಯ ಸದಸ್ಯರು ಒತ್ತಾಯಪಡಿಸಿದ್ದಾಗಿ ಹಿಂದುಸ್ತಾನ್ ಟೈಮ್ಸ್‌ನ ಲೇಖನವೊಂದು ಹೇಳುತ್ತದೆ. ಹಿಂದಿ ಉಗ್ರಗಾಮಿಗಳು ಹಿಂದೀ ಪರವಾಗಿ ಮತ್ತಷ್ಟು ಗಟ್ಟಿಯಾಗಿ ನಿಂತರು. ಪ್ರಾಂತೀಯ ಭಾಷೆಗಳನ್ನು ಆಡುವ ಜನ ಹಿಂದಿಯನ್ನು ಕಲಿಯಬೇಕು. ಪ್ರಾದೇಶಿಕ ಭಾಷೆಗಳು ಎರಡನೆಯ ಸ್ಥಾನವನ್ನು ಒಪ್ಪಿಕೊಳ್ಳಬೇಕು. ಹಿಂದಿಯ ಮೂಲಕವೇ ದೇಶದ ಏಕತೆಯನ್ನು ಸಾಧಿಸಬೇಕು ಎಂದು ಹಿಂದೀವಾಲಗಳು ನಂಬಿದರು.
ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!
ಇದೀಗ ಸಂವಿಧಾನದ 343ನೆಯ ಅನುಚ್ಛೇದದ ಪ್ರಕಾರ ಹಿಂದಿಯೇ ನಮ್ಮ ದೇಶದ ಅಧಿಕೃತ ಭಾಷೆ. ಇಂಗ್ಲಿಷ್ ನ್ನು ಅಧಿಕೃತ ಉದ್ದೇಶಗಳಿಗೆ 15 ವರ್ಷಗಳ ಕಾಲ ಬಳಸಬಹುದಿತ್ತು. ಅಂದಾಕ್ಷಣ ಹಿಂದುಸ್ತಾನಿ ಮತ್ತು ಉರ್ದು ಅಳಿದು ಹೋಗಿವೆಯೆಂದು ಅರ್ಥವಲ್ಲ. ಇದು ಸಂವಿಧಾನವನ್ನು ರೂಪಿಸಿದವರ ಉದ್ದೇಶ ಆಗಿರಲಿಲ್ಲ. ಉರ್ದುವಿನ ಪದಕೋಶದಿಂದ ಎರವಲು ಪಡೆದು ಅಧಿಕೃತ ಭಾಷೆ ಹಿಂದಿ ಸಮೃದ್ಧಿಯಾಗಬೇಕಿದೆ ಎಂದು ಜವಾಹರಲಾಲ್ ನೆಹರೂ ಒತ್ತು ಕೊಟ್ಟು ಹೇಳಿದ್ದರು. ಸಂವಿಧಾನದ 351ನೆಯ ಅನುಚ್ಛೇದದಲ್ಲಿ ಈ ಆಶಯ ವ್ಯಕ್ತವಾಗಿದೆ.
ಗಾಂಧೀ ಮತ್ತು ನೆಹರೂ ಇಬ್ಬರೂ ಹಿಂದುಸ್ತಾನಿಯ ಬಹುದೊಡ್ಡ ಪ್ರತಿಪಾದಕರಾಗಿದ್ದರು. ತಮ್ಮ ಮರಣದ ಕೆಲವೇ ದಿನಗಳ ಮುನ್ನ ಗಾಂಧೀ ಬರೆದಿದ್ದರು- ‘ಈ ಹಿಂದುಸ್ತಾನಿಯು ಸಂಸ್ಕೃತಮಯ ಹಿಂದೀ ಅಥವಾ ಪರ್ಷಿಯನೀಕೃತ ಉರ್ದು ಆಗದೆ, ಎರಡರ ಸಂತಸದ ಸಮ್ಮಿಶ್ರಣ ಆಗಬೇಕು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ನಾನಾ ಪ್ರಾದೇಶಿಕ ಭಾಷೆಗಳಿಂದ ಪದಗಳನ್ನು ಮುಕ್ತವಾಗಿ ಸೇರಿಸಿಕೊಳ್ಳಬೇಕು. ವಿದೇಶೀ ಭಾಷೆಗಳ ಪದಗಳನ್ನೂ ಅರಗಿಸಿಕೊಳ್ಳಬೇಕು. ಆದರೆ ಆ ಪದಗಳು ನಮ್ಮ ರಾಷ್ಟ್ರೀಯ ಭಾಷೆಯ ಜೊತೆಗೆ ಸಲೀಸಾಗಿ ಮತ್ತು ಸಹಜವಾಗಿ ಬೆರೆಯಬೇಕು…..ಹಿಂದಿ ಅಥವಾ ಉರ್ದುವಿಗೇ ಸೀಮಿತಗೊಳ್ಳುವುದು ಬುದ್ಧಿಮತ್ತೆ ಮತ್ತು ದೇಶಭಕ್ತಿಯ ಆಶಯದ ವಿರುದ್ಧವಾಗುತ್ತದೆ’.

ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ, ಇಂದಿಗೂ ಕೂಡ ದೇಶದ ಜನಸಾಮಾನ್ಯರು ಬಳಸುವ ಭಾಷೆಯು ಉರ್ದು ಪದಗಳಿಂದ ತುಂಬಿದೆ. ಉರ್ದು ಪದಗಳು ಮತ್ತು ಉರ್ದುವಿನಿಂದ ಹುಟ್ಟಿದ ಪದಗಳನ್ನು ಬಳಸದೆ ದೈನಂದಿನ ಹಿಂದೀ ಸಂಭಾಷಣೆ ಸಾಧ್ಯವೇ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಹಿಂದಿ ಎಂಬ ಪದವೇ ಪರ್ಷಿಯನ್ ಶಬ್ದವಾದ ‘ಹಿಂದವೀ’ಯಿಂದ ಬಂದದ್ದು. ಉರ್ದು ಕೂಡ ಸಂಸ್ಕೃತವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಿಂದ ಪದಗಳನ್ನು ಎರವಲು ಪಡೆದಿದೆ ಎಂಬುದನ್ನು ಗಮನಿಸಬೇಕಿದೆ.
ನ್ಯಾಯಾಲಯಗಳ ಭಾಷಾ ಬಳಕೆಯಲ್ಲಿ ಉರ್ದು ಪದಗಳ ಪ್ರಭಾವ ದಟ್ಟವಾಗಿದೆ. ಈ ಮಾತು ಕ್ರಿಮಿನಲ್ ಮತ್ತು ಸಿವಿಲ್ ಎರಡೂ ಕಾನೂನುಗಳಿಗೆ ಅನ್ವಯಿಸುತ್ತದೆ. ಅದಾಲತ್‌ನಿಂದ ಹಲಫ್ ನಾಮಾದಿಂದ ಪೇಶೀ ತನಕ ಭಾರತೀಯ ನ್ಯಾಯಾಲಯಗಳ ಮೇಲೆ ಉರ್ದು ಪ್ರಭಾವ ದೊಡ್ಡದಾಗಿದೆ. ಸಂವಿಧಾನದ 348ನೆಯ ಅನುಚ್ಛೇದದ ಪ್ರಕಾರ ಸುಪ್ರೀಮ್ ಕೋರ್ಟಿನ ಆಡಳಿತ ಭಾಷೆ ಇಂಗ್ಲಿಷೇ ಆಗಿದ್ದರೂ, ಇಂದಿನ ತನಕ ಈ ನ್ಯಾಯಾಲಯದಲ್ಲಿ ಹಲವು ಉರ್ದು ಪದಗಳು ಬಳಕೆಯಲ್ಲಿವೆ. ವಕಾಲತ್ ನಾಮಾ, ದಸ್ತಿ ಇತ್ಯಾದಿ ಪದಗಳು ಈ ಮಾತಿಗೆ ಉದಾಹರಣೆ.
ಸಂವಿಧಾನದ 345ನೆಯ ಅನುಚ್ಛೇದ ನೀಡಿರುವ ಅಧಿಕಾರವನ್ನು ಬಳಸಿ ನಮ್ಮ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉರ್ದುವನ್ನು ಎರಡನೆಯ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಂಡಿವೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ, ಬಿಹಾರ, ಝಾರ್ಖಂಡ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಜಮ್ಮು-ಕಾಶ್ಮೀರ ಬರುತ್ತವೆ.
ಇದನ್ನೂ ಓದಿರಿ: ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?
ಸಂವಿಧಾನದ 120ನೆಯ ಅನುಚ್ಛೇದದ ಪ್ರಕಾರ ಸಂಸತ್ತಿನಲ್ಲಿ ಹಿಂದಿ ಅಥವಾ ಇಂಗ್ಲಿಷ್ ಅಧಿಕೃತ ಭಾಷೆಗಳು. ಆದರೆ ಇದೇ ಅನುಚ್ಛೇದವು ಸ್ಪೀಕರ್-ಸಭಾಪತಿಗಳಿಗೆ ಇನ್ನೊಂದು ಅಧಿಕಾರವನ್ನೂ ಕೊಟ್ಟಿದೆ. ಅದೆಂದರೆ ಹಿಂದಿ ಮತ್ತು ಇಂಗ್ಲಿಷ್ ಬಾರದ ಸದಸ್ಯರಿಗೆ ಅವರವರ ಮಾತೃಭಾಷೆಯಲ್ಲಿ ಮಾತಾಡುವ ಅವಕಾಶ ನೀಡುವುದು. ಈ 120ನೆಯ ಅನುಚ್ಛೇದ ರಾಜ್ಯ ವಿಧಾನಮಂಡಲಗಳಿಗೂ ಅನ್ವಯಿಸುತ್ತದೆ.
ನಾವು ಉರ್ದುವನ್ನು ಟೀಕೆ ಮಾಡುತ್ತಿರುವ ಅದೇ ಸಮಯದಲ್ಲಿ ಹಿಂದಿಯನ್ನೂ ಟೀಕಿಸುತ್ತಿದ್ದೇವೆ ಎಂಬುದು ಆಸಕ್ತಿಯ ಅಂಶ. ಭಾಷಾಶಾಸ್ತ್ರಜ್ಞರು ಮತ್ತು ಸಾಹಿತ್ಯ ವಿದ್ವಾಂಸರ ಪ್ರಕಾರ ಉರ್ದು ಮತ್ತು ಹಿಂದಿ ಎರಡೂ ಒಂದೇ ಭಾಷೆಯೇ ವಿನಾ ಬೇರೆ ಬೇರೆಯಲ್ಲ.
ಉರ್ದುವನ್ನು ಪರ್ಸೋ-ಅರಬಿಕ್‌ನ ಕ್ಯಾಲಿಗ್ರಫಿ ಶೈಲಿಯಾದ Nastaliq ಲಿಪಿಯಲ್ಲಿ ಮತ್ತು ಹಿಂದಿಯನ್ನು ದೇವನಾಗರಿಯಲ್ಲಿ ಬರೆಯಲಾಗುತ್ತದೆ ಎಂಬುದು ನಿಜ. ಆದರೆ ಭಾಷೆಗಳೆಂದರೆ ಕೇವಲ ಲಿಪಿಗಳಲ್ಲ. ವಾಕ್ಯರಚನೆ, ವ್ಯಾಕರಣ ಹಾಗೂ ಧ್ವನಿಶಾಸ್ತ್ರಗಳು ಭಾಷೆಗಳನ್ನು ಒಂದಕ್ಕಿಂತ ಮತ್ತೊಂದನ್ನು ಭಿನ್ನವೂ ವಿಶಿಷ್ಟವೂ ಆಗಿಸುತ್ತವೆ. ಈ ಮೂರು ಸಂಗತಿಗಳಲ್ಲಿ ಹಿಂದಿ ಮತ್ತು ಉರ್ದು ನಡುವೆ ಸ್ಥೂಲ ಹೋಲಿಕೆಗಳಿವೆ.
ಗಣ್ಯ ಉರ್ದು ವಿದ್ವಾಂಸ ಗ್ಯಾನ್ ಚಂದ್ ಚೈನ್ ಅವರು ಹಿಂದುಸ್ತಾನಿ ಝಬಾನ್ ನಿಯತಕಾಲಿಕದ 1974ರ ಜನವರಿ-ಏಪ್ರಿಲ್ ಸಂಚಿಕೆಯಲ್ಲಿ ಹೀಗೆ ಬರೆಯುತ್ತಾರೆ- “ಉರ್ದು ಮತ್ತು ಹಿಂದಿ ಎರಡು ಪ್ರತ್ಯೇಕ ಭಾಷೆಗಳಲ್ಲ ಎಂಬುದು ಅತ್ಯಂತ ನಿಚ್ಚಳ. ಅವುಗಳನ್ನು ಎರಡು ಬೇರೆ ಬೇರೆ ಭಾಷೆಗಳೆಂದು ಕರೆಯುವುದು ನಮ್ಮನ್ನು ನಾವೇ ವಂಚಿಸಿಕೊಂಡಂತೆ ಮತ್ತು ಇತರರನ್ನೂ ವಂಚಿಸಿದಂತೆ….ಉರ್ದು ಮತ್ತು ಹಿಂದಿ ಸಾಹಿತ್ಯಗಳು ಬೇರೆ ಬೇರೆಯಾದರು ಭಾಷೆಗಳು ಬೇರೆ ಬೇರೆಯಲ್ಲ… ಉರ್ದು ಮತ್ತು ಹಿಂದಿಯನ್ನು ಭಿನ್ನ ಭಾಷೆಗಳೆಂದು ಸಂವಿಧಾನದಲ್ಲಿ ಬರೆದಿರುವುದು ರಾಜಕೀಯ ಅನಿವಾರ್ಯವೇ ವಿನಾ ಭಾಷಾ ವಾಸ್ತವ ಅಲ್ಲ”.
“ಸಂವಿಧಾನದಲ್ಲಿ ಇವೆರಡನ್ನೂ ಬೇರೆ ಬೇರೆ ಭಾಷೆಗಳೆಂದು ನಮೂದಿಸಿದ್ದಾರೆ ಹೌದು. ಹಾಗೆಂದಾಕ್ಷಣ ಈ ಪ್ರತ್ಯೇಕತೆಯ ವೈಜ್ಞಾನಿಕ ಸಿಂಧುತ್ವವನ್ನು ಭಾಷಾ ಶಾಸ್ತ್ರಜ್ಞರು ಪ್ರಶ್ನಿಸಬಾರದು ಎಂದೇನೂ ಇಲ್ಲ” ಎಂಬುದಾಗಿ ವಿದ್ವಾಂಸರಾದ ಅಮೃತ್ ರಾಯ್ (ಪ್ರೇಮ್ ಚಂದ್ ಅವರ ಮೊಮ್ಮಗ) ತಮ್ಮ ಪುಸ್ತಕದಲ್ಲಿ (The Origin and Development of Hindi/Hindavi , Oxford University Press) ಹೇಳುತ್ತಾರೆ.

ರಾಷ್ಟ್ರಭಾಷೆಯಾಗಿ ಹಿಂದಿ ಬಳಕೆಯ ಪ್ರಬಲ ಬೆಂಬಲಿಗರಾದ ರಾಮ್ ವಿಲಾಸ್ ಶರ್ಮ ತಮ್ಮ ಕೃತಿ ‘ಭಾರತ್ ಕೀ ಭಾಷಾ ಸಮಸ್ಯಾ’ದಲ್ಲಿ ಬರೆಯುತ್ತಾರೆ- “ಹಿಂದಿ-ಉರ್ದು ಎರಡು ಪ್ರತ್ಯೇಕ ಭಾಷೆಗಳಲ್ಲ; ಮೂಲಭೂತವಾಗಿ ಎರಡೂ ಒಂದೇ. ಅವುಗಳ ಸರ್ವನಾಮಪದಗಳು, ಕ್ರಿಯಾಪದಗಳು ಮತ್ತು ಮೂಲಭೂತ ಪದಕೋಶ ಒಂದೇ. ಹೀಗೆ ಸರ್ವನಾಮಪದಗಳು ಮತ್ತು ಕ್ರಿಯಾಪದಗಳು ನೂರಕ್ಕೆ ನೂರು ಒಂದೇ ಆಗಿರುವ ಇನ್ಯಾವುದೇ ಎರಡು ಭಾಷೆಗಳು ಪ್ರಪಂಚದಲ್ಲೇ ಕಾಣಸಿಗುವುದಿಲ್ಲ. ರಷ್ಯನ್ ಮತ್ತು ಯುಕ್ರೇನಿಯನ್ ಭಾಷೆಗಳು ಒಂದರಂತೆ ಮತ್ತೊಂದಿವೆ. ಆದರೆ ಉರ್ದು-ಹಿಂದಿಯಷ್ಟು ಸಾಮೀಪ್ಯ ಅವುಗಳಲ್ಲೂ ಇಲ್ಲ”.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
ಮತ್ತೊಬ್ಬ ಅದ್ವಿತೀಯ ಉರ್ದು ವಿದ್ವಾಂಸ ಮತ್ತು ಉರ್ದು ಆಂದೋಲನದ ನೇತಾರ ಅಬ್ದುಲ್ ಹಖ್ ಅವರು ತಮ್ಮ ‘ಖಾದೀಮ್ ಉರ್ದು’ ಪುಸ್ತಕದಲ್ಲಿ ಹೇಳುತ್ತಾರೆ- “ನಾವು ಇಂದು ಆಡುವ ಮತ್ತು ಬರೆಯುವ ಭಾಷೆಯನ್ನು ಉರ್ದು ಹೆಸರಿನಿಂದ ಕರೆಯಲಾಗುತ್ತಿದ್ದು, ಅದು ಹಿಂದಿಯಿಂದ ಬಂದಿದೆ ಮತ್ತು ಹಿಂದಿಯಿಂದ ರಚಿತವಾಗಿದೆ ಎಂಬುದು ಸ್ಪಷ್ಟವೇದ್ಯ”.
ಹಿಂದಿ ಮತ್ತು ಉಚ್ಚ ಹಿಂದಿಯ ನಡುವೆ ಬೇಕಾದಷ್ಟು ಅಸಾಮ್ಯತೆಗಳು (dissimilarities) ಇರುವಂತೆ ಉರ್ದು ಮತ್ತು ಉಚ್ಚ ಉರ್ದುವಿನ ನಡುವೆಯೂ ಇವೆ. ಆದರೆ ದಿನನಿತ್ಯ ಮಾತಾಡುವ ಹಿಂದಿ- ಉರ್ದು ನಡುವೆ ನಿಕಟ ಹೋಲಿಕೆಗಳಿವೆ. ಉರ್ದುವಿನ ಉನ್ನತಿ ಮತ್ತು ಅವನತಿ ಕುರಿತು ಸುದೀರ್ಘ ಚರ್ಚೆಗೆ ಇದು ಸಮಯವಲ್ಲ. ಆದರೆ ಎರಡೂ ಕಡೆಯ ಕಟ್ಟುನಿಟ್ಟುವಾದಿಗಳು ಹಿಂದಿ ಹೆಚ್ಚು ಹೆಚ್ಚು ಸಂಸ್ಕೃತಮಯ ಮತ್ತು ಉರ್ದುವನ್ನು ಹೆಚ್ಚು ಹೆಚ್ಚು ಪರ್ಷಿಯನ್ ಪದಗಳಿಂದ ತುಂಬಿದ್ದು ಎರಡರ ಸಮ್ಮಿಲನದ ಹಾದಿಯ ಅಡ್ಡಗಲ್ಲಾಯಿತು. ಈ ಬಿರುಕನ್ನು ಬಳಸಿಕೊಂಡ ವಸಾಹತುಶಾಹಿ ಅಧಿಕಾರಗಳು ಎರಡೂ ಭಾಷೆಗಳನ್ನು ಧರ್ಮದ ಆಧಾರದ ಮೇಲೆ ಒಡೆದರು. ಹಿಂದಿಯನ್ನು ಹಿಂದೂಗಳ ಮತ್ತು ಉರ್ದೂವನ್ನು ಮುಸಲ್ಮಾನರ ಭಾಷೆಯನ್ನಾಗಿ ತಿಳಿಯಲಾಗಿದೆ. ಇದು ವಾಸ್ತವದೂರ ತಿಳಿವಳಿಕೆ. ವಿವಿಧತೆಯಲ್ಲಿ ಏಕತೆ ಮತ್ತು ವಿಶ್ವಭ್ರಾತೃತ್ವದ ಪರಿಕಲ್ಪನೆಯಿಂದ ದೂರ ಸರಿದಷ್ಟೇ ದಾರುಣ.
ಭಾಷೆಯು ವಿಚಾರ ವಿನಿಮಯದ ಮಾಧ್ಯಮ. ಭಿನ್ನ ಬಗೆಯ ನೋಟಗಳು ಮತ್ತು ನಂಬಿಕೆಗಳ ಜನರನ್ನು ಪರಸ್ಪರ ಹತ್ತಿರ ತರುವ ಮಾಧ್ಯಮ, ಇಂತಹ ಮಾಧ್ಯಮವು ಜನರನ್ನು ಒಡೆಯುವುದಕ್ಕೆ ಕಾರಣ ಆಗಕೂಡದು.
ಭಾರತದ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ದೆಹಲಿಯ ವಿಚಾರಸಂಕಿರಣವೊಂದರಲ್ಲಿ ಮಾತಾಡುತ್ತ ಉರ್ದುವಿನ ಸಂರಕ್ಷಣೆಗೆ ಹೀಗೆ ತೀವ್ರ ಮನವಿ ಮಾಡಿದ್ದುಟು- “ಉರ್ದು ಭಾಷೆಗೆ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ. ಈ ಭಾಷೆಯು ಆಧ್ಯಾತ್ಮಿಕ ಉದಾತ್ತತೆಯಿಂದ ಹಿಡಿದು, ರಮ್ಯ ಭೂಮಿಜನ್ಯ ಭಾವನೆಗಳವರೆಗೆ, ಸ್ನೇಹದ ಪರಿಮಳ, ಸಂಗೀತ ಮತ್ತು ಜೀವನದ ಒಲವು, ಮಾನವೀಯ ಸಂಬಂಧಗಳ ವೈವಿಧ್ಯತೆಯನ್ನು ಜಾಗೃತಗೊಳಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಅದರ ಸಮೃದ್ಧ ಸಾಹಿತ್ಯ ಮತ್ತು ಜ್ಞಾನವು ಬದುಕಿನ ರಹಸ್ಯಗಳ ಬಗ್ಗೆ ಉನ್ನತ ಆಲೋಚನೆಗಳ ಖಜಾನೆಯಾಗಿದೆ. ಉರ್ದು ಕೇವಲ ಈ ದೇಶದ ಒಂದು ಭಾಷೆಯಲ್ಲ. ಅದು ಖುದ್ದು ಒಂದು ಸಂಸ್ಕೃತಿ ಮತ್ತು ನಾಗರಿಕತೆ ಸ್ವತಃ… ಆದರೆ ಇಂದು ಈ ಮಹಾನ್ ಸಂಸ್ಕೃತಿ ಅಳಿಯದಂತೆ ಉಳಿಸಿ, ಸಮೃದ್ಧ ಉರ್ದುವಿನ ಉಜ್ವಲ ವೈಭವದ ಮರುಸ್ಥಾಪನೆಗೆ ತುರ್ತು ಬೆಂಬಲದ ಅಗತ್ಯವಿದೆ”. Danial Latifi in UP, Economic and Political Weekly, Vol, 36, No.7 (Feb 17-23 2001)

ಡಿ ಉಮಾಪತಿ
ಹಿರಿಯ ಪತ್ರಕರ್ತರು




