ಈ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಮತ್ತು ಹೈನುಗಾರಿಕೆ ಅತಿ ಹೆಚ್ಚು ಉದ್ಯೋಗಗಳನ್ನು ನೀಡಿ, ಕೋಟ್ಯಂತರ ಕುಟುಂಬಗಳಿಗೆ ಊಟ ಉಣಿಸುತ್ತಿದೆ. ಆದ್ದರಿಂದಲೇ, ಈ ವಲಯಗಳನ್ನು ವಿದೇಶಗಳೊಂದಿಗೆ ನಡೆಯುವ ಮುಕ್ತ ವ್ಯಾಪಾರದಿಂದ ರಕ್ಷಿಸುವ ನಿಲುವನ್ನು ಭಾರತವು ಮೊದಲಿನಿಂದಲೂ ಕಾಯ್ದುಕೊಂಡು ಬಂದಿದೆ. ಆದರೀಗ, ಭಾರತದ ಬಡ ರೈತರನ್ನು ಅಮೆರಿಕದ ಬಲಾಢ್ಯ ರೈತರೊಂದಿಗೆ ಪೈಪೋಟಿಗೆ ಇಳಿಸ ಹೊರಟಿರುವುದು ದೇಶದ ಆಂತರಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಎಂದಿಗೂ ಒಳ್ಳೆಯದಲ್ಲ.
ಇದೇ ಫೆಬ್ರುವರಿ 2ರಂದು ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರದ ಒಪ್ಪಂದವಾಗಿದ್ದು, ಕೃಷಿ ಸೇರಿದಂತೆ ಇನ್ನೂ ಹಲವು ವಲಯಗಳ ಉತ್ಪನ್ನಗಳನ್ನು ಈ ಒಪ್ಪಂದವು ಒಳಗೊಂಡಿದೆ ಎನ್ನಲಾಗಿದೆ. ಈತನಕ ಭಾರತವು ಕೃಷಿಯನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ನೋಡದೆ, ಸಾಮಾಜಿಕ ಭದ್ರತೆಯಾಗಿಯೂ ಪರಿಗಣಿಸಿದ ಕಾರಣ ಜಾಗತಿಕ ಮುಕ್ತ ಮಾರುಕಟ್ಟೆಗಳಿಂದ ಹೊರಗಿಡಲಾಗಿತ್ತು. ಆದರೆ, ಈ ಹೊಸ ಒಪ್ಪಂದವು ಕೃಷಿ ಮತ್ತು ಹೈನುಗಾರಿಕೆಯನ್ನು ಅಮೆರಿಕ ಮಾರುಕಟ್ಟೆಗೆ ತೆರೆದಿಟ್ಟಿರುವ ಸೂಚನೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಅದು ನಮ್ಮ ರೈತರ ಹಿತವನ್ನು ರಕ್ಷಿಸುತ್ತದೆಯೇ ಎಂಬ ಕಳಕಳಿ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಒಪ್ಪಂದವು ಸಫಲವಾಗಿದ್ದು, ಭಾರತಕ್ಕೆ ವಿಧಿಸಿದ್ದ ಪರಸ್ಪರ ಸುಂಕವನ್ನು 25% ರಿಂದ 18%ಗೆ ಇಳಿಸಿರುವುದಾಗಿ ಮೊದಲು ಘೋಷಿಸಿರುತ್ತಾರೆ. ಭಾರತವು ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸುವ, ಇಂಧನ ಸೇರಿದಂತೆ 500 ಬಿಲಿಯನ್ ಡಾಲರ್‌ಗಳಷ್ಟು (ಸುಮಾರು 42 ಲಕ್ಷ ಕೋಟಿ ರೂಗಳು) ಅಮೆರಿಕ ಸರಕುಗಳನ್ನು ಖರೀದಿಸುವ ಹಾಗೂ ಈ ಸರಕುಗಳ ಮೇಲೆ ಸುಂಕಗಳನ್ನು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುವಂತಹ ಹಲವಾರು ಕ್ರಮಗಳಿಗೆ ಒಪ್ಪಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಬರೆದುಕೊಂಡಿರುವುದಾಗಿ ಫೆಬ್ರುವರಿ 3ರ The Hindu ಪತ್ರಿಕೆ ತಿಳಿಸಿದೆ. ಮೋದಿಯವರು ಟ್ರಂಪ್ ಹೇಳಿರುವ ಯಾವುದೇ ಷರತ್ತುಗಳ ಬಗ್ಗೆ ಪ್ರಸ್ತಾಪಿಸಿಲ್ಲ ಅಥವಾ ವ್ಯಪಾರ ಒಪ್ಪಂದದ ವಿವರಗಳನ್ನು ನೀಡದೇ, “ಭಾರತದ ಉತ್ಪನ್ನಗಳಿಗೆ ಸುಂಕವನ್ನು 18%ಕ್ಕೆ ಇಳಿಸಿರುವುದು ಕೇಳಿ ಸಂತೋಷವಾಗಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 140 ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು” ಎಂದಷ್ಟೇ ಪೋಸ್ಟ್ ಮಾಡಿರುವುದಾಗಿ ಇದೇ ಪತ್ರಿಕೆಯು ತಿಳಿಸಿದೆ.
ಅಮೆರಿಕದ ಕೃಷಿ ಸಚಿವೆ ಬ್ರೂಕ್ ರೋಲಿನ್ಸ್ ಅವರು, “ಹೊಸ ಅಮೆರಿಕ-ಭಾರತ ಒಪ್ಪಂದದಂತೆ ಅಲ್ಲಿಯ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಭಾರತದ ಬೃಹತ್ ಮಾರುಕಟ್ಟೆಗೆ ರಪ್ತು ಮಾಡಲಿರುವ ಕಾರಣ ಬೆಲೆಗಳು ಏರಿ, ಅಮೆರಿಕದ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಹಣ ಹರಿದು ಬರಲಿದೆ” ಎಂದು ಟ್ವೀಟ್ ಮಾಡಿದ್ದಾರೆ. ಜಗತ್ತಿನ ಎಲ್ಲಾ ಅನ್ನದಾತರಿಗೂ ಒಳ್ಳೆಯದಾಗುವುದು ಸಂತೋಷವೇ ಸರಿ. ಹಾಗೆಯೇ ಭಾರತದ ಅನ್ನದಾತರಿಗೂ ಸಹ ಈ ಒಪ್ಪಂದದಿಂದ ಒಳ್ಳೆಯದಾಗಬೇಕೆಂಬ ಕಳಕಳಿಯ ಅಗತ್ಯವಿದೆ. ಕೃಷಿ ಸಚಿವೆ ‘2024ರಲ್ಲಿ ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಕೊರತೆಯು 1.3 ಬಿಲಿಯನ್ ಡಾಲರ್ ಇದ್ದು, ಅದನ್ನು ಈ ಹೊಸ ಒಪ್ಪಂದವು ನೀಗಲಿದೆ’ ಎಂದು ಇದೇ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಇನ್ನು ಮುಂದೆ ಭಾರತವು ರಪ್ತು ಮಾಡುವುದಕ್ಕಿಂತಲೂ ಹೆಚ್ಚು ಕೃಷಿ ಸರಕುಗಳನ್ನು ಅಮೆರಿಕದಿಂದ ತರಿಸಿಕೊಳ್ಳುತ್ತದೆ ಎಂದಾಯಿತು.
ಇವೆಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಒಪ್ಪಂದದ ವಿವರವನ್ನೇನೂ ಹೇಳದ ಅವರು, ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯಾಗಿಸಿಕೊಂಡಿರುವ ಈ ಒಪ್ಪಂದವು ದೇಶದ 140 ಕೋಟಿ ಜನರಿಗೂ ಅನುಕೂಲವಾಗಲಿದೆ. ನಮ್ಮೊಂದಿಗೆ ಸ್ಪರ್ಧೆಯಲ್ಲಿರುವ ನೆರೆಯ ದೇಶಗಳಿಗೆ ಹೋಲಿಸಿದರೆ ಈ ಒಪ್ಪಂದವು ಅತ್ಯುತ್ತಮವಾಗಿದೆ. ಹಾಗೂ ಕೃಷಿ-ಡೈರಿ ವಲಯಗಳನ್ನು ರಕ್ಷಿಸಲಾಗಿದೆ ಎಂಬುದು ಅವರ ಹೇಳಿಕೆಯ ಮುಖ್ಯ ಸಾರಾಂಶವಾಗಿದೆ.
ನಂತರ, ಫೆ.6ರಂದು, ಶ್ವೇತಭವನದಿಂದ ಎರಡೂ ರಾಷ್ಟ್ರಗಳ ಜಂಟಿ ಹೇಳಿಕೆಯು ಬಿಡುಗಡೆಯಾಗಿದೆ. ‘ಭಾರತವು ಅಮೆರಿಕದ ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳಾದ ಮದ್ಯದ ಉಪಉತ್ಪನ್ನ ಧಾನ್ಯಗಳು, ಪಶು ಆಹಾರದ ಕೆಂಪು ಜೋಳ, ಒಣ ಹಣ್ಣುಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಸೇರಿದಂತೆ ಇನ್ನೂ ಅನೇಕ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಲು ಅಥವಾ ಸಂಪೂರ್ಣವಾಗಿ ತೆಗೆದುಹಾಕಲು ಒಪ್ಪಿಕೊಂಡಿದೆ’ ಎಂದು ಹೇಳಲಾಗಿದೆ. (ದಿ ಎಕನಾಮಿಕ್ ಟೈಮ್ಸ್ – ಫೆಬ್ರುವರಿ 7, 2026). ಈ ಜಂಟಿ ಹೇಳಿಕೆಯಲ್ಲಿನ ‘ವ್ಯಾಪಕ ಶ್ರೇಣಿಯ’ ಅಥವಾ ಅನೇಕ ಉತ್ಪನ್ನಗಳು’, ‘ಸುಂಕವನ್ನು ಕಡಿತಗೊಳಿಸುವ ಅಥವಾ ಸಂಪೂರ್ಣವಾಗಿ ತೆಗೆದುಹಾಕುವ’ ಎಂಬ ನಿಖರತೆ ಇಲ್ಲದ ಪದಗಳು ಅಪಾಯಕಾರಿಯಾಗಿದ್ದು, ಮುಂದೆ ಅಮೆರಿಕ ತನಗಿಷ್ಟ ಬಂದ ಸರಕುಗಳನ್ನು ಸೇರಿಸಲು ಮತ್ತು ಶೂನ್ಯ ಸುಂಕದ ಬೇಡಿಕೆ ಮುಂದಿಡಲು ಅವಕಾಶ ಕಲ್ಪಿಸಿದೆ.
ಸದ್ಯಕ್ಕೆ ಇವಿಷ್ಟೇ ಅಧಿಕೃತ ಮಾಹಿತಿಗಳಿದ್ದು, ಇವುಗಳ ಹಿನ್ನೆಲೆಯಲ್ಲಿ ಈ ಹೊಸ ಒಪ್ಪಂದವನ್ನು ಅವಲೋಕಿಸುವುದು ಅನಿವಾರ್ಯವಾಗಿದೆ.

ಭಾರತದ ಪ್ರಧಾನ ಮಂತ್ರಿಗಳು ಫೆಬ್ರುವರಿ 2025ರಲ್ಲಿ ವಾಷಿಂಗ್‍ಟನ್‌ಗೆ ಭೇಟಿ ನೀಡಿದಾಗ ಈ ಒಪ್ಪಂದದ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಎಪ್ರಿಲ್ 2025ರಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾರತಕ್ಕೆ ಬಂದಾಗ ಒಪ್ಪಂದದ ನಿಬಂಧನೆಗಳು ಸುಮಾರಾಗಿ ಅಂತಿಮಗೊಂಡು, ಜುಲೈ 9ರೊಳಗಾಗಿ ಸಹಿ ಆಗುವುದೆಂದು ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ಅಮೆರಿಕವು ತನ್ನ ಕೃಷಿ ರಫ್ತುಗಳನ್ನು ಹೆಚ್ಚಿಸಲು ಸುಂಕ ಇಳಿಕೆ ಮತ್ತು ಡೈರಿ, ಸೋಯಾಬೀನ್, ಗೋಧಿ, ಜೋಳ, ಹತ್ತಿ ಮತ್ತು ಸೇಬುಗಳಂತಹ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯ ಬೇಡಿಕೆ ಇಡುತ್ತದೆ. ಜುಲೈನಲ್ಲಿ ಅಮೆರಿಕ ಭೇಟಿ ನೀಡಿದ ಭಾರತದ ನಿಯೋಗವು ಈ ಬೇಡಿಕೆಯನ್ನು ಒಪ್ಪದೆ, ರಾಷ್ಟ್ರೀಯ ಹಿತಾಸಕ್ತಿ ಮುಖ್ಯವೆಂದು ಹೇಳಿದ್ದು ಸೂಕ್ತವಾಗಿತ್ತು. ಆದರೆ, ಅಂತಿಮಗೊಂಡಿರುವ ಒಪ್ಪಂದದಲ್ಲಿ ಈ ಸರಕುಗಳು ಇರಬಹುದೆಂದು ಅಮೆರಿಕ ನಾಯಕರ ಅನೇಕ ಹೇಳಿಕೆಗಳು ಸೂಚಿಸುತ್ತಿವೆ. ಅಲ್ಲಿನ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ CNBCಗೆ ನೀಡಿದ ಸಂದರ್ಶನದಲ್ಲಿ ಭಾರತದ ಕೆಲವು ಕೃಷಿ ಸಂರಕ್ಷಿತ ವಲಯಗಳಿಗೆ ಮಾರುಕಟ್ಟೆ ಪ್ರವೇಶ ಪಡೆಯಲು ಅಮೆರಿಕ ತನ್ನ ಪ್ರಯತ್ನವನ್ನು ಮುಂದುವರೆಸಿದೆ ಎಂದು ಹೇಳಿರುವುದನ್ನು ಫೆಬ್ರುವರಿ 3ರ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಂದರೆ, ಸೋಯಾಬೀನ್, ಗೋಧಿ, ಜೋಳ ಮತ್ತು ಡೈರಿಯಂತಹ ರಕ್ಷಿತ ಪದಾರ್ಥಗಳ ಮೇಲೆ ಅಮೆರಿಕ ಇನ್ನೂ ಕಣ್ಣಿಟ್ಟಿದೆ ಎಂದಾಯಿತು.
ಒಪ್ಪಂದದ ಪ್ರಾರಂಭ ಮತ್ತು ಸಮ್ಮತಿಯ ನಡುವೆ, ಅಮೆರಿಕದ ವಿದೇಶಾಂಗ ನೀತಿಯಿಂದಾಗಿ ಭೌಗೊಳಿಕ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ಜರುಗಿ, ಭಾರತವೂ ಸಹ ಇದರಲ್ಲಿ ಸಿಲುಕಿಕೊಳ್ಳುತ್ತದೆ. ರಷ್ಯಾ, ಇರಾನ್‍ಗಳಿಂದ ತೈಲ ಖರೀದಿಸಬಾರದೆಂಬ ಷರತ್ತು, ಭಾರತದ ರಫ್ತು ಸರಕುಗಳಿಗೆ ಸುಂಕದ ಹೆಚ್ಚಳ, ಜೊತೆಗೆ ದಂಡದ ಸುಂಕ ಹೇರುವ ಬೆದರಿಕೆ, ನಾನೇ ಆಪರೇಷನ್ ಸಿಂಧೂರ್ ನಿಲ್ಲಿಸಿದ್ದೆಂಬ ಹೇಳಿಕೆಗಳು, ಪಾಕಿಸ್ತಾನಕ್ಕೆ ಹೆಚ್ಚಿನ ಬೆಂಬಲ – ಇತ್ಯಾದಿಗಳ ಮೂಲಕ ಟ್ರಂಪ್ ಭಾರತದ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಾರೆ. ಜುಲೈ 2025ರಲ್ಲಿ, ಟ್ರಂಪ್ 25% ಸುಂಕವನ್ನು ಹೆಚ್ಚಿಸಿದ್ದಲ್ಲದೆ, ರಷ್ಯಾದಿಂದ ತೈಲ ಖರೀದಿಸಿದರೆ ಮತ್ತೆ ದಂಡದ ಸುಂಕವನ್ನು ಹಾಕುವುದಾಗಿ ಎಚ್ಚರಿಕೆ ನೀಡುತ್ತಾರೆ. ಈ ಹೆಚ್ಚುವರಿ 25% ದಂಡದ ಸುಂಕವು (ಪುನಿಟಿವ್ ಟ್ಯಾರಿಫ್) ಆಗಸ್ಟ್ 7ರಂದು ಕಾರ್ಯಚರಣೆಗೆ ಬಂದು, ಭಾರತದ ಸರಕುಗಳ ಮೇಲೆ ಈಗಾಗಲೇ ಹೆಚ್ಚಿಸಿದ್ದ 25% ರೆಸಿಪ್ರೊಕಲ್ ಟ್ಯಾರಿಫ್ ಅಥವಾ ಪರಸ್ಪರ ಸುಂಕವೂ ಸೇರಿ, ಒಟ್ಟು 50% ಸುಂಕವು ಭಾರತದ ಹೆಗಲಿಗೆ ಬಿಳುತ್ತದೆ. ಈ ಮಧ್ಯೆ, ಅಮೆರಿಕ ಇಸ್ರೇಲ್ ಜೊತೆಗೂಡಿ ನಡೆಸುವ ಇರಾನ್ ಮೇಲಿನ ದಾಳಿ, ವೆನಿಜುವೆಲಾ ಮೇಲಿನ ದಾಳಿ, ಮತ್ತು ಗ್ರೀನ್ ಲ್ಯಾಂಡ್ ಬೇಕೆಂಬ ಹಟ, ಇರಾನ್ ಮೇಲೆ ಮತ್ತೆ ದಾಳಿಯ ಬೆದರಿಕೆ – ಇತ್ಯಾದಿ ಟ್ರಂಪ್‍ರವರ ಹುಚ್ಚಾಟಗಳು ಭಾರತಕ್ಕಷ್ಟೇ ಅಲ್ಲದೆ ಭೌಗೋಳಿಕ ರಾಜಕೀಯದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.
ಈ ಎಲ್ಲಾ ಆಗುಹೋಗುಗಳ ನಡುವೆಯೇ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೆರಿಕ ಮತ್ತು ಭಾರತದ ಈ ವ್ಯಾಪಾರ ಒಪ್ಪಂದದ ಮಾತುಕತೆಗಳು ಮತ್ತೆ ಚಾಲನೆಗೊಳ್ಳುತ್ತವೆ. ಭಾರತವು ರಷ್ಯಾದ ತೈಲ ಖರೀದಿಯನ್ನು ಕಡಿತಗೊಳಿಸಿದ್ದಲ್ಲದೆ, ಇರಾನ್ ಜೊತೆಯ ವ್ಯಾಪಾರ ಮತ್ತು ಹೂಡಿಕೆಗಳನ್ನು ಕನಿಷ್ಠಗೊಳಿಸುತ್ತದೆ. ನಂತರದಲ್ಲಿ ಮತ್ತಷ್ಟು ಸಭೆಗಳು ನಡೆದು, ಇದೇ 2ನೇ ಫೆಬ್ರುವರಿ ಮಧ್ಯಂತರ ಒಪ್ಪಂದದ ಘೋಷಣೆಯಾಗಿದೆ. ಬರುವ ಮಾರ್ಚ್‍ನಲ್ಲಿ ಅಮೆರಿಕ-ಭಾರತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಆಗಬಹುದೆನ್ನಲಾಗಿದೆ.
ವಿದೇಶಿ ವ್ಯಾಪಾರ ವ್ಯವಹಾರಗಳು ಎಲ್ಲಾ ದೇಶಗಳಿಗೂ ಅನಿವಾರ್ಯವಾದರೂ, ಅದನ್ನು ಒಪ್ಪುವಾಗ ಎರಡೂ ದೇಶದ ಹಿತರಕ್ಷಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಮೊದಲಿದ್ದ 13.5% ಸುಂಕವನ್ನು ಶೂನ್ಯಕ್ಕೆ ಇಳಿಸಿ, ಕೇವಲ 7% ಲಾಭಕ್ಕೆ 13.5% ಸುಂಕವನ್ನು ಬಿಟ್ಟುಕೊಟ್ಟಿದ್ದು ಸರಿಯೇ ಎಂಬ ಪ್ರಶ್ನೆಗಳಿವೆ. ಇಲ್ಲಿ, ಯಾರು ಎಷ್ಟು ಕಳೆದುಕೊಂಡರು ಎನ್ನುವುದಕ್ಕಿಂತ, ಮಾರುಕಟ್ಟೆಯ ವಿಸ್ತರಣೆ ಎಷ್ಟಾಯಿತು ಎನ್ನುವುದು ಮುಖ್ಯವೆನ್ನುತ್ತಾರೆ ಆರ್ಥಿಕ ತಜ್ಞರು. ವಿಯೆಟ್ನಾಂ (20% ಸುಂಕ) ಮತ್ತು ಚೀನಾ (30-35% ಸುಂಕ) ದೇಶಗಳಿಗೆ ಹೋಲಿಸಿದಾಗ, ಭಾರತದ ಈಗಿನ 18% ದರವು ಕಡಿಮೆ ಇರುವ ಕಾರಣ, ಅದು ಇಲ್ಲಿನ ವಸ್ತುಗಳಿಗೆ ಬೇಡಿಕೆ ಹೆಚ್ಚಿಸುತ್ತದೆ. ಇದು ಮಾರಾಟದ ಸರಕುಗಳ ಗಾತ್ರವನ್ನು ಹೆಚ್ಚಿಸುವುದರಿಂದ ಭಾರತದ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆ ದೊರೆತು, ಆದಾಯವೂ ಹೆಚ್ಚುತ್ತದೆ ಎನ್ನುವುದು ತಜ್ಞರ ತರ್ಕ. ಇದನ್ನು ಸರಿ ಅಂದುಕೊಂಡರೂ, ಕೃಷಿ ಮತ್ತು ಹೈನುಗಾರಿಕೆ ವಲಯಗಳನ್ನು ಮುಕ್ತ ಮಾರುಕಟ್ಟೆಗೆ ಒಡ್ಡಿದರೆ ದೊಡ್ಡ ಆಪತ್ತು ಕಾದಿರುವುದೂ ಸಹ ಅಷ್ಟೇ ದಿಟವಿದೆ. ಹೆಚ್ಚಿನ ಆಹಾರ ಪದಾರ್ಥಗಳು ಒಳಬಂದಷ್ಟೂ, ಹೆಚ್ಚಿನ ನಿರುದ್ಯೋಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
‘ಕೃಷಿ ಮತ್ತು ಡೈರಿ ವಲಯಗಳನ್ನು ಒಪ್ಪಂದದಿಂದ ರಕ್ಷಿಸಲಾಗಿದೆ’ ಎಂದು ಪದೇ ಪದೇ ಹೇಳುತ್ತಿರುವ ಪಿಯೂಷ್ ಗೋಯಲ್ ಅವರ ಮಾತುಗಳನ್ನು ಶ್ವೇತಭವನದ ಜಂಟಿ ಹೇಳಿಕೆಯು ಪುಷ್ಟೀಕರಿಸುತ್ತಿಲ್ಲ. ಬದಲಿಗೆ, ಜಂಟಿ ಹೇಳಿಕೆಯಲ್ಲಿ ವಿಸ್ತಾರ ಶ್ರೇಣಿಯ ಆಹಾರ ಮತ್ತು ಕೃಷಿ ಪದಾರ್ಥಗಳನ್ನು ಭಾರತ ಖರೀದಿಸಲಿದೆ ಎಂದಿರುವುದು, ಅಲ್ಲಿನ ಕೃಷಿ ಸಚಿವೆಯ ಮೊದಲಿನ ಹೇಳಿಕೆಯನ್ನೇ ಪುಷ್ಟೀಕರಿಸುತ್ತಿದೆ. ಈ ವಿರೋಧಾಭಾಸಗಳು ಯಾವ ವಸ್ತುಗಳನ್ನು ಖರೀದಿಸುತ್ತೇವೆ ಎಂದು ನಿರ್ಧರಿಸುವ ಮೊದಲೇ ಒಪ್ಪಂದಕ್ಕೆ ಸಮ್ಮತಿ ನೀಡಲಾಗಿದೆಯೇ ಅಥವಾ ವರ್ಷದ ಮಾತುಕತೆಗಳ ನಂತರವೂ ಎರಡೂ ಪಕ್ಷಗಳು ಒಪ್ಪಂದವನ್ನು ತಮಗಿಷ್ಟ ಬಂದಂತೆ ಅರ್ಥೈಸಿಕೊಂಡಿವೆಯೇ ಎಂಬ ಅನುಮಾನ ಹುಟ್ಟಿಸುತ್ತವೆ. ನಿಖರತೆ ಇಲ್ಲದ ಒಪ್ಪಂದವನ್ನು ಸಫಲವಾಯಿತೆಂದು ಹಾಡಿ ಹೊಗಳುತ್ತಾ ಹಾರ ತುರಾಯಿಗಳೊಂದಿಗೆ ಡಂಗುರ ಸಾರುತ್ತಿರುವುದೇಕೆ?!
ಕೇವಲ ಕೃಷಿ ಮತ್ತು ಡೈರಿ ವಲಯಕ್ಕೆ ರಕ್ಷಣೆ ಇದೆ ಎಂಬ ಹೇಳಿಕೆ ನೀಡಿದರೆ ಕಥೆ ಮುಗಿಯದು. ಒಪ್ಪಂದದಲ್ಲಿ ಕೃಷಿ ಮತ್ತು ಹೈನುಗಾರಿಕೆಯ (ಮೌಲ್ಯವರ್ಧಿತ ಪದಾರ್ಥಗಳೂ ಸೇರಿದಂತೆ) ಯಾವ ಯಾವ ಸರಕುಗಳನ್ನು ಒಳಗೊಂಡಿದೆ? ಅದು ಭಾರತದ ಕೆಂಪು ಪಟ್ಟಿಯ ನಿಯಮಗಳನ್ನು ದಾಟಿವೆಯೇ? ಪ್ರತಿ ಸರಕಿನ ಗಾತ್ರದ ಮಿತಿ, ಕನಿಷ್ಠ ಆಮದು ಬೆಲೆ, ಅಂತಿಮ ಮಾರುಕಟ್ಟೆ ಬೆಲೆ (ಲ್ಯಾಂಡೆಡ್), ಮತ್ತು ಸುಂಕದ ಅನ್ವಯ, GM ತಳಿಗಳ ತಡೆ, ಸ್ವದೇಶಿ ಬೀಜಗಳ ಸಂರಕ್ಷಣೆ, ಸಸ್ಯಹಾರಿ ಪದಾರ್ಥಗಳ ನಿಯಮ – ಇತ್ಯಾದಿಗಳಿಗೆ ಸಂಬಂಧಿಸಿದ ಷರತ್ತುಗಳನ್ನು ಜನರಿಗೆ ಮುಖ್ಯವಾಗಿ ರೈತರಿಗೆ ತಿಳಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಭಾರತವು ತನ್ನ ಕೃಷಿ ನಿಲುವನ್ನು ಕಟ್ಟುನಿಟ್ಟಾಗಿ ಕಾಪಿಡುವುದು ಬಹು ಮುಖ್ಯವೆಂದು GTRI (ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್) ಈ ಮೊದಲೇ ಎಚ್ಚರಿಸಿರುವುದನ್ನು ದಿ ಟೈಮ್ಸ್ ಆಫ್ ಇಂಡಿಯಾ (ಜುಲೈ 1, 2025) ವರದಿ ಮಾಡಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲಿನ ಅಮದು ಸುಂಕವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಆಹಾರ ಭದ್ರತೆಗೆ ಅಪಾಯಕಾರಿ, ಭಾರತ-ಅಮೆರಿಕ ಮುಕ್ತ ವ್ಯಾಪಾರದ ಒಪ್ಪಂದದಡಿ (FTA)ಕೃಷಿ ಸುಂಕಗಳನ್ನು ಕಾಯಂ ಆಗಿ ಕಡಿತಗೊಳಿಸುವುದು ಮುಂದೆ ಸರಿಪಡಿಸಲಾಗದ ಪ್ರಮಾದವಾಗುತ್ತದೆ ಹಾಗೂ ಇದು ಕಾರ್ಯತಂತ್ರದ ದೃಷ್ಟಿಯಿಂದ ಸೂಕ್ತವಾಗಿಲ್ಲ ಎನ್ನುವ GTRI ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಅಮೆರಿಕದಿಂದ ಅಗ್ಗದ ಕೃಷಿ ಉತ್ಪನ್ನಗಳು ಭಾರತಕ್ಕೆ ಸುಲಭವಾಗಿ ಲಗ್ಗೆ ಇಟ್ಟಲ್ಲಿ, ಸೂಕ್ತ ಬೆಲೆಗಳು ಸಿಗದೆ ಇಲ್ಲಿನ ರೈತರು ತಮ್ಮ ಬೆಳೆಗಳನ್ನು ರಸ್ತೆಗೆ ಸುರಿಯಬೇಕಾಗುತ್ತದೆ. ಈ ವ್ಯಾಪಾರ ನೀತಿಯು ರೈತರನ್ನು ಕೃಷಿಯಿಂದ ವ್ಯವಸ್ಥಿತವಾಗಿ ಹೊರದಬ್ಬುವ ಕಾರಣ ಭವಿಷ್ಯದಲ್ಲಿ ಭಾರತವು ತನ್ನ ಬೃಹತ್ ಜನಸಂಖ್ಯೆಯ ಹೊಟ್ಟೆ ತುಂಬಿಸಲು ಬೇರೆ ದೇಶಗಳನ್ನು ಅವಲಂಬಿಸಬೇಕಾಗಬಹುದು. ದೊಡ್ಡ ಮೊತ್ತದ ಸಬ್ಸಿಡಿ ಪಡೆಯುವ ಅಮೆರಿಕದ ರೈತರು ಬೃಹತ್ ಉದ್ಯಮಗಳಾಗಿ ಕೃಷಿಯನ್ನು ನಡೆಸುತ್ತಿರುವ ಕಾರಣ ಅತಿ ಕಡಿಮೆ ವೆಚ್ಚದಲ್ಲಿ ಬೆಳಗಳನ್ನು ಉತ್ಪಾದಿಸುತ್ತಾರೆ. ಆ ಉತ್ಪನ್ನಗಳ ಖರೀದಿಗೆ ಭಾರತವು ಯಾವ ಸುಂಕವನ್ನು ವಿಧಿಸದ ಕಾರಣ, ಅವು ಭಾರತದಲ್ಲಿ ಬಹು ಅಗ್ಗವಾಗಿ ದೊರೆತು ನಮ್ಮ ಬಡ ರೈತರು ಅವರೊಂದಿಗೆ ಸ್ಫರ್ಧಿಸುವುದು ಅಸಾಧ್ಯವಾಗುತ್ತದೆ. ಅಲ್ಲಿನ ಬೃಹತ್ ಫಾರ್ಮ್‍ಗಳಿಂದ ಬರಬಹುದಾದ ಅಗ್ಗದ ಹಾಲು ಉತ್ಪನ್ನಗಳು ಇಲ್ಲಿನ ಕ್ಷೀರ ಕ್ರಾಂತಿಯನ್ನು ಅಣಕಿಸುತ್ತವೆ. ಅಲ್ಲಿ, ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬೀನ್ ಎಣ್ಣೆ, ಜೋಳ ಇತ್ಯಾದಿಗಳು ಹರಿದು ಬಂದಲ್ಲಿ, ಇಲ್ಲಿ ಎಣ್ಣೆಕಾಳುಗಳು ಮತ್ತು ಜೋಳ ಬೆಳೆಯುವ ರೈತರ ಗತಿಯೇನು? ಹೆಚ್ಚು ಸುಂಕ ವಿಧಿಸಿದ ಅಮೆರಿಕಕ್ಕೆ ಪಾಠ ಕಲಿಸಲು ಚೀನಾ ಸುಮಾರು 21 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಕೃಷಿ ಹಾಗೂ ಆಹಾರ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿದೆ. ಇದರಿಂದ ಅಮೆರಿಕದ ಸೋಯಾಬೀನ್, ಜೋಳ, ಗೋಧಿ, ಹಣ್ಣು, ಡೈರಿ ಪದಾರ್ಥ, ಮಾಂಸ ಇತ್ಯಾದಿಗಳು ಬಿಕರಿಯಾಗದೆ ಅಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ (ದಿ ಎಕನಾಮಿಕ್ಸ್ ಟೈಮ್ಸ್, ಎಪ್ರಿಲ್ 7, 2025). ಅಲ್ಲಿನ ಸಂಕಷ್ಟವನ್ನು ಟ್ರಂಪ್‍ರವರು ಇಲ್ಲಿನ ರೈತರಿಗೆ ವರ್ಗಾಯಿಸುವ ಹುನ್ನಾರ ಹೂಡಿದ್ದಾರೆ.
ಅಮೆರಿಕದ ಕಂಪೆನಿಗಳು ಕೃಷಿ ಮತ್ತು ಡೈರಿ ಮಾರುಕಟ್ಟೆಯನ್ನು ಪ್ರವೇಶಿಸಲು ಈಗಾಗಲೇ ತೆರೆ-ಮರೆಯಲ್ಲಿ ಪ್ರಯತ್ನಗಳನ್ನು ನಡೆಸಿದ್ದು, ಲಾಜಿಸ್ಟಿಕ್ಸ್ ಮತ್ತು ಕೋಲ್ಡ್ ಸ್ಟೋರೇಜ್ ಮೇಲೆ ಹೂಡಿಕೆ ಮಾಡಲು ಬೃಹತ್ ಕಂಪನಿಗಳು ಮುಂದಾಗಿರುವ ಮತ್ತು ಡೈರಿ ವಲಯದಲ್ಲಿಯೂ ಮೌಲ್ಯವರ್ಧಿತ ಉತ್ಪನ್ನಗಳ ಹೆಸರಿನಲ್ಲಿ ಹಿತ್ತಿಲ ಬಾಗಿಲು ಪ್ರವೇಶ ನೀಡುತ್ತಿರುವ ಬಗ್ಗೆ ವರದಿಯಾಗಿದೆ. ಭಾರತದ ಬೀಜ ಕಾಯ್ದೆ 2026ರ ಕಾಯ್ದೆಯನ್ನು ಅಮೆರಿಕ ಬೀಜ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ಮಾಡಲೆಂದೇ ತಂದಿರುವುದಾಗಿದೆ ಎಂದು ರೈತ ಸಂಘಟನೆಗಳು ಮತ್ತು ಕೆಲವು ಕೃಷಿ ಆರ್ಥಿಕ ತಜ್ಞರು ಮಾಡಿದ ಗಂಭೀರ ಆರೋಪಗಳನ್ನು ನೆನಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ ಮುಸ್ಲಿಮರ ಮೇಲೆ ಅಸ್ಸಾಂ ಸಿಎಂ ಗುರಿ ಇಟ್ಟಿರುವ AI ಚಿತ್ರ ಹಂಚಿಕೊಂಡ ಬಿಜೆಪಿ; ನರಮೇಧಕ್ಕೆ ಕರೆಯೇ?
ಈ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಮತ್ತು ಹೈನುಗಾರಿಕೆ ಅತಿ ಹೆಚ್ಚು ಉದ್ಯೋಗಗಳನ್ನು ನೀಡಿ, ಕೋಟ್ಯಂತರ ಕುಟುಂಬಗಳಿಗೆ ಊಟ ಉಣಿಸುತ್ತಿದೆ. ಆದ್ದರಿಂದಲೇ, ಈ ವಲಯಗಳನ್ನು ವಿದೇಶಗಳೊಂದಿಗೆ ನಡೆಯುವ ಮುಕ್ತ ವ್ಯಾಪಾರದಿಂದ ರಕ್ಷಿಸುವ ನಿಲುವನ್ನು ಭಾರತವು ಮೊದಲಿನಿಂದಲೂ ಕಾಯ್ದುಕೊಂಡು ಬಂದಿದೆ. ಆದರೀಗ, ಭಾರತದ ಬಡ ರೈತರನ್ನು ಅಮೆರಿಕದ ಬಲಾಢ್ಯ ರೈತರೊಂದಿಗೆ ಪೈಪೋಟಿಗೆ ಇಳಿಸ ಹೊರಟಿರುವುದು ದೇಶದ ಆಂತರಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಎಂದಿಗೂ ಒಳ್ಳೆಯದಲ್ಲ. ಈ ಒಪ್ಪಂದವು ಶೂನ್ಯ ಸುಂಕದಡಿ ಕೃಷಿ ಮತ್ತು ಡೈರಿ ಉತ್ಪಾದನೆಗಳನ್ನು ಒಳಗೊಂಡಿದ್ದರೆ, ಅದು ಆಧುನಿಕ ವಸಾಹತುಗಳ ಪ್ರಾರಂಭಕ್ಕೆ ಭಾರತವನ್ನೇ ಬರೆದುಕೊಡುವ ಕೃತ್ಯವಾಗುತ್ತದೆ. ದೇಶದೊಳಗೆ ಹರಿದು ಬರುವ ಅಗ್ಗದ ವಸ್ತುಗಳನ್ನು ಖರೀದಿಸಲು ನಾವುಗಳು ಸಾಲುಗಟ್ಟಿ ನಿಲ್ಲದೆ, ನಮ್ಮ ರೈತರು ಬೆಳೆದ ವಸ್ತುಗಳನ್ನು ಕೊಳ್ಳುವ ಮೂಲಕ ಈ ದೇಶವನ್ನು ಉಳಿಸುವ ಹೊಣೆ ಹೊರಬೇಕಿದೆ.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




