ನಮ್ಮ ಕರ್ನಾಟಕ | 50 ವರ್ಷಗಳಲ್ಲಿ ಕೃಷಿ ಕ್ಷೇತ್ರ ಕಂಡ ಏಳುಬೀಳುಗಳೇನು? (ಭಾಗ-2)

Date:

ಯುವಕರು ಕೃಷಿಯಲ್ಲಿ ತೊಡಗಲು ಬೇಸಾಯವನ್ನು ಒಂದು ಲಾಭದಾಯಕ ಕಸುಬನ್ನಾಗಿಸಿ ಆ ಮೂಲಕ ‘ಊಹಿಸಲ್ಪಡುವ ಆದಾಯ’ ದೊರಕುವಂತಾಗಬೇಕು. ಇದಕ್ಕೆ ಪೂರಕವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯಾದರೂ ಖಾತರಿಯಾಗಿ ಸಿಗುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟಿರುವ ‘ಕರ್ನಾಟಕ ಕೃಷಿ ಬೆಲೆ ಆಯೋಗ’ದ ಹಲವು ಉಪಯುಕ್ತ ವರದಿಗಳನ್ನಾಗಲಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೊಟ್ಟಿರುವ ‘ಬೆಂಬಲ ಬೆಲೆಗೆ ಕಾನೂನು ಸ್ವರೂಪ’ ನೀಡುವ ಆಶ್ವಾಸನೆಯನ್ನಾಗಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಪರಿಗಣಿಸದಿರುವುದು ಅರ್ಥವಾಗದ ವಿಚಾರವಾಗಿದೆ. ಸುಧಾರಣೆ, ನೀತಿ, ನಿಲುವು ಕಾರ್ಯಯೋಜನೆಗಳು ಉದ್ದೇಶಿತ ಗುರಿ ತಲುಪದಿರಲು ದಿಟ್ಟ ಕ್ರಮ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆ ಕಾರಣ ಎನ್ನುವುದು ನಿರ್ವಿವಾದ ವಿಚಾರ. ಆದರೆ ಅದಕ್ಕೂ ಮೀರಿದ ಮೂಲಭೂತ ಅಡೆಚಣೆಗಳನ್ನು ಕರ್ನಾಟಕದಂತಹ ರಾಜ್ಯ ಎದುರಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ಕೆಳಗಿನ ಮೂರು ವಿಚಾರಗಳ ಬಗ್ಗೆ ಗಂಭೀರ ಅವಲೋಕನ ಅಗತ್ಯವಾಗಿತ್ತು. ಲೇಖನದ ಮೊದಲ ಭಾಗದಲ್ಲಿ ಎರಡು ವಿಚಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಅವುಗಳೆಂದರೆ 1. ಜಾಗತಿಕರಣ, ಉದಾರೀಕರಣ ನೀತಿಗಳ ಪರಿಣಾಮ; 2. ಜಾತಿ ಮತ್ತಿತರ ‘ಪ್ರತ್ಯೇಕೀಕರಣ’ಗಳ ಸವಾಲುಗಳು. ಮತ್ತೊಂದು ಮುಖ್ಯ ವಿಚಾರವಿದೆ, 3.’ಹವಾಮಾನ ಬದಲಾವಣೆಯ ಆತಂಕ ಮತ್ತು ಅವಕಾಶಗಳು’. ಈ ಭಾಗದಲ್ಲಿ ಮೂರನೇ ವಿಚಾರ ಮತ್ತು ಮತ್ತಿತರ ಮಹತ್ವದ ಅಂಶಗಳನ್ನು ಚರ್ಚಿಸಲಾಗಿದೆ.

(ಮುಂದುವರಿದ ಭಾಗ..)

III ಹವಾಮಾನ ಬದಲಾವಣೆಯ ಆತಂಕ ಮತ್ತು ಅವಕಾಶಗಳು: ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯಗಳ ತೀವ್ರ ಪರಿಣಾಮಗಳನ್ನು ರೈತರು ಎದುರಿಸುತ್ತಿದ್ದರು, ಜಾಗತಿಕ ತಾಪಮಾನ ಬದಲಾವಣೆಗೆ ಕೃಷಿಯೂ ಕಾರಣವಾಗಿದೆ ಎನ್ನುವ ಆಪಾದನೆ ಎದ್ದಿರುತ್ತದೆ. ಕ್ರಿಮಿಕೀಟನಾಶಕ, ರಸಗೊಬ್ಬರಗಳ ಅತಿಯಾದ ಬಳಕೆ, ನಿಂತ ನೀರಿನಲ್ಲಿ ಬತ್ತದ ಬೇಸಾಯ, ಒಣ ತ್ಯಾಜ್ಯ ಸುಡುವುದು, ವ್ಯವಸ್ಥಿತ ರೀತಿಯಲ್ಲಿ ಪಶುಪಾಲನೆ ಕೈಗೊಳ್ಳದಿರುವುದು ಈ ಎಲ್ಲವುಗಳ ಮೂಲಕ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವ ಅನಿಲಗಳು (Greenhouse Gases) ಪರಿಸರಕ್ಕೆ ಸೇರುತ್ತವೆ. ಕೃಷಿ ಮೂಲದ ಈ ಅನಿಲಗಳ ಪ್ರಮಾಣ ಭಾರತದಲ್ಲಿ ಜಾಗತಿಕ ಮಟ್ಟಕ್ಕಿಂತಲೂ ಅಧಿಕ, ಶೇಕಡಾ 14ರಷ್ಟು ಎಂಬುದಾಗಿ 2024ರ ‘ಭಾರತದಲ್ಲಿ ಪರಿಸರ ಸ್ಥಿತಿ ವರದಿ’ ಯಿಂದ ತಿಳಿದುಬರುತ್ತದೆ. ಆದರೆ, ಸಮಗ್ರವಾಗಿ ವಿಶ್ಲೇಷಿಸಿದಾಗ ಪರಿಸರ ಸಮಸ್ಯೆಗಳಿಗೆ ಮಾತ್ರವಲ್ಲ ಹವಾಮಾನ ಬದಲಾವಣೆಗೂ ಕೃಷಿಯಿಂದ ಪರಿಹಾರ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಸಿರು-ಹರಿತ್ (Chlorophyll) ಹೊಂದಿರುವ ಗಿಡ, ಮರ, ಸಸ್ಯಗಳೆಲ್ಲ ದ್ವಿತಿಸಂಶ್ಲೇಷಣೆ (Photosynthesis) ಕ್ರಿಯೆಯಲ್ಲಿ ಇಂಗಾಲಾಮ್ಲ (Carbon dioxide) ಹೀರಿಕೊಂಡು ಪ್ರಾಣವಾಯು ಆಮ್ಲಜನಕ ಹೊರಗೆಡುವುದು ಒಂದು ಸಹಜ ಸಸ್ಯಶರೀರ ಕ್ರಿಯೆಯಾಗಿದೆ. ಹಾಗಾಗಿ, ಕೃಷಿವಲಯದ ಇಂಗಾಲಾಮ್ಲ ಸ್ಥಿರೀಕರಣ (Carbon Sequestering) ಸಾಮರ್ಥ್ಯ ಅಪಾರವಾಗಿದೆ. ರಾಸಾಯನಿಕ ಮುಕ್ತ ಸಾವಯವ ನೈಸರ್ಗಿಕ ಕೃಷಿಯಲ್ಲಿ ಹೆಕ್ಟರ್ ಒಂದಕ್ಕೆ ವಾರ್ಷಿಕ ಒಂದು ಟನ್ನಷ್ಟು ಇಂಗಾಲಾಮ್ಲ ಹೀರಿಕೊಳ್ಳುವ ಶಕ್ತಿ ಇದ್ದಲ್ಲಿ ಅರಣ್ಯ ಕೃಷಿಯಲ್ಲಿ ಈ ಪ್ರಮಾಣ ಇನ್ನೂರು ಟನ್‌ಗಳಿಗೂ ಮೀರಲಿದೆ. ಪಶ್ಚಿಮ ಘಟ್ಟದ ವಿಶಿಷ್ಟ ಅಡಕೆ ತೋಟ, ಕಾಫಿ, ಟೀ ಪ್ಲಾಂಟೇಶನ್ಗಳಿಂದಂತೂ ಈ ಪ್ರಕಾರದ ಪರಿಸರ ಸೇವೆಯ ಪ್ರಮಾಣ ಅಗಾಧವಾಗಿರುತ್ತದೆ. ಕೃಷಿಯನ್ನು ಆಹಾರ ಉತ್ಪಾದನೆ ಮಾತ್ರವಲ್ಲ ಇಂಗಾಲಾಮ್ಲ ಹೀರಿಕೊಳ್ಳುವುದರ ಜೊತೆಗೆ ಜೀವವೈವಿಧ್ಯ, ಮಣ್ಣು, ನೀರಿನ ಸಂರಕ್ಷಣೆಗಳೂ ಸೇರಿದ ‘ಬಹು ಕಾರ್ಯದ ಪಾತ್ರ (Multi-Functionality Role) ನಿರ್ವಹಿಸುತ್ತಿರುವ ವಲಯ’ ಎಂದು ಪರಿಗಣಿಸಲಾಗಿದೆ.

Karnataka farmers1
ನಮ್ಮ ರೈತ (ಸಾಂದರ್ಭಿಕ ಚಿತ್ರ)

ಕೃಷಿಯ ಈ ಎಲ್ಲಾ ಸೇವೆಗಳನ್ನು, ವಿಶೇಷವಾಗಿ ಇಂಗಾಲಾಮ್ಲ ಸ್ಥಿರೀಕರಣವನ್ನು ಪ್ರೋತ್ಸಾಹಿಸಿ ರೈತಾಪಿ ವರ್ಗಕ್ಕೆ ಪ್ರತಿಫಲ ನೀಡುವ ಬಗ್ಗೆ ಭಾರತವೂ ಸೇರಿದಂತೆ ವಿಶ್ವದ ಮಟ್ಟದಲ್ಲಿ ಹಲವು ಒಡಂಬಡಿಕೆಗಳು ಈಗಾಗಲೇ ಏರ್ಪಾಡಾಗಿರುತ್ತವೆ. ಪಶ್ಚಿಮ ಘಟ್ಟವು ಸೇರಿದಂತೆ ಅತ್ಯಂತ ವಿಶಿಷ್ಟ ಕೃಷಿ ಪರಿಸರ ವಲಯಗಳನ್ನು ಹೊಂದಿರುವ ಕರ್ನಾಟಕಕ್ಕೆ ಇದೊಂದು ಸದವಕಾಶವಾಗಲಿದೆ. ಇನ್ನು ಈ ಎಲ್ಲ `ಬಹುವಿಧ ಸೇವೆ’ಗಳ ಆಧಾರದ ಮೇಲೆ ಕೃಷಿ ಭೂಮಿಯ ಮೌಲ್ಯ ನಿರ್ಧಾರವಾದರಂತೂ ಬೇಸಾಯ ಅರ್ಥವ್ಯವಸ್ಥೆಯ ದಿಕ್ಕೇ ಬದಲಾಗಲಿದ್ದು ಆ ದಿನಕ್ಕೆ ಇನ್ನೂ ಕಾಯಬೇಕಾಗಿದೆ.

ಇದನ್ನೂ ಓದಿರಿ: ನಮ್ಮ ಕರ್ನಾಟಕ | 50 ವರ್ಷಗಳಲ್ಲಿ ಕೃಷಿ ಕ್ಷೇತ್ರ ಕಂಡ ಏಳುಬೀಳುಗಳೇನು? (ಭಾಗ-1)

ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣಗಳನ್ನು ಜೊತೆ ಜೊತೆಯಾಗಿ ಸಾಧಿಸುವ ನಿಟ್ಟಿನಲ್ಲಿ ಮೇಲೆ ಚರ್ಚಿಸಿರುವ ಅಡಚಣೆ ಸವಾಲುಗಳನ್ನು ಯಶಸ್ವಿಯಾಗಿ ನಿವಾರಿಸಿ ಐದು ದಶಕಗಳಲ್ಲಿ ಕೈಗೊಂಡ ನೀತಿ ನಿಲುವು, ಸುಧಾರಣೆಗಳಿಗೆ ಸೂಕ್ತ ಮಾರ್ಪಾಡು ಮತ್ತು ಪರಸ್ಪರ ಸಮನ್ವಯ ಏರ್ಪಡಿಸಿ, ದಿಟ್ಟ ಹೆಜ್ಜೆ ಇಡುವ ದಾರಿ ನೋಡಬೇಕಾಗಿದೆ. ಜೊತೆಗೆ ಈಗಾಗಲೇ ಹೊರತಂದಿರುವ ತಜ್ಞರ ವರದಿಗಳನ್ನು ಅದರಲ್ಲೂ ಮುಖ್ಯವಾಗಿ ಹಿರಿಯ ಅಧಿಕಾರಿ ಶ್ರೀನಿವಾಸಮೂರ್ತಿ ಅವರು ನೇತೃತ್ವದಲ್ಲಿ 2007ರಲ್ಲಿ ಹೊರಬಂದಿರುವ ‘ರೈತರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ವರದಿ’ಯನ್ನು ವಿಶೇಷವಾಗಿ ಪರಿಗಣಿಸಬೇಕಾಗಿದೆ.

ಮುಂದುವರೆದು, ರಾಜ್ಯದ ರೈತರಿಗೆ ಸಾಂಘಿಕ ಬಲ, ಬಹುಮೂಲದ ಆದಾಯಭದ್ರತೆ, ಉದಾರೀಕರಣ, ಜಾಗತೀಕರಣಗಳ ಜೊತೆಗೆ ಹವಾಮಾನ ವೈಪರೀತ್ಯಗಳಿಂದ ರಕ್ಷಣೆ. ಹಾಗೂ ಮುಖ್ಯಮಂತ್ರಿಗಳ ಸಮರ್ಥ ಹಸ್ತಕ್ಷೇಪ ಈ ತತ್ವಗಳ ಅಡಿಯಲ್ಲಿ ಕೆಳಗಿನ ವಿಚಾರಗಳ ಬಗ್ಗೆ ಶೀಘ್ರ ಗಮನ ಹರಿಸಬೇಕು.

I. ಕೃಷಿ ಕಾಯ್ದೆಗಳಿಗೆ ನೈಜ ಸುಧಾರಣೆ:

ಈ ಹಿಂದಿನ ಭಾಜಪ ಸರ್ಕಾರ ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಂದಿರುವ ಮಾರಕ ಬದಲಾವಣೆಗಳನ್ನು ಶೀಘ್ರ ಹಿಂಪಡೆದು ಅವುಗಳ ಮೂಲ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದು:

a. ಭೂ ಸುಧಾರಣೆಯ ಮುಂದಿನ ಹಂತವಾಗಿ ಸಹಕಾರಿ ಬೇಸಾಯ: ಮಣ್ಣು, ನೀರು ಸಂರಕ್ಷಿಸುವುದರಿಂದ, ಕೃಷಿ ಯಾಂತ್ರೀಕರಣ, ಒಟ್ಟಾರೆ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರಾಟ ಚಟುವಟಿಕೆಗಳನ್ನು ಸಮರ್ಥವಾಗಿ ಕೈಗೊಳ್ಳಲು ಹಿಡುವಳಿಗಳ ಒಗ್ಗೂಡಿಸುವಿಕೆ (Aggregation) ಜರುಗಬೇಕು. ಗುಂಪುಕೃಷಿ, ರೈತ ಉತ್ಪಾದಕರ ಸಂಘ/ಕಂಪನಿ ಏನೇ ಇರಲಿ ಒಟ್ಟಾರೆ ಸಹಕಾರಿತತ್ವ ಆಧಾರಿತ `ಸಾಂಘಿಕ ಪ್ರಯತ್ನ’ ರಾಜ್ಯದ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಒಂದಾದರೂ ಸಾಕಾರಗೊಳ್ಳಬೇಕು.

b. ಮಹಿಳಾ ಗುಂಪುಗಳಿಗೆ ಗುತ್ತಿಗೆ ಕೃಷಿ: ನಾನಾ ಕಾರಣಗಳಿಂದ ಕೃಷಿ ಮಾಡದೆ ಭೂಮಿಯನ್ನು ಬೀಳು ಬಿಡುತ್ತಿರುವ ಸಮಸ್ಯೆಗೆ ಪರಿಹಾರವಾಗಿ ಒಡೆತನದ ಪ್ರಶ್ನೆಗೆ ಕೈ ಹಾಕದೆ, ಗುತ್ತಿಗೆ ಆಧಾರದಲ್ಲಿ ಗುಂಪು ಕೃಷಿ ಸಾಧ್ಯತೆಯನ್ನು ಪರಿಶೀಲಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಮಾಡದ `ಬೀಳುಭೂಮಿ ಠೇವಣಿ ಬ್ಯಾಂಕ್’ ನಿರ್ಮಿಸಿ, ಕೇರಳದ `ಕುಡುಂಬಶ್ರೀ’ ಮಾದರಿಯಲ್ಲಿ ಮಹಿಳಾ ಗುಂಪುಗಳಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸಿದಲ್ಲಿ ಅದೊಂದು ಕ್ರಾಂತಿಕಾರಕ ಹೆಜ್ಜೆ ಆಗಲಿದೆ.

c. ಸಹಕಾರಿ ಡಿಜಿಟಲ್ ಮಾರಾಟ ವೇದಿಕೆ: ಎಪಿಎಂಸಿ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಿ ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿ ರೈತರ ‘ಸಾಂಘಿಕ ಚೌಕಾಸಿ ಶಕ್ತಿ’ ಬಲಪಡಿಸಲು `ಕೃಷಿ ಉತ್ಪನ್ನಗಳ ಸಹಕಾರಿ ಡಿಜಿಟಲ್ ಮಾರಾಟ ವೇದಿಕೆ’ (Co-operative Digital Marketing Platform) ರೂಪಿಸಬೇಕು. ರೈತ ಉತ್ಪಾದಕ ಸಂಘಗಳ ಜೊತೆಗೆ ನಗರದ ಅಪಾರ್ಟ್‌ಮೆಂಟ್‌ಗಳು, ಹೋಟೆಲ್, ಸಂಸ್ಕರಣಕಾರರು, ರಫ್ತುದಾರರು ಮೊದಲಾದ ದೊಡ್ಡ ಖರೀದಿದಾರರ ಸಂಪರ್ಕ ಏರ್ಪಡಿಸಿ ಕೃಷಿ ಉತ್ಪನ್ನ ಮಾರಾಟದಲ್ಲಿ ಯಶಸ್ವಿಯಾದರೆ ದೇಶಕ್ಕೆ ಮಾದರಿಯಾಗಬಹುದು.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

II. ರೈತರಿಗೆ ಬಹುಮೂಲದ ಆದಾಯ ಭದ್ರತೆ:

ರೈತರ ಸಾವು, ಆತ್ಮಹತ್ಯೆಗಳ ಬಗ್ಗೆ ಅಂಕಿ ಅಂಶಗಳು ಲಭ್ಯವಿದ್ದರೆ ಅನ್ನದಾತರು ಹೇಗೆ ಬದುಕುತ್ತಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ “ಕರ್ನಾಟಕ ಕೃಷಿಕರ ಆದಾಯದ ಸಮಗ್ರ ಸಮೀಕ್ಷೆ” ಒಂದನ್ನು ಮೊದಲು ಕೈಗೊಳ್ಳಬೇಕು.

a. ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ: ‘ಕನಿಷ್ಠ ಬೆಂಬಲ ಬೆಲೆ’ (MSP)ಯಲ್ಲಿಯೇ ರಾಜ್ಯದ ರೈತರು ಬೆಳೆಯುವ ಉತ್ಪನ್ನಗಳು ಖರೀದಿಯಾಗುವ ಶಾಸನ ರೂಪಿಸಿ, ಕಟಾವಿನ ನಂತರ ತಡಮಾಡದೆ `ಮಧ್ಯಪ್ರವೇಶಿಸಿ’, ಖರೀದಿ ಮತ್ತಿತರ ಕ್ರಮಗಳ ಮೂಲಕ ಧಾರಣೆ ಬೆಂಬಲಬೆಲೆಗಿಂತ ಕೆಳಗಿಳಿಯದ ಹಾಗೆ ಎಚ್ಚರ ವಹಿಸುವ ದಾರಿ ಕರ್ನಾಟಕ ಸರ್ಕಾರಕ್ಕೆ ಇದ್ದೇ ಇದೆ. ಖರೀದಿಸಿರುವುದನ್ನು ಆಹಾರ ಭದ್ರತೆ ಕಾಯ್ದೆಯಡಿ ಸದುಪಯೋಗ ಮಾಡಿ ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡುವ ಸಾಧ್ಯತೆ ಅಪಾರವಾಗಿರುತ್ತದೆ.

b. ಕರ್ನಾಟಕ ಕೃಷಿ ಬೆಲೆ ಆಯೋಗ ಈ ನಿಟ್ಟಿನಲ್ಲಿ ತಗಲುವ ವೆಚ್ಚ, ಇತ್ಯಾದಿ ವಿವರಗಳ ವರದಿಯನ್ನು 2018ರಲ್ಲೇ ಸರ್ಕಾರಕ್ಕೆ ಸಲ್ಲಿಸಿರುತ್ತದೆ. ಬೆಲೆ ಆಯೋಗ ಶಾಸನಾತ್ಮಕ ಸ್ವರೂಪ ಪಡೆದು ಸಮರ್ಥವಾಗಿ ಕಾರ್ಯನಿರ್ವಹಿಸುವಂತಾಗಬೇಕು.

c. ‘ಜಿಲ್ಲಾಮಟ್ಟದ ಬೆಳೆಯೋಜನೆ’ಯನ್ನು ಆಯಾ ಜಿಲ್ಲೆಗಳ ಮಣ್ಣು, ಹವಾಮಾನ, ಸ್ಥಳೀಯ ಆಗತ್ಯಗಳನ್ನಾಧರಿಸಿ ಸಿದ್ಧಪಡಿಸಬೇಕು. ಉತ್ಪಾದನೆ, ಬೇಡಿಕೆ, ಬೆಲೆಗಳ ಮುನ್ನಂದಾಜು (Forecasting) ಇತರ ಮಾರುಕಟ್ಟೆ ಮಾಹಿತಿಗಳನ್ನು ಸಕಾಲದಲ್ಲಿ ಒದಗಿಸಬೇಕು. ಈ ಕ್ರಮಗಳ ಮೂಲಕ, ಕೊಯ್ಲಿನ ನಂತರ ಆವಕ ಅಧಿಕವಾಗಿ ಕೃಷಿ ಉತ್ಪನ್ನಗಳ ಧಾರಣೆ ಇಳಿಕೆಗೆ ತಡೆ ಹಾಕಬೇಕು.

d. ‘ಸಾರ್ವತ್ರಿಕ ಮೂಲ ಆದಾಯ’ (Universal Basic Income)ವನ್ನು ಮಳೆ ಆಶ್ರಯದ ಸಣ್ಣ, ಅತಿಸಣ್ಣ ರೈತರಿಗೆ ಖಾತ್ರಿ ಮಾಡಲು ತಕ್ಷಣ ಮುಂದಾಗಬೇಕು. `ಅಂತ್ಯೋದಯ’ಕ್ಕೆ ಸಮನಾದ ವಿಶೇಷ ಕಾರ್ಯಕ್ರಮ ರೂಪಿಸಿ, ಉದ್ಯೋಗ ಖಾತ್ರಿ (NREGA), ರಾಜ್ಯ ಸರ್ಕಾರದ ವಿವಿಧ `ಗ್ಯಾರಂಟಿ ಯೋಜನೆ’ಗಳ ಫಲಾನುಭವ ದೊರೆಯುವಂತೆ ಮಾಡಬೇಕು.

nrega
ಉದ್ಯೋಗ ಖಾತ್ರಿ (ಸಾಂದರ್ಭಿಕ ಚಿತ್ರ)

e. ಭೂಮಿಯ ಮೌಲ್ಯದ ಆಧಾರಿತ ಸಾಲ: ಮಕ್ಕಳ ವಿದ್ಯಾಭ್ಯಾಸ, ವಾಣಿಜ್ಯ ಕೃಷಿ, ಉದ್ದಿಮೆ, ಕರಕುಶಲ ಕಸುಬುಗಳು ಹೀಗೆ ರೈತ ಕುಟುಂಬಗಳು ಬಹುಮೂಲಗಳಿಂದ ಆದಾಯ ಪಡೆಯಲು ಅಗತ್ಯವಿರುವ ಹಣಕಾಸು ಕೃಷಿಭೂಮಿಯ ಮೌಲ್ಯದ ಆಧಾರದ ಮೇಲೆ ಧಾರಾಳ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು `ನಬಾರ್ಡ್’ ಸಂಸ್ಥೆಗಳೊಂದಿಗೆ ವ್ಯವಹರಿಸಬೇಕು ಮತ್ತು ರೈತ ಮಹಿಳೆಯರಿಗೂ ಸಮಾನ ಆದ್ಯತೆ ನೀಡಬೇಕು.

f. ಕೇರಳ ಮಾದರಿಯಲ್ಲಿ ‘ಋಣ ಪರಿಹಾರ ಆಯೋಗ’ (Debt Relief Commission) ರಚಿಸಿ, ರಾಜ್ಯದ ರೈತರನ್ನು ಒಮ್ಮೆ ಸಂಪೂರ್ಣ ಋಣಮುಕ್ತಗೊಳಿಸಿ ಮುಂದೆ ಸಾಲದಲ್ಲಿ ಬೀಳುವುದನ್ನು ತಪ್ಪಿಸಬೇಕು.

g. ಯುವಕರು ಕೃಷಿಯಲ್ಲಿ ತೊಡಗುವಂತೆ ಮಾಡುವುದು: ಕೃಷಿಗೂ ಕೈಗಾರಿಕೆಯ ಎಲ್ಲ ಸವಲತ್ತುಗಳು ಸಿಗುವಂತೆ ಮಾಡಿ, ಸಂಸ್ಕರಣೆ, ಮೌಲ್ಯವರ್ಧನೆ ಸಾವಯವ/ಸಿರಿಧಾನ್ಯ ಕೃಷಿ, ಪರಿಸರ/ಪ್ರವಾಸ ಕೃಷಿ, ಜಾಗತಿಕ ತಾಪಮಾನಕ್ಕೆ ಪರಿಹಾರವಾಗಿ ಇಂಗಾಲಾಮ್ಲ ಹೀರಿಕೊಳ್ಳುವ ಕೃಷಿ (Carbon Farming), ಇತ್ಯಾದಿಗಳನ್ನು ಕಾರ್ಯರೂಪಕ್ಕೆ ತರುವ `ಕೃಷಿ ನವೋದ್ಯಮ’ (Agri. StartUps)ದ ಹೊಸದೊಂದು ಅಲೆಯನ್ನೇ ಗ್ರಾಮೀಣ ಕರ್ನಾಟಕದಲ್ಲಿ ಹುಟ್ಟು ಹಾಕಬೇಕು.

h. ಸಹಭಾಗಿತ್ವದ ಕೃಷಿ ಯಾಂತ್ರೀಕರಣ: ಕಾರ್ಮಿಕರ ಕುಶಲತೆ, ತಾಂತ್ರಿಕ ನೈಪುಣ್ಯತೆ, ಸಾಮರ್ಥ್ಯ ಹೆಚ್ಚಿಸಿ ಅವರೊಂದಿಗಿನ ‘ಸಹಭಾಗಿತ್ವದ ಕೃಷಿ ಯಾಂತ್ರೀಕರಣ’ದ ಮೂಲಕ ಕೃಷಿಯಲ್ಲಿನ ಕಾರ್ಮಿಕ ಸಮಸ್ಯೆಗೆ ಪರಿಹಾರ ಪಡೆಯಬೇಕು. `ಕೃಷಿ ಕಾರ್ಮಿಕರ ಸಂಘ’ ರಚನೆಯಾಗಿ ಆ ಮೂಲಕ ಯಂತ್ರೋಪಕರಣಗಳ ಸೇವೆ ದೊಡ್ಡ ಪ್ರಮಾಣದಲ್ಲಿ ಸಿಗುವಂತಾಗಬೇಕು.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

III ಕೃಷಿ ಭೂಮಿಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ:

ರಾಜ್ಯದ ಕೃಷಿ ಭೂಮಿ, ಅಂತರ್ಜಲ, ಜೈವಿಕ ಸಂಪನ್ಮೂಲಗಳ ಅವನತಿಗೆ ತಡೆಹಾಕಿ, ಸುಸ್ಥಿರ ಬಳಕೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು.

a. ಯೋಜನೆಗಳ ಒಗ್ಗೂಡಿಸುವಿಕೆ: ರಾಜ್ಯದಲ್ಲಿ ಈಗಾಗಲೇ  ಪ್ರಾರಂಭಿಸಿರುವ ಒಣ ಬೇಸಾಯ ಮತ್ತು ಜಲಾನಯನ ಅಭಿವೃದ್ಧಿ, ಕೃಷಿಹೊಂಡ ನಿರ್ಮಾಣ, ಸಮುದಾಯ ಕೆರೆಗಳ ಪುನರುಜ್ಜೀವನ, ಇತ್ಯಾದಿ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ನಿರ್ದಿಷ್ಟ ಕಾಲಾವಧಿಯಲ್ಲಿ ಗುರಿ ಸಾಧಿಸಬೇಕು. ನೀರಾವರಿ ಅಧಿಕಗೊಳಿಸುವಷ್ಟೇ ಅಂತರ್ಜಲ ವೃದ್ಧಿ, ಕೆರೆ, ನದಿ ಪಾತ್ರಗಳ ಒತ್ತುವರಿ ತಡೆದು ಅರಣ್ಯೀಕರಣಕ್ಕೆ ಮಹತ್ವ ಕೊಡಬೇಕು.

b. ಈ ಹಿಂದಿನ ‘ರಾಜ್ಯ ಭೂಬಳಕೆ ಮಂಡಳಿ’ (State Land Use Board)ಗಳಂಥವುಗಳಿಗೆ ಕಾಯಕಲ್ಪ ನೀಡಿ ಮುಖ್ಯಮಂತ್ರಿಗಳ ನೇತೃತ್ವದ ಕರ್ನಾಟಕ `ಕೃಷಿಭೂಮಿ ಸದ್ಬಳಕೆ ಮಂಡಳಿ’ ಕಾರ್ಯರೂಪಕ್ಕೆ ಬರಬೇಕು.

c. ‘ಬೀಜ ಬ್ಯಾಂಕ್’ಗಳನ್ನು ಎಲ್ಲ ಹಳ್ಳಿಗಳಲ್ಲೂ ಸ್ಥಾಪಿಸಿ, ಆಯಾ ಮಣ್ಣು ಮತ್ತು ಹವಾಮಾನಗಳಿಗೆ ಹೊಂದಿಕೊಳ್ಳುವ ದೇಶೀಯ ಬೀಜದ ತಳಿಗಳು ರೈತರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು.

IV. ಬರ, ಹವಾಮಾನ ವೈಪರೀತ್ಯಗಳಿಗೆ ಸಮರ್ಥ ಪರಿಹಾರ:

ತಾಪಮಾನ ಬದಲಾವಣೆಯ ಪರಿಣಾಮ ಅಕಾಲಿಕ ಮಳೆ, ಅತಿವೃಷ್ಟಿ, ಬರ, ಪೀಡೆ ರೋಗ ಇತ್ಯಾದಿಗಳ ಬೆಳೆಗಳ ಮೇಲಿನ ದಾಳಿ ಮುಂಬರುವ ದಿನಗಳಲ್ಲಿ ಅತಿಸಾಮಾನ್ಯವಾಗಲಿವೆ. ಈ ನಿಟ್ಟಿನಲ್ಲಿ ಸರ್ಕಾರ, ವಿಶ್ವವಿದ್ಯಾನಿಲಯ, ಸಂಶೋಧನಾ ಕೇಂದ್ರಗಳು ಮಾನಸಿಕವಾಗಿ ಸಿದ್ಧರಾಗಿರಬೇಕು.

a. ಬಾಕಿ ಉಳಿದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಬದ್ಧತೆ ಪ್ರದರ್ಶಿಸಬೇಕು. ಸಣ್ಣ ನೀರಾವರಿಗೆ ಹೆಚ್ಚು ಹಣ ವಿನಿಯೋಗಿಸುವ ಜೊತೆಗೆ ಕೆರೆಗಳ ಸಂರಕ್ಷಣೆ, ಅರಣ್ಯೀಕರಣ, ಅಂತರ್ಜಲ ವೃದ್ಧಿಸಲೂ ಆದ್ಯತೆ ನೀಡಬೇಕು.

b. ವಿವಿಧ ‘ಕೃಷಿ ಪರಿಸರ ವಲಯಗಳ’ (Agro-Ecological Zones) ಸೂಕ್ಷ್ಮತೆ ಆಧಾರದಲ್ಲಿ ಬಹು ಬೆಳೆಗಳ ಕೃಷಿ ಉತ್ಪಾದನೆ ಜೊತೆಗೆ ನೆಲ, ಜಲ, ಖನಿಜ, ಅರಣ್ಯ ಜೈವಿಕ ಸಂಪತ್ತು ಸೇರಿದಂತೆ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಮತ್ತು ಸದ್ಬಳಕೆಯ ಸಮಗ್ರ ಯೋಜನೆ ರೂಪಿಸಬೇಕು.

ಇದನ್ನೂ ಓದಿರಿ: ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-1)

c. ಬಹುವಿಧ ಬೆಳೆವಿಮೆಗಳ ಆಯ್ಕೆ: ಕೇಂದ್ರ ಸರಕಾರದ ಹಾಲಿ ಬೆಳೆವಿಮೆ ಯೋಜನೆಗೆ ಬದಲಾಗಿ ರಾಜ್ಯ ಸರ್ಕಾರವೇ ಮುಂದೆ ಬಂದು `ಕೃಷಿ ಆದಾಯ ವಿಮೆ ಯೋಜನೆ’ ಸ್ಥಾಪಿಸಬೇಕು. ಜೊತೆಗೆ `ವ್ಯಕ್ತಿ ಮಟ್ಟದ ಬೆಳೆವಿಮೆ’, `ಗುಂಪು ಬೆಳೆ ವಿಮೆ’ ವಾಣಿಜ್ಯ/ರಫ್ತು ಬೆಳೆಗಳಿಗೆ ಪ್ರತ್ಯೇಕ ಬೆಳೆ ವಿಮೆ ಇತ್ಯಾದಿ ಹಲವು ಯೋಜನೆಗಳ ಆಯ್ಕೆಯ ಅವಕಾಶ ರೈತರಿಗೆ ಒದಗಿಸಬೇಕು.

d. ಪ್ರಕೃತಿ ವಿಕೋಪ ಪರಿಹಾರ ನಿಧಿ ವಿಚಾರದಲ್ಲಿ ಕೇಂದ್ರ ರಾಜ್ಯಗಳ ನಡುವಿನ ಅನಗತ್ಯ ತಿಕ್ಕಾಟ ತಪ್ಪಿಸಿ, ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನ್ಯಾಯಯುತ ಪಾಲು ಪಡೆಯುವ ನಿಟ್ಟಿನಲ್ಲಿ ಕೇಂದ್ರದೊಡನೆ ಸಮರ್ಥವಾಗಿ ವ್ಯವಹರಿಸಬೇಕು. ಜೊತೆಗೆ ರಾಜ್ಯಮಟ್ಟದಲ್ಲಿ ವಿಪತ್ತು ಪರಿಹಾರ ನಿಧಿಯನ್ನು ಗಮನಾರ್ಹ ಹೆಚ್ಚಿಸಿಕೊಳ್ಳಬೇಕು.

e. ಜಗತ್ತಿನ ಪ್ರಮುಖ ‘ಜೀವವೈವಿಧ್ಯ ತಾಣ’ ವಾಗಿರುವ ನಮ್ಮ ಪಶ್ಚಿಮಘಟ್ಟದ ಸಂರಕ್ಷಣೆ ಅತ್ಯಗತ್ಯ. ಜೊತೆಗೆ ಇಲ್ಲಿನ `ವೈವಿಧ್ಯಮಯ ಕೃಷಿ’ ಕೂಡ ಬಿಕ್ಕಟ್ಟು ಎದುರಿಸುತ್ತಿದ್ದು ಇವೆರಡರ ನಡುವಿನ ಸೂಕ್ಷ್ಮ ಸಂಬಂಧ ಅರಿತು ಪರಿಹಾರ ಕಂಡುಹಿಡಿಯುವುದು ಅತೀ ಅಗತ್ಯ. ‘ಪರಿಸರ ಸೂಕ್ಷ್ಮ ವಲಯ’ ಘೋಷಣೆ ಮತ್ತು ಭೂಒತ್ತುವರಿಯ ಬಲತ್ಕಾರ ತೆರವುಗೊಳಿಸುವಿಕೆಗಳ ಭಯಗಳಿಂದ ಅಲ್ಲಿನ ರೈತರನ್ನು ಮೊದಲು ಪಾರು ಮಾಡಬೇಕು.

V. ಮುಖ್ಯಮಂತ್ರಿಗಳ ನೇರ ಉಸ್ತುವಾರಿ:

ರಾಜ್ಯದ ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಹಾಗೆ ಹಲವಾರು ಸಚಿವರು, ವಿವಿಧ ಸಚಿವಾಲಯ ಮತ್ತು ಇಲಾಖೆಗಳು ಜೊತೆಗೆ ಹತ್ತಾರು ಯೋಜನೆಗಳಿದ್ದು ಸಮನ್ವಯದ ತೀವ್ರ ಕೊರತೆ ಇದೆ.

ಪರಿಹಾರಕ್ಕೆ ಮುಖ್ಯಮಂತ್ರಿಗಳ ನೇರ ಮಧ್ಯಪ್ರವೇಶ ಮತ್ತು ಉಸ್ತುವಾರಿ ಅತ್ಯಗತ್ಯ.

a. ಪ್ರತ್ಯೇಕ ಕೃಷಿ ಸಚಿವ ಸಂಪುಟ: ನಿಯತವಾಗಿ ಸಂಬಂಧಿಸಿದ ಸಚಿವರುಗಳ ಪ್ರತ್ಯೇಕ `ಸಂಪುಟ ಸಭೆ’ ನಡೆಸಿ ಕಾರ್ಯಕ್ರಮಗಳ ಸಮನ್ವಯತೆ ಮತ್ತು ಸಂಘಟಿತ ಅನುಷ್ಠಾನಗಳ ಬಗ್ಗೆ ನಿರ್ಧರಿಸಿ ಮುನ್ನಡೆಯಬೇಕು.

b. ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (SITK)ಗೆ ಕೃಷಿಯ ಸುಸ್ಥಿರ ಅಭಿವೃದ್ಧಿ ಮತ್ತು ರಾಜ್ಯದ ರೈತರ ಕಲ್ಯಾಣವೃದ್ಧಿ ಎರಡನ್ನು ಜೊತೆಯಾಗಿ ಸಾಧಿಸುವ `ಸಮಗ್ರ ನೀಲಿನಕ್ಷೆ’, ತಯಾರಿ, ಆಯೋಜನೆ ಮತ್ತು ಮೇಲ್ವಿಚಾರಣೆಗಳ ಜವಾಬ್ದಾರಿ ವಹಿಸುವುದು.

c. ಪ್ರತ್ಯೇಕ ಕೃಷಿ ಬಜೆಟ್: ರಾಜ್ಯದ ಒಟ್ಟು ಆಯವ್ಯದಲ್ಲಿ ಕೃಷಿ ಮತ್ತು ರೈತಾಪಿ ವರ್ಗದ ಪಾಲನ್ನು ನ್ಯಾಯಯುತವಾಗಿ ನಿರ್ಧರಿಸಿ ಅದರ ಸದುಪಯೋಗಕ್ಕೆ ಪ್ರತ್ಯೇಕ ಕೃಷಿಬಜೆಟ್ ಮಂಡಿಸಬೇಕು.

d. ಉನ್ನತ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಪರಿಷತ್ತು: ಕರ್ನಾಟಕದ ಕೃಷಿ ಬಿಕ್ಕಟ್ಟು ಮತ್ತು ಹವಾಮಾನ ವೈಪರೀತ್ಯಗಳ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಕೃಷಿ ಮತ್ತು ಸಂಬಂಧಿಸಿದ ವಿಜ್ಞಾನಗಳ ಎಲ್ಲಾ ವಿಶ್ವವಿದ್ಯಾನಿಲಯ, ರಾಜ್ಯದಲ್ಲಿರುವ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳೆಲ್ಲವನ್ನು ಸೇರಿಸಿ ಉನ್ನತ ಪರಿಷತ್ತನ್ನು ನಿರ್ಮಿಸುವುದು.

e. ಅಂತಿಮವಾಗಿ, ರಾಜ್ಯದ ಕೃಷಿಗೆ ಹೊಸ ದಿಕ್ಕು ದೆಸೆ ನೀಡಲು ಹಿರಿಯ ಅಧಿಕಾರಿ ಶ್ರೀನಿವಾಸ ಮೂರ್ತಿ ವರದಿಯಲ್ಲಿ ಪ್ರಸ್ತಾಪಿಸಿರುವ ರೀತಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ‘ಕರ್ನಾಟಕ ಕೃಷಿ ಮಿಷನ್ 2024’ ರೂಪಿಸುವುದು.

ಇದನ್ನೂ ಓದಿರಿ: ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-2)

ಈ ಎಲ್ಲ ಕಾರ್ಯಯೋಜನೆಗಳನ್ನು ಸರ್ಕಾರ ದೃಢ ನಿರ್ಧಾರದಿಂದ ಕೈಗೊಳ್ಳುವಂತಾಗಲು ರಾಜ್ಯದಲ್ಲಿ ಸಕ್ರಿಯವಾಗಿರುವ ರೈತ ಚಳವಳಿ, ಸಂಘಟನೆ ಒಟ್ಟಾರೆ ನಾಗರಿಕ ಸಮಾಜದ ಸಕಾರಾತ್ಮಕ ಒತ್ತಡ ಅಗತ್ಯವಾಗಿದೆ. ಇನ್ನು ರೈತ ಚಳವಳಿ ಮತ್ತು ಸಂಘಟನೆಗಳು ಚುನಾವಣಾ ರಾಜಕೀಯದ ಮೇಲೆ ಪ್ರಭಾವ ಬೀರುವಂತಾದಲ್ಲಿ ಕರ್ನಾಟಕದಲ್ಲಿ ಪರಿವರ್ತನೆಯ ಹೊಸ ಮಾದರಿಯೇ ರೂಪಗೊಳ್ಳುವುದು. ಹೀಗೆ, ಐದು ದಶಕಗಳ ಕಾಲ ಸವೆಸಿದ ಕರುನಾಡಿನಲ್ಲಿ ಕೃಷಿ ಜೊತೆಗೆ ಕೃಷಿಕರತ್ತವೂ ದೃಷ್ಟಿ ಹರಿಸಬೇಕಿದೆ. ನೈಜ ಪ್ರಗತಿಗೆ ಪೂರಕವಾದ ಒಂದು ವಾತಾವರಣವಿದ್ದು ಪರಿಣಾಮಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 3.55.08 PM
ಡಾ ಪ್ರಕಾಶ್‌ ಕಮ್ಮರಡಿ
+ posts

ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.

ಪೋಸ್ಟ್ ಹಂಚಿಕೊಳ್ಳಿ:

ಡಾ ಪ್ರಕಾಶ್‌ ಕಮ್ಮರಡಿ
ಡಾ ಪ್ರಕಾಶ್‌ ಕಮ್ಮರಡಿ
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...