ಅಂಬೇಡ್ಕರರ ಮಹತ್ವದ ಕೃತಿಗಳು ಹೇಳುತ್ತಿರುವುದೇನು?: ಇಲ್ಲಿದೆ ಸಾರಸಂಗ್ರಹ

Date:

ಡಾ.ಬಿ.ಆರ್. ಅಂಬೇಡ್ಕರ್ ಎಂದರೆ ಅರಿವು, ಜ್ಞಾನ ಸಾಗರ. ಅವರು ಬರೆದ ಪುಸ್ತಕಗಳೇ ನಮಗೆಲ್ಲ ದಾರಿದೀವಿಗೆ. ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ 30ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಕೆಲವು ಕೃತಿಗಳು ಅವರ ನಿಧನಾನಂತರ ಪ್ರಕಟವಾದವು. ಪ್ರಕಟಿತ ಅನೇಕ ಬರಹಗಳು ಅಪೂರ್ಣ ಸ್ಥಿತಿಯಲ್ಲೇ ಇವೆ. ಬಹುಶಃ ಬಾಬಾಸಾಹೇಬರು ಇದ್ದಾಗಲೇ ಅವು ಮುದ್ರಣ ಕಂಡಿದ್ದರೆ ಮತ್ತಷ್ಟು ತೀಕ್ಷ್ಣವಾಗಿರುತ್ತಿದ್ದವು. ಮತ್ತೊಂದೆಡೆ ಅವರ ಬಿಡಿಬಿಡಿ ಬರಹ ಮತ್ತು ಭಾಷಣಗಳೇ ಮಹತ್ವದ ಕೃತಿಗಳಾಗಿ ಪ್ರಕಟವಾಗಿವೆ. ಅಂಬೇಡ್ಕರ್ ಅವರು ತೆರೆದಿಟ್ಟ ಇತಿಹಾಸವನ್ನು, ಅವರ ಬಹುಮುಖಿ ವ್ಯಕ್ತಿತ್ವವನ್ನು ಅವರ ಕೃತಿಗಳ ಅವಲೋಕನದ ಮೂಲಕ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈದಿನ.ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ಸಂಚಿಕೆಯು ವಿನೂತನ ಪ್ರಯತ್ನವೇ ಸರಿ. ಅಕ್ಷರ ಸಾಗರವೇ ಆಗಿರುವ ಅಂಬೇಡ್ಕರರ ಬರಹಗಳನ್ನು ಓದಿ, ಅರ್ಥೈಸಿಕೊಳ್ಳುವುದು ಸವಾಲೆನಿಸಿದರೂ ಅವರ ಮಹತ್ವದ ಕೃತಿಗಳ ಸಂದೇಶಗಳನ್ನು ಭಾರತೀಯರು ತಿಳಿಯಬೇಕಾದದ್ದು, ಆ ನಿಟ್ಟಿನಲ್ಲಿ ಯೋಚಿಸಬೇಕಾದದ್ದು ಇಂದಿನ ತುರ್ತು. ಇಂತಹ ಪ್ರಯೋಗಗಳು ಮತ್ತೆ ಮತ್ತೆ ಆಗಬೇಕಾಗಿದೆ.

ವೈಟಿಂಗ್ ಫಾರ್ ವೀಸಾ, ಅನಾಯಿಲೇಷನ್ ಆಫ್ ಕಾಸ್ಟ್, ಕ್ರಾಂತಿ ಮತ್ತು ಪ್ರತಿಕ್ರಾಂತಿ, ಬುದ್ಧ ಮತ್ತು ಆತನ ಧಮ್ಮ, ರೂಪಾಯಿ ಸಮಸ್ಯೆ, ಹಿಂದೂ ಮಹಿಳೆಯರ ಉನ್ನತಿ ಮತ್ತು ಅವನತಿ, ಗಾಂಧಿ ಮತ್ತು ಕಾಂಗ್ರೆಸ್‌ ಅಸ್ಪೃಶ್ಯರಿಗೆ ಮಾಡಿದ್ದೇನು?, ಪಾಕಿಸ್ತಾನ ಅಥವಾ ಭಾರತ ವಿಭಜನೆ, ರಾಮ ಮತ್ತು ಕೃಷ್ಣರ ಒಗಟುಗಳು, ಸ್ಟೇಟ್ಸ್ ಅಂಡ್ ಮೈನಾರಿಟೀಸ್, ಬುದ್ಧ ಅಥವಾ ಕಾರ್ಲ್‌ ಮಾರ್ಕ್ಸ್‌, ಶೂದ್ರರು ಯಾರಾಗಿದ್ದರು, ಅಸ್ಪೃಶ್ಯರು ಯಾರಾಗಿದ್ದರು?- ಮೊದಲಾದವು ಓದಲೇಬೇಕಾದ ಕೃತಿಗಳು. ಹೀಗಾಗಿ ಅವರ ಕೃತಿಗಳ ಅವಲೋಕನ ಇಂದಿನ ಅಗತ್ಯವೂ ಹೌದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೇಟಿಂಗ್ ಫಾರ್ ಎ ವಿಸಾ

‘ವೀಸಾಗಾಗಿ ಕಾಯುತ್ತಾ’ ಎಂಬುದು ಅಂಬೇಡ್ಕರ್ ಅವರ ಒಂದು ಸುದೀರ್ಘವಾದ ಲೇಖನವೂ ಹೌದು ಮತ್ತು ಅದು ಅವರ ಆತ್ಮಕತೆಯೂ ಹೌದು. 1935ರಲ್ಲಿ ಬರೆದ 6 ಸಣ್ಣ ಅಧ್ಯಾಯಗಳಿರುವ 16 ಪುಟಗಳ ಬರಹವಿದಷ್ಟೇ. ಆದರೆ ಇಲ್ಲಿ ಬಾಬಾ ಸಾಹೇಬರು ತಮ್ಮ ಅನುಭವಗಳನ್ನು, ಜಾತಿಯ ಕಾರಣಕ್ಕೆ ಅವರು ಎದುರಿಸಿದ ಸವಾಲುಗಳನ್ನು ಹೇಳುತ್ತಾ ಹೋಗುತ್ತಾರೆ. ಜೊತೆಗೆ ತಾವು ಕಂಡ ಇತರ ದಲಿತರ ದುಃಖ ದುಮ್ಮಾನಗಳನ್ನೂ ದಾಖಲಿಸುತ್ತಾರೆ. ಇದು ಕೇವಲ ಬಾಬಾಸಾಹೇಬರ ಆತ್ಮಕಥೆಯಷ್ಟೇ ಅಲ್ಲ, ಎಲ್ಲ ದಲಿತರ ಬದುಕಿನ ಕಥೆಯೂ ಆಗಿ ಕಾಣಿಸುತ್ತದೆ.

5a Idu avara Atmakateyu Howdu
ವೈಟಿಂಗ್ ಫಾರ್ ಎ ವೀಸಾ

ಪ್ರಯಾಣಕ್ಕೆ ಟಾಂಗಾ ಸಿಗದೆ ಒದ್ದಾಡಿದ್ದು, ಶಾಲೆಯಲ್ಲಿ ಅವರು ಪ್ರತ್ಯೇಕವಾಗಿ ಒಂದು ತುಂಡು ಗೋಣಿಚೀಲ ಹಾಸಿಕೊಂಡು ಕೂರುತ್ತಿದ್ದದು, ಜವಾನನೂ ಮುಟ್ಟಲು ಹೇಸುತ್ತಿದ್ದ ಆ ಚೀಲದ ತುಂಡನ್ನು ಪ್ರತಿದಿನ ಪುಸ್ತಕಗಳ ಜೊತೆ ಮನೆಗೆ ತೆಗೆದುಕೊಂಡು ಹೋಗಿ ಬೆಳಿಗ್ಗೆ ತರುತ್ತಿದ್ದುದು, ಬಾಯಾರಿಕೆಯಾದಾಗ ಶಿಕ್ಷಕರ ಒಪ್ಪಿಗೆ ಪಡೆದು ಜವಾನನಿಂದ ನೀರು ಪಡೆದು ಕುಡಿಯುತ್ತಿದ್ದದು, ಆದರೆ, ಇವರಿಗೆ ಬಾಯಾರಿಕೆಯಾದರೆ ನೀರು ಕೊಡಬೇಕಾದ ಜವಾನ ಎದ್ದು ಹೋಗುತ್ತಿದ್ದುದು, ಚಿಕ್ಕಂದಿನಲ್ಲಿ ತಮ್ಮ ಬಟ್ಟೆಗಳನ್ನು ಮುಟ್ಟಲು ಮಡಿವಾಳರು ನಿರಾಕರಿಸುತ್ತಿದ್ದುದು, ಕ್ಷೌರ ಮಾಡಲು ನಿರಾಕರಿಸುತ್ತಿದ್ದ ಕ್ಷೌರಿಕರ ಕೆಲಸವನ್ನು ತಮ್ಮ ಅಕ್ಕನೇ ಮಾಡುತ್ತಿದ್ದದ್ದು, ಉಳಿಯಲು ಹೋಟೆಲ್ ಸಿಗದೆ, `ಪಾರ್ಸಿ’ ಎಂದು ಸುಳ್ಳು ಹೇಳಿ ಉಳಿದುಕೊಂಡಿದ್ದು- ಇವೆಲ್ಲವೂಗಳನ್ನೂ ಅಂಬೇಡ್ಕರ್ ದಾಖಲಿಸುತ್ತಾರೆ. ಕೊನೆಗೆ ಈ ದೇಶದ ಅಸ್ಪೃಶ್ಯನು ಮುಸ್ಲಿಮನಿಗೂ ಅಸ್ಪೃಶ್ಯನೇ, ಪಾರಸಿಗೂ ಅಸ್ಪೃಶ್ಯನೇ, ಕ್ರಿಶ್ಚಿಯನ್ನನಿಗೂ ಅಸ್ಪೃಶ್ಯನೇ ಎಂಬ ಸತ್ಯವನ್ನು ಬಾಬಾ ಸಾಹೇಬರು ಈ ಬರಹದ ಮೂಲಕ ದಾಟಿಸುತ್ತಾರೆ.

ಇದನ್ನೂ ಓದಿರಿ: ನಕಲಿ ಎನ್‌ಕೌಂಟರ್ ಪ್ರಕರಣಗಳು: ಕಾನೂನು ಹೇಳುವುದೇನು?

ವೈಟಿಂಗ್ ಫಾರ್ ವೀಸಾ ಎಂಬುದನ್ನು ಅಂಬೇಡ್ಕರ್ ಅವರು ರೂಪಕವಾಗಿ ಬಳಸುತ್ತಾರೆ. ವ್ಯಕ್ತಿಯು ದೇಶವೊಂದರಿಂದ ಅಧಿಕೃತ ನಾಗರಿಕ ಎಂಬ ಮಾನ್ಯತೆ ಪಡೆದ ನಂತರವೇ ಸರ್ಕಾರ ಆತನಿಗೆ ‘ವೀಸಾ’ ನೀಡುತ್ತದೆ. ಸಂಬಂಧಿಸಿದ ವ್ಯಕ್ತಿಯ ಸುರಕ್ಷತೆಯ ಸಂಪೂರ್ಣ ಹೊಣೆಯನ್ನು ವೀಸಾ ನೀಡಿದ ದೇಶ ವಹಿಸಿಕೊಳ್ಳುತ್ತದೆಂಬುದು ವೀಸಾ ನೀಡುವ ನಿಜ ಅರ್ಥ. ಅಸ್ಪೃಶ್ಯ ದಲಿತ ಸಮುದಾಯವು ಭಾರತೀಯ ಸರ್ಕಾರ ಮತ್ತು ಸಮಾಜದಿಂದ ಇಂತಹ ವೀಸಾಗಾಗಿ ಹೇಗೆ ಕಾತರಿಸಿ ಕಾಯುತ್ತಿದೆ ಎಂಬುದೇ “ವೈಟಿಂಗ್ ಫಾರ್ ಎ ವೀಸಾ” ಶೀರ್ಷಿಕೆಯ ರೂಪಕಾರ್ಥ.

ಅನಾಇಲೇಷನ್ ಆಫ್ ಕಾಸ್ಟ್

ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸ್ಥಾಪಿತ ಆಗಿದೆಯೋ, ಅಂತಹ ಧಾರ್ಮಿಕ ಭಾವನೆಗಳನ್ನು ನಾಶ ಮಾಡುವ ತನಕ ಜಾತಿ ವ್ಯವಸ್ಥೆಯನ್ನು ಒಡೆಯುವುದು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಕೃತಿಯೇ ಅನಾಇಲೇಷನ್ ಆಫ್ ಕಾಸ್ಟ್ (ಜಾತಿ ನಿರ್ಮೂಲನೆ).

`ಜಾತ್ ಪಾತ್ ತೋಡಕ್ ಮಂಡಲ್’ ಎಂಬುದು ಹಿಂದೂ ಸುಧಾರಣವಾದಿ ಸಂಘಟನೆಯಾದ ಆರ್ಯಸಮಾಜದಿಂದ ಕವಲೊಡೆದ ತೀವ್ರವಾದಿ ಬಣ. 1922ರಲ್ಲಿ ಹುಟ್ಟಿದ್ದ ಈ ಮಂಡಲ ವಾರ್ಷಿಕ ಸಮ್ಮೇಳನಗಳನ್ನು ನಡೆಸುತ್ತಿತ್ತು. ಈ ಸಮ್ಮೇಳನಗಳನ್ನು ಉದ್ದೇಶಿಸಿ ಮಾತಾಡಿದ್ದವರೆಲ್ಲ `ಉಚ್ಚ’ ಜಾತಿಯವರು. ಮೊದಲ ಸಲ ದಲಿತ ಸಮುದಾಯದ ಅಂಬೇಡ್ಕರ್ ಅವರನ್ನು 1936ರ ಲಾಹೋರ್ ಸಮ್ಮೇಳನದ ಅಧ್ಯಕ್ಷ ಭಾಷಣಕ್ಕೆ ಆಹ್ವಾನಿಸಲಾಗುತ್ತದೆ. ಈ ವೇಳೆಗಾಗಲೇ ಅಂಬೇಡ್ಕರ್ ಅವರು ಹಿಂದೂ ಧರ್ಮದ ವಿರುದ್ಧ ಗುಡುಗಿರುತ್ತಾರೆ. ನಾನು ಈ ಸಮ್ಮೇಳನಾಧ್ಯಕ್ಷತೆ ವಹಿಸಲ್ಲ ಅಂತಾರೆ. ಆದರೂ ಅವರ ಮನವೊಲಿಸಲಾಗುತ್ತದೆ. ಕೊನೆಗೆ ಒಪ್ಪಿಕೊಳ್ಳುತ್ತಾರೆ. ಅವರು ಸಮ್ಮೇಳನಾಧ್ಯಕ್ಷತೆಗಾಗಿ ಬರೆದ ಭಾಷಣ ಚರ್ಚೆಗೆ ಒಳಗಾಗುತ್ತದೆ.

11a Annhilation of caste
ಅನಾಇಲೇಷನ್ ಆಫ್ ಕಾಸ್ಟ್

ವೇದಗಳು ಮತ್ತು ಹಿಂದೂ ಧಾರ್ಮಿಕ ಶಾಸ್ತ್ರಗಳನ್ನು ಕಠೋರ ಪ್ರಶ್ನೆಗಳಿಗೆ ಗುರಿ ಮಾಡಿದ್ದ ಅಂಬೇಡ್ಕರ್ ಅವರ ಭಾಷಣದ ವಿಚಾರಗಳು ಈ ಸಮ್ಮೇಳನವನ್ನು ಏರ್ಪಡಿಸಿದ್ದ `ಜಾತ್ ಪಾತ್ ತೋಡಕ್ ಮಂಡಲ್’ ಒಪ್ಪಿಗೆಯಾಗುವುದಿಲ್ಲ. ಸಮ್ಮೇಳನ ಅನಿರ್ದಿಷ್ಟವಧಿಗೆ ಮುಂದೂಡಲ್ಪಡುತ್ತದೆ. ಕೊನೆಗೂ ಸಮ್ಮೇಳನ ನಡೆಯುವುದೇ ಇಲ್ಲ.

ಭಾಷಣದಲ್ಲಿನ ಕೆಲ ಸಂಗತಿಗಳನ್ನು ಬದಲಾಯಿಸುವಂತೆ ಮತ್ತು ಕೈ ಬಿಡುವಂತೆ ಷರತ್ತು ಹಾಕಲಾಗುತ್ತದೆ. ಆದರೆ, ಭಾಷಣದಲ್ಲಿನ ಒಂದೇ ಒಂದು ಅಲ್ಪವಿರಾಮ ಚಿಹ್ನೆಯನ್ನು ಕೂಡ ಬದಲಾಯಿಸುವುದಿಲ್ಲ ಎಂದು ಅಂಬೇಡ್ಕರ್ ಪ್ರತಿಕ್ರಿಯಿಸುತ್ತಾರೆ. ಮುಂದೆ ಆ ಭಾಷಣವನ್ನು ತಾವೇ ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸುತ್ತಾರೆ. ‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು’ ಎಂಬ ಸಿದ್ಧೌಷಧವನ್ನು ಬಾಬಾಸಾಹೇಬರು ನೀಡಿದ್ದರು.

ಇದನ್ನೂ ಓದಿರಿ: AIನಿಂದ AGIವರೆಗೆ: ಮಾನವ ಬುದ್ಧಿವಂತಿಕೆಯ ಹೊಸ ಕ್ರಾಂತಿ; ಏನಾಗಬಹುದು ಭವಿಷ್ಯದ ಬದುಕು?

`ಹಿಂದೂಗಳು ಈ ದೇಶದ ರೋಗಗ್ರಸ್ತರು, ಅವರ ಈ ವ್ಯಾಧಿಯು ಇತರೆ ಭಾರತೀಯರ ಆರೋಗ್ಯ ಮತ್ತು ಸಂತೋಷಗಳಿಗೆ ಅಪಾಯ ಒಡ್ಡುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿದರೆ ಅದುವೇ ನನ್ನ ಸಂತೃಪ್ತಿ’ ಎಂಬ ಮಾತನ್ನೂ ಅವರು ಮುನ್ನುಡಿಯಲ್ಲಿ ಬರೆದಿದ್ದರು. ಇದೊಂದು ಕ್ರಾಂತಿಕಾರಿ ಕೃತಿ. ಜಾತಿ ನಿರ್ಮೂಲನೆಯಾಗಬೇಕಾದರೆ ಉಪಜಾತಿಗಳು ಮೊದಲು ಒಂದಾಗಬೇಕು, ಸಹಪಂಕ್ತಿ ಭೋಜನಗಳು ನಡೆಯಬೇಕು, ಅಂತರ್ಜಾತಿ ವಿವಾಹಗಳು ಜರುಗಬೇಕು ಎಂಬ ಮಾರ್ಗಸೂತ್ರಗಳನ್ನು ಅಂಬೇಡ್ಕರ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ.

ಕ್ರಾಂತಿ ಮತ್ತು ಪ್ರತಿಕ್ರಾಂತಿ

‘ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು’ ಎಂದು ನುಡಿದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಟ್ಟರು. ಇತಿಹಾಸವನ್ನು ನೋಡಬೇಕಾದ ಹೊಸ ದೃಷ್ಟಿಕೋನವನ್ನು ದಕ್ಕಿಸಿಕೊಟ್ಟರು. ಅವರು ಬರೆದ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ (ರೆವ್ಯುಲ್ಯೂಷನ್ ಅಂಡ್ ಕೌಂಟರ್ ರೆವ್ಯುಲ್ಯೂಷನ್ ಇನ್ ಎನ್ಷಿಯಂಟ್ ಇಂಡಿಯಾ) ಕೃತಿಯು ಅವರ ಪ್ರಖರ ವಿದ್ವತ್ತಿಗೂ ಸಾಕ್ಷಿಯಾಗಿ ನಿಂತಿದೆ.

“ಭಾರತದ ಚರಿತ್ರೆಯೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮದ ನಡುವೆ ನಡೆದ ಮಾರಕ ಕಾಳಗದ ಚರಿತ್ರೆಯೇ ಆಗಿದೆ” ಎಂದು ಇತಿಹಾಸವನ್ನು ಶೋಧಿಸಿದ್ದರು ಅಂಬೇಡ್ಕರ್. ಬೌದ್ಧಭಾರತವನ್ನು ಬ್ರಾಹ್ಮಣೀಯ ದಬ್ಬಾಳಿಕೆ ದ್ವಂಸ ಮಾಡಿದ್ದನ್ನು ಬಯಲಿಗೆಳೆದ್ದರು. “ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡಯಾತ್ರೆಗಳು ಚರಿತ್ರೆಕಾರರ ಅಧ್ಯಯನಕ್ಕೆ ಅರ್ಹವಾಗಿದ್ದರೆ, ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡಯಾತ್ರೆಗಳೂ ಅಷ್ಟೇ ಅಧ್ಯಯನಕ್ಕೆ ಯೋಗ್ಯವಾಗಿವೆ. ಬೌದ್ಧ ಭಾರತದ ಬ್ರಾಹ್ಮಣ ದಾಳಿಕೋರರು ಬೌದ್ಧಧರ್ಮವನ್ನು ಅಡಗಿಸಲು ಅನುಸರಿಸಿದ ಮಾರ್ಗವಿಧಾನಗಳು, ಹಿಂದೂ ಧರ್ಮವನ್ನು ಅಡಗಿಸಲು ಮುಸ್ಲಿಂ ದಾಳಿಕೋರರು ಅನುಸರಿಸಿದ ಮಾರ್ಗವಿಧಾನಗಳಿಗಿಂತ ಕಡಿಮೆ ವಿಷಮಯ ಅಥವಾ ಹಿಂಸಾತ್ಮಕವಾದವೇನೂ ಆಗಿರಲಿಲ್ಲ” ಎನ್ನುತ್ತಾರೆ ಅಂಬೇಡ್ಕರ್. ಅಂದರೆ ಮುಸ್ಲಿಂದಾಳಿ ಕೋರರಷ್ಟೇ, ಬ್ರಾಹ್ಮಣೀಯ ದಾಳಿ ಈ ಬೌದ್ಧ ಭಾರತದ ಮೇಲೆ ಆಗಿದೆ ಎಂಬ ಇತಿಹಾಸವನ್ನು ತೆರೆದಿಡುತ್ತಾರೆ.

ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯ ವಿಸ್ತರಿಸಿತು. ಅಶೋಕ ಬೌದ್ಧ ಧರ್ಮವನ್ನು ರಾಜ್ಯಧರ್ಮವಾಗಿ ಮಾಡಿದ. ಬ್ರಾಹ್ಮಣ ಧರ್ಮಕ್ಕೆ ಒದಗಿದ ಬಹುದೊಡ್ಡ ಪೆಟ್ಟು ಇದಾಗಿತ್ತು. ಅಶೋಕನ ಸಾಮ್ರಾಜ್ಯದಲ್ಲಿ ಬ್ರಾಹ್ಮಣರು ಎಲ್ಲ ರಾಜಾಶ್ರಯ ಕಳೆದುಕೊಂಡು, ಎರಡನೆಯ ಹಾಗೂ ಅಧೀನ ಸ್ಥಾನಕ್ಕೆ ತಳ್ಳಲ್ಪಟ್ಟರು. ಬ್ರಾಹ್ಮಣ ಧರ್ಮದ ಜೀವಾಳವಾದ ಪ್ರಾಣಿಬಲಿಯ ಯಜ್ಞಗಳನ್ನು ಅಶೋಕ ನಿಷೇಧಿಸಿ ಅವರಿಗೆ ವೃತ್ತಿನಷ್ಟವನ್ನೂ ಉಂಟು ಮಾಡಿದ. ಆದ್ದರಿಂದ ಬ್ರಾಹ್ಮಣರಿಗೆ ಬೌದ್ಧ ರಾಜ್ಯದ ವಿರುದ್ಧ ದಂಗೆ ಏಳುವುದೊಂದೇ ಮಾರ್ಗವಾಗಿತ್ತು. ಈ ಕಾರಣಕ್ಕಾಗಿಯೇ ಶುಂಗಗೋತ್ರದವನೂ, ಸಾಮವೇದಿ ಬ್ರಾಹ್ಮಣನೂ, ಪ್ರಾಣಿ ಬಲಿ ಹಾಗೂ ಸೋಮಯಜ್ಞದಲ್ಲಿ ನಂಬಿಕೆಯುಳ್ಳವನೂ ಆದ ಪುಷ್ಯಮಿತ್ರನು ಬೌದ್ಧ ಧರ್ಮವನ್ನು ನಾಶ ಮಾಡಲು ರಾಜಕೀಯ ಅಧಿಕಾರ ಉಪಯೋಗಿಸಿ ರಾಜಹತ್ಯೆ ಮಾಡಿದನು ಎನ್ನುತ್ತಾರೆ ಬಾಬಾಸಾಹೇಬರು.

20a Kranti Pratikranti 1
ರೆವ್ಯುಲ್ಯೂಷನ್ ಅಂಡ್ ಕೌಂಟರ್ ರೆವ್ಯುಲ್ಯೂಷನ್ ಇನ್ ಎನ್ಷಿಯಂಟ್ ಇಂಡಿಯಾ

ಪುಷ್ಯಮಿತ್ರ ಸಿಂಹಾಸನಾರೂಢನಾಗುತ್ತಿದ್ದಂತೆಯೇ ಮಾಡಿದ ಅಶ್ವಮೇಧ ಯಾಗವೆಂಬ ವೈದಿಕ ಯಜ್ಞವು ಬ್ರಾಹ್ಮಣ ಧರ್ಮ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಪ್ರತಿಯೊಬ್ಬ ಬೌದ್ಧ ಭಿಕ್ಕುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳನ್ನು ಬೆಲೆ ಕಟ್ಟಿದ್ದು ಬೌದ್ಧ ಧರ್ಮದ ನಾಶಕ್ಕೆ ಆತ ಹವಣಿಸುತ್ತಿದ್ದ ಎಂಬುದನ್ನು ತಿಳಿಸುತ್ತದೆ. ನಂತರ ಕಾಲದಲ್ಲಿ ಮನುಸ್ಮೃತಿಯ ಮೂಲಕ ಜಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಮಹಿಳೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತದೆ. ಶೂದ್ರರನ್ನು ಗುಲಾಮರನ್ನಾಗಿ ಮಾಡಲಾಗುತ್ತದೆ. ಸತಿಪದ್ಧತಿ ಜಾರಿಗೆ ಬರುತ್ತದೆ. ಬಾಲ್ಯವಿವಾಹ ಪದ್ಧತಿಯನ್ನು ರೂಢಿಗೆ ತರುತ್ತಾರೆ. ಇಂತಹ ಅನೇಕ ಸತ್ಯಗಳನ್ನು ಈ ಕೃತಿ ಶೋಧಿಸುತ್ತಾ ಹೋಗುತ್ತದೆ.

ರಿಡಲ್ಸ್ ಆಫ್ ರಾಮ ಅಂಡ್ ಕೃಷ್ಣ

ವಿವಾದಕ್ಕೆ ಗುರಿಯಾಗಿದ್ದ ‘ಹಿಂದೂ ಧರ್ಮದ ಒಗಟುಗಳು’ ಕೃತಿ ಅಂಬೇಡ್ಕರರ ಪ್ರಖರ ವೈಚಾರಿಕ ಚಿಂತನೆಗಳಿಗೆ ಹಿಡಿದ ಕೈಗನ್ನಡಿ. ಅದರಲ್ಲಿನ ರಾಮಕೃಷ್ಣರ ಒಗಟುಗಳು (ರಿಡಲ್ಸ್ ಆಫ್ ರಾಮ ಅಂಡ್ ಕೃಷ್ಣ) ಭಾರೀ ಚರ್ಚೆಯನ್ನು ಹುಟ್ಟಿಹಾಕಿದ ಭಾಗ. `ಹಿಂದೂ ಧರ್ಮದ ಒಗಟುಗಳು’ ಕೃತಿಯ ಅನುಬಂಧದಲ್ಲಿ ಸೇರಿಸಲಾದ ಬರಹವೇ ‘ರಾಮ ಕೃಷ್ಣರ ಒಗಟು’.

ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-1)

ಈ ಬರವಣಿಗೆಯನ್ನು ಅಂಬೇಡ್ಕರ್ ಅವರು 1954 ಜನವರಿಯಿಂದ 1955ರ ನವೆಂಬರ್ ಅವಧಿಯಲ್ಲಿ ಬರೆದಿದ್ದಾರೆಂದು ನಾನಕ್ ಚಂದ್ ರತ್ತು ದಾಖಲಿಸುತ್ತಾರೆ. ಚಟ್ನೀಸ್ ಅವರ ಪ್ರಕಾರ ಬಾಬಾಸಾಹೇಬರು 1940-41ರಲ್ಲಿಯೇ ಈ ಪುಸ್ತಕದ ಕೆಲಸ ಶುರುಮಾಡಿದ್ದರು. ಇದು ಮುಗಿಯುವ ಹೊತ್ತಿಗೆ ನವಂಬರ್ 1955 ಆಗಿತ್ತು (ಅಶೋಕ ಗೋಪಾಲ, 62, 2023). ಈ ಕೃತಿಯ ನಾಲ್ಕು ಪ್ರತಿಗಳನ್ನು ಟೈಪ್ ಮಾಡಿದ್ದರಂತೆ, ಇದೇಕೆ ನಾಲ್ಕು ಪ್ರತಿಗಳು ಎಂದು ಕೇಳಿದಾಗ ಅಂಬೇಡ್ಕರ್ ಮುಗುಳುನಕ್ಕು, ‘ಈ ಪುಸ್ತಕದ ಹೆಸರೇನು? ಹಿಂದೂ ಧರ್ಮದ ಒಗಟುಗಳು. ನಿನ್ನ ಪ್ರಶ್ನೆಗೆ ಆ ಹೆಸರೇ ಉತ್ತರ. ನನಗೆ ನನ್ನದೇ ಮುದ್ರಣಾಲಯವಿಲ್ಲ. ಹಾಗಾಗಿ ನಾನು ಯಾವುದಾದರೂ ಹಿಂದೂ ಮುದ್ರಕರಿಗೇ ಕೊಡಬೇಕು. ಕೊಟ್ಟಾದ ಮೇಲೆ ಅದು ಕಳೆದು ಹೋಗುವುದು, ಸುಟ್ಟು ಹೋಗುವುದು ಅಥವಾ ಹಾಳಾಗಿ ಹೋಗುವುದು, ಹೀಗಾಗಿ ನನ್ನ ಹಲವು ವರ್ಷಗಳ ಕಠಿಣ ಶ್ರಮ ಹಾಗೆ ನಷ್ಟವಾಗಿಬಿಡುತ್ತದೆ. ಅದಕ್ಕಾಗಿಯೇ ಏನಾದರಾಗಲಿ, ಎಷ್ಟಾದರೂ ಖರ್ಚಾಗಲಿ ನನ್ನ ಬಳಿ ಮತ್ತೊಂದು ಪ್ರತಿ ಇರಬೇಕು’ ಎಂದಿದ್ದರಂತೆ. `ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನು ಮುದ್ರಣ ಮಾಡುವವರೆ ಆ ಕೃತಿಯನ್ನು ನಾಶ ಮಾಡಬಹುದು ಎನ್ನುವ ಭಯ ಅಂಬೇಡ್ಕರ್ ಅವರಿಗೆ ಇತ್ತು.

ಅಂಬೇಡ್ಕರ್ ಅವರು `ಹಿಂದೂ ಧರ್ಮದ ಒಗಟುಗಳು’ ಕೃತಿಯ ಮೂಲ ಪರಿವಿಡಿಯಲ್ಲಿ `ರಾಮ ಕೃಷ್ಣ’ರ ಅಧ್ಯಾಯವನ್ನು ಸೇರಿಸಿರಲಿಲ್ಲ. ಹಾಗಾಗಿ ಮಹಾರಾಷ್ಟ್ರ ಸರಕಾರ ಹಿಂದೂ ಧರ್ಮದ ಒಗಟುಗಳು ಕೃತಿಯನ್ನು ಪ್ರಕಟಿಸುವಾಗ ಅನುಬಂಧದಲ್ಲಿ ಈ ಪಠ್ಯವನ್ನು ಸೇರಿಸಲಾಯಿತು. ಈ ಕೃತಿ ಪ್ರಕಟವಾದಾಗ 1988ರಲ್ಲಿ ಮರಾಠ ಮಹಾಮಂಡಲದಲ್ಲಿ ಇದರ ಪ್ರತಿಯನ್ನು ಸುಡಲಾಯಿತು. ಇದರಲ್ಲಿ ರಾಮ ಕೃಷ್ಣ ಅಧ್ಯಾಯಕ್ಕೆ ಬಹಳ ಪ್ರತಿರೋಧ ಬಂದಿತು. ಶಿವಸೇನೆಯ ಪ್ರತಿಭಟನೆ ತೀವ್ರವಾದಾಗ ಮಹಾರಾಷ್ಟ್ರ ಸರಕಾರವು ಈ ಪ್ರಕಟಣೆಯನ್ನು ಹಿಂಪಡೆಯಿತು. ಈ ನಡೆಯನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಗಳು ವ್ಯಾಪಕವಾಗಿ ಪ್ರತಿರೋಧ ತೋರಿದ ಕಾರಣ ಮತ್ತೆ ರಾಮಕೃಷ್ಣ ಪಠ್ಯ ಸೇರ್ಪಡೆಯಾಯಿತು. ಈ ಮುದ್ರಣದಲ್ಲಿ ಮಹರಾಷ್ಟ್ರ ಸರಕಾರವು `ಈ ಅಧ್ಯಾಯದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಸರಕಾರದ ಸಹಮತವಿಲ್ಲ’ ಎಂದು ಮುದ್ರಿಸಿತು. ಅಂತಹ ಕ್ರಾಂತಿಕಾರಿ ವಿಚಾರಗಳು, ನಿಗಿನಿಗಿ ಸತ್ಯಗಳು ಈ ಭಾಗದಲ್ಲಿವೆ. ನಾವು ಆದರ್ಶಪುರುಷರೆಂದು ಪೂಜಿಸುವವರ ಕುರಿತ ಮೂಲಪಠ್ಯಗಳು ಏನು ಹೇಳುತ್ತವೆ ಎಂಬುದನ್ನು ಬಾಬಾಸಾಹೇಬರು ಬಿಚ್ಚಿಡುತ್ತಾರೆ.

ಸ್ಟೇಟ್ಸ್ ಅಂಡ್ ಮೈನಾರಿಟೀಸ್

ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ನಿಜವಾದ ಸಂವಿಧಾನವೇ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎನ್ನುತ್ತಾರೆ. ಅದು ಜಾರಿಯಾಗದ ಅಂಬೇಡ್ಕರ್ ಅವರ ಸಂವಿಧಾನವೆಂದೇ ಚರ್ಚೆಯಲ್ಲಿದೆ. ಇಲ್ಲಿ ಮೈನಾರಿಟೀಸ್ ಎಂದರೆ ಕೇವಲ ಮುಸ್ಲಿಮರಾಗಲೀ, ಕ್ರಿಶ್ಚಿಯನ್ನರಾಗಲೀ ಅಲ್ಲ. ಅಸ್ಪೃಶ್ಯರನ್ನು ಅಂಬೇಡ್ಕರ್ ಅವರು ಮೈನಾರಿಟೀಸ್ ಎಂದು ಗುರುತಿಸುತ್ತಾರೆ.

ಎಲ್ಲ ಅಡಕಗಳು, ಕೋಷ್ಟಕಗಳು ಮತ್ತು ವಿವರಣೆಗಳು ಸೇರಿ ಕೇವಲ 79 ಪುಟಗಳಿರುವ ಈ ಪುಟ್ಟ ಪುಸ್ತಕ ಬಾಬಾ ಸಾಹೇಬರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿ ನಮ್ಮ ಮುಂದಿರುವ ಇನ್ನೊಂದು ಮಹತ್ವದ ದಾಖಲೆ. ಅಷ್ಟಕ್ಕೂ ಇದನ್ನು ಅವರು ಬರೆದದ್ದು ಒಂದು ಪುಸ್ತಕ ಬರೆಯುವ ಉದ್ದೇಶದಿಂದ ಅಲ್ಲ. ಇದನ್ನು ಅಂಬೇಡ್ಕರ್ ಒಂದು ಕರಪತ್ರ ಎಂದು ಕರೆದಿದ್ದಾರೆ.

ಸ್ವತಂತ್ರ ಭಾರತಕ್ಕೊಂದು ಸಂವಿಧಾನವನ್ನು ರಚಿಸುವ ಹೊಣೆಯನ್ನು ಸಂವಿಧಾನ ಸಭೆಗೆ ವಹಿಸಿಕೊಡುವುದು ಎಂದು ಖಾತರಿಯಾದ ಮೇಲೆ All India Scheduled Caste Federationನ ಕಾರ್ಯಕಾರಿ ಸಮಿತಿಯವರು ಅವರ ಪರವಾಗಿ ಸಂವಿಧಾನ ರಚನಾ ಸಭೆಗೆ ಸಲ್ಲಿಸಲು ಪರಿಶಿಷ್ಟ ಜಾತಿಗೆ ಸೇರಿದವರ ಹಕ್ಕುಗಳ ಸಂರಕ್ಷಣೆಯ ಕುರಿತಂತೆ ಒಂದು ಬಿನ್ನವತ್ತಲೆಯನ್ನು ರಚಿಸುವಂತೆ ಕೇಳಿಕೊಂಡರು. ಈ ಕಾರ್ಯವನ್ನು ಬಹಳ ಸಂತೋಷದಿಂದ ಒಪ್ಪಿಕೊಂಡು ನೆರವೇರಿಸಿದರು ಅಂಬೇಡ್ಕರ್. ಆ ಶ್ರಮದ ಫಲವೇ ಈ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’.

29a States and Minorities
ಸ್ಟೇಟ್ಸ್ ಅಂಡ್ ಮೈನಾರಿಟೀಸ್

ಪಕ್ಕಾ ಎಡಪಂಥೀಯ ಚಿಂತನೆಗಳು ಈ ಸ್ಟೇಟ್ಸ್ ಅಂಡ್ ಮೈನಾರಿಟಿಸ್ ಕೃತಿಯಲ್ಲಿವೆ. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತಕ್ಕೊಂದು ಸಾಂವಿಧಾನಿಕ ಬುನಾದಿ ಹಾಕಿಕೊಡುವ ವಿಚಾರದಲ್ಲಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಅದೆಷ್ಟು ಆಪ್ತರೀತಿಯಲ್ಲಿ ಹಾಗೂ ತೀವ್ರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎನ್ನುವುದನ್ನೂ ಈ ಕೃತಿ ಸೂಚಿಸುತ್ತದೆ.

1.ಪ್ರಮುಖ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿರಬೇಕು. ಅದೇ ರೀತಿಯಾಗಿ, ಮೂಲಭೂತ ಅಥವಾ ಪ್ರಾಥಮಿಕ ಕೈಗಾರಿಕೆಗಳು ಸರ್ಕಾರದ ಮಾಲೀಕತ್ವದಲ್ಲಿ ಇರಬೇಕು ಮತ್ತು ಸರ್ಕಾರಿ ನಿಗಮಗಳ ಮೂಲಕ ನಿರ್ವಹಿಸಲ್ಪಡಬೇಕು.

ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-2)

2.ಕೃಷಿಯು ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರಬೇಕು. ಕೈಗಾರಿಕೆ, ವಿಮೆ ಮತ್ತು ಭೂಮಿಯ ಒಡೆತನ ಹೊಂದಿರುವ ಖಾಸಗಿಯವರ ಹಾಲಿ ಹಕ್ಕುಗಳನ್ನು ಸರ್ಕಾರವು ವಶಪಡಿಸಿಕೊಳ್ಳಬೇಕು. ಅವರ ಹಕ್ಕುಗಳ ಬೆಲೆಗೆ ಸಮನಾದ ಡಿಬೆಂಚರುಗಳನ್ನು ಪರಿಹಾರವಾಗಿ ಅವರಿಗೆ ನೀಡಬೇಕು. ಆ ಡಿಬೆಂಚರುಗಳನ್ನು ನಗದಾಗಿ ಪರಿವರ್ತಿಸುವ ಅವಧಿಯನ್ನು ಸರ್ಕಾರವೇ ನಿರ್ಧರಿಸಬೇಕು. ಹೀಗೆ ಸಾಗುತ್ತವೆ ಬಾಬಾ ಸಾಹೇಬರ ಆಲೋಚನೆಗಳು.

ಬುದ್ಧ ಅಂಡ್ ಹಿಸ್ ಧಮ್ಮ

‘ವಿಜ್ಞಾನ ತಿಳಿದಿರುವ ಒಬ್ಬ ಆಧುನಿಕ ಮನುಷ್ಯನಿಗೆ ಧರ್ಮವೊಂದು ಬೇಕಾದಲ್ಲಿ ಅವನು ಸ್ವೀಕರಿಸಬಹುದಾದ ಏಕೈಕ ಧರ್ಮವೆಂದರೆ ಬೌದ್ಧಧರ್ಮ’ ಎಂದವರು ಅಂಬೇಡ್ಕರ್. ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ’ ಎಂದಿದ್ದ ಅವರು ಕೊನೆಗೆ ಬೌದ್ಧಧಮ್ಮಕ್ಕೆ ಮರಳಿದರು. ಕ್ರಿಶ್ಚಿಯನ್ನರ ಬೈಬಲ್ ರೀತಿಯಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತಹ ಕೃತಿಯೊಂದನ್ನು ಬೌದ್ಧ ಅನುಯಾಯಿಗಳಿಗೆ ಬರೆಯಬೇಕೆಂದು ಹೊರಟು ಬಾಬಾ ಸಾಹೇಬರು ರೂಪಿಸಿದ ಕೃತಿಯೇ ‘ಬುದ್ಧ ಅಂಡ್ ಹಿಸ್ ಧಮ್ಮ’. ಆದರೆ 1956ರ ಡಿಸೆಂಬರ್ 5ರ ರಾತ್ರಿ ಪೀಠಿಕೆಯನ್ನು ಕೊನೆಯದಾಗಿ ತಿದ್ದಿ ವಿರಮಿಸಿದರು. ಅವರೇ ಮುಂಬೈನಲ್ಲಿ ಸ್ಥಾಪಿಸಿದ್ದ ಸಿದ್ಧಾರ್ಥ ಕಾಲೇಜು 1957ರಲ್ಲಿ ಆ ಪುಸ್ತಕವನ್ನು ಪ್ರಕಟಿಸಿತು.

ಬುದ್ಧನ ಕುರಿತು ಹಬ್ಬಿರುವ ಕಪೋಲಕಲ್ಪಿತ ಥಿಯರಿಗಳನ್ನು ಬಾಬಾಸಾಹೇಬರು ಈ ಕೃತಿಯ ಮೂಲಕ ಬುಡಮೇಲು ಮಾಡಿದರು. ಬುದ್ಧ ರಾಜ್ಯವನ್ನು ತೊರೆದದ್ದು ರೋಹಿಣಿ ನದಿ ವಿಚಾರದಲ್ಲಿ ಉಂಟಾಗಿದ್ದ ವಿವಾದದ ಕಾರಣ ಎಂದು ಬಿಚ್ಚಿಟ್ಟರು. ನದಿ ನೀರಿನ ವಿಚಾರದಲ್ಲಿ ಶಾಕ್ಯ ಮತ್ತು ಕೋಲಿಯಾ ಎರಡೂ ಕಡೆಗಳಿಂದ ತಪ್ಪುಗಳಾಗಿರುವುದರಿಂದ ಕೋಲಿಯಾರನ್ನು ಸಹೋದರರೆಂದು ಪರಿಗಣಿಸಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬ ಸಲಹೆಯನ್ನು ಸಿದ್ಧಾರ್ಥ ನೀಡುತ್ತಾನೆ. ಇದು ಒಪ್ಪಿಗೆಯಾಗದೆ ಗಡಿಪಾರಿಗೆ ಒಳಗಾಗಬೇಕಾಗುತ್ತದೆ. ಬುದ್ಧ ರಾತ್ರೋರಾತ್ರಿ ಮನೆಬಿಟ್ಟು ಹೋದ ಎಂಬ ಕಥೆಯನ್ನು ಅಂಬೇಡ್ಕರ್ ಅಲ್ಲಗಳೆಯುತ್ತಾರೆ. ಅರಿವು ಪಡೆದ ಗೌತಮ ಬುದ್ಧನು ಆತ್ಮದ ಪರಿಕಲ್ಪನೆಯನ್ನು ನಿರಾಕರಿಸಿದ. ಆದರೆ ಪುನರ್ ಜನ್ಮವನ್ನು ವಿಚಾರಗಳ ಮರುಹುಟ್ಟಿನ ಭಾಗವಾಗಿ ವೈಜ್ಞಾನಿಕವಾಗಿ ನೋಡಿದ. ಧರ್ಮ ಮತ್ತು ಧಮ್ಮದ ನಡುವಿನ ವ್ಯತ್ಯಾಸಗಳನ್ನು ಅಂಬೇಡ್ಕರ್ ಚರ್ಚೆಗೆ ತರುತ್ತಾರೆ. ಬುದ್ಧನದ್ದು ಧಮ್ಮ ಮಾರ್ಗ ಎನ್ನುತ್ತಾರೆ.

37a Budda and His Dhamma
ಬುದ್ಧ ಅಂಡ್ ಹಿಸ್ ಧಮ್ಮ

“ಅಲೌಖಿಕ ಶಕ್ತಿಯನ್ನು ನಂಬುವುದು ಧಮ್ಮವಲ್ಲ, ದೇವರನ್ನು ನಂಬುವುದು ಧಮ್ಮವಲ್ಲ. ಬ್ರಹ್ಮನೊಂದಿಗೆ ಐಕ್ಯವಾಗುವುದರ ಮೇಲೆ ಅವಲಂಬಿತವಾಗಿರುವ ಧಮ್ಮ ಸುಳ್ಳು ಧಮ್ಮ. ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಬಲಿ ಕೊಡುವುದರಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಧಮ್ಮದ ಮೇಲೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ ಮತ್ತು ಧಮ್ಮದ ಮೇಲಿನ ಗ್ರಂಥಗಳು ಎಂದೂ ಸುಳ್ಳಾಗುವುದಿಲ್ಲ ಎಂದು ನಂಬುವುದು ಧಮ್ಮವಲ್ಲ. ಧಮ್ಮವು ಸುಧಮ್ಮವಾಗಬೇಕಾದರೆ ಅದು ಪ್ರಜ್ಞೆ, ಮೈತ್ರಿ ಮತ್ತು ಕರುಣೆಯನ್ನು ಪೋಷಿಸಬೇಕು. ಧಮ್ಮವು ನೈತಿಕತೆಯನ್ನು ತರ್ಕಾತೀತ ನೆಲೆಯಲ್ಲಿ ಗುರುತಿಸುವುದಿಲ್ಲ. ಧಮ್ಮವೆಂದರೆ ಅಂಧಭಕ್ತಿ ಮತ್ತು ಮೌಢ್ಯವನ್ನು ತಿರಸ್ಕರಿಸಿ ಮನುಷ್ಯರ ನಡುವೆ ಪಾರಸ್ಪರಿಕ ಸಂಬಂಧವನ್ನು ನಿಯಂತ್ರಿಸುವ ನೈತಿಕತೆಯಾಗಿದೆ” ಎಂಬ ಸಂಗತಿಯನ್ನು ಅಂಬೇಡ್ಕರ್ ಹೇಳುತ್ತಾರೆ.

ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್

“ಕಾರ್ಲ್ ಮಾರ್ಕ್ಸ್ ಮತ್ತು ಬುದ್ಧನ ನಡುವೆ ಇರುವ ಸಾಮ್ಯತೆಗಳೇನು ಮತ್ತು ವ್ಯತ್ಯಾಸಗಳೇನು ಎಂಬುದು ಸ್ಪಷ್ಟ. ಸಾಧನಗಳ ಬಗ್ಗೆ ವ್ಯತ್ಯಾಸಗಳಿವೆ, ಗುರಿ ಇಬ್ಬರದೂ ಒಂದೇ” ಎಂದಿದ್ದಾರೆ ಅಂಬೇಡ್ಕರ್.

ನವೆಂಬರ್ 26, 1956ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ 4ನೇ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣವೇ ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್. ಈ ಭಾಷಣಕ್ಕಿರುವ ಮಹತ್ವವನ್ನು ಅರಿಯಬೇಕಾದರೆ, ಅಕ್ಟೋಬರ್ 14, 1956 ಮತ್ತು ಡಿಸೆಂಬರ್ 6, 1956 ದಿನಾಂಕಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕು. ಏಕೆಂದರೆ ಮೊದಲನೆಯದ್ದು ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕಾರ ಮಾಡಿದ ದಿನವಾದರೆ ಎರಡನೆಯದ್ದು ಅವರು ಪರಿನಿಬ್ಬಾಣವಾದ ದಿನ. ಅಂದರೆ ಅವರು ಬೌದ್ಧ ಧಮ್ಮ ಸ್ವೀಕರಿಸಿದ 41 ದಿನಗಳ ನಂತರ ಹಾಗೂ ಕೊನೆಯುಸಿರೆಳೆಯುವ 10 ದಿನಗಳ ಹಿಂದೆ ಮಾಡಿದ ಭಾಷಣವಿದು. ಅಂದರೆ ಅಂಬೇಡ್ಕರ್ ಅವರಿಗೆ ತಮ್ಮ ಕಡೆಯ ಕಾಲದಲ್ಲಿ ಬುದ್ಧನೊಂದಿಗೆ ಕಾರ್ಲ್ ಮಾರ್ಕ್ಸ್‌ರನ್ನು ಹೋಲಿಸಿ ನೋಡುವ ಅವಶ್ಯಕತೆ ಏರ್ಪಟ್ಟಿದ್ದು ಏಕೆಂಬುದು ಮಹತ್ವದದ ಸಂಗತಿಯಾಗುತ್ತದೆ ಎನ್ನುತ್ತಾರೆ ಬರಹಗಾರ ವಿಕಾಸ್ ಆರ್. ಮೌರ್ಯ.

ಬುದ್ಧನ ವಿಚಾರಗಳಿಗೂ ಮಾರ್ಕ್ಸ್ ವಿಚಾರಗಳಿಗೂ ಇರುವ ಸಾಮ್ಯತೆಗಳನ್ನು ಅಂಬೇಡ್ಕರ್ ಗುರುತಿಸುತ್ತಾರೆ. ಆದರೆ ಕಮ್ಯುನಿಸ್ಟ್ ರಾಷ್ಟ್ರಗಳು ಕ್ರಿಶ್ಚಿಯನ್ ಧರ್ಮಾಂಧತೆಯನ್ನು ಟೀಕಿಸುವ ಭರದಲ್ಲಿ ಬುದ್ಧನ ತತ್ವಗಳನ್ನು ಮರೆತಿದ್ದಾರೆ ಎಂಬ ಅಭಿಪ್ರಾಯವನ್ನು ಅಂಬೇಡ್ಕರ್ ತಾಳುತ್ತಾರೆ. ಸಂಪತ್ತಿನ ಹಂಚಿಕೆಯ ವಿಚಾರದಲ್ಲಿ ಬುದ್ಧನಂತೆಯೇ ಮಾರ್ಕ್ಸ್‌ ಮಾತನಾಡಿರುವುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸುತ್ತಾರೆ. ಸರ್ವಾಧಿಕಾರದ ವಿಚಾರದಲ್ಲಿ ಬುದ್ಧಗುರು ಪ್ರಜಾಸತ್ತಾತ್ಮಕವಾದಿಯಾಗಿದ್ದು, ಎಂದಿಗೂ ಸರ್ವಾಧಿಕಾರವನ್ನು ಸಹಿಸುತ್ತಿರಲಿಲ್ಲ. ಸರ್ವಾಧಿಕಾರವು ಸಂಘರ್ಷವನ್ನು ಕೊನೆಗೊಳಿಸುವುದೇ ಇಲ್ಲ. ಸರ್ವಾಧಿಕಾರದಲ್ಲಿ ಕೇವಲ ಕರ್ತವ್ಯಗಳಿರುತ್ತವೆ. ಆದರೆ ಪ್ರಜಾಪ್ರಭುತ್ವದಲ್ಲಿ ಕರ್ತವ್ಯದ ಜೊತೆಗೆ ಹಕ್ಕುಗಳೂ ಇರುತ್ತವೆ. ಹಾಗಾಗಿ ಇವೆರಡು ವಿಚಾರಗಳಲ್ಲಿ ಮಾರ್ಕ್ಸ್‌ವಾದಿಗಳಿಗಿಂತಲೂ ಬುದ್ಧಗುರುವಿನ ವಿಚಾರಗಳು ಹೆಚ್ಚು ಮೌಲ್ಯಯುತವೆಂದು ತೀರ್ಮಾನಿಸುತ್ತಾರೆ. ʻಬುದ್ಧಗುರು ಬೋಧಿಸಿದ ಮಾರ್ಗದೊಂದಿಗೆ ಕಮ್ಯುನಿಸಂ ಸ್ಥಾಪಿಸುವುದು ಅತ್ಯಂತ ಹೆಚ್ಚು ಫಲಕಾರಿ’ ಎನ್ನುತ್ತಾರೆ ಅಂಬೇಡ್ಕರ್.

budda or karl marks
ಬುದ್ಧ ಅಥವಾ ಕಾರ್ಲ್‌ ಮಾರ್ಕ್ಸ್‌

ಅಂಬೇಡ್ಕರ್ ಅವರಿಗೆ ರಷ್ಯಾ ಕ್ರಾಂತಿಯ ಬಗ್ಗೆ ಒಂದು ರೀತಿಯ ಮೆಚ್ಚುಗೆ ಇತ್ತು. 1922ರಲ್ಲಿ ಜೋಸೆಫ್ ಸ್ಟಾಲಿನ್ ಅಧಿಕಾರ ವಹಿಸಿಕೊಂಡಾಗ ಕಮ್ಯುನಿಸ್ಟ್ ರಾಷ್ಟ್ರವೊಂದು ಚಮ್ಮಾರರ ಮಗನನ್ನು ಅಧ್ಯಕ್ಷನನ್ನಾಗಿಸಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸ್ಟಾಲಿನ್ ಸತ್ತಾಗ ಅಂಬೇಡ್ಕರ್ ಅವರು ಉಪವಾಸ ಆಚರಿಸುವ ಮೂಲಕ ದುಃಖ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗುತ್ತದೆ. ಹಾಗಾಗಿ ಚಿಂತಕ ಆನಂದ ತೇಲ್ತುಂಬ್ಡೆಯವರ ಪ್ರಕಾರ ಅಂಬೇಡ್ಕರ್ ಅವರಿಗೆ ಸ್ಥಳೀಯ ಕಮ್ಯುನಿಸ್ಟರ ಬಗ್ಗೆ ಅಸಮಾಧಾನವಿತ್ತೇ ಹೊರತು ಅಂತಾರಾಷ್ಟ್ರೀಯ ಮಟ್ಟದ ಕಮ್ಯುನಿಸ್ಟರ ಬಗ್ಗೆ ಒಂದು ರೀತಿಯ ಆಸಕ್ತಿ ಇತ್ತು. ಅವರಿಗೆ ಕಮ್ಯುನಿಸಂ ಸಿದ್ಧಾಂತಕ್ಕಿಂತಲೂ ಅದನ್ನು ಜಾರಿಗೊಳಿಸುವ ರೀತಿಯಲ್ಲಿ ತಕರಾರು ಇತ್ತು. ಭಾರತೀಯ ಜಾತಿವಾದಿ ಮನಸ್ಥಿತಿಗಳ ಕೈಗೆ ಕಮ್ಯುನಿಸ್ಟ್ ಚಳವಳಿಯನ್ನು ಕೊಟ್ಟಿದ್ದೇ ಅದು ಇಲ್ಲಿ ಸಫಲವಾಗದಿರಲು ಕಾರಣವಾಗಿರುವುದನ್ನು ಈ ಕೃತಿಯ ಮೂಲಕ ಗುರುತಿಸಬಹುದು.

ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ

ಬಾಬಾಸಾಹೇಬರ ವೈಚಾರಿಕ ಆಕ್ರೋಶಕ್ಕೆ ಹೊಸ ದೃಷ್ಟಿಕೋನ ನೀಡುವ ಶಕ್ತಿ ಇತ್ತು. ಅವರು ಬರೆದ ಅನೇಕ ಬರಹಗಳು ಪ್ರತಿರೋಧದ ಪ್ರತಿಕ್ರಿಯೆಗಳು ಎಂಬುದನ್ನು ಗಮನಿಸಬೇಕು. ಹಾಗೆ ಹುಟ್ಟಿದ ಬರಹ ‘ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್’. ಮಾರ್ಚ್ 1950ರಲ್ಲಿ ಮಹಾಬೋಧಿ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, “ಭಾರತದಲ್ಲಿ ಮಹಿಳೆಯರ ಅವನತಿಗೆ ಪುರುಷನೇ ಆಗಿದ್ದ ಬುದ್ಧ ಅಥವಾ ಬೌದ್ಧ ಧರ್ಮವೇ ಕಾರಣ” ಎಂದು ಆರೋಪ ಮಾಡಲಾಗಿತ್ತು. ಇದನ್ನು ಕಂಡು ಆಘಾತಗೊಂಡ ಬಾಬಾ ಸಾಹೇಬರು, ಮಹಿಳೆಯರ ಪತನಕ್ಕೆ ಬುದ್ಧನನ್ನು ದೂಷಿಸುವವರ ವಿರುದ್ಧ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಾರೆ. ಇತಿಹಾಸದ ಸತ್ಯವನ್ನು ತೆರೆದಿಡುತ್ತಾರೆ. ಮಹಿಳೆಯರಿಗೆ ಬುದ್ಧ ನೀಡಿದ ಮಹತ್ವವನ್ನು ಮತ್ತು ಪ್ರತಿಕ್ರಾಂತಿಯ ನಂತರ ಬ್ರಾಹ್ಮಣೀಯ ಸಾಮ್ರಾಜ್ಯ ಹಿಂದೂ ಮಹಿಳೆಯರ ಮೇಲೆ ಹೇರಿದ ದಮನಕಾರಿ ನಿಯಮಗಳನ್ನು ಅಂಬೇಡ್ಕರ್ ವಿಸ್ತೃತವಾಗಿ ಚರ್ಚಿಸುತ್ತಾರೆ.

ಇದನ್ನೂ ಓದಿರಿ: ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?

ಹೆಣ್ಣುಮಕ್ಕಳ ಜನನವನ್ನು ಸಂಕಟಕರ ವಿದ್ಯಮಾನವೆಂದು ಕಾಣುತ್ತಿದ್ದ ಪುರುಷಾಧಿಪತ್ಯದ ಸಮಾಜದಲ್ಲಿ, ಬುದ್ಧನು ಮಹಿಳೆಯರ ವ್ಯಕ್ತಿತ್ವವನ್ನೂ, ಅವರ ಧರ್ಮ, ಸಮಾಜ ಮತ್ತು ರಾಜಕೀಯದಲ್ಲಿ ಅವರ ಮಹತ್ತರ ಪಾತ್ರವನ್ನೂ ಪ್ರೋತ್ಸಾಹಿಸಿದ್ದನು. ಬುದ್ಧನ ಈ ಉದಾತ್ತ ನಿಲುವನ್ನು ಅರ್ಥೈಸಿಕೊಳ್ಳದವರು, ಆತನ ಹೆಸರನ್ನು ದುರುಪಯೋಗ ಮಾಡಿಕೊಂಡು ಆತ ಮಹಿಳಾ ವಿರೋಧಿ ಎಂದು ದೋಷಾರೋಪಣೆ ಮಾಡುತ್ತಾರೆ. ಬುದ್ಧನ ವಾಸ್ತವ ವ್ಯಕ್ತಿತ್ವವನ್ನು ಅರಿಯದೆ ಮೂಢರಂತೆ ಮಾತಾಡುತ್ತಾರೆ ಎಂಬುದು ಬಾಬಾಸಾಹೇಬರ ದೃಢ ನಿಲುವು.

ಬುದ್ಧನು ಇಂತಹ ವೈದಿಕ ಕ್ರೌರ್ಯವನ್ನು ನಾಶಗೊಳಿಸಿದ್ದನು. ಮಹಿಳೆಯರಿಗೂ ಪುರುಷರಂತೆ ಜ್ಞಾನಾರ್ಜನೆಯ ಹಕ್ಕನ್ನು ನೀಡಿದ್ದನು. ಮಾನವ ತನ್ನ ಉನ್ನತಿಯನ್ನು ತಾನೇ ನಿರ್ಧರಿಸಬೇಕು ಎಂದು ಬುದ್ಧ ಪ್ರತಿಪಾದಿಸಿದನು. ‘ಇದು ಭಾರತದಲ್ಲಿ ನಡೆದ ಮೊತ್ತ ಮೊದಲ ಮಹಿಳಾ ಕ್ರಾಂತಿ ಮತ್ತು ಆಕೆಯ ನಿಜವಾದ ವಿಮೋಚನೆ’ ಅನ್ನುತ್ತಾರೆ ಅಂಬೇಡ್ಕರ್.

ಮನುಸ್ಮೃತಿಯು ಭಾರತದ ಮಹಿಳೆಯರಿಗೆ ಬಗೆದ ಬಹುದೊಡ್ಡ ಅವಹೇಳನ ಮತ್ತು ಆಘಾತದ ಮೂಲ. ಮನು ಮಹಿಳೆಯರಿಂದ ಜ್ಞಾನಾರ್ಜನೆಯ ಹಕ್ಕನ್ನು ಕಸಿದುಕೊಂಡ. ಆಕೆಗೆ ಆಧ್ಯಾತ್ಮಿಕ ಸಾಮರ್ಥ್ಯವಿಲ್ಲ ಎಂಬ ಕಾರಣ ಹೇಳಿ, ಸನ್ಯಾಸ ಜೀವನಕ್ಕೆ ಅವಕಾಶ ನಿರಾಕರಿಸಲಾಯಿತು. ಇದು ಮಹಿಳೆಯರ ವಿರುದ್ಧ ಬೇರೂರಿಸಿದ ಕ್ರೌರ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸುತ್ತಾರೆ ಅಂಬೇಡ್ಕರ್.

ಬುದ್ಧನ ಕಾಲದಲ್ಲಿ ಮಹಿಳೆಯರಿಗಿದ್ದ ಸ್ವಾತಂತ್ರ್ಯವನ್ನು ಮನು ನಾಶಮಾಡಿದನು. ಬುದ್ಧನ ಕಾಲದಲ್ಲಿ ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದು ಭಿಕ್ಕುಣಿಯಾಗುವುದು ಸಾಧ್ಯವಿತ್ತು. ಆದರೆ ಮನುವಿನ ಪರಂಪರೆಯು ಆ ಅವಕಾಶವನ್ನು ಕಿತ್ತುಕೊಂಡಿತು ಎನ್ನುತ್ತಾರೆ.

ಶೂದ್ರರು ಯಾರಾಗಿದ್ದರು?

ವರ್ಣ ವ್ಯವಸ್ಥೆಯಲ್ಲಿ ಶೂದ್ರರ ಮೂಲವನ್ನು ಶೋಧಿಸುವ ಕೃತಿಯೇ ‘ಶೂದ್ರರು ಯಾರಾಗಿದ್ದರು?’. ಈ ಕೃತಿಯನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರಿಗೆ ಸಮರ್ಪಿಸಲಾಗಿದೆ. “ಉಚ್ಚ ವರ್ಗಗಳಿಗೆ ಗುಲಾಮರಾಗಿದ್ದ ತಳವರ್ಗಗಳಲ್ಲಿ ಆ ಕುರಿತು ಅರಿವು ಮೂಡಿಸಿದ ಮತ್ತು ಸಾಮಾಜಿಕ ಜನತಂತ್ರ ಎಂಬುದು ವಿದೇಶೀಯರಿಂದ ಸ್ವಾತಂತ್ರ್ಯ ಗಳಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದು ಎಂಬ ಪರಮಸತ್ಯವನ್ನು ಬೋಧಿಸಿದ ಆಧುನಿಕ ಭಾರತದ ಮಹಾಶೂದ್ರ” ಎಂದು ಜ್ಯೋತಿಬಾ ಅವರನ್ನು ಬಾಬಾ ಸಾಹೇಬರು ಬಣ್ಣಿಸಿದ್ದಾರೆ. ತಮ್ಮ ಮೂಲವನ್ನು ಅರಿಯದ ಶೂದ್ರರಿಗಾಗಿ ಈ ಕೃತಿಯನ್ನು ಅಂಬೇಡ್ಕರ್ ಬರೆಯುತ್ತಾರೆ.

ಬ್ರಾಹ್ಮಣರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹಾಗೂ ಆ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಬಳಸಿದ ತಂತ್ರಗಳನ್ನು ಬಾಬಾಸಾಹೇಬರು ಆಧಾರಗಳ ಉಲ್ಲೇಖಗಳ ಮೂಲಕ ಈ ಕೃತಿಯಲ್ಲಿ ವಿವರಿಸುತ್ತಾರೆ. ಬ್ರಾಹ್ಮಣರು ಧರ್ಮಶಾಸ್ತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿರುವುದು, ಶೂದ್ರರಿಗೆ ಶಿಕ್ಷಣವೂ ಸೇರಿದಂತೆ ಸಾಕಷ್ಟು ಹಕ್ಕುಗಳನ್ನು ನಿರಾಕರಿಸುವುದು ಹಾಗೂ ಶೂದ್ರರನ್ನು ದಾಸ್ಯಕ್ಕಾಗಿ ಬಳಸಿಕೊಳ್ಳುವ ಕುತಂತ್ರಗಳನ್ನು ಬಾಬಾಸಾಹೇಬರು ತಮ್ಮ ಈ ಕೃತಿಯಲ್ಲಿ ಸಂಶೋಧನಾ ಸಾಕ್ಷ್ಯಗಳ ಸಹಿತ ತೆರೆದಿಡುತ್ತಾರೆ.

ಅಸ್ಪೃಶ್ಯರು ಯಾರಾಗಿದ್ದರು?

ಶೂದ್ರರು ಯಾರಾಗಿದ್ದರು ಕೃತಿಯ ಮುಂದುವರಿದ ಭಾಗವಾಗಿ ಬರೆದ ಕೃತಿಯೇ ‘ಅಸ್ಪೃಶ್ಯರು ಯಾರಾಗಿದ್ದರು?’. ಭಾರತದಲ್ಲಿ ಅಸ್ಪೃಶ್ಯರು ಏಕೆ ಅಸ್ಪೃಶ್ಯರಾದರು ಎಂಬುದನ್ನು ವಿಶ್ಲೇಷಿಸುವಾಗ, ಡಾ. ಅಂಬೇಡ್ಕರ್ ಹೊಸ ಸಿದ್ಧಾಂತಗಳಾಗಿ ಎರಡು ವಿವರಣೆಗಳನ್ನು ನೀಡುತ್ತಾರೆ. ಅಸ್ಪೃಶ್ಯತೆ ಉದ್ಭವಿಸಿ ಮುಂದುವರೆದಿದ್ದು: ಅ- ಬ್ರಾಹ್ಮಣರು `ಭಗ್ನ ಮಾನವʼ- ಬ್ರೋಕನ್ ಮ್ಯಾನ್‌’ರನ್ನು ತಿರಸ್ಕಾರಿಸಿದ್ದು ಮತ್ತು ʻಭಗ್ನ ಮಾನವʼರಿಂದ ಗೋಮಾಂಸ ಭಕ್ಷಣೆಯ ಮುಂದುವರಿಕೆ. ಭಗ್ನ ಮಾನವರು ಬೌದ್ಧರಾಗಿದ್ದ ಕಾರಣಕ್ಕೆ ಬ್ರಾಹ್ಮಣರು ಅವರ ಬಗ್ಗೆ ಅಸಹ್ಯಪಡುತ್ತಿದ್ದರು ಹಾಗೂ ಅವರು ಅವರ ವಿರುದ್ಧ ತಿರಸ್ಕಾರ ಮತ್ತು ದ್ವೇಷವನ್ನು ಬೋಧಿಸಿದರು. ಹಾಗಾಗಿ ಭಗ್ನಮಾನವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಯಿತು ಎಂದು ಅವರು ಹೇಳುತ್ತಾರೆ. ಮುಂದೆ ವಿವರಿಸುತ್ತ ಅಸ್ಪೃಶ್ಯರು ಬ್ರಾಹ್ಮಣರನ್ನು ಅಮಂಗಳಕರರೆಂದು ಪರಿಗಣಿಸಿದ ಸಮಯದಲ್ಲಿಯೇ ಬ್ರಾಹ್ಮಣರು ಬೌದ್ಧರ ಶತ್ರುಗಳಾಗಿದ್ದರು ಮತ್ತು ‘ಭಗ್ನ ಮಾನವರು’ ಬೌದ್ಧ ಧರ್ಮವನ್ನು ಬಿಟ್ಟುಕೊಡದ ಕಾರಣ ಅವರ ಮೇಲೆ ಅಸ್ಪೃಶ್ಯತೆಯನ್ನು ಹೇರಿದರು.

ಇದಲ್ಲದೆ, ಬೌದ್ಧರ ವಿರುದ್ಧ ಬ್ರಾಹ್ಮಣರು ತಿರಸ್ಕಾರ ಮತ್ತು ಅಪಹಾಸ್ಯದ ವಾತಾವರಣವನ್ನು ಸೃಷ್ಟಿಸಿದರು ಎಂದು ಡಾ. ಅಂಬೇಡ್ಕರ್ ಅವರು ಒತ್ತಿ ಹೇಳುತ್ತಾರೆ. ಗೋಮಾಂಸ ಭಕ್ಷಣೆಗಾಗಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಲಾಯಿತು. ಬ್ರಾಹ್ಮಣರು ಕೂಡ ಮೊದಲು ಹಸುಗಳನ್ನು ಕೊಂದು ತಿನ್ನುತ್ತಿದ್ದರು (ಶಾಸ್ತ್ರಗಳು ಮತ್ತು ಮನುಸ್ಮೃತಿಯಲ್ಲಿ ಕಂಡುಬರುವಂತೆ), ಆದರೆ ಅವರು ಗೋ-ಪೂಜೆಯ ಆಚರಣೆಗಳಿಂದಾಗಿ ಗೋಮಾಂಸ ಭಕ್ಷಣೆಯನ್ನು ಬಿಟ್ಟುಬಿಟ್ಟರು ಎಂದು ಅವರು ವಿವರಿಸುತ್ತಾರೆ. ಬ್ರಾಹ್ಮಣರನ್ನು ಅನುಕರಿಸುವ ಬಯಕೆಯಿಂದಾಗಿ ಬ್ರಾಹ್ಮಣೇತರರು ಸಹ ಗೋಮಾಂಸ ಭಕ್ಷಣೆಯನ್ನು ಬಿಟ್ಟುಬಿಟ್ಟರು. ವಾಸ್ತವವಾಗಿ, ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿ ಬದಲಾಗಲು ಕಾರಣ; ಬೌದ್ಧಧರ್ಮದ ಮೇಲೆ ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಲು ಬ್ರಾಹ್ಮಣರು ರೂಪಿಸಿದ ತಂತ್ರ ಎಂದು ಡಾ. ಅಂಬೇಡ್ಕರ್ ಪ್ರತಿಪಾದಿಸುತ್ತಾರೆ. ಅಸ್ಪೃಶ್ಯರು ಯಾರಾಗಿದ್ದರು ಮತ್ತು ಶೂದ್ರರು ಯಾರಾಗಿದ್ದರು ಕೃತಿಗಳ ಚರ್ಚೆ ಮತ್ತಷ್ಟು ಆಗಬೇಕಿದೆ.

ರೂಪಾಯಿ ಸಮಸ್ಯೆ

ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ `ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ ಕೃತಿಯು ಭಾರತೀಯ ಆರ್ಥಿಕ ಇತಿಹಾಸ ಮತ್ತು ಹಣಕಾಸು ನೀತಿ ಕ್ಷೇತ್ರದ ಒಂದು ಪ್ರಮುಖ ಪುಸ್ತಕ. ಆದರೆ ಇದು ಕೇವಲ ಅರ್ಥಶಾಸ್ತ್ರದ ಕುರಿತಾದ ಪಠ್ಯವಲ್ಲ, ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತ ಎದುರಿಸಿದ ಸವಾಲುಗಳ ಆಳವಾದ ಅಧ್ಯಯನವೂ ಹೌದು.

ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್

ಡಾ. ಅಂಬೇಡ್ಕರ್ ಅವರು ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞರು ಆಗಿದ್ದರು. ಈ ಪುಸ್ತಕ ಅವರ ಆಳವಾದ ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಭಾರತದ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೃತಿಯಲ್ಲಿ, ಡಾ. ಅಂಬೇಡ್ಕರ್ ಭಾರತೀಯ ರೂಪಾಯಿಯ ಐತಿಹಾಸಿಕ ವಿಕಾಸ, ಅದರ ಏರಿಳಿತದ ಮೌಲ್ಯ ಮತ್ತು ವಸಾಹತುಶಾಹಿ ಯುಗದಲ್ಲಿ ಅದರ ಪಥವನ್ನು ರೂಪಿಸಿದ ವಿವಿಧ ಆರ್ಥಿಕ ನೀತಿಗಳನ್ನು ಪರಿಶೀಲಿಸುತ್ತಾರೆ. `1923ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಡಾಕ್ಟರೇಟ್‌ಗಾಗಿ ಸಲ್ಲಿಸಿದ ಪ್ರಬಂಧವಿದು. ಭಾರತದಂತಹ ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಕಾಗದದ ನೋಟು ಚಲಾವಣೆಯಲ್ಲಿ ಇರಬೇಕೋ, ಅಥವಾ ಚಿನ್ನದ ನಾಣ್ಯ ಇರಬೇಕೋ ಅನ್ನುವ ಸಮಸ್ಯೆಯನ್ನು ಈ ಪುಸ್ತಕ ಚರ್ಚಿಸುತ್ತದೆ. ಈ ಪುಸ್ತಕದ ಆಧಾರದ ಮೇಲೆ ಮುಂದೆ ‘ಭಾರತೀಯ ರಿಸರ್ವ್ ಬ್ಯಾಂಕ್’ (ಆರ್‌ಬಿಐ) ಸ್ಥಾಪನೆ ಆಯಿತು.

65 Rupaayi Samasye
ರೂಪಾಯಿ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ

ಅವರ ಈ ಪುಸ್ತಕದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅರ್ಥಶಾಸ್ತ್ರ ತಜ್ಞ ಜನಾರ್ದನ ದಾಸ್ ಅವರು, ‘ಭಾರತೀಯ ಅರ್ಥಶಾಸ್ತ್ರ ಮೀಮಾಂಸೆಯಲ್ಲಿ ಒಂದು ಮುಖ್ಯವಾದ ತಿರುವು ಮೂಡಿಸಿದ ಪ್ರಬಂಧವಿದು’ ಎಂದು ಬಣ್ಣಿಸುತ್ತಾರೆ.

ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ

ಅಂಬೇಡ್ಕರ್ ಅವರ ಬಹು ಚರ್ಚಿತ ಮತ್ತು ಸಂಘಪರಿವಾರವನ್ನು ಕೆಲವು ಸಾಲುಗಳನ್ನಷ್ಟೇ ಬಳಸಿಕೊಂಡು ಅಪಪ್ರಚಾರ ಮಾಡಿದ ಕೃತಿ ‘ಪಾಕಿಸ್ತಾನ ಅಥವಾ ಭಾರತ ವಿಭಜನೆ’. ಅಂಬೇಡ್ಕರ್ ಅವರನ್ನು ಸಮಗ್ರವಾಗಿ ಗ್ರಹಿಸಬೇಕಾಗುತ್ತದೆ. ಮುಸ್ಲಿಂ ಲೀಗ್ 1940ರ ತನ್ನ ಲಾಹೋರ್ ಗೊತ್ತುವಳಿಯಲ್ಲಿ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಆಗಲೇಬೇಕು ಎನ್ನುವ ಠರಾವನ್ನು ಅಂಗೀಕರಿಸುತ್ತದೆ. ಮುಸ್ಲಿಂ ಲೀಗ್‌ನ ಈ ಬೇಡಿಕೆಯ ಬಗ್ಗೆ ತನ್ನ ನಿಲುವೇನಿರಬೇಕೆಂದು ನಿರ್ಣಯಿಸಲು ಆಗಿನ ಐ.ಎಲ್.ಪಿ. (ಸ್ವತಂತ್ರ ಲೇಬರ್ ಪಕ್ಷ) ಸಮಿತಿಯೊಂದನ್ನು ನೇಮಿಸಿ ಆ ಸಮಿತಿಗೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ. ಸಮಿತಿಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ ಅಂಬೇಡ್ಕರ್ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹಿನ್ನೆಲೆಯನ್ನು, ಅದರ ಸಾಧಕ ಭಾದಕಗಳನ್ನು ವಿದ್ವತ್ ಪೂರ್ಣವಾಗಿ ಅಧ್ಯಯನ ಮಾಡಿ ನೀಡಿದ ವರದಿ ಇಂದು 486 ಪುಟಗಳ ಈ ಪುಸ್ತಕದ ರೂಪದಲ್ಲಿ ನಮ್ಮ ಮುಂದಿದೆ.

‘ನನ್ನ ಪ್ರಕಾರ ಪಾಕಿಸ್ತಾನದ ಬೇಡಿಕೆಯು ಕಾಲ ಕಳೆದಂತೆ ಅಳಿಸಿಹೋಗುವ ರಾಜಕೀಯ ಬಣ್ಣ ಬಳಿದುಕೊಂಡಿಲ್ಲ.. ನನ್ನ ಮನಸ್ಸಿನಲ್ಲಿ ಬರುವ ಮೊದಲ ವಿಚಾರವೆಂದರೆ ಹಿಂದೂ-ಮುಸ್ಲಿಮರು ಈ ಪ್ರಶ್ನೆ ಕುರಿತು ನಿರ್ಧರಿಸಬೇಕು.. ಬ್ರಿಟಿಷರು ತಮ್ಮ ಸೇನೆಯನ್ನು ಬಳಸಿಕೊಂಡು ಪಾಕಿಸ್ತಾನದ ಬೇಡಿಕೆಯನ್ನು ಹತ್ತಿಕ್ಕುತ್ತಾರೆ ಎಂದು ಹಿಂದೂಗಳು ಭಾವಿಸಿದರೆ ಅದು ಸಾಧ್ಯವಿಲ್ಲ. ಪಾಕಿಸ್ತಾನದ ಬೇಡಿಕೆಯನ್ನು ವಿರೋಧಿಸಲು ಬಲವಂತದ ಪ್ರಯೋಗವು ಪರ್ಯಾಯವಲ್ಲ. ಸ್ವಯಂ ನಿರ್ಣಯ ತೆಗೆದುಕೊಳ್ಳುವುದರಿಂದ ಮುಸ್ಲಿಮರನ್ನು ವಂಚಿತಗೊಳಿಸಬಾರದು.. ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಯಂ ನಿರ್ಣಯವನ್ನು ಪ್ರತಿಪಾದಿಸುವ ರಾಷ್ಟ್ರೀಯವಾದಿಗಳು ಅಲ್ಪಸಂಖ್ಯಾತರಿಗೂ ಇದೇ ಮಾನದಂಡ ಅನ್ವಯಿಸಬೇಕು’ ಎಂದು ಬರೆಯುತ್ತಾರೆ.

ಒಂದು ದೇಶ ವರ್ಸಸ್ ಎರಡು ದೇಶ ಸಿದ್ದಾಂತದ ಹಿನ್ನಲೆಯಲ್ಲಿ ಸಾವರ್ಕರ್ ಮತ್ತು ಜಿನ್ನಾ ವಿರುದ್ಧ ಧ್ರುವಗಳಲ್ಲಿ ನಿಲ್ಲಬೇಕಾಗುತ್ತದೆ, ಆದರೆ ವಿಚಿತ್ರವೆಂದರೆ ಇಬ್ಬರೂ ಈ ವಿಚಾರದಲ್ಲಿ ಒಮ್ಮತದಲ್ಲಿರುವುದು ಕಂಡುಬರುತ್ತದೆ. ಇವರಿಬ್ಬರೂ ಭಾರತದಲ್ಲಿ ಹಿಂದೂ ದೇಶ ಮತ್ತು ಮುಸ್ಲಿಂ ದೇಶ ಎನ್ನುವ ಎರಡು ದೇಶಗಳಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಯಾರ ಮೇಲುಸ್ತುವಾರಿಯಲ್ಲಿ ಮತ್ತೊಬ್ಬರ ಅಸ್ತಿತ್ವ ನಿರ್ಣಯಿಸಲ್ಪಡುತ್ತದೆ ಎನ್ನುವ ವಾಗ್ವಾದ ಇವರಿಬ್ಬರ ನಡುವಿನ ವೈಮನಸ್ಸಾಗಿದೆ. ಎರಡು ದೇಶಗಳ ಭಾರತವನ್ನು ವಿಭಜಿಸಬೇಕು ಎಂದು ಜಿನ್ನಾ ಬಯಸಿದರೆ ಸಾವರ್ಕರ್ ಒಂದು ದೇಶದಲ್ಲಿ ಹಿಂದೂ ಪರಂಪರೆ ಆಚರಣೆಯ ಸಂವಿಧಾನವು ಜಾರಿಯಲ್ಲಿರುತ್ತದೆ. ಇದರ ಅಡಿಯಲ್ಲಿ ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕು ಎಂದು ತಾಕೀತು ಮಾಡುತ್ತಾರೆ. ಆದರೆ ಸಾವರ್ಕರ್ ತಮ್ಮ ಇಂತಹ ಸಿದ್ಧಾಂತವನ್ನು ಬೋಧಿಸುವುದರ ಮೂಲಕ ಭಾರತದಲ್ಲಿ ಅಪಾಯಕಾರಿ, ಅಭದ್ರತೆಯ ವಾತಾವರಣ ಸೃಷ್ಟಿಸುತ್ತಾರೆ. ತಮ್ಮ ಈ ಯೋಜನೆಗೆ ಮುಸ್ಲಿಮರ ಪ್ರತಿಕ್ರಿಯೆ ಕುರಿತು ಸಾವರ್ಕರ್‌ಗೆ ಆಸಕ್ತಿ ಇಲ್ಲ. ಇದನ್ನು `ಬೇಕಿದ್ದರೆ ಸ್ವೀಕರಿಸಿ, ಬೇಡವಾಗಿದ್ದರೆ ಬಿಡಿʼ ಎನ್ನುವ ಧೋರಣೆಯನ್ನು ಅವರ ಮೇಲೆ ಹೇರಲಾಗುತ್ತದೆ’ ಎಂದು ಬರೆಯುತ್ತಾರೆ. ಅಂದರೆ ಜಿನ್ನಾ- ಸಾವರ್ಕರ್ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಬಾಬಾಸಾಹೇಬರು ಪ್ರತಿಪಾದಿಸುತ್ತಾರೆ. ಆದರೆ ಇಂತಹ ವಿಚಾರಗಳನ್ನು ಸಂಘಪರಿವಾರ ಮರೆಮಾಚುತ್ತದೆ.

ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ

`ಹಿಂದೂ ರಾಜ್ ಜಾರಿಗೊಂಡರೆ ಈ ದೇಶಕ್ಕೆ ಬಲು ದೊಡ್ಡ ಅಪಾಯ ಎದುರಾಗುತ್ತದೆ. ಸ್ವಾತಂತ್ರ್ಯ, ಸಮಾನತೆ, ಬಂಧುತ್ವಕ್ಕೆ ಹಿಂದೂಯಿಸಂ ಬೆದರಿಕೆಯಾಗಿದೆ. ಪ್ರಜಾಪ್ರಭುತ್ವಕ್ಕೆ ಹೊಂದಿಕೊಳ್ಳುವುದಿಲ್ಲ. ಹಿಂದೂ ರಾಜ್‌ಅನ್ನು ಯಾವುದೇ ಬೆಲೆ ತೆತ್ತಾದರೂ ಪ್ರತಿಬಂಧಿಸಬೇಕು’ ಎಂದು ಎಚ್ಚರಿಸುತ್ತಾರೆ. ಬಾಬಾಸಾಹೇಬರನ್ನು ಸಮಗ್ರವಾಗಿ ಚರ್ಚಿಸದೆ ತಮ್ಮ ಮೂಗಿನ ನೇರಕ್ಕೆ ಮಾತ್ರ ಚರ್ಚಿಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾದರೆ  ಈ ಕೃತಿಯನ್ನು ಎಲ್ಲರೂ ಓದಬೇಕಾಗುತ್ತದೆ. ಮುಕ್ತ ಸಂವಾದಗಳು ನಡೆಯಬೇಕಾಗುತ್ತದೆ.

‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿರುವುದೇನು ಕೃತಿಯು ಅತ್ಯಂತ ಚರ್ಚಿತ ಕೃತಿ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಎಂತಹ ಹಿಂದೂವಾದಿಯಾಗಿತ್ತು, ಅಸ್ಪೃಶ್ಯತೆಯನ್ನು ಪೋಷಿಸುವ ಕೆಲಸ ಮಾಡಿತು, ಬಾಬಾಸಾಹೇಬರು ಅಸ್ಪೃಶ್ಯರು ಹಿಂದೂಗಳಲ್ಲ ಎಂಬ ಪ್ರತಿಪಾದನೆ ಮಾಡಿ, ಪ್ರತ್ಯೇಕ ಮತಕ್ಷೇತ್ರಗಳನ್ನು ಪಡೆದಾಗ, ಗಾಂಧಿ ಹೂಡಿದ ಉಪವಾಸ ಸತ್ಯಾಗ್ರಹದಿಂದ ಬಾಬಾ ಸಾಹೇಬರು ಅನುಭವಿಸಿದ ನೋವು, ಪ್ರತ್ಯೇಕ ಮತಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಗಾಂಧಿ ಮತ್ತು ಕಾಂಗ್ರೆಸ್ ಹಮ್ಮಿಕೊಂಡ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮಗಳ ಬೂಟಾಟಿಕೆ ಇವೆಲ್ಲವನ್ನೂ ಈ ಕೃತಿ ಬಯಲಿಗೆಳೆಯುತ್ತದೆ. ಗಾಂಧೀಜಿ ಸ್ಥಾಪಿಸಿದ ‘ಹರಿಜನ ಸೇವಕ ಸಂಘ’ದ ಒಳರಾಜಕಾರಣವನ್ನು; ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ಹಸ್ತಾಂತರಿಸುವಾಗ ಅದು ಯಾವುದೋ ಒಂದು ವರ್ಗದ ಪಾಲಾಗದೆ ಎಲ್ಲ ಸಮುದಾಯಗಳಿಗೆ ಹಂಚಿಕೆಯಾಗಲಿ ಎಂಬುದನ್ನು; ಅಸ್ಪೃಶ್ಯರು ಬ್ರಿಟಿಷರ ಕೈಗೊಂಬೆಗಳೂ ಅಲ್ಲ ಹಾಗೂ ಹಿಂದೂಗಳೂ ಅಲ್ಲ ಎಂಬ ಸತ್ಯವನ್ನು; ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು?; ‘ಗಾಂಧಿವಾದ’ ಎಂದರೆ ಯಾವುದು? ಅದರ ಬಿಕ್ಕಟ್ಟುಗಳೇನು? ಅದು ಹೇಗೆ ಅರ್ಥಹೀನ ಹಾಗೂ ಅಪ್ರಸ್ತುತ” ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ವಿಮರ್ಶಾತ್ಮಕವಾದ ಜಿಜ್ಞಾಸೆಗೆ ಈ ಕೃತಿ ಒಳಪಡಿಸಿದೆ.

76a What Gandi and congress have done to the untouchables
ಕಾಂಗ್ರೆಸ್‌ ಮತ್ತು ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು?

ಆದರೆ ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್, ನೆಹರೂ ಆಡಳಿತ ಕಾಂಗ್ರೆಸ್ ಮತ್ತು ಜನಸಂಘ ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿನ ಕಾಂಗ್ರೆಸ್, ಹಿಂದುತ್ವ ರಾಜಕಾರಣ, ದ್ವೇಷರಾಜಕಾರಣ ಮಿತಿಮೀರಿದ ಈ ಹೊತ್ತಿನ ರಾಜಕಾರಣದ ವೇಳೆಯಲ್ಲಿನ ಕಾಂಗ್ರೆಸ್ ಈ ಎಲ್ಲವನ್ನೂ ತುಲನೆ ಮಾಡಿನೋಡಬೇಕಾಗುತ್ತದೆ. ಬಾಬಾ ಸಾಹೇಬರ ಕಾಲದಲ್ಲಿ ಬಾಬಾಸಾಹೇಬರನ್ನು ನೋಯಿಸಿದ ಸಾಮಾಜಿಕ ಯಥಾಸ್ಥಿತಿವಾದವನ್ನು ಬಯಸುತ್ತಿದ್ದ ಕಾಂಗ್ರೆಸ್ಸಿಗರ ಮನಸ್ಥಿತಿ, ಇಂದಿನ ಕಾಲಘಟ್ಟದಲ್ಲಿ ಬಿಜೆಪಿ ಸಂಘಪರಿವಾರದಲ್ಲಿ ಕಾಣಿಸುವುದನ್ನು ಗಮನಿಸಬೇಕಾಗುತ್ತದೆ. ‘ಗಾಂಧಿ ಅಂಡ್ ಇಮಾನ್ಸಿಪೇಷನ್ ಆಫ್ ಅನ್ ಟಚಬಲ್ಸ್’, ‘ರಾನಡೆ, ಗಾಂಧಿ, ಜಿನ್ನಾ’ ಕೃತಿಗಳು ಗಾಂಧಿವಾದ ಕುರಿತು ಕಟು ವಿಮರ್ಶಾ ದೃಷ್ಟಿಕೋನಗಳನ್ನು ಹೊಂದಿರುವ ಮತ್ತೆರಡು ಪುಸ್ತಕಗಳಾಗಿವೆ.

ಕೊನೆಯ ಮಾತು

ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದುವುದೆಂದರೆ ಸಾಗರದಷ್ಟು ಅರಿವನ್ನು ಪಡೆದುಕೊಳ್ಳವುದೇ ಆಗಿದೆ. ಈ ಎಲ್ಲ ಕೃತಿಗಳ ಸಾರವನ್ನು ಓದುಗರಿಗೆ ದೊರಕಿಸಬೇಕು, ಅಂಬೇಡ್ಕರ್ ಅವರ ಮೂಲ ಕೃತಿಗಳ ಓದಿಗೆ ಪ್ರಚೋದಿಸಬೇಕೆಂದು ಅಂಬೇಡ್ಕರ್ ಅವರ ಮಹತ್ವದ ಕೃತಿಗಳ ಸಾರವನ್ನು ಸಂಗ್ರಹಿಸುವ ಕೆಲಸವನ್ನು ನಿಮ್ಮ ಈದಿನ ಹೊರತಂದಿರುವ ‘ಅರಿವೇ ಅಂಬೇಡ್ಕರ’ ಸಂಚಿಕೆ ಮಾಡಿದೆ. ಆ ಕೃತಿಯಲ್ಲಿನ ಹಲವು ಲೇಖನಗಳಿಂದ ಆಯ್ದ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ ಅಷ್ಟೇ.

(ಆಧಾರ: ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಚಾರಗಳನ್ನು ಈದಿನ.ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ)

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...