ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?

Date:

ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಎಲಾನ್ ಮಸ್ಕ್ ಮಾಲೀಕತ್ವದ ಅಮೆರಿಕದ ಸಂಸ್ಥೆ ಸ್ಟಾರ್‌ಲಿಂಕ್, ಭಾರತದ ಖಾಸಗಿ ಸಂಸ್ಥೆಗಳಾದ ರಿಲಯನ್ಸ್‌ನ ಜಿಯೋ ಮತ್ತು ಭಾರತಿ ಏರ್‌ಟೆಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್‌ನಲ್ಲಿ ಮಸ್ಕ್ ಕಂಪನಿಯನ್ನು ಸ್ವಾಗತಿಸಿದ್ದಾರೆ. ಆದರೆ ಸ್ವಾಗತದ ಟ್ವೀಟ್‌ನ ಪರಿಣಾಮ ಅರಿತ ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ವಿದೇಶಿ ಕಂಪನಿಗಳು ಹೂಡಿಕೆ ಮಾಡುವುದು ಇದೇ ಮೊದಲೇನಲ್ಲ. ಆದರೆ ಸ್ಟಾರ್‌ಲಿಂಕ್ ಸಂಸ್ಥೆಯ ಹೂಡಿಕೆಗೆ ವಿರೋಧ ಏಕೆ ಕೇಳಿಬರುತ್ತಿದೆ?

ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಯ ಬೆನ್ನಿನಲ್ಲೇ ಈ ಒಪ್ಪಂದಕ್ಕೆ ಮಣೆ ಹಾಕಲಾಗಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ  ಸರ್ಕಾರವೇ ಭಾರತದಲ್ಲಿ ಎಲಾನ್ ಮಸ್ಕ್ ಹೂಡಿಕೆ ಬಗ್ಗೆ ಅನುಮಾನದಿಂದ ನೋಡಿತ್ತು. ಎಲಾನ್ ಮಸ್ಕ್ ತಮ್ಮ ಟೆಸ್ಲಾ ಕಾರುಗಳಿಗೆ ಭಾರತದಲ್ಲಿ ಮಾರುಕಟ್ಟೆ ಹುಡುಕಲು ಯತ್ನಿಸಿದಾಗ ಇದೇ ಕೇಂದ್ರ ಸರ್ಕಾರ ಪರವಾನಗಿ ನೀಡದೆ ಸತಾಯಿಸಿತ್ತು. ಆದರೆ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಮೆರಿಕದ ಪ್ರವಾಸದಲ್ಲಿ ಟ್ರಂಪ್- ಮಸ್ಕ್ ಜೊತೆ ಮಾತುಕತೆ ನಡೆಸಿದ ನಂತರ ಅನುಮಾನಗಳೆಲ್ಲ ಮಾಯವಾಗಿವೆ. ಮೋದಿ ಸರ್ಕಾರ ಯಾವ ವಿಚಾರದಲ್ಲಿ ಮಸ್ಕ್ ಕಂಪನಿಗಳ ಭಾರತ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿತ್ತು? ಆ ವಿಚಾರಗಳ ಬಗ್ಗೆ ಚರ್ಚೆ ನಡೆದು ಅನುಮಾನ ಪರಿಹರಿಸಲಾಗಿದೆಯೆ? ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಹೇಳಿಕೆ ನೀಡದೆ ಮೌನ ವಹಿಸಿರುವುದು ಏಕೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗಿದ್ದರೆ, ಒಟ್ಟಾರೆ ಈ ಒಪ್ಪಂದವೇನು? ಅದರ ಹಿಂದಿರುವ ಕಳವಳಗಳೇನು?

musk
ಎಲಾನ್ ಮಸ್ಕ್, ಮುಖೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್

ಸ್ಟಾರ್‌ಲಿಂಕ್ ಮತ್ತು ಜಿಯೋ– ಏರ್‌ಟೆಲ್ ಒಪ್ಪಂದವೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡೂ ಭಾರತೀಯ ಸಂಸ್ಥೆಗಳು ಅತಿವೇಗದ ಇಂಟರ್ನೆಟ್ ಒದಗಿಸಲು ಸ್ಟಾರ್‌ಲಿಂಕ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದನ್ನು ಬಹಿರಂಗಪಡಿಸಿವೆ. ಸ್ಟಾರ್‌ಲಿಂಕ್ ಉಪಕರಣಗಳನ್ನು ಈ ಎರಡೂ ಟೆಲಿಕಾಂ ಕಂಪನಿಗಳ ರಿಟೇಲ್ ಮಾರಾಟ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು ಎಂಬುದರ ವಿನಾ, ಒಪ್ಪಂದಗಳ ನಿರ್ದಿಷ್ಟ ವಿವರಗಳನ್ನು ನೀಡಲಾಗಿಲ್ಲ. ಆದರೆ ಕೇಂದ್ರ ಸರ್ಕಾರ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ‘‘ನಿಯಂತ್ರಣ ಕೇಂದ್ರ” ಸ್ಥಾಪಿಸಲು ಅವಕಾಶ ನೀಡಿದೆ ಎಂಬ ವಿವರ ಹೊರಬಿದ್ದಿದೆ. ಬಿಕ್ಕಟ್ಟಿನ ಸ್ಥಿತಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಬೇಕಾದಾಗ ಕಂಪನಿಯ ಅಮೆರಿಕದ ಕೇಂದ್ರ ಕಚೇರಿಗೆ ಶರಣು ಹೋಗುವ ಅನಿವಾರ್ಯ ಇಲ್ಲವಂತೆ.  ಅಗತ್ಯವಿದ್ದಾಗ ಕಾನೂನು ಜಾರಿ ಸಂಸ್ಥೆಗಳಿಂದ ಅಧಿಕೃತ ಮಾರ್ಗಗಳ ಮೂಲಕ ಕರೆ ಪ್ರತಿಬಂಧಗಳನ್ನು ವಿಧಿಸಲು ಅವಕಾಶ ನೀಡಲಾಗಿದೆ. “ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರವು ಯಾವುದೇ ಟೆಲಿಕಾಂ ಸೇವೆ ಅಥವಾ ನೆಟ್‌ವರ್ಕ್ ಅನ್ನು ಅಧಿಕೃತ ಘಟಕದಿಂದ ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳುವ ನಿಬಂಧನೆಗಳನ್ನು ಟೆಲಿಕಾಂ ಕಾಯ್ದೆ ಹೊಂದಿದೆ” ಎಂದು ದೇಶದ ಭದ್ರತೆ ಕುರಿತ ಆತಂಕಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡಲಾಗಿದೆ.

ಸ್ಟಾರ್ ಲಿಂಕ್ ಎಂದರೇನುಕೇಬಲ್ ಸೇವೆಯಿಂದ ಹೇಗೆ ಭಿನ್ನವಾಗಿದೆ?

ಸ್ಟಾರ್‌ಲಿಂಕ್ ಎನ್ನುವುದು ಸ್ಪೇಸ್‌ಎಕ್ಸ್‌ ಮಾಲೀಕತ್ವದ ಸಂಸ್ಥೆ ನೀಡುವ ಇಂಟರ್‌ನೆಟ್ ಉಪಗ್ರಹ ಸೇವೆಯಾಗಿದೆ. ಅಂದರೆ ಟವರ್ ರಹಿತ ಇಂಟರ್ನೆಟ್ ಸೇವೆ. ಈ ಸೇವೆಯಲ್ಲಿ ಕುಗ್ರಾಮಗಳಿಗೂ ಮತ್ತು ಜಗತ್ತಿನಲ್ಲಿ ಇಂಟರ್ನೆಟ್ ಸಂಪರ್ಕ ನೀಡಲಾಗದ ದುರ್ಗಮ ಪ್ರದೇಶದ ಬಳಕೆದಾರರಿಗೂ ಹೈ ಸ್ಪೀಡ್ ಇಂಟರ್ನೆಟ್‌ ತಲುಪಿಸಬಹುದು. ಈಗಾಗಲೇ ಜಾಗತಿಕವಾಗಿ 100ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಒದಗಿಸುತ್ತಿದೆ. ಕೇಬಲ್ ಆಧರಿತ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಭೌಗೋಳಿಕ, ಸ್ಥಳ ಆಧರಿತ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟು ಇಂಟರ್ನೆಟ್ ಸೇವೆ ಒದಗಿಸಲಾಗುತ್ತಿದೆ. ಆದರೆ ಸ್ಟಾರ್‌ಲಿಂಕ್ ಉಪಗ್ರಹಗಳ ಮೂಲಕ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತದೆ. ಸ್ಟಾರ್‌ಲಿಂಕ್ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಒದಗಿಸಲು ಪರಸ್ಪರ ಸಂವಹನ ನಡೆಸಬಹುದಾದ ಸಾವಿರಾರು ಸಣ್ಣ ಉಪಗ್ರಹಗಳ ಸಮೂಹವನ್ನು ಬಳಸುತ್ತದೆ. ಹೆಚ್ಚಿನ ಬ್ರಾಡ್‌ಬ್ಯಾಂಡ್ ಸೇವೆಗಳು ಅವಲಂಬಿಸಿರುವ ಕೇಬಲ್ ಅನ್ನು ಬಳಸುವ ಬದಲು, ಸ್ಟಾರ್‌ಲಿಂಕ್ ಬಾಹ್ಯಾಕಾಶದಲ್ಲಿ ರೇಡಿಯೋ ಸಿಗ್ನಲ್‌ಗಳನ್ನು ಬಳಸಿಕೊಂಡು ಬಳಕೆದಾರರಿಗೆ ಡೇಟಾವನ್ನು ಒದಗಿಸಲು ಭೂಮಿಗೆ ಸನಿಹದ ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಪ್ರಸಾರವನ್ನು ಕಳುಹಿಸುತ್ತದೆ. ನಿಚ್ಚಳ ಆಗಸ ಹೊಂದಿರುವ ಯಾವುದೇ ಪ್ರದೇಶದಲ್ಲಿ ಭೂಗ್ರಹದ ಯಾವುದೇ ಮೂಲೆಯಲ್ಲಿ ಬೇಕಾದರೂ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಪಡೆಯಬಹುದಾಗಿದೆ.

ಇದನ್ನೂ ಓದಿರಿ: ‘ರೀಲ್ಸ್‌’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!

ಸ್ಟಾರ್‌ಲಿಂಕ್ ಭಾರತೀಯ ಮಾರುಕಟ್ಟೆ ಪ್ರವೇಶಕ್ಕೆ ಆತಂಕವೇಕೆ?

ಇಂಟರ್ನೆಟ್ ಸೇವೆ ಒದಗಿಸುವವರ ಬಳಿ ಬಳಕೆದಾರರ ಎಲ್ಲಾ ಡೇಟಾ ಹೋಗುತ್ತದೆ. ನಿಮ್ಮ ಸರ್ಫಿಂಗ್ ವಿವರಗಳು ಮತ್ತು ಏನು ಹುಡುಕುತ್ತಿದ್ದೀರಿ ಎನ್ನುವ ವಿವರ ಅವರಿಗೆ ತಲುಪುತ್ತದೆ. ಭಾರತದ ಅಗಾಧ ಪ್ರಮಾಣದ ದತ್ತಾಂಶಗಳನ್ನು ವಿದೇಶಿ ಕಂಪನಿಯೊಂದಕ್ಕೆ ನೀಡುವುದು ಸರಿಯೆ? ಮುಖ್ಯವಾಗಿ ಭಾರತ ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸಬೇಕಾದರೆ ದತ್ತಾಂಶಗಳು ಅತಿ ಮುಖ್ಯ. ಆದರೆ ಈಗಾಗಲೇ ಸಾಮಾಜಿಕ ಮಾಧ್ಯಮಗಳ ದತ್ತಾಂಶಗಳು ವಿದೇಶಿ ಕಂಪನಿಗಳ ಬಳಿ ಇವೆ. ಇದೀಗ ಸರ್ಫಿಂಗ್ ವಿವರಗಳನ್ನೂ ವಿದೇಶಿ ಕಂಪನಿಯ ಕೈಗೆ ನೀಡಲಾಗುತ್ತಿದೆ.

ರಾಷ್ಟ್ರೀಯ ವಿಪತ್ತು ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಟಾರ್‌ಲಿಂಕ್ ನಂಬಿಕೆಗೆ ಅರ್ಹವೆ?

ಒಪ್ಪಂದದ ಬೆನ್ನಲ್ಲೇ ಅಗಾಧ ಪ್ರಮಾಣದಲ್ಲಿ ಭಾರತದ ಇಂಟರ್ನೆಟ್ ಡೇಟಾವನ್ನು ವಿದೇಶಿ ಕಂಪನಿಯೊಂದಕ್ಕೆ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಮುಖ್ಯವಾಗಿ ಕೆಲವೇ ವರ್ಷಗಳ ಹಿಂದೆ ಮೋದಿ ನೇತೃತ್ವದ ಸರ್ಕಾರ ಭದ್ರತೆಯ ಕಾರಣ ನೀಡಿ ಎಲಾನ್ ಮಸ್ಕ್ ಭಾರತೀಯ ಮಾರುಕಟ್ಟೆ ಪ್ರವೇಶವನ್ನು ನಿರಾಕರಿಸಿತ್ತು. ಇದೀಗ ರತ್ನಗಂಬಳಿಯ ಸ್ವಾಗತ ನೀಡಲು ಮುಖ್ಯ ಕಾರಣವೇನು ಮತ್ತು ಈ ಸ್ವಾಗತದ ನಂತರ ಭಾರತೀಯ ಇಂಟರ್ನೆಟ್ ಅಥವಾ ಡೇಟಾ ಮಾರುಕಟ್ಟೆಯ ಮೇಲೆ ಯಾವ ಪರಿಣಾಮವಾಗಲಿದೆ ಎನ್ನುವ ಆತಂಕ ಬೆಳೆದಿದೆ. ಸೇನೆ, ಸರ್ಕಾರದ ಇಲಾಖೆಗಳು, ಭದ್ರತಾ ಸಂಸ್ಥೆಗಳ ಡೇಟಾ ಬಗ್ಗೆ ಕಾಳಜಿ ವ್ಯಕ್ತವಾಗಿದೆ. ಮುಖ್ಯವಾಗಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಿಪಿಎಸ್ ಒದಗಿಸಲು ಭಾರತ ಅಮೆರಿಕವನ್ನು ವಿನಂತಿಸಿತ್ತು. ಆದರೆ ಆ ಸಂದರ್ಭದಲ್ಲಿ ಅಮೆರಿಕ ಜಿಪಿಎಸ್ ಸೇವೆಯನ್ನು ಬಳಸಿಕೊಳ್ಳಲು ಅನುಮತಿ ನೀಡಲಿಲ್ಲ. ಮತ್ತೊಂದು ಉದಾಹರಣೆಯಲ್ಲಿ ಅಮೆರಿಕದ ಖನಿಜಗಳ ಬೇಡಿಕೆ ಈಡೇರಿಸದೆ ಇದ್ದಾಗ ಉಕ್ರೇನ್‌ಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದಾಗಿ ಸ್ಟಾರ್‌ಲಿಂಕ್ ಬೆದರಿಕೆ ಹಾಕಿತ್ತು. ಇಂತಹ ಇತಿಹಾಸ ಕಣ್ಣ ಮುಂದೆ ಇರುವಾಗ ಸ್ಟಾರ್‌ಲಿಂಕ್‌ಗೆ ಮೋದಿ ಸರ್ಕಾರ ಪ್ರವೇಶಾನುಮತಿ ನೀಡಿರುವುದು ದೇಶಾದ್ಯಂತ ಕಳವಳವನ್ನು ಸೃಷ್ಟಿಸಿದೆ.

x starling

ಅಮೆರಿಕ ಜಿಪಿಎಸ್ ಸೌಲಭ್ಯ ನೀಡಲು ನಿರಾಕರಿಸಿದ್ದ ವಿಚಾರ ಚರ್ಚೆಯಾಗುತ್ತಿರುವುದೇಕೆ?

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆ ಸ್ವಾಧೀನಪಡಿಸಿಕೊಂಡಿರುವ ಪ್ರದೇಶದ ವಿವರ ತಿಳಿದುಕೊಳ್ಳಲು ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅಥವಾ ಜಿಪಿಎಸ್ ಡೇಟಾದ ಅಗತ್ಯ ಭಾರತಕ್ಕೆ ಇತ್ತು. ಆದರೆ ಅಮೆರಿಕದ ನಿರಾಕರಣೆಯ ನಂತರ ಭಾರತ ಸ್ವತಃ ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆಯ ನೇವ್‌ಐಸಿ (NavIC) ಎನ್ನುವ ನೇವಿಗೇಶನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಆದರೆ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಬಳಕೆಗೆ ನೇವ್‌ಐಸಿ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಸಾಮಾನ್ಯ ಬಳಕೆಗೆ ಈ ವ್ಯವಸ್ಥೆಯನ್ನು ನೀಡಲಾಗಿಲ್ಲ. ಇಸ್ರೋ ಈ ನಿಟ್ಟಿನಲ್ಲಿ ಹಲವು ಉಪಗ್ರಹಗಳ ಉಡಾವಣೆ ಮಾಡಿದೆ. ಎನ್‌ವಿಎಸ್ ಸರಣಿಯ ಉಪಗ್ರಹಗಳನ್ನು ಇದೇ ಉದ್ದೇಶಕ್ಕಾಗಿ ಹಾರಿಸಲಾಗಿದೆ. ಇದೀಗ ನೇವ್‌ಐಸಿ ನಿಖರವಾದ ರಿಯಲ್ ಟೈಮ್ ಪೊಸಿಷನಿಂಗ್ ಮತ್ತು ಟೈಮಿಂಗ್ ಸೇವೆಯನ್ನು ಒದಗಿಸುತ್ತಿರುವ ಕಾರಣ ಭಾರತ ಜಿಪಿಎಸ್ ವ್ಯವಸ್ಥೆಗಳ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ಮುಖ್ಯವಾಗಿ ಜಿಪಿಎಸ್ 20 ಮೀಟರ್‌ಗಳ ನಿಖರತೆ ಹೊಂದಿದ್ದರೆ, ನೇವ್ಐಸಿ 5-10 ಮೀಟರ್‌ಗಳ ನಿಯೋಜಿತ ಏರಿಯವನ್ನು ಮಾತ್ರ ತಲುಪುತ್ತಿದೆ ಎನ್ನಲಾಗಿದೆ.

ಮಣಿಪುರದಲ್ಲಿ ಸ್ಟಾರ್‌ಲಿಂಕ್ ಪಾತ್ರದ ಅನುಮಾನವೇನು?

ಭೂಮಿಯ ಸಮೀಪದ ಕಕ್ಷೆಯಲ್ಲಿ ಇರಿಸಲಾದ ಉಪಗ್ರಹಗಳ ಮೂಲಕ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಅಧಿಕೃತವಾಗಿ ಪರವಾನಗಿ ಪಡೆಯುವ ಮೊದಲೇ ಮಣಿಪುರದಲ್ಲಿ ಸ್ಟಾರ್‌ಲಿಂಕ್‌ ಸಂಬಂಧಿತ ಉಪಕರಣಗಳನ್ನು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದ್ದವು. ಶಸ್ತ್ರಾಸ್ತ್ರಗಳ ಜೊತೆಗೆ ಸ್ಟಾರ್‌ಲಿಂಕ್ ಲೇಬಲ್ ಇರುವ ಹಾರ್ಡ್‌ವೇರ್‌ಗಳು ಪತ್ತೆಯಾಗಿದ್ದವು. ಆದರೆ ಎಲಾನ್ ಮಸ್ಕ್ ಭಾರತದಲ್ಲಿ ತಮ್ಮ ವ್ಯವಹಾರವೇ ಇಲ್ಲ ಎಂದು ಈ ಆರೋಪವನ್ನು ತಿರಸ್ಕರಿಸಿದ್ದರು. ಭಾರತದ ವ್ಯಾಪ್ತಿಯಲ್ಲಿ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಆಫ್ ಮಾಡಲಾಗಿದೆ ಎಂದು ಆಗ ಅವರು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?

ಸ್ಟಾರ್‌ಲಿಂಕ್ ಭಾರತೀಯ ಮಾರುಕಟ್ಟೆ ಪ್ರವೇಶ ಅನಿವಾರ್ಯವೆ?

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಕಷ್ಟು ಪ್ರಗತಿ ಸಾಧಿಸಿದೆ. ಚಂದ್ರಯಾನ ಯಶಸ್ವಿಯಾಗಿದೆ, ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧವಾಗುತ್ತಿದೆ. ಹಾಗಿರುವಾಗ ನಾವು ಸ್ವಂತ ಉಪಗ್ರಹವನ್ನು ಬಳಸುವುದಿಲ್ಲವೇಕೆ ಎನ್ನುವ ಪ್ರಶ್ನೆ ಕೇಳಿಬಂದಿದೆ. ನಮ್ಮ ದೇಶದಲ್ಲಿ ರಿಲಯನ್ಸ್ ಮತ್ತು ಏರ್‌ಟೆಲ್‌ ಸಂಸ್ಥೆಗಳು ಇಸ್ರೋ ಮುಖಾಂತರ ತಮ್ಮದೇ ಉಪಗ್ರಹವನ್ನು ಏಕೆ ಅಭಿವೃದ್ಧಿಪಡಿಸುವುದಿಲ್ಲ? ಸ್ಟಾರ್‌ಲಿಂಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕಾದ ಅಗತ್ಯವೇನಿದೆ? ಅಲ್ಲದೆ, ಬಿಎಸ್‌ಎನ್‌ಎಲ್ ಜೊತೆಗೆ ಸ್ಟಾರ್‌ಲಿಂಕ್ ಸಹಭಾಗಿತ್ವ ಏಕೆ ಮಾಡಿಕೊಂಡಿಲ್ಲ? ಇಸ್ರೋ ಅಥವಾ ಬಿಎಸ್‌ಎನ್‌ಎಲ್‌ನಂತಹ ಸಂಸ್ಥೆಗಳನ್ನು ಪ್ರಬಲಗೊಳಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳದೆ ಇರಲು ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಸ್ಟಾರ್‌ಲಿಂಕ್ ಪ್ರವೇಶದ ನಂತರ ಕೇಬಲ್ ಜಾಲದ ಸ್ಥಿತಿ ಏನಾಗಲಿದೆ?

ನಮ್ಮ ಮನೆಗಳ ಬಳಿ ಸಣ್ಣಪುಟ್ಟ ಇಂಟರ್ನೆಟ್ ಒದಗಿಸುವವರನ್ನೂ ಇದೀಗ ಸ್ಟಾರ್‌ಲಿಂಕ್ ತಲುಪಲಿದೆ. ಅಕ್ಸೆಸೆಬಿಲಿಟಿ ಹೆಚ್ಚಾದರೂ ಸ್ಪರ್ಧೆ ತೀವ್ರವಾಗಲಿದೆ. ಮುಖ್ಯವಾಗಿ ಸ್ಟಾರ್‌ಲಿಂಕ್‌ ಅನ್ನು ಮನೆ ಬಳಕೆಗೆ ಅಳವಡಿಸಿಕೊಳ್ಳುವುದು ಬಹಳ ದುಬಾರಿ ಎನಿಸಲಿದೆ. ಒಂದು ವರದಿಯ ಪ್ರಕಾರ ಸದ್ಯದ ಮಟ್ಟಿಗೆ ಸ್ಟಾರ್‌ಲಿಂಕ್ ಸೇವೆ ಪಡೆಯಬೇಕಾದರೆ ಮೂಲಸೌಕರ್ಯ (ಹಾರ್ಡ್‌ವೇರ್‌) ಅಳವಡಿಸಿಕೊಳ್ಳಲು 349 ಡಾಲರ್ (29 ಸಾವಿರ ರುಪಾಯಿಗೂ ಹೆಚ್ಚು) ತೆರಬೇಕು. ಪ್ರತಿ ತಿಂಗಳ ಡೇಟಾಗೆ 120 ಡಾಲರ್ (ಅಂದಾಜು 10 ಸಾವಿರ ರುಪಾಯಿ) ತೆರಬೇಕು. ದೊಡ್ಡ ಪ್ರಮಾಣದಲ್ಲಿ ಸ್ಟಾರ್‌ಲಿಂಕ್ ಅಳವಡಿಸಿಕೊಳ್ಳಬೇಕಾದರೆ ಮಿನಿ ಕಿಟ್‌ಗೆ 599 ಡಾಲರ್‌ಗಳು (ಸುಮಾರು 50 ಸಾವಿರ ರುಪಾಯಿಗಳು) ಮತ್ತು ಸ್ಟಾಂಡರ್ಡ್ ಕಿಟ್‌ಗೆ 349 ಡಾಲರ್‌ಗಳು (ಅಂದಾಜು 29 ಸಾವಿರ ರುಪಾಯಿಗಳು). ಮಿನಿ ಬಳಕೆದಾರರು 50 ಡಾಲರ್ (4,175 ರುಪಾಯಿ)  ಪ್ಲಾನ್ ಬಳಸಿದರೆ 50 ಜಿಬಿ ಡೇಟಾ ಸಿಗಲಿದೆ. ಅನ್‌ಲಿಮಿಟೆಡ್ ಡೇಟಾ ಬೇಕೆಂದರೆ ತಿಂಗಳಿಗೆ 165 ಡಾಲರ್ (13,777 ರುಪಾಯಿ) ತೆರಬೇಕು. ಸ್ಟಾಂಡರ್ಡ್ ಕಿಟ್‌ನಲ್ಲಿ ಡೇಟಾ ಮಿತಿ ಇರುವುದಿಲ್ಲ, ಆದರೆ ಅದರಲ್ಲಿ 165 ಡಾಲರ್‌ನ ಪ್ಲಾನ್ ಮಾತ್ರ ಬಳಸಬಹುದು.

ಅಧಿಕ ಬೇಡಿಕೆ ಪೂರೈಸಲು ವಿಫಲವಾಗುತ್ತಿದೆಯೇ ಸ್ಟಾರ್‌ಲಿಂಕ್?

ಅಮೆರಿಕದಲ್ಲಿ ಬ್ರಾಡ್‌ಬ್ಯಾಂಡ್ ಎಂದು ವ್ಯಾಖ್ಯಾನಿಸಬೇಕಿದ್ದರೆ, ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ನಿಗದಿಪಡಿಸಿದ ಮಾನದಂಡವಾಗಿರುವ 100 ಮೆಗಾಬಿಟ್‌ಗಳ ಪ್ರತಿ ಸೆಕೆಂಡ್ ಡೌನ್‌ಲೋಡ್ ಮತ್ತು 20Mbps ಅಪ್‌ಲೋಡ್ ವೇಗವನ್ನು ತಲುಪಲು ಸ್ಟಾರ್‌ಲಿಂಕ್ ವಿಫಲವಾಗಿದೆ ಎಂದು ವರದಿಯೊಂದು ತಿಳಿಸಿದೆ. 2024ರ ನವೆಂಬರ್‌ನಲ್ಲಿ ಅತೀವ ಬೇಡಿಕೆಯ ಕಾರಣದಿಂದ ಸ್ಟಾರ್‌ಲಿಂಕ್ ಆಫ್ರಿಕಾದ ಅನೇಕ ನಗರ ಕೇಂದ್ರಗಳಲ್ಲಿ ಹೊಸ ಸೈನ್ ಅಪ್‌ಗಳನ್ನು ತಡೆಹಿಡಿದಿತ್ತು. ಹಾಗಿದ್ದರೂ ಸ್ಟಾರ್‌ಲಿಂಕ್ ಜಗತ್ತಿನಾದ್ಯಂತ ಇಂಟರ್ನೆಟ್ ಸೇವೆಗಳ ವ್ಯಾಪ್ತಿಯನ್ನು ಕಬಳಿಸತೊಡಗಿದೆ.

ಇತರ ಕೇಬಲ್ ನೆಟ್‌ವರ್ಕ್ ಬದಲಿಗೆ ಸ್ಟಾರ್‌ಲಿಂಕ್ ಏಕೆ ಬೇಕು?

ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯು ಫೈಬರ್ ಮತ್ತು ಕೇಬಲ್ ಆಧರಿತ ಸೇವೆಗಳಷ್ಟು ವೇಗದ ಇಂಟರ್ನೆಟ್ ಕೊಡುವುದಿಲ್ಲ. ಆದರೆ ಕುಗ್ರಾಮಗಳಲ್ಲಿ ಇಂಟರ್ನೆಟ್ ಇಲ್ಲದ ಕಡೆಗೆ ಅಥವಾ ನಿಧಾನಗತಿಯ ಇಂಟರ್ನೆಟ್ ಇರುವಲ್ಲಿ ಮೋಡಗಳಿಲ್ಲದ ನಿಚ್ಚಳ ಆಗಸವಿದ್ದರೆ ಉತ್ತಮ ಇಂಟರ್ನೆಟ್ ವೇಗ ಪಡೆಯಬಹುದು. ಹಿಂದಿನ ವಿವರ ಗಮನಿಸಿದಲ್ಲಿ ಸ್ಟಾರ್‌ಲಿಂಕ್‌ನ ವೇಗ 150 Mbps ಗಳಷ್ಟು ಇತ್ತು. ಆದರೆ ಇದೀಗ ಉಪಗ್ರಹಗಳ ಸಂಖ್ಯೆ ಹೆಚ್ಚಾದ ಮೇಲೆ ಸರಿಸುಮಾರು 264 Mbpsಗಳಷ್ಟು ವೇಗದ ಇಂಟರ್ನೆಟ್ ಪಡೆದಿರುವ ಉದಾಹರಣೆಗಳಿವೆ. ಆದರೆ ಜಾಗತಿಕವಾಗಿ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ವೇಗದ ಇಂಟರ್ನೆಟ್ ಅನ್ನು ಸ್ಟಾರ್‌ಲಿಂಕ್ ಒದಗಿಸುತ್ತಿದೆ. ಉತ್ತಮ ಸಂಪರ್ಕವಿರುವ ಪ್ರದೇಶಗಳಲ್ಲಿ 150 Mbpsಗಿಂತ ಹೆಚ್ಚಿನ ವೇಗವನ್ನು ಪಡೆಯಬಹುದು. ಆದರೆ ಕುಗ್ರಾಮಗಳಂತಹ ಪ್ರದೇಶಗಳಲ್ಲಿ ನಿಧಾನಗತಿಯ ಇಂಟರ್ನೆಟ್ ಇರಬಹುದು. ನಿಚ್ಚಳ ಆಗಸವಿದ್ದರೆ ಸ್ಟಾರ್‌ಲಿಂಕ್‌ನಿಂದ ಉತ್ತಮ ವೇಗದ ಇಂಟರ್ನೆಟ್ ಪಡೆಯಬಹುದು.

ಸ್ಟಾರ್‌ಲಿಂಕ್ ಪ್ರವೇಶದ ಬಗ್ಗೆ ಏರ್‌ಟೆಲ್ ಮತ್ತು ಜಿಯೋಗೆ ಇದ್ದ ಅನುಮಾನಗಳೇನು?

ಇದೇ ಫೆಬ್ರವರಿಯಲ್ಲಿ ಮನಿಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಭಾರತಿ ಏರ್‌ಟೆಲ್ ಅಧ್ಯಕ್ಷ ಸುನೀಲ್ ಮಿತ್ತಲ್ “ಸ್ಟಾರ್‌ಲಿಂಕ್ ಅನ್ನು ಪ್ರಬಲ ಪ್ರತಿಸ್ಪರ್ಧಿ” ಎಂದು ಬಣ್ಣಿಸಿದ್ದರು. ಅದಕ್ಕೆ ಮೊದಲು ಜಿಯೋ ಕೂಡ “ಉಪಗ್ರಹ ಆಧರಿತ ಸೇವೆಗಳಿಗೆ ಹೆಚ್ಚು ಆದ್ಯತೆ ನೀಡುವುದನ್ನು ಬಲವಾಗಿ ವಿರೋಧಿಸುತ್ತೇವೆ” ಎಂದಿತ್ತು. ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆಯ ಪ್ರಕಾರ ಭಾರತದಲ್ಲಿ ಒಟ್ಟು 94.5 ಕೋಟಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಚಂದಾದಾರರು ಮತ್ತು 118.9 ಕೋಟಿ ದೂರವಾಣಿ ಚಂದಾದಾರರಿದ್ದಾರೆ. ದೇಶದ ಒಟ್ಟು ಮಾರುಕಟ್ಟೆಯ ಶೇ.81ರಷ್ಟನ್ನು ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ತಂತು (ವೈರ್ಡ್) ಮತ್ತು ನಿಸ್ತಂತು (ವೈರ್‌ಲೆಸ್) ಬ್ರಾಡ್‌ಬ್ಯಾಂಡ್ ಸೇವೆಗಳ ಮೂಲಕ ಸ್ವಾಧೀನಪಡಿಸಿಕೊಂಡಿವೆ. ಹೀಗಾಗಿ ಸ್ಟಾರ್‌ಲಿಂಕ್ ಬಗ್ಗೆ ಅನುಮಾನ ಸ್ವಾಭಾವಿಕವೇ ಆಗಿತ್ತು. ಆಫ್ರಿಕಾದಂತಹ ಪ್ರದೇಶದಲ್ಲಿ ಸ್ಟಾರ್‌ಲಿಂಕ್ ಅಗ್ಗದ ಇಂಟರ್ನೆಟ್ ಸೌಲಭ್ಯ ನೀಡಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಹೀಗಾಗಿ ಅದು ಏರ್ ಟೆಲ್ ಮತ್ತು ಜಿಯೋಗೆ ದೊಡ್ಡ ಸವಾಲಾಗಿ ಕಂಡಿರುವುದು ಆಶ್ಚರ್ಯವಲ್ಲ.

ಸ್ಟಾರ್‌ಲಿಂಕ್‌ಗೆ  ಹರಾಜುರಹಿತ ಸ್ಪೆಕ್ಟ್ರಮ್ ಪ್ರವೇಶದ ಅವಕಾಶ ಯಾಕೆ?

ಸ್ಟಾರ್‌ಲಿಂಕ್ ಉಪಗ್ರಹ ಸ್ಪೆಕ್ಟ್ರಮ್ ಅನ್ನು ಬಳಸುತ್ತದೆ.  ಸ್ಟಾರ್‌ಲಿಂಕ್‌ ಅನ್ನು ಉದಾಹರಣೆಯಾಗಿ ನೀಡಿ, “ಸ್ಟಾರ್‌ಲಿಂಕ್‌ನಂತಹ ಸಂಸ್ಥೆಗಳು ಹರಾಜಿನ ಮೂಲಕವೇ ಸ್ಪೆಕ್ಟ್ರಮ್ ಪಡೆಯಬೇಕು” ಎಂದು 2023 ಜೂನ್‌ನಲ್ಲಿ ಜಿಯೋ ವಾದಿಸಿತ್ತು. ಆಗ ಮಾತ್ರವೇ ಸ್ಪರ್ಧಿಗಳ ನಡುವೆ ಸಮತೋಲಿತ ಸ್ಪರ್ಧಾತ್ಮಕ ಸೇವೆಯನ್ನು ಒದಗಿಸಬಹುದು ಎಂದು ಜಿಯೋ ಹೇಳಿತ್ತು. ಮೋದಿ ಸರ್ಕಾರ ಹೊಸ ದೂರಸಂಪರ್ಕ ಕಾಯ್ದೆ 2023 ತಂದು ಉಪಗ್ರಹಗಳ ಸ್ಪೆಕ್ಟ್ರಮ್ ಹರಾಜನ್ನು ರದ್ದುಗೊಳಿಸಿ ಆಡಳಿತಾತ್ಮಕವಾಗಿ ಹಂಚಿಕೆಯನ್ನು ಆರಂಭಿಸಿದ ನಂತರವೂ, ಕಳೆದ ವರ್ಷದವರೆಗೆ ಜಿಯೋ ಇದೇ ವಾದವನ್ನು ಮುಂದಿಟ್ಟಿತ್ತು. ಆದರೆ ಏರ್‌ಟೆಲ್ 2023 ಏಪ್ರಿಲ್‌ನಿಂದಲೇ ಸ್ಟಾರ್‌ಲಿಂಕ್ ಜೊತೆಗೂಡಿ ಆಡಳಿತಾತ್ಮಕ ಹಂಚಿಕೆಯ ಪರವಾಗಿ ವಾದಿಸುತ್ತಿತ್ತು. “ಉಪಗ್ರಹ ಸ್ಪೆಕ್ಟ್ರಮ್ ಹಂಚಿಕೆಯಾಗುವ ಸಂಪನ್ಮೂಲವಾಗಿರುವ ಕಾರಣದಿಂದ ಹರಾಜು ಹಾಕಲು ಸಾಧ್ಯವಿಲ್ಲ” ಎಂದು ಏರ್‌ಟೆಲ್ ಮತ್ತು ಸ್ಟಾರ್‌ಲಿಂಕ್ ವಾದಿಸಿದ್ದವು. 2024ರ ಅಂತ್ಯದ ಸಮಯದಲ್ಲಿ ಸ್ಟಾರ್‌ಲಿಂಕ್ ಭಾರತ ಪ್ರವೇಶ ಅನಿವಾರ್ಯವೆನ್ನುವ ಸ್ಥಿತಿ ಬಂದಾಗ ಸುನೀಲ್ ಮಿತ್ತಲ್, “ಟೆಲಿಕಾಂ ಕಂಪನಿಗಳಂತೆ ಸ್ಪೆಕ್ಟ್ರಮ್ ಖರೀದಿಸಿ ಒಳಬರಬೇಕು ಮತ್ತು ಅದೇ ಪ್ರಮಾಣದ ಪರವಾನಗಿ ಶುಲ್ಕಗಳನ್ನು ತೆರಬೇಕು” ಎಂದೇ ಅಭಿಪ್ರಾಯಪಟ್ಟಿದ್ದರು. ಆದರೆ ಮರುದಿನವೇ ಏರ್‌ಟೆಲ್ ತಾನು “ಆಡಳಿತಾತ್ಮಕವಾಗಿ ಸ್ಪೆಕ್ಟ್ರಮ್ ಹಂಚಿಕೆಯ ಪರವಾಗಿದ್ದೇನೆ” ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು.

ಇಂಟರ್ನೆಟ್ ಸ್ಪರ್ಧೆಯಲ್ಲಿ ಶತ್ರುಗಳು ಮಿತ್ರರಾದ ಬಗೆ ಹೇಗೆ?

ಸ್ಟಾರ್‌ಲಿಂಕ್ ಪ್ರವೇಶಕ್ಕೆ ಇದ್ದ ವಿರೋಧ ಸಹಭಾಗಿತ್ವವಾಗಿ ಬದಲಾಗಿದ್ದು ಹೇಗೆ ಎಂಬ ಕುರಿತು ಎರಡೂ ಸಂಸ್ಥೆಗಳು ಮೌನವಾಗಿವೆ. ಈ ಹಠಾತ್ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ಕೈಗೊಂಡ ಅಮೆರಿಕ ಪ್ರವಾಸದ ಪಾತ್ರ ಮುಖ್ಯವಾಗಿದೆ. ಮೋದಿ ವಾಷಿಂಗ್ಟನ್ ಡಿಸಿಯಲ್ಲಿ ಎಲಾನ್ ಮಸ್ಕ್ ಜೊತೆಗೆ ಸಭೆ ನಡೆಸಿದ ನಂತರ ಏರ್ ಟೆಲ್ ಮತ್ತು ಜಿಯೋ ವಿರೋಧವು ಮೈತ್ರಿಯಾಗಿ ಬದಲಾಗಿದೆ. ಭಾರತ ಅತ್ಯಧಿಕ ರಫ್ತು ಸುಂಕಗಳನ್ನು ಹೇರುತ್ತಿರುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದರು. ಈ ನಡುವೆಯೇ ಸ್ಟಾರ್‌ಲಿಂಕ್ ಕಂಪನಿಯು ಭಾರತ ಪ್ರವೇಶಿಸುವ ಹಾದಿ ಸುಗಮವಾಯಿತು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಟ್ರಂಪ್‌ಗೆ ಮಸ್ಕ್ ಅತ್ಯಧಿಕ ಹಣ ಸಹಾಯ ಮಾಡಿದ್ದರು. ಆಗಿನಿಂದಲೇ ಟ್ರಂಪ್, “ಭಾರತದ ಮಾರುಕಟ್ಟೆಗೆ ಅಮೆರಿಕದ ಕಂಪನಿಗಳು ಪ್ರವೇಶಿಸದಂತೆ ಅತ್ಯಧಿಕ ಸುಂಕ ವಿಧಿಸಲಾಗುತ್ತಿದೆ” ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್‌  ಆಗ್ರಹವನ್ನು ತಣಿಸಲು ಮೋದಿ ಸ್ಟಾರ್‌ಲಿಂಕ್ ಭಾರತ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿದರು ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ. ಮೋದಿ ಅಮೆರಿಕ ಭೇಟಿಗೆ ಮುನ್ನವೇ ಟೆಸ್ಲಾ ಕಂಪನಿ ಭಾರತ ಪ್ರವೇಶಕ್ಕೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಕ್ರಮವನ್ನು ಮೋದಿ ಸರ್ಕಾರ ಕೈಗೊಂಡಿತ್ತು.

ಇದನ್ನೂ ಓದಿರಿ: ಮಸ್ಕ್-ಮಿತ್ತಲ್-ಮುಖೇಶ್ ಕೂಡಾವಳಿ: ಯಾರಿಗೆ ಲಾಭ, ಮೋದಿ ಪಾತ್ರವೇನು?

ಅಂತಿಮವಾಗಿ ಹೇಳುವುದಾದರೆ ಸ್ಟಾರ್‌ಲಿಂಕ್‌ಗೆ ಪ್ರವೇಶ ನೀಡುವುದು ಭಾರತಕ್ಕೆ ಅನಿವಾರ್ಯವೇನೂ ಅಲ್ಲ. ನಮ್ಮದೇ ಉಪಗ್ರಹ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬಹುದಾಗಿತ್ತು. ಹಾಗಿದ್ದರೂ ಕೇಂದ್ರ ಸರ್ಕಾರ ಮಸ್ಕ್ ಅವರ ಟೆಸ್ಲಾ ಕಾರು ಆಮದು ಸುಂಕವನ್ನ ತಗ್ಗಿಸಿರುವುದೇ ಅಲ್ಲದೆ ಸ್ಟಾರ್ ಲಿಂಕ್‌ಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದೆ. ಈ ಬೆಳವಣಿಗೆಯ ಹಿಂದಿನ ಮುಖ್ಯ ಕಾರಣ ಡೊನಾಲ್ಡ್ ಟ್ರಂಪ್ ಅವರನ್ನು ಸಿಟ್ಟಿಗೇಳದಂತೆ ರಮಿಸುವುದೇ ಆಗಿದೆ. ಮೋದಿಯವರು ಸುಂಕ ರಿಯಾಯಿತಿ ನೀಡಿ ವಿದೇಶೀ ಕಾರ್ಪೊರೇಟುಗಳನ್ನು ಭಾರತೀಯ ಮಾರುಕಟ್ಟೆಗೆ ಬರ ಮಾಡಿಕೊಳ್ಳುತ್ತಿದ್ದಾರೆ. ದೇಶೀ ಉದ್ಯಮಿಗಳಿಗೆ ಕಡುಕಠಿಣ ಪೈಪೋಟಿಯನ್ನು ಸೃಷ್ಟಿಸುತ್ತಿದ್ದಾರೆ.

ವರ್ಷಗಳ ಹಿಂದೆ ತಾವೇ ನಗಾರಿ ಬಾರಿಸಿ ದೇಶಾದ್ಯಂತ ಸಾರಿ ಹೇಳಿದ್ದ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಮೋದಿಯವರು ಖುದ್ದಾಗಿ ಗಾಳಿಗೆ ತೂರಿದ್ದಾರೆ.  ಈ ಕುರಿತ ಕಾರಣಗಳನ್ನು ಅವರು ಬಹಿರಂಗಪಡಿಸಬೇಕು. ಈ ಉತ್ತರದಾಯಿತ್ವ ಅವರ ಮೇಲಿದೆ. ಅವರು ಹೇಳದೆ ಹೋದರೆ ಜನತೆಯೇ ಮುಂದಾಗಿ ಜಗ್ಗಿಸಿ ಕೇಳಬೇಕು.

Sup
ಎನ್‌.ಕೆ. ಸುಪ್ರಭಾ
+ posts

ಸಮಕಾಲೀನ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಎನ್ ಕೆ ಸುಪ್ರಭಾ ಅನುವಾದಕರಾಗಿಯೂ ಚಿರಪರಿಚಿತರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮಂಗಳೂರು ಮತ್ತು ಮಣಿಪಾಲದಲ್ಲಿ ಕೆಲವು ವರ್ಷಗಳ ಕಾಲ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು 2005ರಲ್ಲಿ ಬೆಂಗಳೂರಿಗೆ ಬಂದ ಅವರು, ವರ್ಷಗಳ ಕಾಲ ದಿನಪತ್ರಿಕೆಗಳ ಪುರವಣಿ ಮತ್ತು ನಿಯತಕಾಲಿಕಗಳಲ್ಲಿ ಕೆಲಸ ಮಾಡಿದ್ದಾರೆಕಳೆದ ಹದಿನೇಳು ವರ್ಷಗಳಿಂದ ಹವ್ಯಾಸಿ ಮತ್ತು ವೃತ್ತಿಪರ ಅನುವಾದಕರೂ ಆಗಿದ್ದಾರೆ. 

ಪೋಸ್ಟ್ ಹಂಚಿಕೊಳ್ಳಿ:

ಎನ್‌.ಕೆ. ಸುಪ್ರಭಾ
ಎನ್‌.ಕೆ. ಸುಪ್ರಭಾ
ಸಮಕಾಲೀನ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಎನ್ ಕೆ ಸುಪ್ರಭಾ ಅನುವಾದಕರಾಗಿಯೂ ಚಿರಪರಿಚಿತರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮಂಗಳೂರು ಮತ್ತು ಮಣಿಪಾಲದಲ್ಲಿ ಕೆಲವು ವರ್ಷಗಳ ಕಾಲ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು 2005ರಲ್ಲಿ ಬೆಂಗಳೂರಿಗೆ ಬಂದ ಅವರು, ವರ್ಷಗಳ ಕಾಲ ದಿನಪತ್ರಿಕೆಗಳ ಪುರವಣಿ ಮತ್ತು ನಿಯತಕಾಲಿಕಗಳಲ್ಲಿ ಕೆಲಸ ಮಾಡಿದ್ದಾರೆಕಳೆದ ಹದಿನೇಳು ವರ್ಷಗಳಿಂದ ಹವ್ಯಾಸಿ ಮತ್ತು ವೃತ್ತಿಪರ ಅನುವಾದಕರೂ ಆಗಿದ್ದಾರೆ. 

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...