ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವೇನು? ಸಾಕ್ಷ್ಯಗಳು ಹೇಳುವುದೇನು?

Date:

‘ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ವಿ.ಡಿ. ಸಾವರ್ಕರ್ ಪಾತ್ರವೇನು?’ ಎಂಬುದು ಪದೇಪದೇ ಮುನ್ನೆಲೆಗೆ ಬರುವ ಪ್ರಶ್ನೆ. ನಾಥೂರಾಮ್ ಗೋಡ್ಸೆಯು ಹಿಂದುತ್ವ ಸೈದ್ಧಾಂತಿಕತೆಗೆ ಸಂಪೂರ್ಣ ತೆರೆದುಕೊಳ್ಳುವ ಮುನ್ನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಭಿಮಾನವನ್ನೂ ಹೊಂದಿದ್ದವನಾಗಿದ್ದ. ಆಗಾಗ್ಗೆ ಹೋರಾಟಗಳಲ್ಲಿಯೂ ಭಾಗಿಯಾಗುತ್ತಿದ್ದ. ಹೀಗಿದ್ದ ಗೋಡ್ಸೆಯು ಸಾವರ್ಕರ್ ಸಂಪರ್ಕಕ್ಕೆ ಬಂದ ಮೇಲೆ ನಿಧಾನಕ್ಕೆ ಬದಲಾಗುತ್ತಾ ಹೋದ. ಪೇಶ್ವೆ ಬ್ರಾಹ್ಮಣಗಿರಿಯ ಜಾತ್ಯಸ್ಥ ಬೇರುಗಳೇ ಆತನನ್ನು ಹಿಂದುತ್ವದೊಂದಿಗೆ ಹಿಡಿದು ನಿಲ್ಲಿಸಿದವು.

ಸಾವರ್ಕರ್ ಹೇಳುವ ಮಾತುಗಳನ್ನು ಆರಂಭದಲ್ಲಿ ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳದ ಗೋಡ್ಸೆ, ಸ್ವಾತಂತ್ರ್ಯ ಹೋರಾಟಗಳಿಗೂ ಹೋಗುತ್ತಿದ್ದ. ದುರಾದೃಷ್ಟವಶಾತ್ ನಿಧಾನಕ್ಕೆ ಸಾವರ್ಕರ್ ಪ್ರಭಾವಕ್ಕೆ ಒಳಗಾಗುತ್ತಾ ಹೋದ. ಮುಂದೆ ಸ್ವಾತಂತ್ರ್ಯ ಭಾರತದ ಮೊದಲ ಭಯೋತ್ಪಾದಕನಾಗಿ ಹೊಮ್ಮಿದ.

ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಚಳವಳಿಯೊಂದಿಗೆ ಗೋಡ್ಸೆ ಸೇರಿದಂತೆ ತನ್ನ ಯಾವುದೇ ಅನುಯಾಯಿಗಳು ಭಾಗಿಯಾಗಬಾರದು ಎಂಬುದು ಸಾವರ್ಕರ್ ನಿಲುವಾಗಿತ್ತು. ಆ ಕಾರಣಕ್ಕೆ ಸಾವರ್ಕರ್ ಇನ್ನಿಲ್ಲದ ಚಾಣಾಕ್ಷತೆ ತೋರುತ್ತಿದ್ದರು. ಗೋಡ್ಸೆಯೇ ಹೇಳಿಕೊಂಡಿರುವ ಪ್ರಕಾರ, ಆತ ಗಾಂಧೀಜಿಯವರ ಕರೆಗೆ ಓಗೊಟ್ಟು ಶಾಲಾ ಕಾಲೇಜು ಬಿಟ್ಟು, ಮೆಟ್ರಿಕ್ಯುಲೇಷನ್ ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದ. ಇದನ್ನು ಸಾವರ್ಕರ್‌ಗೆ ತಿಳಿಸಿದಾಗ ಅಸಮಾಧಾನಗೊಂಡ ಅವರು, “ಹೀಗೆಲ್ಲ ಮಾಡಬಾರದು. ಓದು ಬಹಳ ಮುಖ್ಯ” ಎಂದು ಪುಸಲಾಯಿಸಿದ್ದರು. ಒಟ್ಟಾರೆಯಾಗಿ ತನ್ನ ಅನುಯಾಯಿ ಆದವನು ಸ್ವಾತಂತ್ರ್ಯ ಹೋರಾಟದಿಂದ ವಿಮುಖನಾಗಿರಬೇಕು ಎಂಬುದು ಸಾವರ್ಕರ್ ಉದ್ದೇಶವಾಗಿತ್ತು. ನಿಧಾನಕ್ಕೆ ಸಂಪೂರ್ಣ ಸಾವರ್ಕರ್ ವಾದಿಯಾಗಿ ಬದಲಾದ ಗೋಡ್ಸೆ, ಗಾಂಧೀಜಿಯ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ. ಆದರೆ ಗೋಡ್ಸೆ ಮತ್ತು ಆತನ ಸಹಚರರ ಹಿಂದೆ ಇದ್ದ ‘ಮಾಸ್ಟರ್ ಮೈಂಡ್ ಸಾವರ್ಕರ್’ ಎಂಬುದು ಸಾಕ್ಷ್ಯಾಧಾರಗಳಿಂದ ಅಂದು ಸಾಬೀತಾಗಲಿಲ್ಲ. ಆದರೆ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಇದ್ದರೆಂಬುದನ್ನು ತನಿಖೆಯ ಅಂಶಗಳಂತೂ ಬೊಟ್ಟು ಮಾಡಿದ್ದವು. ಸಾವರ್ಕರ್ ತೀರಿಹೋದ ಬಳಿಕ ಬೆಳಕಿಗೆ ಬಂದ ಸಾಕ್ಷ್ಯಗಳು ಸಾವರ್ಕರ್ ಪಾತ್ರವನ್ನು ದೃಢಪಡಿಸಿವೆ ಎಂದು ಇತಿಹಾಸ ಬರೆಹಗಾರರು ಅಭಿಪ್ರಾಯಪಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ವಿ.ಡಿ. ಸಾವರ್ಕರ್ ‘ವೀರ’ ಎಂಬುದು ನಿಜವೇ?

1948ರ ಜನವರಿ 30ರಂದು ಜನಸಮೂಹದ ನಡುವೆ ಗಾಂಧೀಜಿಯವರ ಹತ್ಯೆಯಾಯಿತು. ನಂತರ, ದಾಳಿಕೋರನನ್ನು ಸ್ಥಳದಲ್ಲೇ ಬಂಧಿಸಲಾಯಿತು ಮತ್ತು ಅರ್ಧ ಗಂಟೆಯ ನಂತರ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಒಟ್ಟು 12 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಇತ್ಯಾದಿಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿ ವಿಚಾರಣೆ ನಡೆಸಲಾಯಿತು.

ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ್ ಡಿ. ಆಪ್ಟೆ ಇಬ್ಬರಿಗೂ ಫೆಬ್ರವರಿ 10, 1949 ರಂದು ವಿಚಾರಣಾ ನ್ಯಾಯಾಲಯ ಮತ್ತು ಜೂನ್ 21, 1949ರಂದು ಹೈಕೋರ್ಟ್ ಮರಣದಂಡನೆ ವಿಧಿಸಿದವು. ವಿಷ್ಣು ಕರ್ಕರೆ ಮತ್ತು ಮದನ್ ಲಾಲ್ ಪಹ್ವಾ ಅವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ವಿಚಾರಣಾ ನ್ಯಾಯಾಲಯವು ಶಂಕರ್ ಕಿಸ್ತಯ್ಯ ಅಪರಾಧಿ ಎಂದು ಸಾಬೀತು ಮಾಡಿತು, ಆದರೆ ಹೈಕೋರ್ಟ್ ಆತನನ್ನು ಖುಲಾಸೆಗೊಳಿಸಿತು. ಗೋಪಾಲ್ ಗೋಡ್ಸೆ ತಪ್ಪಿತಸ್ಥ ಎಂಬುದು ಸಾಬೀತಾಗಿ ಜೀವಾವಧಿ ಶಿಕ್ಷೆಯಾಯಿತು. ವಿಚಾರಣಾ ನ್ಯಾಯಾಲಯವು ಸಾವರ್ಕರ್ ಅವರನ್ನು ದೋಷಮುಕ್ತಗೊಳಿಸಿತು. ಹೈಕೋರ್ಟ್‌ನಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸದ ಕಾರಣ ಬಿಡುಗಡೆ ಮಾಡಲಾಯಿತು. ದತ್ತಾತ್ರೇಯ  ಎಸ್. ಪರ್ಚುರೆಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು, ಆದರೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ಹೇಳುವವನಾಗಿ (ಅಪ್ರೂವರ್ ಆಗಿ) ದಿಗಂಬರ್ ಆರ್. ಬಾಡ್ಗೆ ನಿಂತನು. ಅಂದರೆ ಈತ ಆರೋಪಿಯೂ ಹೌದು, ಸಾಕ್ಷಿದಾರನೂ ಹೌದು. ಹೀಗೆ ಸಾಕ್ಷಿಯಾಗುವವನಿಗೆ ಶಿಕ್ಷೆಯಲ್ಲಿ ವಿನಾಯಿತಿಯೂ ಸಿಗುತ್ತದೆ. ಇನ್ನುಳಿದಂತೆ ಗಂಗಾಧರ್ ಎಸ್., ಗಂಗಾಧರ್ ಜಾದವ್ ಮತ್ತು ಸೂರ್ಯಯೋ ಶರ್ಮಾ ಪರಾರಿಯಾಗಿದ್ದರು.

savarkar 1
ಗಾಂಧಿ ಹತ್ಯೆ ವಿಚಾರಣೆ ಸಂದರ್ಭದಲ್ಲಿ ಸಾವರ್ಕರ್ (ಹಿಂಬದಿ ಸಾಲಿನಲ್ಲಿ)

ಜೂನ್ 21, 1948 ರಂದು ಕ್ಷಮಾದಾನ ಪಡೆದ ಬಾಡ್ಗೆ, ಮಹಾತ್ಮ ಗಾಂಧಿಯವರ ಕೊಲೆಗೆ ಸಂಚು ರೂಪಿಸಿದ್ದನ್ನು ಬಹಿರಂಗಪಡಿಸಿದನು. ಆತನ ಹೇಳಿಕೆಯನ್ನು ಸ್ವತಂತ್ರ ಸಾಕ್ಷ್ಯಗಳು ಸರಿಯಾಗಿ ದೃಢಪಡಿಸಿದವು. ಇದೆಲ್ಲವುಗಳಿಂದ ಸಾವರ್ಕರ್ ಬಚಾವಾಗಿದ್ದರು.

ಅಂದಹಾಗೆ ಗಾಂಧೀಜಿಯವರ ಹತ್ಯೆಯ ನಂತರ, ಈ ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಸಾವರ್ಕರ್ ಅವರನ್ನು ಬಂಧಿಸಲಾಗಿತ್ತು. ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಮತ್ತು ಇತರ ಸಂಚುಕೋರರೊಂದಿಗೆ ಸಾವರ್ಕರ್ ಅವರಿಗೆ ಸಂಪರ್ಕವಿತ್ತು ಎಂಬುದು ಪೊಲೀಸರ ವಾದವಾಗಿತ್ತು.

ಇದನ್ನೂ ಓದಿರಿ: ರಾಜಕೀಯ ಅಸ್ತ್ರವಾಗಿ ‘ಅತ್ಯಾಚಾರ’ ಸಮರ್ಥನೆ; ಸಾವರ್ಕರ್‌ ವಿಕೃತ ಸಿದ್ಧಾಂತ ಹೇಳುವುದೇನು?

ಗಾಂಧಿ ಹತ್ಯೆ ಪ್ರಕರಣದಲ್ಲಿ ವಿ.ಡಿ. ಸಾವರ್ಕರ್‌ ವಿರುದ್ಧ ಮುಖ್ಯ ಸಾಕ್ಷಿ ದಿಗಂಬರ್ ಬಾಡ್ಗೆ ಆಗಿದ್ದನು. ಸಾವರ್ಕರ್‌ ಮನೆಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಸಾಕ್ಷಿಗಳು ಅವನ ಹೇಳಿಕೆಗಳನ್ನು ಬೆಂಬಲಿಸಿದ್ದರು. ಬಾಡ್ಗೆಯು ಸತ್ಯನಿಷ್ಠ ಸಾಕ್ಷಿ ಎಂದು ನ್ಯಾಯಮೂರ್ತಿ ಆತ್ಮಾ ಚರಣ್ ಗಮನಿಸಿದ್ದರು. ಮೇಲ್ಮನವಿ ವಿಚಾರಣೆಯಲ್ಲಿ ಪಂಜಾಬ್ ಹೈಕೋರ್ಟ್ ಕೂಡ ಅದೇ ಅಭಿಪ್ರಾಯ ಹೊಂದಿತ್ತು. ಹೆಚ್ಚಿನ ಅಂಶಗಳಲ್ಲಿ ಅವನ ಹೇಳಿಕೆಗಳನ್ನು “ಸ್ವತಂತ್ರ ಪುರಾವೆಗಳಿಂದ” ದೃಢೀಕರಿಸಲಾಗಿತ್ತು. ಆದರೆ, 1948ರ ಜನವರಿ 14 ಮತ್ತು 17ರಂದು ಸಾವರ್ಕರ್ ಅವರ ಮನೆಗೆ ನಾಥೂರಾಮ್ ಗೋಡ್ಸೆ ಮತ್ತು ಅವನ ಸಹಚರ ನಾರಾಯಣ ಆಪ್ಟೆ ಭೇಟಿ ನೀಡಿದ್ದರು ಎಂಬ ಅವನ ಹೇಳಿಕೆಯನ್ನು ದೃಢಪಡಿಸಲು ಹೆಚ್ಚಿನ ಸಾಕ್ಷ್ಯಗಳು ದೊರಕಲಿಲ್ಲ.

ಪ್ರತಿ ಸಂದರ್ಭದಲ್ಲೂ ಬಾಡ್ಗೆಯನ್ನು ಸಾವರ್ಕರ್ ಮನೆಯ ಹೊರಗೆ ನಿಲ್ಲಿಸಲಾಗಿತ್ತು. ಎರಡನೇ ಸಂದರ್ಭದಲ್ಲಿ ಆತ ಸಾವರ್ಕರ್ ಆಡಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದ. ಗೋಡ್ಸೆ ಮತ್ತು ಆಪ್ಟೆಗೆ ಸಾವರ್ಕರ್‌ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಅದನ್ನು ಬಾಡ್ಗೆ ಕೇಳಿಸಿಕೊಂಡಿದ್ದ- “ಯಶಸ್ವಿಯಾಗಿ ಬನ್ನಿ” (ಯಶವಿ ಹೌನ್ ಯಾ)- ಇದು ಸಾವರ್ಕರ್‌ ಸೂಚನೆಯಾಗಿತ್ತು. ಮನೆ ಮುಂದೆ ಮೂವರು ಇಳಿದಿದ್ದರು ಎಂಬುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬೆಂಬಲಿತ ಸಾಕ್ಷಿಗಳು ಹೇಳಲಿಲ್ಲ. ಆದರೆ ಆ ಮನೆಯಲ್ಲಿ ಬೇರೆ ಇಬ್ಬರು ನಿವಾಸಿಗಳೂ ಇದ್ದರು. ಕಾನೂನು ಪ್ರಕಾರ ಆರೋಪಿಯ ಸಾಕ್ಷ್ಯಕ್ಕೆ ಸ್ವತಂತ್ರ ಬೆಂಬಲ ಅಗತ್ಯವಿರುವುದರಿಂದ ಸಾವರ್ಕರ್ ಅವರನ್ನು ಖುಲಾಸೆಗೊಳಿಸಲಾಯಿತು. ಆದರೂ 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 133ರ ಪ್ರಕಾರ “ಸಹಚರನ ಸಾಕ್ಷ್ಯದ ಮೇಲೆ ಮಾತ್ರ ಆಧಾರಿತವಾದ ಶಿಕ್ಷೆಯು ಕಾನೂನುಬಾಹಿರವಲ್ಲ”.

ವಿಶೇಷ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಿತು. ಸಾವರ್ಕರ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯವಾದ ಸ್ವತಂತ್ರ ಪುರಾವೆಗಳ ಕೊರತೆಯಿಂದಾಗಿ ಫೆಬ್ರವರಿ 10, 1949ರಂದು ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಿತು. ಆದರೆ ಸಾವರ್ಕರ್‌ ಅವರ ಪಾತ್ರದ ಕುರಿತು ಚರ್ಚೆಗಳೇನೂ ನಿಲ್ಲಲಿಲ್ಲ.

1964ರಲ್ಲಿ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಕೆಲವು ವ್ಯಕ್ತಿಗಳು ಪುಣೆಯಲ್ಲಿ ಸಮಾರಂಭವೊಂದನ್ನು ನಡೆಸಿದರು. ಅಲ್ಲಿ ಅವರು ಹತ್ಯೆಯ ಬಗ್ಗೆ ತಮಗೆ ಮೊದಲೇ ತಿಳಿದಿತ್ತು ಎಂಬರ್ಥದಲ್ಲಿ ಮಾತನಾಡಿದ್ದು ದೊಡ್ಡ ವಿವಾದ ಸೃಷ್ಟಿಸಿತು. ಈ ಹಿನ್ನೆಲೆಯಲ್ಲಿ, ಹತ್ಯೆಯ ಹಿಂದೆ ಇನ್ನೂ ದೊಡ್ಡ ಮಟ್ಟದ ಸಂಚು ಇತ್ತೇ? ಭದ್ರತಾ ಲೋಪಗಳಿವೆಯೇ? ಎಂದು ತಿಳಿಯಲು 1965ರಲ್ಲಿ ನಿವೃತ್ತ ನ್ಯಾಯಾಧೀಶ ಜೀವನ್ ಲಾಲ್ ಕಪೂರ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು.

1948ರ ವಿಚಾರಣೆಯ ಸಮಯದಲ್ಲಿ ಲಭ್ಯವಿಲ್ಲದ ಕೆಲವು ಪ್ರಮುಖ ಸಾಕ್ಷ್ಯಗಳು ಕಪೂರ್ ಆಯೋಗದ ಮುಂದೆ ಹಾಜರಾಗಿದ್ದನ್ನು ಗಮನಿಸಬೇಕಾಗುತ್ತದೆ. ವಿಶೇಷವಾಗಿ ಸಾವರ್ಕರ್ ಅವರ ಇಬ್ಬರು ಆಪ್ತ ಸಹಾಯಕರು ನೀಡಿದ ಹೇಳಿಕೆಗಳು ಹೊಸ ತಿರುವನ್ನು ನೀಡಿದವು. ಅಪ್ಪಾ ರಾಮಚಂದ್ರ ಕಾಸರ್ (ಸಾವರ್ಕರ್ ಅವರ ಅಂಗರಕ್ಷಕ) ಪ್ರಕಾರ, ಹತ್ಯೆಗೂ ಮೊದಲು ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರು ಸಾವರ್ಕರ್ ಅವರನ್ನು ಹಲವಾರು ಬಾರಿ ಭೇಟಿ ಮಾಡಿದ್ದರು. ಗಜಾನನ ವಿಷ್ಣು ದಾಮ್ಲೆ (ಸಾವರ್ಕರ್ ಅವರ ಕಾರ್ಯದರ್ಶಿ) ಪ್ರಕಾರ, 1948ರ ಜನವರಿ ಮಧ್ಯಭಾಗದಲ್ಲಿ ಸಾವರ್ಕರ್ ಅವರನ್ನು ಗೋಡ್ಸೆ ಮತ್ತು ಆಪ್ಟೆ ಭೇಟಿಯಾಗಿದ್ದರು ಮತ್ತು ಹಿಂದಿರುಗುವಾಗ ಹತ್ಯೆಯ ಬಗ್ಗೆ ಮಾತನಾಡಿಕೊಂಡಿದ್ದರು. ಈ ವಿಚಾರಗಳನ್ನು ಆಯೋಗ ಗಂಭೀರವಾಗಿ ಗಮನಿಸಿತ್ತು. “ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವನ್ನು ನಿರೂಪಿಸಲು ಇದ್ದ ಕೊರತೆಯನ್ನು ಈ ಸಾಕ್ಷ್ಯಗಳು ತುಂಬಿದವು” ಎಂದು ಖ್ಯಾತ ಕಾನೂನು ತಜ್ಞ ಎ.ಜಿ.ನೂರಾನಿ ಅಭಿಪ್ರಾಯಪಡುತ್ತಾರೆ.

noorani
ಕಾನೂನು ತಜ್ಞ ಎ.ಜಿ.ನೂರಾನಿ

ತನಿಖೆಯ ಬಳಿಕ ಆಯೋಗ ಈ ಸತ್ಯಗಳನ್ನು ಕಂಡುಕೊಂಡಿತ್ತು: “ಸಾವರ್ಕರ್ ಮತ್ತು ಅವರ ತಂಡಕ್ಕೆ ಹತ್ಯೆಯ ಸಂಚಿನ ಬಗ್ಗೆ ಸಂಪೂರ್ಣ ಅರಿವಿತ್ತು. ಸಾವರ್ಕರ್ ಮತ್ತು ಅವರ ಗುಂಪಿನಿಂದಲೇ ಈ ಹತ್ಯೆಯ ಸಂಚು ರೂಪಿತವಾಯಿತು ಎಂಬ ಸಿದ್ಧಾಂತವನ್ನು ಹೊರತುಪಡಿಸಿ ಬೇರೆ ಯಾವುದೇ ಸಿದ್ಧಾಂತವು ಈ ಎಲ್ಲ ಸತ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಹತ್ಯೆಯ ಮೊದಲ ಪ್ರಯತ್ನ (ಜನವರಿ 20, ಮದನ್ ಲಾಲ್ ಪಹ್ವಾ ಮಾಡಿದ ಬಾಂಬ್ ಸ್ಫೋಟ) ವಿಫಲವಾದಾಗ, ಪೊಲೀಸರು ಸರಿಯಾದ ತನಿಖೆ ನಡೆಸಿದ್ದರೆ ಗಾಂಧೀಜಿಯವರನ್ನು ಉಳಿಸಬಹುದಿತ್ತು.”

ಈ ವರದಿ ಬಂದಾಗ ಸಾವರ್ಕರ್ ಅವರು ಜೀವಂತವಾಗಿರಲಿಲ್ಲ (1966ರಲ್ಲಿ ನಿಧನರಾಗಿದ್ದರು), ಹಾಗಾಗಿ ಅವರಿಗೆ ನ್ಯಾಯಾಲಯದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅವಕಾಶವಿರಲಿಲ್ಲ. “ಇದು ಒಂದು ‘ವಿಚಾರಣಾ ಆಯೋಗ’ದ ವರದಿಯೇ ಹೊರತು ‘ನ್ಯಾಯಾಲಯದ ತೀರ್ಪು’ ಅಲ್ಲ. ಕಾನೂನಿನ ದೃಷ್ಟಿಯಲ್ಲಿ 1949ರ ನ್ಯಾಯಾಲಯದ ‘ನಿರ್ದೋಷಿ’ ಎಂಬ ತೀರ್ಪೇ ಅಂತಿಮವಾಗಿ ಉಳಿಯಿತು” ಎಂಬುದು ಸಾವರ್ಕರ್ ವಾದಿಗಳ ವಾದ.

ಆಯೋಗ ಕಂಡುಕೊಂಡ ಸತ್ಯಗಳ ಮತ್ತಷ್ಟು ವಿವರ..

“ಆಪ್ಟೆ ಮತ್ತು ಗೋಡ್ಸೆ ಬಾಂಬೆಯಲ್ಲಿ ಸಾವರ್ಕರ್ ಅವರನ್ನು ಆಗಾಗ ಭೇಟಿಯಾಗುತ್ತಿದ್ದರು ಮತ್ತು ಸಮಾವೇಶಗಳಲ್ಲಿ, ಪ್ರತಿ ಸಭೆಯಲ್ಲೂ ಸಾವರ್ಕರ್ ಜೊತೆಯಲ್ಲಿದ್ದರು ಎಂಬುದನ್ನು ಇಬ್ಬರ ಹೇಳಿಕೆಗಳು (ಕಾಸರ್‌ ಮತ್ತು ವಿಷ್ಣು ದಾಮ್ಲೆ) ಎತ್ತಿಹಿಡಿಯುತ್ತವೆ. ಕರ್ಕರೆ ಅವರೂ ಸಾವರ್ಕರ್‌ಗೆ ಚಿರಪರಿಚಿತರಾಗಿದ್ದರು ಮತ್ತು ಆಗಾಗ ಭೇಟಿಯಾಗುತ್ತಿದ್ದರು ಎಂಬುದನ್ನು ಈ ಸಾಕ್ಷ್ಯಗಳೂ ತೋರಿಸುತ್ತವೆ. ಬಾಡ್ಗೆ ಸಾವರ್ಕರ್ ಅವರನ್ನು ಭೇಟಿಯಾಗುತ್ತಿದ್ದ. ಡಾ. ಪರ್ಚುರೆ ಕೂಡ ಅವರನ್ನು ಭೇಟಿಯಾಗಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದವರು ಸಾವರ್ಕರ್ ಸದನದಲ್ಲಿ (ಬಾಂಬೆಯ ದಾದರ್‌ನಲ್ಲಿ) ಒಮ್ಮೊಮ್ಮೆ ಸೇರಿಕೊಳ್ಳುತ್ತಿದ್ದರು ಮತ್ತು ಕೆಲವೊಮ್ಮೆ ಸಾವರ್ಕರ್ ಜೊತೆ ದೀರ್ಘ ಮಾತುಕತೆ ನಡೆಸುತ್ತಿದ್ದರು ಎಂಬುದನ್ನು ಇವೆಲ್ಲವೂ ದೃಢಪಡಿಸುತ್ತವೆ. ಕರ್ಕರೆ ಮತ್ತು ಮದನ್‌ಲಾಲ್ ದೆಹಲಿಗೆ ಹೊರಡುವ ಮೊದಲು ಸಾವರ್ಕರ್ ಅವರನ್ನು ಭೇಟಿಯಾಗಿದ್ದರು. ಬಾಂಬ್ ಸ್ಫೋಟದ ಮೊದಲು ಮತ್ತು ಹತ್ಯೆಯ ಮೊದಲು ಸಾವರ್ಕರ್ ಅವರನ್ನು ಆಪ್ಟೆ ಹಾಗೂ ಗೋಡ್ಸೆ ಭೇಟಿಯಾಗಿದ್ದರು. ಪ್ರತಿ ಸಂದರ್ಭದಲ್ಲೂ ದೀರ್ಘ ಮಾತುಕತೆ ನಡೆಸಿದ್ದರು ಎಂಬುದು ವಿಶೇಷ” ಎಂದು ಕಪೂರ್ ಆಯೋಗ ಟಿಪ್ಪಣಿ ಮಾಡಿದೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?

ಈ ಇಬ್ಬರೂ ನ್ಯಾಯಾಲಯದಲ್ಲಿ ಸಾಕ್ಷಿ ನೀಡಿದ್ದರೆ ಸಾವರ್ಕರ್ ಅವರು ಶಿಕ್ಷೆಗೊಳಗಾಗುತ್ತಿದ್ದರು. 1948ರ ಜನವರಿ 14 ಮತ್ತು 17ರಂದು ಗೋಡ್ಸೆ ಹಾಗೂ ಆಪ್ಟೆ- ಸಾವರ್ಕರ್ ಅವರನ್ನು ಭೇಟಿಯಾಗಿದ್ದರು ಎಂಬುದರ ಬಗ್ಗೆ ಯಾವುದೇ ಅನುಮಾನವೂ ಇಲ್ಲ. ಸಾವರ್ಕರ್ ಅವರ ಅಂಗರಕ್ಷಕ ಕಾಸರ್ ಅವರು ಕಪೂರ್ ಆಯೋಗಕ್ಕೆ ಮುಂದೆ ಹೇಳಿಕೆ ನೀಡುತ್ತಾ, “ಬಾಂಬ್ ಘಟನೆಯ ನಂತರ ಅವರು ಜನವರಿ 23 ಅಥವಾ 24ರಂದು ಅವರನ್ನು ಭೇಟಿಯಾಗಿದ್ದರು” ಎಂದರು. ಸಾವರ್ಕರ್ ಅವರ ಕಾರ್ಯದರ್ಶಿ ದಾಮ್ಲೆ ಪ್ರತಿಕ್ರಿಯಿಸಿ, “ಗೋಡ್ಸೆ ಮತ್ತು ಆಪ್ಟೆ ಜನವರಿ ಮಧ್ಯದಲ್ಲಿ ಸಾವರ್ಕರ್ ಅವರನ್ನು ಭೇಟಿಯಾಗಿದ್ದರು ಮತ್ತು ಅವರ ಜೊತೆ ತೋಟದಲ್ಲಿ ಕುಳಿತಿದ್ದರು” ಎಂದು ಒಪ್ಪಿಕೊಂಡರು.

gandhi 6
ಮಹಾತ್ಮ ಗಾಂಧೀಜಿ

ಬಾಂಬೆಯ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಜಮ್‌ಶೆದ್ ನಗರ್‌ವಾಲಾ ಅವರು ‘ಕ್ರೈಂ ರಿಪೋರ್ಟ್ ನಂ.1’ರಲ್ಲಿ ದಾಖಲಿಸುತ್ತಾ, “ಸಾವರ್ಕರ್ ಅವರು ಪಿತೂರಿಯ ಹಿಂದೆ ಇದ್ದರು” ಮತ್ತು “ಅವರು ಅನಾರೋಗ್ಯದ ನಾಟಕ ಮಾಡುತ್ತಿದ್ದರು” ಎಂದಿದ್ದಾರೆ. 1948ರ ಜನವರಿ 31ರ ನಗರ್‌ವಾಲಾ ಅವರ ಪತ್ರದಲ್ಲಿ “ಹತ್ಯೆಯ ಒಂದು ದಿನದ ನಂತರ ದೆಹಲಿಗೆ ಹೊರಡುವ ಮೊದಲು ಸಾವರ್ಕರ್, ಗೋಡ್ಸೆ ಮತ್ತು ಆಪ್ಟೆ 40 ನಿಮಿಷಗಳ ಕಾಲ ಭೇಟಿಯಾಗಿದ್ದರು” ಎಂದು ಉಲ್ಲೇಖಿಸಲಾಗಿತ್ತು. ಕಾಸರ್ ಮತ್ತು ದಾಮ್ಲೆ ತಮ್ಮಲ್ಲಿ ತಿಳಿಸಿದ್ದನ್ನೇ ಇಲ್ಲಿ ಉಲ್ಲೇಖಿಸಿದ್ದರು. “ಈ ಇಬ್ಬರಿಗೂ ಸಾವರ್ಕರ್ ಮನೆಗೆ ಯಾವುದೇ ನಿರ್ಬಂಧವಿಲ್ಲದೆ ಪ್ರವೇಶವಿತ್ತು.” ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಡ್ಗೆ ಇಲ್ಲದೆ ಇದ್ದಾಗ ಸಾವರ್ಕರ್ ಅವರನ್ನು ಗೋಡ್ಸೆ ಮತ್ತು ಆಪ್ಟೆ ಇಬ್ಬರೂ ಜನವರಿ 14 ಮತ್ತು 17ರ ನಡುವೆ ಭೇಟಿಯಾಗಿದ್ದರು. ಅವರನ್ನು ನ್ಯಾಯಾಲಯದಲ್ಲಿ ಸಾಕ್ಷಿಗಳಾಗಿ ಏಕೆ ಹಾಜರುಪಡಿಸಲಿಲ್ಲ ಎಂಬುದು ರಹಸ್ಯವಾಗಿಯೇ ಉಳಿದಿದೆ.

1948ರ ಫೆಬ್ರವರಿ 27ರಂದು ವಲ್ಲಭಭಾಯ್ ಪಟೇಲ್ ಅವರು ನೆಹರೂ ಅವರಿಗೆ ಹೀಗೆ ಬರೆದಿದ್ದರು: “ಬಾಪೂಜಿಯವರ ಹತ್ಯೆ ಪ್ರಕರಣದ ತನಿಖೆಯನ್ನು ನಾನು ದಿನವೂ ಪರಿಶೀಲನೆ ಮಾಡುತ್ತಿದ್ದೇನೆ… ಸಾವರ್ಕರ್ ಅವರ ನೇರ ನಿಯಂತ್ರಣದಲ್ಲಿರುವ ಹಿಂದೂ ಮಹಾಸಭೆಯ ಉಗ್ರವಾದಿ ಗುಂಪೇ ಪಿತೂರಿ ರೂಪಿಸಿ ಇದನ್ನು ನಡೆಸಿತು.”

ಮಹಾತ್ಮ ಗಾಂಧಿಯವರ ಹತ್ಯೆಯ ಮರು ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಾಗ ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತ ಸಲಹೆಗಾರರನ್ನಾಗಿ (amicus curiaeಯನ್ನಾಗಿ) ಅಮರೇಂದ್ರ ಶರಣ್ ಅವರನ್ನು ಕೆಲವು ವರ್ಷಗಳ ಹಿಂದೆ ನೇಮಿಸಿತ್ತು. ಅಮಿಕಸ್ ಕ್ಯೂರಿಯು, “ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ಅಥವಾ ಅದಕ್ಕೆ ಸಂಬಂಧಿಸಿದಂತೆ ಹೊಸ ಸತ್ಯಶೋಧನಾ ಆಯೋಗವನ್ನು ರಚಿಸುವ ಅಗತ್ಯವಿರುವ ಯಾವುದೇ ಮಹತ್ವದ ಅಂಶಗಳು ಬೆಳಕಿಗೆ ಬಂದಿಲ್ಲ” ಎಂದಿದ್ದರು. ಆದರೆ ವರದಿಯು ಮತ್ತೊಮ್ಮೆ ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷ ವಿನಾಯಕ್ ಡಿ. ಸಾವರ್ಕರ್ ಅವರ ಪಾತ್ರವನ್ನು ತೀಕ್ಷ್ಣವಾಗಿ ಎತ್ತಿ ತೋರಿಸಿತ್ತು.

ಇದನ್ನೂ ಓದಿರಿ: ‘ನಾವಲೇಕರ್ ರಾಮಾಯಣ’ ಹೇಳಿದ್ದು ಆರ್‌ಎಸ್‌ಎಸ್ ಕುತಂತ್ರಗಳ ಬಗ್ಗೆ ಅಲ್ಲವೇ?

ಹಿರಿಯ ವಕೀಲ ಅಮರೇಂದ್ರ ಶರಣ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ “ಮಹಾತ್ಮ ಗಾಂಧಿಯವರ ದೇಹವನ್ನು ಹೊಕ್ಕಿದ ಗುಂಡುಗಳು, ಅದನ್ನು ಹಾರಿಸಿದ ಪಿಸ್ತೂಲು, ಆ ಗುಂಡುಗಳನ್ನು ಹಾರಿಸಿದ ದಾಳಿಕೋರ, ಹತ್ಯೆಗೆ ಕಾರಣವಾದ ಪಿತೂರಿ ಮತ್ತು ಆ ಹತ್ಯೆಗೆ ಕಾರಣವಾದ ಸಿದ್ಧಾಂತವನ್ನು ಸರಿಯಾಗಿ ಗುರುತಿಸಲಾಗಿದೆ” ಎಂದು ತಿಳಿಸಲಾಗಿದೆ. ಆದರೆ ಸಾವರ್ಕರ್‌ ಪಾತ್ರವನ್ನು ಸ್ಪಷ್ಟಪಡಿಸಲು ಅವಕಾಶವಿದ್ದರೂ ಹೆಚ್ಚಿನ ಆಸ್ಥೆವಹಿಸಿದಂತೆ ತೋರುವುದಿಲ್ಲ. 1948ರಲ್ಲೇ ಸರಿಯಾದ ತನಿಖೆಯಾಗಿದ್ದರೆ, ಪ್ರಮುಖ ಸಾಕ್ಷಿಗಳು ಅಂದೇ ಮುಂದೆ ಬಂದಿದ್ದರೆ, ಸಾವರ್ಕರ್‌ಗೆ ಕಠಿಣ ಶಿಕ್ಷೆಯಾಗುತ್ತಿತ್ತು ಎಂಬುದಂತೂ ಸತ್ಯ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...