ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 2)

Date:

ಕೇವಲ ಕಾಂಗ್ರೆಸ್ ವಿರೋಧಿ ಧೋರಣೆಯ ಅತಿರೇಕದ ಫಲವಾಗಿ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸೈದ್ಧಾಂತಿಕವಾಗಿ ವಿರುದ್ಧ ಧ್ರುವದಲ್ಲಿದ್ದ ಜನಸಂಘ ಮತ್ತು ಸ್ವತಂತ್ರ ಪಕ್ಷಗಳ ಜೊತೆ ಕೈ ಜೋಡಿಸಿದ್ದನ್ನು, ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ವಿರೋಧಿಗಳನ್ನು ಹಣಿಯಲು ಮುಂದಾದ ಇಂದಿರಾ ಗಾಂಧಿ ತಮ್ಮ ಅಧಿಕಾರ ಬಲವರ್ಧನೆ ಮತ್ತು ಬಡವರ ಪರವಾದ ನೀತಿಗಳು ಎರಡನ್ನೂ ಏಕಕಾಲಕ್ಕೆ ಪೊರೆಯಬಲ್ಲ ಕಾರ್ಯತಂತ್ರವನ್ನು ರೂಪಿಸುತ್ತಿದ್ದನ್ನು, ಕರ್ನಾಟಕದ ಬಹುತೇಕ ಚಿಂತಕರು ಮುಂದುವರಿದ, ಅನುಕೂಲವಂತ ಜಾತಿಗಳ ಹಿನ್ನೆಲೆಯಿಂದ ಬಂದಿರುವ ಕಾರಣಕ್ಕೂ ಅರಸು ಅವರ ಹಿಂದುಳಿದ ವರ್ಗಗಳ ರಾಜಕಾರಣದ ಕುರಿತು, ಅವರು ತೆಗೆದುಕೊಂಡ ಸವಾಲಿನ ಗಹನತೆ ಕುರಿತು ಅಸಡ್ಡೆ ಬೆಳೆಸಿಕೊಂಡಿದ್ದನ್ನು ಮೊದಲ ಭಾಗದಲ್ಲಿ ಲೇಖಕರು ವಿಸ್ತೃತವಾಗಿ ಚರ್ಚಿಸಿದ್ದಾರೆ. ಈ ಕಂತಿನಲ್ಲಿ ಎಂಬತ್ತು ಮತ್ತು ತೊಂಬತ್ತರ ದಶಕದ ರಾಜಕೀಯ ಪಲ್ಲಟಗಳು ಹಾಗೂ ಕರ್ನಾಟಕ ರಾಜಕೀಯ ಕಂಡ ಮತ್ತಷ್ಟು ತಿರುವುಗಳ ಕುರಿತು ಚರ್ಚಿಸಲಾಗಿದೆ..

(ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ..)

ದಲಿತ ಸಂಘರ್ಷ ಸಮಿತಿಯ ಸಮಾಜೋ-ರಾಜಕೀಯ ಚಳವಳಿ: ಇದೇ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಕಟ್ಟಿದ ಸಮಾಜೋ-ರಾಜಕೀಯ ಚಳವಳಿ ಚಾರಿತ್ರಿಕವಾಗಿದೆ. ಮಾರ್ಕ್ಸ್ ವಾದ, ಲೋಹಿಯಾವಾದ, ಅಂಬೇಡ್ಕರ್‌ವಾದದಿಂದ ಪ್ರೇರಣೆ ಪಡೆದ ದಸಂಸ ಚಳವಳಿ ಹನ್ನೆರಡನೇ ಶತಮಾನದ ವಚನ ಚಳವಳಿಯ ಜಾತಿ ವಿರೋಧಿ ಸ್ಫೂರ್ತಿಯನ್ನು ಒಳಗೊಂಡಿತ್ತು. ಇದಕ್ಕೂ ಮೊದಲು ಏಪ್ರಿಲ್ 1968ರಲ್ಲಿ ‘ಭೀಮಸೇನಾ’ ಸಂಘಟನೆ ಪ್ರಾರಂಭಿಸಿದ ಶ್ಯಾಮಸುಂದರ್ ಕರ್ನಾಟಕದ ದಲಿತ ಚಳವಳಿಯ ಚಿಂತನೆಯನ್ನು ರೂಪಿಸಿದರು. ಆರಂಭದಲ್ಲಿ ಗುಲ್ಬರ್ಗಾದಲ್ಲಿ(ಈಗಿನ ಕಲಬುರಗಿ) ಪ್ರಾರಂಭವಾದ ಈ ಸಂಘಟನೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿಗುರೊಡೆಯಿತು. ಶ್ಯಾಮಸುಂದರ್ ಅವರು `ಪ್ರತಿ ತಾಲೂಕಿನಲ್ಲಿ ಶೇ.25ರಷ್ಟು ಹಳ್ಳಿಗಳ ಶರಣಾಗತಿ, ಪ್ರತ್ಯೇಕ ಮತಕ್ಷೇತ್ರ, ಪ್ರತಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಒಂದು ವಿಶ್ವವಿದ್ಯಾಲಯ, ಅಸ್ಪೃಶ್ಯರಿಗಾಗಿ ಬಲವಾದ ರಾಜಕೀಯ ಸಂಘಟನೆ’ ಎನ್ನುವ ನಾಲ್ಕು ಹಕ್ಕೊತ್ತಾಯಗಳನ್ನು ಒಳಗೊಂಡ `ನಮಗೆ ಬೇಕಿರುವ ನಾಲ್ಕು ಹಕ್ಕೊತ್ತಾಯಗಳು’ ಎನ್ನುವ ಕಿರುಪುಸ್ತಕ ಪ್ರಕಟಿಸಿದರು. ಈ ಬೇಡಿಕೆಗಳು ಅಂಬೇಡ್ಕರ್ ಅವರ ಬಿಡಿ ಬಿಡಿ ಚಿಂತನೆಯನ್ನು ಒಳಗೊಂಡಿದ್ದವು. ಚಿಂತಕ ಮನೋಹರ್ ಪ್ರಸಾದ್, `ಇನ್ನೂ ಮುಂದುವರೆದು ಶ್ಯಾಮಸುಂದರ್ ಅವರು ಪ್ರತ್ಯೇಕ ದಲಿತಸ್ತಾನದ ಬೇಡಿಕೆ ಇಟ್ಟಿದ್ದರು. ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ಮೈತ್ರಿಯನ್ನು ಬಯಸಿದ ಶ್ಯಾಮಸುಂದರ್ ಈ ಕಾರಣಕ್ಕೆ ಬಲುಬೇಗ ಗುರುತಿಸಲ್ಪಟ್ಟರು’ ಎಂದು ಬರೆಯುತ್ತಾರೆ. ಶ್ಯಾಮಸುಂದರ್ ಅವರ `ಮೂಲ ಭಾರತೀಯರು’, ‘ನಾಲ್ಕು ಹಕ್ಕೊತ್ತಾಯಗಳು,’ ‘ಅವರು ಉರಿಯುತ್ತಾರೆ’, ‘ಭಾರತದ ಅಲ್ಪಸಂಖ್ಯಾತರಿಗೆ ಒಕ್ಕೂಟ ಅಗತ್ಯವಿದೆ’, ‘ದೀಕ್ಷಾ’ ಮುಂತಾದ ಪುಸ್ತಕಗಳು ಕರ್ನಾಟಕದ ದಲಿತ ಚಳವಳಿಯ ಆರಂಭದ ಚಿಂತನೆಗಳಾಗಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇ ಸಂದರ್ಭದಲ್ಲಿ ದೇವರಾಜು ಅರಸು ಸಂಪುಟದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪ ದಿಟ್ಟ ನಡೆ ನುಡಿಗೆ ಹೆಸರುವಾಸಿಯಾಗಿದ್ದರು. ಮೈಸೂರಿನ ಸಮಾರಂಭವೊಂದರಲ್ಲಿ `ಕರ್ನಾಟಕ ಸಾಹಿತ್ಯದಲ್ಲಿರುವುದು ಬೂಸಾ’ ಎನ್ನುವ ಅವರ ವಿಮರ್ಶಾತ್ಮಕ ಹೇಳಿಕೆಯು ವಿವಾದದ ಸ್ವ್ವರೂಪ ಪಡೆದುಕೊಂಡು ಇಲ್ಲಿನ ಭಾಷಾ ಸಂಘಟನೆಗಳು, ಬಹುತೇಕ ಮಾಧ್ಯಮಗಳು, ಮುಂದುವರಿದ ಜಾತಿಗಳು ಬಸವಲಿಂಗಪ್ಪ ಮತ್ತು ದಲಿತ ವಿದ್ಯಾರ್ಥಿಗಳ ವಿರುದ್ಧ ಹಿಂಸಾತ್ಮಕವಾಗಿ ಪ್ರತಿಭಟಿಸಿದರು. ಅಂಬೇಡ್ಕರ್‌ವಾದಿಯಾಗಿದ್ದ ಬಸವಲಿಂಗಪ್ಪನವರು ಕರ್ನಾಟಕದ ಬಹುಮುಖ್ಯ ರಾಜಕೀಯ ಚಿಂತಕರಾಗಿದ್ದರು. ಅವರ ಚಿಂತನೆ, ಇಚ್ಛಾಶಕ್ತಿಯ ಕಾರಣದಿಂದ ಅರಸು ಕಾಲದಲ್ಲಿ ಭೂಸುಧಾರಣೆ, ಜೀತವಿಮುಕ್ತಿ, ಮಲ ಹೊರುವ ಪದ್ಧತಿಯ ನಿಷೇಧ ಜಾರಿಗೊಂಡವು. ಶ್ಯಾಮಸುಂದರ್, ಬಸವಲಿಂಗಪ್ಪರಂತಹ ಧುರೀಣರ ಚಿಂತನೆಗಳು ನಂತರದ ದಲಿತ ಚಳವಳಿಗೆ ಸ್ಫೂರ್ತಿಯಾಗಿತ್ತು. ಮಹಾರಾಷ್ಟ್ರದ `ದಲಿತ ಪ್ಯಾಂಥರ್ಸ್’ ಪ್ರೇರಣೆ ಪಡೆದು ಹುಟ್ಟಿಕೊಂಡ ದಸಂಸಕ್ಕೆ 1973ರಲ್ಲಿ ಭದ್ರಾವತಿಯಲ್ಲಿ ಜರುಗಿದ ದಲಿತ ಲೇಖಕ ಕಲಾವಿದರ ಯುವ ಸಂಘಟನೆ(ದಲೇಕಯುಸಂ) ಮೊದಲ ಹಂತವಾಗಿತ್ತು. ಮುಂದಿನ ಒಂದು ದಶಕದ ಒಳಗೆ ದಸಂಸ ಕರ್ನಾಟಕದ ಹಳ್ಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಬೆಳೆಯಿತು. ಈಗ ಸಂಘಟನೆಯ ವಿಶೇಷವೆಂದರೆ ಇಲ್ಲಿ ಬಿ. ಕೃಷ್ಣಪ್ಪನವರಂತಹ ಕಮಾಂಡರ್, ದೇವನೂರ ಮಹಾದೇವನವರಂತಹ ಸಾಹಿತಿ ಹಾಗೂ ಚಿಂತಕರು, ಗೋವಿಂದಯ್ಯ, ಸಿದ್ದಲಿಂಗಯ್ಯನವರಂತಹ ಕವಿಗಳು, ದೇವಯ್ಯ ಹರವೆ, ರಾಮಯ್ಯನವರಂತಹ ಸಂಸ್ಕೃತಿ ಚಿಂತಕರು, ಎಂ.ಡಿ.ಗಂಗಯ್ಯ, ಎನ್.ವೆಂಕಟೇಶ್‌ರಂತಹ ಸಂಘಟಕರು, ಇಂದೂಧರ ಹೊನ್ನಾಪುರ, ರಾಮದೇವ ರಾಕೆರಂತಹ ಪತ್ರಕರ್ತರು, ಇನ್ನೂ ಮುಂತಾದ ಸಾಹಿತಿಗಳು, ಸಂಚಾಲಕರು ಮತ್ತು ಸಾವಿರಾರು ಕಾರ್ಯಕರ್ತರು ಇಡೀ ಸಂಘಟನೆಯ ದೇಹ, ಆತ್ಮವಾಗಿದ್ದರು. ವಚನ ಚಳವಳಿಯ ಅನುಭವ ಮಂಟಪದ ಮರುರೂಪದಂತಿದ್ದ ದಸಂಸ ಎಪ್ಪತ್ತು, ಎಂಬತ್ತರ ದಶಕದಲ್ಲಿ ಚಿಂತಕರು-ಸಾಮಾಜಿಕ ಕಾರ್ಯಕರ್ತರ ಅಪೂರ್ವ ಸಂಗಮವಾಗಿತ್ತು. ಸಂಘಟನೆಯ ಭಾಗವಾಗಿ ಮೂಡಿದ ದಲಿತ ಸಾಹಿತ್ಯ ಇಂದಿಗೂ ಅನನ್ಯವಾಗಿದೆ. ಕರ್ನಾಟಕ ದಲಿತ ಲೇಖಕರ ಗದ್ಯ, ಪದ್ಯ, ವೈಚಾರಿಕ ಬರಹಗಳು ರಾಷ್ಟ್ರೀಯ ಮಟ್ಟದಲ್ಲಿ ಬಹುಮುಖ್ಯ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಚಿಂತನೆಗಳಾಗಿವೆ.

ಇದನ್ನೂ ಓದಿರಿ: ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 1)

ಕನಕಪುರದಲ್ಲಿ ನಡೆದ 5000 ದಲಿತ ಜೀತ ಕಾರ್ಮಿಕರ ಮೆರವಣಿಗೆ, ನಾಗಸಂದ್ರ ಭೂ ಹೋರಾಟ, ಅನಸೂಯಮ್ಮ ಅತ್ಯಾಚಾರ ಪ್ರಕರಣ, ಶೇಷಗಿರಿಯಪ್ಪ ಕೊಲೆ ಪ್ರಕರಣ ವಿರುದ್ಧದ ಹೋರಾಟ ಮುಂತಾದ ಚಳವಳಿಗಳು ಚಾರಿತ್ರಿಕವಾಗಿವೆ, ಮೈಲುಗಲ್ಲಾಗಿವೆ. ದಸಂಸವು ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು, ಎಡ ಸಂಘಟನೆಗಳನ್ನು ತಮ್ಮ ಸಹ ಹೋರಾಟಗಾರರು ಎಂದು ಅಪ್ಪಿಕೊಂಡಿದ್ದಿತ್ತು. ಆದರೆ ಜಾತಿ-ಫ್ಯೂಡಲ್ ವ್ಯವಸ್ಥೆಯ ಕಾರಣದಿಂದ ದಸಂಸ ಮತ್ತು ರೈತ ಸಂಘಟನೆಗಳ ನಡುವೆ ಬಾಂಧವ್ಯ ಏರ್ಪಡಲಿಲ್ಲ. ಹಳ್ಳಿಗಳ ಜಾತಿ ಸದೃಶ್ಯ ನರಕದಿಂದ ಕಳಚಿಕೊಂಡು ನಗರಕ್ಕೆ ವಲಸೆ ಹೊರಟಿದ್ದ ದಲಿತರಿಗೆ ರೈತ ಸಂಘಟನೆ ತನ್ನ `ಗ್ರಾಮೀಣ ಚಿಂತನೆ’ಯನ್ನು ಮನದಟ್ಟು ಮಾಡಿಕೊಡಲು ಸಾಧ್ಯವಿರಲಿಲ್ಲ. ಏಕೆಂದರೆ ಇದರ ಆಳದಲ್ಲಿ ಫ್ಯೂಡಲಿಸಂನ ದೌರ್ಜನ್ಯವಿತ್ತು. ದಸಂಸ ಮತ್ತು ರೈತ, ಕಾರ್ಮಿಕ ಸಂಘಟನೆಗಳ ನಡುವಿನ ಕಂದಕಗಳ ಕುರಿತು ಸಾಕಷ್ಟು ಚರ್ಚೆಯಾಗಿದೆ. ಆ ಕಾಲದ ದಸಂಸ ಅಧ್ಯಯನ ಶಿಬಿರಗಳು, ಪಂಚಮ ಪತ್ರಿಕೆ ಮಹತ್ವದ ಚಿಂತನೆಗಳಾಗಿದ್ದವು. ಮುಂದಿನ ತಲೆಮಾರಿನ ಹೋರಾಟಗಾರರು, ಶಿಕ್ಷಕರು, ಸಂಘಟಕರನ್ನು ಅವು ರೂಪಿಸಿದವು. ದಸಂಸ ಕರ್ನಾಟಕದಲ್ಲಿ ಹೊಸ ಬಗೆಯ ಸಮಾಜೋ-ರಾಜಕೀಯ ಚಿಂತನೆಯನ್ನು ರೂಪಿಸಿತು.

3 dss protest 1985 1
ದಲಿತ ಸಂಘರ್ಷ ಸಮಿತಿ ನಡೆಸಿದ ಪ್ರತಿಭಟನೆಯೊಂದರಲ್ಲಿ ದೇವನೂರ ಮಹಾದೇವ ಅವರು ಮಾತನಾಡುತ್ತಿರುವುದು

ಲಂಕೇಶ್ ಪತ್ರಿಕೆ ಎನ್ನುವ ರಾಜಕೀಯ ಚಿಂತನೆ

ಎಪ್ಪತ್ತರ ದಶಕದ ಕಡೆಯ ವರ್ಷಗಳಲ್ಲಿ ಸಾಹಿತಿ ಲಂಕೇಶ್, ಪ್ರಜಾವಾಣಿ ಪತ್ರಿಕೆಗೆ ಅಂಕಣವನ್ನು ಬರೆಯುತ್ತಿದ್ದರು. ಅದು ರಾಜಕೀಯ ಅಂಕಣ. ಅಲ್ಲಿಯವರೆಗೂ ಮಾಧ್ಯಮಗಳಲ್ಲಿ ರಾಜಕಾರಣಿಗಳನ್ನು ನೇರವಾಗಿ ಗೇಲಿ ಮಾಡುವ, ಟೀಕಿಸುವ ಸಂಪ್ರದಾಯ ಇರಲಿಲ್ಲ. ಆದರೆ ಲಂಕೇಶ್ ತಮ್ಮ ಆ ಅಂಕಣದ ಮೂಲಕ ಕರ್ನಾಟಕದ ರಾಜಕಾರಣಿಗಳನ್ನು ವಿಡಂಬನೆ ಮಾಡುತ್ತಾ, ಅವರ ರಾಜಕಾರಣದ ಮೇಲಾಟಗಳನ್ನು ಕೀಟಲೆ ಮಾಡುತ್ತಾ ಹೊಸ ಮಾದರಿಯ ಪತ್ರಿಕೋದ್ಯಮಕ್ಕೆ, ವಿಭಿನ್ನ ರಾಜಕೀಯ ಚಿಂತನೆಗೆ ನಾಂದಿ ಹಾಡಿದ್ದರು. ಅಲ್ಲಿ ನಂಜು ಇರಲಿಲ್ಲ, ಆದರೆ ರಾಜಕಾರಣಿಗಳಿಗೆ ಚಾಟಿ ಏಟನ್ನು ಬೀಸುವ ಹೊಸ ಭಾಷೆಯನ್ನು ರೂಢಿಸಿಕೊಂಡಿದ್ದರು. ತಮ್ಮ `ಲಂಕೇಶ್ ಪತ್ರಿಕೆ’ಯ ಮೊದಲ ಸಂಚಿಕೆಗೆ ಕೊಟ್ಟ ಶೀರ್ಷಿಕೆ `ಚಿಕನ್ ಪಲಾವ್ ವರ್ಸಸ್ ನುಗ್ಗೇಕಾಯಿ ಗೊಜ್ಜು’ ಲಂಕೇಶ್‌ರ ವಿಡಂಬನ ರಾಜಕೀಯ ಚಿಂತನೆಗೆ ಸಾಕ್ಷಿ. ಅಲ್ಲಿಂದ ಲಂಕೇಶ್ ನಡೆದದ್ದೇ ಹಾದಿಯಂತಾಗಿದ್ದು ಇಂದು ಇತಿಹಾಸ. ಎಂಬತ್ತರ ದಶಕದ ಆರಂಭದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿತ್ತು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ಅವರ ಆಡಳಿತದಲ್ಲಿನ ಅನನುಭವ ಮತ್ತು ಉಡಾಫೆ ವ್ಯಕ್ತಿತ್ವ, ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಲಂಕೇಶ್ ಪತ್ರಿಕೆ ಸಮರ್ಥ ವಿರೋಧ ಪಕ್ಷದ ಕಾರ್ಯ ನಿರ್ವಹಿಸಿತು. ಗುಂಡೂರಾವ್ ಆಡಳಿತದ ಭ್ರಷ್ಟಾಚಾರ ಹಗರಣಗಳನ್ನು ಪ್ರತಿವಾರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಆಗಿನ ಆ ರಾಜಕೀಯ ವರದಿಗಳು ಅಲ್ಲಿಯವರೆಗಿನ ಪತ್ರಿಕೋದ್ಯಮದ ಸಿದ್ಧ ಮಾದರಿಗಳನ್ನು ಸಂಪೂರ್ಣವಾಗಿ ಕೆಡವಿ ಹಾಕಿತು. ವ್ಯಂಗ್ಯ, ತನಿಖೆ, ನೇರವಾದ ಆರೋಪ ಮತ್ತು ಸಂಬಂಧಪಟ್ಟ ರಾಜಕಾರಣಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ವರದಿಗಳು ಲಂಕೇಶ್ ಪತ್ರಿಕೆಗೆ ಅಪಾರ ಜನಪ್ರಿಯತೆ ತಂದು ಕೊಟ್ಟಿತು. ಇಲ್ಲಿ ಲಂಕೇಶ್‌ರ ಗದ್ಯದ ಅನನ್ಯತೆ, ನೈತಿಕತೆ, ಪ್ರತಿಭೆ ಮತ್ತು ಸಾಹಿತ್ಯಕ ಅಧ್ಯಯನಗಳು ಬೆನ್ನೆಲುಬಾಗಿ ನಿಂತವು.

ಲಂಕೇಶ್ ಮತ್ತು ಲಂಕೇಶ್ ಪತ್ರಿಕೆ ಮೊಟ್ಟ ಮೊದಲ ಬಾರಿಗೆ ಕನ್ನಡ ಜರ್ನಲಿಸಂನಲ್ಲಿ `ಕಾಂಗ್ರೆಸೇತರ ರಾಜಕೀಯ ಚಿಂತನೆ’ ಬೆಳೆಸಿತು. ಆದರೆ 1983ರಲ್ಲಿ ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ಬೆಂಬಲದಿಂದ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಆರಂಭದಲ್ಲಿ ಆಡಳಿತ ಪಕ್ಷದೊಂದಿಗೆ ಬೆರೆತು ಹೋಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ಸರ್ಕಾರದ ಎಲ್ಲ ನಿರ್ಧಾರಗಳಲ್ಲಿ(ಮಂತ್ರಿ ಮಂಡಲ ರಚನೆ, ಮಂತ್ರಿಗಳ ಆಯ್ಕೆ, ಅಧಿಕಾರಿಗಳ ಆಯ್ಕೆ) ಮೂಗು ತೂರಿಸುತ್ತಿದ್ದರು. ಲಂಕೇಶರಿಗೆ ತಮ್ಮ ಪತ್ರಿಕೆಯಿಂದಲೇ ಕಾಂಗ್ರೆಸ್ ಸೋತಿದ್ದು ಎನ್ನುವ ಮೇಲ್ವಿಚಾರಕನ ಗತ್ತು ಮೈಗೂಡತೊಡಗಿತು. ಆದರೆ ಜನತಾ ಪಕ್ಷವು ಸರಳ ಬಹುಮತದ ಕೊರತೆಯಿಂದಾಗಿ ಬಿಜೆಪಿ ಪಕ್ಷದ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಕಾಂಗ್ರೆಸ್ ವಿರೋಧಿ ಧೋರಣೆ ಮೈಗೂಡಿಸಿಕೊಂಡಿದ್ದ ಲಂಕೇಶ್‌ರಂತಹ ಜಾತ್ಯತೀತ ಚಿಂತಕರಿಗೆ ಈ ಮೈತ್ರಿ ಅಪವಿತ್ರ, ಅನೈತಿಕ ಎಂದು ಎನಿಸದೇ ಹೋಗಿದ್ದು ವಿರೋಧಾಭಾಸವಾಗಿ ಕಾಣುತ್ತದೆ. ವೃತ್ತಿಪರ ರಾಜಕೀಯ ತಜ್ಞರಲ್ಲದ ಲಂಕೇಶ್ ಕ್ರಮೇಣ ತನ್ನ ಹಿಂದಿನ ವಿರೋಧ ಪಕ್ಷದ ಗುಣವನ್ನು ಮೈಗೂಡಿಸಿಕೊಂಡು 1985-1989ರ ಅವಧಿಯಲ್ಲಿ ಒಂದು ಪ್ರಬುದ್ಧ ವಿರೋಧ ಪಕ್ಷದಂತೆ ಕೆಲಸ ಮಾಡಿದ್ದು ನಿಜಕ್ಕೂ ಈ ತಲೆಮಾರಿನ ಪತ್ರಕರ್ತರಿಗೆ ಒಂದು ಪಾಠದಂತಿದೆ. ಎಂಬತ್ತು-ತೊಂಬತ್ತರ ದಶಕದ ಲಂಕೇಶರ ರಾಜಕೀಯ ಚಿಂತನೆಗಳು ಇಂತಹ ಕಾರಣಗಳಿಗೆ ಮಹತ್ವದ್ದಾಗಿದೆ.

ಇದನ್ನೂ ಓದಿರಿ: ಐಪಿಎಲ್ ಬೆಟ್ಟಿಂಗ್ ದಂಧೆ: ಎಗ್ಗಿಲ್ಲದೆ ನಡೆಯುವ ಜೂಜಾಟಕ್ಕಿಲ್ಲ ಕಡಿವಾಣ

1990ರಲ್ಲಿ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.27ರಷ್ಟು ಮೀಸಲಾತಿ ಕಲ್ಪಿಸಿದ ವಿ.ಪಿ.ಸಿಂಗ್ ಸರ್ಕಾರದ ನಿಲುವನ್ನು ಲಂಕೇಶ್ ಪತ್ರಿಕೆಯಲ್ಲಿ ಕಟುವಾಗಿ ಟೀಕಿಸಲಾಯಿತು. ಈ ಸಂಚಿಕೆಗಳು ಸಾಮಾಜಿಕವಾಗಿ ಲಂಕೇಶ್ ಪತ್ರಿಕೆಯ ಮಿತಿಗಳನ್ನು ಬಹಿರಂಗಗೊಳಿಸುತ್ತವೆ. ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕುರಿತು ಮುಂದುವರಿದ ಮಧ್ಯಮವರ್ಗದ ಸಂಕುಚಿತ ನಿಲುವನ್ನು ಮೈಗೂಡಿಸಿಕೊಂಡಂತಿದ್ದ ಲಂಕೇಶರ ಈ ಧೋರಣೆ ಅವರ ಪ್ರಗತಿಪರ ಚಿಂತನೆಗೆ ಪ್ರತಿಕೂಲದಂತಿತ್ತು. ಮಂಡಲ್ ಸಂದರ್ಭದ ಲಂಕೇಶ್ ಪತ್ರಿಕೆಯ ನಿಲುವು ಅವರ ಸಾಮಾಜಿಕ-ರಾಜಕೀಯ ಚಿಂತನೆಗಳ ವೈರುಧ್ಯವನ್ನು, ಅಪಕ್ವತೆಯನ್ನು ತೋರಿಸುತ್ತದೆ. ತನ್ನನ್ನು ಓಲೈಸದ ಸಾಮಾಜಿಕ, ಸಾಂಸ್ಕೃತಿಕ ಚಳವಳಿಗಳ ಕುರಿತು ಲಂಕೇಶ್ ಮತ್ತು ಲಂಕೇಶ್ ಪತ್ರಿಕೆಯ ವಿರೋಧ ಹಾಗೂ ದ್ವೇಷವನ್ನು ಅಂದಿಗೂ ಮತ್ತು ಇಂದಿಗೂ ಒಪ್ಪಲು ಸಾಧ್ಯವಿಲ್ಲ. ಒಬ್ಬ ಸಾಹಿತಿಯಾಗಿ `ಬಂಡಾಯ ಸಾಹಿತ್ಯ ಸಂಘಟನೆ’ಯ ಸಾಹಿತ್ಯಕ ಮತ್ತು ಕಲಾ ಮೀಮಾಂಸೆಯ ಮಿತಿಗಳನ್ನು ಸಕಾರಣವಾಗಿ ವಿಮರ್ಶಿಸಿದ, ನಿಷ್ಕಾರಣವಾಗಿ `ಡಂಬಾಯ’ವೆಂದು ಟೀಕಿಸುತ್ತಿದ್ದ ಲಂಕೇಶ್ ತಮ್ಮ ವೈಯುಕ್ತಿಕ ನಿಲುವುಗಳನ್ನು ಪತ್ರಕರ್ತನಾಗಿ, ಚಿಂತಕರಾಗಿ `ಲಂಕೇಶ್ ಪತ್ರಿಕೆ’ ಮೇಲೂ ಹೇರತೊಡಗಿದರು. ಈ ಯಜಮಾನ್ಯದ ಧೋರಣೆಯಿಂದಾಗಿಯೇ ಸಾಮಾಜಿಕ ನ್ಯಾಯದ `ಮಂಡಲ್ ವರದಿ’ಯನ್ನು ಸಹ ಪತ್ರಿಕೆ ಟೀಕಿಸಲು ಕಾರಣವಾಯಿತು. ಇದೇ ಮಾತುಗಳು ರೈತ ಸಂಘಟನೆ ಕುರಿತಾಗಿಯೂ ಅನ್ವಯಿಸುತ್ತದೆ. ಪತ್ರಕರ್ತರಾಗಿ, ಪ್ರಗತಿಪರ ಚಿಂತಕರಾಗಿ ರೈತ ಸಂಘಟನೆಯನ್ನು ಅರ್ಥೈಸಿಕೊಳ್ಳಬೇಕಾಗಿದ್ದ ಲಂಕೇಶ್ ಮಧ್ಯಮವರ್ಗದ ಗೃಹಸ್ಥರಂತೆ ವಿಮರ್ಶಿಸಿದ್ದು ಅವರ ರಾಜಕೀಯ ಚಿಂತನೆಯ ಮಿತಿಯಾಗಿದೆ. ಈ ವಿಮರ್ಶೆಯ ನಂಜಿಗೆ ಲಂಕೇಶ್ ಮತ್ತು ನಂಜುಂಡಸ್ವಾಮಿಯವರ ನಡುವಿನ ವೈಮನಸ್ಸು ಸೇರಿಕೊಂಡು ರೈತ ಸಂಘಟನೆಯಲ್ಲಿ ಒಡಕುಂಟಾಗಲು ಕಾರಣವಾಯಿತು. ಅದರಲ್ಲೂ ಜಾಗತೀಕರಣದ ನಂತರ ತೊಂಬತ್ತರ ದಶಕದಲ್ಲಿ ರೈತ ಸಂಘವನ್ನು ವಿಷಯಾಧಾರಿತವಾಗಿ ಬೆಂಬಲಿಸುತ್ತಲೇ ಅದರ ದೌರ್ಬಲ್ಯಗಳನ್ನು ವಸ್ತುನಿಷ್ಟವಾಗಿ ವಿಮರ್ಶಿಸಬೇಕಿಗಿದ್ದ ಲಂಕೇಶ್ ಪತ್ರಿಕೆ ದಿಕ್ಕುತಪ್ಪಿದ ದಾರಿಹೋಕರಂತೆ ವರ್ತಿಸಿತು. ದಲಿತ ಸಂಘರ್ಷ ಸಮಿತಿಯ ಚಳವಳಿಯ ಸಂದರ್ಭಕ್ಕೂ ಇದೇ ಮಾತುಗಳು ಅನ್ವಯಿಸುತ್ತದೆ. ಜಾಗತೀಕರಣದ ಕುರಿತಾಗಿಯೂ ಲಂಕೇಶ್ ತಮ್ಮ ಎಂದಿನ ಪಶ್ಚಿಮ ಒಲವಿನ ಚಿಂತನೆಯನ್ನು ಅನ್ವಯಿಸಿ ಬೆಂಬಲಿಸಿದ್ದರು. ಎಡ ಪಕ್ಷಗಳ ಸಿದ್ಧಾಂತವನ್ನು ಟೀಕಿಸುವ ಭರದಲ್ಲಿ ಜಾಗತೀಕರಣದ ಮಹತ್ವವನ್ನು ವೈಭವೀಕರಿಸಿ ಮಾತನಾಡತೊಡಗಿದರು.

Lnake
ಪಿ.ಲಂಕೇಶ್

ಈ ಎಲ್ಲ ಮಿತಿಗಳಾಚೆಯೂ ಪತ್ರಕರ್ತ, ಚಿಂತಕರಾಗಿ ಸದಾ ವರ್ತಮಾನಕ್ಕೆ ಕಿವಿಗೊಟ್ಟು, ಸಮಕಾಲೀನ ವಿದ್ಯಮಾನಗಳಿಗೆ ತಮ್ಮನ್ನು ಪ್ರಸ್ತುತಗೊಳಿಸಿಕೊಳ್ಳುತ್ತ ಬಂದ ಲಂಕೇಶ್ ಅವರ ಮೌಲ್ಯಗಳು, ನೈತಿಕತೆ ಮತ್ತು ಪ್ರಾಮಾಣಿಕತೆೆ ಇಂದಿಗೂ ಅನುಕರಣೀಯವಾಗಿದೆ. ಅವರ ರಾಜಕೀಯ ಚಿಂತನೆಗಳು ಯಾವ ಸಂದರ್ಭಗಳಲ್ಲಿಯೂ ನಿಂತ ನೀರಾಗದೆ ಸದಾ ಸಾಮರಸ್ಯದ ಪರವಾಗಿರುತ್ತಿದ್ದವು. 1992ರ ಬಾಬ್ರಿ ಮಸೀದಿ ಧ್ವಂಸದ ನಂತರ ಸಂಘ ಪರಿವಾರದ ಮತಧರ್ಮಾಂಧತೆಯ ವಿರುದ್ಧ ತಮ್ಮ ಕೊನೆಯ ಉಸಿರಿನವರೆಗೂ ಹೋರಾಡಿದ ಲಂಕೇಶ್ ಇದೇ ಕಾರಣಕ್ಕೆ 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. `ವಿದೇಶಿ ವಾಜಪೇಯಿ, ಸ್ವದೇಶಿ ಸೋನಿಯಾ’ ಎನ್ನುವ ಲಂಕೇಶರ ರಾಜಕೀಯ ಚಿಂತನೆ ಗಮನಾರ್ಹವಾಗಿದೆ. 1980-2000ರ ಕಾಲಘಟ್ಟದ ಲಂಕೇಶ ಪತ್ರಿಕೆಯ ಸಮಾಜೋ-ರಾಜಕೀಯ ನಿಲುವುಗಳು ಬಹುತೇಕ ಸಂದರ್ಭಗಳಲ್ಲಿ ಸಮಂಜಸವಾಗಿದ್ದವು, ಪ್ರಸ್ತುತವಾಗಿದ್ದವು, ಅನೇಕ ಸಂದರ್ಭಗಳಲ್ಲಿ ಚರ್ಚಾರ್ಹವಾಗಿದ್ದವು. ಕೆಲವೊಮ್ಮೆ ವಿಮರ್ಶೆಗೂ, ಟೀಕೆಗಳಿಗೂ ಅರ್ಹವಾಗಿದ್ದವು. ಅದರೆ ಎಂದಿಗೂ ತನ್ನ ನೈತಿಕತೆಯನ್ನು, ಮೌಲ್ಯಗಳನ್ನು ಬಿಟ್ಟುಕೊಡಲಿಲ್ಲ ಮತ್ತು ಮುಖ್ಯವಾಗಿ ಭ್ರಷ್ಟವಾಗಲಿಲ್ಲ.

ಇಪ್ಪತ್ತೊಂದನೆಯ ಶತಮಾನದ ಗೊಂದಲ, ದ್ವಂದ್ವ, ಹಿಂಜರಿಕೆ

ಎಪ್ಪತ್ತು, ಎಂಬತ್ತರ ದಶಕದ ಸಾಮಾಜಿಕ ಇಂಜಿನಿಯರಿಂಗ್ ಕಾರಣದಿಂದ ಚಾಲ್ತಿಗೆ ಬಂದ ಹಿಂದುಳಿದ, ಅತಿ ಹಿಂದುಳಿದ ಜಾತಿಗಳ ರಾಜಕಾರಣವು ತೊಂಭತ್ತರ ದಶಕದಲ್ಲಿ ಹರಳುಗಟ್ಟುವ ಹೊತ್ತಿಗೆ ಪ್ರತಿಕ್ರಾಂತಿಯಂತೆ ಬ್ರಾಹ್ಮಣ-ಒಕ್ಕಲಿಗ-ಲಿಂಗಾಯತ ಯಜಮಾನ್ಯವು ಪ್ರಬಲಗೊಳ್ಳತೊಡಗಿತು. ಹಳೆ ಮೈಸೂರಿನ ಭಾಗದಲ್ಲಿ ಒಕ್ಕಲಿಗರು, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕಲ್ಬುರ್ಗಿ, ಬೀದರ್ ಭಾಗದಲ್ಲಿ ಲಿಂಗಾಯತರು ಹಾಗೂ ಮಧ್ಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣವು ತನ್ನ ನೆಲೆ ಕಂಡುಕೊಳ್ಳತೊಡಗಿತು. 2000-2013ರ ಅವಧಿಯಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪನವರು ಕರ್ನಾಟಕದ ರಾಜಕಾರಣದ ಕೇಂದ್ರವಾಗಿದ್ದರು.

ಇದನ್ನೂ ಓದಿರಿ: ಉರ್ದು ಈ ನೆಲದ ಭಾಷೆ ಎಂದು ಸಾರಿದ ಸುಪ್ರೀಮ್ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?

1990ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿ ಬಂಗಾರಪ್ಪನವರನ್ನು ಆಯ್ಕೆ ಮಾಡಿದ ಹೈಕಮಾಂಡ್‌ನ ನಿರ್ಧಾರವನ್ನು ವಿರೋಧಿಸಿದ ಲಿಂಗಾಯತರು ಕಾಂಗ್ರೆಸ್‌ನಿಂದ ವಿಮುಖರಾತೊಡಗಿದರು. ಈ ಪಲ್ಲಟಗಳ ಮಧ್ಯದಲ್ಲಿ ಯಡಿಯೂರಪ್ಪನವರು ತಮ್ಮ ಸಕ್ರಿಯ ಸಂಘಟನೆಯಿಂದ ಲಿಂಗಾಯತರನ್ನು ಬೆಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಕಳೆದುಕೊಂಡಿದ್ದನ್ನು ಬೆಜೆಪಿ ಗಳಿಸಿದ ಈ ಮತಕ್ಷೇತ್ರ ಇಂದಿಗೂ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ನಿರ್ಣಾಯಕವಾಗಿದೆ. 1871ರಲ್ಲಿ ಮೈಸೂರು ಜನಗಣತಿಯಲ್ಲಿ ಲಿಂಗಾಯತರನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಿದ್ದರು. 1801ರ ಜನಗಣತಿಯಲ್ಲಿ ಲಿಂಗಾಯತರಲ್ಲಿ 38 ಉಪಪಂಗಡಗಳಿದ್ದವು. ಈಗ 99 ಉಪಪಂಗಡಗಳಿವೆ. ಇಂದು ಲಿಂಗಾಯತರ ಒಳ ವರ್ಗೀಕರಣವು ಅನೇಕ ವಿವಾದಗಳನ್ನು ಹುಟ್ಟು ಹಾಕಿದೆ. ಇದನ್ನು ನಿಭಾಯಿಸಲು ಸಿದ್ದರಾಮಯ್ಯನವರಂತಹ ಈ ಕಾಲದ ರಾಜಕೀಯ ಚಿಂತಕ, ಅನುಭವಿ ರಾಜಕಾರಣಿಗೂ ಸಾಧ್ಯವಾಗಿಲ್ಲ. ಲಿಂಗಾಯತ ಧರ್ಮದ ಕುರಿತಾಗಿ ಅವರ ದ್ವಂದ್ವ, ಗೊಂದಲಗಳು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು ಸಹ ವಾಸ್ತವ.

1994-2003ರವರೆಗಿನ ತಮ್ಮ ರಾಜಕಾರಣದಲ್ಲಿ ಒಕ್ಕಲಿಗರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾದ ಎಚ್.ಡಿ. ದೇವೇಗೌಡರು ಹಳೆ ಮೈಸೂರಿನಲ್ಲಿ ಜೆಡಿಎಸ್‌ಗೆ ನೆಲೆ ಒದಗಿಸಿದರು. ಆದರೆ ಅವರ ಕುಟುಂಬ ರಾಜಕಾರಣ, ಸ್ವಾರ್ಥ, ದ್ವೇಷದ ಪರಿಪಾಲನೆ ಮತ್ತು ಭ್ರಷ್ಟಾಚಾರದಿಂದಾಗಿ ಇಲ್ಲಿನ ಹೊಸ ಬಗೆಯ ಪ್ರಾದೇಶಿಕ ಪಕ್ಷ ಪ್ರಯೋಗದ ಸಾಧ್ಯತೆಗೆ ಹಿನ್ನಡೆಯಾಗಿದೆ. ಇಲ್ಲಿ ಧ್ರುವೀಕರಣಗೊಂಡ ಒಕ್ಕಲಿಗ ಮತ್ತು ಲಿಂಗಾಯತ ರಾಜಕಾರಣದ ಜಿದ್ದಾಜಿದ್ದಿನಲ್ಲಿ ದೇವರಾಜ ಅರಸು ಮಾದರಿಯ ಅಹಿಂದ ರಾಜಕಾರಣದ ಪ್ರಯೋಗ ಮಾಡಿದ ಸಿದ್ದರಾಮಯ್ಯ ಆರಂಭದಲ್ಲಿ ಯಶಸ್ಸು ಕಂಡರೂ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಫಲರಾದರು.

yadiyurppa

ಕರ್ನಾಟಕದಲ್ಲಿ ಬಿಜೆಪಿಯ ಮತಧರ್ಮಾದಂತೆಯ ರಾಜಕಾರಣಕ್ಕೆ ನೆಲೆ ಒದಗಿಸಿದ ಯಡಿಯೂರಪ್ಪ 2008ರ ನಂತರ ಕೋಟಿಗಟ್ಟಲೆ ಹಣ ಸುರಿದು ಇತರ ಪಕ್ಷಗಳ ಶಾಸಕರನ್ನು ಖರೀದಿಸುವ ಆಪರೇಷನ್ ಕಮಲ ಎನ್ನುವ ಅನೈತಿಕ ಭ್ರಷ್ಟ ರಾಜಕಾರಣವನ್ನು ಪ್ರಾರಂಭಿಸಿದರು. ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಮತೀಯ ರಾಜಕಾರಣಕ್ಕೆ ವೇದಿಕೆಯಾಗಿದ್ದರೂ ಇಲ್ಲಿನ ಜಾತಿ ರಾಜಕಾರಣದ ಸಂಕೀರ್ಣತೆಯಿಂದಾಗಿ ಅದು ಉತ್ತರ ಭಾರತದಷ್ಟು ತೀವ್ರವಾಗಿ ಬೇರು ಬಿಡಲಿಲ್ಲ. ಆರ್‌ಎಸ್‌ಎಸ್ ಎಲ್ಲವನ್ನೂ ಬ್ರಾಹ್ಮಣವಾದದೊಳಗೆ ಜೀರ್ಣಿಸಿಕೊಳ್ಳುವ ತನ್ನ ಸಾಂಸ್ಕೃತಿಕ ರಾಜಕಾರಣದ ಮೂಲಕ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಒಡಿಸ್ಸಾ ಮುಂತಾದ ರಾಜ್ಯಗಳಲ್ಲಿ ಅತಿ ಹಿಂದುಳಿದ ಜಾತಿಗಳ ಸಮೀಕರಣದಲ್ಲಿ ಯಶಸ್ವಿಯಾದರೂ ಕರ್ನಾಟಕದಲ್ಲಿ ಈ ಸಾಂಸ್ಕೃತಿಕ ರಾಜಕಾರಣ ನಿರೀಕ್ಷಿತ ಫಲ ಕೊಡಲಿಲ್ಲ. ಪ್ರತಿ ಹಂತದಲ್ಲಿಯೂ ಕೋಮುವಾದವನ್ನು ನೆಚ್ಚಿಕೊಳ್ಳಬೇಕಾಯಿತು. 12ನೇ ಶತಮಾನದ ವಚನ ಚಳವಳಿಯಿಂದ ಶುರುವಾದ ಇಲ್ಲಿನ ಒಳಗೊಳ್ಳುವಿಕೆಯ ಸಾಂಸ್ಕೃತಿಕ ಅಸ್ಮಿತೆ ಎಂಬತ್ತರ ದಶಕದ ದಸಂಸ ಸಂಘಟನೆಯವರೆಗೂ ಚಲನಶೀಲತೆಯಲ್ಲಿತ್ತು ಎನ್ನುವ ಚಾರಿತ್ರಿಕ ಕಾರಣದಿಂದಾಗಿ ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಗಟ್ಟಿಯಾದ ನೆಲೆ ದೊರಕಲಿಲ್ಲ.

ಕಳೆದ ಇಪ್ಪತ್ತು ವರ್ಷಗಳ ಸಮಾಜೋ-ರಾಜಕೀಯವು ಬಲಿಷ್ಠ ಜಾತಿಗಳ ನಿಯಂತ್ರಣಕ್ಕೊಳ್ಳಪಟ್ಟಿದ್ದು, ಅರಸು ರೂಪಿಸಿದ ಹಿಂದುಳಿದ ಜಾತಿಗಳ ಸಾಮಾಜಿಕ ಇಂಜಿನಿಯರಿಂಗ್‌ಗೆ ಹಿನ್ನಡೆಯಾಗಿದ್ದರ ಕುರಿತು ಚಿಂತಕರು ವಿಶ್ಲೇಷಿಸಿದ್ದಾರೆ. ಮುಖ್ಯವಾಹಿನಿ ರಾಜಕಾರಣದ ಆಳ ಅಗಲದ ಕುರಿತು ಸಮರ್ಥವಾಗಿ ವಿಶ್ಲೇಷಿಸಿದ ರಾಜಕೀಯ ಚಿಂತಕರು ಪರ್ಯಾಯ ಪ್ರಾದೇಶಿಕ ರಾಜಕಾರಣದ ನೀಲನಕ್ಷೆ ರೂಪಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?

2015ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಒಳಗೊಂಡ ಜಾತಿಗಣತಿಗೆ ಕಾಂತರಾಜು ಸಮಿತಿ ನೇಮಿಸಿದ ಆಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ರಾಜಕಾರಣದ ಎರಡನೇ ಇನ್ನಿಂಗ್ಸ್‌ಗೆ ಮೈದಾನ ಸಿದ್ಧಪಡಿಸಿಕೊಂಡಿದ್ದರು. ಇದು ಈ ಕಾಲದ ಅಗತ್ಯವಾಗಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು 2018ರಲ್ಲಿ ತಮ್ಮ ವರದಿಯನ್ನು ಪೂರ್ಣಗೊಳಿಸಿದರು ಮತ್ತು ಸರ್ಕಾರಕ್ಕೆ ಸಲ್ಲಿಸುವ ಮೊದಲೆ ಚುನಾವಣೆ ನಡೆದು ಸರ್ಕಾರವೂ ಬದಲಾಯಿತು. ನಂತರದ 2018-2019ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತು 2019-2023ರ ಬಿಜೆಪಿ ಸರ್ಕಾರವು ಬ್ರಾಹ್ಮಣ-ಲಿಂಗಾಯತ-ಒಕ್ಕಲಿಗರ ವಿರೋಧಕ್ಕೆ ಹೆದರಿ ಕಾಂತರಾಜು ಆಯೋಗದ ವರದಿಯನ್ನು ಸ್ವೀಕರಿಸಲಿಲ್ಲ. ಅದನ್ನು ಶೈತ್ಯಾಗಾರದಲ್ಲಿ ಇಡಲಾಯಿತು. ಇದು ಬಲಿಷ್ಠ ಜಾತಿಗಳ ಪ್ರಾಬಲ್ಯವನ್ನು ಸಾಬೀತುಪಡಿಸುತ್ತಿದೆ. ಇಂತಹ ನಿರ್ಣಾಯಕ ಗಳಿಗೆಯಲ್ಲಿ ಸಿದ್ದರಾಮಯ್ಯನವರು ಅರಸು ರೀತಿಯಲ್ಲಿ ಅಹಿಂದ ರಾಜಕಾರಣವನ್ನು ಪ್ರಯೋಗಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ತಮ್ಮ ಮೇಲಿನ ಆಂತರಿಕ, ಬಾಹ್ಯ ಒತ್ತಡಗಳನ್ನು ಮೀರಿ ಅಹಿಂದ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಕಟಿಬದ್ಧರಾಗಬೇಕಿದ್ದ ಸಿದ್ದರಾಮಯ್ಯನವರು ಹಿಂಜರಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಅಗತ್ಯವಾಗಿರುವ ರಾಜಕೀಯ ಪ್ರಕ್ರಿಯೆಯನ್ನು ಸಹ ನೆನೆಗುದಿಯಲ್ಲಿಟ್ಟಿದ್ದಾರೆ.

ಇದೇ ಕಾಲಘಟ್ಟದಲ್ಲಿ ಸಾಹಿತಿ, ಚಿಂತಕರಾದ ದೇವನೂರ ಮಹಾದೇವ ರಾಜಕೀಯ ಚಿಂತಕರಾಗಿ ಪಕ್ಷ ರಾಜಕಾರಣದ ಕಡೆಗೆ ಒಲವು ತೋರಿದ್ದು ಕರ್ನಾಟಕದ ಪ್ರಗತಿಪರ ವಲಯದಲ್ಲಿನ ಮಹತ್ವದ ಬೆಳವಣಿಗೆಯಾಗಿದೆ. ರೈತ, ದಲಿತ ಸಂಘಟನೆಗಳ ಜೊತೆಗೂಡಿ ಸ್ಥಾಪಿಸಿದ `ಸರ್ವೋದಯ ಪಕ್ಷ’ವು ಆರಂಭದಲ್ಲಿ ಕುತೂಹಲ ಮೂಡಿಸಿದರೂ ನಂತರ ಕಾರ್ಯಕರ್ತರು, ಸಂಘಟನೆಯ ಕೊರತೆಯಿಂದಾಗಿ ಹೆಚ್ಚಿನದನ್ನು ಸಾಧಿಸಲಿಲ್ಲ. ಮುಂದೆ ಸ್ವರಾಜ್ ಇಂಡಿಯಾ, ಜನಾಂದೋಲನಗಳ ಮಹಾ ಮೈತ್ರಿ ಮೂಲಕ ಚುನಾವಣಾ ರಾಜಕಾರಣದಲ್ಲಿ ಪ್ರಯೋಗಗಳನ್ನು ಮಾಡಿದ ದೇಮ ಅವರು ಅಲ್ಲಿ ಯಶಸ್ವಿಯಾಗದಿದ್ದರೂ ಮುಖ್ಯವಾಹಿನಿ ಪಕ್ಷಗಳಿಂದ ಹೊರತಾದ ಹೊಸ ರಾಜಕೀಯ ಚಿಂತನೆಯನ್ನು ನಿರಂತರವಾಗಿ ಚಾಲನೆಯಲ್ಲಿಟ್ಟರು. ಅವರ `ಆರ್‌ಎಸ್‌ಎಸ್ ಆಳ ಅಗಲ’ ಪುಸ್ತಕ ಸಮಕಾಲೀನ ಕಾಲಘಟ್ಟದ ದಿಟ್ಟ ರಾಜಕೀಯ ಚಿಂತನೆಯಾಗಿದೆ. ಮಹಾದೇವ ಅವರು ಇಪ್ಪತ್ತೊಂದನೆ ಶತಮಾನದಲ್ಲಿ ಕರ್ನಾಟಕದ ಮಹತ್ವದ ರಾಜಕೀಯ ಚಿಂತಕರು.

ಉಪ ಸಂಹಾರ

ಆದರೆ ಕಳೆದ ಹತ್ತು ವರ್ಷಗಳಲ್ಲಿ ಹೊಸ ದೃಷ್ಟಿಕೋನದ ಚಿಂತನೆಗಳು ಮತ್ತು ಸಂಘಟನೆ ಕಂಡುಬರಲಿಲ್ಲ. ಸಂಘ ಪರಿವಾರದ ರಾಜಕಾರಣಕ್ಕೆ ವಿರುದ್ಧವಾಗಿ ಸ್ವತಂತ್ರ ರಾಜಕಾರಣ ಸಾಧ್ಯವಾಗದೆ ಕಾಂಗ್ರೆಸ್‌ಅನ್ನು ನೆಚ್ಚಿಕೊಳ್ಳುವಂತಹ ಚಿಂತನೆಗಳು ಮಾದರಿಯಾಗಿದ್ದು ಒಂದು ವಿಪರ್ಯಾಸ ಹಾಗೂ ಬೌದ್ಧಿಕತೆಯ ಸೋಲು ಎಂದು ಹೇಳಬೇಕು. ಇಂದು ಕರ್ನಾಟಕವನ್ನು ಒಳಗೊಂಡಂತೆ ಭಾರತದಲ್ಲಿ ಇಂತಹ ಅನೇಕ ವೈರುಧ್ಯಗಳಿವೆ. ಪ್ರಾದೇಶಿಕವಾಗಿ ಅಹಿಂದ ರಾಜಕಾರಣದ ಮೂರನೇ ಇನ್ನಿಂಗ್ಸ್ ಆರಂಭಿಸಲು ಇದು ಸಕಾಲವಾಗಿದೆ ಎಂದು ಅನೇಕ ಮನಸ್ಸುಗಳು ಹೇಳುತ್ತಿದ್ದರೂ ಅದನ್ನು ಕೇಳಿಸಿಕೊಳ್ಳುವ ಪಕ್ಷ ರಾಜಕಾರಣದ ಮತ್ತು ಬೌದ್ಧಿಕ ವಲಯದ ರಾಜಕೀಯ ಚಿಂತಕರ ಕೊರತೆಯಿದೆ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...