ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 1)

Date:

ಭಾರತದಲ್ಲಿ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವು, ‘ವಿಚಾರಗಳು ಮತ್ತು ದೃಷ್ಟಿಕೋನ, ಬೌದ್ಧಿಕ ವಲಯದ ಚಿಂತಕರು ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು’ ಈ ಮೂರು ಧಾರೆಗಳನ್ನು ಒಳಗೊಂಡಿದೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ ಈ ಚಿಂತನೆಯನ್ನು ಸಮಾಜ, ಸಾಮಾಜಿಕತೆ, ರಾಜಕಾರಣ ಮತ್ತು ಆರ್ಥಿಕತೆಯ ಆಯಾಮಗಳಲ್ಲಿ ವಿಶ್ಲೇಷಿಸಬೇಕಿದೆ. ಪ್ರೊ.ಬಿದ್ಯುತ್ ಚಕ್ರವರ್ತಿ ಮತ್ತು ರಾಜೇಂದ್ರಕುಮಾರ ಪಾಂಡೆ, “ಭಾರತದ ರಾಜಕೀಯ ಚಿಂತನೆಯು, ‘ದೇಶ’, ‘ರಾಷ್ಟ್ರೀಯತೆ’, ‘ರಾಷ್ಟ್ರೀಯ ಅಸ್ಮಿತೆ’ ಎನ್ನುವ ಮೂರು ವಿಚಾರಗಳನ್ನು ಒಳಗೊಂಡಿದೆ” ಎಂದು ಹೇಳುತ್ತಾರೆ. ಈ ವಿಚಾರಗಳ ಹಿನ್ನಲೆಯಲ್ಲಿ ಕಳೆದ ಐವತ್ತು ವರ್ಷಗಳ ಕರ್ನಾಟಕದಲ್ಲಿ ರೂಪುಗೊಂಡ ರಾಜಕೀಯ ಚಿಂತನೆಯನ್ನು ವಿಶ್ಲೇಷಿಸಿಬೇಕಾಗುತ್ತದೆ.

ನೆಹರೂ ನಿಧನದ ನಂತರ 1967ರಲ್ಲಿ ನಡೆದ 4ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 78 ಸ್ಥಾನಗಳನ್ನು ಕಳೆದುಕೊಂಡು 283 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. 1962ರಲ್ಲಿ ಶೇ.44.72ರಷ್ಟಿದ್ದ ಮತ ಪ್ರಮಾಣ 1967ರಲ್ಲಿ ಶೇ.40.78ಕ್ಕೆ ಕುಸಿಯಿತು. ಬಲಪಂಥೀಯ ಆರ್ಥಿಕ ಚಿಂತನೆಗಳನ್ನು ಬೆಂಬಲಿಸಿದ ರಾಜಾಜಿ, ಮಿನೂ ಮಸಾನಿ ನೇತೃತ್ವದ ಸ್ವತಂತ್ರ ಪಕ್ಷವು 44 ಸ್ಥಾನಗಳನ್ನು ಪಡೆದುಕೊಂಡು ಮುಖ್ಯ ವಿರೋಧ ಪಕ್ಷದ ಸ್ಥಾನ ಗಳಿಸಿತು. ಆರ್‌ಎಸ್‌ಎಸ್‌ನ ಭಾರತೀಯ ಜನಸಂಘವು 35 ಸ್ಥಾನಗಳನ್ನು ಪಡೆದುಕೊಂಡು ಎರಡನೇ ಅತಿ ದೊಡ್ಡ ವಿರೋಧ ಪಕ್ಷವಾಗಿ ಹೆಸರು ಪಡೆಯಿತು. ಹಿಂದಿನ ಬಾರಿಗಿಂತ 21 ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಸಿಪಿಐ ಪಕ್ಷವು 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಹಿಂದಿನ ಚುನಾವಣೆಗೆ ಹೋಲಿಸಿದರೆ 6 ಸ್ಥಾನಗಳನ್ನು ಕಳೆದುಕೊಂಡಿತ್ತು. ಲೋಹಿಯಾ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಸಂಯುಕ್ತ ಸೋಷಿಯಲಿಸ್ಟ್ ಪಕ್ಷವು(ಎಸ್‌ಎಸ್‌ಪಿ) 23 ಸ್ಥಾನಗಳನ್ನು, ಪ್ರಜಾ ಸೋಷಿಯಲಿಸ್ಟ್ ಪಕ್ಷವು(ಪಿಎಸ್‌ಪಿ) 13 ಸ್ಥಾನಗಳನ್ನು, ಮೂಲ ಪಕ್ಷದಿಂದ ವಿಭಜನೆಗೊಂಡು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಸಿಪಿಐ(ಎಂ) ಪಕ್ಷವು 19 ಸ್ಥಾನಗಳನ್ನು, ಪ್ರಾದೇಶಿಕ ಪಕ್ಷವಾಗಿ ಡಿಎಂಕೆ 25 ಸ್ಥಾನಗಳನ್ನು ಪಡೆದುಕೊಂಡಿತು.

ನೆಹರೂ ಮಾದರಿಯ ಸಮಾಜವಾದಿ-ಬಂಡವಾಳಶಾಹಿ ಮಿಶ್ರಣದ ಆರ್ಥಿಕತೆ ಮತ್ತು ಸೆಕ್ಯುಲರ್ ಸಿದ್ಧಾಂತದ ಚಿಂತನೆಯ ಅಂತ್ಯ ಎನ್ನುವ ಸಂದೇಶ ಸಾರಿದ ಈ ಫಲಿತಾಂಶವು, ಬಲಪಂಥೀಯ ಸ್ವತಂತ್ರ ಪಕ್ಷ ಮತ್ತು ತೀವ್ರವಾದಿ ಬಲಪಂಥೀಯ ಜನಸಂಘ ಪಕ್ಷಕ್ಕೆ ಮನ್ನಣೆ ಕೊಟ್ಟಿತು. ಲೋಹಿಯಾ ಅವರ ಸಮಾಜವಾದಿ ಚಿಂತನೆ ಮತ್ತು ಕಾಂಗ್ರೆಸ್ ವಿರೋಧಿ ತಂತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ದೊರಕಿತು. ಇದೇ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನಸಂಘ, ಎಸ್‌ಎಸ್‌ಪಿ, ಪಿಎಸ್‌ಪಿ, ಸಿಪಿಐ, ಸ್ವತಂತ್ರ ಪಕ್ಷಗಳು ಸೇರಿಕೊಂಡು ಚರಣಸಿಂಗ್ ನೇತೃತ್ವದಲ್ಲಿ ಸಂಯುಕ್ತ ವಿದಾಯಕ ದಳ ಸರ್ಕಾರ ರಚಿಸಿದರು (ಆದರೆ ಈ ಸರ್ಕಾರ 328 ದಿನಗಳ ನಂತರ ಆಂತರಿಕ ಕಚ್ಚಾಟದ ಫಲವಾಗಿ ಪತನಗೊಂಡಿತು).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಉರ್ದು ಈ ನೆಲದ ಭಾಷೆ ಎಂದು ಸಾರಿದ ಸುಪ್ರೀಮ್ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?

ಕೇವಲ ಕಾಂಗ್ರೆಸ್ ವಿರೋಧಿ ಧೋರಣೆಯ ಅತಿರೇಕದ ಫಲವಾಗಿ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸೈದ್ಧಾಂತಿಕವಾಗಿ ವಿರುದ್ಧ ಧ್ರುವದಲ್ಲಿದ್ದ ಜನಸಂಘ ಮತ್ತು ಸ್ವತಂತ್ರ ಪಕ್ಷಗಳ ಜೊತೆ ಕೈ ಜೋಡಿಸಿದರು. ಇವರ ರಾಜಕೀಯ- ಸಾಂಸ್ಕೃತಿಕ ಚಿಂತನೆಯ ಮಿತಿಗಳು ಮುಂದಿನ ದಿನಗಳ ಸೈದ್ಧಾಂತಿಕ ರಾಜಕೀಯದ ಪತನಕ್ಕೆ ಕಾರಣವಾಯಿತು. ಇಂತಹ ಅನೈತಿಕ, ಅಪವಿತ್ರ ಮೈತ್ರಿಗಾಗಿ ಲೋಹಿಯಾರಂತಹ ಪ್ರಮುಖ ಚಿಂತಕರು ಶ್ರಮಿಸಿದ್ದರು ಎನ್ನುವುದು ಇಲ್ಲಿನ ರಾಜಕೀಯ ಚಿಂತನೆಯ ಮಿತಿಗಳನ್ನು ತೋರಿಸುತ್ತದೆ. ಲೋಹಿಯಾರನ್ನು ಒಳಗೊಂಡಂತೆ ಸಮಾಜವಾದಿಗಳ ಈ ದ್ವಂದ್ವ, ಗೊಂದಲ ಮತ್ತು ಅಪಕ್ವ ರಾಜಕೀಯ ಚಿಂತನೆ, ನಿರ್ಧಾರಗಳ ಫಲವಾಗಿ ಆರ್‌ಎಸ್‌ಎಸ್‌ಗೆ ರಾಜಕೀಯವಾಗಿ(ಜನಸಂಘದ ಮೂಲಕ) ಮಾನ್ಯತೆ ದೊರಕಲು ಕಾರಣವಾಯಿತು. ಇದನ್ನು ಮುಂದುವರೆಸಿದ ಜೆ.ಪಿ.ಯವರು ಎಪ್ಪತ್ತರ ದಶಕದಲ್ಲಿ ಆರ್‌ಎಸ್‌ಎಸ್‌ನ ಬೆಳವಣಿಗೆಗೆ ನೀರೆರೆದು ಪೋಷಿಸಿದರು.

lohia
ರಾಮ್ ಮನೋಹರ್ ಲೋಹಿಯಾ

ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬಂದರೂ ಪಿಎಸ್‌ಪಿ 20, ಎಸ್‌ಎಸ್‌ಪಿ 6, ಸ್ವತಂತ್ರ ಪಕ್ಷ 16, ಜನಸಂಘ 4 ಸ್ಥಾನಗಳನ್ನು ಪಡೆದುಕೊಂಡವು. ಒಟ್ಟಾರೆಯಾಗಿ 1967ರ ಚುನಾವಣೆ ಒಂದು ಬಗೆಯ ಕಾಂಗ್ರೆಸ್ ವಿರೋಧಿ ಅಲೆಗೆ ಸಾಕ್ಷಿಯಾಯಿತು. ಇಂತಹ ಬದಲಾದ ಪ್ರತಿಕೂಲ ಸನ್ನಿವೇಶದಲ್ಲಿ ಇಂದಿರಾಗಾಂಧಿ ದೇಶದ ಪ್ರಧಾನಮಂತ್ರಿಯಾಗಿದ್ದರು. ಇವರ ಮುಂದೆ ರಾಜಕೀಯ, ಆರ್ಥಿಕ ಬಿಕ್ಕಟ್ಟುಗಳಿದ್ದವು. ಬಲಪಂಥೀಯ ಚಿಂತನೆಗಳಿಗೆ ಮಾನ್ಯತೆ ದೊರಕತೊಡಗಿದ್ದು ಆತಂಕದ ಬೆಳವಣಿಗೆಯಾಗಿತ್ತು. ಇದಕ್ಕೆ ತಾತ್ಕಾಲಿಕವಾಗಿಯಾದರೂ ತಡೆಯೊಡ್ಡುವುದಕ್ಕೆ ಪ್ರಗತಿಪರ ಚಿಂತನೆಗಳ ಸಮಾಜವಾದಿ ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಬದಲಿಗೆ ಬಲಪಂಥೀಯ ವಿರೋಧಿ ರಾಜಕಾರಣವು ಪಟ್ಟಭದ್ರ ಹಿತಾಸಕ್ತಿಯುಳ್ಳ ಕಾಂಗ್ರೆಸ್ ಪಕ್ಷದ, ಕುಟುಂಬ ರಾಜಕಾರಣದ ಮುಂದುವರಿಕೆಯಾದ ಇಂದಿರಾ ಗಾಂಧಿಯವರ ರಾಜಕೀಯ ಇಚ್ಛಾಶಕ್ತಿಯಾಗಿದ್ದು ಅಧ್ಯಯನ ಯೋಗ್ಯವಾಗಿದೆ.

ಎರಡು ವರ್ಷಗಳ ನಂತರ 1969ರಲ್ಲಿ ಕಾಂಗ್ರೆಸ್ ಪಕ್ಷದ ವಿಭಜನೆ ಹೊಸ ರಾಜಕೀಯ ಚಿಂತನೆ ಮತ್ತು ಬೆಳವಣಿಗೆಗೆ ಕಾರಣವಾಯಿತು. ಆಗಿನ ಹಳೆ ತಲೆಗಳಾಗಿದ್ದ ಮತ್ತು ಪ್ರಬಲ ಜಾತಿಗಳ ಮುಖಂಡರಾಗಿದ್ದ ನಿಜಲಿಂಗಪ್ಪ, ನೀಲಂ ಸಂಜೀವ ರೆಡ್ಡಿ, ಮೊರಾರ್ಜಿ ದೇಸಾಯಿ, ಎಸ್.ಕೆ.ಪಾಟೀಲ, ವೀರೇಂದ್ರ ಪಾಟೀಲ್, ಕಾಮರಾಜ್ ಮುಂತಾದವರು `ಮಧ್ಯ-ಬಲ’ (ಸೆಂಟರ್-ರೈಟ್) ರಾಜಕೀಯವನ್ನು ಪ್ರತಿಪಾದಿಸುತ್ತಿದ್ದರು. ಈ ಸಂಸ್ಥಾ ಕಾಂಗ್ರೆಸ್‌ನವರು ಇಂದಿರಾ ಗಾಂಧಿಯವರ `ಮಧ್ಯ-ಎಡ’ (ಸೆಂಟರ್-ಲೆಫ್ಟ್) ಸಿದ್ಧಾಂತದ ರಾಜಕಾರಣವನ್ನು ಒಪ್ಪಲು ಸಿದ್ಧರಿರಲಿಲ್ಲ. ಬಿಹಾರ್‌ನಲ್ಲಿ ಭೋಲಾ ಪಾಸ್ವಾನ್ ಶಾಸ್ತ್ರಿ ನೇತೃತ್ವದಲ್ಲಿ ಮತ್ತು ಕರ್ನಾಟಕದಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಸಂಸ್ಥಾ ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರು. ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ವಿರೋಧಿಗಳನ್ನು ಹಣಿಯಲು ಮುಂದಾದ ಇಂದಿರಾ ಗಾಂಧಿ ತಮ್ಮ ಅಧಿಕಾರ ಬಲವರ್ಧನೆ ಮತ್ತು ಬಡವರ ಪರವಾದ ನೀತಿಗಳು ಎರಡನ್ನೂ ಏಕಕಾಲಕ್ಕೆ ಪೊರೆಯಬಲ್ಲ ಕಾರ್ಯತಂತ್ರವನ್ನು ರೂಪಿಸುತ್ತಿದ್ದರು. ಆಗ ಇವರಿಗೆ ವರವಾಗಿ ಒದಗಿಬಂದವರು ‘ಯಂಗ್‌ಟರ್ಕ್’ ಎನ್ನುವ ಚಿಂತಕರ ಗುಂಪು.

ಆಗ ಕಾಂಗ್ರೆಸ್ ಪಕ್ಷದೊಳಗೆ ಸಮಾಜವಾದಿ ರಾಜಕೀಯ ಚಿಂತನೆಯನ್ನು ರೂಪಿಸುತ್ತಿದ್ದ ಚಂದ್ರಶೇಖರ್, ಮೋಹನ್ ಧಾರಿಯಾ, ಕೃಷ್ಣಕಾಂತ್ ಮುಂತಾದ ಹೊಸ ತಲೆಮಾರಿನ ರಾಜಕಾರಣಿಗಳನ್ನು `ಜಿಂಜರ್ ಗುಂಪುಗಳು’ ಎಂದು ಕರೆಯುತ್ತಿದ್ದರು. ಈ ಜಿಂಜರ್ ಗುಂಪು ಮುಂದೆ ಯಂಗ್‌ಟರ್ಕ್ ಎಂದು ಖ್ಯಾತಿ ಗಳಿಸಿತು ಹಾಗೂ ಭವಿಷ್ಯ ಭಾರತದ ರಾಜಕೀಯ ಚಿಂತನೆಯಲ್ಲಿ ಹೊಸ ಪಲ್ಲಟಗಳಿಗೆ ಕಾರಣವಾಯಿತು. ನೆಹರೂ ನಂತರದ ವೃತ್ತಿಪರ ರಾಜಕಾರಣಿಗಳಾಗಿ ಆಧುನಿಕ ರಾಜಕೀಯ ಚಿಂತನೆಗೆ ಮುನ್ನುಡಿ ಬರೆದ ಈ ಯಂಗ್‌ಟರ್ಕ್ ರಾಜಕೀಯ ಪಕ್ಷದೊಳಗಿನ ಪಟ್ಟಭದ್ರರಿಗೆ ಸವಾಲು ಹಾಕಿದರು. ಇದು ಮುಂದೆ ಕರ್ನಾಟಕದಲ್ಲಿ ದೇವರಾಜ ಅರಸು ಅವರ ಹಿಂದುಳಿದ ವರ್ಗಗಳ ರಾಜಕಾರಣಕ್ಕೂ ಪ್ರೇರಣೆಯಾಗಿದ್ದೂ ಕುತೂಹಲಕರ. `ದೇಶದ ಆಧುನಿಕೀಕರಣ, ಸೆಕ್ಯುಲರೀಕರಣ ಮತ್ತು ಪ್ರಜಾಪ್ರಭುತ್ವೀಕರಣ’ ಎನ್ನುವ ಧ್ಯೇಯ ಹೊಂದಿದ್ದ ಈ ಯಂಗಟಕ್‌ನ ಸಿದ್ಧಾಂತಗಳು ನೇರವಾದ ಬದಲಾವಣೆಗೆ ಕಾರಣವಾಗದೆ ಹೋದರೂ ಮುಂದಿನ ಐವತ್ತು ವರ್ಷಗಳ ರಾಜಕೀಯ ಚಿಂತನೆಗಳು ಇದರ ಆಶಯಗಳ ಸುತ್ತಲೇ ಚರ್ಚೆಯಾಗಿದ್ದು ಮಾತ್ರ ಸತ್ಯ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 1)

ಈ ಯಂಗ್‌ಟರ್ಕ್‌ನ ರಾಜಕೀಯ ಚಿಂತನೆಯ ಫಲವಾಗಿ 19 ಜುಲೈ 1969ರ ಮಧ್ಯರಾತ್ರಿ ಇಂದಿರಾ ಗಾಂಧಿಯವರು 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು. ಈ ರಾಜಕೀಯ ನಡೆ ಸಹಜವಾಗಿ ಆಗಿನ ಬಲಪಂಥೀಯ ರಾಜಕಾರಣಿಗಳಿಗೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ದೊಡ್ಡ ಹಿನ್ನಡೆಯಾಗಿತ್ತು. ಬಹುತೇಕ ರಾಜಕೀಯ ಚಿಂತಕರು `ಇಂದಿರಾ ಗಾಂಧಿಯವರ ಈ ನಿರ್ಧಾರದ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳು 1991ರ ಜಾಗತೀಕರಣ, ಮುಕ್ತ ಮಾರುಕಟ್ಟೆಯ ನಂತರದ ಬೆಳವಣಿಗೆಗಳಿಗಿಂತಲೂ ಹೆಚ್ಚಿನ ಪರಿಣಾಮ ಬೀರಿತ್ತು’ ಎಂದು ಅಭಿಪ್ರಾಯಪಡುತ್ತಾರೆ. ನಂತರ ರಾಜಮನೆತನಗಳಿಗೆ ಕೊಡುತ್ತಿದ್ದ ರಾಜಧನ ಪದ್ಧತಿಯನ್ನು ರದ್ದುಗೊಳಿಸಿದರು. ಈ ಎರಡು ಮಹತ್ವದ ರಾಜಕೀಯ ನಿರ್ಧಾರದ ಮೂಲಕ ಇಂದಿರಾ ಗಾಂಧಿಯವರು ಸಮತಾವಾದದ ರಾಜಕಾರಣಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನುವಂತಹ ವಿಶ್ಲೇಷಣೆಗಳು ಶುರುವಾಯಿತು. ಆದರೆ 1973ರ ನಂತರದ ಬೆಳವಣಿಗೆಗಳು, ಇಂದಿರಾ ಗಾಂಧಿಯವರ ಏಕವ್ಯಕ್ತಿ ಕೇಂದ್ರಿತ ದುಡುಕು ನಿರ್ಧಾರಗಳು ಈ ಆಶಯಗಳಿಗೆ ಪ್ರತಿಕೂಲವಾಗಿದ್ದು ಮಾತ್ರ ಸ್ವತಂತ್ರ ಭಾರತದ ದೊಡ್ಡ ವಿಪರ್ಯಾಸ.

ಐವತ್ತು ವರ್ಷಗಳ ಹಿಂದೆ…

1934ರಿಂದ ಶುರುವಾದ ಲೋಹಿಯಾ, ಜೆ.ಪಿ., ಕೃಪಲಾನಿ, ನರೇಂದ್ರದೇವ, ಯೂಸುಫ್ ಮೆಹರಲಿ, ಅಶೋಕ ಮೆಹ್ತಾ ಮುಂತಾದವರ ನೇತೃತ್ವದ ಸಮಾಜವಾದಿ ಚಳವಳಿಗೆ ಪ್ರಖರವಾದ ವೈಚಾರಿಕ ಸಿದ್ಧಾಂತದ ಅಂತಃಸತ್ವವಿತ್ತು. ಆದರೆ ಪಕ್ಷ ರಾಜಕಾರಣಕ್ಕೆ ಅಗತ್ಯವಾದ ಸಂಘಟನೆ, ಗತಿ ಮತ್ತು ದಿಕ್ಕು, ಸ್ಪಷ್ಟತೆ ಹಾಗೂ ತಂತ್ರಗಾರಿಕೆಯ ಕೊರತೆಯಿಂದಾಗಿ ಮಹತ್ತರವಾದ ಬದಲಾವಣೆ ತರಲು ವಿಫಲರಾದರು. ಅರವತ್ತರ ದಶಕದ ನಂತರ ಕಾಂಗ್ರೆಸ್ ವಿರೋಧಿ ಧೋರಣೆಯ ಒಂದಂಶ ಕಾರ್ಯಕ್ರಮದಿಂದ ಆರ್‌ಎಸ್‌ಎಸ್ ಮತ್ತು ಅದರ ಜನಸಂಘದ ಜೊತೆಗೂ ಕೈ ಜೋಡಿಸಿದ ಇಲ್ಲಿನ ಸಮಾಜವಾದಿಗಳು ಭಾರತದ ಸೈದ್ಧಾಂತಿಕ ರಾಜಕಾರಣದ ಅವನತಿಗೆ ಮುನ್ನುಡಿ ಬರೆದರು; ಮುಂದೆ ಸಂಘ ಪರಿವಾರದ ಬೆಳವಣಿಗೆಗೂ ಕಾರಣರಾದರು. 1951ರಲ್ಲಿ ಕಾಗೋಡು ಚಳವಳಿಯ ಮೂಲಕ ಈ ಸಮಾಜವಾದಿ ಚಳವಳಿ ಜೊತೆಗೆ ನಂಟು ಬೆಳೆಸಿಕೊಂಡ ಕರ್ನಾಟಕದ ಪ್ರಗತಿಪರ ರಾಜಕಾರಣದ ಭಾಗವಾಗಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್. ಪಟೇಲ್ ನೇರವಾಗಿ ಎಸ್‌ಎಸ್‌ಪಿ ಪಕ್ಷದ ಜೊತೆಗೆ ಗುರುತಿಸಿಕೊಂಡರು. ಎಸ್.ಎಂ. ಕೃಷ್ಣ ಹಾಗೂ ಬಂಗಾರಪ್ಪ ಪಿಎಸ್‌ಪಿ ಮತ್ತು ಎಸ್‌ಎಸ್‌ಪಿ ಮೂಲಕ ರಾಜಕೀಯ ಆರಂಭಿಸಿದರೂ ಶೀಘ್ರದಲ್ಲಿ ಕಾಂಗ್ರೆಸ್ ಸೇರಿಕೊಂಡರು. ಆದರೆ ದೇವರಾಜ ಅರಸು ಅವರು ಯಾವುದೇ ಸಮಾಜವಾದಿ ಹಿನ್ನಲೆ ಇಲ್ಲದೆ ನೇರವಾಗಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಅರ್ರಗೇಟ್ರಂ ಶುರು ಮಾಡಿದರೂ ಸಮಾಜವಾದಿಗಳೇ ನಾಚುವಂತಹ ಪ್ರಗತಿಪರ ರಾಜಕಾರಣದ ಸಾರಥ್ಯ ವಹಿಸಿದ್ದರು. ಅರಸು ಅವರ ಎಪ್ಪತ್ತರ ದಶಕದ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಸಾಮಾಜಿಕ ಇಂಜಿನಿಯರಿಂಗ್ ಆ ಕಾಲಘಟ್ಟದಲ್ಲಿ ಮಹತ್ವದ ವಿದ್ಯಮಾನ ಎಂದು ರಾಜಕೀಯ ಚಿಂತಕರು ಗುರುತಿಸುತ್ತಾರೆ.

Shantaveri
ಶಾಂತವೇರಿ ಗೋಪಾಲಗೌಡರು

ಎಪ್ಪತ್ತರ ದಶಕವನ್ನು ಶಾಂತವೇರಿ ಗೋಪಾಲಗೌಡ ಮತ್ತು ದೇವರಾಜ ಅರಸು ಅವರ ಪ್ರಗತಿಪರ ರಾಜಕಾರಣದ ಕಾಲಘಟ್ಟ ಎಂದು ನಿಸ್ಸಂಶಯವಾಗಿ ಕರೆಯಬಹುದು. ಶಿವಮೊಗ್ಗದ ಅರಗ ಎನ್ನುವ ಹಳ್ಳಿಯಲ್ಲಿ ಜನಿಸಿದ ಗೋಪಾಲಗೌಡರು ಕರ್ನಾಟಕದ ಪಕ್ಷ ರಾಜಕಾರಣ ನೆಲೆಯಿಂದ ಮೂಡಿದ ಬಹು ಮುಖ್ಯ ರಾಜಕೀಯ ಚಿಂತಕರು. ಜಾರ್ಜ್ ಕ್ರೇಡಿಯ `ಸೊಷಿಯಲಿಸಂ ಇನ್ ಟೆಸ್ಟ್‌ಟ್ಯೂಬ್’ ಮತ್ತು ಜೆ.ಪಿ.ಯವರ `ವೈ ಸೋಷಿಯಲಿಸಂ’ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅದೇ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯದ ಅಭಿಮಾನಿಯಾಗಿದ್ದರು. ಆ ಕಾಲದ ಗೋಪಾಲಗೌಡರ ಸ್ನೇಹದ ಕಾರಣದಿಂದ ನವ್ಯ ಸಾಹಿತ್ಯಕ್ಕೆ ಸ್ವಲ್ಪ ಮಟ್ಟಿನ ಸಮಾಜವಾದಿ ಚಿಂತನೆಗಳನ್ನು ಒಳಗೊಳ್ಳಲು ಸಾಧ್ಯವಾಗಿದ್ದು, ನವ್ಯೋತ್ತರ ಕಾಲದ ಸಮಾಜೋ-ರಾಜಕೀಯ ಸಾಹಿತ್ಯ ಚಳವಳಿಗೂ ಪ್ರೇರಣೆಯಾಗಿದ್ದು ಸಹ ಸತ್ಯ. ಎಪ್ಪತ್ತರ ದಶಕದ ಬರಹಗಾರರ ಒಕ್ಕೂಟ, ಜಾತಿ ವಿನಾಶ ಸಮಾವೇಶದಂತಹ ಚಳವಳಿಗಳಲ್ಲಿ ಕುವೆಂಪುರವರ ವೈಚಾರಿಕತೆ, ಶಾಂತವೇರಿಯಂತಹ ಸಮಾಜವಾದಿಗಳ ಆದರ್ಶ ರಾಜಕಾರಣದ ಪ್ರಭಾವವಿತ್ತು. ಇಲ್ಲಿನ ಸಾಹಿತಿ, ವಿಮರ್ಶಕರ ಪಾಲಿಗೆ ಗೋಪಾಲಗೌಡರು ವೃತ್ತಿಪರ ರಾಜಕಾರಣದ ನೆಲೆಯ ಬಹು ಮುಖ್ಯ ರಾಜಕೀಯ ಚಿಂತಕರಾಗಿದ್ದರು. ಆದರೆ ಲೇಖಕ ತೇಜಸ್ವಿಯವರು, ‘ಗೋಪಾಲಗೌಡರಿಗೆ ಅಡಿಗ, ಕುಮಾರವ್ಯಾಸರ ಕಾವ್ಯ, ಸಾಹಿತ್ಯದ ಅತಿಯಾದ ಆಸಕ್ತಿ ಬೆಳೆಸಿದ ಇಲ್ಲಿನ ಸಾಹಿತಿಗಳು ಅವರಲ್ಲಿ ರಾಜಕೀಯ ಪೆಡಸುತನವನ್ನು ಕುಂಠಿತಗೊಳಿಸಿದರು’ ಎಂದು ಹೇಳಿದ್ದು ಅರ್ಥಗರ್ಭಿತವಾಗಿದೆ.

ಗೋಪಾಲಗೌಡರ ರಾಜಕೀಯವು ಎಪ್ಪತ್ತರ ದಶಕದ ರಾಜಕೀಯ ಚಿಂತನೆಯನ್ನು ಸಿದ್ಧಾಂತ ಮತ್ತು ಪ್ರಾಯೋಗಿಕ ಎರಡೂ ನೆಲೆಯಲ್ಲಿ ಪೊರೆದದ್ದು ಎಷ್ಟು ಸತ್ಯವೋ ಹಾಗೆಯೇ ಎಂಬತ್ತರ ದಶಕದ ರಾಜಕಾರಣದ ನಂತರದಲ್ಲಿ ಪಕ್ಷವಾಗಿ ಸಂಘಟಿತವಾಗುವಲ್ಲಿನ ಇದರ ವೈಫಲ್ಯಗಳು ಸಹ ಸ್ಪಷ್ಟವಾಗಿ ಗೋಚರಿಸಿದವು. ಶಾಂತವೇರಿಯವರ ರಾಜಕಾರಣದಿಂದ ಪ್ರಭಾವಿತರಾಗಿದ್ದ ಇಲ್ಲಿನ ರಾಜಕೀಯ ಚಿಂತಕರು ಅವರ ಮಾದರಿಯ ಪಕ್ಷ ಸಂಘಟನೆಯಿಲ್ಲದ, ವ್ಯಕ್ತಿ, ಸಿದ್ಧಾಂತ ಕೇಂದ್ರಿತ ರಾಜಕಾರಣದಿಂದ ಹೊರಬಂದು ತಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವಲ್ಲಿ ವಿಫಲರಾದರು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 2)

ಎಂಬತ್ತರ ದಶಕದಿಂದ ಪ್ರತಿಯೊಂದು ಬೆಳವಣಿಗೆಯನ್ನು ತುರ್ತುಪರಿಸ್ಥಿತಿ ವಿರೋಧಿ ಕಥನ ಮತ್ತು ಲೋಹಿಯಾ, ಗೋಪಾಲಗೌಡರ ಆದರ್ಶ ರಾಜಕಾರಣದ ಜೊತೆಗೆ ಹೋಲಿಸಿ ವಿಮರ್ಶಿಸಿದ ಚಿಂತಕರು ಆ ಮೂಲಕ ರಾಜಕೀಯ ಚಿಂತನೆಗೆ ಸ್ವತಃ ಬೇಲಿ ನಿರ್ಮಿಸಿಕೊಂಡರು. ಸಾಹಿತ್ಯದ ಹಿನ್ನಲೆಯಿಂದ ಬಂದ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಚಂಪಾ ಮುಂತಾದವರಿಂದ ಮೊದಲುಗೊಂಡು ವೃತ್ತಿಪರ ಪತ್ರಕರ್ತರು, ರಾಜಕೀಯ ವಿಶ್ಲೇಷಕರ ಚಿಂತನೆಯು ಗೋಪಾಲಗೌಡ ಮಾದರಿ ರಾಜಕಾರಣದ ಮುಗ್ಧತೆ ಮತ್ತು ಸಾಮುದಾಯಿಕವಾಗಿ ಪಕ್ಷ ಸಂಘಟನೆಯಲ್ಲಿನ ವೈಫಲ್ಯವನ್ನು ಗ್ರಹಿಸಲಿಲ್ಲ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನು ಅವನತಿಯತ್ತ ತಳ್ಳುತ್ತಿದೆ ಎಂದು ಚಿಂತಿಸಿದ ಇಲ್ಲಿನ ಬೌದ್ಧಿಕ ವಲಯವು ಅದರ ಹಿಂದುಳಿದ ವರ್ಗಗಳ ಸಾಮಾಜಿಕ ಇಂಜಿನಿಯರಿಂಗ್ ಅನ್ನು ಟೀಕಿಸಿದರು. ಜನತಾ ಪಕ್ಷದ ಮುಂದುವರಿದ, ಫ್ಯೂಡಲ್ ಜಾತಿಗಳ ರಾಜಕಾರಣವನ್ನು ಬೆಂಬಲಿಸಿದರು. ಅದರ ಆಳ ಅಗಲವನ್ನು ಗ್ರಹಿಸುವಲ್ಲಿ ವಿಫಲರಾದರು. ಎಂಬತ್ತರ ದಶಕದ ಜನತಾ ಮತ್ತು ಜನತಾದಳ ಅಧಿಕಾರ ಕಾಲದಲ್ಲಿ ಬಿಜೆಪಿಯ ಬೆಳವಣಿಗೆಯೂ ಏರುಮುಖದಲ್ಲಿದ್ದ ಕಾರಣಗಳನ್ನು ಅರಿಯುವಲ್ಲಿ ಸೋತರು. ಈ ದಶಕದಲ್ಲಿ ಜನತಾ-ಜನತಾದಳದ ಜೊತೆಗೆ ಗುರುತಿಸಿಕೊಂಡಿದ್ದ ಲಿಂಗಾಯತರು ಇಪ್ಪತ್ತೊಂದನೆಯ ಶತಮಾನದ ಹೊತ್ತಿಗೆ ಬಿಜೆಪಿ ಬೆಂಬಲಿಗರಾಗಿದ್ದರ ಹಿಂದಿನ ರಾಜಕಾರಣದ ವಿಶ್ಲೇಷಣೆ ಸಹ ಸಾಧ್ಯವಾಗಲಿಲ್ಲ. ಆದರೆ ವಡ್ಡರ್ಸೆ ರಘುರಾಮ ಶೆಟ್ಟರಂತಹ ಪತ್ರಕರ್ತರು ಇದರ ಒಳನೋಟವನ್ನು ಗ್ರಹಿಸಿದ್ದರು. ಇದೇ ಮಾದರಿಯಲ್ಲಿ ವಿ.ಟಿ.ರಾಜಶೇಖರ್ ಅವರ `ದಲಿತ ವಾಯ್ಸ್’ ಪತ್ರಿಕೆಯ ಬ್ರಾಹ್ಮಣಶಾಹಿ ವಿರೋಧಿ ತೀಕ್ಷ್ಣ ಬರಹಗಳು ಸಹ ಸಿದ್ಧ ಮಾದರಿಯ ರಾಜಕೀಯ ಚಿಂತನೆಗಳನ್ನು ತಿರಸ್ಕರಿಸಿದ್ದವು.

ಗೋಪಾಲಗೌಡರ `ಯಾರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರಿಗೆ ಭೂಮಿಯ ಅಗತ್ಯವಿಲ್ಲ’ ಎನ್ನುವ ಸ್ಲೋಗನ್ ನಂತರ ದೇವರಾಜ ಅರಸು ಅವರ ಕ್ರಾಂತಿಕಾರಿ ಭೂ ಸುಧಾರಣೆ ನೀತಿ ಮತ್ತು ಗೇಣಿ ರದ್ದತಿಯ ಮೂಲಕ ಪ್ರಾಯೋಗಿಕವಾಗಿ ಜಾರಿಗೊಂಡಿತು. ಇಲ್ಲಿ ಅರಸು ಅವರ ರಾಜಕೀಯ ಇಚ್ಛಾಶಕ್ತಿ ಮತ್ತು ದೃಢ ಮನೋಬಲದ ಕಾರಣ ಉಳುವವನೇ ಹೊಲದೊಡೆಯದಂತಹ ಪದ್ಧತಿ ಜಾರಿಗೊಂಡಿತು. ನಂತರ ಸಮಾಜವಾದಿ ಹಿನ್ನಲೆಯ ಜೆ.ಎಚ್.ಪಟೇಲ್, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೃಷಿ ಮತ್ತು ಭೂ ಸುಧಾರಣೆಯಂತಹ ವಲಯಗಳಲ್ಲಿ ಯಾವುದೇ ಬದಲಾವಣೆ ತರುವಲ್ಲಿ ವಿಫಲರಾದರು ಎನ್ನುವ ಸತ್ಯ ಅರಸು ರಾಜಕಾರಣದ ಮಹತ್ವವನ್ನು ಸಾರುತ್ತದೆ.

ಬಿಹಾರದಲ್ಲಿ ಕರ್ಪೂರಿ ಠಾಕೂರ್‌ರಂತೆ ಕರ್ನಾಟಕದಲ್ಲಿ ಅರಸು ಅವರು ಹಿಂದುಳಿದ, ಅತಿ ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಿದ್ದು ಚಾರಿತ್ರಿಕವಾಗಿದೆ. ಅವರ ಸಾಮಾಜಿಕ ಇಂಜಿನಿಯರಿಂಗ್, ರಾಜಕೀಯ ಚಿಂತನೆ ಕುರಿತು ಆ ಕಾಲಘಟ್ಟದಲ್ಲಿ ಯಾಕೆ ಚರ್ಚೆ ಆಗಲಿಲ್ಲ ಎನ್ನುವುದು ಇಂದಿಗೂ ಚರ್ಚಾರ್ಹವಾಗಿದೆ. ಆ ಕಾಲದ ರಾಜಕೀಯ ಚಿಂತಕರ ಕಾಂಗ್ರೆಸ್ ವಿರೋಧಿ ನಿಲುವು ಒಂದು ಕಾರಣವಾಗಿದ್ದರೆ ಬಹುತೇಕ ಮಾಧ್ಯಮಗಳು, ನಿಯತಕಾಲಿಕಗಳು ಮುಂದುವರಿದ ಜಾತಿಗಳ ಹಿಡಿತದಲ್ಲಿದ್ದವು ಎನ್ನುವುದು ಮತ್ತೊಂದು ಕಾರಣ. ಕರ್ನಾಟಕದ ಬಹುತೇಕ ಚಿಂತಕರು ಮುಂದುವರಿದ, ಅನುಕೂಲವಂತ ಜಾತಿಗಳ ಹಿನ್ನೆಲೆಯಿಂದ ಬಂದಿರುವ ಕಾರಣಕ್ಕೂ ಅರಸು ಅವರ ಹಿಂದುಳಿದ ವರ್ಗಗಳ ರಾಜಕಾರಣದ ಕುರಿತು, ಅವರು ತೆಗೆದುಕೊಂಡ ಸವಾಲಿನ ಗಹನತೆ ಕುರಿತು ಅಸಡ್ಡೆ ಬೆಳೆಸಿಕೊಂಡಿದ್ದರು. ಭ್ರಷ್ಟಾಚಾರ ವಿರೋಧಿ ನಿಲುವನ್ನು ನಿಷ್ಠೆಯಿಂದ ಬೋಧಿಸಿದ ಇಲ್ಲಿನ ರಾಜಕೀಯ ಚಿಂತಕರು, ಪತ್ರಕರ್ತರು ಅದನ್ನೇ ನೆಪ ಮಾಡಿಕೊಂಡು ದೇವರಾಜ ಅರಸರ ಹಿಂದುಳಿದ ವರ್ಗಗಳ ಮತ್ತು ಬಡವರ ಪರವಾದ ರಾಜಕಾರಣದ ಸಾಧನೆಗಳಿಗೆ ಕುರುಡುಗಣ್ಣಾಗಿ ಅವರ ಕಾಲದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸಿದರು. ಬಲಿಷ್ಠ ಜಾತಿಗಳ ವಿರುದ್ಧ ಅರಸು ನಡೆಸಿದ ಪ್ರಯೋಗವು ಆರಂಭಿಕ ಕಲಿಕೆಯ ಹಂತದಲ್ಲಿತ್ತು, ಅಲ್ಲಿನ ಮಿತಿಗಳು ಮುಂದಿನ ಹಂತದ ಬೆಳವಣಿಗೆಗೆ ಪಾಠವಾಗುವಂತಿದ್ದವು. ಈ ಸಂಕೀರ್ಣತೆಯನ್ನು ಅರಿಯುವಲ್ಲಿ, ಸ್ಪಷ್ಟವಾದ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಇಲ್ಲಿನ ಬಹುಪಾಲು ಚಿಂತಕರು ವಿಫಲರಾಗಿದ್ದರು. ಲೋಹಿಯಾವಾದದ ಅಕರ್ಷಣೆಯಿಂದಾಗಿ ಇಲ್ಲಿನ ಅನೇಕ ಚಿಂತಕರ ರಾಜಕೀಯ ಪ್ರಜ್ಞೆ ತೊಂಬತ್ತರ ದಶಕದವರೆಗೂ ಕೇವಲ ಕಾಂಗ್ರೆಸ್ ವಿರೋಧಿ ಮಟ್ಟಕ್ಕೆ ಸೀಮಿತಗೊಂಡಿತ್ತು. ಅದರಾಚೆಗೆ ಎಂಬತ್ತರ ದಶಕದಲ್ಲಿ ದೇಶಾದ್ಯಂತ ವ್ಯಾಪಿಸಿಕೊಳ್ಳುತ್ತಿದ್ದ ಸಂಘ ಪರಿವಾರದ ಮತಧರ್ಮಾಂಧತೆಗೆ ಕೇವಲ ಸೈದ್ಧಾಂತಿಕ ಪ್ರತಿರೋಧ ಕಟ್ಟುವಲ್ಲಿ ಶ್ರಮ ವಹಿಸಿದ ಬೌದ್ಧಿಕ ವಲಯಕ್ಕೆ ಅದಕ್ಕೆ ರಾಜಕೀಯ ಪರಿಹಾರದ ಕುರಿತು ಯಾವುದೇ ತಿಳಿವಳಿಕೆ, ಪೂರ್ವಸಿದ್ಧತೆ ಇರಲಿಲ್ಲ. ಕಾರ್ಯತಂತ್ರದ, ಆಳವಾದ ಅಧ್ಯಯನದ ಕೊರತೆಯಿತ್ತು. ತೊಂಬತ್ತರ ದಶಕದ ನಂತರ ಜಾಗತೀಕರಣ, ಕೋಮುವಾದದ ಎರಡು ದಾಳಿಗಳ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ಚಿಂತಕರ ಮಿತಿಗಳು ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು.

Narayan Article Arasu
ಡಿ.ದೇವರಾಜ ಅರಸು

ಅರಸು ಕಾಲದ ಸುಧಾರಣೆಗಳನ್ನು ಅದರ ಆರಂಭದ ಮೆಟ್ಟಲಿನಿಂದ ಮುಂದಿನ ಹಂತಕ್ಕೆ ವಿಸ್ತರಿಸುವಲ್ಲಿ ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳು ವಿಫಲಗೊಂಡಿವೆ. ಶ್ರೇಣೀಕೃತ ಜಾತಿ ಪದ್ಧತಿಯ ಇಲ್ಲಿನ ಸಮಾಜದಲ್ಲಿ ಕೆಳಗಿನ ಶ್ರೇಣಿಯಲ್ಲಿರುವ ಜಾತಿಗಳು ಸದಾ ಶೋಷಣೆಗೆ ಒಳಗಾಗುವ ವಿದ್ಯಮಾನಕ್ಕೆ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯದ ಕಾರ್ಯ ಯೋಜನೆಯಿಂದ ಮಾತ್ರ ಪರಿಹಾರ ದೊರಕುವುದಿಲ್ಲ. ಅದು ಸಬಲೀಕರಣ ರಾಜಕಾರಣಕ್ಕೆ ಜಿಗಿತ ಪಡೆದುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಇದು ಸಾಧ್ಯವಾಗಲಿಲ್ಲ. ಇಲ್ಲಿ ವ್ಯಕ್ತಿಗಳು ಬೆಳೆದರು. ಸಮುದಾಯ ಹಿಂದುಳಿಯಿತು. ಇದರಿಂದ ಹೊರಬಂದು ಹೊಸ ಮಾದರಿಯ ರಾಜಕಾರಣಕ್ಕೆ ಒತ್ತಾಸೆಯಾಗಬೇಕಿದ್ದ ಇಲ್ಲಿನ ಬೌದ್ಧಿಕ ವಲಯವೂ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಷ್ಕ್ರಿಯಯಗೊಂಡಿದ್ದರು. ತಮಿಳುನಾಡು ಮತ್ತು ಕೇರಳದಲ್ಲಿ ರಾಜಕೀಯ ಪಕ್ಷಗಳು ಮತ್ತು ಚಿಂತಕರು ಪರಸ್ಪರ ಪೂರಕವಾಗಿ ಚಿಂತಿಸಿದ್ದರು ಎನ್ನುವುದನ್ನು ಅಧ್ಯಯನ ಮಾಡಿದಾಗ ನಮ್ಮಲ್ಲಿನ ಮಿತಿ ಅರ್ಥವಾಗುತ್ತದೆ.

ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?

ಗೇಣಿ ರದ್ದತಿ ಜಾರಿಯಲ್ಲಿದ್ದರೂ ಅದು ಹೇಗೆ ಬಲಾಢ್ಯ ಜಾತಿಗಳು ನೂರಾರು ಎಕರೆ ಭೂ ಮಾಲೀಕರಾಗಿ ಉಳಿದುಕೊಂಡರು ಎನ್ನುವ ಪ್ರಶ್ನೆಗೆ ಉತ್ತರ ಸಂಕೀರ್ಣವಾಗಿದೆ. ಮುಖ್ಯವಾಗಿ ಅರಸು ನಂತರ ಬಲಿಷ್ಠ ಜಾತಿಗಳ ರಾಜಕಾರಣವು ಮರಳಿ ಪ್ರವರ್ಧಮಾನಕ್ಕೆ ಬರತೊಡಗಿದ್ದು, ಎಂಬತ್ತರ ದಶಕದಿಂದ ಇಬ್ಬರು ಬ್ರಾಹ್ಮಣರು, ಆರು ಮಂದಿ ಲಿಂಗಾಯತರು, ಐವರು ಒಕ್ಕಲಿಗರು ಮುಖ್ಯಮಂತ್ರಿಗಳಾಗಿದ್ದರು ಎನ್ನುವ ವಾಸ್ತವವೂ ಪ್ರಗತಿಪರ ರಾಜಕಾರಣದ ಸೋಲಿಗೆ ಮುಖ್ಯ ಕಾರಣ. ಹಿಂದುಳಿದ ಜಾತಿಗೆ ಸೇರಿದ ಬಂಗಾರಪ್ಪ, ಮೊಯ್ಲಿ ಅವರಿಗೆ ಪೂರ್ಣಾವಧಿ ಮುಖ್ಯಮಂತ್ರಿಗಳಾಗಲು ಸಾಧ್ಯವಾಗಲೇ ಇಲ್ಲ. ಈಗ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರ ಸರ್ಕಾರವನ್ನೆ ಉರುಳಿಸುವ ಸಂಚು ತೀವ್ರವಾಗಿದೆ. ಇಂತಹ ಮುಂದುವರಿದ ಜಾತಿಗಳ ಪ್ರಾಬಲ್ಯದ ಕಾರಣಕ್ಕೆ ಅರಸು ಪ್ರತಿಪಾದಿಸಿದ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮೇಲ್ಮುಖ ಚಲನೆಯ ರಾಜಕೀಯಕ್ಕೆ ಹಿನ್ನಡೆಯಾಗಿದೆ.

ಎಪ್ಪತ್ತು ಮತ್ತು ಎಂಬತ್ತರ ದಶಕಗಳ ಈ ಸಮಾಜೋ-ರಾಜಕೀಯ-ಆರ್ಥಿಕ ಸ್ಥಿತ್ಯಂತರಗಳನ್ನು ಸಮಗ್ರವಾಗಿ ಗ್ರಹಿಸಲು ಇಲ್ಲಿನ ಬಹುತೇಕ ರಾಜಕೀಯ ಚಿಂತಕರಿಗೆ ಸಾಧ್ಯವಾಗಲಿಲ್ಲ. ವಡ್ಡರ್ಸೆ ರಘುರಾಮ ಶೆಟ್ಟಿಯವರಂತಹ ಪತ್ರಕರ್ತರು ಮಾತ್ರ ಅರಸು ರಾಜಕಾರಣದ ಬಹು ಆಯಾಮಗಳನ್ನು ಸಮರ್ಥವಾಗಿ ದಾಖಲಿಸಿದರು. ಇತ್ತೀಚೆಗೆ ಪತ್ರಕರ್ತ ಬಸವರಾಜು ಮೇಗಲಕೇರಿ ಮತ್ತಷ್ಟು ವಿಸ್ತರಿಸಿದರು. ಕಡೆಗೂ ಕಾಂಗ್ರೆಸ್‌ನಂತಹ ಪಟ್ಟಭದ್ರ, ಫ್ಯೂಡಲ್ ಮನಸ್ಥಿತಿಯ ಪಕ್ಷದಲ್ಲಿ ಅರಸು ಮಾದರಿಯ ಹಿಂದುಳಿದ ವರ್ಗಗಳ ರಾಜಕಾರಣವು ರೂಪುಗೊಂಡಿದ್ದು ಅದರ ಮಹತ್ವಕ್ಕೆ ಕಾರಣ ಎನ್ನುವುದು ನಿಜ. ಆದರೆ ಇದೇ ಅಂತಿಮವಾಗಿರಲಿಲ್ಲ. ಅಲ್ಲಿ ಆರಂಭ ಮಾತ್ರವಿತ್ತು, ಕಟ್ಟುವಿಕೆ ಇನ್ನೂ ಪ್ರಾರಂಭವಾಗಿರಲಿಲ್ಲ. ಈ ಮಿತಿಗಳನ್ನು ಮೀರಿಕೊಂಡು ತಾತ್ವಿಕವಾಗಿ ಮತ್ತು ಸೈದ್ಧಾಂತಿಕವಾಗಿ ಈ ಪ್ರಯೋಗವನ್ನು `ಕಲ್ಯಾಣ ರಾಜ್ಯ’ದಂತಹ ಪರಿಕಲ್ಪನೆಗೆ, ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವಶ್ಯಕವಾದ ಬೌದ್ಧಿಕ ಚಿಂತನೆ ಮತ್ತು ಪಕ್ಷ ರಾಜಕಾರಣದ ಕಾರ್ಯಯೋಜನೆ ಎರಡೂ ರೂಪುಗೊಳ್ಳಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಲು ದೊಡ್ಡ ಮಿತಿಯಾಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೆ.ಪಿಯವರ ಸಂಪೂರ್ಣ ಕ್ರಾಂತಿಯ ನಂತರ ಜನತಾ ಪಕ್ಷದ ಭಾಗವಾಗಿದ್ದ ಜನಸಂಘ ಮತ್ತು ಈ ಚಳವಳಿಯನ್ನು ಬಳಸಿಕೊಂಡು ಬೆಳೆದ ಆರ್‌ಎಸ್‌ಎಸ್‌ನ ರಾಜಕಾರಣ ಆ ಕಾಲದ ಬಹುಪಾಲು ಚಿಂತಕರಿಗೆ ಆತಂಕ ಮೂಡಿಸಲಿಲ್ಲ ಎನ್ನುವುದೇ ಸೋಜಿಗ ಸಂಗತಿ. ಇಂದಿಗೂ ಹಲವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಾವು ಅದ್ವಾನಿ ಜೊತೆಗೆ ಜೈಲಿನಲ್ಲಿದ್ದ ದಿನಗಳನ್ನು ಬಣ್ಣಿಸುತ್ತಾರೆ.

(ಮುಂದುವರಿಯುತ್ತಾರೆ…)

(ಈದಿನ ಡಾಟ್ ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...