ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಹಿನ್ನೋಟದ ಸಮಸ್ಯೆಯೆಂದರೆ 1956ರ ಮೊದಲು ಕನ್ನಡ ನಾಡು 29 ಭಾಗಗಳಲ್ಲಿ ಹಂಚಿಹೋಗಿತ್ತು. ಅಲ್ಲದೆ ಅದರಲ್ಲಿ ಕೆಲವು ವಿಸ್ತಾರವಾದ ಪ್ರಾಂತಗಳು ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ನಿಜಾಮರ ಆಳ್ವಿಕೆಯ ಹೈದರಾಬಾದ್ ಕರ್ನಾಟಕ ಹೀಗೆ ವಿಶಾಲವಾದ ಆಡಳಿತ ವ್ಯವಸ್ಥೆಗೆ ಸೇರಿದ್ದವು ಮತ್ತು ತಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದವು. ಉದಾಹರಣೆಗೆ, ಹೈದರಾಬಾದ್ ಕರ್ನಾಟಕದಲ್ಲಿ (ಇಂದಿನ ಕಲ್ಯಾಣ ಕರ್ನಾಟಕ) ಉರ್ದು ಕಲಿಕೆಯ ಮಾಧ್ಯಮವಾಗಿತ್ತು, ಉನ್ನತ ಶಿಕ್ಷಣದಲ್ಲಿ ಕೂಡ. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಆಗುವ ಮೊದಲು ಉನ್ನತ ಶಿಕ್ಷಣವು ಮದ್ರಾಸ್ ಪ್ರೆಸಿಡೆನ್ಸಿ ಹಾಗೂ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸೇರಿದ ವಿದ್ಯಮಾನವಾಗಿತ್ತು. ಅಲ್ಲದೆ ಬಹುಕಾಲದವರೆಗೆ ಆ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ನಡೆಸುತ್ತಿತ್ತೆ ಹೊರತು ಬೋಧನಾಂಗವು ಇರಲಿಲ್ಲ. ಇನ್ನು ಬಾಂಬೆ ಪ್ರೆಸಿಡೆನ್ಸಿಯ ದಕ್ಷಿಣ ಭಾಗವಾಗಿದ್ದ ಉತ್ತರ ಕರ್ನಾಟಕ ಪ್ರಾಂತವು ದೂರದ ಮುಂಬಯಿ ವಿಶ್ವವಿದ್ಯಾಲಯದ ಭಾಗವಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ಆ ಪ್ರಾಂತದ ಯುವಕರು ಅಲ್ಲಿಗೆ ಹೋಗಬೇಕಾಗಿತ್ತು.
ಎರಡನೆಯ ಕಾರಣವೆಂದರೆ, 18ನೆಯ ಶತಮಾನದಿಂದಲೇ ಬ್ರಿಟಿಷ್ ಸರಕಾರದ ಅಧಿಕಾರಿಗಳು ಹಾಗೂ ಇತರರು ಶಿಕ್ಷಣದ ಕುರಿತು ಸಾಕಷ್ಟು ಚರ್ಚೆಗಳಲ್ಲಿ ಭಾಗವಹಿಸಿದರು. ಅನೇಕ ವರದಿಗಳನ್ನು ಸಲ್ಲಿಸಿದರು. ನಂತರ 19ನೇ ಶತಮಾನದಿಂದ ಶಿಕ್ಷಣ ಸಂಬಂಧಿ ಆಯೋಗಗಳು ಹೆಚ್ಚು ವ್ಯವಸ್ಥಿತವಾಗಿ ಶಿಕ್ಷಣದ ರೂಪರೇಷೆಗಳನ್ನು ಸೂಚಿಸಿದವು.
ಸಹಜವಾಗಿಯೇ ಅವುಗಳ ಮುಖ್ಯ ಗಮನವು ಶಾಲಾ ಶಿಕ್ಷಣದ ಮೇಲೆ ಇತ್ತು. ಅದರಲ್ಲೂ ವರ್ನಾ್ಯಕ್ಯುಲರ್ ಶಾಲೆಗಳು (ನಾಡ ಭಾಷೆಯ ಮಾಧ್ಯಮ), ಆಂಗ್ಲೋ ವರ್ನ್ಯಾಕ್ಯುಲರ್ ಶಾಲೆಗಳು ಹಾಗೂ ಮಿಶನರಿ ಶಾಲೆಗಳು ಈ ಪ್ರಕಾರದ ವೈವಿಧ್ಯಗಳು ಶಾಲೆಗಳಲ್ಲಿ ಇದ್ದವು. ಕನ್ನಡ ಸ್ನಾತಕ, ಸ್ನಾತಕೋತ್ತರ ವಿಭಾಗಗಳೂ ಕೂಡ ಮದ್ರಾಸ್, ಮುಂಬಾಯಿ ವಿಶ್ವವಿದ್ಯಾಲಯಗಳಿಗೆ ಸೇರಿದ್ದವು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ (1916) ಯಿಂದಾಗಿ ಮತ್ತು ಆ ಮೊದಲು ಮೈಸೂರಿನ ಮಹಾರಾಜ ಕಾಲೇಜಿನಿಂದಾಗಿ (1889) ಕರ್ನಾಟಕದಲ್ಲಿ ಉನ್ನತ ಶಿಕ್ಷಣವು ತನ್ನದೇ ಆದ ಚಹರೆಯನ್ನು ಪಡೆಯತೊಡಗಿತು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು ಸ್ಥಾಪನೆಯಾಗಿದ್ದು 1949ರಲ್ಲಿ.
ಇದನ್ನೂ ಓದಿರಿ: ನಾಗರಿಕ ಸೇವೆ: ಕನ್ನಡಿಗರಿಗಿರುವ ಸವಾಲುಗಳೇನು?
ಬೆಂಗಳೂರು ವಿಶ್ವವಿದ್ಯಾಲಯವು 1964ರಲ್ಲಿ ಆರಂಭವಾಯಿತು. ಸೆಂಟ್ರಲ್ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು ಮೈಸೂರು ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿಯೇ ನಡೆದವು.
ಇನ್ನು ಕಾಲೇಜುಗಳ ವಿಷಯ ಬಂದಾಗ ಮೈಸೂರು ವಿಶ್ವವಿದ್ಯಾಲಯವು ಕೂಡ ತನ್ನ ಮೊದಲ ಘಟಕ ಕಾಲೇಜನ್ನು ಮೈಸೂರಿನ ಮಹಾರಾಜ ಹೈಸ್ಕೂಲನ್ನು ಉನ್ನತೀಕರಿಸಿ ಆರಂಭಿಸಿತು. ಧಾರವಾಡದ ಕರ್ನಾಟಕ ಕಾಲೇಜು 1917ರಲ್ಲಿ ಆರಂಭವಾಯಿತು. ಅಲ್ಲಿಂದಾಚೆಗೆ ಒಂದು ಕಡೆ ಸರಕಾರಿ ಕಾಲೇಜುಗಳ ಸ್ಥಾಪನೆ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಆರಂಭವಾಯಿತು. 1980ರವರೆಗೆ ರಾಜ್ಯದ ಸರಕಾರಿ ಕಾಲೇಜುಗಳು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದು ಆನಂತರ ಬಹುವೇಗವಾಗಿ ಇತರ ನಗರಗಳಲ್ಲಿಯೂ ಆರಂಭವಾದವು. ಸರಕಾರಿ ಕಾಲೇಜುಗಳು ರಾಜ್ಯದ ಕೆಲವು ಪ್ರಾಂತ್ಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಖಾಸಗಿ ಕಾಲೇಜುಗಳನ್ನು ಆರಂಭಿಸತೊಡಗಿದವು. ಉದಾಹರಣೆಗೆ ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ K.C.E. Society (1916ರಿಂದ) ಈ ಕೆಲಸವನ್ನು ಆರಂಭಿಸಿತು.
ರಾಜ್ಯದ ವಿಶೇಷತೆಯೆಂದರೆ ಖಾಸಗಿ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ, ಅವುಗಳ ಸಂಖ್ಯೆ ಹಾಗೂ ವ್ಯಾಪ್ತಿಯ ಬಗ್ಗೆ ಖಚಿತವಾದ ನೀತಿ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮೊದಲು ವೈದ್ಯಕೀಯ, ಇಂಜಿನಿಯರಿಂಗ್ ಖಾಸಗಿ ಕಾಲೇಜುಗಳು ಇತರ ರಾಜ್ಯಗಳಿಗಿಂತ ಅಪಾರ ಸಂಖ್ಯೆಯಲ್ಲಿ ಬೆಳವಣಿಗೆ ಕಂಡವು. 1990ರ ನಂತರ ಉನ್ನತ ಶಿಕ್ಷಣದ ಹಾಗೂ ಶಾಲಾ ಶಿಕ್ಷಣದ ಖಾಸಗೀಕರಣವು ಎಲ್ಲೆಮೀರಿ ನಡೆಯುತ್ತ ಬಂದಿದೆ. ಅಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳ ವಿವಿಧ ಪ್ರಕಾರಗಳು ಅಪಾರ ಸಂಖ್ಯೆಯಲ್ಲಿ ಪ್ರಾರಂಭವಾಗಿವೆ. ಸರಳವಾಗಿ ಹೇಳುವುದಾದರೆ ಸಂವಿಧಾನ, ರಾಷ್ಟ್ರೀಯ ಶಿಕ್ಷಣ ನೀತಿಗಳು ಶಿಕ್ಷಣವನ್ನು ಪ್ರಭುತ್ವವು (state) ಅಂದರೆ ಸರಕಾರಗಳು ತಮ್ಮ ಸಾಮಾಜಿಕ ಜವಾಬ್ದಾರಿಯೆಂದು ಪರಿಗಣಿಸುವ ಆವರೆಗಿನ ಚಿಂತನೆಗೆ ವಿರುದ್ಧವಾಗಿ ಖಾಸಗೀಕರಣ ಹಾಗೂ ವ್ಯಾಪಾರೀಕರಣಗಳು ಇಂದು ಕರ್ನಾಟಕ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ. ಸರಕಾರದ ಯಾವುದೇ ನೀತಿಗಳು ಅವುಗಳ ಮೇಲೆ ಹಿಡಿತವನ್ನು ಸಾಧಿಸಿಲ್ಲ. ಇದಕ್ಕೆ ಕಾರಣವೆಂದರೆ, ರಾಜ್ಯದ ಬಹುಪಾಲು ಮಂತ್ರಿಗಳು ಮತ್ತು ಶಾಸಕರು ಸ್ವತಃ ತಾವೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಹಾಗೂ ಖಾಸಗಿ ಶಿಕ್ಷಣವು ಅಪಾರ ಬಂಡವಾಳವನ್ನು ಹೊಂದಿದ ವ್ಯವಹಾರವಾಗಿದೆ. ಇದರ ಪರಿಣಾಮವೆಂದರೆ ರಾಜ್ಯದ ಶಿಕ್ಷಣವು ಇಂದು ಇಬ್ಭಾಗವಾಗಿದೆ.
ಒಂದು, ಈಗಲೂ ಸಾಕಷ್ಟು ವ್ಯಾಪ್ತಿ ಇರುವ ಸರಕಾರಿ ಕಾಲೇಜುಗಳು ಅಂದರೆ ನೇರವಾಗಿ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳಿವೆ. ಇನ್ನೊಂದೆಡೆ, ವಿವಿಧ ಬಗೆಯ ಖಾಸಗಿ ಕಾಲೇಜುಗಳೂ ಇವೆ. ಒಂದು ಕಡೆಗೆ ಹೆಚ್ಚಿನ ದುಬಾರಿ ಶುಲ್ಕ, ದೇಣಿಗೆ, ಇಂಗ್ಲಿಷ್ ಮಾಧ್ಯಮ, ಮೂಲ ಸೌಕರ್ಯಗಳು ಇರುವ ಶಿಕ್ಷಣವಿದ್ದರೆ, ಇನ್ನೊಂದೆಡೆಗೆ ಅಪಾರ ಸಂಖ್ಯೆಯ ಹೆಚ್ಚಾಗಿ ಬಡ, ಮಧ್ಯಮ ವರ್ಗ ಹಾಗೂ ಗ್ರಾಮೀಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸರಕಾರಿ ಸಂಸ್ಥೆಗಳಿವೆ. ಇವು ಕಡಿಮೆ ಶುಲ್ಕ, ಶಿಷ್ಯವೇತನಗಳು, ಸರಕಾರ ಒದಗಿಸುವ ಸೌಲಭ್ಯಗಳು, ಕನ್ನಡ ಮಾಧ್ಯಮ ಹಾಗೂ ಸಾಂಪ್ರದಾಯಿಕ ವಿಷಯ ಸಮೂಹಗಳ ಶಿಕ್ಷಣವಾಗಿದೆ. ಪ್ರಾಯಶಃ ಈ ಪ್ರಮಾಣದ ವಿಭಜನೆ ಇತರ ರಾಜ್ಯಗಳಲ್ಲಿ ಕಾಣಸಿಗದು.
ಈ ಸ್ಥಿತಿಯ ಸಾಮಾಜಿಕ, ಸಾಂಸ್ಕೃತಿಕ ಪರಿಣಾಮಗಳನ್ನು ನಾವು ಇನ್ನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಅಲ್ಲದೆ ಇಂಥದೇ ಅಸಮಾನತೆಯ ಸ್ಥಿತಿಯನ್ನು ಜಾಗತೀಕರಣವೂ ನಿರ್ಮಿಸಿದೆ. ಹೀಗಾಗಿ ಶಿಕ್ಷಣ ವ್ಯವಸ್ಥೆಯ ಇಂದಿನ ಸ್ಥಿತಿಯು ಇತರ ಕ್ಷೇತ್ರಗಳಲ್ಲಿ ಜಾಗತೀಕರಣವು ತಂದಿರುವ ಸ್ಥಿತಿಯನ್ನು ಹೋಲುತ್ತದೆ. ಎಷ್ಟರಮಟ್ಟಿಗೆ ಅಂದರೆ ಒಂದು ಕಾಲದಲ್ಲಿ ಸರಕಾರದ ಸಾಂವಿಧಾನಿಕ (ಸಮಾಜ ಕಲ್ಯಾಣ-social welfare) ಜವಾಬ್ದಾರಿಯಾಗಿದ್ದ ಶಿಕ್ಷಣವು ಇಂದು ವ್ಯಾಪಾರದ ಒಂದು ಸರಕಾಗಿದೆ. ವರ್ಗ, ಜಾತಿ ಹಾಗೂ ಆರ್ಥಿಕ ಅಸಮಾನತೆಗಳು ಭೀಕರವಾದ ಪ್ರಮಾಣವನ್ನು ತಲುಪಿದ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣವು ಬದಲಾವಣೆಯ, ಸಾಮಾಜಿಕ ಚಲನೆಗಳ ಅಸ್ತ್ರ ವಾಗಬಲ್ಲದು. ಆದರೆ ಈಗ ಒಂದು ಪ್ರಬಲ ವರ್ಗವು ತನ್ನ ಯಾಜಮಾನ್ಯದ ಮೂಲಕ ಶಿಕ್ಷಣವನ್ನು ತನ್ನ ಅಧಿಕಾರದ ಸ್ಥಾನವನ್ನಾಗಿಸಿಕೊಂಡಿದೆ. ದಲಿತ, ಹಿಂದುಳಿದ ಜನಾಂಗದ ವಿದ್ಯಾರ್ಥಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ತ್ರೀಯರಿಗೆ (ಒಟ್ಟಾರೆ ಸ್ತ್ರೀಯರಿಗೇ) ಶೈಕ್ಷಣಿಕ ಸುಭದ್ರತೆಯು ಇಲ್ಲವಾಗುತ್ತಿದೆ. ಅಲ್ಲದೆ ಯಾವುದೇ ಖಚಿತವಾದ ಸಿದ್ಧಾಂತಗಳಿಲ್ಲದ, ನೀತಿಯಿಲ್ಲದ ಶಿಕ್ಷಣದಿಂದಾಗಿ ದೊರೆಯುತ್ತಿರುವ ಶಿಕ್ಷಣವೂ ಉದ್ಯೋಗವನ್ನು ದೊರಕಿಸಿಕೊಡುತ್ತಿಲ್ಲ. ಈ ವಿಷವೃತ್ತವು ಬಿಗಿಯಾಗುತ್ತಲೇ ಇದೆ.
ಈ ಜಂಜಡಗಳ ಆಚೆಗೆ ಉನ್ನತ ಶಿಕ್ಷಣದ ಬಗ್ಗೆ ಕೇಳಬೇಕಾದ ಮೂಲಭೂತ ತಾತ್ವಿಕ ಪ್ರಶ್ನೆಗಳಿವೆ. ಅವು ನಮ್ಮ ನಾಗರಿಕ ಸಮಾಜದಲ್ಲಿ (civil society) ಚರ್ಚೆಯಾಗುತ್ತಿಲ್ಲ. ಅನೇಕ ದಶಕಗಳಿಂದ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿಷಯಗಳನ್ನು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಲೇ ಇದೆ. ಒಂದು ಕಡೆಗೆ ವಿದ್ಯಾರ್ಥಿಗಳ ಹಾಗೂ ಪಾಲಕರ ಒಲವು ವಿಜ್ಞಾನ, ತಂತ್ರಜ್ಞಾನ ವಿಷಯಗಳ (STEM subjects) ಪರವಾಗಿ ವಾಲುತ್ತ ಬಂದಿದೆ. ಇದರಿಂದಾಗಿ ಮಾನವಿಕ ಹಾಗೂ ಸಮಾಜವಿಜ್ಞಾನಗಳು ಅನುತ್ಪಾದಕವೆನ್ನುವ ವಾದಗಳು ಪ್ರಬಲವಾಗುತ್ತಿವೆ. ಇದು ನಮ್ಮ ನಾಡಿನ ಮಾತ್ರವಲ್ಲ ಜಗತ್ತಿನ ಸಮಸ್ಯೆಯೇ ಆಗಿದೆ. ಇದು ಖಂಡಿತವಾಗಿ ಉನ್ನತ ಶಿಕ್ಷಣವು ರೂಪಿಸಬೇಕಾದ ಸಮಗ್ರ ವ್ಯಕ್ತಿತ್ವ ಬೆಳವಣಿಗೆಯ ವಿರುದ್ಧವಾಗಿದೆ. ಅಲ್ಲದೆ ಇಂದಿನ ಸಂಕೀರ್ಣವಾದ ಸಮಾಜಕ್ಕೆ ಬೇಕಾಗಿರುವುದು critical thinking, ವಿವೇಕಪೂರ್ಣವಾದ, ವಿಮರ್ಶಾತ್ಮಕ ಚಿಂತನೆ. ಇದನ್ನು ಮಾನವಿಕಗಳು, ಸಮಾಜ ವಿಜ್ಞಾನಗಳು ರೂಪಿಸಬಲ್ಲವು. ಎರಡನೆಯ ವಿಪರ್ಯಾಸವೆಂದರೆ ಸರಕಾರಗಳು ಮೊದಲು ಉದ್ಯೋಗಗಳನ್ನು ನಿರ್ಮಿಸಿ ಆ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳು ಯಾವುವು ಎಂದು ನಿರ್ಧರಿಸಿದರೆ ಶಿಕ್ಷಣ ವ್ಯವಸ್ಥೆಯು ಆ ಕೌಶಲ್ಯಗಳನ್ನು ಬೋಧಿಸಬಹುದು. ಈಗ ಇದಾವ ಬುನಾದಿಯೂ ಇಲ್ಲದೆ, ʼಕೌಶಲ್ಯʼಗಳನ್ನು (skills) ಹೇಳಿಕೊಡಲಾಗುತ್ತಿದೆ. ಉದಾಹರಣೆಗೆ, ಬಿ.ಎ. ತರಗತಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (artificial intelligence- AI)ಯನ್ನು ನುರಿತ ಶಿಕ್ಷಕರಿಲ್ಲದೆಯೇ ಹೇಳಿಕೊಡಲಾಗುತ್ತಿದೆ.
ಇದನ್ನೂ ಓದಿರಿ: ಕನ್ನಡ ಪತ್ತೇದಾರಿ ಪ್ರಕಾರ ನಾಪತ್ತೆಯಾಯಿತೇ?
ಹಾಗೆಯೇ ಸಾಮಾನ್ಯ ವಿಷಯಗಳ ಪಾಠಮಾಡಲು ಕೂಡ ಪೂರ್ಣಕಾಲಿಕ ಶಿಕ್ಷಕರು ಇಲ್ಲದಿರುವಾಗ ಬಿ.ಎ. 3ನೇ ಅಥವಾ 4ನೇ ವರ್ಷದಲ್ಲಿ ಸಂಶೋಧನೆಯನ್ನು ಕಲಿಸಬೇಕೆಂದು NEP ಸೂಚಿಸಿದೆ. ಸ್ನಾತಕೋತ್ತರ ಶಿಕ್ಷಣವನ್ನು ಪಡೆಯದೇ ನೇರವಾಗಿ ಪಿಹೆಚ್.ಡಿ. ಮಾಡುವ ಅವಕಾಶವನ್ನೂ ಕಲ್ಪಿಸಿದೆ. ಇಂತಹ ಅಸಂಗತವಾದ ನಿರ್ಧಾರಗಳಿಂದಾಗಿ ಉನ್ನತ ಶಿಕ್ಷಣವು ಗೊಂದಲದ ಗೂಡಾಗಿದೆ. ದುರಂತವೆಂದರೆ ಕೆಲವು ಪ್ರತಿಷ್ಠಿತ ಕಾಲೇಜು, ವಿಶ್ವವಿದ್ಯಾಲಯಗಳು ಮಾತ್ರ ಇವುಗಳನ್ನು ನಿಭಾಯಿಸುವ ತಯಾರಿ ಹೊಂದಿವೆ. ಹೀಗಾಗಿ ಭಾರತೀಯ ಸಮಾಜದ ಅಸಮಾನತೆಯ ಕಂದರಗಳು ಶಿಕ್ಷಣ ವ್ಯವಸ್ಥೆಯಿಂದಾಗಿ ಇನ್ನೂ ಭೀಕರವಾಗುತ್ತಿವೆ. ಜಾಗತೀಕರಣವು ಸ್ವಲ್ಪಮಟ್ಟಿಗೆ ತೆರೆದಿರುವ ಅವಕಾಶಗಳನ್ನು ಕೇವಲ ಉಚ್ಚ ಜಾತಿ ಹಾಗೂ ಶ್ರೀಮಂತ ವರ್ಗಗಳು ಪಡೆಯುವಂಥ ಶಿಕ್ಷಣವನ್ನು ಇಂದು ರೂಪಿಸಲಾಗಿದೆ.
ಉನ್ನತ ಶಿಕ್ಷಣವು ಜ್ಞಾನವನ್ನು ಸೃಷ್ಟಿಸುವ ಉದ್ದೇಶ ಹಾಗೂ ಜವಾಬ್ದಾರಿಯನ್ನು ಹೊಂದಿರಬೇಕು. ದುರಂತವೆಂದರೆ ಇಂಥ ಸಾಧ್ಯತೆಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕ್ಷೀಣವಾಗಿವೆ.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ. ರಾಜೇಂದ್ರ ಚೆನ್ನಿ
ಪ್ರೊ. ರಾಜೇಂದ್ರ ಚೆನ್ನಿ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು. ಕುದುರೆಮುಖದಲ್ಲಿ ಗಣಿಗಾರಿಕೆ ವಿರುದ್ಧ ಮತ್ತು ತುಂಗಾ ನದಿಯನ್ನು ಉಳಿಸಲು ಹಲವಾರು ಜನಾಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ, ಮಾಸ್ತಿ ಕತೆಗಳು: ಒಂದು ಅಧ್ಯಯನ, ದೊಡ್ಡ ಮರ, ಕರುಳ ಬಳ್ಳಿಯ ಸೊಲ್ಲು, ನಡುಹಗಲಿನಲ್ಲಿ ಕಂದೀಲುಗಳು, ಮಳೆಯಲ್ಲಿ ಬಂದಾತ ಸೇರಿದಂತೆ ಹಲವು ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ.




