‘ತಾವು ಯಾರು, ಏಕೆ ಈ ಸ್ಥಿತಿಗೆ ಬಂದೆವು ಎಂದು ಗೊತ್ತಿಲ್ಲದ ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ ರಚಿತವಾಗಿದೆ…’- ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಶೂದ್ರರು ಯಾರಾಗಿದ್ದರು?’ (Who Were The Shudras? How they came to be the Fourth Varna in the Indo Aryan Society?) ಎಂಬ ತಮ್ಮ ಸಂಶೋಧನಾ ಕೃತಿಯ ಪೀಠಿಕೆಯಲ್ಲಿ ಹೇಳುವ ಈ ಮಾತುಗಳು ಈ ಪುಸ್ತಕ ರಚನೆಯ ಉದ್ದೇಶವೇನು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಮುಂದುವರೆದು, ‘…ಕುಖ್ಯಾತವಾದ ಚಾತುರ್ವರ್ಣ ವ್ಯವಸ್ಥೆ ಉಳಿದುಕೊಂಡು ಬರಲು ಶೂದ್ರರೇ ಸಾಧನವಾಗಿದ್ದರೂ, ಚಾತುರ್ವರ್ಣವೇ ಅವರ ಹೀನಸ್ಥಿತಿಗೆ ಪ್ರಪ್ರಥಮ ಕಾರಣವಾಗಿದ್ದರೂ, ಅದನ್ನು ನಿರ್ನಾಮ ಮಾಡಲು ಅವರಿಂದ ಮಾತ್ರವೇ ಸಾಧ್ಯ ಎಂಬುದನ್ನು ನೆನಪಿಟ್ಟುಕೊಂಡರೆ, ನಾನು ಶೂದ್ರರಿಗೆ ತಿಳಿವಳಿಕೆ ಕೊಟ್ಟು ಚಾತುರ್ವರ್ಣ ವಿನಾಶದ ಪವಿತ್ರ ಕಾರ್ಯಕ್ಕೆ ಅವರನ್ನು ಸಿದ್ಧಗೊಳಿಸಬೇಕೆಂಬ ಪರಿಗಣನೆಯಿಂದ ಉದ್ಧರಣೆಗಳನ್ನು ಬಿಡದೆ ಸಂಕ್ಷಿಪ್ತವಾಗಿ ಕೊಟ್ಟಿರುವುದು ಅರ್ಥವಾಗುತ್ತದೆ…’ ಎನ್ನುವ ಬಾಬಾಸಾಹೇಬರ ಮಾತುಗಳು ಈ ಪುಸ್ತಕದ ತುಂಬಾ ತುಂಬಿರುವ ವೇದ, ಸೂಕ್ತ, ಉಪನಿಷತ್ತು, ಅರಣ್ಯಕ, ಬ್ರಾಹ್ಮಣ, ಸ್ಮೃತಿ, ಪುರಾಣಗಳ ದಟ್ಟ ಉಲ್ಲೇಖಗಳಿಗೆ ಪೂರಕ ಎಂಬಂತಿವೆ.
1946ರಲ್ಲಿ ಅಂದರೆ, ಇಲ್ಲಿಗೆ 79 ವರ್ಷಗಳ ಹಿಂದೆ ಪ್ರಕಟವಾದ ಈ ಸಂಶೋಧನಾ ಕೃತಿಯ ಬಗ್ಗೆ ಈಗ ಅಂದರೆ, 2025ರಲ್ಲಿ ಬರೆಯುತ್ತಿರುವಾಗ ಆ ಕೃತಿಯನ್ನು ಸಮಕಾಲೀನಗೊಳಿಸುವುದು (Contemporise) ನನ್ನ ಉದ್ದೇಶವೇ ಹೊರತು ಅದನ್ನು ವಿಶ್ಲೇಷಿಸುವುದಾಗಲೀ, ವಿಮರ್ಶಿಸುವುದಾಗಲೀ ಅಲ್ಲವೇ ಅಲ್ಲ. ಹೀಗಾಗಿ ‘ಶೂದ್ರರು ಯಾರಾಗಿದ್ದರು’ ಎಂಬ ಬಾಬಾಸಾಹೇಬರ ಮೂಲ ಕೃತಿಗೆ ಓದುಗರನ್ನು ಸೆಳೆಯುವ ಕಡೆಗಷ್ಟೇ ನನ್ನ ಈ ಬರಹವನ್ನು ಕೇಂದ್ರೀಕರಿಸುತ್ತಿದ್ದೇನೆ.
ಇಂದಿಗೂ ಈ ದೇಶದ ಹಳ್ಳಿಗಳಲ್ಲಿ ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ಹೀನಾತಿಹೀನ ಕೃತ್ಯಗಳಲ್ಲಿ ಹೆಚ್ಚಿನ ಪಾಲು ನೇರ ಭಾಗೀದಾರರು ಶೂದ್ರರೇ ಆಗಿರುವುದರಿಂದ ಮತ್ತು ಪುರೋಹಿತಶಾಹಿಯನ್ನು ಪೋಷಿಸುವ ದೊಡ್ಡ ‘ಜವಾಬ್ದಾರಿ’ಯನ್ನು ಇನ್ನೂ ಶೂದ್ರರು ತಮ್ಮ ತಲೆಯ ಮೇಲೇ ಹೊತ್ತು ಕುಣಿಸುತ್ತಿರುವುದರಿಂದ ಅವರು ಈಗಲಾದರೂ ತಮ್ಮ ‘ಮೂಲ’ದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ್ದು ಅನಿವಾರ್ಯ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗಿಂತ ವರ್ಣದಲ್ಲಿ ಕೊನೆಯಲ್ಲಿದ್ದರೂ ಅಸ್ಪೃಶ್ಯರಿಗಿಂತ, ಅತಿಶೂದ್ರರಿಗಿಂತ ತಾವು ಶ್ರೇಷ್ಠ ಎಂಬ ಮನೋಭಾವವು ಇಂದಿಗೂ ಶೂದ್ರರಲ್ಲಿರುವುದರಿಂದ ತಮ್ಮನ್ನು ಕೊನೆಯ ವರ್ಣದಲ್ಲೇ ಉಳಿಸಿಕೊಳ್ಳುವ ‘ಧನ್ಯತೆ’ಯ ದೀನಸ್ಥಿತಿಯು ಅವರನ್ನು ಇನ್ನಷ್ಟು ಪ್ರತಿಗಾಮಿಗಳನ್ನಾಗಿಸಿದೆ. ಇದಕ್ಕೆ ಮೂಲ ಕಾರಣವೇನು ಎಂಬುದನ್ನು ಬಾಬಾಸಾಹೇಬರ ಈ ಕೃತಿಯು ದಟ್ಟವಾದ ಆಧಾರಗಳ ಸಹಿತ ವಿವರಿಸುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ಬಂದ ಈ ಕೃತಿಯಲ್ಲಿ ಶೂದ್ರರ ರಾಜಕೀಯ ಚಳವಳಿಯ ಉಲ್ಲೇಖ ಬರುತ್ತದೆ. ಬಾಬಾಸಾಹೇಬರು ಬ್ರಾಹ್ಮಣೇತರ ರಾಜಕೀಯ ಚಳವಳಿಗೆ ಈ ಕೃತಿ ಪೀಠಿಕೆಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 20 ವರ್ಷ ಕಡಿಮೆ ಒಂದು ಶತಮಾನದ ಹಿಂದೆ ರೂಪ ಪಡೆದ ಶೂದ್ರರ ರಾಜಕೀಯ ಚಳವಳಿ ಇಂದು ಕೋಮುವಾದಿ ರಾಜಕೀಯದಲ್ಲಿ ಕರಗಿಹೋಗಿರುವುದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಶೂದ್ರರು ಎಚ್ಚೆತ್ತುಕೊಳ್ಳದೆ ಅಸ್ಪೃಶ್ಯತೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂಬ ಬಾಬಾಸಾಹೇಬರ ಮಾತುಗಳು ಇವತ್ತಿಗೂ ಆಶಯದಂತೆಯೇ ಕಾಣುತ್ತವೆ. ಆದರೆ, ಜಾತಿ ವಿನಾಶದಲ್ಲಿ ಶೂದ್ರರ ಜವಾಬ್ದಾರಿಯನ್ನೂ ಬಾಬಾಸಾಹೇಬರು ಸೂಚಿಸುವುದರಿಂದ ಶೂದ್ರರಿಗಷ್ಟೇ ಅಲ್ಲದೆ, ಸಮಾನತೆಯ ಉಸಿರಾಡುವ ಎಲ್ಲರಿಗೂ ಈ ಕೃತಿಯ ಓದು ಅರಿವಿನ ವಿಸ್ತರಣೆಯಂತಿದೆ.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)
ಜಾತಿ ಕೂಪಗಳಾಗಿದ್ದ ಹಳ್ಳಿಗಳನ್ನು ಈಗ ಇನ್ನಷ್ಟು ವಿಷಮಗೊಳಿಸಿರುವ ಕೋಮುವಾದಿ ರಾಜಕಾರಣಕ್ಕೆ ಕಾಲಾಳುಗಳು ಶೂದ್ರರೇ. ಈ ಕಾಲಾಳುಗಳಿಗೆ ಪುರೋಹಿತಶಾಹಿಯು ತಮ್ಮನ್ನೂ ನಾಲ್ಕನೇ ವರ್ಣದಲ್ಲಿಟ್ಟು ಶೋಷಿಸಿದ್ದರ ಬಗ್ಗೆ ಹಾಗೂ ಇಂದಿಗೂ ‘ಕೆಳಗೇ’ ಇಟ್ಟಿರುವ ಬಗ್ಗೆ ಅರಿವಿಲ್ಲ. ಈ ಕಾರಣಕ್ಕಾಗಿಯೇ ಶೂದ್ರರು ಎಚ್ಚೆತ್ತುಕೊಳ್ಳಬೇಕಾದರೆ ಶೂದ್ರರೆಲ್ಲರೂ ಬಾಬಾಸಾಹೇಬರ ‘ಶೂದ್ರರು ಯಾರಾಗಿದ್ದರು’ ಎಂಬ ಈ ಸಂಶೋಧನಾ ಕೃತಿಯನ್ನು ಓದಲೇಬೇಕು. ಅದರಲ್ಲೂ ಕೇಸರಿ ಬಣ್ಣದಲ್ಲಿ ಮುಳುಗೇಳುತ್ತಿರುವ ಇಂದಿನ ಶೂದ್ರ ಯುವಜನರು ಏನನ್ನು ಓದದಿದ್ದರೂ ಕನಿಷ್ಠ ಈ ಕೃತಿಯನ್ನಂತೂ ಓದಲೇಬೇಕು.
ಈ ಕೃತಿಯನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರಿಗೆ (1827-1890) ಸಮರ್ಪಿಸಲಾಗಿದೆ. “ಉಚ್ಚ ವರ್ಗಗಳಿಗೆ ಗುಲಾಮರಾಗಿದ್ದ ತಳವರ್ಗಗಳಲ್ಲಿ ಆ ಕುರಿತು ಅರಿವು ಮೂಡಿಸಿದ ಮತ್ತು ಸಾಮಾಜಿಕ ಜನತಂತ್ರ ಎಂಬುದು ವಿದೇಶೀಯರಿಂದ ಸ್ವಾತಂತ್ರ್ಯ ಗಳಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದು ಎಂಬ ಪರಮಸತ್ಯವನ್ನು ಬೋಧಿಸಿದ ಆಧುನಿಕ ಭಾರತದ ಮಹಾಶೂದ್ರ” ಎಂದು ಜ್ಯೋತಿಬಾ ಅವರನ್ನು ಬಾಬಾ ಸಾಹೇಬರು ಬಣ್ಣಿಸಿದ್ದಾರೆ.

ಋಗ್ವೇದದಿಂದ ವರ್ತಮಾನದವರೆಗೆ
ಬ್ರಾಹ್ಮಣರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹಾಗೂ ಆ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಬಳಸಿದ ತಂತ್ರಗಳನ್ನು ಬಾಬಾಸಾಹೇಬರು ಆಧಾರಗಳ ಉಲ್ಲೇಖಗಳ ಮೂಲಕ ಈ ಕೃತಿಯಲ್ಲಿ ವಿವರಿಸುತ್ತಾರೆ. ಬ್ರಾಹ್ಮಣರು ಧರ್ಮಶಾಸ್ತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿರುವುದು, ಶೂದ್ರರಿಗೆ ಶಿಕ್ಷಣವೂ ಸೇರಿದಂತೆ ಸಾಕಷ್ಟು ಹಕ್ಕುಗಳನ್ನು ನಿರಾಕರಿಸುವುದು ಹಾಗೂ ಶೂದ್ರರನ್ನು ದಾಸ್ಯಕ್ಕಾಗಿ ಬಳಸಿಕೊಳ್ಳುವ ಕುತಂತ್ರಗಳನ್ನು ಬಾಬಾಸಾಹೇಬರು ತಮ್ಮ ಈ ಕೃತಿಯಲ್ಲಿ ಸಂಶೋಧನಾ ಸಾಕ್ಷ್ಯಗಳ ಸಹಿತ ತೆರೆದಿಡುತ್ತಾರೆ. ಇದಕ್ಕಾಗಿ ಋಗ್ವೇದದಿಂದ ಹಿಡಿದು ಐತಿಹಾಸಿಕ ಉಲ್ಲೇಖಗಳವರೆಗೆ ದೀರ್ಘವಾದ ಸಾಕ್ಷ್ಯಗಳನ್ನು ನೀಡುತ್ತಾರೆ.
ಬಾಬಾಸಾಹೇಬರ ಈ ಕೃತಿಯು ಕೇವಲ ಶೂದ್ರರ ಇತಿಹಾಸವನ್ನು ಮಾತ್ರ ವಿವರಿಸುವುದಿಲ್ಲ. ಪ್ರಾಚೀನ ಭಾರತದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ರಚನೆಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವ ಜತೆಗೆ ಭಾರತದಲ್ಲಿ ಜಾತಿ ವ್ಯವಸ್ಥೆಯ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಮೂಲವನ್ನು ಪತ್ತೆಹಚ್ಚಲು ನೆರವಾಗುತ್ತದೆ. ಬಾಬಾಸಾಹೇಬರು ಈ ಕೃತಿಯಲ್ಲಿ ವೇದಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರೊಂದಿಗೆ ವೇದಗಳಲ್ಲಿ ಶೂದ್ರರ ಬಗ್ಗೆ ಇರುವ ಉಲ್ಲೇಖಗಳನ್ನು ಮೂಲಪಠ್ಯದೊಂದಿಗೇ ಪ್ರಸ್ತಾಪಿಸಿ ಅವುಗಳನ್ನು ವಿಶ್ಲೇಷಿಸುತ್ತಾರೆ.
ವೇದಗಳಲ್ಲಿ ಶೂದ್ರರನ್ನು ಕೇವಲ ಸೇವಕರು ಎಂದು ಮಾತ್ರ ಉಲ್ಲೇಖಿಸಿಲ್ಲ, ಬದಲಿಗೆ ಶೂದ್ರರು ಸಹ ರಾಜರು ಮತ್ತು ಯೋಧರಾಗಿದ್ದರು ಎಂಬುದಕ್ಕೆ ಧರ್ಮಶಾಸ್ತ್ರಗಳಲ್ಲೇ ಲಭ್ಯವಿರುವ ಪುರಾವೆಗಳನ್ನು ಬಾಬಾಸಾಹೇಬರು ನೀಡುತ್ತಾರೆ. ಋಗ್ವೇದದಲ್ಲಿನ ಅನೇಕ ಶ್ಲೋಕಗಳನ್ನು ಉಲ್ಲೇಖಿಸುವ ಮೂಲಕ ವೇದಗಳಲ್ಲಿ ಹೇಗೆ ಶೂದ್ರರನ್ನು ಆರ್ಯರಷ್ಟೇ ಶಕ್ತಿಯುತ ಮತ್ತು ಪ್ರಭಾವಶಾಲಿ ವರ್ಣವಾಗಿ ಚಿತ್ರಿಸಲಾಗಿದೆ ಎಂಬುದನ್ನು ವಿವರಿಸುತ್ತಾರೆ. ಇಂದಿಗೂ ತಮ್ಮನ್ನು ‘ಸವರ್ಣೀಯರು’ ಎಂದು ಕರೆದುಕೊಳ್ಳುವ ಬ್ರಾಹ್ಮಣೇತರ ವರ್ಣಗಳ ಬಗ್ಗೆ ಬ್ರಾಹ್ಮಣವಾದವು ಏನನ್ನು ಹೇಳುತ್ತದೆ ಎಂಬುದನ್ನು ಶೂದ್ರರು ಅರಿಯಬೇಕು. ಬ್ರಾಹ್ಮಣರು ತಮಗೆ ಬೇಕಾದಂತೆ ಧರ್ಮಶಾಸ್ತ್ರಗಳನ್ನು ಬಳಸಿಕೊಂಡು ಅದನ್ನೇ ಕಾನೂನಾಗಿ ಮಾಡಿರುವ ಹುನ್ನಾರವನ್ನು ಅರಿಯದಷ್ಟು ಶೂದ್ರರು ಪ್ರಜ್ಞಾಶೂನ್ಯರಾಗಿರುವುದನ್ನು ಬಾಬಾಸಾಹೇಬರು ಈ ಕೃತಿಯಲ್ಲಿ ಉದಾಹರಣೆಗಳ ಸಹಿತ ಮುಂದಿಡುತ್ತಾರೆ.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-2)
‘ಯಜ್ಞ ಮಾಡುವ ಉದ್ದೇಶದಿಂದ ಅಗತ್ಯವಿದ್ದರೆ ಯಾವುದೇ ಅಪರಾಧಿ ಭಾವನೆಯಿಲ್ಲದೆ ಶೂದ್ರನ ಆಸ್ತಿಯನ್ನು ಬ್ರಾಹ್ಮಣ ಕಿತ್ತುಕೊಳ್ಳಬಹುದು. ಶೂದ್ರನು ಸಂಪತ್ತನ್ನು ಸಂಗ್ರಹಮಾಡಬಾರದು, ಏಕೆಂದರೆ ಅದರಿಂದ ಬ್ರಾಹ್ಮಣನಿಗೆ ಬಾಧೆಯಾಗುತ್ತದೆ. ಏಕೆ ಹೀಗೆ? ಶೂದ್ರನನ್ನು ತನ್ನ ವಿಶೇಷ ಶತ್ರುವನ್ನಾಗಿ ಕಾಣಲು ಬ್ರಾಹ್ಮಣನಿಗೇನಾದರೂ ಕಾರಣವಿತ್ತೆ?’ ಎಂದು ಪ್ರಶ್ನಿಸುವ ಬಾಬಾಸಾಹೇಬರು ಬ್ರಾಹ್ಮಣರಲ್ಲಿ ನೈತಿಕ ಪ್ರಜ್ಞೆಯೇ ಮಂಕಾಗಿದೆ ಎನ್ನುತ್ತಾರೆ.
ಮನುಸ್ಮೃತಿಯಂತಹ ಕುಕೃತಿಯ ಅಮಾನವೀಯ ನಿಯಮಗಳ ಉಲ್ಲೇಖಗಳನ್ನು ನೀಡುತ್ತಾ ಶೂದ್ರರನ್ನು ಬ್ರಾಹ್ಮಣರು ಹೇಗೆಲ್ಲ ಶೋಷಿಸಲು ಧಾರ್ಮಿಕ ಗ್ರಂಥಗಳನ್ನು ಹತಾರವಾಗಿ ಬಳಸಿಕೊಂಡರು ಹಾಗೂ ಶೂದ್ರರ ಹಕ್ಕುಗಳನ್ನು ಕಸಿದುಕೊಳ್ಳಲು ಏನೆಲ್ಲ ಕುತಂತ್ರಗಳನ್ನು ಹೆಣೆಯಲಾಗಿತ್ತು ಎಂಬುದನ್ನು ಬಿಚ್ಚಿಡುತ್ತಾರೆ. ಆರಂಭದಲ್ಲಿ ಆರ್ಯರ ಸಮ ಸ್ಥಾನದಲ್ಲಿದ್ದ ಶೂದ್ರರು ನಾಲ್ಕನೇ ವರ್ಣವಾಗಿ ಹೇಗೆ ಕೆಳಕ್ಕೆ ನೂಕಲ್ಪಟ್ಟರು ಎಂಬುದನ್ನು ಹೇಳುವ ಬಾಬಾಸಾಹೇಬರು, ಆರ್ಯರು ಹಾಗೂ ಶೂದ್ರರ ನಿರಂತರ ಸಂಘರ್ಷವನ್ನು ಉಲ್ಲೇಖಿಸುತ್ತಾರೆ. ಭಾರತದಲ್ಲಿ ಇಂದು ಕಾಣಲು ಸಿಗುವ ಶೂದ್ರ – ಬ್ರಾಹ್ಮಣ ‘ರಾಜಿ’ಗಳು ಐತಿಹಾಸಿಕವಾಗಿಯೂ ಕಾಲಕಾಲಕ್ಕೆ ಹೇಗೆಲ್ಲಾ ತಮ್ಮತಮ್ಮ ಅನುಕೂಲಗಳಿಗೆ ತಕ್ಕಂತೆ ಬದಲಾಗಿವೆ ಎಂಬುದನ್ನು ಸಾಕ್ಷ್ಯ ಸಹಿತ ಮುಂದಿಡುತ್ತಾರೆ.
ಮುಂದಿನ ಕೃತಿಗೆ ವಿಸ್ತಾರ ಭೂಮಿಕೆ
‘ಶೂದ್ರರು ಯಾರಾಗಿದ್ದರು’ ಎಂಬುದನ್ನು ಶೋಧಿಸುವ ಬಾಬಾಸಾಹೇಬರ ಉದ್ದೇಶವು ‘ಅಸ್ಪೃಶ್ಯರು’ ಯಾರಾಗಿದ್ದರು ಎಂಬುದನ್ನು ಆಧಾರ ಸಹಿತ ನಿರೂಪಿಸುವುದಕ್ಕೆ ನಿರ್ಮಿಸಿಕೊಂಡ ವಿಸ್ತಾರವಾದ ಭೂಮಿಕೆಯಂತೆ ಕಾಣುತ್ತದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಶೂದ್ರರನ್ನೂ ವರ್ಣದಲ್ಲಿ ಕೆಳಕ್ಕೆ ತಳ್ಳಿ ಶೋಷಿಸಿದ ಪುರೋಹಿತಶಾಹಿ ವ್ಯವಸ್ಥೆಯು ಅಸ್ಪೃಶ್ಯರನ್ನು ಹೇಗೆ ಊರ ಹೊರಗಿಟ್ಟು ಶೋಷಿಸಿತು ಎಂಬುದರ ತುಲನಾತ್ಮಕ ವಿಶ್ಲೇಷಣೆಗೆ ಈ ಕೃತಿಯು ಮಹತ್ವದ ಹಾಗೂ ಪೂರಕ ಪಠ್ಯವಾಗಲಿದೆ ಎಂಬುದು ಬಾಬಾಸಾಹೇಬರ ಸಕಾರಣ ಉದ್ದೇಶವಾಗಿದ್ದಂತೆ ತೋರುತ್ತದೆ.

ಇಡೀ ಕೃತಿಯಲ್ಲಿ ಶೂದ್ರರ ಮೂಲ ಗುರುತಿಸುವ ಮತ್ತು ಅವರ ವರ್ಣ ಸ್ಥಾನದ ಕುಸಿತಕ್ಕೆ ಕಾರಣಗಳನ್ನು ಹುಡುಕುವ ಬಾಬಾಸಾಹೇಬರು ಕೊನೆಯ ಅಧ್ಯಾಯದಲ್ಲಿ ತಮ್ಮ ಈ ಸಂಶೋಧನಾ ಸಿದ್ಧಾಂತದ ಸಾರವನ್ನು ನೀಡಿರುವುದು ಹೀಗಿದೆ:
‘1) ಶೂದ್ರರು ಸೂರ್ಯವಂಶದ ಆರ್ಯ ಸಮುದಾಯಗಳಲ್ಲಿ ಒಂದು ಸಮುದಾಯವಾಗಿದ್ದರು.
2) ಇಂಡೋ-ಆರ್ಯ ಸಮಾಜದಲ್ಲಿ ಶೂದ್ರರು ಕ್ಷತ್ರಿಯ ವರ್ಣಕ್ಕೆ ಸೇರಿದ್ದರು.
3) ಆರ್ಯ ಸಮಾಜ ಮೂರೇ ವರ್ಣಗಳನ್ನು ಮನ್ನಿಸಿದ ಕಾಲವೊಂದಿತ್ತು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ. ಶೂದ್ರರು ಪ್ರತ್ಯೇಕ ವರ್ಣವಾಗಿರದೆ, ಕ್ಷತ್ರಿಯ ವರ್ಣದ ಭಾಗವಾಗಿದ್ದರು.
4) ಶೂದ್ರ ಅರಸರು ಮತ್ತು ಬ್ರಾಹ್ಮಣರ ನಡುವೆ ನಿರಂತರ ದ್ವೇಷವಿತ್ತು. ಅದರಲ್ಲಿ ಬ್ರಾಹ್ಮಣರನ್ನು ಅತಿಯಾದ ಹಿಂಸೆಗೆ ಮತ್ತು ಅಪಮಾನಕ್ಕೆ ಗುರಿಪಡಿಸಲಾಗಿತ್ತು.
5) ಹಿಂಸೆ ಮತ್ತು ತುಳಿತದ ಪರಿಣಾಮವಾಗಿ ಶೂದ್ರರನ್ನು ದ್ವೇಷಿಸುತ್ತಿದ್ದ ಬ್ರಾಹ್ಮಣರು ಅವರಿಗೆ ಜನಿವಾರ ಕೊಡಲು ನಿರಾಕರಿಸಿದರು.
6) ಜನಿವಾರ ದೀಕ್ಷೆಯಿಂದ ವಂಚಿತರಾದ ಶೂದ್ರರು ಸಾಮೂಹಿಕವಾಗಿ ಅವಹೇಳನಗೊಂಡು, ವೈಶ್ಯರಿಗಿಂತಲೂ ಕೆಳಗಿಳಿದು ನಾಲ್ಕನೇ ವರ್ಣ ನಿರ್ಮಾಣ ಮಾಡಿದರು.’
ಶೂದ್ರರ ಮೂಲ ಹಾಗೂ ಅವರ ಸ್ಥಾನಮಾನದ ಬಗ್ಗೆ ದಟ್ಟ ಉಲ್ಲೇಖಗಳನ್ನು ನೀಡುವ ಈ ಕೃತಿಯು ಜಾತಿ ವ್ಯವಸ್ಥೆಯ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಸಮ ಸಮಾಜದ ನಿರ್ಮಾಣದಲ್ಲಿ ಶೂದ್ರರ ಪಾತ್ರ ಏನು ಎಂಬುದನ್ನು ವಿವರವಾಗಿ ಮನವರಿಕೆ ಮಾಡಿಕೊಡುತ್ತದೆ. ಇದೇ ಬರಹದ ಆರಂಭದಲ್ಲಿ ಹೇಳಿದಂತೆ ಕೇವಲ ಶೂದ್ರರು ಮಾತ್ರವಲ್ಲ, ಸಮಾಜದಲ್ಲಿ ಸಮಾನತೆ ಮತ್ತು ಸಮತೆಯನ್ನು ಸಾಧಿಸಲು ಬಯಸುವ ಪ್ರತಿಯೊಬ್ಬರೂ ಈ ಕೃತಿಯನ್ನೂ, ಇದರ ಮುಂದುವರಿಕೆಯೇ ಆಗಿರುವ ‘ಅಸ್ಪೃಶ್ಯರು’ (The Untouchables) ಕೃತಿಯನ್ನೂ ಓದಲೇಬೇಕು.
ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-1)
ಬಾಬಾಸಾಹೇಬರಿಗೆ ತಮ್ಮ ಈ ಸಂಶೋಧನಾ ಕೃತಿಯ ಮಿತಿಯ ಬಗ್ಗೆಯೂ ಸ್ಪಷ್ಟತೆ ಇತ್ತು. ಹೀಗಾಗಿಯೇ, ‘ವಸ್ತು ಪ್ರತಿಪಾದನೆಯಲ್ಲಿ ಅನೇಕ ನ್ಯೂನತೆಗಳಿವೆಯೆಂಬುದನ್ನು ನಾನು ಬಲ್ಲೆ. ಬಹಳ ದೀರ್ಘವಾದ ಹಾಗೂ ಅಸಂಖ್ಯಾತವಾದ ಉದ್ಧರಣೆಗಳಿಂದ ಈ ಪುಸ್ತಕ ತುಂಬಿಹೋಗಿದೆ. ಈ ಪುಸ್ತಕ ಒಂದು ಕಲಾಕೃತಿಯಲ್ಲ, ಇದನ್ನು ಓದಲು ವಾಚಕರಿಗೆ ಬೇಸರವಾಗಬಹುದು. ಆದರೆ ಈ ತಪ್ಪು ಸಂಪೂರ್ಣ ನನ್ನದಲ್ಲ, ನನ್ನಷ್ಟಕ್ಕೆ ಆಗಿದ್ದರೆ ನಾನು ಸವಣಿಸುವ ಕತ್ತಿಯನ್ನು ಮನಃಪೂರ್ವಕವಾಗಿ ಬಳಸುತ್ತಿದ್ದೆ’ ಎನ್ನುತ್ತಾರೆ.
‘ವಿಷಯವನ್ನು ಎಷ್ಟು ಕಲಾತ್ಮಕವಾಗಿ ಹೇಳಿದೆ ಎಂಬುದರ ಕಡೆ ಅವರು (ಶೂದ್ರರು) ಲಕ್ಷಿಸುವುದಿಲ್ಲ. ಅಪಾರ ವಿಷಯ ಸಂಗ್ರಹಣೆಯನ್ನು ಕೊಟ್ಟಷ್ಟೂ ಉತ್ತಮವೆಂದು ಅವರು ಭಾವಿಸುತ್ತಾರೆ. ನಾನು ಯಾರು ಯಾರಿಗೆ ಇದರ ಹಸ್ತಪ್ರತಿಯನ್ನು ತೋರಿಸಿದೆನೊ ಅವರೆಲ್ಲ ಉದ್ಧರಣೆಗಳನ್ನು ತೆಗೆಯಬೇಡಿ ಎಂದು ಒತ್ತಾಯಿಸಿದ್ದಾರೆ. ವಾಸ್ತವವಾಗಿ ಗ್ರಂಥದ ಒಡಲಲ್ಲಿ ಇಂಗ್ಲಿಷ್ ಅನುವಾದವನ್ನು ಕೊಡುವುದರ ಜೊತೆಗೆ ಅನುಬಂಧದಲ್ಲಿ ಮೂಲ ಸಂಸ್ಕೃತದ ಪಾಠಗಳನ್ನು ಕೊಡಬೇಕೆಂದು ಒತ್ತಾಯಿಸುವಷ್ಟರ ಮಟ್ಟಿಗೆ ಅವರು ಇಂಥ ವಿಷಯದ ಬಗ್ಗೆ ತೀವ್ರಾಸಕ್ತಿಯನ್ನು ತೋರಿದರು’ ಎನ್ನುವ ಬಾಬಾಸಾಹೇಬರು ಈ ಕೃತಿಗಾಗಿ ನಡೆಸಿರುವ ಸಂಶೋಧನೆಯು ದಂಗುಬಡಿಸುವಂತಿದೆ.
ಮಹಾಭಾರತದ ‘ಶಾಂತಿಪರ್ವ’ ಅಧ್ಯಾಯದ ಲೇಖಕನಿಗೆ (ಆತನು ವ್ಯಾಸನಿರಲಿ, ವೈಶಂಪಾಯನನಿರಲಿ, ಸುತ, ಲೋಮೋಹರ್ಷಣ ಅಥವಾ ಭೃಗುವಿನ ಪೈಕಿ ಯಾರೆಂದು ಹೇಳುವುದು ಕಷ್ಟ. ಈ ಪೈಕಿ ಕೃತಿಕಾರ ಯಾರೇ ಆಗಿರಲಿ) ತಾವು ಋಣಿಯೆಂದು ಸಾರಿದ್ದಾರೆ, ಪೈಜಾವಾನ ಸಂಪೂರ್ಣ ಬಣ್ಣನೆ ನೀಡುವ ಮೂಲಕ ಬಹುದೊಡ್ಡ ಲೋಕೋಪಕಾರ ಮಾಡಿದ್ದಾನೆ. ಪೈಜಾವನನ್ನು ಶೂದ್ರನೆಂದು ಬಣ್ಣಿಸದೆ ಹೋಗಿದ್ದರೆ ಶೂದ್ರನ ಮೂಲ ಯಾವುದೆಂಬ ಸುಳಿವು ಸಂಪೂರ್ಣವಾಗಿ ಕಳೆದು ಹೋಗುತ್ತಿತ್ತು ಎಂದು ಉಪಕಾರ ಸ್ಮರಿಸಿದ್ದಾರೆ.
ಶೂದ್ರ ಸಮುದಾಯದ ಐತಿಹಾಸಿಕ ಮೂಲವನ್ನು ಪರಿಶೋಧಿಸಿರುವ ಬಾಬಾ ಸಾಹೇಬರು, ಶೂದ್ರರು ಪ್ರಾಚೀನ ಯೋಧರ ಇಲ್ಲವೇ ವಿದೇಶೀ ದಾಳಿಕೋರರ ವಂಶಸ್ಥರು ಎಂಬ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಇವುಗಳಿಗೆ ಸವಾಲೆಸೆದಿದ್ದಾರೆ. ತಮ್ಮ ವಾದಕ್ಕೆ ಸಮರ್ಥನೆಯಾಗಿ ಐತಿಹಾಸಿಕ ಪುರಾವೆಯನ್ನು ಬಗೆದು ತೆಗೆದಿರುವ ಅವರು, ಶೂದ್ರರು ವಾಸ್ತವವಾಗಿ ಭಾರತದ ಮೂಲನಿವಾಸಿಗಳೇ ಆಗಿದ್ದರೆಂದೂ, ಬ್ರಾಹ್ಮಣರು ತಮ್ಮ ಯಜಮಾನಿಕೆಯನ್ನು ಮುಂದುವರೆಸಲು ಅವರನ್ನು ಅಧೀನಗೊಳಿಸಿದರೆಂದೂ ಪ್ರತಿಪಾದಿಸಿದ್ದಾರೆ.
ಇತಿಹಾಸದ ಉದ್ದಕ್ಕೂ ಶೂದ್ರ ಸಮುದಾಯ ಎದುರಿಸುತ್ತ ಬಂದಿರುವ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ವ್ಯಾಪಕ ಬಡತನ, ಶಿಕ್ಷಣದ ಕೊರತೆ ಹಾಗೂ ಅವರ ಹಿಂದುಳಿಯುವಿಕೆಯನ್ನು ಸತತವಾಗಿ ಮುಂದುವರೆಸುತ್ತ ಬಂದ ಅವಕಾಶಗಳ ಕೊರತೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಜಮೀನು, ಆರ್ಥಿಕ ಅವಕಾಶಗಳಂತಹ ಸಂಪನ್ಮೂಲಗಳನ್ನು ಶೂದ್ರರಿಗೆ ಹೇಗೆ ನಿರಾಕರಿಸಲಾಯಿತು ಮತ್ತು ಈ ನಿರಾಕರಣೆಯು ಅವರ ಸಾಮಾಜಿಕ-ಆರ್ಥಿಕ ಬವಣೆಯನ್ನು ಮತ್ತಷ್ಟು ಹೇಗೆ ಆಳಗೊಳಿಸಿತು ಎಂದೂ ಅವರು ವಿವರಿಸಿದ್ದಾರೆ.
ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-2)
ತಮ್ಮ ಅವನತಿಗೆ ಹಾದಿ ಮಾಡಿದ ಚಾತುರ್ವರ್ಣ್ಯ ಎಂಬ ದುಷ್ಟ ವ್ಯವಸ್ಥೆಯನ್ನು ಸುಸ್ಥಿರಗೊಳಿಸಿಕೊಂಡು ಬಂದವರು ಶೂದ್ರರೇ ಆಗಿರುವುದರಿಂದ, ಚಾತುರ್ವರ್ಣ್ಯದ ವಿನಾಶವೂ ಅವರ ಕೈಯಲ್ಲೇ ಇದೆ ಎಂಬ ದೂರಗಾಮಿ ಕ್ರಾಂತಿಯ ಸುಳಿವನ್ನೂ ಅವರು ನೀಡಿದ್ದಾರೆ.
ಅಸ್ಪೃಶ್ಯರು ಹಾಗೂ ಅಸಂಖ್ಯ ತಳಸಮುದಾಯಗಳು ಇಂದಿಗೂ ಹೆಚ್ಚು ಶೋಷಣೆಗೆ ಒಳಪಡುತ್ತಿರುವುದು ‘ಶೂದ್ರ’ ಎಂಬ ವರ್ಣದೊಳಗೆ ಸೇರಿರುವ ಬಲಾಢ್ಯ ಜಾತಿಗಳಿಂದಲೇ. ಶೂದ್ರರ ತಲೆಯೊಳಗೆ ತುಂಬಿರುವ ಪುರೋಹಿತಶಾಹಿಯ ಪ್ರತಿಗಾಮಿ ಧೋರಣೆಯೇ ಇದಕ್ಕೆ ಮುಖ್ಯ ಕಾರಣ. ಜಾತಿವಿನಾಶದ ಕಾರ್ಯದಲ್ಲಿ ಶೂದ್ರರು ಪಾಲ್ಗೊಳ್ಳದೆ ಅಸ್ಪೃಶ್ಯತೆಯ ಕ್ರೌರ್ಯಕ್ಕೂ, ಅಸಮಾನತೆಯ ಶೋಷಣೆಗೂ ಕೊನೆಯಿಲ್ಲ. ಇಂದು ಶೂದ್ರತ್ವದಿಂದ ಕಳಚಿಕೊಳ್ಳುತ್ತಾ ಜಾತಿಶ್ರೇಷ್ಠತೆಯನ್ನು ಆವಾಹಿಸಿಕೊಂಡಿರುವ ಶೂದ್ರರು ಈ ಕೃತಿಯನ್ನು ಓದಿದರೆ, ಆ ಓದು ಅವರನ್ನು ಮನುಷ್ಯರನ್ನಾಗಿ ಬದಲಿಸೀತು. ಕನಿಷ್ಠ ತಾವು ಮನುಷ್ಯರಾಗಲಾದರೂ ಶೂದ್ರರೆಲ್ಲರೂ ಬಾಬಾಸಾಹೇಬರ ಬರಹಗಳ ಕಡೆಗೆ ಮುಚ್ಚಿರುವ ತಮ್ಮ ‘ಕಣ್ಣು ಬಿಡಬೇಕು’. ನಿರ್ಣಾಯಕ ರಾಜಕೀಯ ಶಕ್ತಿಗಳಾಗಿ ರೂಪಾಂತರವಾಗಿರುವ ಹಾಗೂ ಸಾಮಾಜಿಕ ಬದಲಾವಣೆಯ ಕೆಲಸಗಳಿಂದ ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ದೊಡ್ಡದೊಡ್ಡ ‘ಜಾತಿಬೇಲಿ’ಗಳನ್ನು ಹಾಕಿಕೊಂಡಿರುವ ಶೂದ್ರಮಠಗಳ ಗದ್ದುಗೆಯಲ್ಲಿರುವವರು ಬಾಬಾಸಾಹೇಬರ ಚಿಂತನೆಗಳನ್ನು ತಮ್ಮ ತಲೆಗಳಿಗೆ ತುಂಬಿಕೊಂಡು ಕನಿಷ್ಠ ತಾವಾದರೂ ಮನುಷ್ಯರಾಗಬೇಕು.

ದಯಾನಂದ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.




