ಮಹಾರಾಷ್ಟ್ರ ಸರಕಾರವು ಅಂಬೇಡ್ಕರ್ ಅವರ ಬರಹ ಮತ್ತು ಬಾಷಣಗಳ 22 ಸಂಪುಟಗಳನ್ನು 1979 ಏಪ್ರಿಲ್ 14ರಂದು ಪ್ರಕಟಿಸಿತು. ಈ ಸಂಪುಟಗಳಲ್ಲಿ ನಾಲ್ಕನೆ ಸಂಪುಟವೆ, ‘ಹಿಂದೂ ಧರ್ಮದ ಒಗಟುಗಳು’ ಕೃತಿಯಾಗಿದೆ. ಈ ಕೃತಿಯ ಅನುಬಂಧದಲ್ಲಿ ಸೇರಿಸಲಾದ ಬರಹವೇ ರಾಮ ಕೃಷ್ಣರ ಒಗಟು. ಈ ಬರವಣಿಗೆಯನ್ನು ಅಂಬೇಡ್ಕರ್ ಅವರು 1954 ಜನವರಿಯಿಂದ 1955ರ ನವೆಂಬರ್ ಅವಧಿಯಲ್ಲಿ ಬರೆದಿದ್ದಾರೆಂದು ನಾನಕ್ ಚಂದ್ ರತ್ತು ದಾಖಲಿಸುತ್ತಾರೆ. ಚಟ್ನೀಸ್ ಅವರ ಪ್ರಕಾರ ಬಾಬಾಸಾಹೇಬರು 1940-41ರಲ್ಲಿಯೇ ಈ ಪುಸ್ತಕದ ಕೆಲಸ ಶುರುಮಾಡಿದ್ದರು. ಇದು ಮುಗಿಯುವ ಹೊತ್ತಿಗೆ ನವಂಬರ್ 1955 ಆಗಿತ್ತು (ಅಶೋಕ ಗೋಪಾಲ, 62, 2023). ಈ ಕೃತಿಯ ನಾಲ್ಕು ಪ್ರತಿಗಳನ್ನು ಟೈಪ್ ಮಾಡಿದ್ದರಂತೆ, ಇದೇಕೆ ನಾಲ್ಕು ಪ್ರತಿಗಳು ಎಂದು ಕೇಳಿದಾಗ ಅಂಬೇಡ್ಕರ್ ಮುಗುಳ್ನಕ್ಕು ಹೇಳಿದ್ದರಂತೆ, `ಈ ಪುಸ್ತಕದ ಹೆಸರೇನು? ಹಿಂದೂ ಧರ್ಮದ ಒಗಟುಗಳು. ನಿನ್ನ ಪ್ರಶ್ನೆಗೆ ಆ ಹೆಸರೇ ಉತ್ತರ. ನನಗೆ ನನ್ನದೇ ಮುದ್ರಣಾಲಯವಿಲ್ಲ. ಹಾಗಾಗಿ ನಾನು ಯಾವುದಾದರೂ ಹಿಂದೂ ಮುದ್ರಕರಿಗೇ ಕೊಡಬೇಕು. ಕೊಟ್ಟಾದ ಮೇಲೆ ಅದು ಕಳೆದು ಹೋಗುವುದು, ಸುಟ್ಟು ಹೋಗುವುದು ಅಥವಾ ಹಾಳಾಗಿ ಹೋಗುವುದು, ಹೀಗಾಗಿ ನನ್ನ ಹಲವು ವರ್ಷಗಳ ಕಠಿಣ ಶ್ರಮ ಹಾಗೆ ನಷ್ಟವಾಗಿಬಿಡುತ್ತದೆ. ಅದಕ್ಕಾಗಿಯೇ ಏನಾದರಾಗಲಿ, ಎಷ್ಟಾದರೂ ಖರ್ಚಾಗಲಿ ನನ್ನ ಬಳಿ ಮತ್ತೊಂದು ಪ್ರತಿ ಇರಬೇಕು’ ಎಂದಿದ್ದರಂತೆ.
ಕೃತಿ ಸಂಪೂರ್ಣ ಸಿದ್ಧವಾಗಿದ್ದರೂ, ಅಂಬೇಡ್ಕರ್ ತಕ್ಷಣ ಮುದ್ರಣಕ್ಕೆ ಕಳಿಸಲಿಲ್ಲ. ಮುದ್ರಿಸುವ ಮುನ್ನ ಅದಕ್ಕೆ ಎರಡು ಛಾಯಾಚಿತ್ರಗಳು ಅಗತ್ಯವಿದ್ದವು ಎನ್ನುತ್ತಾರೆ ರತ್ತೂ. ಮೊದಲನೆಯದು: ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ 1951ರಲ್ಲಿ ಬನಾರಸ್‌ಗೆ ಭೇಟಿ ನೀಡಿದಾಗ ಬ್ರಾಹ್ಮಣರ ಕಾಲು ತೊಳೆದು ಪಾದೋದಕ ಕುಡಿದ ಫೋಟೋ. ಎರಡನೆಯದು: ಬ್ರಾಹ್ಮಣರೊಬ್ಬರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾದರೆಂಬ ಸಂತೋಷಾಚರಣೆಗೆ 1947ರ ಆಗಸ್ಟ್ 15ರಂದು ಬನಾರಸ್‌ನ ಬ್ರಾಹ್ಮಣರು ನಡೆಸಿದ ಯಜ್ಞದಲ್ಲಿ, ಸ್ವತಃ ನೆಹರೂ ಭಾಗಿಯಾಗಿ ಬ್ರಾಹ್ಮಣರು ಉಡುಗೊರೆಯಾಗಿ ನೀಡಿದ ರಾಜದಂಡ ಸ್ವೀಕರಿಸಿ, ಅವರು ತಂದುಕೊಟ್ಟ ಗಂಗಾಜಲ ಸೇವಿಸಿದ ಪ್ರಸಂಗದ ಫೋಟೋ. ಈ ಪೈಕಿ ರಾಜೇಂದ್ರ ಪ್ರಸಾದರ ಫೋಟೋ ಸಿಕ್ಕಿದರೂ, ನೆಹರೂ ಫೋಟೋಗಾಗಿ ಅಂಬೇಡ್ಕರ್ ಹುಡುಕಾಟ ಮುಂದುವರೆಸಿದ್ದರೆಂದು ರತ್ತೂ ಬರೆದಿದ್ದಾರೆಂದು ಎನ್.ಎಸ್. ಶಂಕರ್ ಅವರು ಉಲ್ಲೇಖಿಸುತ್ತಾರೆ.
ಅಂಬೇಡ್ಕರ್ ಅವರಿಗೆ ‘ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನು ಮುದ್ರಣ ಮಾಡುವವರೆ ಆ ಕೃತಿಯನ್ನು ನಾಶ ಮಾಡಬಹುದು ಎನ್ನುವ ಭಯವಿತ್ತು ಎಂದು ಕಾಣುತ್ತದೆ. ಈ ಕೃತಿಯು ವ್ಯಾಪಕ ವಿರೋಧವನ್ನು ಹುಟ್ಟುಹಾಕಬಲ್ಲದು ಎನ್ನುವುದನ್ನು ಈ ಕೃತಿ ಬರೆಯುವಾಗಲೇ ಗ್ರಹಿಸಿದ್ದಂತೆ ಕಾಣುತ್ತದೆ. ರತ್ತು ಅವರು ಕಾಲಾನಂತರ ಈ ನಾಲ್ಕೂ ಪ್ರತಿಗಳು ಕಾಣೆಯಾಗಿದ್ದವು, ಅಂಬೇಡ್ಕರ್ ಸಮಗ್ರ ಬರಹ ಪ್ರಕಟಣಾ ಯೋಜನೆಯಲ್ಲಿ ಅಪ್ರಕಟಿತ ಪುಟಗಳಿಂದ ಸಂಗ್ರಹಿಸಿದ ಪಠ್ಯಗಳಲ್ಲಿ ‘ಹಿಂದೂ ಧರ್ಮದ ಒಗಟುಗಳು’ ಸಂಪುಟವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸಿದ್ದಾರ್ಥ ಕಾಲೇಜಿನ ಎಸ್.ಎಸ್. ರೇ ಅವರಿಗೆ ಅವರು ಒದಗಿಸಿದ ಒಂದು ಅಧ್ಯಾಯವೂ ಸೇರಿದೆ ಎನ್ನುತ್ತಾರೆ. ಅಶೋಕ ಗೋಪಾಲ್ ಅವರು (ಅಶೋಕ ಗೋಪಾಲ, 62, 2023) ಇದನ್ನೆಲ್ಲ ಚರ್ಚಿಸುತ್ತಾ, `ರಾಮ ಮತ್ತು ಕೃಷ್ಣರ ಒಗಟು’ (The Riddles of Rama and Krishna) ಅಪೂರ್ಣ ಬರಹ ಇರಬೇಕು; ಇದು ಮತ್ತೊಂದು ಸ್ವತಂತ್ರ ಗ್ರಂಥಕ್ಕೆ ಮಾಡಿರುವ ಟಿಪ್ಪಣಿಗಳಿರಬೇಕು ಎನ್ನುತ್ತಾರೆ.
ಅಂಬೇಡ್ಕರ್ ಅವರು ‘ಹಿಂದೂ ಧರ್ಮದ ಒಗಟುಗಳು’ ಕೃತಿಯ ಮೂಲ ಪರಿವಿಡಿಯಲ್ಲಿ ‘ರಾಮ ಕೃಷ್ಣ’ರ ಅಧ್ಯಾಯವನ್ನು ಸೇರಿಸಿರಲಿಲ್ಲ. ಹಾಗಾಗಿ ಮಹಾರಾಷ್ಟ್ರ ಸರಕಾರ ಹಿಂದೂ ಧರ್ಮದ ಒಗಟುಗಳು ಕೃತಿಯನ್ನು ಪ್ರಕಟಿಸುವಾಗ ಅನುಬಂಧದಲ್ಲಿ ಈ ಪಠ್ಯವನ್ನು ಸೇರಿಸಲಾಯಿತು. ಈ ಕೃತಿ ಪ್ರಕಟವಾದಾಗ 1988ರಲ್ಲಿ ಮರಾಠ ಮಹಾಮಂಡಲದಲ್ಲಿ ಇದರ ಪ್ರತಿಯನ್ನು ಸುಡಲಾಯಿತು. ಇದರಲ್ಲಿ ರಾಮ ಕೃಷ್ಣ ಅಧ್ಯಾಯಕ್ಕೆ ಬಹಳ ಪ್ರತಿರೋಧ ಬಂದಿತು. ಶಿವಸೇನೆಯ ಪ್ರತಿಭಟನೆ ತೀವ್ರವಾದಾಗ ಮಹಾರಾಷ್ಟ್ರ ಸರಕಾರವು ಈ ಪ್ರಕಟಣೆಯನ್ನು ಹಿಂಪಡೆಯಿತು. ಈ ನಡೆಯನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಗಳು ವ್ಯಾಪಕವಾಗಿ ಪ್ರತಿರೋಧ ತೋರಿದ ಕಾರಣ ಮತ್ತೆ ರಾಮಕೃಷ್ಣ ಪಠ್ಯ ಸೇರ್ಪಡೆಯಾಯಿತು. ಈ ಮುದ್ರಣದಲ್ಲಿ ಮಹರಾಷ್ಟ್ರ ಸರಕಾರವು ‘ಈ ಅಧ್ಯಾಯದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಸರಕಾರದ ಸಹಮತವಿಲ್ಲ’ ಎಂದು ಮುದ್ರಿಸಿತು (ಎನ್.ಎಸ್ ಶಂಕರ್, 2018, 15). ಅಸಲಿಗೆ ಈ ಪುಟ್ಟ ಅಧ್ಯಾಯಕ್ಕೆ ಇಷ್ಟು ವ್ಯಾಪಕವಾದ ಪ್ರತಿರೋಧ ಏಕೆ ಬಂತು ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)
ಈ ತನಕ ಹಿಂದೂ ಧರ್ಮದ ನಂಬಿಕೆ, ದೈವ, ಆಚರಣೆಗಳಲ್ಲಿ ವರ್ಣಾಶ್ರಮವನ್ನು ಗಟ್ಟಿಗೊಳಿಸುತ್ತಾ ಬರಲಾಗಿದೆಯೋ ಆ ಗಟ್ಟಿಯಾದ ನಂಬಿಕೆಗಳನ್ನು ಛಿದ್ರಗೊಳಿಸುತ್ತಾ ಮತ್ತು ಹಿಂದೂ ಧರ್ಮದಲ್ಲಿ ಯಾವ ಯಾವುದನ್ನು ಕಟ್ಟು ಕಥೆಗಳ ಮೂಲಕ ಅಸತ್ಯಗಳನ್ನು ಕಟ್ಟಲಾಗಿತ್ತೋ ಅಂಥವುಗಳನ್ನು ‘ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ಅಂಬೇಡ್ಕರ್ ಅವರು ಮೂಲ ಆಕರಗಳೊಂದಿಗೆ ಬಯಲು ಮಾಡುತ್ತಾ ಬರುತ್ತಾರೆ. ಅಂದರೆ ಹಿಂದೂ ಧರ್ಮದ ಬಗೆಗಿನ ಕಗ್ಗಂಟಿನ ಒಗಟನ್ನು ಬಿಡಿಸುತ್ತಾರೆ. ಹಾಗಾಗಿ ಹಿಂದೂ ಧರ್ಮದ ನಂಬಿಕೆಗೆ ಘಾಸಿಯಾಗಿದೆಯೆಂದು ‘ಹಿಂದೂ ಧರ್ಮದ ಒಗಟು’ ಸಂಪುಟವನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತದೆ.
ಈ ರಾಮ-ಕೃಷ್ಣ ಒಗಟು ಮೂಲದಲ್ಲಿ 19 ಪುಟಗಳ ಬರಹ. ಇಷ್ಟು ಪುಟ್ಟ ಲೇಖನ ಏನನ್ನು ಒಳಗೊಂಡಿದೆ? ಯಾಕಿಷ್ಟು ವಿವಾದವನ್ನು ಹುಟ್ಟುಹಾಕಿತು? ಎನ್ನುವುದನ್ನು ಈ ಕೃತಿಯ ಒಳಗಿಂದ ಪರೀಕ್ಷೆ ಮಾಡಬಹುದು. ಅಂತೆಯೇ ಅಂಬೇಡ್ಕರ್ ಅವರು ರಾಮ ಮತ್ತು ಕೃಷ್ಣನ ಬಗ್ಗೆ ಬರೆದದ್ದು ಇದೇ ಮೊದಲಲ್ಲ. ಆರಂಭದಿಂದಲೂ ಬರೆಯುತ್ತಾ ಬಂದಿದ್ದರು. ಇಲ್ಲಿ ಈತನಕ ಅಂಬೇಡ್ಕರ್ ಓದಿದ ಎಲ್ಲ ಆಕರಗಳ ನೆರವಿನಿಂದ ಸರಳವಾಗಿ ಇಡಿಯಾಗಿ ಹಿಂದೂಗಳ ಮನಸ್ಸಲ್ಲಿ ದೈವಿಕ ಸ್ವರೂಪ ಪಡೆದ ಈ ಇಬ್ಬರೂ ವ್ಯಕ್ತಿಗಳನ್ನು ನೈಜತೆಯನ್ನು ಬಯಲು ಮಾಡುತ್ತಾರೆ. ವಿಶೇಷ ಏನೆಂದರೆ ಯಾವ ಯಾವ ಪಠ್ಯಗಳ ನೆರವಿನಿಂದ ರಾಮ ಕೃಷ್ಣರನ್ನು ದೈವೀ ಪುರುಷರು ಎಂದು ಹೇಳಲಾಗಿತ್ತೋ ಅದೇ ಆಕರಗಳನ್ನು ಬಳಸಿ ಅಂಬೇಡ್ಕರ್ ಈ ಇಬ್ಬರೂ ಯಾಕೆ ದೈವೀಪುರುಷರಲ್ಲ? ಹೇಗೆ ದೈವೀ ಪುರುಷರಿಗೆ ಸಲ್ಲದ ಗುಣಗಳು ಈ ಇಬ್ಬರಲ್ಲಿಯೂ ನೆಲೆಗೊಂಡಿದ್ದವು ಎನ್ನುವುದನ್ನು ಬಾಬಾಸಾಹೇಬರು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಅವರು 1936ರಲ್ಲಿ ಬರೆದ ‘ಜಾತಿ ವಿನಾಶ’ ಕೃತಿಯಲ್ಲಿ ರಾಮನ ಬಗ್ಗೆ ಉಲ್ಲೇಖಿಸುತ್ತಾ, ಜಾತಿಯ ಸಮಸ್ಯೆಗಳ ಬಗ್ಗೆ ಹೇಳುತ್ತಾ, ಚಾತುರ್ವರ್ಣವನ್ನು ಮೀರುವುದು ಅಥವಾ ಎದುರಿಸುವುದು ದೊಡ್ಡ ಸವಾಲಾಗಿದೆ ಎನ್ನುತ್ತಾ, ‘ರಾಮರಾಜ್ಯವು ಚಾತುರ್ವರ್ಣವನ್ನು ಪಾಲಿಸುವ ರಾಜ್ಯವಾಗಿತ್ತು. ಹಾಗಾಗಿಯೇ ಬ್ರಾಹ್ಮಣ್ಯವನ್ನು ಆಚರಿಸಿದ ಶೂದ್ರ ಶಂಭೂಕನನ್ನು ಕೊಲ್ಲಬೇಕಾಯಿತು. ಇದು ರಾಜಧರ್ಮ ಮತ್ತು ಚಾತುರ್ವರ್ಣದ ರಕ್ಷಣೆಯಾಗಿದೆ’ (ಸಂ:1,ಪುಟ:72) ಎಂದು ವಿಶ್ಲೇಷಣೆ ಮಾಡುತ್ತಾರೆ.
ಹಾಗೆ ನೋಡಿದರೆ, ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸತಜ್ಞ ಹೆಚ್.ಡಿ. ಸಾಂಕಾಲಿಯ ಉಲ್ಲೇಖಿಸುವಂತೆ, 1843ರಿಂದ 1867ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಈ ಅಧ್ಯಯನ ಆರಂಭವಾಗಿರಬೇಕು, ಎ. ವೆಬರ್ (1873) ಮೊದಲು ಕಾಲನಿರ್ಣಯದ ಚರ್ಚೆ ಮಾಡಿರಬೇಕೆಂದು ಅಭಿಪ್ರಾಯ ತಾಳುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ, ಆರ್.ಸಿ. ಮುಜುಂದಾರ್, ಪುಲಸ್ಕರ್, ಅಂಬೇಡ್ಕರ್, ಪಿ.ವಿ. ಕಾಣೆ, ಡಿ.ಡಿ. ಕೋಸಾಂಬಿ, ಎ.ಎಲ್. ಬಾಷಂ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ತನಕ ನೂರಾರು ಜನ ಇತಿಹಾಸ ತಜ್ಞರು, ಪುರಾತತ್ವಜ್ಞರು, ಮಾನವಶಾಸ್ತ್ರಜ್ಞರನ್ನು ಒಳಗೊಂಡಂತೆ ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ.
ವಾಲ್ಮೀಕಿಯ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3ರಿಂದ 5ನೇ ಶತಮಾನದಲ್ಲಿ ವಾಲ್ಮೀಕಿ ಬದುಕಿದ್ದು, ‘ರಾಮಾಯಣ ರಚಿಸಿರಬೇಕು’ ಎಂಬ ನಿಲುವಿದೆ. ಹೀಗಿರುವಾಗ ಅಂಬೇಡ್ಕರ್ ಅವರು ರಾಮನ ವ್ಯಕ್ತಿತ್ವವನ್ನು ಮನಗಾಣಿಸಲು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಪಠ್ಯವನ್ನೇ ಮೂಲ ಆಕರವನ್ನಾಗಿಸಿಕೊಳ್ಳುತ್ತಾರೆ. ಇಲ್ಲಿ ಅಂಬೇಡ್ಕರ್ ಆರಂಭಕ್ಕೆ ಬೌದ್ಧರಾಮಾಯಣ ಮತ್ತು ವಾಲ್ಮೀಕಿ ರಾಮಾಯಣವನ್ನು ಹೋಲಿಕೆ ಮಾಡುತ್ತಾರೆ. ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ಕತೆ ಹೇಳುವ ಅಂಬೇಡ್ಕರ್, ಇದರಲ್ಲಿ ರಾಮನು ಪೂಜಾರ್ಹ ವ್ಯಕ್ತಿ ಎಂದು ಹೇಳುವ ಯಾವ ಅಂಶವೂ ಇಲ್ಲ ಎಂದು ಹೇಳುತ್ತಾರೆ.
ರಾಮನ ಹುಟ್ಟು ಅಸಹಜವಾಗಿದೆ, ನೈಸರ್ಗಿಕವಾಗಿಲ್ಲ, ಒಬ್ಬ ವ್ಯಕ್ತಿಯಾಗಿ, ಒಬ್ಬ ರಾಜನಾಗಿ ರಾಮನು ಒಳ್ಳೆಯ ವ್ಯಕ್ತಿಯಾಗಿದ್ದನೆ ಎನ್ನುವುದನ್ನು ವಿಶ್ಲೇಷಣೆಗೆ ಒಡ್ಡುತ್ತಾರೆ. ಇದರಲ್ಲಿ ಎರಡು ನಿದರ್ಶನಗಳನ್ನು ಕೊಡುತ್ತಾರೆ: ಒಂದು- ವಾಲಿಯನ್ನು ರಾಮನು ಮೋಸದಿಂದ ಕೊಂದದ್ದು, ಎರಡು- ಸೀತೆಯನ್ನು ತುಂಬಾ ಅಮಾನವೀಯವಾಗಿ ನಡೆಸಿಕೊಂಡದ್ದು. ಈ ಎರಡೂ ಪ್ರಕರಣಗಳನ್ನು ದೀರ್ಘವಾಗಿ ಚರ್ಚೆ ಮಾಡಿ ರಾಮನು ಒಬ್ಬ ಘನತೆಯುಳ್ಳ ವ್ಯಕ್ತಿಯಾಗಿಯೂ ನಡೆದುಕೊಂಡಿಲ್ಲ ಎನ್ನುವುದನ್ನು ವಿವರಿಸುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 2)
ವಾಲ್ಮೀಕಿ ರಾಮಾಯಣದ ಉಲ್ಲೇಖಗಳನ್ನು ಆಧರಿಸಿಯೇ, ‘ರಾಮನು ಏಕ ಪತ್ನಿವ್ರತಸ್ತ ಆಗಿರಲಿಲ್ಲ. ಬಹುಪತ್ನಿಯರು, ಉಪಪತ್ನಿಯರಿದ್ದರು, ಹೆಂಗಳೆಯರ ನಡುವೆ ಕುಡಿಯುತ್ತಾ ಕೂರುತ್ತಿದ್ದ ಬಗ್ಗೆ’ ಹೇಳುತ್ತಾರೆ. ರಾಮನು ತಪಸ್ಸು ಮಾಡುತ್ತಿದ್ದ ಶಂಬೂಕನನ್ನು ಕೊಲೆ ಮಾಡುವ ರೀತಿ ಕೂಡ ವರ್ಣಾಶ್ರಮ ಧರ್ಮದ ಪಾಲನೆಯಾಗಿದೆ ಎನ್ನುತ್ತಾರೆ. ಹೀಗೆ ಎಲ್ಲ ವಿವರಗಳ ಮೂಲಕ ಅಂಬೇಡ್ಕರ್ “ರಾಮನ ಬಗೆಗೆ ಹಿಂದೂಗಳಲ್ಲಿ ನೆಲೆಯೂರಿದ ಯಾವ ನಂಬಿಕೆಗಳು ನಿಜವಲ್ಲ. ಅದನ್ನು ನಾನು ಹೇಳುವುದಿಲ್ಲ, ಸ್ವತಃ ವಾಲ್ಮೀಕಿಯೆ ಬರೆಯುತ್ತಾನೆ” ಎಂದು ವಿಶ್ಲೇಷಿಸುತ್ತಾರೆ. ಹೀಗೆ ರಾಮನ ಬಗೆಗೆ ಕಟ್ಟಿಕೊಂಡ ಪೊಳ್ಳು ನಂಬಿಕೆಗಳನ್ನು ಒಡೆಯುತ್ತಾರೆ.
(ಮುಂದುವರಿಯುತ್ತದೆ..)
(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು




