ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-2)

Date:

(ಮುಂದುವರಿದ ಭಾಗ…) ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಂದು ಕಡೆ ರಾಮನ ಬಗ್ಗೆ ಹೀಗೆ ಬರೆಯುತ್ತಾರೆ: ‘ರಾಮನನ್ನು ಆದರ್ಶ ರಾಜ ಎನ್ನುತ್ತಾರೆ. ಆದರೆ ಈ ತೀರ್ಮಾನಕ್ಕೆ ಸತ್ಯದ ಆಧಾರವಿದೆಯೇ? ಹಾಗೆ ನೋಡಿದರೆ, ರಾಮ ಎಂದೂ ರಾಜನಾಗಿ ಕೆಲಸ ಮಾಡಿಯೇ ಇಲ್ಲ. ಅವನು ನಾಮಮಾತ್ರದ ರಾಜ. ಆಡಳಿತದ ಹೊಣೆಯೆಲ್ಲ ಏನಿದ್ದರೂ, ವಾಲ್ಮೀಕಿ ಹೇಳುವಂತೆ, ಭರತನದು. ರಾಮ ತನ್ನ ರಾಜ್ಯ ಮತ್ತು ಪ್ರಜೆಗಳ ಕ್ಷೇಮಚಿಂತನೆಯಿಂದ ತಾನಾಗಿಯೇ ಬಿಡುಗಡೆ ಪಡೆದಿದ್ದಾನೆ. ರಾಮ ರಾಜನಾದ ನಂತರದ ಅವನ ದಿನಚರಿಯನ್ನು ವಾಲ್ಮೀಕಿ ಕೂಲಂಕಷವಾಗಿ ವಿವರಿಸುತ್ತಾನೆ (ಉತ್ತರಖಾಂಡ, ಸರ್ಗ:42, ಶ್ಲೋಕ:7). ಅದರಂತೆ ರಾಮನ ದಿನಚರಿಯಲ್ಲಿ ಎರಡು ಭಾಗಗಳು; ಮಧ್ಯಾಹ್ನದವರೆಗೆ ಮತ್ತು ಮಧ್ಯಾಹ್ನದ ನಂತರ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರ್ಮಿಕ ಅನುಷ್ಠಾನಗಳಲ್ಲಿ, ನಿತ್ಯಕರ್ಮಗಳಲ್ಲಿ ದಿನ ಹೋಗುತ್ತದೆ. ಮಧ್ಯಾಹ್ನದ ನಂತರ ವಿದೂಷಕರೊಡನೆ ಇಲ್ಲವೇ ಅಂತಃಪುರದಲ್ಲಿ ಕಾಲ ಕಳೆಯುತ್ತದೆ. ಅಂತಃಪುರದಲ್ಲಿ ಬೇಸರವಾದರೆ ವಿದೂಷಕರ ಬಳಿಗೆ, ವಿದೂಷಕರ ಬಳಿ ಬೇಸರವಾದರೆ ಮತ್ತೆ ಅಂತಃಪುರಕ್ಕೆ (ಉತ್ತರಕಾಂಡ ಸರ್ಗ 43. ಶ್ಲೋಕ 1); ಇದರ ಜೊತೆಗೆ, ರಾಮ ಅಂತಃಪುರದಲ್ಲಿ ಹೇಗೆ ಕಾಲ ಕಳೆಯುತ್ತಿದ್ದನೆಂಬುದನ್ನೂ ವಾಲ್ಮೀಕಿ ಸವಿಸ್ತಾರವಾಗಿ ವಿವರಿಸಿದ್ದಾನೆ. ಅಂತಃಪುರವಿದ್ದದ್ದು ಅಶೋಕವನ ಎಂಬ ಉದ್ಯಾನದಲ್ಲಿ. ರಾಮ ಊಟ ಮಾಡುತ್ತಿದ್ದುದೂ ಅಲ್ಲೇ. ಊಟದಲ್ಲಿ ಎಲ್ಲ ಬಗೆಯ ಸ್ವಾದಿಷ್ಟ ತಿನಿಸುಗಳೂ ಮಾಂಸ, ಹಣ್ಣುಗಳು ಮತ್ತು ಮದ್ಯವೂ ಇರುತ್ತಿದ್ದವು; ರಾಮ ಪಾನವಿರೋಧಿಯೇನೂ ಅಲ್ಲ. ಸ್ವತ: ತಾನೂ ಯಥೇಚ್ಛವಾಗಿ ಮದಿರೆ ಹೀರುವ ಜೊತೆಗೆ ಸೀತೆಯನ್ನೂ ಕುಡಿತಕ್ಕೆ ಎಳೆಯುತ್ತಿದ್ದನೆಂದು ವಾಲ್ಮೀಕಿ ಬರೆಯುತ್ತಾನೆ.’

ವಾಲ್ಮೀಕಿ ಮಾಡುವ ಬಣ್ಣನೆಯಂತೆ, ಆತನ ಅಂತಃಪುರವೂ ಕಿರಿದಲ್ಲ. ಅಲ್ಲಿ ನೃತ್ಯ, ಗಾಯನಗಳಲ್ಲಿ ನುರಿತರಾದ ಅಪ್ಸರೆಯರು, ಉರಗ ಮತ್ತು ಕಿನ್ನರ ಕನ್ಯೆಯರು ಇರುತ್ತಿದ್ದರು. ಇವರಲ್ಲದೆ ವಿವಿಧ ಪ್ರದೇಶಗಳಿಂದ ಕರೆತಂದ ಸುಂದರಿಯರೂ ಇದ್ದರು. ನರ್ತಿಸುವ ಈ ಹೆಂಗಳೆಯರ ನಡುವೆ ರಾಮ ಕುಡಿಯುತ್ತ ಕೂರುತ್ತಿದ್ದ. ತನ್ನ ಮನಸ್ಸನ್ನು ರಂಜಿಸಿದವರಿಗೆ ಹೂಮಾಲೆ ಹಾಕುತ್ತಿದ್ದ. ರಾಮ ‘ಹೆಂಗಳೆಯರ ಸಖರಲ್ಲಿ ರಾಜರ ರಾಜ’ ಎಂದು ವಾಲ್ಮೀಕಿ ವರ್ಣಿಸಿದ್ದಾನೆ. ಇದು ಒಂದು ದಿನದ ಕಥೆಯಾಗಿರದೆ, ನಿತ್ಯದ ಕಸುಬಾಗಿತ್ತು. (ಶಂಕರ್ ಎನ್.ಎಸ್ ಅನು: ಪುಟ:32-33).. ಹೀಗೆ ಇಡೀ ಲೇಖನದ ಉದ್ದಕ್ಕೂ ರಾಮನ ಬೇರೆ ಬೇರೆ ನೆಲೆಯ ಪುರುಷಾಧಿಕಾರದ ಮೋಸ ವಂಚನೆ ಎಲ್ಲದರ ಎಳೆಗಳನ್ನು ಬಿಡಿಸುತ್ತಾರೆ.

ಇನ್ನು ಕೃಷ್ಣನಿಗೆ ಸಂಬಂಧಿಸಿದ ಕಥೆಯೂ ಹೀಗೆಯೆ. ಯಾವ ಅರ್ಥದಲ್ಲಿ ಕೃಷ್ಣ ದೈವೀ ಪುರುಷ ಎಂದು ಅಂಬೇಡ್ಕರ್ ಒಂದೊಂದನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಮೊದಲನೆಯದಾಗಿ ಕೃಷ್ಣನ ಕಾಲಕ್ಕೂ ಮಹಾಭಾರತದ ಕಾಲಕ್ಕೂ ವ್ಯತ್ಯಾಸವಿದೆ, ಅದು ಹೇಗೆ ಕೃಷ್ಣ ಮಹಾಭಾರತದ ನಾಯಕನಾಗುತ್ತಾನೆ ಎನ್ನುವ ಪ್ರಶ್ನೆ ಎತ್ತುತ್ತಾರೆ. ರಾಮನನ್ನು ಚಿತ್ರಿಸಲು ವಾಲ್ಮೀಕಿ ರಾಮಾಯಣ ಮತ್ತು ಬೌದ್ಧರಾಮಾಯಣವನ್ನು ಆಕರವನ್ನಾಗಿ ಬಳಸಿದರೆ, ಕೃಷ್ಣನನ್ನು ಚಿತ್ರಿಸಲು ಬಹು ಆಕರಗಳನ್ನು ಬಳಸಿದ್ದಾರೆ. ವ್ಯಾಸನ ಮಹಾಭಾರತವನ್ನೂ ಒಳಗೊಂಡಂತೆ ವಿಷ್ಣು ಪುರಾಣ, ಭಾಗವತ, ಹರಿವಂಶದ ಪುರಾಣ, ಬ್ರಹುವೈವರ್ತ ಪುರಾಣಗಳನ್ನು ತೌಲನಿಕವಾಗಿ ನೋಡಿದ್ದಾರೆ. ಹೀಗೆ ಬಹುಪಠ್ಯಗಳನ್ನು ಆಧರಿಸಿ ಕೃಷ್ಣನ ಸರಣಿ ಕೊಲೆಗಳ ಬಗ್ಗೆ ಪಟ್ಟಿಕೊಡುತ್ತಾರೆ. ನ್ಯಾಯಯುತವಲ್ಲದ ಮೋಸ ವಂಚನೆ ಸ್ತ್ರೀಲೋಲುಪತೆಯನ್ನು ವಿವರವಾಗಿ ಬರೆಯುತ್ತಾರೆ. ಇಲ್ಲಿ ಕೃಷ್ಣನ ಹತ್ತಾರು ಮುಖಗಳನ್ನು ಅನಾವರಣ ಮಾಡುತ್ತಾರೆ. ಈ ಯಾವ ಅಂಶಗಳೂ ಕೃಷ್ಣನೊಬ್ಬ ದೈವ ಎನ್ನುವ ಭಾವನೆಯನ್ನು ಮೂಡಿಸುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)

ಅಂಬೇಡ್ಕರ್ ಕೃಷ್ಣನ ಬಗ್ಗೆ ಬರೆಯುತ್ತಾ, ‘ಕೃಷ್ಣನ ಅಸಭ್ಯತೆಗಳಲ್ಲೆಲ್ಲ ಅತ್ಯಂತ ಕೆಟ್ಟದ್ದು, ರಾಧೆಯೆಂಬ ಗೋಪಿಕೆಯೊಂದಿಗೆ ಆತ ಹೊಂದಿದ್ದ ಅಕ್ರಮ ಸಂಬಂಧ. ರಾಧೆ- ಕೃಷ್ಣರ ಅನೈತಿಕ ಸಂಬಂಧದ ವರ್ಣನೆ ಬ್ರಹುವೈವರ್ತ ಪುರಾಣದಲ್ಲಿ ಬರುತ್ತದೆ. ಕೃಷ್ಣನಿಗೆ ದೊರೆ ರುಕ್ಕಾಂಗದನ ತಂಗಿಯಾದ ರುಕ್ಮಿಣಿಯೊಡನೆ ಮದುವೆಯಾಗಿರುತ್ತದೆ. ರಾಧೆಗೂ ಇನ್ನೊಬ್ಬನೊಂದಿಗೆ ವಿವಾಹವಾಗಿದೆ. ತನ್ನ ಹೆಂಡತಿಯನ್ನೇ ಬಿಟ್ಟು ಬಂದ ಕೃಷ್ಣ, ಇನ್ನಾರದೋ ಹೆಂಡತಿಯಾದ ರಾಧೆಯನ್ನು ಮೋಹಿಸಿ, ಅವಳೊಡನೆ ಪಶ್ಚಾತ್ತಾಪವೇ ಇಲ್ಲದ ಪಾಪ ಸಂಬಂಧದಲ್ಲಿ ಬದುಕುತ್ತಾನೆ. ಕೃಷ್ಣ ಚಿಕ್ಕ ವಯಸ್ಸಿನಲ್ಲೇ ತನ್ನ ಹನ್ನೆರಡರ ಪ್ರಾಯದಲ್ಲೇ ಯೋಧನೂ, ರಾಜಕಾರಣಿಯೂ ಆಗಿದ್ದನೆನ್ನುತ್ತಾರೆ. ಆದರೆ ಯೋಧನಾಗಿ, ರಾಜಕಾರಣಿಯಾಗಿ ಅವನು ಮಾಡಿದ ಪ್ರತಿಯೊಂದು ಕೃತ್ಯವೂ ಅನೈತಿಕವಾದದ್ದು (ಶಂಕರ್ ಎನ್.ಎಸ್ ಅನು: ಪುಟ:32-33)’. ಹೀಗೆ ಕೃಷ್ಣನ ವಂಚನೆಯ ಜಾಲವನ್ನೆ ಒಂದೊಂದಾಗಿ ವಿವರಿಸುತ್ತಾರೆ. ಬಾಬಾ ಸಾಹೇಬರು ಈ ಇಬ್ಬರ ಪುರಾಣಗಳ ವಿಶ್ಲೇಷಣೆಯ ಮೂಲಕ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳನ್ನು ಶೋಧಿಸುತ್ತಾರೆ.

ಇಂದಿನ ಸ್ತ್ರೀವಾದಿ ಅಧ್ಯಯನಗಳು ಪಿತೃಪ್ರಧಾನ ಪುರುಷಾಧಿಕಾರದ ಬಗ್ಗೆ ಮಾತನಾಡುತ್ತವೆ. ಇಂತಹ ಅಧ್ಯಯನಕಾರರು ಅಂಬೇಡ್ಕರ್ ಅವರು ಬರೆದ ರಾಮ-ಕೃಷ್ಣರ ಕಥೆಗಳಲ್ಲಿ ಅಡಗಿರುವ ಪಿತೃಪ್ರಧಾನತೆಯ ಬೇರುಗಳನ್ನು ಕಾಣಿಸುವ ನೆಲೆಯನ್ನು ಪರಿಶೀಲಿಸಬೇಕು. ಹಾಗೆ ನೋಡಿದರೆ ಇದೊಂದು ಸ್ತ್ರೀವಾದದ ಗಂಡಾಳ್ವಿಕೆ ಶೋಧದ ಪಠ್ಯವೂ ಆಗಿದೆ. ‘ಲೋಕವನ್ನು ಆಳುತ್ತಿರುವುದು ಪಿತೃಪ್ರಧಾನತೆಯ ಗಂಡಾಳ್ವಿಕೆ. ಹಾಗಾಗಿ ಇದು ಸಮಾಜದ ಎಲ್ಲ ವಲಯಗಳಲ್ಲಿ ಆಳದಲ್ಲಿ ಬೇರೂರಿರುವ ಒಂದು ರೋಗ. ಈ ರೋಗವು ಗಂಡು ಹೆಣ್ಣನ್ನು ಕೂಡಿಯೆ ಬಲಿ ಪಡೆಯುತ್ತಿದೆ. ಪಿತೃಪ್ರಧಾನತೆಯು ಬೇಟೆಗಾರನ ಸ್ಥಾನದಲ್ಲಿದ್ದರೆ, ಗಂಡು ಹೆಣ್ಣುಗಳಿಬ್ಬರೂ ಬಲಿಪಶುವಿನ ಸ್ಥಾನದಲ್ಲಿದ್ದಾರೆ. ಆದರೆ ಗಂಡು ತನ್ನನ್ನೂ ಬಲಿ ಪಡೆಯುತ್ತಿರುವ ‘ಪಿತೃಪ್ರಧಾನತೆಯ’ ಒಳಗೇ ಸೇರಿಕೊಂಡು ತನ್ನನ್ನು ಬೇಟೆಗಾರನ ಅಂದರೆ ಆಳುವ `ಯಜಮಾನ’ನ ಸ್ಥಾನದಲ್ಲಿಯೂ, ಮಹಿಳೆಯನ್ನು ಬಲಿಪಶುವಿನ ಅಂದರೆ ‘ಗುಲಾಮಳ’ ಸ್ಥಾನದಲ್ಲಿಯೂ ನೋಡುತ್ತಿದ್ದಾನೆ. ಸ್ತ್ರೀವಾದದ ತೊಡಕೆಂದರೆ ಈ ಎದುರಾಳಿತನವನ್ನೆ ತನ್ನ ಅಸ್ತ್ರವನ್ನಾಗಿಸಿಕೊಂಡಿರುವುದು’ ಎಂದು ಆಫ್ರೋ-ಅಮೆರಿಕನ್ ಸ್ತ್ರೀವಾದಿ ಚಿಂತಕಿ ಮತ್ತು ಬರಹಗಾರ್ತಿ ‘ಬೆಲ್ ಹುಕ್ಸ್’ ಹೇಳುತ್ತಾಳೆ.

ಈ ಆಲೋಚನೆಗಳ ಎಳೆಗಳನ್ನು ಅಂಬೇಡ್ಕರ್ ಬಹಳ ಹಿಂದೆಯೇ ‘ಹಿಂದೂ ಧರ್ಮದ ಒಗಟುಗಳು’ ಸರಣಿ ಬರಹದಲ್ಲಿ ಶೋಧಿಸಿದ್ದಾರೆ.

ಇಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಜಾಗತಿಕವಾಗಿ ಗಮನ ಸೆಳೆಯುತ್ತಿದ್ದಾರೆ. ಕರ್ನಾಟಕ ಸರಕಾರ 2017ರಲ್ಲಿ ಬೆಂಗಳೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಂತೆ “ಕ್ವೆಸ್ಟ್ ಫಾರ್ ಈಕ್ವಿಟಿ: ರೀಕ್ಲೇಮಿಂಗ್ ಸೋಶಿಯಲ್ ಜಸ್ಟೀಸ್, ರೀವಿಸಿಟಿಂಗ್ ಅಂಬೇಡ್ಕರ್” ಥೀಮ್ ಆಧರಿಸಿ ಅಂತಾರಾಷ್ಟ್ರೀಯ ಸೆಮಿನಾರನ್ನು ಆಯೋಜಿಸಿತ್ತು. ಈ ಸೆಮಿನಾರಲ್ಲಿ ಜಗತ್ತಿನ ಬೇರೆ ಬೇರೆ ದೇಶದ ವಿದ್ವಾಂಸರು ಆಗಮಿಸಿ ಅಂಬೇಡ್ಕರ್ ಚಿಂತನೆಯ ಪ್ರಭಾವ ಮತ್ತು ಪ್ರೇರಣೆಗಳ ಬಗ್ಗೆ ವಿಸ್ತಾರವಾದ ಚರ್ಚೆ ಮಾಡಿದ್ದರು. ಈ ಸೆಮಿನಾರಿನಲ್ಲಿ ಮಂಡಿಸಿದ 59 ಜಾಗತಿಕ ವಿದ್ವಾಂಸರ ಸಂಶೋಧನ ಲೇಖನಗಳ ಐದು ಸಂಪುಟಗಳನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಕಟಿಸಿದೆ. ಈ ಸಂಕಲನಗಳನ್ನು ‘ಬಿ.ಆರ್. ಅಂಬೇಡ್ಕರ್: ಕ್ವೆಸ್ಟ್ ಫಾರ್ ಜಸ್ಟೀಸ್’ ಹೆಸರಲ್ಲಿ ಆಕಾಶ್ ಸಿಂಗ್ ರಾಥೋರ್ ಸಂಪಾದನೆ ಮಾಡಿದ್ದಾರೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)

ಒಂದನೆ ಸಂಪುಟದಲ್ಲಿ ರಾಜಕೀಯ ನ್ಯಾಯದ ಬಗ್ಗೆಯೂ, ಎರಡನೆ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆಯೂ, ಮೂರನೆ ಸಂಪುಟದಲ್ಲಿ ಕಾನೂನು ಮತ್ತು ಆರ್ಥಿಕ ನ್ಯಾಯದ ಬಗ್ಗೆಯೂ, ನಾಲ್ಕನೆ ಸಂಪುಟದಲ್ಲಿ ಲಿಂಗ ಮತ್ತು ಜನಾಂಗೀಯ ನ್ಯಾಯದ ಬಗ್ಗೆಯೂ, ಐದನೆ ಸಂಪುಟದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ನ್ಯಾಯದ ಬಗ್ಗೆಯೂ ಇರುವ ಲೇಖನಗಳನ್ನು ಸಂಪಾದಿಸಲಾಗಿದೆ.

ಈ ಸಂಪುಟಗಳು ಕನ್ನಡದಲ್ಲಿ ಅನುವಾದ ಆಗುತ್ತಿವೆ. ಜಾಗತಿಕವಾಗಿ ಅಂಬೇಡ್ಕರ್ ಬಗೆಗೆ ಗಮನಸೆಳೆಯಲು ಈ ಸಂಪುಟಗಳು ಮಹತ್ವದ ಆಕರಗಳಾಗಿವೆ. ಹೀಗೆ ಕಳೆದ ದಶಕದಲ್ಲಿ ಅಂಬೇಡ್ಕರ್ ಕುರಿತಂತೆ ಜಾಗತಿಕ ಗಮನಸೆಳೆಯುವ ಪುಸ್ತಕಗಳನ್ನು ಭಾರತೀಯರು ಮತ್ತು ವಿದೇಶಗಳ ವಿದ್ವಾಂಸರೂ ಬರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕೃತಿಗಳ ಬಗೆಗೆ ಮರು ವಿಮರ್ಶೆ ಮಾಡುವುದು, ಅವರ ಕೃತಿಗಳನ್ನು ಸಮಕಾಲೀನ ವಿದ್ಯಮಾನಗಳ ಜತೆಗಿಟ್ಟು ಮರು ಓದಿಗೆ ಒಳಪಡಿಸುವುದು ಬಹಳ ಮಹತ್ವದ ಕೆಲಸವಾಗಿದೆ.

ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಮೂಲವನ್ನು ಹುಡುಕಲು ಹಿಂದೂ ಧರ್ಮವು ಹುಟ್ಟುಹಾಕಿದ ಕಥನಗಳನ್ನು ಶೋಧಿಸತೊಡಗಿದರು. ಇದರ ಫಲವೇ ‘ಹಿಂದೂ ಧರ್ಮದ ಒಗಟುಗಳು’ ಕುರಿತ ಬರಹಗಳ ಸರಣಿಯಾಗಿದೆ.

ಇದಕ್ಕೂ ಮೊದಲು ಹಿಂದೂ ಧರ್ಮದ ಸನಾತನೆಯ ಬಗ್ಗೆ ಬರೆಯುವ ಅಂಬೇಡ್ಕರ್ ಅವರು ಈ ಸನಾತನೆಯ ಬೇರುಗಳು ಅಡಗಿರುವ ‘ಬ್ರಾಹ್ಮಣ್ಯ’ ಕುರಿತಾಗಿ ಚರ್ಚಿಸುತ್ತಾರೆ. ಕುತೂಹಲಕ್ಕೆ ಅಂಬೇಡ್ಕರ್ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಹಿಂದೂ ಸನಾತನತೆಯನ್ನು ವಿಶ್ಲೇಷಣೆಗೆ ಒಡ್ಡುವಾಗ ‘ಬ್ರಾಹ್ಮಣ’ ಎನ್ನುವ ಪದವನ್ನು ಅವರ ಚರ್ಚೆ ಸಂವಾದಗಳಲ್ಲಿ ಎಷ್ಟುಬಾರಿ ಉಲ್ಲೇಖಿಸಿರಬಹುದು ಎಂದು ಪರಿಶೀಲಿಸಿದರೆ, ಕನ್ನಡದಲ್ಲಿ ಪ್ರಕಟವಾದ 22 ಸಂಪುಟಗಳಲ್ಲಿ 3894ರಷ್ಟು ಈ ಪದವನ್ನು ಉಲ್ಲೇಖಿಸಿ ಬೇರೆ ಬೇರೆ ನೆಲೆಯ ಚರ್ಚೆಗಳನ್ನು ಮಾಡಿದ್ದಾರೆ. ಇದನ್ನು 19 ಇಂಗ್ಲಿಷ್ ಸಂಪುಟಗಳ ಜತೆ ತಾಳೆ ನೋಡಿದರೆ 3399 ಬಾರಿ ಉಲ್ಲೇಖಿಸಿದ್ದಾರೆ. ಕನ್ನಡ ಅನುವಾದಕ್ಕೆ ಕೇವಲ ಇಂಗ್ಲಿಷ್ ಆಕರವನ್ನಷ್ಟೇ ಅಲ್ಲದೆ ಮರಾಠಿ ಭಾಷೆಯ ಬರಹ ಭಾಷಣಗಳನ್ನೂ, ಅಪ್ರಕಟಿತ ಹಸ್ತಪ್ರತಿಗಳನ್ನೂ ಹೆಚ್ಚುವರಿಯಾಗಿ ಒಳಗೊಂಡ ಕಾರಣ ‘ಬ್ರಾಹ್ಮಣ’ ಉಲ್ಲೇಖ ಇಂಗ್ಲಿಷ್ ಸಂಪುಟಗಳಿಗಿಂತ ಹೆಚ್ಚಾಗಿರಲು ಸಾಧ್ಯವಿದೆ.

ಡಾ. ಬಾಬಾಸಾಹೇಬರು ಬಹುತೇಕ ಅಂದರೆ ಶೇ. 80ರಷ್ಟು ‘ಬ್ರಾಹ್ಮಣ’ ಪದವನ್ನು ಸನಾತನತೆ, ಅಸ್ಪೃಶ್ಯತೆಯ ಆಚರಣೆ, ದಲಿತರ ಶೋಷಣೆ, ಜಾತಿಭೇದ, ತರತಮ, ಉಚ್ಚ-ನೀಚ, ಸಂಸ್ಕೃತಿ ಮೌಢ್ಯದ ಹೇರಿಕೆ, ಪುರೋಹಿತಶಾಹಿಯ… ಕುರಿತಂತೆ ನಡೆಸಿದ ಚರ್ಚೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಅಂಬೇಡ್ಕರ್ ಬಳಸಿದ ಸನಾತನ ಸಂಸ್ಕೃತಿ, ಬ್ರಾಹ್ಮಣ್ಯ, ಮನುವಾದಿ, ಬ್ರಾಹ್ಮಣಶಾಹಿ, ವೈದಿಕ, ವೈದಿಕಶಾಹಿ ಪದಬಳಕೆಯನ್ನು ಪರಿಗಣಿಸಿಲ್ಲ. ಇವುಗಳನ್ನೂ ಒಳಗೊಂಡರೆ ಈ ಉಲ್ಲೇಖಗಳ ಸಂಖ್ಯೆ ಇನ್ನೂ ಹೆಚ್ಚಿದೆ. ಇವೆಲ್ಲ ಪರೋಕ್ಷವಾಗಿ ಬ್ರಾಹ್ಮಣ, ಬ್ರಾಹ್ಮಣ್ಯ, ಬ್ರಾಹ್ಮಣಶಾಹಿಯ ಕಟು ಟೀಕೆಗಳೇ ಆಗಿವೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 2)

ಇತಿಹಾಸಪೂರ್ವ ಕಾಲದಿಂದಲೂ ಜನರ ತಲೆಯಲ್ಲಿ ಮೌಢ್ಯವನ್ನು ಬಿತ್ತಿ ಅದನ್ನೆ ಜನರ ನಂಬಿಕೆಗಳು ಎಂದು ಒಪ್ಪಿಸಿ ಅಸ್ಪೃಶ್ಯ, ದಲಿತ, ದಮನಿತ, ಹಿಂದುಳಿದ, ಮಹಿಳೆ, ಕೆಳವರ್ಗದ ಜನರನ್ನು ರಾಜಶಾಹಿ ಮತ್ತು ಬ್ರಾಹ್ಮಣಶಾಹಿಯ ಈ ಕೂಡು ಹೊಂದಾಣಿಕೆಯು ಆಳುತ್ತಾ ಬಂದಿದೆ. ಇದು ಆಧುನಿಕ ಕಾಲದಲ್ಲಿಯೂ ಹೊಸ ಹೊಸ ಪಟ್ಟುಗಳೊಂದಿಗೆ ಜೀವಂತವಾಗಿಯೇ ಮುಂದುವರಿದಿದೆ. ಸನಾತನ ತರತಮ-ಉಚ್ಚನೀಚ ಭೇದಗಳು ಡಿಜಿಟಲ್ ಮಾಧ್ಯಮದಲ್ಲಿಯೂ ನಿರಂತರ ವೇಶ ಬದಲಿಸಿಕೊಂಡು ಜಾರಿಗೊಳ್ಳುತ್ತಲೇ ಇವೆ.

ಹಾಗಾಗಿ ಬ್ರಾಹ್ಮಣ, ಬ್ರಾಹ್ಮಣಶಾಹಿ, ಸನಾತನ, ಪುರೋಹಿತಶಾಹಿಯ ಹುನ್ನಾರಗಳನ್ನು ಬಯಲು ಮಾಡಲು ಈ ಪದಬಳಕೆಯು ಈಗ ಗುರುತಿಸಿಕೊಳ್ಳುವ ‘ಬ್ರಾಹ್ಮಣ’ ಜಾತಿಯನ್ನು ಪ್ರತಿನಿಧಿಸುವ ಜನರನ್ನು ಆಧರಿಸಿರದೆ, ಕ್ರಿಸ್ತಪೂರ್ವ ಕಾಲದಿಂದಲೂ ಬ್ರಾಹ್ಮಣ್ಯದ ಹೆಸರಲ್ಲಿ ಮೌಢ್ಯ ಬಿತ್ತಿದ ಒಂದು ದೊಡ್ಡ ವೈದಿಕ ಪರಂಪರೆಯನ್ನು ಆಧರಿಸಿದೆ. ಹಾಗಾಗಿ ಸನಾತನ ಮೌಢ್ಯದ ಚರ್ಚೆಗೆ ಬ್ರಾಹ್ಮಣ, ಬ್ರಾಹ್ಮಣ್ಯದ ಉಲ್ಲೇಖಗಳು ಇಂದಿಗೂ ಎಂದಿಗೂ ಸಂಶೋಧನೆ ಮತ್ತು ಅಧ್ಯಯನಗಳ ಆಕರವಾಗಿರುತ್ತವೆ. ಹಾಗಾಗಿ ಕೇವಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಈ ಚಾರಿತ್ರಿಕ ಸತ್ಯಗಳನ್ನು ಅಲ್ಲಗಳೆಯಲಾಗದು/ಅಲ್ಲಗಳೆಯಬಾರದು ಕೂಡ. ಈ ವಿಷಯದಲ್ಲಿ ಸ್ವತಃ ‘ಬ್ರಾಹ್ಮಣ’ ಸಮುದಾಯದಲ್ಲಿ ಹುಟ್ಟಿದ ಜನರೂ ಪಾರಂಪರಿಕ ಬ್ರಾಹ್ಮಣ್ಯದ ಮೌಢ್ಯವನ್ನು ಎಲ್ಲರ ಜೊತೆ ಸೇರಿ ವಿರೋಧಿಸಬೇಕು. ಅರಿತೋ ಅರಿಯದೆಯೋ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಈ ಮೌಢ್ಯಗಳನ್ನು ವೈಯಕ್ತಿಕ ಮಟ್ಟದಲ್ಲಿ ಪಾಲಿಸುತ್ತಿದ್ದರೆ ಅದನ್ನವರು ಬಿಟ್ಟು ಈ ಪಾರಂಪರಿಕ ಮೌಢ್ಯದ ಸನಾತನ ವಾರಸುದಾರಿಕೆಯಿಂದ ಹೊರಬರಬೇಕು. ಹೀಗಾಗಿ ಪಾರಂಪರಿಕ ಬ್ರಾಹ್ಮಣ್ಯದ ಸನಾತನತೆಯನ್ನು ವಿರೋಧಿಸುವಾಗ ಈಗಿನ ‘ಬ್ರಾಹ್ಮಣ’ ಸಮುದಾಯವನ್ನು ಗುರಿಮಾಡುವುದು ಹೇಗೆ ಅಪರಾಧವೋ, ಇದೇ ಪಾರಂಪರಿಕ ಬ್ರಾಹ್ಮಣ್ಯದ ಮೌಢ್ಯಗಳ ಹೇರಿಕೆಯನ್ನು ಬೆಂಬಲಿಸುತ್ತಾ ತನ್ನ ‘ಬ್ರಾಹ್ಮಣ’ ಜಾತಿಯನ್ನು ಸಮರ್ಥಿಸುವುದು ಕೂಡ ಅಷ್ಟೇ ಅಪರಾಧವಾಗುತ್ತದೆ. ಈ ಚರ್ಚೆಯ ಮೂಲಕ ಅಂಬೇಡ್ಕರ್ ಅವರು ಹಿಂದೂ ಧರ್ಮದ ಒಗಟುಗಳು ಕೃತಿಯಲ್ಲಿ ಸನಾತನತೆಯ ಆಳದ ಬೇರುಗಳನ್ನು ಕಾಣಿಸುತ್ತಾರೆ.

(ಮುಗಿಯಿತು..)

(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

arun jolada kudligi
ಅರುಣ್‌ ಜೋಳದ ಕೂಡ್ಲಿಗಿ
+ posts

ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...