ಕೆಂಗಣ್ಣು ಬಿಟ್ಟು ಚೀನೀಯರನ್ನು ಹೆದರಿಸಬೇಕೆಂದು ಮೂದಲಿಸುತ್ತಿದ್ದ ಮೋದಿ, ಆ ಮಾತನ್ನೇ ಮರೆತರೇಕೆ?! (ಭಾಗ-2)

Date:

ಚೀನಾದೊಂದಿಗೆ ಸರಹದ್ದಿನ ಸವಾಲನ್ನು ಕುರಿತು ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ ಮೋದಿ ಸರ್ಕಾರ. “ನೋಡ್ರೀ, ಚೀನಾ ನಮಗಿಂತ ದೊಡ್ಡ ಅರ್ಥವ್ಯವಸ್ಥೆ, ನಾವೇನು ಮಾಡೋಕಾಗುತ್ತೆ? ಚೀನಾ ದೇಶಕ್ಕಿಂತ ಸಣ್ಣ ಅರ್ಥವ್ಯವಸ್ಥೆ ನಮ್ಮದು. ನಮಗಿಂತ ದೊಡ್ಡ ಅರ್ಥವ್ಯವಸ್ಥೆಯ ಜೊತೆ ಜಗಳಕ್ಕೆ ನಿಲ್ಲಲು ಬರುತ್ತದೇನು?” ಎಂಬುದು ಮೋದಿ ಸರ್ಕಾರದ ನಿಲುವು. ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾತನ್ನು ಆಡಿದವರು ವಿದೇಶಾಂಗ ಮಂತ್ರಿ ಜೈಶಂಕರ್.

“ನಮ್ಮ ಗಡಿಗಳನ್ನು ಯಾರೂ ದಾಟಿಲ್ಲ, ಯಾರೂ ನುಗ್ಗಿ ಒಳ ಬಂದೂ ಇಲ್ಲ”  ಎಂದು ಚೀನಾ ದೇಶಕ್ಕೆ ಪ್ರಧಾನಿ ಮೋದಿ 2020ರ ಜೂನ್ 19ರಂದು ನೀಡಿದ್ದ ದೋಷಮುಕ್ತಿ ಪ್ರಮಾಣಪತ್ರಕ್ಕೆ ವಾಪಸು ಬರೋಣ.

ಪ್ರಧಾನಿ ಹೇಳಿಕೆಯೇ ನಿಜವಾಗಿದ್ದಲ್ಲಿ 2024ರ ಡಿಸೆಂಬರ್ ಮೂರರಂದು ಲೋಕಸಭೆಯಲ್ಲಿ ವಿದೇಶಾಂಗ ಮಂತ್ರಿ ನೀಡಿದ ಹೇಳಿಕೆಯಲ್ಲಿ, Honble Speaker Sir, The House is well aware of the circumstances leading up to the violent clashes in Galwan Valley in June 2020……. ಎಂಬ ಪ್ರಸ್ತಾಪ ಇದ್ದದ್ದಾರೂ ಯಾಕೆ? ಜೈಶಂಕರ್ ಹೇಳಿಕೆಯು The resumption of patrolling to the traditional areas is underway ಎನ್ನುತ್ತದೆಯೇ ವಿನಾ ಈಗಾಗಲೇ ಪೆಟ್ರೋಲಿಂಗ್ (ಗಸ್ತು) ನಡೆಯುತ್ತಿದ್ದ ಸ್ಥಳಗಳಲ್ಲಿ ಗಸ್ತು ಪುನರಾರಂಭ ಆಗಿದೆ ಎಂದಿಲ್ಲ ಎಂಬುದು ಗಮನಾರ್ಹ. ಜೈಶಂಕರ್ ಬಳಸಿರುವ de escalation (ಪರಾಕಾಷ್ಠೆಯ ಸ್ಥಿತಿಯನ್ನು ತಣಿಸಿ ತಣ್ಣಗಾಗಿಸುವ ಕ್ರಿಯೆ) ಎಂಬ ಪದಗಳನ್ನು ಚೀನೀ ಹೇಳಿಕೆಯಲ್ಲಿ ಬಳಸಿಲ್ಲ.

ಚೀನಾದೊಂದಿಗಿನ ಹಾಲಿ ಬಿಕ್ಕಟ್ಟು ಆರಂಭ ಆದದ್ದು 1988ರಲ್ಲಿ ಎಂದು ಜೈಶಂಕರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಿದ್ದಾಗ 1962ರಲ್ಲಿ ನೆಹರೂ ಪ್ರಧಾನಿಯಾಗಿದ್ದಾಗ ಚೀನಾದೊಂದಿಗೆ ನಡೆದ ಯುದ್ಧವನ್ನು ಎಳೆದು ತರುವುದರಲ್ಲಿ ಯಾವ ಅರ್ಥವಿದೆ ಎಂದು ವಿದೇಶಾಂಗ ವ್ಯವಹಾರಗಳ ತಜ್ಞರು ಪ್ರಶ್ನಿಸಿದ್ದಾರೆ.

Jai Shankar
ವಿದೇಶಾಂಗ ಸಚಿವ ಜೈಶಂಕರ್

ಪೂರ್ವ ಲದ್ದಾಖ್‌ನ ಚುಮಾರ್ ಹಳ್ಳಿಯ ಬಳಿ ಚೀನೀ ದಾಳಿ ನಡೆದದ್ದು 2014ರಲ್ಲಿ ಮೋದಿಯವರು ಪ್ರಧಾನಿಯಾಗಿ  ಅಧಿಕಾರ ವಹಿಸಿಕೊಂಡು, ಚೀನೀ ಪ್ರಧಾನಿ ಝಿನ್ ಪಿಂಗ್ ಅವರನ್ನು ಭಾರತಕ್ಕೆ ಬರಮಾಡಿಕೊಂಡು ಅಹ್ಮದಾಬಾದಿನ ಸಾಬರಮತಿ ದಂಡೆಯಲ್ಲಿ ಅವರೊಂದಿಗೆ ಉಯ್ಯಾಲೆಯಲ್ಲಿ ಜೀಕುತ್ತಿದ್ದಾಗ. 15 ಸಾವಿರ ಸೈನಿಕರು ತೊಡಗಿಕೊಂಡಿದ್ದ ಈ ಘರ್ಷಣೆ ಹಲವು ದಿನಗಳ ಕಾಲ ನಡೆದಿತ್ತು. ಚೀನೀ ಪ್ರಧಾನಿಯ ಭಾರತ ಪ್ರವಾಸದ ಸಂದರ್ಭದಲ್ಲಿ ಜರುಗಿದ ಈ ಘರ್ಷಣೆಗೆ ಉದ್ದೇಶಪೂರ್ವಕವಾಗಿ ಹೆಚ್ಚಿನ ಪ್ರಚಾರ ನೀಡಲಿಲ್ಲ. ಚುಮಾರ್ ಘರ್ಷಣೆ ಮತ್ತು 2017ರ ಡೋಕ್ಲಾಮ್ ಘರ್ಷಣೆಯ ಕುರಿತು ಹೇಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಕೆಂಗಣ್ಣು ಬಿಟ್ಟು ಚೀನೀಯರನ್ನು ಹೆದರಿಸಬೇಕೆಂದು ಮೂದಲಿಸುತ್ತಿದ್ದ ಮೋದಿ, ಆ ಮಾತನ್ನೇ ಮರೆತರೇಕೆ?! (ಭಾಗ-1)

ಭಾರತೀಯ ಸೈನಿಕರು ಪೂರ್ವ ಲದ್ದಾಖ್‌ನ ಡೆಪ್ಸಾಂಗ್‌ನಲ್ಲಿ ನಮ್ಮ  ನಮ್ಮ ದಾವೆಯ ಗಡಿರೇಖೆಯಿಂದ ಮೊದಲುಗೊಂಡು ಬಾಟಲ್ ನೆಕ್ ಜಂಕ್ಷನ್‌ನಿಂದ ಮುಂದೆ ಐದು ಗಸ್ತು (ಪೆಟ್ರೋಲಿಂಗ್) ಸ್ಥಳಗಳ ತನಕ ಗಸ್ತು ತಿರುಗುತ್ತಿದ್ದರು. 2020ರ ಚೀನೀ ಆಕ್ರಮಣದ ನಂತರ ಈ ಪರಿಸ್ಥಿತಿ ಬದಲಾಗಿದೆ. ಈ ಗಸ್ತು ಕೇಂದ್ರಗಳ ನಡುವೆ ಮೊದಲಿನಂತೆ ನಮ್ಮ ಯೋಧರು ಗಸ್ತು ತಿರುಗುವ ಪರಿಸ್ಥಿತಿ ಏರ್ಪಡುವುದು ಯಾವಾಗ? ಡೆಮ್ಚೋಕ್‌ನ ಮೂರು ಗಸ್ತು ಸ್ಥಳಗಳು, ಗೋಗ್ರಾ ಬಿಸಿನೀರಿನ ಬುಗ್ಗೆ ಕ್ಷೇತ್ರದ ಮೂರು ಪೆಟ್ರೋಲಿಂಗ್ ಪಾಯಿಂಟ್‌ಗಳಿಗೂ ಇದೇ ಪ್ರಶ್ನೆ ಅನ್ವಯಿಸುತ್ತದೆ. ಚುಶುಲ್‌ನ ಹೆಲ್ಮೆಟ್ ಟಾಪ್, ಮುಕ್ಪಾ ರೇ, ರೆಜಾಂಗ್ ಲಾ, ರಿನ್ಚೆನ್ ಲಾ, ಟೇಬಲ್ ಟಾಪ್ ಹಾಗೂ ಗುರುಂಗ್ ಗುಡ್ಡಗಳ ಗೋಮಾಳಗಳು- ಹುಲ್ಲುಗಾವಲುಗಳಲ್ಲಿ ನಮ್ಮ ಪಶುಪಾಲಕರು ಮಂದೆಗಳನ್ನು ಒಯ್ಯುತ್ತಿದ್ದರು. ಈಗಲೂ ಒಯ್ಯುವ ಪರಿಸ್ಥಿತಿ ಇದೆಯೇ ಎಂಬ ಪ್ರಶ್ನೆಗಳಿಗೆ ನಮ್ಮ ಸರ್ಕಾರ ನಿಚ್ಚಳ ಉತ್ತರ ನೀಡಬೇಕಿದೆ.

ಈ ಪೈಕಿ ಕೆಲ ಗೋಮಾಳಗಳು, ಗೋಗ್ರಾ ಬಿಸಿ ನೀರಿನ ಊಟೆ ಹಾಗೂ ಪ್ಯಾಂಗಾಂಗ್ ಸೀಮೆಗಳಿಗೆ ಪಶುಪಾಲಕರು ಮತ್ತು ಸೇನಾ ಪಡೆಗಳ ಗಸ್ತಿಗೆ ಚೀನಾ ಇತ್ತೀಚೆಗೆ ಒಪ್ಪಿದೆಯೆಂದು ಹೇಳಲಾಗುತ್ತಿದೆ. ಆದರೆ ಚೀನೀ ಸರ್ಕಾರದ ಹೇಳಿಕೆಯಲ್ಲಿ ಈ ಪ್ರಸ್ತಾಪ ಇಲ್ಲ. “ಚೀನಾದೊಂದಿಗೆ ಮಾತುಕತೆ ಮುಂದುವರೆಸುವುದು ಮತ್ತು ಆ ಮೂಲಕ 2020ರ ಮಧ್ಯಭಾಗದಲ್ಲಿದ್ದ ಯಥಾಸ್ಥಿತಿಗೆ ಮರಳುವುದು ನಮ್ಮ ಗುರಿ” ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು 2024ರ ಜನವರಿ 12ರಂದು ನಡೆಸಿದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ದೇಶದೊಳಕ್ಕೆ ಯಾರೂ ನುಗ್ಗಿಲ್ಲವೆಂದು ಮೋದಿಯವರು 2020ರ ಜೂನ್ 19ರಂದು ಹೇಳಿದ ನಾಲ್ಕು ವರ್ಷಗಳ ನಂತರ ಸೇನಾ ಮುಖ್ಯಸ್ಥರು ನೀಡಿದ ಈ ಹೇಳಿಕೆ ಏನನ್ನು ಧ್ವನಿಸುತ್ತದೆ? ಯಾರೂ ನುಗ್ಗಿ ಆಕ್ರಮಿಸಿಕೊಂಡಿಲ್ಲ ಎಂಬುದೇ ನಿಜವಾದರೆ 2020ರ ಮಧ್ಯಭಾಗದಲ್ಲಿದ್ದ ಯಥಾಸ್ಥಿತಿಗೆ ಮರಳುವುದೇ ನಮ್ಮ ಗುರಿ ಎಂದು ಸೇನಾ ಮುಖ್ಯಸ್ಥರು ಯಾಕೆ ಹೇಳಿದರು?

2020ರಲ್ಲಿ ತಾನು ವಶಪಡಿಸಿಕೊಂಡ 2,000 ಚದರ ಕಿಲೋಮೀಟರುಗಳ ಲದ್ದಾಖ್ ಪ್ರದೇಶಕ್ಕೆ ಭಾರತೀಯ ಸೇನಾ ಪಡೆಗಳನ್ನು ಚೀನಾ ಬಿಟ್ಟುಕೊಳ್ಳುತ್ತಿಲ್ಲ ಎಂಬುದು ನಿಚ್ಚಳ. 18 ಸುತ್ತುಗಳ ಮಿಲಿಟರಿ ಮಾತುಕತೆಗಳ ನಂತರವೂ ಚೀನಾ ತನ್ನ ಕಪಿಮುಷ್ಠಿಯನ್ನು ಸಡಿಲಿಸಿಲ್ಲ. 2020ಕ್ಕೆ ಮುನ್ನ ಭಾರತ ಗಸ್ತು ತಿರುಗುತ್ತಿದ್ದ 26 ಪಾಯಿಂಟುಗಳು ಕೈ ತಪ್ಪಿವೆ. ಡೆಪ್ಸಾಂಗ್ ಮತ್ತು ಡೆಮ್ಚೋಕ್ ಸನಿಹ ಸುಳಿಯಲಾಗುತ್ತಿಲ್ಲ.

ಈ ನಡುವೆ ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾದಂತಹ ಭಾರತದ ನೆರೆಹೊರೆಯ ದೇಶಗಳಲ್ಲಿ ತಳವೂರಿ ಭಾರತವನ್ನು ಸುತ್ತುವರೆಯುವ ಸುದೀರ್ಘ ಕೂಟನೀತಿಯಲ್ಲಿ ಯಶಸ್ಸು ಕಾಣತೊಡಗಿದೆ ಚೀನಾ.

maldivies china
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು

ಪಶ್ಚಿಮದ ಅಕ್ಸಯ್ ಚಿನ್ ಪ್ರದೇಶದ ಸುಮಾರು 38 ಸಾವಿರ ಚದರ ಕಿ.ಮೀ.ಗಳಷ್ಟು ಭೂಭಾಗವನ್ನು ಚೀನಾ ನಿಯಂತ್ರಿಸುತ್ತದೆ. ಈ ಭೂಭಾಗ ತನ್ನ ಲದ್ದಾಖ್ ಸೀಮೆಗೆ ಸೇರಬೇಕಾದದ್ದು ಎಂಬುದು ಭಾರತ ಲಾಗಾಯಿತಿನಿಂದ ಹೂಡಿರುವ ದಾವೆ. ಪೂರ್ವದಲ್ಲಿ ಭಾರತ ನಿಯಂತ್ರಿಸುವ 90 ಸಾವಿರ ಚದರ ಕಿ.ಮೀ.ಭೂಭಾಗ ತನಗೆ ಸೇರಬೇಕಾದದ್ದು ಎಂಬುದು ಚೀನಾದ ದಾವೆ. ಅರುಣಾಚಲ ಪ್ರದೇಶವೂ ಈ 90 ಸಾವಿರ ಚದರ ಕಿ.ಮೀ.ಗಳಲ್ಲಿ ಸೇರಿದೆ ಎನ್ನುತ್ತ ಬಂದಿದೆ ಚೀನಾ. ಚೀನೀ ನಿಯಂತ್ರಣದಲ್ಲಿರುವ ಟಿಬೆಟ್ ಭಾರತದ ಹಿಮಾಚಲ ಮತ್ತು ಉತ್ತರಾಖಂಡ ರಾಜ್ಯಗಳನ್ನು ಮುಖಾಮುಖಿ ಆಗುವ ಪ್ರದೇಶಗಳ ಮೇಲೆಯೂ ಚೀನಾದ ಕಣ್ಣಿದೆ. 1947ರಲ್ಲಿ ಭಾರತದಿಂದ ಕಾಲು ಕಿತ್ತ ಬ್ರಿಟಿಷರ ಆಡಳಿತ ದೇಶದ ಗಡಿಗಳನ್ನು ನಿಚ್ಚಳವಾಗಿ ಗುರುತಿಸದೆ ಹೋಗಿತ್ತು. ಬ್ರಿಟಿಷರು ಮಾಡಿಕೊಂಡಿದ್ದ ಸ್ವಾತಂತ್ರ್ಯಪೂರ್ವ ದ್ವಿಪಕ್ಷೀಯ ಒಪ್ಪಂದಗಳನ್ನೂ ಚೀನಾ ತಿರಸ್ಕರಿಸಿತ್ತು. ಗಡಿ ತಂಟೆ ಮತ್ತು ಟಿಬೆಟ್ ಮೇಲೆ ಚೀನಾದ ನಿಯಂತ್ರಣದ ವಿಷಯಗಳು ಉಭಯ ದೇಶಗಳ ನಡುವಣ ಸಂಬಂಧಗಳನ್ನು ಹದಗೆಡಿಸಿದ್ದವು. ಟಿಬೆಟ್ ಮೇಲಿನ ಚೀನಾದ ಸಾರ್ವಭೌಮ ಅಧಿಕಾರವನ್ನು  ಮಾನ್ಯ ಮಾಡುವ ಒಪ್ಪಂದಕ್ಕೆ ನೆಹರೂ ಸಹಿ ಹಾಕಿದ್ದರು. ಆದರೆ ಸ್ವಾತಂತ್ರ್ಯವನ್ನು ಬಯಸಿ ಟಿಬೆಟಿಗರು ಚೀನಾ ವಿರುದ್ಧ ಬಂಡಾಯವೆದ್ದರು. ಚೀನಾ ಉಕ್ಕಿನ ಹಸ್ತದಿಂದ ಈ ಬಂಡಾಯವನ್ನು ಹೊಸಕಿ ಹಾಕಿತು. ಟಿಬೆಟ್‌ನ ಆಧ್ಯಾತ್ಮಿಕ ಗುರು ದಲೈಲಾಮಾ ಪರಾರಿಯಾಗಿ ಭಾರತದಲ್ಲಿ ಆಶ್ರಯ ಪಡೆದರು. ಸಾವಿರಾರು ಟಿಬೆಟ್ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಲಾಯಿತು. ಟಿಬೆಟಿಗರ ಬಂಡಾಯವನ್ನು ಬಡಿದೆಬ್ಬಿಸಿದ್ದು ನೆಹರೂ ಎಂದು ಭಾವಿಸಿದ ಚೀನಾ ಗಡಿ ವಿವಾದ ಕುರಿತೂ ಕಠಿಣ ನಿಲುವು ತಳೆಯಿತು. 1960ರಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾ ಮುಖ್ಯಸ್ಥ ಚೌ ಎನ್ ಲೈ ಪೂರ್ವದ ಗಡಿ ಪ್ರದೇಶವನ್ನು ಮಿಲಿಟರಿ ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಭಾರತದ ಮುಂದಿಟ್ಟರು. ಪ್ರತಿಯಾಗಿ ಪಶ್ಚಿಮ ಗಡಿ ವಲಯದ ಅಕ್ಸಯ್ ಚಿನ್‌ನಲ್ಲಿ ತನ್ನ ದಾವೆಯನ್ನು ಭಾರತ ಬಿಟ್ಟುಕೊಡಬೇಕು ಎಂದರು. ಈ ಪ್ರದೇಶ ಆ ಹೊತ್ತಿಗಾಗಲೆ ಚೀನಾದ ಪರೋಕ್ಷ ನಿಯಂತ್ರಣದಲ್ಲಿತ್ತು. ಪೂರ್ವದಲ್ಲಿ ತಾನು ಅರುಣಾಚಲ ಪ್ರದೇಶದ ದಾವೆಯನ್ನು ಕೈ ಬಿಡುವುದಾಗಿಯೂ ಚೀನಾ ಹೇಳಿತ್ತು. ಆದರೆ ನೆಹರೂ ಸರ್ಕಾರ ಚೀನಾದ ಮಾತುಗಳನ್ನು ನಂಬಲು ಸಿದ್ಧರಿರಲಿಲ್ಲ. ಎಲ್ಲ ಪ್ರಸ್ತಾವಗಳನ್ನೂ ತಿರಸ್ಕರಿಸಿತು ನೆಹರೂ ಸರ್ಕಾರ. ಅಷ್ಟೇ ಅಲ್ಲದೆ, ಗಡಿ ಭಾಗಗಳಲ್ಲಿ ಮುನ್ನುಗ್ಗಿ ಠಾಣೆಗಳನ್ನು ಸ್ಥಾಪಿಸಿತು.

ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?

ಈ ಹಿನ್ನೆಲೆಯಲ್ಲಿ ಚೀನಾ ನೀಡಿದ ಎಚ್ಚರಿಕೆಯನ್ನೂ ನೆಹರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. 1962ರ ಅಕ್ಟೋಬರ್ 20ರಂದು ಚೀನಾ ಭಾರತದ ಮೇಲೆ ಯುದ್ಧ ಸಾರಿತು. ಭಾರತವನ್ನು ನಿರ್ಣಾಯಕವಾಗಿ ಸೋಲಿಸಿತು. ಸಾವಿರಾರು ಭಾರತೀಯ ಯೋಧರು ಮಡಿದಿದ್ದರು. ತಾನು ಆಕ್ರಮಿಸಿರುವ ಪ್ರದೇಶಗಳ ಮೇಲೆ ಭಾರತ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಕೂಡದು ಎಂಬುದು ಚೀನಾ ಧೋರಣೆ. ಹೀಗಾಗಿ ಆಕ್ರಮಣವನ್ನೇ ಅಸ್ತ್ರವನ್ನಾಗಿ ಹೂಡುತ್ತ ಬಂದಿದೆ. 1988ರಲ್ಲಿ ಅಂದಿನ ಪ್ರಧಾನಿ ರಾಹುಲ್ ಗಾಂಧೀ ಚೀನಾಕ್ಕೆ ನೀಡಿದ ಭೇಟಿಯು ಉಭಯ ದೇಶಗಳ ನಡುವಣ ಕಹಿಯನ್ನು ಕರಗಿಸಲು ದಾರಿಯಾಯಿತು. ನರಸಿಂಹರಾವ್ ಮತ್ತು ವಾಜಪೇಯಿ ಅವರ ಚೀನಾ ಭೇಟಿಗಳು ಈ ಸಂಬಂಧದ ಏರಿಳಿತಗಳ ಜೋಕಾಲೆಯಲ್ಲಿ ಜೀಕಿದವು. 1980ರ ದಶಕದಲ್ಲಿ ಗಡಿಪ್ರದೇಶದ ವಾಸ್ತವ ನಿಯಂತ್ರಣ ರೇಖೆಯನ್ನು ಒಪ್ಪಿಕೊಳ್ಳಲಾಯಿತು. ಆದರೆ ವಾಸ್ತವ ನಿಯಂತ್ರಣ ರೇಖೆ ಯಾವುದೆಂಬ ಕುರಿತು ಹೊಸ ತಕರಾರುಗಳು ಏಳುತ್ತಲೇ ಬಂದಿವೆ. 2013, 2014, 2017 ಹಾಗೂ 2020ರಲ್ಲಿ ಘರ್ಷಣೆಗಳು ಕದನಗಳು ತಿಂಗಳುಗಟ್ಟಲೆ ಜಗ್ಗಿದವು. ವಾಸ್ತವ ನಿಯಂತ್ರಣ ರೇಖೆಯ ಉದ್ದ 3,400 ಕಿ.ಮೀ ಎಂದು ಭಾರತ ವಾದಿಸಿದರೆ, ಅದು ಕೇವಲ 2,000 ಕಿ.ಮೀ. ಎಂಬುದು ಚೀನಾದ ಹಠ.

ಚೀನಾ ವಿಶ್ವದ ದೊಡ್ಡ ಶಕ್ತಿಗಳಲ್ಲಿ ಒಂದೆನಿಸಿ ಹೊರಹೊಮ್ಮುತ್ತಿದ್ದಂತೆ ಅದರ ಅತಿಕ್ರಮಣಶೀಲತೆ ಮತ್ತು ವಿಸ್ತಾರವಾದಗಳು ಹಿಗ್ಗಿವೆ. ಭಾರತದ ಹಗೆ ಪಾಕಿಸ್ತಾನವನ್ನು ಚೀನಾ ಬೆಂಬಲಿಸುತ್ತ ಬಂದಿರುವುದನ್ನು ಭಾರತ ನಿತ್ತರಿಸಿಲ್ಲ. ಭಾರತ ಅಮೆರಿಕೆಯತ್ತ ವಾಲುತ್ತಿದೆ ಎಂಬುದು ಚೀನಾದ ಗುಮಾನಿ. ಗಡಿ ಪ್ರದೇಶದಲ್ಲಿ ರಸ್ತೆ, ಸೇತುವೆ ಮುಂತಾದ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಭಾರತವೂ ಹಿಂದೆ ಬೀಳಲಿಲ್ಲ.  ಪರಸ್ಪರ ಅಪನಂಬಿಕೆಗಳು ದಟ್ಟವಾಗಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ತಾಕಲಾಟಗಳು ತುದಿ ಮುಟ್ಟಿವೆ. ಚೀನಾವನ್ನು ಕೆಂಗಣ್ಣು ಬಿಟ್ಟು ಹೆದರಿಸಬೇಕು ಎಂದು ಮನಮೋಹನಸಿಂಗ್ ಸರ್ಕಾರವನ್ನು ಮೂದಲಿಸುತ್ತಿದ್ದ ಮೋದಿ ತಾವೇ ಪ್ರಧಾನಿಯಾದರು. ಕೆಂಗಣ್ಣು ಬಿಟ್ಟು ಹೆದರಿಸುವ ಮಾತನ್ನೇ ಮರೆತರು. ಆದರೂ ಚೀನಾ ತನ್ನ ಎಚ್ಚರವನ್ನು ಅಣುವಿನಷ್ಟಾದರೂ ಬಿಟ್ಟುಕೊಡದೆ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆದಿದೆ.

2020ರ ಗಾಲ್ವಾನ್ ಕದನದ ನಂತರ ಪಶ್ಚಿಮ ಗಡಿಗಳಲ್ಲಿ 50ರಿಂದ 60 ಸಾವಿರ ಯೋಧರ ಪಡೆಗಳನ್ನು ಚೀನಾ ನಿಯೋಜಿಸಿದೆ. ವಾಸ್ತವ ಗಡಿರೇಖೆಯಿಂದ ನೂರು ಕಿ.ಮೀ.ಗಳ ಒಳಗೆ 1.20 ಲಕ್ಷ ಯೋಧರ ವಾಸಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನಿರ್ಮಿಸಿದೆ. 1.20 ಲಕ್ಷ ಯೋಧರನ್ನು ಚೀನಾ ವಾರದೊಳಗೆ ಈ ಭಾಗಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಕ್ಷಿಪಣಿಗಳು, ರಾಕೆಟ್ ಲಾಂಚರುಗಳು, ಯುದ್ಧವಿಮಾನಗಳನ್ನು ಹೊಡೆದು ಉರುಳಿಸುವ ಸಾಧನಗಳಂತಹ ಭಾರೀ ಶಸ್ತ್ರಾಸ್ತ್ರಗಳನ್ನೂ ಗಡಿಗಳಲ್ಲಿ ಹೂಡಿಕೊಂಡಿದೆ ಎನ್ನುತ್ತಾರೆ ಚೀನೀ ವಿಶ್ಲೇಷಕರು. ಭಾರತವೂ ಈ ನಿಟ್ಟಿನಲ್ಲಿ ಬಹಳ ಹಿಂದೇನೂ ಬಿದ್ದಿಲ್ಲ.

Shaitan Singh
ಹುತಾತ್ಮ ಸೈನಿಕ ಮೇಜರ್‌ ಶೈತಾನ್ ಸಿಂಗ್

ಮೋದಿಯವರು ಹುತಾತ್ಮರಾದ ಸೈನಿಕರ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ಆದರೆ ನಮ್ಮ ಹೆಮ್ಮೆಯ ಹುತಾತ್ಮ ಸೈನಿಕ ಮೇಜರ್‌ ಶೈತಾನ್ ಸಿಂಗ್ ಸ್ಮಾರಕವನ್ನು ಚೀನಾ ಆಕ್ರಮಿಸಿಕೊಂಡಿದೆ. ಆದರೆ ಮೋದಿಯಾಗಲಿ, ಅವರ ಮಡಿಲಲ್ಲಾಡುವ ಮಾಧ್ಯಮಗಳಾಗಲೀ ಈ ಕುರಿತು ತುಟಿಬಿಚ್ಚಿಲ್ಲ.

1962ರ ಚೀನಾ-ಭಾರತ ಯುದ್ಧದಲ್ಲಿ ಭಾರತಕ್ಕೆ ಹಿನ್ನಡೆಯಾಯಿತು. ಆದರೆ ಮೇಜರ್ ಶೈತಾನ್ ಸಿಂಗ್ ಹೋರಾಡಿದ ರೆಜಾಂಗ್ ಲಾ ಕಾಳಗ ಒಂದು ಬಗೆಯ ದಂತಕಥೆಯಾಗಿ ಇಂದಿಗೂ ಚಿರಹಸಿರಾಗಿ ಉಳಿದಿದೆ. ಶೈತಾನ್ ಸಿಂಗ್ ಅವರು ಮಡಿದ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಆದರೆ ಆರು ದಶಕಗಳ ನಂತರ, ಅವರ ಸ್ಮಾರಕವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ (ಪಿಎಲ್‌ಎ) ನೆಲಸಮ ಆಗಿದೆ.

ಮೇಜರ್ ಶೈತಾನ್ ಸಿಂಗ್ ಮಾರಣಾಂತಿಕವಾಗಿ ಗಾಯಗೊಂಡ ಸ್ಥಳದಲ್ಲಿ 1963ರಲ್ಲೇ ಸ್ಮಾರಕ ನಿರ್ಮಿಸಲಾಗಿತ್ತು. ಬುಲೆಟ್‌ ತೂರಿದ್ದ ಹೊಟ್ಟೆಯನ್ನು ಒತ್ತಿ ಹಿಡಿದುಕೊಂಡಿದ್ದ ಸ್ಥಿತಿಯಲ್ಲಿ ಶೈತಾನ್‌ ಸಿಂಗ್‌  ಮೃತ ದೇಹ ಈ ಜಾಗದಲ್ಲಿ ಪತ್ತೆಯಾಗಿತ್ತು. ಆದರೆ ಚೀನಾ ಅತಿಕ್ರಮಣವನ್ನು ಒಪ್ಪಿಕೊಂಡಿರುವ ಮೋದಿ ಆಡಳಿತ  ಚೀನಾದ ಬಫರ್ ಝೋನ್‌ಗೆ ಈ ಸ್ಮಾರಕವನ್ನು ಬಲಿ ಕೊಟ್ಟಿದೆ.

ಗಾಲ್ವಾನ್ ಮುಖಾಮುಖಿ ನಂತರ ಬಫರ್ ಜೋನ್‌ ರಚಿಸಲಾಗಿದೆ. ಉಭಯ ದೇಶಗಳು ಗೊಂದಲಗಳೊಂದಿಗೆ ಮಾತುಕತೆಯನ್ನು ಮುಂದುವರಿಸಿವೆ. ನಾವು ಒಂದಿಂಚೂ ಪ್ರದೇಶವನ್ನೂ ಕಳಕೊಂಡಿಲ್ಲ ಅಂತ ಮೋದಿ ವಾದಿಸುತ್ತ ಬಂದಿದ್ದಾರೆ.

ಜನವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದಂತಹ ಪೊಲೀಸರ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧದಲ್ಲಿ ಲೇಹ್‌ನ ಹಿರಿಯ ಪೊಲೀಸ್ ಅಧೀಕ್ಷಕರಾದ ಪಿ.ಡಿ.ನಿತ್ಯ ಅವರು ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದರು. ಲದ್ದಾಖ್ ನ ಕಾರಕೋರಂ ಪಾಸ್‌ನಿಂದ ಚುಮಾರ್‌ವರೆಗಿನ ಎಲ್‌ಎಸಿ ಉದ್ದಕ್ಕೂ 65 ಗಸ್ತು ಕೇಂದ್ರಗಳಲ್ಲಿ 26ಕ್ಕೆ ಮಾತ್ರ ಭಾರತ ಪ್ರವೇಶವನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದ್ದರು.

ಇದೆಲ್ಲವೂ ಚೀನಾ ಯಾವುದೇ ಅಂಕೆಶಂಕೆಯಿಲ್ಲದೆ ಒಳನುಗ್ಗುತ್ತಿರುವ ರೀತಿಯನ್ನು ಮತ್ತು ಅದನ್ನು ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದನ್ನು ಸೂಚಿಸುತ್ತಿವೆ. ಕಚ್ಚತೀವು ಬಗ್ಗೆ ಮಾತನಾಡುವ ಮೋದಿಗೆ ಮೇಜರ್‌ ಶೈತಾನ್‌ ಸಿಂಗ್ ಸ್ಮಾರಕ ಕಳೆದುಕೊಂಡಿದ್ದು ಮರೆತು ಹೋಗಿದ್ದು ಏತಕ್ಕೆ? ಚೀನಾವನ್ನು ಕೆಂಗಣ್ಣು ಬಿಟ್ಟು ಹೆದರಿಸಬೇಕೆಂದು ಮನಮೋಹನಸಿಂಗ್ ಸರ್ಕಾರಕ್ಕೆ ತಾವು ನೀಡಿದ್ದ ಸಲಹೆಯನ್ನು ಮೋದಿ ಅಷ್ಟು ಸುಲಭಕ್ಕೆ ಮರೆತದ್ದು ಯಾಕೆ?

ಪ್ಯಾಂಗಾಂಗ್ ಸರೋವರಕ್ಕೆ ಅಡ್ಡವಾಗಿ ಕಟ್ಟುತ್ತಿರುವ ಅರ್ಧ ಕಿ.ಮೀ. ಉದ್ದದ ಸೇತುವೆಯು ಚೀನೀ ಪಡೆಗಳನ್ನು ಚೀನಾ-ಭಾರತ ಗಡಿ ರೇಖೆಗೆ ಸಾಗಿಸುವ ಕಾಲಾವಧಿಯನ್ನು12 ತಾಸುಗಳಿಂದ 3-4 ತಾಸುಗಳಿಗೆ ತಗ್ಗಿಸಲಿದೆ. ಈ ನಿರ್ಮಾಣ ಜರುಗಿರುವುದು ವಾಸ್ತವ ಗಡಿ ರೇಖೆಯಿಂದ ಚೀನಾದೊಳಗೆ 25 ಕಿ.ಮೀ.ದೂರದಲ್ಲಿ. ಈ ಪ್ರದೇಶ ಕಳೆದ 60 ವರ್ಷಗಳಿಂದ ಚೀನಾದ ಅಕ್ರಮ ನಿಯಂತ್ರಣದಲ್ಲಿದೆ. ಈ ಅಕ್ರಮ ವಶವನ್ನು ಭಾರತ ಒಪ್ಪಿಕೊಂಡಿಲ್ಲ.

ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?

1979ರಲ್ಲಿ ಚೀನಾಗೆ ಮರೆಯಲಾಗದ ಪಾಠ ಕಲಿಸಿದ ವಿಯೆಟ್ನಾಮ್ ಜೊತೆ ಸಂಬಂಧ ಸುಧಾರಣೆಗೆ ಭಾರತ ಇನ್ನೂ ಹೆಚ್ಚು ಶ್ರಮಿಸಬೇಕಿದೆ. ಭಾರತವನ್ನು ಸುತ್ತುವರೆಯುವ ಚೀನಾದ ತಂತ್ರವನ್ನು ಭಂಗಗೊಳಿಸಬೇಕಿದ್ದರೆ, ಶ್ರೀಲಂಕಾ ಮತ್ತು ನೇಪಾಳದಲ್ಲಿ ತಾನು ಚೀನಾಗೆ ಬಿಟ್ಟುಕೊಟ್ಟಿರುವ ಆವರಣವನ್ನು ಭಾರತ ಮತ್ತೆ ಗಳಿಸಿಕೊಳ್ಳಬೇಕು ಎಂಬುದು ತಜ್ಞರ ಅಭಿಮತ.

ಚೀನೀ ಸೇನೆ ಗಡಿರೇಖೆಗೆ ಸಂಬಂಧಿಸಿದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುತ್ತ ಹೊರಟಿದೆ. ಈ ಬದಲಾವಣೆಯ ಕುರಿತು ಬಾಯಿ ಬಿಡುವುದು ಬಿಜೆಪಿಗೆ ಬೇಕಿಲ್ಲ. ನಮ್ಮ ನೆಲವನ್ನು ಚೀನೀಯರಿಗೆ ಬಿಟ್ಟು ಕೊಟ್ಟಾದರೂ ಉಭಯದೇಶಗಳ ಸಂಬಂಧಗಳು ಸಹಜ ಸ್ಥಿತಿಗೆ ಮರಳಬೇಕೆಂಬುದು ಮೋದಿ ಸರ್ಕಾರದ ಸಂದೇಶವಿದ್ದಂತಿದೆ. ತಜ್ಞರ ಪ್ರಕಾರ ಭಾರತ-ಚೀನಾ ಗಡಿ ವಿವಾದ ಶೀಘ್ರದಲ್ಲಿ ಬಗೆಹರಿಯುವಂತಹುದಲ್ಲ. ಚೀನಾ ಬಲಿಷ್ಠ ದೇಶವಾದಂತೆಲ್ಲ ಅದು ‘ಬಿಟ್ಟುಕೊಡುವುದೆಂಬ’ ನಿರೀಕ್ಷೆ ಕ್ಷೀಣವಾಗುತ್ತ ನಡೆದಿದೆ. ‘ಕೊಡುಕೊಳು’ವ ಕ್ರಿಯೆಯಲ್ಲಿ ಭಾರತವೇ ಬಿಟ್ಟು  ಕೊಡಬೇಕು, ತಾನು ಪಡೆಯಬೇಕು ಎಂಬುದೇ ಅದರ ಧೋರಣೆ.

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...