ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?

Date:

1927, ಡಿಸೆಂಬರ್ 25ರಂದು ಮಹಾಡ್ ಚಳವಳಿಯ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ‘ಮನುಸ್ಮೃತಿ’ಯನ್ನು ಸುಟ್ಟು ಹಾಕಿದ್ದು ಒಂದು ಚಾರಿತ್ರಿಕ ವಿದ್ಯಮಾನ. ಮನುಸ್ಮೃತಿ ಹೇಳುವ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್ ಅವರು ತೋರಿದ ಪ್ರತಿರೋಧವು ಮತ್ತೆ ಮತ್ತೆ ಚರ್ಚೆಯಾಗುತ್ತಲೇ ಇರುತ್ತದೆ. ಅಂಬೇಡ್ಕರ್‌ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆಂದು ಚರ್ಚೆ ಶುರುವಾದ ಹೊತ್ತಲ್ಲೇ ಡಿಸೆಂಬರ್ 25 ಬಂದಿದ್ದು, ಮತ್ತಷ್ಟು ಗಂಭೀರ ವಾಗ್ವಾದಕ್ಕೆ ಕಾರಣವಾಗಿತ್ತು. ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಜರುಗಿದವು. ಇದೇ ಹೊತ್ತಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ ಒಂದು ಸದ್ದಿಲ್ಲದೆ ಹಂಚಿಕೆಯಾಗುತ್ತಿತ್ತು! ಅದು ಬಹಳ ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

‘1957ರ ನವೆಂಬರ್ 26ರಂದು ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಸಂವಿಧಾನ ಸುಟ್ಟು ಹಾಕಿದರು’ ಎಂಬ ವಿವರ ಅದರಲ್ಲಿತ್ತು. ‘ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ಹೋರಾಡಿದ ಪೆರಿಯಾರ್, ಸಂವಿಧಾನವನ್ನೇ ಸುಟ್ಟು ಹಾಕಿದರೆ?’- ಇದೊಂದು ಯಾರೋ ಕಿಡಿಗೇಡಿಗಳು ಹರಿಬಿಟ್ಟಿರುವ ಪೋಸ್ಟರ್ ಎಂದು ಕೆಲವರು ಗುಮಾನಿ ವ್ಯಕ್ತಪಡಿಸುತ್ತಿದ್ದರು.

samvidaana dahana

ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಡಿಎಂಕೆ ಮೇಲೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ, “ಪೆರಿಯಾರ್ ಅವರು ಸಂವಿಧಾನವನ್ನು ಸುಟ್ಟು ಹಾಕಿದ್ದರು. ಇವರಿಂದ ನಾವು ಸಂವಿಧಾನ ಪಾಠ ಕಲಿಯಬೇಕಾ?” ಎಂದು ಪ್ರಶ್ನಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ವಿದ್ಯಮಾನವನ್ನು ಸ್ಮರಿಸುವ ಹೊತ್ತಿನಲ್ಲಿ, ಪೆರಿಯಾರ್ ಅವರು ಸಂವಿಧಾನ ಸುಟ್ಟರು ಎಂದು ಹರಿದಾಡುವ ಪೋಸ್ಟರ್‌ಗಳ ಹಿಂದೆ, ತೇಜಸ್ವಿಸೂರ್ಯನಂಥವರು ನೀಡುವ ಹೇಳಿಕೆಗಳ ಆಂತರ್ಯದಲ್ಲಿ ರಾಜಕೀಯ ಗೊಂದಲ ಸೃಷ್ಟಿಸುವ ಹಿತಾಸಕ್ತಿಗಳು ಇದ್ದೇ ಇರುತ್ತವೆ. ಆದರೆ ಪೆರಿಯಾರ್‌ ಅವರು ಸಂವಿಧಾನವನ್ನು ಸುಡುವ ಚಳವಳಿಯನ್ನು ಹಮ್ಮಿಕೊಂಡಿದ್ದೂ ಸತ್ಯ, ಅದಕ್ಕೆ ಇದ್ದ ಅವರದ್ದೇ ಆದ ಬಲವಾದ ಕಾರಣಗಳೂ ಇದ್ದದ್ದೂ ಸತ್ಯ!

‘ನಾನು ಸಂವಿಧಾನವನ್ನು ಬರೆದಿದ್ದು ಎಂದು ಗೆಳೆಯರು ಹೊಗಳುತ್ತಾರೆ. ಆದರೆ ಇದು ಜಾರಿಯಾಗದೆ ಹೋದರೆ, ಇದನ್ನು ಸುಡುವ ಮೊದಲ ವ್ಯಕ್ತಿಯೂ ನಾನೇ ಆಗಿರುತ್ತೇನೆ’ ಎಂದು ಬಾಬಾ ಸಾಹೇಬರು ಒಂದು ಸಂದರ್ಭದಲ್ಲಿ ಹೇಳಿದ್ದುಂಟು. ಆದರೆ ಪೆರಿಯಾರ್ ಅವರಿಗೆ ಸಂವಿಧಾನದ ಮೇಲೆ ಇದ್ದ ಸಿಟ್ಟಿಗೆ ಬಲವಾದ ಕಾರಣವಿದ್ದವು. ಈ ಸಂವಿಧಾನದಲ್ಲಿಯೂ ಯಥಾಸ್ಥಿತಿ ಸಮಾಜವನ್ನು ಮುಂದುವರಿಸಲಾಗುತ್ತಿದೆ ಎಂಬ ಆಕ್ಷೇಪಗಳನ್ನು ಅವರು ವ್ಯಕ್ತಪಡಿಸಿದ್ದರು.

ಸಂವಿಧಾನ ದಹನ ಚಳವಳಿಯ ಹುಟ್ಟು

ಕಾಂಗ್ರೆಸ್ ಪಕ್ಷದೊಂದಿಗೆ ಇದ್ದ ದಿನಗಳಲ್ಲಿ ಪೆರಿಯಾರ್  ಅವರಿಗೆ ಕೆಲವು ಅನುಭವಗಳಾಗಿದ್ದವು. ಅದರ ಆಧಾರದಲ್ಲಿ ಅವರು ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಸಾರ್ವಜನಿಕ ಜೀವನಕ್ಕೆ ಪೆರಿಯಾರ್ ಕಾಲಿಟ್ಟ ಸಂದರ್ಭದಲ್ಲಿ ಇರೋಡ್‌ನಲ್ಲಿ ವಾಸವಿದ್ದರು. ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಕಳೆದು ಹೋಗಿರುವ ತಮ್ಮ ಪ್ರಾಬಲ್ಯವನ್ನು ಈ ಸ್ವಾತಂತ್ರ್ಯ ಹೋರಾಟದ ಮೂಲಕ ಮರುಪಡೆದುಕೊಳ್ಳಲು ಬ್ರಾಹ್ಮಣರು ಯತ್ನಿಸುತ್ತಿದ್ದಾರೆಂಬ ಅಭಿಪ್ರಾಯವನ್ನು ಕಾಂಗ್ರೆಸ್ ಅವರಲ್ಲಿ ಮೂಡಿಸಿಬಿಟ್ಟಿತು. ಶೂದ್ರರು ಮತ್ತು ಪಂಚಮರ ಮೇಲೆ ಅಧಿಕಾರ ಸ್ಥಾಪಿಸಲು ಬ್ರಾಹ್ಮಣರು ಯತ್ನಿಸುತ್ತಿದ್ದಾರೆಂದು ನಿಲುವು ತೆಳೆದರು. ‘ಆಡಳಿತವನ್ನು ಬ್ರಿಟಿಷರಿಂದ ಬ್ರಾಹ್ಮಣ ದರೋಡೆಕೋರರಿಗೆ ಕೊಡಲಾಗುತ್ತಿದೆ’ ಎಂದು ಸ್ವಾತಂತ್ರ್ಯದ ಮುನ್ನಾದಿನ ಪೆರಿಯಾರ್ ಅಭಿಪ್ರಾಯಪಟ್ಟಿದ್ದುಂಟು (ಅವರದ್ದೇ ಮಾತಿನಲ್ಲಿ ಹೇಳುವುದಾದರೆ- ವೇಲೈಕಾರನ್ ಕಿಟ್ಟ ಇರುಂದು ಪಾರ್ಪಣ ಕೊಳ್ಳಕಾರನ್ ಕಿಟ್ಟ ಪೋಗುದು- ಶ್ರಮಿಕ ಕೂಲಿಕಾರನ ಹಣ ವಂಚಕ ಬ್ರಾಹ್ಮಣನ ಜೇಬು ಸೇರುತ್ತಿದೆ- ಎಂದಿದ್ದರು ಪೆರಿಯಾರ್).

ಇದನ್ನೂ ಓದಿರಿ: ಉತ್ತರ ಭಾರತ-ದಕ್ಷಿಣ ಭಾರತ: ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು

ಮೀಸಲಾತಿಯೂ ಜಾತಿ ವಿರೋಧಿ ಹೋರಾಟದ ಮತ್ತು ತುಳಿತಕ್ಕೊಳಗಾದ ಜನರ ಸಬಲೀಕರಣಕ್ಕೆ ಬೇಕಾದ ಮೊದಲ ಹೆಜ್ಜೆಯೆಂದೂ ಭಾವಿಸಿದ್ದ ಪೆರಿಯಾರ್ ಅವರಿಗಿದ್ದ ಆತಂಕಕ್ಕೆ ಪೂರಕವಾಗಿ ಸ್ವಾತಂತ್ರ್ಯ ಬಂದ ಆರಂಭದಲ್ಲೇ  ಬೆಳವಣಿಗೆಗಳಾದವು. ಸೆಪ್ಟೆಂಬರ್ 30, 1947ರಂದು, ಕೇಂದ್ರ ಸರ್ಕಾರವು ತುರ್ತು ಕಾನೂನನ್ನು ಅಂಗೀಕರಿಸಿ, ಕೇಂದ್ರ ವಲಯದ ಉದ್ಯೋಗಗಳಲ್ಲಿ ನೀಡಲಾಗಿದ್ದ ಕೋಮು ಆಧಾರಿತ ಮೀಸಲಾತಿಯ ಎಲ್ಲ ಕಾನೂನುಗಳನ್ನು ರದ್ದುಮಾಡಿತು.

ಕೋಮು ಆಧಾರಿತ ಮೀಸಲಾತಿಯ ಇತಿಹಾಸವನ್ನು ನೋಡುವುದಾದರೆ ಜಸ್ಟಿಸ್ ಪಾರ್ಟಿ ಆಡಳಿತವು 1921ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಕೋಮುವಾರು ಮೀಸಲಾತಿಯನ್ನು ಪರಿಚಯಿಸಿತ್ತು. ಇದಕ್ಕೆ 1922ರಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಸಂಪೂರ್ಣವಾಗಿ 1929ರಲ್ಲಿ ಜಾರಿಗೆ ತರಲಾಯಿತು. ನಂತರ ಕೇಂದ್ರ ಸರ್ಕಾರವು ಇದೇ ರೀತಿಯ ಕಾನೂನನ್ನು ಅಂಗೀಕರಿಸಿತು. ಅಂದರೆ, ಕೇಂದ್ರ ವಲಯದಲ್ಲಿ ಕೋಮು ಆಧಾರಿತ ಮೀಸಲಾತಿಯನ್ನು ಒದಗಿಸಲು 1935ರಲ್ಲಿ ‘ಚೆನ್ನೈ ಪ್ರಾಂತೀಯ ಬ್ರಾಹ್ಮಣೇತರ ಕೋಮು ಹಕ್ಕುಗಳ ಕಾಯಿದೆ’ ಬಂದಿತ್ತು. ತಮಿಳುನಾಡಿನಲ್ಲಿ ಅಂಚೆ ಸೇವೆ, ರೈಲ್ವೆ ಮುಂತಾದ ಕ್ಷೇತ್ರದಲ್ಲಿ ಮೀಸಲಾತಿ ತರಲಾಗಿತ್ತು. ಇವೆಲ್ಲವೂ ಸ್ವಾತಂತ್ರ್ಯ ಬಂದ ಒಂದೂವರೆ ತಿಂಗಳೊಳಗೆ ಇಲ್ಲವಾದವು. ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಕೋಮು ಆಧಾರಿತ ಹಕ್ಕುಗಳು ಭಾರತ ಸಂವಿಧಾನದ ಅನ್ವಯ ಅಸಿಂಧು ಎಂದು ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಘೋಷಿಸಿದವು.

ದೆಹಲಿಯ ಗದ್ದುಗೆಯಲ್ಲಿ ಉತ್ತರದ ಪ್ರಾಬಲ್ಯ ಮತ್ತು ಬ್ರಾಹ್ಮಣ, ಬನಿಯಾಗಳ ಆಳ್ವಿಕೆ ಶುರುವಾಗಿದೆ ಎಂದು ಪ್ರತಿಭಟನೆಗಳಲ್ಲಿ ಪೆರಿಯಾರ್ ಗುಡುಗಿದರು. ಚೆನ್ನೈನ ಆರ್ಯ ಭವನ ಮತ್ತು ಮಿಷನ್ ಚಂದ್ ಚೆಲ್ಲರಾಮ್ ಕ್ಲೋಥಿಂಗ್ಸ್‌ ಎದುರು ಹೋರಾಟ ಶುರು ಮಾಡಿದರು. ಸತತವಾಗಿ ಡಿಸೆಂಬರ್‌ವರೆಗೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದವು.

ಪೆರಿಯಾರ್ ನೇತೃತ್ವದಲ್ಲಿ ಸಮುದಾಯ ಆಧಾರಿತ ಸಾಮಾಜಿಕ ನ್ಯಾಯಕ್ಕಾಗಿ ತಮಿಳುನಾಡಿನಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಪರಿಣಾಮವಾಗಿ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಲಾಯಿತು. ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಆರಂಭಿಸಿತ್ತು. ಪೆರಿಯಾರ್ ಇದನ್ನು ಬಲವಾಗಿ ವಿರೋಧಿಸಿದರು. ಆಗಸ್ಟ್ 1952, 1953 ಮತ್ತು 1954ರಲ್ಲಿ ಹಿಂದಿ ನಾಮಫಲಕಗಳನ್ನು ಅಳಿಸುವ ಹೋರಾಟವನ್ನು ಅವರು ಹಮ್ಮಿಕೊಂಡಿದ್ದರು.

periyar2

ಈ ಸಮಯದಲ್ಲಿ, ರಾಜಾಜಿಯವರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತು. ಆ ನಿಟ್ಟಿನಲ್ಲಿ ತಂದ ಕಾನೂನೊಂದರಲ್ಲಿ ಪ್ರತಿಯೊಬ್ಬ ಶಾಲಾ ವಿದ್ಯಾರ್ಥಿಯು ಮಧ್ಯಾಹ್ನದ ನಂತರ ತಮ್ಮ ಜಾತಿಯ ಕೆಲಸವನ್ನು ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದರ ವಿರುದ್ಧ ಸಿಡಿದೆದ್ದ ಪೆರಿಯಾರ್, ಪ್ರಾಚೀನ ಕಾಲದಲ್ಲಿದ್ದ ತರತಮವುಳ್ಳ ಶಿಕ್ಷಣ ನೀತಿ ಇದೆಂದು ಜರಿದರು. ಆರ್ಯ ಸಂಸ್ಕೃತಿಯನ್ನು ಹೇರಲು ರಾಜಾಜಿ ಮಾಡುತ್ತಿರುವ ಪ್ರಯತ್ನ ಇದಾಗಿದೆ, ವರ್ಣಾಶ್ರಮ ತತ್ತ್ವವನ್ನು ಮರಳಿ ತರಲಾಗುತ್ತಿದೆ, ಸರ್ಕಾರವೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ವರ್ಣಾಶ್ರಮವನ್ನು ಪುನರುತ್ಥಾನ ಮಾಡಲು ಹಾತೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಧರ್ಮದ ತರತಮ ಮತ್ತು ಉತ್ತರ ಭಾರತದ ಪ್ರಾಬಲ್ಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಗಣೇಶನ ಮೂರ್ತಿಗಳನ್ನು ಧ್ವಂಸಗೊಳಿಸುವ ಹೋರಾಟವನ್ನು ನಡೆಸಿದರು. ಈ ಹೋರಾಟವನ್ನು ಅವರು ಆರಂಭಿಸಿದ್ದು ಬುದ್ಧ ಪೂರ್ಣಿಮೆಯಂದು ಎಂಬುದು ಗಮನಾರ್ಹ. ಹಿಂದಿ ಹೇರಿಕೆಯ ವಿರುದ್ಧದ ಆಂದೋಲನ ನಡೆಸುವಾಗಲೇ ಭಗವಾನ್ ರಾಮನ ಭಾವಚಿತ್ರವನ್ನು ಸುಟ್ಟರು!

ಇದನ್ನೂ ಓದಿರಿ: ಹವ್ಯಕರ ಸಮ್ಮೇಳನ: ಅಪಾಯಕಾರಿ ಹೊರಳು

1952ರಲ್ಲಿ ಪೆರಿಯಾರ್ ತಮ್ಮ ಸಂಪಾದಕೀಯದಲ್ಲಿ, “ಹಿಂದಿಯನ್ನು ಹೇರುವ ಮತ್ತು ವರ್ಣಾಶ್ರಮ ಸಮಾಜವನ್ನು ಪುನರ್ ರಚಿಸುವ ಪ್ರಯತ್ನಗಳು ಮುಂದುವರಿದರೆ ನಾನು ಸಂವಿಧಾನವನ್ನು ಸುಡಲು ಹಿಂಜರಿಯುವುದಿಲ್ಲ’’ ಎಂದು ಬರೆದಿದ್ದರು.

ಯಾವ ಆಧಾರದ ಮೇಲೆ ಸಂವಿಧಾನವನ್ನು ಸುಡಬೇಕು ಎಂಬುದು ಇಲ್ಲಿರುವ ಪ್ರಶ್ನೆಯಾಗಿತ್ತು. ಜಾತಿ ವ್ಯವಸ್ಥೆಯನ್ನು ರಕ್ಷಿಸುವ ಸಂವಿಧಾನದ ವಿಧಿಗಳಿರುವ ಭಾಗವನ್ನು ಸುಡಬೇಕು ಎಂದು ಪೆರಿಯಾರ್ ಸಲಹೆ ನೀಡಿದರು. ಸಂಪ್ರದಾಯಗಳನ್ನು (customs) ಯಥಾಸ್ಥಿತಿಯಲ್ಲಿ ಇಡಲು ಸಂವಿಧಾನ ಅವಕಾಶ ನೀಡಿದೆ ಎಂಬುದು ಅವರ ವಾದವಾಗಿತ್ತು. ಈ ಸಂಪ್ರದಾಯಗಳಿಗೆ ಅವರ ತೀವ್ರ ವಿರೋಧವಿತ್ತು.

ಮೊದಲಿನಿಂದಲೂ ಅವರು ಸಂಪ್ರದಾಯಗಳ ಕಟು ಟೀಕಾಕಾರರಾಗಿದ್ದರು. ಚೆನ್ನೈನ ನೇಪಿಯರ್ ಪಾರ್ಕ್‌ನಲ್ಲಿ ಪೆರಿಯಾರ್ ಅವರು 1929ರಲ್ಲಿ ಮಾಡಿದ ಭಾಷಣವೇ ಇದಕ್ಕೆ ಸಾಕ್ಷಿ. “ಬ್ರಾಹ್ಮಣರು ತಮ್ಮ ದಬ್ಬಾಳಿಕೆಯನ್ನು ಹಲವು ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಅವರು ನಮ್ಮ ಮೇಲೆ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವೇದಗಳ ಹೆಸರಿನಲ್ಲಿ ದಬ್ಬಾಳಿಕೆ ಮಾಡಿದರು. ಈಗ ‘ಕಸ್ಟಮ್’ (ಸಂಪ್ರದಾಯ) ಎನ್ನುವ ಹೊಸ ಮಾದರಿಯನ್ನು ಪರಿಚಯಿಸಿದ್ದಾರೆ ಎಂಬುದನ್ನು ನಾವು ತಿಳಿದಿರಬೇಕು” ಎಂದಿದ್ದರು.

1931ರಲ್ಲಿ ಕರಾಚಿಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸಮ್ಮೇಳನ ನಡೆದಾಗ, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ನೆಹರೂ ಸಮಿತಿಯು ವರದಿಯನ್ನು ಮಂಡಿಸಿತು. ಸಮಿತಿ ಮಂಡಿಸಿದ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾತ್ಯತೀತತೆಗಿಂತ ಧಾರ್ಮಿಕ ತಟಸ್ಥತೆಗೆ ಒತ್ತು ನೀಡಲಾಗಿತ್ತು. ಪ್ರತಿಯೊಬ್ಬರ ಸಂಪ್ರದಾಯ ಮತ್ತು ಭಾಷೆಯನ್ನು ರಕ್ಷಿಸುವುದಾಗಿ ಶಿಫಾರಸು ಮಾಡಲಾಗಿತ್ತು. ಕಾನೂನಿನ ಮೂಲಕ ಅಸ್ಪೃಶ್ಯತೆಯನ್ನು ಪೋಷಿಸುವ ಹುನ್ನಾರ ನಡೆದಿದೆ ಎಂದು ಸಿಡಿದೆದ್ದ ಪೆರಿಯಾರ್, ‘ಧಾರ್ಮಿಕ ತಟಸ್ಥತೆಯ ಹೆಸರಲ್ಲಿ ಹಿಂದೂಧರ್ಮದ ಕೆಡುಕುಗಳನ್ನು ರಕ್ಷಿಸುವ ಕಸರತ್ತು ಮಾಡಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದುವರಿದು ‘ಕುಡಿಯರಸು’ ಪತ್ರಿಕೆಯಲ್ಲಿ ಸತತವಾಗಿ ಮೂರು ವಾರಗಳ ಕಾಲ, ‘ಕರಾಚಿ ಸಮ್ಮೇಳನ’ ವಿರುದ್ಧ ಸಂಪಾದಕೀಯಗಳನ್ನು ಬರೆದರು. ಇಷ್ಟಕ್ಕೆ ಸುಮ್ಮನಾಗಲಿಲ್ಲ, 1931ರ ಆಗಸ್ಟ್‌ನಲ್ಲಿ ವಿರುದುನಗರದಲ್ಲಿ ಸಮ್ಮೇಳನ ನಡೆಸಿ, ಕರಾಚಿಯಲ್ಲಿ ನೀಡಲಾದ ಶಿಫಾರಸುಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದರು.

‘ಸಂಪ್ರದಾಯ’ ಎಂಬುದು ಅಪಾಯಕಾರಿ ಅಸ್ತ್ರ, ಅದರ ಮೂಲಕ ಜಾತಿ ಮೇಲರಿಮೆಯನ್ನು ಹಿಂದೂ ಸಮಾಜದಲ್ಲಿ ಪೋಷಿಸಲಾಗುತ್ತದೆ ಎಂಬುದು ಪೆರಿಯಾರ್ ಅವರ ಸ್ಪಷ್ಟ ನಿಲುವಾಗಿತ್ತು. ಕೆಲವು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರ, ಎಲ್ಲ ಜನರೂ ದೇವಾಲಯಗಳಲ್ಲಿ ಅರ್ಚಕರಾಗಲು ಅರ್ಹರು ಎಂಬ ಕಾನೂನು ತಂದಾಗ, ಸುಪ್ರೀಂಕೋರ್ಟ್ ನೀಡಿದ ತೀರ್ಪೊಂದು ಪೆರಿಯಾರ್ ಆತಂಕಕ್ಕೆ ಪೂರಕವಾಗಿತ್ತು ಎಂದು ತಮಿಳುನಾಡಿನ ಚಿಂತಕರು ಅಭಿಪ್ರಾಯಪಡುತ್ತಾರೆ. ‘ಸಂಪ್ರದಾಯವನ್ನು ಬದಲಿಸಲು ಸಾಧ್ಯವಿಲ್ಲ, ಈ ಕಾನೂನು ಅಮಾನ್ಯ’ ಎಂದಿತ್ತು ಕೋರ್ಟ್ (ಈಗ ಬದಲಾವಣೆಗಳನ್ನು ಕೋರ್ಟ್ ಮಾಡಿಕೊಂಡಿದೆ.) ಸಂವಿಧಾನದಲ್ಲಿನ ಕೆಲವು ವಿಧಿಗಳು ಸಂಪ್ರದಾಯವನ್ನು ಪೋಷಿಸುತ್ತವೆ ಎಂಬುದು ಪೆರಿಯಾರ್ ಆತಂಕವಾಗಿತ್ತು.

‘ಕಾನೂನು’ ಯಾವುದೆಂದು ವಿವರಿಸುವ ಸಂವಿಧಾನದ 13ನೇ ವಿಧಿಯು, ‘ಸಂಸತ್ ರೂಪಿಸುವ ಕಾನೂನಿನ ಪರಿಧಿಯನ್ನು ‘ಸಂಪ್ರದಾಯ’ವೂ ಹೊಂದಿದೆ’ ಎಂದು ಹೇಳುತ್ತದೆ. ಅಂತೆಯೇ 372ನೇ ವಿಧಿಯು, ‘ಈಗಾಗಲೇ ಜಾರಿಯಲ್ಲಿರುವ ಎಲ್ಲವನ್ನೂ ನಿರ್ದಿಷ್ಟವಾಗಿ ಅಧಿಕೃತ ಸಂಸ್ಥೆಯಿಂದ ಬದಲಾಯಿಸದ ಹೊರತು ಅದು ಜಾರಿಯಲ್ಲಿದೆ ಎಂದು ಪರಿಗಣಿಸಲಾಗುತ್ತದೆ’ ಎಂದು ಹೇಳುತ್ತದೆ. ಇದು ಕಾನೂನಿನ ಹೆಸರಿನಲ್ಲಿ ಜಾತಿ ಪದ್ಧತಿಗಳನ್ನೂ ರಕ್ಷಿಸಲು ಕಾರಣವಾಗುತ್ತದೆ ಎಂದು ಪೆರಿಯಾರ್ ಅಭಿಪ್ರಾಯಪಟ್ಟರು. ಇದಲ್ಲದೆ, ಒಬ್ಬರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ 25ನೇ ವಿಧಿಯು ಜಾತಿ ವ್ಯವಸ್ಥೆಯನ್ನು ಸಹ ಪೋಷಿಸುತ್ತದೆ ಎಂದು ಪರಿಗಣಿಸಿದರು.

ಭಾರತದ ಸಂವಿಧಾನವು ತಿದ್ದುಪಡಿಗಳಿಗೆ ಅವಕಾಶವನ್ನು ಒದಗಿಸುತ್ತದೆ. ಆದರೆ, ಅದರಲ್ಲಿ ಯಾವುದೇ ಬದಲಾವಣೆಯನ್ನು ತರಲು ಇರುವ ಏಕೈಕ ಮಾರ್ಗವೆಂದರೆ- 368ನೇ ವಿಧಿಯನ್ನು ಅನುಸರಿಸುವುದು. ಆ ವಿಧಿಯ ಪ್ರಕಾರ, “ಶಾಸನಸಭೆಯು ಮೂರನೇ ಎರಡರಷ್ಟು ಬಹುಮತದಿಂದ ಮಾತ್ರ ತಿದ್ದುಪಡಿಯನ್ನು ತರಬಹುದು”.

ಇದು ಪೆರಿಯಾರ್ ಅವರಿಗೆ ಆಘಾತ ತಂದಿತ್ತು. ಕೇವಲ 120 ಸಂಸದರನ್ನು ಹೊಂದಿರುವ ದಕ್ಷಿಣ ಭಾರತವು ಯಾವುದೇ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಲು ಹೇಗೆ ಸಾಧ್ಯ? ದಕ್ಷಿಣ ಭಾರತದ ಸದಸ್ಯರ ಸಂಖ್ಯೆ ಐದನೇ ಒಂದು ಭಾಗ ಅಥವಾ ನಾಲ್ಕನೇ ಒಂದು ಭಾಗವಷ್ಟೇ ಎಂಬುದು ಪೆರಿಯಾರ್ ವಾದವಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಂವಿಧಾನವನ್ನು ಸುಡುವುದಾಗಿ 1952ರಲ್ಲಿ ಪೆರಿಯಾರ್ ಘೋಷಿಸಿದರು. ಆನಂತರ ಹಲವು ರಾಜಕೀಯ, ಆಡಳಿತಾತ್ಮಕ ಘಟನೆಗಳಾದವು. ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ್ದಕ್ಕಾಗಿ ಹೋರಾಟಗಾರ ಇಮ್ಯಾನುಯೆಲ್ ಶೇಖರನ್ ಅವರನ್ನು 1957ರ ಸೆಪ್ಟೆಂಬರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಪೆರಿಯಾರ್ ಮನಸ್ಸನ್ನು ತುಂಬಾ ಕಲಕಿತು. 02.11.1957ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ, ‘ಅವರು ಸರಿಯಾದ ಕ್ರಮ ಕೈಗೊಳ್ಳದಿದ್ದರೆ ನಾನೇ ಬೀದಿಗಿಳಿದು ಹೋರಾಟ ಮಾಡುತ್ತೇನೆ’ ಎಂದು ಘೋಷಿಸಿದರು.

ಇದನ್ನೂ ಓದಿರಿ: ಮುನಿರತ್ನನ ಪರ ನಿಂತ ಸ್ತ್ರೀಯರು ಆತನ ʼಏಡ್ಸ್‌ ಟ್ರ್ಯಾಪ್‌ʼ ಕೃತ್ಯವನ್ನು ಬೆಂಬಲಿಸುವರೇ?; ರವಿ ಬೆಂಬಲಿಗರು ಆ ಪದವನ್ನು ಒಪ್ಪುವರೇ?

ಜಾತಿ ವ್ಯವಸ್ಥೆಯ ಮೇಲೆ ಅವರು ಎಷ್ಟು ಕುದಿದು ಹೋಗಿದ್ದರು ಎಂದರೆ, ತಂಜಾವೂರ್‌ ಸಮ್ಮೇಳನದಲ್ಲಿ ಮಾಡಿದ ವಿವಾದಾತ್ಮಕ ಭಾಷಣವೇ ಇದಕ್ಕೆ ಸಾಕ್ಷಿಯಾಗಿತ್ತು. “ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾವಿರ ಬ್ರಾಹ್ಮಣರನ್ನು ಕೊಲ್ಲಬೇಕಾದರೆ, ಅದೊಂದೇ ಮಾರ್ಗವಾದರೆ, ನೀವು ಕೊಲ್ಲಲು ಸಿದ್ಧರಿದ್ದೀರಾ?” ಎಂದು ತಮ್ಮ ಬೆಂಬಲಿಗರನ್ನು ಪ್ರಶ್ನಿಸಿದ್ದರು. ನೆರದಿದ್ದ ಜನಸಮೂಹ ಹರ್ಷೋದ್ಘಾರ ಮಾಡಿತ್ತು. ಅಂದು ಪೆರಿಯಾರ್ ವೀರಾವೇಶದಿಂದ ಮಾತನಾಡಿದ್ದರೂ ತಮ್ಮ ಜೀವಿತಾವಧಿಯುದ್ದಕ್ಕೂ ಹಿಂಸೆಯನ್ನು ಪ್ರತಿಪಾದಿಸಿದರವಲ್ಲ ಎಂಬುದು ಅಷ್ಟೇ ಮುಖ್ಯವಾಗುತ್ತದೆ.

ಪೆರಿಯಾರ್ ಅವರು ಆರಂಭದಿಂದಲೂ ಸಂವಿಧಾನದ ವಿರುದ್ಧ ಗುಡುತ್ತಲೇ ಬಂದರು. ಅದಕ್ಕೆ ಬೇರೆ ಬೇರೆ ಕಾರಣಗಳಿದ್ದವು. ಸಂವಿಧಾನ ಸಭೆಯನ್ನು ಸಾರ್ವತ್ರಿಕ ವಯಸ್ಕ ಮತದಾನದ ಆಧಾರದಲ್ಲಿ ಚುನಾಯಿಸಿಲ್ಲ ಎಂಬುದು ಅವರ ಮೊದಲ ಆಕ್ಷೇಪವಾಗಿತ್ತು. ಎಲೀಟ್ ವರ್ಗದ ಪ್ರಾತಿನಿಧಿಕ ಸಭೆ ಇದಾಗಿದೆ, ದೇಶದ ಜನಸಂಖ್ಯೆಯ ಶೇ.14ರಷ್ಟು ಮಂದಿಯನ್ನು- ಅಂದರೆ, ಅಕ್ಷರವಂತರು, ಶ್ರೀಮಂತರು, ಭೂಮಾಲೀಕರು, ಪದವೀಧರರನ್ನು ಮಾತ್ರ ಈ ಸಭೆ ಪ್ರತಿನಿಧಿಸುತ್ತದೆ ಎಂದಿದ್ದರು ಪೆರಿಯಾರ್. ಕೆಲವೇ ಕೆಲವು ಜನರಿಂದ ಆಯ್ಕೆಯಾದವರು ಇಡೀ ದೇಶದ ಸಾಮಾನ್ಯ ಜನರನ್ನು ಹೇಗೆ ಪ್ರತಿನಿಧಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಎತ್ತಿದ್ದರು.

ಸಂವಿಧಾನ ದಹನ ಚಳವಳಿಯನ್ನು ಅವರು ಹಮ್ಮಿಕೊಂಡಿದ್ದು ಈ ಎಲ್ಲ ಕಾರಣಗಳಿಂದ. 1949ರ ನವೆಂಬರ್ 26ರಂದು ಸಂವಿಧಾನವನ್ನು ಸಮರ್ಪಣೆ ಮಾಡಿದ್ದರ ಹಿನ್ನಲೆಯಲ್ಲಿ ಅಂದಿನ ದಿನವನ್ನೇ ಪೆರಿಯಾರ್ ಸಂವಿಧಾನ ದಹನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಸಂವಿಧಾನ ದಹನದ ಹಿಂದೆ-ಮುಂದೆ

ತಮಿಳುನಾಡು ಸರ್ಕಾರ ಕ್ಷಿಪ್ರ ಕ್ರಮಗಳಿಗೆ ಮುಂದಾಯಿತು. ಸಂವಿಧಾನ ದಹನ ಚಳವಳಿಯನ್ನು ತಡೆಯಲು ತಕ್ಷಣವೇ ಕಾನೂನನ್ನು ತರಲು ಸರ್ಕಾರ ಯೋಜಿಸಿತು. ತಂಜಾವೂರು ಸಮ್ಮೇಳನವು ನವೆಂಬರ್ 3 ರಂದು ಮುಕ್ತಾಯವಾಯಿತ್ತಷ್ಟೇ.  ನವೆಂಬರ್ 6 ರಂದು ಅಸೆಂಬ್ಲಿಯಲ್ಲಿ ಮಸೂದೆ ಮಂಡಿಸಲಾಯಿತು, ತರಾತುರಿಯಲ್ಲಿ ಮಸೂದೆಯನ್ನು ನವೆಂಬರ್ 11 ರಂದು ಕಾನೂನಾಗಿ ಜಾರಿಗೊಳಿಸಲಾಯಿತು. ಇದುವೇ- Prevention of Insults to National Honour Act (ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ) ಹಿಂದಿನ ಇತಿಹಾಸ. ಈ ಕಾಯಿದೆಯ ಪ್ರಕಾರ, ಗಾಂಧಿ ಅಥವಾ ಸಂವಿಧಾನ ಅಥವಾ ರಾಷ್ಟ್ರಧ್ವಜವನ್ನು ಸುಡುವುದು ಮತ್ತು ಅವಮಾನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಅನ್ವಯ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಪೆರಿಯಾರ್ ಅವರು ಹೋರಾಟದ ಕುರಿತು ತಕ್ಷಣವೇ ‘ವಿದುತಲೈ’ಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. “ಸಹೃದಯರೇ! ದಯವಿಟ್ಟು ಗಮನಿಸಿ. ನೀವು ಸಂವಿಧಾನ ದಹನ ಹೋರಾಟದಲ್ಲಿ ಭಾಗವಹಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗಬಹುದು. ನಿಮ್ಮ ಹೆಸರನ್ನು ಹೇಳುವ ಮೊದಲು ಇದನ್ನು ಅರ್ಥಮಾಡಿಕೊಳ್ಳಿ” ಎಂದು ಕೋರಿದ್ದರು.

ಸುಮಾರು 10,000 ಜನರು ಈಗಾಗಲೇ ಹೋರಾಟಕ್ಕೆ ನೋಂದಣಿ ಮಾಡಿಕೊಂಡಿದ್ದರು. ಅವರೆಲ್ಲರೂ ತಮ್ಮ ಒಪ್ಪಿಗೆಯನ್ನು ನೀಡಿದರು. ಆದರೆ ಪ್ರತಿಭಟನೆಯ ಮುನ್ನಾದಿನದಂದು ಬೇರೆ ಪ್ರಕರಣವೊಂದರಲ್ಲಿ ಪೆರಿಯಾರ್ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಯಿತು. ಕ್ರಿಮಿನಲ್ ಪ್ರೊಸೀಜರ್ಸ್ ಕೋಡ್‌ನ ಆರ್ಟಿಕಲ್ 151ರ ಅಡಿಯಲ್ಲಿ ಅವರ ಮೇಲೆ ಆರೋಪವನ್ನು ಹೊರಿಸಲಾಯಿತು. ಇದರಿಂದಾಗಿ ನವೆಂಬರ್ 26ರಂದು ಪೆರಿಯಾರ್ ಅವರು ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

periyar4

ಇದೆಲ್ಲದರ ಹೊರತಾಗಿ ಸಣ್ಣ ಹಳ್ಳಿಗಳನ್ನು ಒಳಗೊಂಡಂತೆ ತಮಿಳುನಾಡಿನಾದ್ಯಂತ ಚಳವಳಿಯು ಭಾರೀ ಯಶಸ್ಸನ್ನು ಕಂಡಿತು. 10,000ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದರು ಮತ್ತು ಸಂವಿಧಾನದ ಆಕ್ಷೇಪಾರ್ಹ ವಿಧಿಗಳನ್ನು ಸುಟ್ಟುಹಾಕಿದ್ದರು!

ದ್ರಾವಿಡರ್ ಕಳಗಂ ವಿಭಜನೆಯಾದ ಏಳು ವರ್ಷಗಳ ನಂತರ ಈ ಚಳವಳಿ ನಡೆದಿತ್ತು. ಆ ಸಮಯದಲ್ಲಿ ಅನೇಕ ಜನರು ಪೆರಿಯಾರ್ ಬಳಗವನ್ನು ತೊರೆದಿದ್ದರು. ಪೆರಿಯಾರ್ ಪ್ರಭಾವ ಇದ್ದೇ ಇತ್ತು. ಸಂವಿಧಾನ ದಹಿಸಿದ ಪ್ರತಿಭಟನಾಕಾರರಿಗೆ ಮೂರು ವರ್ಷ ಜೈಲು ಶಿಕ್ಷೆಯೂ ಖಚಿತವಾಗಿತ್ತು. ಈ ಎಲ್ಲ ವಿದ್ಯಮಾನಗಳ ಹೊರತಾಗಿಯೂ 10,000ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಭಾಗವಹಿಸಿದರು ಮತ್ತು ಸುಮಾರು 4,000 ಜನರನ್ನು ಬಂಧಿಸಿ ಒಂದು ವರ್ಷದವರೆಗೆ ಜೈಲಿನಲ್ಲಿಡಲಾಯಿತು.

ಇದನ್ನೂ ಓದಿರಿ: ಬೌದ್ಧ ಬಿಕ್ಕುಗಳ ಆತ್ಮಾಹುತಿ ಪ್ರೀತಿಯ ಪ್ರತೀಕ: ಮಾರ್ಟಿನ್ ಲೂಥರ್ ಕಿಂಗ್‌ರನ್ನು ಬೋಧಿಸತ್ವ ಎಂದ ಥಿಚ್

ಬಂಧಿತರನ್ನು ರಾಜಕೀಯ ಕೈದಿಗಳೆಂದು ಸರ್ಕಾರ ಪರಿಗಣಿಸಲಿಲ್ಲ. ಜೈಲು ಅಧಿಕಾರಿಗಳು ಅವರಿಗೆ ಕಠಿಣ ಕೆಲಸಗಳನ್ನು ಮತ್ತು ಅಸಮರ್ಪಕ ಊಟವನ್ನು ನೀಡಿದರು. ಹಾಗಾಗಿ ಜೈಲಿನ ಒಳಗೂ ಹೋರಾಟ ಮುಂದುವರಿಯಿತು. ಕೆಲವು ಪ್ರತಿಭಟನಾಕಾರರು ಅತಿಸಾರ ಹಾಗೂ ಹೊಟ್ಟೆ ಸಂಬಂಧಿತ ಕಾಯಿಲೆಗಳಿಂದ ಎರಡು ತಿಂಗಳೊಳಗೆ ಸಾವನ್ನಪ್ಪಿದರು. ಅವರಲ್ಲಿ ಪಟ್ಟುಕೊಟ್ಟೈ ರಾಮಸಾಮಿ ಮತ್ತು ಮನಲ್ಮೆಡು ವೆಲ್ಲೈಚಾಮಿ ಪ್ರಮುಖ ಹೆಸರುಗಳು. ಅವರು 1958ರ ಜನವರಿಯಲ್ಲಿ ಜೈಲಿನಲ್ಲೇ ನಿಧನರಾದರು. ಅವರ ದೇಹಗಳನ್ನು ಜೈಲಿನೊಳಗೆ ಸಮಾಧಿ ಮಾಡಲಾಯಿತು. ಅಣ್ಣೈ ಮಣಿಯಮ್ಮಯ್ಯರ್ ಪ್ರತಿಭಟನೆ ನಡೆಸಿ ಮೃತದೇಹಗಳನ್ನು ನೀಡುವಂತೆ ಗೃಹ ಸಚಿವರಲ್ಲಿ ಒತ್ತಾಯಿಸಿದರು. ಇದಾದ ಬಳಿಕ ಅವರ ದೇಹವನ್ನು ಹೊರತೆಗೆಯಲಾಯಿತು. ಆದರೆ, ಈ ಮಧ್ಯೆ ಮತ್ತೊಬ್ಬ ಪ್ರತಿಭಟನಾಕಾರ ಕೂಡ ಸಾವನ್ನಪ್ಪಿದನು.

ಈ ಮೂವರು ಮಾತ್ರವಲ್ಲ. ಸುಮಾರು ಹದಿಮೂರು ಪ್ರತಿಭಟನಾಕಾರರು ಅಂತಿಮವಾಗಿ ಬಿಡುಗಡೆಯಾದ ಒಂದು ವಾರದೊಳಗೆ ಸಾವನ್ನಪ್ಪಿದ್ದರು. ಜೈಲಿನೊಳಗೆ ಅವರು ಸಾಯಬಹುದೆಂದು ಹೆದರಿದ  ಸರ್ಕಾರ ಬಿಡುಗಡೆಗೆ ಆದೇಶಿಸಿತ್ತು ಎನ್ನುತ್ತಾರೆ ದ್ರಾವಿಡ ಇತಿಹಾಸಕಾರರು. ಒಟ್ಟಾರೆಯಾಗಿ, ಸುಮಾರು 18 ಪ್ರತಿಭಟನಾಕಾರರು ಜೈಲಿನ ಒಳಗೆ ಮತ್ತು ಹೊರಗೆ ಸಾವಿಗೀಡಾದರು.

ಇದಿಷ್ಟು, ಪೆರಿಯಾರ್ ನಡೆಸಿದ ಸಂವಿಧಾನ ದಹನ ಚಳವಳಿಯ ಸಂಕ್ಷಿಪ್ತ ಚರಿತ್ರೆ. ಅಂದು ಪೆರಿಯಾರ್ ಅವರು ಮಾಡಿದ ಹೋರಾಟವು ಸರಿಯೋ ತಪ್ಪೋ ಎಂದು ಇಂದು ಕುಳಿತು ಯೋಚಿಸಿದರೆ ಬೇರೆಯೇ ಚರ್ಚೆಗಳಿಗೆ ಅವಕಾಶ ಒದಗಿಸುತ್ತದೆ. ಅವರ ಕ್ರಮದ ಹಿಂದಿನ ಉದ್ದೇಶದಲ್ಲಿ ನಿಜವಾದ ಸಾಂವಿಧಾನಿಕ ಮೌಲ್ಯಗಳೇ ಇದ್ದವೆಂಬುದು ಸ್ಪಷ್ಟವಾಗುತ್ತದೆ. ಆದರೆ ಇಂದಿನ ಸನ್ನಿವೇಶದಲ್ಲಿ ನಿಜದ ಸಂವಿಧಾನ ವಿರೋಧಿಗಳು, ಕ್ರಾಂತಿಕಾರಕ ಚಿಂತನೆಗಳ ಕಾರಣಕ್ಕೆ ಪೆರಿಯಾರ್ ಮೇಲೆ ಅಸಹನೆ ಉಳ್ಳವರು, ದಲಿತರನ್ನು ವಿಭಜಿಸಿ ರಾಜಕಾರಣ ಮಾಡಲು ಬಯಸುತ್ತಿರುವವರು- ಈ ಚಾರಿತ್ರಿಕ ಘಟನೆಯನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಅಪಾಯವಿದೆ. ‘ಪೆರಿಯಾರ್ ಸಂವಿಧಾನ ಸುಟ್ಟರು’ ಎಂದು ಅರ್ಧಸತ್ಯವನ್ನು ಹೇಳಿ, ಪೆರಿಯಾರ್ ಅವರನ್ನು ಸಮಾನತೆಯ ವಿರೋಧಿ ಎಂಬಂತೆ ಬಿಂಬಿಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

(ಸೌಜನ್ಯ: ಕಲಾತೂರ್ ಮಣಿಯವರ ಭಾಷಣ ಆಧಾರಿಸಿ, ‘ಬಟ್ ಇಟ್ ಇಸ್’ ವೆಬ್‌ಸೈಟ್‌ನಲ್ಲಿ ಅರುಲ್ ಸೆಲ್ವಾನ್‌ ಅವರು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಿರುವ ಎರಡು ಕಂತಿನ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.)

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...