ಯದಾ ಚರ್ಮವದಾಕಾಶಂ ವೇಷ್ಟಯಿಷ್ಯಂತಿ ಮಾನವಾಃ |
ತದಾ ಶಿವಮವಿಜ್ಞಾಯ ದುಃಖಸ್ಯಾಂತೋ ಭವಿಷ್ಯತಿ ||
(ಆಕಾಶವನ್ನೇ ಚರ್ಮದಂತೆ ಹೊದೆದುಕೊಂಡು ಮಲಗುವ ಮನುಷ್ಯರಿಗೆ ಶಿವನನ್ನು ಅರಿಯದೆಯೂ ಸಹ ದುಃಖದಿಂದ ಬಿಡುಗಡೆ ಆಗುತ್ತದೆ)
ಅನುಭವ ಮಂಟಪದಲ್ಲಿ ಅಕ್ಕ-ಅಲ್ಲಮರು ಮೊದಲ ಸಲ ಭೇಟಿಯಾದಾಗ ಅಲ್ಲಮಪ್ರಭು ಅಕ್ಕನನ್ನು “ನೀನು ನಿಜವಾಗಿಯೂ ವಿರಕ್ತಳಾಗಿದ್ದರೆ, ಕಾಮ ವಿವರ್ಜಿತಳೇ ಆಗಿದ್ದರೆ ನಿನ್ನ ಗುಪ್ತಾಂಗಗಳನ್ನು ಕೂದಲಿನಿಂದ ಏಕೆ ಮುಚ್ಚಿಕೊಂಡಿರುವೆ? ನಿನ್ನ ಲಜ್ಜಾ ವರ್ತನೆಯನ್ನು ನೋಡಿದರೆ ನೀನಿನ್ನೂ ಶರೀರಭಾವದಿಂದ ಹೊರಬಂದಿಲ್ಲ ಎನಿಸುತ್ತದೆ” ಎಂದು ಆಕ್ಷೇಪಿಸುತ್ತಾನೆ. ಅದಕ್ಕೆ ಅಕ್ಕ ನೀಡಿದ ಉತ್ತರ ನಿಜವಾಗಿಯೂ ಆಘಾತಕಾರಿಯಾದುದು, “ನಾನು ಮರೆಮಾಡಿಕೊಂಡಿರುವುದು ನನ್ನೊಳಗಿನ ಕಾಮ ಬಯಲಾಗುವುದೆಂಬ ಭೀತಿಯಿಂದಲ್ಲ, ನಿಮ್ಮೊಳಗಿನ, ಅಂದರೆ ಜನಗಳ ಮನದೊಳಗಿನ, ಕಾಮದ ಹಂಗಿಗಾಗಿ ಮರೆಮಾಡಿಕೊಂಡಿದ್ದೇನೆ”.
ಜಗತ್ತಿನ ಎಲ್ಲ ತಾತ್ವಿಕ ಪ್ರಶ್ನೆಗಳನ್ನೂ ದಿಟ್ಟತನದಿಂದ ಅನುಸಂಧಾನ ಮಾಡುತ್ತಿದ್ದ ಅಲ್ಲಮಪ್ರಭುವಿನ ಬಳಿ ಅಕ್ಕನ ಈ ಒಂದು ಮಾಮೂಲಿ ಮಾತಿಗೆ ಮಾರುತ್ತರವಿರಲಿಲ್ಲ. “ನೋಡಿದೆಯಾ ಬಸವಣ್ಣ, ಅಕ್ಕನ ಹಿರಿಮೆ ಲೋಕಕ್ಕೆಲ್ಲ ಪ್ರಕಟವಾಗಲೆಂದು ನಾನು ಅವಳನ್ನು ಹೀಗೆಲ್ಲ ಒರಟಾಗಿ ಪ್ರಶ್ನಿಸಿದೆ” ಎಂದು ಹೇಳಿ ಪುರುಷತನಕ್ಕಾದ ಆ ಆಘಾತವನ್ನು ಮರೆಮಾಚಲೆತ್ನಿಸುತ್ತಾನೆ.
ʼನಗ್ನʼ ಎಂಬ ಸಂಸ್ಕೃತ ಪದ ದೇಶಭಾಷೆಯಲ್ಲಿ ʼನಂಗಾʼ ಆಗಿ, ಬಳಿಕ ಆಡುಮಾತಿನಲ್ಲಿ ʼನಾಗಾʼ ಎಂದು ಪರಿವರ್ತನೆಯಾಗಿದೆ. ನಗ್ನತೆಗೆ ಅನಾದಿಕಾಲದಿಂದಲೂ, ಪ್ರಥಮ ತೀರ್ಥಂಕರನಾದ ಆದಿನಾಥನ ಕಾಲದಿಂದಲೂ, ಒಂದು ಆಧ್ಯಾತ್ಮಿಕ ಮೌಲ್ಯವಿದೆ. ನಗ್ನತೆ ಭಾರತೀಯರಾದ ನಮಗೆಂದಿಗೂ ಲಜ್ಜೆಯ ಅಥವಾ ಕುತೂಹಲದ ವಿಷಯವಾಗಿರಲಿಲ್ಲ. ವರಕವಿ ದ.ರಾ. ಬೇಂದ್ರೆಯವರು
“ಸೆರಗಿಲ್ದ
ಬೆರಗಿಲ್ದ |
ಹೆದರೀಕಿ ಹೊರಗಿಲ್ದ |
ಮರಗಿಲ್ದ ಕೊರಗಿಲ್ದ | ಕುಣಿಯೋಣು ಬಾ ||
ನಾಚೀಗಿ ಗೀಚೀಗಿ
ಕಳೆದೊಗೆದಾಚೀಗಿ |
ಬೀಸಾಗಿ ಈಚಿಗಿ | ಕುಣಿಯೋಣು ಬಾ ||”
ಎಂದು ಹಾಡಿದ್ದರು. ಆದರೆ ಕುಂಭಮೇಳದಲ್ಲಿ ಇಂತಹ ಆಧ್ಯಾತ್ಮಿಕ ಮೌಲ್ಯವುಳ್ಳ ನಗ್ನತೆ ಕ್ಷುಲ್ಲಕ ಕುತೂಹಲವನ್ನು ಕೆರಳಿಸಿದುದನ್ನು, ಕ್ಷಣಭಂಗುರವಾದ ವ್ಯಾಪಾರೀ ಮೌಲ್ಯವನ್ನು ಪಡೆದುಕೊಂಡುದನ್ನು ನೋಡಿದರೆ ಅದು ಕುಂಭಮೇಳದ ವೈಫಲ್ಯವನ್ನಲ್ಲ, ನಮ್ಮೊಳಗಿನ ಅಧಃಪತನವನ್ನು ಸೂಚಿಸುತ್ತದೆ.
ಈ ಅಧಃಪತನದ ಪರಿಣಾಮವಾಗಿಯೇ ಪ್ರಾಯಶಃ “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎಂಬ ಗಾದೆ ಮಾತು ನಮ್ಮಲ್ಲಿ ಇತ್ತೀಚೆಗೆ ಹುಟ್ಟಿರಬೇಕು. ಸಿನಿಮಾ, ಜಾಹೀರಾತು, ಫ್ಯಾಷನ್ ಜಗತ್ತುಗಳಲ್ಲಿ ಬಟ್ಟೆಯ ಪ್ರಮಾಣ ಕಡಿಮೆಯಾದಷ್ಟೂ ನಟಿಯರ, ರೂಪದರ್ಶಿಯರ ಬೇಡಿಕೆ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ರಾಜಕಾರಣ ಕ್ಷೇತ್ರವೂ ಇದಕ್ಕಿಂತ ಭಿನ್ನವಾದುದೇನಲ್ಲ.

ಮನುಷ್ಯರು ತಮ್ಮೊಳಗಿನ ಭ್ರಷ್ಟತನವನ್ನು ಬೆತ್ತಲೆಯಾಗಿಸದ ಹೊರತು ಆ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲಾಗುವುದಿಲ್ಲ. ಇಂದು ನಗ್ನತೆ ಅಲೌಕಿಕ ಧಾರ್ಮಿಕ ಕ್ಷೇತ್ರವನ್ನು ಬಿಟ್ಟು ಲೌಕಿಕ ಬದುಕಿನ ಹಲವು ಕ್ಷೇತ್ರಗಳಲ್ಲಿ ವಿಸ್ತರಿಸುತ್ತಿದೆ. ನಗ್ನತೆಗೆ ಧಾರ್ಮಿಕ ಕ್ಷೇತ್ರವಲ್ಲದೇ ವಾಣಿಜ್ಯ ಕ್ಷೇತ್ರದಲ್ಲೂ ವ್ಯಾಪಾರೀ ಮೌಲ್ಯವಿದೆ ಎಂದು ಈ ಸಲದ ಕುಂಭಮೇಳ ಸಾಬೀತು ಮಾಡಿದೆ. ಮೊನ್ನೆ ದಿವಸ ಪ್ರಸಿದ್ಧ ಕನ್ನಡ ಚಾನೆಲ್‌ನ ಸುದ್ದಿ ನಿರೂಪಕರೊಬ್ಬರು ಕುಂಭಮೇಳದಿಂದ ಎಷ್ಟು ಕೋಟಿ ವ್ಯಾಪಾರ ವಹಿವಾಟುಗಳಾಗಿವೆ, ನಾನಾ ಉದ್ಯಮಗಳು ಎಷ್ಟೆಷ್ಟು ಕೋಟಿ ಲಾಭ ಗಳಿಸಿವೆ ಎಂಬ ಅಂಕಿ ಅಂಶವನ್ನು ವಿವರಿಸುತ್ತ ಕುಂಭಮೇಳವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಕುಂಭಮೇಳದಿಂದ ಲೌಕಿಕ ಲಾಭವಾಗುವುದಾದರೆ ಅದನ್ನು ಯಾರೂ ಆಕ್ಷೇಪಿಸುವುದಿಲ್ಲ, ಲೌಕಿಕ ಸಮೃದ್ಧಿ ಆಕ್ಷೇಪಾರ್ಹವೂ ಅಲ್ಲ. ಕುಂಭಮೇಳದಂತಹ ಅಪರೂಪದ ಧಾರ್ಮಿಕ ಸಂದರ್ಭದಲ್ಲಿ ಲೌಕಿಕ ಲಾಭ ಗೌಣವಾದುದು, ಆನುಷಂಗಿಕವಾದುದು. ಆದರೆ ಲೌಕಿಕ ಲಾಭದ ಲೆಕ್ಕಾಚಾರವೇ ಕುಂಭಮೇಳದ ಆಯೋಜನೆಗೆ ಒಂದು ಸಮರ್ಥನೆಯಾಗಬಾರದು. ಗೋಮಾತೆಯನ್ನು ಸಾಕುವವರು ಎಷ್ಟು ಪ್ರಮಾಣದ ಹಾಲು ಉತ್ಪಾದನೆಯಾಯಿತೆಂದು ಲೆಕ್ಕಿಸುವರೇ ವಿನಾ ಎಷ್ಟು ಪ್ರಮಾಣದ ಸಗಣಿ ದೊರೆತಿತೆಂದು ಲೆಕ್ಕ ಹಾಕುವುದಿಲ್ಲ.
ಇದನ್ನೂ ಓದಿರಿ: ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು
ಇಂದು ಎಲ್ಲ ಸುದ್ದಿ ಮಾಧ್ಯಮಗಳಲ್ಲಿಯೂ ಪ್ರತಿನಿತ್ಯವೂ ಕುಂಭ ಮೇಳದ ಕುರಿತ ಒಂದಲ್ಲ ಒಂದು ಸುದ್ದಿ ಪ್ರಕಟವಾಗುತ್ತಲೇ ಇದ್ದರೂ ಎರಡು ಸುದ್ದಿಗಳು ಅತಿಹೆಚ್ಚು ಟ್ರೆಂಡಿಂಗ್‌ನಲ್ಲಿವೆ. ಒಂದು, ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಿನಿಮಾ ತಾರೆಯಾಗಿ ಮಿಂಚಿದ ರುದ್ರಾಕ್ಷಿ ಮಾರುವ ಅಗಲಗಣ್ಣಿನ ಯುವತಿಯೋರ್ವಳ ಬೆಡಗು ಬಿನ್ನಾಣದ ಸುದ್ದಿ ಚಿತ್ರಗಳು; ಮತ್ತೊಂದು ನಾಗಾ ಸಾಧುಗಳ ವಿಕೃತ, ವಿಲಕ್ಷಣ ಚೇಷ್ಟೆಗಳ ವೀಡಿಯೋ ಚಿತ್ರಗಳು. ಈ ಎರಡೂ ಸುದ್ದಿಗಳು ನಿಜವಾದ ಧಾರ್ಮಿಕತೆಯ ಗಂಧವಿಲ್ಲದ ಮನುಷ್ಯರೊಳಗಿನ ಪಾಶವೀ ಪ್ರವೃತ್ತಿಗಳ ವಿಜೃಂಭಣೆಗಳಾಗಿವೆ. ಒಂದು ನಮ್ಮ ಕಾಮುಕ ಪ್ರಲೋಭನೆಯ ವಸ್ತುವಾದರೆ ಮತ್ತೊಂದು ನಮ್ಮ ಪಾಶವೀ ಪ್ರಲೋಭನೆಯ ಅಭಿವ್ಯಕ್ತಿಯಾಗಿದೆ.

ಈ ನಾಗಾಸಾಧುಗಳಿಗೆ, ಇವರ ವಿಕೃತ ಆಚರಣೆಗಳಿಗೆ, ಇವರ ಅಸಹ್ಯಕರ, ಅವೈಜ್ಞಾನಿಕ, ಅಭಿರುಚಿಹೀನ ಜೀವನ ಪದ್ಧತಿಗೆ ಭಾರತದ ಯಾವ ದಾರ್ಶನಿಕ ಧಾರೆಯಲ್ಲಿಯೂ ಶಾಸ್ತ್ರೋಕ್ತವಾದ ಪುರಾವೆಯಾಗಲಿ, ಅನುಮೋದನೆಯಾಗಲಿ ಸಿಗುವುದಿಲ್ಲ. ಇವರು ಗೋರಕ್ಷನಾಥರ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಗೋರಕ್ಷನಾಥರದ್ದು ಎನ್ನಲಾಗುವ ಯಾವ ಕೃತಿಯಲ್ಲಿಯೂ ನಾಗಾ ಸಾಧುಗಳ ಆಚರಣೆಗಳಿಗೆ ಸಮರ್ಥನೆ ಸಿಗುವುದಿಲ್ಲ. ಗೋರಕ್ಷನಾಥರ ʼಸಿದ್ಧಸಿದ್ಧಾಂತ ಪದ್ಧತಿʼ ಭಾರತದ ಎಲ್ಲ ನಾಥ ಪಂಥಿಗಳಿಗೂ ಇದು ಪ್ರಮಾಣಗ್ರಂಥವಾಗಿದೆ. ಈ ಗ್ರಂಥದಲ್ಲಿ ಇಂತಹ ಬೆತ್ತಲೆ ಸಾಧಕರ ತೀಕ್ಷ್ಣವಾದ ಖಂಡನೆ ಇದೆ:
ಆಚಾರ್ಯಾಃ ಬಹುದೀಕ್ಷಿತಾಃ ಹುತಿರತಾಃ ನಗ್ನವ್ರತಾಸ್ತಾಪಸಾಃ |
ನಾನಾತೀರ್ಥ ನಿಷೇವಕಾ ಜಪಪರಾ ಮೌನೇ ಸ್ಥಿತಾ ನಿತ್ಯಶಃ ||
ಏತೇ ಖಲು ದುಃಖಭಾರ ನಿರತಾ ಸತ್ತತ್ತ್ವತೋ ವಂಚಿತಾಃ
ತಸ್ಮಾತ್ ಸಿದ್ಧಮತಂ ಸ್ವಭಾವ ಸಮಯಂ ಧೀರಾಃ ಸದಾ ಸಂಶ್ರಯೇತ್ ||
(ಸಿದ್ಧ ಸಿದ್ಧಾಂತ ಪದ್ಧತಿ ೬.೭೮)
(ಅನೇಕ ಶಿಷ್ಯರುಗಳಿಗೆ ಮಂತ್ರ ದೀಕ್ಷೆ ನೀಡುವ ಗುರುಜನರು, ಆಚಾರ್ಯರು, ಯಜ್ಞ ಯಾಗಾದಿ ಹವನ ಕರ್ಮದಿಂದ ಮುಕ್ತಿ ನೀಡುವವರು, ದಿಗಂಬರರು, ತಾಪಸರು, ಅನೇಕ ತೀರ್ಥಗಳಲ್ಲಿ ಅಲೆದಾಡುವವರು, ಜಪಸಾಧನೆ ಮಾಡುವವರು, ಮೌನವ್ರತ ಧರಿಸುವವರು ಇವರೆಲ್ಲರೂ ವ್ಯರ್ಥ ದುಃಖಭಾರದಿಂದ ಕೂಡಿದವರು. ಅವರಿಗೆ ಸತ್ ಸ್ವರೂಪದ ಪ್ರಾಪ್ತಿ ಆಗಿರುವುದಿಲ್ಲ. ಆದ್ದರಿಂದ ತಮ್ಮ ಸ್ವಭಾವದಲ್ಲಿ ನಿಷ್ಠರಾಗುವ ಸಾಧಕರು ಸಿದ್ಧಮತವನ್ನು ಆಶ್ರಯಿಸಬೇಕು).
ಇಲ್ಲಿ ಗೋರಕ್ಷನಾಥರು ಬೆತ್ತಲಾಗುವುದನ್ನೇ ತಪಸ್ಸಾಧನೆ ಎಂದು ಭಾವಿಸುವ ನಾಗಾ ಸಾಧುಗಳ ತರಹದ ವೇಷಡಂಭಕರನ್ನೇ ಉದ್ದೇಶಿಸಿ ನುಡಿಯುತ್ತಿರುವಂತಿದೆ.
ಮೈಗೆ ಬೂದಿ ಬಳಿದುಕೊಳ್ಳುವುದಕ್ಕೆ ಒಂದು ಸಾಂಕೇತಿಕ ಅರ್ಥವಿದೆ. ವಿಭೂತಿ ಧಾರಣೆ ಒಂದು ಆಚರಣೆಯ ಪ್ರಶ್ನೆಯಲ್ಲ, ಅದು ಒಂದು ಮನಸ್ಥಿತಿಯನ್ನು ಸಾಧಿಸಲು ಪೂರಕವಾಗುವಂತಹ ಆಚರಣೆಯಾಗಿದೆ. ಬೂದಿ ನಶ್ವರತೆಯನ್ನು, ಮೃಣ್ಮಯತೆಯನ್ನು, ನಿರಾಕಾರವನ್ನು ಸಂಕೇತಿಸುತ್ತದೆ. ಇದನ್ನು ಗೋರಕ್ಷನಾಥರು ಬಹಳ ಮಾರ್ಮಿಕವಾಗಿ ಸೂಚಿಸಿದ್ದಾರೆ:
ಸಂತಾಪಯತಿ ದೀಪ್ತಾನಿ ಸ್ವೇಂದ್ರಿಯಾಣಿ ಚ ಯಃ ಸದಾ |
ತಾಪಸಃ ಸ ತು ವಿಜ್ಞೇಯೋ ನ ಚ ಗೋಭಸ್ಮಧಾರಕಃ ||
(ಸಿದ್ಧ ಸಿದ್ಧಾಂತ ಪದ್ಧತಿ ೬.೪೦)
(ಉದ್ದೀಪ್ತಗೊಂಡಿರುವ ತನ್ನ ಇಂದ್ರಿಯ ಕಾಮನೆಗಳನ್ನು ಯಾರು ನಿಗ್ರಹಿಸಿ ಭಸ್ಮ ಮಾಡಿರುವರೋ ಅವರು ನಿಜವಾದ ತಪಸ್ವಿಗಳು ಹಸುವಿನ ಸಗಣಿಯನ್ನು ಸುಟ್ಟು ಆ ಬೂದಿಯನ್ನು ಮೈಗೆಲ್ಲ ಬಳಿದುಕೊಳ್ಳುವವರಲ್ಲ).
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ಹೆಣ್ಣುಮಕ್ಕಳು ಕಪ್ಪುಬಟ್ಟೆ ಹೊದೆದು ಮೈಯನ್ನು ಪೂರ್ತಿಯಾಗಿ ಮುಚ್ಚಿಕೊಂಡು ರಸ್ತೆಯಲ್ಲಿ ನಡೆದಾಡಬೇಕೆಂದು ಕಟ್ಟುಪಾಡು ಮಾಡುವುದು ಹೇಗೆ ಧಾರ್ಮಿಕ ವಿಕೃತಿಯೋ ಅದೇ ರೀತಿ ಮೈಯನ್ನು ಪೂರ್ತಿಯಾಗಿ ಬೆತ್ತಲಾಗಿಸಿಕೊಂಡು ಗುಂಪುಗುಂಪಾಗಿ ನಡೆಯಬೇಕೆಂದು ಆದೇಶಿಸುವುದು ಸಹ ಮತ್ತೊಂದು ಧಾರ್ಮಿಕ ವಿಕೃತಿಯೇ ಆಗಿದೆ. ನಿಜವಾದ ಧಾರ್ಮಿಕತೆ ಶರೀರ ಭಾವವನ್ನು ಮೀರುವುದಾಗಿದೆ. ಶರೀರವನ್ನು ಅನ್ಯರ ಕಣ್ಣಿನಿಂದ ಮರೆಮಾಚುವುದು ಅಥವಾ ಶರೀರದ ಬೆತ್ತಲೆಯನ್ನು ಅನ್ಯರ ಕಣ್ಣಿನೆದುರು ಪ್ರದರ್ಶಿಸುವುದು- ಮೇಲ್ನೋಟಕ್ಕೆ ವ್ಯತಿರಿಕ್ತ ವರ್ತನೆ ಎನಿಸಿದರೂ ಆಳದಲ್ಲಿ ಅದು- ಒಂದೇ ನಮೂನೆಯ ಮನೋ ವೈಕಲ್ಯವಾಗಿದೆ. ಏಕೆಂದರೆ ಇಬ್ಬರ ಪಾಲಿಗೂ ಶಾರೀರಕ ಬೆತ್ತಲೆಯೇ ಏಕಾಗ್ರತೆಯ ಕೇಂದ್ರವಾಗಿದೆ.
ನಾಗಾ ಸಾಧುಗಳ ಬೆತ್ತಲೆ ಪ್ರದರ್ಶನವಷ್ಟೇ ಅಲ್ಲ, ಅವರ ಯಾವ ಆಚರಣೆಯೂ ಸನಾತನ ಭಾರತೀಯ ಪರಂಪರೆಯನ್ನು ಪ್ರತಿನಿಧಿಸುವಂತಹುದಲ್ಲ. ಇವರು ಅಖಾಡಾಗಳನ್ನು ನಿರ್ಮಿಸಿಕೊಂಡು ಗುಂಪುಗುಂಪಾಗಿ ವಾಸಿಸುತ್ತಾರೆ, ಗುಂಪು ಗುಂಪಾಗಿ ಸಂಚರಿಸುತ್ತಾರೆ. ಆದರೆ ನಾಥ ಸಂಪ್ರದಾಯವು ಸನ್ಯಾಸಿಗಳ ಇಂತಹ ಸಮೂಹ ಜೀವನ ಪದ್ಧತಿಯನ್ನು ಎಂದೂ ಅನುಮೋದಿಸುವುದಿಲ್ಲ. ಸನ್ಯಾಸಿ ಸದಾಕಾಲ ಒಬ್ಬಂಟಿಯಾಗಿರಬೇಕೆಂದು ಸೂಚಿಸುತ್ತದೆ “ಸಿಂಹೋಂ ಕಿ ನಹಿ ಲೆಹಡೇ | ಸಂತೋಂ ಕಿ ನಹಿ ಜಮಾತ್ ||” (ಸಿಂಹಗಳ ಸಾಮೂಹಿಕ ಜೀವನ ಸಾಧ್ಯವಿಲ್ಲ; ಅದೇ ರೀತಿ ಸಂತರ ಸಭೆ ಸಂಘಟನೆ ಇರಲು ಸಾಧ್ಯವಿಲ್ಲ) (ಸಿಂಹಗಳು ಗುಂಪಾಗಿ ವಾಸಿಸುತ್ತವೆಂದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ ನಿಜ. ಆದರೆ ಕವಿಸಮಯಕ್ಕೆ ವೈಜ್ಞಾನಿಕ ಪುರಾವೆಯ ಬೆಂಬಲದ ಅಗತ್ಯವಿಲ್ಲ. ಚಂದ್ರಕಾಂತ ಶಿಲೆ ಚಂದ್ರೋದಯವಾದೊಡನೆ ಕರಗಿ ನೀರಾಗಲಾರಂಭಿಸುತ್ತದೆ ಎಂಬುದು ಒಂದು ಕವಿಸಮಯ. ಇದನ್ನು ಯಾವ ಭೂಗೋಳಶಾಸ್ತ್ರಜ್ಞನೂ ಅನುಮೋದಿಸುವುದಿಲ್ಲ, ಇದು ಕವಿಕಲ್ಪನೆಯಾದ್ದರಿಂದ ಅನುಮೋದಿಸಬೇಕಾದ ಅಗತ್ಯವೂ ಇಲ್ಲ. ಆದ್ದರಿಂದ ಇಲ್ಲಿ ಗೋರಕ್ಷನಾಥರ ಲಕ್ಷ್ಯಾರ್ಥವನ್ನು ಅನುಲಕ್ಷಿಸಬೇಕೇ ವಿನಾ ವಾಚ್ಯಾರ್ಥವನ್ನಲ್ಲ). ಸನ್ಯಾಸಿ ಬೇಕಾದರೆ ನಾಲ್ಕು ಗೋಡೆಗಳ ಮಧ್ಯೆ ಬದುಕಬಹುದು (ಕುಟೀಚಕ ಸನ್ಯಾಸ) ಅಥವಾ ಒಂದೆಡೆ ವಾಸಿಸದೇ ಹಲವು ಸ್ಥಳಗಳಲ್ಲಿ ಸಂಚರಿಸಬಹುದು (ಬಹೂದಕ). ಆದರೆ ಏಕಾಂಗಿಯಾಗಿ ಜೀವಿಸಬೇಕಲ್ಲದೇ ಸಮೂಹ ಜೀವನ ನಡೆಸಬಾರದು ಎಂದು ಸನ್ಯಾಸೋಪನಿಷತ್ತು ಸೂಚಿಸುತ್ತದೆ.
ಈ ನಾಗಾಸಾಧುಗಳು ಮೊಘಲರ ವಿರುದ್ಧ ಹೋರಾಡಲು ಕಟಿಬದ್ಧರಾಗಿದ್ದ ಸೈನಿಕರಾಗಿದ್ದರಂತೆ, ತಪಸ್ಸಾಧನೆಯ ಜೊತೆಗೆ ಶಸ್ತ್ರಾಸ್ತ್ರಗಳ ತಯಾರಿಕೆ, ತರಬೇತಿಗಳಲ್ಲಿಯೂ ನಿರತರಾಗಿದ್ದರಂತೆ. ಬಡ್ಡಿಗೆ ಹಣ ನೀಡಿ ಲೇವಾದೇವಿ ವ್ಯವಹಾರ ಕೂಡ ಮಾಡುತ್ತಿದ್ದರಂತೆ. ವ್ಯಾಪಾರ ವಾಣಿಜ್ಯ, ಯುದ್ಧ, ರಕ್ಷಣಾ ವ್ಯವಹಾರ ಇವೆಲ್ಲ ಪ್ರಭುತ್ವ ನಿರ್ವಹಿಸಬೇಕಾದ ಕರ್ತವ್ಯಗಳೇ ವಿನಾ ಧಾರ್ಮಿಕ ವ್ಯಕ್ತಿಗಳು ವಹಿಸಿಕೊಳ್ಳಬೇಕಾದ ಕೆಲಸವಲ್ಲ. ಇದನ್ನು ಮನಗಂಡಿದ್ದ ಮಧ್ಯಯುಗದ ತತ್ವಜ್ಞಾನಿ ವೋಲ್ಟೇರ್ ಸಂಸತ್ ಮತ್ತು ಚರ್ಚ್‌ಗಳ ನಡುವೆ ಸ್ಪಷ್ಟವಾದ ಅಂತರ ಕಾಯ್ದುಕೊಳ್ಳಬೇಕೆಂದು ಹೇಳಿದ್ದ.
ದಾಳಿಕೋರರು ಬಂದಾಗ ಆತ್ಮರಕ್ಷಣೆಯ ಪ್ರಯತ್ನ ಮಾಡಬಾರದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಈ ಪ್ರಶ್ನೆ ಆಳುವ ಪ್ರಭುಗಳನ್ನು ಕಾಡಬೇಕೇ ವಿನಾ ಅಡವಿಯ ಸಾಧಕರನ್ನಲ್ಲ. ಪ್ರಭುತ್ವ ವಹಿಸಿಕೊಳ್ಳಬೇಕಾಗಿದ್ದ ಕೆಲಸವನ್ನು ನಾಗಾ ಸಾಧುಗಳು ವಹಿಸಿಕೊಂಡಿದ್ದರೆಂದರೆ ಅಂದಿನ ಭಾರತದ ಪ್ರಭುತ್ವ ನಿಜಕ್ಕೂ ನಿರ್ವೀರ್ಯವಾಗಿತ್ತೆಂದು ತೀರ್ಮಾನಿಸಬೇಕಾಗುತ್ತದೆ. ಇದಕ್ಕೆ ಮೊಗಲರ ಯಶಸ್ವೀ ಆಳ್ವಿಕೆಯೇ ಪುರಾವೆಯಾಗಿದೆ. ಎಲ್ಲಿ ಧಾರ್ಮಿಕ ವ್ಯಕ್ತಿಗಳು ಲೌಕಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವರೋ ಅಲ್ಲಿ ಧರ್ಮವೂ ಹಳಿ ತಪ್ಪುತ್ತದೆ, ಹಾಗೆಯೇ ರಾಜಕಾರಣವೂ ಭ್ರಷ್ಟವಾಗುತ್ತದೆ. ಸಾಧುಗಳೆನಿಸಿಕೊಂಡವರು ಲೇವಾದೇವಿ ವಹಿವಾಟಿಗೆ ಇಳಿಯುವುದೇ? ಅಂದಿನ ಭ್ರಷ್ಟತೆಯೇ ಇಂದಿನ ಕುಂಭಮೇಳದಲ್ಲಿ ನಾನಾ ವಿಕಾರಗಳಲ್ಲಿ ಮೈದೋರುತ್ತಿದೆ.
ಇದನ್ನೂ ಓದಿರಿ: ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ
ಯೋಗದರ್ಶನದ ಪ್ರಮುಖ ಪ್ರವರ್ತಕರಾದ ಪತಂಜಲಿ ಮಹರ್ಷಿಗಳು ಯೋಗ ಸಾಧನೆ ಮಾಡುವವರು ಮೊದಲು ತಮ್ಮ ಬದುಕಿನಲ್ಲಿ ಅಹಿಂಸೆಯನ್ನು ಅನುಷ್ಠಾನ ಮಾಡಬೇಕು (ಯೋಗಸೂತ್ರಗಳು ೨.೩೦) ಎಂದಿರುವರೇ ವಿನಾ ಯುದ್ಧಶಸ್ತ್ರಗಳನ್ನು ಕೈಗೆತ್ತಿಕೊಂಡು ಆಕ್ರಮಣಕಾರಿಗಳಾಗಬೇಕೆಂದು ಉಪದೇಶಿಸಿಲ್ಲ. ಯೋಗವೆಂದರೆ ಶರೀರವನ್ನು ಸ್ಥಿರವಾಗಿ ಸುಖವಾಗಿ ಇರಿಸಿಕೊಳ್ಳಬೇಕು (ಯೋಗಸೂತ್ರಗಳು ೨.೪೬) ಎಂದು ಕಿವಿಮಾತು ಹೇಳಿರುವರೇ ವಿನಾ ಶರೀರ ದಂಡನೆ ಮಾಡಬೇಕೆಂದು ವಿಧಿಸಿಲ್ಲ.
ವರ್ಷಗಟ್ಟಲೆ, ದಶಕಗಟ್ಟಲೆ ಕೈಯನ್ನು ಮೇಲಕ್ಕೆತ್ತಿ ಹಿಡಿದರೆ ಅಷ್ಟಸಿದ್ಧಿಯಾಗುವುದಂತೆ. ಹಾಗೆಲ್ಲ ಮಾಡಿದರೆ ಕೈಯಲ್ಲಿ ರಕ್ತಸಂಚಾರ ಸ್ಥಗಿತವಾಗುತ್ತದೆ, ಕೈಯ ಮೂಳೆ ಮತ್ತು ನರಗಳು ಚಲನೆಯನ್ನು ಕಳೆದುಕೊಂಡು ಇಡೀ ಬಾಹು ಒಂದು ನಿರ್ಜೀವ ಕೊರಡಿನಂತಾಗುತ್ತದೆ. ಅಂತರಂಗದಲ್ಲೂ ಬಹಿರಂಗದಲ್ಲೂ ಸ್ವಸ್ಥನಾಗಿರಬೇಕಾದ ಯೋಗಿ ರೋಗಗ್ರಸ್ತನಾಗುತ್ತಾನೆ, ವಿಕಲಾಂಗನಾಗುತ್ತಾನೆ. ಇಂತಹ ಹುಚ್ಚು ಸಾಧನೆಯನ್ನು ಪುರಾತನ ಯೋಗ ದಾರ್ಶನಿಕರಾದ ಪತಂಜಲಿಯಾಗಲಿ, ಅಭಿನವಗುಪ್ತನಾಗಲಿ, ಸ್ವಾತ್ಮಾರಾಮರಾಗಲಿ ತಮ್ಮ ಯಾವ ಕೃತಿಯಲ್ಲಿಯೂ ಎಲ್ಲಿಯೂ ಉಲ್ಲೇಖಿಸಿಲ್ಲ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ತಮ್ಮ ಜೀವನವನ್ನು ವಿಕಲಗೊಳಿಸಿಕೊಳ್ಳುವ ಸ್ವಾತಂತ್ರ್ಯವೂ ಇರಬಹುದು. ಆದರೆ ಇಂಥಹ ಮನೋರೋಗಿಗಳನ್ನು ಸಾಧು ಸತ್ಪುರುಷರು ಎಂದು ಆರಾಧಿಸುವ ನಮ್ಮ ಜನಕ್ಕೇನಾಗಿದೆ? ನಮ್ಮ ಮಾಧ್ಯಮಗಳ ವಿವೇಚನಾ ಪ್ರಜ್ಞೆ ಎಲ್ಲಿ ಹೋಗಿದೆ?
ನಗ್ನತೆಗಿರುವ ಪರಮ ಮೌಲ್ಯದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಪಶ್ಚಿಮದ ಜನ “ಇದೊಂದು ಹುಚ್ಚು ಧರ್ಮ” ಎಂದು ಲೇವಡಿ ಮಾಡುತ್ತಿದ್ದಾರೆ. ನಾವು ಪರದೇಶೀಯರ ಮೆಚ್ಚುಗೆ ಶ್ಲಾಘನೆಗಳನ್ನು ಎದುರು ನೋಡಬೇಕಾದ ಅವಶ್ಯಕತೆಯಿಲ್ಲ ನಿಜ. ಆದರೆ ಕುಂಭಮೇಳದಲ್ಲಿ ನಾಗಾಸಾಧುಗಳ ಅತಿರೇಕಗಳಿಂದಾಗಿ ಅನವಶ್ಯಕವಾಗಿ ಭಾರತದ ಧಾರ್ಮಿಕ ಮೌಲ್ಯ ವಿಶ್ವ ಸಮುದಾಯದೆದುರು ಹರಾಜಾಗುತ್ತಿದೆ. ಭಾರತ ನಿಜಾರ್ಥದಲ್ಲಿ ವಿಶ್ವಗುರುವಾಗಬೇಕೆಂದರೆ ಕುಂಭಮೇಳದಂತಹ ವಿದ್ಯಮಾನಗಳು ಸನಾತನ ಭಾರತೀಯ ನಂಬಿಕೆಗಳ ಅತ್ಯುನ್ನತ ಆದರ್ಶಗಳನ್ನು ಪ್ರತೀತಗೊಳಿಸುವ ಆಚರಣೆಯಾಗಬೇಕಲ್ಲದೇ ಸಾಧುವೇಷದ ಮತಿಹೀನ ವ್ಯಕ್ತಿಗಳ ಮೆರವಣಿಗೆಯಾಗಬಾರದು.

ಡಾ. ಟಿ.ಎನ್. ವಾಸುದೇವಮೂರ್ತಿ
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು, ಕಿರಂ ನಾಗರಾಜ ಅವರ ಮಾರ್ಗದರ್ಶನದಲ್ಲಿ ಅಲ್ಲಮನ ಕುರಿತು ಸಂಶೋಧನೆ ಮಾಡಿದವರು. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ಪಡೆದಿರುವ ಇವರು ಓಶೋ ರಜನೀಶರ ಹಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಬುದ್ಧ ಮತ್ತು ಪರಂಪರೆ, ಹುಚ್ಚುತನವೇ ಅನುಗ್ರಹ ನೀಷೆ, ಓಶೋ ಕಾವ್ಯಧರ್ಮ ಮತ್ತು ಧರ್ಮ, ಜ್ಹೆನ್ ಹಾಯ್ಕುಗಳು, ಮಹಾತ್ಮ, ರಮಣ ಹೃದಯ, ದೇವರು, ಇದನ್ನು ಬಯಸಿರಲಿಲ್ಲ, ಧ್ಯಾನಸಿದ್ಧ- ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ.




