ಗಡಿ ಪ್ರದೇಶದಲ್ಲಿ ಎರಡು ಹೊಸ ಜಿಲ್ಲೆಗಳನ್ನು ಚೀನಾ ಘೋಷಿಸಿದ್ದು, ಈ ಪೈಕಿ ಒಂದು ಜಿಲ್ಲೆಯನ್ನು ವಿವಾದಿತ ಗಡಿಯಲ್ಲಿ ನಿರ್ಮಿಸಲಾಗಿದೆ ಎಂದು ಭಾರತ ಇತ್ತೀಚೆಗೆ ಪ್ರತಿಭಟಿಸಿತು. ವಿವಾದಿತ ಗಡಿಪ್ರದೇಶದಲ್ಲಿ ರಸ್ತೆಗಳು, ಹೆದ್ದಾರಿಗಳನ್ನು ನಿರ್ಮಿಸುತ್ತ ಬಂದಿದ್ದ ಕಳೆದ ಕೆಲವು ವರ್ಷಗಳಲ್ಲಿ ಸುಸಜ್ಜಿತ ಹಳ್ಳಿಗಳನ್ನೇ ಕಟ್ಟಿದೆ ಚೀನಾ.
ಅರುಣಾಚಲ ಪ್ರದೇಶದ ಅಪ್ಪರ್ ಸುಭಾನ್ಸಿರಿ ಜಿಲ್ಲೆಯ ತ್ಸಾರಿ ಚು ನದಿಯ ದಂಡೆಯಲ್ಲಿ 2020ರ ನವೆಂಬರ್‌ನಲ್ಲೇ ಚೀನಾ ನಿರ್ಮಿಸಿರುವ ಹಳ್ಳಿಯ ಉಪಗ್ರಹ ಛಾಯಾಚಿತ್ರಗಳನ್ನು ಎನ್.ಡಿ.ಟಿ.ವಿ. ತೋರಿಸಿತ್ತು. ಗಡಿಯ ಈಚೆಗಿನ ಭಾರತದ ಭಾಗದಲ್ಲಿ ಸಾವಿರಾರು ಮಂದಿ ವಾಸ ಮಾಡಬಲ್ಲ ಹಳ್ಳಿಯನ್ನು ನಿರ್ಮಿಸಲಾಗಿದೆ ಎಂದು ಹಲವಾರು ತಜ್ಞರು ದೃಢಪಡಿಸಿದ್ದರು. ಈ ಭಾಗವು ಭಾರತದ್ದಾದರೂ 1959ರಿಂದ ಚೀನೀ ವಶದಲ್ಲಿತ್ತು. ಆದರೆ 2020ಕ್ಕೆ ಮುನ್ನ ಇಲ್ಲಿ ಕೇವಲ ಚೀನೀ ಮಿಲಿಟರಿ ಠಾಣೆಯಷ್ಟೇ ಇತ್ತು. ಗಾಲ್ವಾನ್ ಕಣಿವೆಯ ಭಾರತ-ಚೀನಾ ಮಿಲಿಟರಿ ಘರ್ಷಣೆಯ ನಂತರ 2020ರ ಜೂನ್ ತಿಂಗಳಲ್ಲಿ ‘..ಯಾರೂ ಒಳನುಗ್ಗಿಲ್ಲ…’ ಎಂದು ಮೋದಿಯವರು ಚೀನಾಗೆ ‘ನಿರ್ದೋಷಿ’ ಪ್ರಮಾಣಪತ್ರ ನೀಡಿದ ನಂತರ ಕಟ್ಟಿದ ಹಳ್ಳಿಯಿದು ಎಂಬುದು ಗಮನಾರ್ಹ.
2020ರ ನವೆಂಬರ್‌ನಲ್ಲಿ ಈ ಉಪಗ್ರಹ ಚಿತ್ರವನ್ನು ತೆಗೆದುಕೊಳ್ಳಲಾಗಿತ್ತು. ಆಗಲೇ ಅಪ್ಪರ್ ಸುಭಾನ್ಸಿರಿ ಜಿಲ್ಲೆಯಲ್ಲಿ ಚೀನೀಯರು ನಿರ್ಮಾಣ ಚಟುವಟಿಕೆಗಳನ್ನು ನಡೆಸಿರುವ ಕುರಿತು ಬಿಜೆಪಿ ಸಂಸದ ತಾಪಿರ್ ಗಾವ್ ಅವರು ಲೋಕಸಭೆಯಲ್ಲಿ ಎಚ್ಚರ ದನಿಸಿದ್ದರು. ಈ ಹಳ್ಳಿಯ ಜೊತೆ ದ್ವಿಪಥ ರಸ್ತೆಯನ್ನೂ ನಿರ್ಮಿಸಿರುವ ಚೀನಾ ಅಪ್ಪರ್ ಸುಭಾನ್ಸಿರಿ ಜಿಲ್ಲೆಯಲ್ಲಿ ನದಿಯ ಉದ್ದಕ್ಕೂ ರಸ್ತೆ ನಿರ್ಮಿಸಿ ಸುಮಾರು 60-70 ಕಿ.ಮೀ.ಗಳಷ್ಟು ಒಳನುಗ್ಗಿದೆ ಎಂದಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿವಾದಿತ ಆಯಕಟ್ಟಿನ ಗಡಿ ಪ್ರದೇಶದಲ್ಲಿ ಚೀನಾ ನಿರ್ಮಿಸಿರುವ ಗ್ರಾಮಗಳ ಸಂಖ್ಯೆ 680ರಿಂದ 965 ಎಂದು ಅಂದಾಜು ಮಾಡಲಾಗಿದೆ.

ಗಡಿಯುದ್ದಕ್ಕೆ ಜನವಸತಿಗಳ 200ಕ್ಕೂ ಹೆಚ್ಚು ಗ್ರಾಮಗಳನ್ನು ವಿವಾದಿತ ಗಡಿಪ್ರದೇಶಗಳಲ್ಲಿ ನಿರ್ಮಿಸುತ್ತ ಬಂದಿದೆ ಚೀನಾ. ವಾತಾವರಣ ಬದಲಾವಣೆಯ (Climate Change) ಕಾರಣ ಚೀನಾದ ಪ್ರಧಾನ ಭೂಭಾಗ ನೀರಿನ ಕೊರತೆ ಎದುರಿಸಲಿದೆ. ಕುಡಿಯುವ ನೀರು ಮಾತ್ರವಲ್ಲದೆ ವಿದ್ಯುಚ್ಛಕ್ತಿ ಉತ್ಪಾದನೆಯೂ ಕುಂಠಿತಗೊಳ್ಳಲಿದೆ. ಬ್ರಹ್ಮಪುತ್ರಾದಿಂದ ಯೂನಾನ್‌ಗೆ ನೀರು ಒಯ್ಯಲು ವಿಶ್ವದ ಭಾರೀ ದೊಡ್ಡ ಜಲಾಶಯವನ್ನು ಭಾರತ-ಚೀನಾ ಗಡಿಯಾಚೆಗೆ ನಿರ್ಮಿಸಲು ಮುಂದಾಗಿದೆ ಚೀನಾ. ಮತ್ತೊಂದು ದೊಡ್ಡ ಬೆದರಿಕೆಯಿದೆ. ಗಡಿ ಭಾಗದಲ್ಲಿ ಸಂಗ್ರಹಿಸುವ ನೀರನ್ನು ಭಾರತದ ವಿರುದ್ಧದ ಬೃಹತ್ ಜಲಾಸ್ತ್ರವಾಗಿ ಪ್ರಯೋಗಿಸಬಹುದು. ಚೀನಾದ ಪ್ರಯತ್ನವಿಲ್ಲದೆಯೂ ಈ ಜಲಾಶಯದಿಂದ ಭೂಕಂಪ ಸಂಭವಿಸಬಹುದು. ಮಳೆಯ ರೀತಿನೀತಿ ಬದಲಾಗಬಹುದು. ಬಾಂಗ್ಲಾದೇಶದ ಸಿಹಿನೀರು ಉಪ್ಪುನೀರಿನ ಪರಿಸ್ಥಿತಿ ಅಲ್ಲೋಲಕಲ್ಲೋಲಗೊಂಡು ಕೃಷಿಯ ಮೇಲೆ ಭಾರೀ ದುಷ್ಪರಿಣಾಮ ಬೀರಬಹುದು. ಸಮುದ್ರದ ನೀರು ಹೆಚ್ಚು ಭೂಭಾಗವನ್ನು ನುಂಗಬಹುದು.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
ಬ್ರಹ್ಮಪುತ್ರಾ ನದಿಯ ಮೂರನೆಯ ಎರಡರಷ್ಟು ಭಾಗ ಚೀನಾದ ಭೂಭಾಗದಲ್ಲಿದೆ. ಆದರೆ ನದಿಯ ಶೇ.20ರಷ್ಟು ನೀರು ಮಾತ್ರವೇ ಚೀನಾದಲ್ಲಿ ಸಂಗ್ರಹವಾಗುತ್ತದೆ ಎಂಬ ಅಂಶ 2001-02ರ ಹೊತ್ತಿಗೆ ಹೈಡ್ರಲಾಜಿಕಲ್ ಅಧ್ಯಯನಗಳಿಂದ ತಿಳಿದು ಬಂದಿತು. ಈ ಜಲಾಶಯ ಕಾರ್ಯರೂಪಕ್ಕೆ ಬಂದರೂ ಭಾರತ ನೀರಿನ ಕೊರತೆಯೇನೂ ಎದುರಿಸುವುದಿಲ್ಲ.
ಭಾರತ-ಚೀನಾ ನಡುವೆ 3,440 ಕಿ.ಮೀ.ಗಳಷ್ಟು ವಿವಾದಿತ ಗಡಿ ಪ್ರದೇಶವಿದೆ, ನದಿಗಳು, ಸರೋವರಗಳು, ಹಿಮಹೊದ್ದ ಪರ್ವತಗಳ ಕಾರಣ ವಾಸ್ತವ ನಿಯಂತ್ರಣ ರೇಖೆ ನಿಸೂರಾಗಿರದೆ ಅಡ್ಡಾದಿಡ್ಡಿಯಾಗಿದೆ. ಬಹುತೇಕ ಭಾಗದಲ್ಲಿ ಜನವಸತಿ ಇಲ್ಲ. ವಾಸ್ತವ ಗಡಿರೇಖೆಗಳು ಅಸ್ಪಷ್ಟ. ಚೀನೀ ಭೂಪಟವನ್ನು ಭಾರತ ಒಪ್ಪುವುದಿಲ್ಲ. ಭಾರತದ ಭೂಪಟ ಚೀನೀಯರಿಗೆ ಸಮ್ಮತವಿಲ್ಲ. ಪರಸ್ಪರ ವಿಶ್ವಾಸ ಇಡಿಯಾಗಿ ಅಳಿಸಿ ಹೋಗಿದೆ. ಉಭಯ ದೇಶಗಳ ಗಸ್ತು ಸೈನಿಕರು ಮುಖಾಮುಖಿಯಾಗುತ್ತಾರೆ. ಸಣ್ಣಪುಟ್ಟ ಘರ್ಷಣೆಗಳು ಮಾಮೂಲು. ಆಗಾಗ ಜರುಗುವ ಕದನಗಳು ದಿನಗಟ್ಟಲೆ ಲಂಬಿಸುತ್ತವೆ ಮತ್ತು ಯೋಧರ ಸಾವು ನೋವುಗಳಿಗೂ ಕಾರಣವಾಗಿವೆ.
2020ರ ಗಾಲ್ವಾನ್ ಘರ್ಷಣೆಯ ನಂತರ ಲದ್ದಾಖ್‌ನ ಒಂದು ಸಾವಿರ ಚದರ ಕಿ.ಮೀ.ಗಳಷ್ಟು ಪ್ರದೇಶ ಚೀನಾದ ವಶಕ್ಕೆ ಜಾರಿತು ಎಂದು 2020ರ ಆಗಸ್ಟ್ ತಿಂಗಳಿನಲ್ಲಿ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. 2020ರ ಏಪ್ರಿಲ್-ಮೇ ತಿಂಗಳಿನಿಂದಲೂ ಚೀನಾ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ತನ್ನ ಪಡೆಗಳ ಕೋಟೆಯನ್ನೇ ಎಬ್ಬಿಸಿ ನಿಲ್ಲಿಸಿತ್ತು. ಗಾಲ್ವಾನ್ ಕಣಿವೆಯಲ್ಲಿ 20 ಚದರ ಕಿ.ಮೀ., ‘ಬಿಸಿನೀರಿನ ಬುಗ್ಗೆ’ಯಲ್ಲಿ (ಹಾಟ್ ಸ್ಪ್ರಿಂಗ್ಸ್) 12 ಚದರ ಕಿ.ಮೀ., ಚುಶುಲ್‌ನಲ್ಲಿ 20 ಚದರ ಕಿ.ಮೀ., ಪ್ಯಾಂಗಾಂಗ್ ಸೋನಲ್ಲಿ 65 ಚದರ ಕಿ.ಮೀ.ಯಷ್ಟು ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತು ಎಂದು ‘ದಿ ಹಿಂದೂ’ ಪತ್ರಿಕೆ ವರದಿ ವಿವರಿಸಿತ್ತು. ಭಾರತ ಸರ್ಕಾರ ಈ ವರದಿಯನ್ನು ಅಧಿಕೃತವಾಗಿ ಅಲ್ಲಗಳೆದಿಲ್ಲ.
2020ರ ಜೂನ್ ತಿಂಗಳ ಗಾಲ್ವಾನ್ ಕಣಿವೆಯ ಕದನವನ್ನು ‘1962ರ ನೆಹರೂ ಯುಗಾಂತ್ಯದಲ್ಲಿ ಜರುಗಿದ ಭಾರತ-ಚೀನಾ ಯುದ್ಧದ ನಂತರ ನಡೆದ ಅತ್ಯಂತ ಕೆಟ್ಟ ಘರ್ಷಣೆ‘ ಎಂದು ‘ಟೈಮ್ಸ್ ಆಫ್ ಇಂಡಿಯಾ’ದ 2020ರ ಜೂನ್ 17ರ ವರದಿ ಬಣ್ಣಿಸಿತ್ತು. 2020ರ ಗಾಲ್ವಾನ್ ಕಣಿವೆಯ ಕದನದ ನಂತರ ಚೀನಾ ಕಬಳಿಸಿದ ಭಾರತೀಯ ಭೂಪ್ರದೇಶದ ವಿಸ್ತೀರ್ಣ ಎಷ್ಟು ಎಂಬ ಪ್ರಶ್ನೆಗೆ ಮೋದಿ ಸರ್ಕಾರ 2022ರ ಫೆಬ್ರವರಿಯ ಸಂಸತ್ ಅಧಿವೇಶನದಲ್ಲಿ ನೇರ ಉತ್ತರ ನೀಡದೆ ನುಣುಚಿಕೊಂಡಿತು. 1962ರಿಂದ 38,000 ಚದರ ಕಿ.ಮೀ.ಗಳಷ್ಟು ಭಾರತೀಯ ನೆಲವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ಉತ್ತರ ನೀಡಲಾಯಿತು.
2020ರ ಗಾಲ್ವಾನ್ ಕಣಿವೆಯ ಕದನದ ನಂತರ ಭಾರತದ 4,056 ಚದರ ಕಿ.ಮೀ.ಗಳಷ್ಟು ವಿವಾದರಹಿತ ಭೂಪ್ರದೇಶವನ್ನು ಕಬಳಿಸಲು ಮೋದಿ ಚೀನಾಗೆ ಅವಕಾಶ ಮಾಡಿಕೊಟ್ಟಿದ್ದರೂ ‘ಯಾರೂ ಒಳ ನುಗ್ಗಿಲ್ಲ….’ಎಂದು ಹೇಳುತ್ತಿದ್ದಾರೆಂದರೆ ಅವರು ಚೀನಾದೊಂದಿಗೆ ರಾಜೀ ಮಾಡಿಕೊಂಡಿದ್ದಾರೆಂದೇ ಅರ್ಥವೆಂದು ಸುಬ್ರಹ್ಮಣ್ಯನ್ ಸ್ವಾಮಿ ಟೀಕಿಸಿದ್ದರು.
ಲದ್ದಾಖ್‌ಗೆ ಹೋಗಿ ಗ್ರೌಂಡ್ ರಿಪೋರ್ಟ್ ಮಾಡುವ ಅವಕಾಶವನ್ನು ಮೋದಿ ಸರ್ಕಾರ ಯಾವ ಪತ್ರಕರ್ತರಿಗೂ ನೀಡಿಲ್ಲ. ಅವರ ತಾಳಕ್ಕೆ ತಕ್ಕಂತೆ ಕುಣಿಯುವ ‘ಗೋದಿ ಮೀಡಿಯಾ’ ಪತ್ರಕರ್ತರಿಗೂ ಈ ಭಾಗ್ಯ ಲಭಿಸಿಲ್ಲ. ಚೀನೀ ಆಕ್ರಮಣ ಕುರಿತು ಸಂಸತ್ತಿನಲ್ಲಿ ಕೇಳಲಾದ ಶೇ.95ಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ತಳ್ಳಿ ಹಾಕಲಾಗಿದೆ. ಸಂಸತ್ತಿನಲ್ಲಿ ಚರ್ಚೆಗೆ ನೇರವಾಗಿ ನಿರಾಕರಿಸಲಾಗಿದೆ.
ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?
ಚೀನಾ ಗಿಡವಾದಾಗಲೇ ಬಗ್ಗಿಸಬೇಕಿದ್ದ ವಿವಾದವಿದು. ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾದದ್ದೇ 1947ರಷ್ಟು ಇತ್ತೀಚೆಗೆ. ಈಗಲಂತೂ ಚೀನಾ ಹೆಮ್ಮರವೇ ಆಗಿ ಬೇರಿಳಿಸಿ ಬೆಳೆದಿದೆ. ಭಾರತವೂ ಬೆಳೆಯುತ್ತಿರುವ ಶಕ್ತಿಯೇ. ಈ ಕಾರಣಗಳಿಗಿಂತ ದೊಡ್ಡ ಕಾರಣ ಚೀನಾದ ಅತಿಕ್ರಮಣವಾದಿ-ವಿಸ್ತರಣಾವಾದಿ ಧೋರಣೆ. ತಾನು ಏಷ್ಯಾದ ಸೂಪರ್ ಪವರ್ ಮಾತ್ರವಲ್ಲದೆ ವಿಶ್ವದ ಸೂಪರ್ ಪವರ್ ಆಗಬೇಕೆಂಬ ಹೆಬ್ಬಯಕೆ. ಈ ನಿಟ್ಟಿನಲ್ಲಿ ಖನಿಜಗಳು ಮತ್ತು ಜಲ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಸಾಧಿಸುವ ದೂರದೃಷ್ಟಿಯು ಚೀನಾದ ಕದನ ಕುತೂಹಲವನ್ನು ಗರಿಗಟ್ಟಿಸಿದೆ.
ಚೀನಾ ಮತ್ತು ಭಾರತ ಕೈಜೋಡಿಸಿ ವಿಶ್ವದ ಮೂರನೆಯ ಶಕ್ತಿಯಾಗಬೇಕೆಂಬ ನೆಹರೂ ಬಯಕೆ 1958ರ ಹೊತ್ತಿಗೇ ಅಸಾಧ್ಯವೆಂದು ಕಂಡುಬಂದಿತ್ತು. ಹಿಂದೀ-ಚೀನೀ ಭಾಯಿ ಭಾಯಿ ಎಂಬ ನೆಹರೂ ಸ್ನೇಹಹಸ್ತವನ್ನು ಚೀನಾ ಕಡಿದು ಹಾಕಿತು. ತನ್ನದೆಂದು ಭಾವಿಸಿರುವ ಭೂಭಾಗಗಳನ್ನು ವಾಪಸು ಪಡೆದೇ ಸಿದ್ಧ ಎಂಬ ದೃಢನಿಶ್ಚಯವನ್ನು ತೋರಿದೆ. ಟಿಬೆಟನ್ನು ಪೂರ್ಣವಾಗಿ ವಶಪಡಿಸಿಕೊಂಡಿದೆ.
ಕಾಲು ಕೆದರುವಲ್ಲಿ, ಮರೆಮೋಸದ ತಂತ್ರೋಪಾಯಗಳಲ್ಲಿ, ಅವಕಾಶವಾದದಲ್ಲಿ ಚೀನಾದ್ದು ಸದಾ ಎತ್ತಿದ ಕೈ. ಒಂದೊಮ್ಮೆ ಕಮ್ಯುನಿಸ್ಟ್ ಸಿದ್ಧಾಂತದ ತವರಾಗಿದ್ದ ಈ ದೇಶ ಇಂದು ಅಮೆರಿಕ ಅಸೂಯೆಪಡುವ ಮಟ್ಟಿಗೆ ಬಂಡವಾಳಶಾಹಿ ಆಗಿದೆ. ಕಮ್ಯುನಿಸ್ಟ್ ಸಿದ್ಧಾಂತ ಈಗ ಉಳಿದಿರುವುದು ಬರಿಯ ಕಾಗದದ ಮೇಲೆ. ಹೆಚ್ಚೆಂದರೆ ಏಕಪಕ್ಷ ಅಧಿಕಾರ ವ್ಯವಸ್ಥೆಯನ್ನು ಪ್ರಶ್ನಾತೀತವಾಗಿ ಮುಂದುವರೆಸಿಕೊಂಡು ಹೋಗಲು ಚೀನಾದ ಕೇಂದ್ರೀಯ ನಾಯಕತ್ವ ಉಳಿಸಿಕೊಂಡಿರುವ ಅನುಕೂಲಕರ ಸಾಧನ ಮಾತ್ರ.

ನೆಹರೂ ಚಾಚಿದ್ದ ಪಂಚಶೀಲ ತತ್ವದ ಸ್ನೇಹ ಹಸ್ತವನ್ನು ತಿರುಚಿ 1962ರಲ್ಲಿ ದಂಡೆತ್ತಿ ಬಂದು ಹೇರಿದ ಪರಾಭವದ ಅವಹೇಳನ ಭಾರತ ಸುಲಭವಾಗಿ ಮರೆಯುವಂತಹುದಲ್ಲ. ಶಾಂತಿ ಸಹಕಾರ ಹಾಗೂ ಪರಸ್ಪರ ವಿಶ್ವಾಸದ ನೆಹರೂ ಮಂತ್ರವನ್ನು ಮಾವೋ-ಝೌ ಜೋಡಿ ಮುದುಡಿ ಬಿಸುಟಿತ್ತು.
ಏಷ್ಯಾದ ಅಧಿಕಾರ ಚದುರಂಗದಾಟದಲ್ಲಿ ಭಾರತ ತನ್ನ ಪ್ರಬಲ ಪ್ರತಿಸ್ಪರ್ಧಿ ಎಂಬುದು ಚೀನಾದ ಭಾವನೆ. ಭಾರತ ಮತ್ತು ಚೀನಾ ದೇಶಗಳೆರಡೂ ಎದ್ದು ನಿಲ್ಲಲು ಸಾಲುವಷ್ಟು ಎಡೆ ಇದ್ದೇ ಇದೆ ಎಂಬ ಭಾರತದ ಮಾತುಗಳಿಗೆ ಮಾನ್ಯತೆ ನೀಡಿಲ್ಲ.
ಇದನ್ನೂ ಓದಿರಿ: ಬಾಂಗ್ಲಾದ ಹಿಂದೂಗಳ ಮೇಲೆ ಹಿಂಸೆ; ಚಾರಿತ್ರಿಕ ನೋಟಗಳೇನು?
ಅತಿಕ್ರಮಣವಾದಿ ಚೀನಾದೊಂದಿಗೆ ಭಾರತದ ಗಡಿ ಸಂಕಟಗಳು ತೀವ್ರಗೊಂಡದ್ದು 1950ರ ನಂತರ. ಭಾರತದ ಗೆಳೆಯನಾಗಿದ್ದ ಟಿಬೆಟ್ ಅನ್ನು ಚೀನಾ ಆಕ್ರಮಿಸಿ ನುಂಗಿದ್ದು 1950ರಲ್ಲೇ. ಭಾರತ ಮತ್ತು ಚೀನಾ ನಡುವಣ ತಟಸ್ಥ ತಡೆಗೋಡೆಯಂತಿದ್ದ ಟಿಬೆಟ್ ಚೀನಾದ ಭೂಭಾಗವೇ ಆಗಿ ಹೋಗಿತ್ತು. ನೆಹರೂ ನೇತೃತ್ವದ ಭಾರತ ಸರ್ಕಾರ ಟಿಬೆಟ್ ನೆರವಿಗೆ ಧಾವಿಸಲಿಲ್ಲ. ಕೇವಲ ಪ್ರತಿಭಟನಾ ಪತ್ರ ಬರೆದು ಕುಳಿತಿತು. ವಿಸ್ತರಣಾವಾದಿ ಚೀನಾ ಭಾರತದ ಬಾಗಿಲು ತಲುಪಿದ್ದು ಉತ್ತರ ಮತ್ತು ಈಶಾನ್ಯದ ಗಡಿಗಳ ಭದ್ರತೆ ಅಪಾಯಕ್ಕೆ ಸಿಲುಕಿದ್ದು ಸಭೆ ಸೇರಬೇಕೆಂದು ನೆಹರೂ ಅವರಿಗೆ ಪಟೇಲ್ ಪತ್ರ ಬರೆದಿದ್ದರು. ಈ ಸಭೆ ನಡೆಯುವುದೇ ಇಲ್ಲ. ಅಸ್ಸಾಮಿನ ಮುಖ್ಯ ಭಾಗಗಳ ಮೇಲೂ ಚೀನೀಯರು ಕಣ್ಣು ಹಾಕಿರುವ ಪ್ರಸ್ತಾಪ ಈ ಪತ್ರದಲ್ಲಿತ್ತು. ಚೀನಾದ ವಿಸ್ತರಣಾವಾದವನ್ನು ನೆಹರೂ ಮುಂದಾಗಿಯೇ ಅಂದಾಜು ಮಾಡುವಲ್ಲಿ ವಿಫಲರಾದರು. ಟಿಬೆಟ್ ಚೀನಾದ ಅವಿಭಾಜ್ಯ ಅಂಗ ಎಂದು ಭಾರತ ಒಪ್ಪಿಕೊಂಡಿತು. ಟಿಬೆಟ್ ಅಸ್ತಿತ್ವ ಕಳೆದಕೊಂಡು ಚೀನಾದ ಟಿಬೆಟನ್ ಸೀಮೆಯಾಗಿತ್ತು. ಟಿಬೆಟ್ ಮೇಲೆ ಚೀನಾದ ಸಾರ್ವಭೌಮತೆಯನ್ನು ಅಂಗೀಕರಿಸುವ ಒಪ್ಪಂದಕ್ಕೆ ಭಾರತ 1954ರಲ್ಲಿ ಸಹಿ ಹಾಕಿತು. ಹಿಂದೀ ಚೀನೀ ಭಾಯೀ ಭಾಯೀ ಎಂದರು ನೆಹರೂ. ಜಾಗತಿಕ ವೇದಿಕೆಗಳಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಸಮರ್ಥಿಸಿ ಮಾತನಾಡಿದರು. ಭಾರತದ ಈ ಸಮರ್ಥನೆ ಮತ್ತು ಬೆಂಬಲಗಳಿಗೆ ಪ್ರತಿಯಾಗಿ ಭಾರತದೊಂದಿಗೆ ಕೈ ಜೋಡಿಸಿ ‘ಏಷ್ಯನ್ ಕೂಟ’ ರಚಿಸಲು ಚೀನಾ ಒಪ್ಪಿಕೊಳ್ಳುವುದೆಂಬ ನಿರೀಕ್ಷೆ ನೆಹರೂ ಅವರಿಗೆ ಇತ್ತು. 1956ರಲ್ಲಿ ಚೀನಾದ ಭೂಪಟಗಳು ಭಾರತಕ್ಕೆ ಸೇರಿದ್ದ 1.20 ಲಕ್ಷ ಚದರ ಕಿ.ಮೀ.ಗಳಷ್ಟು ವಿಸ್ತೀರ್ಣದ ಗಡಿ ಪ್ರದೇಶವನ್ನು ಚೀನಾಕ್ಕೆ ಸೇರಿದ್ದೆಂದು ತೋರಿಸಿದವು. ನೆಹರೂ ಅವರ ಆಕ್ಷೇಪಣೆಗೆ ಓಗೊಟ್ಟ ಚೀನಾ ಈ ನಕಾಶೆಗಳು ಲೆಕ್ಕಕ್ಕಿಲ್ಲ ಎಂದು ಆಶ್ವಾಸನೆ ನೀಡಿತು. ಆದರೆ ದಲಾಯಿಲಾಮಾ ಮತ್ತು ಟಿಬೆಟನ್ನರಿಗೆ ಭಾರತ ನೀಡಿದ ಆಶ್ರಯ ಕುರಿತು ತೀವ್ರ ತಪ್ಪು ತಿಳಿವಳಿಕೆಗಳು ಉದ್ಭವಿಸಿದವು. ಟಿಬೆಟ್ ಅನ್ನು ವಶಪಡಿಸಿಕೊಂಡು ಮಹಾಸಾಮ್ರಾಜ್ಯ ಕಟ್ಟುವ ಉದ್ದೇಶ ಭಾರತಕ್ಕಿದೆ ಎಂದು ಚೀನಾ ಅನುಮಾನಿಸಿತ್ತು.
ಚೀನಾ ವಶಪಡಿಸಿಕೊಳ್ಳುವ ಮುನ್ನ ಪೂರ್ವಕ್ಕೆ ಚೀನಾ, ದಕ್ಷಿಣಕ್ಕೆ ನೇಪಾಳ, ಭೂತಾನ್ ಹಾಗೂ ಭಾರತ ಮತ್ತು ಪಶ್ಚಿಮದಲ್ಲಿ ಭಾರತದ ಕಾಶ್ಮೀರ ರಾಜ್ಯಗಳಿಂದ ಸುತ್ತುವರೆಯಲ್ಪಟ್ಟಿತ್ತು ಟಿಬೆಟ್. ಭಾರತ ಉಪಖಂಡ ಮತ್ತು ಟಿಬೆಟನ್ನು ಬೇರ್ಪಡಿಸಿದ್ದು ಹಿಮಾಲಯ ಪರ್ವತಶ್ರೇಣಿಗಳು. ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳ ರಕ್ಷಣೋಪಾಯದಲ್ಲಿ ಟಿಬೆಟ್‌ಗೆ ಬಹುಮುಖ್ಯ ಪಾತ್ರವಿತ್ತು. ಹಿಮಾಲಯದ ಆಚೆಗೆ ಜಗತ್ತಿನ ಸಂಪರ್ಕದಿಂದ ಕಡಿದು ಹೋಗಿದ್ದ ಬಂಜರು ವಿಸ್ತಾರವಿತ್ತು. ಹೀಗಾಗಿ ಉತ್ತರದ ಎರಡು ಸಾವಿರ ಮೈಲಿಗಳಷ್ಟು ಗಡಿಯನ್ನು ಕಾಯುವ ಭಾರತದ ಭಾರವನ್ನು ಈ ಬಂಜರು ವಿಸ್ತಾರ ಹಗುರಾಗಿಸಿತ್ತು. ಚೀನೀಯರು ಟಿಬೆಟನ್ನು ಆಕ್ರಮಿಸಿಕೊಳ್ಳುವುದರೊಂದಿಗೆ ಈ ತಟಸ್ಥ ಬಂಜರು ವಿಸ್ತಾರ ಭಾರತದ ಪಾಲಿಗೆ ಕಳೆದು ಹೋಯಿತು. ಹಿಮಾಲಯದಂತಹ ಮಹಾನ್ ರಕ್ಷಣಾ ತಡೆಗೋಡೆಯ ಪ್ರಭಾವ ಕೂಡ ಕುಗ್ಗಿ ಹೋಯಿತು.
ಭಾರತ ಮತ್ತು ನೇಪಾಳದಿಂದ ಟಿಬೆಟ್‌ಅನ್ನು ಮುಟ್ಟುವುದು ದುಸ್ಸಾಧ್ಯ. ವರ್ಷದಲ್ಲಿ ಆರರಿಂದ ಎಂಟು ತಿಂಗಳ ಕಾಲ ಹಿಮವನ್ನು ಹೊದ್ದು ನಿಂತ ಕಡಿದಾದ ಉನ್ನತ ಪರ್ವತಶ್ರೇಣಿಗಳನ್ನು ಹಾಯುವುದು ಹಿಮಾಲಯದಷ್ಟೇ ಎತ್ತರದ ಸವಾಲು. ಆದರೆ ಟಿಬೆಟಿನಿಂದ ಭಾರತವನ್ನು ತಲುಪುವುದು ಸುಲಭ. 14,000 ಅಡಿಗಳ ಎತ್ತರದಿಂದ 6,000 ಅಡಿಗಳ ತನಕ ಕ್ರಮೇಣ ಇಳಿಜಾರು.
ಟಿಬೆಟ್‌ನ ಪಶ್ಚಿಮ ಭೂಭಾಗದ ಮೂರು ವಿಭಾಗಗಳು ಭಾರತದ ಲದ್ದಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಪ್ರದೇಶದ ವಾಯುವ್ಯ ಸರಹದ್ದುಗಳನ್ನು ಮುಟ್ಟುತ್ತವೆ. ಹಿಂದೂಗಳು ಮತ್ತು ಬೌದ್ಧರ ಪಾಲಿಗೆ ಪವಿತ್ರವೆನಿಸಿದ ಕೈಲಾಸ ಮಾನಸ ಸರೋವರ ಇರುವುದು ಈ ಮೂರು ವಿಭಾಗಗಳಲ್ಲಿ ಒಂದಾದ ಎಂಗಾರಿಯಲ್ಲಿ. ಇಂಡಸ್, ಸಟ್ಲೆಜ್, ಬ್ರಹ್ಮಪುತ್ರ ನದಿಗಳ ಉಗಮವೂ ಇದೇ ಮಾನಸ ಸರೋವರ ಸೀಮೆ.
ಇತಿಹಾಸಕಾರ ಪ್ರೊ.ಜಾರ್ಜ್ ಜಿನ್ಸ್ ಬರ್ಗ್ ಅವರ ಪ್ರಕಾರ ಟಿಬೆಟ್ ಅನ್ನು ನಿಯಂತ್ರಿಸುವವರು ಹಿಮಾಲಯದ ತಪ್ಪಲನ್ನು ನಿಯಂತ್ರಿಸುತ್ತಾರೆ, ಹಿಮಾಲಯದ ತಪ್ಪಲನ್ನು ನಿಯಂತ್ರಿಸುವವರು ಭಾರತ ಉಪಖಂಡದ ಭದ್ರತೆಗೆ ಬೆದರಿಕೆ ಒಡ್ಡಬಲ್ಲರು, ಭಾರತದ ಭದ್ರತೆಯನ್ನು ಬಾಧಿಸಬಲ್ಲವರು ಇಡೀ ಆಗ್ನೇಯ ಏಷ್ಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಲ್ಲರು, ಅದರೊಂದಿಗೆ ಅಖಂಡ ಏಷ್ಯಾದ ಮೇಲೆ ನಿಯಂತ್ರಣ ಸಾಧಿಸಬಲ್ಲರು.

ಮಧ್ಯ ಏಷ್ಯಾದ ಗಡಿಸೀಮೆಗಳನ್ನು ರಾಜಕೀಯ ಕ್ರಿಯೆಯ ಆಧಾರವನ್ನಾಗಿ ಮಾಡಿಕೊಳ್ಳಲು ಟಿಬೆಟ್ ಪ್ರಶಸ್ತ ನೆಲ. ಪರಮಾಣು ಯುಗದಲ್ಲಿ ಬಾಂಬರ್ ವಿಮಾನಗಳು ದಾಳಿಗೆ ಮುನ್ನ ಆಗಸಕ್ಕೆ ಚಿಮ್ಮಲು ಮತ್ತು ಕ್ಷಿಪಣಿಗಳನ್ನು ಹಾರಿಸುವ ಅಪಾಯಕಾರಿ ಸಾಮರ್ಥ್ಯ ಹೊಂದಿದ ನೆಲವಿದು ಎಂದು ಮತ್ತೊಬ್ಬ ತಜ್ಞ ಜಾನ್ ರೋಲ್ಯಾಂಡ್ ಹೇಳಿದ್ದಾರೆ.
ನೇಪಾಳವನ್ನೂ ಪ್ರತ್ಯಕ್ಷ-ಪರೋಕ್ಷವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಚೀನಾದ ತಂತ್ರ ಸಫಲವಾದರೆ ಭಾರತದ ಮತ್ತೊಂದು ರಕ್ಷಣಾಗೋಡೆ ಕುಸಿಯುವುದು. ಅರುಣಾಚಲ ಪ್ರದೇಶದ ತವಾಂಗ್ ಮೇಲೆಯೂ ಚೀನಾ ಬಹುಕಾಲದಿಂದ ಕಣ್ಣು ಹಾಕಿದೆ. ಚೀನಾದ ಪಾಲಿಗೆ ತವಾಂಗ್ ಟಿಬೆಟ್‌ಗೆ ಸೇರಿದ ಭೂಭಾಗ. ಅರ್ಥಾತ್ ದಕ್ಷಿಣ ಟಿಬೆಟ್. ತವಾಂಗ್ ಅನ್ನು ತನ್ನ ಪಾಲಿನ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಚೀನಾ ಭಾವಿಸಿದೆ. ತಾನು ಆಕ್ರಮಿಸಿಕೊಂಡಿರುವ ಟಿಬೆಟ್ಟಿನಲ್ಲಿ ಅರವತ್ತರ ದಶಕದಲ್ಲಿ ಭುಗಿಲೆದ್ದ ಖಾಂಪಾ ಆಂದೋಲನದ ಬೇರುಗಳು ಇದ್ದದ್ದು ತವಾಂಗ್‌ನಲ್ಲೇ ಎಂಬುದು ಚೀನಾದ ದೃಢ ನಂಬಿಕೆ. ಹೀಗಾಗಿ ಟಿಬೆಟ್ಟಿನಲ್ಲಿ ಚೀನೀ ಆಕ್ರಮಣದ ವಿರುದ್ಧ ಭವಿಷ್ಯತ್ತಿನಲ್ಲಿ ಏಳಬಹುದಾದ ಬಂಡಾಯಗಳು ಅಥವಾ ದಂಗೆಗಳ ನೆಲೆ ತವಾಂಗ್ ಆಗುವ ಸಂಶಯವನ್ನು ಬೀಜಿಂಗ್ ಹೊಂದಿದೆ.
ಚೀನಾದ ದೈತ್ಯ ಮಿಲಿಟರಿ ಬಲವನ್ನು ನಿಂತು ಎದುರಿಸುವ ಸೇನಾ ಶಕ್ತಿ ಭಾರತದ ಬಳಿ ಇಲ್ಲ ಎಂಬುದು ಕಟು ವಾಸ್ತವ (2019ರಲ್ಲಿ ಭಾರತದ ರಕ್ಷಣಾ ಬಜೆಟ್ 71 ಶತಕೋಟಿ ಡಾಲರುಗಳಾದರೆ, ಚೀನಾ ಮಾಡಿದ ವೆಚ್ಚ 261 ಶತಕೋಟಿ ಡಾಲರುಗಳು). ಹೀಗಾಗಿ ತವಾಂಗ್‌ಅನ್ನು ಕಬಳಿಸಲು ಮುಂದೆಂದಾದರೂ ಕಾಗಿ೯ಲ್ ಸ್ವರೂಪದ ಕದನಕ್ಕೆ ಚೀನಾ ಮುಂದಾದರೆ ಅಚ್ಚರಿಪಡಬೇಕಿಲ್ಲ ಎನ್ನುತ್ತಾರೆ ಮಿಲಿಟರಿ ಪಂಡಿತರು.
ಚೀನಾದಂತಹ ಆಕ್ರಮಣಕಾರಿ ಮತ್ತು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನದಂತಹ ನೆರೆಹೊರೆಯನ್ನು ಹೊಂದಿರುವ ಭಾರತದಲ್ಲಿ ಬಿಜೆಪಿಯೇತರ ಸರ್ಕಾರವೇನಾದರೂ ಅಧಿಕಾರದಲ್ಲಿದ್ದು ತನ್ನ ವಾರ್ಷಿಕ ಮಿಲಿಟರಿ ಬಜೆಟ್ಟನ್ನು ಖೋತಾ ಮಾಡಿದ್ದರೆ ಕೋಲಾಹಲವೇ ಎದ್ದುಬಿಡುತ್ತಿತ್ತು. ಆದರೆ ಮೋದಿ ಸರ್ಕಾರ ದೇಶದ ವಾರ್ಷಿಕ ಮಿಲಿಟರಿ ವೆಚ್ಚವನ್ನು ಶೇ.17.8ರಿಂದ (2016-17) ಶೇ.12.9ಕ್ಕೆ (2024-25) ಇಳಿಸಿದೆ. ಪಿ.ಆರ್.ಎಸ್.ಲೆಜಿಸ್ಲೇಟಿವ್ ರಿಸರ್ಚ್ ಸಂಸ್ಥೆಯ ಅಂಕಿಅಂಶವಿದು.
ಚೀನಾ ತಮ್ಮನ್ನು ‘ಕುರಿ’ಯಂತೆ ನಡೆಸಿಕೊಂಡಿದೆ ಎಂಬುದನ್ನು ಮೋದಿಯವರು ಅರಿತೂ ಅರಿಯದಂತೆ ನಟಿಸುತ್ತಿದ್ದಾರೆಯೇ? ಗುಜರಾತಿನ ಮುಖ್ಯಮಂತ್ರಿಯಾಗಿ ಮೂರು ಬಾರಿ ಚೀನಾಗೆ ಭೇಟಿ ನೀಡಿದ್ದರು. ಪ್ರಧಾನಿಯಾಗಿ ಕೈಗೊಂಡ ಚೀನಾ ಪ್ರವಾಸಗಳು ಐದು. ಒಟ್ಟು ಎಂಟು ಸಲ ಚೀನಾದ ವೈಭೋಗದ ಆತಿಥ್ಯ ಅನುಭವಿಸಿದ್ದಾರೆ. ಚೀನಾದ ಪ್ರಧಾನಿ ಝಿನ್ ಪಿಂಗ್ ಅವರೊಂದಿಗೆ 18 ಸಲ ಚರ್ಚೆ ನಡೆಸಿದ್ದಾರೆ. ಝಿನ್ ಪಿಂಗ್ ಭಾರತಕ್ಕೆ ಬಂದಿದ್ದಾಗ ಸಾಬರಮತಿ ದಂಡೆಯಲ್ಲಿ ಉಯ್ಯಾಲೆಯಲ್ಲಿ ಜೀಕಿ ಆನಂದಿಸಿದ್ದೂ ಉಂಟು.
ಇದನ್ನು ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?
“ನಮ್ಮ ಗಡಿಗಳನ್ನು ಯಾರೂ ದಾಟಿಲ್ಲ, ಯಾರೂ ನುಗ್ಗಿ ಒಳ ಬಂದೂ ಇಲ್ಲ” ಎಂದು 2020ರ ಜೂನ್ 19ರಂದು ಚೀನಾ ದೇಶಕ್ಕೆ ದೋಷಮುಕ್ತಿಯ ಪ್ರಮಾಣಪತ್ರ ನೀಡಿಬಿಟ್ಟರು. ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ನಮ್ಮ 20 ಮಂದಿ ವೀರಯೋಧರು ಮಡಿದ ನಾಲ್ಕೇ ದಿನಗಳಲ್ಲಿ ನೀಡಿದ ಈ ಹೇಳಿಕೆ ವಿಡಂಬನೆ ಮತ್ತು ವಿಪರ್ಯಾಸಗಳ ಪರಮಾವಧಿ. ದೇಶದ ಗಡಿ ರಕ್ಷಣೆಗಾಗಿ ಹೋರಾಡಿ ಪ್ರಾಣಬಿಟ್ಟ ಯೋಧರಿಗೆ ಮಾಡಿದ ಅಪಮಾನ. ಚೀನೀಯರ ಆಕ್ರಮಣವನ್ನು ಭಾರತದ ಪ್ರಧಾನಿಯೇ ಮುಂದೆ ನಿಂತು ‘ನ್ಯಾಯಬದ್ಧ’ಗೊಳಿಸಿದ ಮತ್ತೊಂದು ಉದಾಹರಣೆ ದೇಶದ ಚರಿತ್ರೆಯಲ್ಲಿ ಸಿಗುವುದಿಲ್ಲ. ಮೋದಿ ನೀಡಿದ್ದ ಈ ಪ್ರಮಾಣಪತ್ರ ದೇಶದ ಸಾರ್ವಭೌಮತೆಗೆ ಹೊರಲಾರದ ಹೊರೆಯಾಗಿ ಪರಿಣಮಿಸಿಬಿಟ್ಟಿತು.
ಗಾಲ್ವಾನ್ ಘರ್ಷಣೆಯ ನಂತರ ಭಾರತದ ಸುಮಾರು 2 ಸಾವಿರ ಕಿಲೋಮೀಟರ್ ಭೂಭಾಗ ಚೀನಾದ ವಶವಾಗಿದೆ! ಗಾಲ್ವಾನ್ ಕಣಿವೆ ವಾಸ್ತವ ಗಡಿ ರೇಖೆಯ ಆಚೆಗಿನ ತನ್ನ ಭಾಗದಲ್ಲಿದೆ ಎಂದು ಚೀನಾ ಸಾರಿಕೊಂಡಿತು! ಕಣ್ಣಮುಂದೆ ನಡೆದದ್ದನ್ನೇ ನಿರಾಕರಿಸುವ, ನಿರಾಕರಿಸಿ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ, ಬೇರೆಡೆಗೆ ಸೆಳೆದು ಸುಳ್ಳು ಹೇಳುವ, ಹೇಳಿದ ಸುಳ್ಳನ್ನು ಸಮರ್ಥಿಸುವುದು. ಇದೇ ಚೀನೀ ಬಿಕ್ಕಟ್ಟಿನ ಕುರಿತು ಮೋದಿ ಸರ್ಕಾರ ತಳೆದ ಒಟ್ಟಾರೆ ಧೋರಣೆ.
(ಮುಂದುವರಿಯುತ್ತದೆ…)

ಡಿ ಉಮಾಪತಿ
ಹಿರಿಯ ಪತ್ರಕರ್ತರು




