ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?

Date:

ಬೂದಿಮುಚ್ಚಿದ ಕೆಂಡವಾಗಿರುವ ಮಣಿಪುರದಲ್ಲಿ, ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ರಾಷ್ಟ್ರಪತಿ ಆಡಳಿತ ಹೇರಿದ ಮೇಲೆ ಮಣಿಪುರದಲ್ಲಿ ಶಾಂತಿಯನ್ನು ನೆಲೆಗೊಳಿಸುವ ಭಾಗವಾಗಿ ಒಂದೊಂದಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನಾಂಗೀಯ ಹಿಂಸಾಚಾರ ಶುರುವಾಗಿ 21 ತಿಂಗಳು ಕಳೆದ ಮೇಲೆಯೂ ನಿಯಂತ್ರಣ ತಪ್ಪಿ ಘಟಿಸುತ್ತಿರುವ ಬೆಳವಣಿಗೆಗಳು ಮಣಿಪುರವನ್ನು ಯಾವ ದಿಕ್ಕಿನತ್ತ ಕರೆದೊಯ್ಯಬಹುದೆಂಬ ಆತಂಕಕ್ಕೆ ಕೊನೆಯಿಲ್ಲವಾಗಿದೆ.

 “ಲೂಟಿ ಮಾಡಲಾಗಿರುವ ಶಸ್ತ್ರಾಸ್ತ್ರಗಳನ್ನು ನಾಗರಿಕರು ಹಿಂತಿರುಗಿಸಬೇಕು, ಈ ಅವಧಿಯಲ್ಲಿ ವಾಪಸ್ ಕೊಟ್ಟರೆ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ” ಎಂದು  ಮಣಿಪುರದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಫೆಬ್ರವರಿ 27ರವರೆಗೆ ಸಮಯಾವಕಾಶವನ್ನು ನೀಡಿ, ಆದೇಶಿಸಿದ್ದರು. ಜನರ ಒತ್ತಾಯ, ಪ್ರತಿಭಟನೆಗಳ ಪ್ರತಿಫಲವಾಗಿ ನಾಗರಿಕರು ಶಸ್ತ್ರಾಸ್ತ್ರ ಹಿಂತಿರುಗಿಸುವ ದಿನಾಂಕವನ್ನು ಮತ್ತಷ್ಟು ವಿಸ್ತರಿಸಿ ಮಾರ್ಚ್ 6ರವರೆಗೆ ಅವಕಾಶ ನೀಡಲಾಯಿತು.

ಭಲ್ಲಾ ಅವರ ಆದೇಶಕ್ಕೆ ಒಂದು ಮಟ್ಟಿಗಿನ ಸ್ಪಂದನೆಯೂ ಮಣಿಪುರದಲ್ಲಿ ವ್ಯಕ್ತವಾಯಿತು.  ಆದರೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗದು. ಈವರೆಗೆ ಮೈತೇಯಿ ಪ್ರಾಬಲ್ಯದ ಇಂಫಾಲ ಕಣಿವೆ ಮತ್ತು ಕುಕಿ ಪ್ರಾಬಲ್ಯದ ಗುಡ್ಡುಗಾಡು ಜಿಲ್ಲೆಗಳನ್ನು ಒಳಗೊಂಡು 1,044 ಶಸ್ತ್ರಾಸ್ತ್ರಗಳು ಹಾಗೂ 14,779 ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ನಾಗರಿಕರಿಂದ ವಾಪಸ್ ಪಡೆದಿವೆ.  ಹೆಚ್ಚಿನ ಶಸ್ತ್ರಾಸ್ತ್ರಗಳು ಮೈತೇಯಿಗಳಿಂದ ಜಪ್ತಿಯಾಗಿವೆ ಎಂಬುದು ಗಮನಾರ್ಹ. ರಾಜಧಾನಿ ಇಂಫಾಲ ಭಾಗದಲ್ಲಿ ಹೆಚ್ಚು ಲೂಟಿಯಾದ ಶಸ್ತ್ರಾಸ್ತ್ರಗಳ ಲೆಕ್ಕ ನೋಡಿದರೆ ಮೈತೇಯಿಗಳ ಬಳಿಯೇ ಬಹುತೇಕ ಬಂದೂಕುಗಳಿರುವುದು ಮೇಲು ನೋಟಕ್ಕೆ ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Manipur 3 2
ಚೂರಾಚಾಂದ್ಪುರದಲ್ಲಿ ಕುಕಿ-ಝೋ ಬುಡಕಟ್ಟು ಜನಾಂಗದ ಸದಸ್ಯರು ಸ್ವಯಂಪ್ರೇರಣೆಯಿಂದ ಬಂದೂಕುಗಳನ್ನು ಹಿಂತಿರುಗಿಸಿರುವುದು

ಆಧುನಿಕ ಬಂದೂಕುಗಳು, ಬಾಂಬ್‌ಗಳು, ಗ್ರೆನೇಡ್‌ಗಳು, ಬುಲೆಟ್‌ಗಳು ಸರ್ಕಾರದ ಜಪ್ತಿಯಲ್ಲಿ ಸೇರಿವೆ. ಪೊಲೀಸರು ಸೇರಿದಂತೆ ಕೇಂದ್ರದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಜರಂಗದಳದ ತದ್ರೂಪದಂತಿರುವ ಆರಂಬೈ ತೆಂಗೋಲ್‌ ಸಂಘಟನೆಯ ಮೈತೇಯಿ ಹುಡುಗರು ಒಬ್ಬೊಬ್ಬರಾಗಿ ಬಂದು ಶಸ್ತ್ರಾಸ್ತ್ರಗಳನ್ನು ಜಮಾ ಮಾಡಿರುವುದು ಆಶಾದಾಯಕ ಬೆಳವಣಿಗೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ. ಆದರೆ ಲೂಟಿಯಾದ ಶಸ್ತ್ರಾಸ್ತ್ರಗಳ ಲೆಕ್ಕ ಮಾತ್ರ ಭರ್ತಿಯಾಗಿಲ್ಲ.

ಇದನ್ನೂ ಓದಿರಿ: ಮಣಿಪುರ ರಾಜ್ಯಪಾಲರ ಮಹತ್ವದ ನಡೆ; ಶಾಂತಿ ಮರುಸ್ಥಾಪನೆ ಸುಲಭವೇ?

2023ರ ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಆರಂಭವಾದಾಗ ಹಿಂಸಾನಿರತರು ಸರ್ಕಾರಿ ಶಸ್ತ್ರಾಗಾರಗಳಿಂದ ಶಸ್ತ್ರಗಳನ್ನು ದೋಚಿದ್ದರು. ಪಂಗೈನಲ್ಲಿರುವ ಮಣಿಪುರ ಪೊಲೀಸ್ ತರಬೇತಿ ಕೇಂದ್ರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಂದ ಬಂದೂಕುಗಳನ್ನು ಹೊತ್ತೊಯ್ಯಲಾಯಿತು. ಉದ್ರಿಕ್ತ ಗುಂಪುಗಳಿಗೆ ಪೊಲೀಸರೇ ಈ ಲೂಟಿಯಲ್ಲಿ ಸಹಕರಿಸಿದ್ದರೆಂಬುದು ವರದಿಗಳಿಂದ ಸ್ಪಷ್ಟವಾಗಿತ್ತು.

ಸರ್ಕಾರವೇ ಹೇಳಿಕೊಂಡಿರುವ ಪ್ರಕಾರ, ಸುಮಾರು 5000 ಬಂದೂಕುಗಳು, ಲಕ್ಷಾಂತರ ಬುಲೆಟ್‌ಗಳು ನಾಪತ್ತೆಯಾಗಿವೆ. ಅವು ಹಿಂಸಾನಿರತರ ಕೈ ಸೇರಿವೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಪಡೆಯುವುದು ಕಷ್ಟದ ಮಾತೇ ಸರಿ. ಆದರೆ ಸ್ಥಳೀಯ ಪತ್ರಕರ್ತರ ಪ್ರಕಾರ, ಬಂದೂಕಿನ ನಳಿಕೆಯ ಮೂಲಕ ಶಾಂತಿ ಸ್ಥಾಪನೆಯ ಪ್ರಯತ್ನಗಳು ಮಣಿಪುರದಲ್ಲಿ ನಡೆಯುತ್ತಿವೆ. ರಾಜ್ಯಪಾಲರು ಕೊಟ್ಟ ಗಡುವು ಮುಗಿದಿದೆ. ಐದನೇ ಒಂದು ಭಾಗವಷ್ಟೇ ಶಸ್ತ್ರಾಸ್ತ್ರಗಳು ವಾಪಸು ಬಂದು ಸೇರಿವೆ.

ಇದರ ನಡುವೆ ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರವೇಶ ಮಾಡಿದ್ದಾರೆ. ಭದ್ರತಾ ಪಡೆಯ ಅಧಿಕಾರಿಗಳೊಂದಿಗೆ, ರಾಜ್ಯಪಾಲ ಮತ್ತು ರಾಜ್ಯದ ಅಧಿಕಾರಿಗಳೊಂದಿಗೆ ಮಾರ್ಚ್ 1ರಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂಫಾಲ- ದಿಮಾಪುರ್‌ ಹೆದ್ದಾರಿ ಮತ್ತು ಇಂಫಾಲ್- ಚೂರಾಚಾಂದ್ಪುರ (ಕುಕಿಗಳ ರಾಜಧಾನಿಯೆಂದೇ ಕರೆಯಲ್ಪಡುವ ಲಮ್ಕಾ) ಹೆದ್ದಾರಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವ ನಿರ್ಧಾರವನ್ನು ಅಮಿತ್ ಶಾ ನೇತೃತ್ವದ ಸಭೆ ಕೈಗೊಂಡಿತು. ಮಾರ್ಚ್ 8ನೇ ತಾರೀಖಿನ ಬಳಿಕ ಮುಕ್ತ ಸಂಚಾರಕ್ಕೆ ಅವಕಾಶ ನೀಡುವ ಗಡುವು ಇಟ್ಟುಕೊಳ್ಳಲಾಯಿತು. ಆದರೆ ರಾಷ್ಟ್ರಪತಿ ಆಳ್ವಿಕೆಯ ಸರ್ಕಾರ ಕೈಗೊಂಡ ಈ ನಿರ್ಧಾರದ ಜಾರಿಯು ಅಷ್ಟು ಸುಲಭವೇನೂ ಆಗಿರಲಿಲ್ಲ ಎಂಬುದು ಈಗ ಆಗಿರುವ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.

ಮೈತೇಯಿ ಗುಂಪಿನ ಜನರಿರುವ ಫೆಡರೇಷನ್ ಆಫ್ ಸಿವಿಲ್ ಸೊಸೈಟಿಯು ಒಂದು ಹೆಜ್ಜೆ ಮುಂದೆ ಇಟ್ಟಿತು. ಮುಕ್ತ ಸಂಚಾರದ ಪರೀಕ್ಷಾರ್ಥವಾಗಿ ಮಾರ್ಚ್‌ 8ರಂದು ಶಾಂತಿಯುತ ಮೆರವಣಿಗೆ ಮಾಡಲು ಸಜ್ಜಾಯಿತು. ಗುಡ್ಡಗಾಡಿನಲ್ಲಿ ಪ್ರಧಾನವಾಗಿ ನೆಲೆಸಿರುವ ಮತ್ತೊಂದು ಸಮುದಾಯವಾದ ನಾಗಾಗಳ ಪ್ರಾಬಲ್ಯವಿರುವ ಉತ್ತರ ಮಣಿಪುರದ ಭಾಗದ ಸೇನಾಪತಿಯನ್ನು ತಲುಪುವ ಉದ್ದೇಶವನ್ನು ರ್ಯಾಲಿ ಹೊಂದಿತ್ತು. ಆದರೆ ಈ ರ್ಯಾಲಿ ಸೇನಾಪತಿಯನ್ನು ಸೇರಬೇಕಾದರೆ, ಇಂಫಾಲ ಗಡಿಗೆ ಹೊಂದಿಕೊಂಡಿರುವ ಕುಕಿ ಪ್ರಾಬಲ್ಯದ ಕಾಂಗ್‌ಪೊಪ್ಕಿ ಜಿಲ್ಲೆಯನ್ನು ದಾಟಬೇಕಿತ್ತು. ಈ ಭಾಗವು ಹೇಳಿಕೇಳಿ ಭಾರೀ ಹಿಂಸಾಚಾರವನ್ನು ಕಂಡ ಪ್ರದೇಶ. ಹೀಗಾಗಿ ಸಹಜವಾಗಿ ಉದ್ವಿಗ್ನತೆ ಉಂಟಾಯಿತು. ಚೂರಾಚಾಂದ್ಪುರ (ಲಮ್ಕಾ) ಮತ್ತು ಕಾಂಗ್‌ಪೊಪ್ಕಿ ಮಾರ್ಗದಲ್ಲಿ ನಡೆಯುವ ಮೈತೇಯಿಗಳ ಶಾಂತಿ ಮೆರವಣಿಗೆ ಪ್ರಯತ್ನಗಳನ್ನು ಪೊಲೀಸರು, ಕೇಂದ್ರ ಭದ್ರತಾ ಸಿಬ್ಬಂದಿ ತಡೆಯುವ ಅನಿವಾರ್ಯತೆ ಸೃಷ್ಟಿಯಾಯಿತು.

Manipur 2 2
ಕುಕಿ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು

ಬಂದೂಕು ಹಿಡಿದ ಕುಕಿ ಸಮುದಾಯದ ಕೆಲವು ‘ವಿಲೇಜ್ ವಾಲೆಂಟೀಯರ್ಸ್‌’ ವಿಡಿಯೊವೊಂದನ್ನು ಬಿಡುಗಡೆ ಮಾಡಿದರು. “ಯಾವುದೇ ಕಾರಣಕ್ಕೂ ಮುಕ್ತ ತಿರುಗಾಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕುಕಿ ಸಮುದಾಯದ ಪ್ರಮುಖ ಬೇಡಿಕೆಯನ್ನು ಈಡೇರಿಸಬೇಕು. ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರಾಡಳಿತ ಪ್ರದೇಶ ಮಾದರಿಯ ಅಧಿಕಾರವನ್ನು ಕುಕಿ ಭಾಗಕ್ಕೆ ನೀಡಬೇಕು”  ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು. ಮುಸುಕುಧರಿಸಿ, ಬಂದೂಕುಗಳೊಂದಿಗೆ ವಿಡಿಯೊ ಹರಿಯಬಿಟ್ಟಿದ್ದ ಈ ಹುಡುಗರ ಮಾತು, ಕುಕಿ ಸಮುದಾಯದ ಪ್ರಮುಖ ಸಂಘಟನೆಯಾದ ‘ಇಂಡೈಜಿನಸ್ ಟ್ರೈಬಲ್ ಲೀಡರ್ಸ್‌ ಫೋರಂ’ನ (ಐಟಿಎಲ್‌ಎಫ್‌) ಆಗ್ರಹವೂ ಹೌದು.

ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!

ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದರ ಭಾಗವಾಗಿ ರಾಜ್ಯ ಸಾರಿಗೆ ಇಲಾಖೆಯು ಚೂರಾಚಾಂದ್ಪುರ ಮತ್ತು ಕಾಂಗ್‌ಪೊಪ್ಕಿ ಮಾರ್ಗದಲ್ಲಿ ಬಸ್ ಸಂಚಾರವನ್ನೂ ಆರಂಭಿಸಿತು. ಮೇ 7ರಂದು ಸರ್ಕಾರಿ ಬಸ್ ಹೊರಟಿದ್ದೂ ಆಯಿತು. ಆದರೆ ಅದರಲ್ಲಿ ಒಬ್ಬನೇ ಒಬ್ಬ ಪ್ರಯಾಣಿಕ ಬಂದು ಕೂರಲಿಲ್ಲ. ಈ ಬಸ್‌ಗಳಲ್ಲಿ ಕೂರುವುದೆಂದರೆ ಸಾವಿನ ಸವಾರಿ ಮಾಡಿದಂತೆ ಎಂದು ನಾಗರಿಕರು ಭಾವಿಸಿದರು. ಕುಕಿ ಪ್ರಾಬಲ್ಯದ ಪ್ರದೇಶ ಪ್ರವೇಶಿಸುತ್ತಿದ್ದಂತೆ ಕಲ್ಲು ತೂರಾಟವಾಯಿತು. ಭದ್ರತಾ ಸಿಬ್ಬಂದಿಯ ವಾಹನಗಳಿಗೆ ಬೆಂಕಿ ಇಡಲಾಯಿತು. ಹೆದ್ದಾರಿಯಲ್ಲಿ ಟೈರ್‌ಗಳನ್ನು ಸುಡಲಾಯಿತು. ಮೈತೇಯಿಗಳ ಪ್ರವೇಶವನ್ನು ವಿರೋಧಿಸಲಾಯಿತು. ಭದ್ರತಾ ಪಡೆ ಮತ್ತು ನಾಗರಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಒಬ್ಬಾತ ಸಾವಿಗೀಡಾದ. 27 ಜನ ಭದ್ರತಾ ಸಿಬ್ಬಂದಿ ಗಾಯಗೊಂಡರು. ಕುಕಿ ಸಮುದಾಯದ 50ಕ್ಕೂ ಹೆಚ್ಚು ಮಂದಿ ಈ ಹಿಂಸಾಚಾರದಲ್ಲಿ ಭಾರೀ ಪೆಟ್ಟು ತಿಂದರು.

Manipur 1 5
ಕಾಂಗ್‌ಪೊಪ್ಕಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿನ ಸಂಘಟನೆಗಳು ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿರುವುದು.

ಈ ಘಟನೆಗಳ ಬೆನ್ನಲ್ಲೇ ಮೈತೇಯಿ ಗುಂಪಿನ ‘ಫೆಡರೇಷನ್‌ ಆಫ್ ಸಿವಿಲ್ ಆರ್ಗನೈಸೇಷನ್‌’ ಮುಖಸ್ಥ ಮಣಿಹಾರ್ ಪ್ರತಿಕ್ರಿಯಿಸಿ, “ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ. ಮುಕ್ತ ಸಂಚಾರಕ್ಕೆ ಅನುಮತಿ ನೀಡುವುದಾಗಿ ಅಮಿತ್ ಶಾ ಅವರು ಘೋಷಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅವರು ತಮ್ಮ ಮಾತನ್ನು ನಡೆಸಿಕೊಟ್ಟಿಲ್ಲ. ಈ ಕಾರಣಕ್ಕೆ ನಮಗೆ ಸಿಟ್ಟಿದೆ. ಅಮಿತ್ ಶಾ ಮಾತಿನ ಮೇಲೆ ನಮಗೆ ನಂಬಿಕೆ ಕಳೆದುಹೋಗಿದೆ” ಎಂದಿದ್ದಾರೆ.

ಮುಂದಿನ ದಿನಗಳಲ್ಲಾದರೂ ಮುಕ್ತ ಸಂಚಾರ ಸಾಧ್ಯವಾಗಬಹುದೇ ಎಂಬ ನಿರೀಕ್ಷೆಯಲ್ಲಿ ಪ್ರತಿಕ್ರಿಯಿಸಿರುವ ಅವರು, “ಮುಕ್ತವಾಗಿ ಯಾರಾದರೂ ಒಂಟಿಯಾಗಿ ಸಂಚರಿಸಿದರೆ ಖಂಡಿತವಾಗಿಯೂ ಗಾಯಗೊಳ್ಳುತ್ತಾರೆ. ಕುಕಿ ಜನರ ಮನಸ್ಥಿತಿ ಎಂತಹದೆಂದು ಗೊತ್ತಿದೆ. ಅವರು ನಮ್ಮ ಜನರನ್ನು ಕೊಲ್ಲದೆ ಬಿಡುವುದಿಲ್ಲ” ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

“ಯಾರು ನಮ್ಮ ಮಿತ್ರರು, ಯಾರು ನಮ್ಮ ಶತ್ರುಗಳು ಎಂಬುದನ್ನು ಗಮನಿಸಬೇಕು. ಗ್ರಾಮಗಳನ್ನು ಕಾಯುತ್ತಿರುವ ಸ್ವಯಂ ಸೇವಕರು ಎಚ್ಚರ ವಹಿಸಬೇಕು. ಕುಕಿಗಳು ಯಾವಾಗ ಬೇಕಾದರೂ ನಮ್ಮ ಸಮುದಾಯದ ಮೇಲೆ ದಾಳಿ ಮಾಡಬಹುದು” ಎಂದು ಹೇಳಿಬಿಟ್ಟಿದ್ದಾರೆ.

ಇದೇ ಆತಂಕ ಕುಕಿ ಸಮುದಾಯದ್ದು ಕೂಡ. ಗುಂಪು ಗುಂಪಾಗಿ ನುಗ್ಗಿ ಇಬ್ಬರು ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ್ದು ಕುಕಿ ಪ್ರಾಬಲ್ಯದ ಕಾಂಗ್‌ಪೊಪ್ಕಿ ಜಿಲ್ಲಾ ವ್ಯಾಪ್ತಿಯಲ್ಲಿ ಎಂಬುದನ್ನು ಮರೆಯಲಾಗದು. “ನಮ್ಮ ಪ್ರದೇಶಕ್ಕೆ ಪ್ರವೇಶ ಪಡೆದು, ಇಲ್ಲಿ ದಾಂಧಲೆ ಎಬ್ಬಿಸಲು ಮೈತೇಯಿಗಳಿಗೆ ಆಳುವವರಿಂದಲೇ ಅವಕಾಶ ನೀಡಲಾಗುತ್ತಿದೆ” ಎಂಬ ಆತಂಕ ಕುಕಿಗಳದ್ದು.

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಮುನ್ನ ಆಗಿರುವ ಮತ್ತೊಂದು ಘಟನೆಯನ್ನು ಗಮನಿಸಬೇಕು. ಇಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲೇ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ’ (AFSPA) ಜಾರಿಯಾಗಿದೆ. ಈಶಾನ್ಯ ಭಾರತವನ್ನು, ಮುಖ್ಯವಾಗಿ ಮಣಿಪುರವನ್ನು ಹಲವು ವರ್ಷಗಳ ಕಾಲ ಕಾಡಿರುವ ಕರಾಳ ಕಾನೂನು ‘ಆಫ್ಸ್‌ಪಾ’. ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಭದ್ರತಾ ಪಡೆಯು ಮಹಿಳೆಯರ ಮೇಲೆ ಅತ್ಯಾಚಾರ, ನಾಗರಿಕರ ಕಗ್ಗೊಲೆ ಮಾಡಿದ ಇತಿಹಾಸ ನಮ್ಮ ಮುಂದಿದೆ.

ಜನರ ಸ್ಮೃತಿ ಪಟಲದಿಂದ ಮರೆಯಾಗದ ಘಟನೆ 2004ನೇ ಇಸವಿಯಲ್ಲಿ ನಡೆದಿತ್ತು. ಅಸ್ಸಾಂ ರೈಫಲ್ಸ್‌ನವರಿಂದ ಮಣಿಪುರದಲ್ಲಾದ ತಂಜಮ್ ಮನೋರಮಾ ಎಂಬ ಹೆಣ್ಣುಮಗಳ ಮೇಲೆ ಭೀಕರ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಕೊಲೆ ಕೊಲ್ಲಲಾಯಿತು. ಅಂದು ಇಡೀ ಮಣಿಪುರ ಜನಾಂಗೀಯ ಬೇಧವಿಲ್ಲದೆ ಈ ಘಟನೆಯ ವಿರುದ್ಧ ಹೋರಾಟ ಮಾಡಿತ್ತು. ಮಣಿಪುರದ ಮೈತೇಯಿ ಮಹಿಳೆಯರು (ಮೈರಾಪೈಬಿಗಳು) ಬೆತ್ತಲೆ ಮೆರವಣಿಗೆ ಮಾಡಿ, ‘ಇಂಡಿಯನ್ ಆರ್ಮಿ ರೇಪ್ ಅಸ್’ ಎಂದು ಸೇನಾ ಕ್ಯಾಂಪೊಂದರ ಮುಂದೆ ಪ್ರತಿಭಟಿಸಿದ್ದರು. ‘ಆಫ್ಸ್‌ಪಾ’ ಹಿಂತೆಗೆಯುವಂತೆ ಈಶಾನ್ಯ ಭಾರತದಲ್ಲಿ ಸುದೀರ್ಘ ಕಾಲ ಹೋರಾಟಗಳು ನಡೆದಿವೆ. ಆದರೆ ಮಣಿಪುರ ಮಾನಸಿಕವಾಗಿ, ಭೌತಿಕವಾಗಿ ಇಬ್ಭಾಗವದ  ಬಳಿಕ, ಈಗ ‘ಆಫ್ಸ್‌ಪಾ’ ಜಾರಿಗೆ ಅವಕಾಶ ಒದಗಿಬಿಟ್ಟಿದೆ.

70ರ ದಶಕದಲ್ಲಿ ನಡೆದ ‘ನಶಾಬಂದಿ’ ಚಳವಳಿ ನೆನಪಾಗುತ್ತಿದೆ. ಪಂಜು ಹಿಡಿದು ರಾತ್ರಿ ವೇಳೆ ನುಗ್ಗುತ್ತಿದ್ದ ಮಣಿಪುರ ಮಹಿಳೆಯರು ಮದ್ಯದ ಅಂಗಡಿಗಳಿಗೆ ಬೆಂಕಿ ಇಡುತ್ತಿದ್ದರು. ಪಂಜು ಹಿಡಿಯುವುದು ‘ಸಾಂಸ್ಕೃತಿಕ ಅಸ್ಮಿತೆ’ಯಾಗಿ ಹೊಮ್ಮಿ ‘ಮೈರಾಪೈಬಿಗಳು’ (Women torch bearers) ಎಂಬ ಹೆಸರನ್ನು ಮೈತೇಯಿ ಮಹಿಳೆಯರು ಪಡೆದರು. ಲೈಂಗಿಕ ಶೋಷಣೆ ವಿರುದ್ಧ ದಿಟ್ಟ ಹೋರಾಟ ಮಾಡಿದ್ದ ಮೈರಾಪೈಬಿಗಳಿಗೆ ಮಣಿಪುರ ಹಿಂಸಾಚಾರವು ಕೆಟ್ಟ ಹೆಸರನ್ನು ತಂದಿಟ್ಟಿತ್ತು. ಕುಕಿ ಮಹಿಳೆಯರನ್ನು ಮೈತೇಯಿ ಪುರುಷರಿಗೆ ಹಿಡಿದು ಕೊಟ್ಟ ಅಪವಾದ ಅವರ ಮೇಲೆ ಬಂತು. ಇಂಫಾಲದ ಗಲ್ಲಿಗಲ್ಲಿಯಲ್ಲಿ ಇಂದಿಗೂ ರಾತ್ರಿ ವೇಳೆ ಪಂಜು ಹಿಡಿದು ತಿರುಗಾಡುವ ಮಹಿಳಾ ಗುಂಪುಗಳು, ಅಸ್ಸಾಂ ರೈಫಲ್ಸ್‌ನವರನ್ನು ಅನುಮಾನದಿಂದಲೇ ನೋಡುತ್ತಾರೆ. ಅಸ್ಸಾಂ ರೈಫಲ್ಸ್ ಕುಕಿ ಜನರ ಪರವಾಗಿದೆ ಎಂಬುದು ಅವರ ಹಳೆಯ ಆರೋಪ. ‘ಆಫ್ಸ್‌ಪಾ’ ಜಾರಿಯು ನಾಗರಿಕರ ನೆಮ್ಮದಿಯನ್ನು ಮತ್ತಷ್ಟು ಕೆಡಿಸುವ ಸಾಧ್ಯತೆಯಂತೂ ಇದೆ.

ಕಣಿವೆ ಭಾಗದ ಐದು ಜಿಲ್ಲೆಗಳ ಆರು ಪೊಲೀಸ್ ಠಾಣಾ ವ್ಯಾಪ್ತಿಯ, 10 ಗುಡ್ಡಗಾಡು ಜಿಲ್ಲೆಗಳಲ್ಲಿ ‘ಆಫ್ಸ್‌ಪಾ’ ಕಾರ್ಯಾಚರಣೆಯಲ್ಲಿದೆ. ಮತ್ತೆ ಹಿಂಸಾಚಾರ ತಲೆದೋರಿರುವ ಹೊತ್ತಿನಲ್ಲಿ ಜನರು ಭದ್ರತಾ ಸಿಬ್ಬಂದಿಗೆ ಬೆದರಿರುವುದು ಖಚಿತ. ಜೊತೆಗೆ ಪ್ರತಿರೋಧವನ್ನೂ ಒಡ್ಡಿ ಬಂದೂಕಿಗೆ ಎದೆಯೊಡ್ಡುತ್ತಿರುವ ದುರಂತವನ್ನೂ ಕಾಣುತ್ತಿದ್ದೇವೆ.

ಇದನ್ನೂ ಓದಿರಿ: ‘ರೀಲ್ಸ್‌’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!

ಅನುಮಾನಾಸ್ಪದ ವ್ಯಕ್ತಿ ಯಾರಾದರೂ ಕಂಡರೆ ಬಂಧನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ‘ಆಫ್ಸ್‌ಪಾ’ ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ. ಭದ್ರತಾ ಪಡೆಯ ಕಾರ್ಯವೈಖರಿಯ ಇತಿಹಾಸ ಆತಂಕ ಮೂಡಿಸುವಂತಹುದು.

‘ಈದಿನ.ಕಾಂ’ಗೆ ಮಾಹಿತಿ ನೀಡಿದ ಮಣಿಪುರದ ಪತ್ರಕರ್ತ ಚೌಬಾ, “1528 ನಕಲಿ ಎನ್‌ಕೌಂಟರ್‌ಗಳನ್ನು ಮಣಿಪುರ ತನ್ನ ಚರಿತ್ರೆಯಲ್ಲಿ ದಾಖಲಿಸಿದೆ. ಈ ಕೇಸ್‌ಗಳು ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಉಳಿದಿವೆ. ಹೀಗಿರುವಾಗ 70,000 ಭದ್ರತಾ ಸಿಬ್ಬಂದಿಯು ಮಣಿಪುರದಲ್ಲಿ ಜಮಾವಣೆಯಾಗಿದೆ. ರಾಜ್ಯ ಪೊಲೀಸ್ ಪಡೆ ಜೊತೆಗೆ ಮಣಿಪುರದಲ್ಲಿ ಸೇನೆ, ಅರೆಸೇನಾ ಪಡೆಗಳು ಬೀಡುಬಿಟ್ಟಿವೆ. ಅಸ್ಸಾಂ ರೈಫಲ್ಸ್, ಭಾರತೀಯ ಸೇನೆ, ರ್ಯಾಪಿಡ್ ಆಕ್ಷನ್‌ ಫೋರ್ಸ್, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ ಕಾರ್ಯಾಚರಣೆಯಲ್ಲಿ ತೊಡಗಿವೆ” ಎಂದು ಮಾಹಿತಿ ನೀಡಿದರು.

ಚಿಕ್ಕ ರಾಜ್ಯವೊಂದರಲ್ಲಿ ಇಷ್ಟು ಪ್ರಮಾಣದ ಭದ್ರತಾ ಪಡೆಯ ಜಮಾವಣೆ ಕರಾಳ ಕ್ರಮಗಳ ಮುನ್ಸೂಚನೆಯೇ ಸರಿ. ಶಸ್ತ್ರಾಸ್ತ್ರ ಹಿಂತಿರುಗಿಸಲು ನೀಡಿದ್ದ ಕಾಲಾವಕಾಶ ಮುಗಿದಿದೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಷ್ಟೆ. ಮಣಿಪುರದ ಜನತೆಯೂ ಶಾಂತಿಯತ್ತ ಮುಖ ಮಾಡಿ, ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳದಿದ್ದರೆ ಇಂಫಾಲ್ ನದಿಯಲ್ಲಿ ಮತ್ತಷ್ಟು ನೆತ್ತರು ಹರಿಯುವುದು ಖಚಿತ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...