ಫೆಬ್ರವರಿ 5ರಂದು ಮತದಾನ ನಡೆದು, ಫೆಬ್ರವರಿ 8ರಂದು ಫಲಿತಾಂಶಗಳು ಹೊರಬೀಳಲಿರುವ ದೆಹಲಿ ವಿಧಾನಸಭಾ ಚುನಾವಣೆ ಘನಘೋರ ಕಾಳಗದ ರೂಪ ಪಡೆದಿದೆ. ಸತತ ಎರಡು ಅವಧಿ ಅಧಿಕಾರ ನಡೆಸಿರುವ ಆಮ್ ಆದ್ಮೀ ಪಾರ್ಟಿ ಮೂರನೆಯ ಅವಧಿಯ ಮೇಲೆಯೂ ಕಣ್ಣಿಟ್ಟು ಹೋರಾಡುತ್ತಿದೆ. ಮತದಾರರ ನಿರುತ್ಸಾಹ, ಆಡಳಿತವಿರೋಧಿ ಮನಸ್ಥಿತಿ ಹಾಗೂ ಭ್ರಷ್ಟಾಚಾರದ ಆಪಾದನೆಗಳು, ಕಳಪೆ ನಾಗರಿಕ ಸೌಲಭ್ಯಗಳು ಹಾಗೂ ಅಭಿವೃದ್ಧಿ ಆಗಿಲ್ಲವೆಂಬ ಸವಾಲುಗಳನ್ನು ಎದುರಿಸಿದೆ.
ತಾವು ನೀಡಿದ್ದ ಮೂರು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದಾಗಿ ಖುದ್ದು ಕೇಜ್ರೀವಾಲ್ ಒಪ್ಪಿಕೊಂಡಿದ್ದಾರೆ. ಮನೆಮನೆಗೆ ಸ್ವಚ್ಛ ಕುಡಿಯುವ ನೀರು ಪೂರೈಕೆ, ಯಮುನಾ ನದಿಯ ಶುದ್ಧೀಕರಣ ಹಾಗೂ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳ ನಿರ್ಮಾಣದಲ್ಲಿ ತಮ್ಮ ಸರ್ಕಾರ ವಿಫಲವಾಗಿದೆ ಎಂದು ಕೇಜ್ರೀವಾಲ್ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಆದರೂ ಚುನಾವಣಾ ಸಮೀಕ್ಷೆಗಳು ಆಪ್ ಗೆಲುವನ್ನೇ ಸಾರಿವೆ.
ದೇಶವನ್ನೇ ಗೆದ್ದಿದ್ದರೂ ರಾಜಧಾನಿಯನ್ನು ಗೆಲ್ಲಲಾಗದ ಬಹುದೀರ್ಘ ಅವಮಾನದಲ್ಲಿ ಕುದಿಯುತ್ತಿದೆ ಮೋದಿ-ಅಮಿತ್ ಶಾ ಜೋಡಿ. ಈ ಸಲ ಅತ್ಯಂತ ಆಕ್ರಮಣಕಾರಿ ಹಂಚಿಕೆ ಹೂಡಿದೆ. ಆಮ್ ಆದ್ಮೀ ಪಾರ್ಟಿ ಭ್ರಷ್ಟವೆಂದು ಸಾರಲು ಅದರ ಮುಖ್ಯಮಂತ್ರಿ ಕೇಜ್ರೀವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಂತ್ರಿಯಾಗಿದ್ದ ಸತ್ಯೇಂದರ್ ಜೈನ್, ರಾಜ್ಯಸಭಾ ಸದಸ್ಯ ಸಂಜಯಸಿಂಗ್ ಅವರನ್ನು ಭ್ರಷ್ಟಾಚಾರದ ಆಪಾದನೆ ಹೊರಿಸಿ ಜೈಲಿಗೆ ತಳ್ಳಿತ್ತು. ಈ ಎಲ್ಲರೂ ಈಗ ಬಿಡುಗಡೆಯಾಗಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸು ಆಪ್ ಮತಗಳನ್ನು ಕತ್ತರಿಸುವ ಕಾರಣ ಬಿಜೆಪಿಗೆ ಅನುಕೂಲ ಎಂಬದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿ. ಅರವಿಂದ್ ಕೇಜ್ರೀವಾಲ್ ಅವರ ಕುಸಿಯುತ್ತಿರುವ ಜನಪ್ರಿಯತೆ ಮತ್ತು ಪೆಟ್ಟು ತಿಂದಿರುವ ವರ್ಚಸ್ಸು ಕೂಡ ಆಪ್‌ಗೆ ಒಳ್ಳೆಯ ಸುದ್ದಿ ಅಲ್ಲ. ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ನವೆಂಬರ್-ಡಿಸೆಂಬರ್ ನಡುವೆ ಮತದಾರರ ಯಾದಿಯಿಂದ 82,450 ಮತದಾರರನ್ನು ಕೈಬಿಡಬೇಕೆಂಬ ಅರ್ಜಿಗಳನ್ನೂ, 4,85,624 ಮತದಾರರನ್ನು ಹೊಸದಾಗಿ ಸೇರಿಸಬೇಕೆಂಬ ಅರ್ಜಿಗಳನ್ನೂ ಸ್ವೀಕರಿಸಿದ ವಿಶಿಷ್ಟ ಪ್ರಸಂಗ ಜರುಗಿದೆ. ಚುನಾವಣಾ ಆಯೋಗವು ಬಿಜೆಪಿಯತ್ತ ವಾಲಿರುವ ಸೂಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೊಸ ಮತದಾರರ ಸೇರ್ಪಡೆ ಮತ್ತು ಹಳೆಯ ಮತದಾರರ ಕೈಬಿಡುವ ಅರ್ಜಿಗಳ ಕುರಿತು ಪ್ರತಿಪಕ್ಷಗಳು ತೀವ್ರ ಆತಂಕ ವ್ಯಕ್ತಪಡಿಸಿವೆ. ದೆಹಲಿ ಪೊಲೀಸ್ ವ್ಯವಸ್ಥೆ ನೇರವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅಧೀನದಲ್ಲಿದೆ. ಗೃಹಮಂತ್ರಾಲಯದಿಂದ ಬಿಜೆಪಿಯನ್ನು ಬೆಂಬಲಿಸಬೇಕೆಂಬ ಸೂಚನೆಗಳು ಠಾಣಾಧಿಕಾರಿಗಳಿಗೆ ಬಂದಿರುವುದಾಗಿ ಕೇಜ್ರೀವಾಲ್ ಆಪಾದಿಸಿದ್ದಾರೆ. ಬಿಜೆಪಿ ಹಣ, ಪಾದರಕ್ಷೆ, ಸೀರೆಯನ್ನು ಹಾಡಹಗಲೇ ಹಂಚುತ್ತಿದೆ. ಚುನಾವಣಾ ಆಯೋಗ ಮೂಕಪ್ರೇಕ್ಷಕನಂತಿದೆ.

ದೆಹಲಿ ವಿಧಾನಸಭೆಯ ಒಟ್ಟು ಸದಸ್ಯ ಬಲ 70. ಸರಳ ಬಹುಮತಕ್ಕೆ 36 ಸೀಟುಗಳನ್ನು ಗೆಲ್ಲಬೇಕು. 2015ರ ಚುನಾವಣೆಗಳಲ್ಲಿ ಆಮ್ ಆದ್ಮೀ ಪಾರ್ಟಿ 70ರಲ್ಲಿ 67 ಸೀಟುಗಳನ್ನು ಗೆದ್ದು ಪ್ರಚಂಡ ಗೆಲುವು ಪಡೆದಿತ್ತು. 2020ರಲ್ಲಿ 62 ಸೀಟುಗಳನ್ನು ಗೆದ್ದು ಪುನಃ ಭಾರೀ ಜಯ ಗಳಿಸಿತ್ತು. ಗೆಲುವಿನ ಭಾರೀ ಅಂತರ ಈ ಸಲ ತಗ್ಗಬಹುದು ಎನ್ನಲಾಗಿದೆ.
ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ದೆಹಲಿಯನ್ನು ಗೆಲ್ಲಲು ವರ್ಷಗಳಿಂದ ಹವಣಿಸುತ್ತಿರುವ ಬಿಜೆಪಿ ಆಪ್ ಕುರಿತು ಭ್ರಷ್ಟಾಚಾರದ ಶಂಕೆಯ ಬೀಜವನ್ನು ದೆಹಲಿಯ ಜನಮನದಲ್ಲಿ ಬಿತ್ತಿದೆ. ಆದರೆ ಅದು ಮೊಳಕೆಯೊಡೆದು ಸಸಿಯಾಗಿ ಬೆಳೆದಿರುವುದು ಹೌದೇ ಎಂಬುದನ್ನು ಈ ಚುನಾವಣೆ ಸಾರಲಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಎದುರಿಸಿ ಮಂಕಾಗಿದ್ದ ಬಿಜೆಪಿ, ಹರಿಯಾಣ ಮತ್ತು ಮಹಾರಾಷ್ಟ್ರವನ್ನು ಗೆದ್ದು ಬೀಗಿದೆ. ಆಮ್ ಆದ್ಮೀ ಪಾರ್ಟಿಯನ್ನು ಅನುಕರಿಸಿ ನಗದು ನೀಡಿಕೆ ಮತ್ತು ಉಚಿತ ಸೌಲಭ್ಯಗಳ ಒದಗಿಸುವ ಜನಪ್ರಿಯ ಭರವಸೆಗಳನ್ನು ನೀಡಿದೆ.
ದೇವಸ್ಥಾನಗಳ ಪೂಜಾರಿಗಳಿಗೆ 18 ಸಾವಿರ ರುಪಾಯಿಗಳ ಮಾಸಿಕ ವೇತನ ನೀಡುವುದಾಗಿ ಕೇಜ್ರೀವಾಲ್ ಸರ್ಕಾರ ಭರವಸೆ ನೀಡಿದೆ. ಬ್ರಾಹ್ಮಣರನ್ನು ಒಲಿಸಿಕೊಳ್ಳುವ ಈ ತಂತ್ರಕ್ಕೆ ಪ್ರತಿಯಾಗಿ ಪ್ರಚಾರ ಮಾಡಲು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಎಂಬ ಬ್ರಾಹ್ಮಣ ಮುಂದಾಳುವನ್ನು ಬಿಜೆಪಿ ಹೂಡಿದೆ. ಈತ ಈ ಹಿಂದೆ ಮಾಯಾವತೀಯವರ ಬಿ.ಎಸ್.ಪಿ.ಯಲ್ಲಿದ್ದರು. ಆದರೆ ಈಗಾಗಲೇ ಬೇರು ಬಿಟ್ಟಿರುವ ಆಪ್‌ನ ಕಲ್ಯಾಣ ಯೋಜನೆಗಳು ಮತ್ತು ಕೇಜ್ರೀವಾಲ್ ವಿರುದ್ಧ ವಿಶ್ವಾಸಾರ್ಹ ಚಹರೆ ಬಿಜೆಪಿಯಲ್ಲಿ ಕಾಣದಿರುವುದು ಕಮಲ ಪಾಳೆಯದ ಗೆಲುವಿನ ಸಾಧ್ಯತೆಯನ್ನು ಕೆಲಮಟ್ಟಿಗಾದರೂ ತಗ್ಗಿಸಿವೆ.
ಕಡುಕಹಿಯಾಗುತ್ತಿದೆ ಆಪ್ ಕಾಂಗ್ರೆಸ್ ಕದನ!
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿದೆ ಕಾಂಗ್ರೆಸ್. ದೆಹಲಿಯಿಂದ ಕಾಂಗ್ರೆಸ್ಸಿನ ಒಬ್ಬನೇ ಒಬ್ಬ ಶಾಸಕ ಅಥವಾ ಸಂಸದ ಇಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಹೊಸದಾಗಿ ಕಳೆದುಕೊಳ್ಳುವುದೇನೂ ಇಲ್ಲ. ಎಲ್ಲ 70 ಸೀಟುಗಳಲ್ಲಿ ಉಮೇದುವಾರರನ್ನು ಹೂಡಿದೆ. ‘ಇಂಡಿಯಾ’ ಒಕ್ಕೂಟದ ತನ್ನ ಮಿತ್ರಪಕ್ಷದ ಮೇಲೆ ಯುದ್ಧ ಸಾರಿದೆ. ಬಿಜೆಪಿ 68 ಸೀಟುಗಳಲ್ಲಿ ಸ್ಪರ್ಧಿಸಿದ್ದು ಮಿತ್ರ ಪಕ್ಷಗಳಾದ ಜೆಡಿ(ಯು) ಮತ್ತು ಎಲ್.ಜೆ.ಪಿ.ಗೆ (ರಾಮ್ ವಿಲಾಸ್) ತಲಾ ಒಂದು ಸೀಟನ್ನು ಬಿಟ್ಟುಕೊಟ್ಟಿದೆ.
ಇದನ್ನೂ ಓದಿರಿ: ಮುಸ್ಲಿಮರಿಗೆ ಮೀಸಲಾತಿಯಲ್ಲೂ ಅನ್ಯಾಯ, ರಾಜಕೀಯದಲ್ಲೂ ಮೋಸ!
2014ರಲ್ಲಿ ಯುಪಿಎ ಸರ್ಕಾರ ಉರುಳಿಸುವಲ್ಲಿ ಮೋದಿಯವರ ಜೊತೆ ಜೊತೆಗೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಅರವಿಂದ್ ಕೇಜ್ರೀವಾಲ್ ಸಂಗಾತಿಗಳು ಆರೆಸ್ಸೆಸ್ ಮತ್ತು ಬಾಬಾ ರಾಮದೇವ್ ಕುಮ್ಮಕ್ಕಿನಿಂದ ಹೂಡಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿ ದೊಡ್ಡ ಪಾತ್ರ ವಹಿಸಿತ್ತು. ಈ ಸೇಡನ್ನು ತೀರಿಸಿಕೊಳ್ಳಲು ಹೊರಟಿದೆ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್‌ನ ಆಕ್ರಮಣಕಾರಿ ಪೈಪೋಟಿ ಬಿಜೆಪಿಗೆ ಅನುಕೂಲವಾದೀತು ಎಂಬ ಆತಂಕವೊಂದು ಪ್ರತಿಪಕ್ಷಗಳ ವಲಯದಲ್ಲಿ ಹುಟ್ಟಿದೆ. ಇದು ನಿರಾಧಾರವೇನೂ ಅಲ್ಲ. ಬಿಜೆಪಿ ವಿರೋಧಿ ಮತಗಳು ಎಷ್ಟು ಚೆದುರುತ್ತವೋ ಅಷ್ಟೂ ಅನುಕೂಲ ಬಿಜೆಪಿಗೆ.

ಆಪ್ ಮತ್ತು ಕಾಂಗ್ರೆಸ್ ಪಕ್ಷದ ನಡುವಣ ಕದನ ದಿನದಿಂದ ದಿನಕ್ಕೆ ಕಡುಕಹಿಯಾಗುತ್ತ ನಡೆದಿದೆ. ಇಂಡಿಯಾ ಬಣದಿಂದ ಹೊರಹೋಗುವಂತೆ ಕೇಜ್ರೀವಾಲ್‌ಗೆ ಸವಾಲು ಹಾಕಿದ್ದಾರೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ 100 ಸದಸ್ಯರನ್ನು ಹೊಂದಿದೆ. ಕೇಜ್ರೀವಾಲ್ ದೆಹಲಿಯ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟರು. ಲೋಕಸಭಾ ಚುನಾವಣೆಗಳಲ್ಲಿ ಚುನಾವಣಾ ಒಪ್ಪಂದ ಮಾಡಿಕೊಳ್ಳುವಂತೆ ನಮ್ಮನ್ನು (ಕಾಂಗ್ರೆಸ್) ಅಂಗಲಾಚಿ ಬೇಡುತ್ತಿದ್ದರು ಕೇಜ್ರೀವಾಲ್. ಮೈತ್ರಿ ಮಾಡಿಕೊಂಡದ್ದು ನಮ್ಮ ದೊಡ್ಡ ತಪ್ಪಾಯಿತು. ಕಾಂಗ್ರೆಸ್ ಪಕ್ಷ ದೊಡ್ಡ ನಷ್ಟ ಎದುರಿಸುವಂತಾಯಿತು ಎಂದು ಕಾಂಗ್ರೆಸ್ ಆರೋಪವನ್ನು ಬಡ್ಡಿ ಸಹಿತ ಹಿಂತಿರುಗಿಸಿದೆ ಆಮ್ ಆದ್ಮೀ ಪಾರ್ಟಿ. ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ. ದೆಹಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಹಣ ಪಡೆದಿದೆ ಎಂದಿದೆ. ಬಿಜೆಪಿ ಕಪ್ಪು ಹಣವನ್ನು ಹಂಚುತ್ತಿದ್ದರೂ, ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಟ್ಟಿದ್ದರೂ ಕಾಂಗ್ರೆಸ್ ಮೌನವಾಗಿದೆ. ಈ ಅಪವಿತ್ರ ಮೈತ್ರಿಯನ್ನು ಕಾಂಗ್ರೆಸ್ ಬಹಿರಂಗವಾಗಿ ಘೋಷಿಸಬೇಕು ಎಂದಿದೆ.
ಆಮ್ ಆದ್ಮೀ ಪಾರ್ಟಿ ಬಿಡುಗಡೆ ಮಾಡಿರುವ ಹೊಸ ಚುನಾವಣಾ ಪ್ರಚಾರ ಪೋಸ್ಟರಿನ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ರಮೇಶ್ ಬಿಧೂರಿ ಮುಂತಾದ ‘ಅಪ್ರಾಮಾಣಿಕರ’ ಭಾವಚಿತ್ರಗಳ ಪಟ್ಟಿಯಲ್ಲಿ ರಾಹುಲ್ ಗಾಂಧೀ ಭಾವಚಿತ್ರವನ್ನೂ ಸೇರಿಸಲಾಗಿದೆ. ‘ಕೇಜ್ರೀವಾಲ್ ಕೀ ಇಮಾನ್ದಾರೀ, ಸಾರೇ ಬೇಇಮಾನೋಂ ಪರ್ ಪಢೇಗೀ ಭಾರೀ’ ಎಂಬ ಘೋಷಣೆಯನ್ನು ಈ ಪೋಸ್ಟರ್ ಹೊಂದಿದೆ. ಪಕ್ಷಗಳ ಕೂಟದ ಸದಸ್ಯರು. ಆದರೆ ಆಪ್ ಮತ್ತು ಕಾಂಗ್ರೆಸ್ ‘ಇಂಡಿಯಾ’ ಮಿತ್ರಕೂಟದ ಸದಸ್ಯ ಪಕ್ಷಗಳು. ಆದರೆ ದೆಹಲಿ ಚುನಾವಣೆಗಳಲ್ಲಿ ಪರಸ್ಪರ ಹಗೆಗಳು. ಈ ಮಿತ್ರಕೂಟದ ಇತರೆ ಪಕ್ಷಗಳಾದ ಶಿವಸೇನಾ (ಯುಬಿಟಿ), ಸಮಾಜವಾದಿ ಪಾರ್ಟಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಈ ಚುನಾವಣೆಯಲ್ಲಿ ಆಮ್ ಆದ್ಮೀ ಪಾರ್ಟಿಯನ್ನು ಬೆಂಬಲಿಸಿವೆ.
ದೆಹಲಿಯಲ್ಲಿ ಅಭಿವೃದ್ಧಿಯ ಕೆಲಸ ಆಗಿಲ್ಲವೆಂದು ಕಾಂಗ್ರೆಸ್ ಆರೋಪಿಸಿದೆ. ಆಮ್ ಆದ್ಮೀ ಪಾರ್ಟಿ ತರುವಾಯ ರದ್ದು ಮಾಡಿದ ಅಬಕಾರಿ ನೀತಿಯ ಕುರಿತು ಸಿಎಜಿ ವರದಿಗಳನ್ನು ದೆಹಲಿ ವಿದಾನಸಭೆಯಲ್ಲಿ ಮಂಡಿಸುವಲ್ಲಿ ಆಗಿರುವ ವಿಳಂಬವೇ ಈ ಪಾರ್ಟಿಯ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂಬುದೂ ಕಾಂಗ್ರೆಸ್ ಆರೋಪ.
ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಸಿಎಜಿ ವರದಿಗಳನ್ನು ಮಂಡಿಸುವಂತೆ ಆಪ್ ಸರ್ಕಾರಕ್ಕೆ ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಬಿಜೆಪಿ ಶಾಸಕರ ಈ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಆಪ್‌ನ ಅಬಕಾರಿ ನೀತಿಯ ಅವ್ಯವಹಾರದಿಂದಾಗಿ ಬೊಕ್ಕಸಕ್ಕೆ 2,027 ಕೋಟಿ ರುಪಾಯಿಗಳ ನಷ್ಟವಾಗಿದ್ದು ಸಿಎಜಿ ವರದಿಗಳಲ್ಲಿ ಈ ಮಾತನ್ನು ಹೇಳಲಾಗಿದೆ ಎಂಬುದು ಬಿಜೆಪಿ ಆರೋಪ.
ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಈ ಚುನಾವಣೆಯೂ ನ್ಯಾಯ ಒದಗಿಸಿಲ್ಲ. ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಒಂದೂವರೆ ತಿಂಗಳ ಕಾಲ, ಕಾಂಗ್ರೆಸ್ಸಿನಿಂದ ಶೀಲಾ ದೀಕ್ಷಿತ್ 15 ವರ್ಷಗಳ ಕಾಲ, ಇದೀಗ ಚುನಾವಣೆಗೆ ತುಸು ಮುಂಚೆ ಆಪ್‌ನಿಂದ ಅನಿವಾರ್ಯವಾಗಿ ಆತಿಶಿ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ದೊರೆತಿರುವ ಒಟ್ಟು ಪ್ರಾತಿನಿಧ್ಯ ಶೇ.14 ಮಾತ್ರ. ಒಟ್ಟು 699 ಅಭ್ಯರ್ಥಿಗಳ ಪೈಕಿ ಮಹಿಳೆಯರ ಸಂಖ್ಯೆ 96 ಮಾತ್ರ.
ಬಿಜೆಪಿ ಅಧಿಕಾರ ಕಳೆದುಕೊಂಡು ಮೂವತ್ತು ವರ್ಷಗಳೇ ಉರುಳಿವೆ
1952ರಿಂದ 1956ರ ತನಕ ಕಾಂಗ್ರೆಸ್ ಮುಖ್ಯಮಂತ್ರಿಗಳು ದೆಹಲಿಯನ್ನು ಆಳಿದ್ದರು. ಈ ಅವಧಿಯಲ್ಲಿ ದೆಹಲಿಯ ಮುಖ್ಯಮಂತ್ರಿ ಬ್ರಹ್ಮ ಪರ್ಕಶ್ ಮತ್ತು ಕೇಂದ್ರ ಗೃಹಮಂತ್ರಿ ಗೋವಿಂದ ಬಲ್ಲಭ್ ಪಂತ್ ನಡುವಣ ಕದನ ತಾರಕಕ್ಕೇರಿತು. ಫಜಲ್ ಅಲಿ ಅಧ್ಯಕ್ಷತೆಯ ರಾಜ್ಯ ಪುನರ್ವಿಂಗಡಣೆ ಆಯೋಗದ ಮೂಲಕ ದೆಹಲಿಯನ್ನು ಪಾರ್ಟ್ ‘ಸಿ’ ರಾಜ್ಯವೆಂದು ಘೋಷಿಸಲಾಯಿತು. 1956ರಿಂದ 37 ವರ್ಷಗಳ ಕಾಲ ದೆಹಲಿ ಮುಖ್ಯಮಂತ್ರಿ ಪದವಿಯನ್ನೇ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿತ್ತು. 1991ರಲ್ಲಿ ಪುನಃ ದೆಹಲಿಗೆ ವಿಧಾನಸಭೆಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿತು. 1993ರಲ್ಲಿ ಚುನಾವಣೆ ನಡೆಸಿದಾಗ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 1998ರ ತನಕ ಮದನಲಾಲ್ ಖುರಾನ, ಸಾಹೀಬ್ ಸಿಂಗ್ ವರ್ಮಾ ಹಾಗೂ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಗಳಾಗಿದ್ದರು.
ದೆಹಲಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು 30 ವರ್ಷಗಳೇ ಸರಿದಿವೆ. 1998ರಲ್ಲಿ ಎರಡು ತಿಂಗಳಿಗೂ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದರು ಬಿಜೆಪಿಯ ಸುಷ್ಮಾ ಸ್ವರಾಜ್. 1998ರಿಂದ 2013ರ ತನಕ ಮೂರು ಅವಧಿಗಳ ಕಾಲ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. 2013ರಲ್ಲಿ ಕಾಂಗ್ರೆಸ್ಸನ್ನು ಗುಡಿಸಿ ಹಾಕಿತ್ತು ಆಮ್ ಆದ್ಮೀ ಪಾರ್ಟಿಯ ಪೊರಕೆ.

ಅರವಿಂದ್ ಕೇಜ್ರೀವಾಲ್ ಎಂದಿನಂತೆ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ದೆಹಲಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ಸಿನ ಸಂದೀಪ್ ದೀಕ್ಷಿತ್ (ಶೀಲಾ ದೀಕ್ಷಿತ್ ಅವರ ಮಗ), ಬಿಜೆಪಿಯ ಪರ್ವೇಶ್ ವರ್ಮಾ (ಸಾಹೀಬ್ ಸಿಂಗ್ ವರ್ಮಾ ಅವರ ಮಗ). ಸತತವಾಗಿ ಮೂರು ಬಾರಿ ಗೆದ್ದಿರುವ ಅವರು ನಾಲ್ಕನೆಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಕುಂವರ್ ದಾನಿಶ್ ಅಲಿ ಎಂಬ ಸಂಸದರನ್ನು ‘ಶಿಶ್ನದ ಮುಂದೊಗಲು ಕತ್ತರಿಸಿಕೊಂಡವನೇ, ತಲೆಹಿಡುಕನೇ, ಭಯೋತ್ಪಾದಕನೇ, ನಿನ್ನನ್ನು ಹೊರಗೆ ನೋಡಿಕೊಳ್ತೀನಲೋ ಮುಲ್ಲಾ…..’ ಎಂದೆಲ್ಲ ಬೈದಿದ್ದರು. ಈತ ಎರಡು ಬಾರಿ ಪ್ರತಿನಿಧಿಸಿದ್ದ ದೆಹಲಿ ದಕ್ಷಿಣ ಲೋಕಸಭಾ ಕ್ಷೇತ್ರದಿಂದ 2024ರ ಚುನಾವಣೆಗಳಲ್ಲಿ ಈತನಿಗೆ ಟಿಕೆಟ್ ನಿರಾಕರಿಸಲಾಯಿತು. ಇದೀಗ ದೆಹಲಿಯ ಮುಖ್ಯಮಂತ್ರಿ ಆತಿಶಿ ವಿರುದ್ಧ ಕಾಲ್ಕಾಜಿ ಕ್ಷೇತ್ರದಲ್ಲಿ ಈತನನ್ನು ಕಣಕ್ಕಿಳಿಸಲಾಗಿದೆ. ಈ ಮುಸ್ಲಿಮ್ ದ್ವೇಷಿ ಈಗಾಗಲೆ ಹಲವು ಬಾರಿ ಆತಿಶಿ ವಿರುದ್ಧ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ್ದಾರೆ. ಇಲ್ಲಿನ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ಸಿನ ಹುರಿಯಾಳು ಅಲ್ಕಾ ಲಾಂಬ.
ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ
ಕುತೂಹಲ ಮೂಡಿಸಿರುವ ಮತ್ತೊಂದು ಕ್ಷೇತ್ರ ಮಾಳವೀಯ ನಗರ. ಇಲ್ಲಿನ ಆಪ್ ಅಭ್ಯರ್ಥಿ ಸೋಮನಾಥ ಭಾರತಿ ಕಳೆದ ಮೂರೂ ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಈ ಸಲವೂ ಗೆಲ್ಲುವ ನಿರೀಕ್ಷೆಯಿದೆ. ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ವಿಜೇಂದರ್ ಗುಪ್ತ ಮತ್ತು ಆಪ್ ನ ಪ್ರದೀಪ್ ಮಿತ್ತಲ್ ನಡುವೆ ಈ ಸಲವೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಪೂರ್ವದೆಹಲಿಯ ಪಟ್ಪಡ್ ಗಂಜ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅತಿ ಕಡಿಮೆ ಅಂತರದಿಂದ ಗೆಲ್ಲುತ್ತ ಬಂದಿದ್ದಾರೆ. ಈ ಸಲ ಅವರ ಬದಲಿಗೆ ರಾಜಕಾರಣವನ್ನು ಪ್ರವೇಶಿಸಿರುವ ಶಿಕ್ಷಕ ಅವಧ್ ಓಝಾ ಅವರನ್ನು ಹೂಡಿದೆ ಆಪ್. ಸಿಸೋಡಿಯಾ ಜಂಗಪುರ ಕ್ಷೇತ್ರಕ್ಕೆ ಹೋಗಿದ್ದಾರೆ. ಪಟ್ಪಡ್ ಗಂಜ್ ಕ್ಷೇತ್ರದಲ್ಲಿ ಉತ್ತರಾಖಂಡ ಮತ್ತು ಪೂರ್ವಾಂಚಲದ ಜನ ಇಲ್ಲಿ ನಿರ್ಣಾಯಕ ಮತದಾರರು. ಅವರ ಪ್ರಮಾಣ ಶೇ.50ರಷ್ಟು. ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಪಾಠ ಹೇಳಿ ಜನಪ್ರಿಯರಾಗಿದ್ದಾರೆ ಓಝಾ. ಈ ಹಿಂದೆ ಅತ್ಯಂತ ತುರುಸಿನ ಸ್ಪರ್ಧೆ ನೀಡಿರುವ ತನ್ನ ಉಮೇದುವಾರ ರವೀಂದರ್ ಸಿಂಗ್ ನೇಗಿಯವರನ್ನೇ ಮುಂದುವರೆಸಿದೆ ಬಿಜೆಪಿ. 2015 ಮತ್ತು 2020ರಲ್ಲಿ ಓಖ್ಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು 60 ಸಾವಿರದ ಭಾರೀ ಅಂತರದಿಂದ ಗೆಲ್ಲುತ್ತ ಬಂದಿರುವವರು ಅಮಾನುಲ್ಲಾ ಖಾನ್. ಬಿಜೆಪಿ ಇವರನ್ನು ಸುಳ್ಳು ಕೇಸುಗಳಲ್ಲಿ ಸಿಕ್ಕಿಸಿ ಜೈಲಿಗೆ ತಳ್ಳಿರುವುದು ಹೌದು. ಇನ್ನೂ ಹಲವು ವಿವಾದಗಳಲ್ಲಿ ತಾವಾಗಿಯೇ ಸಿಕ್ಕಿ ಹಾಕಿಕೊಂಡಿರುವ ಖಾನ್ ಈ ಸಲವೂ ಗೆಲ್ಲುವ ಅವಕಾಶ ದಟ್ಟ. ಶಕ್ಕೂರ್ ಬಸ್ತಿಯಿಂದ ಆಪ್ ನ ಹಿರಿಯ ನಾಯಕ ಸತ್ಯೇಂದ್ರ ಜೈನ್ ಮೂರು ಸಲ ಗೆದ್ದಿದ್ದಾರೆ. ಕಪ್ಪು ಹಣವನ್ನು ಬಿಳಿಯಾಗಿಸುವ ಹಗರಣದ ಆರೋಪ ಹೊರಿಸಿ 18 ತಿಂಗಳ ಕಾಲ ಜೈಲಿನಲ್ಲಿ ಇಡಲಾಗಿದ್ದ ಜೈನ್ ಇತ್ತೀಚೆಗೆ ಹೊರಬಿದ್ದಿದ್ದಾರೆ. ಪಟೇಲ್ ನಗರ್ ಕ್ಷೇತ್ರದಿಂದ ಕಳೆದ ಸಲ ಆಪ್ ಅಭ್ಯರ್ಥಿಯಾಗಿ ಗೆದ್ದಿದ್ದ ರಾಜ್ ಕುಮಾರ್ ಆನಂದ್ ಈ ಸಲ ಬಿಜೆಪಿ ಅಭ್ಯರ್ಥಿಯಾಗಿ ಸೆಣೆಸುತ್ತಿದ್ದಾರೆ. ಅವರ ವಿರುದ್ಧ ಆಪ್ ಹೂಡಿರುವ ಹುರಿಯಾಳು ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರವೇಶ್ ರತನ್!
ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಪೂರ್ವಾಂಚಲಿಗಳು
ಈ ಚುನಾವಣೆಯ ನಿರ್ಣಾಯಕ ಮತಬ್ಯಾಂಕುಗಳಲ್ಲಿ ಪೂರ್ವಾಂಚಲಿಯೂ ಸೇರಿದೆ. ವಾರಾಣಸಿ ಮತ್ತು ಗೋರಖಪುರ ನಗರಗಳನ್ನು ಹೊಂದಿರುವ ಭೋಜಪುರಿ ಭಾಷೆಯನ್ನು ಮಾತಾಡುವ ಪೂರ್ವೀ ಉತ್ತರಪ್ರದೇಶದ ಸೀಮೆ ಮತ್ತು ಅದಕ್ಕೆ ಅಂಟಿರುವ ಬಿಹಾರ ಭೂಪ್ರದೇಶವನ್ನು ಪೂರ್ವಾಂಚಲ ಎಂದು ಕರೆಯಲಾಗುತ್ತದೆ. ದೆಹಲಿಯ ಮೂರನೆಯ ಒಂದು ಭಾಗದಷ್ಟು ಮತದಾರರು ಪೂರ್ವಾಂಚಲಿಗಳು. ಒಟ್ಟು 70 ವಿಧಾನಸಭಾ ಸೀಟುಗಳ ಪೈಕಿ 20ರ ಫಲಿತಾಂಶ ನಿರ್ಧರಿಸುವವರು ಇವರೇ. ಪಶ್ಚಿಮೀ ಉತ್ತರಪ್ರದೇಶ ನೀರಾವರಿಯಿಂದ ಸಮೃದ್ಧವಾಗಿದೆ. ಪೂರ್ವೀ ಉತ್ತರಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಬಿಹಾರೀ ಭೂಪ್ರದೇಶ ಬಡತನದಲ್ಲಿ ನರಳಿದೆ. ಈ ಭಾಗದ ಜನ ಹೊಟ್ಟೆಪಾಡಿಗಾಗಿ ದೆಹಲಿಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಬಂದಿದ್ದಾರೆ. ಝುಗ್ಗಿ-ಜೋಪಡಿಗಳೆಂದು ಕರೆಯಲಾಗುವ ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ. ಇವರು ಬಹುತೇಕ ಆಮ್ ಆದ್ಮೀ ಪಾರ್ಟಿಯ ಬೆಂಬಲಿಗರು.
ಕಳೆದ ಎರಡು ಚುನಾವಣೆಗಳಲ್ಲಿ ಆಮ್ ಆದ್ಮೀ ಪಾರ್ಟಿ ಭಾರೀ ಗೆಲುವು ಸಾಧಿಸಲು ಈ ಪೂರ್ವಾಂಚಲಿಗಳ ಬೆಂಬಲವೇ ನಿರ್ಣಾಯಕ ಕಾರಣ. ಈ ಸಲ ಬಿಜೆಪಿ ವ್ಯವಸ್ಥಿತವಾಗಿ ಈ ಮತಬ್ಯಾಂಕಿಗೆ ಕನ್ನ ಹಾಕಿದೆ. ಆಮ್ ಆದ್ಮೀ ಪಾರ್ಟಿ 10 ಪೂರ್ವಾಂಚಲಿ ಅಭ್ಯರ್ಥಿಗಳನ್ನು ಹೂಡಿದ್ದರೆ ಬಿಜೆಪಿ ಏಳು ಮಂದಿಗೆ ಟಿಕೆಟ್ ನೀಡಿದೆ. ರಸ್ತೆಗಳು ದುಸ್ಥಿತಿಯಲ್ಲಿವೆ, ಉಸಿರಾಡುವ ಗಾಳಿ ತೀರಾ ಕಲುಷಿತವಾಗಿದೆ. ಅಭಿವೃದ್ಧಿ ಅಷ್ಟಕ್ಕಷ್ಟೇ. ಚುನಾವಣೆಯ ಹೊತ್ತಿನಲ್ಲಷ್ಟೇ ಆಪ್ ನಮ್ಮ ಬಗ್ಗೆ ಕಳಕಳಿ ತೋರುತ್ತಿದೆ ಎಂಬುದು ಒಂದು ವರ್ಗದ ಪೂರ್ವಾಂಚಲಿಗಳ ಅಸಮಾಧಾನ.
ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?
ಆಪ್ ಕೀ ಅಪನೀ ಪಾರ್ಟಿ (ಆಪ್) ಮತ್ತು ಭಾರತೀಯ ಲಿಬರಲ್ ಪಾರ್ಟಿ (ಬಿ.ಎಲ್.ಪಿ) ಎಂಬ ಆಪ್ ಮತ್ತು ಬಿಜೆಪಿ ಪಾರ್ಟಿಯ ಹೆಸರುಗಳನ್ನು ಹೋಲುವ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ರೈಟ್ ಟು ರೀಕಾಲ್ ಪಾರ್ಟಿ (ಚುನಾಯಿತ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ವಾಪಸು ಕರೆಯಿಸಿಕೊಳ್ಳುವ ಪಾರ್ಟಿ), ರಾಷ್ಟ್ರೀಯ ಮಾನವ ಪಾರ್ಟಿ, ಭೀಮಸೇನಾ, ಡೆಲ್ಲಿ ಜನತಾ ಪಾರ್ಟಿ, ಅಭಿನವ ಭಾರತ್ ಪಾರ್ಟಿ, ಹರ್ಯಾಣ ಜನಸೇನಾ ಪಾರ್ಟಿ, ಜಾತೀಯ ಜನಸೇನಾ ಪಾರ್ಟಿ, ರಾಷ್ಟ್ರವಾದಿ ಜನಲೋಕ ಪಾರ್ಟಿ (ಸತ್ಯ) ಪಕ್ಷಗಳ ಅಭ್ಯರ್ಥಿಗಳೂ ಸ್ಪರ್ಧಿಸಿದ್ದಾರೆ.
ದೆಹಲಿ ಚುನಾವಣೆಗಳಲ್ಲಿ ಜಾತಿಯ ಲೆಕ್ಕಾಚಾರ ಫಲಿತಾಂಶವನ್ನು ಪ್ರಭಾವಿಸುತ್ತದೆಯೇ?
ದೇಶದಲ್ಲಿ ಸಂಪೂರ್ಣ ನಗರಸ್ವರೂಪದ ಜನಸಂಖ್ಯೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ದೆಹಲಿಯೊಂದೇ. ಈ ಜನಸಂಖ್ಯೆಯಲ್ಲಿ ಬಲಿಷ್ಠ ಜಾತಿಗಳ ಮತದಾರರೇ ಹೆಚ್ಚು (ಅಂದಾಜು ಶೇ.35ರಿಂದ ಶೇ.40). ಈ ಪೈಕಿ ದೊಡ್ಡ ಪ್ರಮಾಣ ಬ್ರಾಹ್ಮಣರದೇ (ಶೇ.13). ರಜಪೂತರು ಶೇ.8, ವೈಶ್ಯರು ಶೇ,7, ಪಂಜಾಬಿ ಖತ್ರಿಗಳು ಶೇ.5. ಉಳಿದವರು ಇತರೆ ಸಾಮಾನ್ಯ ಜಾತಿಗಳು. ಬಲಿಷ್ಠ ಜಾಟರೂ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮತದಾರರು ಶೇ.30ರಷ್ಟಿದ್ದಾರೆ. ಈ ಪೈಕಿ ಜಾಟರು ಗುಜ್ಜರದೇ ಸಿಂಹಪಾಲು. ಯಾದವರೂ ಇದ್ದಾರೆ. ಶೇ.16ರಷ್ಟು ದಲಿತರು, ಶೇ.13ರಷ್ಟು ಮುಸಲ್ಮಾನರು ಹಾಗೂ ಶೇ.3.5ರಷ್ಟು ಸಿಖ್ಖರಿದ್ದಾರೆ. ಈ ಸಲ ಬಿಜೆಪಿ ಶೇ.45ರಷ್ಟು ‘ಮೇಲ್ಜಾತಿ’ ಅಭ್ಯರ್ಥಿಗಳನ್ನು ಹೂಡಿದರೆ, ಆಪ್ ಹೂಡಿರುವ ಇದೇ ಅಭ್ಯರ್ಥಿಗಳ ಪ್ರಮಾಣ ಶೇ.48. ಕಾಂಗ್ರೆಸ್ ಮಾತ್ರವೇ ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ.35ರಷ್ಟು ‘ಮೇಲ್ಜಾತಿ’ ಉಮೇದುವಾರರಿಗೆ ಟಿಕೆಟ್ ನೀಡಿದೆ. ಅಶೋಕ ವಿಶ್ವವಿದ್ಯಾಲಯದ ‘ತ್ರಿವೇದಿ ಸೆಂಟರ್ ಫಾರ್ ಪೊಲಿಟಿಕಲ್ ಡೇಟಾ’ದ ಪ್ರಕಾರ ಈ ಹಿಂದಿನ ಚುನಾವಣೆಗಳಲ್ಲಿ ಕೂಡ ‘ಮೇಲ್ಜಾತಿಗಳ’ದೇ ಪ್ರಾಬಲ್ಯ. ದೆಹಲಿಯ ಹಾಲಿ ವಿಧಾನಸಭೆಯಲ್ಲಿ ‘ಮೇಲ್ಜಾತಿ’ ಶಾಸಕರ ಪ್ರಮಾಣ ಶೇ.50. ಇಂತಹ ಆಪ್ ಶಾಸಕರ ಪ್ರಮಾಣ ಶೇ.40. ಬಿಜೆಪಿಯ ಏಳು ಮಂದಿ ಶಾಸಕರ ಪೈಕಿ ಆರು ಮಂದಿ ‘ಮೇಲ್ಜಾತಿ’ಗಳವರು. ಬ್ರಾಹ್ಮಣರ ಪ್ರಾತಿನಿಧ್ಯ ಶೇ.20ಕ್ಕೇರಿದೆ. ವೈಶ್ಯರ ಪ್ರಾತಿನಿಧ್ಯ ಶೇ.13ರಿಂದ ಶೇ.14. 2008 ಮತ್ತು 2020ರ ನಡುವೆ ಜಾಟರು ಮತ್ತು ಗುಜ್ಜರರ ಪ್ರಾತಿನಿಧ್ಯ ಶೇ.19ರಿಂದ ಶೇ.6ಕ್ಕೆ ಕುಸಿದಿದೆ. ಈ ಹಿಂದೆ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದ್ದ ಜನಾಂಗಗಳಿವು. ಮುಸ್ಲಿಮರಿಗೆ ಅವರ ಜನಸಂಖ್ಯಾ ಪ್ರಮಾಣದ (ಶೇ.13) ಅರ್ಧದಷ್ಟು (ಶೇ.7) ಮಾತ್ರವೇ ದೊರೆಯತ್ತ ಬಂದಿವೆ. ಕಾಂಗ್ರೆಸ್ ಶೇ.10ರಷ್ಟು ಮುಸ್ಲಿಮ್ ಅಭ್ಯರ್ಥಿಗಳನ್ನೂ, ಆಪ್ ಶೇ.7ರಷ್ಟು ಮುಸ್ಲಿಮ್ ಅಭ್ಯರ್ಥಿಗಳನ್ನೂ ನಿಲ್ಲಿಸಿದೆ. ಈ ಬಾಬ್ತಿನಲ್ಲಿ ಬಿಜೆಪಿಯದು ಶೂನ್ಯ ಸ್ಥಿತಿ. ಸಿಖ್ಖರಿಗೆ ಬಿಜೆಪಿ ಶೇ.5, ಆಪ್ ಶೇ.6, ಕಾಂಗ್ರೆಸ್ ಶೇ.7ರಷ್ಟು ಟಿಕೆಟ್ ನೀಡಿದೆ.
ಒಟ್ಟು 70 ಸೀಟುಗಳ ಪೈಕಿ 12 ಮೀಸಲು ಸೀಟುಗಳಿವೆ. ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಈವರೆಗಿನ ಸಾಧನೆ ಕಳಪೆ. ಇತ್ತೀಚೆಗೆ ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ಅವರ ಸಡಿಲ ಹೇಳಿಕೆ ಅವರ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸಿದೆ. ಸುಲ್ತಾನ್ ಪುರಿ, ಕರೋಲ್ ಬಾಗ್ ಅನುಕ್ರಮವಾಗಿ ತಲಾ ಶೇ.44, ಶೇ.41,ರಷ್ಟು ದಲಿತ ಜನಸಂಖ್ಯೆಯನ್ನು ಹೊಂದಿವೆ. ಉಳಿದಂತೆ ಗೋಕುಲಪುರಿ, ಸೀಮಾಪುರಿ, ಮಂಗೋಲ್ ಪುರಿ, ತ್ರಿಲೋಕ್ ಪುರಿ ಹಾಗೂ ಅಂಬೇಡ್ಕರ್ ನಗರ ಕ್ಷೇತ್ರಗಳು ತಲಾ ಶೇ.30ರಷ್ಟು ದಲಿತರನ್ನು ಹೊಂದಿವೆ. ಜಾಟವರು, ಬಾಲ್ಮೀಕಿಗಳು, ಖಾಟಿಕ್, ರಾಯ್ಗಾರ್ಸ್, ಕೋಲಿ, ಬೈರ್ವಾ ಹಾಗೂ ಧೋಬಿಗಳು ದಲಿತ ಉಪಜಾತಿಗಳು. ದೆಹಲಿ ದಲಿತರ ಪೈಕಿ ಜಾಟವರ ಪ್ರಮಾಣ ಶೇ.50ರಷ್ಟು. 2015ರ ಚುನಾವಣೆಗಳಲ್ಲಿ ಆಪ್ ಎಲ್ಲ 12 ಮೀಸಲು ಸೀಟುಗಳನ್ನು ಗೆದ್ದಿತ್ತು. 2020ರಲ್ಲೂ ಎಲ್ಲ 12 ಸೀಟುಗಳು ಆಪ್ ಪಾಲಾದವು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದಲಿತರ ವೋಟುಗಳನ್ನು ಪಡೆಯಲು ತಿಣುಕುತ್ತಿವೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು




