ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ್ ಪಾಟೀಲ್ ಸಲ್ಲಿಸಿದ ಪೊಲೀಸ್ ದೂರಿನ ಪ್ರಕಾರ, ಕರ್ನಾಟಕದ ಬಿಲ್ಡರ್ ಒಬ್ಬರು ಈ ಹಣವನ್ನು ಅಹಮದಾಬಾದ್ನ ಆಶ್ರಮಕ್ಕೆ ಕಳುಹಿಸಿದ್ದು, ಅದನ್ನು ಕಾನೂನುಬದ್ಧ ನಗದನ್ನಾಗಿ ಪರಿವರ್ತಿಸಲು ಕಳುಹಿಸಿದ್ದಾರೆ. ಈ ಹಣವನ್ನು ಥಾಣೆ ಮೂಲದ ರಾಜಕಾರಣಿಯೊಬ್ಬರು ಬಳಸುತ್ತಿದ್ದರು ಎಂದು ತಿಳಿದುಬಂದಿದೆ, ಅವರು ಬಿಲ್ಡರ್ಗೆ ಆಪ್ತರು ಎಂದು ವರದಿಯಾಗಿದೆ.
ದೇಶದ ರಾಜಕೀಯ, ಆಡಳಿತ ಹಾಗೂ ಭದ್ರತಾ ವಲಯದಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ನಡೆದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂಪಾಯಿ ಸಾಗಿಸುತ್ತಿದ್ದ ಕಂಟೇನರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ನಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ದರೋಡೆಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ನಡೆದಿದ್ದು, ಮೂರು ರಾಜ್ಯಗಳ ಪೊಲೀಸರು ಸಹಯೋಗದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಟ್ಯಾಂಕರ್ ಲಾರಿಗಳಲ್ಲಿ ಮುಚ್ಚಿ ಸಾಗಿಸುತ್ತಿರುವ ಅನುಮಾನವಿರುದ ಈ ಪ್ರಕರಣವು ಹವಾಲಾ ನೆಟ್ವರ್ಕ್, ರಾಜಕೀಯ ಸಂಬಂಧಗಳು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೊಂಡಿದೆ.
ಘಟನೆಯು 2025ರ ಅಕ್ಟೋಬರ್ 25ರ ರಾತ್ರಿ ಚೋರ್ಲಾ ಘಾಟ್ನಲ್ಲಿ ನಡೆದಿದೆ. ಚೋರ್ಲಾ ಘಾಟ್ ಕರ್ನಾಟಕ-ಗೋವಾ ಗಡಿಯ ಸಮೀಪದಲ್ಲಿ ಇದ್ದು, ಮಹಾರಾಷ್ಟ್ರಕ್ಕೂ ಸಂಪರ್ಕ ಹೊಂದಿದ ತ್ರಿಜಂಕ್ಷನ್ ಏರಿಯಾ. ಇದೊಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ ಕಥೆಯಂತಿದೆ. ನಾಸಿಕ್ ಮೂಲದ ವ್ಯಕ್ತಿಯ ಕಿಡ್ನಾಪ್ ಕೇಸ್ ಇಟ್ಕೊಂಡು ತನಿಖೆ ಮಾಡ್ತಿದ್ದ ಮಹಾರಾಷ್ಟ್ರ ಪೊಲೀಸರಿಗೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ. ಹಳೆ ನೋಟು ಸಾಗಾಟ ಮಾಡ್ತಿದ್ರಾ? ಅಥವಾ ಇದು ಹವಾಲಾ ಹಣನಾ? ಸದ್ಯಕ್ಕೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಈ ಬಗ್ಗೆ ತನಿಖೆ ಹಾಗೂ ಮಾಹಿತಿ ನೀಡಿದ್ದು, ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಪರಾಧದ ಇತಿಹಾಸದಲ್ಲೇ ಬೆಚ್ಚಿಬೀಳಿಸುವ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ ಎನ್ನಲಾಗುತ್ತಿದೆ.
ಜನವರಿ 6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಬೆಳಗಾವಿ ಪೊಲೀಸರಿಗೆ ಒಂದು ಪತ್ರ ಬರುತ್ತೆ. ವಿಷಯ ಓದಿ ಬೆಳಗಾವಿ ಪೊಲೀಸರೇ ದಂಗಾಗಿದ್ದಾರೆ. “ನಿಮ್ಮ ಏರಿಯಾದ ಚೋರ್ಲಾ ಘಾಟ್ನಲ್ಲಿ ದೊಡ್ಡ ದರೋಡೆಯಾಗಿದೆ, ಬರೋಬ್ಬರಿ 400 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ” ಅನ್ನೋ ಉಲ್ಲೇಖ ಆ ಪತ್ರದಲ್ಲಿತ್ತು. ಈ ಹಣ ಹಳೆಯ ನೋಟುಗಳಾಗಿರಬಹುದು ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಅಷ್ಟಕ್ಕೂ ಈ ವಿಷಯ ಹೊರಬಂದಿದ್ದು ಒಂದು ಕಿಡ್ನಾಪ್ ಕೇಸ್ನಿಂದ. ಅಕ್ಟೋಬರ್ 22ರಂದು ನಾಸಿಕ್ನಲ್ಲಿ ಸಂದೀಪ್ ಪಾಟೀಲ್ ಅನ್ನೋ ವ್ಯಕ್ತಿಯನ್ನ ವಿಶಾಲ್ ನಾಯ್ಡು ಅನ್ನೋ ರೌಡಿ ಕಿಡ್ನಾಪ್ ಮಾಡಿದ್ದ. ಈ ಕೇಸ್ ತನಿಖೆ ಮಾಡುವಾಗ, ಸ್ವತಃ ಕಿಡ್ನಾಪ್ ಆಗಿದ್ದ ಸಂದೀಪ್ ಪಾಟೀಲ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬಾತನ ಅಪಹರಣದಿಂದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕಂಟೇನರ್ ರಾಬರಿ ಆದ ಬಳಿಕ ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಸಹಚರರು ಸಂದೀಪ್ ಪಾಟೀಲ್ಗೆ ಗನ್ ಪಾಯಿಂಟ್ ತೋರಿಸಿ ಅಪಹರಿಸಿದ್ದರು. ಒಂದೂವರೆ ತಿಂಗಳು ಒತ್ತೆಯಾಳಾಗಿಸಿಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಕಂಟೇನರ್ ಹೈಜಾಕ್ಗೆ ನೀನೇ ಕಾರಣ ಎಂದು ಸಂದೀಪ್ಗೆ ಚಿತ್ರಹಿಂಸೆ ನೀಡಿದ್ದಾರೆ. 400 ಕೋಟಿ ರೂ ಹಣ ಕೊಡದಿದ್ದರೆ ಜೀವ ತೆಗೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಸಂದೀಪ್ ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 400 ಕೋಟಿ ರೂ ಹಣದ ವಾಹನ ಅಪಹರಿಸಿರುವ ಬಗ್ಗೆ ಸಂದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಕಿಡ್ನಾಪರ್ಸ್ ನನ್ನ ಹತ್ರ ಮಾತಾಡುವಾಗ 400 ಕೋಟಿ ದರೋಡೆ ಬಗ್ಗೆ ಚರ್ಚೆ ಮಾಡ್ತಿದ್ರು” ಅಂತ ಹೇಳಿದ್ದಾನೆ. ಅಕ್ಟೋಬರ್ 16ರಂದು ಈ ಮಹಾ ದರೋಡೆ ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಖಾನಾಪುರದ ಸಬ್ ಇನ್ಸ್ಪೆಕ್ಟರ್ ನೇತೃತ್ವದ ಟೀಂ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದೆ. ವಿಚಿತ್ರ ಅಂದ್ರೆ, ಇಷ್ಟು ದೊಡ್ಡ ಮೊತ್ತ ಕಳ್ಕೊಂಡ್ರೂ ಯಾರೂ ಬಂದು ದೂರು ಕೊಟ್ಟಿಲ್ಲ. ದೂರು ಬಂದ್ರೆ ಎಫ್ಐಆರ್ ಹಾಕ್ತಿವಿ ಅಂತ ಎಸ್ಪಿ ಹೇಳಿದ್ದಾರೆ. ಸದ್ಯ ರಾಬರಿ ಆಗಿರುವ ಭಾರೀ ಮೊತ್ತವು ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ಗೆ ಸೇರಿದ್ದು ಎನ್ನಲಾಗುತ್ತಿದೆ.
ಇನ್ನು ಇತ್ತ ಸಂದೀಪ್ ಪಾಟೀಲ್ ವಿಡಿಯೋ ಹೇಳಿಕೆಯೊಂದು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ. ‘ಇದು 400 ಕೋಟಿ ರೂ ಅಲ್ಲ 1000 ಕೋಟಿ ರೂ ಪ್ರಕರಣ. ಚೋರ್ಲಾ ಘಾಟ್ನಲ್ಲಿ ರದ್ದಾದ 2000 ಮುಖಬೆಲೆಯ ನೋಟು ತುಂಬಿದ ಹಣದ ಕಂಟೇನರ್ ಗಯಾಬ್ ಆಗಿದೆ. ಕಂಟೇನರ್ ಗಯಾಬ್ ಮಾಡಿದ ಆರೋಪಿಗಳು ಬಿಲ್ಡರ್ ಕಿಶೋರ್ಗೆ ನನ್ನ ಹೆಸರಿನಿಂದ ಕರೆ ಮಾಡಿ 100 ಕೋಟಿ ರೂ ಡಿಮ್ಯಾಂಡ್ ಮಾಡಲಾಗಿದೆ’. ‘ಆಗ ಕಿಶೋರ್ ಸಹಚರರು ನನ್ನ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಕೊಟ್ಟು ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳೇ ನನಗೆ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕಿದ್ದರು. ಹೀಗಾಗಿ ಕೆಲದಿನ ಜೀವ ಭಯದಿಂದ ಸುಮ್ಮನಾಗಿದ್ದೆ. ಈ ವಿಚಾರ ಎಲ್ಲಿಯೂ ಬಾಯಿ ಬಿಡದಂತೆ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹಾಕಲು ಯತ್ನಿಸಿದ್ದರು. ಆದರೂ ದೂರು ದಾಖಲಿಸಿರುವೆ. ನನ್ನ ಜೀವಕ್ಕೆ ತೊಂದರೆ ಆದರೆ ಬಿಲ್ಡರ್ ಕಿಶೋರ್ ಮತ್ತವರ ಸಹಚರರೇ ಹೊಣೆಗಾರರು’ ಎಂದು ಸಂದೀಪ್ ಪಾಟೀಲ್ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆ ಪತ್ರದಲ್ಲಿ “ಓಲ್ಡ್ 400 ಕ್ರೋರ್” ಅಂತ ಉಲ್ಲೇಖ ಇರೋದ್ರಿಂದ, ಇದು ಅಮಾನ್ಯಗೊಂಡ ಹಳೆಯ ನೋಟುಗಳ ಸಾಗಾಟನಾ ಅನ್ನೋ ಡೌಟ್ ಶುರುವಾಗಿದೆ. ಬ್ಲ್ಯಾಕ್ ಮನಿ ಆಗಿರೋದ್ರಿಂದಲೇ ಹಣ ಕಳೆದುಕೊಂಡವರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತ್ತಿಲ್ಲವಾ? ಅನ್ನೋದು ಈಗಿನ ಯಕ್ಷಪ್ರಶ್ನೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಎಸ್ಐಟಿ ರಚನೆಯಾಗಿದ್ದು, ತನಿಖೆ ಚುರುಕಾಗಿದೆ. ಬೆಳಗಾವಿ ಪೊಲೀಸರು ಕೂಡ ಪೂರ್ಣ ಸಹಾಯ ಮಾಡುತ್ತಿದ್ದಾರೆ. ಚೋರ್ಲಾ ಘಾಟ್ನಲ್ಲಿ ಕಳ್ಳತನ ತಪ್ಪಿಸಲು ಹೊಸ ಹೈ-ಟೆಕ್ ಸಿಸಿಟಿವಿ ಅಳವಡಿಸಲು ಪ್ಲಾನ್ ಸಿದ್ಧವಾಗಿದೆ. ಒಟ್ಟಿನಲ್ಲಿ ಆ 400 ಕೋಟಿ ಎಲ್ಲಿಗೆ ಹೋಯ್ತು ಅನ್ನೋದು ಮಾತ್ರ ಇನ್ನೂ ಮಿಸ್ಟರಿ.
400 ಕೋಟಿ ಎಂದರೆ ಸಾವಿರಾರು ಬಡ ಕುಟುಂಬಗಳ ಜೀವನ, ಸಾವಿರಾರು ಮಕ್ಕಳ ಶಿಕ್ಷಣ, ಲಕ್ಷಾಂತರ ಜನರ ಶ್ರಮದ ತೆರಿಗೆ ಹಣ. ಈ ದರೋಡೆ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಪೊಲೀಸರು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕ್ಗೆ ತೆರಳಿದ್ದು, ಬಂಧಿತರ ವಿಚಾರಣೆಗೆ ಅವಕಾಶ ನೀಡುವಂತೆ ಪ್ರಯತ್ನ ನಡೆಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಮಹಾರಾಷ್ಟ್ರ ವಿಶೇಷ ತನಿಖಾ ತಂಡ (ಎಸ್ಐಟಿ) ಬೆಳಗಾವಿ ಪೊಲೀಸರಿಗೆ ಸಹಕಾರ ನೀಡುವಂತೆ ಪತ್ರ ಬರೆದಿತ್ತು. ಈ ಪತ್ರ ಬಂದ ತಕ್ಷಣ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅಲರ್ಟ್ ಆಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನೇತೃತ್ವದ ಕರ್ನಾಟಕ ಪೊಲೀಸ್ ತಂಡವನ್ನು ನಾಸಿಕ್ಗೆ ರವಾನಿಸಿದ್ದರು. ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿದ್ದ ಹಣವನ್ನ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಆ ಕಂಟೇನರ್ಗಳು ಕರ್ನಾಟಕ ರಾಜ್ಯ ಗಡಿಯನ್ನು ಪ್ರವೇಶಿಸಿದ್ದವೆಯೇ? ಎಂದು ಪತ್ತೆಗೆ ಕರ್ನಾಟಕ ಪೊಲೀಸರು ಮುಂದಾಗಿದ್ದಾರೆ.

ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ್ ಪಾಟೀಲ್ ಸಲ್ಲಿಸಿದ ಪೊಲೀಸ್ ದೂರಿನ ಪ್ರಕಾರ, ಕರ್ನಾಟಕದ ಬಿಲ್ಡರ್ ಒಬ್ಬರು ಈ ಹಣವನ್ನು ಅಹಮದಾಬಾದ್ನ ಆಶ್ರಮಕ್ಕೆ ಕಳುಹಿಸಿದ್ದು, ಅದನ್ನು ಕಾನೂನುಬದ್ಧ ನಗದನ್ನಾಗಿ ಪರಿವರ್ತಿಸಲು ಕಳುಹಿಸಿದ್ದಾರೆ. ಈ ಹಣವನ್ನು ಥಾಣೆ ಮೂಲದ ರಾಜಕಾರಣಿಯೊಬ್ಬರು ಬಳಸುತ್ತಿದ್ದರು ಎಂದು ತಿಳಿದುಬಂದಿದೆ, ಅವರು ಬಿಲ್ಡರ್ಗೆ ಆಪ್ತರು ಎಂದು ವರದಿಯಾಗಿದೆ.
ಇದಲ್ಲದೆ, ಹವಾಲಾ ಆಪರೇಟರ್ಗಳ ಸಂಬಂಧವಿದ್ದು, ಐದು ಆರೋಪಿಗಳು ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ ಮತ್ತು ಜನಾರ್ಧನ್ ಧೈಗುಡೆ ಬಂಧನಕ್ಕೀಡಾಗಿದ್ದಾರೆ. ಇನ್ನೂ ಇಬ್ಬರು ಶಂಕಿತರನ್ನು ಹುಡುಕಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣದ ಬಗ್ಗೆ ಗಂಭೀರ ಶಂಕೆಗಳು ಹೊರಬಿದ್ದರೂ, ರಾಜಕೀಯ ವಲಯದಿಂದ ಸ್ಪಷ್ಟ ಪ್ರತಿಕ್ರಿಯೆಗಳು ಕಾಣಿಸದಿರುವುದು ಮತ್ತಷ್ಟು ಅನುಮಾನ ಹುಟ್ಟಿಸುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸದೇ ಹೋದರೆ, ಡೀಮೋನಿಟೈಜೇಶನ್ ಎಂಬ ನಿರ್ಧಾರವೇ ಪ್ರಶ್ನಾರ್ಹವಾಗುತ್ತದೆ. ಗೋವಾಕ್ಕೆ ಹೋಗುವ ಟ್ಯಾಂಕರ್, ಮಹಾರಾಷ್ಟ್ರ ದಾಟುವ ಲಾರಿ, ಕರ್ನಾಟಕದಲ್ಲಿ ಅಡಗಿಸುವ ಗೋದಾಮು ಇದು ನಮ್ಮ ದೇಶದ ವಾಸ್ತವ. ಕರ್ನಾಟಕ ಪೊಲೀಸರು ಈಗ ಗೋವಾ–ಮಹಾರಾಷ್ಟ್ರ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ಒಳ್ಳೆಯದು. ಆದರೆ ಇಷ್ಟು ವರ್ಷ ಎಲ್ಲಿದ್ದರು?

ಈ ಟ್ಯಾಂಕರ್ಗಳು ನಿನ್ನೆ ಮೊನ್ನೆ ಹುಟ್ಟಿರುವುದಲ್ಲ. ಈ ಜಾಲ ನಿನ್ನೆ ಮೊನ್ನೆ ರೂಪುಗೊಂಡದ್ದಲ್ಲ. ಅಂದರೆ ಯಾರೋ ನೋಡಿದ್ದಾರೆ, ಯಾರೋ ಗೊತ್ತಿದ್ದರೂ ಮೌನವಾಗಿದ್ದಾರೆ, ಯಾರೋ ಪಾಲನ್ನೂ ಪಡೆದಿದ್ದಾರೆ. ಇಲ್ಲದಿದ್ದರೆ, 400 ಕೋಟಿ ಇಷ್ಟು ಸುಲಭವಾಗಿ ಓಡಾಡಲು ಸಾಧ್ಯವೇ?
ಜನರಿಗೆ ಅಂದು ಕಾಗೆ ಹಾರಿಸಿದ್ದರು. “ಕಪ್ಪು ಹಣ ನಾಶವಾಗುತ್ತದೆ” ಅಂತ. ನಾಶವಾಯಿತಾ? ಅಥವಾ ಟ್ಯಾಂಕರ್ ಲಾರಿಗಳಲ್ಲಿ ಇನ್ನೂ ಸುರಕ್ಷಿತವಾಗಿ ಓಡಾಡುತ್ತಿದೆಯಾ? ಡಿಮೊನಟೈಸೇಷನ್ ದಿನಗಳಲ್ಲಿ ಜನ ಸಾಲಿನಲ್ಲಿ ನಿಂತರು, ವೃದ್ಧರು ಪ್ರಾಣ ಕಳೆದುಕೊಂಡರು. ಸಣ್ಣ ವ್ಯಾಪಾರಿಗಳ ಬದುಕು ಬೀದಿಪಾಲಾಯಿತು. ಆದರೆ 400 ಕೋಟಿ ರೂಪಾಯಿ ಮಾತ್ರ ಬದುಕುಳಿದಿದೆ. ಈ 400 ಕೋಟಿ ರೂ. ಸಿಕ್ಕಿಲ್ಲ ಅಂದ್ರೆ, ದೇಶದ ಜನರಿಗೆ ಇನ್ನೆಂದೂ “ನೈತಿಕತೆ” ಬಗ್ಗೆ ಪಾಠ ಹೇಳುವ ಹಕ್ಕು ಯಾರಿಗೂ ಇಲ್ಲ. ಆ ನೋಟುಗಳು ಹಳೆಯ ನೋಟುಗಳಾಗಿದ್ದರೆ ಅದನ್ನ ಈಗ ಸಾಗಿಸುವುಕ್ಕೆ ಯಾಕೆ ಮುಂದಾದರು? ಅಥವಾ ಅದು ಡಿಮಾನಿಟೈಸೇಷನ್ ನಂತರದ ಹೊಸ ನೋಟುಗಳೇ ಆಗಿತ್ತಾ? ಇದರ ಹಿಂದಿನ ಕುಳ ಯಾರು? ಇದಕ್ಕೆ ಮಹಾರಾಷ್ಟ್ರ, ಗೋವಾ ಸರ್ಕಾರದ ಉತ್ತರ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಮೋದಿಯವರ ಅವಧಿಯಲ್ಲಿ ದೇಶ ಕಂಡು ಕೇಳರಿಯದ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಬಗ್ಗೆ ಅವರನ್ನು ನೇರವಾಗಿ ಪ್ರಶ್ನಿಸೋಣ ಅಂದ್ರೆ ಅವರು ಪತ್ರಿಕಾಗೋಷ್ಠಿಗೆ ಬರುವ ಧೈರ್ಯವನ್ನೇ ಮಾಡುತ್ತಿಲ್ಲ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮೋದಿಯವರಿಗೆ ಈ ಸುದ್ದಿ ತಲುಪಿದೆಯೇ ಗೊತ್ತಿಲ್ಲ. ಮನ್ ಕೀ ಬಾತ್ನಲ್ಲಿ ತಾವು ಆಡಿದ ಮಾತುಗಳನ್ನು ಮಾತ್ರ ದೇಶದ ಜನ ಕೇಳಿಸಿಕೊಳ್ಳಬೇಕಿದೆ. ಅದೇ ಜನರ ಪ್ರಶ್ನೆಗಳಿಗೆ ಅವರಲ್ಲಿ ಉತ್ತವಿಲ್ಲ.
ಇದು ಕೇವಲ ಹಣ ಕಳ್ಳಸಾಗಣೆಯ ಸುದ್ದಿ ಅಲ್ಲ. ಇದು ದೇಶದ ಆಡಳಿತ ವ್ಯವಸ್ಥೆ ನಗ್ನವಾಗಿ ಸಿಕ್ಕಿಬಿದ್ದಿರುವ ಕ್ಷಣ. ಡೀಮಾನಿಟೈಸೇಶನ್ ಎಂಬ ಹೆಸರಿನಲ್ಲಿ ದೇಶದ ಬಡ ಜನರ ಕೈಯಲ್ಲಿದ್ದ ನೋಟುಗಳನ್ನು ಕಿತ್ತುಕೊಂಡ ವ್ಯವಸ್ಥೆ, ಇಂದು 400 ಕೋಟಿ ರೂಪಾಯಿ ಹಳೆಯ ನೋಟುಗಳು ಲಾರಿಗಳಲ್ಲಿ ಓಡಾಡುತ್ತಿದ್ದರೂ ಮೌನವಾಗಿದೆ.





