ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ; ಜವಾಬ್ದಾರಿ ಮರೆತದ್ದು ಯಾರು?

Date:

ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 8 ಲಕ್ಷ ಮಂದಿ ಆತ್ಮಹತ್ಯೆಯಿಂದ ತಮ್ಮ ಜೀವನ ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಜನ ಸಾವಿನ ಮನೆ ಸೇರುತ್ತಿದ್ದಾರೆ. ಮಾತ್ರವಲ್ಲ, ಒಂದು ಆತ್ಮಹತ್ಯೆ ಪ್ರಕರಣದ ಹಿಂದೆ ಕನಿಷ್ಠ 20ಕ್ಕೂ ಹೆಚ್ಚು ವಿಫಲ ಆತ್ಮಹತ್ಯೆ ಪ್ರಯತ್ನಗಳು ನಡೆದಿರುತ್ತವೆ. ಅಂದರೆ, ಲಕ್ಷಾಂತರ ಮಂದಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದರೂ, ಗಂಭೀರ ಮಾನಸಿಕ ನೋವು ಮತ್ತು ಅಪಾಯದ ಸ್ಥಿತಿಯಲ್ಲಿಯೇ ಮುಂದುವರಿಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯ ವರದಿಯೊಂದು ಈ ಆತಂಕಕಾರಿ ಅಂಶಗಳನ್ನು ಬಯಲು ಮಾಡಿದೆ. ಕೋವಿಡ್‌ ಬಳಿಕ ಈ ಪ್ರಮಾಣ ಮತ್ತೂ ಹೆಚ್ಚಾಗಿದೆ ಎನ್ನುತ್ತವೆ ಹಲವು ವರದಿಗಳು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ವರದಿಯ ಪ್ರಕಾರ, 2023ರಲ್ಲಿ ಭಾರತದಲ್ಲಿ ಸುಮಾರು 1.71 ಲಕ್ಷ ಮಂದಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 450ಕ್ಕೂ ಹೆಚ್ಚು ಮಂದಿ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ಪ್ರತಿ ಒಂದು ಲಕ್ಷ ಜನರಿಗೆ ಶೇ.12ಕ್ಕಿಂತ ಹೆಚ್ಚು ಆತ್ಮಹತ್ಯೆ ಪ್ರಮಾಣ ದಾಖಲಾಗಿದೆ. ಪ್ರತಿ ಪ್ರಕರಣದ ಹಿಂದೆ ಆರ್ಥಿಕ ಸಂಕಷ್ಟ, ಕೌಟುಂಬಿಕ ಕಲಹ, ಸಾಮಾಜಿಕ ಒತ್ತಡ, ಖಿನ್ನತೆ, ನಿರುದ್ಯೋಗ ಸೇರಿದಂತೆ ಹಲವು ಕಾರಣಗಳಿರುತ್ತವೆ. ಇದೇ ಜಂಜಾಟಗಳಿಂದ ಬದುಕು ರೋಸಿ ಹೋದಾಗ ಕೊನೆಗೆ ಆ ವ್ಯಕ್ತಿ ತೆಗೆದುಕೊಳ್ಳುವ ಈ ನಿರ್ಧಾರಕ್ಕೆ ಬರುತ್ತಾನೆ ಎನ್ನುತ್ತಾರೆ ಮಾನಸಿಕ ತಜ್ಞರು.

ಬಹುಪಾಲು ಪ್ರಕರಣಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವರದಿಯಾಗಿವೆ. ದೊಡ್ಡ ನಗರಗಳಲ್ಲಿ ಜೀವನ ದುಬಾರಿಯಾಗುತ್ತಿರುವುದು, ಕೆಲಸದ ಒತ್ತಡ, ಸಂಬಂಧಗಳ ಒತ್ತಡ, ಒಂಟಿತನ ಮತ್ತು ಸ್ಪರ್ಧಾತ್ಮಕ ಜೀವನಶೈಲಿ, ಮನುಷ್ಯನನ್ನು ಖಿನ್ನತೆಗೆ ದೂಡಿ, ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ದೆಹಲಿ, ಬೆಂಗಳೂರು, ಮುಂಬೈ.. ಮೊದಲಾದ ಮಹಾ ನಗರಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ವಿಶೇಷವಾಗಿ ಪುರುಷರಲ್ಲಿ ಆತ್ಮಹತ್ಯೆ ಪ್ರಮಾಣ ಮಹಿಳೆಯರಿಗಿಂತ ಮೂರರಷ್ಟು ಹೆಚ್ಚಿರುವುದು ಗಮನಾರ್ಹ. ಆರ್ಥಿಕ ಹೊರೆ, ಉದ್ಯೋಗದ ಅಸ್ಥಿರತೆ, ಸಾಮಾಜಿಕ ನಿರೀಕ್ಷೆಗಳು ಪುರುಷರ ಮೇಲೆ ಹೆಚ್ಚು ಒತ್ತಡ ಹೇರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ncrb1

ಆತ್ಮಹತ್ಯೆಗೆ ಪ್ರಮುಖ ಕಾರಣಗಳಲ್ಲಿ ಕೌಟುಂಬಿಕ ಸಮಸ್ಯೆ ಮೊದಲ ಸ್ಥಾನದಲ್ಲಿವೆ ಎನ್ನುತ್ತದೆ NCRB ವರದಿ. ಒಟ್ಟು ಆತ್ಮಹತ್ಯೆಗಳಲ್ಲಿಯೂ ಸುಮಾರು ಮೂರು ಭಾಗದಷ್ಟು ಪ್ರಕರಣಗಳು ಕೌಟುಂಬಿಕ ಕಲಹ, ದಾಂಪತ್ಯ ಸಮಸ್ಯೆ, ಸಂಬಂಧಗಳ ಗೊಂದಲದಿಂದ ಸಂಭವಿಸಿವೆಯಂತೆ. ಇದಾದ ಬಳಿಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣವಾಗಿವೆ. ದೈಹಿಕ ಕಾಯಿಲೆಯ ಜೊತೆಗೆ ಮಾನಸಿಕ ಕಾಯಿಲೆಗಳು ಸರಿಯಾದ ಚಿಕಿತ್ಸೆ ಇಲ್ಲದೆ, ವ್ಯಕ್ತಿ ನಿಧಾನವಾಗಿ ನಿರಾಶೆಯತ್ತ ಜಾರುತ್ತಾನೆ. ಮದ್ಯ ಮತ್ತು ಮಾದಕ ಪದಾರ್ಥಗಳ ದುರುಪಯೋಗವೂ ಅನೇಕರನ್ನು ಮೌನವಾಗಿ ಹಿಂಸಿಸಿ ನಾಶ ಮಾಡುತ್ತಿದೆ.

15ರಿಂದ 29 ವರ್ಷದ ವಯಸ್ಸಿನ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಹೆಚ್ಚಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ, ಫಲಿತಾಂಶದ ಭಯ, ಪೋಷಕರ ನಿರೀಕ್ಷೆ, ಉದ್ಯೋಗದ ಅನಿಶ್ಚಿತತೆ ಮತ್ತು ಸೋಲನ್ನು ಸ್ವೀಕರಿಸಲು ಕಲಿಸದ ಶಿಕ್ಷಣ ವ್ಯವಸ್ಥೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಅನೇಕ ವಿದ್ಯಾರ್ಥಿಗಳು ತಮ್ಮ ವಿಫಲತೆಯನ್ನು ಜೀವನದ ಅಂತ್ಯವೆಂದು ಭಾವಿಸುವ ಮಟ್ಟಕ್ಕೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕರ್ನಾಟಕದ ಸ್ಥಿತಿಯೂ ಇದಕ್ಕೆ ಹೊರತಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ರಾಜ್ಯದಲ್ಲಿ ಲಕ್ಷಾಂತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

2022ರಿಂದ 2025ರ ನವೆಂಬರ್‌ವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 9,450 ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಅಂದರೆ, ಪ್ರತಿದಿನ ಸರಾಸರಿ 7 ಮಂದಿ. ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚು ಬಳಸಲಾದ ವಿಧಾನಗಳಲ್ಲಿ ನೇಣು ಬಿಗಿದುಕೊಳ್ಳುವುದು ಮೊದಲ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 8,148 ಮಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ವಿಷ ಸೇವನೆ ಎರಡನೇ ವಿಧಾನವಾಗಿದ್ದು, 740 ಮಂದಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಇದಲ್ಲದೆ, ಕಟ್ಟಡಗಳು ಹಾಗೂ ಇತರ ಎತ್ತರದ ಸ್ಥಳಗಳಿಂದ ಜಿಗಿದು 204 ಮಂದಿ ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ. ಗೃಹ ಸಚಿವರಾದ ಜಿ. ಪರಮೇಶ್ವರ್ ಅವರೇ ಈ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. 2022ರಲ್ಲಿ ಬೆಂಗಳೂರಿನಲ್ಲಿ 2,313 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ಇದು 2023ರಲ್ಲಿ 2,370ಕ್ಕೆ ಏರಿಕೆಯಾಯಿತು. 2024ರಲ್ಲಿ ನಗರದಲ್ಲಿ ಸುಮಾರು 2,403 ಆತ್ಮಹತ್ಯೆ ಪ್ರಕರಣಗಳು ವರದಿಯಾದವು. 2025ರಲ್ಲಿ ಕೂಡ 2,364 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋವೈದ್ಯ ಡಾ. ರವೀಶ್ ಬಿ ಎನ್ ಅವರು, “ಆತ್ಮಹತ್ಯೆಯಿಂದ ಸಾವು ಎಂಬುದು ತೀವ್ರ ಭಾವನಾತ್ಮಕ ನೋವು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕೌಶಲ್ಯದ ಕೊರತೆಯಿಂದ ಉಂಟಾಗುವ, ಸ್ವಯಂ ಮಾಡಿಕೊಂಡ ಗಾಯವಾಗಿದೆ. ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಇದೊಂದು ಮನೋ–ಸಾಮಾಜಿಕ ಸಮಸ್ಯೆ. ಇದಲ್ಲದೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಬಳಸುವ ವಿಧಾನಗಳು ಸುಲಭವಾಗಿ ಲಭ್ಯವಾಗುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಹಿಂದೆ ಮನೆಗಳಲ್ಲಿ ಫ್ಯಾನ್‌ಗಳನ್ನು ಎತ್ತರದಲ್ಲಿ ಅಳವಡಿಸಲಾಗುತ್ತಿತ್ತು, ಅವುಗಳಿಗೆ ಸುಲಭವಾಗಿ ತಲುಪಲು ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ವಿನ್ಯಾಸಗಳು ಮತ್ತು ಸೌಲಭ್ಯಗಳ ಕಾರಣದಿಂದ, ಆತ್ಮಹತ್ಯೆಗೆ ಬಳಸಬಹುದಾದ ಸಾಧನಗಳಿಗೆ ಲಭ್ಯತೆ ಹೆಚ್ಚಿರುವುದು ಕೂಡ ಆತ್ಮಹತ್ಯೆ ಪ್ರಕರಣಗಳ ಏರಿಕೆಗೆ ಕಾರಣವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿರುವುದಾಗಿ TOI ವರದಿ ಮಾಡಿದೆ.

telemanas

ಹಿಂದೆ ಕೃಷಿ ರಾಸಾಯನಿಕಗಳು, ಕೀಟನಾಶಕಗಳು ಮತ್ತು ಇತರ ಅಪಾಯಕಾರಿ ವಸ್ತುಗಳು ಇಷ್ಟು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳಿಗೆ ಲಭ್ಯತೆ ಹೆಚ್ಚಾಗಿದೆ. ಒಂದು ಕಾಲದಲ್ಲಿ ಮನೆಮನೆಗಳಲ್ಲಿ ಕೆರೊಸಿನ್ ಸುಲಭವಾಗಿ ದೊರೆಯುತ್ತಿದ್ದಾಗ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಪ್ರಮುಖ ಸಾವಿನ ಕಾರಣಗಳಲ್ಲಿ ಒಂದಾಗಿತ್ತು ಎಂಬುದನ್ನೂ ಅವರು ವಿವರಿಸಿದ್ದಾರೆ. ಅಂದರೆ, ಯಾವ ವಸ್ತುಗಳು ಎಷ್ಟು ಸುಲಭವಾಗಿ ಲಭ್ಯವಾಗುತ್ತವೆಯೋ, ಅದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಅವರ ಅಭಿಪ್ರಾಯ.

ಕುಟುಂಬ ಮತ್ತು ಸಂಬಂಧಗಳ ಸಮಸ್ಯೆಗಳು, ವಿದ್ಯಾಭ್ಯಾಸದ ಒತ್ತಡ, ಆರ್ಥಿಕ ಸಂಕಷ್ಟಗಳು ಹಾಗೂ ಕಿಶೋರ ವಯಸ್ಸಿನ ಸಮಸ್ಯೆಗಳು ಜನರನ್ನು ಇಂತಹ ಹೆಜ್ಜೆ ಇಡುವತ್ತ ಪ್ರೇರೇಪಿಸುತ್ತವೆ. ಯಾರಿಗಾದರೂ ಆತ್ಮಹತ್ಯೆಯ ಯೋಚನೆಗಳು ಬರುತ್ತಿದ್ದರೆ, ಅವರು ತಕ್ಷಣವೇ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ವೃತ್ತಿಪರ ಸಹಾಯ ಪಡೆಯಬೇಕು ಎಂದು ನಿಮ್ಹಾನ್ಸ್‌ನ ಟೆಲಿ ಮಾನಸ್ (Tele MANAS) ಸೇವೆಯ ಹಿರಿಯ ರೆಸಿಡೆಂಟ್ ಡಾ. ಕಿರಣ್ ಆರ್ ಸಲಹೆ ನೀಡಿದ್ದಾರೆ. ತಮ್ಮ ಸಮಸ್ಯೆಯನ್ನು ಮನಸ್ಸಿನಲ್ಲಿ ಒಬ್ಬರೇ ಇಟ್ಟುಕೊಳ್ಳದೆ, ಹತ್ತಿರದವರೊಂದಿಗೆ ಮಾತನಾಡಬೇಕು. ಸಾಧ್ಯವಾದಷ್ಟು ಬೇಗ ಅಪಾಯಕಾರಿ ಪರಿಸ್ಥಿತಿಯಿಂದ ದೂರ ಹೋಗಿ, ಸುರಕ್ಷಿತ ಸ್ಥಳಕ್ಕೆ ತೆರಳುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಲೇಖಕ, ರಂಗಕರ್ಮಿ ಹಾಗೂ ಆಪ್ತಸಮಾಲೋಚಕ ಯೋಗೇಶ್‌ ಮಾಸ್ಟರ್‌ ಅವರು, “ಬಹುತೇಕ ಆತ್ಮಹತ್ಯೆ ಪ್ರಕರಣಗಳ ಹಿಂದೆ ತೀವ್ರ ಖಿನ್ನತೆ, ಆತಂಕ, ನಿರಾಶಾಭಾವ, ಒಂಟಿತನ ಹಾಗೂ ಮುಖ್ಯವಾಗಿ ಮಾಹಿತಿ ಕೊರತೆ ಇರುತ್ತದೆ ಅಥವಾ ವೈಜ್ಞಾನಿಕ, ವೈಚಾರಿಕವಲ್ಲದ ಹುಸಿ ಮಾಹಿತಿಯನ್ನು ನಿಜವೆಂದು ನಂಬಿ ಪ್ರಭಾವಕ್ಕೊಳಗಾಗುವ ಸಂಭವ ಹೆಚ್ಚಿರುತ್ತದೆ. ಒಬ್ಬರ ಜೊತೆ ಹೋಲಿಸಿ ನೋಡುವುದು, ಒಬ್ಬ ವ್ಯಕ್ತಿಯನ್ನು ಏನೂ ಗೊತ್ತಿಲ್ಲದೆಯೂ ಒಮ್ಮೆಲೇ ಜಡ್ಜ್‌ ಮಾಡುವುದು, ಆ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದು ಮಾನಸಿಕ ದುರ್ಬಲತೆಗೆ ಕಾರಣವಾಗುತ್ತದೆ. ಈ ರೀತಿ ದುರ್ಬಲ ಮನಸ್ಸಿನ ವ್ಯಕ್ತಿ ಯಾವುದೇ ಸಂದರ್ಭಕ್ಕೆ ಹಠಾತ್‌ ಪ್ರತಿಕ್ರಿಯೆ ಕೊಟ್ಟುಬಿಡುತ್ತಾನೆ. ಕಾರಣವಿಲ್ಲದೇ ಜೀವ ಕಳೆದುಕೊಂಡಿರುತ್ತಾನೆ. ದೂರದೃಷ್ಟಿ, ಸಂವೇದನಾಶೀಲತೆ, ನಿಖರತೆ ಇರುವವರು ಹಠಾತ್‌ ಪ್ರತಿಕ್ರಿಯೆಗೆ ಬದಲಾಗಿ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿ ನಿರಾಳರಾಗುತ್ತಾರೆ. ಇತ್ತೀಚೆಗೆ ಮನುಷ್ಯನನ್ನು ಖಿನ್ನತೆಗೆ ದೂಡುವಂತಹ ಸಾಮಾಜಿಕ ವಾತಾವರಣವೂ ಸೃಷ್ಟಿಯಾಗಿದೆ. ಮನುಷ್ಯನ ಸುತ್ತ ಮನೋಹಿತಾವರಣ (psycho atmosphere) ಇಲ್ಲದಿರುವುದೂ ಆತ್ಮಹತ್ಯೆಗೆ ಕಾರಣವಾಗಬಹುದು. ಸಮಾಜದ ಭಾಗವಾಗಿ ನಾವು, ಯಾರನ್ನೇ ಆಗಲೀ ಜಡ್ಜ್‌ ಮಾಡಿ ನೋಡುವುದನ್ನು ಬಿಡಬೇಕು. ಮಾನವ ಸಹಜ ತಪ್ಪುಗಳಾದಾಗ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗುತ್ತದೆ. ನಮ್ಮ ಮಾತು, ನಡವಳಿಕೆಗಳು ಇತರರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಗ್ರಹಿಸುವ ಸೂಕ್ಷ್ಮ ಮನಸ್ಥಿತಿ ಇರಬೇಕು. ಅದರ ಅರಿವು (ಸೈಕಲಾಜಿಕಲ್‌ ಅವೇರ್‌ನೆಸ್) ಎಲ್ಲರಿಗೂ ಇರಬೇಕು. ಸ್ಪರ್ಧಾತ್ಮಕವಾಗಿರಬೇಕು ಎನ್ನುವುದು ಸಮಾಜದಲ್ಲಿರುವ ಅತ್ಯಂತ ಅಮಾನವೀಯ ಧೋರಣೆ; ನಾವು ಸಹಕಾರಾತ್ಮಕವಾಗಿರಬೇಕು” ಎಂದರು.

suicide 12

ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೈಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹೌದು. ಅದರಲ್ಲಿ ಮಾಧ್ಯಮಗಳು ಮತ್ತು ಸಮಾಜದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಜನರು ಯೋಚಿಸುವುದು, ಭಾವಿಸುವುದು, ಪ್ರತಿಕ್ರಿಯಿಸುವುದೆಲ್ಲಕ್ಕೂ ಮಾಧ್ಯಮ ಮತ್ತು ಸಾಮಾಜಿಕ ವಾತಾವರಣ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತದೆ. ಮಾಧ್ಯಮಗಳು, ಆತ್ಮಹತ್ಯೆ ಸುದ್ದಿಯನ್ನು ಸಂವೇದನಾಶೀಲತೆಯಿಂದ ವರದಿ ಮಾಡುವ ಅಗತ್ಯ ಇದೆ. ಇಂತಹ ಸೂಕ್ಷ್ಮ ಪ್ರಕರಣಗಳನ್ನು ಸೆನ್ಸೇಷನಲ್ ಹೆಡ್‌ಲೈನ್‌ಗಳು, ನೈಜ ಚಿತ್ರಗಳೊಂದಿಗೆ ಅಥವಾ ವಿಧಾನವನ್ನು ವಿವರವಾಗಿ ಹೇಳುವ ಮೂಲಕ ವರದಿ ಮಾಡುವುದು ಇನ್ನಷ್ಟು ಅಪಾಯಕರ. ಇಂತಹ ವರದಿಗಳು ಅನುಕರಣೆಗೆ ದಾರಿ ಮಾಡಿಕೊಡುತ್ತವೆ. ಹಾಗಾಗಿ ಈ ಸುದ್ದಿಗಳಲ್ಲಿ ವಿಧಾನ, ಸ್ಥಳ, ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸದೇ, ಸಮಸ್ಯೆಯ ಹಿನ್ನಲೆ ಮತ್ತು ಪರಿಹಾರಗಳತ್ತ ಗಮನ ಹರಿಸುವ ಮೂಲಕ ಮಾಧ್ಯಮಗಳು ಜವಾಬ್ದಾರಿ ಹೊರಬೇಕಿದೆ.

ಮಾಧ್ಯಮಗಳು ಆತ್ಮಹತ್ಯೆಯನ್ನು ʼವೈಯಕ್ತಿಕ ದೌರ್ಬಲ್ಯʼ ಅಥವಾ ʼಕ್ಷಣಿಕ ನಿರ್ಧಾರʼ ಅಥವಾ ಸತ್ತವನದ್ದೇ ತಪ್ಪು, ಅಪರಾಧ ಎಂದು ಬಿಂಬಿಸುವ ಬದಲಾಗಿ, ಅದು ಹೇಗೆ ಒತ್ತಡ, ನಿರ್ಲಕ್ಷ್ಯ, ಸಹಾಯದ ಕೊರತೆ ಮತ್ತು ಸಾಮಾಜಿಕ ವ್ಯವಸ್ಥೆಗಳ ವೈಫಲ್ಯದಿಂದ ಉಂಟಾಗುತ್ತದೆ ಎಂಬುದನ್ನು ವಿವರಿಸಬೇಕು. ಆತ್ಮಹತ್ಯೆ ಬಗ್ಗೆ ವರದಿ ಮಾಡುವಾಗ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ, ಸಲಹಾ ಕೇಂದ್ರಗಳ ಮಾಹಿತಿ ನೀಡುವುದು ಮುಖ್ಯ. ಇದರಿಂದ ವರದಿ ಓದುವ ಯಾರಿಗಾದರೂ ತಕ್ಷಣ ನೆರವು ಪಡೆಯುವ ದಾರಿ ತೋರುತ್ತದೆ. ಆತ್ಮಹತ್ಯೆ ಮಾಡಿಕೊಂಡವರ ಕಥೆಗಳಿಗಿಂತ, ಆತ್ಮಹತ್ಯೆ ಯೋಚನೆಗಳಿಂದ ಬದುಕುಳಿದವರ ಕಥೆಗಳು, ಸಹಾಯ ಪಡೆದ ನಂತರ ಬದುಕು ಹಸನಾಗಿಸಿಕೊಂಡವರ ಉದಾಹರಣೆಗಳನ್ನು ಹೆಚ್ಚಾಗಿ ತೋರಿಸಬೇಕು. ಈ ಮೂಲಕ ʼಸಮಸ್ಯೆಗೆ ಪರಿಹಾರ ಇದ್ದೇ ಇದೆʼ ಎಂಬುದನ್ನು ಸಮಾಜಕ್ಕೆ ತಲುಪಿಸಬೇಕು.

ಇನ್ನು ಸಮಾಜದ ಮಟ್ಟದಲ್ಲಿ ಮೊದಲು ಮಾನಸಿಕ ಆರೋಗ್ಯದ ಬಗ್ಗೆ ಇರುವ ಮೌನ ಮತ್ತು ಲಜ್ಜೆಯನ್ನು ಪಕ್ಕಕ್ಕಿಡಬೇಕು. ಮಾನಸಿಕ ಸಮಸ್ಯೆ ಎಂದರೆ ಅದು ದೌರ್ಬಲ್ಯವಲ್ಲ ಎಂಬ ಅರಿವು ಬೆಳೆಯಬೇಕು. ಶಾರೀರಿಕ ಕಾಯಿಲೆಗೆ ಹೇಗೆ ಚಿಕಿತ್ಸೆ ಪಡೆಯುತ್ತೇವೋ, ಹಾಗೆಯೇ ಮಾನಸಿಕ ಸಮಸ್ಯೆಗೂ ಚಿಕಿತ್ಸೆ ಪಡೆಯುವುದು ಸಹಜ ಎಂಬ ಸಂದೇಶ ಸಮಾಜದಲ್ಲಿ ಗಟ್ಟಿಯಾಗಬೇಕು. ಕುಟುಂಬಗಳಲ್ಲಿ ಮಕ್ಕಳೊಂದಿಗೆ, ಯುವಕರೊಂದಿಗೆ, ಹಿರಿಯರೊಂದಿಗೆ ಪರಸ್ಪರ ಮಾತನಾಡಲು ಸಮಯ ಕೊಡಬೇಕು. ಹೇಗಿದ್ದೀಯ? ಎಂಬ ಸರಳ ಪ್ರಶ್ನೆಯೇ ಕೆಲವೊಮ್ಮೆ ಜೀವ ಉಳಿಸಬಹುದು. ಕುಟುಂಬಗಳಲ್ಲಿ ಅತಿಯಾದ ನಿರೀಕ್ಷೆಗಳು, ಹೋಲಿಕೆಗಳು, ಒತ್ತಡಗಳು ಕಡಿಮೆಯಾಗಬೇಕು. ಸೋಲು, ವಿಫಲತೆ, ದುಃಖ ಎಲ್ಲವೂ ಜೀವನದ ಭಾಗಗಳೇ ಎಂಬ ಅರಿವನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕು.

ಇದನ್ನೂ ಓದಿ: RBSK ವರದಿ | ಬಾಲ್ಯದಲ್ಲೇ ಹೆಚ್ಚಾದ ಹೈಪರ್‌ ಟೆನ್ಶನ್! ತಜ್ಞರು ಹೇಳುವುದೇನು?

ಶಾಲೆ ಮತ್ತು ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಶಿಕ್ಷಣವನ್ನು ಪಠ್ಯದ ಭಾಗವಾಗಿಸಬೇಕು. ಅಂಕಗಳಿಗಿಂತ ಬದುಕಿನ ಕೌಶಲ್ಯಗಳು ಮುಖ್ಯ ಎಂಬ ಸಂದೇಶ ಶಿಕ್ಷಣ ವ್ಯವಸ್ಥೆಯಿಂದಲೇ ಬರಬೇಕು. ಸಮಸ್ಯೆ ಎದುರಾದಾಗ ಸಹಾಯ ಕೇಳುವುದು ತಪ್ಪಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಕೆಲಸದ ಸ್ಥಳಗಳಲ್ಲಿ ಕೂಡ ಮಾನವೀಯತೆ ಅಗತ್ಯ. ಕೆಲಸದ ಒತ್ತಡ, ಉದ್ಯೋಗ ಭದ್ರತೆ ಕೊರತೆ, ಅವಮಾನಕಾರಿ ವರ್ತನೆ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಉದ್ಯೋಗ ಸ್ಥಳಗಳಲ್ಲಿ ಕೌನ್ಸೆಲಿಂಗ್ ಮತ್ತು ಬೆಂಬಲ ವ್ಯವಸ್ಥೆಗಳಿರಬೇಕು. ಸಾಮಾಜಿಕ ಮಾಧ್ಯಮಗಳಲ್ಲೂ ಜವಾಬ್ದಾರಿ ಅಗತ್ಯ. ಟ್ರೋಲಿಂಗ್, ಹೋಲಿಕೆ, ಅತಿರೇಕದ ಯಶಸ್ಸಿನ ಪ್ರದರ್ಶನ ಇವುಗಳು ಅನೇಕ ಜನರಲ್ಲಿ ಹೀನಮಾನದ ಭಾವನೆ ಹುಟ್ಟಿಸುತ್ತವೆ. ಇಂತವುಗಳನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಮಾನಸಿಕ ನೆಮ್ಮದಿ ನಿರ್ಧಾರವಾಗುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...