ಸಿವಿಕ್ ಬೆಂಗಳೂರು ಸಂಸ್ಥೆ ರಾಜ್ಯ ಸರ್ಕಾರದ ಎರಡು ವರ್ಷದ ಪ್ರಗತಿ ಗ್ರಾಫ್ ಅನ್ನು ಬಹಿರಂಗಗೊಳಿಸಿದೆ. ಇದರಲ್ಲಿ ಗ್ಯಾರಂಟಿ ಯೋಜನೆಗಳಿಂದ ಅನುದಾನ ಕೊರತೆ ಬಗ್ಗೆ ಹೇಳುವ ಸಿವಿಕ್ ಬೆಂಗಳೂರು, ಆ ಗ್ಯಾರಂಟಿಗಳಿಂದಾದ ಪ್ರಯೋಜನ ಏನು? ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಾದ ಆರ್ಥಿಕ ಚೇತರಿಕೆ ಹೇಗಿದೆ? ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಗ್ಯಾರಂಟಿ ಯೋಜನೆಗಳದ್ದೇ ಒಂದು ತೂಕವಾದರೆ, ಭರಸವೆಗಳದ್ದು ಮತ್ತೊಂದು ತೂಕ ಎಂಬ ಸೂಕ್ಷ್ಮತೆಗಳು ವರದಿಯಿಂದ ದೂರ ಇವೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 134 ಭರವಸೆಗಳಲ್ಲಿ ಐದು ಗ್ಯಾರಂಟಿ ಯೋಜನೆ ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ನೀಡಿದ ಭರವಸೆಗಳಲ್ಲಿ ಇದುವರೆವಿಗೂ ಶೇ.6.7ರಷ್ಟು ಮಾತ್ರ ಈಡೇರಿಸುವಲ್ಲಿ ಸಫಲವಾಗಿದೆ ಎಂದು ಸಿವಿಕ್ ಬೆಂಗಳೂರು (Citizens’ Voluntary Initiative for the City) ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಹಾಗೆಯೇ ಗ್ಯಾರಂಟಿ ಯೋಜನೆಗಳು ಜನರಿಗೆ ಗಮನಾರ್ಹ ಮತ್ತು ಅಗತ್ಯವಾದ ಪರಿಹಾರವನ್ನು ಒದಗಿಸುತ್ತಿವೆ. ಅನ್ನಭಾಗ್ಯ ಯೋಜನೆ ಶೇ.90 ಕುಟುಂಬಗಳಿಗೆ ಆಹಾರ ಒದಗಿಸುತ್ತಿದೆ. ಆದರೆ, ಗ್ಯಾರಂಟಿಗಳಿಗೆ ಖರ್ಚಾಗುವ ಸುಮಾರು ₹50,000 ಕೋಟಿ ಅನುದಾನ ರಾಜ್ಯವನ್ನು ಗಮನಾರ್ಹ ಆದಾಯ ಕೊರತೆಗೆ ತಳ್ಳುವ ಅಪಾಯಕಾರಿಯಾಗಿದೆ ಎಂದು ಸಿವಿಕ್ ಬೆಂಗಳೂರು ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸುತ್ತಿದೆ. ಈ ಹೊತ್ತಿನಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆ ರಾಜ್ಯ ಸರ್ಕಾರದ ಎರಡು ವರ್ಷದ ಅವಧಿಯ ಪ್ರಗತಿ ಗ್ರಾಫ್ ಅನ್ನು ಬಹಿರಂಗಗೊಳಿಸಿದೆ. ಸಿವಿಕ್ ಹೇಳುತ್ತಿರುವ ಸಂಗತಿಗಳು ಪ್ರತಿಪಕ್ಷಗಳಿಗೆ ಸಹಜವಾಗಿ ರಾಜಕೀಯವಾಗಿ ದಾಳಿ ಮಾಡಲು ಅಸ್ತ್ರವಾಗುವ ಸಾಧ್ಯತೆಯಿದೆ. ಕಾರಣ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರು ‘ನುಡಿದಂತೆ ನಡೆಯುವ ಸರ್ಕಾರ ನಮ್ಮದು’ ಮತ್ತು ‘2013-2018ರ ಅವಧಿಯಲ್ಲಿ ನೂರಕ್ಕೆ ನೂರಷ್ಟು ಭರವಸೆ ಈಡೇರಿಸಿದ ಸರ್ಕಾರ ನಮ್ಮದು’ ಎನ್ನುವ ಹಣೆಪಟ್ಟಿಯನ್ನು ರಾಜ್ಯದ ಮುಂದೆ ಮಂಡಿಸಿರುವುದೇ ಪ್ರತಿಪಕ್ಷಗಳ ಟೀಕೆಗಳಿಗೆ ತೆರೆದ ದಾರಿಯಾಗಿದೆ.
ಸಿವಿಕ್ ಬೆಂಗಳೂರು ಕಾಂಗ್ರೆಸ್‌ನ ಪ್ರಣಾಳಿಕೆ ಪ್ರಗತಿ ಕಾರ್ಡ್ ಅನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮತ್ತು ಆರ್‌ಟಿಐ ಮಾಹಿತಿ ಆಧರಿಸಿ ಪ್ರಮುಖ ಎಂಟು ಕ್ಷೇತ್ರಗಳಲ್ಲಿ ನೀಡಲಾದ 134 ಭರವಸೆಗಳ ಸ್ಥಿತಿಯನ್ನು ಪರಿಶೀಲಿಸಿದೆ. ಸಾರ್ವತ್ರಿಕ ಆರೋಗ್ಯ, ಶಾಲೆ, ಉನ್ನತ ಶಿಕ್ಷಣ, ಪರಿಸರ, ಬೆಂಗಳೂರು, ಕಾರ್ಮಿಕ, ಆಡಳಿತ ಹಾಗೂ 5 ಗ್ಯಾರಂಟಿ ಯೋಜನೆಗಳು ಸೇರಿದಂತೆ 10 ಪ್ರಮುಖ ಕ್ಷೇತ್ರಗಳಲ್ಲಿ ಹಾಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಸವಿಸ್ತಾರವಾದ ವಿಶ್ಲೇಷಣೆ ವರದಿಯನ್ನು ಬಿಡುಗಡೆ ಮಾಡಿದೆ.

ಗಣಿಗಾರಿಕೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ ವಿಭಾಗ
ಗಣಿಗಾರಿಕೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ ವಿಭಾಗದಲ್ಲಿ ಕಾಂಗ್ರೆಸ್ ಎಂಟು ಭರವಸೆಗಳನ್ನು ಕೊಟ್ಟಿದೆ. ನಾಲ್ಕು ಭರವಸೆಗಳು ಪ್ರಗತಿಯಲ್ಲಿದ್ದರೆ, ಉಳಿದ ನಾಲ್ಕು ಇನ್ನೂ ಪ್ರಾರಂಭವೇ ಆಗಿಲ್ಲ.
ಶಿಕ್ಷಣ ವಿಭಾಗ
ಶಿಕ್ಷಣ ವಿಭಾಗದಲ್ಲಿ ಕಾಂಗ್ರೆಸ್ ಒಟ್ಟು 22 ಭರವಸೆಗಳನ್ನು ನೀಡಿದೆ. ಎರಡು ವರ್ಷದಲ್ಲಿ ಈಡೇರಿಸಿದ್ದು ಕೇವಲ 1 ಮಾತ್ರ. ಎಂಟು ಭರವಸೆಗಳು ಪ್ರಗತಿಯಲ್ಲಿವೆ, 12 ಭರವಸೆಗಳು ಇನ್ನೂ ಆರಂಭವೇ ಆಗಿಲ್ಲ. ಒಂದು ಭರವಸೆ ವಿಫಲವಾಗಿದೆ.
ಆರೋಗ್ಯ ಕ್ಷೇತ್ರ
ಆರೋಗ್ಯ ಕ್ಷೇತ್ರದಲ್ಲಿ 14 ಭರವಸೆಗಳನ್ನು ಕಾಂಗ್ರೆಸ್ ಚುನಾವಣೆಗೂ ಮುನ್ನ ಕೊಟ್ಟಿದೆ. ಐದು ಪ್ರಗತಿಯಲ್ಲಿದ್ದರೆ, 9 ಆರಂಭವೇ ಆಗಿಲ್ಲ.
ನಮ್ಮ ಬೆಂಗಳೂರು ವಿಭಾಗ
ನಮ್ಮ ಬೆಂಗಳೂರು ವಿಭಾಗದಲ್ಲಿ 46 ಭರವಸೆಗಳಿವೆ. ಈಡೇರಿದ್ದು ಕೇವಲ 2, 19 ಪ್ರಗತಿಯಲ್ಲಿವೆ, 24 ಇನ್ನೂ ಪ್ರಾರಂಭವೇ ಆಗಿಲ್ಲ.
ನಗರಾಭಿವೃದ್ಧಿ ವಿಭಾಗ
ನಗರಾಭಿವೃದ್ಧಿ ವಿಭಾಗದಲ್ಲಿ 10 ಭರವಸೆಗಳನ್ನು ಕಾಂಗ್ರೆಸ್ ಕೊಟ್ಟಿದೆ. ಒಂದು ಭರವಸೆಯೂ ಪೂರ್ಣಗೊಂಡಿಲ್ಲ, 3 ಪ್ರಗತಿಯಲ್ಲಿವೆ. 7 ಪ್ರಾರಂಭವೇ ಆಗಿಲ್ಲ.
ಆಡಳಿತ ವಿಭಾಗ
ಆಡಳಿತ ವಿಭಾಗದಲ್ಲಿ 14 ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಯಾವುದೂ ಪೂರ್ಣಗೊಂಡಿಲ್ಲ. 5 ಪ್ರಗತಿಯಲ್ಲಿದ್ದೆ, 9 ಪ್ರಾರಂಭವೇ ಆಗಿಲ್ಲ.
ಅಸಂಘಟಿತ ಕಾರ್ಮಿಕರು ಮತ್ತು ಇತರ ವಿಭಾಗ
ಅಸಂಘಟಿತ ಕಾರ್ಮಿಕರು ಮತ್ತು ಇತರ ವಿಭಾಗದಲ್ಲಿ ಬೀದಿ ಮಾರಾಟಗಾರರು, ಚಾಲಕರು, ಗಿಗ್ ಮತ್ತು ಅಸಂಘಟಿತ ಕಾರ್ಮಿಕರು, ಪೌರಕಾರ್ಮಿಕರು, ಕಾರ್ಮಿಕರು ಹಾಗೂ ಗಾರ್ಮೆಂಟ್ ಕಾರ್ಮಿಕರನ್ನು ಸಿವಿಕ್ ಬೆಂಗಳೂರು ಉಲ್ಲೇಖಿಸಿದೆ. ಈ ವಿಭಾಗದಲ್ಲಿ ಕಾಂಗ್ರೆಸ್ 15 ಭರವಸೆಗಳನ್ನು ನೀಡಿದೆ. 1 ಈಡೇರಿದೆ, 6 ಪ್ರಗತಿಯಲ್ಲಿವೆ ಹಾಗೂ 8 ಪ್ರಾರಂಭವೇ ಆಗಿಲ್ಲ.
ಐದು ಗ್ಯಾರಂಟಿ ಯೋಜನೆ
ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸುವಲ್ಲಿ ಸಂಪೂರ್ಣವಾಗಿ ಸಫಲವಾಗಿದೆ. ಯಾವ ಗ್ಯಾರಂಟಿಯೂ ವಿಫಲವಾಗಿಲ್ಲ.
ಒಟ್ಟಾರೆ ಪರಿಶೀಲಿಸಲಾದ 134 ಭರವಸೆಗಳಲ್ಲಿ, ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆ ಸೇರಿದಂತೆ 8 ಕ್ಷೇತ್ರಗಳಲ್ಲಿ ನೀಡಿದ ಭರವಸೆಗಳಲ್ಲಿ ಇದುವರೆಗೂ ಶೇ.6.7 ಅನ್ನು ಈಡೇರಿಸುವಲ್ಲಿ ಗುರಿ ತಲುಪಿದೆ.

ಸಿವಿಕ್ ವರದಿಯಲ್ಲಿ ಗಮನಾರ್ಹ ಸಂಗತಿಗಳು
ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದು, ಎಲ್ಲ ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಬೆಂಗಳೂರಿನಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುವುದು, ಬೆಂಗಳೂರಿನ ಬಿಬಿಎಂಪಿ ಮತ್ತು ಎಲ್ಲ ಪ್ರಾಧಿಕಾರ/ ಮಂಡಳಿಗಳ ನಿರ್ವಹಣೆಗೆ ಹೊಸ ಕಾಯ್ದೆ ಜಾರಿಗೊಳಿಸುವುದು ತರುವುದು (GBA ಮೂಲಕ) ಮತ್ತು ಕರ್ನಾಟಕದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದು (ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ) – ಈ 4 ಭರವಸೆಗಳು ಈಡೇರಿವೆ.
ನಿಗದಿತ ಸಮಯದೊಳಗೆ ಈಡೇರದ ಭರವಸೆಗಳು ಈಡೇರದಿದ್ದಾಗ ಅವುಗಳನ್ನು ವಿಫಲ ಭರವಸೆ ಎಂದು ಸಿವಿಕ್ ಹೇಳಿದೆ. ಈ ಸರ್ಕಾರವು ಇಲ್ಲಿಯವರೆಗೆ 2 ಭರವಸೆಗಳು ವಿಫಲವಾಗಿವೆ. ಒಂದು ಹಂತ 2A, ಹಂತ 2B ಅಡಿಯಲ್ಲಿ ಪೂರ್ಣಗೊಳಿಸಬೇಕಿದ್ದ ಮೆಟ್ರೋ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಪೂರ್ಣಗೊಳಿಸುವುದು ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು/ ಕಾಲೇಜುಗಳಲ್ಲಿ ಖಾಲಿಯಿರುವ ಶಿಕ್ಷಕರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವ ಭರವಸೆ.
ಕೆಲವು ಪ್ರಮುಖ ಭರವಸೆಗಳು ಪ್ರಗತಿಯಲ್ಲಿವೆ. ರಾಜ್ಯ ಶಿಕ್ಷಣ ನೀತಿಯ ರಚನೆ, ಮಧ್ಯಾಹ್ನದ ಬಿಸಿಯೂಟವನ್ನು ಹೆಚ್ಚು ಪೌಷ್ಟಿಕವಾಗಿಸುವುದು, ಪ್ರತಿ ಕಂದಾಯ ವಿಭಾಗದಲ್ಲಿ ಕ್ಯಾನ್ಸರ್, ಹೃದ್ರೋಗ ಮತ್ತು ಮನೋವೈದ್ಯಕೀಯ ಆಸ್ಪತ್ರೆಗಳ ಸ್ಥಾಪನೆ, ಪೌರಕಾರ್ಮಿಕರನ್ನು ಖಾಯಂಗೊಳಿಸುವುದು, ಕನಿಷ್ಠ ವೇತನ ಪರಿಷ್ಕರಣೆ, ಪ್ರಗತಿಯಲ್ಲಿರುವ ಪ್ರಮುಖ ಭರವಸೆಗಳಾಗಿವೆ.
ಪ್ರಾರಂಭವಾಗದ ಭರವಸೆಗಳು
ಸಂಸ್ಥೆಗಳ ಚುನಾವಣೆಗಳಿಗೆ ಕಟ್ಟುನಿಟ್ಟಾದ ಸಮಯ ನಿಗದಿಪಡಿಸುವುದು, ಗಿಗ್ ಕಾರ್ಮಿಕರಿಗೆ ಕನಿಷ್ಠ ಗಂಟೆಗಳ ವೇತನವನ್ನು ಕಡ್ಡಾಯಗೊಳಿಸುವುದು, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ ಅನುಷ್ಠಾನಗೊಳಿಸುವುದು, ನಮ್ಮ ಮೆಟ್ರೋ, ಉಪನಗರ ರೈಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುಗಮ ಏಕೀಕರಣವನ್ನು ಖಚಿತಪಡಿಸುವುದು, ಮಳೆನೀರು ಕೊಯ್ಲಿಗೆ ಶೇ.50 ಸಬ್ಸಿಡಿ ಒದಗಿಸುವುದು, ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಪ್ರತಿ 100 ಕಿ.ಮೀ.ಗಳಲ್ಲಿ ಅಪಘಾತ ನರ್ವಹಣಾ ಕೇಂದ್ರಗಳನ್ನು ಸ್ಥಾಪಿಸುವುದು, ಇಂತಹ ಭರವಸೆಗಳು ಕಾಗದಲ್ಲೇ ಇವೆ.
ನಗರಾಭಿವೃದ್ಧಿ ಇಲಾಖೆಯಡಿ ಶೇ.70 ರಷ್ಟು ಮತ್ತು ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ ಶೇ.64.3 ಭರವಸೆಗಳು ಭರವಸೆಗಳು ಪ್ರಾರಂಭವೇ ಆಗಿಲ್ಲ. ಸರ್ಕಾರವು ಇವುಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕಾಗಿದೆ ಸಿವಿಕ್ ಬೆಂಗಳೂರು ವರದಿ ಸೂಚಿಸುತ್ತದೆ.

ಕೃಷಿ ಬಗ್ಗೆ ಏನಿದೆ?
ಕೇಂದ್ರ ಸರ್ಕಾರದ ನೆರವು ಬಿಡುಗಡೆಯಾಗುವ ಮೊದಲೇ ಲಕ್ಷಾಂತರ ರೈತರಿಗೆ 4,047 ಕೋಟಿ ರೂ. ಬರ ಪರಿಹಾರ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಸಿರಿಧಾನ್ಯ ಯೋಜನೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ-2.0, ಕಿಸಾನ್ ಮಾಲ್‌ಗಳು, ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಹೂ ಮಾರುಕಟ್ಟೆ ಮತ್ತು ಕೃಷಿ ಅಭಿವೃದ್ಧಿ ಪ್ರಾಧಿಕಾರದ ರಚನೆಯಂತಹ ಹಲವಾರು ಮುಂದಾಲೋಚನೆಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇವು ರೈತರ ಕಲ್ಯಾಣದ ಕುರಿತಾದ ರಚನಾತ್ಮಕ ಹೆಜ್ಜೆಗಳಾಗಿವೆ.
ಆದಾಗ್ಯೂ, ಈ ರೈತ ಪರ ಪ್ರಯತ್ನಗಳು ಸರ್ಕಾರದ ಭೂ-ಬಳಕೆ ನೀತಿಗಳಿಂದ ತೀವ್ರವಾಗಿ ದುರ್ಬಲಗೊಂಡಿವೆ. ಕೈಗಾರಿಕಾ ಯೋಜನೆಗಳಿಗಾಗಿ 1,700 ಎಕರೆಗಳಿಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು, 2013 ರ ಕಾಯ್ದೆಯ ಪ್ರಕಾರ ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರವನ್ನು ನೀಡಲು ಇಷ್ಟವಿಲ್ಲದಿರುವುದು ಹಾಗೂ ಕಾರ್ಪೊರೇಟ್ ಮಾಲೀಕತ್ವಕ್ಕೆ ಅನುಕೂಲಕರವಾದ ಹಿಂದಿನ ಭೂ ಸುಧಾರಣಾ ತಿದ್ದುಪಡಿಗಳನ್ನು ಹಿಂಪಡೆಯುವಲ್ಲಿ ವಿಫಲವಾಗಿದೆ ಎಂದು ಸಿವಿಕ್ ಬೆಂಗಳೂರು ಗುರುತಿಸಿದೆ.
ಸರ್ಕಾರದ ಕೆಲವು ಕಾರ್ಯ ಶ್ಲಾಘನೀಯ
ಸರ್ಕಾರದ ಕೆಲವು ಕಾರ್ಯಗಳು ಶ್ಲಾಘನೀಯವಾಗಿವೆ. ಉದಾಹರಣೆಗೆ, ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮ (ಮೊಟ್ಟೆ ಮತ್ತು ಬಾಳೆಹಣ್ಣು) ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಹಾಗೂ ನಿರ್ಧಿಷ್ಟ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ನಿರ್ಣಾಯಕ ಕ್ರಮಗಳು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಶಿಕ್ಷಣ ಸ್ವಾಯತ್ತತೆಗೆ ಇರುವ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ. ಆದಾಗ್ಯೂ, ಈ ಸಕಾರಾತ್ಮಕ ಪ್ರಯತ್ನಗಳು ಆಳವಾದ ಅನುಷ್ಠಾನವಾಗುವಲ್ಲಿ ವೈಫಲ್ಯ ಎದುರಿಸುತ್ತಿದೆ ಎಂದು ಸಿವಿಕ್ ಬೆಂಗಳೂರು ವಿಶ್ಲೇಷಿಸಿದೆ.
ಅಪಾಯದ ಸ್ಥಿತಿಯಲ್ಲಿ ಉನ್ನತ ಶಿಕ್ಷಣ
ಪ್ರಣಾಳಿಕೆಯ ಭರವಸೆಗಳ ಹೊರತಾಗಿಯೂ, 62,000ಕ್ಕೂ ಹೆಚ್ಚು ಶಿಕ್ಷಕರ ಖಾಲಿ ಹುದ್ದೆಗಳು ಹಾಗೇ ಉಳಿದಿವೆ ಮತ್ತು ಆರ್‌ಟಿಇ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ. ಆದರೆ ಶಿಕ್ಷಣದ ಮೇಲಿನ ವೆಚ್ಚವು ಒಟ್ಟು ಖರ್ಚಿನ ಶೇ.10.8 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ (ಶೇ.15) ತುಂಬಾ ಕಡಿಮೆಯಾಗಿದೆ.
ಉನ್ನತ ಶಿಕ್ಷಣ ವಲಯವು NEP ಮತ್ತು ಕಾರ್ಯಗತಗೊಳಿಸದ SEP ನಡುವೆ ಸಿಲುಕಿರುವ ನೀತಿ ನಿರ್ವಾತದಲ್ಲಿ ಉಳಿದಿದೆ. CSR ಫಂಡ್ ವಿಚಾರದಲ್ಲಿ ವಿಶ್ವಾಸಾರ್ಹತೆವಿಲ್ಲ. 41 ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಉನ್ನತ ಶಿಕ್ಷಣ ವ್ಯವಸ್ಥೆ ಆತಂಕಕಾರಿಯಾಗಿದ್ದು, 2025ರ ಹೊತ್ತಿಗೆ ಕರ್ನಾಟಕದ ಒಂದು ರಾಜ್ಯ ವಿಶ್ವವಿದ್ಯಾಲಯವೂ ಭಾರತದ ಮೊದಲ 10 ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲ ಭಾರತದ ಮೊದಲ 50 ವಿಶ್ವವಿದ್ಯಾಲಯಗಳ ಸಾಲಿನಲ್ಲೂ ಕರ್ನಾಟಕದ ಯಾವ ವಿಶ್ವವಿದ್ಯಾಲಯವೂ ಸ್ಥಾನ ಪಡೆದಿಲ್ಲ ಎಂಬುದನ್ನು ಸಿವಿಕ್ ಬೆಂಗಳೂರು ಒತ್ತಿ ಹೇಳಿದೆ.
ಭಯ ಹುಟ್ಟಿಸಿದ ಬಡವರ ಆರೋಗ್ಯ ಆರೈಕೆ
ಆರೋಗ್ಯ ಕ್ಷೇತ್ರದಲ್ಲಿನ ಖಾಸಗೀಕರಣ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ದೊಡ್ಡ ಅಡ್ಡಿಯಾಗಿದೆ. ಮನೆ ಮನೆಗೆ ಆರೋಗ್ಯ ತಪಾಸಣೆ ಸರ್ಕಾರದ ಶ್ಲಾಘನೀಯ ಕಾರ್ಯಕ್ರವಾದರೂ ತಾಲ್ಲೂಕು ಆಸ್ಪತ್ರೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಬಡವರಿಗೆ ಆರೋಗ್ಯ ಆರೈಕೆ ವಿಚಾರ ಭಯ ಹುಟ್ಟಿಸುತ್ತಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಎಂಬುದು ಕರ್ನಾಟಕದ ಜನರಿಗೆ ವಾಸ್ತವದಿಂದ ಬಹುದೂರವಿದೆ. ಇದು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಸಿವಿಕ್ ವರದಿ ಹೇಳಿದೆ.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಪರಿಸರ ನಾಶದ ಆತಂಕಕಾರಿ ಮಾದರಿಗಳಿವೆ. ಸರ್ಕಾರವು ಅಪಾರ ಪರಿಸರ ನಾಶಕ್ಕೆ ಹೆಜ್ಜೆ ಈಡುತ್ತಿದೆ. ಗಣಿಗಾರಿಕೆ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ. ಶರಾವತಿ ಮತ್ತು ಕಾಳಿ ಹುಲಿ ಮೀಸಲು ಪ್ರದೇಶಗಳಂತಹ ಸಂರಕ್ಷಿತ ಪ್ರದೇಶಗಳೊಳಗಿನ ಯೋಜನೆಗಳಿಗೆ ಪದೇ ಪದೇ ಅನುಮತಿ ನೀಡುವುದು, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯವನ್ನು ಡಿ-ನೋಟಿಫೈ ಮಾಡುವುದು ಮತ್ತು ವಿನಾಶಕಾರಿ ಬಂದರು ಹಾಗೂ ಗಣಿಗಾರಿಕೆ ಉದ್ಯಮಗಳ ಹಿತಾಸಕ್ತಿ ಕಾಪಾಡುವುದು ಸೇರಿವೆ.
ಹಾಗೆಯೇ ಬೆಂಗಳೂರು ಹವಾಮಾನ ವಲಯ ದುರ್ಬಲಗೊಳ್ಳುತ್ತಿದೆ. ಸುರಂಗ ರಸ್ತೆಗಳು ಮತ್ತು ಎತ್ತರದ ಕಾರಿಡಾರ್ ಯೋಜನೆಗಳು ಪ್ರಶ್ನಾರ್ಹವಾಗಿವೆ. ಇದರಿಂದ ಉದ್ಯಾನವನಗಳು ಹಾನಿಯಾಗುವ ಸಂಭವ ಅಧಿಕವಾಗಿದೆ. ಬೆಂಗಳೂರು ಅಭಿವೃದ್ಧಿ ಮಾದರಿಯೇ ವಿರೋಧಾಭಾಸಗಳನ್ನು ಒಳಗೊಂಡಿದೆ ಎಂದು ಸಿವಿಕ್ ಬೆಂಗಳೂರು ತಿಳಿಸಿದೆ.

ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ಚೌಕಟ್ಟು ಇಲ್ಲ
ಕಾರ್ಮಿಕರ ಹಕ್ಕುಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ ಕನಿಷ್ಠ ವೇತನವನ್ನು ನಿಗದಿಪಡಿಸುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವುದು. ಇದು ಸಮಗ್ರ ರಾಜ್ಯ ಕಾರ್ಮಿಕ ನೀತಿಯ ಅಭಿವೃದ್ಧಿಯೊಂದಿಗೆ, ಲಕ್ಷಾಂತರ ಅಸಂಘಟಿತ ಕಾರ್ಮಿಕರ ಖರೀದಿ ಶಕ್ತಿ ಮತ್ತು ಕೆಲಸದ ಪರಿಸ್ಥಿತಿಗಳನ್ನು ಗಮನಾರ್ಹವಾಗಿ ಸುಧಾರಿಸುವ ಭರವಸೆ ನೀಡುತ್ತದೆ. ಆದಾಗ್ಯೂ, ಸಾಮಾಜಿಕ ಭದ್ರತೆಗೆ ದೃಷ್ಟಿಕೋನ ದುರ್ಬಲಗೊಂಡಿದೆ. ಗಿಗ್, ಸಾರಿಗೆ ಮತ್ತು ಗೃಹ ಕಾರ್ಮಿಕರಿಗೆ ಪ್ರತ್ಯೇಕ, ವಲಯಾಧಾರಿತ ಕಾನೂನುಗಳ ರಚನೆ ತುಂಡು ತುಂಡಾದ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಈ ವಿಧಾನವು ಪ್ರಯೋಜನಗಳ ಹರಿಯುವಿಕೆಯನ್ನು ತಡೆಯುತ್ತದೆ. ಆಡಳಿತವನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಅಂತಿಮವಾಗಿ ರಾಜ್ಯದ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ಚೌಕಟ್ಟನ್ನು ಸ್ಥಾಪಿಸುವ ನಿರ್ಣಾಯಕ ಗುರಿಯನ್ನು ವಿಳಂಬಗೊಳಿಸುತ್ತದೆ ಎಂಬುದು ಸಿವಿಕ್ ಬೆಂಗಳೂರು ವರದಿಯಲ್ಲಿ ಉಲ್ಲೇಖಿತವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾಣೆ
2023-24ರ ವಿಕೇಂದ್ರೀಕರಣ ಸೂಚ್ಯಂಕ ಮತ್ತು ಕಲ್ಯಾಣ ಮತ್ತು ಪ್ರಗತಿ ಪಥದಂತಹ ಪ್ರಮುಖ ಗ್ರಾಮೀಣ ರಸ್ತೆ ಯೋಜನೆಗಳಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತಿದ್ದರೂ, ಸ್ಥಳೀಯ ಆಡಳಿತವನ್ನು ಸಬಲೀಕರಣಗೊಳಿಸುವಲ್ಲಿ ವಿಫಲವಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯದಿರುವುದು ಸುಮಾರು 19,000 ಕೋಟಿ ರೂ. ಅನುದಾನವನ್ನು ಸ್ಥಗಿತಗೊಳಿಸಿದೆ. ಇದು ಸ್ಥಳೀಯ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ.
ಗ್ರಾಮ ಪಂಚಾಯತ್‌ಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಅಧಿಕಾರಶಾಹಿ ಅನುಮತಿಯಿಲ್ಲದೆ ತಮ್ಮ ಸ್ವಂತ ಆದಾಯವನ್ನು ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು KIADB ನಂತಹ ಇತರ ರಾಜ್ಯ ಸಂಸ್ಥೆಗಳಿಂದ ಬಾಕಿ ಹಣವನ್ನು ನಿರಾಕರಿಸಲಾಗಿದೆ. ಕೇಂದ್ರದಿಂದ ನರೇಗಾ ಯೋಜನೆಗೆ ಅನುದಾನ ಬರದಿರುವುದು ಮತ್ತು ಹೈ-ಸ್ಪೀಡ್ ವೈಫೈನ ಈಡೇರದ ಭರವಸೆಗಳು ಸೇರಿದಂತೆ ನಿರ್ಣಾಯಕ ಕಾರ್ಯಾಚರಣೆಯ ಪಂಚಾಯಿತಿಗಳ ವೈಫಲ್ಯ ಸೂಚಿಸುತ್ತವೆ. ಸ್ಥಳೀಯ ಆಡಳಿತ ರಚನೆ ಸಂಪೂರ್ಣವಾಗಿ ದುರ್ಬಲಗೊಂಡಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾಣೆಯಾಗಿದೆ ಎಂದು ಸಿವಿಕ್ ಹೇಳುತ್ತದೆ.
ಗ್ಯಾರಂಟಿ ಯೋಜನೆಗಳು ಜನರಿಗೆ ಗಮನಾರ್ಹ ಮತ್ತು ಅಗತ್ಯವಾದ ಪರಿಹಾರವನ್ನು ಒದಗಿಸುತ್ತಿವೆ. ಅನ್ನಭಾಗ್ಯ ಯೋಜನೆ ಶೇ.90 ಕುಟುಂಬಗಳಿಗೆ ಆಹಾರ ಒದಗಿಸುತ್ತಿದೆ. ಆದರೆ, ಗ್ಯಾರಂಟಿಗಳಿಗೆ ಖರ್ಚಾಗುವ ಸುಮಾರು ₹50,000 ಕೋಟಿ ಅನುದಾನ ರಾಜ್ಯವನ್ನು ಗಮನಾರ್ಹ ಆದಾಯ ಕೊರತೆಗೆ ತಳ್ಳುವ ಅಪಾಯಕಾರಿಯಾಗಿದೆ. ಈ ಗ್ಯಾರಂಟಿಗಳು ಹೀಗೆ ಮುಂದುವರಿದರೆ ಬಡತನದ ಚಕ್ರಗಳನ್ನು ಮುರಿಯಬಹುದು. ಆದರೆ, ಹೊಸ ಉದ್ಯೋಗವಕಾಶಗಳಿಗೆ ಶಾಶ್ವತ ಅವಕಾಶವನ್ನು ಸೃಷ್ಟಿಸುವಲ್ಲಿ ಅಪಯಾವಿದೆ ಎಂದು ಸಿವಿಕ್ ಹೇಳುತ್ತದೆ.
ಕಾಂಗ್ರೆಸ್ ಸರ್ಕಾರವು ಜನಾದೇಶ ಪಡೆಯಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಇವುಗಳನ್ನು ಉಳಿಸಿಕೊಳ್ಳಲು ಅಷ್ಟೇ ಈಗ ಶ್ರಮಿಸುತ್ತಿದೆ. ಕಾಂಗ್ರೆಸ್‌ನ ಮೃದು ಹಿಂದುತ್ವ ನಿಲುವುಗಳು ಜಾತ್ಯತೀತತೆಯನ್ನು ಖಚಿತಪಡಿಸಿಕೊಳ್ಳುವ ಹಕ್ಕುಗಳನ್ನು ಸುಳ್ಳು ಮಾಡುತ್ತಿವೆ. ಪಕ್ಷದೊಳಗಿನ ನಿರಂತರ ಉದ್ವಿಗ್ನತೆಯ ಬೆಳವಣಿಗೆಗಳು ಸಾರ್ವಜನಿಕರಲ್ಲಿ ಭರವಸೆ ಕ್ಷೀಣಿಸುವಂತೆ ಮಾಡಿದೆ. ಇದರ ಒಟ್ಟಾರೆ ಪರಿಣಾಮ ಆಡಳಿತ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಸಿವಿಕ್ ವರದಿ ಒಟ್ಟು ಸಾರಾಂಶವಾಗಿದೆ.
ಸಿವಿಕ್ ಬೆಂಗಳೂರು ಒಂದು ನಾನ್-ಪ್ರಾಫಿಟ್ ಸಂಸ್ಥೆಯಾಗಿದ್ದು, ಬೆಂಗಳೂರಿನ ನಗರ ಆಡಳಿತವನ್ನು ಸುಧಾರಿಸಲು 1990ರಿಂದ ಕೆಲಸ ಮಾಡುತ್ತಿದೆ. ಹಲವು ಮಿತಿಗಳು ಸಿವಿಕ್ ಬೆಂಗಳೂರು ಒಳಗೊಂಡಿದೆ. ಇದು ಇಡೀ ರಾಜ್ಯವನ್ನು ಪ್ರತಿನಿಧಿಸುವ ಸಮೀಕ್ಷೆಯಾಗಿರುವುದಿಲ್ಲ. ಬೆಂಗಳೂರು ನಗರ ಕೇಂದ್ರಿತವಾಗಿ ನಡೆಯುವ ಸಮೀಕ್ಷೆಯಲ್ಲಿ ಹೆಚ್ಚಾಗಿ ಸುಶಿಕ್ಷಿತರು ಸಮೀಕ್ಷೆಯಲ್ಲಿ ಭಾಗಿಯಾಗುತ್ತಾರೆ.
ಗ್ಯಾರಂಟಿ ಯೋಜನೆಗಳಿಂದ ಅನುದಾನ ಕೊರತೆ ಬಗ್ಗೆ ಹೇಳುವ ಸಿವಿಕ್ ಬೆಂಗಳೂರು, ಆ ಗ್ಯಾರಂಟಿಗಳಿಂದಾದ ಪ್ರಯೋಜನ ಏನು? ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಾದ ಆರ್ಥಿಕ ಚೇತರಿಕೆ ಹೇಗಿದೆ? ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಗ್ಯಾರಂಟಿ ಯೋಜನೆಗಳದ್ದೇ ಒಂದು ತೂಕವಾದರೆ, ಭರಸವೆಗಳದ್ದು ಮತ್ತೊಂದು ತೂಕ. ಈ ಸೂಕ್ಷ್ಮತೆಗಳು ಸಿವಿಕ್ ಬೆಂಗಳೂರು ವರದಿಯಿಂದ ದೂರ ಇವೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




