ರೈತ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗದು. ಸ್ಥಿರ ಕೃಷಿ ನೀತಿ, ನ್ಯಾಯಯುತ ಬೆಂಬಲ ಬೆಲೆ ವ್ಯವಸ್ಥೆ, ಪರಿಣಾಮಕಾರಿ ಬೆಳೆ ವಿಮಾ ವ್ಯವಸ್ಥೆ, ಜಲ ಸಂರಕ್ಷಣೆ ಮತ್ತು ರೈತರ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವಂತಹ ಕ್ರಮಗಳು ಅಗತ್ಯವಾಗಿ ಬೇಕಾಗಿರುವುದು 2025ರ ಅನುಭವದ ಒಂದು ಸ್ಪಷ್ಟ ಸಂದೇಶವಾಗಿದೆ. ರೈತನ ಬದುಕು ಸುಸ್ಥಿರವಾದಾಗ ಮಾತ್ರ ರಾಜ್ಯದ ಮತ್ತು ದೇಶದ ಭವಿಷ್ಯ ಭದ್ರವಾಗಿರುತ್ತದೆ.
ರಾಜ್ಯದ ರೈತ ಸಮುದಾಯಕ್ಕೆ 2025ನೇ ವರ್ಷ ಸಂಕಷ್ಟ, ನಿರಾಶೆ ಮತ್ತು ಹೋರಾಟದ ವರ್ಷವಾಗಿ ಕಾಣುತ್ತದೆ. ʼಅನ್ನದಾತʼ ಎನ್ನುವ ಗೌರವದ ಮಾತುಗಳ ನಡುವೆ, ನೆಲಮಟ್ಟದಲ್ಲಿ ರೈತ ತನ್ನ ಬದುಕಿಗಾಗಿ ನಡೆಸಿದ ಹೋರಾಟಗಳು ಮಾತ್ರ ಗಮನ ಸೆಳೆಯಲಿಲ್ಲ. ಹವಾಮಾನ ವೈಪರೀತ್ಯದಿಂದ ಹಿಡಿದು ಮಾರುಕಟ್ಟೆ ವೈಫಲ್ಯವರೆಗೆ, ಸರ್ಕಾರದ ನೀತಿ ಅಸಮರ್ಪಕತೆಯಿಂದ ಹಿಡಿದು ಮಾನಸಿಕ ಒತ್ತಡದವರೆಗೆ ರೈತರ ಬದುಕು ಹಲವು ಬಗೆಯ ಸಂಕಷ್ಟಗಳಿಂದ ಕೂಡಿವೆ.
2025ರಲ್ಲಿ ರಾಜ್ಯದ ಕೃಷಿಗೆ ಮೊದಲ ಹೊಡೆತ ಬಿದ್ದದ್ದು ಹವಾಮಾನದಿಂದಲೇ. ಉತ್ತರ ಮತ್ತು ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ನೆಲಕಚ್ಚಿದರೆ, ದಕ್ಷಿಣ ಒಳನಾಡು ಹಾಗೂ ಕೆಲವು ಮಲೆನಾಡು ಭಾಗಗಳಲ್ಲಿ ಮಳೆಯ ಕೊರತೆ ರೈತರನ್ನು ಕಂಗೆಡಿಸಿತು. ಬಿತ್ತನೆ ಮಾಡಿದ ಬೆಳೆ ಮಳೆಯಲ್ಲಿ ಕೊಚ್ಚಿಹೋದರೆ, ಇನ್ನೂ ಕೆಲ ಕಡೆ ಬಿತ್ತನೆ ಮಾಡುವ ಅವಕಾಶವೇ ಸಿಗಲಿಲ್ಲ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 6,06,884 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ, 28,655 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ, 55,444 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, ಬೆಳೆಗಳ ಮೇಲೆ ನಂಬಿಕೆ ಇಟ್ಟುಕೊಂಡು ಕುಳಿತಿದ್ದ ರೈತರಿಗೆ, ಏಕಾಏಕಿ ಸುರಿದ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾಹಿತಿ ಹಂಚಿಕೊಂಡರು.

ಹೆಸರು ಬೆಳೆ ಇನ್ನೂ ಕನಿಷ್ಠ ಶೇ.30ರಷ್ಟು ಬೆಳೆ ಹೊಲದಲ್ಲಿಯೇ ಇದ್ದು, ಮಳೆ ನೀರಿನಲ್ಲಿ ನೆನೆದು ಗಿಡದಲ್ಲಿನ ಹೆಸರು ಕಾಳು ಮೊಳಕೆಯೊಡೆಯಿತು. ಉದ್ದು ಸಂಪೂರ್ಣ ರಾಶಿಯೇ ಆಗದೆ ಹೊಲದಲ್ಲಿಯೇ ಉಳಿಯಿತು. ತೊಗರಿ ಬೆಳೆಯಲ್ಲಿಯೂ ಕೂಡ ಉದ್ದುವನ್ನು ಮಿಶ್ರ ಬೆಳೆಯನ್ನಾಗಿ ಬಿತ್ತನೆ ಮಾಡಿದ್ದರು. ಶೇ.10ರಷ್ಟು ಮಾತ್ರ ಉದ್ದು ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಿದ್ದಾರೆ. ಇನ್ನೂ ಶೇ.90ರಷ್ಟು ಉದ್ದು ಗಿಡದಲ್ಲಿ ಮೊಳಕೆಯೊಡೆದು ಹಾಳಾಗಿ ಹೋಯಿತು. ಮೊಳಕೆಯೊಡೆದ ಹೆಸರು ಮತ್ತು ಉದ್ದುವನ್ನು ಹೊಲದಲ್ಲೇ ಬಿಡುವಂತಿಲ್ಲ. ಕೊಯ್ದು ರಾಶಿ ಮಾಡಿ ಮನೆಗೆ ತಂದ ಮೇಲೆ ಅದಕ್ಕೆ ಬೆಲೆ ಸಿಗುವುದಿಲ್ಲ. ಲಾಗೋಡಿ(ಬೆಳೆಯ ಮೇಲಿನ ಖರ್ಚು) ರೈತರಿಗೆ ಸಾಲ ಭಾರವಾಯಿತು. ಹೀಗಾಗಿ ಈ ವರ್ಷ ಸಂಪೂರ್ಣ ಬೆಳೆನಷ್ಟವಾಗಿದೆ. ರೈತರಿಗೆ ದಿಕ್ಕು ತೋಚದಂತಾಗಿದೆ. ಮುಖಕ್ಕೆ ಟವೆಲ್ ಹಾಕಿಕೊಂಡು ಗೋಳಾಡಿದ ರೈತರು ಹತಾಶರಾಗಿದ್ದಾರೆ.

ಈಗ ಗೋವಿನ ಜೋಳದ ಬೆಂಬಲ ಬೆಲೆ 2,400 ಇದೆ. ಆದರೆ ಮಾರುತ್ತಿರುವುದು 2,000 ರೂಪಾಯಿ ಒಳಗೇ. ಕಳೆದ ವರ್ಷ ₹2,300ರ ಆಸುಪಾಸಿನಲ್ಲಿ ಮಾರಾಟವಾಗಿದ್ದ ಗೋವಿನ ಜೋಳದ ಬೆಲೆ ಈಗ ಒಮ್ಮೆಲೆ ₹400 ಕಡಿಮೆಯಾಗಿರುವುದು ರೈತರನ್ನು ದಿಗ್ಭ್ರಮೆಗೊಳಪಡಿಸಿದೆ. ಹೀಗೆ ಒಮ್ಮೆಲೆ ಬೆಲೆ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಕೃಷಿ ತಜ್ಞರಿಂದ ಈವರೆಗೂ ಯಾವುದೇ ವಿಶ್ಲೇಷಣೆ ನಡೆದಂತಿಲ್ಲ. ಅಮೆರಿಕೆಯ ಸುಂಕ ಸಂಘರ್ಷ ಮತ್ತು ಕೇಂದ್ರ ಸರ್ಕಾರದ ರಫ್ತು ನೀತಿಯ ವೈಫಲ್ಯಗಳೂ ಇದಕ್ಕೆ ಕಾರಣವಾಗಿರಬಹುದು.
ಮೆಕ್ಕೆಜೋಳ ಬೆಳೆಯ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದರೆ ಈಗಿನ ಬೆಲೆ ಎಷ್ಟು ಲಾಭದಾಯಕವೆಂದು ರೈತರು ಮತ್ತೆ ಮತ್ತೆ ಯೋಚಿಸಬೇಕಾದ ಸ್ಥಿತಿ ಈ ವರ್ಷ ನಿರ್ಮಾಣವಾಗಿದೆ. ಏಕೆಂದರೆ, ಮೆಕ್ಕೆಜೋಳ ಹಾಕಿ ನೂರಕ್ಕೆ ನೂರರಷ್ಟು ಇಳುವರಿ ತೆಗೆಯುವುದು ಅಷ್ಟು ಸುಲಭದ ಮಾತಲ್ಲ.

ಹವಾಮಾನ ಬದಲಾವಣೆಯ ಪರಿಣಾಮವಾಗಿ ಕೃಷಿಯ ಸಾಂಪ್ರದಾಯಿಕ ಜ್ಞಾನವೇ ವಿಫಲವಾಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ʼಈ ತಿಂಗಳಲ್ಲಿ ಮಳೆ ಬರುತ್ತದೆʼ ಎಂಬ ನಂಬಿಕೆ ಕುಸಿದಿದ್ದು, ಕೃಷಿ ಒಂದು ಜೂಜಿನಂತಾಗಿದೆ ಎಂಬ ಭಾವನೆ ರೈತರಲ್ಲಿ ವ್ಯಾಪಕವಾಗಿದೆ.
ಬೆಳೆ ಹಾನಿ ಪರಿಹಾರ: ನಿರೀಕ್ಷೆಗೂ ದೂರ
ಮಳೆ ಮತ್ತು ಬರದಿಂದ ಹಾನಿಗೊಳಗಾದ ರೈತರು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ ಬೆಳೆ ನಷ್ಟದ ಸಮೀಕ್ಷೆಗಳ ವಿಳಂಬ, ನಷ್ಟದ ಪ್ರಮಾಣವನ್ನು ಕಡಿಮೆ ತೋರಿಸುವ ಅಧಿಕಾರಿಗಳ ಕ್ರಮಗಳು ಮತ್ತು ಅತಿ ಕಡಿಮೆ ಪರಿಹಾರ ಮೊತ್ತಗಳಿಂದ ರೈತರು ಕಂಗೆಟ್ಟು ನಿಂತರು.

ಅತಿವೃಷ್ಟಿ ಮತ್ತು ನೆರೆಯಿಂದ ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಘೋಷಣೆ ಮಾಡಿದಂತೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ಸಂಪೂರ್ಣ ಬೆಳೆಹಾನಿ ಸಂಭವಿಸಿದ್ದರೂ ಅಧಿಕಾರಿಗಳು ಕಡಿಮೆ ಪ‍್ರಮಾಣದಲ್ಲಿ ಹಾನಿ ತೋರಿಸಿದ ಪರಿಣಾಮ ಪರಿಹಾರ ಮೊತ್ತದಲ್ಲಿ ಕಡಿತವಾಗಿದೆ ಎಂದು ಹಲವು ರೈತರು ದೂರುತ್ತಿದ್ದಾರೆ.
ಒಂದು ಎಕರೆ ಬೆಳೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡುವ ರೈತನಿಗೆ ಸಿಗುವ ಪರಿಹಾರ, ಬಿತ್ತನೆಬೀಜ ಮತ್ತು ಗೊಬ್ಬರದ ವೆಚ್ಚವನ್ನೂ ಭರಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳೆ ಬೆಲೆ ಕುಸಿತ: ಉತ್ಪಾದನೆ ಇದ್ದರೂ ಆದಾಯ ಇಲ್ಲ
2025ರಲ್ಲಿ ಕೃಷಿ ಉತ್ಪಾದನೆ ಕೆಲವು ಬೆಳೆಗಳಲ್ಲಿ ಉತ್ತಮವಾಗಿದ್ದರೂ, ರೈತರಿಗೆ ಅದರ ಲಾಭ ಸಿಗಲಿಲ್ಲ. ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಮುಂತಾದ ತರಕಾರಿ ಬೆಳೆಗಳಿಗೆ ಅತಿ ಕಡಿಮೆ ಬೆಲೆ ಸಿಕ್ಕಿದ್ದು, ಹಲವೆಡೆ ರೈತರು ತಮ್ಮ ಬೆಳೆಯನ್ನು ರಸ್ತೆ ಬದಿಗೆ ಸುರಿಯುವ ಸ್ಥಿತಿ ನಿರ್ಮಾಣವಾಯಿತು.

ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಚಿಕ್ಕಬಳ್ಳಾಪುರ, ಕೋಲಾರ ಭಾಗದ ಮಾವು ಬೆಳೆಗಾರರು ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ಇತರ ತೋಟಗಾರಿಕೆ ಬೆಳೆಗಾರರು ಮಾರುಕಟ್ಟೆ ಹಾಗೂ ಸಂಗ್ರಹ ವ್ಯವಸ್ಥೆಯ ಕೊರತೆಯಿಂದ ಸಂಕಷ್ಟ ಅನುಭವಿಸಿದರು. ಹಲವು ಪ್ರತಿಭಟನೆ ನಡೆಸಿದ ಬಳಿಕ ಮಾವು ಬೆಳೆಗೆ ಎಂಎಸ್‌ಪಿ ಘೋಷಣೆಯಾಯಿತು. ಆದರೂ ಅದರ ಪ್ರಯೋಜನ ಬಹುತೇಕ ರೈತರಿಗೆ ತಲುಪಲಿಲ್ಲ.
ಸಾಲದ ಭಾರ: ರೈತನ ಕತ್ತಿಗೆ ಬಿಗಿಯಾದ ಕುಣಿಕೆ
ಬೆಳೆ ನಷ್ಟ ಮತ್ತು ಬೆಲೆ ಕುಸಿತದ ಪರಿಣಾಮವಾಗಿ ರೈತರ ಸಾಲದ ಭಾರ ಹೆಚ್ಚಾಯಿತು. ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಖಾಸಗಿ ಬಡ್ಡಿದಾರರಿಂದ ಪಡೆದ ಸಾಲಗಳು ರೈತನ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ. ಸಾಲ ಮರುಪಾವತಿಗೆ ಆದಾಯವಿಲ್ಲದ ಸ್ಥಿತಿಯಿಂದ, ರೈತರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ಇಂತಹ ಆರ್ಥಿಕ ಸಂಕಷ್ಟವೇ ಹಲವು ಕುಟುಂಬಗಳಲ್ಲಿ ಆತಂಕ, ನಿರಾಶೆ ಮತ್ತು ಕೆಲವೆಡೆ ಆತ್ಮಹತ್ಯೆಯಂತಹ ದುರ್ಘಟನೆಗಳಿಗೆ ಕಾರಣವಾಯಿತು.
ಬೆಳೆ ವಿಮೆ: ಕಾಗದದಲ್ಲಿ ಭರವಸೆ, ನೆಲಮಟ್ಟದಲ್ಲಿ ವಿಫಲತೆ; ಸಾಮಾಜಿಕ ಜಾಲತಾಣದಲ್ಲಿ ಅಳಲು
ಬೆಳೆ ವಿಮೆ ಯೋಜನೆಗಳು ರೈತನಿಗೆ ಭದ್ರತೆ ನೀಡಬೇಕಾಗಿದ್ದರೂ, 2025ರಲ್ಲಿ ಅವುಗಳ ಪರಿಣಾಮಕಾರಿತ್ವ ಪ್ರಶ್ನಾರ್ಥಕವಾಯಿತು. ಬೆಳೆ ವಿಮಾ ಪರಿಹಾರ ವಿಳಂಬ, ತಾಂತ್ರಿಕ ಕಾರಣಗಳ ನೆಪದಲ್ಲಿ ಅರ್ಜಿಗಳ ತಿರಸ್ಕಾರ ಮತ್ತು ನಷ್ಟಕ್ಕೆ ತಕ್ಕ ಪರಿಹಾರ ಸಿಗದಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಮುಖ್ಯಮಂತ್ರಿ ಮತ್ತು ಕೃಷಿ ಇಲಾಖೆಯ ‘ಜೆಡಿಎಕಲಬುರಗಿ’ ಫೇಸ್‌ಬುಕ್ ಪೇಜ್ ಮೂಲಕವು ಹಲವು ರೈತರು ಪರಿಹಾರ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂತೋಷ ಕನ್ನೊಳ್ಳಿ ಅವರು, “ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಒಂದು ಹೆಕ್ಟೇರ್ ನೀರಾವರಿ ಬೆಳೆಗೆ ಕೇವಲ ₹11,900 ಜಮಾ ಆಗಿದೆ” ಎಂದು ದೂರಿದ್ದಾರೆ. ಪವನ ನಿಂಬಾಳ ಅವರು, “ಹೇಳಿದ್ದು ₹8,500, ಬಂದಿದ್ದು ₹5,500, ₹6,800 ಏಕೆ” ಎಂದು ಪ್ರಶ್ನಿಸಿದ್ದಾರೆ. “ಯಾವ ಲೆಕ್ಕದಲ್ಲಿ ₹3,500 ಪರಿಹಾರ ಹಾಕಿದ್ದೀರಿ” ಎಂದು ಮಂಜು ರೊಟ್ಟಿ ಪ್ರಶ್ನಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನೀರಿನ ಕೊರತೆ ಮತ್ತು ಜಲ ನಿರ್ವಹಣೆಯ ವೈಫಲ್ಯ
ರಾಜ್ಯದ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿತ, ಜಲಾಶಯಗಳಲ್ಲಿ ನೀರಿನ ಕೊರತೆ ಮತ್ತು ಕಾಲುವೆ ನೀರು ಸರಿಯಾಗಿ ತಲುಪದ ಸಮಸ್ಯೆಗಳು ಕೃಷಿಗೆ ಅಡ್ಡಿಯಾದವು. ಮಳೆಯ ಮೇಲಿನ ಅತಿಯಾದ ಅವಲಂಬನೆ ಹಾಗೂ ಸಮಗ್ರ ಜಲ ನಿರ್ವಹಣೆಯ ಕೊರತೆ ಮತ್ತೆ ಮತ್ತೆ ರೈತರಿಗೆ ಹೊಡೆತ ನೀಡುತ್ತಿದೆ.

ಮಾನವ ಪ್ರಾಣಿ ಸಂಘರ್ಷದಿಂದ ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆ, ಕಾಡುಹಂದಿ ಮತ್ತು ಇತರ ವನ್ಯಜೀವಿಗಳ ದಾಳಿಯಿಂದ ರೈತರ ಬೆಳೆಗಳು ನಾಶವಾಗಿವೆ. ಪರಿಹಾರ ಪ್ರಕ್ರಿಯೆಯ ವಿಳಂಬ ಮತ್ತು ಭದ್ರತಾ ಕ್ರಮಗಳ ಕೊರತೆ ರೈತರಲ್ಲಿ ನಿರಂತರ ಭಯವನ್ನುಂಟುಮಾಡಿದೆ.
ಈ ಎಲ್ಲ ಸಮಸ್ಯೆಗಳ ಒಟ್ಟಾರೆ ಪರಿಣಾಮವಾಗಿ ರೈತ ಸಮುದಾಯದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದೆ. 2025ರಲ್ಲಿಯೂ ರಾಜ್ಯದಲ್ಲಿ ರೈತ ಆತ್ಮಹತ್ಯೆ ಸುದ್ದಿಗಳು ವರದಿಯಾಗಿವೆ. ಇದು ವೈಯಕ್ತಿಕ ದುರಂತವಲ್ಲ; ವ್ಯವಸ್ಥೆಯ ವೈಫಲ್ಯದ ಸಂಕೇತ ಎನ್ನಬಹುದು.
ಇದನ್ನೂ ಓದಿದ್ದೀರಾ? ಆನೇಕಲ್ | ಬಂಜರು ಭೂಮಿಯೆಂದು ಸರ್ಕಾರಕ್ಕೆ ವರದಿ: ರಾಗಿ ರಾಶಿ ಮೂಲಕ ಅಧಿಕಾರಿಗಳಿಗೆ ರೈತನ ಉತ್ತರ
ರೈತ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗದು. ಸ್ಥಿರ ಕೃಷಿ ನೀತಿ, ನ್ಯಾಯಯುತ ಬೆಂಬಲ ಬೆಲೆ ವ್ಯವಸ್ಥೆ, ಪರಿಣಾಮಕಾರಿ ಬೆಳೆ ವಿಮಾ ವ್ಯವಸ್ಥೆ, ಜಲ ಸಂರಕ್ಷಣೆ ಮತ್ತು ರೈತರ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವಂತಹ ಕ್ರಮಗಳು ಅಗತ್ಯವಾಗಿ ಬೇಕಾಗಿರುವುದು 2025ರ ಅನುಭವದ ಒಂದು ಸ್ಪಷ್ಟ ಸಂದೇಶವಾಗಿದೆ. ರೈತನ ಬದುಕು ಸುಸ್ಥಿರವಾದಾಗ ಮಾತ್ರ ರಾಜ್ಯದ ಮತ್ತು ದೇಶದ ಭವಿಷ್ಯ ಭದ್ರವಾಗಿರುತ್ತದೆ. 2025ರ ರೈತ ಸಂಕಷ್ಟವು ಸರ್ಕಾರ ಮತ್ತು ಸಮಾಜ ಎರಡನ್ನೂ ಆತ್ಮಪರಿಶೀಲನೆಗೆ ಒಡ್ಡುವ ಎಚ್ಚರಿಕೆಯ ಘಂಟೆಯಾಗಿದೆ.





