2030ರ ವೇಳೆಗೆ Automation ಮತ್ತು AI ಕಾರಣದಿಂದ ಜಗತ್ತಿನ 75 ಮಿಲಿಯನ್‌ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು ಅನಿವಾರ್ಯವಾಗಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು.
ಮುಂದಿನ ವರ್ಷಗಳಲ್ಲಿ AI ಹಲವು ಕ್ಷೇತ್ರಗಳ ಉದ್ಯೋಗಗಳನ್ನು ಪೂರ್ತಿಯಾಗಿ ಆವರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಅದು ಪ್ರಸ್ತುತ 2026ರಿಂದಲೇ ಮೊದಲುಗೊಂಡಿದೆ. “ಈ ವರ್ಷ ನಿರುದ್ಯೋಗ ವರ್ಷವಾಗಲಿದೆ, ಎಲ್ಲಾ ಕೆಲಸಗಳನ್ನು AI ನುಂಗಲಿದೆ, ಕಂಪನಿಗಳು ಬೆಳೆಯುತ್ತವೆ ಆದರೆ, ಜನರಿಗೆ ಕೆಲಸವಿರುವುದಿಲ್ಲ” ಎಂದು AI ಗಾಡ್‌ಫಾದರ್ ಜೆಫ್ರಿ ಹಿಂಟನ್ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.
ಕೆಲ ವರ್ಷಗಳ ಹಿಂದೆ ಯಂತ್ರಗಳು ಬಂದು ಮಾನವನ ಕೈಕಾಲುಗಳ ಕೆಲಸವನ್ನು ಕಿತ್ತುಕೊಂಡಿದ್ದವು, ಈಗ AI ಬೌದ್ಧಿಕ ಕೆಲಸಗಳ ಮೇಲೆ ಗುರಿ ಇಟ್ಟಿದೆ. 2020ರ ದಶಕದ ಅಂತ್ಯ ಮತ್ತು 2030ರ ಆರಂಭದ ವೇಳೆಗೆ ಕೃತಕ ಬುದ್ಧಿಮತ್ತೆ (AI)ಯು ವೈಟ್ ಕಾಲರ್ ಉದ್ಯೋಗಗಳಲ್ಲಿ ಭಾರೀ ಅಸ್ತವ್ಯಸ್ತ ಉಂಟು ಮಾಡಲಿದೆ. ಕಾಲ್ ಸೆಂಟರ್, ಬ್ಯಾಕ್ ಆಫೀಸ್ ಪ್ರಕ್ರಿಯೆ, ಕಾನೂನು ಸಹಾಯ, ಡೇಟಾ ವಿಶ್ಲೇಷಣೆ, ಬರವಣಿಗೆ, ಸರಳ ಕೋಡಿಂಗ್ ಸೇರಿದಂತೆ ಕಚೇರಿಗಳಲ್ಲಿ ನಡೆಯುವ ಹಲವು ದೈನಂದಿನ ಕೆಲಸಗಳನ್ನು AI ಸಮರ್ಥವಾಗಿ ಮಾಡುತ್ತಿದೆ. ಅದು ಈ ವರ್ಷ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳಬಹುದು. ಇದರಿಂದ ಕಂಪನಿಗಳ ಮೇಲಿನ ವೆಚ್ಚದ ಹೊರೆ ಕಡಿಮೆಯಾಗಲಿದೆ. ಅದೇ ವೇಳೆ ಅನೇಕರು ನಿರುದ್ಯೋಗಿಗಳಾಗಲಿದ್ದಾರೆ. ಪರಿಣಾಮ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವ ಹಾಗೂ ಸಾಮಾನ್ಯ ಕಾರ್ಮಿಕರಿಗೆ ಆದಾಯ & ಉದ್ಯೋಗದ ಭದ್ರತೆಯೂ ಇಲ್ಲದ ಅಪಾಯಕಾರಿ ಪರಿಸ್ಥಿತಿ ಎದುರಾಗಲಿದೆ. ಅಸಮಾನತೆ ಹೆಚ್ಚಲಿದೆ. ಕೆಲವೇ ಉದ್ಯೋಗಗಳು ಮಾತ್ರ ಹೆಚ್ಚು ಸುರಕ್ಷಿತವಾಗಿ ಅಥವಾ ಅರ್ಥಪೂರ್ಣವಾಗಿ ಉಳಿಯುವ ಸಾಧ್ಯತೆ ಇದೆ ಎನ್ನುವುದು ಹಿಂಟನ್ ಅವರ ಆತಂಕ.
ಆದರೆ, ಈ ದಶಕದೊಳಗೆ ನೂರಾರು ಮಿಲಿಯನ್‌ಗಳಷ್ಟು ಉದ್ಯೋಗಗಳು ಬದಲಾಗಬಹುದು ಅಥವಾ ಮಾಯವಾಗಬಹುದು. ಅದರ ಜೊತೆಗೆ AIಗೆ ಪೂರಕವಾದ ಹೊಸ ಉದ್ಯೋಗಗಳು ಹಾಗೂ ಹೊಸ ಕೌಶಲ್ಯ ಮಾರ್ಗಗಳೂ ವಿಸ್ತಾರಗೊಳ್ಳಲಿವೆ ಎನ್ನುತ್ತದೆ ಜಾಗತಿಕ ಕಾರ್ಮಿಕ ಮಾರುಕಟ್ಟೆಯ ಡೇಟಾ ವರದಿ.

ಉದ್ಯೋಗ ನಷ್ಟದ ಕುರಿತು ಹಿಂಟನ್ ಅವರ ಭವಿಷ್ಯವಾಣಿ ಹೀಗಿದೆ…
“AI ಪಿತಾಮಹ” ಎಂದೇ ಕರೆಯಲ್ಪಡುವ ಜೆಫ್ರಿ ಹಿಂಟನ್, ಹಿಂದೆ AI ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬ ಆಶಾವಾದ ಹೊಂದಿದ್ದವರು. ಆದರೆ ಈಗವರು AI ʼಭಾರೀ ನಿರುದ್ಯೋಗʼ ಉಂಟುಮಾಡಬಹುದು ಮತ್ತು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ, ಸಾಮಾನ್ಯ ಕಾರ್ಮಿಕರನ್ನು ಇನ್ನಷ್ಟು ಬಡವರನ್ನಾಗಿಸುತ್ತದೆ ಎಂದು ಎಚ್ಚರಿಸುತ್ತಿದ್ದಾರೆ.
ಅವರ ಪ್ರಕಾರ, ATMಗಳು ಬಂದಾಗ ಬ್ಯಾಂಕ್‌ಗಳಲ್ಲಿ ಟೆಲ್ಲರ್‌ಗಳ ಕೆಲಸ ಸಂಪೂರ್ಣವಾಗಿ ಬಂದ್ ಆಗಲಿಲ್ಲ, ಕೇವಲ ಸ್ವರೂಪ ಬದಲಾಯಿತಷ್ಟೇ. ಆದರೆ ಇಂದಿನ AI ಕೈಗಾರಿಕಾ ಕ್ರಾಂತಿಯಂತಿಯನ್ನೇ ಸೃಷ್ಟಿಸುತ್ತಿದೆ. ಆಗ ಯಂತ್ರಗಳು ಮಾನವನ ಸ್ನಾಯುಶಕ್ತಿಯನ್ನು ಮಾತ್ರ ಬದಲಾಯಿಸಿದ್ದವು; ಈಗ AI ಮಾನವನ ಮೆದುಳಿನ ಕೆಲಸವನ್ನೇ ಬದಲಾಯಿಸಲು ಆರಂಭಿಸಿದೆಯಂತೆ!
IMF, ILO, OECDಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಯನಗಳ ಪ್ರಕಾರ, ಬಹುತೇಕ ಕೆಲಸಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ, ಬದಲಾಗಿ ಭಾಗಶಃ ಬದಲಾಗುತ್ತವೆ. ಅಂದರೆ, ಒಂದು ಕೆಲಸದಲ್ಲಿ ಕಾರ್ಮಿಕರು ಮಾಡುತ್ತಿದ್ದ ಕೆಲವು ಕಾರ್ಯಗಳನ್ನು AI ಮಾಡುತ್ತದೆ. ಉಳಿದವಕ್ಕೆ ಮಾನವ ಶಕ್ತಿ ಅಗತ್ಯವಿರುತ್ತದೆ. ಸುಮಾರು ಶೇ.30ರಿಂದ 40 ರಷ್ಟು ಕೆಲಸಗಳಲ್ಲಿನ ಕಾರ್ಯಗಳು AI ಪ್ರಭಾವಕ್ಕೆ ಒಳಗಾಗುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು, ಏಕೆಂದರೆ ಅಲ್ಲಿ ಮಾಹಿತಿ ಆಧಾರಿತ ವೈಟ್ ಕಾಲರ್ ಉದ್ಯೋಗಗಳ ಪಾಲು ಹೆಚ್ಚಿದೆ. ILO ಡೇಟಾ ಪ್ರಕಾರ, ಕೇವಲ ಶೇ.2.3 ಉದ್ಯೋಗಗಳು ಸಂಪೂರ್ಣ ಸ್ವಯಂಚಾಲಿತಗೊಳ್ಳುವ ಅಪಾಯದಲ್ಲಿವೆ. ಆದರೆ ಸುಮಾರು ಶೇ.13 ರಷ್ಟು ಉದ್ಯೋಗಗಳು AI ಮೂಲಕ ಗಮನಾರ್ಹವಾಗಿ ವೃದ್ಧಿಗೊಳ್ಳಬಹುದು. ಅಂದರೆ ಸಂಪೂರ್ಣ ಉದ್ಯೋಗ ನಾಶಕ್ಕಿಂತ, ಕೆಲಸದ ಕಾರ್ಯಮಟ್ಟದ ಮರುರಚನೆಯಾಗಲಿದೆ. ಜತೆಗೆ ಕೆಲಸ ಮಾಡುವ ರೀತಿಯಲ್ಲಿ ದೊಡ್ಡ ಬದಲಾವಣೆಯಂತೂ ಆಗಲಿದೆ.
2026ರ ಅಂತ್ಯದ ವೇಳೆಗೆ ಕ್ಷೇತ್ರವಾರು ಪರಿಣಾಮ:
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 2030ರ ವೇಳೆಗೆ ಸುಮಾರು ಶೇ.60 ಉದ್ಯೋಗಗಳು AI ಅಥವಾ AI ಸಂಬಂಧಿತ ಸ್ವಯಂಚಾಲಿತ ತಂತ್ರಜ್ಞಾನಗಳಿಂದ ಪ್ರಭಾವಿತವಾಗಬಹುದು. 2026ರಲ್ಲೇ ಅನೇಕ ಉದ್ಯೋಗಿಗಳು ಈಗಾಗಲೇ ಬದಲಾವಣೆಯ ಹಂತದಲ್ಲಿದ್ದಾರೆ. ಸಾಫ್ಟ್‌ವೇರ್ ಅಭಿವೃದ್ಧಿ, ಹಣಕಾಸು ವಿಶ್ಲೇಷಣೆ, ಮಾರುಕಟ್ಟೆ, ಗ್ರಾಹಕ ಸೇವೆ, ಕಾನೂನು ಸಂಶೋಧನೆ, ಕೋಡ್ ರಚನೆ, ದಾಖಲೆ ಸಂಕ್ಷೇಪಣೆ ಸೇರಿದಂತೆ ಸೇವಾ ಮತ್ತು ಜ್ಞಾನ ಆಧಾರಿತ ಕ್ಷೇತ್ರಗಳಲ್ಲಿ AI ಏಜೆಂಟ್ ವ್ಯವಸ್ಥೆಗಳ ಮೂಲಕ ಈಗಾಗಲೇ ಸ್ವಯಂಚಾಲಿತತೆ ಶುರುವಾಗಿದೆ. ಇದರ ವಿರುದ್ಧವಾಗಿ, ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳಂತಹ ಸ್ಥಳೀಯ ದೈಹಿಕ ಸೇವಾ ಉದ್ಯೋಗಗಳು ಹೆಚ್ಚು ಸುರಕ್ಷಿತವಾಗಿವೆ. ದೈಹಿಕ ಹಾಜರಿ ಮತ್ತು ಸಂದರ್ಭಾನುಸಾರ ನಿರ್ಧಾರಗಳ ಅಗತ್ಯವಿರುದರಿಂದ ಅವು ಹೆಚ್ಚು ಸುರಕ್ಷಿತ ಎಂದು ಹಿಂಟನ್ ಹೇಳುತ್ತಾರೆ.
Mckinsey ವರದಿ ಪ್ರಕಾರ, 2030ರ ವೇಳೆಗೆ automation ಮತ್ತು AI ಕಾರಣದಿಂದ ಜಗತ್ತಿನ 75 ಮಿಲಿಯನ್‌ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನೇ ಬದಲಾಯಿಸಬೇಕಾಗಬಹುದು. ಇತರೆ ಅಧ್ಯಯನಗಳ ಪ್ರಕಾರ 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು ಅನಿವಾರ್ಯವಾಗಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು. ಅಂದರೆ ಒಟ್ಟು ಸಂಖ್ಯೆಯಲ್ಲಿ ಸ್ವಲ್ಪ ಲಾಭ ಇದ್ದರೂ, ಕೌಶಲ್ಯ ಅಸಮತೋಲನ ಮತ್ತು ಸ್ಥಳಾಂತರದ ಒತ್ತಡ ತೀವ್ರವಾಗಿರುತ್ತದೆ.
ಕಂಪನಿ ಮಟ್ಟದ ಸಮೀಕ್ಷೆಗಳು ಹೇಳುವಂತೆ, AI ಬಳಕೆ ಹೆಚ್ಚಿಸುತ್ತಿರುವ ಕಂಪನಿಗಳಲ್ಲಿ ಸುಮಾರು ಶೇ.44 ಸಂಸ್ಥೆಗಳು ಉದ್ಯೋಗ ಕಡಿತ ನಿರೀಕ್ಷಿಸುವುದರ ಜೊತೆಗೆ ಕೆಲವು ಕಾರ್ಮಿಕರಿಗೆ ಮರು ತರಬೇತಿ ನೀಡುವ ಯೋಜನೆಗಳನ್ನೂ ಹೊಂದಿದ್ದವು. OECD ಅಧ್ಯಯನಗಳ ಪ್ರಕಾರ, AIನ್ನು ಹೆಚ್ಚು ಅವಲಂಬಿಸಿರುವ ಉದ್ಯೋಗಗಳಲ್ಲಿ ಸರಿಯಾದ ತರಬೇತಿ ದೊರೆತರೆ ಉತ್ಪಾದಕತೆ ಮತ್ತು ಕೆಲಸದ ಗುಣಮಟ್ಟ ಸುಧಾರಿಸಬಹುದು. AI ಜಾಗತಿಕ ಆರ್ಥಿಕತೆಗೆ ವರ್ಷಕ್ಕೆ 2.6ರಿಂದ 4.4 ಟ್ರಿಲಿಯನ್ ಡಾಲರ್ ಮೌಲ್ಯದಷ್ಟು ವಹಿವಾಟು ಕೊಡಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ವಿಸ್ತೃತ automation ಸೇರಿಸಿದರೆ 2030ರ ವೇಳೆಗೆ AI ಒಟ್ಟು 19.9 ಟ್ರಿಲಿಯನ್ ಡಾಲರ್ ವರೆಗೆ ಕೊಡುಗೆ ನೀಡಬಹುದು ಎಂಬ ಅಂದಾಜೂ ಇದೆ. ಈ ಅಸಾಧಾರಣ ಮೌಲ್ಯ ಸೃಷ್ಟಿಯ ಎದುರು ಉದ್ಯೋಗ ನಷ್ಟದ ಪ್ರಮಾಣ ಕಡಿಮೆ ಕಂಡರೂ, ಲಾಭ ಯಾರಿಗೆ ಸಿಗುತ್ತದೆ ಎಂಬುದು ಪ್ರಮುಖ ಪ್ರಶ್ನೆ.

AI ಸಹಕಾರಿಯಾಗಬಹುದಾದ ಕೆಲಸಗಳು, ಮಾನವ ನಂಬಿಕೆ, ದೈಹಿಕ ಕೌಶಲ್ಯ ಮತ್ತು ಸಂಕೀರ್ಣ ನಿರ್ಧಾರಗಳನ್ನು ಬೇಡುವ ಉದ್ಯೋಗಗಳು ಹೆಚ್ಚು ಸುರಕ್ಷಿತ. AIಯನ್ನು ಬದಲಾವಣೆಯ ಸಾಧನದಂತಲ್ಲದೆ, ಸಹಾಯಕನಾಗಿ ಬಳಸಿದಾಗ ಕೆಲಸದ ಗುಣಮಟ್ಟ ಸುಧಾರಿಸುತ್ತದೆ. ಅಪಾರ ಉತ್ಪಾದಕತೆ ಮತ್ತು ದುರ್ಬಲ ಸಾಮಾಜಿಕ ಒಪ್ಪಂದಗಳ ನಡುವಿನ ಒತ್ತಡವನ್ನು ಹೇಗೆ ನಿರ್ವಹಿಸುವುದು? ಮರು ಕೌಶಲ್ಯ ತರಬೇತಿ, ಸಾಮಾಜಿಕ ಭದ್ರತೆ, ವೇತನ ಸಹಾಯ ಅಥವಾ ಮೂಲ ಆದಾಯದಂತಹ ವ್ಯವಸ್ಥೆಗಳಿಲ್ಲದೆ ಮುಂದಿನ ದಶಕ ಭಾರೀ ಸಾಮಾಜಿಕ ಒತ್ತಡವನ್ನು ಎದುರಿಸಬಹುದು. AI ಯಿಂದ ಸೃಷ್ಟಿಯಾಗುವ ಲಾಭಗಳು ಬಹುಪಾಲು ಬಂಡವಾಳಿಗರಿಗೆ ಮಾತ್ರ ಸೇರಿದರೆ, ಮುಂದಿನ ದಶಕದಲ್ಲಿ ಅಪಾರ ಉತ್ಪಾದಕತೆ ಜೊತೆಗೆ ಅಪಾರ ಸಾಮಾಜಿಕ ಒತ್ತಡವನ್ನೂ ನಾವೂ ಎದುರಿಸಬೇಕಾಗಬಹುದು ಎಂಬುದು ಹಿಂಟನ್ ಅವರ ವಿಶ್ಲೇಷಣೆ.
ಇದನ್ನೂ ಓದಿ: AI ಕ್ರಾಂತಿ: ಕೆಲಸ ಕಳೆದುಕೊಳ್ಳಲಿದ್ದೀವಾ ನಾವೂ-ನೀವೂ?
AI ಅಥವಾ ಯಾವುದೇ ತಂತ್ರಜ್ಞಾನದ ಪ್ರಚಂಡ ಬೆಳವಣಿಗೆ ಮಾನವ ಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬದುಕು, ಗೌರವ, ಭವಿಷ್ಯದ ಕುರಿತು ಆತಂಕ, ಉದ್ಯೋಗ ನಷ್ಟಗಳಲ್ಲದೆ ಮಾನವೀಯ ದೃಷ್ಟಿಯಿಂದಲೂ ಈ ಬಗೆಗಿನ ಚರ್ಚೆ ಅತ್ಯಂತ ತುರ್ತು. AIನಿಂದ ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆ ಹೆಚ್ಚು ನಿಖರವಾಗುತ್ತಿದೆ, ಶಿಕ್ಷಣದಲ್ಲಿ ಕಲಿಕೆ ವೈಯಕ್ತಿಕವಾಗುತ್ತಿದೆ, ಅಪಾಯಕಾರಿ ಕೆಲಸಗಳನ್ನು ಯಂತ್ರಗಳು ಮಾಡುತ್ತಿವೆ, ಸಮಯ ಮತ್ತು ಶಕ್ತಿ ಉಳಿಯುವುದರಿಂದ ಮಾನವ ಹೆಚ್ಚು ಸೃಜನಶೀಲ, ಸಂವೇದನಾಶೀಲ ಮತ್ತು ಅರ್ಥಪೂರ್ಣ ಕೆಲಸಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಅವಕಾಶ ಗಿಟ್ಟಿಸುತ್ತಾನೆ.. ಹೀಗೆ AI, ಮಾನವನ ದೈಹಿಕ ಶ್ರಮವನ್ನು ಹಗುರಗೊಳಿಸುವ ಶಕ್ತಿಯುಳ್ಳ ಸಾಧನ ಸರಿ. ಆದರೆ, ಅದನ್ನು ಸರಿಯಾಗಿ ಬಳಸದಿದ್ದರೆ, ಅದರ ಮೇಲೆ ಮಾನವ ನಿಯಂತ್ರಣ ಸಾಧಿಸದಿದ್ದರೆ, ಆ ಶಕ್ತಿ ಮಾನವನನ್ನೇ ರಿಪ್ಲೇಸ್ ಮಾಡಬಹುದು. ಮಗುವಿಗೆ ತಿನ್ನಿಸುವ ತುತ್ತಿನಿಂದ ಹಿಡಿದು, ಆಸ್ಪತ್ರೆಗೆ ಹೋಗುವ ರೋಗಿಯ ಯೋಗಕ್ಷೇಮ ವಿಚಾರಿಸುವ ಕೆಲಸವನ್ನೂ ರೋಬೋಟ್ ಯಂತ್ರಗಳೇ ಮಾಡಿದರೆ ಅಲ್ಲಿ ಮಾನವೀಯ ಮೌಲ್ಯಕ್ಕೆ ಜಾಗವೆಷ್ಟಿರಬಹುದು?
ಕೆಲಸ ಆದಾಯದ ಮೂಲ ಮಾತ್ರವಲ್ಲ, ಅದು ವ್ಯಕ್ತಿಯ ಗೌರವ, ಗುರುತು ಮತ್ತು ಸಮಾಜದಲ್ಲಿ ಅವನ ಸ್ಥಾನವನ್ನು ನಿರ್ಧರಿಸುವ ಶಕ್ತಿ. AI ಹೆಸರಿನಲ್ಲಿ ಉದ್ಯೋಗಗಳು ಒಮ್ಮೆಗೇ ಕಸಿಯಲ್ಪಟ್ಟಾಗ, ಅದರ ಹೊಡೆತ ಕೇವಲ ಹಣಕಾಸಿಗೆ ಸಂಬಂಧಿಸಿರುವುದಿಲ್ಲ. ಅಲ್ಲದೆ AI ಬೇಡುವ ಕೌಶಲ್ಯಗಳನ್ನು ಎಲ್ಲರೂ ಕಲಿಯಲು ಸಾಧ್ಯವಿಲ್ಲ, ಎಲ್ಲರೂ ತಂತ್ರಜ್ಞಾನ ಜಗತ್ತಿನಲ್ಲಿ ತಮ್ಮನ್ನು ತಾವು ಮರು ರೂಪಿಸಿಕೊಳ್ಳಲು ಸಾಧ್ಯವಿಲ್ಲ. AI ನ ಲಾಭಗಳು ಕೆಲವರಿಗೆ ಮಾತ್ರ ಸೀಮಿತವಾಗಿ, ಬಹುಜನರ ಮೇಲೆ ಭಾರವಾಗಿ ಬಿದ್ದರೆ ಅಸಮಾನತೆ, ಅಸಹನೆ ಮತ್ತು ಮಾನವ ಗೌರವದ ಹಾನಿ ಹೆಚ್ಚಾಗುತ್ತದೆ. ಹೀಗಾಗಿ AIನ ಬೆಳವಣಿಗೆ ಎನ್ನುವುದು ʼಏನೇನು ಮಾಡಬಹುದು ಎನ್ನುವುದಕ್ಕಿಂತ, ಅದು ಮಾನವನ ಹಿತಕ್ಕೆ ಹೇಗೆಲ್ಲಾ ಬಳಕೆಯಾಗಲಿದೆʼ ಎಂಬುದರ ಮೇಲೆ ನಿರ್ಧಾರವಾದರೆ ಹೆಚ್ಚು ಸ್ವಾಗತಾರ್ಹ.





