ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3 ಜಾಗಗಳು; ಸಾಧಕ-ಬಾಧಕಗಳೇನು?

Date:

ರಾಜ್ಯ ರಾಜಧಾನಿ ಬೆಂಗಳೂರಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕೆಂಬ ಚರ್ಚೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ತನ್ನ ಸಾಮರ್ಥ್ಯದ ಮಿತಿ ತಲುಪುತ್ತಿದ್ದು, ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ ಎಂಬ ಒತ್ತಾಯಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಈ ಹಿಂದೆ ವಿರೋಧ ವ್ಯಕ್ತವಾಗಿದ್ದ ಈ ಪ್ರಸ್ತಾಪವನ್ನು ಇದೀಗ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮುಂದಿನ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಆಖೈರು (ಫೈನಲ್), ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಮ್ಮತಿ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವುದು ಸೇರಿದಂತೆ ವಿಮಾನಯಾನ ವಲಯಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಬೆಂಗಳೂರಿಗೆ ಸಮೀಪ ಇರುವ, ರಾಜ್ಯ ಸರ್ಕಾರ ಗುರುತಿಸಿದ್ದ ಮೂರು ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಉನ್ನತ ಮಟ್ಟದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪೈಕಿ ಒಂದು ಸ್ಥಳವನ್ನು ಅಂತಿಮಗೊಳಿಸಿದರೆ ಮುಂದಿನ ಕಾರ್ಯ ಕೈಗೆತ್ತಿಕೊಳ್ಳಬಹುದು ಎಂದು ಸಚಿವ ಪಾಟೀಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆ ಮೂರು ಸ್ಥಳಗಳು…

ಹೊಸ ವಿಮಾನ ನಿಲ್ದಾಣಕ್ಕಾಗಿ ಮೊದಲು 7 ಸ್ಥಳಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಈ ಪೈಕಿ 3 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಆದರೆ ಈ ಮೂರು ಸ್ಥಳಗಳ ಕುರಿತು ಅಂತಿಮ ವರದಿ ಇನ್ನು ಸಲ್ಲಿಕೆಯಾಗಿಲ್ಲ. ಎರಡು ಕನಕಪುರ ರಸ್ತೆಯಲ್ಲೂ, ಒಂದು ನೆಲಮಂಗಲ–ಕುಣಿಗಲ್ ರಸ್ತೆಯಲ್ಲೂ ಇದೆ. ಈ ಮೂರೂ ಸ್ಥಳಗಳು ಬೆಂಗಳೂರು ನಗರದಿಂದ 25 ರಿಂದ 45 ಕಿ.ಮೀ. ದೂರದಲ್ಲಿದ್ದು, ಅಭಿವೃದ್ಧಿಯ ಅಳತೆಗೋಲಿನಲ್ಲಿ ಅನುಕೂಲಕರವೇ ಆಗಿವೆ.

  1. ಕಗ್ಗಲಿಪುರ (ಕನಕಪುರ ರಸ್ತೆ): ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಮುಖ ಗ್ರಾಮ. ಇದು ಕನಕಪುರ ರಸ್ತೆಯಲ್ಲಿದ್ದು, ನಗರ ವಿಸ್ತರಣೆಯ ಪರಿಧಿಗೆ ನೇರವಾಗಿ ಹೊಂದಿಕೊಳ್ಳುತ್ತದೆ. ಕಗ್ಗಲಿಪುರದ ಕೆಲ ಭಾಗಗಳಲ್ಲಿ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳಲು ಪ್ರಾಥಮಿಕ ಸಿದ್ಧತೆಗಳು ನಡೆಯುತ್ತಿವೆ. ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಈ ಪ್ರದೇಶವು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.
  2. ಹಾರೋಹಳ್ಳಿ (ಕನಕಪುರ ರಸ್ತೆ): ರಾಮನಗರ ಜಿಲ್ಲೆಯ ಈ ಗ್ರಾಮ ಬೆಂಗಳೂರಿಗೆ ಹತ್ತಿರವಾಗೇ ಇದೆ. ಯಾವುದೇ ಸ್ಥಳದಲ್ಲಾದರೂ 4,500 ಎಕರೆ ಜಾಗವನ್ನು ವಿಮಾನ ನಿಲ್ದಾಣಕ್ಕೆ ಮೀಸಲಿಡಬೇಕು. ಹಾಗೆ ನೋಡಿದರೆ ಹಾರೋಹಳ್ಳಿಯಲ್ಲಿ 5,000 ಎಕರೆವರೆಗೆ ಜಾಗ ಲಭ್ಯವಿದೆ ಎನ್ನಲಾಗಿದೆ. ಅಲ್ಲದೆ ಗ್ರೀನ್ ಲೈನ್ ಮೆಟ್ರೋ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ. ಎಲ್ಲಾ ರೀತಿಯಲ್ಲಿಯೂ ಹಾರೋಹಳ್ಳಿ ಅನುಕೂಲಕರವಾಗಿದೆ ಎನ್ನಲಾಗಿದ್ದರೂ ಈ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
  3. ಚಿಕ್ಕಸೋಲೂರು (ನೆಲಮಂಗಲ-ಕುಣಿಗಲ್ ರಸ್ತೆ): ಮಾಗಡಿ ಗ್ರಾಮಾಂತರದ ಈ ಗ್ರಾಮವನ್ನೂ ವಿಮಾನ ನಿಲ್ದಾಣಕ್ಕೆ ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ. ಬೆಂಗಳೂರಿಗೆ ಹೊಂದಿಕೊಂಡಂತಿರುವ ಸೋಲೂರು ಹೋಬಳಿಯಲ್ಲಿ ಕೇಂದ್ರದ ವರ್ತುಲ ರಸ್ತೆ, ವರ್ತುಲ ರೈಲ್ವೆ, ಉಪನಗರ ಯೋಜನೆಗಳಿದ್ದು, ಇವುಗಳ ಜತೆಗೆ ವಿಮಾನ ನಿಲ್ದಾಣಕ್ಕೂ ಗುರುತಿಸಿರುವುದು ಇಲ್ಲಿನ ರೈತರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿ ಹುಟ್ಟಿಸಿದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ; ಕುರುಡಾಯಿತೇ ಸಮಾಜ?

ಇತ್ತ ಕರ್ನಾಟಕವು ಬೆಂಗಳೂರು ಸುತ್ತಮುತ್ತ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗಂಭೀರ ಯತ್ನ ನಡೆಸುತ್ತಿದ್ದರೆ, ಅತ್ತ ತಮಿಳುನಾಡು ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜತೆಗೆ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ವೇಗ ನೀಡಿದೆ. ತಮಿಳು ನಾಡು ಗುರುತಿಸಿರುವ ಎರಡು ಸ್ಥಳಗಳು ಏರ್‌ಪೋರ್ಟ್‌ಗೆ ಸೂಕ್ತ ಎಂದು ವರದಿ ಬಂದಿದೆ. ಆದರೆ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಮೊದಲಿನಿಂದಲೂ ಕುಂಟುತ್ತಲೇ ಸಾಗಿದೆ. ಈ ವಿದ್ಯಮಾನಗಳು ವಿಮಾನಯಾನ ಕ್ಷೇತ್ರದಲ್ಲಿ ರಾಜ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಮೂರೂ ಸ್ಥಳಗಳು ಸೂಕ್ತವಲ್ಲವೆಂದ ತಜ್ಞರ ತಂಡ:

ಈ ಮಧ್ಯೆ ಕರ್ನಾಟಕ ಸರ್ಕಾರ ಸೂಚಿಸಿರುವ ಈ ಸಂಭಾವ್ಯ ಮೂರೂ ಸ್ಥಳಗಳು ತಾಂತ್ರಿಕವಾಗಿ ಅಥವಾ ಪರಿಸರದ ದೃಷ್ಟಿಯಿಂದ ಸೂಕ್ತವಲ್ಲವೆಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿ ಒಂದು ತಿಂಗಳ ಒಳಗೆ ವರದಿ ನೀಡುವುದಾಗಿ ತಿಳಿಸಿದ್ದರು. ಆದರೆ, ಮೂರು ತಿಂಗಳಿಗೆ ಬಂದರೂ ಸೂಕ್ತ ಸ್ಥಳ ಯಾವುದು ಎಂದು ಇನ್ನೂ ತೀರ್ಮಾನಿಸಿಲ್ಲ. ಒಂದೆಡೆ ಎಂಬಿ ಪಾಟೀಲ್‌ ಅವರು ರಾಮಮೋಹನ್‌ ನಾಯ್ಡು ಅವರನ್ನು ಭೇಟಿಯಾಗಿ ಬೃಹತ್‌ ವಿಮಾನ ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಇನ್ನೊಂದೆಡೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗ ಗುರುತಿಸಿರುವ ಮೂರೂ ಸ್ಥಳಗಳು ಸೂಕ್ತವಲ್ಲ ಎಂದು ವಿಮಾನಯಾನ ತಜ್ಞ ದೇವೇಶ್‌ ಅಗರ್ವಾಲ್‌ ಹೇಳಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸುವಿಕೆಯಲ್ಲಿ ಪ್ರಮುಖ ಅಡಚಣೆ ಭೂಸ್ವಾಧೀನ. ಈಗಾಗಲೇ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣದ ಸಂದರ್ಭದಲ್ಲಿಯೇ ರೈತರ ತೀವ್ರ ವಿರೋಧ ವ್ಯಕ್ತವಾಗಿತ್ತು. ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆ ನಡೆಸಿದ ಅನುಭವವನ್ನು ಸರ್ಕಾರ ಮರೆಯಲಾಗದು. ಇದೀಗ ವಿಮಾನ ನಿಲ್ದಾಣಕ್ಕೆ ಸೂಚಿಸಲಾಗಿರುವ ಕಗ್ಗಲಿಪುರ, ಹಾರೋಹಳ್ಳಿ ಮತ್ತು ಚಿಕ್ಕಸೋಲೂರು ಭಾಗಗಳೂ ಬಹುಪಾಲು ಕೃಷಿಪ್ರದೇಶಗಳಾಗಿದ್ದು, ಇಲ್ಲಿ ಕೂಡ ಭೂಸ್ವಾಧೀನದ ವಿರುದ್ಧ ಜೋರಾದ ಪ್ರತಿರೋಧ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಇದರ ಜೊತೆಗೆ ಇನ್ನೊಂದು ಪ್ರಮುಖ ಅಂಶವೆಂದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜತೆ ಮಾಡಿಕೊಂಡಿರುವ ಒಪ್ಪಂದ. ಈ ಒಪ್ಪಂದದನ್ವಯ, 2033 ರವರೆಗೆ (ಅಂದರೆ, ಕೆಂಪೇಗೌಡ ವಿಮಾನ ನಿಲ್ದಾಣ 25 ವರ್ಷ ಪೂರೈಸುವವರೆಗೆ) ಅದರ 150 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಅವಕಾಶವಿಲ್ಲ. ಆದರೆ, ರಾಜ್ಯ ಸರ್ಕಾರವು ಈಗ ಗುರುತಿಸಿರುವ ಮೂರು ಸ್ಥಳಗಳು ನಗರದಿಂದ 25 ರಿಂದ 45 ಕಿ.ಮೀ ದೂರದಲ್ಲಿವೆ. ಹೀಗಾಗಿ, ಇವುಗಳು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸುಮಾರು 80 ಕಿ.ಮೀ ಒಳಗೆ ಬರುತ್ತವೆ.

ಈ ಪರಿಸ್ಥಿತಿಯಲ್ಲಿ, ಭೂಸ್ವಾಧೀನಕ್ಕೆ ಜನಮಟ್ಟದ ವಿರೋಧ, ಹಾಗೂ ದಕ್ಷಿಣ ಬೆಂಗಳೂರು–ಗ್ರಾಮಾಂತರ ಪ್ರದೇಶದ ರೈತರ ಆತಂಕವೊಂದೆಡೆ ಇದ್ದರೆ, ಇನ್ನೊಂದೆಡೆ ವಿಮಾನಯಾನ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಮೂಲ ಒಪ್ಪಂದದ ಮಿತಿ ಈ ಮಹತ್ವದ ಯೋಜನೆಯು ಮುಂದುವರಿಯುವ ಮಾರ್ಗವನ್ನು ತೀವ್ರವಾಗಿ ಸಂಕೀರ್ಣಗೊಳಿಸಿದೆ. ಈ ಹಿಂದೆ ಅನೇಕ ಹಂತಗಳಲ್ಲಿ ವಿಳಂಬಗೊಂಡಿರುವ ಯೋಜನೆ ಈಗ ಮತ್ತೊಮ್ಮೆ ತಾಂತ್ರಿಕ, ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳ ಜಾಲದಲ್ಲಿ ಸಿಲುಕಿದಂತಾಗಿದೆ.

ಸ್ಥಳಗಳು ಸೂಕ್ತವಲ್ಲವೆಂದಿರುವ ಅಗರ್ವಾಲ್‌ ಕೆಲ ಸಲಹೆಗಳನ್ನೂ ನೀಡಿದ್ದಾರೆ…

ಇದನ್ನೂ ಓದಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)

ರಾಜ್ಯ ಸರ್ಕಾರ ಯೋಜಿಸಿರುವ 2ನೇ ವಿಮಾನ ನಿಲ್ದಾಣವನ್ನು ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಿಸಬೇಕು. ಬೆಂಗಳೂರಿನ ದಕ್ಷಿಣ ಮತ್ತು ನೈರುತ್ಯದಲ್ಲಿ ಹಲವು ಎರಡನೇ ಹಂತದ ನಗರಗಳಿವೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಅನುಕೂಲವಾಗಲಿದೆ. ಜತೆಗೆ ಈ ಪ್ರದೇಶದ ಕೈಗಾರಿಕೆಗಳಿಗೂ ಸಹಾಯವಾಗುತ್ತದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಇರುವುದರಿಂದ ಪ್ರಯಾಣ ಸುಲಭವಾಗುತ್ತದೆ. ಅಲ್ಲದೆ ಮುಖ್ಯವಾಗಿ, ಬೆಂಗಳೂರಿನ ಹಳೆಯ ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಪುನಃ ತೆರೆಯಲು ಅಗರ್ವಾಲ್ ಸಲಹೆ ನೀಡಿದ್ದಾರೆ. ಇಂದಿಗೂ ಬ್ರೆಜಿಲ್, ಮಲೇಷ್ಯಾ ಮತ್ತು ಯುಎಸ್ಎ ದೇಶಗಳಲ್ಲಿ ನಗರದ ಒಳಭಾಗದಲ್ಲಿ ಒಂದು ಮತ್ತು ಹೊರ ಭಾಗದಲ್ಲಿ ಒಂದು ವಿಮಾನ ನಿಲ್ದಾಣಗಳಿವೆ. ಅದೇ ರೀತಿ ಎಚ್‌ಎಎಲ್‌ ಅನ್ನು ಮರು ಅಭಿವೃದ್ಧಿಪಡಿಸಬಹುದು. ಇದು ಅಭಿವೃದ್ಧಿಯೊಂದಿಗೆ ನಾಗರಿಕ ಹಿತವನ್ನೂ ಕಾಪಾಡಿಕೊಳ್ಳಲು ಸೂಕ್ತವಾಗುತ್ತದೆ ಎಂದಿದ್ದಾರವರು.

ಇದನ್ನೂ ಓದಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)

ಬೆಂಗಳೂರು ನಗರವು ದೇಶದ ಪ್ರಮುಖ ತಾಂತ್ರಿಕ ಮತ್ತು ವ್ಯಾಪಾರೀ ಕೇಂದ್ರವಾಗಿರುವ ಕಾರಣದಿಂದಾಗಿ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವು ಅನಿವಾರ್ಯವಾಗುತ್ತಿದೆ. 2035ರ ವೇಳೆಗೆ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಂಖ್ಯೆ 110 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂಬ ಅಂದಾಜು, ಈ ಅಗತ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ಆದರೆ, ಈ ಅಗತ್ಯವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ತಾಂತ್ರಿಕ, ಕಾನೂನು ಹಾಗೂ ಸಾಮಾಜಿಕ ಅಡಚಣೆಗಳ ನಡುವೆ ಸಿಲುಕಿಕೊಂಡಿವೆ. ಈ ನಿಟ್ಟಿನಲ್ಲಿ ತಜ್ಞ ದೇವೇಶ್ ಅಗರ್ವಾಲ್ ನೀಡಿರುವ ಸಲಹೆಗಳೂ ಅತ್ಯಂತ ಮುಖ್ಯವಾಗಿವೆ. ಬೆಂಗಳೂರು–ಮೈಸೂರು ಮಧ್ಯೆ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸುವ ಬಗೆಗೆ ಹೊಸ ದೃಷ್ಟಿಕೋನ ಅವಶ್ಯಕವಾಗಿದೆ. ಅಲ್ಲದೇ ಹಳೆಯ ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮರುವಿಕಸನ ಮಾಡುವ ಆಯ್ಕೆಯೂ ಗಂಭೀರವಾಗಿ ಪರಿಗಣಿಸಬಹುದಾದ ಕ್ರಮ. ಇದರಿಂದ ಕೇಂದ್ರ ಭಾಗದಲ್ಲಿ ಕಡಿಮೆ ದೂರದ ಪ್ರಯಾಣಗಳಿಗೆ ಮತ್ತೊಂದು ಆಯ್ಕೆ ಲಭ್ಯವಾಗುತ್ತದೆ.

ಹೀಗಾಗಿ, ಎರಡನೇ ವಿಮಾನ ನಿಲ್ದಾಣದ ಅಗತ್ಯವಿದ್ದರೂ, ಸ್ಥಳ ಆಯ್ಕೆ, ತಾಂತ್ರಿಕ ಸಮೀಕ್ಷೆ, ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಕಾನೂನು… ಇವೆಲ್ಲವನ್ನೂ ಸಮನ್ವಯಗೊಳಿಸುವ ವಿಶಿಷ್ಟ ದೃಷ್ಟಿಕೋನವಿಲ್ಲದೆ ಈ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಡಿಮೆಯಾಗಬಹುದು. ಅಭಿವೃದ್ಧಿಯ ಜೊತೆಗೆ ನಾಗರಿಕ ಹಿತವನ್ನು ಕಾಪಾಡುವ ದೃಷ್ಟಿಯ ತೀರ್ಮಾನಗಳು ಇಲ್ಲದಿದ್ದರೆ, ಈ ಯೋಜನೆಯು ಮತ್ತೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...