ಒಂದೆಡೆ, ಶಾಖದ ಹೊರೆತದಿಂದ ಸಾವುಗಳು ಸಂಭವಿಸಿದರೆ, ಮತ್ತೊಂದೆಡೆ, ಶಾಖದ ಕಾರಣಕ್ಕಾಗಿಯೇ ಉಂಟಾಗುವ ಎಲ್-ನಿನೊ ಸೃಷ್ಟಿಸುವ ಅನಾಹುತಗಳಿಂದಲೂ ಜೀವ ಹಾನಿ ಎದುರಾಗಲಿದೆ. ಜಗತ್ತು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಎಂಬ ಹೆಸರಿನ ಹಿಂದೆ ಓಡುತ್ತಿದೆ. ಮನುಷ್ಯನ ಅಭಿವೃದ್ಧಿ ಓಟದಿಂದ ಭೂಮಿ ಸುಸ್ತಾಗಿದೆ. ಹವಾಮಾನ ಬಳಲಿ, ಸಿಟ್ಟಾಗಿದೆ. ಹವಾಮಾನ ವೈಪರೀತ್ಯಗಳು ಗಂಭೀರ ಸಮಸ್ಯೆಯನ್ನು ಹುಟ್ಟುಹಾಕುತ್ತಿವೆ. ತಾಪಮಾನ ಏರಿಕೆ, ಅಕಾಲಿಕ ಮಳೆ ಸೇರಿದಂತೆ ನಾನಾ ಬಿಕ್ಕಟ್ಟುಗಳು ಎದುರಾಗುತ್ತಿವೆ. ತಾಪಮಾನ ಏರಿಕೆಯು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. 2024ರಲ್ಲಿ ಯುರೋಪ್‌ನಲ್ಲಿಯೇ 60 ಸಾವಿರಕ್ಕೂ ಹೆಚ್ಚು ಜನರು ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ಸ್ಪೇನ್ ಮೂಲದ ‘ಬಾರ್ಸಿಲೋನಾ ಇನ್ಸ್‌ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್’ (ISGlobal) ಸಂಸ್ಥೆಯ ಸಂಶೋಧಕರ ತಂಡವು 53.9 ಕೋಟಿ ಜನಸಂಖ್ಯೆಯುಳ್ಳ 32 ಯುರೋಪಿಯನ್ ದೇಶಗಳಲ್ಲಿ ಅಧ್ಯಯನ ನಡೆಸಿದೆ. ವರದಿ ಬಿಡುಗಡೆ ಮಾಡಿದೆ. ಯುರೋಪ್ ಖಂಡವು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ವೇಗವಾಗಿ ಬಿಸಿಯಾಗುತ್ತಿದೆ. ಅಪಾಯಕಾರಿ ಶಾಖದ ಅಲೆಗಳಿಂದ ತಪ್ಪಿಸಿಕೊಳ್ಳಲು ದುರ್ಬಲ ಜನರು – ವೃದ್ಧರು – ಹೆಚ್ಚು ಕಾಳಜಿವಹಿಸಬೇಕೆಂದು ಎಚ್ಚರಿಕೆ ನೀಡಿದೆ.
“2024ರಲ್ಲಿ ಯುರೋಪ್ ಅಸಾಧಾರಣ ಮಾರಕ ಬೇಸಿಗೆಯನ್ನು ಅನುಭವಿಸಿದೆ. ಶಾಖದಿಂದ 60 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕಳೆದ ಮೂರು ಬೇಸಿಗೆಯಲ್ಲಿ ಒಟ್ಟು 1,81,000ಕ್ಕಿಂತ ಹೆಚ್ಚು ಸಾವುಗಳ ಘಟಿಸಿವೆ” ಎಂದು ನೇಚರ್ ಮೆಡಿಸಿನ್ ಜರ್ನಲ್ ಪ್ರಕಟಿಸಿರುವ ಅಧ್ಯಯನ ವರದಿ ತಿಳಿಸಿದೆ.
ಅಧ್ಯಯನದ ಪ್ರಕಾರ, ಕಳೆದ ಬೇಸಿಗೆಯಲ್ಲಿ ಇಟಲಿಯಲ್ಲಿ ಅತಿ ಹೆಚ್ಚು ಶಾಖ ಸಂಬಂಧಿತ ಸಾವುಗಳು ಸಂಭವಿಸಿವೆ. ಇದೊಂದೇ ದೇಶದಲ್ಲಿ ಅಂದಾಜು 19 ಸಾವಿರ ಮಂದಿ ಮೃತಪಟ್ಟಿದ್ದಾರೆ. ನಂತರ ಸ್ಥಾನದಲ್ಲಿ ಸ್ಪೇನ್ ಮತ್ತು ಜರ್ಮನಿ ಇದ್ದು, ಈ ಎರಡರಲ್ಲೂ ತಲಾ 6 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ದೇಶದ ಜನಸಂಖ್ಯೆಯ ಗಾತ್ರದ ಆಧಾರದಲ್ಲಿ ನೋಡಿದರೆ, ಗ್ರೀಸ್‌ನಲ್ಲಿ ಪ್ರತಿ 10 ಲಕ್ಷ ಜನರಿಗೆ 574 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ವರ್ಷದ ಬೇಸಿಗೆಯು ಯುರೋಪ್ ಮಾತ್ರವಲ್ಲದೆ, ಇಡೀ ಪ್ರಪಂಚದಲ್ಲಿಯೇ ಐತಿಹಾಸಿಕವಾಗಿ ಹೆಚ್ಚು ಬಿಸಿಯಾಗಿತ್ತು. ಜಗತ್ತಿನಾದ್ಯಂತ ಬಿಸಿಲ ಬೇಗೆಗೆ 85 ಸಾವಿರ ಸಾವುಗಳು ಸಂಭವಿಸಿವೆ ಎಂದು ಅಧ್ಯಯನ ಹೇಳುತ್ತದೆ. ಅಧ್ಯಯನ ವರದಿ ಪ್ರಕಾರ, 2023ರಲ್ಲಿ ಅಂದಾಜು 50,798 ಸಾವುಗಳು ಸಂಭವಿಸಿದ್ದರೆ, 2024ರಲ್ಲಿ ಸಾವುಗಳ ಸಂಖ್ಯೆ 25% ಹೆಚ್ಚಾಗಿದೆ.
ಇದು ಒಂದು ವರ್ಷದ ಬೇಸಿಗೆ ಅಥವಾ ಒಂದು ಖಂಡಕ್ಕೆ ಸಂಬಂಧಿಸಿತ ಸಮಸ್ಯೆಯಲ್ಲ. ಇಡೀ ಜಗತ್ತನ್ನು ಶಾಖದ ಅಲೆಗಳು ಆವರಿಸಿಕೊಂಡಿವೆ. ಭಾರತದಲ್ಲಿಯೂ ತಾಪಮಾನದ ಪರಿಣಾಮ 2024ರಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಸರ್ಕಾರ ಮಾತ್ರ 360 ಮಂದಿ ಮೃತಪಟ್ಟಿದ್ದಾರೆಂದು ಹೇಳಿಕೊಂಡಿದೆ.
ಹೆಚ್ಚುತ್ತಿರುವ ತಾಪಮಾನದಿಂದ ಎಷ್ಟು ಜನರು ಸಾಯುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಯಾಕೆಂದರೆ, ಶಾಖವು ಸಾವಿಗೆ ಬಹಳ ವಿರಳವಾದ ಕಾರಣವೆಂದು ನಂಬಲಾಗಿದೆ. ಬಿಸಿಲಿನ ಹೊಡೆತವು ನಿರ್ಜಲೀಕರಣದಂತಹ ತಕ್ಷಣದ ಪರಿಣಾಮಗಳನ್ನು ಮೀರಿ, ಹೃದಯಾಘಾತ, ಪಾರ್ಶ್ವವಾಯು ಹಾಗೂ ಉಸಿರಾಟ ಸಂಬಂಧಿತ ಕಾಯಿಲೆಗಳು ಸೇರಿದಂತೆ ಮಾರಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹವಾಮಾನ ಬದಲಾವಣೆಯು ಮಾನವನನ್ನೇ ಅಳಿವಿನ ಅಂಚಿಗೆ ದೂಡುತ್ತಿದೆ. ಇದು ಬಿಕ್ಕಟ್ಟು ಪ್ರಕೃತಿಯಿಂದಾಗಿದ್ದಲ್ಲ, ಮನುಷ್ಯನೇ ಸೃಷ್ಟಿಸಿಕೊಂಡದ್ದು. ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ಮಾರಣಹೋಮ ನಡೆಯುತ್ತಿದೆ. 1913ಕ್ಕೆ ಹೋಲಿಸಿದರೆ ಪ್ರಸ್ತುತ ಜೀವವೈವಿಧ್ಯತೆಯು 68% ನಾಶವಾಗಿದೆ. ಇದು, ಹವಾಮಾನ ಬದಲಾವಣೆಯನ್ನು ವೇಗಗೊಳಿಸಿದೆ. ಪರಿಣಾಮ, ವಾತಾವರಣದಲ್ಲಿ ಇಂಗಾಲ, ಮಿಥೇನ್ ಹಾಗೂ ನೈಟ್ರಸ್ ಆಕ್ಸೈಡ್‌ಗಳ ಪ್ರಮಾಣ ಹೆಚ್ಚುತ್ತಿದೆ. ಇದು, ಶಾಖವನ್ನು ಹೆಚ್ಚಿಸುತ್ತಿದೆ.
ಭವಿಷ್ಯದಲ್ಲಿ ಶಾಖದ ಹೊಡೆತಕ್ಕೆ ಸಾವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಅಪಾಯವಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2030-2050ರ ನಡುವೆ ವಾರ್ಷಿಕ 2,50,000 ಹೆಚ್ಚುವರಿ ಸಾವುಗಳು ಹವಾಮಾನ ಬದಲಾವಣೆಯಿಂದ (ಶಾಖ) ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಇದು, ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಅಂದಾಜು. ಒಂದು ವೇಳೆ, ತಜ್ಞರ ಗ್ರಹಿಕೆಯನ್ನೂ ಮೀರಿ, ಹವಾಮಾನ ಬದಲಾವಣೆಗಳು ಸಂಭವಿಸಿದ, ಈ ಸಾವುಗಳು ವಾರ್ಷಿಕ 50 ಲಕ್ಷಕ್ಕೂ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ರಾಜ್ಯದ ಬರ ಪರಿಸ್ಥಿತಿಗೆ ಎಲ್ ನಿನೊ ಕಾರಣ? ಏನಿದು ‘ಎಲ್ ನಿನೊ’!
ಶಾಖದ ಹೆಚ್ಚಳದಿಂದ ಸಾಗರಗಳಲ್ಲಿಯೂ ನಿರಂತರ ವಾಯುಭಾರ ಕುಸಿಯುತ್ತಿದೆ. ಎಲ್-ನಿನೊಗಳೂ ಸಂಭವಿಸುತ್ತಿವೆ. ಎಲ್-ನಿನೊದಿಂದಾಗಿ ಭೀಕರ ಚಂಡಮಾರುತಗಳು ಭೂಮಿಗೆ ಅಪ್ಪಳಿಸುತ್ತವೆ. ಕರಾವಳಿ ಪ್ರದೇಶಗಳಲ್ಲಿ ಮತ್ತಷ್ಟು ಮಾರಣಹೋಮಕ್ಕೆ ಕಾರಣವಾಗುತ್ತವೆ. ಈಗ, ಈ ಕ್ಷಣದಲ್ಲಿ, ಕೋಲ್ಕತ್ತಾದಲ್ಲಿ ಚಂಡಮಾರುತ ಪರಿಚಲನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಇದೂ ಕೂಡ ಸಾವುಗಳಿಗೆ ಕಾರಣವಾಗಿದೆ. ಈಗಾಗಲೇ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮೇಘಾಲಯ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಗೆ ನೂರಾರು ಜನರು ಪ್ರಾಣ ತೆತ್ತಿದ್ದಾರೆ. ಎಲ್-ನಿನೊ ಉಂಟಾಗುವಿಕೆ ಹೆಚ್ಚಾದಲ್ಲಿ, ಚಂಡಮಾರುತ, ಮಳೆ, ಪ್ರವಾಹಗಳೂ ಜನರ ಮಾರಣಹೋಮಕ್ಕೆ ಕಾರಣವಾಗುತ್ತವೆ.
ಒಂದೆಡೆ, ಶಾಖದ ಹೊರೆತದಿಂದ ಸಾವುಗಳು ಸಂಭವಿಸಿದರೆ, ಮತ್ತೊಂದೆಡೆ, ಶಾಖದ ಕಾರಣಕ್ಕಾಗಿಯೇ ಉಂಟಾಗುವ ಎಲ್-ನಿನೊ ಸೃಷ್ಟಿಸುವ ಅನಾಹುತಗಳಿಂದಲೂ ಜೀವ ಹಾನಿ ಎದುರಾಗಲಿದೆ. ಜಗತ್ತು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು. ಅದಕ್ಕಾಗಿ, ವಾತಾವರಣದಲ್ಲಿ ಇಂಗಾಲದ ಡೈ-ಆಕ್ಸೈಡ್‌ಅನ್ನು ಕಡಿಮೆಗೊಳಿಸುವ, ತಾಪಮಾನ ಏರಿಕೆಯನ್ನು 2023ರ ವೇಳೆಗೆ 2° ಸೆಲ್ಸಿಯಸ್‌ನಷ್ಟು ಕಡಿಮೆಗೊಳಿಸುವ ಗುರಿಯುಳ್ಳ ‘ಪ್ಯಾರಿಸ್ ಒಪ್ಪಂದ’ವನ್ನು ಕಟ್ಟುನಿಟ್ಟಾಗಿ ಎಲ್ಲ ರಾಷ್ಟ್ರಗಳು ಅಳವಡಿಸಿಕೊಳ್ಳಬೇಕು. ತಾಪಮಾನದ ವಿರುದ್ಧದ ಹೋರಾಟದಲ್ಲಿ ಬಡ ದೇಶಗಳಿಗೆ ಮುಂದವರೆದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ನೆರವು ನೀಡಬೇಕು. ಪರಿಸರ ರಕ್ಷಣೆಗಾಗಿ ಈಗ ಕ್ರಮ ಕೈಗೊಳ್ಳಲು ಮುಂದಾದರೆ, ತಾಪಮಾನ ಏರಿಕೆಯನ್ನು ತಡೆಯಲು ಕನಿಷ್ಠ 10 ವರ್ಷಗಳು ಬೇಕು. ಅದಕ್ಕಾಗಿ, ಕೆಲಸ ಈಗಿನಿಂದಲೇ ಆರಂಭವಾಗಬೇಕು.




