ಸರ್ಕಾರಿ ವೈದ್ಯರ ಖಾಸಗಿ IPDಗೆ ಬ್ರೇಕ್;‌ ಸಮರ್ಪಕ ಅನುಷ್ಠಾನವೇ ಸವಾಲು!

Date:

ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಗಳ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕ ಆರೋಗ್ಯ  ಕ್ಷೇತ್ರದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಸರಳ ಆಡಳಿತಾತ್ಮಕ ನಿರ್ಧಾರವಾಗಿ ಕಾಣಿಸಿದರೂ, ಇದರ ಹಿಂದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸುವ ಹಾಗೂ ಬಡವರ ಹಕ್ಕನ್ನು ಕಾಯ್ದುಕೊಳ್ಳುವ ಮಹತ್ವದ ಉದ್ದೇಶ ಅಡಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಕ್ರಮವೇನೋ ಆಶಾದಾಯಕವಾಗಿದೆ, ಆದರೆ ಅದರ ಸಮರ್ಪಕ ಅನುಷ್ಠಾನ ಹೇಗಿರಲಿದೆ ಎಂಬುದೂ ಮುಖ್ಯವಾಗುತ್ತದೆ.

ಸರ್ಕಾರಿ ವೈದ್ಯರು ಸರ್ಕಾರಿ ಸೇವೆಗೆ ಸೇರಿಕೊಳ್ಳುವಾಗ ಕಡ್ಡಾಯ ಸಾರ್ವಜನಿಕ ಸೇವೆಯ ಸಂಕಲ್ಪ ಮಾಡಿರುತ್ತಾರೆ. ಆದರೆ ʼಸರ್ಕಾರಿ ಆಸ್ಪತ್ರೆ -ಖಾಸಗಿ ಪ್ರಾಕ್ಟೀಸ್ʼ ಎನ್ನುವ ಎರಡು ದೋಣಿ ಪ್ರಯಾಣದ ಪ್ರವೃತ್ತಿ ವರ್ಷಗಳಿಂದ ಬೆಳೆಯುತ್ತಲೇ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಕಾಣೆಯಾಗುವ ವೈದ್ಯರು, ಸಂಜೆ ಹೊತ್ತಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯಕ್ಷರಿರುತ್ತಾರೆ. ಒಳರೋಗಿಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ವೈದ್ಯರ ಅಲಭ್ಯತೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಸಾವನ್ನಪ್ಪಿರುವ ಉದಾಹರಣೆಗಳೂ ಇವೆ. ಇವೆಲ್ಲವೂ ಬಡ ರೋಗಿಗಳ ಮೇಲೆ ಹೆಚ್ಚುವರಿ ಹೊರೆ ಹಾಕಿದ ವಾಸ್ತವಗಳು.

ಲೋಕಾಯುಕ್ತ ಮತ್ತು ಇತರ ಮೇಲ್ವಿಚಾರಣಾ ಸಂಸ್ಥೆಗಳ ವರದಿಗಳ ಪ್ರಕಾರ, ವೈದ್ಯರು ತಮ್ಮ ಸರ್ಕಾರಿ ಕರ್ತವ್ಯಗಳಿಗಿಂತ ಖಾಸಗಿ ಆಸ್ಪತ್ರೆಗಳಿಗೆ ಆದ್ಯತೆ ನೀಡುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಈ ಸಂಶೋಧನೆಗಳ ಆಧಾರದ ಮೇಲೆ, ರಾಜ್ಯ ಸರ್ಕಾರ ಇತರ ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ತಂದಿರುವ ನಿಯಮಗಳ ಮಾದರಿಯಲ್ಲಿ ಕಠಿಣ ನಿಯಂತ್ರಣಗಳನ್ನು ತರಲು ನಿರ್ಧರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸುವುದರ ಜೊತೆಗೆ, ಸರ್ಕಾರವು ಕೆಲವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಖಾಸಗಿ ಹೊರರೋಗಿ (OPD) ಚಿಕಿತ್ಸೆಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರಿ ವೈದ್ಯರು ತಮ್ಮ ಅಧಿಕೃತ ಕರ್ತವ್ಯ ಸಮಯ ಮುಗಿದ ಬಳಿಕ ಮಾತ್ರವೇ ಖಾಸಗಿ OPD ಸೇವೆ ನೀಡಬಹುದು. ಅದರಲ್ಲೂ, ಒಬ್ಬ ವೈದ್ಯರು ಒಂದೇ ಒಂದು ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಮಾತ್ರ OPD ಪ್ರಾಕ್ಟೀಸ್ ಮಾಡಲು ಅವಕಾಶ ಇದೆ. ಖಾಸಗಿ ಪ್ರಾಕ್ಟೀಸ್ ಮಾಡುವ ಸ್ಥಳ ಮತ್ತು ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ತಿಳಿಸಬೇಕು.

image 2026 01 30T180452.454

ಈ ಖಾಸಗಿ ಪ್ರಾಕ್ಟೀಸ್ ಯಾವುದೇ ರೀತಿಯಲ್ಲಿ ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯಾಗಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ, ವೈದ್ಯರ ಲಭ್ಯತೆ ಮತ್ತು ಸೇವೆಗಳು ಯಾವತ್ತೂ ಮೊದಲ ಆದ್ಯತೆಯಾಗಿರಬೇಕು ಎಂದು ಸರ್ಕಾರ ತಿಳಿಸಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆ.

ಆದರೆ ಕ್ರಮ ಹೇಗೆ?

ಸರ್ಕಾರಿ ವೈದ್ಯರು ತಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮೀಸಲಿಡಬೇಕು. ಇದರಿಂದ

  • ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಹೆಚ್ಚುತ್ತದೆ
  • ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ
  • ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ರೆಫರ್ ಮಾಡುವ ಅಕ್ರಮ, ಅಮಾನವೀಯ ಪದ್ಧತಿಗೆ ಕಡಿವಾಣ ಬೀಳಲಿದೆ.

ನಿಯಂತ್ರಣ ಇಲ್ಲದಿದ್ದರೆ ನಿಯಮ ದಾಖಲೆಗಳಲ್ಲಷ್ಟೇ ಉಳಿಯುವ ಆತಂಕವಿದೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರ ಸೇವೆಗಳು ಬಹುತೇಕ ಪರೋಕ್ಷವಾಗಿ ನಡೆಯುತ್ತವೆ. ವೈದ್ಯರ ಹೆಸರು ಖಾಸಗಿ ಆಸ್ಪತ್ರೆಯ ರಿಜಿಸ್ಟರ್‌ನಲ್ಲಿ ಇಲ್ಲದಿದ್ದರೂ, ಶಸ್ತ್ರಚಿಕಿತ್ಸೆಗೆ ಹೋಗುವುದು, ಒಳರೋಗಿಗಳಿಗೆ ಸಲಹೆ ನೀಡುವುದು, ಕನ್ಸಲ್ಟೆಂಟ್ ಹೆಸರಿನಲ್ಲಿ ಚಿಕಿತ್ಸೆ ನೀಡುವುದು, ಪ್ರಿಸ್ಕ್ರಿಪ್ಷನ್‌ ಬರೆದುಕೊಡುವುದು ಇತ್ಯಾದಿ ಮಾರ್ಗಗಳನ್ನು ಅವರು ಕಂಡುಕೊಂಡಿರುತ್ತಾರೆ.

ಈ ನಿರ್ಧಾರ ಯಶಸ್ವಿಯಾಗಬೇಕೆಂದರೆ ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ..

  1. ಬಯೋಮೆಟ್ರಿಕ್ ಹಾಜರಿ ಕಡ್ಡಾಯ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಮಯಪಾಲನೆ ಖಚಿತವಾಗಬೇಕು. ಕರ್ತವ್ಯ ಸಮಯದಲ್ಲಿ ಗೈರಾಗುವವರಿಗೆ ಸ್ಪಷ್ಟ ಶಿಕ್ಷೆ ಇರಬೇಕು.
  2. ಖಾಸಗಿ ಆಸ್ಪತ್ರೆಗಳ ಮೇಲೂ ಹೊಣೆಗಾರಿಕೆ: ಸರ್ಕಾರಿ ವೈದ್ಯರನ್ನು ಬಳಸಿಕೊಳ್ಳುವ ಖಾಸಗಿ ಆಸ್ಪತ್ರೆಗಳ ಮೇಲೂ ದಂಡ ಮತ್ತು ಕಾನೂನು ಕ್ರಮ ಇರಬೇಕು. ಇಲ್ಲದಿದ್ದರೆ ಒತ್ತಡ ಸದಾ ವೈದ್ಯರ ಮೇಲಷ್ಟೇ ಬೀಳುತ್ತದೆ.
  3. ರೋಗಿಗಳ ದೂರು ವ್ಯವಸ್ಥೆ ಬಲಪಡಿಕೆ: ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕಳುಹಿಸಿದರೆ, ಅದನ್ನು ದೂರು ರೂಪದಲ್ಲಿ ದಾಖಲಿಸುವ ವ್ಯವಸ್ಥೆ ಸುಲಭವಾಗಬೇಕು.
  4. ವೇತನ ಮತ್ತು ಸೌಲಭ್ಯಗಳ ಪರಿಷ್ಕರಣೆ: ವೈದ್ಯರ ಆದಾಯದ ಆತಂಕವನ್ನು ಸರ್ಕಾರ ನಿರ್ಲಕ್ಷಿಸಬಾರದು. ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಗೌರವಯುತ ವೇತನ ಮತ್ತು ಕೆಲಸದ ಪರಿಸರ ನೀಡುವುದು ಕೂಡ ಸರ್ಕಾರದ ಹೊಣೆ.
  5. ಖಾಸಗಿ OPD ಘೋಷಣೆ ಕಡ್ಡಾಯ: ವೈದ್ಯರು ಖಾಸಗಿ OPD ಮಾಡುವ ಸ್ಥಳ, ಸಮಯ ಮತ್ತು ಆಸ್ಪತ್ರೆಯ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಘೋಷಿಸಬೇಕು; ನಿಯಮಿತ ಪರಿಶೀಲನೆ ಇರಬೇಕು.
  6. ಕಠಿಣ ಶಿಕ್ಷಾ ಕ್ರಮ: ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ, ವೇತನ ಕಡಿತ, ವರ್ಗಾವಣೆ ಅಥವಾ ಸೇವೆಯಿಂದ ಅಮಾನತು ಸೇರಿದಂತೆ ಕಠಿಣ ಕ್ರಮಗಳು ಸ್ಪಷ್ಟವಾಗಿರಬೇಕು.
  7. ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಸುಧಾರಣೆ: ವೈದ್ಯರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಮೂಲಸೌಕರ್ಯ, ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಬಲಪಡಿಸಬೇಕು.
image 2026 01 30T180701.363

ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಸರ್ಕಾರದ ಮಹತ್ವದ ಯೋಜನೆಯೊಂದು ತೆರೆಮರೆಗೆ ಸರಿಯುವ ಅಪಾಯವಿದೆ. ಸರ್ಕಾರಿ ವೈದ್ಯರಿಗೆ ಖಾಸಗಿ ಒಳರೋಗಿ ಚಿಕಿತ್ಸೆಯನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಕೇವಲ ಹೊಗಳಿ ಒಪ್ಪಿಕೊಂಡು ಕೈಬಿಡುವಂತಿಲ್ಲ. ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇಷ್ಟು ದಿನ ಟೀಕೆಗೆ ಗುರಿಯಾಗಿದ್ದಿರುವುದಕ್ಕೆ ಕಾರಣವೇ ಅವುಗಳನ್ನು ಜಾರಿಗೊಳಿಸುವ ರಾಜಕೀಯ ಮತ್ತು ಆಡಳಿತಾತ್ಮಕ ತೊಡರು. ಹೀಗಾಗಿ ಈ ನಿರ್ಧಾರಕ್ಕೂ ಅದೇ ಗತಿ ಎದುರಾಗುವುದೇ ಎಂಬ ಅನುಮಾನ ಸಹಜ.

ನಿಯಂತ್ರಣವಿಲ್ಲದ ನಿಷೇಧವು ಕೇವಲ ನಾಟಕವಾದೀತು. ಬಯೋಮೆಟ್ರಿಕ್ ಹಾಜರಿ, ಖಾಸಗಿ ಆಸ್ಪತ್ರೆಗಳ ಮೇಲೆ ದಂಡ, ಉಲ್ಲಂಘನೆಗೆ ಕಠಿಣ ಶಿಕ್ಷೆ.. ಇವೆಲ್ಲವೂ ಜಾರಿಗೆ ಬರದಿದ್ದರೆ ಈ ಆದೇಶವೂ ಕಡತದೊಳಗೆ ಸಮಾಧಿಯಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಸಾಯುತ್ತಿರುವಾಗಲೂ, ಖಾಸಗಿ ಆಸ್ಪತ್ರೆಗಳಲ್ಲಿ ಕನ್ಸಲ್ಟೆಂಟ್ ಹೆಸರಿನಲ್ಲಿ ಸರ್ಕಾರಿ ವೈದ್ಯರು ಸೇವೆ ನೀಡುತ್ತಿರುವ ವಾಸ್ತವವನ್ನು ಸರ್ಕಾರ ಮರೆತಂತೆ ನಟಿಸಬಾರದು. ಸರ್ಕಾರ ಒಂದೇ ವೇಳೆ ಎರಡು ಹೊಣೆಗಾರಿಕೆಗಳನ್ನು ಹೊತ್ತುಕೊಳ್ಳಬೇಕಿದೆ. ವೈದ್ಯರ ಅಕ್ರಮ ಖಾಸಗಿ ಸೇವೆಗೆ ಕಡಿವಾಣ ಹಾಕುವುದು ಮತ್ತು ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಗೌರವಯುತ ವೇತನ ಹಾಗೂ ಕೆಲಸದ ಪರಿಸರ ಒದಗಿಸುವುದು. ಒಂದನ್ನು ಪರಿಗಣಿಸಿ ಇನ್ನೊಂದನ್ನು ಕಡೆಗಣಿಸಿದರೆ ಅಸಮಾಧಾನ, ಉಲ್ಲಂಘನೆ ಮತ್ತು ಭ್ರಷ್ಟ ವ್ಯವಸ್ಥೆ ಎಂದಿನಂತೆ ಮುಂದುವರಿಯುತ್ತದೆ.

ಇದನ್ನೂ ಓದಿ: ಸ್ವರಗಳೊಂದಿಗೆ ಸ್ಪರ್ಧೆಗಿಳಿದ AI; ಭಾವಕ್ಕೆ ಬರುವುದೇ ಜೀವ?

ಆರೋಗ್ಯ ಇಲಾಖೆ ಸ್ಪಷ್ಟಪಡಿಸಿರುವಂತೆ, ಈ ನಿಯಮಗಳು ವೈದ್ಯರನ್ನು ಶಿಕ್ಷಿಸುವ ಉದ್ದೇಶದಿಂದಲ್ಲ. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರ ವೃತ್ತಿಪರ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ನಡುವೆ ಸಮತೋಲನ ಸಾಧಿಸುವುದು ಇದರ ಮೂಲ ಉದ್ದೇಶವಾಗಿದೆ. ವಿಶೇಷವಾಗಿ ರಾಜ್ಯ ಸರ್ಕಾರ ನಡೆಸುವ ಆರೋಗ್ಯ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೇವೆಗೆ ಮೊದಲ ಆದ್ಯತೆ ನೀಡಬೇಕೆಂಬ ನಿಟ್ಟಿನಲ್ಲಿ ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಸದುದ್ದೇಶದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...