ಕಾಲದೊಂದಿಗೆ ಬದಲಾಗದ ಕುಟುಂಬ; ಪೊರೆ ಕಳಚದ ಕಣ್ಣೋಟ

Date:

ಕುಟುಂಬಗಳು ಪುರುಷರನ್ನು ಒಂದು ಬಗೆಯ ಒತ್ತಡಕ್ಕೆ ದೂಡಿದರೆ ಮಹಿಳೆಯರ ಪಾಲಿಗೇನೂ ಅವು ಹೂವಿನ ಹಾಸಿಗೆಗಳಾಗಿಲ್ಲ. ಅತುಲ್‌ ಸುಭಾಷ್‌ನ ಸಾವಿನ ಸರಿಯಾಗಿ ಒಂದು ತಿಂಗಳ ನಂತರ ಮುಂಬೈ ಮಹಾನಗರದಿಂದ ಸುದ್ದಿಯೊಂದು ಬಂತು, ಮುಂಬೈನ ಹೃದಯಭಾಗದಲ್ಲಿರುವ ಮಧ್ಯಮವರ್ಗದ ಕಾಲೋನಿಯೊಂದರಲ್ಲಿ ಗೃಹಿಣಿಗೆ ಆಕೆಯ ಗಂಡ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ. ಕಾರಣ, ಈಗಾಗಲೇ ಇದ್ದೆರಡು ಹೆಣ್ಣುಮಕ್ಕಳ ನಂತರ ಆಕೆ ಮೂರನೇ ಹೆಣ್ಣುಮಗುವಿಗೆ ತಾಯಿಯಾಗಿದ್ದಳು.

ಈ ಕಾಲವು ನಮ್ಮ ಮುಂದೆಸೆದಿರುವ ಅನೇಕ ಬಿಕ್ಕಟ್ಟುಗಳಲ್ಲಿ ಸಾಮಾಜಿಕವಾಗಿ ಹೆಚ್ಚು ಕಾಡುತ್ತಿರುವಂಥದ್ದು ಕುಟುಂಬ ವ್ಯವಸ್ಥೆಯೊಳಗಿನ ಸಂಘರ್ಷಗಳು. ಈ ಸಂಘರ್ಷವು ಸಾಮಾನ್ಯವಾಗಿ ಎಲ್ಲೆಡೆ ಉಲ್ಲೇಖಿಸಲ್ಪಡುವ ಭಾರತದಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳ ಸಂಖ್ಯೆಯೊಂದರಿಂದಷ್ಟೇ ಅಳೆಯಲು ಸಾಧ್ಯವಾಗುವಂಥದ್ದಲ್ಲ. ಇದಕ್ಕಿರುವ ಆಯಾಮಗಳು-ಆತ್ಮಹತ್ಯೆಯಂತಹ ಅತ್ಯಂತ ದುಃಖಕರವಾದ ಸನ್ನಿವೇಶಗಳನ್ನೂ ಒಳಗೊಂಡಂತೆ- ಬಹಳ ಸಂಕೀರ್ಣವಾದವುಗಳಾಗಿವೆ ಎಂಬುದು ನಿರ್ವಿವಾದದ ಸಂಗತಿ. ಆದರೆ ಆಯಾಮ ಯಾವುದೇ ಆಗಿರಲಿ, ಕೌಟುಂಬಿಕ ಸಂಘರ್ಷ ಅಥವಾ ಬಿರುಕಿಗೆ ಕಾರಣ ಮಾತ್ರ ಮಹಿಳೆಯೇ ಎಂಬ ಪೂರ್ವನಿರ್ಧಾರಿತವಾದ ತರ್ಕವನ್ನು ಸಮಾಜ ಬದಲಿಸಿಕೊಳ್ಳುತ್ತಿಲ್ಲ, ಹಾಗಾಗಿಯೇ ಇದರ ಆಳದಲ್ಲಿರುವ ಮೂಲಬೇರುಗಳವರೆಗೆ ತಲುಪಲಿಕ್ಕಾಗಲೀ ಅಥವಾ ಸಮಸ್ಯೆಯನ್ನು ಸರಿಪಡಿಸಲು ಬೇಕಿರುವ ಪರಿಹಾರೋಪಾಯಗಳನ್ನು ಹುಡುಕಿಕೊಳ್ಳಲಾಗಲೀ ಸಾಧ್ಯವಾಗುತ್ತಿಲ್ಲ. ಹಾಗೆಯೇ, ಸಮಸ್ಯೆ ಉಲ್ಬಣವಾಗಿ, ಅದು ಅತಿರೇಕದ ಸಂಘರ್ಷಗಳಿಗೂ, ಕೆಲವೊಮ್ಮೆ ಕೊಲೆಗಳು, ಹಲವೊಮ್ಮೆ ಆತ್ಮಹತ್ಯೆಗಳಿಗೂ ಕಾರಣವಾಗುತ್ತಿರುವುದನ್ನು ತಡೆಯಲೂ ಆಗುತ್ತಿಲ್ಲ.

ಹೆಚ್ಚುತ್ತಿರುವ ಆತ್ಮಹತ್ಯೆಗಳಿಗೂ ಕುಟುಂಬ ವ್ಯವಸ್ಥೆಗೂ ಸಂಬಂಧವಿದೆಯೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೌದು ಎನ್ನುತ್ತವೆ ಅಂಕಿಅಂಶಗಳು. ಈ ಪ್ರಶ್ನೆಯ ವಿಶ್ಲೇಷಣೆಗಿಳಿದರೆ, ಹಲವು ಬಗೆಯ ದತ್ತಾಂಶಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಕೇರಳದ ʼತಾನಲ್‌ ಆತ್ಮಹತ್ಯೆ ತಡೆ ಕೇಂದ್ರʼವು 2024ರಲ್ಲಿ ನಡೆಸಿರುವ ಅಧ್ಯಯನವು ಹೀಗೆ ಹೇಳುತ್ತದೆ. ʼಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರೇರಿತರಾಗುತ್ತಿರುವವರಲ್ಲಿ ವಿವಾಹಿತ ಪುರುಷರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆಂಬುದು ತಿಳಿಯುತ್ತಿದೆ, ಅವರ ಬೆನ್ನ ಹಿಂದೆಯೇ ವಿವಾಹಿತ ಮಹಿಳೆಯರು ಕೂಡಾ ಇದ್ದಾರೆ.ʼ

ʼದಿ ಟೈಮ್ಸ್‌ ಆಫ್‌ ಇಂಡಿಯಾʼದ ದೀಪ್ತಿಮನ್‌ ತಿವಾರಿ 2015ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (NCRB)ದ ಅಂಕಿಸಂಖ್ಯೆಗಳನ್ನೇ ಆಧರಿಸಿ ನಡೆಸಿದ ವಿಶ್ಲೇಷಣೆಯು ಇನ್ನಷ್ಟು ಹೆಚ್ಚು ಮಾಹಿತಿಯನ್ನು ನೀಡುತ್ತದೆ. ಈ ಅಧ್ಯಯನ ಹೀಗೆ ಹೇಳುತ್ತದೆ. “NCRBಯ ಇತ್ತೀಚಿನ ದಾಖಲೆಗಳ ಪ್ರಕಾರ, 2014ರಲ್ಲಿ ಸುಮಾರು 60,000 ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆಯರ ಸಂಖ್ಯೆ 27,000.14,000 ವಿಧುರರೂ, 1300 ವಿಧವೆಯರೂ ಇದೊಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, 570 ವಿಚ್ಛೇದಿತ ಪುರುಷರು ಮತ್ತು 410 ವಿಚ್ಛೇದಿತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ”. ಈ ವಿವರಗಳನ್ನು ಮುಂದಿಡುತ್ತಾ ಅಧ್ಯಯನವು ಒಂದು ಪ್ರಶ್ನೆಯನ್ನೂ ಕೇಳುತ್ತದೆ- “ದತ್ತಾಂಶದ ಪ್ರಕಾರ, ಒಟ್ಟಾರೆಯಾಗಿ ಎಲ್ಲಾ ಆತ್ಮಹತ್ಯೆಗಳಲ್ಲಿ 66%ರಷ್ಟು ವಿವಾಹಿತರ ಆತ್ಮಹತ್ಯೆಗಳಾಗಿವೆ. ಇದರ ಅರ್ಥವೇನು? ಮದುವೆಗಳು ಮನುಷ್ಯರನ್ನು ಆತ್ಮಹತ್ಯೆಗಳ ಕಡೆಗೆ ತಳ್ಳುತ್ತಿವೆಯೇ?”

ವಿವಾಹಿತರ ಆತ್ಮಹತ್ಯೆಗಳಿಗೆ ಕಾರಣಗಳೇನು?

ಭಾರತದಲ್ಲಿ ಒಟ್ಟಾರೆಯಾಗಿ ನಡೆಯುವ ಆತ್ಮಹತ್ಯೆಗಳಿಗೆ ಕಾರಣಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಪ್ರಮುಖವಾಗಿವೆ ಎಂದೂ NCRB ಅಂಕಿಸಂಖ್ಯೆಗಳು ಹೇಳುತ್ತವೆ. ಒಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪುರುಷರಲ್ಲಿ ಕೌಟುಂಬಿಕ ಕಾರಣಕ್ಕೆ ಬದುಕು ಮುಗಿಸುತ್ತಿರುವವರ ಸಂಖ್ಯೆ 18,000; ಮಹಿಳೆಯರಲ್ಲಿ ಇದು 9900 (2014ರಲ್ಲಿ). ಹೀಗೆ ವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಾಕ್ಷಣ, ಅಂತಹ ಪುರುಷರ ಆತ್ಮಹತ್ಯೆಗಳಿಗೆ ಅವರ ಪತ್ನಿಯರು ಕಾರಣವೆಂದೂ, ಅಥವಾ ವಿವಾಹಿತ ಮಹಿಳೆಯರ ಆತ್ಮಹತ್ಯೆಗಳಿಗೆ ಅವರ ಗಂಡಂದಿರು ಕಾರಣವೆಂದೂ ತೀರ್ಪು ನೀಡಲು ಸಾಧ್ಯವೇ? ಕೌಟುಂಬಿಕ ಸಮಸ್ಯೆಗಳ ಆತ್ಮಹತ್ಯೆಯ ಕಾರಣಗಳಲ್ಲಿ ಭಾರತದಲ್ಲಿ ಮೊದಲ ಸ್ಥಾನದಲ್ಲಿವೆಯೆಂದ ತಕ್ಷಣ ಕೌಟುಂಬಿಕ ಸಮಸ್ಯೆ ಎಂದರೆ ಹೆಂಡತಿ-ಮಕ್ಕಳು ಎಂದು ಸಾಮಾನ್ಯವಾಗಿ ಮಾಡಲಾಗುವಂತೆ ಅರ್ಥೈಸಬಹುದೇ?

ಹಾಗೇನಾದರೂ ಮಾಡಿದ್ದೇ ಆದಲ್ಲಿ, ಸಮಸ್ಯೆಯ ಆಳವನ್ನು ಅರಿಯುವ ಮೊದಲ ಹೆಜ್ಜೆಯಲ್ಲೇ ಎಡವಿದಂತೆ. ಜಾಗತಿಕವಾದ ಅಧ್ಯಯನಗಳು ಈ ಬಗ್ಗೆ ಚರ್ಚಿಸುತ್ತಾ, ಪುರುಷರು ಹೆಚ್ಚು ಅತಿರೇಕದ ನಿರ್ಧಾರಗಳನ್ನು ಹಠಾತ್ತನೆ ಮಾಡುವ ಮನಸ್ಥಿತಿ ಹೊಂದಿರುತ್ತಾರೆ ಮತ್ತು ಕುಡಿತವು ಬಗೆಹರಿಯದ ಚಟವಾಗುವ ಸಾಧ್ಯತೆ ಪುರುಷರಲ್ಲೇ ಹೆಚ್ಚು ಎಂಬಿತ್ಯಾದಿ ಅಂಶಗಳನ್ನು ಕಾರಣಗಳನ್ನಾಗಿ ಗುರುತಿಸಿವೆ.

ಆತ್ಮಹತ್ಯೆ 12

ಭಾರತದ ಸಂದರ್ಭದಲ್ಲಿ ಇನ್ನೂ ನಿರ್ದಿಷ್ಟವಾಗಿ ಕೆಲವು ಸಂಗತಿಗಳನ್ನು ಚರ್ಚಿಸಲೇಬೇಕಿದೆ. ಎಲ್ಲಕ್ಕಿಂತ ಮುಖ್ಯವಾದುದು, ಪ್ರಸ್ತುತ ಕಾಲಮಾನದ ವಾಸ್ತವಗಳಿಗೆ ತಕ್ಕಂತೆ ಬದಲಾಗದೆ, ಪುರಾತನ ರೂಢಿಗತ ಪದ್ಧತಿಗಳಲ್ಲೆ ಸಿಲುಕಿಕೊಂಡಿರುವ ಭಾರತೀಯ ಕುಟುಂಬ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಹುಟ್ಟುವ ಪ್ರತಿಯೊಂದು ಕಂದಮ್ಮನಿಗೂ ಅವರವರ ಹಣೆಬರಹ ಮೊದಲೇ ನಿರ್ಧರಿಸಲ್ಪಟ್ಟದ್ದಾಗಿರುತ್ತದೆ. ಆ ಕಾಲ ಬದಲಾಗಿ ಹೊಸ ಕಾಲದ ಪೋಷಕರಿಂದು ಮಕ್ಕಳನ್ನು ಸ್ವತಂತ್ರವಾಗಿ, ಲಿಂಗಾಧಾರಿತ ಸಿದ್ಧಮಾದರಿಗಳ ಹೇರಿಕೆಯಿಲ್ಲದೆ ಬೆಳೆಸುತ್ತಿದ್ದಾರೆಂದು ಭಾವಿಸಲಾಗುತ್ತಿದ್ದರೂ, ಈ ಸಂಖ್ಯೆ ಬಹಳ ಕಡಿಮೆ; ಮತ್ತು ದೊಡ್ಡ ಸಂಖ್ಯೆಯ ಪೋಷಕರು ಈಗಲೂ ʼದೊಣ್ಣೆಗಳಿಗೆ ಕೆಲಸ ಕೊಟ್ಟರೆ ಮಕ್ಕಳು ಕೆಲಸವನ್ನು ತಾವಾಗಿಯೇ ಕಲಿಯುತ್ತಾರೆʼ ಎಂಬ ಹಳೆಯ ಮಾದರಿಯ ಪೋಷಕತ್ವದಿಂದ ಬಹಳ ದೂರವೇನೂ ಸಾಗಿಲ್ಲ ಎಂಬುದನ್ನು ಸಾಮಾಜಿಕ ಮನಃಶಾಸ್ತ್ರಜ್ಞರು ಮತ್ತು ಆಪ್ತಸಮಾಲೋಚಕರಾಗಿರುವ ರಾಜೇಶ್‌ ರಮೇಶ್‌ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಹೇಳುತ್ತಾರೆ (ದ ಮೀಡಿಯಂ ನಿಯತಕಾಲಿಕ, ನವೆಂಬರ್‌ 2024). ಅವರ ಪ್ರಕಾರ ಭಾರತದಲ್ಲಿ ಗಂಡುಮಕ್ಕಳನ್ನು ಬೆಳೆಸುವ ವಿಧಾನವೇ ಅವರನ್ನು ಭಾವನಾತ್ಮಕವಾಗಿ ಜಡಗೊಳಿಸುವಂಥದ್ದಾಗಿದೆ-

“ಭಾವನಾತ್ಮಕ ಮರಗಟ್ಟುವಿಕೆ – ಈ ಹುಡುಗರು ತಮ್ಮ ಹದಿಹರೆಯದ ವಯಸ್ಸನ್ನು ತಲುಪುವ ಹೊತ್ತಿಗೆ, ತಮ್ಮ ಭಾವನೆಗಳನ್ನು ನಿಗ್ರಹಿಸಲು ಎಷ್ಟು ಒಗ್ಗಿಕೊಂಡಿರುತ್ತಾರೆಂದರೆ ಅದು ಅವರ ಎರಡನೆಯ ಸ್ವಭಾವವಾಗುತ್ತದೆ. ಅವರು ಬೆಳೆಸಿಕೊಳ್ಳುವ ಭಾವನಾತ್ಮಕ ಮರಗಟ್ಟುವಿಕೆ ಒಂದು ಆಯ್ಕೆಯಲ್ಲ – ಇದು ಬದುಕುಳಿಯುವ ತಂತ್ರ. ಪುರುಷರು ಅಳಬಾರದು, ದುರ್ಬಲತೆಯನ್ನು ವ್ಯಕ್ತಪಡಿಸಬಾರದು ಮತ್ತು ಆಳವಾದ ಸಂವೇದನೆ ಹೊಂದಬಾರದು ಎಂದು ಅವರಿಗೆ ಕಲಿಸಿದ ಜಗತ್ತಿನಲ್ಲಿ, ತಿರಸ್ಕಾರ, ಅಪಹಾಸ್ಯ ಅಥವಾ ಇನ್ನೂ ಕೆಟ್ಟದ್ದನ್ನು ತಪ್ಪಿಸಲು ಅವರು ತಮ್ಮ ಭಾವನೆಗಳನ್ನು ಮುಚ್ಚಿಡುತ್ತಾರೆ. ನಿಧಾನವಾಗಿ ತಮ್ಮ ಖಾಸಗಿ ಅಥವಾ ಸಾರ್ವಜನಿಕ ಬದುಕಿನ ಇನ್ನಿತರರೊಂದಿಗೆ ಮಾತ್ರವಲ್ಲದೆ ಸ್ವತಃ ತಮ್ಮೊಂದಿಗೂ ಸಂವಾದಿಸಲಾಗದಂತೆ ಜಡಗೊಳ್ಳುತ್ತಾರೆ.“

ಇಂತಹ ಜಡತ್ವವು ಸರಳವಾದ ಸಂವಹನದಿಂದ ಬಗೆಹರಿಸಿಕೊಳ್ಳಬಹುದಾದ, ಭಾವನಾತ್ಮಕ ಅರ್ಥೈಸಿಕೊಳ್ಳುವಿಕೆಯಿಂದ ಅರಿತುಕೊಂಡು ಸರಿಪಡಿಸಬಹುದಾದ ಅನೇಕ ಸಮಸ್ಯೆ-ಸಂಕೀರ್ಣತೆಗಳನ್ನು ಮೂಲಭೂತ ಅರಿಯುವುದಕ್ಕೇ ಅವಕಾಶವಾಗದಂತೆ ತಡೆಯುತ್ತದೆ. ಪರಿಣಾಮ-ಅಗಾಧವಾದ ಒತ್ತಡ ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಏಕಾಂಗಿತನ! ದುರ್ಬಲ ಕ್ಷಣದಲ್ಲಿ ಬದುಕನ್ನು ಕೈಚೆಲ್ಲಲು ಇದಕ್ಕಿಂತ ಕಾರಣ ಬೇಕೆ? ಅದರಲ್ಲೂ, ಬಹಳ ಆಪ್ತ ಸಂಬಂಧವಾದ ವೈವಾಹಿಕ ಬದುಕಿನಲ್ಲಿ, ಇಂತಹ ಒತ್ತಡಗಳು ಎದುರಾದಾಗ, ಸಾಮಾಜಿಕ-ಕೌಟುಂಬಿಕ ನಿರೀಕ್ಷೆಗಳು ಮತ್ತು ಟೀಕೆಗಳ ಭಾರವೂ ಸೇರಿ ಗಂಡಸರನ್ನು (ಭಾವನಾತ್ಮಕವಾದ ಸಂಬಂಧ ರೂಪಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಮಹಿಳೆಯರನ್ನೂ ಕೂಡಾ) ಅವು ಆತ್ಮಹತ್ಯೆಯಂತಹ ಅತಿರೇಕಗಳಿಗೆ ದೂಡುತ್ತವೆ.

ಪುರುಷರ ಆತ್ಮಹತ್ಯೆಗಳುಮಹಿಳಾಪರ ಕಾನೂನುಗಳು ಕಾರಣವೇ?

ʼಹೀಗೆ ಮೊದಲೇ ದುರ್ಬಲ ಮನಸ್ಥಿತಿಯಲ್ಲಿರುವ ಪುರುಷರು ಏನನ್ನೂ ಎದುರಿಸಲಾಗದ ಉದ್ವಿಗ್ನ ಸ್ಥಿತಿಯಲ್ಲಿರುತ್ತಾರೆ, ಇಂತಹ ಸಮಯದಲ್ಲಿ ಮಹಿಳೆಯರ ಪಕ್ಷಪಾತಿಯಾಗಿರುವ ಕಾನೂನುಗಳು ಅವರನ್ನು ಕಂಗೆಡಿಸುತ್ತವೆʼ ಎಂಬ ವಾದವೊಂದು ಬಹಳ ಕಾಲದಿಂದ ಚರ್ಚೆಯಲ್ಲಿದೆ.

ಇದೇ ಹಿನ್ನೆಲೆಯ ಕಾರಣದಿಂದಲೇ, ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ನ ಆತ್ಮಹತ್ಯೆಯು ವಿಷಾದಕ್ಕಿಂತ ಹೆಚ್ಚು ವಾಗ್ವಾದ ಹುಟ್ಟಿಸಲು ಕಾರಣವಾಯಿತು. ಇದಕ್ಕೆ ಮೇಲ್ನೋಟದ ಕಾರಣ ಅವರು ತನ್ನ ದಾಂಪತ್ಯದಲ್ಲಿ ಬಂದ ವಿರಸದ ಬಗ್ಗೆ ಮತ್ತು ಅದರಿಂದಾಗಿ ವಿಚ್ಛೇದನ ಪಡೆಯಬೇಕಾಗಿ ಬಂದು, ಆ ಇಡೀ ಪ್ರಕ್ರಿಯೆಯಲ್ಲಿ ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಬರೆದಿಟ್ಟಿದ್ದ ಪತ್ರ. ಆತನ ಸಾವು ಮತ್ತು ಅತುಲ್‌ ಬರೆದಿಟ್ಟಿದ್ದ ಪತ್ರಗಳೆರಡೂ ಮದುವೆ ಎಂಬ ವ್ಯವಸ್ಥೆಯೊಳಗೆ ಬದಲಾವಣೆ ಬರೆದಿರುವ ಕಾರಣಕ್ಕೆ ಉಂಟಾಗಿರುವ ಹಲವು ಸಂಕೀರ್ಣತೆಗಳ ಕಡೆಗೆ ಬೆರಳು ಮಾಡುತ್ತಿದ್ದವು. ಸಾಮಾಜಿಕ ವ್ಯವಸ್ಥೆ ರೂಢಿಗತವಾದ ತನ್ನ ಕೆಲವು ಸಂಗತಿಗಳಲ್ಲಿ ಬದಲಾವಣೆ ತಂದುಕೊಳ್ಳಲು ನಿರಾಕರಿಸುತ್ತಿರುವುದರ ಪರಿಣಾಮ ಅತುಲ್‌ ಸುಭಾಷ್‌ ಮತ್ತು ಅಂತಹ ಅನೇಕರ ದುರಂತ ಸಾವು, ಅಮಾಯಕ ಜೀವಗಳು ಅರ್ಧದಲ್ಲೇ ಬದುಕಿಗೆ ವಿದಾಯ ಹೇಳುತ್ತಿರುವ ದುರಂತ!!

ಅತುಲ್
ಅತುಲ್‌ ಸುಭಾಷ್‌

ಈ ಯುವ ವೃತ್ತಿಪರ ಸಾವಿಗೆ ಮೊದಲು ಬರೆದ ಪತ್ರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮುಖ್ಯವಾಗಿ ಮೂರು ಸಂಗತಿಗಳು ಕಂಡುಬರುತ್ತಿದ್ದವು- ಮೊದಲನೆಯದ್ದು, ತನ್ನನ್ನು ಅರ್ಥಮಾಡಿಕೊಳ್ಳದ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ಆಗುತ್ತಿರುವ ಕಿರುಕುಳ, ಎರಡನೆಯದ್ದು ಪೊಲೀಸರು ಮತ್ತು ಕಾನೂನು ವ್ಯವಸ್ಥೆಯಿಂದಾಗಿ ಉಂಟಾದ ಬಿಕ್ಕಟ್ಟು, ಅವಮಾನ ಮತ್ತು ಆಘಾತ, ಮೂರನೆಯದ್ದಾಗಿ ತನ್ನ ಸುತ್ತಲಿನವರು ಮತ್ತು ಉದ್ಯೋಗದ ಸ್ಥಳವೂ ಸೇರಿದಂತೆ ಒಟ್ಟು ಸಮಾಜ ಕೇವಲ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಾಗದ ʼವಿಫಲ ವ್ಯಕ್ತಿʼ (failure) ಆಗಿ ತನ್ನನ್ನು ನೋಡುತ್ತಿರುವುದರಿಂದಾಗುತ್ತಿರುವ ಅವಮಾನ ಮತ್ತು ಮಾನಸಿಕ ಒತ್ತಡ- ಯಾರೂ ತನ್ನನ್ನು ಈ ಎಲ್ಲದರಿಂದ ಪಾರು ಮಾಡಲಾರರೆಂಬ ಹತಾಶೆಯಿಂದ ಬದುಕನ್ನು ಕೊನೆಗೊಳಿಸಿದ ಆ ಯುವಕನ ಪತ್ರ ಈ ಎಲ್ಲವನ್ನೂ ನಮ್ಮ ಮುಂದಿಟ್ಟಿತ್ತು. ಆತ ಪ್ರಸ್ತಾಪಿಸಿದ್ದ ಎಲ್ಲ ಸಂಗತಿಗಳನ್ನೂ ಗಮನಿಸಿದಾಗ, ತಾವು ಸ್ವತಂತ್ರವಾಗಿ ತಮಗೆ ಬೇಕಿರುವುದನ್ನು ಸಾಧಿಸಿಕೊಳ್ಳುವ ಮಾರ್ಗ ಹುಡುಕುವ ಬದಲು, ಮದುವೆಯಾಗುವ ಪುರುಷರಿಂದಲೇ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳುವ ಹಾಗೆ ಬೆಳೆಸಲ್ಪಡುವ ಹೆಣ್ಣುಮಕ್ಕಳ ತಪ್ಪು ಮನಸ್ಥಿತಿಯನ್ನೂ ಒಳಗೊಂಡಂತೆ, ಇಡಿಯಾಗಿ ನಮ್ಮ ಕುಟುಂಬ ವ್ಯವಸ್ಥೆ ತಲೆತಲೆಮಾರುಗಳಿಂದ ರೂಪುಗೊಂಡಿರುವ ವಿಧಾನದಲ್ಲಿರುವ ಸಮಸ್ಯೆಯೇ ಢಾಳಾಗಿ ಮುಖಕ್ಕೆ ರಾಚುತ್ತಿತ್ತು.

ಆದರೆ, ವಾಸ್ತವದ ಈ ಕಾರಣವು ತೆರೆಮರೆಗೆ ಸರಿಯುವಂತೆ ಕೇವಲ ಮಹಿಳೆಯರನ್ನು ಮಾತ್ರವೇ ವಿಲನ್‌ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ದೂರದೃಷ್ಟಿತ್ವವಿಲ್ಲದ ಕೆಲವು ಗುಂಪುಗಳು ಮತ್ತು ಪ್ರತಿಗಾಮಿ ಮೌಲ್ಯಗಳನ್ನೇ ವೈಭವೀಕರಿಸುವ ಮಾಧ್ಯಮಗಳು ಮಾಡಿದವು. ಈ ನಿರ್ದಿಷ್ಟ ಪ್ರಕರಣದಲ್ಲಿ ಅತುಲ್‌ ಸುಭಾಷ್‌ನ ಪತ್ನಿ ಅಥವಾ ಇನ್ನಿತರ ಕುಟುಂಬ ಸದಸ್ಯರ ಪಾತ್ರವೆಷ್ಟಿತ್ತು ಎಂಬುದು ಬೇರೆ ಸಂಗತಿ, ಆದರೆ ಒಟ್ಟಾರೆಯಾಗಿ ಕೌಟುಂಬಿಕ ಹೊರೆಯ ಬಹುಭಾಗವನ್ನು ಅಂದಿಗೂ ಇಂದಿಗೂ ಹೊತ್ತುಕೊಂಡಿರುವ ಮಹಿಳಾ ಕುಲವನ್ನೇ ಒಟ್ಟಾರೆಯಾಗಿ ಇದಕ್ಕೆ ಹೊಣೆಗಾರರನ್ನಾಗಿಸುವ ಪ್ರಯತ್ನವಂತೂ ಅತ್ಯಂತ ಬೇಜವಾಬ್ದಾರಿಯದ್ದು ಮತ್ತು ಅಲ್ಪದೃಷ್ಟಿಯದ್ದೂ ಆಗಿತ್ತು.

1986ರಿಂದ ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮುಖ್ಯವಾದ ಮತ್ತು ಗಂಭೀರವಾದ ಹೊಸ ಸಮಸ್ಯೆಗಳನ್ನು ಮುಂದಿಡುವ ಮೂಲಕ ಗಮನಾರ್ಹ ಕೊಡುಗೆ ನೀಡಿರುವ ʼವೈಆರ್‌ಜಿ ಕೇರ್‌ʼ (Y.R.Gaitonde centre for AIDS research and care) ಸಂಸ್ಥೆಯು 2019ರ ಕೋವಿಡ್‌ನ ನಂತರ ಹೊಸತೊಂದು ಆರೋಗ್ಯದ ಬಿಕ್ಕಟ್ಟನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದೆ- ಅದು ಪುರುಷರ ಮಾನಸಿಕ ಆರೋಗ್ಯ. ಒಟ್ಟಾರೆಯಾಗಿಯೇ ಮಾನಸಿಕ ಆರೋಗ್ಯವು ಕಡೆಗಣಿಸಲ್ಪಟ್ಟಿರುವ ಸಂದರ್ಭದಲ್ಲಿ, ಪುರುಷರ ಮಾನಸಿಕ ಆರೋಗ್ಯವು ಪರಿಗಣನೆಗೇ ಇಲ್ಲದಂತೆ ತೆರೆಮರೆಯಲ್ಲಿ ಇರಿಸಲ್ಪಟ್ಟಿದೆಯೆಂಬುದು ಈ ಸಂಸ್ಥೆಯ ಸಂಶೋಧಕರ ಅಭಿಪ್ರಾಯ.

YRG CARE ಅಧ್ಯಯನ ಬದಲಾಗದ ಭಾರತೀಯ ಕುಟುಂಬ ವ್ಯವಸ್ಥೆಯ ಬಗ್ಗೆ ಹೀಗೆ ಹೇಳುತ್ತದೆ. “ಇಂದಿಗೂ ಅನೇಕ ಭಾರತೀಯ ಮನೆಗಳಲ್ಲಿ, ʼಮನೆಯ ಯಜಮಾನʼ ಎಂದರೆ ಜೀವನ ನಿರ್ವಹಣೆಯ ಏಕೈಕ ಮೂಲ, ಎಲ್ಲ ಸಮಸ್ಯೆಗಳ ಪರಿಹಾರಕ ಮತ್ತು ಭಾವನಾತ್ಮಕ ಆಸರೆಯ ಬಂಡೆ ಎಂದು ನಿರೀಕ್ಷಿಸಲಾಗಿದೆ. ಅವನು ಗ್ರಾಮೀಣ ರೈತನಾಗಿರಲಿ ಅಥವಾ ನಗರದ ಐಟಿ ವೃತ್ತಿಪರನಾಗಿರಲಿ, ಒತ್ತಡವು ಸ್ಪಷ್ಟವಾಗಿ ಕಂಡುಬರುತ್ತದೆ. ತನಗೂ ಸಹಾಯ ಬೇಕು ಎಂಬ ಕೋರಿಕೆಯು ಹುಟ್ಟಿಸುವ ಕಳಂಕದೊಂದಿಗೆ ಸೇರಿಕೊಂಡು ಈ ನಿರಂತರ ಒತ್ತಡವು ಆತಂಕ, ಖಿನ್ನತೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣವಾಗುತ್ತದೆ”.

“ಪುರುಷರ ಭಾವನೆಗಳ ಗ್ರಹಿಕೆಗಳನ್ನು ರೂಪಿಸುವಲ್ಲಿ ಭಾರತೀಯ ಕುಟುಂಬಗಳು ಮಹತ್ವದ ಪಾತ್ರ ವಹಿಸುತ್ತವೆ. ತಮ್ಮ ಭಾವನೆಗಳನ್ನು ನಿಗ್ರಹಿಸಬೇಕೆಂಬುದನ್ನೇ ಕಲಿತು ಬೆಳೆದ ತಂದೆಯರು ತಮ್ಮ ಗಂಡುಮಕ್ಕಳಿಗೂ ಅದೇ ಪಾಠಗಳನ್ನು ರವಾನಿಸುತ್ತಾರೆ. ಆದರೆ ಈ ಚಕ್ರವನ್ನು ಮುರಿಯಲು ಸಾಧ್ಯವಾಗುವುದಾದರೆ? ಮಾನಸಿಕ ಆರೋಗ್ಯದ ಬಗ್ಗೆ ಅರಿವು, ಕುಟುಂಬದೊಳಗಡೆಯೇ ಪರಸ್ಪರರ ಭಾವನಾತ್ಮಕ ತಪಾಸಣೆ ಮತ್ತು ದುರ್ಬಲತೆಯು ಎಲ್ಲರಿಗೂ ಇರುವ ಸಾಮಾನ್ಯವಾದ ಸಂಗತಿಯೆಂಬ ಒಪ್ಪಿಕೊಳ್ಳುವಿಕೆಯನ್ನು ತರಲು ಸಾಧ್ಯವಾದರೆ ಎಷ್ಟೊಂದು ಜೀವಗಳನ್ನು ಉಳಿಸಬಹುದು! ಈ ಬಗ್ಗೆ ಮುಕ್ತ ಸಂಭಾಷಣೆಗಳು ಆರೋಗ್ಯಕರ ಕುಟುಂಬವನ್ನೂ, ಅದರ ಸದಸ್ಯರ ನಡುವೆ ಜವಾಬ್ದಾರಿ ಮತ್ತು ಒತ್ತಡಗಳ ಹಂಚಿಕೆಯನ್ನೂ ಬೆಳೆಸಬಹುದು”.

ಈ ಅಧ್ಯಯನ ಸ್ಪಷ್ಟವಾಗಿ ಸಮಸ್ಯೆಯ ಮೂಲವೆಲ್ಲಿದೆ ಎಂಬುದನ್ನು ಸೂಚಿಸಿದೆ. ಪೂರ್ವಾಗ್ರಹಪೀಡಿತವಾದ ಒಟ್ಟು ವ್ಯವಸ್ಥೆ ಈ ಎಲ್ಲ ದುರಂತಗಳ ಮೂಲಕಾರಣ! ವಿಷಕಾರಿ ಪುರುಷತ್ವದ ಪರಿಕಲ್ಪನೆ ಅತುಲ್‌ ಸುಭಾಷ್‌ ಅಂತಹ ಅನೇಕರು ಬಲಿಪಶುಗಳಾಗುವಂತೆ ಮಾಡಿದೆಯೇ ಹೊರತು ಮಹಿಳಾಪರ ಕಾನೂನುಗಳಲ್ಲ ಎಂಬ ಸಂಗತಿ ಮೇಲ್ನೋಟಕ್ಕೇ ಗೋಚರವಾಗುತ್ತದೆ.

ಭಾರತದಲ್ಲಿ1973-75ರವರೆಗೆ ನಡೆದ ಮಹಿಳೆಯರ ಸ್ಥಿತಿಗತಿಯ ಕುರಿತಾದ ಅಧ್ಯಯನದ ವರದಿ ʼಸಮಾನತೆಯೆಡೆಗೆ-ಭಾರತೀಯ ಮಹಿಳೆʼ ವರದಿಯು ಸ್ವಾತಂತ್ರ್ಯಾ ನಂತರದ ಮೂರು ದಶಕಗಳ ನಂತರವೂ ಭಾರತದ ಮಹಿಳೆಯರಿರುವ ಶೋಚನೀಯವಾದ ಪರಿಸ್ಥಿತಿಗಳ ಕುರಿತಾದ ಆಘಾತಕಾರಿಯಾದ ಸಂಗತಿಗಳನ್ನು ಹೊರಚೆಲ್ಲಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಇಡೀ ದಶಕವನ್ನು ಮಹಿಳಾ ದಶಕ ಎಂದು ಆಚರಿಸಲಾಗುತ್ತಿದ್ದ ಸಂದರ್ಭದಲ್ಲಿ, ಭಾರತದಲ್ಲೂ ಮಹಿಳಾ ಪರ ದನಿಗಳು, ಶಿಕ್ಷಣದಿಂದ ವಂಚಿತರಾಗಿ, ಆಗಲೂ ಬಾಲ್ಯವಿವಾಹ, ಸತಿಪದ್ಧತಿಯಂತಹ ಶತಮಾನಗಳ ಹಿಂದಿನ ಕ್ರೂರ ಮುಷ್ಟಿಯಲ್ಲಿ ಸಿಲುಕಿ, ಆರೋಗ್ಯವಾಗಲೀ, ಬದುಕು ಕಟ್ಟಿಕೊಳ್ಳುವ ಯಾವುದೇ ಮಾರ್ಗವಾಗಲೀ ಇಲ್ಲದೆ, ಎಲ್ಲದಿಕ್ಕುಗಳಿಂದ ವಿನಾಶದೆಡೆಗೆ ತಳ್ಳಲ್ಪಡುತ್ತಿದ್ದ ಮಹಿಳಾ ಸಮೂಹದ ಕುರಿತು-ವಿಶೇಷವಾಗಿ ಗ್ರಾಮೀಣ, ಬಡತನದ, ಶೋಷಿತ ಸಮುದಾಯಗಳ, ಅಂಚಿಗೊತ್ತಲ್ಪಟ್ಟ ಮಹಿಳೆಯರ ಕುರಿತು- ಗಹನವಾದ ಪ್ರಶ್ನೆಗಳನ್ನು ಎತ್ತಿದರು. ಮಹಿಳೆಯರಿಗಾಗಿ ಸರ್ಕಾರದ ನೀತಿಗಳಲ್ಲಿ ಯಾಕೆ ಗಮನಾರ್ಹವಾದ ಯಾವುದೇ ಯೋಜನೆಗಳಿಲ್ಲ? ಮಹಿಳೆಯರ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಹಕ್ಕುಗಳಿಗಾಗಿ ಯಾಕೆ ಏನನ್ನೂ ಮಾಡಲಾಗುತ್ತಿಲ್ಲ? ಸಾರ್ವಜನಿಕ ವಲಯಗಳಲ್ಲಿ ಅಥವಾ ಕುಟುಂಬಗಳೊಳಗಿನ ಖಾಸಗಿ ವಲಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಯಾಕೆ ಚರ್ಚೆಯ ವಿಚಾರಗಳಾಗುತ್ತಿಲ್ಲ? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ಆರಂಭವಾದ ಮಹಿಳಾ ಚಳವಳಿಯು, ಹಲವು ದಶಕಗಳ ಕಾಲ ನಿರಂತರ ಪ್ರಯತ್ನ ನಡೆಸಿ ಮಹಿಳೆಯರನ್ನು ದೌರ್ಜನ್ಯಗಳ ಸಂದರ್ಭಗಳಲ್ಲಿ ರಕ್ಷಿಸುವಂತಹ ಕೆಲವು ಕಾನೂನುಗಳನ್ನು ಜಾರಿಮಾಡಿಸುವಲ್ಲಿ ಭಾಗಶಃ ಯಶಸ್ವಿಯಾಯಿತು. ಅದರಲ್ಲೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ಮಕ್ಕಳ ಮೇಲಿನ ಲೈಂಗಿಕ ಶೋಷಣೆ ತಡೆಯಂತಹ ಕಾಯ್ದೆಗಳು ಜಾರಿಯಾದದ್ದು ತೀರಾ ಈಚಿನ ಹತ್ತು ವರ್ಷಗಳಲ್ಲಿ, ಅದರಲ್ಲೂ ನಿರ್ಭಯಾ ಪ್ರಕರಣದಂತಹ ಘೋರ ಪ್ರಕರಣಗಳಲ್ಲಿ ಹಲವು ಅಮಾಯಕ ಯುವತಿಯರು ಬಲಿಯಾದ ನಂತರ. ಮತ್ತು ಹೀಗೆ ಮಹಿಳೆಯರ ಪರವಾದ ಕಾನೂನುಗಳೆಂದು ಕರೆಯಲ್ಪಟ್ಟ ತಕ್ಷಣ ಅವು ಪುರುಷ ವಿರೋಧಿಯಾಗಿದ್ದವೆಂದು ಅರ್ಥವೇ? ಖಂಡಿತ ಅಲ್ಲ. ಅಲ್ಲಿಯ ತನಕ ಪುರುಷ ಪಕ್ಷಪಾತಿಯಾಗಿದ್ದ ನ್ಯಾಯಾಲಯಗಳು, ಪೊಲೀಸ್‌ ಯಂತ್ರಾಂಗ, ವಕೀಲರು ಮತ್ತು ಇಡೀ ಕಾನೂನು ವ್ಯವಸ್ಥೆಯನ್ನು ನೊಂದವರ ಕಡೆಗೆ ತಿರುಗಿಸಿ ನ್ಯಾಯ ಪಕ್ಷಪಾತಿಯಾಗಿಸುವುದಕ್ಕಾಗಿ ನಡೆದ ಕೆಲಸ ಅದು.

ಈ ರೀತಿಯಲ್ಲಿ ಕಾನೂನುಗಳನ್ನು ಬದಲಿಸುವಲ್ಲಿ ಒಂದು ಮಟ್ಟಕ್ಕೆ ಮಹಿಳಾಪರವಾದವರ ಪ್ರಯತ್ನಗಳು ಯಶಸ್ವಿಯಾದವಾದರೂ, ಸಮಾಜದ ಚಿಂತನಾಕ್ರಮವು ಮೂಲಭೂತವಾಗಿ ಬದಲಾಗಿಲ್ಲ-ಮಹಿಳೆಯರ ಕುರಿತು ಮತ್ತು ಪುರುಷರ ಕುರಿತೂ ಕೂಡಾ. ಹಾಗಾಗಿಯೇ ಇನ್ನೂ ಈ ದುರಂತಗಳು ಕುಟುಂಬಗಳನ್ನು ಛಿದ್ರಗೊಳಿಸುತ್ತಲೇ ಇವೆ, ಪ್ರಾಣಗಳು ಬಲಿಯಾಗುತ್ತಲೇ ಇವೆ.

ಕುಟುಂಬ ವ್ಯವಸ್ಥೆ ಹೊಸ ಕಾಲದ ಮಹಿಳೆಯರಿಗೆ ಹೂವಿನ ಹಾಸಿಗೆಯೇ?

ಕುಟುಂಬಗಳು ಪುರುಷರನ್ನು ಒಂದು ಬಗೆಯ ಒತ್ತಡಕ್ಕೆ ದೂಡಿದರೆ ಮಹಿಳೆಯರ ಪಾಲಿಗೇನೂ ಅವು ಹೂವಿನ ಹಾಸಿಗೆಗಳಾಗಿಲ್ಲ. ಅತುಲ್‌ ಸುಭಾಷ್‌ನ ಸಾವಿನ ಸರಿಯಾಗಿ ಒಂದು ತಿಂಗಳ ನಂತರ ಮುಂಬೈ ಮಹಾನಗರದಿಂದ ಸುದ್ದಿಯೊಂದು ಬಂತು, ಮುಂಬೈನ ಹೃದಯಭಾಗದಲ್ಲಿರುವ ಮಧ್ಯಮವರ್ಗದ ಕಾಲೋನಿಯೊಂದರಲ್ಲಿ ಗೃಹಿಣಿಗೆ ಆಕೆಯ ಗಂಡ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ. ಕಾರಣ, ಈಗಾಗಲೇ ಇದ್ದೆರಡು ಹೆಣ್ಣುಮಕ್ಕಳ ನಂತರ ಆಕೆ ಮೂರನೇ ಹೆಣ್ಣುಮಗುವಿಗೆ ತಾಯಿಯಾಗಿದ್ದಳು, ಹೆರಿಗೆಯ ನಂತರ ಕರೆತರಲು ಹೋಗದ ಗಂಡನನ್ನು ಹುಡುಕಿಕೊಂಡು ತಾನೇ ಬಂದ ಆ ಯುವ ಗೃಹಿಣಿಯನ್ನು, ತನಗೆ ಹೆಣ್ಣುಮಕ್ಕಳು ಬೇಕಿಲ್ಲ, ಮನೆಯಿಂದ ಅವರನ್ನೆಲ್ಲ ಕರೆದುಕೊಂಡು ತೊಲಗದಿದ್ದರೆ ಸುಟ್ಟು ಕೊಲ್ಲುವುದಾಗಿ ಆ ಗಂಡ ಹೆದರಿಸಿದ್ದ, ಇದರಿಂದ ಆತಂಕಗೊಂಡ ಆಕೆ ಮಕ್ಕಳನ್ನೂ ಕರೆದುಕೊಂಡು ಪೊಲೀಸ್‌ ಠಾಣೆಗೆ ಹೋಗಿ ಮಾಹಿತಿ ನೀಡಿದಾಗ, ಅವರು ಹಾಗೆ ಹೇಳುವ ಗಂಡಸರೆಲ್ಲ ಬೆಂಕಿ ಹಚ್ಚುತ್ತಾರೆಯೇ ಎಂದು ಹೇಳಿ ವಾಪಸ್‌ ಕಳಿಸಿದ್ದರು. ಮರುದಿನ ಬೆಳಿಗ್ಗೆ ಆಕೆ ಪೆಟ್ರೋಲ್‌ ಸುರಿಸಿ ಬೆಂಕಿಹಚ್ಚಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೋಡಿಬಂದು ನೆಲದ ಮೇಲೆ ಹೊರಳಾಡಿದ್ದನ್ನು ಇಡೀ ಕಾಲೋನಿ ನೋಡಿತ್ತು….ಗಂಭೀರವಾಗಿ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಸಾವಿಗೀಡಾದಳು!!

Suicide By Fire

ಅತುಲ್ ಸುಭಾಷ್‌ನ ಪ್ರಕರಣವನ್ನು ದಿನಗಟ್ಟಲೆ ಚರ್ಚಿಸಿದ ಮಾಧ್ಯಮಗಳ್ಯಾವುವೂ ಈ ಕಿರಿ ವಯಸ್ಸಿನ ಗೃಹಿಣಿಯ ದುರಂತ ಕೊಲೆಯನ್ನು ಮಾತನಾಡಲೇ ಇಲ್ಲ!

ಎಲ್ಲ ಕುಟುಂಬಗಳೂ ಇಷ್ಟೇ ಭೀಕರವಾಗಿ ಮಹಿಳೆಯರನ್ನು ನಡೆಸಿಕೊಳ್ಳದಿರಬಹುದು. ಆದರೆ ಕುಟುಂಬ ವ್ಯವಸ್ಥೆ ರೂಪುಗೊಂಡ ವಿಧಾನದಲ್ಲೇ ಇರುವ ಅಂತರ್ಗತವಾದ ಅಸಮಾನ ಸಂಬಂಧಗಳು ಮಹಿಳೆಯರನ್ನು ಸದಾ ಅಂಚಿನಲ್ಲೇ ಇರುವಂತೆ ಮಾಡುತ್ತವೆ. ಇದು ಹಲವು ಬಗೆಯ ಅಸಮತೋಲನಗಳಿಗೆ ಕಾರಣವಾಗುತ್ತಿದೆ. ಪ್ರತಿ ಇಬ್ಬರು ಭಾರತೀಯ ಮಹಿಳೆಯರಲ್ಲಿ ಒಬ್ಬರು ಕೆಲಸ-ಜೀವನದ ಸಮತೋಲನ, ಹಣ ಮತ್ತು ಕೌಟುಂಬಿಕ ಬಿಕ್ಕಟ್ಟುಗಳಿಂದಾಗಿ ದೀರ್ಘಕಾಲದ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಕಳೆದ ವರ್ಷ ದೇಶಾದ್ಯಂತದ 1.3 ಮಿಲಿಯನ್ ಮಹಿಳೆಯರನ್ನು ಒಳಗೊಂಡ ಸಮೀಕ್ಷೆಯು ಕಂಡುಕೊಂಡಿದೆ. ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್‌ನ ಮಾನಸಿಕ ಆರೋಗ್ಯಕ್ಕಾಗಿ ಸಾಮಾಜಿಕ ಸಂಸ್ಥೆಯಾದ ಎಂಪವರ್‌ (Mpower) ವರದಿ, ‘ಮೌನ ಸಂಘರ್ಷದ ತೆರೆ ಸರಿಸಿದಾಗʼ ವರದಿಯು, ಭಾರತದಲ್ಲೂ ಪ್ರಪಂಚದಲ್ಲೂ ಮಹಿಳೆಯರು ತೀವ್ರರೂಪದ ಮಾನಸಿಕ ಒತ್ತಡ ಮತ್ತು ಆ ಕಾರಣದಿಂದ ಹುಟ್ಟುವ ಖಿನ್ನತೆಯ ಬಲಿಪಶುಗಳಾಗಿದ್ದಾರೆ ಎಂದು ಹೇಳಿದೆ. ಲ್ಯಾನ್ಸೆಟ್‌ ನಡೆಸಿರುವ ಅಧ್ಯಯನವು 2018ರಲ್ಲೇ “ಜಗತ್ತಿನಾದ್ಯಂತ ನಡೆಯುತ್ತಿರುವ ಮಹಿಳೆಯರ ಆತ್ಮಹತ್ಯೆಗಳಲ್ಲಿ 36.6% ಪ್ರಕರಣಗಳು ಕೇವಲ ಭಾರತವೊಂದರಲ್ಲೇ ವರದಿಯಾಗುತ್ತಿವೆ. ಆದರೆ, ತಮ್ಮ ಮಾನಸಿಕ ಸಮಸ್ಯೆಗಳಿಗೆ ತಜ್ಞರ ನೆರವು ಪಡೆಯುತ್ತಿರುವ ಭಾರತೀಯ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಈ ಪ್ರಮಾಣದಲ್ಲಿ ತೀವ್ರವಾಗಿರುವ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ನಿರ್ಲಕ್ಷ್ಯ ಏಕಿದೆಯೆಂದು ತಿಳಿಯುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ಈ ಪರಿಸ್ಥಿತಿಗೆ, ಕೌಟುಂಬಿಕ ಹೊಣೆಗಾರಿಕೆಯ ಬಹುಭಾಗ ಈಗಲೂ ಮಹಿಳೆಯರ ಹೆಗಲ ಮೇಲೆಯೇ ಇರುವುದು, ಬದಲಾದ ಸನ್ನಿವೇಶದಲ್ಲಿ ಅವರು ನಿಭಾಯಿಸಬೇಕಿರುವ ಹಲವು ಕ್ಷೇತ್ರಗಳ ನಡುವೆ ಇದನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬಂಟಿಗಳಾಗಿ ನಿಭಾಯಿಸಲಾಗದೆ ಮಹಿಳೆಯರು ಮಾನಸಿಕ ಒತ್ತಡಕ್ಕೆ ಗುರಿಯಾಗುವುದು ಅತ್ಯಂತ ಸಾಮಾನ್ಯವಾದ ಕಾರಣವಾಗಿದೆ ಎಂದೂ ಕೂಡಾ ಜಾಗತಿಕ ಅಧ್ಯಯನವಾದ ಲ್ಯಾನ್ಸೆಟ್‌ನ ಸಂಶೋಧನೆ ತೋರಿಸುತ್ತದೆ.

ಭಾರತದ ಯಾವುದೇ ಹಳ್ಳಿಗೆ ಹೋದರೂ ಮಹಿಳೆಯರ ದಿನಚರಿ ಬೆಳಿಗ್ಗೆ ಹೊತ್ತು ಹುಟ್ಟುವುದಕ್ಕೆ ಮೊದಲೇ ಆರಂಭವಾಗುತ್ತದೆ. ಕುಟುಂಬದ ಎಲ್ಲರಿಗೆ ಬೇಕಿರುವ ಆಹಾರ ಸಿದ್ಧಪಡಿಸುವುದು, ನೀರಿನ, ಉರುವಲಿನ ಸಮಸ್ಯೆಯಿರುವ ಪ್ರದೇಶವಾದರೆ ನೀರು ಉರುವಲನ್ನು ತಂದುಕೊಳ್ಳುವುದು, ಮನೆ ಸ್ವಚ್ಛಪಡಿಸುವುದು, ದನಕರುಗಳು, ಮಕ್ಕಳು, ವಯಸ್ಸಾದವರು ಮತ್ತು ಖಾಯಿಲೆ ಬಿದ್ದವರ ಆರೈಕೆ ಮಾಡುವುದು… ಪ್ರಧಾನವಾಗಿ ಈ ಕೆಲಸಗಳು ಅವರ ಸಮಯದ ಬಹುಭಾಗವನ್ನು ತೆಗೆದುಕೊಳ್ಳುತ್ತವೆ. ಆ ನಂತರ ಸಾಧ್ಯತೆ ಮತ್ತು ಅಗತ್ಯವಿದ್ದರೆ ಮಾತ್ರ ಅವರು ಕುಟುಂಬದ ಭೂಮಿಯಿದ್ದರೆ ಕೆಲಸಕ್ಕೆ ಕೈಜೋಡಿಸುವುದು ಅಥವಾ ಕೂಲಿ ಕೆಲಸಕ್ಕೋ, ಸಮೀಪದ ಕಾರ್ಖಾನೆಗಳಲ್ಲಿ ದುಡಿಯುವುದಕ್ಕೋ ಹೋಗುವುದು-ಹೀಗೆ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೇ ರೀತಿ, ಆ ಹಳ್ಳಿಗಳಿಂದ ಬಹುದೂರದ ನಗರಗಳಲ್ಲಿ ನಿಯಮಿತ ಸಂಬಳ ತರುವ ಸೇವಾಕ್ಷೇತ್ರದ ಅಥವಾ ಇನ್ಯಾವುದೋ ಉತ್ಪಾದನಾ ಕ್ಷೇತ್ರದ ಕೆಲಸಗಳಲ್ಲಿರುವ ಮಹಿಳಾ ವೃತ್ತಿಪರರೂ ಅಷ್ಟೇ, ಮಕ್ಕಳ ಆಹಾರ, ಆರೋಗ್ಯ, ಓದು, ಪಠ್ಯೇತರ ಚಟುವಟಿಕೆಗಳು, ಹಿರಿಯರ ಆರೈಕೆ, ಮನೆಯನ್ನು ಸುಗಮವಾಗಿ ಸಾಗಿಸುವುದಕ್ಕೆ ಬೇಕಿರುವ ಚಟುವಟಿಕೆಗಳ ನಿರ್ವಹಣೆಯನ್ನು ಮಾಡುತ್ತಲೇ ತಮ್ಮ ಉದ್ಯೋಗದ ಹೊಣೆಗಾರಿಕೆಗಳನ್ನೂ ನಿಭಾಯಿಸಬೇಕಿರುತ್ತದೆ.

ಈ ಎರಡು ಬಗೆಯ ಹೆಣ್ಣುಮಕ್ಕಳ ಬದುಕುಗಳಲ್ಲಿ, ವಾಸದ ಪ್ರದೇಶಗಳ ನಡುವೆ ಎಷ್ಟೇ ಅಂತರವಿದ್ದರೂ, ಇವರಿಬ್ಬರೂ ಕುಟುಂಬದೊಳಗಿನ, ಕಣ್ಣಿಗೆ ಕಾಣಿಸದಂತಹ ಆರೈಕೆಯ ಕೆಲಸಗಳಿಂದ ತಪ್ಪಿಸಿಕೊಳ್ಳುವಂತಿಲ್ಲ.

women

ಅದೃಶ್ಯ ಕೆಲಸದ ಒತ್ತಡ ಮತ್ತು ಮಹಿಳೆಯರ ಮಾನಸಿಕ ಆರೋಗ್ಯ

ಜಾಗತಿಕವಾಗಿ, ಆಕ್ಸ್‌ಫ್ಯಾಮ್ (OXFAM) ಅಂದಾಜಿನ ಪ್ರಕಾರ, ಮಹಿಳೆಯರು ನಡೆಸುವ ವೇತನ ರಹಿತ ಆರೈಕೆ ಕೆಲಸವು ವಾರ್ಷಿಕವಾಗಿ ಆರ್ಥಿಕತೆಗೆ ಅಗಾಧವಾದ 10.8 ಟ್ರಿಲಿಯನ್ ಡಾಲರ್‌ ಕೊಡುಗೆ ನೀಡುತ್ತದೆ. ಕೇವಲ ಭಾರತವೊಂದರಲ್ಲೇ, ಮಹಿಳೆಯರು ಮತ್ತು ಹುಡುಗಿಯರು ಪ್ರತಿದಿನ ಸುಮಾರು 3.26 ಶತಕೋಟಿ ಗಂಟೆಗಳ ವೇತನ ರಹಿತ ಆರೈಕೆ ಕೆಲಸವನ್ನು ನಿರ್ವಹಿಸುತ್ತಾರೆ, ಇದು GDP ಯ ಸುಮಾರು 10% ಗೆ ಸಮಾನವಾಗಿರುತ್ತದೆ.

ಸಮೀಕ್ಷೆಯ ಪ್ರಕಾರ, ಶೇಕಡಾ 60.8 ರಷ್ಟು ಪುರುಷರಿಗೆ ಹೋಲಿಸಿದರೆ ಕೇವಲ ಶೇಕಡಾ 20.7 ರಷ್ಟು ಮಹಿಳೆಯರು ಮಾತ್ರ ಸಂಬಳ ಪಡೆಯುವ ಉದ್ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಉದ್ಯೋಗದಲ್ಲಿ ತೊಡಗಿರುವವರಲ್ಲಿಯೂ ಸಹ, ಮಹಿಳೆಯರು ಗಮನಾರ್ಹವಾಗಿ ಕಡಿಮೆ ಸಮಯವನ್ನು ಕಳೆಯುತ್ತಾರೆ- ಪುರುಷರು ಉದ್ಯೋಗ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ದಿನಕ್ಕೆ ಸರಾಸರಿ 287 ನಿಮಿಷಗಳನ್ನು ಕಳೆಯುತ್ತಾರೆ, ಆದರೆ ಮಹಿಳೆಯರು ಅದೃಶ್ಯ ಕೆಲಸಗಳ ದುಪ್ಪಟ್ಟು ಹೊರೆಯ ಕಾರಣಕ್ಕೆ ಕೇವಲ 71 ನಿಮಿಷಗಳನ್ನು ಮಾತ್ರ ವೃತ್ತಿ ಸಂಬಂಧಿ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದಾರೆ.

ಈ ಸಂಖ್ಯೆಗಳು ಆರೈಕೆ ಕೆಲಸದ ಆರ್ಥಿಕ ಮೌಲ್ಯ ಮತ್ತು ಈ ಅದೃಶ್ಯ ಶ್ರಮವನ್ನು ಪರಿಹರಿಸುವ ನೀತಿಗಳ ಅಗತ್ಯವನ್ನು ತೀವ್ರವಾಗಿ ನೆನಪಿಸುತ್ತವೆ.

ಸಂಶೋಧನಾ ಬರಹಗಾರ್ತಿ ಪ್ರೀತಾ ಬ್ಯಾನರ್ಜಿಯವರು ಡೌನ್‌ ಟು ಅರ್ತ್‌ (Down to earth) ನಿಯತಕಾಲಿಕಕ್ಕೆ ಬರೆದಿರುವ ಬರಹದಲ್ಲಿ ಆರೈಕೆಯ ಈ ಅದೃಶ್ಯ ಶ್ರಮಕ್ಕೂ ಮಹಿಳೆಯರ ಮಾನಸಿಕ ಆರೋಗ್ಯಕ್ಕೂ ಇರುವ ನೇರ ಸಂಬಂಧವನ್ನು ವಿವರಿಸಿದ್ದಾರೆ. “ಕೆಲಸದ ಅಸಮವಾದ ಹಂಚಿಕೆ ಮತ್ತು ಸಂಬಳವಿರುವ ಮತ್ತು ಸಂಬಳವಿಲ್ಲದ ದುಡಿಮೆಯ ದುಪ್ಪಟ್ಟು ಹೊರೆ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜಾಗತಿಕ ಅಧ್ಯಯನಗಳು ಇವೆರಡರ ನಡುವಿನ ನೇರ ಸಂಬಂಧಗಳನ್ನು ಗುರುತಿಸಿವೆ. ಸಂಬಳವಿಲ್ಲದ ಕೆಲಸದಿಂದ ಉಂಟಾಗುವ ದೀರ್ಘಕಾಲದ ಒತ್ತಡವು ಹೆಚ್ಚಿನ ಕಾರ್ಟಿಸೋಲ್ ಮಟ್ಟವನ್ನು ಸಕ್ರಿಯಗೊಳಿಸುತ್ತದೆ ಮತ್ತು ದೀರ್ಘಕಾಲದ ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಖಿನ್ನತೆಯಂತಹ ಪ್ರತಿಕೂಲ ಮಾನಸಿಕ ಆರೋಗ್ಯದ ಪರಿಣಾಮಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧನೆ ತೋರಿಸಿದೆ. ವಿರಾಮ ಸಮಯ, ಸ್ವ-ಆರೈಕೆ ಮತ್ತು ಸಾಮಾಜಿಕ ಸಂವಹನಕ್ಕೆ ಸಮಯವಿಲ್ಲದಂತಾಗುವುದು ಈ ತೊಂದರೆಯನ್ನು ಉಲ್ಬಣಗೊಳಿಸುತ್ತದೆ, ಇದು ಸಂಭಾವ್ಯವಾಗಿ ಖಿನ್ನತೆ ಮತ್ತು ಆತಂಕದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ”

ಇದರೊಂದಿಗೆ ಮಹಿಳೆಯರ ಮೇಲಿರುವ ಪಾರಂಪರಿಕ ನಿರೀಕ್ಷೆಗಳ ಭಾರ. ತನ್ನ ಸಂಗಾತಿಯ ಆಯ್ಕೆ, ಮದುವೆ, ಮಕ್ಕಳು ಬೇಕೋ ಬೇಡವೋ ಎಂಬ ಆಯ್ಕೆಗಳೆಲ್ಲವೂ ಈಗಲೂ ಸಾಕಷ್ಟು ಸಂದರ್ಭಗಳಲ್ಲಿ ಕುಟುಂಬ, ಸಮುದಾಯ ಮತ್ತು ಸಮಾಜದ ನಿರೀಕ್ಷೆ ಮತ್ತು ಒತ್ತಾಯಗಳ ಭಾರದಡಿಯಲ್ಲಿಯೇ ಜರುಗುತ್ತವೆ.

ಇದನ್ನೂ ಓದಿ ಜಿಎಸ್‌ಟಿ – ಪ್ರತಿಗಾಮಿ ಪರೋಕ್ಷ ಕ್ರೂರ ತೆರಿಗೆ

ಈಚೆಗೆ ಅಂಚಿಗೊತ್ತಲ್ಪಟ್ಟ ಸಮುದಾಯದ ಹೆಣ್ಣುಮಗುವೊಂದರ ಸಾವಿನ ವಿಚಾರದಲ್ಲಿ ಅಧಿಕಾರಿಯೊಬ್ಬರು ಹೇಳಿದ ಮಾತು ನೆನಪಾಗುತ್ತದೆ. ಸಾವಿಗೀಡಾದ ಹದಿಹರೆಯದ ಹೆಣ್ಣುಮಗುವಿನ ಕುರಿತು ಸಮಾಜದಲ್ಲಿ ಕೂಡಲೇ ಹಬ್ಬುವ ಕಟ್ಟುಕಥೆಗಳನ್ನೆಲ್ಲ ಅವರು ಸಾರಾಸಗಟಾಗಿ ನಿರಾಕರಿಸಿದರು. ನಂತರ ಹೇಳಿದರು- “ಇಲ್ಲ ಮೇಡಂ ಆಕೆ ಒಳ್ಳೆಯ ಹುಡುಗಿ, post mortem report shows that her hymen was intact (ಮರಣೋತ್ತರ ಪರೀಕ್ಷಾ ವರದಿ ತೋರುತ್ತಿದೆ, ಆಕೆಯ ಕನ್ಯಾಪೊರೆ ಯಥಾಸ್ಥಿತಿಯಲ್ಲಿತ್ತು)!! ಈ ಶತಮಾನದಲ್ಲಿ ಹೆಣ್ಣುಮಕ್ಕಳು, ಆಟೋಟ, ಸಾಹಸ ಕ್ರೀಡೆ, ಸೇನಾ ತರಬೇತಿಯನ್ನೂ ಸೇರಿ ಎಲ್ಲವನ್ನೂ ಪಡೆದುಕೊಳ್ಳುತ್ತಾ ಕನ್ಯಾಪೊರೆಯನ್ನು ಹೇಗೆ ಬೇಕಾದರೂ ಕಳೆದುಕೊಳ್ಳುವ ಅವಕಾಶ ಇರುವ ಕಾಲಘಟ್ಟದಲ್ಲೂ, ಆಕೆ ʼಒಳ್ಳೆಯʼ ಹುಡುಗಿಯಾಗಬೇಕಿದ್ದರೆ ಆಕೆ ಕನ್ಯೆಯೇ ಆಗಿರಬೇಕು ಮತ್ತು ಅಷ್ಟು ಮಾತ್ರವಲ್ಲ ಆಕೆಯ ಕನ್ಯಾಪೊರೆ ಸುರಕ್ಷಿತವಾಗಿರಬೇಕು ಎಂದು ನಿರೀಕ್ಷಿಸುವ ಸಮಾಜ, ತನ್ನ ಕಣ್ಣಪೊರೆಯನ್ನು ಕಳೆದುಕೊಳ್ಳುವುದು ಯಾವಾಗ?

ಈ ರೀತಿಯಲ್ಲಿ ಪ್ರತಿದಿನದ ದಂದುಗದಲ್ಲೂ ಇವೇ ಸಿಕ್ಕುಗಳು ಇದ್ದೇ ಇವೆ. ಕಳೆದುಹೋದ ಕಾಲದಲ್ಲೂ ಇವೆಲ್ಲಾ ಇದ್ದೇ ಇದ್ದವು. ಹೊಸ ಶತಮಾನಕ್ಕೆ ಅಡಿಯಿಟ್ಟ ಮೇಲೆ, ಈ ಸಿಕ್ಕುಗಳಲ್ಲಿ ಹಲವು ಇನ್ನೂ ಜಟಿಲವಾಗಿಬಿಟ್ಟಿವೆ. ನಮ್ಮ ಎಷ್ಟೋ ಸಮಸ್ಯೆಗಳಿಗೆ ಮೂಲ ಕೌಟುಂಬಿಕ ವ್ಯವಸ್ಥೆಯೊಳಗಿನ ಈ ಸಂಕೀರ್ಣತೆಯೊಳಗೇ ಇದೆ. ಆದ್ದರಿಂದಲೇ ಕೌಟುಂಬಿಕ ವ್ಯವಸ್ಥೆ ಬದಲಾಗದೆ, ಸಮಾಜ ಪೊರೆಕಳಚಿ ಹೊಸತಿಗೆ ತೆರೆದುಕೊಳ್ಳದೆ ಮಹಿಳೆ-ಪುರುಷರಿಬ್ಬರ ಕಷ್ಟವೂ ಕಳೆಯುವುದಿಲ್ಲ.

mallige sirimane2
ಮಲ್ಲಿಗೆ ಸಿರಿಮನೆ
+ posts

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರಾದ ಮಲ್ಲಿಗೆಯವರು 2 ದಶಕಕ್ಕೂ ಹೆಚ್ಚು ಕಾಲ ಜನ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಮಹಿಳಾ ಹೋರಾಟ, ಆಸಿಡ್ ದಾಳಿ ವಿರುದ್ಧದ ಪ್ರಚಾರಾಂದೋಲನ, ಅತ್ಯಾಚಾರ ತಡೆಗಾಗಿ ಜನಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಸದ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಎದ್ದೇಳು ಕರ್ನಾಟಕ ಪ್ರಯೋಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2021ರ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...